ಗಾಳ ಹಾಕಿ ಕೂತಿದ್ದಾನೆ ಇವನು, ಮುಂಜಾನೆಯಿಂದ
ನಡುಹಗಲವರೆಗೆ. ಹರಿವ ನದಿ, ಥಳಥಳ
ನೀರು. ಇಷ್ಟು ಹೊತ್ತಾದರೂ ಒಂದಾದರೂ ಮೀನು
ಬೀಳಲೇ ಇಲ್ಲ. ನಿರೀಕ್ಷೆ, ಹತಾಶೆ, ತಳಮಳ.

ಬರಗಾಲವಿಲ್ಲ ಈ ನದಿಯಲ್ಲಿ ಮೀನಿಗೆ, ಆದರೂ
ಯಾಕೆ ಒಂದಾದರೂ ಸಿಕ್ಕುತ್ತಿಲ್ಲ ಈ ಹೊತ್ತು ಗಾಳಕ್ಕೆ ?
ಮೇಲೆ ಧಗ ಧಗ ಸೂರ್ಯ ; ಬಿಳಿ ತಗಡಿನಾಕಾಶ
ನಿರ್ಭಾವ ಶೂನ್ಯದ ಒಳಗೆ ಹದ್ದಿನ ರೆಕ್ಕೆ.

ಹೋ ! ಒಳಗೆ, ಎಲ್ಲೋ ಒಳಗೆ, ಗಾಳಕ್ಕೆ ಬೀಳು-
ತಿದೆ ಏನೋ ; ಸಣ್ಣಗೆ ಚಲನೆ. ಸಡಿಲಿಸದೆ ಪಟ್ಟನ್ನು
ಎಳೆದ, ಮೆತ್ತಗೆ ಎಳೆದ. ಅದೊ ಬಂತು, ಬಂದೇ
ಬಂತು, ನೋಡಿದರೆ ಮೀನಲ್ಲ; ಹಳೆಯ ಟಿನ್ನು !