೧೫)      ಮುತ್ತನ ಬಟ್ಟಿಟ್ಟಿ ಸತ್ಯುಳ್ಳರ ನೆನವಾನೇ
ಮುತ್ತನ ಗೋಪುರದ ಒಡೆಯರ| ಮಂಜುನಾಥೊಡೀನಾ
ಮುತ್ತ ಬಟ್ಟಿಟ್ಟಿ ನೆನನಾವೇನೇ

೧೬)      ಅಷ್ಟೂ ದೇವರಾ ಒಟ್ಟಾಗಿ ನೆನೆವಾನೆ
ಕತ್ತಿಸಾಗರದ ಒಡೆಯರಾ ಹನ್ಮಂತ್ ದೇವ್ರಾ
ಬಿಲ್ಲೂಬಾನಗಳ ನೆನವಾನೆ

೧೭)      ಎಲ್ಲಾ ದೇವರಾ ಸೊಲ್ಲಿನಲ್ಲಿ ನೆನೆವಾನೆ
ಕೋವಿ ಸಾಗರದ ಒಡೆಯನಾ| ಹನ್ಮಂತ ದೇವ್ರಾ
ಕೋವಿ ಬನಗಳ ನೆನೆವನೇ

೧೮)      ಬಂದ್ಹೆಗಲ ಹಣ್ಣಾದೊ, ಒಂದ್ಹೆಗಲು ಕಾಯಾಗಿ
ಒಂದ್ಹೆಗಲ ನಂದನದ ಬನವಾಗಿ| ಗೋವಿಂದ್ರಾಯ್ಗೆ
ವಾಲಗ ಮಂಟಪಕೆ ನೆಳಲಾಗಿ

೧೯)      ಒಂದ್ಹೆಗಲ ಹಣ್ಣಾಗಿ ಒಂದ್ಹೆಗಲ ಕಾಯಾಗಿ
ಒಂದ್ಹೆಗಲು ನಂದನ ಬನವಾಗಿ| ಮಂಜುನಾಥೊಡೀನೆ
ವಾಲದ ಮಂಟಪಗೆ ನೆಳಲಾಗಿ

೨೦)      ನಾರೇ ಲಕುಮಮ್ಮ ವರಿರಳೆ ಗದ್ದುಗಿಯಾ
ಹೊಂಗಿನ ಮುಡಿಗೆ ಬಿಸಲಂದಿ, ಹರಿಗೋಳು
ಮಾಯನ ತರಳ್ನಲ್ಲಿ ಮನಿಮಾಡಿ| ಮಂಟಪಹೂಡಿ
ನಿಡಗೇ ತಿದ್ದರಿಯೇ ಕಳಸನ

೨೧)      ನಾರೇ ಲಕುವಮ್ಮ ಹತ್ತಿದಳೇ ಗದ್ದುಗಿಯಾ
ಮುತ್ತಿನ ಮುಡಿಗೇ ಬಸಲಂದಿ| ಹರಿಗೋಳು
ಸಿಂಗಾರೂಂಗ್ನಲ್ಲಿ ಮನಮಾಡಿ|ಡ್ ಮಂಟಪೂಡಿ
ನಿಡಗೆ ತಿದ್ದಾರಿಯೇ ಕಳಿಸಾವಾ

೨೨)      ನಾರೇ ಲಕುಮಮ್ಮ ಸಿಂಗಾರೂಂಗನೆ ಮುಡ್ಡಿ|
ತುಂಬದ ಕನ್ನುಡಿಯಾ ನೆಳಲ್ನೋಡಿ
ನೆಳಲಾ ನೋಡೇಳದ್ರೊ ಸಿಂಗಾರದ ಬಾಳು ತನಗಂದಿ

೨೩)       ನಾರೇ ಲಕುಮಮ್ಮ ದಾಸಾಳೂಂಗನೆ ಮುಡ್ಡಿ
ಲೇಸದ ಕನ್ನುಡಿಯಾ ನೆಳಲ್ ನೋಡಿ ನೆಳಲಾ ನೋಡ್ಹೇಳದ್ರೇ
ದಾಸಾಳದ ಬಾಳು ತನಗಂದ

೨೪)      ಹಾದಿಲ್ ಲಕುಮಮ್ಮ ಬೀದಿರಿ ಲಕುಮಮ್ಮ
ದಾರೆ ಹೊನ್ನೋಲೆ ಕೆಮಿಯೋಳು| ಲಕುಮಮ್ಮ
ಹಿಟ್ಟಾ ಕುಟ್ಟಿದಳೇ ಅರಿಶೀಣ| ತನ್ನಲ್ಲನಾ
ಕಣಜಕೆ ಹೊನ್ನು ನೆರಿಲಂದೇ

೨೫)      ನಾರೇ ಲಕುಮಮ್ಮ ತೊಕಾದೊಲಿಯನ್ನಿಟ್ಟಿ
ಯಾಕಂತಾಡಿರಳೇ ಒಳಗಿದ್ದೀ| ನಲ್ಲನ ಕೈಲಿ
ದೀಪಮಲ್ಲಿಯರ ಕೊಂಬೇ ತರಣಿಲ್ಲ

೨೬)      ನಾರೇ ಲಕುಮಮ್ಮನ ಸೆಣ್‌ಸೆಣ್ಣ್ ಪಾರಾಕೇ
ಬಣ್ಣವಾ ಕಯ್ಯಾ ಮುಗದಾಕೀ

೨೭)      ನಾರೇ ಲಕುಮಮ್ಮನ ಪುಟ್ ಪುಟ್ ಪರಾಕೇ
ಪಟ್ಟೀಯ ಉಡುವಾ ನೆಡುವೀಗೆ ಹರಿಗೋಳು
ಕಾಯಾಡದೇ ಕಯ್ಯಾ ಮುಗದಾಕೀ

೨೮)      ಬಾಗ್ಯೋಳ್ಳರ ಮನೆಲಿ ಮೂಕಿಯಾದಾವೇ ದಾಸಾನ(ಳ)
ಬಾಗ್ಯಾ ಉಳ್ಳವಳೇ ಲಕುಮಮ್ಮ| ನ ಮುಡಿಮೆನೆ
ಬಗತಾಲಿ ತನಕೂ ಸಿವದಂಡೆ
ಬಗತಾಲಿ ತನಕೂ ಸಿವದಂಡಿ ಮುಡಕಂಡಿ
ಬಾಗ್ಯಾ ನೀಡಿದಳೆ ಜನರಿಗೆ

೨೯)       ಬಗತೀ ಉಳ್ಳದ ಮಲ್ಲಿ ಮೊರೆಯಾದಾವೇ ದಾಸಾನಾ
ಬಗತೀ ಉಳ್ಳವಳೇ ಲಕುಮಮ್ಮ|ನ ಮುಡಿಮೆನೆ
ಬಗತಾಲಿ ತನಕ್‌ಊ ಸಿವದಂಡೆ|ಡಿ|ಮುಡಕಂಡಿ
ಬಗತೀ ನೀಡಿದಳೆ ಜನರೀಗೆ

೩೦)      ಸಾಯತ್ರಟಗಿ ಗಿಡವ ಕಿತ್ತಿ ತೊರಣ್ಹೂಡಿ
ಸತ್ಯುಳ್‌ ಗೋವಿಂದ್ರಾಯ್ನ ಮನಿಮುಂದೆ
ನೆನಿಯನಗೇ ತನಗೊಳ್ಳಾ ಬಗತ್ಯಾ ಮಾಡ್ವೆರ ಕರೆ ಅನಗೇ

೩೧)      ಏಳು ಏಳು ಹರಿಯೇ ಏಳು ಚಿನ್ನದ ಗಿರಿಯೇ
ತೋಳು ಚಪ್ಪರದ ಚೊಳಚೀಯೇ|ಯಾ| ಬುಡದಲ್ಲಿ
ಏಳಯ್ಯ ಹರಿಯೇ ಬೆಳಗಾಯ್ತು
ಹಕ್ಕಿ ಅನ್ನಾ ತಿಂದಿ ಪಕ್ಷಿ ಬೀಜವನುಗುಳಿ
ಬೀಜಾಬಿದ್ದಲ್ಲೇ ಸಸಿಹುಟ್ಟಿ| ಹರಿಗೋಳು
ಗಂದಾತೇವಲ್ಲಿ ನೆರಳಾಗಿ
ಅಲ್ಲಿದ್ ಬಂದಾರೇ ಬಲ್ಲಂತಾ ಹರಿಗೋಳು
ನೆಲ್ಲಕ್ಕಿಯಂತಾ ಸೊಲಿಯೋರು| ಹರಿಗೋಳು
ಅಲ್ಲಿದ್  ಪುರವಾ ಇಳವ್ ಬಂದಿ
ಈ ಮನಿಯಾ ಗಂದಾಮಂಗಲಕೆ ಹದನಾಗಿ

೩೨)       ಪದ್ಯ ಮೇಲಿನಂತೆ ಆದರೆ ಗಂದಾಯಂಗಲಕೆ ಇದ್ದಲ್ಲಿ ಸೆಸೆಮಂಗಲಕೆ
ಎಂದು ಸೇರಿಸಬೇಕು.

೩೩)       ಆರತಿ: ಇಂದೇ ಈ ಮಲ್ಲಿಸಾರಸ?
ಮಾಲಕ್ಷ್ಮಿ ಮನೆಯ ಗರತೀರೊಬ್ಬರ‍್ಪಾ ಸೇಡಿ
ಗೋಯ್ಟ್ರಾಯ್ ಮನಸೋಲೆ ಕುಳತಾನ
ಅಂಗಯಾರತಿ ಬಂದೋ ಮುಂಗಯ್ ದೀರಗೆ ಬಂದೊ
ರಂಗಯ್ಯ ಕರವಾ ತೆಗೆಬೆಗೆ| ಈ ಮನಿಯಾ
ಹರಗೋಲಾರತಿಯಾ ತರತಾರೆ

೩೪)      ಹರವಾಣದಲ್ಲಿಂ ಹವಳಾದಾರತೀ ಮಾಡಿ
ಸಾವಿರ ನಾಮಾನ ಒಡಯಗೆ ಗೋಯ್ದರಾಯ್ಗೆ
ನೂತನಾದಾರತಿಯಾ ಬೆಳಗೀರೆ ಚಿನ್ನದಾರತೀ ಮಾಡಿ

೩೫)      ಚಿನ್ನಾರಕ್ಷಿಸೀದಾ ಬಡಯಗೆ| ತಿಮ್ಮಪ್ಪದೇವ್ಗೆವರ‍್ಗೆ
ಚಿನ್ನಾದಾರತೀಯ ಬೆಳಗೀರೆ

೩೬)      ಹರವಣದಲ್ಲಿ ಮುತ್ತಿಟ್ಟ ಗುಂಡಿಟ್ಟಿ
ಗಟ್ಟಿಮುಲ್ಲುಗೀಯಾ ನೆಣೆಮಾಡೆ
ನೆಣಮಾಡ ಗೇಯ್ದರಾಯ್ಗೆ
ಮುತ್ತೀನಾರತಿಯ ಬೆಳಗಾಕಿ

೩೭)       ಹರವಣದಲ್ಲಿ ಹೂಂಗಿಟ್ಟಿ
ಜಾಜಮಲ್ಲುಗಿಯಾ ಮಂಜುನಾಥೊಡಿಗೆ
ಚಿನ್ನದಾರತಿಯಾ ಬೆಳಿಗಾರೆ

೩೮)      ಆರತಿ ಎತ್ತಿರರೆ ಆರಾಮಚಂದ್ರಗೆ
ಭೂಮಿಭಾರತದ ಒಡೆಯಗೆ
ಒಡೆಯ ತಿಮ್ಮಪ್ಪರಾಯ್ಗೆ ಭೂವೇಕದಾರತಿಯಾ ಬೆಳಗೀರೆ

೩೯)       ಆರತಿ ಎತ್ತಿರೆ
ಭೂಮಿ ಒಡೆಯಾ ಮಂಜುನಾಥೊಡಿಗೆಡ

೪೦)      ಎತ್ತಿರಾರತಿ ಮತ್ತೂ ಗಿರಯಪ್ಪಗೆ
ಮತ್ತು ಭೂಲೋಕದಾ ಒಡೆಯಗೆ|ಗಾಗಲುರೀ
ಎತ್ತಿರಾರತಿಯಾ ಬೆಳುಗಾರೆ

೪೧)      ಎತ್ತಿದರಾರತಿಯಾ ಬೆಳುಗಾರ

೪೨)      ಮುತ್ತಿನಾರತಿ ಮುಂದೆ ಮುತ್ತೀನ ಮಾರುತ ಮುಂದೆ
ಮುತ್ತಯ್ದೆಯರು ಮುಂದೆ ಒಲುಮಿಗೆ ಗೊಯ್ದರಾಯಗೆ
ಮುತ್ತೀನಾರತೀಯ ಬೆಳಕಾಗಾರೆ

೪೩)      ಚಿನ್ನದಾರತಿ ಮುಂದೆ ಚಿನ್ನದ ನೆಣಮುಂದೆ
ಕನ್ನೆಯರು ಮುಂದೆ ಒಲುವಿಗೆ| ಮಂಜುನಾಥೊಡೀಗೆ
ಚಿನ್ನದಾರತಿಯಾ ಬೆಳಗಾರೆ

೪೪)     ಆರತಿಗಕ್ಷತಿ ಈಳ್ಯಕೆ ಪನ್ನೀರು
ಆರತಿ ಎತ್ತು ಕೈಗೆ ಹರಳ ಮುತ್ತುತ್ತಿಟ್ಟ ಕಂಡಿ
ಎತ್ತಿದ್‌ಆರತೀಯಾ ಬೆಳುಗಾರೆ

೪೫)     ಎತ್ತಿದಾರತಿಯ ಮತ್ತೆಲ್ಲಿ ಮಡಗಾದೆ
ದೆವದೊಲಗರ ಚೊಳಚೀಯೊ(ಯ) ಪೌಳಿಮೆನೆ
ಎತ್ತಿದರಾತೀಯ ಮಡಗಾರೆ

೪೬)      ಗೋವಿಂದನನ್ನಿ ಗೋವಯರಾಯಗೆ
ತೋಳು ಚಪ್ಪರದ ಒಡೀಯಗೆ| ಗಿರಿಯಪ್ಪಗೆ
ಗೋವಿಂದನನ್ನಿ ಜನರೆಲ್ಲ

೪೭)      ಗೋಯ್ದ್ರಾಯನ ಬಂಗಾರದ ಕಳಸಕೆ| ಗೋವಿಂದೋ|
ಗೋವಿಂದೋ ಎಲ್ಲರೂ
ಗೋಯ್ದ್ರಾ ಯನ ಒಡ್ಡೋಲಗಕೆ ರಾಮರಾಯಗೋವಿಂದೋ|
ಗೋವಿಂದ ಗೋಯ್ದ್ರಾಯನ ಬಂಗಾರದ ಗಿರಿಗೇ
ರಾಮರಾಯಗೋವಿಂದೊ| ಎಲ್ಲರೂ
ನಾ ಗೋವಿಂದೋ ಅನ್ನುತ್ತಾರೆ.
ಗೋಯ್ದ್ರಾಯನ ಬಂಗಾರದ ಕಣಜಕೆ ಗೋವಿಂದೋ|
ಎಲ್ಲರೂ ಗೋವಿಂದೋ
ಗೋಯ್ದ್ರಾಯನ ಪಾದಕೆ ಗೋವಿಂದೋ| ಎಲ್ಲರೂ ಗೋವಿಂದೋ
ಒಟ್ಟು ಐದು ಆರತಿ ಆಗುವಾಗ ಗೋವಿಂದೋ ಅನ್ನುತ್ತಾರೆ.
ಮಂಜುನಾಥನಿಗೆ ಆರತಿ ಮಾಡುವಾಗ ಗೋವಿಂದೋ ಎನ್ನುವುದಿಲ್ಲ.

೪೮)      ಅರಿಯಾದಿದ್ದೋರು ಅರಗಾರೆ ನಿನ್ ಪಾದರೆ
ಸರ್ವಾಂಗದಲ್ಲೆ ಸಲಗ್‌ಬೇಕು| ಅಲದೇಳಿ
ಬಾಲರು ಬೇಡಿದರೆ ಸೆರಗೊಡ್ಡಿ

೪೯)      ನೆಡವಲ್ ನೆಡತಪ್ಪು ನುಡುವಲ್ಲಿ ನುಡತಪ್ಪು
ತಪ್ಪು ಕಾಣೊಡಿಯೂ ಸರುತಪ್ಪ| ನಿನ ಪಾದಕೆ
ತಪ್ಪೆಂದೇ ಕಾಯಾ ಒಡೆದಾರೆ

೫೦)      ನೆಡವಲ್ ನೆಡತಪ್ಪು ನುಸವಲ್ಲಿ ನುಡಿತಪ್ಪು
ತಪ್ಪು ಕಾಗೆ
ತಪ್ಪಂದೇ ಕೈಯಾ ಮುಗದಿವೆ

೫೧)      ಊಟವಾದ ಮೇಲೆ ಹೆಂಗಸರಿಗೆ ಎಣ್ಣೆ ಹಾಕಿ ತಲೆ ಬಾಚಿ, ಕುಂಕುಮ,
ಹೂ ಮುಡಿಸಿ ಗಂಡಸರು ಮಿಂದು ಎಲ್ಲರೂ ಹೊಸ ವೇಷ ತೊಡುತ್ತಾರೆ.

ಬಿಳಿವಸ್ತ್ರದಲ್ಲಿ ಬಿಲ್ಲಿ. ಕಾಯಿ, ಅಕ್ಕಿ ಕಟ್ಟಿ ದೇವರ ಬಳಿ ಇಡುತ್ತಾರೆ.ಹೋಗುವವರೆಲ್ಲ ಒಳಗೆ ಹೋಗಿ ಬರುತ್ತಾರೆ. ಹೊರಗೆ ಬಂದು ಕುತ್ತಿಗೆಗೆ ತುಳಸಿ ಕಡ್ಡಿ ಕಟ್ಟುತ್ತಾರೆ. ಹಸೆಮಾಲೆ ಕೊಳ್ಳುತ್ತಾರೆ. ಮುಂದೆ ಒಳಗೆ ಹೋಗಿಬಂದು ಹಣ ಕೊಡುತ್ತಾರೆ. ಆ ದಿನದಿಂದ ದೇವರ ಪೂಜೆಗೆ ಒಬ್ಬ ಕನ್ನೆ ಹುಡುಗಿಯ ನೇಮಕವಾಗುತ್ತಾ ಹುಡುಗ ಪೂಜೆ ಮಾಡುತ್ತಾನೆ. ಪ್ರತಿದಿನ ಹೋದವರ ಹೆಸರಿನಲ್ಲಿ ಹೂ ಹಾಕುತ್ತಾರೆ. ಹೂ ಬಾಡುತ್ತದೆ. ಅವರು ಮುಟ್ಟಹೋದ ಹೂ ಬಾಡುತ್ತದೆ.(ಹಿಂದೆ ಫೋನ್ ಇರಲಿಲ್ಲ)

ತಿರುಪತಿಗೆ ಹೋಗುವಾಗ ಹೇಳುವ ಹಾಡು

೧)        ಆಚೆ ಗೋವಿಂದ್ರಾಯಾ ಈಚೆ ದಂಡೀನೊಡಿಯಾ
ಮಾತನಾಡಲಿಕೆ ಕುಳತಾರೆ| ತಿರುಪತಿಯಾ
ಯಾತ್ರೀಗೋಗ್ವದಕೆ ಪಲನಾರೆ

೨)         ಆಚೆ ಗೋವಿಂದ್ರಾಯಾ ಈಚೆ ದಂಡೀನೊಡಿಯಾ
ಸಿಡಗೇ ದಂಡಿನೊಡಿನಾ ಕಿರಜಡೆ| ಬಿನ್ನಾರಕೆ
ಒಡದೀ ಮೂಡದಿಯೋ ಒಸುವಯ್ಯ

೩)         ಬಸುವಯ್ಯ ಹುಟ್ಟಲಿ ಹೊಸಪೇಟಿ ಕಟ್ಟಲಿ
ರಸದಾಳಿ ಕಬ್ಬು ಬೆಳಿಯಲಿ| ಮೇಲಗಿರಿಯ
ಒಡೆರಿಗಿಂತ ಮೂರ‍್ವಿನಕೆ ಹೆರಿಯಯ್ಯ

೪)        ಅಪ್ಪಾ ಕಟ್ಟಾನೆ ಇಪ್ಪತ್ತರ ಗೆಂಟು
ಬರಲಾರೆ ಬಡಿಯಾ ಗಿರಿದೊರೇ| ನಿನ್ನಾಲಮುಡುಪ
ಬಡುವರ ಕೂಡೆ ಕೊಟ್ಟಿ ಕಳಗೂವೆ
ಕೊಟ್ಟೀ ಕಳಗ್ವಕ್ಕೆ ನಿಮ್ಮಪ್ಪನಪ್ಪಣೆಯಲ್ಲ
ನಿನ್ನ ಕೂಡ ಗೆಂಟಾ ತರಸೂವೆ| ಬಾಲರಿಯೇ
ಹೊಯ್ದೋ ಚಿನ್ನದ ಕಣಜಕೆ

೫)        ಅಜ್ಜಾ ಕಟ್ಟಾನೆ ನಲವತ್ತೊರಸ ಗಂಟು….
ಬಡುವರ ಕೂಡೆ ಕೊಟ್ಟಿ ಕಳಗೂವೆ
ಕೊಟ್ಟೀ ಕಳಗ್ವಕ್ಕೆ ನಿಮ್ಮಪ್ಪನಪ್ಪಣೆಯಲ್ಲ
ನಿನ್ನ ಕೂಡ ಗೆಂಟಾ ತರಸೂವೆ| ಬಾಲರಿಯೇ
ಹೊಯ್ದೋ ಚಿನ್ನದ ಕಣಜಕೆ

೬)        ಕಟ್ಟಾರ ಮನೆಯು ಬಿಟ್ಟ ನೆಟ್ಟ ಹಿತ್ತಲ ಬಿಟ್ಟಿ
ಸಣ್ಣದಲೆ ತಂದಾಮಡದಿಯ|ಮಕ್ಕಳ|ಸೋಮಿ
ಸರಣದಲೆ ಹೊರಟರೆ| ಗಿರಿಯಪ್ಪ ಚಿಕ್ಕಿದ್ದಲೆ
ರಕ್ಷಿಣಿ ಮಾಡುವರ ಕರಕೊಳ್ಳೊ

೭)         ಕಟ್ಟರ ಮನೆಯ ಬಟ್ಟಿ ಹೂಡಿದ ಒಲೆಯಾ ಬಿಟ್ಟಿ
ಚಿಕ್ಕಿದ್ದಲೆ ತಂದಾ ಮಡದೀಯಾ| ಮಕ್ಕಳ ಕೂಡೆ
ಸೋಮಿ ಸರಣರಲೆ ಹೊರಟರೆ| ಗಿರಿಯಪ್ಪ

೮)        ಒಡೆಯಾ ಗಿರಿಯಪ್ಪ ಒಡನೆ ಬರ‍್ತಾನಂದಿ ಒಡಹುಟ್ಟಿದರೆಲ್ಲ ಸುವನಾರೆ
ಸವನಿ ಸುಂಗಾರಾಗಿ
ಸೊಮಿ ಸರಣರಲೆ ಹೊರಟರೆ| ಗಿರಿಯವ್ವ
ರಕ್ಷಿ ಮಾಡುವರ ಕರಕೊಳ್ಳೊ

೯)         ಒಡೆಯ ಗಿರಿಯಪ್ಪ ಒಡನೆ ಬರ‍್ತಾನಂದಿ
ಕೂಡುಟ್ಟರವರೆಲ್ಲ ಸವನಾಶಿ
ಸೊಮಿ ಸರಣರಲೆ ಹೊರಟರೆ| ಗಿರಿಯವ್ವ
ರಕ್ಷಿಮಾಡುವರ ಕರಕೊಳ್ಳೊ
ಯಾತ್ರಿಗೋಗ್ವರು ಕೊಡೆ ಇಲ್ಲದೆ ಹೋಗ್ವರು
ನಡುವೆ ಬೆಂಗ್ಳೂರಾ ಮಳೆಕರದಿ| ಗಿರಿಯಪ್ಪ
ಕೊಡೆಯ ಕೊಟ್ಟವರ ಕರಕೊಳ್ಳೊ
ಯಾತ್ರಗೋಗ್ವರು ಜೋಡಿಲ್ಲದೆ ಹೋಗ್ವರು
ನಡುವಲಿ ಮಂಗ್ಳೂರಾ ಹೊಡೆಕಾದಿ|ಗಿರಿಯಪ್ಪ
ಜೋಡ ಕೊಟ್ಟವರ ಕರಕೊಳ್ಳೊ
ಅತ್ತರ ಕೊಟ್ಟನೆ ಇಪ್ಪತ್ತೊರಸನ ಮುಡಪ
ಸೀಮಂಗಿ ಹೊಳಿಯೂ ಕಣಮಿ| ಕಳ್ಳರಬಾದ್ನಿ
ಒಡೆಯಾ ನಿನ್ನ ಮುಡುಪು ಜತನವೆ
ಅಜ್ಜ ಕಟ್ಟನೆ ನಲ್ವತ್ತೊರಸನ ಮುಡಪ
ಬಾರಂಗಿ ಹೊಳೆಯ ಕಣಮಿ| ಕಳ್ಳರ ಬಾದ್ನಿ
ಒಡೆಯಾ ನಿನ್ನ ಮುಡುಪು ಜತನವೆ
ಹಾದೀಯಕಲ್ಲು ಅಗ್ಗುನುಗ್ಗಾದಂತೆ
ಬಿದ್ದಾ ಹೆಮ್ಮರನ ತುದಿಯಲ್ಲಿ|ಗೋಯ್ದ್ರಾಯಾ
ಎದ್ದಿ ನೋಡಿದನೆ ಪರಸೀಯಾ| ಮನೆ
ಮೆಣಸಿನ ಕಾಳ ಮುಡುಪು ಬರ‍್ತದೆ, ಅಂಕೀಲಿ
ಮನಸಿಲಿ ಮಾರಹನಾ ಬಡುವನೆ
ಬೆಳ್ಳಿ ಗದ್ದಿಗಿ ಮನೆ ಚಿನ್ನದ ಗದ್ದಗಿ ಊರಿ
ಒಡೆಯ ಎಂಕಟರಮಣ ಕೊಳಲೂರಿ ಹೇಳದ್ರೆ
ಇಕ್ಕೇರಿ ನಾಥಾ ಸರಸಿಯೇ| ಮುಡಿಯಾಮೆನೆ
ಯಾಲಕ್ಕಿ ಮುಡುಪು ಬರ‍್ತದೆ| ಅಂದೇಳಿ
ಮನಸಿಲಿ ಮಾಹರ‍್ಸಾ ಬಡುವನೆ
ಏಳುವಳು ಹರಿಯ ಏಳು ಚಿನ್ನದ ಗಿರಿಯೆ
ಬಾಲಾ ತಾನ್ಹೋಗಿ ಸಿಗದತ್ತಿ| ಬಾಲರು
ಹರಿಯಂದೇ ಗಿಂದೊನೆನದ್ಹತ್ತಿ| ಬಾಲರು
ದೇವರ ಕಣಲಿಕೆ ನೆಡುದಾರು
ತಿರುಪತಿಗೋಗ್ವರು ತಿರುಗಿ ನೋಡಲು ಬಾರಾ
ತಿರುಪತಿಲುಂಟೆ ಗುರುಗುಂಜಿ,| ಮಟ್ಟಾನತ್ತೇ
ಹರಿಯಂದೇ ಗಿಯಾ ನೆಗದತ್ತಿ| ಬಾಲರು
ಒಡಯನ ನೋಡಲಕೆ ನಡದಾರು
ಚಿನ್ನಾ ಅಳವದೆ ಕೊಳಗ ಹೊನ್ನಾ ಅಳವರೆ ಕೊಳಗ
ಚಿನ್ನಾದಾಕೊಳಗ ತಲದಿಂಬು| ಗೋವಿಂದರಾಯ
ಚಿನ್ನ ಬಲೀಲಂದೆ ಬರ‍್ದಾನೆ
ಅಣ್ಣಾಗದಾವೆತ್ತು ತಮ್ಮಗೇರಾವೆತ್ತು
ಆತಾ ಗಿರಿಯಪ್ಪಗೆ ಹಲವೆತ್ತು| ಕೂಡಿಕಂಡಿ
ಹೂಡಿ ಬಿತ್ತರಿಯಾ ಚೊಳಚೀಯಾ|
ಹೋದಾ ಹರಿಗೋಳಾ ಕೊರಳೀಗೆ| ದರಸೀ ಕಂಡಿ
ಹರಿಯಂದೇ ಗಿರಿಯಾ ಇಳದರಿಯೇ
ಅಟ್ಟು ಅಡಗೀಯ ಕುಟ್ಟೀನಾಮಾಮಾಡಿ
ಹೋದಹರಿಗಳ ನೊಸಲೀಗೆ, ದರಸಿಗಂಡಿ
ಹರಿಯಂದೇ ಗಿರಿಯ ಇಳವರಿಯೇ|ದಾರೆ| ಬಾಲರು
ಹಿಂದಕೆ ತಿರಗಿ ಬರುವರು
ದಂಡೂ ಬಂತಂದಿ ಅಚಿಜಬೇಡ ತಾಯವ್ವ
ದಂದಲ್ಲಾ ನಿನ್ನ ಮಗದೀರು| ತಿರುಪತಿಯ
ತೀರತವಾ ಮಿಂದಿ ತಿರಗಾರೆ
ದಂಡೀಗೋರಾಣ ದಂಡೂಂಡು ಬಾಡಾದೆ
ಅಂಗಾಲಿಗೆ ಮುಳ್ಳು ಸುರಿಯಾದೆ| ಬಂದಾರೆ
ದಂಡೀಗಾರತಿಯ ಬೆಳಗಾವೊ
ಯಾತ್ರೀಗೋದರು ದಾತರಗೆ ಬರುವಾರು
ಜೋತಿತುಂಬೆಣ್ಣೆ ಎರದಿರಿಸಿ| ಈ ಮಲ್ಲಿ
ಯಾತ್ರಿಗೋದರೆ ಬರುವರು| ತಂಗದಿರು
ಕಾಲಗ್ಗೆ ನೀರನ್ನು ಕೊಡುವರು
ಕಾಲಗ್ಗೆ ನೀರನ್ನು ಕೊಡುವರು\ಕೊಟ್ಟಿ ತಂಗದಿರು
ದಂಡೀಗಾರತಿಯ ಬೆಳಗಾರೆ| ಬಾಲರು
ಮಾಳೂಗಿ ಒಳಗೆ ನೆಡದಾರೆ.

ದೇವರಿಗೆ ಹೋದವರು ಬರುವತನಕ ಮನೆಯಲ್ಲಿ ಈ ಹಾಡನ್ನು ಹೇಳುತ್ತಿರುತ್ತಾರೆ.

ದೇವರಿಗೆ ಹೋದವರು, ಯಾತ್ರೆಗೆ ಹೋದವರು ಮೀನು ತಿನ್ನಬಾರದು, ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಬಾರದು. ಎಂಬ ಕಟ್ಟಳೆಗಳನ್ನು ಪಾಲಿಸುತ್ತಾರೆ. ದೇವರಿಗೆ ಹೋದವರು ಬರುವವರೆಗೆ ತುಳಸಿಗೆ ಹೂ ಹಾಕುತ್ತಿದ್ದು, ಅದು ಬೇಗ ಬಾಡಿದರೆ ದೇವರಿಗೆ ಹೋದವರಿಗೆ ಕಾಯಿಲೆಯಾಗಿರಬಹುದೆಂದು ಆತಂಕಗೊಳ್ಳುತ್ತಾರೆ.

ದೋಣಿ ಹಾಡುಗಳು:

ಹೊನ್ನಾವರ ತಾಲೂಕಿನ ಗಾಮೊಕ್ಕಲ ಸಮುದಾಯವು ನೆಲೆಸಿರುವ ಹೆಚ್ಚಿನ ಪ್ರದೇಶಗಳು ಕುರುವೆಗಳಾಗಿವೆ. ಇತ್ತೀಚೆಗೆ ಕೆಲವು ಕರುವೆಗಳಿಗೆ ಸಂಕಗಳನ್ನು ಕಟ್ಟಲಾಗಿದೆ. ಮಾವಿನ ಕುರ್ವೆಗೆ ಗೇರುಸೊಪ್ಪು ರಸ್ತೆಯಿಂದ ಬರಲು ಅನುಕೂಲವಾಗುವಂತೆ ಸಂಕವನ್ನು ಕಟ್ಟಲಾಗಿದೆ. ಇದು ಹೊನ್ನಾವರದಿಂದ ಬಹುದೂರದ ರಸ್ತೆಯಾಗಿದೆ. ಆದರೆ ಹೊನ್ನಾವರದಿಂದ ಬಕಾಸಿತಾರಿಯನ್ನು ದೋಣಿಯ ಮೂಲಕ ದಾಟಿ ಮಾವಿನ ಕುರ್ವೆಯನ್ನು ಮುಟ್ಟುವುದು ಹೆಚ್ಚು ಸಮೀಪದ ರಸ್ತೆಯಾಗಿದ್ದು, ಹೆಚ್ಚು ಆಹ್ಲಾದಕರವೂ ಆಗಿದೆ. ಬಹು ಹಿಂದಿನಿಂದ ದೋಣಿಯೇ ಈ ಕುರ್ವೆಗಳಿಗೆ ಸಂಪರ್ಕ ಸಾಧನವಾಗಿತ್ತು. ಈಗಲೂ ಅನೇಕ ಕಡೆ ದೋಣಿಯು ಮಾತ್ರ ಸಂಪರ್ಕ ಸಾಧನವಾಗಿರುವ ಪ್ರದೇಶಗಳು ಇವರ ನೆಲೆಗಳಾಗಿವೆ. ಆದ್ದರಿಂದ ದೋಣಿಯ ಪ್ರವಾಸವನ್ನೂ ಕುರಿತು ಹಾಡುಗಳು ಇವರ ಜನಪದ ಜೀವನದ ಒಂದು ಭಾಗವಾಗಿದೆ.

ಹೆಂಗಸರು ತಮ್ಮ ನೆಲೆಯಿಂದ ದೋಣಿಯ ಮೂಲಕ ಆಚೆ ಊರಿಗೆ ಹೋಗಿ ಕೂಲಿ-ನಾಲಿ ಮಾಡುತ್ತಾರೆ. ನಗರಕ್ಕೆ ಹೋಗಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡಿ ತಮಗೆ ಬೇಕಾದ ಸಾಮಾನುಗಳನ್ನು ಕೊಂಡು ತರುತ್ತಾರೆ. ಇವರು ಸಂಜೆ ತಮ್ಮ ಮನೆಯನ್ನು ಸೇರುವ ಸಂದರ್ಭವೂ ಕಾತರತೆಯಿಂದ ಕೂಡಿರುತ್ತದೆ. ಮನೆಯಲ್ಲಿ ತಮ್ಮನ್ನು ಕಾಯುತ್ತಿರುವ ಮಕ್ಕಳು, ಅಶಕ್ತ ಹಿರಿಯರು, ಮನೆಗೆಲಸ ಇವರನ್ನು ಬೇಗ ಮನೆಮುಟ್ಟುವಂತೆ ಪ್ರೇರಿಸುತ್ತದೆ. ಇದು ಹಾಡಿನಲ್ಲಿ ವ್ಯಕ್ತವಾಗುತ್ತದೆ.

ಹಾಡುಗಾರ್ತಿಯರು ತಮ್ಮ ಹಾಗೂ ತಾರೀಕೂಸ (ದೋಣಿ ನಡೆಸುವವ) ನ ನಡುವೆ ನಡೆದಂತೆ ಊಹಿಸಿ ಹಾಡುತ್ತಾರೆ.

“ಸಂಪಿಗೆ ಹೂಂಗ್ಮುಡದಿ ನೆಂಪಿಲ್ಲದೆ ನಾವ್ ಬಂದೊ
ನೆಂಪಿಲ್ಲದೆ ಹಾದೊ ನೆಡುಹೊಳಿಯಾ| ತಾರಿಕೂಸಾ
ಉಂಗೀಲ ಕೊಡ್ತೆ ನೆಲೆ ಹೇಳೊ
ಉಂಗೀಲಾ ತನಗುಂಟು ಬಂಗಾರ ತನಗುಂಟು
ಮಂಗಲಕೆ ನೆರೆದ ಕೊಮರೀಯ| ಕೊಡ್ತೇನಂದ್ರೆ
ಉಂಬೊಟ್ಟು ನೆಲಿಯಾ ತೆಳದ್ದೇಳ್ವೆ
ಜಲ್ಲಿನಲ್ ತೆಗಿಯೋ ಹುಟ್ಟಿನಲಿ ಬಲಗೀಸೋ
ಜೊತೆಯಲಿ ನಮ್ಮಾ ಕಳಗೀಸೋ| ಮೊಳ್ಕೊಡಾ
ತೋಪಿನಲಿ ನಮ್ಮ ಅರಮನೆ| ಮಾಳೂಗಿಲಿರುವಾ
ಬಾಲರಿನ್ನೆಟ್ಟು ಮರಗ್ವರು

ದೂರದ ಊರಿಗೆ ದೋಣಿಯು ಹೊರಟಿದೆ. ಕಡಗ ಧರಿಸಿದವರು (ಗಂಡಸರು) ದೋಣಿಯಲ್ಲಿದ್ದಾರೆ. ಆ ಸಂದರ್ಭದಲ್ಲಿ ಹೆಂಗಸರ ಕಳವಳದ ಹಾರೈಕೆ ಹೀಗಿದೆ.

ಕಡಗದ ಕಯ್ನೋರು ತುಂಬಿದೋಣಿ ಹತ್ತಿ
ಹಾಯಾದೇ ದೋಣಿ ಹಳಕಡೆ| ತಳನೋರಾ
ಸತ್ಯದಿಂದ ದೋಣಿ ತೆರೆತಾಡೇ
ಬಾಳೀ ಕಾಯ್ನಂತೆ ಬಾಗಿಬಂದಾ ಹೊಳಿಯೇ
ಈ ನಾಡ ಹೊಳಿಯೇ ಇಪರೀತಾ| ತಳನೋರಾ
ಸತ್ಯದಿಂದೋಣಿ ತೆರತಾಡ
ಹಣಡಕಿ ಕೊನಿಯಾ ಎಣಿಸಿ ಮಚವಿ ತುಂಬಿ
ಬಣ್ಣದ ಹಾಯಾ ಹಸರಿಸಿ| ಆ ಹಡಗು
ಹೋದಾವೇ ಹೊನ್ನಾರದ ಹೊಳೆತಂಕ| ಆಮಚವಿ
ಮುತ್ರಾ ಆಧರಿಸಿ ಬರುತ್ತದೆ.
ಒಂದ್ಹಡಗು ಎಯಡ್ಹಡಗು ಎಂಬಯ್‌ನೂರ‍್ಹಡಗು
ನಂಗಾಲಿಕ್ಕಿದವೇ ಅಳವೀಲಿ| ಅಮ್ಮನೋರಾ
ಬಂಗಾರದ ಹಡಗು ಜತನಾವೇ
ಹಡಗು ಹಾಯಲಿ ಜವರು ಕಯ್ಯನೆ ಮುಗದಿ
ಹಡಗೀ ನೊಡಿಯಾಗೆ| ಮುಗುಳ್ನಗ್ಗೆ| ಏನಂದಿ
ಹಡಗು ನಮ್ಮೂರಿಗೆ ಬತ್ತದೆ

ಹಾಡುಗಳನ್ನು ವಿಸ್ತರಿಸುವ ಬಗೆ ಸುಲಭವಾದದ್ದು. ಇಲ್ಲಿಯ ಕೆಲವು ಶಬ್ದಗಳನ್ನು ಮಾತ್ರ ಬದಲಿಸಿ ಮತ್ತೊಮ್ಮೆ ಹಾಡುವ ಮೂಲಕ ಹಾಡುಗಳನ್ನು ಮತ್ತೆ ಮತ್ತೆ ಹೇಳುತ್ತಾ ಹಾಡುಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಾರೆ. ಉದಾ: ಈ ಮೇಲಿನ ಕೊನೆಯ ಹಾಡನ್ನು ಎತ್ತಿಕೊಳ್ಳೋಣ. ಇಲ್ಲಿ “ಹಣ್ಣಡಕಿ” ಇದ್ದಲ್ಲಿ ತೆಂಗಿನಾ ಎಂದೂ “ಬಣ್ಣದ” ಇದ್ದಲ್ಲಿ ಚಿನ್ನದ ಎಂದೂ ಹೊನ್ನಾವರದ ಇದ್ದಲ್ಲಿ ಮಂಗಳೂರಾ ಎಂದೂ “ಮುತ್ತಾ” ಇದ್ದಲ್ಲಿ “ಹೊನ್ನಾ” ಅಥವಾ “ಹೂಂಗಾ” ಎಂದೂ ಬದಲಿಸಿಕೊಂಡು ಉಳಿದ ಶಬ್ದಗಳನ್ನು ಬದಲಿಸದೇ ಇನ್ನೊಮ್ಮೆ ಹಾಡುತ್ತಾರೆ. ಈ ಪ್ರಕ್ರಿಯೆ ದೋಣಿಯ ಹಾಡುಗಳಲಷ್ಟೇ ಅಲ್ಲ ಆಚರಣೆಯ ಹಾಡುಗಳಲ್ಲಿಯೂ ಕೂಡ ಕಂಡುಬರುತ್ತದೆ. ತ್ರಿಪದಿಯ ಎರಡನೆಯ ಸಾಲನ್ನು ಮಗುಚಿ ಹೇಳುವುದು ವಿಸ್ತರಣೆ ಇನ್ನೊಂದು ಬಗೆಯಾಗಿದೆ.

ಒಗಟುಗಳು:

೧) ಅಗಟಗಾರ‍್ಕಣ್ಣು ಮುಗಟಗ್ಮೂರ‍್ಕಣ್ಣು ಕೆಂದಪ್ಪರಾಯಗೆ ಒಂದೇ ಕಣ್ಣ-(ಅಡಿಕೆ

೨) ಕಾನಾಗೆ ಹತ್ತಡಕೀ ಕಂಡೆ, ನೀರಾಗೆ ತಟ್‌ಮಡಕಿ ಕಂಡೆ, ಕಾಲಿಲ್ಲಾದಕ್ಕನ ಬರೂ ಕಂಡೆ-(ಕೊಳಲು, ತೆಂಗಿನ ಕಾಯಿ, ದೋಣಿ)

೩) ಮರಮರ ಮದಡಿ, ಕಿರಿಬೆರಳು ಹೊಡದಿ, ದೊರೆಗಳು ತಿಂದಿ ಹೊಗಳ್ತ್ರು (ಸಾಂಫಿ)

೪) ಬತ್ ಮರ‍್ನಮೆನೆ ಬಸ್ವಾ ಇಟ್ಲಾ ಹಾಕ್ತದೆ-(ಕೊಡ್ಲಿ)

೫) ಅರ‍್ಲಾಗೆ ಹುಟ್ಟಿ ಕೊರ‍್ಲಾಗೆ ಬೆಳ್ದಿ ಪುರ್ಲಹಕ್ಕಿ ಪುಕ್ಕಾ ಕೊಯ್ದಿ ರಾಯರ‍್ ಬಂದಿ ತೇರ‍್ಕಟ್ಟಿ-(ಗದ್ದೆಯ ಗೊದ್ನೆ)

೬) ಅರ್ಕಟ್ಟು ಮಕ್ಕಿಟ್ಟು ಮರಕೆ ಮುವತ್ತಾರ‍್ಕಟ್ಟು ಅರ್ತಾ ಹೇಳ್ವವರಿಗೆ ಸಬಾಸ್‌ಕಟ್ಟು ಅತಾ ಹೇಳದ್‌ಓಗಿದ್ದವರಿಗೆ ಮೆಟ್ನಪೆಟ್ಟು-(ತೇರು)

೭) ಒಯ್ಯ ಒಯ್ಯನೆ ಬಂದಾ, ಒಯ್ಯಾರ ತಂದಾ, ಕಾಲಿಲ್ಲ ಕೈಮುಂಡ ಹೀಗಲೇರಿಕಂಡಾ ಕೈಕಳಚಿಬಿದ್ದರೆ ತಾ ಮಡಗಿಕಂಡ-(ಪಲಕಾ)

೮) ಅಂಗಾನುಂಗಿದಕ್ಕಿ ನುಂಗೀತು ಆತನ ಅಂಗಾಲು ಹೆರಗೆ ತಲೆ ಹೆರಗಿ- (ಅಂಗಿ)

ಒಗಟುಗಳನ್ನು ಮಕ್ಕಳಿಗಾಗಿ ಹೆಂಗಸರು ಗಂಡಸರು ಹೇಳಿಕೊಡುತ್ತಾರೆ. ಮಳೆಗಾಲದಲ್ಲಿ ಸವಡಿದ್ದಾಗ ಅಥವಾ ರಾತ್ರಿಯೆಲ್ಲ ಒಗಟು ಹೇಳುವ ಕಾರ್ಯಕ್ರಮ ನಡೆಯುತ್ತದೆ. ಆಧುನಿಕ ಮಕ್ಕಳಿಗೆ ಒಗಟುಗಳ ಹಂಗಿಲ್ಲ. ಕೇರಿಯಲ್ಲಿ ಟಿ.ವಿಗಳು ಬಂದಿವೆ. ಮಕ್ಕಳಿಗೆ ಜ್ಞಾನ-ರಂಜನೆ ಹಂಚಲು ಟಿ.ವಿ. ಗಳು ಸದಾಸಿದ್ಧವಾಗಿವೆ! ಮಹಿಳಾ ಸಂಸ್ಕೃತಿಯ ಪ್ರಸಾರಕ್ಕೆ, ಉಳಿವಿಗೆ ಆಧುನಿಕತೆ ಅಡ್ಡಗಾಲು ಹಾಕಿಬಿಟ್ಟಿದೆ.

ಸಮಾರೋಪ:

ಹಳೆಯ ತಲೆಮಾರಿನ ಬೆರಳಣಿಕೆಯ ಕೆಲವು ಮಹಿಳೆಯರನ್ನು ಬಿಟ್ಟರೆ ಇತರ ಗಾಮೊಕ್ಕಲ ಮಹಿಳೆಯರು ಆಧುನಿಕ ಜೀವನದತ್ತ ಹೊರಳುತ್ತಿದ್ದಾರೆ. ಇವರ ವೇಷ-ಭೂಷಣಗಳು ಸ್ಥಳೀಯ ಇತರ ಅನೇಕ ಜಾತಿ “ನಾಗರಿಕ” ಮಹಿಳೆಯರು ಅನುಸರಿಸುವ ರೀತಿಯಲ್ಲಿ ಬದಲಾಗಿದೆಯಾದ್ದರಿಂದ ವೇಷ-ಭೂಷಣ, ಭಾಷೆ ಇತ್ಯಾದಿ ಯಾವ ನೆಲೆಯಲ್ಲಿಯೂ ಇವರು ವಿಶಷ್ಟರಾಗಿ ಕಾಣುವುದಿಲ್ಲ.

ಸ್ಥಳೀಯ ಪಂಚಾಯತ ಆಡಳಿತ ವ್ಯವಸ್ಥೆಯಲ್ಲಿ ಇವರು ಪಾಲ್ಗೊಳ್ಳುತ್ತಿದ್ದಾರೆ. ಕೇರಿಕೇರಿಗಳಲ್ಲಿ ಸ್ವಸಹಾಯ ಸಂಘಗಳು ತಲೆಯೆತ್ತಿದ್ದು ಮನೆಮನೆಗಳಲ್ಲಿ ಸ್ವಸಹಾಯ ಸಂಘದ ಸದಸ್ಯೆಯರಿದ್ದಾರೆ. ಆರ್ಥಿಕ ಸಬಲತೆ ಅವರನ್ನು ಸ್ವತಂತ್ರರೂ ಸಾಮಾನ್ಯರೂ ಆಗಿಸಿದೆ.

ಅನತಿ ದೂರದಲ್ಲಿ ಶಾಲೆ-ಕಾಲೇಜುಗಳಿಂದ ಶಿಕ್ಷಣವು ಸುಲಭವಾಗಿದೆ. ಹೊಸಪೀಳಿಗೆಯಲ್ಲಿ ಅನಕ್ಷರಸ್ಥರು ಕಂಡು ಬರುತ್ತಿರಲ್ಲವಾದರೂ ಪ್ರಾಥಮಿಕ ಶಿಕ್ಷಣದ ಕೊನೆಯಲ್ಲಿ ಶಾಲೆಬಿಟ್ಟು ಮನೆಗೆಲಸದಲ್ಲಿ ಸಹಾಯಕರಾಗಿ ನಿಲ್ಲುವವರೇ ಹೆಚ್ಚು. ಕೆಲವರು ಎಸ್.ಎಸ್.ಎಲ್.ಸಿ. ಮುಗಿಸಿದ್ದಾರೆ. ಪಿ.ಯು.ಸಿ. ಮುಗಿಸಿದವರು, ಪದವೀಧರರು ಅತ್ಯಂತ ಕಡಿಮೆ, ಖರ್ವಾದ ಒಬ್ಬ ಹುಡುಗಿಯು ಪದವಿಶಿಕ್ಷಣ ಪಡೆಯುತ್ತಿದ್ದಾಳೆ. ಗಂಡಸರು ತಾಲೂಕ ಪಂಚಾಯತ ಅಧ್ಯಕ್ಷರಾಗಿದ್ದಾರೆ. ಆದರೆ ಇಂತಹ ಉನ್ನತ ಸ್ಥಾನವಿನ್ನೂ ಮಹಿಳೆಯರ ಪಾಲಿಗೆ ಬಂದಿಲ್ಲ. ಆದರೆ ಬರುವ ಸಾಧ್ಯತೆಗಳಿವೆ.