ತುಂಬಾ ತುಂಬಾ ಹಿಂದೆ ಜನರು ಎಲ್ಲಿಗೆ ಹೋಗಬೇಕೆಂದರೂ ನಡೆದೇ ಹೊಗುತ್ತಿದ್ದರು.  ಕಾಶಿಗೆ ಹೋದವರು ಹಿಂದಿರುಗಿ ಬರುವುದಿಲ್ಲ ಎಂಬ ಮಾತಿತ್ತು.ದೂರದ ಪ್ರಯಾಣ ಅಷ್ಟೊಂದು ಕಷ್ಟವಾಗಿತ್ತು.

ಆಮೇಲೆ ಪ್ರಾಣಿಗಳನ್ನು ಪಳಗಿಸಿ ಅದರ ಮೇಲೆ ಸವಾರಿ ಮಾಡತೊಡಗಿದ.  ಕತ್ತೆ, ಒಂಟೆ, ಎತ್ತು, ಕೋಣ, ಆನೆ ಕೊನೆಯಲ್ಲಿ ಕುದುರೆಗಳ ವಾಹನಗಳಾದವು.  ಒಂಟೆಗಳನ್ನು ಮರಳುಗಾಡಿನ ಹಡಗು ಎಂದೇ ಕರೆಯಲಾಗುತ್ತದೆ.  ಮರಳುಗಾಡಿನಲ್ಲಿ ಬಿರುಗಾಳಿ ಎದ್ದರೆ ಮರಳಿನ ಅಲೆಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಉಪಾಯ ಒಂಟೆಗಳಿಗೆ ಗೊತ್ತು.  ಅದೇ ರೀತಿ ಕತ್ತೆಗಳ ಮೇಲೆ ಸರಕು ಸರಂಜಾಮುಗಳನ್ನು ಹೇರಿಬಿಟ್ಟರಾಯಿತು.  ಒಮ್ಮೆ ಹೋದ ದಾರಿಯನ್ನು ಮರೆಯದೇ ಅದೇ ದಾರಿಯಲ್ಲಿ ಸಾಗುತ್ತವೆ.  ನಿಶ್ಚಿತ ಜಾಗಕ್ಕೆ ತಲುಪುತ್ತವೆ.  ವೇಗವಾಗಿ ತಲುಪಲು ಕುದುರೆಗಳ ಬಳಕೆ.

ಆಗಲೇ ಚಕ್ರದ ಆವಿಷ್ಕಾರವಾಯಿತು.  ಹೇಗೆ ಎನ್ನುವ ಕುರಿತು ಅನೇಕ ತರ್ಕಗಳಿವೆ.  ಒಂದು ಬಿಂದುವನ್ನು ಕೇಂದ್ರವಾಗಿಟ್ಟುಕೊಳ್ಳಿ.  ಚೌಕಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿ.  ಆಗ ನಿರ್ಮಾಣವಾದ ರಚನೆಯನ್ನೇ ಚಕ್ರವೆಂದು ಕರೆಯುತ್ತಾರೆ.  ಇದು ಒಂದು ತರ್ಕ.  ಯಾವುದೇ ರೀತಿಯಲ್ಲಿ ಆವಿಷ್ಕಾರವಾಗಿರಲಿ, ಅದರಿಂದ ಚಲನೆಗೊಂದು ವೇಗ ಬಂತು.  ಚಕ್ರವು ವಿವಿಧ ಗಾತ್ರದ ಗಾಲಿಗಳಾದಾಗ ಚಲನೆಯಲ್ಲೂ ವೈವಿಧ್ಯ ತುಂಬಿತು.

ಎರಡು ಗಾಲಿಗಳನ್ನು ಬಳಸಿ ಗಾಡಿಗಳು ನಿರ್ಮಾಣವಾದವು.  ಮೊದಲಿಗೆ ಮನುಷ್ಯರೇ ಗಾಡಿಗಳನ್ನು ಎಳೆಯುತ್ತಿದ್ದರು.  ಆಮೇಲೆ ಪ್ರಾಣಿಗಳಿಗೆ ತರಬೇತಿ ನೀಡಿದರು.  ರಾಜ ಮಹಾರಾಜರು, ಸೈನಿಕರು ಮಾತ್ರ ಉಪಯೋಗಿಸುತ್ತಿದ್ದ ಗಾಡಿಗಳನ್ನು ಸಾರೋಟು ಎಂದು ಕರೆಯುತ್ತಿದ್ದರು.  ಯುದ್ಧದ ಸಮಯದಲ್ಲಿ, ಸ್ಪರ್ಧೆಗಳಿಗೆ ಹಾಗೂ ಪ್ರಯಾಣಕ್ಕೆ ಇವುಗಳ ಬಳಕೆ.

ರಾಮಾಯಣ ಹಾಗೂ ಮಹಾಭಾರತದ ಕಾಲದಲ್ಲಿ ಇವುಗಳಿಗೆ ರಥಗಳೆಂದು ಹೇಳುತ್ತಿದ್ದರು.  ಆದರೆ ಈಗ ರಥಗಳೆಂದರೆ ದೇವಾಲಯಗಳಲ್ಲಿರುವ ಉತ್ಸವಕ್ಕೆ ಬಳಸುವ ವಾಹನವಾಗಿದೆ.

ಯಾರೋ ಸಂಶೋಧಕರು ಗಾಲಿಯ ಅಕ್ಕಪಕ್ಕ ಮಧ್ಯದ ಬಿಂದುವಿನಲ್ಲಿ ಪೆಡಲ್‌ಗಳನ್ನು ಅಳವಡಿಸಿದರು.  ಆಗ ಗಾಡಿಯ ರೂಪವೇ ಬದಲಾಗಿ ಹೋಯಿತು.  ಪೆಡಲ್‌ಗಳನ್ನು ಕಾಲಿನಿಂದ ತುಳಿದಾಗ ಗಾಲಿ ಮುಂದೆ ಓಡುತ್ತಿತ್ತು.  ವಾಹನವನ್ನು ಸಮತೋಲನಗೊಳಿಸಲು ಮೂರು ಗಾಲಿಗಳನ್ನು ಅಳವಡಿಸಲಾಗಿತ್ತು.  ಅಭ್ಯಾಸವಾದಂತೆ ಎರಡೇ ಗಾಲಿಗಳು ಬಂದವು.  ಸರ್ಕಸ್‌ಗಳಲ್ಲಿ ಈಗಲೂ ಒಂದೇ ಗಾಲಿಯ ವಾಹನ ಚಾಲನೆ ಮಾಡುವುದನ್ನು ನೋಡಬಹುದು.  ಇವುಗಳನ್ನು ಟ್ರೈಸಿಕಲ್, ಬೈಸಿಕಲ್ ಹಾಗೂ ಯೂನಿ ಸೈಕಲ್ ಎನ್ನುತ್ತಾರೆ.

ಎರಡು ಗಾಡಿಗಳನ್ನು ಜೋಡಿಸಿ ನಾಲ್ಕು ಕುದುರೆ, ಆರು ಕುದುರೆಗಳನ್ನು ಕಟ್ಟಿ ಎಳೆಯುವ ಪರಿಪಾಠ ಪ್ರಾರಂಭವಾಯಿತು.  ಒಂದು ಕಡೆಯಿಂದ ಮತ್ತೊಂದೆಡೆ ಗುಂಪುಪ್ರಯಾಣಕ್ಕೆ ಇದು ಅನುಕೂಲಕರವಾಗಿತ್ತು.

ಉಗಿಯಂತ್ರ [ಸ್ಟೀಮ್ ಇಂಜಿನ್] ಆವಿಷ್ಕಾರವಾದ ಮೇಲೆ ವಾಹನಗಳ ರೂಪವೇ ಬದಲಾಯಿತು.  ಆಚೆ ಈಚೆ ಉಬ್ಬಿದ್ದು ಮಧ್ಯೆ ತಗ್ಗಿರುವ ಗಾಲಿಗಳು.  ಅದರ ಓಡಾಟಕ್ಕೆ ಕಬ್ಬಿಣದ ಹಳಿಗಳು ಬಂದವು.  ಇದು ಪ್ರಯಾಣಕ್ಕೆ ಇನ್ನಷ್ಟು ವೇಗ ಕೊಟ್ಟಿತು.  ನೂರಾರು ಜನ ಒಮ್ಮೆಲೇ ಪ್ರಯಾಣಿಸಲು ಅನುಕೂಲವಾಯಿತು.  ದೂರದ ಊರುಗಳೆಲ್ಲಾ ಹತ್ತಿರವಾಗತೊಡಗಿದವು.

ಪೆಟ್ರೋಲ್, ಡೀಸೆಲ್ ಬಳಕೆಯ ಇಂಜಿನ್‌ಗಳು ಬಂದ ಮೇಲೆ ಪ್ರಯಾಣ ಇನ್ನಷ್ಟು ಸುಲಭವಾಗತೊಡಗಿತು.

ಪ್ರಾರಂಭದಲ್ಲಿ ಕುದುರೆಗಳು ಈ ವಾಹನಗಳನ್ನು ನೋಡಿ ಹೆದರುತ್ತಿದ್ದವು.  ಅದಕ್ಕಾಗಿ ಅನೇಕರು ಆಟೋಮೊಬೈಲ್‌ಗಳನ್ನು ಕೊಳ್ಳಲಿಲ್ಲ.  ಕುದುರೆಗಳು ಕಡಿಮೆಯಾದಂತೆ ರಸ್ತೆಯ ತುಂಬಾ ಆಟೋಮೊಬೈಲ್‌ಗಳೇ ತುಂಬಿಕೊಳ್ಳತೊಡಗಿತು.

ಗಾಲಿ \ಚಕ್ರ ಎನ್ನುವ ಆವಿಷ್ಕಾರ ಏನೆಲ್ಲಾ ತಿರುವಿಗೆ, ಅಭಿವೃದ್ಧಿಗೆ ಕಾರಣವಾದದ್ದನ್ನು ಗುರುತಿಸಿ ಮಾನವನ ಮಹಾನ್ ಆವಿಷ್ಕಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಕಥೆಯ ಹಿಂದಿನ ನೋಟ

ಸಿಂಧೂನದಿ ನಾಗರೀಕತೆ ಹಾಗೂ ಮೆಸಪಟೋಮಿಯಾ ನಾಗರೀಕತೆಯಲ್ಲಿ ಮೊಟ್ಟಮೊದಲ ಬಾರಿಗೆ ಮಡಕೆ, ಕುಡಿಕೆಗಳನ್ನು ತಯಾರಿಸಲು ಗಾಲಿಗಳನ್ನು ಬಳಸುವ ಬಗೆಗೆ ಇತಿಹಾಸಕಾರರು ಬೆಳಕು ಚೆಲ್ಲಿದ್ದಾರೆ.  ಅಂದರೆ ಕ್ರಿಸ್ತಪೂರ್ವ ೩೫೦೦ ವರ್ಷಗಳ ಹಿಂದೆಯೇ ಮಾನವ ಗಾಲಿಗಳನ್ನು ಅಡ್ಡಲಾಗಿ ಬಳಸುತ್ತಿದ್ದ.  ಆದರೆ ಮೆಸಪಟೋಮಿಯಾದ ಚಿತ್ರಕಾರನೊಬ್ಬ ಅದನ್ನು ನಿಂತಿರುವಂತೆ ಅಂದರೆ ಉದ್ದುದ್ದವಾಗಿ ಚಿತ್ರಿಸಿರುವುದನ್ನು ನೋಡಿದಾಗ ಜನರಿಗೆ ಅದರ ಇನ್ನಿತರ ಉಪಯೋಗಗಳು ಆಲೋಚನೆಗೆ ಬಂದಿರಬಹುದು ಎಂಬುದು ಪುರಾತನ ತರ್ಕಶಾಸ್ತ್ರಜ್ಞರ ಅಭಿಮತ.

ಮೊಟ್ಟಮೊದಲು ಸಿಕ್ಕಿದ ಗಾಲಿಯು ಮರದಿಂದ ನಿರ್ಮಿತವಾಗಿತ್ತು.  ಅರೆವೃತ್ತಾಕಾರದ ಮೂರು ಹಲಗೆಗಳ ಜೋಡಣೆ.  ಅದಕ್ಕೆ ಅಡ್ಡಡ್ಡಲಾಗಿ ರೀಪುಗಳನ್ನು ಸಹ ಜೋಡಿಸಲಾಗಿತ್ತು.  ಕ್ರಿಸ್ತಪೂರ್ವ ೩೨೦೦ರಲ್ಲಿ ಅಂದರೆ ಚಕ್ರ ಕಂಡು ಹಿಡಿದ ೩೦೦ ವರ್ಷಗಳ ನಂತರ ಅದನ್ನು ಗಾಡಿಗೆ ಅಥವಾ ಸಾರೋಟಿಗೆ ಬಳಸಲಾಯಿತು.  ಕ್ರಿಸ್ತಪೂರ್ವ ೨೦೦೦ದ ಹೊತ್ತಿಗೆ ಈಜಿಪ್ಟ್‌ನಲ್ಲಿ ವ್ಯಾಪಕ ಬಳಕೆಗೆ ಬಂತು.  ಕ್ರಿಸ್ತಪೂರ್ವ ೧೪೦೦ರಲ್ಲಿ ಯುರೋಪ್‌ನಲ್ಲಿ ಇನ್ನಷ್ಟು ಅಭಿವೃದ್ಧಿಯಾಯಿತು.  ಆದರೆ ಮೆಸಪಟೋಮಿಯಾ ಅಥವಾ ಈಜಿಪ್ಟ್‌ನ ಪ್ರಭಾವವಿರಲಿಲ್ಲ.  ವಾಸ್ತವವಾಗಿ ಚಕ್ರದ ಪರಿಕಲ್ಪನೆ ಅತ್ಯಂತ ಪುರಾತನ ನಾಗರೀಕತೆಗಳೆಂದು ತಿಳಿಯಲಾಗುವ ಇಂಕಾ, ಅಜೆಟೆಕ್ ಅಥವಾ ಮಾಯನ್ನರಲ್ಲಿ ಇರಲೇ ಇಲ್ಲ.

ಮುಂದೆ ಚಕ್ರದ ಹೊರಮೈಗೆ ಕಬ್ಬಿಣದ ಪಟ್ಟಿಯ ಜೋಡಣೆ, ಅಕ್ಸೆಲ್, ಬಾಲ್‌ಬೇರಿಂಗ್ ಹೀಗೆ ಚಲನೆಗೆ ಅನುಕೂಲವಾಗುವ ವಿಧಾನಗಳೆಲ್ಲಾ ಸೇರಿಕೊಂಡವು.  ಚಕ್ರವನ್ನು ಹಗುರಗೊಳಿಸಲು ರಬ್ಬರ್ ಬಳಕೆ ಅತ್ಯಂತ ಹೆಚ್ಚು ಜನಪ್ರಿಯಗೊಂಡಿತು.  ಅಷ್ಟೇ ಅಲ್ಲ, ಎಲ್ಲಾ ರೀತಿಯ ವಾತಾವರಣಕ್ಕೂ ರಬ್ಬರ್‌ನ ಹೊಂದಿಕೊಳ್ಳುವಿಕೆ, ಸ್ಥಿತಿಸ್ಥಾಪಕ ಗುಣ ಏನೆಲ್ಲಾ ಉಪಯೋಗಗಳು ಸಹ ಪ್ರಯೋಜನಕ್ಕೆ ಬಂದವು.

ಮೊದಲ ಬೈಸಿಕಲ್ ಬಂದಿದ್ದು ಇಸವಿ ೧೭೯೧ರಲ್ಲಿ.  ಪ್ರಾನ್ಸಿನ ಕೊಮ್ಟೆ ದೆ ಸಿವೆಕ್ [Comte de sivrac] ರೂಪಿಸಿದರು.  ಮುಂದೆ ೧೮೧೧ರಲ್ಲಿ ಲೂಯಿಸ್ ಬಾಡ್ರಿ ದೆ ಸಾನಿಯರ್ [Louis Baudry de Saunier] ಇಂದಿನ ಬೈಸಿಕಲ್‌ನ ಮೂಲ ಕರ್ತೃವೆಂದು ತಿಳಿಯಲಾಯಿತು.  ಆದರೆ ಇವರಿಬ್ಬರ ಬೈಸಿಕಲ್ ಕೇವಲ ಕಲ್ಪನೆಯಾಗಿತ್ತು.

ಕಾರ್ಲ್ ವೋನ್ ಡ್ರೈಸ್ ಪ್ರಾಯೋಗಿಕವಾಗಿ ಬೈಸಿಕಲ್ ತಯಾರಿಸಿದರು.  ಇಸವಿ ೧೮೧೭ರ ಜೂನ್ ೧೨ರಂದು ಇವರು ಒಂದು ಗಂಟೆಗೆ ೧೦ ಮೈಲುಗಳ ದೂರ ಬೈಸಿಕಲ್ ಹೊಡೆದು ತೋರಿಸಿದರು.  ಇಸವಿ ೧೮೫೦ರ ವೇಳೆಗೆ ಪ್ರಪಂಚದಾದ್ಯಂತ ಬೈಸಿಕಲ್ ತುಂಬಿಕೊಂಡಿತು.

ಸ್ವಯಂಚಾಲಿತ ವಾಹನ ಅಥವಾ ಆಟೋಮೊಬೈಲ್ ಎಂದರೆ ಗಾಲಿಗಳನ್ನು ಹೊಂದಿರುವ ವಾಹನ.  ಅವು ಸ್ವಯಂ ಮೋಟಾರ್ ಹೊಂದಿದ್ದು, ಅವು ಗಾಲಿಗಳಿಗೆ ಚಲನೆಯನ್ನು ನೀಡುತ್ತವೆ ಹಾಗೂ ಗಾಲಿಗಳು ಮೋಟಾರನ್ನು ಹೊತ್ತಿರುತ್ತವೆ.

ಆದರೆ ಇದನ್ನು ಚಾಲನೆಗೊಳಿಸಲು ಹಾಗೂ ಸಮತೋಲನದಲ್ಲಿ ಚಲಿಸುತ್ತಿರುವಂತೆ ಮಾಡಲು ಇಂಧನ ಹಾಗೂ ಚಾಲಕ ಬೇಕು.  ವಾಹನದ ಗಾತ್ರವನ್ನು ಅನುಸರಿಸಿ ಅದರಲ್ಲಿ ಪ್ರಯಾಣಿಕರನ್ನು ಅಥವಾ ಸರಕನ್ನು ತುಂಬಬಹುದಾಗಿದೆ.

ಇಸವಿ ೧೭೬೯ರಲ್ಲಿ ಫ್ರೆಂಚ್ ಎಂಜಿನಿಯರ್ ನಿಕೊಲಾಸ್ ಕಾಗ್ನೊ [Nicholas Cugnot] ಮೊದಲಿಗೆ ಸ್ವಯಂಚಾಲಿತ ವಾಹನವನ್ನು ಕಂಡುಹಿಡಿದರು.  ಇದು ಉಗಿಯಂತ್ರವನ್ನು ಆಧರಿಸಿತ್ತು.  ಪ್ಯಾರಿಸ್‌ನ ಮ್ಯೂಸಿಯಂನಲ್ಲಿ ಇಂದಿಗೂ ಈ ಯಂತ್ರ ಇದೆ.

ಇಸವಿ ೧೮೭೩ರಲ್ಲಿ ಬಸ್ಸಿನ ರೂಪದ ಸ್ವಯಂಚಾಲಿತ ವಾಹನವನ್ನು ಅಮೆದಿ ಬೊಲ್ಲೀ [Amedee Bollee] ರೂಪಿಸಿದರು.

ಆಧುನಿಕ ಸ್ವಯಂಚಾಲಿತ ವಾಹನಗಳ ಜನಕ ಹೆನ್ರಿ ಫೋರ್ಡ್ [Henry Ford].  ಮಿಚಿಗನ್‌ನ ಡೆಟ್ರಾಯಿಟ್‌ನ ಈ ಮಹಾನ್ ಕನಸುಗಾರ ಸ್ವಯಂಚಾಲಿತ ವಾಹನಗಳಿಗೆ ಸೌಂದರ್ಯ ಕೊಟ್ಟವರು.  ಅದಕ್ಕಾಗಿ ನೂರಾರು ತಜ್ಞರನ್ನು ಹಗಲೂ ರಾತ್ರಿ ಕೆಲಸ ಮಾಡುವಂತೆ ಪ್ರೇರೇಪಿಸಿದವರು.  ಇಸವಿ ೧೮೯೬ರಲ್ಲಿ ಪೆಟ್ರೋಲ್/ಡೀಸೆಲ್ ಶಕ್ತಿಯಿಂದ ಚಲಿಸುವ ಕಾರನ್ನು ಫೋರ್ಡ್ ಅಭಿವೃದ್ಧಿಪಡಿಸಿದರು.  ಆದರೆ ಫೋರ್ಡ್‌ಗೆ ಇದರ ವೇಗ ಖುಷಿ ಕೊಡಲಿಲ್ಲ.  ಇನ್ನಷ್ಟು ಚಂದಗೊಳಿಸುವ ಸಲುವಾಗಿ ಎಂಟು ಸಿಲಿಂಡರ್‌ಗಳನ್ನೊಳಗೊಂಡ ಯಂತ್ರವನ್ನು ರೂಪಿಸಲು ವಿಜ್ಞಾನಿ ಸಂಶೋಧಕರನ್ನು ನೇಮಿಸಿದರು.

ಅವರು ನಿರುತ್ಸಾಹಗೊಳ್ಳದಂತೆ ಪ್ರೇರೇಪಿಸುವಿಕೆ ಹಾಗೂ ತನ್ನೊಳಗಿನ ಕನಸನ್ನು ಸಾಕಾರ ಮಾಡುವಿಕೆಯ ಪ್ರಯತ್ನ ಫಲ ಕೊಟ್ಟಿದ್ದು ೧೨ ವರ್ಷಗಳ ನಂತರ.  ಅದಕ್ಕಾಗಿ ಫೋರ್ಡ್‌ರವರು ಇಂದಿಗೂ ವಿಶ್ವಮಾನ್ಯ.  ಹೀಗೆ ಇಸವಿ ೧೯೦೮ರಲ್ಲಿ ಬಂದ ಮಾಡೆಲ್ ಟಿ ಕಾರು ರಸ್ತೆಗಳಲ್ಲಿ ಹೊಸ ಕ್ರಾಂತಿ ಎಬ್ಬಿಸಿತು.

ಆದರೆ ಫೋರ್ಡ್ ಮಾಡೆಲ್ ಟಿ ಕಾರಿನ ತಯಾರಿಕೆಯನ್ನು ಇಸವಿ ೧೯೨೭ರಲ್ಲಿ ನಿಲ್ಲಿಸಿಬಿಟ್ಟರು.  ಆಗ ಕೆಲಸ ಕಳೆದುಕೊಂಡವರ ಸಂಖ್ಯೆ ಎಷ್ಟು ಗೊತ್ತಾ?!

೧೮ ಮಿಲಿಯನ್ ಜನರು ನಿರುದ್ಯೋಗಿಗಳಾದರು.  ಮುಂದೆ ಅನೇಕ ರೀತಿಯ ಕಾರುಗಳು ರೂಪುಗೊಂಡವು.  ಇಂದು ಅತ್ಯಾಧುನಿಕ ತಂತ್ರಜ್ಞಾನದಿಂದ ರೂಪಿಸಲಾದ ನ್ಯಾನೋ ಕಾರ್ ಭಾರತದ ಹೆಮ್ಮೆಯ ಕೊಡುಗೆ.