ಈಗ ಮೂವತ್ತು ನಲವತ್ತು ವರ್ಷಗಳ ಹಿಂದೆ, ಯಾರಾದರೂ ದೈಹಿಕವಾಗಿ ಬಹು ಶಕ್ತಿವಂತರು ಎಂದು ಹೊಗಳಬೇಕಾದರೆ ‘ಅವನೊಬ್ಬ ಗಾಮ’ ಎನ್ನುತ್ತಿದ್ದರು. ಭಾರತದಾಚೆ ಹಲವು ದೇಶಗಳಲ್ಲಿಯೂ ಇದೇ ಮಾತು. ಗಾಮನ ಅಸಾಧಾರಣ ದೇಹಬಲ ಮನೆಮಾತಾಗಿತ್ತು.

ಪೈಲ್ವಾನರ ಮನೆತನ

ಪಂಜಾಬಿನ ಪ್ರಸಿದ್ಧ ಕುಸ್ತಿಗಾರರಾದ ಅಜೀಜರ ಮೊದಲ ಮಗ ಗಾಮ. ಎರಡನೇ ಮಗ ಇಮಾಂ ಬಕ್ಷ್. ಪ್ಯಾರಿಸಿನಲ್ಲಿ ನಡೆದ ಕುಸ್ತಿಯಲ್ಲಿ ತುರ್ಕಿಯ ಖಾದರ್ ಆಲಿಯನ್ನು ಜಯಿಸಿ ಜಗಜಟ್ಟಿಯಾದ ಗುಲಾಂ ಪೈಲ್ವಾನನ ಮಗಳೇ ಗಾಮನ ಮೊದಲ ಹೆಂಡತಿ. ಗುಲಾಂ ಪೈಲ್ವಾನನ ಎರಡನೇ ತಮ್ಮ ರಹಮಾನಿಯಾರ ಮಗಳು ಗಾಮನ ಎರಡನೇ ಹೆಂಡತಿ. ಗಾಮನ ಎರಡನೇ ಹೆಂಡತಿಯ ಸಹೋದರನೇ ಹಮೀದ್. ಆತ ಸುಪ್ರಸಿದ್ಧ ಕುಸ್ತಿಗಾರನಾಗಿ ಜೀವನಾದ್ಯಂತ ಗಾಮನ ಜೊತೆಗಿದ್ದು ಅಂತ್ಯಕಾಲದಲ್ಲಿ ಕೊಲ್ಲಾಪುರದಲ್ಲಿ ಪ್ರಾಣ ಬಿಟ್ಟನು.

ಗಾಮನ ಎರಡನೇ ಹೆಂಡತಿಯ ತಂಗಿಯೇ ಅಂದರೆ ರಹಮಾನಿಯಾರ ಎರಡನೇ ಮಗಳೇ ಗಾಮನ ತಮ್ಮ ಇಮಾಂ ಬಕ್ಷನ ಹೆಂಡತಿ. ಈಗ ಪಾಕಿಸ್ತಾನದಲ್ಲಿ ಪ್ರಸಿದ್ಧರಾಗಿರುವ ರುಸ್ತುಂ-ಎ-ಪಾಕಿಸ್ತಾನ್ ಬೋಲು ಪೈಲ್ವಾನ್, ರುಸ್ತುಂ-ಇ-ಪಾಕಿಸ್ತಾನ್ ಗೋಗ ಪೈಲ್ವಾನ್, ಅಜಮ್, ಅಸ್ಲಾಮ್,ಅಕ್ರಾಂ ಮತ್ತು ಹಸ್ಸು ಇವರೆಲ್ಲ ಇಮಾಂ ಬಕ್ಷನ ಮಕ್ಕಳು. ಇವರೆಲ್ಲ ಶ್ರೇಷ್ಠ ತರಗತಿಯ ಕುಸ್ತಿಗಾರರೇ. ಹೀಗೆ ವಂಶಪಾರಂಪರ್ಯವಾಗಿ ಕುಸ್ತಿ ವಿದ್ಯೆ ಕರಗತವಾಗಿದ್ದ ಮನೆತನದಲ್ಲಿ ಗಾಮ ಜನ್ಮವೆತ್ತಿದ.

ಬಾಲ್ಯದಿಂದ ಹಂಬಲ

ಹೀಗೆ ಗಂಡುನೆಲವಾದ ಪಂಜಾಬಿನಲ್ಲಿ, ಗಂಡು ವಿದ್ಯೆಯಾದ ಕುಸ್ತಿ ವಿದ್ಯೆ(ಮಲ್ಲಯುದ್ಧ) ಧಮನಿಗಳಲ್ಲಿ ಹರಿಯುತ್ತಿದ್ದ ವಂಶದಲ್ಲಿ ಜನ್ಮವೆತ್ತಿದ್ದ ಗಾಮ. ತನ್ನ ಬಾಲ್ಯದ ದಿನಗಳಲ್ಲಿ ವಿದ್ಯಾಭ್ಯಾಸದ ಕಡೆ ಅಷ್ಟಾಗಿ ಗಮನ ಕೊಡಲಿಲ್ಲ. ಗಾಮನು ಒಮ್ಮೆ ಜಗಜಟ್ಟಿಯಾಗಿದ್ದ ಗುಲಾಂ ಪೈಲ್ವಾನನ ಅಳಿಯ. ತಾನೂ ಗುಲಾಂ ಪೈಲ್ವಾನನಂತೆ ದೊಡ್ಡ ಕುಸ್ತಿಗಾರನಾಗಬೇಕೆಂಬ ಬಯಕೆ ಅವನಿಗೆ ಬಾಲ್ಯದಿಂದಲೂ ಇತ್ತು. ಸಣ್ಣ ವಯಸ್ಸಿನಲ್ಲೇ ಗರಡಿಗೆ ಸೇರಿದ ಗಾಮ. ಅಂದಿನ ವಿಖ್ಯಾತ ಕುಸ್ತಿಗಾರರು ಕುಸ್ತಿ ಮಾಡುವುದನ್ನು ಬಹಳ ಜಾಗರೂಕತೆಯಿಂದ ಗಮನಿಸುತ್ತಿದ್ದ. ಎಂತಹ ಕ್ಷಿಷ್ಟವಾದ ಕುಸ್ತಿಪಟ್ಟನ್ನೂ ಸಹ ಒಮ್ಮೆ ನೋಡಿದ ಮಾತ್ರಕ್ಕೆ ಮಾಡಬಲ್ಲ ಈ ಹುಡುಗನಿಗೆ ಒಳ್ಳೆಯ ಭವಿಷ್ಯವಿದೆಯೆಂದು ಅಂದಿನ ಹಿರಿಯ ಪೈಲ್ವಾನರೆಲ್ಲ ಅನ್ನುತ್ತಿದ್ದರು.

ಕೇವಲ ಹದಿನಾರನೇ ವಯಸ್ಸಿನ ಹೊತ್ತಿಗೆ ಗಾಮ ದೊಡ್ಡ ದೊಡ್ಡ ಪೈಲ್ವಾನರ ಮೇಲೆ ಲೀಲಾಜಾಲವಾಗಿ ಕುಸ್ತಿ ಮಾಡಬಲ್ಲ ಕಸುವನ್ನು ಸಂಪಾದಿಸಿಬಿಟ್ಟಿದ್ದ. ಇದು ಕುಸ್ತಿಯಲ್ಲಿ ಅವನಿಗಿದ್ದ ಅಭಿರುಚಿಯನ್ನೂ ಮತ್ತು ಅದಕ್ಕಾಗಿ ಪಟ್ಟ ಶ್ರಮವನ್ನೂ ತೋರಿಸುತ್ತದೆ. ವ್ಯಾಯಾಮ ಮತ್ತು ಕುಸ್ತಿಯಲ್ಲಿನ ಗಾಮನ ನಿಷ್ಠೆ ಹಾಗೂ ಪರಿಶ್ರಮಗಳು ಅವನ ತಮ್ಮ ಇಮಾಂ ಬಕ್ಷ ಮತ್ತು ಹಮೀದರಿಗೆ ಸ್ಫೂರ್ತಿ ನೀಡಿದವು. ಮುಂದೆ ಇವರು ಗಾಮನಿಗೆ ಸರಿಸಾಟಿ ಎನ್ನಿಸಿಕೊಂಡರು.

ಹುಡುಗನೆ ಸಿಂಹದಂತೆ

ಮುಂದೆ ಗಾಮನು ಜಗಜಟ್ಟಿಯೆಂದು ಪ್ರಸಿದ್ಧನಾದ ಮೇಲೆ ಸುಮಾರು ೧೯೩೮-೩೯ರ ವೇಳೆಗೆ ಬೆಂಗಳೂರಿಗೆ ಬಂದುದು ಹಲವರಿಗೆ ನೆನಪಿದೆ. ಇದಕ್ಕೂ ಹಿಂದೆ ತನ್ನ ಹದಿನಾರನೇ ವಯಸ್ಸಿನಲ್ಲಿ ಪಂಜಾಬಿನಿಂದ ಬೆಂಗಳೂರಿಗೆ ಗಾಮ ಬಂದಿದ್ದ. ಆಗ್ಗೆ ಒಂದು ಕುಸ್ತಿ ತಂಡ ಬಂದಿತ್ತು. ಅದರೊಡನೆ ಗಾಮ ಬಂದ. ಆಗ ಗಾಮ ಯಾರ ಮೇಲೆಯೂ ಕುಸ್ತಿ ಮಾಡಲಿಲ್ಲ. ಆದರೆ ದಷ್ಟಪುಷ್ಟವಾಗಿ ಬೆಳೆದು ಆ ವಯಸ್ಸಿಗೇ ಹಿರಿಯ ಜಟ್ಟಿಯಂತೆ ಕಾಣುತ್ತಿದ್ದ ಗಾಮನನ್ನು ಕಂಡರೇ ಕುಸ್ತಿ ಮಾಡುವವರಿಗೆ ಭಯವಾಗುತ್ತಿತ್ತು.

ಆ ದಿನಗಳಲ್ಲಿ ಸುಲೇಮಾನ್ ಪೈಲ್ವಾನ್ ಎಂಬಾತ ಬೆಂಗಳೂರಿನಲ್ಲಿದ್ದ. ಮೈಸೂರಿನ ಪ್ರಸಿದ್ಧ ಜಟ್ಟಿಯಾದ ಪಾಪಯ್ಯನನ್ನು ಕುಸ್ತಿಯಲ್ಲಿ ಸೋಲಿಸಿ ಈತ ತನ್ನ ಸಾಮರ್ಥ್ಯವನ್ನು ತೋರಿಸಿದ್ದ. ಗಾಮನಿಗೆ ಸವಾಲು ಹಾಕುವಂತೆ ಕುಸ್ತಿಯಲ್ಲಿ ಮಹಾಪಾರಂಗತನೆಸಿದ್ದ ಸುಲೇಮಾನ್ ಪೈಲ್ವಾನನನ್ನು ಹಲವರು ಪ್ರೇರೇಪಿಸಿದರಂತೆ. ಆಗ ಗಾಮನ ದೂರದ ಬಂಧುವೂ ಪಂಜಾಬಿನ ಕಡೆಯವನೂ ಆದ ಸುಲೇಮಾನನು,

“ಅವನು ಯಾರು ಎನ್ನುವುದು ನಿಮಗೆ ತಿಳಿಯದು. ಕೇವಲ ಹುಡುಗನಾದರೂ ಅವನ ಶಕ್ತಿ ಮತ್ತು ಕುಸ್ತಿಯ ಧಾಟಿಗಳು ನಮ್ಮನ್ನೆಲ್ಲ ಮೀರಿದ ಮಟ್ಟಕ್ಕೆ ಸೇರಿದವು. ನಾನು ಅವನಿಗೆ ಸಾಟಿಯಲ್ಲ ಮುಂದೆ ಒಂದು ದಿನ ಅವನು ಜಟ್ಟಿಯಾಗಿ ಪ್ರಪಂಚದಲ್ಲಿಯೇ ಪ್ರಸಿದ್ಧನಾಗುತ್ತಾನೆ” ಎಂದು. ಈ ಮಾತನ್ನು ಕೇಳಿ ಸುತ್ತಮುತ್ತಲಿನ ಜನ ಚಕಿತರಾದರಂತೆ. ಸುಲೇಮಾನನ ಮಾತು ಮುಂದೆ ಅಕ್ಷರಶಃ ನಿಜವಾಯಿತು.

ಮಾವ ಗುಲಾಂ ಪೈಲ್ವಾನ್

೧೮೯೩-೯೪ ರಲ್ಲಿ ಕರೀಂ ಬಕ್ಷನು ಟಾಮ್ ಕ್ಯಾನನ್ ಎಂಬ ಪೈಲ್ವಾನನನ್ನು, ೧೯೦೦ರಲ್ಲಿ ಗುಲಾಂ ಪೈಲ್ವಾನನು ಪ್ಯಾರಿಸಿನಲ್ಲಿ ತುರ್ಕಿಯ ಖಾದರ್ ಆಲಿ ಎಂಬ ಮಲ್ಲನನ್ನೂ ಗೋಬರ್ ಪೈಲ್ವಾನನು ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಆಡ್‌ಷಾಂಟಲ್ ಎಂಬ ಜಟ್ಟಿಯನ್ನೂ ಸೋಲಿಸಿ ಜಗಜಟ್ಟಿಗಳಾದರು.

ಗುಲಾಂ ಪೈಲ್ವಾನನಿಗೆ ಪ್ಯಾರಿಸಿನಲ್ಲಿ ದೊರೆತ ಜಗಜಟ್ಟಿಯ ಪದವಿಯ ಸುದ್ಧಿ ಯುರೋಪಿನಲ್ಲೆಲ್ಲ ಹಬ್ಬಿತು. ಗುಲಾಂ ಪೈಲ್ವಾನನು ಹೋದಡೆಯಲ್ಲೆಲ್ಲ ಅವನ ಪಂದ್ಯವನ್ನು ವೀಕ್ಷಿಸಲು ಜನರು ಕಿಕ್ಕಿರಿದು ಸೇರುತ್ತಿದ್ದರು. ಉತ್ಸಾಹೀ ತರುಣರು ಅವನನ್ನು ಮುಟ್ಟಿ ನೋಡಿ ‘ಇವನೊಬ್ಬ ಉಕ್ಕಿನ ಮೂರ್ತಿ’ ಎಂದು ಉದ್ಗಾರ ತೆಗೆಯುತ್ತಿದ್ದರಂತೆ.

ಹಿಂದಿರುಗಲಿಲ್ಲ

ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಆಡಿದ ಪಂದ್ಯಗಳಲ್ಲಿ ಗುಲಾಂ ಪೈಲ್ವಾನನಿಗೆ ಬಹಳ ಹಣ ಶೇಖರಣೆ ಆಯಿತು. ಮೆಚ್ಚಿದ ಜನ ತಮಗೆ ತೋಚಿದ್ದನ್ನು ಬಹುಮಾನವಾಗಿ ಕೊಟ್ಟರು. ಆದರೆ ಬಂದ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳಲು ಒಪ್ಪದೆ, ಗುಲಾಂ ಪೈಲ್ವಾನನು ಅದೆಲ್ಲವನ್ನು ಸವರನ್ ರೂಪದಲ್ಲಿ ಕೊಡಲು ಒತ್ತಾಯಪಡಿಸಿದನು. ಬಹಳ ಸವರನ್‌ಗಳ ಶೇಖರಣೆ ಮಾಡಿ ಅವನ್ನು ಭದ್ರವಾಗಿ ತನ್ನ ನಡುವಿಗೆ ಕಟ್ಟಿಕೊಂಡು ಭಾರತಕ್ಕೆ ಹಿಂದಿರುಗಲು ಹಡಗನ್ನೇರಿದ.

ಒಂದು ದಿನ ಗುಲಾಂ ಪೈಲ್ವಾನನು ಹಡಗಿನ ಮೇಲ್ಭಾಗದಲ್ಲಿ ಅಡ್ಡಾಡುತ್ತಾ ಇದ್ದ. ಹಾಗೇ ನೀರಿನ ಕಡೆಗೆ ನೋಡಲು ಬಗ್ಗಿದಾಗ ತನ್ನ ನಡುವಿನಲ್ಲಿಟ್ಟಿದ್ದ ಸವರನ್ನುಗಳ ಭಾರಕ್ಕೆ ಮುಂದಕ್ಕೆ ಮುಗ್ಗರಿಸಿ ನೀರು ಪಾಲಾದನು. ಅವನ ಶವಶೋಧನೆಗಾಗಿ ಮಾಡಿದ ಪ್ರಯತ್ನ ವಿಫಲವಾಯಿತು. ಅವನಲ್ಲಿದ್ದ ಸವರನ್ನುಗಳನ್ನು ಕದ್ದು ಯಾರೋ ನೀರಿಗೆ ಎತ್ತಿಹಾಕಿದರೆಂದೂ ಕೆಲವರು ಹೇಳಿದರು. ಇದು ಹೇಗೆ ಇರಲಿ, ದಿಗ್ವಿಜಯಿಯಾಗಿ ಸ್ವದೇಶಕ್ಕೆ ಹಿಂದಿರುಗುತ್ತಿದ್ದ ಗುಲಾಂ ಪೈಲ್ವಾನನು ಜಲಸಮಾಧಿಯಾದುದು ಬಹಳ ದುಃಖದ ಸಂಗತಿ.

ಭಾರತದಿಂದ ವಿದೇಶಗಳಿಗೆ ಹೋದ ಪೈಲ್ವಾನರೆಲ್ಲ ಗಳಿಸಿದ ವಿಜಯವನ್ನೂ, ಅವರಲ್ಲಿ ಹಲವರು ಜಗಜಟ್ಟಿಗಳೂ ಎನ್ನಿಸಿಕೊಂಡುದನ್ನೂ ನೋಡಿದರೆ ಭಾರತಿಯ ಕುಸ್ತಿ ಪದ್ಧತಿ ವಿಶ್ಚದ ಕುಸ್ತಿ ಪದ್ಧತಿಗಳಲ್ಲಿ ಶ್ರೇಷ್ಠ ಶ್ರೇಣಿಗೆ ಸೇರಿದ್ದು ಎನ್ನುವುದರಲ್ಲಿ ಸಂಶಯವಿಲ್ಲ. ಕಿಕ್ಕರೆ ಸಿಂಗ್, ಕಲ್ಲೂ ಪೈಲ್ವಾನ್ ಮೊದಲಾದವರು ಗಾಮನ ಹಿಂದಿನ ತಲೆಮಾರಿನವರು. ಇವರು ಗಾತ್ರದಲ್ಲೂ ಶಕ್ತಿಯಲ್ಲೂ ಗಾಮನಿಗಿಂತ ಮೇಲ್ತರಗತಿಯವರು.

ಲಂಡನ್ನಿಗೆ

ನಮ್ಮ ದೇಶದ ಹಲವರು ಶ್ರೀಮಂತರು ಕುಸ್ತಿ ಪಂದ್ಯಗಳಲ್ಲಿ ಆಸಕ್ತಿ ವಹಿಸುವುದು ಒಂದು ಸಂತೋಷದ ವಿಷಯ. ಜಟ್ಟಿ, ಭೀಮನಂತೆಯೇ ಇರಬಹುದು, ಬೇರೆ ಬೇರೆ ದೇಶಗಳಿಗೆ ಹೋಗಿ, ತನ್ನ ಶಕ್ತಿಯನ್ನೂ ಚಾತುರ್ಯವನ್ನೂ ತೋರಿಸಲು ಅವಕಾಶ ಬೇಕಲ್ಲವೆ? ಇದಕ್ಕೆಲ್ಲ ಹಣ ಬೇಕಲ್ಲ? ಭಾರತದ ಹಿಂದಿನ ಪ್ರಧಾನಿ ಜವಾಹರಲಾಲರ ತಂದೆ ಮೋತೀಲಾಲರು ತಮ್ಮ ಸ್ವಂತ ಖರ್ಚಿನಲ್ಲಿ ಗುಲಾಂ ಪೈಲ್ವಾನನನ್ನು ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳಿಗೆ ಕರೆದುಕೊಂಡು ಹೋದರು. ಶರತ್ ಕುಮಾರ ಮಿತ್ರ ಎನ್ನುವವರು ಕಲ್ಕತ್ತದಲ್ಲಿ ಒಬ್ಬ ಶ್ರೀಮಂತರು.

೧೯೧೦ರಲ್ಲಿ ಲಂಡನ್ ನಗರದಲ್ಲಿ ಜಾನ್ ಬುಲ್ ವರ್ಲ್ಡ್ ರೆಸ್‌ಲಿಂಗ ಛಾಂಪಿಯನ್ ಷಿಪ್ ಎಂಬ ಹೆಸರಿನ ಕುಸ್ತಿ ಪಂದ್ಯ ನಡೆಯಿತು. ಮಿತ್ರ ಅವರು ತಮ್ಮ ಸ್ವಂತ ಖರ್ಚಿನಿಂದ ಗಾಮ ಮತ್ತು ಇಮಾಂ ಬಕ್ಷರನ್ನು ಕಳಿಸಿದರು. ಜಗದ್ವಿಖ್ಯಾತರಾಗುವಂತೆ ಪೈಲ್ವಾನರಿಗೆ ಪ್ರೋತ್ಸಾಹ ನೀಡಿದರು.

ಆಗಿನ ಕಾಲದಲ್ಲಿ ಆಂಧ್ರಪ್ರದೇಶದ ಪ್ರೊಫೆಸರ್ ಕೆ.ರಾಮಮೂರ್ತಿ ‘ಸ್ಯಾಂಡೋ’ ರವರು ಭಾರತದ ಅತಿ ಶಕ್ತಿವಂತರೆಂದು ಪ್ರಸಿದ್ಧಿ ಹೊಂದಿದ್ದರು. ಪಾಶ್ಚಾತ್ಯ ದೇಶಗಳಲ್ಲೆಲ್ಲ ಇವರ ಖ್ಯಾತಿ ವ್ಯಾಪಿಸಿತ್ತು. ಹೊರ ದೇಶಗಳಿಗೆ ಹೋಗಿ ಭಾರತಕ್ಕೆ ಕೀರ್ತಿ ತರುವ ಶಕ್ತಿ ಗಾಮನಿಗಿದೆ ಎಂದು ರಾಮಮೂರ್ತಿ ‘ಸ್ಯಾಂಡೋ’ ರವರು ತಿಳಿದು ಪ್ರೋತ್ಸಾಹ ನೀಡಿದರು. ರಾಮಮೂರ್ತಿಯವರ ಪ್ರೋತ್ಸಾಹ ಮತ್ತು ಶರತ್ ಕುಮಾರ ಮಿತ್ರರವರ ನೆರವುಗಳಿಂದ ಗಾಮ ಮತ್ತು ಇಮಾಂ ಬಕ್ಷರು ಲಂಡನ್ ತಲುಪಿದರು.

ನನ್ನೊಡನೆ ಐದು ನಿಮಿಷ ಯಾರು ಹೋರಾಡುತ್ತೀರಿ?

ಬಹು ಉತ್ಸಾಹದಿಂದ ಗಾಮ ಮತ್ತು ಇಮಾಂ ಬಕ್ಷ್ ಲಂಡನ್ ತಲುಪಿದರು. ಆದರೆ ಅವರಿಗೆ ನಿರಾಶೆಯೇ ಕಾದಿತ್ತು. ಅಲ್ಲಿಯ ಪಂದ್ಯದ ವ್ಯವಸ್ಥಾಪಕರು ಗಾಮನಿಗೆ ಈ ಪಂದ್ಯಗಳಲ್ಲಿ ಪಾಲುಗೊಳ್ಳುವ ಅರ್ಹತೆ ಇಲ್ಲವೆಂದು ತೀರ್ಮಾನಿಸಿದ್ದರು! ಶರೀರದ ಗಾತ್ರದಲ್ಲಾಗಲೀ ಶಕ್ತಿಯಲ್ಲಾಗಲೀ ಅಲ್ಲಿ ನೆರೆದಿದ್ದ ಮಹಾಕಾಯರೂ ಪ್ರಸಿದ್ಧ ಮಲ್ಲರೂ ಆಗಿದ್ದವರಿಗೆ ಇವರಿಬ್ಬರು ಈಡುಜೋಡು ಅಲ್ಲ ಎಂದು ಅವರ ಅಭಿಪ್ರಾಯ. ಪಂದ್ಯದ ಆವರಣದ ಸುತ್ತಲೂ ಓಡಾಡುತ್ತಿದ್ದ ಉಬ್ಬಿದ ಎದೆಯ, ಕೊಬ್ಬಿದ ಕತ್ತಿನ ದೈತ್ಯಾಕಾರದ ಪೈಲ್ವಾನರುಗಳ ಮುಂದೆ ಕೇವಲ ಇನ್ನೂರ ನಲವತ್ತು ಪೌಂಡ್ ತೂಕದ, ಐದು ಅಡಿ ಏಳು ಅಂಗುಲ ಎತ್ತರದ ಗಾಮನಂತಹ ಪುಡಿ ಆಳನ್ನು ಬೆಂಬಲಿಸಿ ಯಾರೂ ಮಾತನಾಡಲಿಲ್ಲ. ಎಲ್ಲರೂ ಗಾಮನ ವಿಷಯದಲ್ಲಿ ಉದಾಸೀನಭಾವ ತೋರಿಸಿದರು; ಆದರೆ ಆತನಿಗೆ ತನ್ನ ವಿದ್ಯೆ, ಶಕ್ತಿ ಮತ್ತು  ಸಾಮರ್ಥ್ಯಗಳಲ್ಲಿ ಅಪಾರ ವಿಶ್ವ್ವಾಸ. ತನ್ನ ಪರವಾಗಿ ತಾನೇ ವಾದಿಸದೆ ಗತ್ಯಂತರವಿಲ್ಲವೆಂದು ಗಾಮನಿಗೆ ಮನವರಿಕೆಯಾಯಿತು. ಅವನು ಆತ್ಮವಿಶ್ವಾಸವೊಂದೇ ದಾರಿದೀಪವೆಂದು ಭಾವಿಸಿದನು. ಕನ್ನಡಿಗರೂ ಮತ್ತು ಕರ್ನಾಟಕದ ಅಚ್ಚುಮೆಚ್ಚಿನವರೂ ಆದ ಟಿ.ಪಿ.ಕೈಲಾಸಂರವರು ಈ ಪಂದ್ಯಗಳ ಸಮಯದಲ್ಲಿ ಲಂಡನ್ನಿನಲ್ಲಿದ್ದರು. ಅವರು ಗಾಮನ ಪಕ್ಷ ವಹಿಸಿ ಆ ಪಂದ್ಯಗಳಲ್ಲಿ ಆತ ಪಾಲುಗೊಳ್ಳುವಂತೆ ಮಾಡಲು ಹೋರಾಡಿದರು.

“ನೆರೆದ ಮಲ್ಲರಲ್ಲಿ ಯಾರಾದರೂ ಸರಿ ನನ್ನನ್ನು ಸೋಲಿಸುವುದಿರಲಿ, ಕೇವಲ ಐದು ನಿಮಿಷಕ್ಕಿಂತ ಹೆಚ್ಚು ಸಮಯ ನನ್ನೊಡನೆ ಸೆಣಸಿದರೆ, ನಿಂತು ಹೋರಾಡಿದರೆ ಅವರಿಗೆ ಹದಿನೈದು ಪೌಂಡುಗಳ ಬಹುಮಾನ ಕೊಡುತ್ತೇನೆ.”

ಗಾಮ ಸವಾಲು ಹಾಕಿದ.

ವ್ಯವಸ್ಥಾಪಕರ ನಿಯಮಗಳು ಏನೇ ಇರಲಿ, ಗಾಮನ ಈ ಸವಾಲನ್ನು ನೆರೆದ ಪೈಲ್ವಾನರು ಎದುರಿಸಲೇ ಬೇಕಾಯಿತು. ಪಂದ್ಯಗಳ ಮೊದಲ ದಿನ ಮೂವರು ಮಲ್ಲರೂ ಈ ಸವಾಲನ್ನು ಅಂಗೀಕರಿಸಿದರು. ಎದುರು ನಿಂತ ಮೂವರು ಮಲ್ಲರೂ ಕೇವಲ ಎರಡು ನಿಮಿಷಗಳಲ್ಲಿ ಸೋತುಹೋದರು.

ಮಾರನೇ ದಿನ ಹನ್ನೆರಡು ಮಲ್ಲರು ಮುಂದೆ ಬಂದರು. ಅವರಲ್ಲಿ ಕೂಡ ಯಾರೂ ಎರಡು ನಿಮಿಷಗಳಿಗಿಂತ ಹೆಚ್ಚು ನಿಲ್ಲಲಾರದೇ ಸೋತುಹೋದರು.

ನೆರೆದಿದ್ದ ಅಪಾರ ಜನಸ್ತೋಮ, ವಿಖ್ಯಾತ ಮಲ್ಲರು, ಪಂದ್ಯದ ವ್ಯವಸ್ಥಾಪಕರು ಎಲ್ಲರೂ ಬೆರಗಾದರು. ‘ಪಂದ್ಯದಲ್ಲಿ ಭಾಗವಹಿಸಲು ಯೋಗ್ಯತೆ ಇಲ್ಲ ಎಂದದ್ದು ಈತನಿಗೇ! ಎಂದು ಆಶ್ಚರ್ಯಪಟ್ಟರು. ಇನ್ನು ಮುಂದೆ ಗಾಮನು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುವ ಬಗ್ಗೆ ಸಂದೇಹವೇ ಉಳಿಯಲಿಲ್ಲ. ಗಾಮನ ಹೆಸರು ಲಂಡನ್ನಿನಲ್ಲಿ ಆತ್ಯಲ್ಪ ಕಾಲದಲ್ಲಿ ಮನೆಮಾತಾಯಿತು. ಗಾಮನಿಗೆ ಪಂದ್ಯಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಿತು.

’ಯಾರೇ ಆಗಲಿ,ನನ್ನೊಡನೆ ಐದು ನಿಮಿಷ ಸೆಣಸಬಲ್ಲರೇ?’

ಯಾವ ವಿಧಾನವಾದರೂ ಚಿಂತೆಯಿಲ್ಲ

 

ಗಾಮ ಭಾರತ ದೇಶದವನು. ಆಗ ಭಾರತ ಇಂಗ್ಲಿಷರ ಕೈಯಲ್ಲಿತ್ತು. ದಾಸ್ಯದ ದೇಶದಿಂದ ಬಂದವನೊಬ್ಬ ಪ್ರಭುಗಳ ದೇಶದಲ್ಲಿ ತನ್ನ ಸಮನಾದ ಜಟ್ಟಿ ಇಲ್ಲ ಎಂದು ವಿಜಯದುಂದುಭಿ ಬಾರಿಸುತ್ತಾನೆ ಎಂಬುದು ಸ್ಪಷ್ಟವಾದಾಗ, ವ್ಯವಸ್ಥಾಪಕರಿಗೆ ತಳಮಳವಾಗಿರಬೆಕು. ಹೇಗಾದರೂ ಮಾಡಿ ಗಾಮ ಪಂದ್ಯಗಳಲ್ಲಿ ಭಾಗವಹಿಸದ ಹಾಗೆ ಮಾಡಬೇಕು ಎಂದು ಅವರ ಆಸೆ. ಗಾಮನಿಗೆ ಕಡೆಯದಾಗಿ ಒಂದು ಅಡಚಣೆಯನ್ನೊಡ್ಡಲು ಹವಣಿಸಿದರು. “ನೀನು ಯಾವ ವಿಧಾನದ (ಸ್ಟೈಲಿನ) ಕುಸ್ತಿ ಮಾಡುತ್ತಿ?” ಎಂದು ಗಾಮನನ್ನು ವ್ಯವಸ್ಥಾಪಕರಲ್ಲೊಬರು ಕೇಳಿದರು. ಗಾಮನು ಭಾರತೀಯ ವಿಧಾನದಲ್ಲಿ ಕುಸ್ತಿಮಾಡುತ್ತೇನೆ ಎನ್ನುತ್ತಾನೆ, ಆಗ “ಆ ವಿಧಾನದಲ್ಲಿ ಕುಸ್ತಿಮಾಡುವವರು ಇಲ್ಲಿ ಯಾರೂ ಇಲ್ಲ’ ಎಂದು ಹೇಳಬಹುದು. ಪಂದ್ಯಗಳಲ್ಲಿ ಗಾಮನು ಭಾಗವಹಿಸದಂತೆ ಮಾಡಬಹುದು ಎಂಬ ಹಂಚಿಕೆ ಆ ವ್ಯವಸ್ಥಾಪಕರಲ್ಲಿತ್ತೋ ಏನೋ!

ಆದರೆ ಗಾಮನ ಉತ್ತರ ಕೇಳಿ ಅವರು ಅಪ್ರತಿಭರಾದರು. “ಯಾರು ಯಾವ ವಿಧಾನದಲ್ಲಿ ನನ್ನ ಮೇಲೆ ಕುಸ್ತಿ ಮಾಡಿದರೂ ನನ್ನ ಅಭ್ಯಂತರವಿಲ್ಲ. ನನ್ನ ವಿಧಾನದಲ್ಲಿ ಎಲ್ಲ ವಿಧಾನದವರನ್ನೂ ಸೋಲಿಸಬಲ್ಲೆನಂಬ ವಿಶ್ವಾಸ ನನಗಿದೆ” ಗಾಮ ಉತ್ತರಿಸಿದ.

ಇನ್ನು ಗಾಮನನ್ನು ಪಂದ್ಯದಲ್ಲಿ ಸೇರಿಸದೆ ಅನ್ಯ ಮಾರ್ಗವೇ ವ್ಯವಸ್ಥಾಪಕರಿಗೆ ಇಲ್ಲದಾಯಿತು.

ದೈತ್ಯಾಕಾರದ ಎದುರಾಳಿ

೧೯೧೦ರ ಸೆಪ್ಟೆಂಬರ್ ಹತ್ತನೆಯ ದಿನಾಂಕ. ಇ.ರೋಲರ್ ಎಂಬಾತ ಅಮೆರಿಕದ ಪ್ರಸಿದ್ಧ ಜಟ್ಟಿ, ಈತನನ್ನು ಗಾಮ ಎದುರಿಸಬೇಕಾಯಿತು. ಕೇವಲ ಹದಿನೈದು ನಿಮಿಷಗಳಲ್ಲಿ ಗಾಮ ರೋಲರ್‌ನನ್ನು ಹದಿಮೂರು ಸಾರಿ ಎತ್ತಿಹಾಕಿದ. ಲೀಲಾಜಾಲವಾಗಿ ಜಯಗಳಿಸಿದ, ಗಾಮನ ಭೀಮಶಕ್ತಿ ನೆರೆದ ಮಲ್ಲರೆಲ್ಲರ ಮೇಲೆ ವಿಶೇಷ ಪರಿಣಾಮ ಉಂಟುಮಾಡಿ ಅತಿ ಬಲಿಶಾಲಿಯೂ, ಕುಸ್ತಿಯಲ್ಲಿ ಬಹಳ ನಿಪುಣನೂ ಆದವನು ಮಾತ್ರ ಗಾಮನ ಮುಂದೆ ನಿಲ್ಲಬಲ್ಲನೆಂಬ ಅಭಿಪ್ರಾಯ ಮೂಡಿಸಿತು.

ಅಂದಿನ ದಿನಗಳಲ್ಲಿ ಜೆಬಿಸ್ಕೊ ಎಂಬಾತ ಜಗತ್ತಿನ ಅತಿ ಬಲಶಾಲಿ, ಉಚ್ಚ ಶ್ರೇಣಿಯ ಕುಸ್ತಿಗಾರ ಎಂದು ಪ್ರಸಿದ್ಧನಾಗಿದ್ದ. ಅವನು ಆಸ್ಟ್ರೇಲಿಯಾದವನು. ಮಹಾಮಲ್ಲನಲ್ಲದೆ ಮಹಾ ಕಾಯನೂ ಆಗಿದ್ದ. ಅವರತ್ತು ಅಂಗುಲಗಳ ಅಳತೆಯ ವಿಶಾಲ ವಕ್ಷ. ಇಪ್ಪತ್ತು ಅಂಗುಲಗಳ ದಪ್ಪದ ಮೇಲ್ತೋಳುಗಳು. ಹದಿನೆಂಟು ಅಂಗುಲ ದಪ್ಪದ ಮುಂಗೈಗಳು. ಅವನ ತೂಕ ಸುಮಾರು ಮುನ್ನೂರ ನಲವತ್ತು ಪೌಂಡ್‌ಗಳು. ಗಾಮನ ತೂಕ ಕೇವಲ ಇನ್ನೂರ ನಲವತ್ತು ಪೌಂಡ್. ಜೆಬಿಸ್ಲೋ ಗಾಮನನ್ನು ಗಣನೆಗೇ ತರಲಿಲ್ಲ. ಶಕ್ತಿ ಮತ್ತು ತೂಕಗಳಲ್ಲಿ ಗಾಮನನ್ನೂ ಮೀರಿ ನಿಂತ ಜೆಬಿಸ್ಕೊಗೆ ಗಾಮನ ಬಗ್ಗೆ ತಾತ್ಸಾರ.

ಜೆಬಿಸ್ಕೊ-ಗಾಮರ ಕುಸ್ತಿ ಪಂದ್ಯ ಒಂದು ಅಪೂರ್ವ ಪಂದ್ಯ ಎಂದು ಜನರಿಗೆಲ್ಲ ಎನ್ನಿಸಿತ್ತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಲಂಡನ್ನಿನ ಜನಸ್ತೋಮ ಕುಸ್ತಿ ಪಂದ್ಯವನ್ನು ವೀಕ್ಷಿಸಲು ಕಾದು ಕುಳಿತರು. ಜೆಬಿಸ್ಕೊ ಎದುರು ಕೇವಲ ಇನ್ನೂರ ನಲವತ್ತು ಪೌಂಡ್ ತೂಕದ ಗಾಮ ಮೇಲೆತ್ತಿ ನಿಂತ ದೃಶ್ಯ ಸಹಜ ಕುತೂಹಲ ಕೆರಳಿಸಿತ್ತು. ಗಾಮನ ಜೆಬಿಸ್ಕೊನನ್ನು ಗೆಲ್ಲುವುದಿರಲಿ, ಅವನ ಕೈಯಿಂದ ಪಾರಾಗಿ ಹೊರಗೆ ಬರುವನೇ ಎಂದು ಬಹು ಮಂದಿಗೆ ಸಂಶಯ.

ಜಗಜಟ್ಟಿ ಗಾಮ

೧೯೧೦ನೇ ಇಸವಿ ಸೆಪ್ಟಂಬರ್ ಹನ್ನೆರಡನೆಯ ದಿನ. ಗಾಮ-ಜೆಬಿಸ್ಕೊರ ಕಾಳಗ. ಪೂರ್ವ-ಪಶ್ಚಿಮ ದೇಶಗಳ ನಡುವಣ ಶಕ್ತಿ ಮತ್ತು ಕುಸ್ತಿವಿದ್ಯೆಯ ಚಾಕಚಕ್ಯತೆಯ ನಿರ್ಣಯವೇ ಆಗಿತ್ತು. ವರ್ಣಗರ್ವದ ಗರ ಬಡಿದಿದ್ದ ಬಿಳಿಯರು ಗಾಮನ ಸೋಲನ್ನೇ ಹಾರೈಸುತ್ತಿದ್ದುದ್ದು ಸಹಜವೇ ಆಗಿತ್ತು.

ಪಂದ್ಯವು ಪ್ರಾರಂಭವಾಯಿತು.

ಕೈ ಕೈ ಮಿಲನವಾಗುತ್ತಿದ್ದಂತೆಯೇ, ಗಾಮನ ತೋಳಶಕ್ತಿಯ ಅರಿವು ಜೆಬಿಸ್ಕೊಗೆ ಆಯಿತು. ಊರಿನಿಂತ ಗಾಮನ ತೊಡೆಗಳ ಕಸುವು ಅರ್ಥವಾಯಿತು. ನಿಂತು ಪ್ರತಿಸ್ಪಧಿಯನ್ನು ಎದುರಿಸುವ ಭಾರತೀಯ ಪದ್ಧತಿಯ ಕುಸ್ತಿಯಲ್ಲಿ ಗಾಮನು ಎಷ್ಟು ನಿಷ್ಣಾತನೆಂಬುದೂ ಪಂದ್ಯ ಆರಂಭವಾದ ಕೆಲವು ಕ್ಷಣಗಳಲ್ಲಿ ಅನುಭವಿಯಾದ ಜೆಬಿಸ್ಕೊಗೆ ಹೊಳೆಯಿತು. ಸಿಕ್ಕಿದ ಯಾವುದೇ ಅವಕಾಶವನ್ನೂ ಗಾಮನು ಬಿಡುವುದಿಲ್ಲವೆಂದು ಆತನಿಗೆ ಅರ್ಥವಾಯಿತು. ಅವನು ಗಾಮನ ಮುಂದೆ ಹೆಚ್ಚು ಕಾಲ ನಿಲ್ಲುವುದೇ ಅಪಾಯವೆಂಬ ತೀರ್ಮಾನಕ್ಕೆ ಬಂದ. ಮತ್ತೆ ಮತ್ತೆ ಕೆಳಗೆ ಕೂಡಲು ಆರಂಭಿಸಿದ, ಶಕ್ತಿ, ತೂಕ ಹಾಗೂ ಗಾತ್ರಗಳು ಎರಕ ಹೊಯ್ದಂತಿದ್ದ ಈ ಭೀಮಕಾಯನು ಕೆಳಗೆ ಉಡದಂತೆ ಕಚ್ಚಿ ಕುಳಿತಾಗ ಅಲ್ಲಾಡಿಸಲು ಗಾಮನಿಗೆ ಆಗಲಿಲ್ಲ. ಕೆಳಗಡೆ ಕುಳಿತ ಜೆಬಿಸ್ಕೊ ಮೇಲೇಳಲು ಗಾಮ ಅವಕಾಶ ಕೊಟ್ಟು ಅವನ ಮೇಲೆ ಪಟ್ಟನ್ನು ಪ್ರಯೋಗಿಸಬೇಕೆನ್ನುವಷ್ಟರಲ್ಲಿ ಪುನಃ ಜೆಬಿಸ್ಕೊ ಕೆಳಗಡೆ ಕುಳಿತುಬಿಡುತ್ತಿದ್ದ. ಹೀಗೆ ಸುಮಾರು ಮೂರು ಘಂಟೆಗಳ ಕಾಲ ಈ ಕುಸ್ತಿ ನಡೆಯಿತು. ತಮ್ಮ ನೆಚ್ಚಿನ ಕುಸ್ತಿಗಾರನು ಮೂರು ಘಂಟೆಗಳ ಕಾಲ ಕೆಳಗಡೆ ಕೂಡುವುದರಲ್ಲೇ ಕಳೆದಿದ್ದುದರಿಂದ ಪ್ರೇಕ್ಷಕರಿಗೂ-ಅವರಲ್ಲಿ ಬಹು ಮಂದಿ ಬಿಳಿಯರೇ ಆದರೂ-ಬೇಸರವಾಯಿತು. ಹೀಗೆ ಪರ್ಯವಸಾನವಾದ ಈ ಪಂದ್ಯದಿಂದ ಗಾಮನ ಹೆಸರು ದಿಗಂತಕ್ಕೇರಿತು.

ಅಂದಿನ ಪಂದ್ಯದಲ್ಲಿ ಗಾಮನದೇ ಮೇಲ್ಗೈ ಯಾಗಿತ್ತೆಂಬುದು ನಿರ್ವಿವಾದವಾದರೂ ಪಂದ್ಯದಲ್ಲಿ ಗೆದ್ದವರು ಯಾರೆಂಬುದು ತೀರ್ಮಾನವಾಗಲಿಲ್ಲ. ಪಂದ್ಯ ಮರುದಿನ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ಸಾರಿದರು.

ಮರುದಿನವೂ ಬಂದಿತು. ಮತ್ತೆ ಸಾವಿರಾರು ಜನ ಸೇರಿದರು.

ಆದರೆ ಜೆಬಿಸ್ಕೊನ ಸುಳಿವೇ ಇಲ್ಲ.

ಗಾಮನ ಮೇಲೆ ಸೆಣಸಲು ಎದುರಾಳಿ ಯಾರೂ ಬರಲಿಲ್ಲ.

ಜಗಜಟ್ಟಿಯ ಬಿರುದಿನ ನಡುಪಟ್ಟಿ ಗಾಮನಿಗೆ ಸೇರಿತು.

ಪಾಶ್ಚಾತ್ಯ ಮಲ್ಲರನ್ನೆಲ್ಲ ಗೆದ್ದು ಮೆರೆದ ಜೆಬಿಸ್ಕೊನನ್ನು ಹಣ್ಣು ಮಾಡಿದ ಮೇಲೆ ಗಾಮನ ಸವಾಲಿಗೆ ಯಾರೂ ಮಾರುತ್ತರ ನೀಡಲಿಲ್ಲ. ಗಾಮನ ಕೀರ್ತಿ ಜಗತ್ತಿನಲ್ಲೆಲ್ಲ ವ್ಯಾಪಿಸಿ ಭಾರತದಲ್ಲಿ ಮನೆಮಾತಾಯಿತು. ಗಾಮನನ್ನು

ಸ್ವಾಗತಿಸಲು ಭಾರತೀಯರು ಕಾತುರರಾದರು. ತಾಯ್ನಾಡಿಗೆ ಅವನು ಬಂದಾಗ ಗಾಮನಿಗೆ ವೀರೋಚಿತ ಸ್ವಾಗತ ದೊರೆಯಿತು. ದೇಶದ ಮೂಲೆ ಮೂಲೆಗಳಿಂದ ಶುಭ ಸಂದೇಶಗಳು ಸುರಿದವು. ಪಾಟಿಯಾಲ ಮಹಾರಾಜರು ಗಾಮ ಮತ್ತು ಅವನ ಪರಿವಾರದವರಿಗೆ ಆಶ್ರಯ ಕೊಟ್ಟರು. ಆ ಸ್ಥಾನದ ಮಲ್ಲನನ್ನಾಗಿ ಸನ್ಮಾನಿಸಿದರು.

ಸೋಲನ್ನೆ ಕಾಣದ ಮಲ್ಲ ಗಾಮ

ಮತ್ತೆ ಬಂದ ಜೆಬಿಸ್ಕೊ

ಪಾಶ್ಚಾತ್ಯ ದೇಶಗಳ ಶ್ರೇಷ್ಠ ಕುಸ್ತಿಗಾರನಾದ ಜೆಬಿಸ್ಕೊ ಇಂಗ್ಲೆಂಡಿನಲ್ಲಿ ಗಾಮನ ಜೊತೆಯಲ್ಲಿ ಸೆಣಸಿ ಮುಖ ಭಂಗಿತನಾದುದು ಅವನನ್ನು ಕೊರೆಯುತ್ತಿತ್ತು. ೧೯೧೦ ರಲ್ಲಿ ಆದ ಅವಮಾನವನ್ನು ಹೇಗಾದರೂ ತೊಡೆದುಹಾಕಲು ಜೆಬಿಸ್ಕೊ ನಿರ್ಧರಿಸಿದ. ಹಲವು ವರ್ಷಗಳ ಕಾಲ ಅದಕ್ಕಾಗಿ ಶಾರೀರಿಕ ಸಿದ್ಧತೆ ಮತ್ತು ಮಾನಸಿಕ ಸಿದ್ಧತೆ ಮಾಡಿಕೊಂಡ. ಭಾರತಕ್ಕೆ ಬಂದು ಗಾಮನನ್ನು ತನ್ನ ಮೇಲೆ ಎರಡನೇ ಬಾರಿ ಕುಸ್ತಿಮಾಡಲು ಹದಿಮೂರು ವರ್ಷಗಳ ನಂತರ ಆಮಂತ್ರಿಸಿದ.

ಕಿಕ್ಕಿರಿದ ಜನಸ್ತೋಮದ ಮುಂದೆ ಮುಂಬಯಿಯಲ್ಲಿ ಕುಸ್ತಿ ಪ್ರಾರಂಭವಾಯಿತು. ಇಂಗ್ಲೆಂಡಿನಲ್ಲಾದ ಅನುಭವದಿಂದ ಗಾಮ ಪಾಠ ಕಲಿತಿದ್ದ. ಸ್ವಲ್ಪ ತಡವಾದರೂ ಜೆಬಿಸ್ಕೊ ಕುಳಿತುಕೊಳ್ಳಬಹುದೆಂದು ಎಣಿಸಿ ಕೈಕೈ ಮಿಲನವಾಗುತ್ತಿದ್ದಂತೆಯೇ ಕೇವಲ ಮೂರು ನಿಮಿಷಗಳಲ್ಲಿ ಗಾಮ ಜೆಬಿಸ್ಕೊನನ್ನು ಸೋಲಿಸಿದ.

ಯಾರೋ ಒಬ್ಬರು ಜೆಬಿಸ್ಕೊನನ್ನು “ಗಾಮನನ್ನು ಕುರಿತು ನಿನ್ನ ಅಭಿಪ್ರಾಯ ಏನು?” ಎಂದು ಕೇಳಿದರಂತೆ. ಆ ಕ್ರೀಡಾಪಟು ತನ್ನ ಯೋಗ್ಯತೆಗೆ ತಕ್ಕ ಧಿರೋದಾತ್ತ ಗಂಭೀರ ಉತ್ತರ ಕೊಟ್ಟನಂತೆ: “ಗಾಮ! ಅವನೊಬ್ಬ ಸಿಂಹ!”

ಗಾಮನ ಸಮಕಾಲೀನರಾದ ಗುಂಗಾ ಪೈಲ್ವಾನ್, ಬೋಲಾ ಪೈಲ್ವಾನ್, ಗೋಬರ್ ಬಾಬು, ಜತೀಂದ್ರನಾಥ ಗುಹ, ವೆಂಕಪ್ಪ ಬರೂಡ್, ತಡಾಕೆ ಮಲ್ಲಪ್ಪ ಮೊದಲಾದವರು ಪ್ರಸಿದ್ಧ ಮಲ್ಲರು. ಅವರ ಚಟುವಟಿಕೆ ಕೇವಲ ಅವರವರ ಪ್ರಾಂತಗಳಿಗೆ ಮಾತ್ರ ಸೀಮಿತವಾಗಿತ್ತು.

ಪಾಟಿಯಾಲಾ, ಕೊಲ್ಲಾಪುರ, ಮೈಸೂರು ಸಂಸ್ಥಾನಗಳ ಮಹಾರಾಜರುಗಳು ಮೊದಲಿನಿಂದಲೂ ಕುಸ್ತಿ ವಿದ್ಯೆಗೆ ಮಹಾಶ್ರಯ ಕೊಟ್ಟವರು. ಹಿಂದಿನ ಕಾಲದಲ್ಲಿ ಅದ್ವಿತೀಯ ಮಲ್ಲರಾದ ಮೈಸೂರಿನ ಮಹಾರಾಜ ಕಂಠೀರವ ನರಸರಾಜ ಒಡೆಯವರ್‌ರವರ ಹೆಸರನ್ನು ನಾವು ಮರೆಯುವುದೇ ಸಾಧ್ಯವಿಲ್ಲ. ಆದರೆ ಈ ಸಂಸ್ಥಾನಗಳ ವೀರರೆಲ್ಲ ರಾಜಾಶ್ರಯದಲ್ಲಿದ್ದು ರಾಜರ ಆಸ್ಥಾನಗಳಿಗೆ ಭೂಷಣರಾಗಿ ಯಾರಾದೂ ಹೊರ ಪ್ರಾಂತಗಳ ಮಲ್ಲರು ಬಂದಾಗ ತಮ್ಮ ತಮ್ಮ ಸಂಸ್ಥಾನಗಳ ಮರ್ಯಾದೆಯನ್ನು ಕಾಪಾಡಲು ಕುಸ್ತಿ ಮಾಡುತ್ತಿದ್ದರು. ಆದರೆ ತಮ್ಮ ತಮ್ಮ ಪ್ರಾಂತಗಳಿಂದ ಹೊರಗಡೆಗೆ ಹೋಗಿ ತಮ್ಮ ಈ ಕುಸ್ತಿ ಚಟುವಟಿಕೆಯನ್ನು ಈ ಮಲ್ಲರು ವಿಸ್ತರಿಸಿರಲಿಲ್ಲ. ಶರತ್ ಕುಮಾರ ಮಿತ್ರರ ಸಹಾಯ ದೊರಕದಿದ್ದಲ್ಲಿ ಗಾಮನ ಚಟುವಟಿಕೆ ಅಥವ ಪ್ರತಿಷ್ಠೆ ಕೇವಲ ಪಂಜಾಬಿಗೆ ಮಾತ್ರ ಸೀಮಿತವಾಗುತ್ತಿತ್ತೋ ಏನೋ.

ಇಂತಹ ಖ್ಯಾತಿ ಪಡೆದ ಗಾಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರಿಗೆ ಸಲ್ಲಿಸುತ್ತಿದ್ದ ಗೌರವ ಸ್ಮರಣೀಯವಾದುದು. ಕಾಶಿ ಹಿಂದು ವಿಶ್ವವಿದ್ಯಾಲಯಕ್ಕೆ ಒಮ್ಮೆ ಆತ ಭೇಟಿ ಕೊಟ್ಟ. ಆತನ ಮಲ್ಲಯುದ್ಧ ಪ್ರದರ್ಶನವಾಯಿತು. ಮದನಮೋಹನ ಮಾಳವೀಯರು ಅವನನ್ನು ಹೊಗಳಿದರು. ಗಾಮನ ಮಾತುಗಳನ್ನು ಕೇಳಬೇಕೆಂದು ವಿದ್ಯಾರ್ಥಿಗಳಿಗೆ ಆಸೆ. ಗಾಮ ಎದ್ದು ನಿಂತು ಹೇಳಿದ: “ನಾವಾದರೋ ಕೇವಲ ಪೈಲ್ವಾನರನು ಎತ್ತಿ ಒಗೆಯುತ್ತೇವೆ. ಮಾಳವೀಯರು ಬ್ರಿಟಿಷ್ ಸರ್ಕಾರವನ್ನೇ ಎತ್ತಿ ಒಗೆದಿದ್ದಾರೆ!”

ಹರ್ಬಾನ್ ಸಿಂಗನೊಂದಿಗೆ ವಿರಸ

ಗಾಮನಿಗೆ ದೊರೆತ ಪ್ರೋತ್ಸಾಹದಂತೆ ಇತರ ಪ್ರದೇಶಗಳ ಮಲ್ಲರಿಗೆ ದೊರೆತಿದ್ದರೆ, ಅವರ ಶಕ್ತಿ ಸಾಮರ್ಥ್ಯಗಳು ವ್ಯಾಪಕವಾಗಿ ಹಬ್ಬುವಂತೆ ಮಾಡಿದ್ದರೆ ಭಾರತದಲ್ಲಿ ಗಾಮನಂತಹ ಇನ್ನಷ್ಟು ಮಂದಿ ಮಲ್ಲರು ಸಿದ್ಧರಾಗುತ್ತಿದ್ದರೇನೋ! ಹರ್ಬಾನ್ ಸಿಂಗನು ಮಾತ್ರ ದೇಶೀಯ ಹಾಗೂ ಅಂತರರಾಷ್ಟ್ರೀಯ ಕೀರ್ತಿಯನ್ನೂ ಪಡೆದಿದ್ದ ಹರ್ಬಾನ್ ಸಿಂಗನಿಗೆ ‘ಓರಿಯಂಟಲ್ ಛಾಂಪಿಯನ್’ (ಪೌರ್ವಾತ್ಯ ದೇಶಗಳ ಅಗ್ರಗಣ್ಯ ಕುಸ್ತಿಗಾರ) ಎಂಬ ಹೆಸರು ಬಂದಿತು.

ಹರ್ಬಾನನಿಗೆ ಬಂದ ಈ ಕೀರ್ತಿಯನ್ನು ಕಂಡು ಹಲವರಿಗೆ ಹೊಟ್ಟೆ ಉರಿಯಿತು. ಕೆಲವು ಪತ್ರಿಕೆಗಳಲ್ಲಿ ಹರ್ಬಾನ್ ಸಿಂಗನ ಬಗ್ಗೆ ಅವಹೇಳನ ಪ್ರಾರಂಭವಾಯಿತು. “ಹರ್ಬಾನ್ ಸಿಂಗ್ ಗಾಮನ ಒಂದು ತೊಡೆಯನ್ನೂ ಅಲುಗಾಡಿಸಲಾರ, ಕೊಂಕಿಸಲಾರ”- ಹೀಗೆಲ್ಲ ಟೀಕೆಗಳು ಬಂದವು. ಸ್ವಭಾವದಿಂದ ಹರ್ಬಾನ್ ಸಿಂಗ್ ವಿನಯಶಾಲಿ, ಗಂಭೀರ ಪ್ರವೃತ್ತಿಯವನು. ಆದರೆ ಈ ಚುಚ್ಚು ಮಾತುಗಳಿಂದ ಆತ ಕೆರಳಿ ಗಾಮನನ್ನು ಕುಸ್ತಿಗೆ ಬರಲು ಸವಾಲು ಹಾಕಿದ.

ಬೇಡವೆಂದರೂ

ಹರ್ಬಾನ್ ಸಿಂಗನನ್ನು ಕಂಡರೆ ಗಾಮನಿಗೆ ಅಪಾರ ಗೌರವ. ಸಿಂಗನ ಮೇಲೆ ಸಣ್ಣಜನ ಮಾಡಿದ ಅಪಪ್ರಚಾರಕ್ಕೆ ಹಾಗೂ ಅದರಿಂದ ಹರ್ಬಾನ್ ಸಿಂಗನ ಮೇಲಾದ ಪರಿಣಾಮಕ್ಕೆ ಗಾಮ ಬಹಳ ನೊಂದುಕೊಂಡ. ಈ ಸಂದರ್ಭದಲ್ಲಿ ಗಾಮ ಹೇಳಿದ ಮಾತುಗಳು ಉಚಿತ ಮಾತ್ರವಲ್ಲ. ಲೋಕೋತ್ತರವಾದವು. “ಪಾಶ್ಚಾತ್ಯ ವಿಧಾನದಲ್ಲಿ ಕುಸ್ತಿ ಪರಿಶ್ರಮ ಹೊಂದಿ ಕೀರ್ತಿ ಪಡೆದಿರುವ ನೀವು ಮತ್ತು ಪೌರ್ವಾತ್ಯ ಪದ್ಧತಿಯಲ್ಲಿ ಪರಿಶ್ರಮ ಪಡೆದಿರುವ ನಾನು, ಇಬ್ಬರೂ ಭಾರತಮಾತೆಯ ಮಕ್ಕಳು, ಆಕೆಯ ಎರಡು ಕಣ್ಣುಗಳು ಇದ್ದ ಹಾಗೆ. ಯಾರು ಸೋತು ಯಾರು ಗೆದ್ದರೂ ಮಾತೆಗೆ ಒಂದು ಕಣ್ಣು ಹೋದ ಹಾಗೆ ಅಲ್ಲವೇ?” ಎಂದು ಹರ್ಬಾನ್ ಸಿಂಗನನ್ನು ಕುರಿತು ಗಾಮ ಹೇಳಿದ. ಈ ಮಾತು ವೀರೋಚಿತವಾದುದು. ಆದರೆ ಆತ್ಮಗೌರವಕ್ಕೆ ಪೆಟ್ಟು ತಿಂದ ಹರ್ಬಾನ್ ಸಿಂಗನಿಗೆ ಈ ಮಾತುಗಳು ಸಮಾಧಾನ ತರಲಿಲ್ಲ.

ಹರ್ಬಾನ್ ಸಿಂಗನಿಗೆ ಗಾಮ ಮೊದಲು ಹಮೀದ್ ಪೈಲ್ವಾನನ ಮೇಲೆ ಕುಸ್ತಿ ಮಾಡಲು ಹೇಳಿದ. ತನಗೆ ಈಡು ಜೋಡಿಲ್ಲದ ಹಮೀದ್ ಪೈಲ್ವಾನನ ಮೇಲೆ ಕುಸ್ತಿ ಮಾಡಲು ಹರ್ಬಾನ್ ಸಿಂಗ್ ಒಪ್ಪಲಿಲ್ಲ. ಕೊನೆಗೆ ಇಮಾಂ ಬಕ್ಷನ ಮೇಲೆ ಕುಸ್ತಿ ಮಾಡಲು ಹರ್ಬಾನ್ ಸಿಂಗ್ ಒಪ್ಪಲಿಲ್ಲ. ಕೊನೆಗೆ ಇಮಾಂ ಬಕ್ಷನ ಮೇಲೆ ಕುಸ್ತಿ ಮಾಡಲು ಹಬರ್ನಾನ್ ಸಿಂಗನನ್ನು ಗಾಮ ಒಪ್ಪಿಸಿದ.

ಮುಂಬಯಿಯಲ್ಲಿ ಈ ಪಂದ್ಯ ನಡೆಯಿತು. ಹರ್ಭಾನ್ ಸಿಂಗನಿಗೆ ಸೋಲಾಯಿತು. ಕುಸ್ತಿಗೆ ನಿಂತ ಕೂಡಲೆ ಹರ್ಬಾನ್ ಸಿಂಗನು ಕತ್ತಿನ ಮೇಲೆ ಹಾಕಿದ ಏಟಿಗೆ ಇಮಾಂ ಬಕ್ಷ್ ಒಂದೆರಡು ಹೆಜ್ಜೆ ಹಿಂದಕ್ಕೆ ಹೋಗಿ ತತ್ತರಿಸಿದ. ಕೂಡಲೆ ನೆರೆದ ಜನಸ್ತೋಮ ಕೂಗಾಡಿತು. ಅದೇ ರೀತಿ ಏಟನ್ನು ಇಮಾಂ ಬಕ್ಷನು ಹರ್ಬಾನ್ ಸಿಂಗನ ಕತ್ತಿನ ಮೇಲೆ ಹಾಕು ಪ್ರಯತ್ನಿಸಿದಾಗ ಅನಾಯಾಸವಾಗಿ ಹರ್ಬಾನ್ ಸಿಂಗ್ ತಪ್ಪಿಸಿಕೊಂಡು ಮತ್ತೊಮ್ಮೆ ಪ್ರೇಕ್ಷಕರ ಪ್ರಶಂಸೆಗೆ  ಪಾತ್ರನಾದ. ಈ ಹೆಮ್ಮೆಯಲ್ಲಿ ಹರ್ಬಾನ್ ಮೈಮರೆತ. ಇಮಾಂ ಬಕ್ಷನ ನಿಂತು ಕುಸ್ತಿ ಮಾಡುವ ಭಾರತೀಯ ಪದ್ಧತಿಯ ಶ್ರೇಷ್ಠತೆ ಹರ್ಬಾನನಿಗೆ ಅರ್ಥವಾಗಿದ್ದರೂ ಪಾಶ್ಚಾತ್ಯ ಪದ್ಧತಿಯನ್ನು ಮೈಗೂಡಿಸಿಕೊಂಡಿದ್ದ ಈತ ನೇರವಾಗಿ ಇಮಾಂ ಬಕ್ಷನ ಮೇಲೇರಿ ಹೋದ. ಹೀಗೆ ಮೈಮರೆತಂತೆ ಏರಿ ಬರುತ್ತಿರುವ ಹರ್ಬಾನನ ವೇಗವನ್ನು ಉಪಯೋಗಪಡಿಸಿಕೊಂಡ ಇಮಾಂ ಬಕ್ಷ್ ಸಾಧಾರಣವಾದ ಒಂದು ಪೆಟ್ಟಿನಿಂದ ಹರ್ಬಾನ್ ಸಿಂಗನನ್ನು ಉರುಳಿಸಿದ. ಈ ಪೆಟ್ಟನ್ನು ಇಂಗ್ಲಿಷಿನಲ್ಲಿ ‘ಹಿಪ್ ತ್ರೋ’ ಎನ್ನುತ್ತಾರೆ. ಕನ್ನಡದಲ್ಲಿ ‘ಕಂಠೀರವ’ (ಪಟ್ಟು) ಎಂದು ಹೆಸರು. ಹರ್ಬಾನ್ ಸಿಂಗ್ ಬಿದ್ದ. ಆದರೆ ತೀರ್ಪುಗಾರರು ಕುಸ್ತಿ ಸರಿಯಾಗಿ ನಡೆಯಲಿಲ್ಲ ಎಂದರು. ಇಮಾಂ ಬಕ್ಷನು,

“ಪೈಲ್ವಾನರನ್ನೇ (ಹರ್ಬಾನ್ ಸಿಂಗನನ್ನೇ) ಕೇಳೀ” ಎಂದನಂತೆ; ಆಗ ಹರ್ಬಾನ್ “ನಾನು ಸೋತೆ” ಎಂದ.

ಹರ್ಬಾನ್ ಸಿಂಗನನ್ನು ಇಂತಹ ಘಟನೆಗೆ ಸಿಕ್ಕಿಸಿದ ಜನರ ಟೀಕೆಗಳಿಗೆ ಗಾಮ ಬಹಳ ನೊಂದುಕೊಂಡ.

ಕರ್ನಾಟಕದಲ್ಲಿ

೧೯೩೮-೩೯ ರಲ್ಲಿ ಗಾಮ ಮತ್ತು ಅವನ ಸಂಗಡಿಗರು ಬೆಂಗಳೂರಿಗೆ ಬಂದರು. ನ್ಯಾಷನಲ್ ಹೈಸ್ಕೂಲು ವ್ಯಾಯಾಮಶಾಲೆಗೆ ಭೇಟಿಕೊಟ್ಟಿದ್ದರು. ಸರಳ ಸ್ವಭಾವದ ಗಾಮ ಯಾರು ಎಲ್ಲಿಗೆ ಪ್ರೀತಿಯಿಂದ ಕರೆದರೂ ಹೋಗುತ್ತಿದ್ದ. ತಾನು ಜಗಜಟ್ಟಿಯಾದರೂ ಕಿರಿಯರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದ. ಬೆಂಗಳೂರಿನಲ್ಲಿ ದೊಡ್ಡ ಪೈಲ್ವಾನರು ಮತ್ತು ಕಿರಿಯ ಪೈಲ್ವಾನರ ಮೇಲೆ ಗಾಮ ತಾನೇ ಅವರವರ ಶಕ್ತಿ, ತೂಕಗಳ ಮಿತಿಗನುಸಾರವಾಗಿ ಕುಸ್ತಿ ಮಾಡಿ ಎಲ್ಲರನ್ನೂ ಸಂತೋಷಪಡಿಸಿದ.

ಗಾಮ ಮತ್ತು ಅವನ ಸಂಗಡಿಗರು ಬೆಂಗಳೂರಿನಿಂದ ಮೈಸೂರಿಗೆ ಹೋಗಿ ನಾಲ್ಮಡಿ ಕೃಷ್ಣರಾಜ ಒಡಯರ್‌ರವರ ಅತಿಥಿಗಳಾಗಿ ಹಲವು ದಿನ ಇದ್ದರು.

ಗೆಳೆಯರು

ಗಾಮ ಪರಿವಾರದಲ್ಲಿ ಗಾಮನನ್ನು ಬಿಟ್ಟರೆ ಬಲವಾದ ಕುಸ್ತಿಗಾರ ಗಾಮನ ಸಹೋದರ ಇಮಾಂ ಬಕ್ಷ್. ಗಾಮನಿಗಿಂತ ಎತ್ತರದ ಆಳು, ಬಲವಾದ ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದ್ದ ಇಮಾಂ ಬಕ್ಷ್ ಗಾಮನಂತೆ ಪ್ರಸಿದ್ಧಿಗೆ ಬರಲಿಲ್ಲ. ಅವನ ಕುಸ್ತಿವಿದ್ಯೆ ಅಷ್ಟಾಗಿ ಪ್ರಕಾಶಿಸಲಿಲ್ಲ. ಇಮಾಂ ಬಕ್ಷ್‌ನಿಗಿಂತ ಹಮೀದ್ ಪೈಲ್ವಾನ್ ಹೆಚ್ಚು ಕುಸ್ತಿಗಳನ್ನು ಮಾಡಿ ಹೆಸರು ಗಳಿಸಿದ್ದಾನೆ. ಗಾಮನ ಮೇಲೆ ಯಾರು ಕುಸ್ತಿ ಮಾಡಲು ಬಂದರೂ ಅವನ ಶಿಷ್ಯರಾದ ಹಮೀದ್ ಮತ್ತು ಇಮಾಂ ಬಕ್ಷರ ಮೇಲೆ ಕುಸ್ತಿ ಮಾಡಿ ಅವರನ್ನು ಗೆದ್ದು ಬರಬೇಕೆಂದು ಹೇಳುತ್ತಿದ್ದರು. ಆದರೆ ಯಾರೂ ಹಮೀದನನ್ನು ಗೆಲ್ಲಲಾಗುತ್ತಿರಲಿಲ್ಲ. ಈ ದೃಷ್ಟಿಯಿಂದ “ಗಾಮ ಜಗಜಟ್ಟಿಯಾದನು. ಆದರೆ ಆ ಪದವಿಯನ್ನು ಹಮೀದ್ ಜೋಪಾನವಾಗಿ ಕಾಯುತ್ತಿದ್ದ” ಎನ್ನಬಹುದು.

ಗಾಮನಿಗಿಂತ ಹಿಂದೆ ಕರೀಂ ಬಕ್ಷ್. ಗುಲಾಂ ಪೈಲ್ವಾನ್, ಗೋಬನರ್ ಬಾಬು ಮೊದಲಾದವರು ಜಗಜಟ್ಟಿಗಳಾಗಿದ್ದರು. ಇವರ ಹೆಸರುಗಳು ಜನರ ಜ್ಞಾಪಕದಲ್ಲಿ ಬಹಳ ಕಾಲ ಉಳಿಯಲಿಲ್ಲ. ಮುಂದಿನವರು ಜಟ್ಟಿಗಳಾಗಿ ಹಿಂದಿನವರ ಹೆಸರನ್ನು ಮುರಿದು ನಿಂತಿದ್ದರಿಂದ ಮತ್ತು ಗಾಮನಂತೆ ಜೀವನಪರ್ಯಂತ ಜಗಜಟ್ಟಿಯಾಗಿ ನಿಂತು ಜನರ ಸ್ಮೃತಿಪಟಲದ ಮೇಲೆ ನಿಲ್ಲಲಾರದೆ ಇದ್ದುದರಿಂದ ಜಗಜಟ್ಟಿಯೆಂದರೆ ಗಾಮನೇ ಎಂಬ ಅಭಿಪ್ರಾಯವು ಈವರೆಗೆ ಬೇರುಬಿಟ್ಟಿದೆ. ಗಾಮನ ಸ್ಥಾನಕ್ಕೆ ಏರಬಹುದಾಗಿದ್ದ ಹಮೀದ್ ಅದನ್ನು ಅಪೇಕ್ಷಿಸಿದ್ದರೆ ಗಾಮನ ಮೇಲೆಯೇ ಸವಾಲು ಮಾಡಬೇಕಿತ್ತು. ಹತ್ತಿರದ ಸಂಬಂಧಿಯೂ ಗುರುವೂ ಆದ ಗಾಮನ ಮೇಲೆ ಸವಾಲು ಹಾಕಬೇಕಿತ್ತು. ಅದು ಸಾಧ್ಯವಿರಲಿಲ್ಲ. ಅದಕ್ಕೆ ಬದಲು ಗಾಮನ ಜಗಜಟ್ಟಿಪಟ್ಟವನ್ನು ಕಾಯುವುದರಲ್ಲಿ ನಿರತನಾದ ಹಮೀದ್. ಈ ರೀತಿಯಲ್ಲಿ ಜೀವನದ ಕೊನೆಯವರೆಗೂ ಗಾಮನ ಜಗಜಟ್ಟಿ ಪದವಿಯನ್ನು ಯಾರೂ ಕಸಿಯಲಾಗಲಿಲ್ಲ.

ಸಾಧನೆ

ಗಾಮನ ಜೀವನದ ಉಸಿರೇ ವ್ಯಾಯಾಮ ಮತ್ತು ಮಲ್ಲಯುದ್ಧ. ಇದೊಂದು ಅನುಪಮ ಸಿದ್ಧಿ. ತೀವ್ರ ರೀತಿಯ ಸಾಧನೆಗೆ ಒಂದೇ ಮನಸ್ಸಿನಿಂದ ನಿಲ್ಲುವುದೇ ಒಂದು ಮಾರ್ಗ. ಈ ವೀರನ ಜೀವನದಲ್ಲಿ ಆನಂದ ವಿಹಾರಗಳಿಗೆ ಕಾಲಾವಕಾಶವಿರಲಿಲ್ಲ. ತನ್ನ ನಿತ್ಯ ಕಾರ್ಯಕ್ರಮಗಳಿಂದುಂಟಾಗುವ ಆನಂದವೇ ಆನಂದ. ಭಾರತೀಯ ಪದ್ಧತಿಯ ದಂಡೆ, ಬೈಠಕ್ ಗಳೇ. ಆದರೆ ಇವು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಬಳಲಿಕೆಯಿಲ್ಲದೆ ಏಕಪ್ರಕಾರ ವ್ಯಾಯಾಮ, ಗಂಟೆಗಟ್ಟಲೆ ಕುಸ್ತಿ ಅಭ್ಯಾಸ- ಇವು ನಿತ್ಯ ಕಾರ್ಯಕ್ರಮ.

ಸುಮಾರು ಕ್ರಿ.ಪೂ.೨೫೦೦ ರಲ್ಲಿಯೇ ಭಾರತದಲ್ಲಿ ಬಳಲಿದ ಶರೀರರಕ್ಕೆ ಎಣ್ಣೆ ಹಾಕಿ ತಿಕ್ಕಿ ಮಾಂಸಖಂಡಗಳಲ್ಲಿ ಮೃದುತ್ವ ಮತ್ತು ನವಚೇತನ ಉಂಟುಮಾಡುವ ಅಭ್ಯಾಸವಿತ್ತು. ಈ ಕಲೆ ಭಾರತದಿಂದ ಚೀನಾ ದೇಶಕ್ಕೆ ಹರಡಿ ಕ್ರಮೇಣ ಪ್ರಪಂಚದಾದ್ಯಂತ ಪಸರಿಸಿ ಈಗ ‘ಮಸಾಜ್’ ಎಂಬ ಹೆಸರಿನ ಒಂದು ವೈಜ್ಞಾನಿಕ ಕಲೆಯೇ ಆಗಿದೆ. ಈ ಕಾರ್ಯಕ್ರಮವು ಭಾರತೀಯ ಗರಡಿಗಳಲ್ಲಿರುವ ಅಭ್ಯಾಸದಂತೆ ಗಾಮನ ಸಮೂಹದಲ್ಲೂ ಬಹಳ ಪ್ರಮುಖವಾದ ಕಾರ್ಯಕ್ರಮವಾಗಿತ್ತು.

ಗಾಮನ ದಿನನಿತ್ಯದ ಆಹಾರಕ್ರಮವೂ ಕುತೂಹಲವನ್ನುಂಟು ಮಾಡುವುದೇ. ಶರೀರಕ್ಕೆ ತಂಪವನ್ನುಂಟು ಮಾಡಿ ಮಾಂಸಖಂಡಗಳ ಶಕ್ತಿ ವೃದ್ಧಿ ಮಾಡಬಲ್ಲ ಬಾದಾಮಿ ಬೀಜಗಳು ಎರಡು ಸೇರು, ಸುಮಾರು ನಲವತ್ತು ಸೇರುಗಳ ಮಾಂಸ ಹಾಗೂ ಸಣ್ಣಮೂಳೆಗಳ ಭಟ್ಟಿ ಇಳಿಸಿದ ರಸ. ಬಂಗಾರ ರೇಖಿನ ಮತ್ತು ಜಾತಿಮುತ್ತುಗಳ ಭಸ್ಮ ಲೇಹಗಳು, ಹತ್ತರಿಂದ ಹದಿನೈದು ಸೇರು ಹಾಲು ಮತ್ತು ಸೀಮಜ್ಜಿಗೆ ಇವು ಗಾಮನ ನಿತ್ಯದ ಆಹಾರ. ಜೊತೆಗೆ ಸುಟ್ಟ ಗೋಧಿರೊಟ್ಟಿಗಳು(ಸೂಖಾ ರೋಟಿ) ನಲವತ್ತು ವರ್ಷಗಳ ಹಿಂದಿನ ಆ ದಿನಗಳಲ್ಲಿ ಗಾಮನ ಆಹಾರಕ್ಕೆ ಪ್ರತಿನಿತ್ಯದ ವೆಚ್ಚ ಒಂದು ನೂರು ರೂಪಾಯಿಗಳಾಗುತ್ತಿತ್ತು. (ಅಂದರೆ ಇಂದಿನ ಸುಮಾರು ನಾಲ್ಕು ಐದು ನೂರು ರೂಪಾಯಿಗಳಿಗೂ ಮೀರಿತ್ತು.)

ಈ ನರವೀರನಿಗೆ ಭಾರತದಲ್ಲೆಲ್ಲ ರಾಜ ಮಹಾರಾಜರಿಂದ ಪ್ರಾರಂಭವಾಗಿ ಸಾಮಾನ್ಯದವರೆಗೆ ಎಲ್ಲರೂ ಆದರ, ಗೌರವ ತೋರಿಸಿದರು. ಜಾತಿ ಮತ ವಯಸ್ಸು ಭಾಷೆಗಳ ವ್ಯತ್ಯಾಸವಿಲ್ಲದೆ ಭಾರತೀಯರೆಲ್ಲ ಇವನನ್ನು ಮೆಚ್ಚಿಕೊಂಡರು.

ಒಂದು ವಿಷಾದದ ತೀರ್ಮಾನ

ಗಾಮನ ಜೀವನದ ಕಡೆಯ ಭಾಗದಲ್ಲಿ ಒಂದು ವಿಷಾದದ ಸಂಗತಿ ನಡೆಯಿತು. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸಾವಿರಾರು ವರ್ಷಗಳಿಂದ ಈ ದೇಶದ ಒಂದು ಭಾಗವಾಗಿದ್ದ ಪ್ರದೇಶ ಪ್ರತ್ಯೇಕವಾಯಿತು. ‘ಪಾಕಿಸ್ತಾನ’ ಎಂಬ ಹೆಸರನ್ನು ಇಟ್ಟುಕೊಂಡಿತು. ಗಾಮ ಪಾಕಿಸ್ತಾನದಲ್ಲಿ ನೆಲೆಸಲು ತೀರ್ಮಾನಿಸಿದ. ಈ ತೀರ್ಮಾನ ಇಂದಿಗೂ ಒಗಟೇ ಆಗಿದೆ. ಗಾಮ ಎಂದೂ ಭಾರತೀಯನಂತೆಯೇ ನಡೆದುಕೊಂಡಿದ್ದ. ಬ್ರಿಟಿಷ್ ಸರ್ಕಾರಕ್ಕೆ ಸಹ ಇವನ ಮೇಲೆ ಕಣ್ಣಿತ್ತು. ೧೯೧೯ರಲ್ಲಿ ಅಮೃತಸರದ ಜಲಿಯನ್‌ವಾಲಾ ಬಾಗಿನಲ್ಲಿ ಒಂದು ಸಭೆಗೆಂದು ಭಾರತೀಯರು ಸೇರಿದ್ದರು. ಬ್ರಿಟಿಷ್ ಸೈನಿಕರು ಅವರ ಮೇಲೆ ನಿರ್ದಯೆಯಿಂದ ಗುಂಡು ಹಾರಿಸಿ ಅನೇಕರನ್ನು ಕೊಂದರು. ಹಲವರಿಗೆ ಗಾಯಗಳಾದವು. ಈ ಸಂದರ್ಭದಲ್ಲಿ ದೇಶದಲ್ಲೆಲ್ಲ ಜನರು ಸರ್ಕಾರ ಮೃಗದಂತೆ ನಡೆದು ಕೊಂಡುದನ್ನು ಪ್ರತಿಭಟಿಸಿದರು. ಆ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಗಾಮನನ್ನು ಬಂಧಿಸಿ ಸೆರೆಮನೆಯಲ್ಲಿಟ್ಟಿತು. ಇಂತಹ ಗಾಮ ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಲು ಏಕೆ ತೀರ್ಮಾನಿಸಿದ ಎಂದು ಅರ್ಥವಾಗುವುದಿಲ್ಲ. ಭಾರತದಲ್ಲಿ ಆತನಿಗೆ ಅಪಾರ ಗೌರವ ದೊರೆತಿತ್ತು. ಭಾರತ ಎರಡು ಭಾಗವಾದ ಆ ದಿನಗಳಲ್ಲಿ ಅನೇಕರಿಗೆ ಸ್ಪಷ್ಟವಾಗಿ ಯೋಚಿಸುವುದೇ ಸಾಧ್ಯವಿರಲ್ಲಿಲ್ಲ. ಬಹಳ ಭಾವೋದ್ವೇಗಕ್ಕೆ ಒಳಗಾಗಿದ್ದರು. ಗಾಮ ಅಂತಹ ಉದ್ವೇಗದಲ್ಲಿ ತೀರ್ಮಾನ ಕೈಗೊಂಡನೋ ಏನೋ! ಅಂತೂ ಅವನ ಈ ನಿಶ್ಚಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ತೀರ್ಮಾನದಿಂದ ಅವನಿಗೂ ಒಳ್ಳೆಯದಾಗಲಿಲ್ಲ. ಭಾರತವನ್ನು ಬಿಟ್ಟು ಹೋದ ನಂತರ ಅವನ ಹೆಸರು ಹೆಚ್ಚು ಕೇಳಿಬರಲಿಲ್ಲ, ಬಡತನಕ್ಕೂ ಗುರಿಯಾದ.

ದುಃಖದ ಕಡೆಯ ದಿನಗಳು

ಗಾಮನಿಗೆ ಇರಲು ಒಂದು ಮನೆ, ತಿಂಗಳಿಗೆ ಸ್ವಲ್ಪ ಮಾಸಾಶನ ದೊರೆತವು. ಕಠೋರ ಸಾಧನೆಯಿಂದಲೂ ಅತಿ ಪ್ರಯಾಸದಿಂದಲೂ ಆತ ಜೀವನದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಕೀರ್ತಿಶಿಖರವನ್ನು ಏರಿದ್ದ. ಅಲ್ಲಿ ಆತ ಉಳಿಯಲಿಲ್ಲ. ಇದರ ಪರಿಣಾಮ ತನ್ನ ಮೇಲೆ ಮಾತ್ರವಲ್ಲದೆ ತನ್ನ ಪರಿವಾರದ ಮೇಲೂ ಆದುದು ಗಾಮನಿಗೆ ಅರಿವಾಯಿತು. ಗಾಮ ಜೀವನದಲ್ಲಿ ಇಟ್ಟ ದಿಟ್ಟ ಹೆಜ್ಜೆಯನ್ನು ಎಂದೂ ಹಿಂದೆಗೆದಿರಲಿಲ್ಲ. ಸೋಲನ್ನೇ ಕಂಡಿರಲಿಲ್ಲ. ಅಂತಹ ಮಾನನಿಧಿ ಗಾಮ. ಸೋತ ಮುಖದೊಡೆನೆ ಭಾರತಕ್ಕೆ ಹಿಂದಿರುಗಲಿಲ್ಲ. ತಾನು ಮಾಡಿದ ತೀರ್ಮಾನದ ಪರಿಣಾಮವನ್ನು ಸಂಯಮದಿಂದ ಅನುಭವಿಸಿದ.

ಗಾಮನ ಜೀವನದ ಕಡೆಯ ದಿನಗಳು ಬಹಳ ಕಷ್ಟದ ದಿನಗಳು. ಬಡತನ, ಅನಾರೋಗ್ಯ, ಮನಸ್ಸಿನ ಅಶಾಂತಿ ಎಲ್ಲಾ ಆತನನ್ನು ಕಾಡಿದವು. ತನ್ನ ಮೂಗಿನ ಮೇಲೆ ಕುಳಿತ ನೊಣವನ್ನು ಓಡಿಸಲು ಕೈ ಎತ್ತುವುದೂ ಕಷ್ಟವಾಯಿತು ಈ ಜಗಜಟ್ಟಿಗೆ. ಅವನ ಕಡೆಯ ದಿನಗಳಲ್ಲಿ ಪತ್ರಿಕಾಪ್ರತಿನಿಧಿಗಳು ಆತನನ್ನು ಕಂಡು, ಅವನ ಸ್ಥಿತಿಯನ್ನು ಪತ್ರಿಕೆಗಳಲ್ಲಿ ವಿವರಿಸಿದರು. ಆತನ ಚಿತ್ರಗಳೂ ಪತ್ರಿಕೆಗಳಲ್ಲಿ ಅಚ್ಚಾದವು. ಉಕ್ಕಿನ ಮೂರ್ತಿ, ಅಜೇಯ ಗಾಮ ಎಲುಬಿನ ಹಂದರವಾಗಿಹೋಗಿದ್ದ. ಪತ್ರಿಕೆಯ ಪ್ರತಿನಿಧಿಗಳು ಹೊರಡುವಾಗ ಗಾಮನಿಗೆ ನಮಸ್ಕರಿಸಿದರು; ಪ್ರತಿವಂದನೆ ಮಾಡಲು ಕೈ ಎತ್ತುವುದಕ್ಕೂ ಗಾಮನಿಗೆ ಆಗಲಿಲ್ಲ; ತುಂಬ ವಿಷಾದದಿಂದ ಆತ ಪ್ರತಿನಿಧಿಯ ಕ್ಷಮೆ ಬೇಡಿದನಂತೆ. ಚಿಂತೆ, ಕಷ್ಟ, ನಿಶ್ಶಕ್ತಿಗಳಲ್ಲಿ ಕಡೆಯ ದಿನಗಳನ್ನು ಕಳೆದ ಗಾಮ ಪಾಕಿಸ್ತಾನದಲ್ಲಿಯೇ ತೀರಿಕೊಂಡ.

ಗಾಮನಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಮಗ ಹುಟ್ಟಿದರೂ ಚಿಕ್ಕ ವಯಸ್ಸಿನಲ್ಲೆ ಹೋಗಿಬಿಟ್ಟ.

ಭಾರತದ ವೀರ ಪರಂಪರೆಯ

ಒಂದು ದೀಪ

ಭಾರತ ವೀರರ ತವರು, ಸಾವಿರಾರು ವರ್ಷಗಳಿಂದ ಇಲ್ಲಿ ಮಲ್ಲರ ಕಾಳಗದ ಪರಂಪರೆ ಇದೆ. ಕುಸ್ತಿಯನ್ನು ಒಂದು ಕಲೆಯನ್ನಾಗಿ ಮಾಡಿ ಹಲವು ವಿಶೇಷ ಪಟ್ಟುಗಳನ್ನು ಈ ದೇಶದ ಜಟ್ಟಿಗಳು ಹಿರಿಯರಿಂದ ಕಲಿತಿದ್ದಾರೆ. ಕಿರಿಯರಿಗೆ ಕಲಿಸಿದ್ದಾರೆ. ಕನ್ನಡ ನಾಡಿನ ಹನುಮಂತ ಮಲ್ಲರ ಅಭಿಮಾನದೇವತೆ. ಭೀಮ, ಕೀಚಕ ಮೊದಲಾದವರು ಮಲ್ಲಯುದ್ಧದಲ್ಲಿ ಪ್ರವೀಣರು ಎಂದು ಮಹಾಕಾವ್ಯಗಳಲ್ಲಿ ತಿಳಿಯುತ್ತದೆ. ಇಬ್ಬರ ನಡುವಿನ ಹೋರಾಟವನ್ನು ಹಿಂದಿನವರು ಮುಷ್ಟಿಯುದ್ಧ, ದೃಷ್ಟಿಯುದ್ಧ, ಮಲ್ಲಯುದ್ಧ, ಜಲುಯುದ್ಧ, ಬಾಹುಯುದ್ಧ-ಹೀಗೆ ವಿಂಗಡಿಸಿದ್ದರು. ಇವಕ್ಕೆ ಪಂಚಯುದ್ದಗಳು ಎಂದು ಹೆಸರು. ಮುಷ್ಟಿಯನ್ನು ಬಳಸಿ ಮಾಡುವ ಯುದ್ಧ ಮುಷ್ಟಿಯುದ್ಧ(ಇದನ್ನು ಈಗ ಬಾಕ್ಸಿಂಗ್ ಎಂದು ಕರೆಯುತ್ತಾರೆ) ತೋಳುಗಳನ್ನು ಮಾತ್ರ ಬಳಸಿ ಮಾಡುವುದು ಬಾಹುಯುದ್ಧ. ಮಲ್ಲಯುದ್ಧ ಈಗ ಕುಸ್ತಿ ಎಂದು ಪರಿಚಿತವಾಗಿದೆ. ಪ್ರತಿಸ್ಪರ್ಧಿಗಳು ಒಬ್ಬರನ್ನೊಬ್ಬರು ಕಣ್ಣಿನ ರೆಪ್ಪೆ ಮುಚ್ಚದೆ ದೃಷ್ಟಿಸಿ ನೋಡಬೇಕು. ಮೊದಲು ರೆಪ್ಪೆ ಹಾಕಿದವರು ಸೋತಂತೆ. ಇದು ದೃಷ್ಟಿಯುದ್ಧ. ಎದೆಯ ಮಟ್ಟದವರೆಗೂ ನೀರಿನಲ್ಲಿ ನಿಂತು ಒಬ್ಬರಿಗೊಬ್ಬರು ನೀರನ್ನು ಎರಚುವುದು ಜಲಯುದ್ಧ; ಮೊದಲು ಮುಖ ತಿರುಗಿಸಿದವರು ಸೋತಂತೆ. ಹೀಗೆ ನಮ್ಮ ಪೂರ್ವಿಕರು ದ್ವಂದ್ವಯುದ್ಧವನ್ನು ಅಭ್ಯಾಸ ಮಾಡಿದ್ದರು, ಪರಂಪರೆಯನ್ನೆ ನಿರ್ಮಿಸಿದ್ದರು. ನಮ್ಮ ಹಲವು ಕಾವ್ಯಗಳಲ್ಲಿ ಈ ಬಗೆಯ ಯುದ್ಧಗಳ ರೋಮಾಂಚಕರ ವರ್ಣನೆ ಇದೆ. ಜಪಾನಿನ ರಾಷ್ಟ್ರೀಯ ಕ್ರೀಡೆಯಾದ ‘ಜೂಡೋ’ದಲ್ಲಿ ಪ್ರಯೋಗಿಸುವ ಅನೇಕ ತೊಡಹುಗಳನ್ನು, ಬಂಧಗಳನ್ನೂ, ಬಿಗುಹುಗಳನ್ನೂ ಕುಮಾರ ವ್ಯಾಸ ತನ್ನ ಭಾರತದಲ್ಲಿ ವರ್ಣಿಸಿದ್ದಾನೆ. ಇತ್ತೀಚೆಗೆ ಪ್ರಪಂಚದಲ್ಲಿಯೇ ಖ್ಯಾತಿ ಪಡೆದ ಪೈಲ್ವಾನ್ ಹರ್ಬಾನ್ ಸಿಂಗ್ ಭಾರತೀಯ ‘ದ್ವಂದ್ವಯುದ್ಧದ ತಂತ್ರದಲ್ಲಿ ಪ್ರಸಿದ್ಧವಾದ ‘ಮೃತ್ಯುಬಂಧವ’ವನ್ನು ಬಳಸುವುದರಲ್ಲಿ ನಿಸ್ಸೀಮ. ಎದುರಾಳಿ ಮಣಿಯುವಂತೆ ಮಾಡುವ ಈ ಬಂಧ ‘ದಿ ಇಂಡಿಯನ್ ಡೆತ್ ಲಾಕ್’ ಎಂದು ದೇಶವಿದೇಶಗಳಲ್ಲಿ ಹೆಸರಾಗಿದೆ. ಮತ್ತೊಬ್ಬ ಖ್ಯಾತ ಪಟು ದಾರಾಸಿಂಗ್ ‘ಏರೋಪ್ಲೇನ್ ಸ್ಪನ್’ ಎಂಬ ವಿಶೇಷ ಪ್ರಯೋಗವನ್ನು ನಡೆಸುತ್ತಿದ್ದರು.

ಹೀಗೆ ಸಾವಿರಾರು ವರ್ಷಗಳಿಂದ ಪ್ರಖ್ಯಾತರಾದ ಭಾರತೀಯ ಮಲ್ಲರ ಪರಂಪರೆಯಲ್ಲಿ ಈಚೆಗೆ ಬಹಳ ಪ್ರಸಿದ್ಧಿ ಪಡದ ಗಾಮ ಶಿಸ್ತಿನ ಜೀವನ, ಆರೋಗ್ಯದ ನಿಯಮಗಳ ಪಾಲನೆ, ನಿತ್ಯ ತಪ್ಪದ ವ್ಯಾಯಾಮ – ಇವುಗಳಿಂದ ಅಸಾಧಾರಣ ಕೀರ್ತಿ ಪಡೆದ, ಭಾರತಕ್ಕೂ ಕೀರ್ತಿ ತಂದ.

ವ್ಯಕ್ತಿತ್ವ

ಗಾಮನ ವಿನಯ, ಸೌಜನ್ಯಗಳನ್ನು ಆಗಲೇ ಕಂಡಿದ್ದೇವೆ. ಅಗತ್ಯವಾದಾಗ ಎಣೆ ಇಲ್ಲದ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ. ಲಂಡನ್ನಿನಲ್ಲಿ ಆತ ಪಂದ್ಯದಲ್ಲಿ ಭಾಗವಹಿಸಲು ಅನರ್ಹ ಎಂದು ವ್ಯವಸ್ಥಾಪಕರು ತೀರ್ಮಾನಿಸಿದಾಗ, ’ನನ್ನೊಡನೆ ಐದು ನಿಮಿಷ ಸೆಣಸಬಲ್ಲವರು ಇಂಗ್ಲೆಂಡಿನಲ್ಲಿ ಇದ್ದಾರೆಯೇ?’ ಎಂದು ಸವಾಲು ಹಾಕಿದ. ಬೆಂಗಳೂರಿಗೆ ಬಂದಾಗ ಕಿರಿಯ ಕುಸ್ತಿಗಾರರೊಂದಿಗೂ ಕುಸ್ತಿ ಮಾಡಿ ಅವರನ್ನು ಸಂತೋಷಗೊಳಿಸಿದ.

ಹುನುಮಾನನನ್ನು ಮೆಚ್ಚಿದ್ದೇನೆ

ಗಾಮ ಬೆಂಗಳೂರಿನಲ್ಲಿದ್ದಾಗ ಒಂದು ಪ್ರಸಂಗ ನಡೆಯಿತು. ಒಂದು ಸಭೆಯಲ್ಲಿ ಒಬ್ಬರು ಸ್ವಾರಸ್ಯಕರವಾದ ಪ್ರಶ್ನೆಯೊಂದನ್ನು ಕೇಳಿದರು ’ಭಾರತದ ಕುಸ್ತಿ ಮತ್ತು ಸಾಮು ಮಾಡುವವರಿಗೆಲ್ಲ ವೀರ ಹನುಮಾನನೇ ಆದರ್ಶ ಹಾಗೂ ಸ್ಫೂರ್ತಿದಾಯಕನೆಂಬ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು?’

’ಹನುಮಾನನು ಪುರಾಣ ಪುರುಷನೇ ಆಗಿರಲಿ, ಕಥೆಯೊಂದರ ಕಲ್ಪನಾ ಪುರುಷನೇ ಆಗಿರಲಿ, ಅಂತಹ ಗುಣಗಳ ಸಾಹಸಗಳ ಸುಸಂಸ್ಕೃತ ಮಹಾನುಭಾವನಂತೆ ಆದರ್ಶವನ್ನಿಟ್ಟುಕೊಂಡು ಅದರಂತಾಗಲು ಎಲ್ಲರೂ ಪ್ರಯತ್ನಿಸಬೇಕು’.

”ಹಾಗಾದರೆ ನೀವು ಆ ವೀರೋತ್ತಮನ ಪೂಜೆ ಮಾಡುವುದಿಲ್ಲವೇಕೆ?’ ಎಂದು ಸಭಿಕರು ಪ್ರಶ್ನೆ ಕೇಳಿದರು.

’ನಾವು ವಿಗ್ರಹಗಳನ್ನು ಪೂಜಿಸುವುದು ಇಲ್ಲ. ಹಾಗೆಂದ ಮಾತ್ರಕ್ಕೆ ಶ್ರೇಷ್ಠ ಗುಣಗಳನ್ನು ಪೂಜಿಸುವುದಿಲ್ಲ ಎಂದು ಅರ್ಥವಲ್ಲ. ಪೌರುಷ ಪರಾಕ್ರಮಗಳು, ಅಸೀಮ ದೈವಭಕ್ತಿ ಮೊದಲಾದ ಗುಣಗಳ ಮೂರ್ತ ಸ್ವರೂಪನಾದ ಹನುಮಾನನನ್ನು ನಾನು ಮನಸಾರೆ ಮೆಚ್ಚಿದ್ದೇನೆ ’ ಗಾಮನ ಉತ್ತರ ಕೇಳಿ ಸಭೆಯಲ್ಲಿದ್ದವರೆಲ್ಲ ತಲೆದೂಗಿದರು. ಗಾಮನ ವಿಶಾಲ ದೃಷ್ಟಿಗೆ ಮತ್ತು ಸಹಜೀವನದ ಉತ್ತಮ ಮನೋಧರ್ಮಕ್ಕೆ ಈ ಉತ್ತರ ಸಾಕ್ಷಿ.

’ನಾನು ವಿಗ್ರಹ ಪೂಜೆ ಮಾಡುವುದಿಲ್ಲ - ಆದರೆ ಹನುಮಾನನನ್ನು ಮನಸಾರೆ ಮೆಚ್ಚಿದ್ದೇನೆ’

ಭಾರತಕ್ಕೆ ಕೀರ್ತಿ ತಂದ

ಜಗತ್ತಿನಲ್ಲಿ ಖ್ಯಾತಿ ಪಡೆದಿದ್ದ ದಿನಗಳಲ್ಲಿಯೂ ಗಾಮ ತನ್ನ ದೇಶಬಾಂಧವರಿಗಿಂತ ತಾನು ಬೇರೆ ಎನ್ನುವ ಹಾಗೆ ನಡೆಯಲಿಲ್ಲ. ಮತಗಳ ವ್ಯತ್ಯಾಸ ರಾಷ್ಟ್ರೀಯ ಭಾವನೆಗೆ ಅಡ್ಡಿ ಬರುವುದಕ್ಕೆ ಅವಕಾಶ ಕೊಡಲಿಲ್ಲ. ಅವನ ಉಡುಪು ಅಚ್ಚ ಭಾರತೀಯ ಉಡುಪು. ದಟ್ಟಿಯ ಪಂಚೆ, ಬಿಳಿಯ ಜುಬ್ಬ (ಪಂಜಾಬಿ ಮಾದರಿಯ) ಹಿಂದೆ ಜೋಲಾಡುವ ಕುಚ್ಚಿನ ಪೇಟ ಅಥವಾ ಮುಂಡಾಸು. ಬೇರೆ ದೇಶಗಳಿಗೆ ಹೋದಾಗಲೂ ಆತ ಉಡುಪನ್ನು ಬದಲಿಸಲಿಲ್ಲ. ಆತನಿಂದ ಪ್ರಭಾವಿತರಾದ ಆತನ ಪರಿವಾರದವರೆಲ್ಲ ಇದೇ ಉಡುಪನ್ನು ಧರಿಸುತ್ತಿದ್ದರು. ಅರೇಬಿಯಾದ ಅಮೀರ್ ಸೌದ್ ಅವರನ್ನು ಸಂದರ್ಶಿಸಿದಾಗಲೂ ಗಾಮ ದೇಶೀಯ ಉಡುಪನ್ನೆ ಧರಿಸಿದ್ದ.

ಜಲಿಯನ್ ವಾಲಾಬಾಗಿನ ಪ್ರಸಂಗದಲ್ಲಿ ಗಾಮನನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು ಎಂಬುದನ್ನು ಆಗಲೇ ಕಂಡೆವು. ಜಟ್ಟಿಯಾದ ಗಾಮನ ಆಹಾರ, ವ್ಯಾಯಾಮ, ಶಕ್ತಿಯ ಪಾಲನೆ ಇವೆಲ್ಲ ಕ್ರಮಬದ್ಧವಾಗಿ ನಡೆಯಬೇಕಾಗಿತ್ತು. ಆದರೆ ಸರ್ಕಾರ ಆತನನ್ನು ಇತರ ಖೈದಿಗಳಂತೆಯೇ ನಡೆಸಿಕೊಂಡಿತು. ಇದರಿಂದ ಗಾಮನಿಗೆ ತೊಂದರೆಯಾಯಿತು. ಜ್ವರ ಬಂದಿತು. ಆರೋಗ್ಯ ಕೆಟ್ಟಿತು. ಇತರ ರಾಜಕೀಯ ಕೆಲಸಗಾರರ ಹೆಸರು ಹೇಳಿದರೆ, ಗುಟ್ಟುಗಳನ್ನು ಬಿಟ್ಟುಕೊಟ್ಟರೆ ಅವನನ್ನು ಬಿಡುಗಡೆ ಮಾಡುತ್ತೇವೆ ಎಂದು ಸೆರೆಮನೆಯ ಅಧಿಕಾರಿಗಳು ಆಸೆ ತೋರಿಸಿದರು. ಆದರೆ ಗಾಮ ಅದಕ್ಕೆ ಸೋಲಲಿಲ್ಲ. ಕಡೆಗೆ ಬೇಸತ್ತು ಅಧಿಕಾರಿಗಳು ಅವನನ್ನು ಬಿಡುಗಡೆ ಮಾಡಿದರು.

ಪಾಕಿಸ್ತಾನಕ್ಕೆ ಹೋಗಿ ಗಾಮ ಏನೂ ಸಂತೋಷವನ್ನು ಅನುಭವಿಸಲಿಲ್ಲ. ಭಾರತಕ್ಕೆ ಆತ ತಂದ ಕೀರ್ತಿ, ಭಾರತದ ಮಲ್ಲರಿಗೆ ಅವರ ಕಲೆಯಲ್ಲಿ ಮಾಡಿದ ಮಾರ್ಗದರ್ಶನ, ಆತನ ಸೌಜನ್ಯ, ವಿನಯ, ವಿಶಾಲ ಮನೋಧರ್ಮ ಇವಕ್ಕಾಗಿ ಆತನನ್ನು ಸ್ಮರಿಸಬೇಕು.