ಭಾರತ ಮತ್ತು ಚೀನಾಗಳಲ್ಲಿ ಗಿಡಮೂಲಿಕೆ ಬಳಸಿ ಔಷಧಿ ಕೊಡುವ ಪದ್ಧತಿ ಕ್ರಿ.ಪೂ.೨೧೦೦ರಿಂದ ಪ್ರಾರಂಭವಾಯಿತೆನ್ನಬಹುದು. ಕ್ರಿ.ಪೂ.೬೦೦ರಲ್ಲಿ ಭಾರತದಲ್ಲಿ ಆಯುರ್ವೇದ ಪದ್ಧತಿ ಉಚ್ಛ್ರಾಯಸ್ಥಿತಿಯಲ್ಲಿತ್ತು ಎನ್ನುವ ದಾಖಲೆಗಳಿವೆ.

ಇಂದು ಪ್ರಪಂಚದಾದ್ಯಂತ ಗಿಡಮೂಲಿಕೆ ಔಷದಿಗಳ ಜ್ವರ ಹಬ್ಬಿದೆ. ಸಹಜ ಚಿಕಿತ್ಸೆ ಎನ್ನುವ ಹೆಸರಿನಲ್ಲಿ ಬದಲೀ ವೈದ್ಯಕೀಯ ಹೆಚ್ಚಿದಂತೆ ಗಿಡಮೂಲಿಕೆಗಳ ಬಳಕೆಯೂ ಹೆಚ್ಚಿದೆ. ೧೯೯೨ರಲ್ಲಿ ೧.೮ ಬಿಲಿಯನ್ ಡಾಲರ್ ಮೌಲ್ಯದ ಗಿಡಮೂಲಿಕೆ ಆಮದು ಮಾಡಿಕೊಳ್ಳುತ್ತಿದ್ದ ಅಮೆರಿಕಾ, ೨೦೦೨ರಲ್ಲಿ ೬ ಬಿಲಿಯನ್ ಡಾಲರ್‌ಗಳ ವಹಿವಾಟು ನಡೆಸಿದೆ. ಈಗ ಅದು ೧೪ ಬಿಲಿಯನ್‌ಗಳಿಗೆ ಏರಿದೆ.

ಗಿಡಮೂಲಿಕೆಗಳು ಬದಲಿ ಆಹಾರಪದ್ಧತಿ ಎನ್ನುವ ರೀತಿಯಲ್ಲಿ ರಫ್ತಾಗುತ್ತಿರುವುದರಿಂದ, ಭಾರತದಲ್ಲೂ ಅದೇ ರೀತಿ ಪರಿಗಣಿಸಲಾಗುವುದರಿಂದ ಅವು ಔಷಧಿ ನಿಯಂತ್ರಣಕ್ಕೊಳಪಡಬೇಕು ಅಥವಾ ಫಾರ್‍ಮಾಸ್ಯೂಟಿಕಲ್ಸ್‌ಗಳಿಗೆ ಬೇಕಾದ ಗುಣಮಟ್ಟ ಗಳಿಸಬೇಕು. ಇವು ಇಲ್ಲಿಯವರೆಗೆ ಔಷಧ ನಿಯಂತ್ರಣ ಮಂಡಳಿ ಅಥವಾ ಬೇರಾವುದೇ ಸ್ಥಿರ ನಿಯಂತ್ರಣ ಸಂಸ್ಥೆಯಿಂದ ಪರೀಕ್ಷೆಗೊಳಪಟ್ಟಿಲ್ಲ. ೧೯೯೭ರಲ್ಲಿ ಕೇಂದ್ರ ಸರಕಾರ ಔಷಧ ಮತ್ತು ಸೌಂದರ್ಯವರ್ಧಕ ಕಾನೂನಿನ ಗೊತ್ತುವಳಿ ನಿರ್ಣಯಿಸಿತು. ಸೂಕ್ತ ಕಟ್ಟಳೆಗಳೊಂದಿಗೆ ಜಿ.ಎಂ.ಪಿ. (ಉತ್ತಮ ತಯಾರಿಕಾ ನಡಾವಳಿ) ಸರ್ಟಿಫಿಕೇಟ್ ಹೊಂದಿರಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿತು. ಆದರೆ ಗಿಡಮೂಲಿಕೆ ಔಷಧಿ ತಯಾರಕರು ಇದನ್ನು ಒಪ್ಪಲಿಲ್ಲ. ಇದರಿಂದ ಬಹುರಾಷ್ಟ್ರೀಯ ಸಂಸ್ಥೆಗಳು ಆಯುರ್ವೇದ ಔಷಧಗಳ ಮೇಲೆ ನಿಯಂತ್ರಣ ಹೊಂದಬಹುದು ಎನ್ನುವ ಕಾರಣ ಮುಂದಿಟ್ಟರು. ಹೀಗೆ ಉಪಯುಕ್ತವಾಗಬಲ್ಲ ಕಾನೂನೊಂದನ್ನು ತಡೆಯಲಾಯಿತು. ಈಗ ಗಿಡಮೂಲಿಕೆ ಔಷಧ ತಯಾರಕರು ವೈಜ್ಞಾನಿಕ ವಿಶ್ಲೇಷಣೆ ಮತ್ತು ರಾಸಾಯನಿಕ ಪರೀಕ್ಷೆಗೊಳಪಡಿಸದೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಅವರು ಔಷಧ ತಯಾರಿಸುವ ರೀತಿ ನೋಡಿದರೆ ಜನರಿಗೆ ಗಿಡಮೂಲಿಕೆ ಔಷಧಿ ಮೇಲೆ ಅಸಹ್ಯ ಹುಟ್ಟುತ್ತದೆ.

ಇದನ್ನೆಲ್ಲ ಗಮನಿಸಿದ ಅಮೆರಿಕಾ ಭಾರತದಿಂದ ರಫ್ತಾಗುತ್ತಿರುವ ಗಿಡಮೂಲಿಕೆ ಔಷಧಿಗಳನ್ನು ನಿಷೇಧಿಸಲು ಯೋಚಿಸುತ್ತಿದೆ. ಕೊನೇಪಕ್ಷ ಎಚ್‌ಎಸಿಸಿಪಿ (Hazard Analysis and Critical Control Point)ಯಿಂದ ಒಪ್ಪಿಗೆ ಪಡೆದಿರಬೇಕೆಂದು ಹೇಳಿದೆ.

೧೯೯೮ರಲ್ಲಿ ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯ ಗಿಡಮೂಲಿಕೆಗಳ ರಕ್ಷಣೆ ಹಾಗೂ ಗುಣಮಟ್ಟ ನಿಯಂತ್ರಿಸಲು ರಾಷ್ಟ್ರೀಯ ಗಿಡಮೂಲಿಕೆ ಅಬಿವೃದ್ಧಿ ಮಂಡಳಿ ಮತ್ತು ಗುಣಮಟ್ಟ ನಿರ್ಧಾರ ಪ್ರಾಧಿಕಾರ ರಚಿಸಲು ಯೋಚಿಸಿತ್ತು. ಆದರೆ ಅನಂತರ ಈ ಕುರಿತು ಯಾವ ಮಾತುಕತೆ ಆಗಲಿಲ್ಲ.

ಗಿಡಮೂಲಿಕೆಗಳಿಂದ ಔಷಧಿ ತಯಾರಿಸುವ ಉದ್ದಿಮೆಗಳು ಹೆಚ್ಚುತ್ತಿವೆ. ಇವುಗಳಲ್ಲಿ ಕೆಲವು ಉತ್ತಮ ಪ್ರಯೋಗಾಲಯ ಹೊಂದಿದ್ದರೂ ಬಹುಪಾಲು ಸಂಸ್ಥೆಗಳು ನಿಖರ ಅನ್ವೇಷಣೆ ಮಾಡುವಲ್ಲಿ, ಉತ್ತಮ ಗುಣಮಟ್ಟ ನೀಡುವುದರಲ್ಲಿ ಸಫಲವಾಗಿಲ್ಲ.

ಕಷಾಯಗಳನ್ನು ತಯಾರಿಸುವುದರಲ್ಲಿ ಜಡಗಟ್ಟಿದ ಹಳೆಯ ಪದ್ಧತಿಗಳನ್ನು ಅವಲಂಬಿಸಲಾಗಿದೆ. ಆ ಪದ್ಧತಿಯಲ್ಲಿದ್ದ ಸ್ವಚ್ಛತೆ, ಗುಣಮಟ್ಟಗಳನ್ನು ಕೈಬಿಡಲಾಗಿದೆ. ಮಾಡಿದ ಕಷಾಯ ಸಂಗ್ರಹಿಸಿಡುವ ಪದ್ಧತಿಗಳೂ ಅವೈಜ್ಞಾನಿಕ. ಅಹಾರ, ಔಷಧ ಮತ್ತು ಸೌಂದರ್ಯವರ್ಧಕಗಳ ನಿಯಮವಿದ್ದರೂ ತಯಾರಿಕೆ ಹಂತದಲ್ಲೇ ಅವ್ಯವಹಾರ ಮತ್ತು ಉಲ್ಲಂಘನೆ ನಡೆಯುತ್ತಿದೆ. ಹಾಳಾದ, ಒಣಗಿಹೋದ ಮತ್ತು ತನ್ನೆಲ್ಲ ಗುಣ ಕಳೆದುಕೊಂಡ ಗಿಡಮೂಲಿಕೆಗಳಿಂದ ಕಷಾಯ ಮಾಡಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ಗಿಡಮೂಲಿಕೆಗಳಿಂದ ತಯಾರಾದ ಔಷಧಿಗಳನ್ನು ಉಪಯೋಗಿಸುವ ಹಂತದಲ್ಲಿ ಮತ್ತೊಮ್ಮೆ ಗುಣಮಟ್ಟ ಖಚಿತಪಡಿಸಿಕೊಳ್ಳಬೇಕೆಂಬ ಕಾನೂನು ಜಾರಿಗೊಳಿಸಲಾಗಿದೆ. ನಮ್ಮಲ್ಲಿ ಕನಿಷ್ಠ ಸಂಗ್ರಹ-ತಯಾರಿಕೆಗಳ ಗುಣಮಟ್ಟ ನಿಯಂತ್ರಿಸುವ ಕಾನೂನಿಲ್ಲದಿರುವುದು ವಿಷಾದಕರ. ಗಿಡಮೂಲಿಕೆಗಳಿಂದ ತಯಾರಾದ ಔಷಧಗಳಲ್ಲೂ ಗಣನೀಯ ವಿಷಾಂಶ, ಅತಿಯಾದ ರಾಸಾಯನಿಕಗಳಿರಬಹುದು. ಸೇವನೆಯಿಂದ ಅಲರ್ಜಿ ಮತ್ತು ದದ್ದುಗಳಾಗಬಹುದು. ತಪ್ಪು ಮಿಶ್ರಣ, ಮಲಿನತೆ, ಗುಣನಷ್ಟ, ಕಲಬೆರಕೆ, ತಪ್ಪು ಪಟ್ಟಿ ಹಚ್ಚುವಿಕೆ, ಸುಳ್ಳು ಪ್ರಚಾರ, ಗುಣಮಟ್ಟ ಕೊರತೆ ಇವೆಲ್ಲಾ ಆಗುವ ಸಾಧ್ಯತೆಗಳಿವೆ.

ಔಷಧ ತಯಾರಿಕೆಯಲ್ಲಿ ಒಣ ಕಾಷ್ಠ ಬಳಸುವುದು ಸಾಮಾನ್ಯ. ಗಿಡಮೂಲಿಕೆಗಳು ಒಣಗಿದಾಗ ಸಾಮಾನ್ಯವಾಗಿ ಒಂದೇ ರೀತಿ ಕಾಣುತ್ತವೆ. ಒಂದೇ ಮೂಲಿಕೆಗೆ ಬೇರೆ ಬೇರೆ ಹೆಸರಿದ್ದು ಗೊಂದಲವಾಗಬಹುದು. ಇದೆಲ್ಲಾ ಗಮನಾರ್ಹ ತಪ್ಪುಗಳೇ. ೧೯೯೧-೯೫ರ ಅವಧಿಯಲ್ಲಿ ರಾಷ್ಟ್ರೀಯ ವಿಷ ಮಾಹಿತಿ ಸೇವಾ ಸಂಸ್ಥೆ ನಡೆಸಿದ ಸಮೀಕ್ಷೆ ಗಿಡಮೂಲಿಕೆ ಚಿಕಿತ್ಸೆಯಿಂದ ತೀವ್ರ ವಿಷಗ್ರಸ್ತ ಸ್ಥಿತಿಗೊಳಪಟ್ಟ ೭೮೫ ಪ್ರಕರಣಗಳನ್ನು ದಾಖಲಿಸಿದೆ. ಈಗಿರುವ ಮಾಹಿತಿ, ಗಿಡಮೂಲಿಕೆಗಳಿಂದ ನಿಜವಾಗಿಯೂ ಲಾಭವಿದೆಯೇ ಅಥವಾ ಅವು ದೇಹವನ್ನು ಇನ್ನಷ್ಟು ವಿಷಮಯವಾಗಿಸುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಲ್ಲ.

ಹೀಗಾಗಿ ಗಿಡಮೂಲಿಕೆ ಔಷಧಿ ತಯಾರಿಕೆಯ ಪ್ರಾಥಮಿಕ ಹಂತದಲ್ಲೇ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳಬೇಕು. ಆರೋಗ್ಯ ಕಾಪಾಡಬಲ್ಲ ಔಷಧಗಳನ್ನು ಉಳಿಸಬೇಕು. ಇದಕ್ಕಾಗಿ ವರ್ಷಗಟ್ಟಲೆ ಕಾಯಬೇಕಾಗಬಹುದು, ಸಾವಿರಾರು ಪ್ರಯೋಗ ಮಾಡಬೇಕಾಗಬಹುದು. ಆದರೂ, ಪ್ರಯೋಗಾಲಯಗಳಲ್ಲಿ ಸೂಕ್ತ ಪರೀಕ್ಷೆಗೊಳಪಟ್ಟ, ನಿರ್ಧರಿತ ಗುಣಮಟ್ಟದ ಔಷಧಿಗಳು ಹೊರಬರಬೇಕಾಗಿದೆ.

ಬದಲಿ ವೈದ್ಯಕೀಯ ಪದ್ಧತಿಯ ಅವಶ್ಯಕತೆಯಂತೂ ಇದ್ದೇ ಇದೆ. ಆದರೆ ಅದೇ ಸರ್ವಸ್ವವಲ್ಲ. ಅನೇಕ ನಾಟಿ ವೈದ್ಯರು, ಗಿಡಮೂಲಿಕಾ ತಜ್ಞರು ನಿಃಸ್ವಾರ್ಥ, ಗಮನೀಯ ಸೇವೆ ಸಲ್ಲಿಸುತ್ತಿರುವುದು, ಅನೇಕ ಅಮೂಲ್ಯ ಔಷಧಿಗಳನ್ನು ಉಳಿಸಿಕೊಂಡು ಬಂದಿರುವುದು ಭಾರತದ ಹೆಮ್ಮೆಯೇ ಸರಿ. ಆದರೂ ಗಿಡಮೂಲಿಕೆ ಔಷಧಿಗಳನ್ನು ಕಾನೂನಿನ ವಿಮರ್ಶೆಗೆ, ಪ್ರಾಯೋಗಿಕ ಪರೀಕ್ಷೆಗೆ ಅಳವಡಿಸಬೇಕು. ಉತ್ತಮ ವೈಜ್ಞಾನಿಕ ವಿನ್ಯಾಸ, ಸಂಶೋಧನಾ ಹಿನ್ನೆಲೆ ಹಾಗೂ ಖಾತ್ರಿ ಗುಣಮಟ್ಟ ಹೊಂದಿದ್ದರೆ ಭಾರತದ ಗಿಡಮೂಲಿಕೆ ಔಷಧಗಳು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸುವುದು ಶತಃಸಿದ್ಧ.

– ಈ ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.