ಗೆಡ್ಡೆಗಳೆಂದೊಡನೆ ಮೊಟ್ಟ ಮೊದಲು ನೆನಪಾಗುವುದು ಆಲೂಗೆಡ್ಡೆ. ನಂತರ ಸುವರ್ಣಗೆಡ್ಡೆ. ಸೇಮೆ ಗೆಡ್ಡೆ, ಕೆಸುವಿನ ಗೆಡ್ಡೆ, ಗೆಡ್ಡೆಗಳ ಒಂದು ಲೋಕವೇ ನಮ್ಮ ಮುಂದೆ ತೆರೆದುಕೊಳ್ಳುತ್ತೆ. ಈ ಗುಂಪಿಗೆ ಇತ್ತೀಚೆಗೆ  ಸೇರ್ಪಡೆಯಾಗಿರುವ ಗೆಡ್ಡೆಗಳೆಂದರೆ ‘ಯಾಮ್’ಹಾಗೂ ‘ಮರ ಆಲೂ’.

ಈ ಮರ ಆಲೂ  ಗೆಡೆಯನ್ನು  ಈಗಾಗಲೇ ಕೇರಳ, ಮಂಗಳೂರಿನ ಕೆಲವೊಂದು ಊರುಗಳಲ್ಲಿ ಆಹಾರವಾಗಿ ಬಳಕೆಯಾಗುತ್ತಿದೆ. ದಕ್ಷಿಣ ಆಫ್ರಿಕದ ಕೆಲವು ಭಾಗಗಳಲ್ಲಿ ಈ ಗೆಡ್ಡೆಯನ್ನು ಆಹಾರಕ್ಕಾಗಿಯೇ ಬೆಳೆಯುವುದು ಕಂಡು ಬಂದಿದೆ.  ದೇಶದ ಆಹಾರ ಸುರಕ್ಷತೆಯಲ್ಲಿ ಈ ಗೆಡ್ಡೆಗಳ ಪಾತ್ರ ಹಿರಿದು. ನಮ್ಮ ಹಿತ್ತಿಲಿಗೊಂದು ಶೋಭೆಯಾಗ ಬಲ್ಲುದು ಈ ಗೆಡ್ಡೆಯ ಗಿಡ.

ಹಿತ್ತಿಲಲ್ಲಿ ಹಬ್ಬುತ್ತಿರುವ ಒಂದು ಬಳ್ಳಿ. ಅಗಲವಾದ ಹೃದಯಾಕಾರದ ಎಲೆಗಳು. ಎಲೆಯ ಕಂಕುಳಿಂದ ಜೋತಾಡುತ್ತಿರುವ ಹೂ ಗೊಂಚಲು, ನೋಡಲು ಭತ್ತದ ತೆನೆಯ ಹಾಗೆ. ತೋರಣ ಕಟ್ಟಿದ ಹಾಗೆ. ನಂತರದ ದಿನಗಳಲ್ಲಿ ಪ್ರತಿ ಎಲೆಯ ಕಂಕುಳಿಂದ ಪುಟ್ಟ ದುಂಡನೆಯ ಆಕಾರದ ಕಾಯಿಗಳು ಇಣುಕತೊಡಗುತ್ತೆ. ದಿನ ಕಳೆದಂತೆ, ಆ ಕಾಯಿ ದಪ್ಪಗಾಗುತ್ತಾ ಗೆಡ್ಡೆಯಾಕಾರ ತಳೆಯುತ್ತದೆ. ಎಲೆಗೊಂದು ಕಾಯಿ, ಬಳ್ಳಿ ಗಾಳಿಯಲ್ಲಿ ಬಳುಕಿದಾಗಲೆಲ್ಲ  ಗಾಳಿಯೊಡನೆ ತೇಲಾಡುವ ಗೆಡ್ಡೆಗಳು. ಆಲೂಗೆಡ್ಡೆಯನ್ನೇ ಹೋಲುವ ಈ ಗೆಡ್ಡೆಗಳಿಗೆ ‘ಏರ್ ಪೊಟ್ಯಾಟೋ’ ಎಂಬ ಅನ್ವರ್ಥ ನಾಮ.

ಡಯಾಸ್ಕೋರಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದ, ಈ ಬಳ್ಳಿಗೆ ಡಯಾಸ್ಕೋರಿಯ ಬಲ್ಬಿಫೇರ ಎಂಬ ಸಸ್ಯಶಾಸ್ತ್ರೀಯ ಹೆಸರು. ಸಂಸ್ಕೃತದಲ್ಲಿ ‘ವಿರಹಿಕಂಡ್’ ಮಲಯಾಳಮ್ ನಲ್ಲಿ ‘ಕಾಚಿಲ್’  ಮರಾಠಿ ಭಾಷೆಯಲ್ಲಿ ‘ಡುಕ್ಕರ್ ಕಂಡ್’ ಎಂಬ ಹೆಸರಿರುವ ಈ ಗೆಡ್ಡೆಯ ಉಪಯೋಗ ಕೇರಳ ರಾಜ್ಯದಲ್ಲಿ ಹೆಚ್ಚು. ಚೆನ್ನಾಗಿ ಬಲಿತ ಗೆಡ್ಡೆಗಳ ಸಿಪ್ಪೆ ಸರಾಗವಾಗಿ ಕೈಯಿಂದಲೇ ತೆಗೆಯ ಬಹುದು. ಮೇಲ್ಭಾಗ ಹಸಿರಾಗಿರುತ್ತದೆ. ಆದರೆ ಒಳಭಾಗ ಆಕರ್ಷಕ ಹಳದಿ. ಟ್ರೀ ಪೊಟೆಟೊ ಎಂಬ ಹೆಸರೂ ಇದಕ್ಕಿದೆ, ಇದರ ಜೊತೆಗೆ ಇದರ ಸಮೀಪ ಬಂಧುವಾದ ಮಿಶ್ರಿ ಖಂಡ್ ಸಹ ಉಪವಾಸದ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಬಳಸಲ್ಪಡುತ್ತದೆ.

ಬಳ್ಳಿಯಲ್ಲಿ ಗೆಡ್ಡೆ

ಬಳ್ಳಿಯಲ್ಲಿ ಸಾಲು ಸಾಲಾಗಿ ಗೆಡ್ಡೆಗಳು ಬಿಟ್ಟರೂ, ಬುಡದಲ್ಲಿ ಬಿಡುವ ಗೆಡ್ಡೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಹೆಚ್ಚಿದಾಗ ಒಳಗಿನ ಬಣ್ಣ ಹಳದಿ. ಆಫ್ರಿಕಾ ಖಂಡದ ಕೆಲವು ಭಾಗಗಳಲ್ಲಿ ಇದು ರುಚಿಕರ ಆಹಾರ. ಯಾಮ್ ಬೀನಿನಂತೆ ಇದನ್ನು ಹಸಿಯಾಗಿ ತಿನ್ನಲಾಗಲ್ಲ. ಅಲ್ಲದೆ ಕಾಡುಗಳಲ್ಲಿ ತಾನಾಗಿ ಬೆಳೆಯುವ ಗೆಡ್ಡೆಗಳು ತಿನ್ನಲು ಯೋಗ್ಯವಲ್ಲ ಎಂಬ ಅಭಿಪ್ರಾಯವಿದೆ. ಇತ್ತೀಚೆಗೆ ನಾಡಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿರುವ ಗೆಡ್ಡೆಗಳನ್ನು ಬೇಯಿಸಿ ತಿನ್ನುವುದು ಅಭ್ಯಾಸ ವಾಗಿದೆ. ಒಂದು ಸಣ್ಣತುಂಡು ಹುಣಿಸೆ ಹಣ್ಣಿನೊಂದಿಗೆ ಬೇಯಿಸಿ ಮಾಡಿದ ಪದಾರ್ಥ ರುಚಿಯಾಗಿರುತ್ತೆ. ಗೆಡ್ಡೆ ಅಂಟಾಗಿ ಇರುವುದರಿಂದ ಹಲವು ಬಾರಿ ನೀರಿನಿಂದ ತೊಳೆಯ ಬೇಕಾಗುತ್ತದೆ.

ಹಲವಾರು ನಾಟಿ ಔಷಧ ಗಳಿಗೆ ಮೂಲವಸ್ತುವಾಗಿ ಬಳಸುವುದು ರೂಢಿಯಿದೆ. ಆಧಾರ ಸಿಕ್ಕಲ್ಲಿ ಬಹುಬೇಗ ಹಬ್ಬುತ್ತ ಎಲ್ಲ ಜಾಗವನ್ನು ಆಕ್ರಮಿಸಿ ಕೊಳ್ಳುತ್ತದೆ. ದಿನ ಒಂದಕ್ಕೆ ೮ ಇಂಚು ಬೆಳೆಯುವ ಏಕೈಕ ಬಳ್ಳಿ ಇದಾಗಿರಬಹುದು. ಒತ್ತಾಗಿ ಹಬ್ಬಿ ಕೆಳಗೆ ನೆರಳು ಮಾಡುವುದರಿಂದ ಕೃಷಿಕರು ಬೆಳೆಯಲು ಹಿಂದೆ ಮುಂದೆ ನೋಡುತ್ತಾರೆ.ಆದರೆ ನುಗ್ಗೆ, ಅಗಸೆ ಗಿಡಗಳು ನೇರ ಬೆಳೆಯುವುದರಿಂದ ಅವಕ್ಕೆ ಹಬ್ಬಿಸ ಬಹುದು.  ಸಿಂಗಪೂರ್ ಚೆರ್ರಿ ಗಿಡ  ಹಬ್ಬಿಸಲು ಅನುಕೂಲಕರ. ಕಾರಣ ಇಷ್ಟೇ. ಮೇಲೆ ಹೋದಂತೆಲ್ಲ ಹರಡಿಕೊಳ್ಳುವುದರಿಂದ ಸರಾಗವಾಗಿ ಹಬ್ಬಿ ಕೊಂಬೆಗಳ ಮೇಲೆಲ್ಲ ಕಾಯಿ ಬಿಡುವುದನ್ನು ನೋಡಲೇ ಸೊಗಸು. ಬೆಂಗಳೂರು ಸಮೀಪವಿರುವ ಮರಸರ ಹಳ್ಳಿಯ ‘ನವ ನಂದನ’ ಸಾವಯವ ತೋಟದ ಚೆರ್ರಿ ಗಿಡದಲ್ಲಿ ನೂರಾರು ಕಾಯಿಗಳು. ಕೊಂಬೆಗಳನ್ನು ತಬ್ಬಿ ಮಲಗಿವೆ. ಪ್ರತಿ ಕಾಯಿಯೂ ೩೦೦-೪೦೦ ಗ್ರಾಂ ತೂಗುತ್ತವೆ.

ಬಳ್ಳಿಯ ಮೇಲೆ ಬಿಟ್ಟಿರುವ ಗೆಡ್ಡೆಗಳಲ್ಲಿ ಮೊದಲ ಮಳೆಗೆ (ಮಾರ್ಚ್-ಏಪ್ರಿಲ್‌ವೇಳೆಗೆ) ಮೊಳಕೆ ಬರುತ್ತದೆ. ಆಗ ನಾಟಿ ಮಾಡಿದರೆ ೬-೭ ತಿಂಗಳಲ್ಲಿ ಹೊಸ ಗೆಡ್ಡೆಗಳು ಸಿದ್ದ. ಬಳ್ಳಿಯ ಬುಡದಲ್ಲಿ ಬಿಡುವ ದೊಡ್ಡ ಗೆಡ್ಡೆಗಳು ಎರೆಡು ವರ್ಷದವರೆಗೆ ಭೂಮಿಯೊಳಗೇ ಇದ್ದರೂ, ನಾರಾಗುವುದಿಲ್ಲ.  ಬೇಕೆಂದಾಗ ತೆಗೆದು ಬಳಸ ಬಹುದು. ಹಲವಾರು ರುಚಿಕಟ್ಟಾದ ಅಡಿಗೆಗಳನ್ನು ಮಾಡಬಹುದು.

ಮರದ ಮೇಲೆ ಹಬ್ಬಿರುವ ಬಳ್ಳಿಯಲ್ಲಿ ಬಿಟ್ಟಿರುವ ಗೆಡ್ಡೆ

ಎರೆಡು ಮೂರು ವಿಧದ ಗೆಡ್ಡೆಗಳಿವೆ. ಹೊರಮೈ ನುಣುಪಾಗಿರುವುದು ಹೆಚ್ಚು ಜನಪ್ರಿಯ. ತುಂಬ ಒರಟಾಗಿರುವ ಹೊರಮೈನ ಗೆಡ್ಡೆಯಲ್ಲಿ ಸಿಪ್ಪೆ ದಪ್ಪವಾಗಿದ್ದರೂ, ತಿರುಳಿನ ರುಚಿಯಲ್ಲಿ ವ್ಯತ್ಯಾಸವಿರುವುದಿಲ್ಲ. ಪಲ್ಯ, ಸಾಂಬಾರು, ಚಿಪ್ಸ್ ಮಾಡಬಹುದು. ಒಮ್ಮೆ ನಾಟಿ ಮಾಡಿದರೆ, ಬಳ್ಳಿ ಒಣಗಿಹೋದರೂ, ಮಳೆ ಬಂದೊಡನೆ ಭೂಮಿಯೊಳಗಣ ಗೆಡ್ಡೆಯಿಂದ ಹೊಸ ಚಿಗುರು ಬರುತ್ತದೆ. ಪ್ರತಿ ವರ್ಷ ನಾಟಿ ಮಾಡುವ ಅವಶ್ಯಕತೆ ಇಲ್ಲ.

ಬಹಳ ಶೀಘ್ರವಾಗಿ ಹಬ್ಬುವುದಲ್ಲದೆ ಟೊಂಗೆಗಳಿಗೆ ಹೆಣೆದು ಕೊಂಡಿರುತ್ತದೆ. ಇದರ ಅಗಲವಾದ ಎಲೆಗಳು ಸೇರಿ ಮರದ ಕೆಳಗೆ ದಟ್ಟವಾದ ನೆರಳಿರುವಂತೆ ಮಾಡುತ್ತದೆ. ಕೆಲವೊಮ್ಮೆ ಮೇಲಿರುವ ಗೆಡ್ಡೆಗಳಿಂದ ಮೊಳಕೆ ಹೊರಟು ಬಳ್ಳಿ ಹಬ್ಬ ತೊಡಗುತ್ತದೆ. ಆಗ ನೆರಳು ಇನ್ನೂ ದಟ್ಟವಾಗುತ್ತದೆ. ಕಿತ್ತಿಟ್ಟ ಗೆಡ್ಡೆಗಳು ಪೂರ್ಣಾವಧಿಯ ವರೆಗೆ ಮೊಳಕೆ ಬರುವುದಿಲ್ಲ.  ಕೆಳಗೇನೂ ಬೆಳೆಯದಿದ್ದರೂ, ಆ ಜಾಗವನ್ನು, ಹತ್ತಾರು ಮಂದಿ ಕುಳಿತು ಮಾಡುವ  ಸಂವಾದಗಳಿಗೆ, ಚರ್ಚೆಗಳಿಗೆ, ಸಮರ್ಪಕವಾಗಿ ಬಳಸಿಕೊಳ್ಳ ಬಹುದು.

ಕೊನೆಹನಿ: ಮಳೆಗಾಲದಲ್ಲಿ, ತರಕಾರಿಯ ಕೊರತೆ ಇರುವ ಸಮಯದಲ್ಲಿ ಗೆಡ್ಡೆಗಳು ಉಪಯುಕ್ತ. ದೀರ್ಘ ಬಾಳಿಕೆ ಬರುವ ಗುಣಗಳಿರುವದರಿಂದ ಗೆಡ್ಡೆಗಳನ್ನು ಬೆಳೆಯುವುದು ಕ್ಷೇಮಕರ. ಯಾವದೇ ರೋಗಬಾಧೆ ಇಲ್ಲದಿರುವುದು, ಒಂದೇ ಗಿಡದಲ್ಲಿ ವರ್ಷಕ್ಕಾಗುವಷ್ಟು ಕಾಯಿ ಬಿಡುವುದು ವಿಶೇಷ.

(ಚಿತ್ರಗಳು: ಎಆರ್ಎಸ್ ಶರ್ಮ)