ಶ್ರೀಮತಿ ರಾಮಕ್ಕ ಮುಗ್ಗೇರ್ತಿ ತುಳುನಾಡಿನ ಹೆಸರಾಂತ ಪಾಡ್ದನ ಕವಿ ಹಾಗೂ ಗಾಯಕಿ. ಅವರು ಹುಟ್ಟಿದ್ದು, ಬೆಳೆದದ್ದು ಮಂಗಳೂರು ಸಮೀಪದ ವಾಮಂಜೂರಿನಲ್ಲಿ. ಕರಾವಳಿಯ ಪರಿಶಿಷ್ಟ ಜನವರ್ಗಗಳಲ್ಲಿ ಒಂದಾದ ಮುಗ್ಗೇರ ಸಮುದಾಯಕ್ಕೆ ಸೇರಿದವರು ಅವರು. ಕೂಕ್ರ ಮುಗ್ಗೇರ ಹಾಗೂ ದುಗ್ಗಮ್ಮ ಅವರ ತಂದೆ ತಾಯಿಗಳು. ನಿರಕ್ಷರಿಯಾದ ಅವರು ಅಕ್ಷರಪಠ್ಯ ರಚಕರಲ್ಲವಾದರೂ ಮೂವತ್ತಕ್ಕೂ ಹೆಚ್ಚು ಸುದೀರ್ಘ ಪಾಡ್ದನ ಕಾವ್ಯಗಳನ್ನೂ ಹದಿನೈದಕ್ಕೂ ಹೆಚ್ಚು ‘ಕಬಿತ’ ಗಳನ್ನೂ ಮಾನಸಿಕ ಪಠ್ಯ ರೂಪದಲ್ಲಿ ತಮ್ಮಲ್ಲಿ ದಾಖಲಿಸಿಕೊಂಡವರು. ಕಟೀಲಿಗೆ ಸಮೀಪದ ಗಿಡಿಕೆರೆ ಮದುವೆ ಆಗಿ ಬಂದ ಊರು. ೧೭ನೇ ವಯಸ್ಸಿಗೆ ಶ್ರೀ ಕಾಪೀರ ಮುಗ್ಗೇರರ ಜತೆ ರಾಮಕ್ಕನ ಮದುವೆ ನಡೆಯಿತು. ಮುಂದೆ ಅರ್ಥ ಶತಮಾನಕ್ಕೂ ಹೆಚ್ಚು ಕಾಲ ಆ ಊರಲ್ಲಿ ಪಾಡ್ದನ ಕಟ್ಟುವ, ಅದನ್ನು ನಾಟಿಗದ್ದೆಗಳಲ್ಲಿ ಹಾಡುವ ಕೆಲಸ ಅವರಿಂದ ನಡೆಯಿತು.

ರಾಮಕ್ಕ ಅವರಿಗೆ ಪಾಡ್ದನ ನೀರೂಪಣೆ ಬಾಯಿಪಾಠವಲ್ಲ, ಅದು ಪ್ರದರ್ಶನದ ಸಂದರ್ಭದಲ್ಲಿ ಮರುಸೃಷ್ಟಿಗೊಳ್ಳುವ ಪ್ರಕ್ರಿಯೆ. ಮುದವೆಯಾಗಿ ಗಂಡನ ಮನೆಗೆ ಬರುವ ಹೊತ್ತಿಗಾಗಲೇ ಅವರಿಗೆ  ಪಾಡ್ದನ ಕಟ್ಟುವ ಕಲೆ ಕರಗತವಾಗಿತ್ತು. ಈ ಬಗೆಗೆ ಅವರು ನೀಡಿದ ವಿವರ ಹೀಗದೆ: “ನನ್ನ ಅಜ್ಜಿ ಪಾಡ್ದನದ ಗೂಡು. ಅವರಿಗೆ ನಾನೆಂದರೆ ಭಾರಿ ಪ್ರೀತಿ. ಅವರು ರಾತ್ರಿ ಊಟವಾದ ಮೇಲೆ ನನ್ನನ್ನು ಅವರು ಮಲಗುವ ಚಾಪೆಯ ಮೇಲೆ ಕುಳ್ಳಿರಿಸಿಕೊಂಡು, ಪಾಡ್ದನಗಳನ್ನು ಸ್ವರವೇರಿಸಿ ಹಾಡುತ್ತಿದ್ದರು. ನಾನು ಕಿವಿದೆರೆದು ಅವುಗಳನ್ನು ಕೇಳುತ್ತಿದ್ದೆ. ಆಗ ನನಗೆ ಸುಮಾರು ಐದು ವರ್ಷ ಇರುಬಹದು. ಮೊದಲಿಗೆ ನಾನು ಅವರು ಹೇಳುವ ಪಾಡ್ದನದೊಳಗಿನ ಕತೆಯ ಬಗ್ಗೆ ಮಾತ್ರ ಆಕರ್ಷಿತಳಾಗಿದ್ದೆ. ಅವರು ನಮ್ಮೂರ ನಾಟಿಗದ್ದೆಗಳಲ್ಲಿ ‘ಕತೆ’ ಹೇಳುವುದಕ್ಕೆ ಹೋಗುತ್ತಿದ್ದರು. ನಾನು ಅವರೊಮದಿಗೆ ಹೋದವಳು ಗದ್ದೆ ಅಂಚುಗಳಲ್ಲಿ ಕುಳಿತು ಅವರು ನೇಜಿ ನೆಡುತ್ತ ಹಾಡುತ್ತಿದ್ದ ಪಾಡ್ದನಗಳನ್ನು ಕೇಳುತ್ತಿದ್ದೆ. ನನ್ನ ಅಜ್ಜಿ ಪಾಡ್ದನದ ಮೊದಲ ಸಾಲು ಹೇಳಿದಾಗ ಉಳಿದವರು ಅದನ್ನು ಪುನರಾವರ್ತಿಸುತ್ತಿದ್ದರು.

“ನಾನು ಒಬ್ಬಳೇ ಇದ್ದಾಗ ಕೇಳಿದ ಹಾಡುಗಳನ್ನು ನನ್ನಲ್ಲೇ ಗುನುಗುನಿಸುತ್ತಿದ್ದೆ. ರಾತ್ರಿ ಹೊತ್ತು ಹಾಡಲು ಗದ್ದೆಯಲ್ಲಿ ಹೇಳಿದ ಪಾಡ್ದನವನ್ನೇ ಮತ್ತೆ ಹೇಳುವಂತೆ ಅಜ್ಜಿಯನ್ನು ಒತ್ತಾಯಿಸುತ್ತಿದ್ದೆ. ಇದರಿಂದ ಹಗಲು ಹೇಳಿದ ಕತೆಯ ವಸ್ತು, ಪಾತ್ರಗಳು ಹೆಸರುಗಳು ನನಗೆ ಖಚಿತವಾಗ ತೊಡಗಿದವು. ಒಬ್ಬಳೇ ಇದ್ದಾಗ ಒಂದೊಮದೇ ಸಾಲುಗಳನ್ನು ಹೆಣೆಯತೊಡಗಿದೆ. ಈ ಕಾಲಕ್ಕೆ ನನಗೆ ವಯಸ್ಸು ಸುಮರು ೧೦-೧೫ ಆಗಿರಬಹುದು. ನಾನು ಅಜ್ಜಿಯೊಂದಿಗೆ ನನ್ನ ಮನೆಯ ಸಮೀಪದ ಗದ್ದೆಗಳಿಗೆ ನಾಟಿ ಕೆಲಸಕ್ಕೆ ಹೋಗತೊಡಗಿದೆ. ಅಲ್ಲಿ ಇತರ ಹೆಂಗಸರೊಂದಿಗೆ ಸ್ವರ ಎಳೆದು ಹಾಡತೊಗಿದೆ. ಕೆಲವೊಮ್ಮೆ ನನ್ನ ಅಜ್ಜಿ “ಮಗ ರಾಮಕ್ಕ, ನನಗೆ ದಣಿವಾಗುತ್ತಿದೆ ನಾನು ಸುರುಮಾಡಿದ ಪಾಡ್ದವನ್ನು ಮುಂದುವರಿಸು”. ಎಂದು ಹೇಳುವುದಿತ್ತು. ಆಗ ನಾನು ಅನಿವಾರ್ಯವಾಗಿ ಮುಖ್ಯ ಗಾಯಕಿಯ ಪಾತ್ರ ವಹಿಸಬೇಕಾಯಿತು. ನಾನು ಒಂದೊಂದೇ ಸಾಲನ್ನು ಕಟ್ಟುತ್ತಾ ಹೋಗುತ್ತಿದ್ದೆ. ಗದ್ದೆಯಲ್ಲಿಳಿದು ಕೆಲಸ ಮಾಡುವ ಹೊತ್ತಿಗೆ ಬೇರೆಯವರು ಹಾಡುವ ಪಾಡ್ದನಗಳನ್ನು ಕೇಳುತ್ತಿದ್ದೆ. ಅವುಗಳಲ್ಲಿ ಒಳ್ಳೆಯ ಅಂಶಗಳಿದ್ದಾಗ ಅವುಗಳನ್ನು ಹೆಕ್ಕಿಕೊಂಡು ನನ್ನ ಪಾಡ್ದನ ನಿರೂಪಣೆಯಲ್ಲಿ ಸೇರಿಸಿಕೊಳ್ಳುತ್ತಿದ್ದೆ.

“ಪಾಡ್ದನವೊಂದು ಇಷ್ಟೇ ಉದ್ದ ಎಂದು ಹೇಳಲಾಗದು. ಕಟ್ಟಿ ಹೇಳುವ ನಮಗೆ ಉಲ್ಲಾಸವಿದ್ದರೆ ಕತೆ ಬೆಳೆಯುತ್ತದೆ. ನಮ್ಮ ಜೊತೆ ಹಾಡುವವರಿಗೂ ಉಲ್ಲಾಸ ಇರಬೇಕು. ನಮ್ಮ ಜೊತೆಗಾತಿಯರಿಗೆ ಬೇಕಿಲ್ಲವಾದರೆ ಕತೆಯನ್ನು ಅಡಕಮಾಡುವುದು ನನಗೆ ಗೊತ್ತು. ಕೆಲವೊಮ್ಮೆ ನಾಟಿ ಮಾಡುವವರ ಸಂಖ್ಯೆ ಹೆಚ್ಚಿದ್ದರೆ ಕೆಲಸ ಬೇಗನೇ ಕೊನೆಗೊಳ್ಳುತ್ತಿತ್ತು. ಆಗ ಪಾಡ್ದನದ ಕತೆಯನ್ನು ಸಂಕ್ಷಿಪ್ತಗೊಳಿಸುವುದು ಅನಿವಾರ್ಯವಾಗುತ್ತಿತ್ತು.

ರಾಮಕ್ಕ ಮುಗ್ಗೇರ್ತಿಗೆ ತಾನು ಪಾಡ್ದನಗಳನ್ನು ಕಟ್ಟುವ ಬಗ್ಗೆ ಅತೀವ ಆತ್ಮವಿಶ್ವಾಸ. ನನ್ನೊಂದಿಗೆ ಮಾತನಾಡುತ್ತ ನನಗೆ ನಿಮ್ಮ ಯವುದೇ ಸಿನಿಮಾದ ಕತೆಯನ್ನು ಕೊಡಿ, ನಿಮಗೆ ಸ್ವಲ್ಪ ಹೊತ್ತಲ್ಲೆ ನಾನು ಪಾಡ್ದನ ರೂಪದಲ್ಲಿ ಕಟ್ಟಿ ಹೇಳುತ್ತೇನೆ ಎನ್ನುತ್ತಾರೆ. ಇದು ಪಾಡ್ದನ ಕಾವ್ಯ ಸಂಯೋಜನ ಪ್ರಕ್ರಿಯೆಯ ಮೇಲೆ ಹೊಸಬೆಳಕು ಚೆಲ್ಲುತ್ತದೆ.

ರಾಮಕ್ಕ ನಾಟಿಗದ್ದೆಗಳಲ್ಲಿ ಸಿರಿ ಪಾಡ್ದನವನ್ನು ನೂರಾರು ಬಾರಿ ಹಾಡಿರಬಹುದು. ಆದರೆ ಕಾವ್ಯ ರೂಪದಲ್ಲಿ ಸಮಗ್ರವಾಗಿ ದಾಖಲುಮಡಿಕೊಂಡುದು ಇದೇ ಮೊದಲ ಬಾರಿ.

ರಾಮಕ್ಕಗೆ ಈಗ ಸುಮಾರು ೭೦ರ ವಯಸ್ಸು. ಮಕ್ಕಳು ದೊಡ್ಡವರು ಆಗಿದ್ದರೂ ಮನೆಯಲ್ಲಿ ಇದ್ದರೆ ಅಡುಗೆಮನೆಯಲ್ಲಿಯ ನಿರ್ವಹಣೆ ಇವರದ್ದೆ. ಇವತ್ತಿಗೂ ಅವರು ನಾಟಿಗದ್ದೆಗೆ ನಾಟಿ ಕೆಲಸಕ್ಕೆ ಹೋಗುತ್ತಾರೆ. ಅದು ಅವರಿಗೆ ಆದಾಯ ಮೂಲವೂ ಹೌದು. ಮೇಲಾಗಿ ಪಡ್ದನ ಕಟ್ಟಿ ಹಾಡುವುದರಲ್ಲಿ ಒಂದು ಸಂತೋಷ ಇದೆ ಎನ್ನುತ್ತಾರೆ ಅವರು. ಪಾಡ್ದನ ಕೇಳುವವರಿದ್ದರೆ ಮನೆಯಲ್ಲಿ ಪಾಡ್ದನ ಹಾಡುವುದುಂಟು. ಇಂದಿನ ಹೊಸ ತಲೆಮಾರಿಗೆ ಪಾಡ್ದನವನ್ನು ಕೇಳುವ ಕಲಿಯುವ ಉತ್ಸಾಹ ಇಲ್ಲದಿರುವು ಬಗ್ಗೆ ಅವರು ವಿಷಾದ ವ್ಯಕ್ತಪಡಿಸುತ್ತಾರೆ.