ತೆಳ್ಳವುಕಾಯ್ಹಾಲು:

ನಾಲ್ಕು ಲೋಟ ಬೆಣ್ತಕ್ಕಿಯನ್ನು ನಾಲ್ಕಾರು ತಾಸು ನೆನೆಯಿಸಿ. ಅರ್ಧ ಸವಟು ಕಾಯಿ ಸುಳಿ ಅಥವಾ ೨ ಚ. ನೆನೆದ ಉದ್ದಿನ ಬೇಳೆ ಕೂಡಿಸಿ. ಗಂಧವಾಗಿ ಅರೆಯಬೇಕು. ೨. ಉಪ್ಪು ಸೇರಿಸಿ. ನಾಲ್ಕು ಕಪ್ಪು ನೀರು ಕೂಡಿಸಿ ತೆಳ್ಳಗೆ ಮಾಡಿ ತೆಳ್ಳಗೆ ಬಂಡಿಯ ಮೇಲೆ ಎರೆಯಿರಿ. ಒಂದು ಬದಿಯನ್ನು ಬೇಯಿಸಿದರೆ ಸಾಕು.

ಒಂದು ತೆಂಗಿನ ಕಾಯನ್ನು ಕೆರೆದು ಎರಡು ಯಾಲಕ್ಕಿಗಳ ಬೀಜ ಸೇರಿಸಿ ಗಂಧವಾಗಿ ಅರೆಯಬೇಕು. ನೀರು ಸೇರಿಸಿ ಹಾಲಿನಷ್ಟು ತೆಳ್ಳಗೆ ಮಾಡಿ, ೧ ಚ. ಉಪ್ಪು, ಒಂದು ಕಪ್ಪು ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಕಾಯ್ಹಾಲು ತೆಳ್ಳವನ್ನು ಇದರಲ್ಲಿ ಕಿವುಚಿ ತಿನ್ನುವರು.

ದೋಸೆ: ನಾಲ್ಕು ಸಿದ್ದೆ ಅಕ್ಕಿ, ಉದ್ದಿನ ಬೇಳೆಯನ್ನು ನೆನೆಯಿಸಿದ ಸಿದ್ದೆ ಉದ್ದಿನ ಕಾಳನ್ನು ಬೀಸುವ ಕಲ್ಲಿನಲ್ಲಿ ಒಡೆದು ನೆನೆಯಿಸುತ್ತಾರೆ. ಇಡೀ ಕಾಳನ್ನು ನೆನೆಯಿಸಿ ದೋಸೆ ಮಾಡಿದರೆ ದೋಸೆಗೆ ಹಸಿರು ಬಣ್ಣ ಬಂದು ತಿನ್ನಲು ರುಚಿ. ಆರೋಗ್ಯಕ್ಕೂ ಉತ್ತಮ. ಒಡೆದು ನೆನೆಯಿಸಿದರೆ ತೊಳೆಯುವಾಗ ತುಸು ಹುರಬಲು ಹೊರಗೆ ಹೋಗುತ್ತದೆ.

ಆಚರಣೆಗಳು:

ಕುಟುಂಬದಲ್ಲಿ ನಡೆಯುವ ಜೀವನಾವರ್ತನ ಹಾಗೂ ಸೀರ್ಷಿಕಾವರ್ತನಕ್ಕೆ ಸಂಬಂಧಪಟ್ಟ ಆಚರಣೆಗಳು ಕುಟುಂಬದಲ್ಲಿ ಹೆಣ್ಣಿಗಿರುವ ಸ್ಥಾನಮಾನಗಳ ಸಮರ್ಪಕವಾದ ಕಲ್ಪನೆಯನ್ನು ಮಾಡಿಕೊಡುತ್ತವೆ.

ಮದುವೆ, ದಿಂಡು, ಬಸುರಿ, ಬಾಳಂತಿ ಮುಂತಾದ ಹೆಣ್ಣಿನ ಜೀವನಾವರ್ತನಗಳ ಸಂದರ್ಭದಲ್ಲಿ ಹಾಗೂ ದೀಪಾವಳಿ, ಚವತಿ, ತುಳಸಿ ಪೂಜೆ ಇತ್ಯಾದಿ ಅನೇಕ ಪರ್ವದಿನಗಳ ಸಂದರ್ಭದಲ್ಲಿ ಹೆಣ್ಣು ಕುಟುಂದಲ್ಲಿ ಕುಟುಂಬದ ಇತರ ಸದಸ್ಯರ ಜೊತೆ ನಡೆಸುವ ಆಚರಣೆಗಳನ್ನು ಇಲ್ಲಿ ವಿವರಿಸಲಾಗಿದೆ.

ಮದುವೆ: ಗಂಡಿನ ಕಡೆಯವರು ತಮ್ಮ ಮಗನಿಗೆ ಹೆಣ್ಣನ್ನು ಹುಡುಕಿ ಕೇಳಿ ಮದುವೆ ಮಾಡಿಕೊಳ್ಳುವುದು ಪರಂಪರಾಗತ ಪದ್ಧತಿಯಾಗಿದ್ದು, ಇತ್ತೀಚೆಗೆ ಜಾತಿಯಲ್ಲಿ ಹೆಣ್ಣುಗಳ ಸಂಕ್ಯೆ ಹೆಚ್ಚಿದ್ದು, ಹೆಣ್ಣಿನ ತಂದೆ ಗಂಡಿನವರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಳ್ಳುವಂತೆ ಪರೋಕ್ಷವಾಗಿ ಸೂಚನೆ ಕಳಿಸುವುದುಂಟು. ಆದರೆ ಹೆಣ್ಣಿನವರು ನೇರವಾಗಿ ಗಂಡಿನ ಮನೆಗೆ ಹೋಗಿ ಹೆಣ್ಣು ಕೊಡುತ್ತೇವೆ ಎಂದು ಹೇಳುವುದನ್ನು ಇವರು ಆದಷ್ಟು ದೂರವಿಡುತ್ತಾರೆ. ಆದರೆ ಗಂಡಿನ ಕಡೆಯವರು ನೇರವಾಗಿ ಹೆಣ್ಣು ಕೇಳಲು ಹೋಗುವುದು ತಪ್ಪಲ್ಲವೆಂದು ತಿಳಿಯುತ್ತಾರೆ. ಈ ಜನಜಾತಿಯಲ್ಲಿಯೂ ವರದಕ್ಷಿಣೆ ಪದ್ಧತಿ ಜಾರಿಗೆ ಬರುತ್ತಿದ್ದು, ಹೆಣ್ಣುಗಳಿಗೆ ಸುಲಭದಲ್ಲಿ ಗಂಡು ಸಿಗುತ್ತಿಲ್ಲ.

ಹೆಣ್ಣನ್ನು ಕೇಳಲು ಹೋಗುವ ಮೊದಲು ಅಥವಾ ಅಲ್ಲಿಗೆ ಸೂಚನೆ ಕಳಿಸುವ ಮೊದಲು ತಮ್ಮ ಇಷ್ಟದೇವರಲ್ಲಿ ಪುಡವಿ, ಪ್ರಸಾದ ಕೇಳುತ್ತಾರೆ.

ಪ್ರಸಾದ ಕೇಳುವುದು: ಮದುವೆ ಮಾಡುವ ಮಾಡಿಕೊಂಡು ಮನೆತುಂಬಿಸಿ ಕೊಳ್ಳಬಹುದಾದ ಒಂದು ಹೆಣ್ಣನ್ನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ತಮ್ಮ ನಂಬುಗೆಯ ದೇವರ ಬಳಿ ’ಪುಡವಿ ಪ್ರಸಾದ’ ಕೇಳುತ್ತಾರೆ. ಈ ಆಚರಣೆಯಲ್ಲಿ ಪ್ರಾದೇಶಿಕ ವೈವಿಧ್ಯವಿದೆ. ದೇವರ ಪೂಜೆ ಮುಗಿದ ಬಳಿಕ ಮನಸ್ಸಿನಲ್ಲಿಯೇ ತಮ್ಮ ವಿಚಾರವನ್ನು ದೇವರಿಗೆ ನಿವೇದಿಸಿಕೊಳ್ಳುತ್ತಾರೆ. ಅಥವಾ ಪೂಜಾರಿಗೆ ತಮ್ಮ ವಿಚಾರವನ್ನು ತಿಳಿಸುತ್ತಾರೆ. ಆದರೆ ಪೂಜಾರಿಯ ಬಳಿ ಯಾವ ಹೆಣ್ಣು ಎಂಬುದನ್ನು ಬಾಯಿ ಬಿಟ್ಟು ಹೇಳುವುದಿಲ್ಲ. ಇದನ್ನು ಗುಪ್ತ ರೀತಿಯಲ್ಲಿ ತಿಳಿಸುತ್ತಾರೆ. ಇಂತಹ ದಿಕ್ಕಿನಲ್ಲಿರುವ ಮನೆಯ ಹೆಣ್ಣು, ಹೊಳೆಯಾಚೆಯ ಹೆಣ್ಣು ಹೀಗೆ ಸೂಕ್ಷ್ಮವಾದ ಒಂದೆರಡು ಎಳೆಯನ್ನು ಮಾತ್ರ ಹೇಳಿ ಆ ಹೆಣ್ಣನ್ನು ತಮ್ಮ ಮಗನಿಗೆ ತಂದುಕೊಳ್ಳಬಹುದೇ ಎಂದು ಕೇಳಿಕೊಳ್ಳುತ್ತಾರೆ. ಬಳಿಕ ಇವರ ಅಭಿಪ್ರಾಯವನ್ನು ಪೂಜಾರಿ ದೇವರ ಬಳಿ ಹೇಳಿ ದೇವರ ಹತ್ತಿರ ಪ್ರಸಾದ ಕೇಳುತ್ತಾನೆ. ಸ್ವತಃ ಹಿರಿಯರಾಗಲೀ ಪೂಜಾರಿಯಾಗಲೀ ಪ್ರಸಾದವನ್ನು ಕೇಳಿದ ಬಳಿಕ ತುಸು ಹೊತ್ತು ಕಾಯುತ್ತಾರೆ. ಆಗ ದೇವರ ಮೈಮೇಲೆ ತೊಡಿಸಿದ ಹೂ ಎಡದಿಂದಲೋ ಬಲದಿಂದಲೋ ಕೆಳಗೆ ಉದುರುತ್ತದೆ. ಈ ಕ್ರಿಯೆ ಇವರು ಕೇಳಿದ ರೀತಿಯಲ್ಲಿ ಅದೇ ದಿಕ್ಕಿನಿಂದ ಬಿದ್ದರೆ ದೇವರು ಒಪ್ಪಿಗೆ ಕೊಟ್ಟಿತೆಂದು ಭಾವಿಸುತ್ತಾರೆ. ಕೇಳಿದ ದಿಕ್ಕಿಗಿಂತ ಬೇರೆಯಾದ ಬದಿಯಿಂದ ಹು ಬಿದ್ದರೆ ಇನ್ನಷ್ಟು ವೇಳೆ ಕಾದು ಮತ್ತೊಮ್ಮೆ ವಿನಂತಿಸುತ್ತಾರೆ. ಕೊನೆಗೂ ತಾವು ಕೇಳಿದ ದಿಕ್ಕಿನಿಂದ ಹೂ (ಪ್ರಸಾದ) ಬೀಳುವವರೆಗೂ ಕಾಯುವುದುಂಟು.

ಪುಡವಿ ಕೇಳುವುದು: ಬಳಿ ಹಾಗೂ ಕೆಲವು ಬಣ್ಣದ ಆರೆಂಟು ಹೂವಿನೆಸಳುಗಳನ್ನು ಬಾಳೆ ಎಲೆಯ ಸಣ್ಣ ತುಂಡಿನಲ್ಲಿ ಪ್ರತ್ಯೇಕವಾಗಿ ಸುತ್ತಿ ದಾರವನ್ನು ಕಟ್ಟುತ್ತಾರೆ. ಇದಕ್ಕೆ ಪುಡವಿ ಎನ್ನುತ್ತಾರೆ. ಇವನ್ನು ದೇವರ ತೀರ್ಥದ ನೀರಿರುವ ತಂಬಿಗೆಯಲ್ಲಿಡುತ್ತಾರೆ. ಹಿರಿಯರು ಅಥವಾ ಪೂಜಾರಿಯು ದೇವರಿಗೆ ಈ ಹೆಣ್ಣು ಒಪ್ಪಗೆಯೇ? ಎಂದು ಕೇಳಿದಾಗ ಪೂಜಾರಿಯು ನೀರಿನ ತಂಬಿಗೆಯಿಂದ ಒಂದು ಪುಡವಿಯನ್ನು ಹೊರತೆಗೆಯುತ್ತಾನೆ. ಇದು ಹಿರಿಯರು ಅಥವಾ ಪೂಜಾರಿಯು ಕೇಳಿದ ಬಣ್ಣದ ಪುಡವಿಯಾಗಿದ್ದರೆ ದೇವರಿಂದ ಈ ಮದುವೆಗೆ ಒಪ್ಪಿಗೆ ಸಿಕ್ಕಿತೆಂದು ಭಾವಿಸುತ್ತಾರೆ. ಬೇರೆ ಬಣ್ಣದ ಪುಡವಿ ಬಂದಲ್ಲಿ ಮತ್ತೆ ಮತ್ತೆ ದೇವರನ್ನು ಕೇಳುತ್ತಾರೆ. ಕೊನೆಗೂ ದೇವರಿಂದ ಒಪ್ಪಿಗೆ ಪಡೆಯುತ್ತಾರೆ. ಆದರೆ ಕೆಲವು ಬಾರಿ ದೇವರಿಂದ ಒಪ್ಪಿಗೆ ದೊರೆಯದಿರುವುದುಂಟು. ಇದೇ ರೀತಿ ಹೆಣ್ಣಿನವರು ಕೂಡ ಇಂತಹದೊಂದು ಗಂಡಿನವರು ತಮ್ಮ ಹೆಣ್ಣಿಗಾಗಿ ಕೇಳಿಕೆ ಮಾಡಿದ್ದಾರೆ. ಇದನ್ನು ತಾವು ಒಪ್ಪಬಹುದೇ ಎಂದು ತಮ್ಮ ದೇವರಲ್ಲಿ ಪ್ರಸಾದ, ಪುಡವಿ ಕೇಳುವ ಮೂಲಕ ತಿಳಿದುಕೊಳ್ಳುತ್ತಾರೆ.

ಇತ್ತೀಚೆಗೆ ಬ್ರಾಹ್ಮಣ ಪೂಜಾರಿಗಳ ಬಳಿ ಹೋಗಿ ಜಾತಕ ನೋಡುವ ಪದ್ಧತಿಯು ಹೆಚ್ಚಾಗುತ್ತಿದೆ.

ದೇವರಲ್ಲಿ ಪ್ರಸಾದ, ಪುಡವಿ ಕೇಳುವುದು ಮದುವೆಯ ಸಂದರ್ಭಕ್ಕಷ್ಟೆ ಮೀಸಲಾದುದಲ್ಲ. ಕೌಟುಂಬಿಕವಾಗಿ ಇತರ ಅನೇಕ ಸಮಸ್ಯೆಗಳಾದ ರೋಗರುಜಿನ, ಬೆಳೆ, ಬೇಸಾಯ, ಮಕ್ಕಳಾಗದಿರುವುದ, ಗಂಡ-ಹೆಂಡಿರ ವೈಮನಸ್ಸು ಇತ್ಯಾದಿ ಸಂದರ್ಭಗಳಲ್ಲಿ ಇವರು ದೇವರ ಪ್ರಸಾದ ಹಾಗೂ ಪುಡವಿಯ ಮೊರೆ ಹೋಗುತ್ತಾರೆ.

ಮದುವೆಯ ಸಂದರ್ಭದಲ್ಲಿ ಹೆಣ್ಣಿನ ಕುಲಗೋತ್ರಾದಿಗಳಿಗೆ ಸಂಬಂಧಿಸಿರುವ ಬಳಿ-ಬುಡಗಳನ್ನು ಇಲ್ಲಿ ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದ ಬುಡಕಟ್ಟುಗಳಲ್ಲಿ ಹಾಗೂ ಆರ್ಯೇತರ ಜನಜಾತಿಗಳಲ್ಲಿ “ಗೋತ್ರ” ಪದ್ಧತಿಯಿರುವುದಿಲ್ಲ. ಇಲ್ಲಿ ಬಳಿ, ಬುಡಗಳು ಗೋತ್ರಗಳ ಪಾತ್ರವಹಿಸುತ್ತವೆ.

ಬಳಿ ಪದ್ಧತಿ

ಇದು ಹೆಣ್ಣಿನ ಮೂಲಕ ಮುಂದುವರಿಯು ಒಂದು ಕುಲಪದ್ಧತಿಯಾಗಿದೆ. ಮಾತೃಮೂಲಿಯವಂಶಪದ್ಧತಿಯೆಂದು ಇದನ್ನು ವಿವರಿಸಬಹುದು.

ಬಳಿ ಪದ್ಧತಿಯ ಕರ್ನಾಟಕದ ಪಶ್ಚಿಮ ಕರಾವಳಿಗುಂಟ ಪ್ರಾಚೀನಕಾಲದಿಂದ ನೆಲೆಸಿರುವ ಅನೇಕ ಬುಡಕಟ್ಟುಗಳಲ್ಲಿ ಪ್ರಚಲಿತವಾಗಿತ್ತೆಂದು ತಿಳಿಯಬಹುದಾಗಿದೆ.

ಈ ಪದ್ಧತಿಯಂತೆ ತಾಯಿಯೊಬ್ಬಳ ಗಂಡು ಹೆಣ್ಣು ಮಕ್ಕಳೆಲ್ಲರೂ ತನ್ನ ತಾಯಿಯ ಬಳಿಯವರಾಗುತ್ತಾರೆ. ಆದರೆ ಇದು ಮುಂದಿನ ತಲೆಮಾರಿನಲ್ಲಿ ಹೆಣ್ಣಿನ ಮೂಲಕ ಮುಂದುವರಿದರೆ ಗಂಡಿನ ಸಂದರ್ಭದಲ್ಲಿ ಅದು ಅವನ ಮಕ್ಕಳ ಬಳಿಯಾಗಿರುವುದಿಲ್ಲ. ಏಕೆಂದರೆ ಒಬ್ಬ ತಾಯಿಯ ಗಂಡುಮಕ್ಕಳಿಗೆ ಹುಟ್ಟಿದ ಗಂಡು, ಹೆಣ್ಣು ಮಕ್ಕಳೆಲ್ಲರೂ ಅವಳ ಮಗನ ಹೆಂಡತಿಯ ಬಳಿಯನ್ನು ಪಡೆಯುತ್ತಾರೆ. ಅಂದರೆ ಆ ತಾಯಿಯ ಬಳಿಯು ಅವಳ ಗಂಡು ಮಗನವರೆಗೆ ಸಾಗಿ ನಿಂತುಬಿಡುತ್ತದೆ. ಆದರೆ ಇದು ಇವಳ ಹೆಣ್ಣಿನ ಮೂಲಕ ಮುಂದುವರಿಯುತ್ತದೆ. ಮಗಳ ಮಕ್ಕಳಲ್ಲಿ ಅದು ಮುಂದುವರಿದು ಗಂಡು ಮೊಮ್ಮಕ್ಕಳವರೆಗೆ ಸಾಗುತ್ತದೆ. ಹೆಣ್ಣು ಮೊಮ್ಮಕ್ಕಳ ಮೂಲಕ ಮುಂದಿನ ತಲೆಮಾರಿಗೆ ಬಳಿಯು ಸಾಗುತ್ತದೆ. ಇಲ್ಲಿ ಯಾವುದೇ ತಲೆಮಾರಿನ ಹೆಣ್ಣು ಮಕ್ಕಳಾಗಲೀ ಗಂಡುಮಕ್ಕಳಾಗಲೀ ತಮ್ಮ ತಂದೆಯ ಬಳಿಯನ್ನು ಪಡೆಯುವುದಿಲ್ಲ.

ಗಾಮೊಕ್ಕಲ ಬಳಿ ಪದ್ಧತಿಯಲ್ಲಿ ತುಸು ಗೊಂದಲವಿದೆ. ಇವರ ಗಂಡು ಮಕ್ಕಳಿಗೆ ಅಪ್ಪನ ಬಳಿ ಬರುತ್ತದೆ. ಹೆಣ್ಣು ಮಕ್ಕಳಿಗೆ ತಾಯಿಯ ಬಳಿ ಬರುತ್ತದೆಯೆನ್ನುತ್ತಾರೆ. ಇದು ಇವರ ಪುರೋಹಿತರಾಗಿ ಹಾಗೂ ಇವರು ಕೆಲಸ ಮಾಡುವ ತೋಟಗಳ ಒಡೆಯರಾಗಿ ಇತರ ಸಂಸ್ಕೃತಿಯ ಸಾಮೀಪ್ಯವನ್ನು ಹೊಂದಿರುವ ಸ್ಥಳೀಯ ಹವ್ಯಕ ಜನಜಾತಿಯ ಪ್ರಭಾವವದಿಂದಾಗಿ ಈ ಬಗೆಯ ಗೊಂದಲ ಉಂಟಾಗಿರಬಹುದು. ಹವ್ಯಕರಲ್ಲಿಯೂ ಬಹು ಹಿಂದೆ ಬಳಿ ಪದ್ಧತಿಯಿತ್ತೆಂದೂ ವೈದಿಕ ಸಂಸ್ಕೃತಿಯ ದಟ್ಟ ಪ್ರಭಾವದಿಂದಾಗಿ ಇವರು ಇದನ್ನು ಪೂರ್ಣವಾಗಿ ಬಿಟ್ಟು ಗೋತ್ರ ಪದ್ಧತಿಯನ್ನು ಅನುಸರಿಸಿರುವುದಾಗಿಯೂ ತಿಳಿದು ಬರುತ್ತದೆ. ಇಲ್ಲಿ ಪುರಷ ಪ್ರಧಾನ ಸಂಸ್ಕೃತಿಯಿದ್ದು, ಇದು ಗಾಮೊಕ್ಕಲ ಬಳಿ ಪದ್ಧತಿಯ ಮೇಲೆ ಪ್ರಭಾವವನ್ನು ಬೀರಿದೆ.

ಮದುವೆಯ ಸಂದರ್ಭದಲ್ಲಿ ಹೆಣ್ಣು ಗಂಡು ಬಳಿಯನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಏಕೆಂದರೆ ಒಂದೇ ಬಳಿಯ ಗಂಡು ಹೆಣ್ಣುಗಳ ಮದುವೆಯು ಬಳಿಪದ್ಧತಿಯನ್ನು ಅನುಸರಿಸುತ್ತಿರುವ ಬುಡಕಟ್ಟುಗಳ ಹಾಗೂ ವೈದಿಕ ಸಂಪ್ರಾದಯವನ್ನು ಅನುಸರಿಸದ ಅನೇಕ ಜನಜಾತಿಗಳಲ್ಲಿ ನಿಷ್ಟಿದ್ಧವಾಗಿತ್ತು. ಆದರೆ ಮದುವೆಗಳಲ್ಲಿ ಹವ್ಯಕ ಬ್ರಾಹ್ಮಣ ಪೌರೋಹಿತ್ಯದ ಕೈವಾಡವು ಹೆಚ್ಚಾದಂತೆ ಬಳಿ ಪದ್ಧತಿಯ ಮಹತ್ವವು ಕಡಿಮೆಯಾಯಿತು. ಜಾತಕ ಪದ್ಧತಿ ಬೆಳೆಯಿತು. ಬುಡಕಟ್ಟುಗಳು “ಜಾತಕ” ಪದ್ಧತಿಯನ್ನು ರೂಢಿಸಿಕೊಂಡವು.

ಗಾಮೊಕ್ಕಲಲ್ಲಿ ಬಳಿ ಪದ್ಧತಿಯಿದ್ದ ಬಗ್ಗೆ ಹಾಗೂ ಅವುಗಳಿಗೆ ಈ ಕೆಳಗಿನ ಹೆಸರುಗಳಿದ್ದ ಬಗ್ಗೆ ಎಂಥೋವನ್ The Tribes and Castes of Bombay ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ. ಎಂಥೋವನ್ ಅಲ್ಲಿ ಈ ಕೆಳಗಿನ ಬಳಿಗಳ ಪ್ರಸ್ತಾಪ ಮಾಡುತ್ತಾರೆ.

ಅಜ್ಜನ ಬಳಿ, ಅರಸಿನ ಬಳಿ, ಆನೆಬಳಿ, ಕಡಿವಬಳಿ, ಹೊನ್ನೆಬಳಿ, ಜಿಂಡಿ(ಕೆಂಪು) ಬಳಿ, ನೇರಲಬಳಿ, ಹೀನೆಬಳಿ, ಶೆಟ್ಟಿಬಳಿ, ಶಿರಿನಬಳಿ, ಸಿಂಗೆಬಳಿ, ದೇವಸೇರಬಳಿ, ಶೀರೆ(ಸೀಗೆ) ಬಳಿ, ಇತ್ಯಾದಿ.

ಬಳಿ ಪದ್ಧತಿ ಪೂರ್ಣ ಕಾಣೆ

ಕರಾವಳಿ ಕರ್ನಾಟಕದ ಅನೇಕ ಬುಡಕಟ್ಟು ಹಾಗೂ ಇತರ ಜನಜಾತಿಗಳಲ್ಲಿರುವ ಬಳಿಗಳ ಹೆಸರುಗಳಲ್ಲಿ ಸಾಮ್ಯಾಂಶಗಳು ಕಂಡುಬರುತ್ತವೆ. ಈ ಬಗೆಯ ಸಾಮ್ಯಾಂಶಕ್ಕೆ ಕಾರಣವೇನು? ಬಳಿಗಳ ಹೆಸರುಗಳು ಎಷ್ಟು ಪ್ರಾಚೀನ? ಬಳಿ ಪದ್ಧತಿಯನ್ನು ಅನುಸರಿಸುತ್ತಿರುವ ಬುಡಕಟ್ಟುಗಳು ಹಾಗೂ ಇತರ ಜನಜಾತಿಗಳು ಒಂದೇ ಪ್ರದೇಶದಿಂದ ವಲಸೆ ಬಂದವುಗಳೆ? ಅಥವಾ ವಲಸೆ  ಬಂದ ಬಳಿಕ ಇವು ಸ್ಥಳೀಯರ ಪ್ರಭಾವದಿಂದ ಬಳಿಪದ್ಧತಿಯನ್ನು ಅನುಸರಿಸಿದವೆ? ಇತ್ಯಾದಿ. ಪ್ರಶ್ನೆಗಳಿಗೆ ಸದ್ಯ ಉತ್ತರ ಕಾಣದು.

ಗಾಮೊಕ್ಕಲಲ್ಲಿ ಬಳಿಪದ್ಧತಿಯಿದ್ದ ಬಗ್ಗೆ ಅವರ ಮದುವೆ ಹಾಡಿನಲ್ಲಿ ದಾಖಲೆಗಳಿವೆ. ಬಾಸಿಂಗಕ್ಕೆ ಸೆಸೆ ತುಂಬುವಾಗ ಹೇಳುವ ಹಾಡಿನಲ್ಲಿ “ಚಂದ್ರ ಬಳಿಯವನ ಹಿರಿಯಕ್ಕೆ ಈರಾ” ಬಳಿಯವನ ಹಿರಿಯಕ್ಕ ಎಂಬ ಸಾಲುಗಳಿವೆ.

ಬುಡಗಳು. ಹೆಸರುಗಳು ಸ್ಥಳೀಯ ಜನಪದ ದೇವರ ಹೆಸರುಗಳಾಗಿವೆ. ಉದಾ: ಕಾವೂರಮ್ಮನ ಬುಡ, ಜಟಗನ ಬುಡ, ಓರೆಮಣೆ ಬುಡ ಇತ್ಯಾದಿ.

ಈ ಪದ್ಧತಿಯಲ್ಲಿ ಹೆಣ್ಣು ಮಕ್ಕಳು ತಮ್ಮ ತಾಯಿಯು ಯಾವ ಬುಡಕ್ಕೆ ಹೂ ಕೊಡುತ್ತಾಳೋ ಅದೇ ಬುಡಕ್ಕೆ ಹೂ ಕೊಡುತ್ತಾರೆ. ಹೂ ಕೊಡುವುದು ಎಂದರೆ ಬಾಳೆಹಣ್ಣು.  ತೆಂಗಿನ ಕಾಯಿ, ದೇವರಿಗೆ ಸಲ್ಲುವ ಯಾವುದಾದರೂ ಹೂ ಹೂದಂಡೆಗಳನ್ನು ದೇವರಿಗೆ ಅರ್ಪಿಸುವುದು. ಈ ಪ್ರಕ್ರಿಯೆಯನ್ನು ಪೂಜೆ ಸಲ್ಲಿಸುವುದು ಎಂದು ಕೂಡಾ ಹೇಳುತ್ತಾರೆ. ಇದಕ್ಕೆ ನಡೆದುಕೊಳ್ಳುವುದು ಎಂಬ ಶಬ್ದವೂ ರೂಢಿಯಲ್ಲಿದೆ.

ತಾಯಿಯು ಮಾಸ್ತಿ ಬುಡಕ್ಕೆ ಪೂಜೆ ಸಲ್ಲಿಸುವ ಪದ್ಧತಿಯನ್ನು ನಡೆಸಿಕೊಂಡು ಬರುತ್ತಿದ್ದರೆ ಮಗಳು, ಮೊಮ್ಮಗಳು ಹೀಗೆ ಅವಳ ಹೆಣ್ಣು ಪೀಳಿಗೆಯವರು ಮಾಸ್ತಿ ಬುಡಕ್ಕೆ ಹೂ ಕೊಡಬೇಕು. ಅಂದರೆ ಪೂಜೆ ಸಲ್ಲಿಸಬೇಕು. ತನ್ನ ಬುಡಕ್ಕೆ ಪೂಜೆ ಸಲ್ಲಿಸಿದ ಹೆಣ್ಣು ದೇವರ ಪೂಜಾ ಪ್ರಸಾದಗಳನ್ನು ಮೊದಲು ತನ್ನ ತವರು ಮನೆಯ ಹೆಣ್ಣು ಮಕ್ಕಳಿಗೆ ನೀಡುತ್ತಾಳೆ. ಆದರೆ ಇದನ್ನು ತನ್ನ ತವರು ಮನೆಯ ಮುತ್ತೈದೆಯರಿಗಾಗಲೀ, ಮಕ್ಕಳಿಗಾಗಲಿ ನೀಡುತ್ತಾಳೆ. ಆದರೆ ಇದನ್ನು ತನ್ನ ತವರು ಮನೆಯ ಮುತ್ತೈದೆಯರಿಗಾಗಲೀ, ಮಕ್ಕಳಿಗಾಗಲೀ ನೀಡಬಾರದೆಂಬ ಕಟ್ಟಳೆಯಿದೆ.

ಗಂಡಿನ ಬುಡವೂ ಕೂಡ ಅವನ ತಾಯಿಯ ಬುಡವೇ ಆಗಿರುತ್ತದೆ. ಈ ಬುಡ ಪದ್ಧತಿಯು ಕೂಡ ಮಾತೃ ಪ್ರಧಾನ ಸಂಸ್ಕೃತಿಯ ದ್ಯೋತಕವಾಗಿದೆ. ಹೆಣ್ಣಿನ ಮೂಲ ಬುಡಗಳಿಗೆ ಸಲ್ಲುವ ಮಾನ್ಯತೆಯು ಈ “ಬುಡ” ಸಂಸ್ಕೃತಿಯಲ್ಲಿ ವಿಶೇಷ ರೀತಿಯದ್ದಾಗಿದೆ.

ಬುಡಗಳು ಪ್ರಮುಖವಾಗಿ ಜನಪದ ದೇವರಿಗೆ. ಮರಬಳ್ಳಿಗಳಿಗೆ ಸಂಬಂಧಿಸಿವೆ.

ಮದುವೆಯ ಮೊದಲು ಹೆಣ್ಣು-ಗಂಡುಗಳ ಬಳಿಯನ್ನು ನೋಡುವುದು ಅವಶ್ಯ ಆಚರಣೆಯಾಗಿತ್ತು. ಆ ಬಳಿಕ ಅವರ ಬುಡ ಯಾವುದೆಂದು ತಿಳಿದು ಬಳಿಕ ಮದುವೆಯ ಮಾತುಕತೆಗೆ ತೊಡಗುತ್ತಿದ್ದರು. ಯಾಕೆಂದರೆ ಒಂದೇ ಬುಡದ ಹೆಣ್ಣು ಗಂಡುಗಳು ಮದುವೆಯಾಗಕೂಡದೆಂಬ ನಿಯಮಗಳು ಇವರ ಸಮಾಜದಲ್ಲಿ ಜಾರಿಯಲ್ಲಿವೆ. ಅಮ್ನೋರ ಬುಡದವರು ಮಾಸ್ತಿ ದೇವರಿಗೆ ನಡೆದುಕೊಳ್ಳುವುದಿಲ್ಲ. ಅಮ್ನೋರು ಪ್ರಧಾನ ದೇವರು,  ಮಾಸ್ತಿ ಅಧೀನ ದೇವರು ಎಂಬುದು ಇದಕ್ಕೆ ಕಾರಣವಾಗಿರಬಹುದು.

ಸೋದರ ಸಂಬಂಧ:

ಕರಾವಳಿಯ ಅನೇಕ ಬುಡಕಟ್ಟು ಹಾಗೂ ಜನಜಾತಿಗಳಲ್ಲಿರುವಂತೆ ಗಾಮೊಕ್ಕಲು ಮದುವೆಯಲ್ಲಿ ಸೋದರ ಸಂಬಂಧದ ಹೆಣ್ಣನ್ನು ತರಲು ಪ್ರಥಮ ಪ್ರಾಶಸ್ತ್ಯವಿದೆ. ಗಾಮೊಕ್ಕಲ ಮಹಿಳೆ ತನ್ನ ಮಗನಿಗೆ ತವರು ಮನೆಯಲ್ಲಿಯ ಹೆಣ್ಣನ್ನು ಅಂದರೆ ತನ್ನ ಅಣ್ಣ ಅಥವಾ ತಮ್ಮನ ಮಗಳನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ಇದರಿಂದಾಗಿ ಹೆಣ್ಣಿಗೆ ತವರು ಮನೆಯ ಸಂಬಂಧ ಇನ್ನಷ್ಟು ಭದ್ರವಾಗುತ್ತದೆಯೆಂದು ತಿಳಿಯಲಾಗುತ್ತದೆ. ಹೀಗೆ ತನ್ನ ತವರು ಮನೆಯಲ್ಲಿರುವ ಅಣ್ಣ ಅಥವಾ ತಮ್ಮನ ಮಗಳನ್ನು ತನ್ನ ಮಗನಿಗೆ ತರುವುದು ತನ್ನ ಕೌಟುಂಬಿಕ ಹಕ್ಕೆಂದು ತಾಯಿ ಭಾವಿಸುತ್ತಾಳೆ. ಇದಕ್ಕೆ ಸಾಮಾಜಿಕ ಅನುಮತಿಯೂ ಇರುತ್ತದೆ.

ತವರು ಮನೆಯಿಂದ ಹೆಣ್ಣನ್ನು ತರುವುದಷ್ಟೆ ಅಲ್ಲ ತವರುಮನೆಗೆ ಅಂದರೆ ತನ್ನ ಅಣ್ಣ ಅಥವಾ ತಮ್ಮನ ಮಗಳಿಗೆ ತನ್ನ ಮಗನನ್ನು ಕೊಡುವುದು ತನ್ನ ಕರ್ತವ್ಯವೆಂದು ತಾಯಿ ಭಾವಿಸುತ್ತಾಳೆ. ತನ್ನ ಸೋದರತ್ತೆಯ ಮನೆಯ ಹೆಣ್ಣನ್ನು ಪಡೆಯುವುದು ತನ್ನ ಹಕ್ಕೆಂದು ಸೋದರಳಿಯನು ಭಾವಿಸುತ್ತಾನೆ.

ಅತ್ತೆ, ಮಾವ, ಅಳಿಯ, ಸೊಸೆ ಎಂಬ ಶಬ್ದಗಳು ಮದುವೆಯಿಂದ ಏರ್ಪಡುವ ಸಂಬಂಧವಾಚಕ ಶಬ್ದಗಳಾಗಿವೆ. ಆದರೆ ಕರಾವಳಿಯ ಅನೇಕ ಜನಜಾತಿಗಳಲ್ಲಿರುವಂತೆ ಸೋದರ ಸಂಬಂಧದಲ್ಲಿ ಮದುವೆಯ ಪೂರ್ವದಲ್ಲಿ ರಕ್ತಸಂಬಂಧದಿಂದಲೇ ಈ ಶಬ್ದಗಳು ದೊರೆಯುತ್ತವೆ. ಅಂದರೆ ಈ ಸಂಬಂಧವು ಸೋದರ ಸಂಬಂಧಿಗಳ ಹುಟ್ಟಿನಿಂದಲೇ ದೊರೆಯುತ್ತವೆ. ತಂದೆಯ ಅಕ್ಕ ಅಥವಾ ತಂಗಿಯು ಸೋದರತ್ತೆಯಾಗಿದ್ದು, ಸೋದರತ್ತೆಯ ಮಕ್ಕಳು ವರ ಅಥವಾ ವಧುವಾಗಲು ಹುಟ್ಟಿನಿಂದಲೇ ಅರ್ಹತೆಯನ್ನು ಪಡೆಯುತ್ತಾರೆ. ಅದ್ದರಿಂದ ಸೋದರ ಸೋದರಿಯರು ತಮ್ಮ ಗಂಡು ಹೆಣ್ಣು ಮಕ್ಕಳಲ್ಲಿ ಒಬ್ಬಿಬ್ಬರನ್ನಾದರೂ ಸೋದರ ಸಂಬಂಧಕ್ಕೆ ಕೊಟ್ಟು ಅಥವಾ ಅಲ್ಲಿಂದ ತಂದು ಮದುವೆ ಮಾಡುತ್ತಾ.ರೆ

ಇಲ್ಲಿ ತವರಿನಿಂದ ಹೆಣ್ಣನ್ನು ತರುವ ಕ್ರಿಯೆಗಿಂತ ಹೆಣ್ಣನ್ನು ಕೊಡುವ ಕ್ರಿಯೆಗೆ ಹೆಚ್ಚು ಒತ್ತು ಇರುತ್ತದೆ. ಏಕೆಂದರೆ ತಾಯಿಯು ತಾನು ಬಿಟ್ಟು ಬಂದ ಮನೆಯ ತನ್ನ ಸ್ಥಾನವನ್ನು ತುಂಬಲು ತನ್ನ ಮಗಳನ್ನು ತನ್ನ ಸೋದರ ಸಂಬಂಧಕ್ಕೆ ಕೊಡುವುದು ತನ್ನ ಕರ್ತವ್ಯವೆಂದು ಭಾವಿಸುತ್ತಾಳೆ. ಇದೇ ರೀತಿ ಇವಳ ತವರಿನಲ್ಲಿರುವ ಇವಳ ಸೋದರನ ಹೆಂಡತಿಯು ತನ್ನ ತವರಿಗೆ ಹೆಣ್ಣನ್ನು ಕೊಡಲು ಇಷ್ಟಪಡುತ್ತಾಳೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ಇಬ್ಬರು ಹೆಣ್ಣುಗಳ “ಇಷ್ಟ”ದ ನಡುವೆ ಸ್ಪಧೆ ಏರ್ಪಡುವುದುಂಟು. ಈ ಸಂದರ್ಭದಲ್ಲಿ ಹೆಣ್ಣನ್ನು ಕೊಡುವವರ ಇಷ್ಟಕ್ಕಿಂತ ಹೆಣ್ಣನ್ನು ಪಡೆಯುವವರ ಇಷ್ಟದ ಕೈ ಮೇಲಾಗುವುದುಂಟು. ಹೀಗೇ ಹೆಣ್ಣನ್ನು ಪಡೆಯುವವರ ಇಷ್ಟದ ಕೈ ಮೇಲಾದದ್ದನ್ನು ಗಾಮೊಕ್ಕಲ ಮಹಿಳೆಯರು ಹಾಡು “ಅಭಿಮನ್ಯು” ಎಂಬ ಖಂಡಕಾವ್ಯದಲ್ಲಿ ಗುರುತಿಸಬಹುದು.

ಸೋದರತ್ತೆಯ ಗಂಡನು ಮಾವ ಎಂಬ ಸಂಬಂಧಕವಾಚಕ ಶಬ್ದದೊಂದಿಗೆ ಸಂಬೋಧಿಸಲ್ಪಡುತ್ತಾನೆ. ಇಲ್ಲಿ ಮದುವೆ ಏರ್ಪಟ್ಟರೆ ತನ್ನ ಗಂಡ ಅಥವಾ ಹೆಂಡತಿಯ ತಂದೆಯಾದ್ದರಿಂದ ಇವನು ಇನ್ನಷ್ಟು ಸಂಬಂಧವನ್ನು ಹೊಂದಿ “ಮಾವ”ನಾಗುತ್ತಾನೆ. ಇವನನ್ನು ಈಗ ಮನೆಯ “ಮಾವ” ಎಂಬ ವಿಶೇಷಣದೊಂದಿಗೆ ಗುರುತಿಸುವುದಂಟು.

ಈ ಹಾಡಿನಲ್ಲಿ ಬಲರಾಮನ ತಂಗಿ ಸುಭದ್ರೆ ತನ್ನ ಅಣ್ಣ ಬಲರಾಮನ ಮನೆಗೆ ಹೋಗಿ ತನ್ನ ಮಗ ಅಭಿಮನ್ಯುವಿಗೆ ಹೆಣ್ಣನ್ನು ಕೇಳುತ್ತಾಳೆ. ಆದರೆ ಬಲರಾಮನ ಹೆಂಡತಿ, ಸುಭದ್ರೆಯ ಮಗನಿಗೆ ಹೆಣ್ಣನ್ನು ಕೊಡಲು ಒಪ್ಪುವುದಿಲ್ಲ. ತನ್ನ ಅಣ್ಣನ ಮಗನಿಗೆ ಹೆಣ್ಣು ಕೊಡುವುದು ಅವಳ ಆಸೆ. ಆದರೆ ಇಲ್ಲಿ ಬಲರಾಮನ ಹೆಂಡತಿಯ ಆಸೆ ಪರಂಪರಾಗತ ಆಚರಣೆಗೆ ಬದ್ಧವಾಗಿರುತ್ತದೆ. ಅಭಿಮನ್ಯು ತನ್ನ ಮಾವನ ಮಗಳನ್ನು ವರಿಸುತ್ತಾನೆ. ಇಲ್ಲಿ ಅಭಿಮನ್ಯುವಿನ ಪರಾಕ್ರಮದ ಕೈ ಮೇಲಾಗುತ್ತದೆ.

ಅಜ್ಜಮನೆ: ತಾಯಿಯ ತಾಯಿಯು ಅಜ್ಜಿ, ತಂದೆಯ ತಾಯಿಯೂ ಅಜ್ಜಿ ಎಂಬ ಸಂಬಂಧವಾಚಕ ಶಬ್ದದಿಂದ ಸಂಬೊಧಿಸಲ್ಪಡುತ್ತಾರೆ. ತಾಯಿಯ ತಾಯಿಯು ಮಾತೃಮೂಲಿಯ ವಂಶಪದ್ಧತಿಯ ಹಿರಿಯಳಾಗಿ ಮದುವೆಯಲ್ಲಿ ಹೆಚ್ಚಿನ ಸ್ಥಾನ ಪಡೆದಿರುತ್ತಾಳೆ. ಇವಳು ವಾಸ್ತವ್ಯ ಮಾಡುವ ಮನೆಯನ್ನು “ಅಜ್ಜಿಮನೆ” ಯೆಂದು ಹೆಚ್ಚು ಆತ್ಮೀಯತೆಯಿಂದ ಗುರುತಿಸಲಾಗುತ್ತದೆ. ಮದುವೆಯು ನಿಶ್ಚಯವಾದ ಬಳಿಕ ಮದುಮಕ್ಕಳು ತಂತಮ್ಮ ಅಜ್ಜಿಮನೆಗೆ ಭೇಟಿ ಕೊಡುತ್ತಾರೆ.

ಅಕ್ಕಭಾವ: ಮದುವೆಯ ಪ್ರಾರಂಭದಲ್ಲಿ ಹೆಣ್ಣು ಕೇಳುವ ಚಡಂಗವೊಂದು ಜಾರಿಯಲ್ಲಿದ್ದು, ಆದಿನ ಅಕ್ಕ -ಭಾವ ಜೊತೆಯಾಗಿರುತ್ತಾರೆ. ಅಕ್ಕ ತನ್ನ ತಾಯಿಯ ಪ್ರತಿನಿಧಿಯಾಗಿ ಮದುವೆಯ ಕೂಸಿನ (ವಧುವಿನ) ಮನೆಗೆ ಹೋಗುತ್ತಾಳೆ. ತನ್ನ ತಾಯಿಯ ತವರಿನಲ್ಲಿಲ್ಲದೆ ಬೇರೆಡೆ ಹೋಗಿ ಹೆಣ್ಣನ್ನು ಕೇಳುವ ಸಂದರ್ಭ ಬಂದಾಗ ಅಲ್ಲಿಯ ಅಕ್ಕನ ಪಾತ್ರ ಪ್ರಮುಖವಾಗಿರುತ್ತದೆ. ಬೇರೆಡೆ ಹೆಣ್ಣನ್ನು ಕೇಳುವ ಸಂದರ್ಭ ಬಂದಾಗ ತಾಯಿಯ ಸೋದರನು ತನ್ನ ಸೋದರಿಯ ಪ್ರತಿನಿಧಿಯಾಗಿ ಪಾಲ್ಗೊಳ್ಳುತ್ತಾನೆ. ಸೋದರಿಯ ಮಕ್ಕಳ ಮದುವೆಯಲ್ಲಿ ಹಾಗೂ ಇತರ ಅನೇಕ ಸಂದರ್ಭಗಳಲ್ಲಿ ಸೋದರನಿಗೆ ಇರುವ ಹಕ್ಕು-ಬಾದ್ಯತೆಗಳನ್ನು ಗಮನಿಸಿ, ತಾಯಿ ಸತ್ತರೂ ಸೋದರ ಮಾವ ಇರಬೇಕು ಎಂಬ ಗಾದೆಮಾತು ರೂಢಿಯಲ್ಲಿದೆ.

ಹೆಣ್ಣನ್ನು ನಿಶ್ಚಿಯಿಸುವುದು: ಸಾಂಪ್ರದಾಯಿಕ ಪದ್ಧತಿಯಂತೆ ಹಿರಿಯರು ಹೆಣ್ಣನ್ನು ನೀಡಿದ ಬಳಿಕ ವರನು ಜಾತ್ರೆಯಲ್ಲೋ ದೇವಸ್ಥಾನದಲ್ಲಿಯೋ ಕಂಡುಬರುವುದಿತ್ತು. ಹೆಚ್ಚಾಗಿ ಹೆಣ್ಣು ಊರು ಕೇರಿಯವಳೇ ಆಗಿರುತ್ತಿದ್ದ ಕಾರಣ ಅವಳನ್ನು ಇಲ್ಲಿ ಅನೇಕ ಬಾರಿ ಕಂಡಿರುತ್ತಿದ್ದ ಕಾರಣ ಮತ್ತೆ ಪ್ರತ್ಯೇಕವಾಗಿ ನೋಡುವ ಅವಶ್ಯಕತೆಯಿರುತ್ತಿರಲಿಲ್ಲ. ಆದರೆ ಈಗ ಹೆಣ್ಣು-ಗಂಡುಗಳಿರುವ ಪ್ರದೇಶ ದೂರದೂರವಾಗಿರುವುದುಂಟು. ಈ ಸಂದರ್ಭದಲ್ಲಿ ಗಂಡು ಹಿರಿಯರೊಂದಿಗೆ ಹೆಣ್ಣಿನ ಮನೆಗೆ ಹೋಗಿ ಹೆಣ್ಣನ್ನು ನೋಡುವ ಅವಶ್ಯಕತೆ ಹೆಚ್ಚಾಗಿದೆ. ಇದು ಆಧೂನಿಕತೆಯು “ಕುರುಹು” ಎಂಬುದಾಗಿಯೂ ಭಾವಿಸಿಕೊಂಡಿದ್ದಾರೆ. ಹೆಣ್ಣಿನ ಮನೆಗೆ ಹಿರಿಯರು ಹೋಗಿ “ಕಾಯಿಸುಳಿ ಬೆಲ್ಲ” ತಿಂದು ಅಥವಾ ಸಕ್ರೆ ಬಾಳೆಹಣ್ಣು ಹಂಚಿ ಹೆಣ್ಣು ನಿಶ್ಚಯದ ಕೆಲಸವನ್ನು ಪೂರೈಸುತ್ತಿದ್ದರು. ಈ ಸಂಪ್ರದಾಯವನ್ನು ಸಿಹಿ ತಿನ್ನುವುದು ಎನ್ನುತ್ತಾರೆ.

ಇತ್ತೀಚೆಗೆ ಈ ಕಾರ್ಯಕ್ರಮವೂ ಹೆಚ್ಚು ವೈಭವದಿಂದ ನಡೆಯುತ್ತದೆ.

ಅಕ್ಕನ ಕಡೆಯವರು “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು” ಎಂಬ ಗಾದೆಯು ಪುರುಷಪ್ರಧಾನ ಸಂಸ್ಕೃತಿಯ ಉತ್ಪನ್ನವಾಗಿದ್ದು, ಮಾತೃಮೂಲಿಯ ಸಂಸ್ಕೃತಿಯಲ್ಲಿ ಇದು ಪ್ರಧಾನ ಅಂಶವಾಗಿರುವುದಿಲ್ಲ. ಮದುವೆಯು ಗೊತ್ತಾದ ಕೂಡಲೇ ಸ್ವತಃ ಮದುಮಗನೇ ಅಕ್ಕನ ಮನೆಗೆ ಹೋಗಿ ಅವಳನ್ನು ಕರೆತರುತ್ತಾನೆ. ಇಬ್ಬರಿಗೂ ಮದುವೆಯಲ್ಲಿ ಮಹತ್ವದ ಕೆಲಸಗಳಿರುತ್ತವೆ

ಮನೆ ಹಬ್ಬ: ಮದುವೆಯ ಮುನ್ನಾದಿನವನ್ನು “ಮನೆ ಹಬ್ಬ” ವೆಂದು ಕರೆಯುತ್ತಾರೆ. ಈ ದಿನ ಈ ಕೆಳಗಿ ವಿವರಿಸಿದ ಅನೇಕ ಚಡುಗಳು ಚಪ್ಪರ ಹಾಕುವುದು, ಮದುಮಕ್ಕಳ ಮನೆಯ ಅಂಗಳದಲ್ಲಿ ಚಪ್ಪರ ಹಾಕುವ ಕಾರ್ಯಕ್ರಮವು ಮದುವೆಯ ಮುನ್ನಾದಿನ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಮದುವೆಗೆಂದು ಮುನ್ನಾ ದಿನವೇ ಬಂದಿರುವ ಸಮೀಪದ ನೆಂಟರಿಷ್ಟರು ಹಾಗೂ ನೆರೆಯೊರೆಯವರು ಪಾಲ್ಗೊಳ್ಳುತ್ತಾರೆ. ಮದುಮಕ್ಕಳ ಮನೆಯವರು ಮದುವೆಗಾಗಿ ಈ ಮೊದಲೇ ಮನೆಹಬ್ಬಗಳು ಬಳಿಕ ಕಂಬಗಳನ್ನು ಬೆಟ್ಟದಿಂದ ತಂದು ಅಥವಾ ಹಣ ಕೊಟ್ಟುಕೊಂಡು ಸಂಗ್ರಹಿಸುತ್ತಾರೆ. ಚಪ್ಪರ ಕಟ್ಟಲು ಕಾಸರನ ಮರವನ್ನು ಬಳಸುವುದಿಲ್ಲ.

ಚಪ್ಪರಕ್ಕೆ ಮಾವಿನ ತುದಿಟೊಂಗೆಗಳನ್ನು ತೆಂಗಿನ ಕತ್ತದ ನಾರಿನಿಂದ ಮಾಡಿ “ಹುರಿಬಳ್ಳಿ”ಗೆ ಸಿಕ್ಕಿಸಿದ ತೋರಣವನ್ನು ಹಾಕುತ್ತಾರೆ. ಹೂಮಾಲೆ ಬೀರುತ್ತಾರೆ. ಕೊನೆ ಬಂದಿರುವ ಬಾಳೆಗಳನ್ನು ಮಂಟಪದ ಬಾಗಿಲ ಬಳಿ ನಿಲ್ಲಿಸುತ್ತಾರೆ. ಮಂಟಪದ ಮೇಲುಗಡೆ ಕೆಂಪು ರುಮಾಲನ್ನು ಪಸರಿಸಿ “ಮೇಲ್ಗಟ್ಟು” ಕಟ್ಟುತ್ತಾರೆ.

ಮೇಲ್ಗಟ್ಟು ಕಟ್ಟುವಾಗ ಮಡಿವಾಳನು ಹಾಜರಿದ್ದು, ಮೇಲ್ಗಟ್ಟಿನ ಬಟ್ಟೆಯನ್ನು ತರುತ್ತಾನೆ. ಈ ಕಾರ್ಯವು ಗಂಡು ಹೆಣ್ಣು ಇಬ್ಬರ ಮನೆಯಲ್ಲಿಯೂ ನಡೆಯುತ್ತದೆ.

ಮೂರ್ತ ತರುವುದು: ಈ ದಿನ ಇತ್ತ ಚಪ್ಪರ ಕಟ್ಟುತ್ತಿರುವಾಗ ಊರಿನ ಭಟ್ಟರ ಮನೆಗೆ ಹೋಗಿ ಮೂರ್ತ ತರುವ ಚಡಂಗವು ನಡೆಯುತ್ತದೆ. ಇದು ಗಾಮೊಕ್ಕಲು ಬ್ರಾಹ್ಮಣ ಪುರೋಹಿತರ ಮದುವೆ ಶಾಸ್ತ್ರ ಪದ್ಧತಿಗೆ ಒಳಗಾಗುತ್ತಿರುವ ಪ್ರಕ್ರಿಯೆಯಾಗಿದೆ. ಯಾಕೆಂದರೆ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ “ಗೋಧೂಳಿ” ಮುಹೂರ್ತವನ್ನು ಇವರು ಒಪ್ಪಿಕೊಂಡಿದ್ದರು. ಗಂಡಿನಮನೆಯ ಕೂಡುವಳಿದಾರರು ಗಂಡಿನ ಮನೆಯವರ ಪರವಾಗಿ ಹರಿವಾಣದಲ್ಲಿ ಸಿದ್ಧೆ, ಅಕ್ಕಿ, ಕಾಯಿ, ಸಿಂಗಾರ, ಐದು ರೂಪಾಯಿ ತುಂಬಿಕೊಂಡು ಹೆಣ್ಣಿನ ಮನೆಯವರು ನೀಡಿ ಅಕ್ಕಿ ಕಾಯಿ, ಸಿಂಗಾರ, ಐದು ರೂಪಾಯಿ ಕೊಡಿಸಿಟ್ಟ ಹರಿವಾಣವನ್ನು ಎತ್ತಿಕೊಂಡು ಭಟ್ಟರ ಮನೆಗೆ ಹೋಗುತ್ತಾರೆ. ಊರಭಟ್ಟರ ಮನೆಯವರು ಇವರ ಹರಿವಾಣಗಳಲ್ಲಿಯ ಸಾಮಾನನ್ನು ಪಡೆದು ಅದರಲ್ಲಿ ತಮ್ಮ ಮನೆಯ ಅಕ್ಕಿ, ಕಾಯಿ, ಸಿಂಗಾರ ಅಥವಾ ಹೂ ಹಾಕಿ ಹರಿವಾಣಗಳನ್ನು ಅವರಿಗೆ ನೀಡಿ ಮದುವೆಗೆ ಪ್ರಶಸ್ತವಾದ ಮುಹೂರ್ತವನ್ನು ತಿಳಿಸುತ್ತಾರೆ. ಹಿಂತಿರುಗಿಸುವಾಗ ಹರಿವಾಣಗಳಲ್ಲಿ ಭಟ್ಟರು ಯಾವುದೇ ಹಣವನ್ನುನಿಡುವುದಿಲ್ಲ.

ಎದುರುಗೊಳ್ಳುವುದು: ಮುಹೂರ್ತವನ್ನು ತಂದಿರುವ ಆಯಾ ಕೂಡುವಳಿದಾರರು ಗಂಡಿನ ಮನೆಗೂ ಹೆಣ್ಣಿನ ಮನೆಗೂ ಹೋಗುತ್ತಾರೆ. ಅಲ್ಲಿ ಆಯಾ ಮನೆಯ ವಧು-ವರರ ತಾಯಿಯು ಅಕ್ಷತೆಯನ್ನು ಸಿದ್ಧಪಡಿಸಿಕೊಂಡು ತನ್ನ ಜೊತೆ ನಾಲ್ಕು ಜನ ಹೆಂಗಸರನ್ನು ಕರೆದುಕೊಂಡು ತಂಬಿಗೆಯಲ್ಲಿ ತುಂಬಿದ ನೀರು ಹಾಗೂ ಒಂದು ಕುಡಿಬಾಳೆಲೆಯನ್ನು ಒಯ್ಯುತ್ತಾಳೆ, ಇವುಗಳನ್ನು ಜೊತೆಗೆ ಹೋದ ಹೆಂಗಸರು ಹಿಡಿದಿರುವುದುಂಟು.

ಮುಹೂರ್ತ ತಂದು ಭಾಗಿಲಬಳಿ ನಿಂತಿರುವ ಕೂಡುವಳಿದಾರನ ಮುಂದೆ ಬಾಳೆಲೆಯನ್ನು ಹಾಸಲಾಗುತ್ತದೆ. ಕೂಡುವಳಿದಾರನು ಈ ಬಾಳೆಲೆಯ ಮೇಲೆ ನಿಲ್ಲುತ್ತಾನೆ. ತಾಯಿ ಅವನ ಕಾಲಿಗೆ ನೀರು ಹಾಕಿ ಅಕ್ಷತೆಯಿಡುತ್ತಾಳೆ. ಕೂಡುವಳಿದಾರನು ದೇವರ ಬಳಿ(ತುಳಸಿಮನೆ) ಮುಹೂರ್ತದ ಬಟ್ಟಲನ್ನಿಟ್ಟು ಭಟ್ಟರು ಬಳಸಿದಿ ಮುಹೂರ್ತವನ್ನು ಜಾಹೀರುಪಡಿಸುತ್ತಾನೆ. ಮಹಿಳೆಯರು ಈ ಮುಹೂರ್ತದ ಬಟ್ಟಲನ್ನು ಒಳಗೊಯ್ದು ಹಸಗರದ ಬಳಿಯಿಡುತ್ತಾರೆ. ಪ್ರತಿಕಾರ್ಯಕ್ಕೆ ಮಹಿಳೆಯ ಹಾಡುಗಳು ಚಪ್ಪರ ತುಂಬುತ್ತವೆ. (ಕೂಡುವಳಿದಾರರು ಎರಡೂ ಕಡೆಯವರಿಗೆ ಒಪ್ಪಿತವಾದವರು)

ಬಟ್ಟರ ಮನೆಯಾ ಎಳೆಯಳ ಮೂರುತವಾ
ಮಾರಾಯರ‍್ಹೋಗಿ ತಡದಂದಿ
ಮಾರಾಯರ‍್ಹೋಗಿ ತಡದಂತ ಮೂರುತನ
ಮೂಡಣ ದೊಡ್ಡೊಳಗ ಮಡಗೊವ್ಗೆ
ಸೋಮಾರ ದಿನದಲ್ಲಿ ರಾಮಾಯಣದ ಗಳಗ್ಯಲ್ಲಿ
ಹಾರುವರ ಮನೆಯಾ ಸಕಣಾವೇ
ಹಾರುವರ ಮನೆಯಾ ಸಕಣದ ಮೂರುತವ
ನಾರಿಯರ‍್ಹೋಗಿ ಎದ್ರಗೊಂಡಿ
ನಾರಿಯರ‍್ಹೋಗಿ ಎದ್ರಗೊಂಡ ಮೂರುತವ
ಮೂಡಣ ದೊಡ್ಡೊಳಗೆ ಮಡಗಾರೆ

(ಬ್ರಾಹ್ಮಣ ಪುರೋಹಿತರಲ್ಲಿಗೆ ಹೋಗಿ ಮುಹೂರ್ತ ತರುವ ಆಚರಣೆಗಿಂತ ಮೊದಲು ಗೋಧೂಳಿಯ ಮುಹೂರ್ತ ನಡೆಯುತ್ತಿತ್ತು.)

ಅಕ್ಕಿಗೇರುವುದು: ಇದು ಮದುವೆಯ ಅಡುಗೆಯ ಸಾಮಗ್ರಿಗಳ ತಯಾರಿಯನ್ನು ಸೂಚಿಸುತ್ತದೆ. ಮದುವೆಯ ಅಡುಗೆಗಾಗಿ ಎಲ್ಲ ಬಗೆಯ ಸಾಮಗ್ರಿಗಳನ್ನು ಕೂಡಿಸಿಕೊಂಡಿದ್ದರೂ ಸಾಂಪ್ರದಾಯಿಕ ಆಚರಣೆಯಾಗಿ ನಾಲ್ಕಾರು ಹೆಂಗಸರು ಮನೆಯೊಳಗಿನ ಅಕ್ಕಿಯನ್ನು ತಂದು ಗೇರುತ್ತಾರೆ. ಹಸನು ಮಾಡುತ್ತಾರೆ. ಈ ಚಡಂಗದ ಹಾಡುಗಳು ಇಂಪಾಗಿ ತೇಲಿಬಂದು ಚಪ್ಪರವನ್ನುತುಂಬುತ್ತವೆ

ಚಪ್ಪರ ಹಾಕುವುದು:

ತಳಗಿ ಹಿಂದೆ ಹೆಣ್ಣಿನ ಮನೆಯಲ್ಲಿ ತೆಗಳಿಯನ್ನು ತಯಾರಿಸಿಕೊಳ್ಳುವ ಪದ್ಧತಿಯಿರಲಿಲ್ಲ. ಈಗ ಹೆಣ್ಣಿನ ಮದುವೆಗಾಗಿ ದೇವಸ್ಥಾನಕ್ಕೆ ಕರೆದೊಯ್ಯುವ ಕಾರಣ ಹೆಣ್ಣಿನ ಸಹೋದರಿಯು ಕೂಡ ತಳಿಗೆಯನ್ನು ಹಿಡಿದು ಮದುಮಗಳ ಮುಂದೆ ನಡೆಯುತ್ತಾಳೆ.

ತಳಿಗೆ ತಯಾರಿ: ಒಂದು ಗುಂಡಿ ಹರಿವಾಣದಲ್ಲಿ ಕುಡಿಬಾಳೆಯೆಲೆ ಅರ್ಧದಷ್ಟು ಮೂರು ಬಾಳೆಕಾಯಿ, ಎರಡು ತೊಂಡೆಕಾಯಿ, ವೀಳ್ಯಪಟ್ಟಿ ಚಿಕ್ಕ ಒಂದು ಕನ್ನಡಿ ಕುಂಕುಮ, ಅರಿಶಿನ, ಹೊತ್ತಿಸಿದ ದೀಪ, ಸುಲಿದ ತೆಂಗಿನಕಾಯಿ, ಹೊತ್ತಿಸಿದ ಊದಬತ್ತಿ ಇವುಗಳನ್ನು ಹೊತ್ತು ಮಾಡುವಾಗ ಮದುವೆಯ ದಿನ ತಯಾರಿಸುತ್ತಾರೆ. ಚಪ್ಪರ ಹಾಕಲು ಕೂಡುವರು. ಅಕ್ಕಿಗೇರಲು ಬಂದವರು ಈ ದಿನ ಆಯಾ ಮನೆಯಲ್ಲಿ ಮನೆಯ ಜನರೊಡನೆ ಪಾಯಸದೂಟ ಮಾಡುತ್ತಾರೆ.

ಕಳಸಮೊಗೆ: ತುಳಸಿಯ ಮುಂದೆ ಕುಳಿತು ಒಂದು ಚಿಕ್ಕ ಮಣ್ಣಿನ ಮೊಗೆಯಲ್ಲಿ ಸಣ್ಣ ಕಂದ್ಲ(ಲೋಟ), ನೀರು ಸಿಂಗಾರದ ಹುಸಿ(ತುಂಡು) ಹಾಕಿ, ಅದಕ್ಕೆ ಮಾವಿನ ತುಮಕೆ (ಚಿಗುರ ಕುಡಿ) ಇಟ್ಟು ಹಸರಗದ ಬಳಿ ತಂದಿಡುತ್ತಾರೆ.

ತೆಂಗಿನ ಕಾಯಿ ಕೊಯ್ಯುವುದು: ಮದುವೆಯ ಮಹತ್ವದ ಚಡಂಗಗಳಿಗೆ ಬಳಸಲಾಗುವ ತೆಂಗಿನ ಕಾಯನ್ನು ನೆಲಕ್ಕೆ ಬೀಳಸದೆ ಕೈ ಇಡೀ ಹಿಂಡಿಗೆಯನ್ನು ಹಿಡಿದು ಇಳಿಯುತ್ತಾರೆ. ಅದನ್ನು ದೇವರ ಬಳಿಯಿಟ್ಟು ಬಳಿಕ ಬಳಸುತ್ತಾರೆ.

ಅಡಿಯಕ್ಕಿ: ಮದುವೆಯ ದಿನ (ಮುಂಜಾನೆ ಹೊತ್ತು ಮಾಡುವ ಮುಂಚೆ) ಸೊಪ್ಪುಗೂಡಿನ ಎರಡು ತೆಂಗಿನ ಕಾಯಿಗೆ ಪೂರ್ಣ ಶೇಡಿ ಹಚ್ಚಿ ಒಂದು ಕುಡಿಬಾಳೆಲೆಯ ಮೇಲಿಟ್ಟು ಅದರ ಜೊತೆ ಮೂರು ಬಾಳೆಲೆಯ ಎರಡು ತೊಂಡೆಯನ್ನು ಇಟ್ಟು ಅದನ್ನು ತುಳಸಿಯ ಬಳಿಯಿಡುತ್ತಾರೆ. ಇದು ಮದುವೆಯ ಕಾರ್ಯವು ಪೂರ್ಣಗೊಳ್ಳುವವರೆಗೆ ಅಲ್ಲಿರುತ್ತದೆ.

ಮದುವೆಯ ಶೇಡಿ:

ಮದುವೆಯ ಹಲವಾರು ಚಡಂಗಗಳನ್ನು ನಡೆಸುವಾಗ ಮದುಮಕ್ಕಳನ್ನು ಮನೆಯೊಳಗಿನ ಒಂದು ನಿರ್ದಿಷ್ಟ ಸ್ಥಳದಲ್ಲಿ ಕುಳ್ಳಿರಿಸುತ್ತಾರೆ. ಸಾಮಾನ್ಯ ನಡುಮನೆಯಲ್ಲಿಯ ಪೂರ್ವಾಭಿಮುಖವಾಗಿರುವ ಗೋಡೆಯ ಬಳಿ ಈ ಸ್ಥಳವಿರುತ್ತದೆ. ಈ ಸ್ಥಳವನ್ನು “ಹಸಗರ” ವೆಂದು ಕರೆಯುತ್ತಾರೆ.

ತಮ್ಮ ಮಕ್ಕಳ ಮದುವೆಯ ಸಂದರ್ಭದಲ್ಲಿ ಮದುವೆಮನೆಗೆ ಮೊಟ್ಟಮೊದಲು ಶೇಡಿ ಬರೆಯುವವಳು ತಾಯಿ, ಹೆಣ್ಣಿನ ಮನೆಯಲ್ಲಿ ಮದುಮಗಳ ತಾಯಿ ಕಳಸದ ಚಿತ್ರವನ್ನೂ ಗಂಡಿನ ಮನೆಯಲ್ಲಿ ಮದುಮಗನ ತಾಯಿಯೂ ಐಮೂಲೆ ಚಿತ್ರವನ್ನು ಹಸಗರದ ನೆಲಕ್ಕೆ ಬರೆದು “ಮದುವೆಯ ಶೇಡಿ” ಕಾರ್ಯಕ್ಕೆ ಚಾಲನೆ ನೀಡುತ್ತಾಳೆ.

ಸಗಣೀಯ ಸಾರೀಸೇ ಶೇಡೀಯ ಹಲಿಹೊಯ್ಯೆ
ತಾಯೇ ತಂದಿರಸೇ ತಳಗೀಯಾ| ತೆಂಗೀನಾ
ಕಾಯಾ ತಂದಿರಿಸೇ ತಲದುಪ್ತ

ಹಾಡುಗಾರ್ತಿಯರು ಸೂಚಿಸಿದಂತೆ ತಾಯಿಯು ಮದುಮಗನು ಕುಳಿಕೊಳ್ಳುವ ಸ್ಥಳದಲ್ಲಿ ಸೆಗಣಿಯನ್ನು ಸಾರಿಸಿ ಅಲ್ಲಿ ಅಂಕಣ ಐದು ಸೇಡಿಯನ್ನು ಬರೆಯುತ್ತಾಳೆ.

ಕೆಂದೀಯ ಸಗಣೀಯ ಅಂಗೈಲಿ ತಡಕಂಡಿ
ಅಂದಚೆಂದದಲಿ ನೆಲನುದ್ದಿ|
ಅಂದಚೆಂದದಲಿ ನೆಲನುದ್ದಿ ತಾಯವ್ವ
ಅಂಕಣದಶೇಡಿ ಬರದಾಳೆ

ಮದುವೆಯ ಶೇಡಿ ಬರೆಯುವ ಕಾರ್ಯವು ಮೌಖಿಕ ಹಾಡಿನಲ್ಲಿರುವ ಮದುವೆ ಶಾಸ್ತ್ರದಂತೆ ಹಾಗೂಬಲ್ಲ ಮಹಿಳೆಯ ಆಚರಣಾ ಜ್ಞಾನದ ನೆಲೆಯಲ್ಲಿ ನಡೆಯುತ್ತದೆ. ಈ ಹಾಡಿನ ರೂಪದಲ್ಲಿರುವ ಈಶಾಸ್ತ್ರವನ್ನೇ ಆಯಾ ಸಂದರ್ಭದಲ್ಲಿ ಹಾಡುಗಾರ್ತಿಯರು ಹಾಡುಗಳನ್ನೊರೆಯುತ್ತ ಶಾಸತ್ರವನ್ನು ಆಚರಣೆಯ ರೂಪರೇಷೆಗಳನ್ನು ಸಂಬಂಧಪಟ್ಟವರಿಗೆ ಮುಟ್ಟಿಸುತ್ತಾರೆ.

ಸೇಡಿ ಬಟ್ಲಾನಾ ರೂಢಿಯಲಿ ತಡಕಂಡೇ
ಮೂಡಣ ದೊಡ್ಡೊಳಗೇ ನೆಡದಾಳೇ
ಮೂಡಣ ದೊಡ್ಡೊಳಗೇ ನೆಡದಾಳೆ ತಾಯವ್ವ
ಮೂಡಣ ಗೋಡಿ ಸೂಸ್ತ್ರಾ ತಡದಾಳೇ

ಮೂಡಣಕ್ಕೆ ಮುಖವಾಗಿರುವ ಗೋಡೆಯ ಮೇಲೆ ಚೌಕ ಅಥವಾ ಆಯತಾಕಾರದ ಕ್ಷೇತ್ರವನ್ನು ಆಯ್ದುಕೊಂಡ ಬಳಿಕ ಅಲ್ಲಿ ನಕ್ಷೆ ತುಂಬುವ ಕೆಲಸ ನಡೆಯುತ್ತದೆ. ಇದನ್ನು ತಾಯಿಯೊಬ್ಬಳೇ ಮಾಡಬೇಕಾಗಿಲ್ಲ. ಕೇದಿಯ ನುರಿತ ಹೆಂಗಸರು ತಾಯಿಯ ಬದಲಿಗೆ ಹಸಗರ ಗೋಡೆಯ ಶೇಡಿಯ ರಚನೆಗೆ ತೊಡಗುತ್ತಾರೆ. ಹಸಗರ ಗೋಡೆಯನ್ನು ಬರೆಯಲು ಬಲ್ಲ ನುರಿತ ಹೆಂಗಸನ್ನು ಮದುವೆ ಮನೆಯ ಯಜಮಾನತಿ ವೀಳ್ಯಕೊಟ್ಟು ಕರೆತರುತ್ತಾಳೆ. ಇವರ ಕಾರ್ಯದಲ್ಲಿ ಮದುವೆ ಮನೆಯಲ್ಲಿಯ ಸೊಸೆಯಂದಿರು ಹೆಣ್ಣುಮಕ್ಕಳು ನೆರವಾಗುತ್ತಾರೆ. ಇವರನ್ನು ಶೇಡಿ ಬರೆಯಲು ಬರುವಂತೆ ಹಾಡುಗಾರ್ತಿಯರು ಹಾಡಿನಲ್ಲಿಯೇ ಕರೆ ನೀಡುತ್ತಾರೆ.

ಇದೇ ಹೊತ್ತಿಗೆ ಮದುಮಗಳ ಮನೆಯಲ್ಲಿ ತಾಯಿಯು ಕಳಸದ ಸೇಡಿ ಬರೆಯುತ್ತಾಳೆ. ಇದಕ್ಕೆ ಮೊದಲು ತಾಯಿಯು ಅಮ್ಮನ ಕಾಯಿತೆ ವೀಳ್ಯವಿಟ್ಟು ಕೈಮುಗಿದು ತನ್ನ “ಶೇಡಿ” ಕೆಲಸಕ್ಕೆ ತೊಡಗುತ್ತಾಳೆ.

ಮದುವೆ ಮನೆಯಲ್ಲಿಯ ಹಸಗರ ಶೇಡಿಗಳು ಬಹುದೊಡ್ಡವು. ಸಾಮಾನ್ಯವಾಗಿ ಚೌಕಾಕಾರದ ಅಥವಾ ಅಡ್ಡ ಆಯತಾಕಾರದ ಒಂದರಿಂದ ಒಂದೂವರೆ ಮಾರುದ್ದದ ಚೌಕಟ್ಟನ್ನು (ಫ್ರೇಮ್)ಗೋಣಿಯ ದಾರ ಹಾಗು ಬಿಳಿಶೇಡಿ ಪುಡಿ ಸಹಾಯದಿಂದ ಇವರು ತಯಾರಿಸಿಕೊಳ್ಳುತ್ತಾರೆ.

ಒಂದು ಬಟ್ಟೆಯ ತುಂಡಿನ ಸಹಾಯದಿಂದ ಕೆಂಪು ಬಣ್ಣವನ್ನು ಗೋಡೆಗೆ ಬಳಿದು ಬಳಿದ ಗೋಣಿ ದಾರವನ್ನು ಶೇಡಿಯ ಪುಡಿಯಲ್ಲಿ ಹೊರಳಾಡಿಸಿ ಅದರ ಎರಡೂ ತುದಿಗಳನ್ನು ಇಬ್ಬರು ಹಿಡಿದಾಗ ಇನ್ನೊಬ್ಬರು ದಾರವನ್ನು ಬಿಲ್ಲಿನ ಹೆದೆಯನ್ನು ಎಳೆಯುವಂತೆ ಎಳೆದುಬಿಡುತ್ತಾರೆ. ಆಗ ಗೋಡೆಯ ಮೇಲೆ ಬಿಳಿಬಣ್ಣದ ರೇಖೆಯು ಮೂಡುತ್ತದೆ. ಇದೇ ರೀತಿ ತಮಗೆ ಬೇಕಾದಷ್ಟು ಚೌಕಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಇಲ್ಲಿಯ ಪ್ರಥಮ ಗೆರೆಯನ್ನು ಎಳೆಯುವಾಗ ಮದುಮಕ್ಕಳು ತಂತಮ್ಮ ಮನೆಯಲ್ಲಿ ಹಸಗರ ಭಾಗವಹಿಸುತ್ತದೆ. ಶೇಡಿ ಬರೆಯುವರು ಒಬ್ಬಿಬ್ಬರಿಂದ ಬೇಗ ಮುಗಿಯುವ ಕೆಲಸವಲ್ಲ. ಆದ್ದರಿಂದ ಹಾಡುಗಾರ್ತಿಯರು ಮನೆಯ ಸೊಸೆಯರನ್ನು ಹೆಣ್ಣುಮಕ್ಕಳನ್ನು ಹಸಗರದ ಶೇಡಿ ಬರೆಯಲು ಕರೆಯುತ್ತಾರೆ.

ಹಸಗರ ಬರುವಕೆ ಸೊಸೆದೀರ ಬರವೇಳಿ
ಇಸಳುಮೂಗುತಿಯ ಮೊಕದೋರು| ತಾಯವ್ವೆಯಾ
ಸೊಸೆದೀರ ಬೇಗೇ ಬರುವೇಳಿ
ಹಸಗರ ಬರುವಕೆ ಮಗಳದೀರ ಬರುವೇಳಿ
ಒಪ್ಪು ಚಿಂತಕದ ಕೊರಳೋಳು| ತಾಯವ್ವೀಯ
ಮಗಳದೀರಾ ಬೇಗೆ ಬರವೇಳಿ

ಹಸಗರ ಅಲಂಕಾರಕ್ಕೆ ಬೇಕಾಗುವ ಚಿಕ್ಕಪುಟ್ಟ ಕೆಲಸವನ್ನು ಸೊಸೆಯಂದಿರು ಹೆಣ್ಣುಮಕ್ಕಳು, ನೆರೆಹೊರೆಯವರು ಪೂರೈಸುತ್ತಾರೆ.

ಚವಕನ ತುಂಬಿ ಮಲಕೀನಾ ಕೊರಳೋರೆ
ಸೊಲಿಹಲ್ಲು ಸೊಗೊ ನೆರಿಯೋರೆ| ಕಾಜೀನಾ
ಬಳಿಯೋರೆ ತುಂಬಿ ಚವುಕವ
ಮುತ್ತಿನ ಸಗರವ ಕುಶಲದಿ ಬರೆವರೆ
ಸುತ್ತೇ ಸೂಲ್ಯಮ್ಮನಾ ಪವಳೀಯೇ|
ಸುತ್ತೇ ಸೂಲ್ಯಮ್ಮನಾ ಪವಳಿ ಮಂಟಪಸಾಲೆ
ಕುಸಲದ್ಹಸಗರವ ಬರದಾಕಿ

“ರಂಗೋಲಿ”ಯೆಂದು ಕರ್ನಾಟಕದಲ್ಲಿ ಗುರುತಿಸಲ್ಪಡುವ ಜನಪದ ಚಿತ್ರಕಲೆಯನ್ನು ಗಾಮೊಕ್ಕಲ ಮಹಿಳೆಯರು ವ್ಯವಹಾರದಲ್ಲಿ ಶೇಡಿ ಬರೆಯುವುದು ಎಂದು ಹೆಸರಿಸುತ್ತಾರೆಯಾದರೂ ಹಾಡಿನಲ್ಲಿ ಹಸೆ, ಕಾರಣೆ, ಚಿತ್ತರ ಎಂಬ ಶಬ್ದಗಳನ್ನು ಶೇಡಿಗೆ ಪರ್ಯಾಯವಾಗಿ ಬಳಸುವುದೂ ಕಂಡುಬರುತ್ತದೆ.

ಮದುವೆ ಮನೆಯ ಶೇಡಿಗಳು:

ಗಾಮೊಕ್ಕಲು ಮದುವೆಯ ಮನೆಯಲ್ಲಿ ಚಿತ್ರಿಸುವ ಹದಿನಾಲ್ಕು ಬಗೆಯ ಚಿತ್ರಗಳನ್ನು ಇದುವರೆಗೆ ಒಬ್ಬಳೇ ಮಹಿಳೆ ಹನಮಿ ಕ್ಷೇತ್ರ ಗೌಡ ಇವಳಿಂದ ದಾಖಲಿಸಿಕೊಳ್ಳಲಾಗಿದೆ.

ಈ ಪ್ರತಿಯೊಂದು ಶೇಡಿಗಳಲ್ಲಿಯ ಅಲಂಕಾರಗಳು ತಮಗಿಷ್ಟವಾದ ರೀತಿಯಲ್ಲಿ ಬದಲಾಗಬಹುದು. ಹಾಗೂ ಈ ಶೇಡಿಗಳ ವಿಸ್ತಾರವನ್ನು ಚಿಕ್ಕದು, ದೊಡ್ಡದು ಮಾಡಲು ಇವರು ಸ್ವತಂತ್ರರು. ಆದರೆ ಪ್ರತಿಯೊಂದು ಶೇಡಿಯು ತನ್ನದೇ ಆದ ವಿಶಿಷ್ಟ ಲಕ್ಷಣಗಳಿಂದ ಅನನ್ಯತೆಯನ್ನು ಹೊಂದಿರುತ್ತದೆ. ಒಂದು ಹೆಸರಿನ ಶೇಡಿಯನ್ನು ನಾಲ್ಕು ಜನ ಬರೆದರೂ ಅದರ ಅಲಂಕಾರದಲ್ಲಿ ವೈವಿಧ್ಯ ಕಂಡುಬರಬಹುದು. ಆದರೆ ಆ ಹೆಸರಿನ ಆ ಶೇಡಿಯು ತನ್ನ ಕೆಲವು ವಿಶಿಷ್ಟ ಲಕ್ಷಣಗಳಿಂದ ಅದು ಆಯಾ ಹೆಸರಿನ ಶೇಡಿಯೆಂದು ತನ್ನ ಕೆಲವು ವಿಶಿಷ್ಟ ಲಕ್ಷಣಗಳಿಂದ ಅದು ಆಯಾ ಹೆಸರಿನ ಶೇಡಿಯೆಂದು ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ. ಈ ಅಂಶವನ್ನು ಈ ಕೆಳಗೆ ಸ್ಪಷ್ಟಪಡಿಸಲಾಗಿದೆ.

ಪೆಟಗಿ ಶೇಡಿ: ಇದನ್ನು ಹೆಣ್ಣಿನ ಮನೆಯಲ್ಲಿ ಗಂಡಿನ ಮನೆಯವರು ತರುವ ಪೆಟ್ಟಿಗೆಯನ್ನಿರಿಸುವ ಸ್ಥಳದಲ್ಲಿ ಬರೆಯಲಾಗುತ್ತದೆ.

ಈ ಶೇಡಿಯನ್ನು ಬೆರಳಿನಿಂದ ಸುತ್ತ ಬೊಟ್ಟುಗಳನ್ನಿಟ್ಟು ಅಲಂಕರಿಸಲಾಗಿದೆ. ಬೊಟ್ಟುಗಳಿಂದ ಅಲಂಕೃತವಾದ ಈ ಶೇಡಿಯ ನಕ್ಷೆಯನ್ನು ಮಲ್ಲಿಗೆ ದಂಡೆಯೆಂದು ಕರೆಯಲಾಗುತ್ತದೆ. ಮಲ್ಲಿಗೆ ದಂಡೆಯ ಸ್ಥಳದಲ್ಲಿ ಜಾಜಿ ಮೊಗ್ಗೆಯನ್ನೋ ರಚಿಸಬಹುದಾಗಿದೆ. ಗೊಂಬೆ ಚಿತ್ರವನ್ನೂ ರಚಿಸಬಹುದಾಗಿದೆ.

ತಳಕಿನ ಶೇಡಿ: ಇದು ಐದಾರಡಿ ಉದ್ದಗಲವಿರುತ್ತದೆ. ಮದುವೆಯ ಮನೆಯ ಗೋಡಯ ಮೇಲೆ ಎಲ್ಲೆಂದರಲ್ಲಿ ಎದ್ದು ಕಾಣುವ ಬಹು ದೊಡ್ಡ ಶೇಡಿಯಿದು. ಇದು ಗೋಡೆಯ ಅಲಂಕಾರವನ್ನು ಹೆಚ್ಚಿಸಲು ರಚಿತವಾಗುವ ಶೇಡಿಯಾಗಿದೆ. ಇದರ ನಕ್ಷೆಗಳು ಅಲ್ಲಿಂದಿಲ್ಲಿಗೆ ತುಳುಕಿದಂತೆ ಕಾಣುವುದರಿಂದ ಈ ಹೆಸರಿದೆ, ಈ ಶೇಡಿಯಲ್ಲಲಿ ನಾಲ್ಕು ಮೂಲೆಗಳಿಗೆ ನಾಲ್ಕು ತಿರುಗಣಿ ಶೇಡಿಗಳಿವೆ. ಒಲಗಿನ ಅಂಚು, ಹಸೆಶೇಡಿಯಾಗಿದೆ. ಇದರೊಲಗೆ ಸರಫಲಿಶೇಡಿಯಿದೆ. ರಾಗಿಯ ಮಸಿಯಿಂದ ಮಾಡಿದ ಕಪ್ಪು ಬಣ್ಣದಿಂದ ಇಲ್ಲಿಯ ಚೌಕಗಳನ್ನು ತುಂಬುತ್ತಾರೆ.

ಚಕ್ರಪಡಿಶೇಡಿ: ಮದುವೆ ಮನೆಯ ಹೊರಗೋಡೆಯ ಮೇಲೆ ಎಲ್ಲೆಂದರಲ್ಲಿ ಬರೆಯಬಹುದು.

ಬಿಡಿ ಚಿತ್ರಗಳು: ಇವುಗಳನ್ನು ಅಲಂಕಾರಕ್ಕಾಗಿ ದೊಡ್ಡ ಶೇಡಿಗೆ ಜೋಡಿಸಲಾಗುತ್ತದೆ.

ಹಲಗೆಶೇಡಿ: ಇದನ್ನು ಮದುಮಗನು ಕುಳಿತುಕೊಳ್ಳುವಲ್ಲಿ ಗೋಡೆಯ ಮೇಲೆ, ನೆಲದ ಕೆಳಗೆ ಎರಡೂ ಕಡೆಗೆ ಬರೆಯುತ್ತಾರೆ.

ಎಂಟು ಮೂಲೆ ಶೇಡಿ: ಇದನ್ನು ಮದುಮಕ್ಕಳ ಪನ್ನೆ ಮಾಡಲು ಬರುವ ಕೆಲಶಿಯು ಕುಳಿತುಕೊಳ್ಳುವಲ್ಲಿಯ ಶೇಡಿಯಾಗಿದೆ.

ಕಳಸರಶೇಡಿ: ಹೆಣ್ಣಿನವರು ಹಾಗೂ ಗಂಡಿನವರು ಕಳಸವನ್ನಿಡುವ ಸ್ಥಳದಲ್ಲಿ ಶೇಡಿಯಾಗಿದೆ.

ಗಂಡಿನ ಹಸಗರದ ಶೇಡಿ: ಇದರಲ್ಲಿ ನಡುವೆ ಬಾಸಿಂಗ ತೊಂಡಿಲುಗಳಿರುತ್ತವೆ.

ಹೆಣ್ಣಿನ ಹಸಗರದ ಶೇಡಿ: ಇದರಲ್ಲಿ ಒಯ್ಯಣಿಗೆ(ಚೀರಣಿಗೆ) ಬಾಚಣಿಗೆ ಹಾಗೂ ಪೆಟಗಿ ಶೇಡಿಯನ್ನು ಬರೆಯುತ್ತಾರೆ.

ಕಡಕಶೇಡಿ: ಮನೆಯ ಅಂಗಳದಲ್ಲಿ ಈ ಶೇಡಿ ಇರುತ್ತದೆ. ಇದನ್ನು ಯಾವುದೇ ಶನಿವಾರ ದಿನ ಕೂಡ ಬರೆಯಬಹುದು. ಕೊನೆಯಲ್ಲಿ ದುಂಡುಮಲ್ಲಿಗೆ ದಂಡೆ, ಸೂಜಮಲ್ಲಿಗೆ ದಂಡೆ ಸರಪಳಿಚೌಕುಗಳು ಕಡಕಿಯ ಅಂಚು, ಸಿಂಗಾರ, ಕಳಸ, ತಿಗಣಿಗಳಿಂದ ಸಿಂಗರಿಸಲಾಗುತ್ತದೆ.

ಕೋಡಿಶೇಡಿ: ಇದು ಕೊಡೆಯನ್ನು ಶೇಡಿಯ ಮೂಲಕ ತೋರಿಸುವ ಚಿತ್ರ. ಬಾಗಿಲುತೋರಣ, ಮಲ್ಲಿಗೆ ದಂಡೆ, ಸಿಂಗಾರ, ಮೊಗೆಕಾಯಿಬಾಗ ಹಾಗೂ ರಂಗೋಲಿ ಹೆಸರಿನ ಕೆಲವು ನಕ್ಷೆಗಳನ್ನು ಬಾಗಿಲ ತೋರಣದಲ್ಲಿ ಸೇರಿಸಲಾಗುತ್ತದೆ.

ಮದು ಮಕ್ಕಳ ಸಿಂಗಾರ: ಮದುವೆಯ ದಿನ ಮುಂಜಾನೆಯಿಂದ ಮದುಮಕ್ಕಳ ಸಿಂಗಾರ ಕಾರ್ಯಗಳು ನಡೆಯುತ್ತವೆ. ಕೂದಲು, ಉಗುರುಗಳನ್ನು ಕತ್ತರಿಸುವುದು, ಮಂಗಲದ್ರವ್ಯಗಳಿಂದ ಸ್ನಾನ ಮಾಡಿಸುವುದು, ವಧುವಿಗೆ ತೊಂಡಿಲ ಹಾಗೂವರನಿಗೆ ಬಾಸಿಂಗ ಕಟ್ಟುವುದು ಇತ್ಯಾದಿಗಳು ನಡೆಯುತ್ತವೆ. ಮಹಿಳೆಯರ ಹಾಡುಗಳು ವಾದ್ಯಗಳು ಮೊಳಗುತ್ತವೆ

ಬಿನ್ನಾಣಿ: ಈತ ಮದುಮಕ್ಕಳ ಪನ್ನೆಗೆಯ್ಯಲು ಬರುವ ಕ್ಷೌರಿಕ. ಈತನ ಮದುಮಗಳ ಮನೆಯಲ್ಲಿ ಅವಳ ಸಮೀಪದ ಸಂಬಂಧಿಗಳ ಕೂದಲು ಕತ್ತರಿಸಿ ಓರಣಗೊಳಿಸುವುದು, ಮದುಮಗಳ ಉಗುರು ಕತ್ತರಿಸುವುದು, ಹುಬ್ಬು ತಿದ್ದುವುದು ಮುಂತಾದ ಕೆಲಸಗಳನ್ನು ಮಾಡುತ್ತಾನೆ. ಮದುಮಗನ ಮನೆಯಲ್ಲಿಯ ಬಿನ್ನಾಣಿ ಮದುಮಗನ ಹಾಗು ಅವನ ಸಮೀಪದ ಸಂಬಂಧಿಗಳಕೂದಲು, ಉಗುರು, ಹುಬ್ಬುಗಳ ಸಿಂಗಾರ ಕಾರ್ಯ ನಡೆಸುತ್ತಾನೆ. ಬಿನ್ನಾಣಿಯ ಈ ಕೆಲಸವನ್ನು ಪನ್ನೆ ಮಾಡುವುದು ಎಂದು ಕರೆಯುತ್ತಾರೆ.

ಮೇಲ್ಕಟ್ಟನಡಿಯಲ್ಲಿರುವ ಮಂಟಪದ ಒಂದು ಕಡೆ ನೆಲವನ್ನು ಸಾರಿಸಿ ಕಳಸದ ಐದು ಶೇಡಿಗಳನ್ನು ಬರೆಯಲಾಗುತ್ತದೆ. ಇಲ್ಲಿ ಪನ್ನೆ ಮಾಡಿಕೊಳ್ಳುವ ಮದುಮಕ್ಕಳು ಕುಳಿತಿರುತ್ತಾರೆ. ಇವರ ಬದಿಯಲ್ಲಿ ಬಿನ್ನಾಣಿಯು ಪನ್ನೆ ಕೆಲಸಕ್ಕಾಗಿ ಕುಳಿತುಕೊಳ್ಳುತ್ತಾಣೆ. ಮೊದಲು ಮದುಮಕ್ಕಳ ಪನ್ನೆ ಕೆಲಸ ನಡೆಯುತ್ತದೆ. ಬಳಿಕ ಐದು ಜನ ಗಂಡಸರ ಪನ್ನೆ ನಡೆಯುತ್ತದೆ.

ಚಿಗುರೆಣ್ಣೆ:

ಪನ್ನೆ ಕೆಲಸ ಮುಗಿದ ಬಳಿಕ ಮದುಮಕ್ಕಳಿಗೆ ಅವರವರ ತಾಯಿಯು ಅವರವರ ಮನೆಯಲ್ಲಿ ಅಕ್ಷತೆ ಹಚ್ಚುತ್ತಾಳೆ. ಬಳಿಕ ನೆರೆದ ಮಹಿಳೆಯರಲ್ಲಿ ಸಮೀಪದ ಸಂಬಂಧಿಕರಾದ ಐದು ಜನರು ಅಕ್ಷತೆ ಹಚ್ಚಿ ಚಿಗುರೆಣ್ಣೆ ಉದ್ದುತ್ತಾರೆ.

ಚಿಗುರೆಣ್ಣೆಯು ಸ್ನಾನಪೂರ್ವದಲ್ಲಿ ಬಳಸುವ ಒಂದು ಪ್ರಸಾಧನ ಸಾಮಗ್ರಿ ಮಲ್ಲಿಗೆ ಬಳ್ಳಿಯ ಎಳೆಯ ಎಲೆಗಳನ್ನು ಅರಿಶಿನದ ಜೊತೆ ಕಲ್ಲಿನಲ್ಲಿ ಅರೆದು ಅಕದ್ಕೆ ಕೊಬ್ಬರಿ ಎಣ್ಣೆ ಕೂಡಿಸಿದರೆ ಚಿಗುರೆಣ್ಣೆಯು ಸಿದ್ಧವಾಗುತ್ತದೆ. ಚಿಗುರೆಣ್ಣೆಯನ್ನು ಉದ್ದಿದ ಬಳಿಕ ಸ್ನಾನಕ್ಕೆ ಸಿದ್ಧತೆ ನಡೆಯುತ್ತದೆ. ಈ ಚಡಂಗಡವನ್ನು ಕಳಸನೀರು ಮೀಯುವುದು ಎನ್ನುತ್ತಾರೆ.

ಹಾಲಿಸೆಸಿ ನೆಡುವುದು: ಮುಂಚಿನ ದಿನವೇ ದೂರದಿಂದ ತಂದಿರುವ ಹಾಲಿಮರದ ಸಣ್ಣಗಿಡವನ್ನು ಮನೆಯ ಬಳಿಯ ಚಿಕ್ಕ ಕೆರೆನೀರಿನಲ್ಲಿಟ್ಟಿರುತ್ತಾರೆ. ಇದನ್ನು ಕಳಸನೀರು ಮೀಯುವ ಸ್ಥಳದಲ್ಲಿ ನೆಡಲಾಗುತ್ತದೆ. ಅದರ ಬಳಿ ಕೂಡುಬಳಿ, ನೆಂಟ, ಭಾವ ಹಾಗೂ ಸಮೀಪದ ಸಂಬಂಧಿಕರಾದ ಇಬ್ಬರು ಗಂಡಸರು ಕೂಡಿ ಕುಂಬಾರನು ತಂದಿಟ್ಟಿರುವ ಎರಡು ಕಂಭಗಳನ್ನು ವಾದ್ಯದೊಂದಿಗೆ ತಂದಿಡುತ್ತಾರೆ. ಇದರಲ್ಲಿ ಮದುಮಕ್ಕಳ ತಾಯಿ ಒಂದೊಂದು ಬೊಗಸೆ ಅಕ್ಕಿಯನ್ನು ಹಾಕುತ್ತಾಳೆ

ಕಳಸನೀರು ತರುವುದು: ಮದುವೆಯ ಕಾರ್ಯದಲ್ಲಿ ಹೆಂಗಸರು ಎಲ್ಲ ಚಡಂಗಗಳಲ್ಲಿಯೂ ಪ್ರಧಾನ ಪಾತ್ರವಹಿಸುತ್ತಾರೆ. ತಾಯಿಯೇ ಪ್ರತಿಚಡಂಗದ ಸೂತ್ರಧಾರಳು. ಕಳಸನೀರು ತರುವಾಗ ಕೂಡ ತಾಯಿ ಕುಂಭಗಳಿಗೆ ಅಕ್ಕಿಯನ್ನು ಹಾಕಿದ ಬಳಿಕ ಐವರು ಗಂಡಸರು ಕೊಡ ಹಿಡಿದು ಕಳಸ ನೀರನ್ನು ತರಲು ಕೆರೆಗೆ ಹೋಗುತ್ತಾರೆ. ಹಾಡುಗಾರ್ತಿಯರು ಆಯಾ ಕಾರ್ಯವನ್ನು ವರ್ಣಿಸಿ ಹಾಡುವುದರಲ್ಲಿ ತಲ್ಲೀನರಾಗಿರುತ್ತಾರೆ.

ಆಯ್ವರು ಬಾವಾದೀರು ತಾಳಿಬಂದಿಯನಿಟ್ಟ
ಜೋಡಿಲಿ ಕೊಡಪನನ ತಡದಾರೆ| ಬಾವಾದಿರು
ಮೂಡಣ್ಹೆಗಗೆರೆಗೆ ನಡದಾರೆ| ಬಾವಾದೀರು
ಹೆಗ್ಗೆರೆ ತಡಿಯಲ್ಲೆ ನಿಲೂವಾಕಿ

ಈ ಗಂಸರು ಇಲ್ಲಿ ಕೆರೆಯ ಪೂಜೆ ಮಾಡುತ್ತಾರೆ. ಸಿಂಗಾರ ಹೂವಿನ ಹುಸಿ(ತುಂಡು) ವೀಳ್ಯದ ಪಟ್ಟಿಯನ್ನು ಗಂಗೆಗೆ ಅರ್ಪಿಸಿ ಹಾಸಿಸಸಿಗಾಗಿನೀರನ್ನು ಕೊಡು ಎಂದು ಕೇಳಿಕೊಳ್ಳುತ್ತಾರೆ.

ಹಳ್ಳದ ತಡಿಯಲ್ಲಿ ಮೂಡಿರುವಾ ಗಂಗೆ
ವಾಲೀಯ ಕೆಮಿಯಾ ಸಿವಗಂಗೆ| ನೀಕೇಳೇ
ತುಂಬಿ ಕೊಡೇ ಚಂಬೂ ಕೊಡಪಾನಾ| ತುಂಬೂವೋ
ನಾವ್ ನಮ್ಮಾ ಕೇಲೂ ಕಳಸಾಕೆ| ಮಿಕ್ಕಿದ ನೀರಾ
ಹಾಲೀಸಸಿಗೊಯ್ದು ಸಲಗೂವೋ

ಮದುವೆಯ ಸಂದರ್ಭದಲ್ಲಿ ಹಾಲಿಸಸಿಯನ್ನು ನೆಟ್ಟು ಅದಕ್ಕೆ ನೀರೆರೆಯುವ ಚಡಂಗ ಕವಿಪದ ಸ್ನೇಹಿಯಾದದ್ದು. ಗಂಡಸರು ಕೆರೆಯಿಂದ ತಂದ ನೀರನ್ನು ಹೆಂಗಸರು ಕಳಸಕ್ಕೆ ತುಂಬಿ ಹಾಲಿಸಸಿಗೆ ಹೊಯ್ಯುತ್ತಾರೆ. ಹಾಲಿಸಸಿಗೆ ನೂಲನ್ನು ಸುತ್ತುತ್ತಾರೆ.

ಬಳದುನೀರು ಮೀಯುವುದು: ಈ ಆಚರಣೆಯಲ್ಲಿ ಹೆಣ್ಣಿನ ಐದು ತಲೆಮಾರಿಗೆ ಮಹಿಳೆಯರಿಗೆ ಗೌರವ ಸ್ಥಾನ ನೀಡಲಾಗಿದೆ. ಬಳದು ಅಂದರೆ ಹಾದು ಎಂದರ್ಥ. ತಾಯಿ, ಅಜ್ಜಿ, ಅಜ್ಜಿಯ ತಾಯಿ ಹಾಗೂ ಅಜ್ಜಿಯ ಅಜ್ಜಿ ಹೀಗೆ ಐದು ಜನ ಒಬ್ಬ ಹಿಂದೊಬ್ಬರು ಬಗ್ಗಿ ನಿಂತು ಕೊನೆಯವಳ ಮೈಮೇಲೆ ಹೊಯ್ದು ನೀರು ಉಳಿದವರ ಮೈಮೇಲಿನಿಂದ ಕೊನೆಯಲ್ಲಿರುವ ಮದುಮಗಳು ಅಥವಾ ಮದುಮಗನ ಮೈಮೇಲೆ ಬಳಿದು ಬಂದು ಬೀಳುವಂತೆ ಇಳಿಜಾರು ಭಂಗಿಯಲ್ಲಿ ನಿಲ್ಲುತ್ತಾರೆ. ಐದನೆಯವರು ಬದುಕಿಲ್ಲದಿದ್ದರೆ ಹಿರಯರೊಬ್ಬರನ್ನು ಅವಳ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಇವರ ಮೈಮೇಲೆ ಐದು ಜನ ಮುತ್ತೈದೆಯರು ಬಾವಿಯಿಂದ ಹೊಸನೀರನ್ನು ತಂದು ಹೊಯ್ಯುತ್ತಾರೆ. ಈ ಆಚರಣೆಯು ಈಗ ವಿರಳವಾಗಿದೆ. ಇದಾದ ಬಳಿಕ ಬೀಜ ಹಾಗೂ ಹಿಟ್ಟು ಕೂಡಿಸಿದ ಹಿಟ್ಟಿನ ಮುದ್ದೆಯುಳ್ಳ ಆರತಿ ಮಾಡುತ್ತಾರೆ.

ವಿಧವೆಯರ ಸ್ಥಾನ:

ಮದುವೆಯ ಚಡಂಗಗಳಲ್ಲಿ ಮುತ್ತೈದೆಯರು ಹಚ್ಚಿಗೆ ಭಾಗವಹಿಸುತ್ತಾರೆ. ಯಾದರೂ ಇಲ್ಲಿ ವಿಧವೆಯರ ಬಗ್ಗೆ ತೀರ ನಿರ್ಲಕ್ಷ್ಯವೇನಿಲ್ಲ. ಹಿರಿಯ ಮಹಿಳೆ ವಿಧವೆಯಾಗಿದ್ದರೂ ಅವಳ ಹಿರಿತನಕ್ಕೆ ಇಲ್ಲಿ ಸ್ಥಾನವಿದೆ. ಬಳದುಮೀಯುವ ಆಚರಣೆಯಲ್ಲಿ ಭಾಗವಹಿಸುವ ಎಲ್ಲರೂ ಮುತ್ತಯದೆಯರಾಗಿರುವುದಿಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು. ಉಡುಗೊರೆ ನೀಡುವಾಗ ತಾಯಿಯ ಪಾತ್ರವನ್ನು ವಹಿಸಿಕೊಳ್ಳುವಾಗ ವಿಧವೆಯೆಂಬ ಕಾರಣಕ್ಕೆ ಅವಳನ್ನು ದೂರವಿಡುವುದಿಲ್ಲ. ಆದರೆ ಬ್ರಾಹ್ಮಣ ಸಮಾಜ ಪದ್ಧತಿಗಳು ಇವರನ್ನು ವಿಧವೆಯರನ್ನು ದೂರವಿಡುವಂತೆ ಪ್ರೇರಿಸುತ್ತಿವೆ.