* ಪಂಚಭೂತಗಳು :

ಪೃಥ್ವಿ, ಆಪ್, ತೇಜಸ್ಸು, ವಾಯು ಮತ್ತು ಅಗ್ನಿಗಳನ್ನು ‘ಪಂಚಭೂತ’ಗಳೆಂದು ಪ್ರಾಚೀನ ದಾರ್ಶನಿಕರು ಕರೆದಿದ್ದಾರೆ. ಪಂಚಭೂತಗಳು ನಿತ್ಯ, ಆದರೆ ಪರಮಾತ್ಯನಷ್ಟು ನಿತ್ಯವಲ್ಲ. ಇವು ಆಂತರಿಕ ಸಂಬಂಧವುಳ್ಳವುಗಳಾಗಿ ಒಂದರಿಂದ ಇನ್ನೊಂದು ಜನ್ಮತಳೆದುದು ಸ್ವಾರಸ್ಯಕರ. ಈ ಕತ್ತಲು ಲೋಕದಲ್ಲಿ ತೇಜೋರೂಪಿಯಾದ, ನಿರಾಕಾರ ಆತ್ಮಶಕ್ತಿ ಮೊದಲು ಆಕಾಶವನ್ನು, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಪೃಥ್ವಿಯನ್ನು ಸೃಷ್ಟಿಮಾಡಿರುವುದಾಗಿ ವೇದಮೂಲಗಳು ತಿಳಿಸುತ್ತವೆ. ಇದು ಪಂಚಭೂತ ಸೃಷ್ಟಿ ಪಂಚಭೂತಗಳಿಂದ ಪ್ರಪಂಚ ಸೃಷ್ಟಿ. ‘ಭೌತಿಕ ಪ್ರಪಂಚಕ್ಕೆ ಕಾರಣೀಭೂತವಾಗಿರುವ ಈ ಪಂಚಭೂತಗಳಲ್ಲದೆ, ಮನಸ್ಸು, ಬುದ್ಧಿ, ಮತ್ತು ಅಹಂಕಾರಗಳೆಂಬ ಅಭೌತಿಕ ಭೂತಗಳೂ ಇವೆ.

[1] ಅದರಂತೆ ಪೃಥ್ವಿ, ಆಪ್, ಅಗ್ನಿ, ವಾಯು, ಆಕಾಶ, ಮನ, ಚಂದ್ರಗಳೆಂಬ ‘ಸಪ್ತಮಹಾಭೂತಗಳ’ ಉಲ್ಲೇಖವೊಂದು ಚನ್ನಬಸವಣ್ಣನವರಲ್ಲಿದೆ.[2]

* ವೇದಪುರಾಣಗಳಲ್ಲಿ ವಾಯುದೇವ

ಋಗ್ವೇದದಲ್ಲಿ ‘ಗಾಳಿ’ಗೆ ವಾಯು ವಾತ ಎಂದು ಪ್ರತ್ಯೇಕವಾಗಿ ಹೇಳಲಾಗಿದೆ. ವಾಯು ಪ್ರಪಂಚ ಸೃಷ್ಟಿಗೆ ಕಾರಣವಾದ ಪಂಚಮಹಾಭೂತಗಳಲ್ಲಿ ಒಂದು ಮತ್ತು ಭೂತಾಭಿಮಾನಿ. ಸೂರ್ಯ, ನೀರು, ಭೂಮಿ, ಬೆಂಕಿ, ಆಕಾಶ, ದೀಕ್ಷಿತ, ಚಂದ್ರರಂತೆ ಗಾಳಿಯೂ ಮಹಾದೇವರ ಸ್ವರೂಪವೆಂದು ‘ಪದ್ಮಪುರಾಣ’ದಲ್ಲಿ ಹೇಳಲಾಗಿದೆ. ಋಗ್ವೇದವು ಗಾಳಿಯನ್ನು ‘ವಾಯುದೇವತೆ’ ಯೆಂದು ಪರಿಗಣಿಸಿ ಇತರ ವೇದದ ದೇವತೆಗಳೊಡನೆ ಅದನ್ನು ಸ್ತುತಿಸಿದೆ. ‘ಮಧ್ಯಮಸ್ಥಾನ ದೇವತೆಗಳಲ್ಲಿ ವರ್ಷಕರ್ಮದಲ್ಲಿ ಪ್ರಥಮಾಧಿಕಾರವುಳ್ಳ ವಾಯುವಿಗೆ ಮೊದಲಸ್ಥಾನ[3]ವೆಂದು ‘ಯಾಸ್ಕ’ರು ಹೇಳುತ್ತಾರೆ. ಯಾಸ್ಕರ ಅಭಿಮತದಂತೆ ವಾಯುದೇವತೆ ಋಗ್ವೇದದ ದೇವತೆಗಳಲ್ಲೆಲ್ಲ ಮುಖ್ಯನಾದವನು. ಏಕೆಂದರೆ “ವಾಯು ನಿತ್ಯದರ್ಶನ. ಎಲ್ಲ ಜೀವಿಗಳೂ ಜೀವಿಸಿ ಬಾಳಬೇಕಾದರೆ ವಾಯುದೇವನ ಕೃಪೆಯಿಲ್ಲದೆ ಸಾಧ್ಯವಿಲ್ಲ”[4] ಪಂಚಮಹಾಭೂತಗಳಲ್ಲಿ ಒಂದಾದ ವಾಯು ಮುಖ್ಯ ದೇವತೆ ಮಾತ್ರವಲ್ಲದೆ, “ದೇವತೆಗಳಲ್ಲೆಲ್ಲ ಅತ್ಯಂತ ವೇಗಶಾಲಿ ಮತ್ತು ರೋಗಗಳನ್ನು ಉಪಶಮನಮಾಡಿ, ದೀರ್ಘಾಯುಷ್ಯವನ್ನು ಕರುಣಿಸುವ ಸಾಮರ್ಥ್ಯವುಳ್ಳದ್ದು”[5], ಎಂದು ಋಗ್ವೇದದಲ್ಲಿಯೇ ಉಕ್ತವಾಗಿದೆ. ಅಲ್ಲದೆ ‘ವಾಯುದೇವನಿಗೆ’ ಹಲವಾರು ಅಶ್ವಗಳಿಂದ ಹೂಡಿದ ರಥವಿದೆ. ಅದರಲ್ಲಿ ವಾಯುದೇವ ಕುಳಿತುಕೊಂಡು ಗುಡುಗಿನಂತೆ ಶಬ್ದಮಾಡುತ್ತ ಗಿರಿಗಹ್ವರಾದಿಗಳಲ್ಲಿ ವಿಧವಿಧವಾಗಿ ಪ್ರತಿಧ್ವನಿಗೈಯುತ್ತ ಬರುತ್ತಾನೆ. ಈತನ ರಥದ ರಭಸಕ್ಕೆ ಸಿಕ್ಕಿದ ಸ್ಥಾವರ-ಜಂಗಮಾದಿಗಳೆಲ್ಲ ನುಚ್ಚುನೂಣಗುವುವು. ಆಕಾಶವನ್ನು ಮುಟ್ಟಿ ಇವನು ದಿಗಂತವನ್ನು ಅರುಣವರ್ಣಯುತವನ್ನಾಗಿ ಮಾಡಿಬರುವನು. ಭೂಮಿಯ ಧೂಳನ್ನು ಎಬ್ಬಿಸುತ್ತ ಸಾಗಿಬರುವನು.[6] ಇತ್ಯಾದಿಯಾದ, ವಾಯುದೇವನ ಮತ್ತು ಆತನ ರಥದ ವರ್ಣನೆ ಋಗ್ವೇದದಲ್ಲಿ ಕಂಡುಬರುತ್ತದೆ.

ವಾಯುವಿನಲ್ಲಿ ಹತ್ತು ವಿಧಗಳುಂಟು. ಇವುಗಳನ್ನು ‘ದಶವಾಯು’ಗಳು ಎಂದು ಕರೆಯುತ್ತಾರೆ. “ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನಗಳೆಂಬುವು ಇದರ ಪ್ರಮುಖ ಪಂಚ ಪ್ರಭೇದಗಳಾದರೆ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ – ಇವು ಉಪಪ್ರಭೇದಗಳಾಗಿವೆ. ಮೊದಲಿನ ಐದೂ ಪ್ರಾಣವಾಯುಗಳಿಗಿಂತಲೂ ಮಿಕ್ಕ ಐದು ಉಪವಾಯುಗಳೆಂತಲೂ ರೂಢಿ. ಪ್ರಧಾನವಾದ ಪ್ರಾಣವೆಂಬ ವಾಯು ಹೃದಯದಲ್ಲಿಯೂ, ಅಪಾನವೆಂಬ ವಾಯು ಗುದಸ್ಥಾನದಲ್ಲಿಯೂ, ಸಮಾನವೆಂಬ ವಾಯು ನಾಭಿಯಲ್ಲಿಯೂ, ಉದಾನವಾಯು ಕಂಠದಲ್ಲಿಯೂ, ವ್ಯಾನವಾಯು ಶರೀರದ ಸಕಲ ಭಾಗಗಳಲ್ಲಯೂ ವ್ಯಾಪಿಸಿರುವುದು. ನಾಗವೆಂಬ ಉಪವಾಯು ವಾಗಿಂದ್ರಿಯದಲ್ಲಿರುತ್ತದೆ. ಕೂರ್ಮವೆಂಬ ಉಪವಾಯು ಉನ್ಮೀಲನ ಶಕ್ತಿಯನ್ನುಂಟು ಮಾಡುತ್ತದೆ. ಕೃಕರವೆಂಬ ಉಪವಾಯು ಹಸಿವನ್ನುಂಟು ಮಾಡುತ್ತದೆ. ದೇವದತ್ತವೆಂಬ ಉಪವಾಯುವಿನಿಂದ ಆಕಳಿಕೆ ಬಿಕ್ಕಳಿಕೆಗಳು ಉಂಟಾಗುತ್ತವೆ. ಧನಂಜಯವೆಂಬ ಉಪವಾಯು ದೇಹವನ್ನೆಲ್ಲ ಆವರಿಸಿಕೊಂಡು, ಜೀವದೇಹವನ್ನು ಬಿಟ್ಟಮೇಲೆ ಕೂಡ ಸ್ವಲ್ಪ ಹೊತ್ತಿನವರೆಗೆ ಇರುತ್ತದೆ.[7]

ವಾಯುಭೂತ -ಜಾತಿಗಳೆಲ್ಲದರಲ್ಲಿಯೂ ಪ್ರಾಣರೂಪದಿಂದ ಇದೆ. ಇದು ಸರ್ವವ್ಯಾಪಿ, ಸರ್ವಗ್ರಾಹಿ, ನಿತ್ಯದರ್ಶನ ಗುಣಗಳುಳ್ಳದಾದರೂ, ನಿರೂಪವಾದುದು, ಬಣ್ಣ -ರುಚಿಯಿಲ್ಲದ್ದು. ಶಬ್ದಾಶಕ್ತಿಯನ್ನು ಹೊಂದಿದ ವಾಯು ಬೀಸುವಾಗ ‘ಬರ್ರೆಂದೋ’ ಸೂರ್ಯಂದೊ ಧ್ವನಿಗೈಯುತ್ತದೆ. ಇದಕ್ಕೆ ಮುಖ್ಯವಾಗಿರುವ ಶಬ್ದ-ಸ್ಪರ್ಶಗಳೆಂಬ ಎರಡು ವಿಶಿಷ್ಟಗುಣಗಳಿಂದ ಇದರ ಬರವನ್ನು ತಿಳಿಯಬಹುದು. ಸ್ವ-ಇಚ್ಛೆಯಿಂದ ಎಲ್ಲ ಕಡೆಗೂ ಬೀಸುತ್ತದೆ. ವಾಯುವಿನ ಮೃದುಸ್ಪರ್ಶದಿಂದ ಮಾನವನಿಗೆ ಶಾಂತಿ ದೊರೆತರೆ, ಸುತ್ತಲಿನ ಕಲ್ಮಶಗೊಂಡ ಪರಿಸರ ನಿರ್ಮಲವಾಗುತ್ತದೆ. ಹೀಗೆ ಸಕಲಜೀವರಾಶಿಗೆ ಮೂಲಭೂತ ಅವಶ್ಯಕತೆಯಾದ ವಾಯುವು ನೀಡುವುದು ಪರಮೋಪಕಾರವಳನ್ನೇ.

ವಾಯುವನ್ನು ಪರಮಾಣುರೂಪದ್ದೆಂದು ಭಾವಿಸಿದಾಗ ಅದು ಅನಿತ್ಯ. ಅದನ್ನು ನಿತ್ಯವೆನ್ನುವುದಾದರೆ ಅದಕ್ಕೊಂದು ಮಿತಿ ಹಾಕಿದ ಹಾಗಾಗುವುದಿಲ್ಲವೆ? ಆದುದರಿಂದ, ಒಂದರ್ಥದಲ್ಲಿ ವಾಯುವನ್ನು ಅನಿತ್ಯವೆಂದೇ ಭಾವಿಸಿಬೇಕಾಗುತ್ತದೆ. ವಾಯು, ಪರಮಾಣು ರೂಪದ್ದಲ್ಲವೆಂದು ತಿಳಿದಾಗ, ಅದು ಅಮೂರ್ತವಾದುದು, ಚಲನಶೀಲವಾದುದು, ನಿತ್ಯವಾದುದು, ಹಾಗಾಗಿ ವಾಯುವನ್ನು ಪರಮಾಣರೂಪದ್ದೆಂದು ತಿಳಿಯಕೂಡದು.

ಏನೇ ಆದರೂ, ತನ್ನದೇ ‘ನಾದ’ ಮತ್ತು ‘ಸ್ಪರ್ಶ’ ಗುಣಗಳನ್ನು ಹೊಂದಿದ ವಾಯುವು ವೇದಕಾಲದ ಸಮಾಜಕ್ಕೆ, ಪ್ರಕೃತಿಯ ಇತರ ಶಕ್ತಿಗಳಾದ ಸೂರ್ಯ, ಚಂದ್ರ, ಮೋಡ, ಮಳೆ, ನಕ್ಷತ್ರಾದಿಗಳಂತೆ ದೇವತೆಯಾಗಿ ಪರಿಣಮಿಸಿದ್ದು ಗಮನಾರ್ಹ. ಈ ಪ್ರಕೃತಿ ದೇವತೆಗಳನ್ನು ಆ ಕಾಲದ ಸಮಾಜ. ಈಗಿನಂತೆ ಮನೆ-ಮಠಗಳಲ್ಲಿ ಪೂಜಿಸುತ್ತಿರಲಿಲ್ಲ. ಪುರೋಹಿತರು ಅಥವಾ ಮೇಲುವರ್ಗದ ಜನ ಯಜ್ಞಯಾಗಾದಿಗಳ ಮೂಲಕ ಮಂತ್ರಗಳಲ್ಲಿ ಹೇಳಿದಂತೆ ಇಂದ್ರ, ವರುಣ, ಅಗ್ನಿಗಳಂತಹ ದೇವತೆಗಳನ್ನು ಸಾಕಾರದಲ್ಲಿ ಪೂಜಿಸಿದರೆ, ಸಾಮಾನ್ಯ ಜನ ವೇದ ಮಂತ್ರಗಳಲ್ಲಿ ಹೇಳಿದ, ಪ್ರಕೃತಿ ದೇವತೆಗಳನ್ನು ಕಲ್ಪಿಸಿಕೊಂಡು ನಿರಾಕಾರದಲ್ಲಿಯೇ ಪೂಜಿಸಿದರು. ಏಕೆಂದರೆ, ಸಾಮಾನ್ಯರಿಗೆ ಯಜ್ಞಾಯಾಗಾದಿಗಳನ್ನು ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಗಾಳಿಯು ನಿರಾಕಾರವಾದುದರಿಂದ ಅದನ್ನು ನಿರಾಕಾರದಲ್ಲಿಯೇ ಪೂಜಿಸಿದರು. ವೇದಕಾಲದಲ್ಲಿ ಸಾಕಾರಪೂಜೆಗಿಂತಲೂ ನಿರಾಕಾರ ಪೂಜೆಯೇ ಹೆಚ್ಚಾಗಿದ್ದಂತೆ ತೋರುತ್ತದೆ. ಏಕೆಂದರೆ ಯಾವುದೇ ಸಮಾಜದಲ್ಲಿ ಮೇಲುವರ್ಗದ ಶ್ರೀಮಂತರಿಗಿಂತಲೂ ಕೆಳವರ್ಗದ ಬಡವರೇ ಹೆಚ್ಚಿಗಿರುತ್ತಾರೆ. ಸಹಜವಾಗಿ ಅವರೆಲ್ಲರ ಪೂಜಾವಿಧಾನ ನಿರಾಕಾರವೇ ಆಗಿರುತ್ತದೆ. ಮುಂದೆ ಬಂದಂಥ ಸ್ಮೃತಿ, ಪುರಾಣ, ಸೂತ್ರಗ್ರಂಥ, ಧರ್ಮಶಾಸ್ತ್ರಗಳಲ್ಲಿ ಯಥೇಷ್ಟವಾದ ಮೂರ್ತಿಪೂಜಾಕ್ರಮ, ವಿಧಿವಿಧಾನಗಳು ಹುಟ್ಟಿಕೊಂಡದ್ದು ಗಮನಾರ್ಹ.

ವಾಯುವನ್ನು ದೇವತೆಯೆಂದು ವೇದ ಒಪ್ಪಿದ್ದಲ್ಲದೆ, ಪುರಾಣವೂ ಒಪ್ಪಿಕೊಂಡಿದೆ. ಅಂತೆಯೇ ಇದನ್ನು ಕುರಿತು “ಶ್ರೀಮದ್ವಾಯು ಪುರಾಣಂ” ಎಂಬ ಉಪಲಬ್ದವಿದ್ದ ಸುಮಾರು ೧೨೦೦೦ ಶ್ಲೋಕಗಳುಳ್ಳ ಪುರಾಣವೂ ಸಹಿತ ಹುಟ್ಟಿಕೊಂಡಿದೆ.

ಗಾಳಿಗೆ ಹದಿನೇಳು ಹೆಸರುಗಳಿವೆ ಎಂದು ‘ಧನಂಜಯ ಶಬ್ದಕೋಶ’ ಹೇಳುತ್ತದೆ. ಅವು ಯಾವುದೆಂದರೆ ಪವನ, ಪವಮಾನ, ವಾಯು, ವಾತ, ಅನಿಲ, ಮಾರುತ್, ಸಮೀರಣ, ಗಂಧವಾಹ, ಶ್ವಾಸನ್, ಸದಾಗತಿ, ನಫಿಸ್ವತ್, ಮಾತರಿಶ್ವನ್, ವೇರುಣ್ಯ, ಜವನ, ಚಲ ಮತ್ತು ಪ್ರಭಂಜನ, ಈ ವಾಯುವಿನ ಹೆಸರುಗಳ ಕೊನೆಯಲ್ಲಿ ಪುತ್ರ ಶಬ್ದವನ್ನು ಜೋಡಿಸುವುದರಿಂದ ಭೀಮ ಮತ್ತು ಆಂಜನೇಯರ ಹೆಸರುಗಳಾಗುತ್ತವೆ. ಉದಾ. ಪವನಪುತ್ರ, ವಾಯುಪುತ್ರ ಇತ್ಯಾದಿ.[8] ಆಂಜನೆಯೆಂಬವಳಲ್ಲಿ ಈಶ್ವರಾಂಶದಿಂದ ವಾಯುವಿನ ಮೂಲಕ ‘ಆಂಜನೇಯ’ ಮತ್ತು ಕುಂತಿ ಭೋಜನ ಮಗಳಾದ ಪೃಥೆಯಲ್ಲಿ ವಾಯುದೇವನ ಅನುಗ್ರಹದಿಂದ ಭೀಮಸೇನ ಜನಿಸಿದರೆಂಬ ಪುರಾಣೋಕ್ತ ವಿಷಯ ಹಳ್ಳಿಗರಿಗೂ ಗೊತ್ತು. ಆದುದರಿಂದಲೇ ಅವರು ಈ ವಾಯುಪುತ್ರದ್ವಯರನ್ನು ಪೂಜಿಸುತ್ತಾರೆ. ಆರಾಧಿಸುತ್ತಾರೆ. ಮಧ್ವಾಚಾರ್ಯರೂ ಕೂಡ ವಾಯುದೇವನ ಅವತಾರವೆಂದು ಮಾಧ್ವರಲ್ಲಿ ನಂಬಿಕೆಯಿದೆ.

. ಗಾಳಿಯ ಹುಟ್ಟು

ಗಾಳಿಯ ಹುಟ್ಟನ್ನು ಕುರತಾದ ಕಥಾರೂಪಕ ನಂಬಿಕೆಯೆಂದು ‘ಪುರಾಣನಾಮ ಚೂಡಾಮಣಿ’ಯಲ್ಲಿ ಉಲ್ಲೇಖಗೊಂಡಿದೆ. ಅದು ಹೀಗಿದೆ ಕಶ್ಯಪ ಮುನಿಯ ಮೊದಲನೆಯ ಹೆಂಡತಿಯಾದ “ದಿತಿ” ಗರ್ಭಧರಿಸಿದಾಗ, ಇಂದ್ರ ನಾಲ್ವತ್ತೊಂಬತ್ತು ತುಂಡುಗಳಾಗಿ ಅದನ್ನು ಕತ್ತರಿಸಿದ. ಆ ಎಲ್ಲ ತುಂಡುಗಳಿಗೂ ‘ಮರುತ್’ ಎಂಬ ಹೆಸರು. ಇಂದ್ರ ತನ್ನ ಮಕ್ಕಳನ್ನೆಲ್ಲ ಕೊಂದನೆಂಬ ಸೇಡಿನಿಂದ ‘ದಿತಿ’ ಇಂದ್ರನನ್ನು ಕೊಲ್ಲುವ ಮಗ ತನಗೇ ಹುಟ್ಟಬೇಕೆಂಬ ಛಲದಿಂದ ಪತಿ ಕಶ್ಯಪನನ್ನು ಮೊರೆಹೊಕ್ಕಳು. ಆತನ ಅನುಗ್ರಹದಿಂದ ಗಭವತಿಯಾದಳು. ಈ ಸಮಾಚಾರವನ್ನು ಕೇಳಿದ ಇಂದ್ರ ‘ದಿತಿ’ಯ ಗರ್ಭವನ್ನು ಏಳು ಭಾಗವಾಗಿ ಕತ್ತರಿಸಿದ. [ಅವುಃ ಏವಃ ಪ್ರವಃ ಸಂದಃ, ಏಧ್ವಃ ವಿವಹ, ಪಿರಿವೆಃ ಮತ್ತು ವಿರಾವಃ -ಎಂಬ ಇಂದ್ರ ತುಂಡು ಮಾಡಿದ ಏಳು ಲೇಯರ್ಗಳು. ಇವುಗಳಲ್ಲಿಯ ಒಂದು ತುಂಡು ‘ಗಾಳಿ’ ಯಾಗಿ ಹುಟ್ಟಿಕೊಳ್ಳುತ್ತದಂತೆ:- ಗೋಕಾಕದ, ಸಂಸ್ಕೃತ ಪಂಡಿತ ಶ್ರೀ ಗುಂಡೂ ಶಾಸ್ತ್ರಿಗಳವರಿಂದ ಈ ವಿಷಯ ತಿಳಿದುದು] ಆಗ ಅವಳ ಗರ್ಭ ಅಳತೊಡಗಿತು. ಅಳುತ್ತಿದ್ದ ಆ ಏಳೂ ತುಂಡುಗಳನ್ನು ಮರಳಿ ಏಳು ಏಳು ಭಾಗ ಮಾಡಿ ಅಳಬೇಡ ಎಂದು ಹೇಳಿದ. ಅಷ್ಟರಲ್ಲಿ ‘ದಿತಿ’ ಎಚ್ಚತ್ತು. ಇಂದ್ರನ ಮೋಸದ ಕೃತ್ಯವನ್ನು ನೋಡಿ, ತನ್ನ ಅಜಾಗರೂಕತೆಗೆ ಮನನೊಂದು, ‘ಈ ಮಕ್ಕಳನ್ನು ನೀನೇ ಕಾಪಾಡಬೇಕೆಂದು ಇಂದ್ರನನ್ನು ಬೇಡಿಕೊಂಡಳು. ಇಂದ್ರ ಅವರಿಗೆ ದೇವತ್ವವನ್ನು ಕೊಟ್ಟು ‘ಮಾರುತ’ ಅಥವಾ ‘ಮರತ್’ಗಳೆಂದು ಹೆಸರಿಟ್ಟ. ಹೀಗೆ ವಾಯು ಅಥವಾ ಮರುತ್‌ಗಳಲ್ಲಿ ನಾಲ್ವತ್ತೊಂಬತ್ತು ಬಗೆಯಾಯಿತು. ಪಂಚಪ್ರಾಣಗಳನ್ನು ಇವುಗಳೊಂದಿಗೆ ಸೇರಿಸಿದರೆ ಒಟ್ಟು ಐವತ್ನಾಲ್ಕು ಬಗೆ.[9] ಎಂಬಿತ್ಯಾದಿಯಾದ, ಪುರಾಣದ ಕಥಾರೂಪದ ವಿಚಾರವಿದ್ದರೆ, ಗಾಳಿಯ ಉತ್ಪತ್ತಿಯನ್ನು ಕುರಿತ ಅನೇಕ ನಂಬಿಕೆಗಳು ಬುಡಕಟ್ಟು ಜನಾಂಗಗಳಲ್ಲಿ ಮತ್ತು ಜನಪದ ಜನಾಂಗದವರಲ್ಲಿ ಸಿಕ್ಕುತ್ತವೆ. ಈ ವಿಷಯದಲ್ಲಿ ಒಂದು ಬುಡಕಟ್ಟಿನವರ ನಂಬುಗೆ ಹೀಗಿದೆ. “ಸೂರ್ಯ ತನ್ನ ಹೆಂಡತಿ ಚಂದ್ರಳ ಹತ್ತಿರ ಶೃಂಗರಿಸಿಕೊಂಡು ಕಾಮದಾಸೆಯಿಂದ ಹೋಗುವನೆಂದು ಸವೋರ ಜನರ ನಂಬುಗೆ. ಆಗ ಕಾಮದಿಂದ ಕೆಂಪಾದ ಸೂರ್ಯನಿಂದ ಜಗತ್ತು ಬಿಸಿಯಾಗುತ್ತದಂತೆ ಶಾಖದಿಂದ ಸೂರ್ಯನಲ್ಲಿ ಬೆವರು ಸುರಿಯುತ್ತಿದೆ. ಆಗ ಅವನು ಗಾಳಿ ಹಾಕಿಕೊಳ್ಳುತ್ತಾನೆ. ಇದೇ ನಮಗೆ ‘ಗಾಳಿ’ಯಾಗಿ ಬರುತ್ತದೆಂದು ಸವೋರ ಜನರ ಬಲವಾದ ನಂಬಿಕೆ”.[10] ಈ ಮೇಲಿನ ಪುರಾಣದ ಕಥೆ ಮತ್ತು ಸವೋರ ಜನಾಂಗದ ನಂಬಿಕೆಯ ಹಿನ್ನೆಲೆಯಲ್ಲಿ ಗಾಳಿಯ ಹುಟ್ಟಿಗೆ ವಿಶ್ವಾತ್ಮನೇ ಕಾರಣವೆಂಬುದು ಸ್ಪಷ್ಟ ವಾಗುತ್ತದೆ. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ ಪರಮಾತ್ಮನ ಉಸಿರೇ ಗಾಳಿ ಎನ್ನಬಹುದು. ಆದಾಗ್ಯೂ, ಭೂಮ್ಯಾಕಾಶಗಳ ನಡುವೆ (ಅಂತರಿಕ್ಷ) ಎಲ್ಲಿಯೂ ನಿಲ್ಲದೆ ನಿರಂತರವಾಗಿ ಸಂಚರಿಸುವ ಒಂದು ವಿಶಿಷ್ಟಶಕ್ತಿಯಾದ ಗಾಳಿಯ ನಿಜವಾದ ಹುಟ್ಟು ಎಲ್ಲಿ? ಹೇಗೆ? ಎಂದು ಹೇಳಬಲ್ಲವರಾರು? ಗಾಳಿಯ ಹುಟ್ಟು ಕರ್ಣಗಮ್ಯವಾದರೂ, ಚಕ್ಷುಗಮ್ಯವಲ್ಲ ಅದು ಸೃಷ್ಟಿಯ ನಿಗೂಢ ರಹಸ್ಯ. ಇದನ್ನು ಭೇದಿಸಲಾದೀತೆ? ಮನುಷ್ಯನ ಬುದ್ಧಿಗೆ ವಿಚಾರಕ್ಕೆ ನಿಲುಕಲಾರದ್ದೆಲ್ಲವೂ ದೈವಾಂಶಸಂಭೂತವಾದದ್ದೆಂಬ ನಂಬಿಕೆ ಭಾರತೀಯರದಲ್ಲವೆ?

* ಜನಪದದಲ್ಲಿ ಗಾಳಿದೇವತೆ

ವೇದ ಪುರಾಣೋಕ್ತ ಪುರುಷದೇವತೆಯಾದ ಗಾಳಿಯನ್ನು ಜನಪದರು ವೇದಕಾಲದ ಸಾಮಾನ್ಯ ಜನ ಪೂಜಿಸುತ್ತಿದ್ದಂತೆ. ಮೊದಮೊದಲಿಗೆ ನಿರಾಕಾರದಲ್ಲಿಯೇ ಪೂಜಿಸತೊಡಗಿದರು. ಜೋಳದ ಸುಂಕದ ರಾಶಿ ಅಥವಾ ಭತ್ತದ ಹೊಟ್ಟುಳ್ಳ ರಾಶಿಯನ್ನು ಪೂಜಿಸಿ ಅದನ್ನು ತೂರಲು ಸಹಾಯಕವಾದ ಗಾಳಿದೇವನಿಗೆ, ಆತ ಬೀಸುವ ದಿಕ್ಕಿಗೆ ಕಡೆಗೆ ಎಡೆಹಿಡಿಯುತ್ತಾ ಬಂದಿದ್ದಾರೆ. ಹಳ್ಳಿಗರು ರಾಶಿಯನ್ನು ತೂರಿ ಜಳ್ಳಿನಿಂದ ಕಾಳನ್ನು ಬೇರ್ಪಡಿಸುವಾಗ, ಗಾಳಿಗೆ ಎಡೆಹಿಡಿಯುವ ಪದ್ಧತಿ ಬೆಳಗಾವಿ, ವಿಜಾಪುರ ಜಿಲ್ಲೆಗಳ ರೈತರಲ್ಲಿ ಈಗಲೂ ಚಾಲ್ತಿಯಲ್ಲಿದೆ. ತೂರುವಾಗ ಗಾಳಿ ಬೀಸದಿದ್ದರೆ ‘ಹುಲಿಗೋ ಹುಲಿಗೋ’ ಎಂದೋ ಅಥವಾ ‘ಹೋಗಲಿ ಸಮಾಲಿಗೋ’ (ಹಾಸನ ಕಡೆಗೆ) ಎಂದು ಕೂಗಿದರೆ, ಗಾಳಿ ಬೀಸುತ್ತದೆನ್ನುವ ನಂಬಿಕೆ ರೈತರಲ್ಲಿದೆ. ಗಾಳಿ ದೇವರೆಂಬ ಭಾವನೆ ಇವರಿಗೆ ಇರುವುದರಿಂದ, ಅದರ ಬಗೆಗೆ ಇಂಥ ಕೆಲವಾರು ನಂಬಿಕೆಗಳನ್ನು ಇರಿಸಿಕೊಂಡಿದ್ದಾರೆ. ಗಾಳಿಯನ್ನು ಎಂದಿನಿಂದಲೂ ದೇವತೆಯೆಂದೇ ಕಾಡಿದೆ ಜನಪದ ಸಮಾಜ. “ಗಾಳಿ ದೇವರಗೂಡ ಘಳಿದೇವರ ಬಂದಾ”[11] ಎಂಬ ಜನಪದ ತ್ರಿಪದಿಯ ಸಾಲಿನಲ್ಲಿ ಗಾಳಿಯನ್ನು ದೇವರೆಂದೇ ಸಂಬೋಧಿಸಿದ್ದು ವಿದಿತವಾಗುತ್ತದೆ. “ಗಾಳಿ ಪೂಜೆ ಎಂದರೆ ಶಕ್ತಿ ದೇವತೆಯ ಪೂಜೆ”[12] ಎಂದು ಕನ್ನಡ ನಿಘಂಟಿನಲ್ಲಿ ಹೇಳಲಾಗಿದೆ. ಹಾಗಾಗಿ ದುರ್ಗಿ, ಕಾಳಿ, ಮಾರಿಗಳಂತೆ ಗಾಳಿಯೂ ಒಂದು ಶಕ್ತಿದೇವತೆಯೆಂದು ಹೇಳಬಹುದು. ಜನಪದ ಸಂಸ್ಕೃತಿ ಯಲ್ಲಯೂ ಗಾಳಿದೇವತೆಯನ್ನು ಪುರುಷದೇವತೆಯಾಗಿಯೂ -ಸ್ತ್ರೀ ದೇವತೆಯಾಗಿಯೂ ಪೂಜಿಸಿದ್ದು ಗಮನಾರ್ಹ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿಯಲ್ಲಿ ಗಾಳೆಪ್ಪ ದೇವತೆ ಇದೆ. ದೇವತೆಗೆ ಗುಡಿಯೂ ಇದೆ. ಅದನ್ನು ‘ಗಾಳೆಪ್ಪಮಠ’ ಎಂದು ಕರೆಯುವ ವಾಡಿಕೆ. ಇಲ್ಲಿಯ ಗಾಳಿಪ್ಪನ ಮುರ್ತಿ ಅರಲಿನಿಂದ ಸಿದ್ಧಗೊಂಡುದು. ಪ್ರತಿವರುಷದ ಬಸವಜಯಂತಿಗೆ ಈ ದೇವರ ಜಾತ್ರೆ ನಡೆಯುತ್ತದೆ. ಗಾಳೆಪ್ಪನ ತೇರೂ ಇದೆ. ಉತ್ಸವದ ಸಂದರ್ಭದಲ್ಲಿ ಅದನ್ನು ಎಳೆಯುತ್ತಾರೆ. ಈ ಉತ್ಸವದ ಅಂಗವಾಗಿ ಮೂರ್ನಾಲ್ಕು ದಿನಗಳವರೆಗೆ ದನಗಳ ಜಾತ್ರೆ ಕೂಡ ನಡೆಯುತ್ತದೆ. ಗಾಳೆಪ್ಪನಮಠ ಕೆಲವಾರು ಎಕರೆ ಜಮೀನನ್ನೂ ಹೊಂದಿದೆ. ಈ ದೇವರ ಪೂಜೆಯನ್ನು ಲಿಂಗಾಯತರು ಮತ್ತು ಸ್ವಾಮಿಗಳು ಮಾಡುತ್ತ ಬಂದಿದ್ದಾರೆ. ಬಹುಶಃ ಇವರೇ ಆ ದೇವರ ಪೂಜಾರಿಗಳಿದ್ದಂತೆ ತೋರುತ್ತದೆ. ಸಮಾಜದ ಇತರ ವರ್ಗದವರು ಈ ದೇವರಿಗೆ ನಡೆದುಕೊಳ್ಳುತ್ತಾರೆ. ಇದನ್ನೆಲ್ಲ ಅವಲೋಕಿಸಿದರೆ, ಗಾಳೆಪ್ಪ ದೇವರು ನೇಸರಗಿಯಲ್ಲಿ ಬಹಳ ಹಿಂದಿನಿಂದಲೇ ನೆಲೆಸಿರಬೇಕೆಂದು ಕಾಣುತ್ತದೆ. ಇಲ್ಲಿಯ ಜನ, ಉಳಿದ ಗ್ರಾಮದೇವತೆಗಳಿಗಿಂತಲೂ ಈ ‘ಗಾಳೆಪ್ಪದೇವನ’ ಬಗೆಗೇ ಹೆಚ್ಚು ಭಯ-ಭಕ್ತಿಯನ್ನು ತೋರಿಸುತ್ತ ಬಂದಿದ್ದಾರೆ. ಈ ದೇವತೆಯಿಂದ ಕೇಡು, ಅಪಾಯ ಹೆಚ್ಚು ಎನ್ನುವ ಪಾರಂಪರಿಕ ನಂಬಿಕೆ, ಇಲ್ಲಿಯ ಜನರಲ್ಲಿ ಮನೆಮಾಡಿಕೊಂಡಿರುವುದರಿಂದ ಅದು ತಮಗೆ ತೊಂದರೆಯನ್ನುಂಟು ಮಾಡದಿರಲಿ ಎಂಬ ಭಾವನೆಯಿಂದ ಈ ದೇವನಿಗೆ ಹೆಚ್ಚು ನಡೆದುಕೊಳ್ಳುತ್ತಾರೆಂಬ ಪ್ರತೀತಿ ಇದೆ.

ಇನ್ನು ಶಕ್ತಿದೇವತೆಯಾದ ಗಾಳಿಯನ್ನು ಗಾಳಿಯಮ್ಮ, ಗಾಳವ್ವ, ಗಾಳಿಮಾರೆವ್ವ, ಗಾಳಿಮಾರಮ್ಮ, ಗಾಳಿದುರಗವ್ವ ಮೊದಲಾದ ಬೇರೆ ಬೇರೆ ಹೆಸರುಗಳಿಂದ ಜನಪದರು ಮೂರ್ತಿ ರೂಪದಲ್ಲಿಯೂ ಅಮೂರ್ತಿರೂಪದಲ್ಲಿಯೂ ಪೂಜಿಸಿದ್ದಾರೆ. ಬೈಲಹೊಂಗಲ ತಾಲ್ಲೂಕಿನ ‘ಸುನಕುಪ್ಪಿ’ ಎಂಬ ಗ್ರಾಮದಲ್ಲಿ ‘ಗಾಳಿಯಮ್ಮ’ನ ಪೂಜೆ ಸುಮಾರು ೬೦ ವರುಷಗಳಿಂದಲೇ ಪ್ರತಿವರ್ಷ ನಡೆಯುತ್ತ ಬಂದಿದೆ. ಇಲ್ಲಿ ಗಾಳೆಮ್ಮನ ಯಾವುದೇ ಮೂರ್ತಿಯಿಲ್ಲ. ಆದರೆ ಗಾಳಿದೇವತೆಯ ಗುಡ್ಡ ಇದೆ. ಅದನ್ನೇ ಸುನಕುಪ್ಪಿಯ ಜನ ಪೂಜಿಸುತ್ತಾರೆ. ಆ ಗುಡ್ಡದಲ್ಲಿ ಗಾಳಿದೇವತೆ ವಾಸವಾಗಿದ್ದಾಳೆಂಬ ನಂಬಿಕೆಯೇ, ಈ ಗುಡ್ಡದ ಗಾಳಿದೇವತೆಯ ಪೂಜೆಗೆ ಕಾರಣವಾದಂತೆ ತೋರುತ್ತಿದೆ. ಈ ದೈವದ ಹೆಸರಿನಿಂದ ಗಾಳಿಗುಡ್ಡದಲ್ಲಿ ಪ್ರತಿವರ್ಷ ದೊಡ್ಡ ಜಾತ್ರೆ ನೆರೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಉರುಳುಸೇವೆಯೂ ನಡೆಯುತ್ತದೆ. ಆಶ್ಚರ್ಯದ ಸಂಗತಿಯೆಂದರೆ ಗಾಳಿದೇವರ ಗುಡ್ಡದ ಕೆಳಗಿನಿಂದ ಉರುಳಿದರೆ ಗುಡ್ಡದ ಮೇಲೆ ತನ್ನಿಂದ ತಾನೇ ಉರುಳುತ್ತಾ ಹೋಗುತ್ತಾರೆಂಬ ನಂಬಿಕೆ. ಇದು ಗಾಳೆಮ್ಮನ ಪ್ರಭಾವವೆಂದು, ಸಾಕ್ಷಾತ್ ಕಂಡವರಂತೆಯೇ ಕೇಳಿದ ಜನ ಹೇಳುತ್ತಾರೆ. ಇದು ಗಾಳೆಮ್ಮನ ಭಕ್ತರ ಮಾನಸಿಕ ಭ್ರಮೆ ಎನ್ನದೆ ವಿಧಿಯಿಲ್ಲ. ಗುಡ್ಡದ ಕೆಳದಿಂದ ಮೇಲಕ್ಕೆ ಯಾವ ಪ್ರೇರಣೆಯೂ ಇಲ್ಲದೆ ಉರುಳುವುದು ಅವಾಸ್ತವ ಸಂಗತಿಯೆನಿಸಿದರೂ ಗಾಳೆಮ್ಮನನ್ನು ಪೂಜಿಸುವುದು ಮಾತ್ರ ವಾಸ್ತವ ಸಂಗತಿ. ಮನುಷ್ಯರಿಗೆ, ಆತನ ದನಕರುಗಳಿಗೆ ಮತ್ತು ಅವನ ಬೆಳೆಗಳಿಗೆ ಯಾವುದೇ ರೋಗದ ಬಾಧೆಯನ್ನುಂಟು ಮಾಡದಿರಲಿ ಎಂಬ ಭಾವನೆಯಿಂದಲೇ ಇಲ್ಲಿಯ ಜನ ಗಾಳೆಮ್ಮನನ್ನು ಪೂಜಿಸುತ್ತ ಅವಳ ಜಾತ್ರೆ ಏರ್ಪಡಿಸುತ್ತ ಬಂದಿದ್ದಾರೆ. ಅವಳಿಗೆ ಪೂಜೆ-ಪುರಸ್ಕಾರ, ಜಾತ್ರೆ ಉತ್ಸವಗಳನ್ನು ಏರ್ಪಡಿಸುವುದರ ಮೂಲಕ ಅವಳನ್ನು ಸಂತೃಪ್ತಿಯಲ್ಲಿಡಬೇಕು. ಇಲ್ಲವಾದರೆ, ಗಾಳೆಮ್ಮ ಸಿಟ್ಟಿಗೆ ಬಂದು ನಾನಾ ರೋಗಗಳನ್ನು ಹರಡುವಳೆಂಬ ಸನಾತನ ನಂಬುಗೆ ಗ್ರಾಮೀಣರದು.

‘ಗಾಳಿ’ ದೈವವೆನ್ನುವ ಭಾವೆ ಇತರ ಕಡೆಗಳಲ್ಲಿದ್ದಂತೆ, ಧಾರವಾಡ ಜಿಲ್ಲೆಯಲ್ಲಿಯೂ ಇದೆ. ಈ ಜಿಲ್ಲೆಯ ‘ಕುಂದಗೋಳ’ದಲ್ಲಿ ‘ಗಾಳಿ ಮಾರೆವ್ವ’ ಎಂಬ ಹೆಸರಿನಲ್ಲಿ ಗಾಳಿದೇವತೆ ಪೂಜೆಗೊಳ್ಳುತ್ತ ಬಂದಿದೆ. ದಿಕ್ಕಿಲ್ಲದ ದೇವತೆಗಾಗಿ ಊರ ಹೊರಗಿನ ಬಯಲಿನಲ್ಲಿ ಇದೆ. ಸ್ತ್ರೀದೇವತೆಯ ಸ್ವರೂಪ ಇದಕ್ಕಿದೆ. ಇದು ಸುಮಾರು ೭೦-೮೦ ವರ್ಷಗಳಷ್ಟು ಹಿಂದಿನ ದೈವ ಇರಬೇಕೆಂದು ಅಲ್ಲಿಯ ಜನಗಳ ತರ್ಕ. ಚಿಕ್ಕಮಕ್ಕಳಿಗೆ ರೋಗ ರುಜನಗಳು ತಗುಲಬಾರದೆನ್ನುವ ಭಾವನೆಯಿಂದ ಈ ‘ಗಾಳಿಮಾರೆವ್ವ’ನನ್ನು ಪೂಜಿಸುತ್ತಾರೆ. ಚಿಕ್ಕಮಕ್ಕಳಿಗೆ ರೋಗದ ಬಾಧೆಯನ್ನುಂಟುಮಾಡಿ, ಗಾಳಿಮಾರೆವ್ವ ನಲಿಯುವಳೆಂಬ ನಂಬಿಕೆ ಬಹುಜನರಲ್ಲಿದೆ. ನೀರು, ಎಣ್ಣೆ, ಸುಣ್ಣ, ಕುಂಕುಮಾದಿಗಳಿಂದ ಈ ದೈವವನ್ನು ಎಲ್ಲ ಜಾತಿಯವರೂ ಪೂಜಿಸುತ್ತಾರೆ. ಗಾಳಿ ಮಾರೆವ್ವನ ಪ್ರಭಾವ (ಕಾಟ = ಉಪಟಳ) ಊರಲ್ಲಿ  ಅತಿಯಾದುದರಿಂದ, ನಿತ್ಯ ಪೂಜಾರಿಯೊಬ್ಬ ಇಂದು ಪೂಜಿಸುತ್ತಿದ್ದಾನೆ. ಪೂಜೆಯ ಮೂಲಕ ಅವಳನ್ನು ಸಮಾಧಾನಗೊಳಿಸಿದರೆ, ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯನ್ನು ಅವಳು ಕೊಡುವುದಿಲ್ಲವೆಂಬುದು ಗ್ರಾಮೀಣರ ಬಲವಾದ ನಂಬುಗೆ. ಈ ದೇವರು ಜನಗಳ ಮೈಯಲ್ಲಿ ಹೊಕ್ಕು ಒಡನುಡಿಸುತ್ತದೆಂದೂ ಕುಂದಗೋಳದ ಜನತೆಯ ನಂಬಿಕೆ; ಕಲ್ಪನೆ.

‘ಗಾಳಿಮಾರವ್ವ’ ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ನಲ್ಕುಂದ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿಯೂ ತುಂಬ ಪ್ರಚಾರದಲ್ಲಿರುವ ದೇವತೆ. ದಡಾರ, ಸಿಡುಬು, ಬಾಯಿಜ್ವರ ಮುಂತಾದ ಕಾಯಿಲೆಗಳು ಕಾಣಿಸಿಕೊಂಡರೆ, ಅದಕ್ಕೆ ಈ ‘ಗಾಳಿಮಾರವ್ವ’ನೇ ಕಾರಣ : ಅವಳ ತೃಪ್ತಿಗಾಗಿ ಊರವರೆಲ್ಲ ಸೇರಿ ಪ್ರತಿವರ್ಷ ಆಷಾಢಮಾಸದಲ್ಲಿ ಗಾಳಿಮಾರವ್ವನ ಹಬ್ಬ ಮಾಡಿ ಅವಳನ್ನು ತೃಪ್ತಿಗೊಳಿಸಬೇಕೆನ್ನುವುದು ಸಾಂಪ್ರದಾಯಿಕ ನಂಬುಗೆ. ಆದುದರಿಂದ ಈ ಹಬ್ಬದ ಸಂದರ್ಭದಲ್ಲಿ ನಾನಾ ವಿಧಿ-ನಿಷೇಧಗಳನ್ನು ಆಚರಿಸುವುದು ಸ್ವಾಭಾವಿಕ. ‘ಕನ್ನಡ ಜಾನಪದ ವಿಶ್ವಕೋಶ’ದಲ್ಲಿ ಉಕ್ತವಾದ ಗಾಳಿ ಮಾರವ್ವನ ಹಬ್ಬದ ಆಚರಣೆಯನ್ನು ಹೀಗೆ ಸಂಗ್ರಹಿಸಿ ಕೊಡಲಾಗಿದೆ. ಹಬ್ಬದಂದು ಊರವರೆಲ್ಲ ತಮ್ಮ ತಮ್ಮ ಮನೆಯಿಂದ ಅಡಿಗೆ ಸಾಮಾನುಗಳನ್ನು ತೆಗೆದುಕೊಂಡು ಹೋಗಿ, ಊರಹೊರಗಿನ ಹನುಮಪ್ಪನ ಗುಡಿಯ ಮುಂದೆ ಅಡಿಗೆ ಮಾಡುವರು. ಜೊತೆಗೆ ಊರಗೌಡ ಮತ್ತು ತಳವಾರನ ನೇತೃತ್ವದಲ್ಲಿ ಊರವರೆಲ್ಲ ಸೇರಿ ಹಾಕಿದ ಚಪ್ಪರದಲ್ಲಿ ಆಚಾರಿ ತಯಾರಿಸಿದ ಮಣ್ಣಿನ ಗಾಳಿಮಾರವ್ವನ ಪ್ರತಿಮೆಯನ್ನು ಇಟ್ಟು ಭಕ್ತರು ಮಾಡಿದ ಅಡಿಗೆಯನ್ನು ನೈವೇದ್ಯ ಮಾಡುವರು. ದೇವರಿಗೆ ಪೂಜೆ ನಡೆಯುತ್ತಿರುವಾಗ ಹಲಗೆಯ ಬಡಿತಕ್ಕೆ ಸರಿಯಾಗಿ ಕುಣಿಯುವರು. ಅನಂತರ ಕೇರಿ ಹುಡುಗರು ಈ ದೇವತೆಯನ್ನು ಹೊತ್ತುಕೊಂಡು ಪಕ್ಕದ ಊರಿನ ಗಡಿಯಲ್ಲಿಟ್ಟು ಪೂಜೆಮಾಡಿ, ತಿರುಗಿ ನೋಡದೆ ಬರುವದು. ತಿರುಗಿ ನೋಡಿದರೆ, ಗಾಳಿಮಾರವ್ವ ಮತ್ತೆ ಬೆನ್ಹತ್ತಿ ಬರುವಳೆಂಬ ನಂಬಿಕೆಯಿದೆ. ಅಡಿಗೆ ಮಾಡಿ ಊಟ ಮಾಡಿದ ಜನಗಳು ಗಾಳಿ ಮಾರವ್ವನನ್ನು ಗಡಿದಾಟಿಸಿ ಬರುವತನಕ ಊರ ಒಳಗೆ ಹೋಗುವಂತಿಲ್ಲ. ಅವರು ಬಂದ ಮೇಲೆ ಮಾರವ್ವನನ್ನು ಕಳಿಸಬಂದಿರಾ! ಎಂದು ಕೇಳಿ ಊರ ಹನುಮಂತ ದೇವರಿಗೆ ಕೈಮುಗಿದು ತಮ್ಮ ತಮ್ಮ ಮನೆಗಳಿಗೆ ಹೋಗುವರು. ಊರ ಹೊರಗಡೆ ಮಾಡಿದ ಅಡಿಗೆಯನ್ನು ಊರ ಒಳಗೆ ತರುವಂತಿಲ್ಲ. ಎಷ್ಟೇ ಇದ್ದರೂ ಅದನ್ನು ಅಲ್ಲಿಯೇ ಊಟಮಾಡಬೇಕು. ಜನರೆಲ್ಲ ತಿಂದು ಉಳಿದದ್ದನ್ನು ದನಕರುಗಳಿಗೆ ತಿನ್ನಿಸಿಬರಬೇಕು.[13]

ಈ ಬಗೆಯ ನಂಬಿಕೆಯ ಹಿನ್ನೆಲಯ ಅನೇಕ ಆಚರಣೆಗಳು ಇಂದಿನ ಗ್ರಾಮೀಣರಲ್ಲಿಯೂ ರೂಢಿಯಲ್ಲಿವೆ. ರೋಗಗಳಿಗೆ ಔಷಧಿ ಇಲ್ಲದ ಕಾಲದಲ್ಲಿ ಗ್ರಾಮೀಣ ಜನ ರೋಗಕ್ಕೆ ಗಾಳಿಮಾರೆವ್ವ ಕಾರಣವೆಂದು ನಂಬಿ. ಅವಳನ್ನು ಸಂಪ್ರೀತಿಗೊಳಿಸಿದರೆ ಬಂದ ರೋಗ ನಿವಾರಣೆಯಾಗುತ್ತದೆ ಅಥವಾ ಬರಬಹುದಾದ ರೋಗ ತಡೆದು ನಿಲ್ಲಬಹುದು ಎಂದು ಭಾವಿಸಿ ಈ ಮೇಲಿನಂತೆ ಆಚರಣೆ ಕೈಕೊಂಡಿದ್ದುದನ್ನು ಮೂಢನಂಬಿಕೆ ಎನ್ನಲಾಗದು. ಬದುಕಬೇಕೆನ್ನುವವರಿಗೆ ಹುಲ್ಲುಕಡ್ಡಿಯೂ ಆಶ್ರಯವಾಗಬಹುದಲ್ಲ! ಮನುಷ್ಯನಿಗೆ ಬದುಕು ಮುಖ್ಯ. ಅದಕ್ಕಾಗಿ ಜನಪದರು ಯಾವ ಆಚರಣೆಯನ್ನಾದರೂ ಮಾಡಬಲ್ಲರು; ಯಾವುದನ್ನಾದರೂ ನಂಬಬಲ್ಲರು. ಅವರ ನಂಬಿಕೆ ಕೇವಲ ನಂಬಿಕೆ. ಮೂಢನಂಬಿಕೆಯಲ್ಲ. ಹಾಗೆ ನೋಡಿದರೆ ಮೂಢನಂಬಿಕೆಯೆಂಬುದೇ ಇಲ್ಲ. ಬದುಕುವುದಕ್ಕಾಗಿ ಜಾನಪದ ಮನಸ್ಸು. ನಂಬಿಕೆಯ ರೂಪದ ಎಂತೆಂತಹ ಕಲ್ಪನೆಗಳು ಕಟ್ಟಿ, ಆಚರಿಸುತ್ತದೆಂಬುದು ಸಂಸ್ಕೃತಿಯ ಅಧ್ಯಯನದಲ್ಲಿ ಮುಖ್ಯವೆನಿಸುತ್ತದೆ.

ಇದೇ ದಾವಣಗೆರೆ ಪರಿಸರದಲ್ಲಿ ದನಕರುಗಳಿಗೆ ಬರುವ ಒಂದು ಬಗೆಯ ರೋಗ ‘ಗಾಳಿಯಮ್ಮ’ ಎಂದು ಜನಗಳ ನಂಬಿಕೆ. ದನಗಳ ಬಾಯಲ್ಲಿ ಜೊಲ್ಲು ಸುರಿಯುವುದು, ಹೊಟ್ಟೆ ಹುಣ್ಣಾಗುವುದು. ಮೇವು ತಿನ್ನದೆ ಇರುವುದು, ಕಾಲಲ್ಲಿ ಹುಳಬೀಳುವುದು-ಇವೆಲ್ಲ ಗಾಳೆಮ್ಮ ರೋಗದ ಲಕ್ಷಣಗಳೆನ್ನುವರು. ಈ ರೋಗದಿಂದ ಪ್ರಾಣಿಗಳನ್ನು ಮುಕ್ತಗೊಳಿಸಲು ಗಂಗಮ್ಮನನ್ನು ಕರೆದು ತಂದು ಪೂಜೆಮಾಡಬೇಕೆಂಬ ನಂಬಿಕೆಯಿದೆ. ಏಳು ವರುಷದ ಐದು. ಜನ ಹುಡುಗಿಯರು ಸ್ನಾನಮಾಡಿಕೊಂಡು ಬಾವಿ ಅಥವಾ ಕೆರೆಯಿಂದ ಹೊಸ ಮಡಿಕೆಯಲ್ಲಿ ನೀರು ತಂದು, ಮನೆಯಲ್ಲಿ ಕಳಸದ ಎದುರಿಗೆ ಇಟ್ಟು ಪೂಜೆ ಮಾಡಿ ಆ ನೀರನ್ನು ದನಕರುಗಳ ಮೇಲೆ ಚಿಮುಕಿಸುವರು. ಈ ರೀತಿ ಐದು ದಿನ ಪೂಜೆ ಮಾಡಿ ನೀರು ಚಿಮುಕಿಸಿದ ಮೇಲೆ ತಮಟೆ, ವಾದ್ಯ ಸಮೇತ ಊರಾಚೆಗೆ ಅವುಗಳನ್ನು ಬಿಟ್ಟು ಬರುವರು. ಹೀಗೆ ಮಾಡುವುದರಿಂದ ಆ ಕಾಯಿಲೆಯ ದೇವತೆಗೆ ತೃಪ್ತಿಯಾಗಿ ದನಕರುಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸುವಳು ಎಂದು ಅಲ್ಲಿಯ ಜನಗಳ ನಂಬುಗೆ[14]

ಹೀಗೆ, ಮನುಷ್ಯರಿಗೆ ಬರುವ ಕಾಲರಾ, ಪ್ಲೇಗು, ಸಿಡುಬು, ದಡಾರ, ಚಳಿಜ್ವರ ಮೊದಲಾದ ಕಾಯಿಲೆಗಳಿಗೆ ಹಾಗೂ ದನಕರುಗಳಿಗೆ ಬರುವ ‘ಕಾಲಬ್ಯಾನಿ ಬಾಯಿಬ್ಯಾನಿ’ ಯಂಥ ರೋಗಗಳಿಗೆ ‘ಗಾಳಿಯಮ್ಮ’ಳ ಮುನಿಸೇ ಕಾರಣವೆಂಬುದು ಕರ್ನಾಟಕದ ಎಲ್ಲ ಜನಪದರ ನಂಬಿಕೆ.

ಮೇಲಿನ ಅಂಶಗಳನ್ನು ಅವಲೋಕಿಸಿದಾಗ, ಜನಪದ ಸಂಸ್ಕೃತಿಯಲ್ಲಿ, ಗಾಳಿಯು ರಕ್ಷಕದೈವಕ್ಕಿಂತ ಶಿಕ್ಷಕದೈವವಾಗಿಯೇ ಹೆಚ್ಚು ಪ್ರಚಲಿತದಲ್ಲಿದ್ದುದೂ ಕಂಡುಬರುತ್ತದೆ.

ಗಾಳೆವ್ವನ ಗುಡಿಗಳೂ ಇವೆ. ಬಯಲಲ್ಲಿದ್ದ ಈ ದೇವತೆ ಕ್ರಮೇಣ ಗುಡಿ ಪ್ರವೇಶಿಸಿದ್ದು, ತನ್ನ ಪ್ರಭಾವದಿಂದಲೇ ಇರಬೇಕು. ಗಾಳೆವ್ವನ ಗುಡಿಯೊಂದು ಲಕ್ಷ್ಮೇಶ್ವರದ ಹರಿಜನಕೇರಿಯಲ್ಲಿದೆ. ಆ ಗುಡಿಯಲ್ಲಿ ಕಾಡುಕಲ್ಲನ್ನೇ ಗಾಳೆವ್ವನನ್ನಾಗಿ ಮಾಡಿ ಪೂಜಿಸುತ್ತಾರೆ. ಬೈಲಹೊಂಗಲದಲ್ಲಿಯೂ ಗಾಳಿದುರಗವ್ವನ ಗುಡಿಯಿದೆ. ಅಲ್ಲದೆ ಹುಬ್ಬಳ್ಳಿಯ ‘ತಿರುಕಾರಾಮ’ನ ಕೆರೆಯಲ್ಲಿ ಗಾಳಿದುರಗವ್ವನ ಗುಡಿಯಿದೆ. ಪ್ರತಿವರುಷ ‘ವಾರಾ’ ಬಿಟ್ಟಾಗ ಅದರ ಕೊನೆಯವಾರ ಉಡಿತುಂಬುವ ಮತ್ತು ದೊಡ್ಡ ಹಬ್ಬಗಳಲ್ಲಿ ಪಲ್ಲಕ್ಕಿ ಹೊರುವ ಮೊದಲಾದ ಉತ್ಸವಗಳು ನಡೆಯುತ್ತವೆ. ಧಾರವಾಡದ ವಿದ್ಯಾರಣ್ಯ ಹೈಸ್ಕೂಲ ಹತ್ತಿರ ಅರಳೀಗಿಡದ ಬುಡದಲ್ಲಿ ಗಾಳೆವ್ವನ ಕಟ್ಟೆ ಇದೆ. ಇದು ಇಂದಿಗೂ ಪೂಜೆಗೊಳ್ಳುತ್ತಿದೆ. ಗುಡಿಗಳಲ್ಲಿರುವ ಗಾಳಿದೇವತೆಯನ್ನು ಹೆಚ್ಚಾಗಿ ನಿಮ್ನವರ್ಗದ ಜನ, ಅದರಲ್ಲಿಯೂ ಹರಿಜನರೇ ಹೆಚ್ಚಾಗಿ ಪೂಜಿಸುತ್ತಾರೆ.

ಆಕಳು-ಎಮ್ಮೆ ಹಾಲು ಕರೆಯದಿದ್ದರೆ, ಚಿಕ್ಕಮಕ್ಕಳು ಅಳತೊಡಗಿದರೆ ‘ಗಾಳಿ ಮಾರೆವ್ವನ ಕಾಟ’ ಎನ್ನುವ ನಂಬಿಕೆಯಿದೆ. ಮನೆಯ ಹಿರಿಯ ವ್ಯಕ್ತಿ ಸ್ನಾನಮಾಡಿ, ಗಾಳಿಮಾರೆವ್ವನ ಗುಡಿಗೆ ಹೋಗಿ, ಪೂಜೆಮಾಡಿ ನೈವೇದ್ಯ ಸಲ್ಲಿಸಿ ಬರುವುದರಿಂದ, ಈ ‘ಗಾಳಿಕಾಟ’ ನಿವಾರಣೆಯಾಗುತ್ತದೆಂಬ ನಂಬಿಕೆಯೂ ಇದೆ. ‘ಪ್ರಾರ್ಥನೆಗೆ ಕರಗದ ಕಲ್ಲಿಲ್ಲ’ – ಎಂಬ ಜನಪದ ನುಡಿಯನ್ನು ಇಲ್ಲಿ ಸ್ಮರಿಸಿ ಕೊಳ್ಳಬಹುದಲ್ಲವೆ; ಗಾಳಿದೇವರು ಊಟ ಮಾಡುವುದಿಲ್ಲ, ನೀರು ಕುಡಿಯುವುದಿಲ್ಲ ಎನ್ನುವ ವ್ಯಾಪಕವಾದ ನಂಬಿಕೆಯಿದ್ದರೂ ಆತನಿಗೆ ಎಡೆಮಾಡಿ ನೈವೇದ್ಯ ಹಿಡಿಯುವುದನ್ನು ಅನಾದಿ ಕಾಲದಿಂದಲೂ ನಮ್ಮ ಜನಪದ ಸಮಾಜ ಮುಂದುವರಿಸಿಕೊಂಡು ಬಂದುದು ಆಶ್ಚರ್ಯವೆನಿಸುತ್ತದೆ. ಗಾಳಿದೆವ್ವ, ಮನುಷ್ಯನ ಕಷ್ಟಕಾಲದಲ್ಲಿ ತನ್ನ ಮಾಯಾರೂಪದಿಂದ ಪ್ರತ್ಯಕ್ಷವಾಗಿ ಸಹಾಯ ಮಾಡುತ್ತದೆಂಬ ನಂಬಿಕೆಯಿದೆ. ಈ ದೈವದ ಪೂಜಕ ಪೂಜಾ ಸಮಯದಲ್ಲಿ ತಲೆಯ ಮೇಲೆ ರುಮಾಲು, ಟೊಪ್ಪಿಗೆ, ವಸ್ತ್ರ, ಏನನ್ನಾದರೂ ಧರಿಸಿರಲೇಬೇಕೆಂಬ ನಂಬಿಕೆಯಿದೆ. ಮನುಷ್ಯ ತಾನು ದೇವರಿಗಿಂತ ಚಿಕ್ಕವ ಎಂಬ ವಿನಯದ ಪ್ರತೀಕ ಇದಾಗಿರಬೇಕೆಂದು ತೋರುತ್ತದೆ. ಗಾಳಿ ದೇವರು ಮೈಮೇಲೆ ಬಂದ ವ್ಯಕ್ತಿ ಕರ್ಕಶ ಸ್ವರದಲ್ಲಿ ಚೀರುವನು. ಹುಬ್ಬು ಗಂಟಿಕ್ಕಿ ಮುಖ ಕೆಟ್ಟದಾಗಿ ಮಾಡಿಕೊಂಡು ಆ ಕಡೆ ಈ ಕಡೆ ನೋಡುವನು. ಕುಡಿದವನಂತೆ ಜೋಲಿ ಹೊಡೆಯುವನು. ಮಾತನಾಡಿಸಿದರೆ ತನ್ನವರು, ಬಂಧುಗಳು ಎನ್ನದೆ, ಎಲ್ಲರಿಗೂ ಗರ್ವದಿಂದ ಉತ್ತರಿಸುವನು. ಮೈಮೇಲೆ ಬರುವ ಗಾಳಿದೇವತೆಗಳನ್ನೇ ಹಳ್ಳಿಗರು ಹೆಚ್ಚು ನಂಬುತ್ತಾರೆಂದು ತೋರುತ್ತದೆ. ಭಕ್ತರ ಮನಸ್ಸಿನಲ್ಲಿದ್ದುದನ್ನು ಈ ಗಾಳಿದೇವ ಹೇಳುತ್ತಾನೆಂಬ ನಂಬಿಕೆಯೂ ಇದಕ್ಕೆ ಬಲುಮಟ್ಟಿಗೆ ಕಾರಣವಾಗಿರಬೇಕು. ‘ಗಾಳಿಹನುಮ’ ಎಂಬುದು ಮೈಯಲ್ಲಿ ಬರುವ ದೇವರೆಂಬುದು ಕರ್ನಾಟಕದ ಕೆಲವು ಕಡೆ ಪ್ರಚಲಿತದಲ್ಲಿದೆ. ಈ ದೇವರು ತುಂಬಿದ ವ್ಯಕ್ತಿ ಕೂಗುತ್ತಾನೆ. ಕುಶಿಯುತ್ತಾನೆ. ಚಿತ್ರವಿಚಿತ್ರವಾಗಿ ಅಭಿನಯಿಸುತ್ತಾನೆ. ಅಲ್ಲದೆ ಕೈಗೆ ಸಿಕ್ಕಿದವರನ್ನು ಹೊಡೆಯುತ್ತಾನೆ, ಬಯ್ಯುತ್ತಾನೆ, ಸುತ್ತಮುತ್ತಲಿನ ಜನ ತನ್ನನ್ನು ನೋಡಲಿ ಎಂಬ ಭಾವನೆಯಿಂದ ಮೇಲಿನಂತೆ ವರ್ತಿಸುತ್ತಾನೆಂದು ತೋರುತ್ತದೆ. ದೇವರು ಮೈದುಂಬುವುದು- ಅದೊಂದು ‘ಮನೋಜಾಥ್ಯ’ವೆಂದು ಡಾ. ಎಚ್. ನರಸಿಂಹಯ್ಯ, ಡಾ. ಸಿ. ಆರ್. ಚಂದ್ರಶೇಖರಂಥ ತಜ್ಞರ ಅಭಿಪ್ರಾಯವಿದ್ದರೂ ನಮ್ಮ ಜನ ಅದನ್ನು ಲೆಕ್ಕಿಸುವುದಿಲ್ಲ. ಅದಕ್ಕೆ ತಕ್ಕ ಚಿಕಿತ್ಸೆ ಇದೆಯೆಂದರೂ ನಂಬುವುದಿಲ್ಲ. ದೇವರಿಗಿಂತ ದೊಡ್ಡದೇನಿದೆ? ದೊಡ್ಡವರ್ಯಾರಿದ್ದಾರೆ ಎಂದು ಪ್ರಶ್ನಿಸುತ್ತಾರೆ.

ಈ ಗಾಳಿದೇವರಿದ್ದಾನೆ, ಅವನೇ ಕೆರಳಿದರೆ, ಅವನ ಸಂಪ್ರೀತಿಗಾಗಿ, ಸಾಂಪ್ರದಾಯಿಕ ನಂಬಿಕೆ ಆಚರಣೆಗಳನ್ನು ಮಾಡುವುದೇ ನಮ್ಮ ಕರ್ಮ ಎಂದು ನಂಬಿ ಬಾಳು ಸಾಗಿಸುತ್ತ ಬಂದಿರುವುದರಿಂದ, ಈ ಗಾಳಿದೈವ ಇಂದಿಗೂ ಜನಮನದಲ್ಲಿ ಜೀವಂತವಾಗಿ ಉಳಿದುಕೊಂಡು ಬಂದುದೊಂದು ವಿಶೇಷ.


[1]     ಡಾ. ವಿಲ್ಯಂ ಮಾಡ್ತ: ‘ಶಿಷ್ಟಸಂಪ್ರದಾಯದಲ್ಲಿ ಪಂಚಭೂತ ಪರಿಕಲ್ಪನೆ’ ನೋಡಿ. ಪು. 34

[2]     ಡಾ. ಆರ್. ಸಿ. ಹಿರೇಮಠ ಸಂ. ಚನ್ನಬಸವಣ್ಣನವರ ವಚನಗಳು. ವ. ೧೦೯೭ ಕ. ವಿ. ವಿ. ಧಾರವಾಡ ೧೯೬೫.

[3]      ತಾಸಾಂ ವಾಯು: ಪ್ರಥಮಗಾಮೀ ಭವತೀ: ‘ವೈದಿಕ ಸಾಹಿತ್ಯ ಚರಿತ್ರೆ’ ಅಡಿಟಿಪ್ಪಣಿ ಸು. ೧೪೬ ಡಾ. ಎನ್. ಎಸ್. ಅನಂತರಂಗಾಚಾರ್ಯ.

[4]     ಡಾ. ಎಸ್. ಎಸ್. ಅನಂತರಂಗಾಚಾರ್ಯ : ‘ವೈದಿಕ ಸಾಹಿತ್ಯ ಚರಿತ್ರೆ’ ಪು. ೧೪೬.

[5]     ಡಾ. ಎಸ್. ಎಸ್. ಅನಂತರಂಗಾಚಾರ್ಯ : ಪು. ೧೪೮.

[6]     ಡಾ. ಎಸ್. ಎಸ್. ಅನಂತರಂಗಾಚಾರ್ಯ : ಪು. ೧೪೮.

[7]     ಬೆನಗಲ್ ರಾಮರಾವ್: ಪುರಾಣ ನಾಮ ಚೂಡಾಮಣಿ: ಪು. ೫೫೭-೫೫೮ ದಶವಾಯುಗಳ ವಿವರಣೆ ಚನ್ನಬಸವಣ್ಣನವರ ವಚನಗಳಲ್ಲಿಯೂ ಇದೆ. ನೋಡಿ ವ ೮೪೫, ೧೦೫೮ (ಸಂ) ಆರ್.ಸಿ. ಹಿರೇಮಠ, ಕ. ವಿ. ವಿ. ಧಾರವಾಡ (ದ್ವಿತೀಯ ಮುದ್ರಣ).

[8]      ಡಿ. ಪದ್ಮನಾಭಶರ್ಮ : ಧನಂಜಯ ಶಬ್ದಕೋಶ ಪು. ೨೫-೨೬.

[9]     ಬೆನಗಲ್ ರಾಮರಾವ್ ಪಾನ್ಯಂ ಸುಂದರಶಾಸ್ತ್ರಿ ‘ಪುರಾಣನಾಮ ಚೂಡಾಮಣಿ’ ಪು. ೪೮೬-೪೮೭, ಮೈ ವಿ. ವಿ. ೧೯೭೯.ಸ

[10]     ಡಾ. ಎಂ. ಎಂ. ಕಲಬುರ್ಗಿ (ಸಂ.) : ಜಾನಪದ ಸಾಹಿತ್ಯ ದರ್ಶನ (ಭಾಗ : ೧೨) ಪು. ೧೮೨ : (ಭಾರತದ ಬುಡಕಟ್ಟು ಜನಾಂಗದಲ್ಲಿ ಆಕಾಶ ಜಾನಪದ (ಲೇಖನ) ಡಾ. ಕೆ. ಜಿ. ಗುರುಮೂರ್ತಿ ಕ. ವಿ. ವಿ. ಧಾರವಾಡ, ೧೯೯೪.g

[11]    ಗೊರೂರು ರಾಮಸ್ವಾಮಿ ಅಯ್ಯಂಗಾರ : ಹಳ್ಳಿಯ ಹಾಡುಗಳು ಪು. ೮೯.

[12]    ಕನ್ನಡ ನಿಘಂಟು: ಸಂ. ೩ ಪು. ೨೪೯. : ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

[13]    ಚಂದ್ರಶೇಖರ ಕಂಬಾರ (ಸಂ.) : ಕನ್ನಡ ಜಾನಪದ ವಿಶ್ವಕೋಶ (ಸಂ. ೧) ಪು. ೬೫೦. ಕ. ಸಾ. ಪರಿಷತ್ತು ಬೆಂಗಳೂರು ೧೯೮೫.

[14]    ಚಂದ್ರಶೇಖರ ಕಂಬಾರ (ಸಂ.) ಕನ್ನಡ ಜಾನಪದ ವಿಶ್ವಕೋಶ (ಸಂ. ೧) ಪು. ೬೫೦. ಕ. ಸಾ. ಪರಿಷತ್ತು, ಬೆಂಗಳೂರು ೧೯೮೫.

[15]     ಜಾನಪದ ಅಧ್ಯಯನ ದೇಜಗೌ ಪು. ೩೧೧.

[16]    ನಾಲ್ಕು ನಾಡಪದಗಳು : (ಸಂ) ಬಿ. ಎಸ್. ಗದ್ದಗಿಮಠ ಪು. ೫೧, ಪ. ೬೭.

[17]    ನಾಲ್ಕು ನಾಡಪದಗಳು : (ಸಂ) ಬಿ. ಎಸ್. ಗದ್ದಗಿಮಠ ಪು. ೫೧. ಪ. ೬೮.