ಒಗಟುಗಳಲ್ಲಿ :

ಒಗಟುಗಳೂ ಕೂಡ ಗಾಳಿಯ ಗುಣಧರ್ಮವನ್ನೇ ತಿಳಿಸುತ್ತವೆ. “ಇಲ್ಲೇ ಹೋಗುತೈತೆ ಕೈಗೆ ಸಿಗವೊಲ್ಲದು’, ಇಲ್ಲೇ ಐತಿ ಕಣ್ಣಿಗೆ ಕಾಣೋದಿಲ್ಲ’, ’ಹಾರತೈತಿ ಆದ್ರ ಪಕ್ಕಿಲ್ಲ’, ’ಓಡ್ಯಾಡ್ತದ ಕಾಲಿಲ್ಲ, ಮುಟ್ಟತದ ಕೈಯಿಲ್ಲ’, ’ಬಿಸಿಲಿಗೆ ಒಣಗೋದಿಲ್ಲ, ಮಳಿ ಬಂದ್ರ ತೊಯ್ಯೋದಿಲ್ಲ’, ’ಸೂರ್ಯಾನ ಎದುರಿಗಿ ನಡಿತಾನ ಆದ್ರೆ ನೆರಳಿಲ್ಲ’, ’ಹಿಡಿತೇನಿ ಅನ್ನಾವರ್ನ ಮಳ್ಳ ಮಾಡತೈತಿ’, ’ಅಂಗಡಿಯಲ್ಲಿ ಮಾರೊಲ್ಲಾ ತಕ್ಕಡಿಯಲ್ಲಿ ತೂಗೊಲ್ಲಾ ಅದಿಲ್ಲದಿದ್ದರೆ ಆಗೋಲ್ಲಾ’, ’ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೂದಿಲ. ಅದಿಲ್ಲದಿದ್ದರೆ ಕೆಲ್ಸ ನಡೆಯೋದಿಲ್ಲ. ’ಎಲ್ಲೆಲ್ಲಿಯೂ ಇರುವುದು ಎಲ್ಲರಲ್ಲಿಯೂ ಇರುವುದು, ಮುಟ್ಟಾಕ ಬರೋದಿಲ್ಲ’, ’ಕಣ್ಣಿಲ್ಲ, ಕಾಲಿಲ್ಲ, ದೇಹ’ ’ಇಲ್ಲ ದರೂ ನಡೀತೈತಿ, ನೆಲೆಗೆ ನಿಲ್ಲದೆ ಹಾರಾಡುವ ಕುದುರೆ ಯಾವುದು? ನೀರಿಗಿಂತ ತೆಳುವಾದ್ದು ಯಾವುದು?’ ಗಾಳಿಯನ್ನು ಕುರಿತಾದ ಈ ಎಲ್ಲ ಒಗಟುಗಳೂ ಅದರ ಅಮೂರ್ತಗುಣ, ಚಲನಶೀಲಗುಣ, ವ್ಯಾಪಕಗುಣ, ಮತ್ತು ಜೀವಂತಗುಣಗಳನ್ನು ತಿಳಿಸುತ್ತವೆ.

ನಿಸರ್ಗಶಕ್ತಿಯಾದ ಗಾಳಿಯ ಬಗೆಗಿನ ಇನ್ನೂ ಕೆಲವಾರು ಮುಖ್ಯ ಸಂಗತಿಗಳನ್ನು ಜನಪದರ ಮಾತುಗಳಿಂದ ಅವರ ಅನುಭವಗಳಿಂದ ಈ ಕೆಳಗಿನಂತೆ ಸಂಗ್ರಹಿಸಿ ಹೇಳಬಹುದು.

ಗಾಳಿಯ ಪ್ರಕಾರಗಳು ಪರಿಣಾಮಪ್ರಭಾವ ಇತ್ಯಾದಿ:

ಗಾಳಿಗಳಲ್ಲಿ ಹಲವಾರು ಪ್ರಕಾರಗಳುಂಟು ಅವುಗಳ್ಲಲಿ ಮೂಡಗಾಳಿ, ಪಡುಗಾಳಿ, ಆಷಾಡಗಾಳಿ,ಹರಿಶ್ಚಂದ್ರಗಾಳಿ, ಕುಂಬಾರಗಾಳಿ, ಹನುಮಾನಗಾಳಿ, ಸುಂಟರಗಾಳಿ, ದೆವ್ವ – ಗಾಳಿ, ಬಿರುಗಾಳಿ, ಮತ್ತು ಚಂಡಮಾರುತಗಳು ಮುಖ್ಯವಾದವುಗಳು.

ಮೂಡಗಾಳಿ:

ಮೂಡಣ ದಿಕ್ಕಿನಿಂದ ಬೀಸುವ ಗಾಳಿಯನ್ನು ಮೂಡಗಾಳಿ ಎಂದು ಕರೆಯುತ್ತಾರೆ. “ಶೀಗಿ ಹುಣ್ವಿ ಬುಟ್ಯಾಗ ಮೂಡಗಾಳಿ ಬರುತೈತಿ” ಎಂಬ ಜನಪದರ ನಂಬಿಕೆಯಲ್ಲಿ ಮೂಡಗಾಳಿ ಶೀಗಿಹುಣ್ಣಿವೆಗೆ ಹುಟ್ಟಿ ಬೀಸಲಿಕ್ಕೆ ಪ್ರಾರಂಭಿಸುತ್ತದೆ ಎಂಬುದರ ಸೂಚನೆ ಇದೆ. ಈ ಗಾಳಿ ಬೀಸಿದರೆ ರೈತನಿಗೆ ಪಸಲು ಚೆನ್ನಾಗಿ ಸಿಕ್ಕುತ್ತದೆ. ಮೂಡಣಗಾಳಿ ಬೀಸಿದರೆ ಬೆಳೆ ವಿಪುಲ” – ಎನ್ನುವ ನಂಬಿಕೆ ರಾಜಾಸ್ಥಾನದಲ್ಲಿಯೂ ಇದೆ.

[1] ಮೂಡಗಾಳಿ ಬೀಸಿದರೆ, ಹಿಂಗಾರು ಬೆಳೆಗಳೆಲ್ಲವೂ ಪರಿಪಕ್ವತೆಯನ್ನು ಪಡೆಯುತ್ತವೆ. ಆದುದರಿಂದ ಹಿಂಗಾರು ಬೆಳೆಗಳಿಂದ ಬಿಳಿಜೋಳ, ಗೋದಿ, ಹತ್ತಿ, ಕುಸುಬಿ, ಕಡ್ಲಿ, ಮೆಣಸಿನಕಾಯಿ, ಅಲಸಂದಿ ಮೊದಲಾದವುಗಳನ್ನು ’ಗಾಳಿಯ ಮೇಲಿನ ಫಲ’ ಎನ್ನುತ್ತಾರೆ. ಅಂದರೆ ಈ ಹಿಂಗಾರಿ ಬೆಳೆಗಳಿಗೆ ನೀರು ಬೇಕಾಗಿಲ್ಲ. ಕೇವಲ ಗಾಳಿ ಬೀಸಿದರೆ ಸಾಕು. ಅವು ಚೆನ್ನಾಗಿ ಮೈದುಂಬಿಕೊಂಡು, ಬೇಗ ಮಾಗುತ್ತವೆ, ಕೊಯಿಲೆಗೆ ಬರುತ್ತವೆ. ಹೀಗೆ ಹೊಲದಲ್ಲಿಯ ಪೈರು ಮಾಗಲು ಕಾರಣವಾದ ಈ ಮೂಡಗಾಳಿಯನ್ನು ’ಮೂಗಿಗಾಳಿ’ ಎಂತಲೂ ನಮ್ಮ ರೈತರು ಕರೆದುದು ಯಥೋಚಿತವಾಗಿದೆ.

. ಜಾನಪದ ಅಧ್ಯಯನ : ದೇ.ಜಗೌ: ಪು.೩೧೧.

ಮೂಡಗಾಳಿ ಬೀಸಲಿಕ್ಕೆ ಪ್ರಾರಂಭಿಸಿದರೆ, ಮಳೆ ಬರುವುದಿಲ್ಲವೆಂದು ಹಳ್ಳಿಗರು ತಿಳಿಯುತ್ತಾರೆ. ಆದುದರಿಂದ ಈ ಗಾಳಿ ಬೀಸಲು ಆರಂಭಿಸಿದಾಗ, ಭತ್ತ, ಹೈಬ್ರಿಡ್ ಜೋಳಗಳ ಸುಗ್ಗಿಯನ್ನು ಮಾಡಲನುವಾಗುತ್ತಾರೆ. ಸುಗ್ಗಿಯಲ್ಲಿ ಕಾಲಿನ ರಾಶಿಯನ್ನು ತೂರಲು ಇದೇ ಗಾಳಿ ಆವಶ್ಯಕವಾದುದು. ಆದುದರಿಂದ ರಾಶಿ ಮಾಡಲು ’ಉಪಯುಕ್ತವಾದ ಈ ಮೂಡಗಾಳಿಯನ್ನು ಕೆಲವು ರೈತರು ’ರಾಶೀಗಾಳಿ’ ಎಂತಲೂ ಕರೆಯುತ್ತಾರೆ. ಈ ’ರಾಶಿಗಾಳಿಯು ಬೀಸಿ ಸೂಸಿಹರಿಯಿತು ಕಣವು”೧ ಎಂದಿದೆ ಜನಪದ ತ್ರಿಪದಿಯಂದರಲ್ಲಿ.

ಮೂಡಗಾಳಿಗೆ ಮರದ ಎಲೆಗಳು ಹಣ್ಣಾಗಿ ಉದುರುತ್ತವೆ. ಮತ್ತು ದೊಡ್ಡ ಭತ್ತ ಜಳ್ಳಾಗುವ ಸಂಭವವೂ ಉಂಟು. ಆದರೆ ಈ ಗಾಳಿಗೆ ಮಾವಿನ ಬನಗಳ ಮೈಸಿರಿಯು ಮನೋಹಾರಿಯಾಗಿರುವುದು; ಮಾವಿನಮರ ಹೂ ಬಿಡಲಿಕ್ಕೆ ಪ್ರಾರಂಭಿಸಿ, ಹೂ ಗೊನೆಗಳಲ್ಲೆ ಗುಲಗಂಜಿ ಗಾತ್ರದ ಒಗರು ಮಿಡಿಗಳನ್ನು ತುಂಬಿ ನಿಂತಿರುವುವು. “ಗುಡಿಯ ಹುಣ್ಣಿವೆಗೆ ಗುಂಡಗಾಯಿ; ಹೋಳಿಹುಣ್ಣಿವೆಗೆ ಹೋಳಗಾಗಯಿ ಎಂಬಿತ್ಯಾದಿ ಗಾದೆಗಳು ಕನ್ನಡಿಗರಲ್ಲಿ ರೂಢವಾದದ್ದು, ಈ ಗಾಳಿಯ ಪರಿಣಾಮದಿಂದಲೇ.

ಮೂಡಗಾಳಿಯಲ್ಲಿ ಉಷ್ಣತೆ ಹೆಚ್ಚಿಗಿರುವುದರಿಂದ ನೆಲದ ನೀರನ್ನು ಸಾಧ್ಯವಾದಷ್ಟು ಬೇಗ ಹೀರಿ; ಅದನ್ನು ಬಿರಿಯುವಂತೆ ಮಾಡುತ್ತದೆ. ಈ ಗಾಳಿಯ ಭಯಂಕರ ಪ್ರಭಾವವನ್ನು ಕಂಡೇ ಜನಪದರು ’ಮೂಡಗಾಳಿಗೆ ನೆಲ ಕೂಡ ಬಿರಿಯುತ್ತದೆ’ ಎಂದು ಹೇಳುತ್ತಾರೆ. ಇನ್ನು ಮನುಷ್ಯರ ಗತಿಯೇನು? ಮೈ, ಕೈ, ಕಾಲು, ತುಟಿ, ಹಿಂಬಡ ಮೊದಲಾದವುಗಳೆಲ್ಲ ಮೂಡಗಾಳಿಗೆ ಒಡೆಯುತ್ತವೆ. ಮನುಷ್ಯನ ಇಡೀ ಶರೀರವೇ ಒಂದು ರೀತಿಯಲ್ಲ ಒಣಗಿದ ಗಿಡದಂತೆ ಕಾಣುತ್ತದೆ. ಆದುದರಿಂದಲೇ “ಮೂಡಗಾಳಿಗೆ ಮುಕುಳಿಯೆಲ್ಲ ಒಣಗಿತ್ತು” ಎಂಬುದೊಂದು ಗಾದೆ ಹುಟ್ಟಿ ಪ್ರಚಲಿತದಲ್ಲಿರಬೇಕು. ಇಂಥ ಮೂಡಗಾಳಿ ಬೀಸುವ ಸಂದರ್ಭದಲ್ಲಿ ಬೆಡಗಿನ ಲಲನೆಯರನ್ನು ನೋಡಬೇಕು; ಅವರ ಅಂದಚೆಂದವೆಲ್ಲ ಅಳಿದು ಹೋಗಿ ಅಸಹ್ಯ ಕಾಣುತ್ತಿರುತ್ತಾರೆ. ಈ ಸಂದರ್ಭದಲ್ಲಿ “ಆರು ದುಡ್ಡಿನ ಹೆಣ್ಣ ಮೂರು ದುಡ್ಡಿಗ ಮಾತಾಡೋದಿಲ್ಲ”, ಆದುದರಿಂದಲೇ “ಮೂಡ ಗಾಳ್ಯಗ ಹೆಣ್ಣ ನೋಡಾಕ ಹೋಗಬಾರ್ದು” ಎನ್ನುವ ನಂಬಿಗೆ ನಮ್ಮಲ್ಲಿ ರೂಢವಾಗಿದೆ. ಮೂಡಗಾಳಿ ಮಿಂದಾಗುವ ಇಂಥ ದುಷ್ಪರಿಣಾಮಗಳನ್ನು ತಿಳಿದುಕೊಂಡೇ ನಮ್ಮ ಹಳ್ಳಿಗರು “ಮೂಗಿ ಗಾಳಿ ಕಾಸಬಾರದು, ಚಾಡಿಮಾತು ಕೇಳಬಾರದು” ಎನ್ನುವ ಲೋಕರೂಢಿ ಮಾತನ್ನು ಹೇಳಿರಬೇಕು. ಆದುದರಿಂದ ಮೂಡಗಾಳಿಗೆ ಮೈಯೊಡ್ಡಿ ಕುಳಿತುಕೊಳ್ಳಬಾರದು. ಮೈತುಂಬ ಬಟ್ಟೆಹಾಕಿಕೊಂಡು ಶರೀರದ ರಕ್ಷಣೆ ಮಾಡಬೇಕು ಗರತಿಯಂತೆ; ಹೀಗೆ ಮೂಡಗಾಳಿಯಲ್ಲಿ ಮೈತುಂಬ ಬಟ್ಟೆಧರಿಸಿಕೊಳ್ಳುವುದನ್ನು ’ಮೂಲಾಡಗಾಳಿ ಗರತಿ’ ಎಂತಲೂ, ಅದೇ ಪಡುಗಾಳಿಯಲ್ಲಿ ಬೇಸಿಗೆಯ ಬೇಗೆಯಿಂದ ಸಾಧ್ಯವಾದಷ್ಟು ಬಟ್ಟೆ ಬಿಚ್ಚಿ, ಬರಿಮೈಯಲ್ಲಿ ಇರುವುದನ್ನು ’ಪಡುಗಾಳಿ ಹಾದರಗಿತ್ತಿ’ ಎಂತಲೂ ಜನಪದರು ಕರೆದಂತೆ ಕಾಣುತ್ತದೆ. ’ಮೂಡಗಾಳಿ ಗರತಿ, ಪಡುಗಾಳಿ ಹಾದರಗಿತ್ತಿ’ ಎನ್ನುವ ಗಾದೆಯ ಮಾತನ್ನು ಮೇಲಿನಂತೆಯೇ ಅರ್ಥೈಸಬೇಕಾಗುತ್ತದೆ.

ಮೂಡಗಾಳಿಗೆ ಕಾಗೆಯ ಬಣ್ಣ ಮತ್ತಷ್ಟು ಕಪ್ಪಾಗಿ ಮಿರಿ ಮಿರಿ ಮಿಂಚುವುದರಿಂದ ಅದಕ್ಕೆ ಹೊಸಕಳೆ ಉಂಟಾಗುತ್ತದೆ. ಆದುದರಿಂದಲೇ “ಮೂಡಗಾಳಿ ಚಿತ್ರ ಕಾಗಿಯ ಬಣ್ಣ ಮನಸ್ಯಾರಿಗಿ ಬರ್ತೈತಿ; ಮನಸ್ಯಾರ ಬಣ್ಣ ಕಾಗಿಗಿ ಹೊಕೈತಿ” ಎಂಬ ನಂಬಿಕೆ ರೂಢಿಯಲ್ಲಿದೆ. ಈ ಗಾಳಿಯ ಬೀಸುವಿಕೆಯಿಂದ ಮನುಷ್ಯನ ಆರೋಗ್ಯದಲ್ಲೂ ಬದಲಾವಣೆ ಕಂಡುಬರುತ್ತದೆ. ಕೆಮ್ಮು ನೆಗಡಿ, ಚಳಿಜ್ವರ ಮೊದಲಾದವುಗಳು ಅಂಟಿಕೊಳ್ಳುತ್ತವೆ. ಆದುದರಿಂದ ಈ ಗಾಳಿಯನ್ನು ’ಹೊಲಸುಗಾಳಿ’, ’ಕೆಟ್ಟಗಾಳಿ’ ಎಂದು ಸಾಮಾನ್ಯರು ಕರೆಯುವುದುಂಟು. ಇದೆ, ಗಾಳಿಗೆ ಹೆಚ್ಚಾಗಿ ಎಮ್ಮೆಗಳು ನಶಿಗೆ (ಬೆದೆ) ಬರುತ್ತವೆ ಎಂದು ಹಳ್ಳಿಗರ ನಂಬಿಕೆ.

ಪಡುಗಾಳಿ:

ಇದು ಪಡುವಣ ದಿಕ್ಕಿನಿಂದ ಬೀಸುವಗಾಳಿ. ಚಳಿಗಾಲದಲ್ಲಿ ಮೂಡಗಾಳಿ ಬೀಸಿ ಬೆಳೆಗಳಿಗೆ ಉಷ್ಣತೆಯನ್ನು ನೀಡಿ, ಅವು ಮಾಗಲಿಕ್ಕೆ ಕಾರಣವಾದರೆ, ಪಡುಗಾಳಿ ಬೇಸಿಗೆ ಕಾಲದಲ್ಲಿ ಬೀಸಿ, ಬೆಳೆಗಳಿಗೆ ಮನುಷ್ಯರಿಗೆ ತಂಪನ್ನುಂಟು ಮಾಡಿ ಹಿತವಾಗಿಸುತ್ತದೆ. ಹೆಸರು, ಅವರಿ, ಅಲಸಂದಿ, ಕಡ್ಲಿ ಮೊದಲಾದ ದ್ವಿದಳ ಧಾನ್ಯಗಳಲ್ಲದೆ, ಗೋದಿ, ಜೋಳ, ಮೊದಲಾದವುಗಳೂ ಪಡುಗಾಳಿಯ ತಂಪಿಗೆ ಚೆನ್ನಾಗಿ ಬರುತ್ತವೆ. ಮಾವಿನ ಮರದಲ್ಲಿಯ ಹೋಳುಗಾಯಿಗಳು ಈ ಗಾಳಿಯಿಂದ ಹುಳಿತುಂಬಿಕೊಳ್ಳುತ್ತವೆ. ಹುಣಸೆ ಕಾಯಿಗಳು ಸುಲಿಗಾಯಿಗಳಾಗಿ, ಹಣ್ಣಾಗಲು ಪ್ರಾರಂಭಿಸುತ್ತವೆ. ನೇರಿಲು ಮರ ಹೂಬಿಡಲಿಕ್ಕೆ ಪ್ರಾರಂಭಿಸುವುದು, ಬೇವಿನ ಮರಗಳೂ ಹೂ-ಹೊಂಚಲನನ್ನು ಬಿಟ್ಟು ಸೊವಡುಗಂಪನ್ನು, ಈ ಮೆಲುಗಾಳಿಯೊಂದಿಗೆ ಸುತ್ತಲು ಹರಡುವುವು. ದುಂಡು ಮಲ್ಲಿಗೆ ಅರಳಿ ಘಮಘಮಿಸುವುದು ಈ ತಂಗಾಳಿಯಲ್ಲೇ. ಹೀಗೆ ಈ ಗಾಳಿ ಸಸ್ಯಾದಿಗಳಿಗೆ ಪೂರಕವಾಗಿದೆಯೇ ವಿನಃ ಮಾರಕವಾಗಿಲ್ಲ. ಮನುಷ್ಯನಿಗೂ ತುಂಬ ಉಪಯುಕ್ತವಾದ ಗಾಳಿಯಿದು. ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲನ್ನು ನಿವಾರಿಸಿ, ಜನತೆಗೆ ತಂಪನ್ನುಂಟು ಮಾಡುವುವು ಪಡುವಣದ ಸುಳಿಗಾಳಿಯಲೆಗಳು, ಕೆಲವು ವೇಳೆ ಚಳಿಗಾಲದಲ್ಲಿ ಆಷಾಢಮಾಸದಲ್ಲೂ ಈ ಪಶ್ಚಿಮಗ ತಂಗಾಳಿ ಸುಯ್ಯೆಂದು ಬೀಸುವುದು.  ಈ ಗಾಳಿಯನ್ನೇ ಕುರಿತು ಹಾಡಿದಂತಿದೆ ಕೆಳಗಿನ ತ್ರಿಪದಿ:

ತಂಪು ತುಂಬಿದ ಗಾಳಿ, ಕಂಪು ಬನದೊಳು ಸುಳಿದು
ಸಂಪಾಗಿ ಬೀಸಿ ಗಲ್ಲಿಸಲು| ಬೆಂಗಾಟ
ಸೊಂಪು ನೋಡಿಲ್ಲಿ ಬನದೊಳಗೆ ||[2]

’ಪಡುವಣದ ತಂಗಾಳಿ ಬೀಸಿದರೆ ಮಂಗಕ್ಕೂ ಉಲ್ಲಾಸ’ ಎನ್ನುವ ಗಾದೆಯೊಂದಿದೆ. ಈ ಗಾದೆ ಸತ್ಯಸ್ಯ ಸತ್ಯವಾದುದು. ಏಕೆಂದರೆ ಪಡುವಣದ ಈ ತಂಗಾಳಿಯಿಂದ ಸೃಷ್ಟಿಯೆಲ್ಲವೂ ಸಂತೋಷಭರಿತವಾಗುತ್ತದೆ. ಉಲ್ಹಸಿತವಾಗುತ್ತದೆ ಮತ್ತು ಚೈತನ್ಯದಾಯಕವಾಗುತ್ತದೆ.

ಆದರೆ, ಒಮ್ಮೊಮ್ಮೆ ಈ ಗಾಳಿಯ ಅತಿಯಾದ ಬೀಸುವಿಕೆಯಿಂದ ಮಾವಿನಹೂವು ಕತ್ತರಿಸಿಕೊಳ್ಳುತ್ತವೆ ಮತ್ತು ಬೆಳೆಗಳ ಹಾಲೂ ಸೋರುತ್ತವೆ. ಆದರೂ ಮನುಷ್ಯ, ಪ್ರಾಣಿ ಮತ್ತು ಸಸ್ಯಾದಿಗಳೆಲ್ಲಕ್ಕೂ ಹಿತಕರವಾದುದು.

ಆಷಾಢ ಗಾಳಿ:

ಆಷಾಢಗಾಳಿಯು ನಮ್ಮ ಜನಪದರ ಬಾಯಿಯಲ್ಲಿ ಆಸ್ಯಾಡಗಾಳಿಯಾಗಿದೇ ಇದು ಪಶ್ಚಿಮದಿಕ್ಕಿನ ಹೆಚ್ಚು ವೇಗದ ಗಾಳಿಯಾಗಿದ್ದು, ಶ್ರಾವಣಮಾಸದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ಬೀಸಲಿಕ್ಕೆ ಪ್ರಾರಂಭಿಸುತ್ತದೆ. “ಆಸ್ಯಾಡದ ಮಳಿಗಾಳಿ ಬೀಸಿ ಬೀಸಿ ಹೊಡಿದಾಗ, ಹೇಸಿ ನನಜೀವ ಹೆಣ್ಣಾಗಿ ಆದ್ರೂ ಹುಟ್ಟಬಾರದಿತ್ತೆ?” ಎಂಬುದೊಂದು ಜನಪದರ ಅನುಭವದ ನುಡಿ, ಆಷಾಢದ ಮಳೆ ಮತ್ತು ಸುಯ್‌ಸುಯ್ ಎಂದು ಬೀಸುವ ತಂಗಾಳಿಗಳಲ್ಲಿ ರೈತ, ಇಡೀ ದಿನ ಹೊಲದಲ್ಲಿ ಯಾವ ಕೆಲಸವೂ ಇರುವುದಿಲ್ಲ. ಈ ಸಮಯದಲ್ಲಿ ಹೆಂಗಸರು ಮನೆಯ ಒಲೆಯ ಮುಂದೇ ಕುಳಿತು ಬೆಂಕಿಯಿಂದ ಚಳಿಯನ್ನು ಕಾಯಿಸುತ್ತ, ಕಡ್ಲಿ, ಹುರಿದು, ತಿನ್ನುತ್ತ, ಬಿಸಿಬಿಸಿ ಗುಗ್ಗರಿಗಳನ್ನು ಮೆಲ್ಲುತ್ತ, ಚಹಕುಡಿಯುತ್ತ ಕಾಲಕಳೆಯುತ್ತಿರುತ್ತಾರೆ. ಅದೇ ಗಂಡಸರು ಆಷ್ಯಾಡದ ಚಳಿ-ಗಾಳಿ-ಮಳೆಗಳಿಂದ ಹೊಲದಲ್ಲಿ ನಡುಗುತ್ತಿರುತ್ತಾರೆ. ಹೀಗೆ ಮಳೆಗಾಳಿಯ ಹೊಡೆತಕ್ಕೆ ಸಿಕ್ಕು ಅನೇಕ ರೀತಿಯಿಂದ ತೊಂದರೆಯನ್ನು ಎದುರಿಸುತ್ತ, ಹೊಲದಲ್ಲಿ ಶ್ರಮಿಸುವ ರೈತ ತನ್ನ ತಾಳ್ಮೆಯನ್ನು ಕಳೆದುಕೊಂಡು ಈ ಮೇಲಿನಂತೆ ಮಾತನಾಡುತ್ತಾನೆ. ಮೇಲಿನ ಈ ನುಡಿ ಆತನ ಹೃದಯದ ಅಳಲಾಗಿ ಹೊರಹೊಮ್ಮಿದೆ. ಈ ಆಷಾಢದ ಗಾಳಿಯಿಂದ ರೈತನಿಗೆ ಎಷ್ಟೇ ತೊಂದರೆಯಾದರೂ, ಮುಂದೆ ಅದು ಆತನಿಗೆ ಅನ್ನವನ್ನು ದೊರಕಿಸಿಕೊಡುವಂಥದು. ಆದುದರಿಂದಲೇ ಈ ಆಷಾಢ ಮಾಸವನ್ನು ’ಬೆಟಗೇರಿ ಕೃಷ್ಣಶರ್ಮರು’ “ಅನ್ನದೇವತೆಯ ಆರಾಧನಾಕಾಲ’[3]ವೆಂದು ಕರೆದಿದ್ದಾರೆ.

ಆಷಾಢದ ಗಾಳಿ ಬೀಸಿದರೆ ಮಳೆ ಖಂಡಿತ ಬರುತ್ತದೆನ್ನುವ ನಂಬಿಕೆಯಿದೆ. ಆದುದರಿಂದ ಆಷಾಢಮಾಸದ ಮಳೆಗಳನ್ನು “ಮಲೆನಾಡಿನ ರೈತರಿಗೆ ಭಾಷೆಕೊಟ್ಟ ಮಳೆಗಳು” ಎಂದು ಹೇಳುತ್ತಾರೆ. ಇದಕ್ಕೆ ಜನಪದ ತ್ರಿಪದಿಯೂ ಒಂದು ಸಾಕ್ಷಿ ನುಡಿಯುತ್ತದೆ.

ಆಸಾಡಿ ಮುಂದಾಗಿ ಬಿಸ್ಯಾವ ಈ ಗಾಳಿ
ಮೋಸ ಮಾಡ್ಯಾವ ಮಗಿಮಳಿ| ಉತ್ರಿ ಸಾತಿ
ಬಾಸೆಕೊಟ್ಟಾವ ಬಡವರಿಗೆ||[4]

ಆಷ್ಯಾಢದ ಗಾಳಿ ಬೀಸಿದರೆ  ಉತ್ತರಿ ಮಳೆ ಬಂದೇ ಬರಬೇಕು. ಈ ಗಾಳಿ ಬೀಸದೆ ಇದ್ದರೆ ಉತ್ತರಿ ಮಳೆ ಆಗುವುದಿಲ್ಲ ಎನ್ನುವ ನಂಬಿಕೆಯೂ ಹಳ್ಳಿಗರಲ್ಲಿದೆ. ಆದುದರಿಂದಲೇ “ಉತ್ತರೆ ಬರದೇ ಇದ್ದರೆ, ಹೆತ್ತಮ್ಮ ಬಿಟ್ಟುಹೋದರೆ ಮುತ್ತು ಮಣ್ಣಾದರೆ, ಲೋಕದಲ್ಲಿ ಬೈಗು-ಬೆಳಗು ಆಗುವುದು ಹೇಗೆಂದು”[5] ಸರ್ವಜ್ಞ ಕೇಳಿದಲ್ಲಿ ಉತ್ತರೆಯ ನಿಶ್ಚಿತತೆಯನ್ನೇ ತಿಳಿಸಿದ್ದಾನೆ. ಇನ್ನು ’ಸ್ವಾತೀ’ ಮಳೆಯೂ ಬಯಲು ಸೀಮೆಯ ರೈತರು ಬಿತ್ತಿದ ಹಿಂಗಾರಿ ಬೆಳೆಗಳಿಗೆ ರಸಚೇತನವನ್ನುಂಟು ಮಾಡುವಂತಹುದು. ಆ ಕಾರಣದಿಂದಲೇ “ಸ್ವಾತೀ ಮಳಿ ಹೋದಮ್ಯಾಗ ಐತೇನು?” ಎಂಬ ಒಕ್ಕಲಿಗನ ನುಡಿ ಬೆಳವಲನಾಡಿನಲ್ಲಿ ರೂಢವಾಗಿದೆ. “ಸ್ವಾತಿಯ ಹನಿಯಿಂದ ಜಾತಿ ಮುತ್ತಾಗುವುದು ಕವಿಸಮಯದ ಮಾತು ಎನಿಸಬಹುದಾದರೂ, ಬೆಳವಲನಾಡಿನ ಬಿಳಿಜೋಳದ ತೆನೆಗಳಲ್ಲಿ ಅದು ಮುತ್ತಿನಗೊಂಚಲವನ್ನು ಹೆಣೆಯುವುದು, ಅನುಭವಸಿದ್ಧವಾದ ಮಾತು. ಕಡಲೆ ಗೋದಿಗಳ ಬೆಳೆಗಳಿಗಂತೂ ಸ್ವಾತಿಯ ಹದ ಮಳೆಯೇ ಚೈತನ್ಯದಾಯಿ.”[6]

ಆಷಾಢದ ಹಗಲು ಹದಿಮೂರು ತಾಸಿನವು. ಇಡೀ ಹಗಲಿನಲ್ಲಿ ದುಡಿಯುವ ಒಕ್ಕಲಿಗ ಮತ್ತು ಆತನ ದನಗಳು ಆಷಾಢದ ಗಾಳಿಯಿಂದ ಮೇಲಿಂದ ಮೇಲೆ ಆಹಾರವನ್ನು ಬಯಸುತ್ತವೆ. ಅಂದರೆ ಈ ಗಾಳಿಗೆ ಒಕ್ಕಲಿಗರಿಗೂ, ಅವರ ದನಗಳಿಗೂ ಹಸಿವು ಹೆಚ್ಚಾಗುತ್ತದೆ. ಆಷಾಢ ಗಾಳಿಗೆ ಹಸಿವು ಹೆಚ್ಚೆಂಬ ಅನುಭವವನ್ನು ನಮ್ಮ ಜನಪದರು ಈ ರೀತಿ ಗಾದೆಗಳ ಮೂಲಕ ತೋಡಿಕೊಂಡದ್ದುಂಟು. “ಒಟ್ಟಿದ ಬಣವಿ ಹಾಕಿದ ಹಗೆ, ಬಟ್ಟಬರಿದಾಗಿಸೋದು ಈ ಆಷಾಢ ತಿಂಗಳು”, ಅಲ್ಲದೆ “ಆಷಾಢದ ಗಾಳಿ ಬೀಸಿದಾಗ ಆರು ತಿಂಗಳ ಗ್ರಾಸ ಮೂರೇ ತಿಂಗಳಿಗೆ” ಎಂಬುದಾಗಿ, ಅದೇ ಅರ್ಥ ನೀಡುವ ಇನ್ನೊಂದು ಗಾದೆಯಿದೆ. “ಯಾಕ ಅಳತೀ ಹೊಲಿಯಾ ಎಂದರೆ, ಮುಂದ ಬರುವ ಆಷಾಢಕ್ಕಾಗಿ ಎಂದ” ಎನ್ನುವ ಮತ್ತೊಂದು ಗಾದೆಯೂ ಇದೆ. ನಮ್ಮ ಹಿಂದಿನ ಸಾಮಾಜಿಕ ಪದ್ಧತಿಯಲ್ಲಿ ಹೊಲೆಯನಾದವನು ರೈತನನ್ನೇ ಅವಲಂಬಿಸಿ ಬದುಕಬೇಕಾಗಿತ್ತು. ಆಷಾಢದಲ್ಲಿ ರೈತನಲ್ಲಿಯ ಕಾಳು-ಕಡಿ ತೀರಿಹೋದಾಗ, ಹೊಲೆಯನ ಹೊಟ್ಟೆಯ ಪಾಡೇನು? ಸ್ವತಂತ್ರವಾದ ಬದುಕು ಅಂದು ಹೊಲೆಯನದಾಗಿರಲಿಲ್ಲ. ರೈತನನ್ನೇ ಅವಲಂಬಿಸಿ ಬಾಳುವ ಈತನಿಗೆ ಕಾಳು-ಕಡಿ ಸಂಗ್ರಹಿಸಿಡುವ ಅವಶ್ಯಕತೆಯಾದರೂ ಏನು? ಆದುದರಿಂದಲೇ ಆತನ ಜೀವನದ ಈ ರೀತಿಯನ್ನು ’ಹೊಲೆಯನ ಸುಗ್ಗಿ ಒಲಿಮ್ಯಾಲ’ ಎಂಬ ಗಾದೆ ಚಿತ್ರಿಸುತ್ತದೆ. “ಅತ್ತೀ ಮನೆಯ ಸೊಸೆ ಆಷಾಢ ತಿಂಗಳ ಕಳೆದ್ಹಾಂಗ” ಎಂಬ ನಾಡನುಡಿಯೂ ಇದೆ. ಇಲ್ಲೆಲ್ಲ ಆಷಾಢ ತಿಂಗಳ ಕಷ್ಟಕ್ಲೇಶಗಳೇ ಇರುವುದು ಗೊತ್ತಾಗುತ್ತದೆ. ಆದರೆ ಈ ತಿಂಗಳಲ್ಲಿ ಬರುವ ಕಷ್ಟಕ್ಲೇಶಗಳಿಗೆ ಮಳಿ ಗಾಳಿಗಳೇ ಮೂಲಕಾರಣವೆಂಬುದನ್ನು ಮರೆಯಲಾಗದು.

ಆಷಾಢದ ಗಾಳಿಯಿಂದ ಭತ್ತ ಹೊಟ್ಟೆಯುಬ್ಬಿ, ಹೊಡೆಬಿಚ್ಚಿ ಹೂವಾಡಿಸುತ್ತದೆ. ಕಬ್ಬಿನ ಮಳೆ, ಹತ್ತಿಯ ಹೊಲಗಳೂ ಈ ಗಾಳಿಗೆ ಜೀವಪಡೆದುಕೊಂಡು ಸುಂದರವಾಗಿ ಕಾಣುತ್ತವೆ.

ಹರಿಶ್ಚಂದ್ರ ಗಾಳಿ:

ಹರಿಶ್ಚಂದ್ರ ಗಾಳಿಯು ಉತ್ತರದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ಬೀಸುತ್ತದೆ. ಈ ಗಾಳಿಗೆ ’ಹರಿಶ್ಚಂದ್ರ ಗಾಳಿ’ ಎನ್ನಲು ಕಾರಣವೇನೆಂದು ಹಳ್ಳಿಗರನ್ನು ಕೇಳಿದರೆ-ರಾಜಾ ಹರಿಶ್ಚಂದ್ರನು ಉತ್ತರದ ಕಾಶಿಯಲ್ಲಿ ರಾಜ್ಯವಾಳುತ್ತಿದ್ದೆ. ಆದುದರಿಂದ ಆತನಿರುವ ಕಡೆಯಿಂದ ಬೀಸುವ ಗಾಳಿಯನ್ನು ’ಹರಿಶ್ಚಂರ ಗಾಳಿ’ ಅಥವಾ ’ಹರಿಚಂದ್ರ‍್ಯಾನ ಗಾಳಿ’ ಎಂದು ಕರೆಯುತ್ತೇವೆ ಎನ್ನುತ್ತಾರೆ. ಈ ಬಗೆಗೆ ಇನ್ನೂ ಕೆಲವು ಕಾರಣಗಳನ್ನು ಕೊಡುತ್ತಾರೆ. ಗಾಳಿಯಿಲ್ಲದೆ ಮಳೆ ಬರಲಾರದು. ಒಮ್ಮೆ ಮಳೆ ಬಾರದ್ದರಿಂದ, ಹರಿಶ್ಚಂದ್ರನ ಪ್ರಜೆಗಳು, ಆತನಿಗೆ ಮೊರೆ ಹೋಗುತ್ತಾರಂತೆ. ಆಗ ಹರಿಶ್ಚಂದ್ರ ಮಳೆ ಬರಿಸುವಂತೆ ಗಾಳಿದೇವನಿಗೆ ಬೇಡಿಕೊಳ್ಳುತ್ತಾನೆ. ಇದರಿಂದ ಗಾಳಿ ಬೀಸಿ ಮಳೆ ಸುರಿಯುತ್ತದೆ. ಹರಿಶ್ಚಂದ್ರ ಮಾಡಿದ ಈ ಪವಾಡದಿಂದ ಬೀಸಿದ ಗಾಳಿಯನ್ನು ಹರಿಶ್ಚಂದ್ರ ಗಾಳಿ’ಯೆಂದು ಅಂದಿನಿಂದ ಕರೆಯುತ್ತ ಬಂದಿದ್ದಾರಂತೆ. ಇನ್ನೊಂದು ಕಾರಣವನ್ನು ಹೀಗೆ ಹೇಳುತ್ತಾರೆ: ಹರಿಶ್ಚಂದ್ರನ ಸತ್ಯಕ್ಕೆ ಮೆಚ್ಚಿದ ವಿಶ್ವಾಮಿತ್ರ, ಹರಿಶ್ಚಂದ್ರನಿಗೆ ನಿನಗೆ ಏನು ವರಬೇಕೆಂದು ಕೇಳಿದನಂತೆ, ಅದಕ್ಕೆ ಹರಿಶ್ಚಂದ್ರ ನಾನಿರುವ ದಿಕ್ಕಿನಿಂದ ಗಾಳಿ ಬೀಸಿ, ಅದರಿಂದ ಮಳೆಯಾಗಿ, ಜನತೆಗೆ ಸುಖವಾಗಬೇಕೆಂದು ವರ ಕೇಳಿದನಂತೆ ವಿಶ್ವಾಮಿತ್ರ ಆಗಲಿ ಎಂದಾಗ, ಹರಿಶ್ಚಂದ್ರನಿರುವ ಕಡೆಯಿಂದ ಗಾಳಿ ಬೀಸಿತಂತೆ, ಅಂದಿನಿಂದ, ಆ ಗಾಳಿಯನ್ನು ’ಹರಿಶ್ಚಂದ್ರ ಗಾಳಿ’ ಎಂದು ಕರೆಯುತ್ತಾರಂತೆ.

ಈ ಗಾಳಿಗೆ ಕೆಲವರು ’ಸುಡಗಾಡುಗಾಳಿ’ (ವಿಜಾಪುರ ಕಡೆಗೆ) ಎಂತಲೂ ಕರೆಯುತ್ತಾರೆ. ಏಕೆಂದರೆ ಹರಿಶ್ಚಂದ್ರ ಸುಡುಗಾಡ ಕಾಯಲಿಲ್ವೆ? ಆ ಕಡೆಯಿಂದ ಬೀಸುವ ಗಾಳಿಯನ್ನು ’ಸುಡುಗಾಡುಗಾಳಿ’ಯೆಂದು ಸಹಜವಾಗಿಯೇ ಕರೆದಿದ್ದಾರೆ. ಸಾಮಾನ್ಯವಾಗಿ ’ಸುಡುಗಾಡು’ಗಳೂ ಕೂಡ ಊರ ಉತ್ತರಕ್ಕೆ ಇರುತ್ತವೆ ಎಂಬ ತಿಳುವಳಿಕೆ ಜನಪದರುದು. ಹಾಗಾಗಿ, ಹರಿಶ್ಚಂದ್ರ ಆಳಿದ ದಿಕ್ಕೂ, ಸ್ಮಶಾನ ಕಾಯ್ದ ದಿಕ್ಕೂ ಉತ್ತರವೇ ಆದುದರಿಂದ, ಹರಿಶ್ಚಂದ್ರ ಗಾಳಿ ಉತ್ತರದಿಂದಲೇ ಬೀಸುತ್ತದೆ ಎಂದು ಹೇಳುತ್ತಾರೆ.

ಈ ಗಾಳಿ ಮಳೆಗಾಲ ಬಿಟ್ಟು ಯಾವಾಗಲೋ ಒಮ್ಮೆ ಬೀಸಿ ಮಾಯವಾಗುವ ಅಪರೂಪದ ಗಾಳಿ, ಜನೇವರಿ, ಫೆಬ್ರುವರಿ, ಮಾರ್ಚ್‌ಗಳಲ್ಲಿ ಇದು ಹೆಚ್ಚಾಗಿ ಬೀಸುವುದುಂಟು. ಅಂದರೆ ಸುಗ್ಗಿಯ ಸಮಯದಲ್ಲಿ. ಈ ಸಮಯದಲ್ಲಿ ಅದರ ತಂಪುಗುಣದಿಂದ ಹರಿಶ್ಚಂದ್ರಗಾಳಿ ಬೀಸುತ್ತದೆ ಎಂದು ಹಳ್ಳಿಗರು ಗುರುತಿಸುತ್ತಾರೆ. ಈ ಗಾಳಿ ಬೀಸಿದ ಮೂರು ದಿನಗಳೊಳಗಾಗಿ ಐದು ಹನಿಯಾದರೂ ಮಳೆ ಆಗಿಯೇ ಆಗುತ್ತದೆ ಎಂಬ ನಂಬಿಕೆಯಿದೆ. ಸತ್ಯಕ್ಕೆ ಹರಿಶ್ಚಂದ್ರ ಪ್ರತೀಕನಾದುದರಿಂದ, ಆತನ ಗಾಲಿ ಬೀಸಿದರ,ಎ ಮಳೆ ಖಂಡಿತ ಹುಸಿಹೋಗಲಾರದು; ಆತನಂತೆ, ಆತನ ಗಾಲಿಯೂ ಪರಿಣಾಮವೂ ಸತ್ಯವಾದುದು. ಹರಿಶ್ಚಂದ್ರ ಗಾಳಿಯ ಮುಖ್ಯ ಗುಣ ತಂಪನ್ನುಂಟು ಮಾಡುವುದು. ಗಾಳಿ ತಂಪಾಗಿ ಬೀಸಿದರೆ ಮಳೆ ಬರುತ್ತದೆನ್ನುವ ನಂಬಿಕೆಯೂ ಇದೆ. ಆದುದರಿಂದ ’ಹರಿಶ್ಚಂದ್ರ ಗಾಳಿ’ ಬೀಸಿದರೆ ಮಳೆ ಖಂಡಿತ ಬರುತ್ತದೆಂದೂ ಹೇಳುತ್ತಾರೆ. ಇದಕ್ಕೆ ಜನಪದ ತ್ರಿಪದಿಯೊಂದರಲ್ಲಿಯೂ ಆಧಾರ ಸಿಕ್ಕುತ್ತದೆ.

ಹರಿಚಂದ ಗಾಳಿಗಳು ಭರದೆ ಬೈಲಿಗೆ ಬೀಸಿ
ಸುರಿಮಳೆಯು ನಮ್ಮ ಬೆಳವಲಕೆ| ಕೋಳೂರ
ಬರಿಗಾಳಿ ಬೀಸಿ ಹಗೆತುಂಬಿ||[7]

ಸರ್ವಜ್ಞ ಕವಿಯೂ ಕೂಡ “ಬಡಗಲು ಗಾಳಿ ನಡೆಯಲು-ಮಳೆ ತಾನು ತಡೆಯದೆ ಬಹುದು”[8] ಎಂಬ ತನ್ನ ಮಾತಿನಲ್ಲಿ ಹರಿಶ್ಚಂದ್ರ ಗಾಳಿಯ ಪರಿಣಾಮವನ್ನೇ ಸೂಚಿಸಿದ್ದಾನೆ.

ಕುಂಬಾರಗಾಳಿ:

ಈ ಗಾಳಿ ದಕ್ಷಿಣದಿಂದ ಉತ್ತರಕ್ಕೆ ಬೀಸುತ್ತದೆ. ಕುಂಬಾರನ ಆವಿಗೆ ಹೆಚ್ಚಾಗಿ ದಕ್ಷಿಣಕ್ಕೆ ಮುಖಮಾಡಿರುತ್ತವೆ. ದಕ್ಷಿಣದಿಂದ ಗಾಳಿಬೀಸಿದರೆ ಮಾತ್ರ ಆತನ ಒಲೆ ಉರಿಯಲು ಸಹಾಯವಾಗುತ್ತದೆ. ಕುಂಬಾರನಿಗೆ ಹೆಚ್ಚಾಗಿ ಉಪಯುಕ್ತವಾದ ಈ ಗಾಳಿಯನ್ನು ’ಕುಂಬಾರ ಗಾಳಿ’ ಎಂದು ಕರೆಯುತ್ತಾರೆ. ಕೆಲವರು ’ಕುಂಬಾರ ಗಾಳಿ’ಯ ಹೆಸರಿನ ಬಗೆಗೆ ಬೇರೆ ಕಾರಣವನ್ನೇ ಹೇಳುತ್ತಾರೆ. ಒಂದು ದಿನ ಕುಂಬಾರನ ಒಲೆ ಗಾಳಿಯಿಲ್ಲದೆ ಇರುವುದರಿಂದ ಉರಿಯಲಿಲ್ಲವಂತೆ, ಮಡಿಕೆಗಳು ಸುಡಲಿಲ್ಲವಂತೆ ಆಗ ಕುಂಬಾರ ಒಲೆ ಉರಿಯಲು ದಕ್ಷಿಣ ದಿಕ್ಕಿನಿಂದ ಗಾಳಿಯ ಸಹಾಯ ಕೋರಿ ಮೊರೆ ಇಟ್ಟನಂತೆ. ಅವನ ಮೊರೆಗೆ ಕಿವಿಗೊಟ್ಟ ಗಾಳಿದೇವ ದಕ್ಷಿಣದಿಕ್ಕಿನಿಂದ ಬೀಸಿದನಂತೆ; ಅದಕ್ಕೆ ’ಕುಂಬಾರಗಾಳಿ’ ಎಂದು ಹೆಸರಾಯಿತಂತೆಂದು ಹೇಳುತ್ತಾರೆ. ಇನ್ನು ಕೆಲವು ಕುಂಬಾರ ತನ್ನ ಗಡಿಗೆಗಳನ್ನು ಸುಡುವ ಸಮಯದಲ್ಲಿ ಒಲೆ ಉರಿಯಲಿಲ್ಲವಂತೆ, ಆಗ ಆತ ದಕ್ಷಿಣಕ್ಕೆ ಮುಖಮಾಡಿ, ತನ್ನಲ್ಲಿರುವ ಮುಚ್ಚಳದಿಂದ ಗಾಳಿಯನ್ನು ಬೀಸಿದನಂತೆ, ಒಲೆ ಉರಿದು, ಗಡಿಗೆಗಳು ಸುಟ್ಟುವಂತೆ, ಹೀಗೆ ಕುಂಬಾರ ಬರಿಸಿದ ಗಾಳಿಯನ್ನು ’ಕುಂಬಾರಗಾಳಿ’ಯೆಂದು ಕರೆಯುತ್ತಾರೆಂದು ಹೇಳುತ್ತಾರೆ.

’ಕುಂಬಾರಗಾಳಿ’ ಬೀಸಿದರೂ ಮಳೆ ಬರುತ್ತದೆ ಎನ್ನುವ ನಂಬಿಕೆ ಇದೆ. “ತೆಂಕಲು ಮುಗಿಲಡರೆ ಮಳೆಯು ಭೋಂಕನೆ ಬಕ್ಕುದೆಂದು”[9] ಸರ್ವಜ್ಞ ಕೂಡ ಹೇಳುತ್ತಾನೆ. ಮಳೆಯಿಲ್ಲದ ಕಾಲದಲ್ಲಿ ಈ ಗಾಳಿ ಬೀಸಿದರೆ ಮಳೆ ಬರುತ್ತದೆನ್ನುವ ಸೂಚನೆ ರೈತನಿಗಾಗುತ್ತದೆ. ಹರಿಶ್ಚಂದ್ರ ಗಾಳಿಯಂತೆ, ಈ ಗಾಳಿಯೂ ನಿಯಮಿತವಾಗಿ ಬೀಸುವುದಿಲ್ಲ. ಯಾವಾಗಲಾದರೂ ಒಮ್ಮೆ ಬೀಸಿಹೋಗುತ್ತದೆ. ಹರಿಶ್ಚಂದ್ರ ಗಾಳಿಯ ನಂತರ ಈ ಗಾಳಿ ಬೀಸುತ್ತದೆಂದು ಹೇಳುತ್ತಾರೆ.

ಕುಂಬಾರಗಾಳಿ ಬೀಸಿದರೆ ದನಗಳಿಗೆ ’ಬಲವಿಲ್ಲ’ವೆಂದು ರೈತರು ಹೇಳುತ್ತಾರೆ. ಅಂದರೆ ಈ ಗಾಳಿ ಬೀಸಿದರೆ ದನಗಳಿಗೆ ರೋಗರುಜಿನಗಳು ಅಂಟಿಕೊಳ್ಳುತ್ತವೆ ಎಂದರ್ಥ.

ಹನುಮನಗಾಳಿ:

ಹನುಮನ ಗಾಳಿಯೂ ಕೂಡ ಕುಂಬಾರಗಾಳಿಯಂತೆ ದಕ್ಷಿಣದಿಂದ ಉತ್ತರಕ್ಕೆ ಬೀಸುತ್ತದೆ. ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಪ್ರಚಲಿತದಲ್ಲಿರುವ ಗಾಳಿಯಿದು. ಹನುಮಂತ ಎಲ್ಲಿದ್ದರೂ ದಕ್ಷಿಣಕ್ಕೇ ಮುಖ ಮಾಡಿರುತ್ತಾನೆ. ಆದುದರಿಂದ ದಕ್ಷಿಣದಿಂದ ಬೀಸುವ ಈ ಗಾಳಿಯನ್ನು ’ಹನುಮನಗಾಳಿ’, ’ಹನುಮನ ದಿಕ್ಕಿನ ಗಾಲಿ’, ’ಮೂಲಿಗಾಳಿ’ – ಎಂತಲೂ ಕರೆಯುತ್ತಾರೆ. ’ಮೂಡಗಾಳಿ’, ’ಪಡುಗಾಳಿ’ ಬೀಸುವ ಸಂದರ್ಭದಲ್ಲಿ ಇದು ಕೂಡಾ ಅಕಸ್ಮತ್ ಬೀಸುತ್ತದೆ. ಈ ಗಾಳಿಯ ಮೇಲಿಂದಲೂ ಮಳೆಯ ಬರುವಿಕೆಯನ್ನು ತಿಳಿಯುತ್ತಾರೆ. ಹನುಮನಗಾಳಿ ಬೀಸಿದರೆ ಮಳೆ ಖಂಡಿತ ಬರುತ್ತದೆಂದು ಚಿತ್ರದುರ್ಗ ಜಿಲ್ಲೆಯ ಜನರ ನಂಬಿಕೆ. ಈ ಗಾಳಿ ವರುಷಕ್ಕೆ ಒಮ್ಮೆಯಾದರೂ ಬೀಸೇ ಬೀಸುತ್ತದೆ. ಆದುದರಿಂದಲೇ ’ಹನುಮಂತನ ಗಾಳಿ ಬೀಸಿದೆ’ ಎಂಬ ಗಾದೆ ಹುಟ್ಟಿ ಕೊಂಡಿರಬೇಕು.

ಕುಂಬಾರ ಗಾಳಿ ಮತ್ತು ಹನುಮಂತನ ಗಾಳಿಗಳಲ್ಲಿ ಪ್ರಾದೇಶಿಕ ಭಿನ್ನತೆ ಹೆಸರುಗಳಲ್ಲಿ ಮಾತ್ರ ಇದ್ದಂತೆ ತೋರುತ್ತದೆ. ಅವೆರಡರ ಉಳಿದ ಗುಣಧರ್ಮಗಳು ಒಂದೇ ರೀತಿಯಾಗಿವೆ.

ಸುಂಟರಗಾಳಿ:

ಬೇಸಿಗೆಯ ಕಾಲದಲ್ಲಿ ಬಹಳ ರಭಸದಿಂದ ಬೀಸುವ ಗಾಳಿಯಿದು. ಒಮ್ಮಿಂದೊಮ್ಮೆಲೆ ಎಲ್ಲಿಯೋ ಎದ್ದು, ಅಲ್ಲಿರುವ ಮನೆ, ಗುಡಿಸಲು, ಹುಲ್ಲು, ರವದಿ, ಬಟ್ಟೆ, ಬರೆ-ಮೊದಲಾದವುಗಳನ್ನು ಮುಗಿಲೆತ್ತರಕ್ಕೆ ಹಾರಿಸಿಕೊಂಡು ಹೋಗುತ್ತದೆ. ಇದರ ರಭಸಕ್ಕೆ ಗಿಡಮರಗಳೂ ಕಿತ್ತು ಬೀಳುತ್ತವೆ. ಈ ಗಾಳಿಯ ಹೊಡೆತಕ್ಕೆ ಸಿಕ್ಕ ಎಷ್ಟೊ ಮನುಷ್ಯರು, ಪ್ರಾಣಿಗಳು ಸುತ್ತುದುಂಟು. ಗುಡ್ಡ-ಬೆಟ್ಟಗಳು- ಯಾವುದೂ ಇಲ್ಲದ ಬಯಲು ಪ್ರದೇಶದಲ್ಲಿ ಈ ಗಾಳಿ ಯಾವ ಆತಂಕವೂ ಇಲ್ಲದೆ ಚೆನ್ನಾಗಿ ಬೀಸುತ್ತದೆ. ಪ್ರದೇಶಕ್ಕೆ ಅನುಗುಣವಾಗಿ ಸುಂಟರಗಾಳಿಯ ರಭಸದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಊರುಗಳಲ್ಲಿ ಬೀಸುವ ಸುಂಟರಗಾಳಿಯ ರಭಸ ಸ್ವಲ್ಪ ಕಡಿಮೆ ಪ್ರಮಾಣವುಳ್ಳದ್ದಾದರೆ, ಹೊಲಗದ್ದೆಗಳಲ್ಲಿ ಬೀಸುವ ಅದರ ರಭಸ ಹೆಚ್ಚಿಗಿರುತ್ತದೆ; ಬಯಲು ಸೀಮೆಯಲ್ಲಿ ಅದು ಇನ್ನೂ ಹೆಚ್ಚಾಗಿ ರಭಸದಿಂದ ಬೀಸುತ್ತದೆ. ಇದಕ್ಕೆ ಕಾರಣ, ಈ ಗಾಳಿ ಬೀಸಲು, ಗುಡ್ಡಾ-ಬೆಟ್ಟ, ಗಿಡಮರ-ಮೊದಲಾದವುಗಳ ತಡೆ ಇಲ್ಲದೆ ಇರುವುದು, ಸುಂಟರಗಾಳಿ ಮೊದಲು ಸಣ್ಣಗಾತ್ರದಲ್ಲಿ ಹುಟ್ಟಿ, ಸಿಕ್ಕ ವಸ್ತುಗಳನ್ನೂ ಹಾರಿಸುತ್ತ ಹರಿಸುತ್ತ ಸುಂಯ್ ಸುಂಯ್ ಎಂದು ಸುಳಿಸುಳಿಯಾಗಿ (ವರ್ತುಲಾಕಾರವಾಗಿ) ತಿರುಗುತ್ತ, ತನ್ನಗಾತ್ರವನ್ನು ವಿಸ್ತರಿಸುತ್ತ ಬಹಳ ವೇಗದಿಂದ ಆಕಾಶಕ್ಕೆ ನೆಗೆಯುತ್ತದೆ. ಇದು ಬೀಸುವಾಗ ’ಸುಂಯ್’ ’ಸುಂಯ್’ ಎಂದು ಶಬ್ದಮಾಡುವುದರಿಂದ ’ಸುಂಟರಗಾಳಿ’? ಯೆಂದು ಕರೆದಿರಬೇಕು ಕೆಲವೊಮ್ಮೆ ಇದು ’ಬರ್ ಬರ್’ ಎಂದೂ ಶಬ್ದಮಾಡುವುದುಂಟು. ಸುಂಟರಗಾಳಿಯಿಂದ ಯಾವ ಉಪಯೋಗವೂ ಇಲ್ಲ; ಅಪಾಯ ಮಾತ್ರ ಇದೆ. “ಗ್ರಾನ್ ಚಾಕೋದ ಲೆಂಗುವಾ ಇಂಡಿಯನ್ನರು ಸುಂಟರಗಾಳಿ ಬಂದರೆ ಭೂತದ ಚಲನ ಎಂದು ತಿಳಿಯುತ್ತಾರಂತೆ[10]” – ಬಹುಶಃ ಅವರು ದೆವ್ವಗಾಳಿಯನ್ನೇ ಸುಂಟರಗಾಳಿ ಎಂದು ತಿಳಿದಂತೆ ಕಾಣುತ್ತದೆ.

ದೆವ್ವಗಾಳಿ:

ಕೆಲವರು ಸುಂಟರಗಾಳಿಗೇ ದೆವ್ವಗಾಳಿ ಎನ್ನುತ್ತಾರೆ. ಆದರೆ ದೆವ್ವಗಾಳಿ ಬೇರೆ, ಸುಂಟರಗಾಳಿ ಬೇರೆ. ದೆವ್ವಗಾಳಿ ಸುಂಟರಗಾಳಿಯಷ್ಟು ಮೇಲಕ್ಕೆ ಹಾರದಿದ್ದರೂ, ಅದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಬೀಸುತ್ತದೆ. ಇದರ ಬೀಸುವಿಕೆಯ ಗಾತ್ರ ಬಹಳ ಹರವಾದುದು (ಕಣಜಾಕಾರ), ಭಯಂಕರ ಗಾಳಿಯದು. ಇದೂ ಕೂಡ ಬೇಸಿಗೆಯಲ್ಲಿ ಕಂಡುಬರುತ್ತದೆ. ದೆವ್ವಗಾಳಿಗೆ ಸಿಕ್ಕ ವಸ್ತುಗಳಲ್ಲಿ ನುಚ್ಚುನೂರಾಗುತ್ತವೆ. ಚಿಕ್ಕಮಕ್ಕಳು ಈ ಗಾಳಿಗೆ ಭಯಪಡುತ್ತಾರೆ. ದೆವ್ವಿನ ಭಯಂಕರತೆ ಈ ಗಾಳಿಯಲ್ಲಿ ಕಾಣಬರುವುದರಿಂದ, ಇದಕ್ಕೆ ’ದೆವ್ವಗಾಳಿ’ ಎಂದು ಕರೆಯುತ್ತಾರೆ. ಈ ಗಾಳಿ ಬೀಸಲಿಕ್ಕೆ ಪ್ರಾರಂಭಿಸಿದರೆ ದೆವ್ವ ಬರುತ್ತದೆನ್ನುವ  ನಂಬಿಕೆಯಿದೆ. ಆದುದರಿಂದ ದೆವ್ವಗಾಳಿ ಎದ್ದಾಗ, ಅದು ತಮ್ಮ ಹತ್ತಿರಕ್ಕೆ ಸುಳಿಯಬಾರದೆಂದು ’ಥೂ’ ಎಂದು ಉಗುಳುತ್ತಾರೆ. ಹೀಗೆ ಉಗುಳುವುದರಿಂದ ಗಾಳಿಯಲ್ಲಿರುವ ದೆವ್ವ ತಮ್ಮ ಹತ್ತಿರಕ್ಕೆ ಬರುವುದಿಲ್ಲ ಎನ್ನುವ ನಂಬಿಕೆಯೂ ರೂಢಿಯಲ್ಲಿದೆ. ಈ ಗಾಳಿ ಬೀಸುವಾಗ ಅದರಲ್ಲಿ ಒಂದಿಷ್ಟು ಉಪ್ಪು ಹಾಕಿದರೆ ಅದರಲ್ಲಿರುವ ದೆವ್ವ ಕಣ್ಣಿಗೆ ಕಾಣಿಸುತ್ತದೆ ಎಂಬ ನಂಬಿಕೆಯೂ ಪ್ರಚಲಿತವಿದೆ. “ದೆವ್ವ ಗಾಳಿ ಬಿಟ್ಟಾಗ ಅಗ್ಗಿಷ್ಟಿಗೆ (ಬಾಣಂತಿ ಬೆಂಕಿ) ಹೊರಗಿಡಬಾರದು” ಎಂಬ ನಂಬಿಕೆಯಲ್ಲಿ, ದೆವ್ವ ಅಗ್ಗಿಷ್ಟಿಯಲ್ಲಿ ಸೇರಿಕೊಂಡು, ಬಾಣಂತಿಗೆ ಬಡಿಯಬಾರದೆನ್ನುವ ಎಚ್ಚರಿಕೆ ಇದೆ, ಎಂದು ಹಳ್ಳಿಗರು ಹೇಳುತ್ತಾರೆ. ಗಾಳಿಗೆ ಅಗ್ಗಿಷ್ಟಿಗೆಯನ್ನು ತೆರೆದಿಟ್ಟರೆ, ಅದರಲ್ಲಿರುವ ಕಿಡಿಗಳು ಹಾರಿಹೋಗಿ ಅನಾವೃತವಾಗುವ ಸಂಭವ ಇರುತ್ತದೆ. ಆ ಕಾರಣದಿಂದಲೂ ಮೇಲಿನ ಮಾತನ್ನು ಹೇಳಿರಬೇಕು. “ದೆವ್ವಗಾಳಿಗೆ ಹಾರಿದ ರವದಿ ಬಾಯಾಗ ಹಿಡಿದ್ರ ಬಂಗಾರಾಗ್ತದ” ಎಂಬ ನಂಬಿಕೆಯೂ ಇದೆ. ಇದರಿಂದ ದೆವ್ವಗಾಳಿಯ ಭಯಂಕರತೆಯನ್ನು ಅರಿಯಬಹುದು. ಈ ಗಾಳಿಯಲ್ಲಿ ಕಣ್ಣು ತೆರೆಯಲಿಕ್ಕೂ ಆಗುವುದಿಲ್ಲ. ಅಂತಹದರಲ್ಲಿ, ಹಾರುವ ರವದಿಯನ್ನು ಬಾಯಲ್ಲಿ ಹಿಡಿಯಲು ಸಾಧ್ಯವೆ? ಇನ್ನು ಅದು ಬಂಗಾರಾಗುವುದು ದೂರದ ಮಾತು! ಆಗಾಗ್ಗೆ ಬೀಸುವ ಈ ಗಾಳಿಗೆ ಬೇಸತ್ತ ಹೆಣ್ಣು ಮಕ್ಕಳು “ಅಯ್ಯನನ ಹಾಟ್ಯಾನ ಗಾಳಿ” ಎಂದು ಬೈಯುವುದುಂಟು.

ಬಿರುಗಾಳಿ:

ವರುಷದ ಎಲ್ಲ ಕಾಲದಲ್ಲಿಯೂ ಬೀಸುವ ಬಿರುಸಾದ ಗಾಳಿಯಿದು. ಮೇ ನಂತರದ ತಿಂಗಳುಗಳಲ್ಲಿ ಇದು ಹೆಚ್ಚಾಗಿ ಬೀಸುತ್ತದೆ. ಭಯಂಕರವಾದ ಈ ಗಾಳಿ ಎಲ್ಲ ಜೀವಿಗಳಿಗೂ ಮಾರಕವಾದುದು. ಬಿರುಗಾಳಿ ಒಮ್ಮಿಂದೊಮ್ಮೆಲೆ ದೊಡ್ಡ ಪ್ರಮಾಣದಲ್ಲಿ ಅತೀ ತೀವ್ರವಾಗಿ ಬೀಸುವುದರಿಂದ ಗಿಡ, ಮರ, ಮನೆ, ಮೊದಲಾದವುಗಳಲ್ಲಿ ಕಿತ್ತು ಕಂಡು ಬೀಳುತ್ತವೆ; ಸಮುದ್ರದ ಹಡಗುಗಳೂ ಮುಳುಗುತ್ತವೆ. ಜೋಳ, ಭತ್ತ, ಕಬ್ಬು ಮೊದಲಾದ ಬೆಳೆಗಳೆಲ್ಲ ನಡಮುರಿದುಕೊಂಡು ನೆಲಕ್ಕೆ ಬೀಳುತ್ತವೆ. ಒಣಗಾಲಿಯಾದ ಇದು ಗಾಳಿಗಳಲ್ಲಿಯೇ ಅತೀ ಭಯಂಕರ ಸ್ವರೂಪವುಳ್ಳದು. ಈ ಗಾಳಿ ಯಾವುದನ್ನೂ ಲೆಕ್ಕಿಸದು, ತನಗೆ ಸಿಕ್ಕೊದೆಲ್ಲವನ್ನೂ ನಾಶಪಡಿಸುತ್ತದೆ. ಆದುದರಿಂದ ’ಬಿರುಗಾಳಿ ಬಲ್ಲುದೇ, ಬೇವಿನ ಕಹಿಯ?’  ಎಂಬ ಗಾದೆ ಹುಟ್ಟಿದೆ. ಬಿರುಗಾಳಿ ಬೀಸತೊಡಗಿದರೆ ಬೇಸಗೆ ಬಂತೆಂದು ಹಳ್ಳಿಗರು ತಿಳಿಯುತ್ತಾರೆ. “ಬಿರುಗಾಳಿ ಬೀಸಿ ಬೇಸಗೆ ಬಂದುದು” ಎಂದು ಕುಮುದೇಂದು ಕೂಡ ಹೇಳುತ್ತಾನೆ. ಬಿರುಗಾಳಿ ಮನುಷ್ಯ ಮತ್ತು ಸಸ್ಯಾದಿಗಳಿಗೆ ಮಾತ್ರ ಹಾನಿಕಾರಕವಲ್ಲ, ಪ್ರಾಣಿಗಳಿಗೂ ಇದರಿಂದ ಹಾನಿಯುಂಟಾಗುತ್ತದೆ. ಈ ಗಾಳಿಗೆ ಕುದುರೆಗಳಿಗೆ ಉಸಿರಾಟ ಸಂಬಂಧಿ ರೋಗ ತಗಲುತ್ತದೆ.

“ಬಿರುಗಾಳಿಗೆ ಮರ ಉರುಳಿಬಿದ್ದರೆ ಮುಂದಿನ ಕೆಟ್ಟ ಸೂಚನೆಯೆಂದು ನಂಬಿಕೆ. ಮೆಕ್ಬೆತ್ ನಾಟಕದಲ್ಲಿ ’ಲೆನೊಕ್ಸನು’ (Lenox) ಬಿರುಗಾಳಿಯ ರಾತ್ರಿಯಲ್ಲಿ ವಿಚಿತ್ರವಾದ ಮರಣದ ಚೀರಾಟಗಳು ಕೇಳಿಬಂದುವೆಂದೂ, ಹಾಗೆ ಕೊಳವೆಗಳನ್ನು ಬಿರುಗಾಳಿ ಬೀಸಿಕೆಡವಿತೆಂದೂ ಭೀಕರವಾದ ಸ್ವರದಲ್ಲಿ ಅನಿಷ್ಟಭವಿಷ್ಯದ ಸೂಚನೆಯಾಯಿತೆಂದೂ ಹೇಳುತ್ತಾನೆ”[11] “ದೈತ್ಯನೊಬ್ಬ ಗಾಳಿಯನ್ನು ಗವಿಯಲ್ಲಿ ಕೂಡ ಹಾಕಿ ಹಠಾತ್ತನೆ ಹೊರಗೆ ಬಿಟ್ಟಾಗ ಬಿರುಗಾಳಿ ಬೀಸುತ್ತದೆ- ದೈತ್ಯ ಪಕ್ಷಿಯ ರೆಕ್ಕೆ ಬಡಿತದಿಂದ ಗಾಳಿ ಉತ್ಪನ್ನವಾಗುತ್ತದೆ- ಗಾಳಿ ಅತಿಯಾದಾಗ ಸಾಹಸಿಯಬ್ಬ ಪಕ್ಷಿಯ ರೆಕ್ಕೆಗಳನ್ನು ಕೊಚ್ಚಬೇಕಾಗುತ್ತದೆ”[12] ಎನ್ನುವ ನಂಬಿಕೆಗಳು ಪುರಾಣೋಕ್ತವಾಗಿವೆ. “ದಕ್ಷಿಣ ಅಮೇರಿಕದ ಪಯಗುವಾ” ಜನರು ಬೆಂಕಿಕೊಳ್ಳಿ ಹಿಡಿದು  ಬಿರುಗಾಳಿಯ ಮೇಲೇರಿ ಹೋಗುತ್ತಾರೆ. ಆದರೆ ನಮ್ಮಲ್ಲಿ ಬಿರುಗಾಳಿ ರಭಸದಿಂದ ಬೀಸುವಾಗ, ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಬೇಕೆಂದು ನಂಬಿಕೆಯಿದೆ.

ಚಂಡಮಾರುತ:

’ಚಂಡಮಾರುತ’ವನ್ನು ’ತುಫಾನ ಗಾಳಿ’ ಎಂತಲೂ ಕರೆಯುತ್ತಾರೆ. ಇದು ಸಮುದ್ರದ ಮೇಲಿಂದ ಬೀಸುವ ಗಾಳಿ, ಚಂಡಮಾರುತ ಹೆಚ್ಚಾಗಿ ಜೂನ್‌ನಿಂದ ಅಕ್ಟೋಬರ್‌ವರೆಗೆ ಬೀಸುತ್ತದೆ. ಇದರ ಅತಿಯಾದ ತೀವ್ರತೆಯ ಪರಿಣಾಮವಾಗಿ ಪ್ರಬಲ ಮಾರುತಗಳು ಉಂಟಾಗುತ್ತವೆ. “ಇದರ ಬೀಸುವ ವೇಗ ಗಂಟೆಗೆ ೭೫ ಮೈಲಿಗಿಂತ ಅಧಿಕವಾಗಿರುತ್ತದೆ[13]. ಚಂಡಮಾರುತದ ಬಗೆಗೆ ಜನಪದರಲ್ಲಿ ಯಾವ ಮಾಹಿತಿಯೂ ದೊರಕುವುದಿಲ್ಲ.

ಇವೇ ಮೊದಲಾದ ಪ್ರಮುಖ ಗಾಳಿಗಳಲ್ಲದೆ, ಕೆಲವು ಅಪ್ರಮುಖವಾದ ಗಾಳಿಗಳನ್ನೂ ಜನಪದರು ತಿಳಿಸುತ್ತಾರೆ. ಅವುಗಳಲ್ಲಿ ಪ್ರಾದೇಶಿಕವಾದ ಭಿನ್ನತೆ ಇದ್ದುದು ಕಂಡುಬರುತ್ತದೆ. ಉದಾಹರಣೆಗೆ “ಗಂಗಿಗಾಳಿ” (ಉತ್ತರ ದಿಕ್ಕಿನ ಗಾಳಿ) ’ಬಸವಣ್ಣ ಗಾಳಿ’ (ದಕ್ಷಿಣದಿಕ್ಕಿನ ಗಾಳಿ-ಇದಕ್ಕೆ ಸುಳಿಗಾಳಿ ಎಂತಲೂ ಕರೆಯುತ್ತಾರೆ) ’ರಾಖಿವಾಲ (ದಕ್ಷಿಣ ದಿಕ್ಕಿನ ಗಾಳಿ)[14]” ಅಶೋಕನ ಗಾಳಿ (ದಿಕ್ಕೂ;?) ಇತ್ಯಾದಿ.

ಒಟ್ಟಿನಲ್ಲಿ ನಮ್ಮ ಜನಪದರ ದೃಷ್ಟಿಗೆ ’ಗಾಳಿ’ ದೈವವಾಗಿ, ದೆವ್ವವಾಗಿ ಮತ್ತು ಚಲಿಸಿಬೀಸುವ ಉಪಯುಕ್ತ ವಾಯುವಾಗಿ ಗೋಚರಿಸಿದೆ.

 ಅನುಬಂದ

 

ಕೆಲವು ನಂಬಿಕೆಗಳು:

೧. ತಂಪುಗಾಳಿ ಬೀಸಿದರೆ ಮಳೆ ಬರುತ್ತದೆ ಇಲ್ಲಾ ಬೇರೆ ಕಡೆಗಾದರೂ ಆಗುತ್ತಿರುತ್ತದೆ,

೨. ಗಾಳಿ ಬೀಸಿದ ದಿಕ್ಕಿನ ಕಡೆಗೇ ಮಳೆ ಬರುತ್ತದೆ, ಅಡಮಳೆಯ ಸಮಯದಲ್ಲಿ.

೩. ಮೋಡಿಗೆ ತಂಪುಗಾಳಿ ತಗುಲಿದರೆ ಮಳೆ ಬರುತ್ತದೆ.

೪. ಮೋಡಗಳನ್ನು ಗಾಳಿ ಹಿಡಿದುಕೊಂಡು ಬರುತ್ತದೆ.

೫. ತಂಪುಗಾಳಿಯಿಂದ ಕೂಡಿದ ಮಳೆಯನ್ನು ಮಿರಗನ ಮಳೆ ಎಂದು ಕರೆಯುತ್ತಾರೆ.

೬. ’ನ್ಯೂಗಿನಿಯ ಬಿಬಲಿ ದ್ವೀಪದ ಜನ ಗಾಳಿ ಬೀಸುವಂತೆ ಮಾಡಲು ಬಾಯಿಯಿಂದ ಹವೆ ಊದುತ್ತಾರೆ. ಕೆಲ ಜನಾಂಗಗಳವರು ಸಿಳ್ಳು ಹಾಕಿದರೆ ಗಾಳಿಬೀಸುವುದೆಂದು ತಿಳಿಯುತ್ತಾರೆ”. (ಮೂಢನಂಬಿಕೆಗಳು; ಡಾ. ಎಲ್.ಆರ್. ಹೆಗಡೆ, ಪು. ೨೭)

ಸಹಾಯಕ ಗ್ರಂಥಗಳು

೧. ವೈದಿಕ ಸಾಹಿತ್ಯ ಚರಿತ್ರೆ : ಡಾ. ಎನ್.ಎಸ್. ಅನಂತರಂಗಾಚಾರ್ಯ

೨. ಧನಂಜಯ ಶಬ್ದಕೋಶ : ಡಿ. ಪದ್ಮನಾಭಶರ್ಮ

೩. ಹಳ್ಳಿಯ ಹಾಡುಗಳು : ಗೊರೂರು ರಾಮಸ್ವಾಮಿ ಅಯ್ಯಂಗಾರ್

೪. ಕನ್ನಡ ನಿಘಂಟು ಸಂ.೩ : ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೫. ಜಾನಪದ ಅಧ್ಯಯನ : ದೇಜಗೌ

೬. ಮೂಢನಂಬಿಕೆಗಳು : ಎಲ್.ಆರ್.ಹೆಗಡೆ

೭. ನವಲು ಕುಣಿದಾವ : ಮುದೇನೂರ ಸಂಗಣ್ಣ

೮. ನಾಲ್ಕು ನಾಡಪದಗಳು : ದಿ. ಡಾ. ಬಿ.ಎಸ್. ಗದ್ದಗಿಮಠ

೯. ನಮ್ಮ ಸಾಂಸ್ಕೃತಿ ಪರಂಪರೆ : ಡಾ. ಬೆಟಗೇರಿ ಕೃಷ್ಣಶರ‍್ಮ

೧೦. ಕನ್ನಡ ಜಾನಪದ ಗೀತಗಳು : ಡಾ. ಬಿ.ಎಸ್. ಗದ್ದಗಿಮಠ

೧೧. ಕನ್ನಡ ಗಾದೆಗಳ ಮಹಾಕೋಶ (ಸಂ.೨) : ಹು. ಮ. ರಾಮಾರಾಧ್ಯ

೧೨. ಪರಮಾರ್ಥ : ಡಾ. ಎಲ್.ಬಸವರಾಜು

೧೩. ಕನ್ನಡ ವಿಶ್ವಕೋಶ ಸಂ.೬: ಕನ್ನಡ ಅಧ್ಯಯನ ಸಂಸ್ಥೆ ಮೈ. ವಿ.ವಿ.ಮೈಸೂರು

೧೪. ಕರ್ನಾಟಕ ಭಾರತಿ (೧೦-೪) : ಕ.ವಿ.ವಿ ಧಾರವಾಡ

೧೫. ಕನ್ನಡ ಸಾವಿರದ ಒಗಟುಗಳು : ಡಾ. ಎಸ್.ಜಿ. ಇಮ್ರಾಪೂರ

೧೬. ಒಗಟುಗಳು : ಎಚ್.ಜೆ. ಲಕ್ಕಪ್ಪಗೌಡ

೧೭. ನಮ್ಮ ಒಗಟುಗಳು : ರಾಗೌ

೧೮. ಉತ್ತರ ಕರ್ನಾಟಕದ ಒಗಟುಗಳು : ಡಾ. ಎಂ.ಎಸ್.ಲಠ್ಠೆ

೧೯. ನಮ್ಮ ಸುತ್ತಿನ ಗಾದೆಗಳು : ಸುಧಾಕರ

೨೦. ಕನ್ನಡ ಗಾದೆಗಳ ಮಹಾಕೋಶ (ನಂ.೧): ಹು. ಮ. ರಾಮಾರಾಧ್ಯ

೨೧.  ಜನಪದ ಬೆಡಗಿನ ವಚನಗಳು : ಸುಧಾಕರ

೨೨. ಜನಪದ ಒಗಟುಗಳು : ನಂ. ನಾರಾಯಣಗೌಡ

೨೩. ಪುರಾಣನಾಮ ಚೂಡಾಮಣಿ : ಬೆನಗಲ್ ರಾಮರಾವ್

೨೪. ಪ್ರಾದೇಶಿಕ ಗಾದೆಗಳು : ಚೌಡೇಗೌಡ ಬೀಚನಹಳ್ಳಿ


[1]       ನಾಲ್ಕು ನಾಡಪದಗಳು: ಬಿ.ಎಸ್.ಗದ್ದಗಿಮಠ: ಪು.೫೧ ಸ,೬೭.

[2]      ನಾಲ್ಕು ನಾಡಪದಗಳು : ಡಾ. ಬಿ.ಎಸ್. ಗದ್ದಗಿಮಠ, ಪು. ೫೮.

[3]       ನಮ್ಮ ಸಂಸ್ಕೃತಿ ಪರಂಪರೆ : ಡಾ. ಬೆಟಗೇರಿ ಕೃಷ್ಣಶರ್ಮ, ಪು.೩೧.

[4]       ಕನ್ನಡ ಜಾನಪದ ಗೀತೆಗಳು: ಡಾ. ಬಿ.ಎಸ್. ಗದ್ದಗಿಮಠ: ಪು. ೨೬.

[5]       ಸರ್ವಜ್ಞನ ವಚನ : (ಉದ್ಧೃತ): ಕನ್ನಡ ಗಾದೆಗಳ ಮಹಾಕೋಶ: (ಸಂ.೨) ಹು.ಮ. ರಾಮರಾಧ್ಯ, ಪು.೫೬೧.

[6]       ನಮ್ಮ ಸಂಸ್ಕರತಿ ಪರಂಪರೆ” ಡಾ|| ಬೆ.ಕೃ.ಶರ್ಮ. ಪು. ೭೯.

[7]       ನಾಲ್ಕು ನಾಡಪದಗಳು: ಡಾ. ಬಿ.ಎಸ್.ಗದ್ದಗಿಮಠ, ಪು. ೫೧. ಪ.೬೮.

[8]       ಪರಮಾರ್ಥ : ಸಂ.ಡಾ. ಎಲ್. ಬಸವರಾಜು, ಪು. ೭೫, ವ. ೫೦೨.

[9]       ಪರಮಾರ್ಥ: ಸಂ. ಡಾ. ಎಲ್. ಬಸವರಾಜು, ಉಪ.೭೩, ಪ.೫೦೩.

[10]      ಮೂಢನಂಬಿಕೆಗಳು: ಡಾ. ಎಲ್.ಆರ್. ಹೆಗಡೆ: ಪು. ೨೭.

[11]     ಮೂಢ ನಂಬಿಕೆಗಳು: ಡಾ. ಎಲ್.ಆರ್.ಹೆಗಡೆ, ಪು. ೭೧-೭೨.

[12]      ಜಾನಪದ ಅಧ್ಯಯನ : ಡಾ. ದೇ.ಜ.ಗೌ. ಉ. ೧೭೯.

[13]      ಕನ್ನಡ ವಿಶ್ವಕೋಶ : ಸಂ ೭; ಪು. ೭೮.

[14]      ಕರ್ನಾಟಕ ಭಾರತಿ-೧೦-೪: ಒಕ್ಕಲುತನ ವೃತ್ತಿಪದಕೋಶ-೧: ಡಾ. ವಿ.ಶಿವಾನಂದ ಪು. ೧೦೪-೧೦೫. ಹರಿಶ್ಚಂದ್ರ ಕಾವ್ಯದಲ್ಲಿ ಬರುವ ’ಮೇಗಾಳಿ’ ’ಕಿಗ್ಗಾಳಿ’ಗಳ ವಿವರಣೆಗೆ ಡಿ.ಎಲ್. ನರಶಿಂಹಚಾರ‍್ಯರ ’ಶಬ್ದ ವಿಹಾರ’ -ಪು. ೬-೧೦ ನೋಡಿ.)