ಗಾಳಿ ಕೆಲವೊಮ್ಮೆ ಜೋರಾಗಿ ಬೀಸಿದರೆ, ಇನ್ನು ಕೆಲವೊಮ್ಮೆ ಅದು ಇದ್ದದ್ದೇ ಗೊತ್ತಾಗುವುದಿಲ್ಲ. ಗಾಳಿ ಬೀಸುವಾಗ ಅದರ ವೇಗ ಎಷ್ಟು ಇರಬಹುದು ಎಂದು ನಾವೆಂದಾದರೂ ಅಂದಾಜು ಮಾಡಲು ಪ್ರಯತ್ನಿಸಿದ್ದೇವೆಯೇ? ಇಲ್ಲಿ ಕೆಲವು ಸೂಚನೆಗಳಿವೆ.  ನಮ್ಮ ಸುತ್ತಮುತ್ತಲೂ ನಡೆಯುವ, ಗಾಳಿಗೆ ಸಂಬಂಧಿಸಿದ ಘಟನೆಗಳಿಂದ ಗಾಳಿಯ ವೇಗ ಎಷ್ಟಿರಬಹುದು ಎಂಬುದನ್ನು ಹೆಚ್ಚುಕಡಿಮೆ ನಾವು ಕರಾರುವಾಕ್ಕಾಗಿ ಹೇಳಬಹುದು.  ಹಾಗಾದರೆ ಗಾಳಿ ಉಂಟು ಮಾಡುವ ಚಿಹ್ನೆಗಳೇನು ಎಂಬುದನ್ನು ಈಗ ಗಮನಿಸೋಣ.  ಇದರಲ್ಲಿ ಗಾಳಿಯ ಬಲ ತಿಳಿಸಲು 0, 1, 2, 3, ….ಸೂಚ್ಯಂಕಗಳನ್ನು ಬಳಸಲಾಗುತ್ತದೆ.

ಗಾಳಿ ಇದ್ದೂ ಇಲ್ಲದಂತಿರುವ ಸಂದರ್ಭದಲ್ಲಿ ನಿಮ್ಮ ಸಮೀಪದಲ್ಲಿ ಇರಬಹುದಾದ ಯಾವುದಾದರೂ ಒಂದು ಕಾರ್ಖಾನೆಯ ಚಿಮಣಿ ಅಂದರೆ ಹೊಗೆ ಕೊಳವೆಯನ್ನು ನೋಡಿರಿ.  ಅಲ್ಲಿಂದ ಹೊರಬೀಳುವ ಹೊಗೆ, ನೇರವಾಗಿ ಮೇಲಕ್ಕೆ ಹೋಗುತ್ತಿದ್ದರೆ ಅಥವಾ ಯಾವುದೇ ಮೂಲದ ಹೊಗೆ ಲಂಬವಾಗಿ ಮೇಲಕ್ಕೆ ಏರುತ್ತಿದ್ದರೆ, ಗಾಳಿಯ ವೇಗ ‘ಸೊನ್ನೆ’ಯಾಗಿರುತ್ತದೆ.  ಅದು ಚಲಿಸುವ ವೇಗ ಗಂಟೆಗೆ 2ಕಿ.ಮೀ.ಗಳವರೆಗೂ ಇರಬಹುದು. ಆಗ ನಾವು ಗಾಳಿ ‘ಶಾಂತ’ (Calm)ವಾಗಿದೆ ಎಂದು ಹೇಳುತ್ತೇವೆ.

ಅದೇ ಕಾರ್ಖಾನೆಯ ಚಿಮಣಿಯ ಹೊಗೆ ಸ್ವಲ್ಪ ಬದಿಗೆ ಹೋಗುತ್ತಿದ್ದರೆ, ಗಾಳಿಯ ವೇಗ 2ರಿಂದ 5ಕಿ.ಮೀ. ಗಳವರೆಗೆ ಇರಬಹುದು. ಗಾಳಿಯ ಬಲ 1ಆಗಿದ್ದು, ಅದನ್ನು ನಾವು ‘ಹಗುರ ಗಾಳಿ(Light Air)’ಎಂದು ಕರೆಯಬಹುದು.

ನಾವು ಹೊರಗೆ ತಿರುಗಾಡುವಾಗ ನಮ್ಮ ಮುಖದ ಮೇಲೆ ಗಾಳಿ ಬಡಿಯುವ ಅನುಭವವಾಗುತ್ತಿದ್ದರೆ, ಆಗ ಅದರ ವೇಗ ಗಂಟೆಗೆ 5ರಿಂದ 12ಕಿ.ಮೀ. ಗಳವರೆಗೂ ಇರಬಹುದು. ಈ ಗಾಳಿಯ ಬಲ 2ಆಗಿದ್ದು ಅದನ್ನು ‘ಹಗುರ ಮಂದಾನಿಲ’ ಅಥವಾ ‘ಹಗುರ ಮೆಲುಗಾಳಿ’ (Light Breeze) ಎಂದು ಕರೆಯಬಹುದು.

ಧ್ವಜ ಸ್ತಂಭಕ್ಕೆ ಏರಿಸಿದ ಬಾವುಟ ಹಾರತೊಡಗಿದರೆ ಗಾಳಿಯು ಗಂಟೆಗೆ 12ರಿಂದ 20ಕಿ.ಮೀ. ವರೆಗೆ ಚಲಿಸುತ್ತಿರುವ ಸೂಚನೆಯಾಗಿರುತ್ತದೆ. ಅದರ ಬಲ 3ಆಗಿದ್ದು, ಅದನ್ನು ‘ಸುಳಿ ಗಾಳಿ’ (Gentle Breeze)ಎಂದು ಕರೆಯಬಹುದು.

ಒಂದು ವೇಳೆ ಕೈಯಲ್ಲಿ ಹಿಡಿದುಕೊಂಡ ವರ್ತಮಾನ ಪತ್ರಿಕೆಯಾಗಲಿ, ಕಾಗದವಾಗಲಿ, ಹಾರಿ ಹೋದರೆ ಗಾಳಿಯು ತಾಸಿಗೆ 20ರಿಂದ 30ಕಿ.ಮೀ. ವೇಗದಲ್ಲಿ ಬೀಸುತ್ತಿದೆ ಎಂದರ್ಥ.  ಇದನ್ನು ‘ಮಧ್ಯಮ ಮಂದಾನಿಲ’ (Moderate Breeze) ಎಂದು ಹೇಳಬಹುದು. ಇದರ ಬಲ 4 ಆಗಿರುತ್ತದೆ.

ಗಿಡಮರಗಳು ಗಾಳಿಯ ಬಲದಿಂದ ಓಲಾಡತೊಡಗಿದರೆ ಅದರ ವೇಗ ಗಂಟೆಗೆ 30ರಿಂದ 40ಕಿ.ಮೀ. ಇದ್ದು, ಆಗಿನ ಗಾಳಿಯ ಬಲ 5 ಅಂಕಿಯಿಂದ ಸೂಚಿತವಾಗುತ್ತದೆ.

ಗಿಡಮರಗಳನ್ನು ಅಲ್ಲಾಡಿಸುವ ಗಾಳಿಗೆ ‘ಚುರುಕು ಮಂದಾನಿಲ’ (Fresh Breeze)ಎಂದು ಹೇಳುತ್ತಾರೆ. ಇಷ್ಟು ವೇಗದಲ್ಲಿ ಬೀಸುವ ಗಾಳಿಯಿಂದ ನಮಗೆ ಉಲ್ಲಾಸಕರವಾದ ಅನುಭವವಾಗುವುದನ್ನು ಗಮನಿಸಬಹುದು.  ಶರ್ಟು, ಪ್ಯಾಂಟು, ಧೋತರಗಳು ಪಡ-ಪಡಿಸತೊಡಗಿದರೆ, ಸೀರೆಯ ಸೆರಗು ಜೋರಾಗಿ ಹಾರತೊಡಗಿದರೆ, ಅದು ಗಾಳಿ ಬಿರುಸಾಗಿ ಬೀಸುವುದರ ಸಂಕೇತ. ಈ ಸಂದರ್ಭದಲ್ಲಿ ಗಾಳಿ ತಾಸಿಗೆ 40ರಿಂದ 50ಕಿ.ಮೀ. ವೇಗದಲ್ಲಿ ಬೀಸುತ್ತಿರುತ್ತದೆ ಎಂದು ತಿಳಿದುಕೊಳ್ಳಬಹುದು. ಅದರ ಬಲ 6 ಆಗಿದ್ದು, ಅದನ್ನು ‘ಬಲವಾದ ಮಂದಾನಿಲ’ (Strong Breeze)ಎಂದು ಹೇಳುತ್ತಾರೆ.

ನೀವು ಹಿಡಿದುಕೊಂಡಿರುವ ಛತ್ರಿ ಅಥವಾ ಕೊಡೆಯ ಬಟ್ಟೆ ಒಮ್ಮೆಲೇ ಹಿಂದಕ್ಕೆ ತೆರೆದುಕೊಂಡರೆ, ಬಿರುಗಾಳಿ ಅಥವಾ ಚಂಡಮಾರುತ ಬೀಸುತ್ತಿದೆ ಎಂದೇ ಅರ್ಥ. ಇದನ್ನು ‘ಮಧ್ಯಮ ಬಿರುಗಾಳಿ’ (Moderate Gale) ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಗಾಳಿ 50ರಿಂದ 61ಕಿ.ಮೀ. ವೇಗದಲ್ಲಿ ಬೀಸುತ್ತಿದ್ದು, ಅದರ ಬಲ 7 ಆಗಿರುತ್ತದೆ.

ಗಾಳಿಗೆ ಎದುರಾಗಿ ನಡೆಯಲು ಬಹಳ ತೊಂದರೆಯಾಗತೊಡಗಿದರೆ, ಆಗ ಅದರ ವೇಗ ಗಂಟೆಗೆ 61ರಿಂದ 74ಕಿ.ಮೀ. ಗಳವರೆಗೆ ಇರುತ್ತದೆ. ಈ ಗಾಳಿಯ ಬಲ 8 ಆಗಿದ್ದು, ಅದನ್ನು ‘ಚುರುಕು ಬಿರುಗಾಳಿ’ (Fresh Gale) ಎಂದು ಕರೆಯುತ್ತಾರೆ.

ಮನೆಗೆ ಹೊದಿಸಿದ ಹೆಂಚುಗಳು, ಶೀಟುಗಳು ಮುರಿಯ ತೊಡಗಿದರೆ ಆಗ ಬಲಯುತವಾದ ಬಿರುಗಾಳಿ ಬೀಸುತ್ತಿದೆ ಎಂದೇ ಅರ್ಥ. ಅದರ ಬಲ 9 ಆಗಿದ್ದು, ಅದು ಗಂಟೆಗೆ 74ರಿಂದ 89ಕಿ.ಮೀ. ವೇಗದಲ್ಲಿ ಬೀಸುತ್ತಿರುತ್ತದೆ….! ಇದನ್ನು ‘ಬಿರುಸು ಬಿರುಗಾಳಿ’ (Strong Gale)ಎಂದು ಗುರುತಿಸಬಹುದು.

ಹೆಂಚುಗಳು, ಶೀಟುಗಳು ಮುರಿಯುತ್ತಿರುವಂತೆಯೇ ಅಷ್ಟುಗಟ್ಟಿಯಲ್ಲದ ಮನೆಗಳು ಕುಸಿಯ ತೊಡಗಿದಾಗ ಗಾಳಿಯ ವೇಗ ಹೆಚ್ಚಿರುತ್ತದೆ. ಅದು 89ರಿಂದ 103ಕಿ.ಮೀ. ವೇಗದಲ್ಲಿ ಬೀಸುತ್ತಿದೆ ಎಂದು ತಿಳಿದುಕೊಳ್ಳಬೇಕು. ಅದರ ಬಲ 10 ಆಗಿದ್ದು, ಅದನ್ನು ‘ಸಂಪೂರ್ಣ ಬಿರುಗಾಳಿ’ (Whole Gale)ಎಂದು ಕರೆಯುತ್ತಾರೆ.

ಪೂರ್ಣಮಟ್ಟದ ‘ಚಂಡ ಮಾರುತ’ಬೀಸಿದರೆ ಇದಕ್ಕಿಂತ ಹೆಚ್ಚಿನ ಅನಾಹುತವಾಗಬಲ್ಲದು ಎಂಬುದು ನಮಗೆಲ್ಲ ಗೊತ್ತೇ ಇದೆ. ಗಿಡಮರಗಳು ಕಿತ್ತು ಬೀಳಬಹುದು…. ಕಟ್ಟಡಗಳು ಉರುಳಬಹುದು… ವಾಹನಗಳು ಹಾರಿಹೋಗಬಹುದು….  ಎಲ್ಲವೂ ಧ್ವಂಸವಾಗಿ ಬಿಡಬಹುದು. ಚಂಡ ಮಾರುತದ ವೇಗ ಗಂಟೆಗೆ 103 ರಿಂದ 120ಕಿ.ಮೀ. ಗಳವರೆಗೂ ಇರುತ್ತದೆ. ಅದರ ಬಲ 11.

ಈ ಚಿಹ್ನೆ, ಸೂಚನೆಗಳನ್ನು ನೆನಪಿನಲ್ಲಿಟ್ಟುಕೊಂಡರೆ, ಆಯಾ ಸಮಯಕ್ಕೆ ಬೀಸುತ್ತಿರುವ ಗಾಳಿಯ ವೇಗವನ್ನು ಯಾವ ಉಪಕರಣದ ಸಹಾಯವೂ ಇಲ್ಲದೆ ಅಂದಾಜು ಮಾಡಬಹುದು.