ದಿನಗಳೆಷ್ಟೋ ಕಳೆಯಿತು. ಒಂದು ದಿನ ಕಾನಬೆಟ್ಟಿನ ಅಜ್ಜ ದುರ್ಗಲ್ಲಾಯ ಪೆರ್ಗಡೆ ಗದ್ದೆಯ ಏರಿದ ನೀರನ್ನು ಇಳಿಸುತ್ತಾ, ತಗ್ಗಿದ ನೀರನ್ನು ಏರಿಸುತ್ತಾ ಬರುತ್ತಿರುವಷ್ಟರಲ್ಲಿ ದೂರದಲ್ಲಿ ಒಂದು ಹುಲಿ ಹೆಣ್ಣು ಬಾಲೆಯೊಂದಿಗೆ ಆಟವಾಡುವುದು ಕಾಣಿಸಿತು. ಅಜ್ಜರಿಗೆ ಬೆರಗು. ಅಲ್ಲಿಂದಲೇ ಮನೆಗೆ ಮರಳಿದರು. ಕೈಯಲ್ಲಿದ್ದ ಹಾರೆಯನ್ನು ಅಂಗಳಕ್ಕೆ ಬಿಸಾಡಿದರು. ಒಳಗೆ ನಡೆದರು. ಕಲ್ಲ ಕಲೆಂಬಿಯಿಂದ ಬೆಳ್ಳಿಯ ರೂಪಾಯಿ ಪಾವಲಿ ಹಿಡಿದುಕೊಂಡು ಹುಲಿಯ ಪಂಜರದೆಡೆಗೆ ನಡೆದರು. ಹುಲಿಯ ಸಮೀಪಕ್ಕೆ ಬಂದರು. ತನ್ನಲ್ಲಿರುವ ಬೆಳ್ಳಿಯ ಬೊಂಬೆ ಪಾವಲಿಯನ್ನು ಹುಲಿಯೆಡೆಗೆ ಹಾರಿಸಿದರು. ಹುಲಿ ಅದನ್ನು ಹಿಡಿದು ಅದರೊಂದಿಗೆ ಆಟವಾಡತೊಡಗಿತು. ಅಷ್ಟರಲ್ಲಿ ಅಜ್ಜರು ಮಗುವನ್ನು ಎತ್ತಿಕೊಂಡು ಬಂದರು. ಮಗುವನ್ನು ಕೆಲಸದಾಕೆ ದಾರುವಿನ ಕೈಗೆ ಕೊಟ್ಟರು. ಸೊನ್ನೆಯ ಜತೆ ಈ ಮಗುವನ್ನು ಪ್ರೀತಿಯಿಂದ ಸಲಹುವಂತೆ ಹೇಳಿದರು. ಅಜ್ಜರು ಮಗುವಿಗೆ ಗಿಂಡೆ ಎಂದು ಹೆಸರಿಟ್ಟರು. ಕಾನಬೊಟ್ಟಿನ ಅರಮನೆಯಲ್ಲಿ ಇಬ್ಬರು ಮಕ್ಕಳು ‘ನೀರು ಬೆಂಕಿಯಂತೆ’ ದಿನದಿಂದ ದಿನಕ್ಕೆ ಬೆಳೆಯುತ್ತಾ ಬಂದರು. ಈ ಸುದ್ದಿ ನಾಲ್ಕು ಊರು ನಾಲ್ಕು ದೇಶಕ್ಕೆ ಹರಡಿತು.

ಪಕ್ಕದ ಊರಿನ ಕೆದಿಂಜ ಪರಾರಿಯಲ್ಲಿ ಅಣ್ಣ ಜಾರುಮಾರ್ಲರು ಇದ್ದಾರೆ. ಉರ್ಕಿತೋಟದಲ್ಲಿ ತಮ್ಮ ಗುರುಮಾರ್ಲರು ಇದ್ದಾರೆ. ತಮ್ಮ ಗುರುಮಾರ್ಲಗೆ ಹೆಣ್ಣು ನಿಶ್ಚಯಿಸಬೇಕೆಂದು ಅನ್ನ ಜಾರುಮಾರ್ಲರು ಏರ್ಪಾಟು ಮಾಡುವರು. ಅಣ್ಣ ಜಾರುಮಾರ್ಲರು ಅಂಗಸಿಂಗಾರವಾದರು. ಬಗೆಬಗೆಯ ಉಡುಪು ತೊಡುಪು ತೊಟ್ಟರು. ಮನೆಯ ನಾಲ್ಕು ಮುಖದ ಮೂರು ಕಿರುಗೂಟದ ಬಲವಾದ ಬಾಗಿಲು ಮುಚ್ಚಿ ಕಾನಬೊಟ್ಟಿನ ದುರ್ಗಲ್ಲಾಯ ಹೆಗ್ಗಡೆಯವರ ಮನೆಗೆ ಬಂದರು.

ಅಜ್ಜ ದುರ್ಗಲ್ಲಾಯರು ಬಂದ ಅತಿಥಿಗಳನ್ನು ಉಪಚರಿಸಿದರು. ಉರ್ಕಿತೋಟದ ಗುರು ಮಾರ್ಲನಿಗೆ ಮಗಳು ಸೊನ್ನೆಯನ್ನು ಮದುವೆ ಮಾಡಿಕೊಡುವಂತೆ ಚಾರುಮಾರ್ಲರು ಕೇಳಿಕೊಂಡರು. ಬರಿ ಬಂದ್ರ ಸರಿಹೋಯಿತು. ಅಂದೇ ಪಟ್ಟಿ ಬದಲಾಯಿಸಿದರು. ಈ ವಾರ ಅಲ್ಲ, ಮೇಲಿನ ಆದಿತ್ಯವಾದ ಮದುವೆಗೆ ದಿನವಿಟ್ಟರು. ಬಂದ ಅತಿಥಿಗಳಿಗೆ ದಾರು ಊಟ ಬಡಿಸಿದಳು. ಉಪಚಾರ ಮಾಡಿದಳು.

ಕಾನಬೊಟ್ಟಿನ ಅಜ್ಜರು ಮದುವೆಗೆ ಎಲ್ಲ ಸನ್ನಾಹ ಮಾಡಿದರು. “ನಿನ್ನೆ ಯಾರೂ ಮಾಡಿಲ್ಲ, ನಾಳೆ ಯಾರೂ ಮಾಡಬಾರದು” ಆ ರೀತಿಯಲ್ಲಿ ಅಜ್ಜರು ಮದುವೆಗೆ ಅಟ್ಟಣೆ ನಡೆಸಿದರು. ಇನ್ನ, ಮುಂಡೇರು, ಬೋಳ, ಬೆಳ್ಮಣ್ಣು, ಕಾಂತಾವರ, ಕಡಂದಲೆ, ಕಟಪಾಡಿ-ಹೀಗೆ ಊರು ಬಿಡದೆ ತೆರೆದ ಮನೆ ಮನೆಗೂ ಕಾಯಿ (ಅಡಿಕೆ) ಹಾಕಿ ಹೇಳಿಕೆ ಆಯಿತು. ಅತ್ತ ಉರ್ಕಿತೋಟದಲ್ಲೂ ಸರ್ವ ಸಿದ್ಧತೆ ನಡೆಯಿತು. ಅಜ್ಜರು ಊರ ಹೆಂಗಸರನ್ನು ಕರೆದು ಮದುವೆಯ ಊಟಕ್ಕೆ ಏರ್ಪಾಟು ಮಾಡಿಸಿದರು. ದಿಬ್ಬಣದ ಸಾಲಿನ ಒಂದು ಕೊನೆ ಉರ್ಕಿತೋಟದಲ್ಲಾದರೆ ಇನ್ನೊಂದು ಕೊನೆ ಮದುವೆಮನೆ ಕಾನಬೆಟ್ಟಿನಲ್ಲಾಗಿದೆ. ಬಂದ ದಿಬ್ಬಣವನ್ನು ನಾಲ್ಕು ಜನ ಮುತ್ತೈದೆ ಹೆಂಗಸರು ಎದುರ್ಗೊಂಡರು. ಮದುಮಗಳನ್ನು ಬಗೆಬಗೆಯಲ್ಲಿ ಅಲಂಕರಿಸಿದರು. ಉರ್ಕಿತೋಟದ ಗುರುಮಾರ್ಲಗೂ ಕಾನಬೆಟ್ಟಿನ ದುರ್ಗಲ್ಲಾಯ ಪೆರ್ಗಡೆಯವರ ಮಗಳು ಸೊನ್ನೆಗೂ ಮದುವೆ ಆಯಿತು. ಬಂದ ನೆಂಟರಿಷ್ಟರಿಗೆ ಪಂಚಾಮೃತದ ಊಟ ಆಯಿತು. ಅಜ್ಜರು ಮದುಮಗಳ ದಿಬ್ಬಣ ಇಳಿಸಿಕೊಟ್ಟರು.

ಉರ್ಕಿತೋಟದಲ್ಲೂ ಮದುವೆಯ ಬಹುಬಗೆಯ ಉಪಚಾರ ಜರಗಿತು. ಮತ್ತೆ ಸೊನ್ನೆ ಎರಡನೆಯ ಬಾರಿ ಹುಟ್ಟಿದ ಮನೆ ಕಾನಬೆಟ್ಟಿನ ದುರ್ಗಲ್ಲಾಯ ಪೆರ್ಗಡೆಯವರ ಮನೆಗೆ ಹೋಗಿ ಬಂದಳು. ಹೀಗೆ ಉರ್ಕಿತೋಟ-ಕಾನಬೆಟ್ಟುಗಳ ನಡುವೆ ಹೋಗುತ್ತಾ ಬರುತ್ತಾ ಸೊನ್ನೆ ಇದ್ದಳು.

ಇತ್ತ ಕಾನಬೆಟ್ಟಿನ ಅರಮನೆಯಲ್ಲಿ ಗಿಂಡೆ ‘ಬೆಂಕಿ ನೀರಿನಂತೆ’ ಬೆಳೆದು ನಿಂತಳು. ಅಜ್ಜ ದುರ್ಗಲ್ಲಾಯ ಹೆಗ್ಗಡೆಯವರು ಒಂದು ದಿನ ಮುಂಜಾನೆ ಗದ್ದೆ ಕೆಲಸಕ್ಕೆ ಹೋದರು. ಹಾಲು ಕರೆಯಲು ಹಟ್ಟಿಗೆ ಹೋದ ಗಿಂಡೆ ಹೆಣ್ಣು ಹೋಗಿ ಹೆಂಗಸಾದಳು. ಏನೆಂದು ಅರಿಯದ ಗಿಂಡೆಯನ್ನು ದಾರು ಸಂತೈಸಿದಳು. ಕೈ ಹಿಡಿದು ಕರೆತಂದು ಕಲ್ಲಕಲೆಂಬಿಯ ಮೇಲೆ ಕುಳ್ಳಿರಿಸಿದಳು. ಗದ್ದೆಯ ಕೆಲಸ ತೀರಿಸಿ ಮನೆಗೆ ಬಂದ ಅಜ್ಜರಿಗೆ ದಾರು ಗಿಂಡೆ ಮೈನರೆದ ಸಂಗತಿ ತಿಳಿಸಿದಳು. ಈ ಸಂಬಂಧವಾಗಿ ಏನು ಆಚರಣೆ ನಡೆಸಬೇಕೋ ಎಲ್ಲವನ್ನೂ ನಡೆಸಬೇಕೆಂದು ದಾರುಗೆ ಹೇಳಿದರು. ಅಜ್ಜರು ಸ್ವತಃ ಹೋಗಿ ಮಡಿವಾಳಿತಿ ಚೆಲುವೆದಿಯನ್ನು ಕರೆತಂದರು. ಅಜ್ಜರು ನಾಲ್ಕು ಮನೆಯ ಹೆಂಗಸರಿಗೆ ಕರೆ ಕಳುಹಿಸಿ ಬರಹೇಳಿದರು. ಚೆಲುವೆದಿ ಮಂಡಲ ಬರೆದು ನಾಲ್ಕು ಮೂಲೆಗೆ ಸಿಂಬೆ ಇರಿಸಿ ಅದರ ಮೇಲೆ ಕಲಶ ಇರಿಸಿದಳು. ಕಲಶದೊಳಗೆ ನೀರು ತುಂಬಿದಳು. ಕಲಶದ ಮೇಲೆ ಇಡಿ ಅಡಿಕೆ ವೀಳೆಯದೆಲೆ ಇರಿಸಿದಳು. ನಾಲ್ಕು ಕನ್ಯಾ ಸ್ತ್ರೀಯರು ಕಲ್ಲ ಕಲೆಂಬಿ ಮೇಲೆ ಕುಳಿತ ಗಿಂಡೆಯನ್ನು ಅಂಗಳಕ್ಕೆ ಕರೆತಂದರು. ಗಂಟು ಹಾಕಿದ ತೆಂಗಿನಕಾಯಿಗಳ ಮೇಲೆ ಗಿಂಡೆಯನ್ನು ಕುಳ್ಳಿರಿಸಿ ಕಲಶದ ನೀರೆರೆದರು. ಒಂದು ಕಲಶ ನೀರನ್ನು ಗಿಂಡೆಯ ತಲೆಯ ಮೇಲೆ ಹೊರಿಸಿ ಪಕ್ಕದ ಕೆಂದಾಳಿ ಮರದ ಬುಡಕ್ಕೆ ಎರೆಯಿಸಿದರು. ಬಂದವರಿಗೆಲ್ಲಾ ಪಂಚಾಮೃತದ ಊಟ ಉಪಚಾರವಾಯಿತು. ಮತ್ತೆ ಒಂಬತ್ತನೆಯ ದಿನ ಊರ ಮಂದಿಯನ್ನೆಲ್ಲಾ ಕರೆಸಿ ನೀರ ಪೆರತ್ತ (ಮೈನರೆವ ಆಚರಣೆ) ನಡೆಸುವ ಸಿದ್ಧತೆ ನಡೆಸಿದರು. ಆ ದಿನಕ್ಕೆ ಸುತ್ತಮುತ್ತಲ ಊರುಗಳ, ತೆರೆದ ಬಾಗಿಲ ಮನೆಗಳಲ್ಲಿ ಒಂದೂ ಬಿಡದೆ‘ ಕಾಯಿ (ಅಡಿಕೆ)ಹಾಕಿ’, ಮುಹೂರ್ತಕ್ಕೆ ಬರುವಂತೆ ಅಜ್ಜರು ‘ನಾಲ್ಕು ಮನೆ’ಯ ಹೆಂಗಸರಿಗೆ ಹೇಳಿದರು.

ಹೀಗೆ ಹೋದ ಹೆಂಗಸರು ಇನ್ನ, ಮುಂಡೇರ್, ಕಾಂತಾವರ, ಕಡಂದಲೆ, ಕಾಪು, ಕಟಪಾಡಿ, ಬೋಳ, ಬೆಳ್ಮಣ್ಣು, ಕೆದಿಂಜ ಮುಂತಾದ ಊರೂರುಗಳಿಗೆ ಹೋಗಿ ಒಂದೂ ಮನೆ ಬಿಡದೆ ‘ಕಾಯಿ ಹಾಕಿ’ ಮುಹೂರ್ತಕ್ಕೆ ಆಹ್ವಾನಿಸಿ ಬಂದರು. ಅವರು ಉರ್ಕಿತೋಟದ ಸೊನ್ನೆ-ಗುರುಮಾರ್ಲರ ಮನೆಗೆ ಹೇಳಿಕೆ ನೀಡದೆ ಮರಳಿದರು. ಸೊನ್ನೆಯಿನ್ನೂ ಮೈನೆರೆದಿಲ್ಲ. ದಡ್ಡೆ, ಗೊಡ್ಡು, ಸೊನ್ನೆಗೆ ಆಹ್ವಾನ ನೀಡಬಾರದೆಂದು ಊನ ಹೇಳಿ ಹೊಟ್ಟೆಕಿಚ್ಚಿನಿಂದ ಹೇಳಿಕೆ ನೀಡದೆ ಕಾನಬೆಟ್ಟಿನ ಅಜ್ಜ ದುರ್ಗಲ್ಲಾಯರ ಅರಮನೆಗೆ ಮರಳಿದರು. ತೂಗುಯ್ಯಾಲೆಯಲ್ಲಿ ಕುಳಿತಿದ್ದ ಅಜ್ಜರಿಗೆ ತಾವು ಒಂದೂ ಮನೆ ಬಿಡದೆ ಹೇಳಿಬಂದಿರುವುದಾಗಿ ಹೇಳಿದರು. ಅಜ್ಜರು ಮತ್ತೆ ಉರ್ಕಿತೋಟದ ಸೊನ್ನೆಗೆ ಹೇಳಿದಿರಾ ಎಂದು ಕೇಳಿದಾಗ ನೀವು ಕೊಟ್ಟ ಕಾಯಿಯಲ್ಲಿ ಒಂದು ಕೊರತೆಯಾಯಿತೆಂದೂ ಹೀಗಾಗಿ ಹೇಳಿಲ್ಲವೆಂದೂ ತಿಳಿಸಿದರು.

ನಾಲ್ಕು ಊರು ನಾಲ್ಕು ದೇಶದ ಸಂದಣಿ ಕಾನಬೆಟ್ಟಿನ ಅಜ್ಜರ ಮನೆಯಲ್ಲಿ ನೆರೆದಿದೆ. ಮಡಿವಾಳ್ತಿ ಚೆಲುವೆ ಮೈನರೆದ ಆಚರಣೆಗೆ ಎಲ್ಲ ಸಿದ್ಧತೆ ನಡೆಸಿದ್ದಾಳೆ. ದಾರು ಪಂಚಾಮೃತದ ಅಡುಗೆಗೆ ಸಿದ್ಧತೆ ಮಾಡಿದ್ದಾಳೆ. ಅಜ್ಜ ದುರ್ಗಲ್ಲಾಯ ಪೆರ್ಗಡೆ ನಿತ್ಯದ ಉಟ್ಟ ಬಟ್ಟೆ ತೆಗೆದರು. ಹೋಗಿ ಬರುವ ಉಡುಪು ತೊಡುಪು ತೊಟ್ಟರು. ಆಳುದ್ದದ ಕಬ್ಬಿಣದ ಊರುಗೋಲು ಹಿಡಿದ ಅಜ್ಜರು ಅರಮನೆ ಚಾವಡಿ ಇಳಿದರು. ಗದ್ದೆಯ ಅಂಚು ಹಿಡಿದರು. ದಾರಿ ಸಾಗಿ ಮಾರ್ಗ ನಡೆದು ಉರ್ಕಿತೋಟದ ಅರಮನೆ ತಲಪಿದರು. ಚಾವಡಿಯ ತೂಗುಯ್ಯಾಲೆಯಲ್ಲಿ ಕುಳಿತಿದ್ದ ಗುರುಮಾರ್ಲರು ಇಳಿದು ಬಂದು ಅಜ್ಜರನ್ನು ಸ್ವಾಗತಿಸಿದರು. ತೂಗುಯ್ಯಾಲೆಯಲ್ಲಿ ಕುಳ್ಳಿರಿಸಿದರು. ಇದನ್ನು ಕಂಡ ಸೊನ್ನೆ ಓಡಿ ಬಂದು ಅಜ್ಜರಿಗೆ ಹಾಲು-ನೀರು ನೀಡಿ ಸತ್ಕರಿಸಿದಳು. ಅಜ್ಜರ ಆಯಾಸ ತಣಿಯಿತು. ತಂಗಿ ಗಿಂಡೆಯ ‘ನೀರ ಪೆರತ್ತ’ಕ್ಕೆ ಬರುವಂತೆ ಪ್ರೀತಿಯಿಂದ ಆಹ್ವಾನಿಸಿ ಲಗುಬಗನೆ ಮನೆಗೆ ಮರಳಿದರು.

ಅಜ್ಜರ ತಲೆಕುಡಿ ಮಾಸಿದ್ದೇ ತಡ, ಸೊನ್ನೆ ತಂಗಿ ಗಿಂಡೆಯ ಪೆರತ್ತಕ್ಕೆ ಹೋಗಿ ಬರುವುದಾಗಿ ಗಂಡ ಗುರುಮಾರ್ಲರಲ್ಲಿ ಹೇಳಿದಳು. ಊರ ಹೆಂಗಸರು ಹೇಳಿಕೆ ನೀಡದೆ ಹೋಗಿರುವಾಗ ತಂಗಿಯ ಪೆರತ್ತಕ್ಕೆ ಹೋಗಬಾರದೆಂದೂ ಹೋದಲ್ಲಿ ಅವಮಾನ ಆಗಬಹುದೆಂದು ಗಂಡ ಗುರುಮಾರ್ಲರು ಬಗೆಬಗೆಯಲ್ಲಿ ಹೇಳಿದರು. ಸೊನ್ನೆ ಹಿಡಿದ ಹಟ ಬಿಡಲಿಲ್ಲ. ಒಳಗಿನ ಹಾಲನ್ನು ಮನೆಯ ಹೊರಗಿನ ತೆಂಗಿನ ಮರದ ಕಟ್ಟೆಗೆ ಸುರಿವ ಕೆಲಸ ಮಾಡಬೇಡ ಎಂದು ಗಂಡ ಗುರುಮಾರ್ಲರು ಸೂಚ್ಯವಾಗಿ ಹೇಳಿದರು. ತಾನು ಕೆದಿಂಜ ಪರಾರಿಯ ಜಾರುಮಾರ್ಲರಲ್ಲಿಗೆ ಹೋಗಿ ಅನುಮತಿ ಪಡೆದು ಉರ್ಕಿ ತೋಟಕ್ಕೆ ಹೋಗುವುದಾಗಿ ಹೇಳಿ ಅಲ್ಲಿಗೆ ಹೋದರು.

ನಡು ಮಧ್ಯಾಹ್ನದ ಹೊತ್ತಲ್ಲಿ ಅಚಾನಕವಾಗಿ ಸೊನ್ನೆ ಬಂದುದನ್ನು ಕಂಡ ಜಾರುಮಾರ್ಲರಿಗೆ ಆಶ್ಚರ್ಯವಾಯಿತು. ತಮ್ಮ ಗುರುಮಾರ್ಲ ಬಿಡು ಹಾದಿಯಲ್ಲಿ ಹೆಣ್ಣೊಬ್ಬಳನ್ನೇ ಅದೇಕೆ ಕುಳುಹಿಸಿದನೋ ಎಂದು ಆತಂಕಪಟ್ಟರು. ಸೊನ್ನೆ ಕಾನಬೆಟ್ಟಿನ ಅಜ್ಜರ ಮನೆಯಲ್ಲಿ ನಡೆವ ತಂಗಿ ಗಿಂಡೆಯ ‘ಪೆರತ್ತ’ಕ್ಕೆ ಹೋಗಿ ಬರುವುದಕ್ಕೆ ಒಪ್ಪಿಗೆ ನೀಡಬೇಕೆಂದು ಕಣ್ಣೀರ್ಗರೆಂದು ಬಿನ್ನವಿಸಿಕೊಂಡಳು. ಜಾರುಮಾರ್ಲರು ನಿತ್ಯದ ಉಡುಪು ಬಿಟ್ಟರು. ಹೋಗಿ ಬರುವ ದುತ್ತೈತ ಉಟ್ಟರು. ಸೊನ್ನೆಯನ್ನು ಕರೆದುಕೊಂಡು ನೇರವಾಗಿ ಉರ್ಕಿತೋಟಕ್ಕೆ ಬಂದರು. ಊರಿಗೆಲ್ಲ ಹೇಳಿಕೆ ನೀಡಿ ಉರ್ಕಿತೋಟದ ಮನೆಗೆ ಮಾತ್ರ ಹೇಳದೆ ಇರುವಾಗ ಸೊನ್ನೆ ಹೋದರೆ ಆ ಹೊಟ್ಟೆಕಿಚ್ಚಿನ ಹೆಂಗಸರು ಅವಮಾನ ಮಾಡುವುದು ನಿಶ್ಚಯ, ಹೋಗದಿರುವುದು ಲೇಸು ಎಂದು ಗಂಡ ಗುರುಮಾರ್ಲರು ಹೇಳಿದರು. ಒಪ್ಪದೆ ಇದ್ದಾಗ ಭಾವ ಜಾರುಮಾರ್ಲರು ಒಬ್ಬಳೇ ತಂಗಿಯ ಪೆರತ್ತಕ್ಕೆ ಹೋಗಿ ಬರಲಿ ಎಂದು ಹೇಳಿದಾಗ ಗಂಡ ಒಪ್ಪಿದರು. ಸೊನ್ನೆಗೆ ಹರ್ಷದ ಮೈ, ಮುತ್ತಿನ ನಗು ಕಾಣಿಸಿಕೊಂಡಿತು. ಗುರುಮಾರ್ಲರು ಹೆಂಡತಿಯನ್ನು ಅಲಂಕರಿಸಿ ಸತ್ಯದಂಡಿಗೆಯಲ್ಲಿ ಕುಳ್ಳಿರಿಸಿ ಕಾನಬೆಟ್ಟಿಗೆ ಕಳುಹಿಸಿಕೊಟ್ಟರು.

ಸೊನ್ನೆಯ ಸತ್ಯದಂಡಿಗೆ ಹೊತ್ತ ಬೋವಿಗಳು ನೇರವಾಗಿ ಕಾನಬೆಟ್ಟಿನ ಅರಮನೆಯ ಕೆಂದಾಳೆಯ ಪದ್ಮಕಟ್ಟೆಯಲ್ಲಿ ಇಳಿಸಿದರು. ಸೊನ್ನೆ ನೇರವಾಗಿ ತಂಗಿಯ ಪೆರತ್ತ ನಡೆಯುತ್ತಿದ್ದ ಚಪ್ಪರ ಪ್ರವೇಶಿಸಿದಳು. ಆಗ ಊರ ಹೆಂಗಸರು “ಸೊನ್ನೆ ಇನ್ನೂ ಮೈನರೆಯದ ಗೊಡ್ಡು ಹೆಂಗಸು. ಹೆಣ್ಣು ಹೋಗಿ ಹೆಂಗಸಾಗದವಳು. ತಿಂಗಳು ತಿಂಗಳು ಹೊರಗೆ ಕುಳಿತುಕೊಳ್ಳುದವಳು. ವರ್ಷಕ್ಕೊಮ್ಮೆ ಹೆರದವಳು. ಅವಳಿರುವ ಕಳದಲ್ಲಿ ನಾವಿರಬಾರದು” ಎಂದು ಹೇಳಿ ಚಪ್ಪರ ಇಳಿದು ಹೋದರು.

ಊರ ಹೆಂಗಸರು ಚಪ್ಪರ ಇಳಿದು ಹೋದರೂ ಸರಿಯಾದ ಮುಹೂರ್ತಕ್ಕೆ ಗಿಂಡೆಯ ಪೆರತ್ತ ಆಗಲೇಬೇಕು ಎಂದು ಅಜ್ಜರು ಸೊನ್ನೆಯಲ್ಲಿ ಹೇಳಿದರು. ಸೊನ್ನೆ ನೇರವಾಗಿ ಅರಮನೆಯ ಯಮಗುಂಡ ಹೊಕ್ಕಳು. ಪ್ರೀತಿಯ ತಂಗಿಯ ಕೈ ಹಿಡಿದಳು. ತಂಗಿಯನ್ನು ಮುಕ್ಕಾಲ ಪೀಠದಲ್ಲಿ ಕುಳ್ಳಿರಿಸಿದಳು. ಬಗೆಬಗೆಯಲ್ಲಿ ಅಲಂಕರಿಸಿದಳು. ಸೊನ್ನೆ ತಂಗಿ ಗಿಂಡೆಯನ್ನು ಚಪ್ಪರಕ್ಕೆ ಕರೆತಂದಳು. ಹಿಡಿಯಿರುವ ಮಣೆಯಲ್ಲಿ ಕುಳ್ಳಿರಿಸಿದಳು. ಬೆಳ್ಳಿಯ ಕಂಚಿ ಇರಿಸಿದಳು. ಮುತ್ತಿನಲ್ಲಿ ದೇಸೆ ಹಾಕಿದಳು. ಹವಳದಲ್ಲಿ ಆರತಿ ಮಾಡಿದಳು. ಪೆರತ್ತದ ಆಚರಣೆಯನ್ನು ಒಬ್ಬಳೇ ಮಾಡಿ ಮುಗಿಸಿದಳು. ತಾನಿನ್ನು ಬರುವುದಾಗಿ ತಂಗಿ ಗಿಂಡೆಗೆ ಅಜ್ಜ ದುರ್ಗಲ್ಲಾಯ ಪೆರ್ಗಡೆಗೆ ಹೇಳಿ ದಂಡಿಗೆ ಏರಿ ಉರ್ಕಿತೋಟದ ತನ್ನ ಅರಮನೆಗೆ ಬಂದಳು. ದಂಡಿಗೆ ಬರುವ ಚಂದ ದೂರದಿಂದಲೇ ಕಂಡ ಗುರುಮಾರ್ಲರು ಕಳದಲ್ಲಿ ಸೊನ್ನೆಗೆ ಅವಮಾನ ಆಗಿರುವುದನ್ನು ಊಹಿಸಿದರು. ಅದಕ್ಕೆ ಸರಿಯಾಗಿ ಸೊನ್ನೆ ಎಂದಿನಂತೆ ಆನೆ ಬಾಗಿಲು ಬಿಟ್ಟು ಕುರುಬಾಗಿಲಲ್ಲಿ ಒಳಬಂದಳು. ಎಂದಿನ ಹಾಸುಗೆ ಬಿಟ್ಟು ಮಣ್ಣ ಹಾಸಿನ ಮೇಲೆ ಕತ್ತಲೆ ಕೋಣೆಯಲ್ಲಿ ಬೋರಲಾಗಿ ಮಲಗಿ ಕಣ್ಣೀರ್ಗರೆದಳು. ಗಂಡ ಗುರುಮಾರ್ಲರು ಸೊನ್ನೆಯನ್ನು ಹುಡುಕಿ ಬಂದರು. ಸೊನ್ನೆಯನ್ನು ಕರೆದು ಮಾತನಾಡಿಸಿದರು. ಸೊನ್ನೆ ಮೊದಲಿಗೆ ಮಾತಾಡಲಿಲ್ಲ. ಕಣ್ಣೀರು ಇಳಿಸುತ್ತಾ ಕಾನಬೆಟ್ಟಿನ ಅರಮನೆಯಲ್ಲಿ ಊರ ಹೆಂಗಸರು ಅವಮಾನಿಸಿದುದನ್ನು ಹೇಳಿದಳು. ಗುರುಮಾರ್ಲರು ಅಣ್ಣ ಜಾರುಮಾರ್ಲರಿಗೆ ಸೊನ್ನೆಗಾದ ಅವಮಾನವನ್ನು ವಿವರಿಸಿದರು. ಏನು ಮಾಡುವುದೆಂದು ಅಣ್ಣನಲ್ಲಿ ಸಲಹೆ ಕೇಳಿದರು.

ಜಾರುಮಾರ್ಲರು ಸೊನ್ನೆ ಕಾದ ಬಿಸಿನೀರಲ್ಲಿ ಜಳಕ ಮಾಡಿಕೊಂಡು ಒಳಗೆ ಬರಲಿ ಎಂದರು. ಸೊನ್ನೆ ಮಿಂದು ಬಂದಳು. ಮೈಲಿಗೆ ಬಟ್ಟೆ ಬಿಟ್ಟಳು, ಮಡಿ ಬಟ್ಟೆ ಸುತ್ತಿ ಬಂದಳು. ತುಳಸಿ ಮಂಟಪದೆದುರು ಮೂವರೂ ನಿಂತರು. ಉರಿಬೆರ್ಮರಿಗೆ ಜಾರುಮಾರ್ಲರು ಕೈ ಜೋಡಿಸಿ ನಿಂತರು. “ಸೊನ್ನೆ ಇಂದಿನ ತನಕ ಹೆಣ್ಣು ಹೋಗಿ ಹೆಂಗಸಾಗಿಲ್ಲ. ನಾಣು ಸತ್ಯದ ಮಗ ಹೌದೆಂದಾರೆ, ಇಂದು ನಾನು ಎಣಿಸಿದಂತೆ ಆಗಬೇಕು. ಉಜಿಲೊಟ್ಟು ಉರಿಬೆರ್ಮರ ಆಶೀರ್ವಾದ ನಮಗಾಗಬೇಕು. ಸೊನ್ನೆ ಮೈನರೆದು ಹೆಂಗಸಾಗಬೇಕು. ಅವಳಿಗೆ ಬಸಿರು ನಿಲ್ಲಬೇಕು. ಗರ್ಭ ಬೆಳೆಯಬೇಕು. ಸೊನ್ನೆಗೆ ಸಂತಾನ ಫಲ ದೊರೆತರೆ ಅಂದು ಅವಳ ಹೆಸರಲ್ಲಿ ಒಂದು ಕುಡಿತೆ ಹಾಲು, ಒಂದು ಹೆಣಿಗೆ ಬಾಳೆಹಣ್ಣು, ಎಳೆಯ ಕಂಗಿನ ಸಿಂಗಾರದ ಹೂ, ಮುಷ್ಟಿ ಹಣ, ಬಂಗಾರದ ಮಗು, ಬೆಳ್ಳಿಯ ತೊಟ್ಟಿಲನ್ನು ಉಜಿಲೊಟ್ಟು ಬ್ರಹ್ಮರಿಗೆ ಒಪ್ಪಿಸುತ್ತೇನೆ” ಎಂದರು. ಹರಕೆ ಹೇಳಿದರು, ಕೈ ಮುಗಿದರು. ಮುಡಿಪು ಕಟ್ಟಿದರು. ಜಾರುಮಾರ್ಲರು ಉರ್ಕಿತೋಟದ ಅರಮನೆ ಇಳಿದು ಕೆದಿಂಜ ಪರಾರಿ ತಲಪಿದರು.

ಮರುದಿನ ಬೆಳಗಾಯಿತು. ಸೊನ್ನೆ ಅರಮನೆಗೆ ದೂರವಾದಳು. ಅಂಗಳಕ್ಕೆ ಸಮೀಪವಾದಳು. ಮಿಂದ ನೀರಿಗೇ ನೀರು ನಿಂತಿತು. ಬಸುರಿಯಾದಳು. ತಿಂಗಳು ಒಂದೊಂದೇ ಕಳೆಯಿತು. ಮುಖದಲ್ಲಿ ಹೊಸ ಕಳೆ ಏರಿತು. ಗಂಡ ಗುರುಮಾರ್ಲ ಸಂತಸದಿಂದ ಊರಿಗೇ ಊರು ಸೇರಿಸಿ ಸಂಭ್ರಮದಿಂದ ‘ಬಯಕೆ ಮದುವೆ’ ನಡೆಸಿದರು.

ಒಂದು ಶುಭ ದಿನ. ಒಳ್ಳೆಯ ಘಳಿಗೆ. ಸೊನ್ನೆಯ ತಿಳಿಯಾದ ಮುಖದಲ್ಲಿ ಕಹಿಬೇನೆ ಕಾಣಿಸಿತು. ಬೆನ್ನಲ್ಲಿ ಬೆರ್ಮ ದೇವರ ಬೇನೆ, ಹೊಟ್ಟೆಯಲ್ಲಿ ಮಗುವಿನ ಬೇನೆ ಕಾಣಿಸಿಕೊಂಡಿತು. ನೋವಿಗೆ ಆಕೆ ಮೂರ್ಛೆ ಹೋದಳು. ಗಂಡ ಗುರುಮಾರ್ಲರು ಹಾಗೂ ಸೊನ್ನೆ ಉಜಿಲೊಟ್ಟು ಉರಿಬೆರ್ಮರನ್ನು ನೆನೆದರು. ಅಷ್ಟರಲ್ಲಿ ಒಂದು ಹೊಟ್ಟೆಯಿಂದ ಎರಡು ಹೆಣ್ಣು ಮಕ್ಕಳ ಜನನವಾಯಿತು. ಗುರುಮಾರ್ಲರು ಊರ ಹೆಂಗಸರನ್ನು ಕರೆಸಿ ಬಾಣಂತಿಗೆ ಎಲ್ಲ ಉಪಚಾರ ನಡೆಸಿದರು.

ಮೊದಲು ಕೆಳಗೆ ಬಿದ್ದ ಮಗುವಿಗೆ ಅಬ್ಬಗ ಎಂದು ಹೆಸರಿಟ್ಟರು. ಮತ್ತಿನ ಮಗುವಿಗೆ ದಾರಗ ಎಂದು ನಾಮಕರಣ ಮಾಡಿದರು. ಮಕ್ಕಳು ದಿನದಿಂದ ದಿನಕ್ಕೆ ಮೈ ತುಂಬಿ ಬೆಳೆದರು. ಮಕ್ಕಳಿಗೆ ಏಳು ಏಳೂವರೆ ವರ್ಷ ಪ್ರಾಯವಾಯಿತು. ಸೊನ್ನೆಯ ಮಕ್ಕಳ ಅಂದಚಂದ ‘ನಾಲ್ಕು ಊರು ನಾಲ್ಕು ದೇಶಕ್ಕೆ’ ಮುಟ್ಟಿತು. ಕಡೆರಿ ಕಾರ್ಲ ಕೊಡಿ ಕುಂಬಳೆಯ ಚಂದ್ರಾಮು ಸೆಟ್ಟಿಯ ಜೋಡು ಮಕ್ಕಳಾದ ರಾಮಲಕ್ಷ್ಮಣರಿಗೆ ಸೊನ್ನೆಯ ಮಕ್ಕಳು ಸತ್ಯದ ಮಕ್ಕಳಂತೆ, ಹರಕೆಯ ಕೂಸುಗಳಂತೆ ಎಂಬ ಸುದ್ದಿ ತಲುಪಿತು.

ಅಣ್ಣ ತಮ್ಮ-ರಾಮ ಲಕ್ಷ್ಮಣರು ಮೈ ತುಂಬಾ ಅಲಂಕರಿಸಿಕೊಂಡು ಕುದುರೆಯೇರಿ ಉರ್ಕಿ ತೋಟದ ಅರಮನೆಗೆ ಬಂದರು. ಗುರುಮಾರ್ಲರು ಬಂದ ಅತಿಥಿಗಳನ್ನು ಉಪಚರಿಸಿದರು. ಪಕ್ಕದ ಪರಸುದ್ದಿ, ಊರ ವರ್ತಮಾನ, ಅಂಗಡಿಯ ಬೇಳೆಕಾಳುಗಳ ದಪ್ಪುಧಾರಣೆ ವಿಚಾರಿಸಿದರು. ಬಂದ ಕಜ್ಜಕಾರ್ಯ ವಿಚಾರಿಸಿದರು. ಮಕ್ಕಳು ತಮ್ಮ ಪರಿಚಯ ಹೇಳಿಕೊಂಡರು. ತಮಗೆ ಅಬ್ಬಗ-ದಾರಗರನ್ನು ಮದುವೆ ಮಾಡಿಕೊಡಬೇಕೆಂದು ಕೇಳಿಕೊಂಡರು. ಮಕ್ಕಳು ಹುಟ್ಟುವ ಮೊದಲು ಮುಜಿಲೊಟ್ಟು ಉರಿಬ್ರಹ್ಮರಿಗೆ ಹರಕೆ ಹೇಳಿಕೊಂಡಿದ್ದೇವೆ, ಅದು ತೀರಿದ ಬಳಿಕವೇ ಮದುವೆಯ ವಿಚಾರ ಎಂದರು. ಗುರುಮಾರ್ಲರು. “ಹೆಣ್ಣು ಕೋರಿ ಬಂದವರಿಗೆ ಇಲ್ಲ ಎನ್ನಬಾರದು. ಮೊದಲು ಮದುವೆ ಆಗಲಿ, ಆ ಬಳಿಕ ಹರಕೆ ತೀರಿಸೋಣ” ಎಂದಳು ತಾಯಿ ಸೊನ್ನೆ. ಗಂಡ ಗುರುಮಾರ್ಲರು ಹರಕೆ ತೀರದೆ ಮದುವೆ ಸಲ್ಲದೆಂದು ಏಳೇಳು ಲೋಕದ ಕೋಪ ಕೋಪಿಸಿದರು. ತಾಯಿಗೆ ಮಕ್ಕಳ ಮದುವೆ ಬೇಗನೇ ಆಗಬೇಕೆಂದು ತೀವ್ರವಾದ ಆಸೆ. ತಾನು ಗಳಿಗೆಯಲ್ಲಿ ಕೆದಿಂಜ ಪರಾರಿಗೆ ಹೋಗಿ ಗಳಿಗೆಯಲ್ಲಿ ಬರುವುದಾಗಿ ಹೇಳಿ ತಲೆಗೆ ಮುಸುಕೆಳೆದುಕೊಂಡು ನಡು ಮಧ್ಯಾಹ್ನದ ಬಿಸಿಲಿಗೆ ಭಾವ ಜಾರುಮಾರ್ಲರಲ್ಲಿಗೆ ತೆರಳಿದರು. ಮಕ್ಕಳ ಮದುವೆಗೆ ಒಪ್ಪಿಗೆ ಕೊಡಬೇಕೆಂದೂ ಆ ಬಳಿಕ ಹರಕೆ ತೀರಿಸಬಹುದೆಂದೂ ಭಾವ ಜಾರುಮಾರ್ಲರಲ್ಲಿ ನಿವೇದಿಸಿಕೊಂಡಳು. ಉರ್ಕಿತೋಟಕ್ಕೆ ಬಂದು ಗಂಡ ಗುರುಮಾರ್ಲರಿಗೆ ಬುದ್ಧಿ ಹೇಳಬೇಕೆಂದು ಕೇಳಿಕೊಂಡಳು. ಜಾರುಮಾರ್ಲರು ಯಮಗುಂಡ ಹೊಕ್ಕರು. ಕಲ್ಲ ಕಲೆಂಬಿಯ ಬಾಯಿ ಹಾರಿಸಿದರು. ಉಟ್ಟ ಬಟ್ಟೆ ಬಿಟ್ಟರು. ಬೆಲೆಬಾಳ್ವ ಉಡುಪು ತೊಟ್ಟರು. ನಾಲ್ಕು ಮುಖದ ಮೂರು ತಿರುಗೂಟದ ಬಾಗಿಲು ಹಾಕಿದರು. ಮೆಟ್ಟಿಲು ಇಳಿದರು. ಅಂಗಳು ದಾಟಿದರು. ಗದ್ದೆ ನಡೆದು ಗುಡ್ಡೆ ಇಳಿದು ಉರ್ಕಿತೋಟದ ಅರಮನೆಗೆ ಬಂದರು.

ಜಾರುಮಾರ್ಲರು ಬಂದ ಅವಳಿ ಸೋದರರ ಗುರುತು ಪರಿಚಯ ಕೇಳಿದರು. ‘ಬಳಿ’ ವಿಚಾರಿಸಿದರು. ಹೆಣ್ಣು ಮಕ್ಕಳ ‘ಬಳಿ’ಗೆ ಸರಿಹೋಗುವುದು ತಿಳಿದು ತಮ್ಮ ಗುರುಮಾರ್ಲನನ್ನು ಮುಂದಿಟ್ಟು ಮದುವೆಗೆ ಮಾತುಕೊಟ್ಟರು. ವೀಳೆಯಪಟ್ಟಿ ವಿನಿಮಯ ಮಾಡಿದರು. ಮದುವೆಗೆ ದಿನ ನಿಶ್ಚಯ ಮಾಡಿದರು. ರಾಮಲಕ್ಷ್ಮಣರು ಉರ್ಕಿತೋಟದ ಅರಮನೆ ಇಳಿದು ಕಡೇರಿ ಕಾರ್ಲ ಸೇರಿದರು. ಜಾರುಮಾರ್ಲರು ಮದುವೆಗೆ ಸಿದ್ಧತೆ ಮಾಡುವಂತ ಹೇಳಿ ಕೆದಿಂಜ ಪರಾರಿಗೆ ನಡೆದರು.

ಗುರುಮಾರ್ಲರು ‘ಹಿಂದಿಲ್ಲ, ಮುಂದಿಲ್ಲ’ ಎಂಬಂತೆ ಮದುವೆಗೆ ಸಿದ್ಧತೆ ನಡೆಸಿದರು. ಚಪ್ಪರ ಹಾಕಿಸಿದರು, ಅಡುಗೆ ಮನೆ ಸಿದ್ಧವಾಯಿತು. ಮಕ್ಕಳ ಮದುವೆಗೆ ಹೇಳಿಕೆ ನೀಡಲು ತಾಯಿ ತಂದೆಯರೇ ಹೊರಟರು. ಮಕ್ಕಳಿಗೆ ಜೋಕೆಯಿಂದ ಇರಿ ಎಂದು ಬುದ್ಧಿ ಕಜ್ಜ ಹೇಳಿ ಅರಮನೆ ಇಳಿದು ನಡೆದರು. ಮಕ್ಕಳು ಅಪ್ಪ ಅಮ್ಮರ ತಲೆಕುಡಿ ಮಾಸುವವರೆಗೂ ಚಾವಡಿ ತುದಿಯಲ್ಲಿ ನಿಂತು ನೋಡಿದರು.

ಸೊನ್ನೆ, ಗುರುಮಾರ್ಲರು ನಡೆದು ನಡೆದು ಆಯಾಸಗೊಂಡರು. ಎದುರು ಸಿಕ್ಕಿದ ಅಬ್ಬನಡ್ಕದ ಗೋಳಿಕಟ್ಟೆಯಲ್ಲಿ ಕುಳಿತರು. ಆಯಾಸ ಪರಿಹರಿಸಿಕೊಂಡು ಮುಂದೆ ನಡೆಯೋಣ ಎಂದರು. ಉಜಿಲೊಟ್ಟು ಉರಿಬೆರ್ಮರಿಗೆ ಹರಕೆ ನೀಡದೆ ಮದುವೆ ಮಾಡಲು ಹೊರಟು ನಿಂತ ಸೊನ್ನೆ-ಗುರುಮಾರ್ಲರ ನಡತೆ ಬೆರ್ಮರ ಕಡೆಕಣ್ಣಿಗೆ ಕುಡಿಬಾನವಾಗಿ ಚುಚ್ಚಿತು. ಉರಿಬೆರ್ಮರು ಮಕ್ಕಳ ತಂದೆ-ತಾಯಿಯರಲ್ಲಿ ಎರಡು ಮಾತನಾಡಿ ಬರಬೇಕೆಂದು ನಾಲ್ಕು ಮನೆ ಬೇಡುವ ಮೂರು ಮನೆ ತಿರಿವ ಬಡ ಬ್ರಾಹ್ಮಣನ ವೇಷ ತೊಟ್ಟರು. ಕೈಯಲ್ಲಿ ಕಬ್ಬಿನ ಊರುಗೋಲು ಹಿಡಿದರು. ಹೆಗಲಿಗೆ ಪಟ್ಟೆಯ ಜೋಳಿಗೆ ಇಳಿಸಿಕೊಂಡರು. ಕೈಯಲ್ಲಿ ತಾಳ ತಂಬೂರಿ ಹಿಡಿದು ಅಬ್ಬನಡ್ಕದ ಗೋಳಿಕಟ್ಟೆಯಲ್ಲಿ ಪ್ರತ್ಯಕ್ಷರಾದರು. ಎಲ್ಲಿಗೆ ಹೋಗಿ ಬಂದವರೆಂದು ಬೆರ್ಮರು ಗುರುಮಾರ್ಲರನ್ನು ವಿಚಾರಿಸಿದರು. ಜೋಡು ಮಕ್ಕಳಾದ ಅಬ್ಬಗ-ದಾರಗರ ಮದುವೆಗೆ ಹೇಳಿಕೆ ನೀಡಲು ಹೋಗಿ ಬರುತ್ತಿರುವುದಾಗಿ ಸೊನ್ನೆ-ಗುರುಮಾರ್ಲರು ತಿಳಿಸಿದರು.

ಉಜಿಲೊಟ್ಟು ಉರಿಬೆರ್ಮರಿಗೆ ಹರಕೆ ಹೇಳಿ ಹುಟ್ಟಿದ ಮಕ್ಕಳಿಗೆ ಹರಕೆ ಒಪ್ಪಿಸದೆ ಮದುವೆ ಮಾಡುವುದು ಸರಿಯಲ್ಲವೆಂದು ಬ್ರಾಹ್ಮಣರು ಗುರುಮಾರ್ಲರಲ್ಲಿ ಹೇಳಿದರು. ಇದನ್ನು ಕೇಳಿಸಕೊಂಡ ಸೊನ್ನೆ ಏಳೇಳು ಹದಿನಾರು ಲೋಕದ ಕೋಪ ಕೋಪಿಸಿದಳು. ಬೇಡಿ ತಿನ್ನುವ ಬ್ರಾಹ್ಮಣನೆಂದು ಹಂಗಿಸಿ ಭಂಗಿಸಿ ಮಾತನಾಡಿದಳು. ಅವಾಚ್ಯ ಪದಗಳಿಂದ ನಿಂದಿಸಿದಳು. ಆಗ ಗುರುಮಾರ್ಲ ಹೆಂಡತಿಯ ಕಡುಮಾತಿಗೆ ತಾನೇ ಬ್ರಾಹ್ಮಣರಲ್ಲಿ ಕ್ಷಮೆಕೋರಿ ಉರ್ಕಿತೋಟದ ತಮ್ಮ ಅರಮನೆಗೆ ಹೋಗುವಂತೆ ಕೇಳಿಕೊಂಡರು.

ಬ್ರಾಹ್ಮಣ ವೇಷದ ಉರಿಬೆರ್ಮರು ಉರ್ಕಿತೋಟದ ಅರಮೆನಯೆದುರು ಜೋಗವಾದರು. ಮೂಡು ದಿಕ್ಕಿನ ತುಳಸಿ ಮಂಟಪದೆದುರು ಕುಣಿಯುತ್ತಾ ಹಾಡು ಹೇಳತೊಡಗಿದರು. ಜೋಡು ಮಕ್ಕಳು ಹೊರಗೆ ಬಂದು ಭಿಕ್ಷೆ ನೀಡಿದರು. ಬ್ರಾಹ್ಮಣರು ಬೇಡವೆಂದರು. “ನೀವು ಚೆನ್ನೆಯಾಟದಲ್ಲಿ ಜಾಣರೆಂದು ಕೇಳಿದ್ದೇನೆ. ನಿಮ್ಮ ಒಂದು ಆಟವನ್ನು ನಾನು ನೋಡಬೇಕು” ಎಂದರು. ಮಕ್ಕಳು ಯೇಳರೆಯ ಯಮಗುಂಡ ಹೊಕ್ಕರು. ಚೆನ್ನೆಮಣೆಯಿಟ್ಟ ಕಲ್ಲ ಕಲೆಂಬಿಗೆ ಬೀಗ ಹಾಕಿತ್ತು. ಬೆಳ್ಳಿಯ ಮಣೆ ಬಂಗಾರದ ಹರಳಿನ ಚೆನ್ನೆಮಣೆಯನ್ನು ಅಪ್ಪ ಅಮ್ಮ ಕಲೆಂಬಿಯೊಳಗೆ ಬೀಗ ಹಾಕಿರಿಸಿರುವುದಾಗಿ ಹೇಳಿದರು. ಇನ್ನೊಮ್ಮೆ ಹೋಗಿ ನೋಡಿರಿ, ಎಂದು ಬ್ರಾಹ್ಮಣರು ಹೇಳಿದರು. ಮತ್ತೊಮ್ಮೆ ಮಕ್ಕಳು ಕಲೆಂಬಿ ಇದ್ದೆಡೆಗೆ ಹೋದರು. ಈಗ ಕಲೆಂಬಿಯ ಬೀಗ ತೆರೆದಿತ್ತು. ಮಕ್ಕಳು ಬೆಳ್ಳಿಯ ಚೆನ್ನೆಮಣೆ ಬಂಗಾರದ ಹರಳು ಹಿಡಿದು ಚಾವಡಿಗೆ ಬಂದರು. ಪಕ್ಕದಲ್ಲೇ ಬ್ರಾಹ್ಮಣ ಕುಳಿತರು. ಅಬ್ಬಗ ದಾರಗರು ಚೆನ್ನೆಯಾಟಕ್ಕೆ ತೊಡಗಿದರು. ಒಂದಾಟವಾಯಿತು. ಅಕ್ಕ ಅಬ್ಬಗ ಸೋತಳು. ತಂಗಿ ದಾರಗ ಗೆದ್ದಳು. ಚೆನ್ನೆಮಣೆಯ ಬದಿಯನ್ನು ಅದಲು ಬದಲು ಮಾಡಿ ತಂಗಿ ದಾರಗನ ನಡುನೆತ್ತಿಗೆ ಅದರಿಂದ ಹೊಡೆಯುವಂತೆ ಬ್ರಹ್ಮಣರು ಸೋತ ಅಬ್ಬಗಗೆ ಹೇಳಿದರು. ಅಕ್ಕ ಅಬ್ಬ ಸೋತ ಮೂಲೆಯನ್ನು ಗೇಲಿನ ಮೂಲೆಯಾಗಿ ಮಾಡಿದಳು. ಗೆದ್ದ ಮೂಲೆಯನ್ನು ಸೋಲಿನ ಮೂಲೆಯಾಗಿಸಿದಳು. ಮಣೆ ಎತ್ತಿ ತಂಗಿ ದಾರಗನ ನಡುನೆತ್ತಿಗೆ ಕುಕ್ಕರಿಸಿದಳು. ದಾರಗ ಕುಳಿತಲ್ಲಿಂದಲೇ ಮುಗ್ಗರಿಸಿದಳು. ಕೈಬಿಟ್ಟು ಕೈಲಾಸ, ಜೀವಬಿಟ್ಟು ವೈಕುಂಠ ಸೇರಿದಳು. ಅಕ್ಕ ಅಬ್ಬಗನನ್ನು ಕರೆದು “ ನಿನ್ನ ತಂದೆ ತಾಯಿಯರು ನಿಮ್ಮ ಮದುವೆಗೆ ಹೇಳಿಕೆ ಹೇಳಲು ಹೋಗಿದ್ದಾರೆ. ಈಗ ಬರುವ ಹೊತ್ತಾಯಿತು. ಬಂದವರು ನಿನ್ನನ್ನು ಇರಲು ಬಿಡರು. ತಂಗಿ ದಾರಗನ ಹೆಣವನ್ನು ನೀರಿಗೆ ಎಸೆದುಬಿಡು. ನೀನು ನಿಮ್ಮ ಮನೆಯ ಮುತ್ತಿನ ಕೆರೆಗೆ ಹಾರಿಬಿಡು” ಎಂದರು. ಚೆನ್ನೆಮಣೆಯನ್ನು ಬ್ರಾಹ್ಮಣರು ಕೊಂಡೊಯ್ದು ಕಲ್ಲ ಕಲೆಂಬಿಯೊಳಗೆ ಇರಿಸಿ ಬಂದರು.

ಅಕ್ಕ ಅಬ್ಬಗ ತಂಗಿ ದಾರಗನನ್ನು ಹೆಗಲ ಮೇಲೆ ಹಾಕಿಕೊಂಡು ಹೋಗಿ ಕೆರೆಗೆ ಎಸೆದಳು. ತಾನು ಆ ಕೆರೆಗೆ ಹಾರಿದಳು. ಅಕ್ಕ ಅಬ್ಬಗನ ಜೀವಕ್ಕೆ ಎಂತರ ಬಂದಿತು; ಆಕೆ ಜೀವ ಬಿಟ್ಟು ಕೈಲಾಸಕ್ಕೆ ಸಂದಳು. ಅಷ್ಟರಲ್ಲಿ ಬ್ರಾಹ್ಮಣ ವೇಷಧಾರಿ ಇದ್ದಕ್ಕಿದ್ದಂತೆ ಮರೆಯಾದರು. ಮಕ್ಕಳ ಮದುವೆಗೆ ಹೇಳಿಕೆ ನೀಡಲು ಹೋಗಿದ್ದ ಸೊನ್ನೆ-ಗುರುಮಾರ್ಲರು ಮನೆಗೆ ಮರಳಿದರು. ಮನೆಯಲ್ಲಿ ಸದ್ದು ಗದ್ದಲವಿಲ್ಲ, ಮಕ್ಕಳ ಸೊರದನಿಯಿಲ್ಲ. ಮಕ್ಕಳನ್ನು ಉರ್ಕಿತೋಟದ ಮೂಲೆ ಮೂಲೆಗಳಲ್ಲಿ ಅರಸಿದರು. ಸೊನ್ನೆ ಅತ್ತಳು, ಬೊಬ್ಬಿಟ್ಟಲು, ತಲೆ ತಲೆ ಬಡಿದುಕೊಂಡಳು. ಗುರುಮಾರ್ಲರು ಓಡಿ ಹೋಗಿ ಮುತ್ತಿನ ಕೆರೆಯ ಬಳಿ ಹೋಗಿ ಇಣುಕಿ ನೋಡಿದರು. ಅಬ್ಬಗ ದಾರಗರ ಶವ ಹಿಂಗಾರದ ಹಾಳೆ ತೇಲುವಂತೆ ನೀರಲ್ಲಿ ತೇಲುತ್ತಿತ್ತು. ಮದುವೆ ಮಾಡಿ ಮಕ್ಕಳ ನೆತ್ತಿಮೇಲೆ ಅಕ್ಕಿಕಾಳು ಹಾಕಬೇಕೆಂದಿದ್ದ ತಮಗಾದ ದುರ್ಗತಿಯನ್ನು ಹಳಿದುಕೊಂಡು ಗುರುಮಾರ್ಲ-ಸೊನ್ನೆ ದುಃಖಿಸಿದರು.

ಹೊಸ ಹಗ್ಗ, ಹಲಗೆ ತರಿಸಿ ಮಕ್ಕಳ ಹೆಣಗಳನ್ನು ಗುರುಮಾರ್ಲರು ಕೆರೆಯಿಮದ ಎತ್ತಿಸಿದರು. ಹೆಣಗಳ ಮೇಲೆ ಕುತ್ತಟ್ಟದಿಂದ ಮುಡಿ ಮುಡಿ ಅಕ್ಕಿ ಸುರಿದು ಉಸಿರು ಹುಟ್ಟುತ್ತದೋ ಎಂದು ನೋಡಿದರು. ಎಲ್ಲವೂ ನಿಷ್ಫಲ. ಅರವೂರು ಪರವೂರುಗಳಿಂದ ಜನ ಬಂದು ಸೇರಿದರು. ಆಚೆ ಕೆರೆಯ ಮಾವಿನ ಮರ, ಈಚೆ ಕೆರೆಯ ಹಲಸಿನ ಮರ ಕಡಿಸಿದರು. ಬತ್ತದ ಗದ್ದೆಯಲ್ಲಿ ಮಸಣದ ಕಾಷ್ಠ ಒಟ್ಟಿದರು. ಹೆನ ಮೀಯಿಸಲು ಮಾವಿನ ತೊಗಟೆ ಹಾಕಿದ ಬಿಸಿನೀರು ಕಾಯಿಸಿದರು. ಹೆಣಕ್ಕೆ ಎಣ್ನೆ ಅರಸಿನ ಹಾಕಿ ಬಿಸಿನೀರಲ್ಲಿ ಮೀಯಿಸಿದರು. ಹರಕೆ ಕೊಡದೆ ಮದುವೆಗೆ ಮುಂತಾದ ಸೊನ್ನೆಯ ವರ್ತನೆಗೆ ದೂಷಿಸಿದರು. ಸೊನ್ನೆ ಬಗೆಬಗೆಯಾಗಿ ತನ್ನನ್ನು ಹಳಿದುಕೊಂಡಳು. ಹೆಣವನ್ನು ಚಿತೆಯಲ್ಲಿರಿಸಿದರು. ಕುತ್ತಿ(ಒಂದು ಮಾನ) ಕುತ್ತಿ ಎಣ್ಣೆ ಚಿತೆಗೆ ಸುರಿದರು. ಬೆಂಕಿ ಕೊಳ್ಳಿ ಇರಿಸಿದರು. ಹೆಣದ ಎದೆ ತನಕ ಸುಡುತ್ತಾ ಬಂದಿತು. ಅಷ್ಟರಲ್ಲಿ ಅಬ್ಬಗ ಹಾರಗರು ಬಂಗಾರದ ದುಂಬಿಗಳಾಗಿ ‘ಬುರ್ರಪ್ಪಾ’ ಎಂದು ಮೆಲು ಮೆಲಿನ ಲೋಕಕ್ಕೆ ಹಾರಿಹೋದರು. ಸ್ವಾಮಿ ನಾರಾಯಣ ದೇವರ ಕತ್ತಲೆಯ ಕೋಣೆಯ ಬಂಗಾರದ ಗಜಕಂಬದಲ್ಲಿ ಎರಡು ದುಂಬಿಗಳು ಹೋಗಿ ಕುಳಿತವು. ಕಾಲುಗಳಿಗೆ ಕಬ್ಬಿಣದ ಸಂಕಲೆ ಬಿಗಿಸಿದರು. ದೇವರು ಕೋಣೆಯ ಬಾಗಿಲು ಮುಚ್ಚಿದರು.

ಕತ್ತಲೆ ಕೋಣೆಯಲ್ಲಿ ದುಂಬಿಗಳ ಸದ್ದುಗದ್ದಲ ಅರಚಾಟ ಕಿರುಚಾಟದಿಂದ ದೇವರ ನಿದ್ರೆಗೆ ಭಂಗ ಬಂದಿತು. ದೇವರು ಕತ್ತಲೆ ಕೋಣೆಯ ಬಾಗಿಲು ತೆರೆದು “ನಿಮ್ಮ ಬೀರ ನನಗೆ ಸಹಿಸಲಾಗುವುದಿಲ್ಲ. ನಿಮಗೇನಾಗಬೇಕು, ಹೇಳಿರಿ” ಎಂದರು. “ಉರ್ಕಿತೋಟದ ಸೊನ್ನೆ, ಗುರುಮಾರ್ಲರ ಮಕ್ಕಳ ನಾವು. ಮುಜಿಲೊಟ್ಟು ಉರಿಬ್ರಹ್ಮರ ಹರಕೆಯಿಂದ ಹುಟ್ಟಿದವರು ನಾವು. ನಮಗೊಮ್ಮೆ ಕೆಳಗಿನ ಸಿರಿಲೋಕಕ್ಕೆ ಹೋಗಿ ಬರಬೇಕು. ಆ ವರ ನೀವು ನೀಡಬೇಕು” ಎಂದು ದುಂಬಿರೂಪದ ಬಾಲಕಿಯರು ದೇವರಲ್ಲಿ ಬೇಡಿಕೊಂಡರು.

“ಆಗಲಿ, ದುಂಬಿಗಳ ರೂಪದಲ್ಲಿ ಹಾರಾಡುತ್ತಾ ಹೋಗಿ ಅಬ್ಬನಡ್ಕದ ಗೋಳಿ ಕಟ್ಟೆಯಲ್ಲಿ ಮನುಷ್ಯ ರೂಪ ತಾಳಿರಿ” ಎಂದು ದೇವರು ಅಬ್ಬಗದಾರಗರಿಗೆ ವರವನ್ನಿತ್ತರು.

ಅಬ್ಬಗ ದಾರಗರು ಮೇಲು ಮೇಲಿನ ಲೋಕದಿಂದ ದುಂಬಿಗಳಾಗಿ ಹಾರಾಡುತ್ತಾ ಇಳಿದು ಅಬ್ಬನಡ್ಕದ ಗೋಳಿಕಟ್ಟೆಯಲ್ಲಿ ಹೆಣ್ಣುಮಕ್ಕಳ ರೂಪ ಧರಿಸಿದರು. ಚಕ್ಕಳ ಬಕ್ಕಳ ಹಾಕಿ ಕುಳಿತರು. ಅದೇ ಸಮಯದಲ್ಲಿ ಪಕ್ಕದ ಬೂಡಬಾರಿ ಅಬ್ಬೆಯಂದಿರು ಹೆಣ್ಣು ಹೋಗಿ ಹೆಂಗುಸಾಗಿದ್ದರು. ಅವರ ನೀರ ಪೆರತ್ತಕ್ಕೆ ದಿನ ನಿಶ್ಚಯವಾಗಿತ್ತು. ಬೂಡುಬಾರಿ ಮಕ್ಕಳ ಅಲಂಕಾರಕ್ಕಾಗಿ ಹೂಮಾರುವ ಕುಡುಂಬೆದಿ ಹೆಂಗಸು (ಕ್ರೈಸ್ತ ಹೆಂಗಸು) ಒಂದು ಬುಟ್ಟಿ ತುಂಬಾ ಹೂ ತಲೆ ಮೇಲೆ ಇರಿಸಿಕೊಂಡು ಬಂದಳು. ಅಬ್ಬನಡ್ಕದ ಗೋಳಿಕಟ್ಟೆಯಲ್ಲಿ ಕುಳಿತ್ತಿದ್ದ ಈ ಬಾಲಕಿಯರನ್ನು ಕಂಡು ಯಾರು ಏನು ಎಂದು ವಿಚಾರಿಸಿದಳು. “ನಾವು ಮೇಲು ಮೇಲಿನ ಲೋಕದಿಂದ ಕೆಳಗಿನ ಈ ಸಿರಿಲೋಕಕ್ಕೆ ಅವತರಿಸಿದವರು. ನಿಮ್ಮ ತಲೆಮೇಲಿನ ಹೂವಿನ ಬುಟ್ಟಿ ಕೆಳಗಿಳಿಸಿರಿ. ಇಲ್ಲೇ ಸಮೀಪ ಉರ್ಕಿತೋಟದಲ್ಲಿ ನಮ್ಮ ತಾಯಿ ಸೊನ್ನೆ ಇದ್ದಾರೆ. ನಾವು ಮೂರು ದಿನದ ಕೆಳಗೆ ಸಾವಿಗೀಡಾದ ಅವಳಿ ಬಾಲಕಿಯರು. ಇಂದು ದೇವರ ವರ ಪಡೆದು ಮೇಲು ಮೇಲಿನ ಲೋಕದಿಂದ ಕೆಳಗಿಳಿದು ಈ ಸಿರಿಲೋಕಕ್ಕೆ ಬಂದವರು. ನಮ್ಮ ಮನೆಗೆ ಹೋಗಿ ತೀರಿಹೋದ ನಿಮ್ಮ ಮಕ್ಕಳು ಗೋಳಿಕಟ್ಟೆಯಲ್ಲಿ ‘ಜೋಗ’ವಾಗಿದ್ದಾರೆ ಎಂದು ಹೇಳಬೇಕು. ನಮ್ಮ ಮನೆಯ ಏಳರೆಯ ಯಮಗುಂಡದಲ್ಲಿ ಬಂಗಾರದ ಬಣ್ಣದ ಪಟ್ಟೆಯಿದೆ. ಬಂಗಾರದ ಬಾಚಣಿಗೆ, ಬಂಗಾರದ ಚಿಕ್ಕ ಚಾಪೆ ಇದೆ. ಬೆಳ್ಳಿಯ ಎಣ್ಣೆಪಾತ್ರೆ ಇದೆ. ಎಲ್ಲವನ್ನೂ ನಮ್ಮ ತಾಯಿಯಲ್ಲಿ ಕೇಳಿ ತನ್ನಿರಿ” ಎಂದರು.

ಕಡುಂಬೆದಿ ಬಾಯಿ ಉರ್ಕಿತೋಟದ ಅರಮೆನಗೆ ನಡೆದಳು. ಅಂಗದಲ್ಲಿ ನಿಂತು ಸೊನ್ನೆಯನ್ನು ಕರೆದಳು. “ಅಬ್ಬನಡ್ಕದ ಗೋಳಿಕಟ್ಟೆಯಲ್ಲಿ ಜೋಗದಲ್ಲಿ ಕುಳಿತಿರುವ ನಿಮ್ಮ ಮಕ್ಕಳಿಗೆ ಬಂಗಾರದ ಬಣ್ಣದ ಪಟ್ಟೆ ಬೆಳ್ಳಿಯ ಎಣ್ಣೆಪತ್ರೆ, ಬಂಗಾರದ ಬಾಚಣಿಗೆ ಕೊಡಿರಿ. ನಿಮ್ಮ ಮಕ್ಕಳು ಅಂಗಸಿಂಗಾರಗೊಂಡು ಇಲ್ಲಿಗೆ ಬರಲಿದ್ದಾರೆ” ಎಂದಳು. ಸೊನ್ನೆ ಮಕ್ಕಳು ಕೇಳಿದುದೆಲ್ಲವನ್ನೂ ಕಡುಂಬೆದಿ ಬಾಯಿಗೆ ನೀಡಿದಳು. ಅವಳು ಅವುಗಳನ್ನು ಹಿಡಿದುಕೊಂಡು ಅಬ್ಬನಡ್ಕದ ಗೋಳಿಕಟ್ಟೆಗೆ ಬಂದಳು. ಜೋಡು ಮಕ್ಕಳ ಕೋರಿಕೆಯಂತೆ ಕಡುಂಬೆದಿ ಬಾಯಿ ಅವರ ಕೂದಲಿಗೆ ಎಣ್ಣೆ ಹಾಕಿ, ತಲೆ ಬಾಚಿ, ಪಟ್ಟೆ ಸೀರೆ ಉಡಿಸಿದಳು. ಬುಟ್ಟಿಯ ಹೂವನ್ನು ತಲೆಗೇರಿಸುವಂತೆ ಕೇಳಿದರು. ಬುಟ್ಟಿಯ ಮುಗುಳುಮಲ್ಲಿಗೆ ಹೂವಿನ ಮಾಲೆಯಿಂದ ಮಕ್ಕಳಿಗೆ ಜಲ್ಲಿ ಹಾಕಿದಳು. ಬೂಡುಬಾರಿ ಅಬ್ಬೆಯರ ಮನೆಗೆ ನೀರ ಪೆರತ್ತಕ್ಕೆ ನೀವು ಹೋಗಬಹುದು ಎಂದು ಮಕ್ಕಳು ಕುಡುಂಬೆದಿ ಬಾಯಿಗೆ ಹೇಳಿದರು. ಹೂವಿನ ಬುಟ್ಟಿಯನ್ನು ಆಕೆಯ ತಲೆಗೇರಿಸಿದರು.

“ನಮ್ಮನ್ನು ಮೈತುಂಬ ಅಲಂಕರಿಸಿದಿರಿ, ತಲೆತುಂಬ ಹೂವಿನ ಜಲ್ಲಿ ಇಳಿಬಿಟ್ಟಿರಿ. ನೀವು ತಲೆಮೇಲೆ ಹೊತ್ತ ಹೂವಿನ ಬುಟ್ಟಿ ಒಂದಕ್ಕೆ ಒಂದೂವರೆಯಷ್ಟಾಗಲಿ. ಮುಳ್ಳ ಮೇಲೆ ಕುಳಿತರೂ ನಿಮಗೆ ಒಂದು ಮುಷ್ಟಿ ಅನ್ನಕ್ಕೆ ಸಂಚಕಾರ ಬರದಿರಲಿ” ಎಂದು ಮಕ್ಕಳು ಕಡುಂಬೆದಿ ಬಾಯಿಗೆ ಮಣ್ಣುಮುಟ್ಟಿ ಹೆಣ್ಣಶಾಪ (ವರ) ಇತ್ತರು.

ಕುಡುಂಬೆದಿ ಬಾಯಿ ಹೂವಿನ ಬುಟ್ಟಿ ತಲೆಗಿರಿಸಿಕೊಂಡು ಬೂಡುಬಾರಿ ಅಬ್ಬೆಯವರ ಮನೆಗೆ ತೆರಳಿದಳು. ಅಲ್ಲಿ ಪಂಚಾಮೃತದ ಅಡುಗೆಯ ಸಿದ್ಧತೆ ನಡೆಯುತ್ತಿತ್ತು. ಹೆಣ್ಣು ಹೋಗಿ ಹೆಂಗುಸಾದ ಇಬ್ಬರು ಬಾಲಕಿಯರು ಏಳಂತಸ್ತಿನ ಉಪ್ಪರಿಗೆಯ ಕಿಟಕಿಯ ಬಳಿ ಕುಳಿತಿದ್ದರು. ಮಡವಾಳ್ತಿ ಚೆಲುವೆ ಊರು ಸೇರಿಸಿ ನೀರಪೆರತ್ತಕ್ಕೆ ಎಲ್ಲ ಸಿದ್ಧತೆ ಮಾಡುತ್ತಿದ್ದಳು. ಅಬ್ಬನಡ್ಕದ ಗೋಳಿಕಟ್ಟೆಯಲ್ಲಿ ಅಲಂಕರಿಸಿಕೊಂಡು ಕುಳಿತಿದ್ದ ಅಬ್ಬಗ ದಾರಗರು ಮಾಯಾರೂಪ ಧರಿಸಿಕೊಂಡರು. ಬೂಡುಬಾರಿಯ ಅರಮನೆಯ ಏಳನೆ ಅಂತಸ್ತಿನಲ್ಲಿ ಬೂಡುಬಾರಿ ಅಬ್ಬೆಯರ ರೂಪದಲ್ಲಿ ಪ್ರತ್ಯಕ್ಷರಾದರು. ಅಲ್ಲಿದ್ದ ಬುಡುಬಾರಿ ಅಬ್ಬೆಯರನ್ನು ಮಾಯಮಾಡಿದರು. ಅವರು ಕುಳಿತಿದ್ದ ಜಾಗದಲ್ಲಿ ತಾವು ನೆಲೆಯಾದರು. ಮಡಿವಾಳ್ತಿ ಚೆಲುವೆ ಬಾಲಕಿಯರ ಕೈ ಹಿಡಿದು ಹೊರಗೆ ಕರೆತಂದಳು. ಬರೆದ ಮಂಡಲಕ್ಕೆ ಇರಿಸಿದ್ದ ಕಳಶಕ್ಕೆ ಪ್ರದಕ್ಷಿಣೆ ಬರಿಸಿದಳು. ಬತ್ತದ ಮುಡಿ ಮೇಲೆ ಕುಳ್ಳಿರಿಸಿದಳು. ಶುದ್ಧದ ನೀರಿಂದ ಮೀಯಿಸಿದಳು. ಮೈಲಿಗೆ ಬಟ್ಟೆ ತೆಗೆಸಿದಳು. ಮಡಿಬಟ್ಟೆ ಉಡಿಸಿದಳು. ಅಂಗಸಿಂಗಾರ ಮಾಡಿಸಿದಳು. ಮದುಮಕ್ಕಳ ನಡುನೆತ್ತಿಗೆ ಊರ ಮಂದಿ ಸೇಸೆ ಹಾಕಿದರು. ಕಂಟಿ ಇರಿಸಿ ವರಹದ ಉಡುಗೊರೆ ಆಯಿತು. ಮದುಮಕ್ಕಳಿಗೆ ಪಾತ್ರೆಪರಡಿ ಹಿಡಿಸಿದರು. ಜೋಡುಮಕ್ಕಳನ್ನು ಮತ್ತೆ ಉಪ್ಪರಿಗೆಗೆ ಕರೆದೊಯ್ದರು. ಬೂಡುಬಾರಿ ಅಬ್ಬೆಯರ ರೂಪು ಧರಿಸಿದ್ದ ಅಬ್ಬಗ ದಾರಗರು ಮಾಯವಾದರು. ಬುಡುಬಾರಿ ಅಬ್ಬೆಯರು ಮತ್ತೆ ರೂಪು ತಳೆವಂತೆ ಮಾಡಿದರು. ಅಲ್ಲಿಂದ ಅಬ್ಬಗ ದಾರಗರು ಉರ್ಕಿತೋಟದ ಸಾಲರಿ ಚಾವಡಿಯಲ್ಲಿ ಜೋಗವಾದರು. ಬಂಗಾರದ ತೂಗುಯ್ಯಾಲೆಯಲ್ಲಿ ಕುಳಿತರು. ಯೇಳದೆ ಯಮಗುಂಡದೊಳಗೆ ದುಃಖದಲ್ಲಿ ಮುಸುಕೆಳೆದು ಕುಳಿತಿದ್ದ ಸೊನ್ನೆಗೆ ತೂಗುಯ್ಯಾಲೆ ‘ಗಿರಿಗಿರಿ’ ಸದ್ದು ಮಾಡುವುದು ಕೇಳಿಸಿತು. ‘ರಾಮ ರಾಮ, ಅಯ್ಯಯ್ಯೋ ಪಾಪವೇ’ ಎಂದೆನ್ನುತ್ತಾ ಸೊನ್ನೆ ಚಾವಡಿಗೆ ಬಂದಳು. ನಿನ್ನೆ ಮೊನ್ನೆ ಕೈಬಿಟ್ಟು ಕೈಲಾಸಕ್ಕೆ ಸಂದ ಮಕ್ಕಳು ಮಾನವ ರೂಪದಲ್ಲಿ ಬಂದಿರುವುದು ಕಂಡು ಅವಳಿಗೆ ಬೆರಗು! ಪ್ರೀತಿಯಿಂದ ಮಕ್ಕಳನ್ನು ಕೈಯಾರೆ ಮುಟ್ಟಲು ಓಡೋಡಿ ಹೋದಳು. “ಅಮ್ಮಾ ನಮ್ಮನ್ನು ಮುಟ್ಟಬೇಡಿರಿ. ನಾವು ನಿಮಗೆ ಸಿಗುವ ಮಕ್ಕಳಲ್ಲ. ನಾವು ಮೇಲಿನ ಲೋಕಕ್ಕೆ ಸೇರಿದವರು. ಸ್ವಾಮಿಯ ವರ ಪಡೆದು ಮಾಯಾರೂಪದಲ್ಲಿ ಈ ಸಿರಿಲೋಕಕ್ಕೆ ಬಂದವರು. ನಿಮ್ಮನ್ನು ಕಂಡದ್ದಾಯಿತು.” ಎನ್ನುತ್ತಾ ಉರ್ಕಿತೋಟದ ಸಾಲರಿ ಚಾವಡಿಯಿಂದ ಜೋಗಬಿಟ್ಟು ಮಾಯ ರೂಪು ತಳೆದರು. ಮೇಲು ಮೇಲಿನ ಲೋಕದಲ್ಲಿ ಸ್ವಾಮಿಯ ಪಾದ ಹಿಡಿದರು. ಆಗ ಸ್ವಾಮಿ ನಾರಾಯಣ ದೇವರು “ಇನ್ನು ಮುಂದಕ್ಕೆ ಸಿರಿಬಾಲೆ ಲೋಕದ ದೇವ ದೇವಸ್ಥಾನಗಳಲ್ಲಿ ಅಬ್ಬಗ ದಾರಗರಿಗೆ ದಲ್ಯ ಹಾಕುವಂತಾಗಲಿ” ಎಂದು ವರವಿತ್ತರು.