ಋಗ್ವೇದವು ಗಾಳಿಯನ್ನು ವಾಯುದೇವತೆಯೆಂದು ಪರಿಗಣಿಸಿ, ಇತರ ವೇದದ ದೇವತೆಗಳೊಡನೆ ಅದನ್ನು ಸ್ತುತಿಸಿದೆ. “ಮಧ್ಯಮಸ್ಥಾನ ದೇವತೆಗಳಲ್ಲಿ ವರ್ಷಕರ್ಮದಲ್ಲಿ ಪ್ರಥಮಾಧಿಕಾರವುಳ್ಳ ವಾಯುವಿಗೆ ಮೊದಲಸ್ಥಾನ”

[1]ವೆಂದು ಯಾಸ್ಕರು ಹೇಳುತ್ತಾರೆ. ಯಾಸ್ಕರು ಹೇಳಿದಂತೆ ವಾಯುದೇವತೆ ಋಗ್ವೇದದ ದೇವತೆಗಳಲ್ಲೆಲ್ಲ ಮುಖ್ಯನಾದವನು. ಏಕೆಂದರೆ “ವಾಯು ನಿತ್ಯದರ್ಶನ. ಎಲ್ಲ ಜೀವಿಗಳೂ ಜೀವಿಸಿ ಬಾಳಬೇಕಾದರೆ ವಾಯುದೇವನ ಕೃಪೆಯಿಲ್ಲದೆ ಸಾಧ್ಯವಿಲ್ಲ”.[2] ಆದುದರಿಂದ ಈ ಪ್ರಪಂಚ ಸೃಷ್ಟಿಗೆ ಕಾರಣವಾದ ’ಪಂಚಮಹಾಭೂತ’ಗಳಲ್ಲಿ ವಾಯುವೂ ಒಂದಾಗಿದೆ.

ವಾಯುವಿನಲ್ಲಿ ಹತ್ತು ವಿಧಗಳುಂಟು. ಇವುಗಳನ್ನು ’ದಶವಾಯುಗಳು’ ಎಂದು ಕರೆಯುತ್ತಾರೆ. “ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನಗಳೆಂಬುವು ಇದರ ಪ್ರಮುಖ ಪಂಚಪ್ರಭೇದಗಳದರೆ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ – ಇವು ಉಪಪ್ರಭೇದಗಳಾಗಿವೆ. ಮೊದಲಿನ ಐದು ಪ್ರಾಣವಾಯುಗಳಿಗಿಂತಲೂ ಮಿಕ್ಕ ಐದು ಉಪವಾಯುಗಳೆಂತಲೂ ರೂಢಿ. ಪ್ರಧಾನವಾಧ ಪ್ರಾಣವೆಂಬ ವಾಯು ಹೃದಯದಲ್ಲಿಯೂ, ಅಪಾನವೆಂಬ ವಾಯು ಗುದಸ್ಥಾನದಲ್ಲಿಯೂ, ಸಮಾನವೆಂಬ ವಾಯು ನಾಭಿಯಲ್ಲಿಯೂ, ಉದಾನವಾಯು ಕಂಠದಲ್ಲಿಯೂ, ವ್ಯಾನವಾಯು ಶರೀರದ ಸಕಲ ಭಾಗಗಳಲ್ಲಿಯೂ ವ್ಯಾಪಿಸಿರುವುದು. ನಾಗವೆಂಬ ಉಪವಾಯು ಶರೀರದ ಸಕಲ ಭಾಗಗಳಲ್ಲಿಯೂ ವ್ಯಾಪಿಸಿರುವುದು. ನಾಗವೆಂಬ ಉಪವಾಯುವಾಗಿಂದ್ರಿಯದಲ್ಲಿರುತ್ತದೆ. ಕೂರ್ಮವೆಂಬ ಉಪವಾಯು ಉನ್ಮೀಲನ ಶಕ್ತಿಯನ್ನುಂಟು ಮಾಡುತ್ತದೆ.  ಕೃಕರವೆಂಬ ಉಪವಾಯು ಹಸಿವನ್ನುಂಟು ಮಾಡುತ್ತವೆ. ದೇವದತ್ತವೆಂಬ ಉಪವಾಯುವಿನಿಂದ ಆಕಳಿಕೆ, ಬಿಕ್ಕಳಿಕೆಗಳು ಉಂಟಾಗುತ್ತವೆ. ಧನಂಜಯವೆಂಬ ಉಪವಾಯು ದೇಹವನ್ನೆಲ್ಲ ಆವರಿಸಿಕೊಂಡು, ಜೀವ ದೇಹವನ್ನು  ಬಿಟ್ಟಮೇಲೆ ಕೂಡ ಸ್ವಲ್ಪ ಹೊತ್ತಿನವರೆಗೆ ಇರುತ್ತದೆ.’[3]

ಪಂಚಮಹಾಭೂತಗಳಲ್ಲಿ ಒಂದಾದ ವಾಯು ಮುಖ್ಯದೇವತೆ ಮಾತ್ರವಲ್ಲದೆ. “ದೇವತೆಗಳಲ್ಲೆಲ್ಲ ಅತ್ಯಂತ ವೇಗಶಾಲಿ ಮತ್ತು ರೋಗಗಳನ್ನು ಉಪಶಮನಮಾಡಿ. ದೀರ್ಘಾಯುಷ್ಯವನ್ನು ಕರುಣಿಸುವ ಸಮರ್ಥ್ಯವುಳ್ಳದ್ದು”[4] ಎಂದು ಋಗ್ವೇದದಲ್ಲಿಯೇ ಉಕ್ತವಾಗಿದೆ. ಅಲ್ಲದೆ, “ವಾಯುದೇವನಿಗೆ ಹಲವಾರು ಅಶ್ವಗಳಿಂದ ಹೂಡಿದ ರಥವಿದೆ. ಅದರಲ್ಲಿ ವಾಯುವೇದ ಕುಳಿತುಕೊಂಡ ಗುಡುಗಿನಂತೆ ಶಬ್ದ ಮಾಡುತ್ತ ಗಿರಿಗಹ್ವರಾದಿಗಳಲ್ಲಿ ವಿಧವಿಧವಾಗಿ ಪ್ರತಿಧ್ವನಿಗೈಯುತ್ತಾ ಬರುತ್ತಾನೆ. ಈತನ ರಥದ ರಭಸಕ್ಕೆ ಸಿಕ್ಕಿದ ಸ್ಥಾವರ- ಜಂಗಮಾದಿಗಳೆಲ್ಲ ನುಚ್ಚುನೂರಾಗುವುವು. ಆಕಾಶವನ್ನು ಮುಟ್ಟಿ ಇವನು ದಿಗಂತವನ್ನು ಅರುಣವರ್ಣಯುತವನ್ನಾಗಿ ಮಾಡಿ ಬರುವನು, ಭೂಮಿಯ ಧೂಳನ್ನು ಎಬ್ಬಿಸುತ್ತ ಸಾಗಿಬರುವನು”[5] – ಇತ್ಯಾದಿಯಾದ ವಾಯುದೇವನ ಮತ್ತು ಆತನ ರಥದ ವರ್ಣನೆ ಋಗ್ವೇದದಲ್ಲಿ ಕಂಡುಬರುತ್ತದೆ.

ಮೇದೋಕ್ತ ವಿಷಯ ಅದೇನೆ ಇದ್ದರೂ ವಾಯು ಭೂತ-ಜಾತಗಳೆಲ್ಲದರಲ್ಲಿಯೂ ಪ್ರಾಣ ರೂಪದಿದ ಇದೆ. ಇದಕ್ಕೆ ನಾದಗುಣ ವಿಶಿಷ್ಟವಾಗಿದ್ದರೂ ರೂಪವಿಲ್ಲ, ಬಣ್ಣವಿಲ್ಲ; ಸ್ವಇಚ್ಛೆಯಿಂದ ಎಲ್ಲ ಕಡೆಗೂ ವ್ಯಾಪಿಸಿ, ಬರ‍್ರೆಂದೊ, ಸುಯ್ಯೆಂದೋ ಬೀಸುತ್ತದೆ. ಹೀಗಿರುವ ವಾಯು ವೇದಕಾಲದ ಸಮಾಜಕ್ಕೆ ಪ್ರಕೃತಿಯ ಇತರ ಅಂಶಗಳಿಂದ ಸೂರ‍್ಯ ಚಂದ್ರ, ಮೋಡ, ಮಳೆ, ನಕ್ಷತ್ರಗಳಂತೆ ದೇವತೆಯಾಗಿ ಪರಿಣಮಿಸಿದ್ದು ಗಮನಾರ್ಹ. ಈ ಪ್ರಕೃತಿ ದೇವತೆಗಳನ್ನು ಆ ಕಾಲದ ಸಮಾಜ, ಈಗಿನಂತೆ ಮನೆ-ಮಠಗಳಲ್ಲಿ ಪೂಜಿಸುತ್ತಿರಲಿಲ್ಲ. ಪುರೋಹಿತರು ಅಥವಾ ಮೇಲುವರ್ಗದ ಜನ ಯಜ್ಞಯಾಗಾದಿಗಳ ಮೂಲಕ ಮಂತ್ರಗಳಲ್ಲಿ ಹೇಳಿದಂತೆ ಇಂದ್ರ, ವರುಣ, ಅಗ್ನಿಗಳಂತಹ ದೇವತೆಗಳನ್ನು ಸಾಕಾರದಲ್ಲಿ ಪೂಜಿಸಿದರೆ; ಸಾಮಾನ್ಯ ಜನ ವೇದ ಮಂತ್ರಗಳಲ್ಲಿ ಹೇಳಿದ, ಪ್ರಕೃತಿ ದೇವತೆಗಳನ್ನು ಕಲ್ಪಿಸಿಕೊಂಡು, ನಿರಾಕಾರದಲ್ಲಿಯೇ ಪೂಜಿಸಿದರು. ಏಕೆಂದರೆ ಸಾಮಾನ್ಯರಿಗೆ ಯಜ್ಞಯಾಗಾದಿಗಳನ್ನು ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಗಾಳಿಯು ನಿರಾಕಾರವಾದುದರಿಂದ ಅದನ್ನು ನಿರಾಕಾರದಲ್ಲಿಯೇ ಪೂಜಿಸುತ್ತಿದ್ದರು ಸಾಮಾನ್ಯರು. ವೇದಕಾಲದಲ್ಲಿ ಸಾಕಾರಪೂಜೆಗಿಂತಲೂ ನಿರಾಕಾರ ಪೂಜೆಯೇ ಹೆಚ್ಚಾಗಿದ್ದಂತೆ ತೋರುತ್ತದೆ. ಏಕೆಂದರೆ ಯಾವುದೇ ಸಮಾಜದಲ್ಲಿ ಮೇಲುವರ್ಗದ ಶ್ರೀಮಂತರಿಗಿಂತಲೂ, ಕೆಳವರ್ಗದ ಸಾಮಾನ್ಯರೇ ಹೆಚ್ಚಿಗಿರುತ್ತಾರೆ; ಸಹಜವಾಗಿ ಅವರೆಲ್ಲರ ಪೂಜಾವಿಧಾನ ನಿರಾಕಾರವೇ ಆಗಿರುತ್ತದೆ. ಮುಂದೆ ಬಂದಂಥ ಸ್ಮತಿ, ಪುರಾಣ, ಸೂತ್ರಗ್ರಂಥ, ಧರ್ಮಶಾಸ್ತ್ರಗಳಲ್ಲಿ ಯಥೇಷ್ಟವಾದ ಮೂರ್ತಿಪೂಜಾಕ್ರಮ, ವಿಧಿವಿಧಾನಗಳು ಹುಟ್ಟಿಕೊಂಡಿದ್ದು ಗಮನಾರ್ಹ.

ವಾಯುವನ್ನು ದೇವತೆಯೆಂದು ವೇದ ಒಪ್ಪಿದ್ದಲ್ಲದೆ, ಪುರಾಣವೂ ಒಪ್ಪಿಕೊಂಡಿದೆ. ಅಂತೆಯೇ ಇದನ್ನು ಕುರಿತು ’ಶ್ರೀಮದ್ವಾಯ ಪುರಾಣಂ’ ಎಂಬ ಉಪಲಬ್ಧವಿದ್ದ ಸುಮಾರು ೧೨೦೦೦ ಶ್ಲೋಕಗಳುಳ್ಳ ಪುರಾಣವೂ ಸಹಿತ ಹುಟ್ಟಿಕೊಂಡಿದೆ.

ಗಾಳಿಗೆ ಹದಿನೇಳು ಹೆಸರುಗಳಿವೆ ಎಂದು ’ಧನಂಜಯ ಶಬ್ದಕೋಶ’ ಹೇಳುತ್ತದೆ. ಅವು ಯಾವುವೆಂದರೆ – ಪವನ, ಪವಮಾನ, ವಾಯು, ವಾತ, ಅನಿಲ, ಮರುತ್, ಸಮೀರಣ, ಗಂಧವಾಹ, ಶ್ವಾಸನ್, ಸದಾಗಿತ, ನಛಿಸ್ವತ್, ಮಾತರಿಶ್ವನ್, ವೇರುಣ್ಯ, ಜವನ, ಚಲ ಮತ್ತು ಪ್ರಭಂಜನ. ಈ ವಾಯುವಿನ ಹೆಸರುಗಳ ಕೊನೆಯಲ್ಲಿ ’ಪುತ್ರ’ ವಾಚಕ ಶಬ್ದವನ್ನು ಸೇರಿಸುವುದರಿಂದ ಭೀಮ ಮತ್ತು ’ಆಂಜನೇ’ಯರ ಹೆಸರಾಗುತ್ತವೆ. ಉದಾಹರಣೆಗೆ – ಪವನಪುತ್ರ, ವಾಯುಪುತ್ರ ಇತ್ಯಾದಿ”.[6] ಆಂಜನೆಯೆಂಬವಳಲ್ಲಿ ಈಶ್ವರಾಂಶದಿಂದ ವಾಯುವಿನ ಮೂಲಕ ’ಆಂಜನೇಯ’ ಮತ್ತು ಕುಂತಿಭೋಜನ ಮಗಳಾದ ಪೃಥೆಯಲ್ಲಿ ವಾಯುದೇವನ ಅನುಗ್ರಹದಿಂದ ’ಭೀಮಸೇನ’ ಜನಿಸಿದನೆಂಬ ಪುರಾಣೋಕ್ತ ವಿಷಯ ನಮ್ಮ ಹಳ್ಳಿಗರಿಗೂ ಗೊತ್ತು. ಅದುದರಿಂದಲೇ ಅವರು ಈ ವಾಯುಪುತ್ರದ್ವಯರನ್ನು ಪೂಜಿಸುತ್ತಾರೆ. ಮಧ್ವಾಚಾರ‍್ಯರೂ ಕೂಡ ವಾಯುದೇವನ ಅವತಾರವೆಂದು ಮಾಧ್ವರಲ್ಲಿ ನಂಬಿಕೆಯಿದೆ.

ಹೀಗೆ ವೇದ-ಪುರಾಣೋಕ್ತ ಪುರುಷ ದೇವತೆಯಾದ ಗಾಳಿಯನ್ನು ನಮ್ಮ ಜನಪದರು ವೇದಕಾಲದ ಸಾಮಾನ್ಯ ಜನ ಪೂಜಿಸುತ್ತಿದ್ದಂತೆ, ಮೊದಮೊದಲಿಗೆ ನಿರಾಕಾರದಲ್ಲಿಯೇ ಪೂಜಿಸತೊಡಗಿದರು. ಜೋಳದ ಸುಂಕದ ರಾಶಿ ಅಥವಾ ಭತ್ತದ ಹೊಟ್ಟುಳ್ಳ ರಾಶಿಯನ್ನು ಪೂಜಿಸಿ, ಅದನ್ನು ತೂರಲು, ಗಾಳಿದೇವನಿಗೆ, ಆತ ಬೀಸುವ ಕಡೆಗೆ ಎಡೆಹಿಡಿಯುತ್ತ ಬಂದಿದ್ದಾರೆ ನಮ್ಮ ಹಳ್ಳಿಗರು. ಹೀಗೆ ತೂರುವಾಗ ಗಾಳಿಗೆ ಎಡೆಹಿಡಿಯುವ ಪದ್ಧತಿ ಬೆಳಗಾವಿ-ವಿಜಾಪುರ ಜಿಲ್ಲೆಗಳ ರೈತರಲ್ಲಿ ಇಂದಿಗೂ ಇದೆ. ತೂರುವಾಗ ಗಾಳಿ ಬೀಸದೆ ಇದ್ದರೆ ’ಹುಲಿಗೋ ಹುಲಿಗೋ ಎಂದೂ ಆಥವಾ ಹೋಗಲಿ’ ಸಮಾಲಿಗೋ (ಹಾಸನ ಕಡೆಗೆ) ಎಂದೊ ಹೇಳಿದರೆ, ಗಾಳಿ ಬರುತ್ತದೆನ್ನುವ ನಂಬಿಕೆ ರೈತರಲ್ಲಿದೆ. ಗಾಳಿ ದೇವರೆಂಬ ಭಾವನೆ ರೈತನಿಗೆ ಇರುವುದರಿಂದ, ಅದರ ಬಗೆಗೆ ಇಂಥ ಹಲವಾರು ನಂಬಿಕೆಗಳನ್ನು ಇರಿಸಿಕೊಂಡಿದ್ದಾನೆ. ಗಾಳಿಯನು ಎಂದಿನಿಂದಲೂ ದೇವತೆಯೆಂದೇ ಕಂಡಿದೆ ಜನಪದ ಸಮಾಜ. “ಗಾಳಿ ದೇವರಗೂಡ ಘೂಳಿದೇವರ ಬಂದಾ”[7] ಎಂಬ ಜನಪದ ತ್ರಿಪದಿಯ ಸಾಲಿನಲ್ಲಿ ಗಾಳಿಯನ್ನು ದೇವರೆಂದೇ ಸಂಭೋಧಿಸಿದ್ದು ವಿದಿತವಾಗುತ್ತದೆ. “ಗಾಳಿ ಪೂಜೆ ಎಂದರೆ ಶಕ್ತಿ ದೇವತೆಯ ಪೂಜೆ”[8] ಎಂದು ಕನ್ನಡ ನಿಘಂಟಿನಲ್ಲಿ ಹೇಳಲಾಗಿದೆ. ಹಾಗಾಗಿ ದುರ್ಗಿ, ಕಾಳಿ, ಮಾರಿಗಳಂತೆ, ಗಾಳಿಯೂ ಒಂದು ಶಕ್ತಿದೇವತೆಯೆಂದು ಹೇಳಬಹುದು. ಜನಪದರಲ್ಲಿ ಕೆಲವರು ಗಾಳಿದೇವತೆಯನ್ನು, ಪುರುಷದೇವತೆಯಾಗಿಯೂ, ಕೆಲವರು ಸ್ತ್ರೀ ದೇವತೆಯಾಗಿಯೂ ಕಂಡು ಪೂಜಿಸಿದ್ದು ತಿಳಿದುಬರುತ್ತದೆ.

ಇಲ್ಲಿ ಶಕ್ತಿದೇವತೆಯಾದ ’ಗಾಳಿಯನ್ನು ಗಾಳಿಯಮ್ಮ, ಗಾಳೆವ್ವ, ಗಾಳಿಮರೆವ್ವ, ಗಾಳಿದುರಗವ್ವ ಮೊದಲಾದ ಬೇರೆ ಬೇರೆ ಹೆಸರುಗಳಿಂದ ಜನಪದರು ಮೂರ್ತಿರೂಪದಲ್ಲಿಯೂ, ಅಮೂರ್ತರೂಪದಲ್ಲಿಯೂ ಪೂಜಿಸಿದ್ದಾರೆ, ಪೂಜಿಸುತ್ತಿದ್ದಾರೆ. ’ಸುನಕುಪ್ಪಿ’ ಎಂಬ ಗ್ರಾಮದಲ್ಲಿ (ಬೈಲಹೊಂಗಲ ತಾಲೂಕು) ಗಾಳಿಯಮ್ಮನ ಪೂಜೆ ಸುಮಾರು ೫೦ ವರುಷಗಲಿಮದಲೇ, ಪ್ರತಿವರ್ಷ ನಡೆಯುತ್ತಾ ಬಂದಿದೆ. ಇಲ್ಲಿ ಗಾಳೆಮ್ಮನ ಯಾವ ಮೂರ‍್ತಿಯೂ ಇಲ್ಲ. ಅದರೆ ಗಾಳಿ ದೇವರಗುಡ್ಡ ಮಾತ್ರ ಇದೆ. ಗುಡ್ಡದಲ್ಲಿರುವ ಆ ಗಾಳಿದೇವತೆಯನ್ನು, ಅಲ್ಲಿಯ ಜನರು ನಿರಾಕಾರದಲ್ಲಿಯೇ ಪೂಜಿಸುತ್ತಾರೆ. ಈ ದೇವತೆಯ ದೊಡ್ಡ ಜಾತ್ರೆಯೂ ನೆರೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಉರುಳುವಿಕೆ (ಉರುಳುಸೇವೆ)ಯೂ ನಡೆಯುತ್ತದೆ. ಒಂದು ಆಶ್ಚರ್ಯವೆಂದರೆ ಗಾಳಿದೇವರಗುಡ್ಡದ ಕೆಳಗಿನಿಂದ ಉರುಳಿದರೆ ಗುಡ್ಡದ ಮೇಲಕ್ಕೆ ತನ್ನಿಂದ ತಾನೆ ಉರುಳುತ್ತ ಹೋಗುತ್ತಾರೆ. ಇದು ಗಾಳಿದೇವತೆಯ ಪ್ರಭಾವವೆಂದು ಕಂಡು ಕೇಳಿದ ಜನರು ಹೇಳುತ್ತಾರೆ.೧ ಗುಡ್ಡದ ಕೆಳದಿಂದ ಮೇಲಕ್ಕೆ ಯಾವ ಪ್ರೇರಣೆಯೂ ಇಲ್ಲದೆ ಉರುಳುವುದು ಅವಾಸ್ತವ ಸಂಗತಿಯೆನಿಸಿದರೂ ಗಾಳಿಯಮ್ಮನನ್ನು ಪೂಜಿಸುವುದು ಮಾತ್ರ ವಾಸ್ತವ ಸಂಗತಿಯೇ ಆಗಿದೆ.

ಗಾಳಿ ದೇವರೆನ್ನುವ ಭಾವನೆ ಇತರ ಕಡೆಗಳಲ್ಲಿದ್ದಂತೆ. ಧಾರವಾಡ ಜಿಲ್ಲೆಯಲ್ಲಿಯೂ ಇದೆ. ಈ ಜಿಲ್ಲೆಯ ’ಕುಂದಗೋಳ’ದಲ್ಲಿ ’ಗಾಳಿಮರೆವ್ವ’ ಎಂಬ ಹೆಸರಿನಲ್ಲಿ ಗಾಳಿದೇವರು ಪೂಜೆಗೊಳ್ಳುತ್ತ ಬಂದಿದೆ. ಇದು ದಿಕ್ಕಿಲ್ಲದ ದೇವತೆಯಾಗಿ ಊರ ಹೊರಗೆ ಬಯಲಿನಲ್ಲಿಯೇ ಇದೆ. ಹೆಣ್ಣು ದೇವತೆಯ ಆಕಾರ ಇದಕ್ಕಿದೆ. ಇದು ಸುಮಾರು ೬೦೭೦ ವರ್ಷಗಳ ಹಿಂದಿನ ದೇವತೆ ಇರಬೇಕೆಂದು ಅಲ್ಲಿಯ ಜನ ಊಹಿಸಿ ಹೇಳುತ್ತಾರೆ. ಸಣ್ಣ ಮಕ್ಕಳಿಗೆ ರೋಗ-ರುಜಿನಗಳು ತಗುಲಬಾರದೆನ್ನುವ ಭಾವನೆಯಿಂದ ಈ ಗಾಳಿ ಮರೆವ್ವನನ್ನು ಪೂಜಿಸುತ್ತಾರೆ. ನೀರು, ಸುಣ್ಣ, ಎಣ್ಣೆ, ಕುಂಕುಮಾದಿಗಳಿಂದ ಈ ದೇವತೆಯನ್ನು ಎಲ್ಲ ಜಾತಿಯವರೂ ಪೂಜಿಸುತ್ತಾರೆ. ಗಾಳಿಮರೆವ್ವನ ಪ್ರಭಾವ (ಕಾಟ) ಊರಲ್ಲಿ ಅತಿಯಾದುದರಿಂದ, ನಿತ್ಯ ಪೂಜಾರಿಯೊಬ್ಬ ಇಂದು ಪೂಜಿಸುತ್ತಿದ್ದಾನೆ. ಇ ದೇವರು ಜನಗಳ ಮೈಯಲ್ಲಿ ಹೊಕ್ಕು ಒಡನುಡಿಸುತ್ತದೆಂದೂ ಕುಂದುಗೋಳದ ಜನರು ಹೇಳುತ್ತಾರೆ.

. ಸಂಗತಿಗಳನ್ನು ನನಗೆ ದೇವಲಾಪುರದ ಗೌಡ್ರು ತಿಳಿಸಿದ್ದಾರೆ.

ಗಾಳೆವ್ವನ ಗುಡಿಗಳೂ ಇದ್ದುದು ತಿಳಿದುಬರುತ್ತದೆ. ಬಯಲಲ್ಲಿದ್ದ ಈ ದೇವತೆ ಕ್ರಮೇಣ ಗುಡಿಯನ್ನು ಏರಿದ್ದು, ತನ್ನ ಪ್ರಭಾವದಿಂದಲೇ ಇರಬೇಕು. ಗಾಳೆವ್ವನ ಗುಡಿಯೊಂದು ಲಕ್ಷ್ಮೇಶ್ವರದ ಹರಿಜನಕೇರಿಯಲ್ಲಿದೆ. ಆ ಗುಡಿಯಲ್ಲಿ ಕಾಡುಕಲ್ಲನ್ನೇ ಗಾಳೆವ್ವನನ್ನಾಗಿ ಮಾಡಿ ಪೂಜಿಸುತ್ತಾರೆ. ಬೈಲಹೊಂಗಲದಲ್ಲಿಯೂ ಗಾಳಿದುರಗವ್ವನ ಗುಡಿಯಿದೆ. ಅಲ್ಲಿದೆ ಹುಬ್ಬಳ್ಳಿಯ ’ತಿರುಕಾರಾಮ’ನ ಕೆರೆಯಲ್ಲಿ (ಬಸ್‌ಸ್ಟ್ಯಾಂಡ ಬಳಿಯೂ) ’ಗಾಳಿದುರಗವ್ವ’ನ ಗುಡಿಯಿದೆ. ಪ್ರತಿವರುಷ ’ವಾರಾ ಬಿಟ್ಟಾಗ ಅದರ ಕೊನೆಯ ವಾರ ಉಡಿ ತುಂಬುವ ಮತ್ತು ದೊಡ್ಡ ಹಬ್ಬಗಳಲ್ಲಿ ಪಲ್ಲಕ್ಕಿ ಹೊರುವ – ಮೊದಲಾದ ಉತ್ಸವಗಳು ನಡೆಯುತ್ತವೆ. ಧಾರವಾಡದ ವಿದ್ಯಾರಣ್ಯ ಹೈಸ್ಕೂಲ ಹತ್ತಿರ ಅರಳೀಗಿಡದ ಬುಡದಲ್ಲಿ ಗಾಳೆವ್ವನಕಟ್ಟಿ ಇದೆ. ಇದು ಇಂದಿಗೂ ಪೂಜೆಗೊಳ್ಳುತ್ತಿದೆ. ಗುಡಿಗಳಲ್ಲಿರುವ ಗಾಳಿದೇವತೆಯನ್ನು ಹೆಚ್ಚಾಗಿ ನಿಮ್ನ ವರ್ಗದ ಜನ, ಅದರಲ್ಲೂ ಹರಿಜನರೇ ಹೆಚ್ಚಾಗಿ ಪೂಜಿಸುತ್ತಾರೆ.

ಹೀಗೆ, ಗಾಳಿ ದೇವರೆನ್ನುವ ಭಾವನೆ ನಮ್ಮ ನಾಡಿನ ನಾನಾಕಡೆಗಳಲ್ಲಿದ್ದುದು ಕಂಡುಬರುತ್ತದೆ. ಆದರೆ, ಇದೇ  ನಾಡಿನ ಜನಪದ ಜನ, ಗಾಳಿಯನ್ನು ದೆವ್ವ-ಪಿಶಾಚಿ- ಎಂದು ಕರೆದುದು ಕೂಡ ಗಮನಾರ್ಹವಾದುದು. ಆದುದರಿಂದ ಗಾಳಿ ಎಂಬ ಶಬ್ದಕ್ಕೆ ದೇವರು ಮತ್ತು ದೆವ್ವ ಎನ್ನುವ ಅರ್ಥಗಳು ಪ್ರಾಪ್ತವಾಗಿವೆ. -’ಗಾಳಿಬಡಕೊ’, ’ಗಾಳಿಪಾಲಾಗು” ’ಗಾಳಿಯಾಗು’ ಮೊದಲಾದ ಬೈಗುಳಗಳಲ್ಲಿ ಮತ್ತು ’ಗಾಳಿಹಿಡಿದವನ್ಹಂಗ’ ’ಗಾಳಿಹೂಕ್ಕವನ್ಹಾಂಗೆ’, ’ಗಾಳಿಚೇಷ್ಟೆ’ ಇತ್ಯಾದಿ ನುಡಿಗಳಲ್ಲಿ ಗಾಳಿಗೆ ದೆವ್ವ – ಪಿಶಾಚಿ ಎನ್ನುವ ದುಷ್ಟಶಕ್ತಿಯ ಅರ್ಥವೇ ಇದೆ. ಕನ್ನಡ ನಿಘಂಟುವಿನಲ್ಲೂ ಕೂಡ “ಗಾಳಿಪೂಜೆ ಎಂದರೆ ದೆವ್ವಗಳಿಗೆ ಪಜೆ ಮಾಡುವುದು” ಎಂದಿದೆ. ಹಾಗೂ ಮುರು ಕಾಸುಕೊಟ್ಟು ಮುದುಕಿ ತಂದು ಆರು ಕಾಸು ಕೊಟ್ಟು ಗಾಳಿಬುಡಸ್ತಂಗೆ’೧ – ಎಂಬ ಗಾದೆಯಲ್ಲಿಯೂ ’ಗಾಳಿಗೆ’ ದೆವ್ವ ಎನ್ನುವ ಅರ್ಥವೇ ಇದ್ದುದು ತಿಳಿದುಬರುತ್ತದೆ.

ಅಕಾಲ ಮರಣಕ್ಕೆ ತುತ್ತಾದ ಅತೃಪ್ತಜೀವಿಗಳು ಭೂತ-ಪ್ರೇತ. ದೆವ್ವ – ಪಿಶಾಚಿಗಳಗಿ ಅಲೆಯುತ್ತ ತಮಗೆ ಪ್ರಿಯರಾಗಿದ್ದವರ ಮೈಯಲ್ಲಿ ಬಂದು, ಅವರ ಮೂಲಕ ತಮ್ಮ ಅತೃಪ್ತಬಯಕೆಗಳನ್ನು ಈಡೇರಿಸಿಕೊಳ್ಳುತ್ತ ತೃಪ್ತಿಪಡುತ್ತವೆ ಎಂಬುದು ಜನಪದರಲ್ಲಿರುವ ಸಾಮಾನ್ಯ ನಂಬಿಕೆ. ನಡುವಯಸ್ಸಿನಲ್ಲಿ ಅಸುನೀಗಿದ ವ್ಯಕ್ತಿ, ತಾನು ಬದುಕಿದ್ದಾಗ ಮೋಹಿಸಿದ ಹುಡಿಗಿಯ ಮೈಯಲ್ಲಿ ಗಾಳಿಯಾಗಿ ಹೊಕ್ಕು ಅವಳನ್ನು ನಾನಾವಿಧವಾಗಿ ಪೀಡಿಸುತ್ತಾನೆಂದು ಕಂಡು ಕೇಳಿದ ಹಳ್ಳಿಗರು ಹೇಳುತ್ತಾರೆ. ಯಾವನೋ ಒಬ್ಬ ತನ್ನ ಶತೃವಿನಿಂದ, ಯಾವುದೋ ಕಾರಣಕ್ಕಾಗಿ ಕೊಲೆಗೈಯಲ್ಪಟ್ಟಾಗ, ಆ ಸೇಡಿಗೋ‌ಸ್ಕರ ಗಾಳಿಯಾಗಿ ಆತನನ್ನು ಬೆನ್ನ ಹತ್ತಿಕಾಡುತ್ತಾನೆನ್ನುವ ನಂಬಿಕೆಯೂ ಜನಪದರಲ್ಲಿದೆ. ತುಪ್ಪದಲ್ಲಿ ನೊಣಬಿದ್ದರೂ ಚೀಪಿ ಒಗೆಯುವಂಥ ವ್ಯಕ್ತಿ ಏನಾದರೂ ಅಕಾಲ

. ಕನ್ನಡ ನಿಘಂಟು: ಸಂ.; ಪು. ೨೪೯೨.

ಮರಣಕ್ಕೆ ಈಡಾದರೆ, ಆತನ ಜೀವ ಅಥವಾ ಆತ್ಮ ಲೌಕಿಕವಸ್ತುಗಳ ಮೇಲಿನ ಆಸೆ ಆಮಿಷಗಳಿಂದ ಪಿಶಾಚಿಯಾಗಿ ಅಲೆಯುತ್ತದೆ ಎನ್ನುವುದು ಕೂಡ ಜನಪದರಲ್ಲಿರುವ ದೃಢವಾದ ನಂಬುಗೆ. ಈ ನಂಬಿಕೆಗಳಲ್ಲಿ ವಿಜ್ಞಾನಯುಗದಲ್ಲಿ ಬದುಕುತ್ತಿರುವ ನಮಗೆ ವಿಶ್ವಾಸ ಇಲ್ಲದೇ ಇದ್ದರೂ ಅವುಗಳಲ್ಲಿ ಸತ್ಯ ತೋರದೇ ಇದ್ದರೂ, ಅವು ಶ್ರೀಸಾಮಾನ್ಯರ ಜನಮನದಲ್ಲಿ ಮಾತ್ರ ವಂಶಪಾರಂಪರ‍್ಯವಾಗಿ ನಡೆದುಕೊಂಡು ಬಂದುದು ಮಾತ್ರ ಸುಳ್ಳಲ್ಲ.

ಗಾಳಿ ಹಿಡಿದುಕೊಂಡವರ ಮಾತು-ಕತೆ-ಹಾವ-ಭಾವ, ಅದನ್ನು ಬಿಡಿಸಲು ಪ್ರಯತ್ನಿಸುವ ಮಂತ್ರಗಾರ; ಆತನ ಮಂತ್ರ-ತಂತ್ರ-ಯಂತ್ರ-ಮೊದಲಾದವುಗಳು ಪ್ರಪಂಚದ ಬಹುಭಾಗಗಳಲ್ಲಿ ಇಂದಿಗೂ ಕಂಡುಬರುತ್ತಿರುವುದು ತುಂಬ ವಿಚಿತ್ರವೆನಿಸಿದರೂ ವಾಸ್ತವ ಸಂಗತಿಯೇ ಆಗಿದೆ. ಹೆಚ್ಚಾಗಿ ಹೆಣ್ಣು ಮಕ್ಕಳಿಗೆ, ಬಡಿದುಕೊಳ್ಳುವ, ಈ ಗಾಳಿಯನ್ನು ತೊಲಗಿಸಲು, ಮಂತ್ರಗಾರ ಕೈಕೊಳ್ಳುವ ಕ್ರಮ ತುಂಬ ಭಯಂಕರವಾಗಿರುತ್ತದೆ. ಮಂತ್ರಗಾರ ಗಾಳಿಹೊಕ್ಕವಳ ಕೂದಲನ್ನು ಕೈಯಿಂದ ಜಗ್ಗಿ ಹಿಡಿದು, ಬಾಯಲ್ಲಿ ಪಿಟಿಪಿಟಿ ಎಂದು ಮಂತ್ರ ಹೇಳುತ್ತ ಅವಳ ಮೈಮೇಲೆ ವಿಭೂತಿಪುಡಿ, ಅಥವಾ ಬೂದಿಯನ್ನು ಉಫ್ ಎಂದು ಊದುತ್ತಾನೆ. ನಿಂಬೆಹಣ್ಣನ್ನು ಮಂತ್ರಿಸಿ, ಅವಲ ಮೈಮೇಲೆ ನಿವಾಳಿಸಿ ಬಗೆಯುತ್ತಾನೆ. ಇಷ್ಟಕ್ಕೆ ಅವಳ ಮೈಯಿಂದ ದೆವ್ವ ಹೊರಗೆ ಬರದೇ ಇದ್ದಾಗ, ಬೇವಿನ ಸೊಪ್ಪಿನಿಂದ ಮುಖಕ್ಕೆ ಚೆನ್ನಾಗಿ ಹೊಡೆಯುತ್ತಾನೆ. ಇದಕ್ಕೂ ಬಗ್ಗದೇ ಇರುವ ಗಾಳಿಯನ್ನು ನೋಡಿ, ಮಂತ್ರಗಾರ ಸಿಟ್ಟಿನಿಂದ ಕಣ್ಣುಗಳನ್ನು  ಕೆಂಪಗೆ, ಮಾಡಿ, ಚಪ್ಪಲುಗಳಿಂದ, ಅವಳ ದೇಹದ ಸಿಕ್ಕ ಸಿಕ್ಕ ಭಾಗಗಳಲ್ಲಿ ಚೆನ್ನಾಗಿ ಹೊಡೆಯುತ್ತಾ ನೀನು ಯಾರು? ಇಲ್ಲಿಗೇಕೆ ಬಂದೆ? ನಿನ್ನ ಆಸೆ ಏನು? – ಮೊದಲಾದ ಪ್ರಶ್ನೆಗಳನ್ನು ಹಾಕುತ್ತಾನೆ. ಮಂತ್ರಗಾರನ ಬಡಿತಕ್ಕೆ ಮತ್ತು ಆತನು ಹಾಕುವ ಮಂತ್ರಗಳಿಗೆ ಮಣಿದ ’ಗಾಳಿ’ ತನ್ನ ನಿಜಸಂಗತಿಯನ್ನು ಆತನ ಮುಂದೆ ಅರುಹುತ್ತದೆ. ’ಇನ್ನು ಮೇಲೆ ನೀರು ಬರ-ಕೂಡದೆ’ಂದು ಗಾಳಿಗೆ ಹೇಳಿದ ಮಂತ್ರಗಾರ, ಯಂತ್ರವೊಂದನ್ನು ಮಾಡಿ ಗಾಳಿಬಂದವಳ ಕೊರಳಲ್ಲಿ ಕಟ್ಟುತ್ತಾನೆ. ಮುಂದೆಂದೂ ಅವಳಿಗೆ ಗಾಳಿ-ಪಿಶಾಚಿಗಳು ಅಂಟಿಕೊಳ್ಳುವುದಿಲ್ಲವೆಂದು ನಮ್ಮ ಜನಪದರು ಹೇಳುತ್ತಲೇ ಬಂದಿದ್ದಾರೆ. ಇಂಥ ವಿಚಿತ್ರ ಸಂಗತಿಗಳು ನಂಬಲಸಾಧ್ಯವಾದರೂ ಒಂದೊಂದು ಸಲ ಅವು ಸತ್ಯಸಂಗತಿಗಳಾಗಿದ್ದುದು ಹಳ್ಳಿಗರಿಂದಲೇ ತಿಳಿದುಬರುತ್ತದೆ. “ಗಾಳಿ ಹಿಡಿದ ಹೆಣ್ಣೊಬ್ಬಳನ್ನು ಒಮ್ಮೆ ಸಿದ್ಧಗಂಗಾಕ್ಷೇತ್ರಕ್ಕೆ ಕರೆತಂದಿದ್ದರು. ಸ್ವಾಮಿಗಳು ಆಕೆಯ ಸ್ವಲ್ಪಕೂದಲನ್ನು ಬೆರಳಲ್ಲಿ ಸುತ್ತಿಕೊಂಡು (ಹಾಗೆ ಸುತ್ತಿಕೊಂಡರೆ ಮೈಮೇಲಿರುವ ಗಾಳಿ ಪರಾರಿಯಾಗಲು ಸಾಧ್ಯವಿಲ್ಲವಂತೆ) ಮಂತ್ರಗಳನ್ನು ಪಠಿಸಿ, ವಿಭೂತಿಯ ದೂಳನ್ನು ಆಕೆಯ ಮೈಮೇಲೆ ಉರುಬಿದಾಗ ಸುಟ್ಟುಕೊಂಡವಳಂತೆ ಬೆದರಿದ ಆಕೆ ಎಲ್ಲವನ್ನು ಹೇಳುವುದಾಗಿ ಬಾಯಿಬಿಟ್ಟಳು. ಸ್ವಾಮಿಗಳು ಒಂದೊಂದು ಪ್ರಶ್ನೆ ಕೇಳುತ್ತ ಹೊರಟರು. ಅವಳ ಮೈಮೇಲಿದ್ದ ಗಾಳಿ ಉತ್ತರಿಸುತ್ತ ಹೋಯಿತು. ತಾನು ಇಂಥವಳೆಂದೂ ಹಗೆಗಳು ಅನ್ಯಾಯದಿಂದ ತನ್ನನ್ನು ಸಾಯಿಸಿದರೆಂದೂ ಅದಕ್ಕಾಗಿ ದೆವ್ವವಾಗಿ ಅವರ ಮನೆಯ ಇಷ್ಟು ಜನರನ್ನು ಆಹುತಿ ತೆಗೆದುಕೊಂಡೆನೆಂದೂ ಗಾಳಿ ಹೇಳಿತು. ಬಾವಿಯ ಬಳಿ ನೀರು ಕುಡಿಯಲು ಬಂದಾಗ ಬಾವಿಗೆ ತಳ್ಳಿದೆನೆಂದೂ ಅವರ ಹೆಸರು ಇಂಥದೆಂದೂ ಗಾಳಿಹೇಳಿದ ಮಾತುಗಳು ವಾಸ್ತವ ವಿಷಯಗಳಾಗಿದ್ದುವು. ಇಷ್ಟು ಜನರನ್ನು ಕೊಂಡುಗಳಿಸಿದ ಶಾಪ ಸಾಕೆಂದು, ಇನ್ನು ಆ ಕ್ಷೇತ್ರದಲ್ಲಿ ತಂಗಿ ಪಾಪ ಪರಿಹಾರ ಮಾಡಿಕೊಳ್ಳಬೇಕೆಂದೂ ಒಪ್ಪಿಗೆಯಿದ್ದರೆ ಏನಾದರೂ ಗುರುತು ಕೊಡತಕ್ಕದ್ದೆಂದೂ ಸ್ವಾಮಿಗಳು ಕೇಳಿದಾಗ ಗಾಳಿ ಹಿಡಿದ ಹೆಣ್ಣ ತನ್ನ ತಲೆಯಿಂದ ಒಂದು ಹಿಡಿಗೂದಲನ್ನು ಕಿತ್ತುಕೊಟ್ಟಳು. ಆಮೇಲೆ ಆಕೆಯ ಮೈ-ಮೇಲೆ ಮತ್ತೆ ದೆವ್ವ ಬರಲಿಲ್ಲವೆಂದೂ ಸುಖವಾಗಿದ್ದಾಳೆಂದೂ ತಿಳಿದುಬಂತಂತೆ”[9].

ಇಂದಿಗೂ ಹಳ್ಳಿಗಳಲ್ಲಿ ಅದೇ ಹುಟ್ಟಿದ ಮಕ್ಕಳನ್ನು ಮನೆಯ ಹೊರಗೆ ಒಯ್ಯುವುದಿಲ್ಲ. ಬಸಿರಿಯಾದ ಹೆಣ್ಣು ಮಕ್ಕಳೂ ಸಹಿತ ಸುಡುಗಾಡದ ಸಮೀಪಕ್ಕೆ ಹಾಯುವುದಿಲ್ಲ (ಏಕೆಂದರೆ ಸುಡುಗಾಡಿನಲ್ಲಿ ದೆವ್ವ ಇರುತ್ತದೆನ್ನುವ ನಂಬಿಕೆಯ ಕಾರಣವಾಗಿ). ಮದುವೆಯಾದ, ಇನ್ನೂ ಹಸಿಮೈಯಲ್ಲಿರುವ ನವದಂಪತಿಗಳೂ ಕೂಡ ಮನೆಯ ಹೊರಗಡೆಗೆ ಕೆಲವು ದಿನ ಹೋಗುವುದಿಲ್ಲ. ಪುಷ್ಪವತಿಯಾದ ಹೆಣ್ಣು ಮಕ್ಕಳೂ ಸುಮಾರು ದಿನಗಳವರೆಗೆ, ಹೊರಗಡೆ ಅಲೆಯದೆ ಮನೆಯ ಒಳಗಡೆಯೇ ಇರುತ್ತಾರೆ. ಏಕೆಂದರೆ ಗಾಳಿಗೆ ಬಸುರಿ, ಬಾಣಂತಿ, ಹಸುಗೂಸುಗಳೆಂದರೆ ಎಲ್ಲಿಲ್ಲದ ಪ್ರಾಣವಂತೆ,[10] ತನ್ನ ಪ್ರಾಣ-ಪ್ರಿಯರಾದ ಇಂಥವರನ್ನು ಗಾಳಿ ಬಡಿದುಕೊಳ್ಳಬಾರದೆನ್ನುವ ಕಾರಣದಿಂದ ಹಳ್ಳಿಗರು ಮೊದಲೇ ಎಚ್ಚರಿಕೆ ವಹಿಸುತ್ತ ಬಂದ ಸಂಗತಿ ಸರ್ವವಿದಿತವಾದುದು. ಆದರೂ ದುಷ್ಟಪ್ರವೃತ್ತಿಯುಳ್ಳ ಗಾಳಿ ಹೇಗೋ ಮೈಯಲ್ಲಿ ಸೇರುವುದುಂಟು. ಆ ಸಂದರ್ಭದಲ್ಲಿ ಮೂರು ದಾರಿ ಕೂಡಿದ ಸ್ಥಳದಲ್ಲಿಂದ ಹಿಡಿಮಣ್ಣು ತಂದು, ಗಾಳಿ ಬಡಿದವರ ಮುಖದ ಮೇಲೆ ಮೂರು ಬಾರಿ ನಿವಾಳಿಸಿ ’ಥೂ’ ಎಂದು ಉಗುಳಿ, ಅದನ್ನು ಒಲೆಯಲ್ಲಿ ಹಾಕುವುದುಂಟು. ಆಗ ಗಾಳಿ ಸುಟ್ಟು ಭಸ್ಮವಾಗಿ ಮತ್ತೆ ಬರುವುದಿಲ್ಲವೆಂಬ ನಂಬಿಕೆಯಿದೆ. ಮತ್ತು ಮೈಯಲ್ಲಿ ಗಾಳಿ ಸೇರಿದೆ ಎಂಬ ಸಂಶಯ ಬಂದಲ್ಲಿ ಐದು ಪ್ರಕಾರದ ಪಳಾರ (ಪಂಚಪಳಾರ)[11]ವನ್ನು ಮೂರು ದಾರಿಕೂಡಿದಲ್ಲಿ ಇಟ್ಟು ತಿರುಗಿ ನೋಡದೆ ಬರುತ್ತಾರೆ. (ತಿರುಗಿ ನೋಡಿದರೆ ಮತ್ತೆ ಆ ದೆವ್ವ ಎಲ್ಲಿ ತಮ್ಮ ಬೆನ್ನಹಿಂದೆಯೇ ಬರುತ್ತದೋ ಏನೋ ಎಂಬ ಭಯ) ಹೀಗೆ ಮಾಡುವುದರಿಂದ ಬಡಿದು ಕೊಂಡ ಗಾಳಿ ತೊಲಗುತ್ತದೆನ್ನುವ ಭಾವನೆ ಜನಪದರದು. ಗಾಳಿಗೆ ಇಟ್ಟ ಪಂಚಪಳಾರವನ್ನು ಕೆಲವರು ಎಡಗಾಲಿನಿಂದ ಒದ್ದು ತೆಗೆದುಕೊಂಡು ತಿನ್ನುವುದುಂಟು. ಕಾಲಿನಿಂದ ಒದೆದು ತಿಂದರೆ ದೆವ್ವ ಬಡಿಯುವುದಿಲ್ಲವೆನ್ನುವ ಪ್ರತೀತಿಯೂ ಇದೆ. ಹಾಗೆಯೇ ದೆವ್ವ ಬಡಿದವರು ಇಟ್ಟ ಪಳಾರವನ್ನು, ಆಸೆಯ ಕಣ್ಣುಗಳಿಂದ ಯಾರಾದರೂ ನೋಡಿದರೆ, ಹಿಡಿದವರನ್ನು ಬಿಟ್ಟು, ಅಂಥವರನ್ನು ದೆವ್ವ ಬಡಿದುಕೊಳ್ಳುತ್ತದೆ ಎಂಬ ನಂಬಿಕೆಯೂ ಹಳ್ಳಿಗರಲ್ಲಿದೆ. ಈ ಗಾಳಿ ಮನುಷ್ಯರಿಗೆ ಮಾತ್ರ ಹಿಡಿದುಕೊಳ್ಳುವುದಿಲ್ಲ. ಹಿಂಡುವ ಎಮ್ಮೆ, ಆಕಳು, ಅವುಗಳ ಕರುಗಳನ್ನೂ ಹಿಡಿದುಕೊಳ್ಳುವುದುಂಟು. ಪ್ರಾಣಿಗಳನ್ನು ಹಿಡಿದುಕೊಂಡ ಗಾಳಿಯನ್ನು ತೊಲಗಿಸಲೂ ಸಹ ಮನುಷ್ಯರಿಗೆ ಕೈಕೊಂಡ ಈ ಮೇಲಿನ ಕ್ರಮಗಳನ್ನೇ ಅನುಸರಿಸುತ್ತಾರೆ. ಇವೆಲ್ಲ ಸಂಗತಿಗಳನ್ನೂ ಕೇಳಿದವರಿಗೆ, ಕಣ್ಣಾರೆ ಕಂಡವರಿಗೆ ಮನಶ್ಯಾಸ್ತ್ರಾದಿ ವಿಜ್ಞಾನಗಳು ಹೇಳುವ ಕಾರಣಗಳಲ್ಲಿ ನಂಬಿಕೆಯಿರುವುದಿಲ್ಲ. ಅಷ್ಟೇ ಏಕೆ! ಹೊಸಮನೆ ಕಟ್ಟಿಸಿ ಹಾಗೆಯೇ ಪ್ರವೇಶಿಸದೆ, ದೆವ್ವ-ಗಾಳಿ-ಪಿಶಾಚಿಗಳು ಬಡಿಯಬಾರದೆಂದು, ಅದಕ್ಕೆ ಶಾಂತಿ ಮಾಡಿಸಿ, ಒಳಪ್ರವೇಶಿಸುವ ಮನಶ್ಯಾಸ್ತ್ರಜ್ಞರಿಗೇ ಅದು ಹೇಳುವ ಕಾರಣಗಳಲ್ಲಿ ನಂಬಿಕೆ ಉಳಿದಿರುವುದಿಲ್ಲ.

ಇನ್ನು ಈ ಗಾಳಿಯ ಬಗೆಗೆ ಆದಿವಾಸಿಗಳ ಭಾವನೆ ಹೇಗಿರಬೇಡ! ಗಾಳಿ ಮನುಷ್ಯ,ಪ್ರಾಣಿಗಳಷ್ಟೇ ಅಲ್ಲ, ಸಸ್ಯಗಳಲ್ಲಿಯೂ ಕಂಡುಬರುವುದುಂಟು. “ಗಾಳಿ ಬೀಸಿ ಗಿಡಮರಗಳು ಒಂದಕ್ಕೊಂದು ತಿಕ್ಕ ಬೆಂಕಿಹುಟ್ಟಿಕೊಂಡರೆ, ಗಾಳಿಯ ರಭಸಕ್ಕೆ ಮರಗಳು ಮುರಿದು ಬಿದ್ದರೆ, ಅದರಲ್ಲಿರುವ ದೆವ್ವ-ಪಿಶಾಚಿ- ಶಕ್ತಿಯೇ ಕಾರಣವೆಂದು ಆದಿವಾಸಿಗಳ ನಂಬಿಕೆಯಾಗಿತ್ತು. ಮರಮುರಿದು ಬೀಳುವಾಗ ಆಗುವ ಶಬ್ದದಲ್ಲಿ ಗಾಳಿಯ ದೈತ್ಯಶಕ್ತಿಯಿದೆಯೆನ್ನುವ ಭಾವನೆ ಆದಿವಾಸಿಗಳ ಕಾಲದಲ್ಲಿತ್ತು. ತದನಂತರ ಆ ಮರ ಒಣಗಿಹೋದಾಗ, ಅದರಲ್ಲಿರುವ ಪ್ರೇತಶಕ್ತಿ ತೊಲಗಿಹೋಗಿರುತ್ತದೆಂದು ಜನರ ನಂಬಿಕೆಯಾಗಿತ್ತು[12]“. “ಗಾಳಿಗೆ ಅಲ್ಲಾಡಿದ ಮರದ ಎಲೆಗಳು ಧ್ವನಿಗೈದರೆ, ಅದು ತಮ್ಮ ಪೂರ್ವಜರ ’ಧ್ವನಿ’ ಯೆನ್ನುವ ನಂಬಿಕೆಯೂ ಇತ್ತು”.[13] “ಸಮುದ್ರತೀರದ ಗಾಳಿಯ ಮರಗಳಲ್ಲಿ ಗಾಳಿ ಭೋರೆಂದು ಬೀಸುತ್ತಿದ್ದರೆ, ಪುರಾತನ ಮಾನವನಿಗೆ ಗಾಳಿಯಮರಗಳಲ್ಲಿ ಆತ್ಮವಿದೆ ಎಂಬ ಭಾವನೆಯಿತ್ತು. ಆದುದರಿಂದ ಆ ಮರಗಳಿಗೆ “Weeping Trees” ಎಂದು ಕರೆಯುತ್ತಾರಂತೆ”.[14] ಹುಣಸೀಮರದಲ್ಲಿ, ಆಲದ ಮರದಲ್ಲಿ, ಕಳ್ಳಿಗಿಡದಲ್ಲಿ ಗಾಳಿ ಇರುತ್ತದೆನ್ನುವ ನಂಬಿಕೆ ಜನಪದರಲ್ಲಿಯೂ ಇದೆ.

ಹೀಗೆ, ಗಾಳಿ, ದೆವ್ವ-ಪಿಶಾಚಿ ಎಂಬ ಭಾವನೆ ಆದಿಮಾನವಕಾಲದಿಂದಲೂ ಅನೂಚಾನವಾಗಿ ಬೆಳೆದುಕೊಂಡು ಬಂದಿರುವುದು ಗಮನಾರ್ಹವಾದುದು.

ಈ ರೀತಿ ಗಾಳಿಯನ್ನು ಒಂದೆಡೆ ದೆವ್ವ-ಪಿಶಾಚಿ ಎಂದು ಜನ ಭಾವಿಸಿದರೆ, ಅದೇ ಜನ ಮತ್ತೊಂದೆಡೆ, ಅದನ್ನು ದೇವರು ಎಂದು ಭಾವಿಸುತ್ತ ಬಂದಿದ್ದಾರೆ. ಆದರೂ ಗಾಳಿ ದೇವರು ಎನ್ನುವುದಕ್ಕಿಂತ ಹೆಚ್ಚಾಗಿ ಅದು ದೆವ್ವ ಎನ್ನುವ ಅರ್ಥದಲ್ಲಯೇ ಹಳ್ಳಿಗರಲ್ಲಿ ಪ್ರಚಲಿತವಿದೆ. ಈ ಗಾಳಿಗೆ ಆಕಾರ ಕಲ್ಪಿಸಿ, ಗುಡಿಕಟ್ಟಿ ಅದನ್ನು ಕೆಲವರು ಸಾಕಾರದಲ್ಲಿ ಪೂಜಿಸಿದರೆ, ಮತ್ತೆ ಕೆಲವರು ನಿರಾಕಾರದಲ್ಲಿಯೇ ಪೂಜಿಸಿದ್ದು ಕಂಡುಬರುತ್ತದೆ. ಆದರೆ ಜನಪದರು ಪ್ರಕೃತಿಯ ಪ್ರತಿ ಅಂಶವನ್ನೂ ಸಾಕಾರದಲ್ಲಿಯೇ ಪೂಜಿಸುತ್ತ ಬಂದವರು. ಆ ಕಾರಣದಿಂದಲೇ ಅವರು ಕಣ್ಣಿಗೆ ಕಾಣುವ ಸೂರ‍್ಯ-ಚಂದ್ರ, ಮೋಡ, ಮಳೆ, ನಕ್ಷತ್ರ-ಮೊದಲಾದವುಗಳನ್ನು ಹೆಚ್ಚಾಗಿ ಪೂಜಿಸಿದ್ದಾರೆ. ಆದುದರಿಂದ ಅವುಗಳ ಬಗೆಗೆ ಹಲವಾರು ನಂಬಿಕೆಗಳು, ಭಾವನೆಗಳು, ಅವರಿಂದ ವ್ಯಕ್ತವಾಗಿವೆ. ಜನಪದರ ಮೂಲ ಭಾವನೆ ಕಣ್ಣಿಗೆ ಕಾಣುವ ವಸ್ತುವನ್ನೇ ಹೆಚ್ಚಾಗಿ ನಂಬಿಕೊಂಡಿದ್ದರೂ ಕೂಡ, ನಿತ್ಯ ಜೀವನದಲ್ಲಿ ಉಪಯುಕ್ತವಾದ, ಆಗೋಚರ ಗಾಳಿಯ ಬಗೆಗೂ ತಮ್ಮ ಕೆಲವಾರು ಅನಿಸಿಕೆಗಳನ್ನು ನೀಡಿದ್ದಾರೆ. ಗಾಳಿಯ ಬಗೆಗಿನ ಗ್ರಾಮೀಣರ ಭಾವಭಾವನೆಗಳನ್ನು ತಿಳಿದುಕೊಳ್ಳಲು ಅವರ ಸಾಹಿತ್ಯವನ್ನೇ ಮೊರೆಹೋಗಬೇಕು.

ಜನಪದ ಸಾಹಿತ್ಯದಲ್ಲಿ ಗಾಳಿ:

ಜನಪದರು ನಿತ್ಯ ಅನುಭವಿಸುವ ಗಾಳಿಯನ್ನು, ಅದರಿಂದುಂಟಾಗುವ ಅನಿಸಿಕೆಗಳನ್ನು ತಮ್ಮದೆ, ಶೈಲಿಯಲ್ಲಿ ಹಾಡುಕಟ್ಟಿ ಉಸುರಿದ್ದಾರೆ. ಗಾದೆಸುತ್ತಿ ಎಸೆದಿದ್ದಾರೆ, ಒಗಟು ಮಾಡಿ ಒಗೆದಿದ್ದಾರೆ. ಜನಪದಸಾಹಿತ್ಯದ ಈ ಹಾಡು, ಗಾದೆ, ಒಗಟು ಮೊದಲಾದ ಪ್ರಕಾರಗಳಲ್ಲಿ ಗಾಳಿಯನ್ನು ಕುರಿತು ವ್ಯಕ್ತಗೊಂಡ ಅವರ ಭಾವನೆಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುವುದು.

ಜನಪದ ಹಾಡುಗಳಲ್ಲಿ:

ಹಳ್ಳಿಯ ಸಾಮಾನ್ಯ ಜನರು ಪ್ರಕೃತಿಯೊಂದಿಗೆ ನೇರ ಸಂಬಂಧವುಳ್ಳವರು. ಪ್ರಕೃತಿ ಪ್ರಿಯವನ್ನುಂಟು ಮಾಡಿದಾಗ ಅದನ್ನು ಹಾಡಿ ಹೊಗಳಿ, ಬೇಕಾದುದನ್ನು ಕೊಡಲು ಸಿದ್ಧರಾಗುವರು. ಅದೇ ಪ್ರಕೃತಿ ಕೇಡನ್ನು ಬಗೆದರೆ ಅಥವಾ ತಮಗೆ ಅನಾನುಕೂಲವಾದರೆ, ಅದರ ಮೇಲೆ ಸಿಡಿಮಿಡಿಗೊಳ್ಳುವರು. ಉದಾಹರಣೆಗೆ : ರೈತ ಕಾಳನ್ನು ತೂರುವ ಸಂದರ್ಭದಲ್ಲಿ ಗಾಳಿ ಬಿಡದೆ, ಇದ್ದರೆ ಗಾಳಿದೇವನಿಗೆ ಮೊರೆಯಿಡುತ್ತಾನೆ. ’ನೀನು ಬೀಸಿದರೆ ಕಡುಬು ಮಾಡಿಕೊಡುತ್ತೇನೆ. ಬೀಸದಿದ್ದರೆ ಕಡುಬು ಕೊಡುವುದಿಲ್ಲ ಎಂದು ಅಮೂರ್ತವಾದ ಗಾಳಿ ದವನ ಜೊತೆ ರೈತ ಭಾವನಾತ್ಮಕವಾಗಿ ಸಂಭಾಷಿಸುತ್ತಾನೆ. ಇದರಿಂದ ಗಾಳಿಬಂದರೆ ಖಂಡಿತವಾಗಿಯೂ ಅದಕ್ಕೆ ಕಡುಬು ಮಾಡಿ ಎಡೆ ಹಿಡಿಯುತ್ತಾನೆ. ಬರದೇ ಇದ್ದರೆ ಅದರ ಮೇಲೆ ಕೋಪಿಸಿಕೊಂಡು ಕಡುಬು ಮಾಡಿಕೊಡುವುದಿಲ್ಲ.

ಗಾಳಿಯ ಜೋತೆಗಿರುವ ನಮ್ಮ ಜನಪದರ ಆತ್ಮೀಯ ಸಂಬಂಧ ಎಂಥದು ಎಂಬುದನ್ನು ನೋಡಿ.

ಗಾಳಿ ಗಾಳಿ ಕೇಳೆ ಗಾಳಿ ಮಂಕಾಳಿ ಕೇಳೆ
ಸೂಳೇರ ಕೇರಿಯ ಸುಡಬೇಕು| ಗಾಳಿಯೆ
ಜಾಣರ ಕೇರೀಲಿ ಇರಬೇಕು||[15]

ಹಳ್ಳಿಯಗರತಿಯರು, ತಮ್ಮ ಗಂಡಂದಿರು ಬಿಸಲಿನ ಬೇಗೆಗೆ ಆಯಾಸಗೊಳ್ಳಬಾರದೆಂದು, ತಂಗಾಳಿಗೆ ಬೇಡಿಕೊಳ್ಳುವುದನ್ನು ನೋಡಿದರೆ, ಪ್ರಕೃತಿಯೊಂದಿಗೆ ಅವರು ಬೆಳೆಸಿದ ಆತ್ಮೀಯ ಸಂಬಂಧದ ಆಳ ಅಗಲಗಳ ಅರಿವಾಗದೆ, ಇರದು.

ತಂಗಾಳಿ ತೀಡಪ್ಪ ತಂಪ ನೀನೆರಿಯಣ್ಣ
ಊರಮುಂದಲ ಹೊಲಹರಗಿ| ನನ್ನಾತ
ಬರಿಮೈಲಿ ಬರುವ ಬಿಸಲೀಗಿ||[16]

ಇಲ್ಲೋರ್ವ ಹೆಣ್ಣುಮಗಳು, ತನ್ನ ಗಂಡ ಹೊಲದಿಂದ ಹಸಿದು ತನಗಾಗಿ ಓಡಿಬರುವ ವೇಳೆಯಾಗಿದೆ; ಆದುದರಿಂದ ಮೋಡವನ್ನು ಮಳೆಯಾಗಿ ಸುರಿಸಬೇಡವೆಂದು ಗಾಳಿಗೆ ಎಚ್ಚರಿಕೆ ನೀಡುತ್ತಿರುವುದು ಅದೆಷ್ಟು ಸಹಜವಾಗಿ ನಿರೂಪಿತವಾಗಿದೆ!

ಗಾಳಿಗೋಡುವ ಮೋಡ ಮಳಿಯಾಗಿ ಸುರಿಬ್ಯಾಡ
ನನ್ನವರು ಹಸಿದು ಹೊಲದಿಂದ| ಬರುತಾರ
ನನಗಾಗಿ ಓಡಿ ಎಚ್ಚರಿಕೆ||[17]

ಇವಳ ಎಚ್ಚರಿಕೆಯ ಈ ನುಡಿಗಳು ಗಾಳಿಗೆ ಕೇಳಿರತಕ್ಕಿಲ್ಲ, ಕೇಳಿದ್ದರೂ ಅದು ಲೆಕ್ಕಿಸದೆ, ಮಳೆಯನ್ನು ಸುರಿಸಿರಬೇಕು. ಗಾಳೆಯಲ್ಲಿ ಅವಳಗಂಡ ಬರುವುದೆಂತು! ಇತ್ತ ಗಾಳಿ ಅವಳ ಸೆರಗನ್ನು ಹಿಡಿದು ಜಗ್ಗಿರಬೇಕು. ಆ ಸಂದರ್ಭದಲ್ಲಿ “ಕದಿಬ್ಯಾಡ ಸುಳಿಗಾಳಿ  ಮಲ್ಲೀಗಿ ನರಗಂಪ ಸರದಾರ ಕಂಡಾರೆ ಬೆನ್ನತ್ತಿ| ಹಿಡಿದು ನಿನಮೈಗೆ ಬೇಡಿ ಬಿಗಿಸ್ಯಾರು”[18] ಎನ್ನುತ್ತಾಳೆ. ಹಾಗೆಯೇ “ಬಾಳೀಯ ವನದಾಗ ಸಿಳ್ಳು ಹಾಕುವ ಗಾಳಿ ಒಳ್ಳೆಯವನಲ್ಲ ನನ ನಲ್ಲ! ಗುದ್ದುತ್ತ ಅಳಿಸ್ಯಾರು ನಿನ್ನ ಪಾರಾಗು”[19] ಎಂದು ಮನುಷ್ಯರಿಗೆ ಬುದ್ಧಿ ಹೇಳುವ ರೀತಿಯಲ್ಲಿ, ಗಾಳಿಗೆ ಉಪದೇಶಿಸುವುದನ್ನು ನೋಡಿದರೆ ಜನಪದಕವಿಯ ಅಥವಾ ಕವಯಿತ್ರಿಯ ಕಲ್ಪನೆ ಗರಿಗೆದರಿ ವಿಹರಿಸಿದುದು ತಿಳಿದುಬರುತ್ತದೆ.

ಶಿಷ್ಟಕವಿಗಳು ಗಾಳಿಯನ್ನು ವರ್ಣನೆಗಾಗಿ ವರ್ಣಿಸಿದರೆ ಹೊರತು, ಅದರಲ್ಲಿ ದೇವರು, ದೆವ್ವ ಎಂಬ ಭಾವನೆಗಳನ್ನಾಗಲೀ, ಮಾನವೀಯ ಭಾವನೆಗಳನ್ನಾಗಲೀ ಇರಿಸಿ ಕಾಣಲಿಲ್ಲ. ಗಾಳಿಯನ್ನು ಕೋಗಿಲೆಗೂ, ತಾವರೆಗೂ, ಆನೆಗೂ ಹೋಲಿಸಿ, ಅದರ ಸ್ವಾಭಾವಿಕ ಗುಣವನ್ನೇ ಎಂಬ ಕೃತಕವಾಗಿ ಅಂಡಯ್ಯ, ಅಗ್ಗಳ, ನೇಮಿಚಂದ್ರರಂತಹ ಪೂರ್ವಕವಿಗಳು ವರ್ಣಿಸಿದ್ದಾರೆ. ಲಕ್ಷ್ಮೀಶಕವಿ ಮಾತ್ರ ಗಾಳಿಯ ವರ್ಣನೆಯನ್ನು ಬೇರೆ ತೆರನಾಗಿಯೇ ಮಾಡಿದ್ದಾನೆ. ಮನುಷ್ಯನ ಸಂಕಟಸಮಯದಲ್ಲಿ, ಗಾಳಿಯೂ ಸೇರಿದಂತೆ ಇಡೀ ಪ್ರಕೃತಿ ಭಾಗಿಯಾಗಿ, ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದೆ ಎಂಬ ಭಾವ ಲಕ್ಷ್ಮೀಶನದು. ಕವಿ ಸರ್ವಜ್ಞನ ರೀತಿಯೇ ಇನ್ನೊಂದು ತೆರನಾದುದು. ಆತ ಗಾಳಿಯನ್ನು ತೀರ ಸ್ವಾಭಾವಿಕವಾಗಿ ಮತ್ತು ಅಷ್ಟೇ ಸರಳವಾಗಿ ವರ್ಣಿಸುತ್ತಾನೆ. ಆದರೆ ಜನಪದ ಕವಿ ಗಾಳಿಯನ್ನು ಕಾಣುವ ಬಗೆಯೇ ವಿಶಿಷ್ಟತೆರನಾದುದು. ಈಗ ಗಾಳಿಯೊಂದಿಗೆ ತಾದಾತ್ಮ್ಯ ಹೊಂದಿ, ಅದರಲ್ಲಿಯೂ ಮಾನವೀಯ ಗುಣಗಳನ್ನು ಇರಿಸಿ, ಅರಸಿ ತುಂಬ ಆತ್ಮೀಯವಾಗಿ ಅದನ್ನು ವರ್ಣಿಸುತ್ತಾನೆ.

ಗಾದೆಗಳಲ್ಲಿ:

ಗಾದೆಗಳು ಗಾಳಿಯ ಕೆಲವು ಅಂಶಗಳನ್ನಾದರೂ ತಿಳಿಯಲು ಸಹಾಯಕವಾಗುತ್ತವೆ. ’ಗಾಳಿಗೆ ಧೂಳು ಹತ್ತೀತೆ?’ ಎಂಬ ಗಾದೆಯ ಅಂತರಾರ್ಥ ಏನೇ ಇದ್ದರೂ ಅದು ನಿರಾಕಾರವಾದುದು ಎಂಬುದರ ಸೂಚನೆ ಅದರಲ್ಲಿದ್ದಂತೆ ತೋರುತ್ತದೆ. ’ಗಾಳಿ ಬೇವರೀತೆ?’ ಎಂಬುದರಲ್ಲಿಯೂ ಅದರ ಅಮೂರ್ತಗುಣವೆ ಅಡಗಿದೆ. ’ಗಾಳಿಯಿಲ್ಲದೆ, ಧೂಳು ಎದ್ದೀತೆ?’ ಎಂಬ ಗಾದೆಯಲ್ಲಿ ಗಾಳಿಗೆ ಶಕ್ತಿ ಇದೆ ಎನ್ನುವ ಸೂಚನೆ ಕಂಡುಬರುತ್ತದೆ. ’ಅಮುಕುವ ಗಾಳಿಯ ಮುಂದೆ ಹೋಗಬೇಡ, ನೀಳವಾದರೂ ಗಾಳಿಗೇನು? ಎಂಬ ಗಾದೆಯಿಂದಲೂ ಗಾಳಿಗಿರುವ ಅಗಾಧಶಕ್ತಿಯನ್ನು ತಿಳಿದುಕೊಳ್ಳಬಹುದು. ಎತ್ತ ಗಾಳಿ ಬೀಸ್ತದ ಅತ್ತ ಹೋಗಾಂವ’ ಎನ್ನುವಲ್ಲಿ ಗಾಳಿಯ ವ್ಯಾಪ್ತಿಯನ್ನು ತಿಳಿಯಬಹುದು. ಗಾಳಿ ರೂಪರಹಿತವಾದುದು ಎನ್ನುವುದನ್ನು ಗಾಳಿಗುದ್ದಿ ಮೈನೋಯಿಸಿಕೊಂಡಾಂಗೆ’ ಎಂಬ ಗಾದೆಯಲ್ಲಿ ಸೂಚಿತವಾಗಿದೆ. ’ಗಾಳಿ ಬಂದಾಗ ತೂರಿಕೊ’ ಎನ್ನುವಲ್ಲಿ ಅದರ ಉಪಯುಕ್ತಗುಣ ಇದ್ದಂತೆ ತೋರುತ್ತದೆ. ’ತಂಗಾಳಿ ನೆನೆದರೆ ತಂಗಳು ಬಿಸಿಯಾಯ್ತೆ’ ಎಂಬ ಗಾದೆಯಲ್ಲಿ ತಂಗಾಳಿಗೆ ತಂಪನ್ನುಂಟು ಮಾಡುವ ಗುಣವಿದ್ದುದರ ಸೂಚನೆ ಇದೆ ’ಬಿರುಗಾಲಿಬಲ್ಲುದೆ ಬೇವಿನ ಕಹಿಯ?’ ಎನ್ನುವಲ್ಲಿ ಗಾಳಿಗೆ ರುಚಿಯ ಗುಣ ಇಲ್ಲದುದು ತಿಳಿಯುತ್ತದೆ. ’ಗಾಳಿಯಿಲ್ಲದೆ ಎಲೆ ಅಲ್ಲಾಡದು’ ಎಂಬ ಗಾದೆ ಗಾಳಿಯ ಚಲನಶೀಲ ಗುಣವನ್ನು ಅರುಹುತ್ತದೆ. ’ತೆಂಕಣಗಾಳಿ ಮಳೆ ಬರಿಸಿತು’ – ಎಂಬ ಗಾದೆ ಗಾಳಿಗೆ ಮಳೆಯನ್ನು ತರುವ ಶಕ್ತಿಯಿದೆಯೆಂದು ತಿಳಿಸುತ್ತದೆ. ಒಟ್ಟಿನಲ್ಲಿ ಗಾದೆಗಳಿಂದ ಗಾಳಿಯ ವ್ಯಾಪ್ತತೆ, ನಿರಾಕಾರತ್ವ, ಶಕ್ತಿ, ಚಲನಶೀಲತೆ, ರುಚಿ, ಉಪಯುಕ್ತತತೆ ಮೊದಲಾದ ಗುಣ ಲಕ್ಷಣಗಳನ್ನು ಅರಿಯಬಹುದು.[1]       ’ತಾಸಾಂ ವಾಯು: ಪ್ರಥಮಗಾಮೀ ಭವತೀ – ವೈದಿಕ ಸಾಹಿತ್ಯ ಚರಿತ್ರೆ: ಅಡಿಟಿಪ್ಪಣಿಯಲ್ಲಿ ಪು. ೧೪೬ ಡಾ. ಎನ್. ಎಸ್. ಅನಂತರಂಗಾಚಾರ್ಯ

[2]       ವೈದಿಕ ಸಾಹಿತ್ಯ ಚರಿತ್ರೆ: ಡಾ. ಎನ್.ಎಸ್. ಅನಂತರಂಗಾಚಾರ್ಯ ಪು. ೧೪೬.

[3]       ಪುರಾಣ ನಾಮ ಚೂಡಾಮಣಿ: ಬೆನಗಲ್ ರಾಮರಾವ್: ಪು. ೫೫೭–೫೫೮. ದಶವಾಯುಗಳ ವಿವರಣೆ ಚನ್ನ ಬಸವಣ್ಣನವರ ವಚನಗಳಲ್ಲಿಯೂ ಕಂಡುಬರುತ್ತದೆ. ನೋಡಿ: ಚನ್ನಬಸವಣ್ಣನವರ ವಚನಗಲು: ಸಂ. ಡಾ. ಆರ್.ಸಿ. ಹಿರೇಮಠ: ದ್ವಿ. ಮು. ವ; ೮೪೪, ೮೪೫, ೧೦೫೮.

[4]       ವೈದಿಕ ಸಾಹಿತ್ಯ ಚರಿತ್ರೆ: ಡಾ. ಎನ್.ಎಸ್. ಅನಂತರಂಗಾಚಾರ್ಯ: ಸು. ೧೪೮.

[5]       ಅದೇ

[6]       ಧನಂಜಯ ಶಬ್ದಕಶ : ಡಿ. ಪದ್ಮನಾಭಶರ್ಮ: ಪು.೨೫-೨೬.

[7]       ಹಳ್ಳಿಯ ಹಾಡುಗಳು: ಗೋರೂರು ರಾಮಸ್ವಾಮಿ ಅಯ್ಯಂಗಾರ್, ಪು. ೮೯.

[8]       ಕನ್ನಡ ನಿಘಂಟು: ಸಂ.೨: ಪು. ೨೪೯೨.

[9]       ಕನ್ನಡ ವಿಶ್ವಕೋಶ: ಸಂ. ೬ ಪು. ೨೪೯.

[10]      ಬೇರೆ ಬೇರೆ ದೆವ್ವನ ಹೆಸರು, ಅವು ಇರುವ ಸ್ಥಳ, ಅವುಗಳ ಕ್ರೂರಕಾರ್ಯ ಮತ್ತು ಅವು ಎಂತಹವರನ್ನು ಬಲಿತೆಗೆದುಕೊಳ್ಳುತ್ತವೆ- ಇತ್ಯಾದಿ ವಿಷಯಕ್ಕೆ ನೋಡಿ ಬಸವಣ್ಣನವರ ವಚನಗಳು: ಡಾ. ಆರ್. ಸಿ. ಹಿರೇಮಠ : ವ. ೫೫೫

[11]      `ಪಂಚಪಳಾರ’ಗಳು ಯಾವುವೆಂದರೆ – ಚುರಮರಿ, ಶೇಂಗಾ, ಪುಠಾಣಿ, ಕೊಬ್ಬರಿ, ಖಾರೀಕ ಮತ್ತು ಬಾಳೇಹಣ್ಣು.

[12]      ಜಾನಪದ ಅಧ್ಯಯನ : ದೇಜಗೌ: ಪು. ೩೪೯

[13]      ಅದೇ. ಪು. ೩೫೦.

[14]      ಮೂಢನಂಬಿಕೆಗಳು : ಎಲ್.ಆರ್.ಹೆಗಡೆ: ಪು.೫.

[15]      ಹಳ್ಳಿಯ ಹಾಡುಗಳು: ಗೊರೂರು ರಾಮಸ್ವಾಮಿ ಅಯ್ಯಂಗಾರ, ಪು.೧೦೫.

[16]      ನವಲು ಕುಣದಾವ : ಮುದೇನೂರ ಸಂಗಣ್ಣ, ಪು. ೪೫

[17]      ನವಲು ಕುಣದಾವ : ಮುದೇನೂರ ಸಂಗಣ್ಣ, ಪು. ೪೪

[18]      ಅದೇ ಪು. ೪೮.

[19]      ಅದೇ ಪು. ೫೦.