ಢಮ ಢಮ ಢಮ ಡೋಲು ಸದ್ದು
ಎಲ್ಲರನೂ ಸೆಳೆಯಿತು
ನಿಮಿಷದಲ್ಲಿ ಡೋಲಿನ ಬಳಿ
ಜನದ ಬೇಲಿ ಕಟ್ಟಿತು !

ಅಲ್ಲಿ ಅದೋ ಹಲ್‌ಕಿರಿಯುವ
ತಲೆಯ ಬುರುಡೆ, ಮತ್ತೆ ಹಾವ-
ನಿಟ್ಟ ಎರಡು ಬುಟ್ಟಿಯು.
ಏನೇನೋ ಪರಿಕರಗಳು,
ಎಲುಬಿನೆರಡು ಕೈಗಳು !

ಡೋಲ್ ನಿಂತಿತು, ತುಟಿ ತಾಗಿತು ಪುಂಗಿಯು,
ಚಿಮ್ಮುತಲಿದೆ ಒಮ್ಮೆಗೇ
ಸವಿರಾಗದ ಬುಗ್ಗೆಯು !
ಪುಂಗಿಯ ಸವಿರಾಗ ತಾಗಿ
ಹಾವಿನ ತಲೆ-ಮೊಗ್ಗು ಅರಳಿ
ಹೆಡೆಯ ಹೂವು ಮೂಡಿತು !
ಹೇಗೊ ಏನೊ ಸುಪ್ತವಾದ
ಸೊಬಗು ಸುರುಳಿ ಬಿಚ್ಚಿತು
ಕವನದಂತೆ ಅರಳಿತು !

ರಾಜಕೀಯ ನಿಪುಣರಾಡುತಿರುವ ಮಾತ ಕೇಳಿ ಜನತೆ
ತಲೆದೂಗುವ ತೆರದಲಿ,
ಪುಂಗಿಯ ದನಿ ಕೇಳಿ ಹಾವು
ಹೆಡೆಯಾಡಿದೆ ನಯದಲಿ.

ಪುಂಗಿಯ ದನಿ ನಿಂತಿತು,
ಅರಳಿ ಬಂದ ಚೆಲುವು ಮತ್ತೆ
ಬುಟ್ಟಿಯೊಳಗೆ ಹುದುಗಿತು.
“ಮತ್ತೆ ಕಮಾಲ್ ನೋಡಿರಣ್ಣ…”
ಚಪ್ಪಳೆಯ ತಟ್ಟಿದರದೊ ದೊಡ್ಡವರೂ ಮಕ್ಕಳು.
ಹಾವಾಡಿಗನಂಗೈಯೊಳು ಒಂದು ಕೋಳಿಮೊಟ್ಟೆ,
ನಿಮಿಷದಲ್ಲಿ ಮರಿಯಾಯಿತು, ಮಾಯವಾಯ್ತು ಮತ್ತೆ.
ಮಣ್ಣನು ಕೈಗೆತ್ತಿಕೊಂಡ ಕಡಲೆಯಾಯ್ತು ಥಟ್ಟನೆ,
ಸಣ್ಣಪುಟ್ಟ ಕಲ್ಗಳೆಲ್ಲ ರುಪಾಯ್ ಆದುವೆಲ್ಲ
ಒಂದೆ ನಿಮಿಷದಲ್ಲಿ ಅವೂ ಮಂಗಮಾಯವೆಲ್ಲ !
………………………………………………………………….
ಇಂತು ಮೋಡಿಗಳಲಿ ಅವನು ಮನವ ಬೆರಗುಗೊಳಿಸಿರೆ
ಕಲ್ಲುಗಳನೆ ಚಿನ್ನಗೈದ ಮಾಟಗಾರ ಮೆಲ್ಲನೆ,
ಸುತ್ತನಿಂತ ಜನದ ಕಡೆಗೆ ಹೊಟ್ಟೆ ಬಡಿದು ನೋಡುತ
“ಮೂರು ಕಾಸು ನೀಡಿರಯ್ಯ ನಿಮ್ಮ ಧರ್ಮ”ವೆನ್ನುತ
ಬರಲು ನಾನು ಬೆಚ್ಚಿ ನಿಂತೆ, ನೋಡಿದೆಲ್ಲ ಮೋಡಿಗಿಂತ
ಇದು ಹೆಚ್ಚಿನ ಮೋಡಿಯೆಂದು ಮನದಲಿ ಬೆರಗಾಗುತ !