ಮೂಡಣ ದಿಕ್ಕಿನಿಂದ ಬೀಡುವ ಗಾಳಿ ಮೂಡಗಾಳಿ. ‘ಶೀಗಿ ಹುಣ್ವಿ ಬುಟ್ಯಾಗ ಮೂಡಗಾಳಿ ಬರುತೈತಿ’ ಎಂಬ ಜನಪದ ನಂಬಿಕೆಯಲ್ಲಿ ಮೂಡಗಾಳಿ ಶೀಗಿ ಹುಣ್ಣಿವೆಗೆ ಹುಟ್ಟಿ, ಬೀಸಲಿಕ್ಕೆ ಪ್ರಾರಂಭಿಸುತ್ತದೆ ಎಂಬ ಸೂಚನೆ ಇದೆ. ಈ ಗಾಳಿ ಬೀಸಿದರೆ ರೈತನಿಗೆ ಚೆನ್ನಾಗಿ ಫಸಲು ಸಿಕ್ಕುತ್ತದೆ. “ಮೂಡಗಾಳಿ ಬೀಸಿದರೆ ಬೆಳೆ ವಿಪುಲ” ಎನ್ನುವ ನಂಬಿಕೆ ರಾಜಸ್ಥಾನದಲ್ಲಿಯೂ ಇದೆ.

[1] ಮೂಡಗಾಳಿಯ ಬೀಸುವಿಕೆಯಿಂದ ಹಿಂಗಾರು ಬೆಳೆಗಳೆಲ್ಲವೂ ಪಕ್ವವಾಗುತ್ತವೆ. ಹಿಂಗಾರಿ ಬೆಳೆಗಳಿಗೆ ನೀರು ಬೇಕಾಗಿಲ್ಲ. ಗಾಳಿ ಬೀಸಿದರೆ ಸಾಕು, ಅವು ಚೆನ್ನಾಗಿ ಮೈದುಂಬಿಕೊಂಡು, ಬೇಗ ಮಾಗಿ ಕೊಯ್ಲಿಗೆ ಬರುತ್ತವೆ. ಆದುದರಿಂದ ಹಿಂಗಾರು ಬೆಳೆಗಳಾದ ಬಿಳಿಜೋಳ, ಗೋದಿ, ಹತ್ತಿ, ಕುಸುಬಿ, ಕಡ್ಲಿ, ಮೆಣಸಿನಕಾಯಿ-ಮೊದಲಾದವುಗಳನ್ನು ‘ಗಾಳಿಯ ಮೇಲಿನ ಫಲ’ ಎನ್ನುತ್ತಾರೆ. ಹೊಲದಲ್ಲಿಯ ಪೈರು ಮಾಗಲು ಕಾರಣವಾದ ಮೂಡಗಾಳಿಯನ್ನು ‘ಮಾಗಿ ಗಾಳಿ’ ಎಂತಲೂ ರೈತರು ಕರೆದುದು ಸೂಕ್ತವಾಗಿದೆ.

ಮೂಡಗಾಳಿ ಬೀಸಲು ಆರಂಭಿಸಿದರೆ, ಮಳೆ ಬರುವುದಿಲ್ಲ ಎಂಬ ನಂಬಿಕೆಯ ಕಾರಣದಿಂದ, ರೈತರು ಈ ಸಂದರ್ಭದಲ್ಲಿ ಭತ್ತ, ಹೈಬ್ರಿಡ್ ಜೋಳಗಳ ‘ಸುಗ್ಗಿ’ಯನ್ನು ಮಾಡಲನುವಾಗುತ್ತಾರೆ. ಕಾಳಿನ ರಾಶಿಯನ್ನು ತೂರಲು ಇದೇ ಗಾಳಿ ಪ್ರಶಸ್ತವಾದುದು. ರಾಶಿ ಮಾಡಲು ಅನುಕೂಲವಾದ ಈ ಮೂಡಗಾಳಿಯನ್ನು ರೈತಾಪಿ ಜನ ‘ರಾಶಿಗಾಳಿ’ ಎಂತಲೂ ಕರೆಯುತ್ತಾರೆ. ‘ರಾಶಿಗಾಳಿ’ಯು ಬೀಸಿ ಸೂಸಿ ಹರಿಯಿತು. ಕಣವು[2] ಹಾಗೂ “ಕೋಳೂರ ಬರಿಗಾಳಿ ಬೀಸಿ ಹಾಗೆ ತುಂಬಿ[3]” ಎನ್ನುವ ತ್ರಿಪದಿ ಸಾಲುಗಳಲ್ಲಿ -ಹಿಂಗಾರಿ ಬೆಳೆಯ ಮೇಲೆ ‘ರಾಶಿಗಾಳಿ’ ಮತ್ತು ‘ಕೋಳೂರ ಗಾಳಿ’ಗಳು ಬೀಸಿದರೆ ಮತ್ತಷ್ಟು ಹುಲಿಸುತ್ತದೆಂದು ರೈತರ ನಂಬಿಕೆ.

ಮೂಡಗಾಳಿಗೆ ಮರದ ಎಲೆಗಳು ಹಣ್ಣಾಗಿ ಉದುರುತ್ತವೆ, ಮತ್ತು ದೊಡ್ಡ ಭತ್ತ ಜಳ್ಳಾಗುವ ಸಂಭವವೂ ಉಂಟು, ಆದರೆ ಈ ಗಾಳಿಗೆ ಮಾವಿನ ಮರಗಳು ಮೈಸಿರಿಯು ಮನೋಹ್ಲಾದವನ್ನುಂಟು ಮಾಡುತ್ತದೆ. ಮಾವಿನಮರ ಹೂಕಜ್ಜಿ, ಗೊನೆಗಳಲ್ಲೆಲ್ಲ ಗುಲಗಂಜಿ ಗಾತ್ರದ ಒಗರುಮಿಡಿಗಳನ್ನು ಹೊತ್ತು ನಿಂತಿರುತ್ತದೆ. ಮೂಡಗಾಳಿಯ ಪರಿಣಾಮದಿಂದ ಮಾವಿನ ಮಿಡಿಗಳು ಗುಡಿಹುಣ್ಣಿವೆಗೆ ಗುಂಡುಗಾಯಾಗಿ, ಹೋಳಿಹುಣ್ಣಿವೆಗೆ ಹೋಳಗಾಯಾಗುತ್ತವೆ, ಈ ಗಾಳಿಗೆ ಮಾವಿನ ಗೊಂಚಲು ತೂಗಿದಷ್ಟು ಮನುಷ್ಯನಿಗೆ ನಿದ್ರೆಯ ಮಬ್ಬು ಕವಿಯುತ್ತದೆಂಬ ನಂಬಿಕೆಯಿದೆ. ಮೂಡಗಾಳಿ ತುಂಬ ಉಷ್ಣತೆಯಿಂದ ಕೂಡಿರುವುದರಿಂದ, ನೆಲದ ನೀರನ್ನು ಸಾಧವಾದಷ್ಟು ಬೇಗ ಹೀರಿ ಅದನ್ನು ಬಿರಿಯುವಂತೆ ಮಾಡುತ್ತದೆ. ಈ ಗಾಳಿಯ ಈ ಬಗೆಯ ಭಯಂಕರ ಪ್ರಭಾವವನ್ನು ಕಂಡೇ ಗ್ರಾಮೀಣರು, “ಮೂಡಗಾಳಿಗೆ ನೆಲಕೂಡ ಬಿರಿಯುತ್ತದೆ” ಎನ್ನುತ್ತಾರೆ. ಇನ್ನು ಮನುಷ್ಯರ ಗತಿಯೇನು? ಮೈ ಕೈಕಾಲು, ತುಳಿ, ಹಿಂಬಡಗಳು ಮೂಡಗಾಳಿಗೆ ಒಡೆಯುತ್ತವೆ. (ಬಿರಿಯುತ್ತವೆ) ಮನುಷ್ಯನ ಇಡೀ ಶರೀರವೇ ಒಂದು ರೀತಿಯಲ್ಲಿ ಒಣಗಿದ ಮರದಂತೆ ಕಾಣುತ್ತದೆ. ಆದುದರಿಂದಲೇ “ಮೂಡಗಾಳಿಗೆ ಮುಕುಳಿಯೆಲ್ಲ ಒಣಗಿತ್ತು” ಎಂಬ ದೊಂದು ಗಾದೆ ಹುಟ್ಟಿ ಪ್ರಚಲಿತದಲ್ಲಿರಬೇಕು. ಇಂಥ ಗಾಳಿ ಬೀಸುವ ಸಂದರ್ಭದಲ್ಲಿ ಬೆಡಗಿನ ಲಲನೆಯರನ್ನು ನೋಡಬೇಕು. ಅವರ ಅಂದ ಚೆಂದವೆಲ್ಲ ನಾಶವಾಗಿ ಅಸಹ್ಯ ಕಾಣುತ್ತಿರುತ್ತಾರೆ. ಮೂಡಗಾಳಿ ಬೀಸುವ ಕಾಲದಲ್ಲಿ “ಸಾವಿರ ರೂಪಾಯಿ ಹೆಣ್ಣ ಸವ್ವಾರೂಪಾಯಿಗೆ ಮಾತಾಡ್ಸೊದಿಲ್ಲ” ಅಥವಾ “ಆರು ದುಡ್ಡಿಗೆ ಹೆಣ್ಣ ಮೂರು ದುಡ್ಡಿಗಿ ಮಾತಾಡ್ಸೊದಿಲ್ಲ”-ಎನ್ನುವ ನಂಬಿಕೆ ನಮ್ಮಲ್ಲಿದೆ. ಆದುದರಿಂದ ಮೂಡಗಾಳ್ಯಾಗ ಹೆಣ್ಣ ನೋಡಾಕ ಹೋಗಬಾರ್ದು”- ಎನ್ನುವ ಅನುಭವಪೂರ್ಣ ನಂಬಿಕೆಯೂ ಜಾನಪದರದು. ಮೂಡಗಾಳಿಯಿಂದಾಗುವ ಇಂಥ ದುಷ್ಪರಿಣಾಮಗಳನ್ನು ಕಂಡುಕೊಂಡೇ ಜಾನಪದರು ಮಾಗಿಗಾಳಿ ಕಾಸಬಾರದು, ಚಾಡಿ ಮಾತಕೇಳಬಾರದು ಎನ್ನುವ ಲೋಕರೂಢಿ ಮಾತನ್ನು ಆಡಿರುವ ಸಾಧ್ಯತೆಯಿದೆ. ಚಾಡಿ ಮಾತ ಕೇಳುವುದರಿಂದ ಎಂಥೆಂಥ ಅನಾಹುತಗಳು, ದುಷ್ಪರಿಣಾಮಗಳು ಬಂದೊದಗುತ್ತವೆಯೋ, ಅಂಥವುಗಳು ಮಾಗಿಗಾಳಿಯನ್ನು ಕಾಯಿಸುವುದರಿಂದ ಶರೀರದ ಮೇಲೆ ಆಗುತ್ತವೆಂಬುದು ಮೇಲಿನ ನುಡಿಯ ತಾತ್ಪರ್ಯ. ಆದುದರಿಂದ ಮೂಡಗಾಳಿಗೆ ಮೈಯೊಡ್ಡಿ ಕುಳಿತುಕೊಳ್ಳಬಾರದು. ಮೈತುಂಬ ಬಟ್ಟೆಹಾಕಿಕೊಂಡು ಶರೀರದ ರಕ್ಷಣೆ ಮಾಡಬೇಕು, ಗರತಿಯಂತೆ. ಹೀಗೆ, ಮೂಡಗಾಳಿಯಲ್ಲಿ ಮೈತುಂಬ ಬಟ್ಟೆಧರಾಸಿಕೊಳ್ಳುವುದನ್ನು ‘ಮೂಡಗಾಳಿ ಗರತಿ’ಯೆಂತಲೂ, ಅದೇ ಪಡುಗಾಳಿಯಲ್ಲಿ ಬೇಸಿಗೆಯ ಬೇಗೆಯಿಂದ ಸಾಧ್ಯವಾದಷ್ಟು ಬಟ್ಟೆಬಿಚ್ಚಿ ಬರಿಮೈಯಲ್ಲಿ ಇರಬೇಕಾಗುತ್ತದೆ. ಹೀಗೆ ಪಡುಗಾಳಿ ಬೀಸುವಾಗ ಬಟ್ಟೆ ಬಿಚ್ಚುವುದನ್ನು “ಪಡುಗಾಳಿ ಹಾದರಗಿತ್ತಿ” ಎಂತಲೂ ಹಳ್ಳಿಗರು ಕರೆದಂತೆ ತೋರುತ್ತದೆ. “ಮೂಡಗಾಳಿ ಗರತಿ ಪಡುಗಾಳಿ ಹಾದರಗಿತ್ತಿ” ಎನ್ನುವ ರೂಢಿಯ ಮಾತನ್ನು ಈ ಮೇಲಿನಂತೆಯೇ ಅರ್ಥೈಸಬೇಕಾಗುತ್ತದೆ.

ಮೂಡಗಾಳಿಗೆ ಕಾಗೆಯ ಬಣ್ಣ ಮತ್ತಷ್ಟು ಕಪ್ಪಾಗಿ ಅದು ಮಿರಿ ಮಿರಿ ಮಿಂಚುವುದರಿಂದ ಅದಕ್ಕೆ ಹೊಸಕಳೆ ಉಂಟಾಗುತ್ತದೆ. ಆದುದರಿಂದಲೇ “ಮೂಡಗಾಳಿ ಬಿಟ್ರ ಕಾಗಿಯ ಬಣ್ಣ ಮನಸ್ಸಾರಿಗಿ ಬರ್ತೈತಿ ಮನಸ್ಯಾರ ಬಣ್ಣ ಕಾಗಿಗಿ ಹೊಕೈತಿ” ಎಂಬ ನಂಬಿಕೆ ಪ್ರಚಲಿತದಲ್ಲಿದೆ.

ಈ ಗಾಳಿಯ ಬೀಸುವಿಕೆಯಿಂದ ಮನುಷ್ಯನ ಆರೋಗ್ಯದಲ್ಲಿಯೂ ಬದಲಾವಣೆ ಕಂಡುಬರುತ್ತದೆ. ಕೆಮ್ಮು, ನೆಗಡಿ, ಚಳಿಜ್ವರ, ಮೊದಲಾದುವುಗಳು ಮನುಷ್ಯನಿಗೆ ಅಂಟಿಕೊಳ್ಳುತ್ತವೆ. ಆದುದರಿಂದ ಈ ಗಾಳಿಯನ್ನು ‘ಹೊಲಸುಗಾಳಿ’, ‘ಕೆಟ್ಟಗಾಳಿ’, ‘ದೌಸಗಾಳಿ’ ಎಂದು ಸಾಮಾನ್ಯರು ಕರೆಯುವುದುಂಟು. ಇದೇ ಗಾಳಿಗೆ ಎಮ್ಮೆಗಳು ಹೆಚ್ಚು ನಶಿಗೆ (ಬೆದೆ) ಬರುತ್ತವೆಂದು ಹಳ್ಳಿಗರ ನಂಬಿಕೆ.

* ಪಡುಗಾಳಿ

ಇದು ಪಡುವಣ ದಿಕ್ಕಿನಿಂದ ಬೀಸುವ ಗಾಳಿ ಚಳಿಗಾಲದಲ್ಲಿ ಬೀಸುವ ಮೂಡಗಾಳಿ ತನ್ನ ಉಷ್ಣತಾ ಗುಣದಿಂದ ಬೆಳೆಗಳು ಮಾಡಲು ಕಾರಣವಾದರೆ ಪಡುಗಾಳಿ ಬೇಸಿಗೆ ಕಾಲದಲ್ಲಿ ಬೀಸಿ, ಬೆಳೆಗಳಿಗೆ ಮನುಷ್ಯರಿಗೆ ತಂಪು ನೀಡಿ, ಹಿತವನ್ನುಂಟುಮಾಡುತ್ತದೆ. ಹೆಸರು, ಅವರಿ, ಅಲಸಂದಿ, ಕಡ್ಲಿ ಮೊದಲಾದ ದ್ವಿದಳ ಧಾನ್ಯಗಳಲ್ಲದೆ, ಗೋದಿ, ಜೋಳ ಮುಂತಾದವುಗಳೂ ಪಡುಗಾಳಿಯ ತಂಪಿನಿಂದ ಚೆನ್ನಾಗಿ ಬೆಳೆದು ಹುಲಿಸುತ್ತವೆ. ಮಾವಿನ ಮರದಲ್ಲಿಯ ಒಗರು ಮಿಡಿಗಾಯಿಗಳು ಹುಳಿ ತುಂಬಿಕೊಳ್ಳುತ್ತವೆ. ಹುಣಸಿ ಒಗರು ಗಾಯಿಗಳು ಸುಲಿಗಾಯಿಗಳಾಗಿ ಹಣ್ಣಾಗುತ್ತವೆ. ಬೇವಿನಮರ, ನೀರಲಮರಗಳು ಹೂಬಿಡುತ್ತವೆ ಮತ್ತು ಮಲ್ಲಿಗೆ ಬಳ್ಳಿ ಮೊಗ್ಗನೊಡೆದು ಅರಳುವುದು ಈ ತಂಗಾಳಿಯ ಪರಿಣಾಮದಿಂದಲೇ.

ಹೀಗೆ ಪಡುಗಾಳಿ ಸಸ್ಯಾದಿಗಳಿಗೆ ಪೂರಕವಾಗಿದೆಯೇ ವಿನಃ ಮಾರಕವಾಗಿಲ್ಲ. ಮನುಷ್ಯನಿಗಿಂತಲೂ ತುಂಬ ಉಪಯುಕ್ತವಾದುದು, ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಿನ ತಾಪವನ್ನು, ತನ್ನ ತಂಪಿನಿಂದ ಕುಗ್ಗಿಸುವುದು. ಕೆಲವು ಸಂದರ್ಭಗಳಲ್ಲಿ ಚಳಿಗಾಲದಲ್ಲಿಯೂ, ಆಷಾಢಮಾಸದಲ್ಲಿಯೂ ಈ ಪಶ್ಚಿಮದ ತಂಗಾಳಿ ಮೆಲ್ಲ ಮೆಲ್ಲಗೆ ಬೀಸುವುದು. ಪಡುವಣದ ಸುಳಿಗಾಳಿಯಲೆಗಳಿಂದ ಪ್ರಕೃತಿ ಪರಿಸರವೆಲ್ಲ ಮುದಗೊಳ್ಳುತ್ತದೆ. ಈ ಗಾಳಿಯನ್ನೇ ಕುರಿತು ಹಾಡಿದಂತಿದೆ ಕೆಳಗಿನ ತ್ರಿಪದಿ.

ತಂಪು ತುಂಬಿದ ಗಾಳಿ, ಕಂಪು ಬನದೊಳು ಸುಳಿದು
ಸಂಪಾಗಿ ಬೀಸಿ ಗಲ್ಲಿಸಲು | ಚೆಂಗಾಳಿ
ಸೊಂಪು ನೋಡಿಲ್ಲಿ ಬನದೊಳಗೆ[4]

‘ಪಡುವಣದ ತಂಗಾಳಿ ಬೀಸಿದರೆ, ಮಂಗಕ್ಕೂ ಉಲ್ಲಾಸ’ ಎನ್ನು ಗಾದೆಯೊಂದಿದೆ. ಇದು ಸತ್ಯಸ್ಯ ಸತ್ಯ. ಏಕೆಂದರ ಸಮಗ್ರ ಸೃಷ್ಟಿಯ ‘ಚಿಂಗಾಟಿ’ಕ್ಕೆ ಕಾರಣೀಭೂತವಾದುದು ಈ ತಂಪು ತುಂಬಿದ ಗಾಳಿ. ಆದರೆ, ಒಮ್ಮೊಮ್ಮೆ ಇದರ ಅತಿ ಬೀಸುವಿಕೆಯಿಂದ ಮಾವಿನ ಹೂವು ಕತ್ತರಿಸಿಕೊಳ್ಳುತ್ತವೆ ಮತ್ತು ಬೆಲೆಗಳ ಹಾಲು ಸೋರುತ್ತವೆ ಆದರೂ ಪಡುಗಾಳಿ, ಮನುಷ್ಯ, ಪ್ರಾಣಿ, ಸಸ್ಯಾದಿಗಳೆಲ್ಲಕ್ಕೂ ಹಿತಕರವಾದುದು.

* ಆಷಾಢಗಾಳಿ

ಆಷಾಢಗಾಳಿಯು ಜನಪದರ ಬಾಯಿಯಲ್ಲಿ ಆಷಾಢ ಗಾಳಿಯಾಗಿದೆ. ಇದು ಪಶ್ಚಿಮದಿಕ್ಕಿನ ಹೆಚ್ಚು ವೇಗದ ಒಣಗಾಳಿಯಾಗಿದ್ದು. ಶ್ರಾವಣ ಮಾಸದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ಬೀಸಲಿಕ್ಕೆ ಪ್ರಾರಂಭಿಸುತ್ತದೆ. ‘ಆಷಾಢದ ಮಳಿಗಾಳಿ ಬೀಸಿ ಬೀಸಿ ಹೊಡೆಯುವಾಗ ಹೇಸಿ ನನ್ನ ಜೀವ ಹೆಣ್ಣಾಗಿ ಆದರೂ ಹುಟ್ಟಬಾರದಿತ್ತೆ’ ಎಂಬುದೊಂದು ನಮ್ಮ ಜನಪದರ ಅನುಭವದ ನುಡಿ. ಆಷಾಢದ ಮಳೆ ಮತ್ತು ‘ಸುಂಯ್ಯ ಸುಂಯ್ಯ’ ಎಂದು ಬೀಸುವ ತಂಗಾಳಿಗಳಲ್ಲಿ ರೈತ ಇಡೀ ದಿನ ಹೊಲದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸುತ್ತಾ ದುಡಿಯಬೇಕಾಗಿ ಬರುತ್ತದೆ. ಆಷಾಢದ ಈ ಮಳೆಗಾಳಿಗಳಲ್ಲಿ ಹೆಂಗಸರಿಗೆ ಮಾತ್ರ ಹೊಲದಲ್ಲಿ ಯಾವ ಕೆಲಸ ಇರುವುದಿಲ್ಲ. ಈ ಸಮಯದಲ್ಲಿ ಅವರು ಮನೆಯ ಒಲೆಯ ಮುಂದೇ ಕುಳಿತು ಬೆಂಕಿಯಿಂದ ಚಳಿಯನ್ನು ಕಾಯಿಸುತ್ತ, ಕಡ್ಲಿಹುರಿದು ತಿನ್ನುತ್ತ, ಬಿಸಿಗುಗ್ಗರಿ ಮೆಲ್ಲುತ್ತ, ಚಹಾಕುಡಿಯುತ್ತ ಕಾಲಕಳೆಯುತ್ತಿರುತ್ತಾರೆ. ಆದರೆ ಅದೇ ಗಂಡಸರು, ಅದೇ ವೇಳೆಯಲ್ಲಿ ಈ ಆಷಾಢದ ಚಳಿಗಾಳಿ ಮಳೆಗಳಿಂದ ಹೊಲದಲ್ಲಿ ನಡುಗುತ್ತಿರುತ್ತಾರೆ. ಚಳಿಮಳೆಗಾಳಿಗಳ ಹೊಡೆತಕ್ಕೆ ಸಿಕ್ಕು ಅನೇಕ ರೀತಿಯಿಂದ ತೊಂದರೆಯನ್ನು ಎದುರಿಸುತ್ತ, ಹೊಲದಲ್ಲಿ ಶ್ರಮಿಸುವ ರೈತ, ತನ್ನ ತಾಳ್ಮೆಯನ್ನು ಕಳೆದುಕೊಂಡು ಈ ಮೇಲಿನಂತೆ ಮಾತನಾಡುತ್ತಾನೆ. ಮೇಲಿನ ನುಡಿ ಆತನ ಹೃದಯದ ಅಳಲಾಗಿ ಹೊರಹೊಮ್ಮಿದೆ. ಈ ಆಷಾಢದ ಗಾಳಿಯಿಂದ ರೈತನಿಗೆ ಎಷ್ಟೇ ತೊಂದರೆಯಾದರೂ ಮುಂದೆ ಅದು ಆತನಿಗೆ ಅನ್ನವನ್ನು ದೊರಕಿಸಿಕೊಡುವಂಥದು. ಆದುದರಿಂದಲೇ ಈ ಆಷಾಢಮಾಸವನ್ನು ಬೆಟಗೇರಿ ಕೃಷ್ಣಶರ್ಮರವರು “ಅನ್ನದೇವತೆಯ ಆರಾಧನಾ ಕಾಲ[5] ಎಂದಿರುವರು. ಆಷಾಢದ ಗಾಳಿ ಬೀಸಿದರೆ ಮಳೆ ಖಂಡಿತ ಬರುತ್ತದೆನ್ನುವ ನಂಬಿಕೆಯಿದೆ. ಆದ್ದರಿಂದ ಆಷಾಢಮಾಸದ ಮಳೆಗಳನ್ನು ‘ಮಲೆನಾಡಿನ ರೈತರಿಗೆ ಭಾಷೆಕೊಟ್ಟ ಮಳೆಗಳು” ಎಂದು ಹೇಳುತ್ತಾರೆ. ಇದಕ್ಕೆ ಜನಪದ ತ್ರಿಪದಿಯೆಂದು ಚಿಕ್ಕ ಸಾಕ್ಷಿ ನುಡಿಯುತ್ತದೆ.

‘ಆಸಾಡಿ ಮುಂದಾಗಿ ಬೀಸ್ಯಾವ ಈ ಗಾಳಿ
ಮೋಸ ಮಾಡ್ಯಾವ ಮಗಿಮಳಿ | ಉತ್ರಿಸಾತಿ
ಬಾಸೆ ಕೊಟ್ಟಾವ ಬಡವರಿಗೆ”[6]

ಆಷಾಢದ ಗಾಳಿ ಬೀಸಿದರೆ ‘ಮಗಿಮಳಿ’ ಬಾರದೆ, ಇದ್ದರೂ ‘ಉತ್ರಿಸಾತಿ’ ಮಳೆಗಳು ಬಂದೇ ಬರಬೇಕು. ಈ ಗಾಳಿ ಬೀಸದೆ ಇದ್ದರೆ ಉತ್ತರಿ ಮಳೆ ಬರುವುದಿಲ್ಲವೆಂಬ ನಂಬಿಕೆಯೂ ಹಳ್ಳಿಗರಲ್ಲಿದೆ. ಉತ್ತರೆ ಬರದೆ ಇದ್ದರೆ, ಹೆತ್ತಮ್ಮ ಬಿಟ್ಟು ಹೋದರೆ ಮುತ್ತು ಮಣ್ಣಾದರೆ, ಲೋಕದಲ್ಲಿ ಬೈಗು ಬೆಳಗು ಆಗುವುದು ಹೇಗೆಂದು[7] ಸರ್ವಜ್ಞ ಕೇಳುವಲ್ಲಿಯೂ ಉತ್ತರೆಯ ನಿಶ್ಚಿತತೆಯೇ ಇದೆ. “ಇನ್ನು ಸ್ವಾತೀ ಮಳೆಯೂ ಬಯಲು ಸೀಮೆಯ ರೈತರು ಬಿತ್ತಿದ ಹಿಂಗಾರಿ ಬೆಳೆಗಳಿಗೆ ರಸಚೇತನವನ್ನುಂಟು ಮಾಡುವಂಥದು. ಆ ಕಾರಣದಿಂದಲೇ” “ಸ್ವಾತಿ ಮಳಿ ಹೋದ ಮ್ಯಾಗ ಐತೇನು” ಎಂಬ ಒಕ್ಕಲಿಗನ ನುಡಿ ಬೆಳುವಲನಾಡಿನಲ್ಲಿ ರೂಢವಾಗಿದೆ. ಸ್ವಾತಿಯ ಹನಿಯಿಂದ ಜಾತಿ ಮುತ್ತಾಗುವುದು ಕವಿಸಮಯದ ಮಾತಾದರೂ ಬೆಳುವಲನಾಡಿನ ಬಿಳಿಜೋಳದ ತೆನೆಗಳಲ್ಲಿ ಅದು ಮುತ್ತಿನ ಗೊಂಚಲನ್ನು ಹೆಣೆಯುವುದು, ಅನುಭವನಿದ್ಧವಾದ ಮಾತು. ಕಡಲೆ, ಗೋದಿಗಳ ಬೆಳೆಗಳಿಗಂತೂ ಸ್ವಾತಿಯ ಹದ ಮಳೆಯೇ ಚೈತನ್ಯದಾಯಿ”. ಈ ಮಳೆಯೂ ಆಷಾಢದ ಗಾಳಿ ಬೀಸಿದಾಗ ಖಂಡಿತ ಬರುತ್ತದೆ. ಆದುದರಿಂದ ಉತ್ರಿಸ್ವಾತಿ -ಇವೆರಡೂ ಬಡವರಿಗೆ ಭಾಷೆ ಕೊಟ್ಟ ಮಳೆಗಳೆಂಬುದು ರೈತನಿಗೆ ಬಲವಾದ ನಂಬುಗೆ.

ಆಷಾಢದ ತಂಪುಗಾಳಿಗೆ ಕೋಣಗರುಗಳ ತಲೆಬಾಯುವುದು. ಅವುಗಳ ಸ್ವಾಸ್ಥ್ಯ ಕೆಡುವುದು. ಕೊನೆಗೆ ಅವು ಈ ಗಾಳಿಗೆ ಸಾಯುವುದೂ ಉಂಟು. ಇಂಥ ಸಂದರ್ಭದಲ್ಲಿ ಮೂರು ಆಷಾಢಗೆದ್ದ ಕೋಣಗರುವಿಗೆ ಪೂರಾ ಆಯುಷ್ಯ” ಎಂಬ ನಾಡನುಡಿ ಹುಟ್ಟಿಕೊಂಡಂತಿದೆ.

ಆಷಾಢದ ಹಗಲು ಹದಿನಾಲ್ಕು ಗಂಟೆಗಳುಳ್ಳುವು. ಇಡೀ ಹಗಲು ದುಡಿಯುವ ಒಕ್ಕಲಿಗ ಮತ್ತು ಆತನ ದನಗಳಿಗೆ ದುಡಿತದ ಕಾರಣದಿಂದ ಹಸಿವಾಗುವುದು ಸಹಜ. ‘ಗಾಳಿಗೆ ಹಸಿವು ಹೆಚ್ಚು’ ಎನ್ನುವ ನಂಬಿಕೆಯೂ ಅಷ್ಟೆ ಸಹಜ. ಅದರಲ್ಲಿಯೂ ಈ ಆಷಾಢದ ಗಾಳಿಗೆ ಒಕ್ಕಲಿಗ ಮತ್ತು ಅವನ ದನಗಳಿಗೆ ಹಸಿವು ಇನ್ನೂ ಹೆಚ್ಚು. ಆದುದರಿಂದ ಇವರು ಮೇಲಿಂದ ಮೇಲೆ ಆಹಾರವನ್ನು ಬಯಸುತ್ತಾರೆ. ಪರಿಣಾಮವಾಗಿ, ರೈತ ಕೂಡಿಟ್ಟ ಕಾಳು-ಮೇವುಗಳೆಲ್ಲ ಈ ಕಾಲದಲ್ಲಿಯೇ ಖಾಲಿಯಾಗುತ್ತವೆ. ಈ ಅನುಭವವನ್ನು ನಮ್ಮ ರೈತರು ಗಾದೆಗಳ ಮೂಲಕ ಹೀಗೆ ತೋಡಿಕೊಂಡುದುಂಟು. -“ಒಟ್ಟಿದ ಬಣವಿ, ಹಾಕಿದ ಹಗೆ ಬಟ್ಟಬರಿದಾಗಿಸೋದು ಈ ಆಷಾಢ ತಿಂಗಳು” ಅಲ್ಲದೆ, “ಆಷಾಢಗಾಳಿ ಬೀಸಿದಾಗ ಆರು ತಿಂಗಳ ಗ್ರಾಸ ಮೂರೇ ತಿಂಗಳಿಗೆ” -ಎಂಬುದಾಗಿ ಅದೇ ಅರ್ಥಕೊಡುವ ಇನ್ನೊಂದು ಗಾದೆಯಿದು. “ಯಾಕ ಅಳತಿಯಲೇ ಹೊಲಿಯಾ” ಎಂದರೆ ಮುಂದ ಬರುವ ಆಷಾಢಕ್ಕಾಗಿ ಎಂದ ಎನ್ನುವ ಮಗದೊಂದು ಗಾದೆಯೂ ಇದೆ. ನಮ್ಮ ಹಿಂದಿನ ಸಾಮಾಜಿಕ ಪದ್ಧತಿಯಲ್ಲಿ ಹೊಲೆಯನಾದವನು ರೈತನನ್ನೇ ಅವಲಂಬಿಸಿ ಬದುಕಬೇಕಾಗಿತ್ತು. ಆಷಾಢದಲ್ಲಿ ರೈತನಲ್ಲಿಯ ಕಾಳುಕಡಿ ತೀರಿಹೋದಾಗ, ಹೊಲೆಯನ ಹೊಟ್ಟೆಯ ಪಾಡೇನು? ಸ್ವತಂತ್ರವಾದ ಬದುಕು ಅಂದು ಹೊಲೆಯನದಾಗಿರಲಿಲ್ಲ. ರೈತನನ್ನೇ ಅವಲಂಬಿಸಿ ಬಾಳುವ ಈತರನಿಗೆ ಕಾಳು ಕಡಿ ಸಂಗ್ರಹಿಸಿಡುವ ಅವಶ್ಯಕತೆಯಾದರೂ ಏನು? ಆದುದರಿಂದಲೇ ಆತನ ಜೀವನದ ರೀತಿಯನ್ನು ‘ಹೊಲೆಯನ ಸುಗ್ಗಿ ಒಲಿಮ್ಯಾಲ’ ಎಂಬ ಗಾದೆ ಚಿತ್ರಿಸುತ್ತದೆ ‘ಅತ್ತೀ ಮನಿಯ ಸೊಸೆ ಆಷಾಢ ತಿಂಗಳು ಕಳೆದ್ಹಾಂಗ’ ಎಂಬ ನಾಡನುಡಿಯೂ ಇದೆ. ಆಷಾಢದಲ್ಲಿ ಅತ್ತಿ ಸೊಸಿ ಒಂದೇ ಮನೆಯಲ್ಲಿ ಇರಬಾರದೆಂಬ ನಂಬಿಕೆ ಪ್ರಚಲಿತವಿದೆ. ಆಗ ಸೊಸೆ ತವರು ಮನೆಗೆ ಹೋಗುವುದು ವಾಡಿಕೆ. ಇಲ್ಲೆಲ್ಲ, ಆಷಾಢ ತಿಂಗಳಲ್ಲಿಯ ಕಷ್ಟಕೋಟಲೆಗಳಿರುವುದು ಸರ್ವವಿದಿತ. ಈ ಕಷ್ಟಕ್ಲೇಶಗಳಿಗೆ ಈ ತಿಂಗಳಲ್ಲಿಯ ಮಳೆಗಾಳಿಗಳೇ ಭತ್ತ ಹೊಟ್ಟೆಯುಬ್ಬಿ, ಹೊಡಿಬಿಚ್ಚಿ, ಹೂವಾಡುತ್ತದೆ. ಕಬ್ಬಿನ ಬೆಳೆ, ಹತ್ತಿಯ ಹೊಲಗಳೂ ಈ ಗಾಳಿಗೆ ಜೀವಪಡೆದು ಕೊಂಡು ಸುಂದರವಾಗಿ ಕಾಣುತ್ತದೆ.

*ಹರಿಶ್ಚಂದ್ರ ಗಾಳಿ

ಹರಿಚಂದ್ರ ಗಾಳಿಯು ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಬೀಸುತ್ತದೆ ಈ ಗಾಳಿಯ ಹೆಸರಿನ ಬಗೆಗೆ ಕೆಲವು ಸ್ವಾಭಾವಿಕ ಹೇಳಿಕೆಗಳಿವೆ. ರಾಜಾಹರಿಶ್ಚಂದ್ರನು ಉತ್ತರದ ಕಾಶಿಯಲ್ಲಿ ರಾಜ್ಯವಾಳುತ್ತಿದ್ದ. ಆದ್ದರಿಂದ ಆತನಿರುವ ಕಡೆಯಿಂದ ಬೀಸುವ ಗಾಳಿಯನ್ನು ‘ಹರಿಶ್ಚಂದ್ರಗಾಳಿ’ ಅಥವಾ ‘ಹರಿಚಂದ್ರಾನ ಗಾಳಿ’ ಎಂದು ಕರೆವ ವಾಡಿಕೆ. ಈ ಗಾಳಿಯ ಹೆಸರನ್ನು ಕುರಿತ ಒಂದೆರಡು ಸ್ವಾರಸ್ಯಕರವಾದ ಕತಾರೂಪದ ಹೇಳಿಕೆಗಳಿವೆ. ಗಾಳಿಯಿಲ್ಲದೆ ಮಳೆ ಬಾರದೆಂಬುದು ಜನಜನಿತವಾದ ನಂಬಿಕೆ. ಮಳೆಬಾರದ್ದರಿಂದ, ಹರಿಶ್ಚಂದ್ರನ ಪ್ರಜೆಗಳು ಆತನಿಗೆ ಮೊರೆ ಹೋಗುತ್ತಾರಂತೆ. ಆಗ ಹರಿಶ್ಚಂದ್ರ ಮಳೆ ಬರಿಸುವಂತೆ, ಗಾಳಿದೇವನಿಗೆ ಬೇಡಿಕೊಳ್ಳುತ್ತಾನೆ. ಹರಿಶ್ಚಂದ್ರನ ಪ್ರಾರ್ಥನೆಗೆ, ಗಾಳಿ ಬೀಸಿ ಮಳೆ ಸುರಿಯುತ್ತದಂತೆ ಹರಿಶ್ಚಂದ್ರ ಮಾಡಿದ ಈ ಪವಾಡದಿಂದ ಬೀಸಿದ ಗಾಳಿಯನ್ನು ‘ಹರಿಶ್ಚಂದ್ರ ಗಾಳಿ’ಯೆಂದು ಅಂದಿನಿಂದ ಕರೆಯುತ್ತ ಬಂದಿದ್ದಾರೆ. ಇನ್ನೊಂದು ಹೇಳಿಕೆಯು ಹೀಗಿವೆ. ಹರಿಶ್ಚಂದ್ರನ ಸತ್ಯಕ್ಕೆ ಮೆಚ್ಚಿದ ವಿಶ್ವಾಮಿತ್ರ, ಹರಿಶ್ಚಂದ್ರನಿಗೆ ನಿನಗೆ ಏನು ವರಬೇಕೆಂದು ಕೇಳಿದನಂತೆ ಅದಕ್ಕೆ ಹರಿಶ್ಚಂದ್ರ ನಾನಿರುವ ದಿಕ್ಕಿನಿಂದ ಗಾಳಿ ಬೀಸಿ ಅದರಿಂದ ಮಳೆಯಾಗಿ, ಜನತೆಗೆ ಸುಖವಾಗಲೆಂದು ವರಕೇಳುತ್ತಾನೆ. ವಿಶ್ವಾಮಿತ್ರ ಆಗಲಿ, ಎಂದನಂತೆ, ಅಂದಿನಿಂದ ಹರಿಶ್ಚಂದ್ರನಿರುವ ಕಡೆಯಿಂದ ಬೀಸುವ ಗಾಳಿಯನ್ನು ‘ಹರಿಶ್ಚಂದ್ರ ಗಾಳಿ’ ಎಂದು ಕರೆವ ರೂಢಿ.

ಈ ಗಾಳಿಗೆ ಕೆಲವರು ‘ಸುಡುಗಾಡಗಾಳಿ’ (ವಿಜಾಪುರ ಕಡೆಗೆ) ಎಂದು ಕರೆಯುವರು. ಹರಿಶ್ಚಂದ್ರ ಸುಡುಗಾಡ ಕಾಯಲಿಲ್ವೆ? ಆ ಕಡೆಯಿಂದ ಬೀಸುವ ಗಾಳಿಯನ್ನು ‘ಸುಡುಗಾಡ ಗಾಳಿ’ ಎಂದು ಸಹಜವಾಗಿಯೇ ಕರೆದಂತೆ ತೋರುತ್ತದೆ. ಸಾಮಾನ್ಯವಾಗಿ, ಸುಡುಗಾಡುಗಳು ಊರ ಉತ್ತರಕ್ಕೇ ಇರುತ್ತವೆ. ಹಾಗಾಗಿ, ಹರಿಶ್ಚಂದ್ರ ಆಳಿದ ದಿಕ್ಕು, ಸ್ಮಶಾನ ಕಾಯ್ದದಿಕ್ಕು ಉತ್ತರವೇ. ಆದುದರಿಂದ ಹರಿಶ್ಚಂದ್ರ ಗಾಳಿ ಉತ್ತರದಿಂದಲೇ ಬೀಸುವುದೆಂಬುದು ಬಹು ಜನರ ನಂಬಿಕೆ.

ಹರಿಶ್ಚಂದ್ರಗಾಳಿ, ಮಳೆಗಾಲ ಹೊರತುಪಡಿಸಿ, ಯಾವಾಗಲೊ ಒಮ್ಮೆ ಬೀಸಿ ಮಾಯವಾಗುವ ಅಪರೂಪದ ಗಾಳಿ, ಜನೇವರಿ ಫೆಬ್ರುವರಿ ಮಾರ್ಚ್‌ಗಳಲ್ಲಿ ಬೀಸುತ್ತದೆ. ಅಂದರೆ ಸುಗ್ಗಿಯ ಕಾಲದಲ್ಲಿ ಇದು ಬೀಸಿದ ಮೂರು ದಿನಗಳೊಳಗಾಗಿ ಐದು ಹನಿಯಾದರೂ ಮಳೆ ಆಗಿಯೇ ಆಗುತ್ತದೆಂಬ ನಂಬಿಕೆಯಿದೆ. ಈ ನಂಬಿಕೆಯ ಆಧಾರದಿಂದಲೂ ‘ಹರಿಶ್ಚಂದ್ರ ಗಾಳಿ’ಯನ್ನು ಗುರುತಿಸಲಾಗುವುದೆಂಬ ಇನ್ನೊಂದು ನಂಬಿಕೆಯಿದೆ. ಸತ್ಯಕ್ಕೆ ಹರಿಶ್ಚಂದ್ರ ಪ್ರತೀಕನಾದುದರಿಂದ ಆತನ ಗಾಳಿ ಬೀಸಿದರೆ, ಮಳೆ ಖಂಡಿತ. ಹುಸಿಹೋಗಲಾರದು. ಆತನಂತೆ, ಆತನಿಂದ ಆವಿರ್ಭವಿಸಿದ ಗಾಳಿಯೂ ನಿಶ್ಚಿತ. ಹರಿಶ್ಚಂದ್ರ ಗಾಳಿಯ ಮುಖ್ಯ ಗುಣ ತಂಪನ್ನುಂಟು ಮಾಡುವುದು. ಗಾಳಿ ತಣ್ಣಗೆ ಬೀಸಿದರೆ ಮಳೆ ಬರುತ್ತದೆನ್ನುವ ನಂಬಿಕೆಯೂ ಇದೆ. (ಆದರೆ, ಗಾಳಿಯಿಂದ ಅತಿಯಾದ ತಂಪು ಅಥವಾ ಥಂಡಿ ಉಂಟಾದರೆ ಮಳೆ ಬರುವುದಿಲ್ಲ ಎಂಬ ನಂಬುಗೆ). ಆದುದರಿಂದ ಹರಿಶ್ಚಂದ್ರಗಾಳಿ ಬೀಸಿದರೆ ಮಳೆ ತಪ್ಪದೇ ಬರುತ್ತದೆನ್ನುವುದಕ್ಕೆ ಜನಪದ ತ್ರಿಪದಿ ಸಾಲೊಂದರಲ್ಲಿ ಆಧಾರ ಸಿಕ್ಕುತ್ತಿದೆ.

ಹರಿಚಂದ್ರ ಗಾಳಿಗಳು ಭರದೆ ಬೈಲಿಗೆ ಬೀಸಿ
ಸುರಿ ಮಳೆಯ ನಮ್ಮ ಬೆಳವಲಕೆ |[8]

“ಬಡಗಲು ಗಾಳಿ ನಡೆಯಲು -ಮಳೆ ತಾಗು ತಡೆಯದೆಬಹುದು[9] ಎಂಬ ಸರ್ವಜ್ಞನ ಮಾತಿನಲ್ಲಿ ಹರಿಶ್ಚಂದ್ರಗಾಳಿಯ ಪರಿಣಾಮವೇ ಸೂಚಿತವಾದಂತಿದೆ.

* ಕುಂಬಾರಗಾಳಿ

‘ಕುಂಬಾರಗಾಳಿ’ ದಕ್ಷಿಣದಿಂದ ಉತ್ತರಕ್ಕೆ ಬೀಸುತ್ತದೆ. ಕುಂಬಾರನ ಆವಿಗೆ ಹೆಚ್ಚಾಗಿ ದಕ್ಷಿಣಾಭಿಮುಖವಾಗಿರುತ್ತದೆ. ಆದುದರಿಂದ ದಕ್ಷಿಣದಿಂದ ಗಾಳಿ ಬೀಸಿದರೆ ಮಾತ್ರ ಆತನ ಒಲೆ ಉರಿಯಲು ಅನುಕೂಲವಾಗುತ್ತದೆ. ಕುಂಬಾರನಿಗೇ ಹೆಚ್ಚು ಉಪಯುಕ್ತವಾದ ಈ ಗಾಳಿಯನ್ನು ‘ಕುಂಬಾರ ಗಾಳಿ’ ಎಂದು ಕರೆವ ವಾಡಿಕೆ. ಕುಂಬಾರಗಾಳಿಯ ಬಗೆಗೂ ಕೆಲವು ನಂಬಿಕೆ ಆಧಾರಿತ ಹೇಳಿಕೆಗಳಿವೆ. ಗಾಳಿಯಿಲ್ಲದೆ ಬೆಂಕಿ ಪುಟಿಗೊಳ್ಳಲಾರದೆಂಬುದು ಸಾಮಾನ್ಯ ನಂಬಿಕೆ. ಒಂದು ಸಲ ಕುಂಬಾರನ ಒಲೆ, ಗಾಳಿ ಬೀಸದಿರುವುದರಿಂದ ಹೊತ್ತಿ ಉರಿಯಲಿಲ್ಲವಂತೆ ಉರಿಯಿಲ್ಲದೆ ಗಡಿಗೆ ಮಡಿಕೆಗಳು ಸುಡುವುದೆಂತು? ಆಗ ಕುಂಬಾರ ತನ್ನ ಗಡಿಗೆಗಳನ್ನು ಅರ್ಧಮರ್ಧ ಸುಟ್ಟಿದ್ದವಂತೆ, ಅಷ್ಟರಲ್ಲಿಯೇ ಗಾಳಿ ನಿಂತು, ಒಲೆ ಉರಿಯಲಿಲ್ಲವಂತೆ ಆಗ ಕುಂಬಾರ ದಕ್ಷಿಣಕ್ಕೆ ಮುಖಮಾಡಿ, ತನ್ನ ಮುಚ್ಚಳದಿಂದ ಗಾಳಿ ಬೀಸಿದನಂತೆ, ಒಲೆ ಉರಿದು ಗಡಿಗೆಗಳು ಪೂರ್ತಿ ಸುಟ್ಟವಂತೆ ಹೀಗೆ, ಕುಂಬಾರ ತನಗೋಸ್ಕರ, ತಾನೇ ತರಿಸಿದ ಅಥವಾ ಬರಿಸಿದ ‘ಗಾಳಿ’ಯನ್ನು ‘ಕುಂಬಾರಗಾಳಿ’ ಎಂದು ಅನೇಕ ಕಡೆ ಕರೆಯುವ ವಾಡಿಕೆ.

‘ಕುಂಬಾರ ಗಾಳಿ’ ಬೀಸಿದರೂ ಮಳೆ ಬರುತ್ತದೆನ್ನುವ ನಂಬಿಕೆಯಿದೆ. “ತೆಂಕಲು ಮುಗಿಲಡರೆ ಮಳೆಯು ಭೋಂಕನೆ ಬಕ್ಕು”[10]ದೆಂದು ಸರ್ವಜ್ಞನೂ ಹೇಳುತ್ತಾನೆ. ಮಳೆಯಿಲ್ಲದ ಸಮಯದಲ್ಲಿ ಈ ಗಾಳಿ ಬೀಸಿದರೆ ಮಳೆ ಬರುತ್ತದೆನ್ನುವ ಸೂಚನೆ. ‘ಹರಿಶ್ಚಂದ್ರ ಗಾಳಿ’ಯಂತೆ ಈ ಗಾಳಿಯೂ ನಿಯಮಿತವಾಗಿ ಬೀಸುವುದಿಲ್ಲ. ಯಾವಾಗಲೊ ಒಮ್ಮೆ ಬೀಸಿಹೋಗುತ್ತದೆ. ಹರಿಶ್ಚಂದ್ರ ಗಾಳಿಯ ನಂತರ ಈ ಗಾಳಿ ಬೀಸುತ್ತದೆಂದು ಹೇಳುತ್ತಾರೆ. ಕುಂಬಾರಗಾಳಿ ಬೀಸಿದರೆ ದನಗಳಿಗೆ ಬಲವಿಲ್ಲ -ಅಂದರೆ, ದನಗಳಿಗೆ ರೋಗರುಜಿನಗಳು ಅಂಟಿಕೊಳ್ಳುತ್ತವೆಂದು ರೈತರ ಅನುಭವ.

* ಹನುಮನಗಾಳಿ

ಹನುಮನಗಾಳಿಯೂ ‘ಕುಂಬಾರಗಾಳಿ’ಯಂತೆ ದಕ್ಷಿಣದಿಂದ ಉತ್ತರಕ್ಕೆ ಬೀಸುತ್ತದೆ. ‘ಚಿತ್ರದುರ್ಗ ಜಿಲ್ಲೆ’ಯಲ್ಲಿ ಪ್ರಚಲಿತದಲ್ಲಿರುವ ಗಾಳಿಯಿದು. ಹನುಮಂತ ದೇವರು ಯಾವ ಪ್ರದೇಶದಲ್ಲಿದ್ದರೂ ದಕ್ಷಿಣಕ್ಕೇ ಮುಖಮಾಡಿರುತ್ತಾನೆ. ಅವನು ಮುಖ ಮಾಡಿರುವ ದಕ್ಷಿಣದಿಕ್ಕಿನಿಂದ ಬೀಸುವ ಗಾಳಿಯನ್ನು “ಹನುಮನಗಾಳಿ”, ಹನುಮನದಿಕ್ಕಿನ ಗಾಳಿ, “ಮೂಲಿಗಾಳಿ” ಎಂದೂ ಕರೆಯುತ್ತಾರೆ. ಮೂಡಗಾಳಿ -ಪಡುಗಾಳಿ ಬೀಸುವ ಸಂದರ್ಭದಲ್ಲಿ ಇದು ಆಕಸ್ಮಿಕವಾಗಿ ಬೀಸುತ್ತದೆ. ಈ ಗಾಳಿಯ ಬೀಸುವಿಕೆಯ ಮೇಲಿಂದಲೂ ಮಳೆಯ ಬರುವಿಕೆಯನ್ನು ತಿಳಿಯುತ್ತಿದೆ. ಹನುಮನ ಗಾಳಿ ಬೀಸಿದರೆ ಮಳೆ ಖಂಡಿತ ಬರುತ್ತದೆಂದು ಚಿತ್ರದುರ್ಗ ಜಿಲ್ಲೆಯ ಜನರು ನಂಬಿಕೆ. ಈ ಗಾಳಿ, ಏನಿಲ್ಲವೆಂದರೂ ವರುಷಕ್ಕೆ ಒಮ್ಮೆಯಾದರೂ ಬೀಸೆ ಬೀಸುತ್ತದೆ. ಆದುದರಿಂದಲೇ ‘ಹನುಮಂತನ ಗಾಳಿ ಬೀಸಿದೆ’ ಎಂಬ ಗಾದೆ ಹುಟ್ಟಿಕೊಂಡಿರಬೇಕು.

ಕುಂಬಾರ ಗಾಳಿ ಮತ್ತು ಹನುಮನಗಾಳಿಗಳ ಹೆಸರುಗಳಲ್ಲಿ ಪ್ರಾದೇಶಿಕ ಭಿನ್ನತೆಯಿದ್ದರೂ ಉಳಿದಂತೆ ಅವರೆಡರ ಗುಣಧರ್ಮಗಳು ಒಂದೇ ರೀತಿಯಾಗಿವೆ.

* ಸುಂಟರ ಗಾಳಿ

ಬೇಸಿಗೆಯ ಕಾಲದಲ್ಲಿ ಬಹಳ ರಭಸದಿಂದ ಬೀಸುವ ಗಾಳಿಯಿದು. ಒಮ್ಮಿಂದೊಮ್ಮೆಲೆ ಎಲ್ಲಿಯೋ ಎದ್ದು ಅಲ್ಲಿರುವ ಮನೆ, ಗುಡಿಸಲು ಬಟ್ಟೆಬರೆ, ಹುಲ್ಲು, ರವದಿ ಮೊದಲಾದವುಗಳನ್ನು ಮುಗಿಲೆತ್ತರಕ್ಕೆ ಹಾರಿಸಿಕೊಂಡು ಹೋಗುತ್ತದೆ, ಸುತ್ತಿ ಸುತ್ತಿ ಮೇಲೇರುತ್ತದೆ. ಇದರ ರಭಸಕ್ಕೆ ಗಿಡ ಮರಗಳು ಕಿತ್ತಿ ಬೀಳುತ್ತವೆ. ಈ ಗಾಳಿಯ ಹೊಡೆತಕ್ಕೆ ಸಿಕ್ಕಿ ಎಷ್ಟೋ ಮನುಷ್ಯರು, ಪ್ರಾಣಿಗಳು ಸತ್ತುದುಂಟು. ಗುಡ್ಡ ಬೆಟ್ಟ ಯಾವುದೂ ಇಲ್ಲದ ಬಯಲು ಪ್ರದೇಶದಲ್ಲಿ ಈ ಗಾಳಿ ಯಾವ ಆತಂಕವೂ ಇಲ್ಲದೆ ಚೆನ್ನಾಗಿ ಬೀಸುತ್ತದೆ. ಪ್ರದೇಶಕ್ಕೆ ಅನುಗುಣವಾಗಿ ಈ ಗಾಳಿಯ ರಭಸದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹೊಲ-ಗದ್ದೆಗಳಲ್ಲಿ ಬೀಸುವ ಸುಂಟರಗಾಳಿಯ ರಭಸ ಸ್ವಲ್ಪ ಹೆಚ್ಚಿಗಿದ್ದರೆ, ಊರಲ್ಲಿ ಬೀಸುವಾಗ ಅದರ ರಭಸ ಕಡಿಮೆ ಪ್ರಮಾಣವುಳ್ಳದ್ದಾಗಿರುತ್ತದೆ. ಅದೇ ಬಯಲು ಸೀಮೆಯಲ್ಲಿ ಹೆಚ್ಚು ಜೋರಾಗಿ ಬೀಸುತ್ತದೆ. ಇದಕ್ಕೆ ಕಾರಣ ಸುಂಟರಗಾಳಿ ಬೀಸಲು ಗುಡ್ಡ ಬೆಟ್ಟ, ಗಿಡ ಮರ ಮೊದಲಾದವುಗಳ ತಡೆ ಇಲ್ಲದಿರುವುದು. ಇದು ಮೊದಲು ಸಣ್ಣ ಗಾತ್ರದಲ್ಲಿ ಹುಟ್ಟಿ, ಸಿಕ್ಕ ವಸ್ತುಗಳನ್ನು ಹಾರಿಸುತ್ತ ಸುಂಯ್ ಸುಂಯ್ ಎಂದೋ ಬರ್ ಬರ್ ಎಂದೋ ಶಬ್ದಗೈಯುತ್ತ ಸುಳಿ ಸುಳಿಯಾಗಿ ತಿರುಗುತ್ತ, ತನ್ನ ಗಾತ್ರವನ್ನು ವಿಸ್ತರಿಸುತ್ತ ಬಹಳ ವೇಗದಿಂದ ಆಕಾಶಕ್ಕೆ ನೆಗೆಯುತ್ತದೆ. ಈ ಗಾಳಿಯಿಂದ ಯಾವ ಪ್ರಯೋಜನವೂ ಇಲ್ಲ. ಅಪಾಯ ಮಾತ್ರ ಇದೆ. ಗ್ರಾನ್ ಬೌಕೋದ ಲೆಂಗುವಾ ಇಂಡಿಯನ್ನರು ಸುಂಟರಗಾಳಿ ಬಂದರೆ ಭೂತದ ಚಲನ ಎಂದು ತಿಳಿಯುತ್ತಾರಂತೆ[11] ಪ್ರಾಯಶಃ ಅವರು ‘ದೆವ್ವಗಾಳಿ’ಯನ್ನೇ ಸುಂಟರಗಾಳಿ ಎಂದು ತಿಳಿದಂತೆ ಕಾಣುತ್ತದೆ.

*ದೆವ್ವಗಾಳಿ

ಕೆಲವರು ಸುಂಟರಗಾಳಿಗೇ ‘ದೆವ್ವಗಾಳಿ’ ಎನ್ನುತ್ತಾರೆ. ಆದರೆ ಇವೆರಡು ಬೇರೆ ದೆವ್ವಗಾಳಿ, ಸುಂಟರಗಾಳಿಯಷ್ಟು ಮೇಲಕ್ಕೆ ಹಾರದಿದ್ದರೂ ಅದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಬೀಸುತ್ತದೆ. ಇದರ ಹಾರುವಿಕೆಯ ಗಾತ್ರ ಹರವಾದುದು. ಭಯಂಕರ ಗಾಳಿಯಿದು. ಇದು ಕೂಡ ಬೇಸಿಗೆ ಕಾಲದಲ್ಲಿ ಕಂಡು ಬರುತ್ತದೆ. ದೆವ್ವಗಾಳಿಗೆ ಸಿಕ್ಕ ವಸ್ತುಗಳೆಲ್ಲ ನುಚ್ಚು ನುರಾಗುತ್ತವೆ. ಚಿಕ್ಕ ಮಕ್ಕಳು ಈ ಗಾಳಿಗೆ ಭಯಪಡುತ್ತವೆ. ದೆವ್ವಿನ ಭಯಂಕರತೆ ಈ ಗಾಳಿಯಲ್ಲಿ ಕಾಣಬರುವುದರಿಂದ ಇದಕ್ಕೆ ‘ದೆವ್ವಗಾಳಿ’ ಎಂದು ಕರೆಯುತ್ತಾರೆ. ಇದು ಬೀಸಲಿಕ್ಕೆ ಪ್ರಾರಂಭಿಸಿದರೆ ದೆವ್ವ ಬರುತ್ತದೆನ್ನುವ ನಂಬಿಕೆಯಿದೆ. ಆದುದರಿಂದ ದೆವ್ವಗಾಳಿ ಎದ್ದಾಗ, ಅದು ತಮ್ಮ ಹತ್ತಿರ ಸುಳಿಯಬಾರದೆಂದು ಅದಕ್ಕೆ “ಥೂ” ಎಂದು ಉಗುಳುತ್ತಾರೆ. ಉಗುಳುವುದರಿಂದ ದೆವ್ವಗಾಳಿ ಹತ್ತಿರಕ್ಕೆ ಬರುವುದಿಲ್ಲವೆಂದು ನಂಬಿಕೆ. ಈ ಗಾಳಿ ಬೀಸುವಾಗ ಅದರಲ್ಲಿ ಒಂದಿಷ್ಟು ಉಪ್ಪು ಹಾಕಿದರೆ ಅದರಲ್ಲಿರುವ ದೆವ್ವ ಕಣ್ಣಿಗೆ ಕಾಣಿಸುತ್ತದೆ ಎನ್ನುವ ನಂಬಿಕೆಯೂ ಪ್ರಚಲಿತವಿದೆ. ದೆವ್ವಗಾಳಿ ಬಿಟ್ಟಾಗ ಅಗ್ಗಿಷ್ಟಿಗಿ (ಬಾಣಂತಿ ಬೆಂಕಿ) ಹೊರಗಿಡಬಾರದು, ಎಂಬ ನಂಬಿಕೆಯಲ್ಲಿ, ದೆವ್ವ ಅಗ್ಗಿಷ್ಟಿಯಲ್ಲಿ ಸೇರಿಕೊಂಡು, ಬಾಣಂತಿಗೆ ಬಡಿಯಬಾರದೆನ್ನುವ ಎಚ್ಚರಿಕೆ ಇದೆಯೆಂದು ಹೇಳುತ್ತಾರೆ. ಗಾಳಿಗೆ ಅಗ್ಗಿಷ್ಟಿಗೆಯನ್ನು ತೆರೆದಿಟ್ಟರೆ, ಅದರಲ್ಲಿರುವ ಕಿಡಿಗಳು ಹಾರಿಹೋಗಿ ಅನಾಹುತವಾಗುವ ಸಂಭವ ಇರುತ್ತದೆ. ಆ ಕಾರಣದಿಂದಲೂ ಮೇಲಿನ ಮಾತನ್ನು ಹೇಳಿರಬೇಕು. ‘ದೆವ್ವಗಾಳಿ’ಗೆ ಹಾರಿದ ರವದಿ ಬಾಯಾಗ ಹಿಡಿದ್ರ ಬಂಗಾರಾಗ್ತದ ಎಂಬ ನಂಬಿಕೆಯೂ ಇದೆ. ಇದರಿಂದ ದೆವ್ವಗಾಳಿಯ ಭಯಂಕರತೆಯನ್ನು ತಿಳಿಯಬಹುದು. ಈ ಗಾಳಿಯಲ್ಲಿ ಕಣ್ಣು ತೆರೆಯಲಿಕ್ಕೂ ಆಗುವುದಿಲ್ಲ. ಅಂತಹದರಲ್ಲಿ ಹಾರುವ ರವದಿಯನ್ನು ಬಾಯಲ್ಲಿ ಹಿಡಿಯಲಿಕ್ಕೆ ಸಾಧ್ಯವೇ? ಇನ್ನು ಅದು ಬಂಗಾರವಾಗುವುದಂತೂ ದೂರದ ಮಾತು. ಆಗಾಗ್ಗೆ ಬೀಸುವ ಈ ಗಾಳಿಗೆ ಬೇಸತ್ತ ಹೆಣ್ಣು ಮಕ್ಕಳು ‘ಅಯ್ಯನನ ಹಾಟ್ಯಾನ ಗಾಳಿ’ ಎಂದು ಬೈಯುವುದುಂಟು, ದೆವ್ವ ಗಾಳಿಗೆ ಹಾರಿಹೋದ ಬಟ್ಟೆಯನ್ನು ಮರಳಿ ತರಬಾರದು. ಏಕೆಂದರೆ ದೆವ್ವ ಮನೆಯೊಳಗೆ ಬರುತ್ತದೆ ಎಂಬ ನಂಬಿಕೆಯೂ ಉಂಟು.

*ಬಿರುಗಾಳಿ

ವರ್ಷದ ಎಲ್ಲ ಕಾಲದಲ್ಲಿಯೂ ಬೀಸುವ ಬಿರುಸಾದ ಗಾಳಿಯಿದು. “ಮೇ” ನಂತರದ ತಿಂಗಳುಗಳಲ್ಲಿ ಇದು ಹೆಚ್ಚಾಗಿ ಬೀಸುತ್ತದೆ. ಭಯಂಕರವಾದ ಈ ಗಾಳಿ ಎಲ್ಲ ಜೀವಿಗಳಿಗೂ ಮಾರಕವಾದುದು. ಬಿರುಗಾಳಿ ಒಮ್ಮಿಂದೊಮ್ಮೆಲೆ ದೊಡ್ಡ ಪ್ರಮಾಣದಲ್ಲಿ ತೀವ್ರವಾಗಿ ಬೀಸುವುದರಿಂದ ಗಿಡ, ಮರ, ಮನೆ, ಮೊದಲಾದವುಗಳೆಲ್ಲ ಕಿತ್ತುಕೊಂಡು ಬೀಳುತ್ತವೆ. ಸಮುದ್ರದ ಹಡಗುಗಳು ಮುಳುಗುತ್ತವೆ, ಜೋಳ, ಭತ್ತ, ಕಬ್ಬು ಮೊದಲಾದ ಬೆಳೆಗಳು ನಡಮುರಿದುಕೊಂಡು ನೆಲಕ್ಕೆ ಉರುಳುತ್ತವೆ. ಒಣಗಾಳಿಯಾದ ಇದು ಗಾಳಿಗಳಲ್ಲಿಯೇ ಅತ್ಯಂತ ಭಯಂಕರ ಸ್ವರೂಪವುಳ್ಳುದು. ಇದು ಯಾವುದನ್ನೂ ಲೆಕ್ಕಿಸದು. ತನಗೆ ಸಿಕ್ಕುದೆಲ್ಲವನ್ನೂ ನಾಶಪಡಿಸುತ್ತದೆ. ಆದುದರಿಂದ ‘ಬಿರುಗಾಳಿ ಬಲ್ಲುದೇ ಬೇವಿನ ಕಹಿಯ’? ಎಂಬ ನಾಡನುಡಿ ಹುಟ್ಟಿದೆ. ಬಿರುಗಾಳಿ ಬೀಸಲಾರಂಭಿಸಿದರೆ ಬೇಸಿಗೆ ಬಂತೆಂದು ಹಳ್ಳಿಗರು ತಿಳಿಯುತ್ತಾರೆ. ‘ಬಿರುಗಾಳಿ ಬೀಸಿ ಬೇಸಗೆ ಬಂದುದು ಎಂದು ‘ಕುಮುದೇಂದು’ ಕೂಡ ಹೇಳುತ್ತಾನೆ. ಬಿರುಗಾಳಿ ಮನುಷ್ಯ ಮತ್ತು ಸಸ್ಯಾದಿಗಳಿಗೆ ಮಾತ್ರ ಹಾನಿಕಾರಕವಲ್ಲ, ಪ್ರಾಣಿಗಳಿಗೂ ಇದರಿಂದ ಹಾನಿಯುಂಟಾಗುತ್ತದೆ. ಈ ಗಾಳಿಗೆ ಕುದುರೆಗಳಿಗೆ ಉಸಿರಾಟ ಸಂಬಂಧಿರೋಗ ತಗುಲುತ್ತದೆ.

“ಬಿರುಗಾಳಿಗೆ ಮರ ಉರುಳಿಬಿದ್ದರೆ ಮುಂದಿನ ಕೆಟ್ಟ ಸೂಚನೆಯೆಂದು ನಂಬಿಕೆ. ಮೆಕ್ಬೆತ್ ನಾಟಕದಲ್ಲಿ ಲೆನೊಕ್ಸನು (Lenox) ಬಿರುಗಾಳಿಯ ರಾತ್ರಿಯಲ್ಲಿ ವಿಚಿತ್ರವಾದ ಮರಣದ ಚೀರಾಟಗಳು ಕೇಳಿ ಬಂದುವೆಂದೂ, ಹೇಗೆ ಕೊಳವೆಗಳನ್ನು ಬಿರುಗಾಳಿ ಬೀಸಿ ಕೆಡವಿತೆಂದೂ ಭೀಕರವಾದ ಸ್ವರದಲ್ಲಿ ಅನಿಷ್ಟ ಭವಿಷ್ಯದ ಸೂಚನೆಯಾಯಿತೆಂದೂ ಹೇಳುತ್ತಾನೆ.[12] ದೈತ್ಯನೊಬ್ಬ ಗಾಳಿಯನ್ನು ಗವಿಯಲ್ಲಿ ಕೂಡಿಹಾಕಿ ಹಠಾತ್ತನೆ ಹೊರಗೆ ಬಿಟ್ಟಾಗ ಬಿರುಗಾಳಿ ಬೀಸುತ್ತದೆ. ದೈತ್ಯ ಪಕ್ಷಿಯ ರೆಕ್ಕೆ ಬಡಿತದಿಂದ ಗಾಳಿ ಉತ್ಪನ್ನವಾಗುತ್ತದೆ. ಗಾಳಿ ಅತಿಯಾದಾಗ ಸಾಹಸಿಯೊಬ್ಬ ಪಕ್ಷಿಯ ರೆಕ್ಕೆಗಳನ್ನು ಕೊಚ್ಚಬೇಕಾಗುತ್ತದೆ.[13] ಎನ್ನುವ ಜಾನಪದೀಯ ನಂಬಿಕೆಗಳು ಪುರುಣೋಕ್ತವಾಗಿವೆ. ದಕ್ಷಿಣ ಅಮೇರಿಕದ ‘ಪಯಗುವಾ’ ಜನರು ಬೆಂಕಿಕೊಳ್ಳಿ ಹಿಡಿದು ಬಿರುಗಾಳಿಯ ಮೇಲೇರಿ ಹೋಗುತ್ತಾರೆ.[14] ಆದರೆ ನಮ್ಮಲ್ಲಿ ಬಿರುಗಾಳಿ ರಭಸದಿಂದ ಬೀಸುವಾಗ, ಮನೆಯ ಕಿಟಕಿ ಬಾಗಿಲುಗಳನ್ನು ಹಾಕಿಕೊಳ್ಳಬೇಕೆಂಬ ನಂಬಿಕೆಯಿದೆ.

ಸಿಡಿಲು, ಮಿಂಚು, ಗಾಳಿಗಳು ದೇವನ ಆಯುಧಗಳೆಂದು ನ್ಯೂ ಆರ್. ಜನಾಂಗದ ನಂಬುಗೆ, ಹಾಗೂ ಸಿಡಿಲು, ಬಿರುಗಾಳಿ, ಮಿಂಚುಗಳಿಂದ ಜನಸತ್ತರೆ ದೇವರ ಆಯುಧಗಳ ಮೂಲಕ ಮುಕ್ತಿ ಪಡೆದರೆಂದು ನ್ಯೂ ಆರ್. ಜನಾಂಗದ ನಂಬುಗೆ, ಶ್ರದ್ಧೆ. ‘ಬಿರುಗಾಳಿ’ ಬರುತ್ತಿರುವ ಕನಸು ಕಂಡರೆ, ಅನೇಕ ತೊಂದರೆಗಳಾಗುತ್ತವೆಂಬ ನಂಬಿಕೆಯೊಂದು ಹಳ್ಳಿಗರಲ್ಲಿ ಈಗಲೂ ಕಂಡು ಬರುತ್ತದೆ.

ಬಿರುಗಾಳಿಯನ್ನು ಕುರಿತು ಕೆಲವರು ಕತೆಗಳು ನಿಗ್ರೋ ಜನಾಂಗದಲ್ಲಿ ಪ್ರಚಲಿತದಲ್ಲಿವೆ. ಬಂದು ಕತೆ ಹೀಗಿದೆ. ‘ಪರಮಾತ್ಮನ ಮಕ್ಕಳಾದ ಭೂಮಿತಾಯಿ ಮತ್ತು ಬಿರುಗಾಳಿಗಳ ಮಧ್ಯ ಒಮ್ಮೆ ಜಗಳವಾಯಿತಂತೆ. ಭೂಮಿ ಅಕ್ಕ, ಬಿರುಗಾಳಿ ತಮ್ಮ. ಭೂಮಿ ಪರಮಾತ್ಮನ ಮೊದಲ ಸೃಷ್ಟಿ. ಬಿರುಗಾಳಿ ಆಮೇಲಿನ ಸೃಷ್ಟಿ. ಅವರಲ್ಲಿ ಜಗಳವಾಗಿ ಭೂಮಿ ದೇವರ ಆಸ್ತಿಯನ್ನೆಲ್ಲ ತೆಗೆದುಕಂಡು ಕೆಳಗೆ ಬಂದಳು. ಕೋಪಗೊಂಡ ಬಿರುಗಾಳಿ ಮಳೆಯನ್ನು ತಡೆಹಿಡಿಯಿತು. ಭೂಮಿಯ ಮೇಲಿನ ಜನ ನೀರಿಲ್ಲದೆ ಬಾಯಾರಿಕೆಯಿಂದ ಸಾಯುತೊಡಗಿದರು, ಭೂಮಿ ಸ್ವರ್ಗದಿಂದ ಕೆಳಗೆ ಬರುವಾಗ ಬೆಂಕಿ ಮತ್ತು ನೀರನ್ನು ಬಿಟ್ಟು ಬಂದಿದ್ದಳು. ಆದ್ದರಿಂದ ಆಕೆಗೆ ಏನೂ ಮಾಡಲಾಗಲಿಲ್ಲ. ದೈವದ ನುಡಿ ಕೇಳಿದಾಗ ಅದು ಬಿರುಗಾಳಿಯ ಕೋಪವೆಂದು ತಿಳಿಯಿತು. ಅದಕ್ಕಾಗಿ ಬಿರುಗಾಳಿಯೊಡನೆ ಸಂಧಾನ ನಡೆಸಲಾಯಿತು. ಭೂಮಿ ಸ್ವರ್ಗದಲ್ಲಿ ಬೆಂಕಿ ಮತ್ತು ನೀರನ್ನು ಬಿಟ್ಟು ಬಂದುದರಿಂದ ಅವುಗಳನ್ನು ನಿಯಂತ್ರಿಸಿ ತನಗೆ ಬೇಕಾದುದನ್ನು ಪಡೆಯಬಹುದಾಗಿತ್ತು. ಕೊನೆಗೆ ಭೂಮಿ ಪ್ರಾರ್ಥನೆ ಮಾಡಿ ಬಿರುಗಾಳಿಯನ್ನು ಸಂತೈಸಿದಳು. ಬಿರುಗಾಳಿ ಪ್ರಸನ್ನವಾಗಿ ಮಳೆಯನ್ನು ಬಿಡುಗಡೆ ಮಾಡಿದಂತೆ.[15] ಈ ಪ್ರಾಕೃತಿಕ ಶಕ್ತಿಗಳಲ್ಲಿ ದಾಯಾದಿ ಮತ್ಸರ, ಹೊಟ್ಟೆಕಿಚ್ಚು ಮೊದಲಾದ ಮಾನವನ ಗುಣಗಳು ಇದ್ದುದನ್ನು ಮೇಲಿನ ಕತೆಯಿಂದ ತಿಳಿಯಬಹುದಾಗಿದೆ. ಸಾಮಾನ್ಯವಾಗಿ ಇಂಥ ಘಟನೆಗಳು ಮತ್ತು ಮನೋಭಾವನೆಗಳು ಪುರಾಣಕತೆಗಳಲ್ಲಿ ಹೆಚ್ಚಾಗಿ ಕಾಣಬರುತ್ತವೆ. ನೀತಿ ಮಾರ್ಗದಲ್ಲಿ ನಡೆದರೆ ಗಾಳಿ, ಮಳೆ ತರಿಸುತ್ತದೆಂಬ ನಂಬಿಕೆ ನಿಗ್ರೋಗಳಲ್ಲಿದೆ. ಕೆಟ್ಟ ಜನ ಇದ್ದಲ್ಲಿ ಗಾಳಿ ಮಳೆ ಬೆಳೆ ಚೆನ್ನಾಗಿ ಬರುವುದಿಲ್ಲವೆಂಬ ಜನಪದರ ನಂಬಿಕೆಯೂ ಇದನ್ನೇ ಸಮರ್ಥಿಸುತ್ತದೆ.


[1]      ಜಾನಪದ ಅಧ್ಯಯನ ದೇಜಗೌ ಪು. ೩೧೧.

[2]     ನಾಲ್ಕು ನಾಡಪದಗಳು : (ಸಂ) ಬಿ. ಎಸ್. ಗದ್ದಗಿಮಠ ಪು. ೫೧, ಪ. ೬೭.

[3]     ನಾಲ್ಕು ನಾಡಪದಗಳು : (ಸಂ) ಬಿ. ಎಸ್. ಗದ್ದಗಿಮಠ ಪು. ೫೧. ಪ. ೬೮.

[4]      ನಾಲ್ಕು ನಾಡಪದಗಳು (ಸಂ.) ಬಿ. ಎಸ್. ಗದ್ದಗಿಮಠ ಪು. : ೫೮.

[5]     ನಮ್ಮ ಸಂಸ್ಕೃತಿಯ ಪರಂಪರೆ ಬೆಟಗೇರಿ ಕೃಷ್ಣಶರ್ಮ ಪು. ೩೧.

[6]     ಕನ್ನಡ ಜಾನಪದ ಗೀತಗಳು ಬಿ. ಎಸ್. ಗದ್ದಗಿಮಠ ಪು. ೨೬.

[7]      ಸರ್ವಜ್ಞ ವ. ೧೧೪೯. ಎಲ್. ಬಸವರಾಜು (ಪರಮಾರ್ಥ).

[8]     ನಾಲ್ಕು ನಾಡಪದಗಳು : ಬಿ. ಎಸ್. ಗದ್ದಗಿಮಠ, ಪು. ೫೧. ಪ. ೬೮.

[9]      ಪರಮಾರ್ಥ : (ಸಂ.) ಎಲ್. ಬಸವರಾಜು ಪು. ೨೫. ವ. ೫೦೨.

[10]     ‘ಪರಮಾರ್ಥ’ : ಪ್ರ. ೨೩. ವ. ೫೦೩.

[11]    ಮೂಢನಂಬಿಕೆಗಳು : ಎಲ್. ಆರ್. ಹೆಗಡೆ ಪು. ೨೩.

[12]     ಮೂಢನಂಬಿಕೆಗಳು : ಎಲ್. ಆರ್. ಹೆಗಡೆ. ಪು. ೭೧-೭೨.

[13]    ಜಾನಪದ ಅಧ್ಯಯನ : ದೇಜಗೌ, ಪು. ೧೭೯.

[14]    ಮೂಢನಂಬಿಕೆಗಳು : ಎಲ್. ಆರ್. ಹೆಗಡೆ ಪು. ೨೭.

[15]    ಉದ್ಧೃತ,: ಜಾನಪದ ಸಾಹಿತ್ಯ ದರ್ಶನ (ಭಾಗ : ೧೨) ಪು. ೧೫೬ (ನಿಗ್ರೋ ಜನಾಂಗದಲ್ಲಿ “ಆಕಾಶ ಜಾನಪದ” ಡಾ. ಯು.ಪಿ. ಉಪಾಧ್ಯಾಯರ ಲೇಖನ) ಕ. ವಿ. ವಿ. ಧಾರವಾಡ – ೧೯೯೪.