ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ ಬಹುತೇಕ ಜನರ ಆಡುಮಾತು ತುಳು. ಪೂರ್ವಕ್ಕೆ ದಟ್ಟವಾದ ಅರಣ್ಯಗಳಿಂದ ಸುತ್ತುವರಿದ ಪಶ್ಚಿಮಘಟ್ಟ, ಪಶ್ಚಿಮಕ್ಕೆ ಅರಬಿ ಸಮುದ್ರ ಇವುಗಳ ನಡುವೆ ಹಲವಾರು ನದಿಗಳಿಂದಾವೃತವಾದ ನೆಲ ತುಳುನಾಡು. ವಿಶಿಷ್ಟ ಸಾಮಾಜಿಕ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಈ ಪ್ರದೇಶವು ಸುಮಾರು ಎರಡು ಸಾವಿರ ವರ್ಷಗಳಿಂದ ತುಳುನಾಡು ಅಥವಾ ತುಳುವ ರಾಜ್ಯ ಎಂದು ಕರೆಸಿಕೊಂಡಿದೆ. ತುಳು ಭಾಷೆಗೆ ತನ್ನದೇ ಆದ ಲಿಪಿಯಿಲ್ಲ ಎಂದು ತಿಳಿಯಲಾಗಿದೆ. ಆದರೆ ವಾಸ್ತವವಾಗಿ ಮಲೆಯಾಳಂ ಭಾಷೆಯ ಲಿಪಿಯನ್ನೇ ಹೋಲುವ ಲಿಪಿಯಲ್ಲಿ ೧೫ನೆಯ ಶತಮಾನಕ್ಕೆ ಸೇರಿದ ಎರಡು ಶಾಸನಗಳು (ಅನಂತಪುರ ಶಾಸನ/ಶೋಧ: ಡಾ.ಕೆ.ವಿ.ರಮೇಶ) ಹಾಗೂ ಮೂರು ಮಹಾ ಕಾವ್ಯಗಳು ತುಳು ಭಾಗವತೊ, ಮಹಾಭಾರತೊ ಹಾಗೂ ಕಾವೇರಿ ಕಾವ್ಯ ಶ್ರೀ ವೆಂಕಟರಾಜ ಪುಣಿಂಚತ್ತಾಯರಿಂದ ಸಂಪಾದಿತವಾವೆ. ಆದರೆ ತುಳುವರ ವಿಶಿಷ್ಟ ಸಂಪ್ರದಾಯ, ನಂಬಿಕೆ, ಮೌಲ್ಯಗಳನ್ನು ಪ್ರತಿನಿಧಿಸುವ ಮೌಖಿಕ ಪರಂಪರೆಯ ಪಡ್ದನ, ಕಬಿತ ಪ್ರಕಾರಗಳು ಗುಣಾತ್ಮಕವಾಗಿ ಯಾವುದೇ ಭಾಷೆಯ ಜನಪದ ಸಾಹಿತ್ಯಕ್ಕೆ ಕಡಿಮೆಯದಲ್ಲ, ಈ ಸಂಪ್ರದಾಯವನ್ನು ಬಹುತೇಕವಾಗಿ ನಾಟಿಗದ್ದೆಗಳಲ್ಲಿ ದುಡಿಯುತ್ತಿರುವ ಮಹಿಳೆಯರು, ಸಿರಿ, ಅಬ್ಬಗ ದಾರಗರಂತಹ ದೈವಗಳನ್ನು ವಿಶಿಷ್ಟ ಸಂದರ್ಭಗಳಲ್ಲಿ ತಮ್ಮಲ್ಲಿ ಆವಾಹಿಸಿಕೊಳ್ಳಬಲ್ಲ ಸಿರಿಪಾತ್ರಧಾರಿಣಿಯರು. ಸಿರಿ ಆರಾಧನಾ ಸಂಪ್ರದಾಯವನ್ನು ನಿಯಂತ್ರಿಸುವ ಕುಮಾರರು, ಪಾತ್ರಿಗಳು, ಭೂತ-ದೈವ ಮಾಧ್ಯಮರಾಗಿ ಆರಾಧನಾ ಸಂದರ್ಭದಲ್ಲಿ ಅದರ ಸಂವಹನಕಾರರಾಗಿ ಕಾಣಿಸಿಕೊಳ್ಳುವ ಪರವ, ಪಂಬದ, ನಲ್ಕೆ (ಪ್ರಾಣ)ಯವರು ಮುಂದುವರಿಸಿಕೊಂಡು ಬಂದಿದ್ದಾರೆ. ಇಂತಹ ಮೌಖಿಕ ಸಂಪ್ರದಾಯಗಳಲ್ಲಿ ಲಿಖಿತ ಸಂಪ್ರದಾಯದ ಪೂರ್ವದಲ್ಲಿ ನೆಲೆಗೊಂಡಿದ್ದ ತುಳುವ ಸಾಂಸ್ಕೃತಿಕ ಸಂಕೀರ್ಣವೊಂದರ ಹೊಳಹು ದೊರೆಯುವುದರೊಂದಿಗೆ ಸಮಕಾಲೀನ ಸಮಾಜದ ಸ್ಥಿತ್ಯಂತರದ ಒಳನೋಟಗಳು ಪ್ರತಿಫಲನಗೊಳ್ಳುತ್ತವೆ. ಇಂತಹ ಪಾಡ್ದನಗಳನ್ನು ಬರಿಯ ಸಾಹಿತ್ಯಕ ಮಾನದಂಡಗಳಿಂದ ನೋಡದೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ದೃಷ್ಟಿಕೋನಗಳಿಂದ ನೋಡಬೇಕಾಗಿದೆ.

ಈ ಮೌಖಿಕ ಸಂಪ್ರದಾಯವು ಕರಾವಳಿಯ ಮಾತೃರೂಪಿ ಕುಟುಂಬ ರಚನೆಯ ಉತ್ಪನ್ನ ಎಂಬುದಾಗಿ ಗ್ರಹಿಸಿ ವಿಶ್ಲೇಷಿಸಬೇಕು. ಅವುಗಳನ್ನು ಬರಿಯ ಗೀತ ಸಾಹಿತ್ಯ ಎಂಬುದಾಗಿ ಪರಿಭಾವಿಸದೆ ಅದನ್ನು ಸಾಂದರ್ಭಿಕ ಹಿನ್ನೆಲೆಯಲ್ಲಿ ಒಟ್ಟು ಸಮಾಜದ ಉತ್ಪನ್ನ ಎಂಬುದಾಗಿ ಗಮನಿಸುವುದು ಅವಶ್ಯ ತುಳುವಿನ ಮೌಖಿಕ ಕಾವ್ಯವನ್ನು ಪಾಡ್ದನ ಅಥವಾ ಸಂದಿ, ಕಬಿತ ಹಾಗೂ ಕುಣಿತದ ಹಾಡುಗಳೆಂದು ವಿಭಾಗಿಸಬಹುದು.

ತುಳುನಾಡಿನ ನೆಲದಲ್ಲಿ ಬದುಕಿ ಸಂದುಹೋದ ವ್ಯಕ್ತಿಗಳ, ಅಲ್ಲಿನ ಪ್ರತಿಷ್ಠಿತ ಮನೆತನಗಳ ಏಳುಬೀಳುಗಳ ಹಾಗೂ ಸ್ಥಳೀಯ ದೈವಭೂತಗಳ ಹುಟ್ಟು, ಸಾಧನೆ, ಸಂಚಾರ (ಪ್ರಸರಣ)ಗಳನ್ನು ಕುರಿತಂತೆ ಆಕರ್ಷಕ ಕಥೆಗಳನ್ನು ಒಳಗೊಂಡಿರುವ ಮೌಖಿಕ ಕಾವ್ಯರೂಪಗಳನ್ನು ಪಾಡ್ದನಗಳೆಂದು ಹೇಳಬಹುದು. ಅಲ್ಲಿನ ಮೌಖಿಕ ಸೂತ್ರಾತ್ಮಕತೆಯನ್ನು ಗಮನಿಸಿ ಪಾಡ್ಡನಗಳನ್ನು ಬ್ಯಾಲೆಡ್ ಅಥವಾ ಜನಪದ ಗೀತ ಪ್ರಕಾರಗಳೆಂದೂ ಗುರುತಿಸಬಹುದು. ಕೆಲವು ಪಾಡ್ದನಗಳು ಬ್ಯಾಲೆಡ್‌ನ ಸ್ವರೂಪವನ್ನು ಮೀರಿ ಜನಪದ ಮಹಾಕಾವ್ಯಗಳ ಸ್ವರೂಪವನ್ನು ಹೊಂದಿರುವವೂ ಇವೆ. (ರೈ ೧೯೮೫) ಉದಾಹರಣೆಗೆ ಸಿರಿ, ಕೋಟಿ ಚೆನ್ನಯಂತಹ ಪಾಡ್ದನಗಳನ್ನು ‘ಒಂಟಿ ಕಾವ್ಯ ಮಾದರಿ’ ಎಂದೂ ಜುಮಾದಿ, ಪಂಜುರ್ಳಿ, ಇಂತಹ ಪಾಡ್ದನಗಳನ್ನು ಲಾವಣಿ ಚಕ್ರ ಮಾದರಿಯವುಗಳೆಂದೂ ಹೇಳಬಹುದು. ಆಟಿ ಕಳಂಜ,  ಮಾದಿರ ಮುಂತಾದ ಆಚರಣೆಗಳಿಗೆ ಸಂಬಂಧಿಸಿದ ಗೀತಗಳನ್ನು ಪಾಡ್ದನಗಳ ವ್ಯಾಪ್ತಿಯೊಳಗೆ ಸೇರಿಸುವುದುಂಟು.

ಬಹುಮಂದಿ ವಿದ್ವಾಂಸರು ಗುರುತಿಸಿರುವಂತೆ ಪಾಡ್ದನವೆಂದರೆ ಹಾಡಿದುದು ಎಂದರ್ಥ. ಕಥೆಗಳು ಹಾಡಿನ ಸಾಲುಗಳಲ್ಲಿ ಮೌಖಿಕವಾಗಿ ಪ್ರದರ್ಶಿತವಾದಾಗಲೇ ಅವುಗಳಿಗೆ ಸಹಜ ರೂಪ ದೊರೆಯುವುದು ಮತ್ತು ಅರ್ಥಪೂರ್ಣವಾಗುವುದು. ಪಾಡ್ದನಗಳ ಸಂಖ್ಯೆ ಎಷ್ಟು ಎಂಬುದು ಖಚಿತವಾಗಿ ಹೇಳಬರುವಂತಿಲ್ಲ. ಕ್ಷೇತ್ರಕಾರ್ಯ ಸಾಗಿದಂತೆಲ್ಲ ಹೊಸ ಹೊಸ ಪಾಡ್ದನಗಳು ದಾಖಲಾಗುತ್ತವೆ. ಹಾಡುವ ಧಾಟಿ, ಶೈಲಿ, ದೀರ್ಘತೆ ಹಾಗೂ ಸಂದರ್ಭಗಳಲ್ಲಿ ಪಾಡ್ದನಗಳು ಅಪಾರ ವೈವಿಧ್ಯವನ್ನು ತೋರುತ್ತವೆ. ಕೆಲವನ್ನು ಹಲವು ರಾತ್ರಿಗಳ ಕೂರುಗಳಲ್ಲಿ ದಾಖಲಿಸಿಕೊಳ್ಳಬೇಕಾದರೆ ಇನ್ನು ಕೆಲವು ಕೆಲವೇ ಸಾಲುಗಳಲ್ಲಿ ಕೊನೆಗೊಳ್ಳುತ್ತವೆ. ಬಹುತೇಕ ಪಾಡ್ದನಗಳು ದುರಂತ ವಸ್ತು ವಿನ್ಯಾಸವನ್ನು ಹೊಂದಿರುತ್ತವೆ. ಆದರೆ ಜನಪದ ಕತೆಗಳನ್ನು ಹೋಲುವ ಸುಖಾಂತದ ಮಾದರಿಯ ಪಾಡ್ದನಗಳೂ ಇವೆ.

ಪ್ರದರ್ಶಕ ಸಂಪ್ರದಾಯ ದೃಷ್ಟಿಯಿಂದ:

ಪಾಡ್ದನಗಳು ಪ್ರದರ್ಶನ ಸಂಪ್ರದಾಯಕ್ಕೆ ಸೇರಿದವುಗಳಾಗಿದ್ದು ಆಯಾ ಪ್ರದರ್ಶನ ಸಂದರ್ಭಕ್ಕನುಸರಿಸಿ ಅವುಗಳ ಅಭಿವ್ಯಕ್ತಿಯ ಆಕೃತಿ ರೂಪುಗೊಳ್ಳುವುದು. ಪ್ರದರ್ಶನಗೊಳ್ಳುವ ಸಂದರ್ಭದ ಹಿನ್ನೆಲೆಯಲ್ಲಿ ಪಾಡ್ದನಗಳನ್ನು ಸ್ಥೂಲವಾಗಿ ಹೆಂಗಸರು ಹಾಗೂ ಗಂಡಸರು ಹಾಡುವ ಪ್ರಕಾರಗಳೆಂದು ಎರಡಾಗಿ ವರ್ಗೀಕರಿಸಬಹುದು. ಗಂಡಸರು ಸಾಮಾನ್ಯವಾಗಿ ಗ್ರಾಮ/ಸೀಮೆ ಆರಾಧನಾ ಸಂಪ್ರದಾಯಗಳಾದ ಕೋಲ, ನೇಮಗಳ ಸಂದರ್ಭಗಳಲ್ಲಿ ಆಯಾ ದೈವವನ್ನು ಕುರಿತಂತೆ ಹಾಡುತ್ತಾರೆ. ಅವು ಸಾಮಾನ್ಯವಾಗಿ ಆಯಾ ಭೂತಗಳ ಉಗಮ, ಸಾಹಸ ಹಾಗೂ ಪ್ರಸರಣವನ್ನು ಕುರಿತಿರುತ್ತವೆ. ತುಳುನಾಡಿನ ಭೂತಾರಾಧನೆಯ ತೆಂಕಣ ಸಂಪ್ರದಾಯದಲ್ಲಿ ಪಾಡ್ಡನವನ್ನು ಈ ಮುಂದಿನ ಮೂರು ಸಂದರ್ಭಗಳಲ್ಲಿ ಹಾಡಲಾಗುತ್ತದೆ (ಗೌಡ ೧೯೯೦:೧೭೫).

. ಎಣ್ಣೆ ಬೂಳ್ಯವನ್ನು ಹಿಡಿಯುವ ಸಂದರ್ಭ

. ಸ್ನಾನ ಮಾಡಿ ಬಂದು ವೇಷಹಾಕುವ ಸಿದ್ಧತೆ ನಡೆಸುತ್ತಿರುವಾಗ

. ಅಣಿ, ಮುಖವಾಡ ಮತ್ತು ಆಯುಧಗಳನ್ನು ಧರಿಸಿಕೊಳ್ಳುವಾಗ

ಇಲ್ಲಿ ಪಾಡ್ದನಗಳ ನಿರೂಪಣಾ ಧಾಟಿಯು ಪ್ರಥಮ ಪುರುಷದಲ್ಲಿರುತ್ತದೆ. ಬಡಗು ಭಾಗದ ಭೂತಾರಾಧನೆಯಲ್ಲಿ ಮೇಲೆ ಕಾಣಿಸಿದ ಸಂದರ್ಭಗಳ ಜತೆಗೆ ನೇಮ/ಕೋಲಗಳ ಆಚರಣೆಯ ಮಧ್ಯಂತರದಲ್ಲಿ ಭೂತಕಟ್ಟಿದ ವ್ಯಕ್ತಿ ಜನಸಮುದಾಯದ ನಡುವೆ ಮರದ ಪೀಠದ ಮೇಲೆ ಕುಳಿತು ಪಾಡ್ದನವನ್ನು ಹಾಡುವುದುಂಟು. ಬಡಗಿನಲ್ಲಿ ನಿರೂಪಣಾ ಧಾಟಿಯು ಉತ್ತಮಪುರುಷದಲ್ಲಿರುವುದು ಗಮನಿಸತಕ್ಕ ಅಂಶ. ಮುಗ್ಗೇರರ ಕೋಲದಲ್ಲಿ ಪಾತ್ರಧಾರಿಗಳು (ಎಣ್ಮೂರದೆಯ್ಯು, ಕೇಲತ್ತ ಪೆರ್ನೆ) ರಂಗದಲ್ಲಿ ಕುಣಿಯುತ್ತಾ ತಮ್ಮ ಹುಟ್ಟು, ಸಾಹಸದ ರೋಮಾಂಚಕ ಕಥೆಯನ್ನು ಪಾಡ್ದನ ರೂಪದಲ್ಲಿ ಉತ್ತಮ ಪುರುಷದಲ್ಲಿ ನಿರೂಪಿಸುತ್ತಾ ಹೋಗುತ್ತಾರೆ.

ಹೆಂಗಸರು ನಾಟಿಗದ್ದೆಗಳಲ್ಲಿ ನೇಜಿ ತೆಗೆವಾಗ, ನೆಡುವಾಗ, ಕಳೆಕೀಳುವಾಗ ಪಾಡ್ದನಗಳನ್ನು ಹಾಡುವುದುಂಟು. ಈ ಸಂಪ್ರದಾಯದಲ್ಲಿ ಬ್ರಾಹ್ಮಣರನ್ನು ಉಳಿದು ಎಲ್ಲ ಜಾತಿಯ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಯಾವುದೇ ಜಾತಿಗೆ ಸೇರಿದ ಹೆಂಗಸೊಬ್ಬಳು ಮುಖ್ಯ ಗಾಯಕಿಯಾಗಿರುತ್ತಾಳೆ. ಮಹಿಳೆಯರು ಗದ್ದೆಗಳಲ್ಲಿ ಹಾಡುವ ಈ ಬಗೆಯ ಮೇಳಗೀತೆಗಳು-ಪಾಡ್ದನಗಳು ಭೂತಗಳಿಗೆ ಸಂಬಂಧಿಸಿದವಾಗಿದ್ದು ಅವು ಪುರುಷರು ಹಾಡುವ ಅದೇ ಪಾಡ್ದನಕ್ಕಿಂತ ಹೆಚ್ಚು ‘ದೀರ್ಘವೂ ಕಾವ್ಯಾತ್ಮಕವೂ ಆಗಿರುವುದು ಕಂಡುಬರುತ್ತದೆ. ಪುರುಷರು ಹಾಗೂ ಮಹಿಳೆಯರು ಹಾಡಿದ ಪಾಡ್ದನಗಳನ್ನು ಲಿಂಗ ಪ್ರಭೇದ(ಜಂಡರ್ ಡಿಸ್ಟಿಂಕ್ಷನ್) ದ ದೃಷ್ಟಿಯಿಂದ ನೋಡಿ ಅಧ್ಯಯನ ಮಾಡುವ ಪ್ರಯತ್ನವೂ ನಡೆದಿದೆ. ಭೂತ ಕಟ್ಟುವವನು ಆಯಾ ಭೂತದ ವೇಷಭೂಷಣ ಹಾಕಿಕೊಳ್ಳುತ್ತಿರುವಾಗ ಅವನು ಹಾಗೂ ಅವನ ಮನೆಯ ಮಹಿಳೆಯೊಬ್ಬಳು ತೆಂಬರೆ ಬಡಿಯುತ್ತಾ ಪಾಡ್ದನ ಹಾಡುವುದುಂಟು. ಹಾಗೆ ಹಾಡುವ ಮೂಲಕ ಅವನಲ್ಲಿ ಭೂತ ಮೈದುಂಬುತ್ತದೆ.

ತುಳು ಪಾಡ್ದನಗಳನ್ನು ಹಾಡುವ ಸಂದರ್ಭ ಹಾಗೂ ವಸ್ತು-ಇವುಗಳಿಗೆ ಅನುಸರಿಸಿ ಅನೇಕ ಉಪಪ್ರಕಾರ(Sub genre)ಗಳನ್ನು ಗುರುತಿಸಬಹುದು. ಒಂದು ಮೌಖಿಕ ಪಠ್ಯವನ್ನು ನಿರೂಪಿಸುವ ಸನ್ನಿವೇಶವು ಅದರ ಅಭಿವ್ಯಕ್ತಿಯ ರೂಪವನ್ನು ಗಾಢವಾಗಿ ಪ್ರಭಾವಿಸುತ್ತದೆ. ತುಳುವಿನ ಸನ್ನಿವೇಶದಲ್ಲಿ ಮೂರು ಅದರ ಅಭಿವ್ಯಕ್ತಿಯ ರೂಪವನ್ನು ಗಾಢವಾಗಿ ಪ್ರಭಾವಿಸುತ್ತದೆ. ತುಳುವಿನ ಸನ್ನಿವೇಶದಲ್ಲಿ ಮೂರು ಪ್ರದರ್ಶನ ಸಂದರ್ಭಗಳು ಏರ್ಪಟ್ಟಿರುವುದಾಗಿ ವಿದ್ವಾಂಸರು ಗುರುತಿಸಿದ್ದಾರೆ. (ಕ್ಲಾಸ್‌೧೯೮೭:೧೩) ಕೋಲ ಸಂಪ್ರದಾಯ, ಸಿರಿಜಾತ್ರೆಯ ಸಂಪ್ರದಾಯ ಹಾಗೂ ನಾಟಿಗದ್ದೆಯ ಸಂಪ್ರದಾಯ. ಈ ಸಂದರ್ಭಗಳೊಳಗೆ ಇನ್ನೂ ಕೆಲವು ಪ್ರದರ್ಶಕ ಸಂಪ್ರದಾಯಗಳನ್ನು ಗುರುತಿಸಬಹುದಾಗಿದೆ. ಕೋಲ ಸಂಪ್ರದಾಯದೊಳಗೆ ಪರವ, ಪಂಬದ, ನಲ್ಕೆ ಸಂಪ್ರದಾಯಗಳೆಂದು ಒಳವಿಭಾಗ ಮಾಡಿಕೊಲ್ಳಬಹುದಾಗಿದೆ. ಒಂದು ದೈವವು ಒಂದು ಗ್ರಾಮದಲ್ಲಿ/ದೈವಸ್ಥಾನದಲ್ಲಿ ಪ್ರಧಾನ ದೇವತೆಯಾದರೆ ಇನ್ನೊಂದರಲ್ಲಿ ಅಧೀನ ದೈವವಾಗಬಹುದು. ಅಂತಹ ಸಂದರ್ಭಗಳಲ್ಲಿ ರೂಪುಗೊಳ್ಳುವ ಪಾಡ್ದನನವು ಭಿನ್ನ ಭಿನ್ನ ರೂಪ ತಾಳುವುದು ಸಹಜ.

ಸಿರಿಜಾತ್ರೆ ಸಂಪ್ರದಾಯದೊಳಗೆ ಆಯಾ ಸ್ಥಳದ ಮೂಲದೈವ, ಅಲ್ಲಿಗೆ ಬರುವ ಭಕ್ತವರ್ಗದವರ ಸಾಮಾಜಿಕ/ಭಾಷಿಕ ಹಿನ್ನೆಲೆಗನುಗುಣವಾಗಿ ಬೇರೆ ಬೇರೆ ಪ್ರದರ್ಶನ ಸಂಪ್ರದಾಯಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಸಿರಿ ಸಂಪ್ರದಾಯಗಳೊಳಗೆ ಅನೇಕ ಪಠ್ಯಗಳು ಸಿಗಬಹುದು. ಹಲವು ಸಿರಿ ಕೇಂದ್ರಗಳಲ್ಲಿ ಒಂದೇ ರಾತ್ರಿ ಜಾತ್ರೆ ನಡೆಯುವುದರಿಂದ ಅಧ್ಯಯನಕಾರರು ಎಲ್ಲಾ ಜಾತ್ರೆಗಳನ್ನು ನೋಡುವ ಸಾಧ್ಯತೆಯಿಲ್ಲ. ನೋಡಿದ್ದರೂ ಅಲ್ಲಿ ನಿರೂಪಣೆಗೊಳ್ಳುವ ಪಾಡ್ದನಗಳ ಪಾಠಗಳನ್ನು ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಹೀಗಾಗಿ ಸಿರಿಜಾತ್ರೆಯ ಸಂದರ್ಭದಲ್ಲಿ ರೂಪುಗೊಳ್ಳುವ ಪಾಡ್ದನಗಳೆಲ್ಲವೂ ಒಂದು ಎಂದು ತಿಳಿಯಲಾಗುತ್ತದೆ.

ಮಹಿಳೆಯರು ಸಿರಿಪಾಡ್ದನ-ವಿಶೇಷವಾಗಿ ಅಬ್ಬಗ ದಾರಗ ಪ್ರಸಂಗವನ್ನು ನಾಟಿ ಗದ್ದೆಯಲ್ಲಿ ಹಾಡುತ್ತಾರೆ. ಇವು ಸುದೀರ್ಘವಾಗಿರುತ್ತವೆ. ಆದರೆ ಅದೇ ಮಹಿಳೆಯರು ಸಿರಿಜಾತ್ರೆಯಲ್ಲಿ ಸಿರಿಭಕ್ತರಾಗಿ ಮೈದುಂಬಿಕೊಂಡಾಗ ಬಿಡಿ ಬಿಡಿ ತುಣುಕುಗಳನ್ನಷ್ಟೇ ಹಾಡುತ್ತಾರೆ. ಸಿರಿಯ ಅಥವಾ ಅಬ್ಬಗ ದಾರಗರ ಬದುಕಿನ ಅತ್ಯಂತ ದಾರುಣ ಅಥವಾ ಇಕ್ಕಟ್ಟಿನ ಪ್ರಸಂಗವನ್ನಷ್ಟೇ ಮತ್ತೆ ಮತ್ತೆ ಹಾಡುತ್ತಾರೆ. ಇನ್ನೊಂದು ಮಹತ್ತ್ವದ ಬದಲಾವಣೆಯೆಂದರೆ ನಾಟಿಗದ್ದೆಗಳಲ್ಲಿ ಮಹಿಳೆಯರು ಪ್ರಥಮ ಪುರುಷ ಧಾಟಿಯಲ್ಲಿ ಪಾಡ್ದನವನ್ನು ಹಾಡಿದರೆ ಇಲ್ಲಿ ಅದು ಉತ್ತಮ ಪುರುಷದಲ್ಲಿರುತ್ತದೆ. ಕೆಲವೊಮ್ಮೆ ಕುಮಾರನ ಪಾಡ್ದನ ನಿರೂಪಣೆಗೆ ಉತ್ತರ ರೂಪದಲ್ಲಿ ಪಾಡ್ದನವನ್ನು ಹೆಣೆಯುತ್ತಾ ಹೋಗುತ್ತಾರೆ. ಮಧ್ಯಂತರ ಜಗತ್ತಿನ ಜತೆ ಸಂಬಂಧವನ್ನು ಏರ್ಪಡಿಸುವ ಸಲುವಾಗಿ ಇಲ್ಲಿನ ಮಾತು- ಪಾಡ್ದನ ನಿರೂಪಣೆ ಎಲ್ಲವೂ ‘ಮಾಯ’ದ ಜಗತ್ತಿಗೆ ಸಂಬಂಧಿಸಿರುತ್ತದೆ. ಆದರೆ ನಾಟಿಗದ್ದೆಯಲ್ಲಿ ಈ ಅಲೌಕಿಕ ಬಂಧುತ್ವದ ಸನ್ನಿವೇಶ ನಿರ್ಮಾಣಗೊಳ್ಳುವುದಿಲ್ಲ.

ಪಾಡ್ದನದ ನಾಟಿಗದ್ದೆ ಸಂಪ್ರದಾಯಗಳಲ್ಲಿ ಕನಿಷ್ಠ ವ್ಯತ್ಯಾಸ ಕಾಣಿಸುತ್ತದೆ. ಈ ಸಂಪ್ರದಾಯದಲ್ಲಿ ದೊರೆಯುವ ಅಗಾಧ ಪ್ರಮಾಣದ ಪಾಡ್ದನಗಳನ್ನು ಗಮನಿಸಿ ಅವುಗಳನ್ನು ಔತ್ತರೇಯ ಹಾಗೂ ದಾಕ್ಷಿಣಾತ್ಯ ಎಂದು ಎರಡಾಗಿ ವಿಭಾಗಿಸಬಹುದು. (ಕ್ಲಾಸ್‌೧೯೮೭:೧೩). ತುಳು ನಾಡಿನ ದಕ್ಷಿಣ ಭಾಗದಲ್ಲಿ ನಾಟಿಗದ್ದೆ ಸಂಪ್ರದಾಯಕ್ಕೆ ಸೇರುವ, ಕ್ರಿಯಾತ್ಮಕ ದೃಷ್ಟಿಯಲ್ಲಿ ‘ಕೆಲಸದ ಹಾಡುಗಳು’ ಪ್ರಕಾರದೊಲಗೆ ಬರುವ ‘ಕಬಿತ’ ಎನ್ನು ಕಥನಗೀತಗಳು ದೊರೆಯುತ್ತವೆ. ಹೆಚ್ಚಿನ ಕಬಿತಗಳಿಗೆ ಕಥೆಯಿಲ್ಲ. ‘ಹೀಜೋ ಮಂಜೊಟ್ಟಿ ಗೋಣ’ ಎಂಬ ಪ್ರಸಿದ್ಧ ಕಬಿತದಲ್ಲಿ ಮಾತ್ರ ಸೊಗಸಾದ ಕಥೆಯಿದೆ. “ಹೆಚ್ಚಿನ ಕಬಿತಗಳಲ್ಲಿ ಶಬ್ದಗಳ ಸರಮಾಲೆ, ಹಾಸ್ಯದ ತುಣುಕು, ಒಂದು ಸಾಮಾನ್ಯ ಘಟನೆ. ಒಂದು ಚಿಕ್ಕ ವಿಚಾರ ಇರುತ್ತದೆ’ (ರೈ ೧೯೮೫:೨೩೫-೭೨). ಜಿಲ್ಲೆಯ ಎಲ್ಲೆಡೆ ಪಾಡ್ದನ ಹಾಗೂ ಕಬಿತಗಳ ಬಗ್ಗೆ ಸ್ಪಷ್ಟ ವ್ಯತ್ಯಾಸದ ಕಲ್ಪನೆ ಇಲ್ಲ. ಉತ್ತರ ಭಾಗದ ಮಹಿಳೆಯರಿಗೆ ‘ಕಬಿತ’ ಎನ್ನುವ ಪದದ ಪರಿಚಯವೇ ಇಲ್ಲ. ಮೊದಲ ಬೆಳೆ(ಏಣೆಲು)ಯ ನೇಜಿ ನಾಟಿಮಾಡುವ ಸಂದರ್ಭದಲ್ಲಿ ಅವರು ದಕ್ಷಿಣದ ಜನ ಹಾಡುವ ‘ಮಂಜೊಟ್ಟಿ ಗೋಣೆ’ ಕಬಿತವನ್ನು ಹಾಡಬಲ್ಲರಾದರೂ ಅವರು ಅದನ್ನು ಪಾಡ್ದನವೆಂದೇ ಗುರುತಿಸುತ್ತಾರೆ. ಉಡುಪಿ, ಹಿರಿಯಡ್ಕಗಳಲ್ಲಿ ಕಬಿತ ಎಂದು ಹೇಳದಿದ್ದರೂ ಕೆಲಸದ ಹಾಡುಗಳಲ್ಲಿ ಒಂದಾದ ಓಬೇಲೇ ಹಾಡನ್ನು ‘ಓಬೇಲೆ ಸಂದಿ’ ಎಂದೇ ಗುರುತಿಸಿ ಹಾಡುತ್ತಾರೆ. ಆದರೆ ದಕ್ಷಿಣದಲ್ಲಿ ಪಾಡ್ದನ. ಕಬಿತ, ಉರಾಲ್‌ಗಳ ರೂಪ ಹಾಗೂ ಕ್ರಿಯಾತ್ಮಕತೆಗಳ ಬಗ್ಗೆ ಖಚಿತ ಕಲ್ಪನೆಯಿದೆ. ಪಾಡ್ದನ ಹಾಗೂ ಕಬಿತಗಳನ್ನು ರೂಪ ಮತ್ತು ವಸ್ತುವಿನ ವೈವಿಧ್ಯಗಳ ಹಿನ್ನೆಲೆಯಲ್ಲಿವಿವೇಚಿಸಬಹುದು. ವಸ್ತು ಹಾಗೂ ಹಾಡುವ ವಿಧಾನಗಳಲ್ಲಿ ಎರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಈ ಎರಡು ಪ್ರಕಾರಗಳನ್ನು ನಾಟಿ ಆವರ್ತನಗಳ ವಿಭಿನ್ನ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಕೃಷಿ ಆವರ್ತಗಳ ವಿಭಿನ್ನ ಕಾಲಾವಧಿಯಲ್ಲಿ ಹಾಡುವ ಗೀತ ಸಂಪ್ರದಾಯವನ್ನು ಕುರಿತು ಹಿರಿಯಡ್ಕದ ದಿ.ಶ್ರೀಮತಿ ಕರ್ಗಿ ಅವರು ನೀಡಿದ ಮಾಹಿತಿ ಹೀಗಿದೆ:

ಏಣೆಲ್ ಅಥವಾ ಕಾರ್ತಿ (ಮೊದಲ ಬೆಳೆ) ಬತ್ತದ ಎಳೆಸಸಿ(ನೇಜಿ)ಗಳನ್ನು ಕೀಳುವಾಗ ನಮ್ಮ ಊರಿನಲ್ಲಿ ಕಿನ್ಯಲ್ಲ ಮಾನಿಗನ ಪಾಡ್ಡನವನ್ನು ಮಾತ್ರ ಹಾಡಲಾಗುತ್ತದೆ. ಪಾಡ್ಡನವನ್ನು ಹೇಳುತ್ತ ಸಸಿಗಳನ್ನು ಕಿತ್ತರೆ ಕೆಲಸ ಬೇಗನೇ ಸಾಗುತ್ತದೆ ಎಂಬ ನಂಬಿಕೆಯಿದೆ. ನೇಜಿ ನೆಡುವ ಸಂದರ್ಭದಲ್ಲಿ ಸಿರಿ ಪಾಡ್ಡನ, ಪಂಗುಲ್ಲ ಬನ್ನಾರ ಪಾಡ್ಡನ, ಮಲ್ಲಾರಗುತ್ತ್ ಪಂರ್ದೇರ್ ಪಾಡ್ಡನ (ಎಲ್ಲವೂ ಭೂತದ ಕತೆಗಳು), ಸಿದ್ದುಲ್ಲ ರಾಯರ ಪಾಡ್ಡನ (ಜೇವು ಕೇದಗೆ), ಲೆಯ್ಕಂಗಿ, ಮಾಲಿಂಗಸೆಟ್ಟಿ ಪಾಡ್ಡನ (ಲೌಕಿಕ ಪಾಡ್ಡನಗಳು)ಗಳನ್ನು ಸಾಮಾನ್ಯವಾಗಿ ಹಾಡಲಾಗುತ್ತದೆ. ದಕ್ಷಿಣದವರು ಕಬಿತವೆಂದು ಹೇಳುಮಂಜೊಟ್ಟ ಗೋಣಸುದೀರ್ಘ ಕಥನ ಗೀತವನ್ನು ನಾವು ಪಾಡ್ಡನವೆಂದೇ ಕರೆದು ಹಾಡುತ್ತೇವೆ. ಆದರೆ ನಾವು ನೆಡುವ ಗದ್ದೆಯಲ್ಲಿ ಉಳುವ ಕೆಲಸ ಮುಗಿದು ಕೋಣಗಳನ್ನು ಮೇಲಕ್ಕೆ ಕೊಂಡೊಯ್ದ ಬಳಿಕವೇ ನಾವು ಅದನ್ನು ಹಾಡುತ್ತೇವೆ. ಅಪರೂಪಕ್ಕೊಮ್ಮೆ ನಾವು ಓಬೇಲೇ ಹಾಡುಗಳನ್ನು ಹಾಡುವುದೂ ಉಂಟು. ಸುಗ್ಗಿ (ಎರಡನೆ ಬೆಳೆ) ನೆಡುವಾಗ ಪಾಡ್ಡನಗಳನ್ನು ಮಾತ್ರ ಹಾಡುತ್ತೇವೆ (೨೮..೯೦: ದಾಖಲು ಮಾಡಿದ ದಿನ)

ಜಿಲ್ಲೆಯ ದಕ್ಷಿಣಭಾಗದವರು ಬತ್ತದ ಸಸಿಗಳನ್ನು ಕೀಳುವಾಗ ಪಾಡ್ಡನ ಹೇಳಿದರೆ ನೆಡುವಾಗ (ಏಣೆಲ್‌ನಲ್ಲಿ) ಕಬಿತಗಳನ್ನು ಮಾತ್ರ ಹೇಳುತ್ತಾರೆ. ಪಾಡ್ಡನ ಹಾಗೂ ಕಬಿತಗಳ ಲಯಗತಿಗಳು ಭಿನ್ನವಾಗಿದ್ದು ಅವು ಮಾಡುವ ಕೆಲಸಗಳ ಭಿನ್ನಲಯಗತಿಗಳಿಗೆ ಹೋಲುತ್ತವೆ. ಗದ್ದೆಗಳಲ್ಲಿ ಮಹಿಳೆಯರ ಕ್ರಿಯಾವಿನ್ಯಾಸವು ಈ ಎರಡು ಆಚರಣೆಗಳಲ್ಲಿ ಭಿನ್ನ ಭಿನ್ನವಾಗಿರುತ್ತದೆ. ನೇಜಿ ಕೀಳುವಾಗ ಅವರು ಗುಂಪಾಗಿ ಕಾರ್ಯ ನಿರ್ವಹಿಸಿದರೆ ನೆಡುವಾಗ ಸಾಲಾಗಿ ನಿಂತು ತಮ್ಮ ಕೆಲಸ ನಡೆಸುತ್ತಾರೆ. ಕೀಳುವ ಕ್ರಿಯೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿರುತ್ತದೆ. ನೆಡುವಾಗ ಮಹಿಳೆಯರ ಸಂಖ್ಯಾಬಾಹುಳ್ಯ ಹೆಚ್ಚಿರುತ್ತದೆ. ಹೀಗಾಗಿ ಸಾಮಾಜಿಕ ಸಂದರ್ಭಗಳು, ಪ್ರಚಲಿತ ವಿರುವ ವಿಧಿನಿಷೇಧಗಳು, ಕೃಷಿ ಆವರ್ತನ ಸಂದರ್ಭಗಳು ಪಾಡ್ಡನ ಹಾಗೂ ಕಬಿತಗಳನ್ನು ಭಿನ್ನ ಪ್ರಕಾರವನ್ನಾಗಿಸಿವೆ.

ಕೃಷಿ ಆವರ್ತನ ಸಂದರ್ಭಗಳಲ್ಲಿ ಪಾಡ್ಡನ, ಕಬಿತಗಳನ್ನು ಹಾಡಿಕೆಯ ವಿಧಿನಿಷೇಧಗಳ ಬಗೆಗೆ ಕಟೀಲಿನ ರಾಮಕ್ಕ ಮುಗ್ಗೇರ್ತಿ (ದಾಕ್ಷಿಣಾತ್ಯ ಸಂಪ್ರದಾಯ) ನನಗೆ ನೀಡಿದ ಮಾಹಿತಿ ಹೀಗಿದೆ:

ಭೂತದ ಕಳದಲ್ಲಿ ಪರವ, ಪಂಬದರು ಹಾಡುವ ಗೀತಸಂಪ್ತದಾಯಕ್ಕೆ ಸಂದಿ ಎಂದು ಹೆಸರು. ಏಣೆಲ್ ಬೆಳೆಯ ಬತ್ತದ ಸಸಿಗಳನ್ನು ನೆಡುವ ಸಂದರ್ಭಗಳಲ್ಲಿ ಕಬಿತಗಳನ್ನು ಹಾಡಬೇಕೇ ಹೊರತು ಪಾಡ್ಡನ ಹಾಡಕೂಡದು. ಎರಡನೆ ಬೆಳೆ (ಸುಗ್ಗಿ) ಮೂರನೆ ಬೆಳೆ (ಕೊಳಕೆ) ಸಂದರ್ಭದಲ್ಲಿ ಕಬಿತ ಹೇಳುವುದಿಲ್ಲ. ಪಾಡ್ಡನ ಹೇಳುತ್ತೇವೆ. ಮೊದಲ ಬೆಳೆಯ ಬತ್ತದ ಸಸಿಗಳನ್ನು ನೆಡುವ ಸಂದರ್ಭಮಳೆಗಾಲದಲ್ಲಿ ರೈತಾಪಿ ಜನರಿಗೆ ಕಷ್ಟ, ಕೈಯಲ್ಲಿ ಕಾಸಿರುವುದಿಲ್ಲ. ಲವಲವಿಕೆ ಇರುವುದಿಲ್ಲ. ಆಗ ಸಾಮಾನ್ಯವಾಗಿ ಲವಲವಿಕೆ ತರುವ ಹಾಸ್ಯ ಸನ್ನಿವೇಶ ಉಳ್ಳ ಕಬಿತ ಲೇಸೆಂದು ನಮ್ಮ ಹಿರಿಯರು ಭಾವಿಸಿರಬೇಕು (ದಾಖಲಾತಿ ೧೨..೮೯).

ಮೇಲೆ ಹೇಳಿದ ಕೋಲ ಸಂಪ್ರದಾಯ, ಸಿರಿಜಾತ್ರೆ ಸಂಪ್ರದಾಯ ಹಾಗೂ ನಾಟಿಗದ್ದೆ ಸಂಪ್ರದಾಯಗಳು ಪಾಡ್ಡನದ ಪ್ರದರ್ಶಕ ಸಂಪ್ರದಾಯಗಳೆಂದು ಈಗಾಗಲೇ ವಿವರಿಸಲಾಗಿದೆ. ಅವುಗಳ ನಡುವೆ ಆಂತರಿಕ ಸಂಬಂಧವೇನೂ ಇಲ್ಲ. ಒಂದೊಂದು ಸರ್ವತಂತ್ರ ಸ್ವತಂತ್ರ, ಒಂದೊಂದಕ್ಕೂ ಪ್ರತ್ಯೇಕ ಪ್ರದರ್ಶನ ವಿನ್ಯಾಸವಿದ್ದು ಪಾಡ್ಡನದ ಹಾಡುಗಾರಿಕೆ ಈ ಬೃಹತ್ ವ್ಯವಸ್ಥೆಯ ಒಂದು ಭಾಗ ಮಾತ್ರ. ಈ ವ್ಯವಸ್ಥೆಯ ಬದಲಾವಣೆಯೊಂದಿಗೆ ಅದರ ಒಂದೊಂದು ಅಂಗವೂ ಬದಲಾವಣೆಗೆ ಪಕ್ಕಾಗುತ್ತದೆ. ಸಮುದಾಯದ ಸಾಮಾಜಿಕ, ಆರ್ಥಿಕ ಬದಲಾವಣೆಯೊಂದಿಗೆ ಸಂಪ್ರದಾಯದ ವಿನ್ಯಾಸದ ಬದಲಾವಣೆ ಸಹಜ. ಹೀಗಾಗಿ ಕಾಲದಿಂದ ಕಾಲಕ್ಕೆ ಒಬ್ಬನೇ ವ್ಯಕ್ತಿಯದೇ ಪಾಡ್ಡನ ಪಠ್ಯದಲ್ಲೂ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಒಂದು ಸಂಪ್ರದಾಯಕ್ಕೆ ಒಂದು ಅಧಿಕೃತ ಪಠ್ಯ ಎನ್ನುವ ಮಾತಿನಲ್ಲಿ ಅರ್ಥವಿಲ್ಲ. ಪ್ರತಿಯೊಂದು ಪಾಡ್ಡನ ಪಠ್ಯವೂ ಅಧಿಕೃತ ಹಾಗೂ ಸ್ವೀಕಾರಾರ್ಹ.

ವಸ್ತುವಿನ ದೃಷ್ಟಿಯಿಂದ

ತುಳುನಾಡಿನ ಬೃಹತ್ ಪಾಡ್ಡನ ಭಂಡಾರವನ್ನು ವಸ್ತುವಿನ ದೃಷ್ಟಿಯಿಂದ ಅಲೌಕಿಕ ವಸ್ತು ಹಾಗೂ ಲೌಕಿಕ ವಸ್ತುವನ್ನು ಒಳಗೊಂಡ ಪಾಡ್ಡನಗಳೆಂದು ವಿಭಾಗಿಸಬಹುದು. ಈ ಅಲೌಕಿಕ ವಸ್ತುವಿನ ಪಾಡ್ಡನಗಳನ್ನು ಭೂತಕ್ಕೆ ಸಂಬಂಧಿಸಿದವು. ಅಲೌಕಿಕ ವ್ಯಕ್ತಿಗಳಿಗೆ ಸಂಬಂಧಿಸಿದವು. ಪೌರಾಣಿಕ ವ್ಯಕ್ತಿಗಳಿಗೆ ಸಂಬಂಧಿಸಿದವು ಹಾಗೂ ಆಚರಣೆಗೆ ಸಂಬಂಧಿಸಿದವು ಎಂಬುದಾಗಿ ಮತ್ತೆ ವರ್ಗೀಕರಿಸಬಹುದು.

ಭೂತಗಳಿಗೆ ಸಂಬಂಧಿಸಿದ ಪಾಡ್ಡನಗಳು:

ತುಳುನಾಡಿನ ಅಪಾರ ಸಂಖ್ಯೆಯ ಭೂತ/ದೈವಗಳಿಗೆ ಸಂಬಂಧಿಸಿದಂತೆ ಅವುಗಳ ಹುಟ್ಟು, ಸಾಹಸ, ಪ್ರಭಾವ, ಪ್ರಸರಣಗಳನ್ನು ವಿವರಿಸುವ ದೊಡ್ಡ ಸಂಖ್ಯೆಯ ಪಾಡ್ಡನಗಳು ದೊರೆಯುತ್ತವೆ. ವಸ್ತುವಿನ ದೃಷ್ಟಿಯಿಂದ ಒಂದೇ ಭೂತಕ್ಕೆ ಸಂಬಂಧಿಸಿದಂತೆ ಅನೇಕ ಪಾಡ್ಡನಗಳು ಸಿಗುವುದುಂಟು. ಉದಾಹರಣೆಗೆ ಜುಮಾದಿಗೆ ಸಂಬಂಧಿಸಿದಂತೆ ದೇವು ಪೂಂಜ ಪಾಡ್ಡನ, ಪಂಗುಲ್ಲ ಬನ್ನಾರ ಪಾಡ್ಡನ, ಪಂರ್ದೇರ್ ಪಾಡ್ಡನ ಇತ್ಯಾದಿ. ಇವು ಭಿನ್ನ ಪಾಠಗಳಲ್ಲಿ ಒಂದು ದೈವದ ಕಲೆ- ಕಾರ್ಣಿಕ, ಪ್ರತಾಪದ ಹಿನ್ನೆಲೆಯಲ್ಲಿ ರೂಪುಗೊಂಡ ಪಾಡ್ಡನ. ಇಲ್ಲಿ ಪ್ರಾದೇಶಿಕತೆ ಹಾಗೂ ವೈಯಕ್ತಿಕತೆಯಿಂದ ಭಿನ್ನ ಪಠ್ಯಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಪಾಡ್ಡನಗಳ ವಸ್ತು ವಿವರಕ್ಕೆ ಸಂಬಂಧಿಸಿದಂತೆ ಅವುಗಳನ್ನು ಭೂತದ ಹುಟ್ಟು (ತುಳು:ಪುಟ್ಟುಬಳಕೆ). ಸಾಹಸ (ತುಳು: ಕಲೆ-ಕಾರ್ಣಿಕ), ಪ್ರಸರಣ (ತುಳು: ಸಂಚಾರ) ಎಂಬ ನೆಲೆಯಲ್ಲಿ ವರ್ಗೀಕರಿಸಬಹುದು (ರೈ ೧೯೮೫: ೨೭-೩೮). ಒಂದೇ ಭೂತದ ಮೇಲಿರುವ ಹಲವಾರು ಪಾಡ್ಡನಗಳನ್ನು ಆಯಾ ಭೂತದ ಉಗಮ, ಸಾಹಸ, ಸಂಚಾರಕ್ಕೆ ಸಂಬಂಧಿಸಿದಂತೆ ಸಂಕಲಿಸುವ ಮೂಲಕ ಒಂದು ಪಾಡ್ಡನ ಚಕ್ರವನ್ನು ಪಡೆಯಬಹುದು. ಇದನ್ನು ಆ ಭೂತದ ಮಹಾಕಾವ್ಯವೆಂದು ಕರೆಯಬಹುದು.

ಅಲೌಕಿಕ ವಸ್ತುವುಳ್ಳ ಪಾಡ್ಡನಗಳು ಅಲೌಕಿಕ ವಸ್ತುವನ್ನೊಳಗೊಂಡ ಆದರೆ ನಂಬಿಕೆಯ ನೆಲೆಯಲ್ಲಿ ಭೂತಗಳೆಂದು ಪರಿಗಣಿಸದ ಸಾಂಸ್ಕೃತಿಕ ವೀರರ ಬಗೆಗೂ ಪಾಡ್ಡನಗಳು ದೊರೆಯುತ್ತವೆ. ಇಂತಹ ಸಾಂಸ್ಕೃತಿಕ ವೀರರು ಭೂತಗಳಂತೆಯೆ ಜೋಗ (ಲೌಕಿಕ)ದಲ್ಲಿ ಅಸಮ ಸಾಹಸಿಗಳಾಗಿದ್ದು ಸಂದು ಹೋದ ಬಳಿಕ ಮಾಯಾ (ಅಲೌಕಿಕ)ದಲ್ಲಿ ಆರಾಧನೆಗೆ ಒಳಗಾಗುವ ವ್ಯಕ್ತಿಗಳು ಇಂತಹ ಪಾಡ್ಡನಗಳಲ್ಲಿ ಚಿತ್ರಿತರಾದ ತುಳುವ ಸಮಾಜದ ಸಾಂಸ್ಕೃತಿಕ ವೀರರನ್ನು ತಾವು ಅನುಸರಿಸಿಕೊಂಡು ಬರುವ ಕುಟುಂಬ ಪದ್ಧತಿಗೆ ಆದಿಮೂಲ ವ್ಯಕ್ತಿಗಳೆಂದೂ ಅವರು ನಂಬಿದ್ದರು. ತುಳುನಾಡಿನ ಜನಪ್ರಿಯ ಆರಾಧನಾ ವ್ಯಕ್ತಿಗಳಾದ ಕೋಟಿಚೆನ್ನಯ ಹಾಗೂ ಸಿರಿಯನ್ನು ಕುರಿತ ಪಾಡ್ಡನಗಳನ್ನು ಈ ಪ್ರವರ್ಗಕ್ಕೆ ಸೇರಿಸಬಹುದು. ಈ ಎರಡು ಪಾಡ್ಡನಗಳು ಜನಪದರ ಬಾಯಿಯಲ್ಲಿ ‘ಸಂದಿ’ಯೆಂದೇ ಹೆಚ್ಚು ಚಾಲ್ತಿಯಲ್ಲಿದೆ. ಗ್ರಾಮೀಣ ಜನರು ಸಾಮಾನ್ಯವಾಗಿ ಪಾಡ್ಡನಕ್ಕೆ ಪರ್ಯಾಯಪದವಾಗಿ ‘ಸಂದಿ’ಯನ್ನು ಬಳಸುವುದುಂಟು. ದೀರ್ಘ ಕಥಾನಕಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಬರುವ ಅಧ್ಯಾಯಗಳಿಗೆ ಸಂದಿಗಳೆಂದು ಕರೆಯುತ್ತಾರೆ. ಉದಾಹರಣೆಗೆ ಕೋಟಿಚೆನ್ನಯರ ಪಾಡ್ಡನದಲ್ಲಿ ಪರ್ಮಲೆ ಬಲ್ಲಾಳರ ಸಂದಿ, ದೇಯಿಬೈದ್ಯೆದಿ ಸಂದಿ, ಬುದ್ಯಂತನ ಸಂದಿ, ಇತ್ಯಾದಿ. ಸಿರಿಪಾಡ್ಡನದಲ್ಲಿ ಸಿರಿಯ ಸಂದಿ, ಸೊನ್ನೆಯ ಸಂದಿ, ಅಬ್ಬಗದಾರಗ ಸಂದಿ ಇತ್ಯಾದಿ. ಕ್ರಮೇಣ ಇಡೀ ಪಾಡ್ಡನಕ್ಕೆ ಸಂದಿ ಎನ್ನುವ ಪದ ಬಳಕೆಯಾಗಿರಬಹುದು (ರೈ ೧೯೮೫:೨೮)

ಪೌರಾಣಿಕ ವಸ್ತುವುಳ್ಳ ಪಾಡ್ಡನಗಳು:

ಭೂತಕ್ಕೆ ಸಂಬಂಧಿಸಿದ ಕೆಲವು ಪಾಡ್ಡನಗಳಲ್ಲಿ ಶಿಷ್ಟದೇವತೆಗಳಾದ ಶಿವ, ನಾರಾಯಣ, ಕೃಷ್ಣ, ಗಣಪತಿಯರು ಕಾಣಿಸಿಕೊಳ್ಳುವುದುಂಟು. ಭೂತಗಳಿಗೆ ಸಂಬಂಧಪಡದ ಆದರೆ ಪೌರಾಣಿಕ ಅಂಶಗಳನ್ನು ಒಳಗೊಂಡ ಕೆಲವು ಪಾಡ್ಡನಗಳೂ ಸಿಗುತ್ತವೆ. ಉದಾಹರಣೆಗೆ: ಬಲೀಂದ್ರ, ಅಸುರೆತಿ ಬಂಗಾರ್, ಶ್ರೀಕೃಷ್ಣದೇವರೆ ಆರ್ಯಗಿಳಿ ಇತ್ಯಾದಿ. ಇಂತಹ ಪಾಡ್ಡನಗಳಲ್ಲಿ ಈ ಶಿಷ್ಟದೇವತೆಗಳು ತಮ್ಮ ಅಲೌಕಿಕ ಚಹರೆಗಳನ್ನು ಕಳೆದುಕೊಂಡು ಜನಸಾಮಾನ್ಯರ ರೂಪದಲ್ಲಿ ನಡೆದಾಡುತ್ತಾರೆ. “ವೈದಿಕ ಸಂಸ್ಕೃತಿಯ ಪ್ರಭಾವದಿಂದ ತುಳುಜಾನಪದದಲ್ಲಿ ಇಂತಹ ಪಾಡ್ಡನಗಳು ಹುಟ್ಟಿಕೊಂಡಿರಬಹುದಾದರೂ ಜಾನಪದದ ಅನೇಕ ಸ್ವತಂತ್ರ ಕಲ್ಪನೆಗಳ ರೀತಿಯನ್ನು ಈ ಪಾಡ್ಡನಗಳಲ್ಲಿ ಪರಿಚಯ ಮಾಡಿಕೊಳ್ಳಬಹುದು (೧೯೮೫:೧೫೧) ತುಳು ಜನಪದರಿಗೆ ವೈದಿಕ ಸಂಸ್ಕೃತಿಯ ಪರಿಚಯ ಯಕ್ಷಗಾನ ಪುರಾಣ, ಪ್ರವಚನ, ಮುಂತಾದ ಮಾಧ್ಯಮಗಳ ಮೂಲಕವೇ ಆಗಿರಬೇಕೇ ಹೊರತು ಸಂಸ್ಕೃತ- ಕನ್ನಡ ಶಿಷ್ಟ ಕಾವ್ಯಗಳಿಂದ ಆಗಿರಲಾರದು.

ಲೌಕಿಕ ವಸ್ತುವುಳ್ಳ ಪಾಡ್ಡನಗಳು:

ಲೌಕಿಕ ವಸ್ತುವುಳ್ಳ ಹಾಗೂ ನಾಟಿಗದ್ದೆಗಳಲ್ಲಿ ಮಾತ್ರ ಕ್ರಿಯಾತ್ಮಕಗೊಳ್ಳುವ ಅನೇಕ ಪಾಡ್ಡನಗಳು ತುಳುವಿನಲ್ಲಿ ದೊರೆಯುತ್ತವೆ. ಆಕರ್ಷಕ ಕಥೆ ಹಾಗೂ ಭಾಷಿಕ ಮೌಲ್ಯಗಳನ್ನು ಈ ಬಗೆಯ ಪಾಡ್ಡನಗಳು ಪಡೆದಿದ್ದರೂ ಭೂತದ ಕಥೆಗಳಷ್ಟು ಇವು ಜನಪ್ರಿಯಗಳಲ್ಲ. ಭೂತದ ಕಥೆಗಳಷ್ಟು ಪ್ರಸರಣದ ಆವರ್ತನಕ್ಕೆ ಅವಕಾಶ ಇಲ್ಲದಿರುವುದು ಹಾಗೂ ಧಾರ್ಮಿಕ ಚೌಕಟ್ಟು ಇಲ್ಲದಿರುವುದು ಅವುಗಳ ಜನಪ್ರಿಯತೆಯ ಮಾನಕದ ಇಳಿಮುಖಕ್ಕೆ ಕಾರಣವಾಗಿರಬಹುದು. ಆದರೆ ಈ ಬಗೆಯ ಲೌಕಿಕ ವಸ್ತುಗಳುಳ್ಳ ಪಾಡ್ಡನಗಳು ತುಳುವರ ಬದುಕನ್ನು ಹೆಚ್ಚು ಆಪ್ತವಾಗಿ ಪ್ರತಿನಿಧಿಸುತ್ತವೆ. ಅತ್ತೆ-ಸೊಸೆ, ಗಂಡ-ಹೆಂಡಿ, ಮಾವ-ಸೊಸೆಯರ ಸಂಬಂಧಗಳ ಕಡೆಗೆ ಬೆಳಕು ಚೆಲ್ಲುತ್ತವೆ. ಇಂತಹ ಲೌಕಿಕ ವಸ್ತುವುಳ ಪಾಡ್ಡನಗಳು ನಾಟಿಗದ್ದೆಯಲ್ಲಿ ಮಾತ್ರ ಪ್ರದರ್ಶಗೊಳ್ಳುವುದರಿಂದ, ಆಧುನಿಕತೆ ಯಾಂತ್ರೀಕರಣಗಳು ಈ ಸಂಪ್ರದಾಯಗಳ ಸ್ವರೂಪವನ್ನೇ ಬದಲಿಸುತ್ತಿರುವುದರಿಂದ ಬಹುಶಃ ಈ ಬಗೆಯ ಪಾಡ್ಡನಗಳ ಪಠ್ಯ ಮರೆಯಾಗುವ ಸಾಧ್ಯತೆ ಹೆಚ್ಚು ಆದರೆ ಕೋಲ ಸಂಪ್ರದಾಯದ ಪಠ್ಯಗಳಿಗೆ ಈ ಭಯ ಇಲ್ಲ.

ತುಳುವಿನ ಪರತಿಮಂಗಣೆ, ಮಾಲಿಂಗ ಸೆಟ್ಟಿ, ಜತ್ತೋರಿ ಪೆರ್ಗಡೆ, ಜೇವುಕೇದಗೆ ಮುಂತಾದ ಪಾಡ್ಡನಗಳು ಈ ಬಗೆಯವು ಇವುಗಳಲ್ಲಿ ಬಹುಪಾಲು ದುರಂತ ವಸ್ತುವನ್ನು ಹೊಂದಿದ್ದು ಕಥನಗೀತ ಅಥವಾ ಬ್ಯಾಲೆಡ್ಡುಗಳಿಗೆ ಸಮೀಪವಾಗುತ್ತದೆ. ಸಾಂಪ್ರದಾಯಕ ಮಾದರಿಯಲ್ಲಿ ಕಥೆಯನ್ನು ನಿರೂಪಿಸುವ ಈ ಬಗೆಯ ಗೀತಗಳಲ್ಲಿ ನಾವು ಜನಪದ ಕಾವ್ಯಗಳಲ್ಲಿ ಕಾಣಿಸುವ ನಿಧಾನಗತಿ (retardation)ಯನ್ನು ಪುನರಾವೃತ್ತಿ (repetition) ಕಾಣುತ್ತೇವೆ.

ಸುಖಾಂತ ವಸ್ತುವುಳ್ಳ ಪಾಡ್ಡನಗಳು:

ಸುಖಾಂತ ವಸ್ತುವುಳ್ಳ ಪಾಡ್ಡನಗಳ ಸಂಖ್ಯೆ ಕಡಿಮೆ. “ಇಂತಹ ಪಾಡ್ಡನಗಳು ವಸ್ತು, ರಚನೆ, ತಂತ್ರ ಇವುಗಳ ದೃಷ್ಟಿಯಿಂದ ಸಂಪೂರ್ಣವಾಗಿ ಜನಪದ ಕತೆಗಳ ಮಾದರಿಯನ್ನು ಹೋಲುತ್ತವೆ. ಜನಪದ ಕತೆಗಳಲ್ಲಿ ಬರುವ ರಮ್ಯಕತೆ, ಅದ್ಭುತಕತೆಗಳ ಮಾದರಿಯ ಕತೆಗಳು ಈ ಬಗೆಯ ಪಾಡ್ಡನಗಳ ವಸ್ತು. ಇವುಗಳ ರೂಪ (form) ಪದ್ಯ ರೂಪದಲ್ಲಿದೆ ಎನ್ನುವುದರಿಂದ ಇವುಗಳು ಕಥನ ಕವನದ ವ್ಯಾಪ್ತಿಗೆ ಬರುತ್ತವೆ. ಆದರೆ ವಸ್ತುವಿನ ದೃಷ್ಟಿಯಿಂದ ಇವು ಜನಪದ ಕತೆಗಳಾಗಿ ತುಳುವಿನಲ್ಲಿ ಸಿಗುತ್ತವೆ. ಆದುದರಿಂದ ಇಂತಹ ಪಾಡ್ಡನಗಳನ್ನು ಜನಪದ ಕತೆಗಳ ಪದ್ಯರೂಪವೆಂದೂ ಕರೆಯಬಹುದು. (ರೈ ೧೯೮೫:೧೬೫) ಈ ಬಗೆಯ ಪಾಡ್ಡನಗಳು ನಾಟಿ ಸಂಪ್ರದಾಯದಲ್ಲಿ ಮಾತ್ರ ರೂಪುಗೊಳ್ಳುತ್ತವೆ.

ಪಾಡ್ಡನ ಸಂಯೋಜನ ಪ್ರಕ್ರಿಯೆ:

ಬರೆಹದ ಅರಿವಿಲ್ಲದ ಕಥಾಗಾಯಕನ ಮೂಲಕ ಹಲವು ತಲೆಮಾರುಗಳಿಂದ ಕಥನಗೀತ ರೂಪದಲ್ಲಿ ಬಂದವುಗಳೇ ಮೌಖಿಕ ಕಾವ್ಯಗಳು. ತುಳುವಿನ ಸಿರಿ, ಕೋಟಿಚೆನ್ನಯ ಮುಂತಾದ ಸುದೀರ್ಘ ಕಥನ ಕಾವ್ಯಗಳನ್ನು ಮೌಖಿಕ ಸಂಪ್ರದಾಯಕ್ಕೆ ಸೇರಿದ ಜನಪದ ಮಹಾಕಾವ್ಯಗಳೆಂದು ಪರಿಗಣಿಸಬಹುದು. ಈ ಮಹಾಕಾವ್ಯಗಳು ಪ್ರಾಚೀನ ಕಾಲದಲ್ಲಿ ರೂಪುತಳೆದು ಪಳೆಯುಳಿಕೆಯ ರೂಪದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಬಾಯಿಪಾಠದ ಮೂಲಕ ಉಳಿದುಬಂದಿರುವವುಗಳು ಅಲ್ಲ. ಅಂದರೆ ಜನಪದ ಪರಂಪರೆಯೊಂದು ಸಾಗುತ್ತಾ ತನ್ನ ಚಲನೆಯನ್ನು ತಡೆದು ನಿಲ್ಲಿಸುವುದಿಲ್ಲ. ಅದರದು ಸದಾ ಮುನ್ನಡೆಯುತ್ತಿರುವ ಜೀವಂತ ಪ್ರಕ್ರಿಯೆ. ಸೃಷ್ಟಿಶೀಲ ಕಥಾಗಾಯಕನೊಬ್ಬ ನಿನ್ನೆ ಹಾಡಿದುದನ್ನೇ ಇಂದು ಹಾಡುವುದಿಲ್ಲ. ಈಗ ಹಾಡಿದುದನ್ನೇ ಇನ್ನೊಂದು ಘಳಿಗೆಯ ಬಳಿಕ ಹಾಡಲಾರ. ಒಂದೊಂದು ವಿಶಿಷ್ಟ ಅವಿಷ್ಕಾರ. ಯಾವುದೇ ಬದಲಾವಣೆ ಇಲ್ಲದೆ ಸ್ಥಾಯೀ ರೂಪವನ್ನು ತಾಳುವುದು ಅದು ಅಕ್ಷರ ರೂಪಕ್ಕೆ ಇಳಿದಾಗ ಮಾತ್ರ. ಆಗ ಅದರ ಮೌಖಿಕತೆಯ ಶಕ್ತಿ ನಾಶವಾಗುತ್ತದೆ.

ಮೌಖಿಕ ಕವಿಯೊಬ್ಬನಿಗೆ ಕಾವ್ಯ ಸಂರಚನೆಯ ಮುಹೂರ್ತವೆಂದರೆ ಪ್ರದರ್ಶನದ ಕಾಲಾವಧಿ ಅಂದರೆ ಪ್ರದರ್ಶನದ ಮುರ್ಹೂತದಲ್ಲೇ ಕಾವ್ಯ ಅವತರಣಗೊಳ್ಳುತ್ತದೆ. ಹಿಂದಿನವರು ಹಾಡಿಕೊಂಡು ಬಂದುದನ್ನು ಗಿಳಿಪಾಠ ಒಪ್ಪಿಸುವುದು ಅವನ ಕೆಲಸವಲ್ಲ. ಕಥಾಗಾಯಕನೊಬ್ಬನು ಪ್ರದರ್ಶನದ ಸಂದರ್ಭದಲ್ಲಿ ಕತೆಯನ್ನು ಹಾಡಾಗಿಸುವ ಸೃಷ್ಟಿಶೀಲ ಕಲಾವಿದ. ಅವನು ಏಕಕಾಲದಲ್ಲಿ ಗಾಯಕ, ಪ್ರದರ್ಶಕೆ ಹಾಗೂ ಕವಿ- ಈ ಮೂವರ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಹಾಡುವಿಕೆ, ಪ್ರದರ್ಶಿಸುವಿಕೆ ಹಾಗೂ ಕಾವ್ಯ ಸಂರಚನೆ- ಇವು ಅವನಿಗೆ ಒಂದೇ ಕ್ರಿಯೆಯ ಭಿನ್ನ ಮುಖಗಳು. ತುಳುನಾಡಿನ ಕೋಲ, ನೇಮಗಳಲ್ಲಿ ಪಾಡ್ಡನ ಕಥನಗಳನ್ನು ಹಾಡುವವರಿಗೆ ಅಥವಾ ಗದ್ದೆಯಲ್ಲಿಳಿದು ನಾಟಿ ಮಾಡುತ್ತಾ ಪಾಡ್ಡನ ಹಾಡುವ ಮಹಿಳೆಯರಿಗೆ ಏಕಕಾಲದಲ್ಲಿ ಪರಂಪರೆಯನ್ನು ಮುಂದುವರಿಸಬೇಕು ಹಾಗೂ ಹೊಚ್ಚ ಹೊಸದನ್ನು ಸೃಷ್ಟಿಸಲೂಬೇಕು. ಆದರೆ ಸಾಮಾನ್ಯವಾಗಿ ನಾವು ಅವರನ್ನು ಪ್ರದರ್ಶನದ ಸಂದರ್ಭದಲ್ಲಿ ಕಾವ್ಯ ನಿರ್ಮಿತಿಯನ್ನು ಮಾಡುವ ಸೃಜನಶೀಲರೆಂದು ತಿಳಿಯುವುದಿಲ್ಲ. ಯಾರೋ–ಎಂದೋ ಕಟ್ಟಿದ ಹಾಡನ್ನು ಯಥಾಪ್ರಕಾರ ಬಾಯಿಪಾಠ ಒಪ್ಪಿಸುವವರೆಂದೇ ತಿಳಿಯುತ್ತೇವೆ. ಒಬ್ಬನೇ/ಳೇ ಬೇರೆ ಬೇರೆ ಸಂದರ್ಭಗಳಲ್ಲಿ ನಿರೂಪಿಸಿದ ಮೌಖಿಕ ಕಾವ್ಯವು ಭಿನ್ನ ಪಾಠವಾಗಿರುತ್ತದೆ ಎಂಬುದು ಅನೇಕರ ಗಮನಕ್ಕೆ ಇನ್ನೂ ಬಾರದ ಸಂಗತಿ.

ತುಳುವಿನ ಸಂದರ್ಭದಲ್ಲಿ ಮೌಖಿಕ ಕಾವ್ಯ ಸಂಪ್ರದಾಯವು ಇನ್ನೂ ಜೀವಂತವಿದೆ. ತುಳು ಪಾಡ್ಡನಗಳು ಲಿಪಿಗಿಳಿದು ಗಾಯಕರ ಕೈಗಿನ್ನೂ ಬಂದಿಲ್ಲ. ಬಾಯಿ ಮೂಲಕವೇ ಅದು ಪ್ರಸರಣಗೊಳ್ಳಬೇಕಾಗಿದೆ. ಹೀಗಾಗಿ ಸ್ಥಿರಪಾಠ (fixed text) ವೊಂದು ದೊರೆವ ಸಾಧ್ಯತೆ ಇಲ್ಲ. ಮೌಖಿಕ ಕವಿಗೆ ಕಾವ್ಯ ಸಂರಚನೆಯ ಸಂದರ್ಭದಲ್ಲಿ ಅವನದೇ ಆದ ಮಾದರಿಗಳೇನೋ ಇರುತ್ತವೆ. ಆದರೆ ಅವು ಯಾವುವೂ ಸ್ಥಿರರೂಪದವು ಅಲ್ಲ. ಅವುಗಳನ್ನು ಆತ ಖಚಿತರೂಪದಲ್ಲಿ ಬಾಯಿಪಾಠದ ಮೂಲಕ ತನ್ನೊಳಗೆ ಸ್ಥಿರೀಕರಿಸಿಕೊಂಡಿರುವುದಿಲ್ಲ. ಪ್ರತಿಬಾರಿಗೂ ಹೊಸದೇ ಹೊಮ್ಮುತ್ತದೆ. ಇಲ್ಲಿ ಕಾಲಾವಧಿಯ ಪ್ರಶ್ನೆ ಎದುರಾಗುತ್ತದೆ. ಬರವಣಿಗೆ ಹಾಗೂ ಬಾಯಿಪಾಠದ ಸಾಧ್ಯತೆ ಇಲ್ಲದಿರುವುದರಿಂದ ಗಾಯಕ ತೀವ್ರಗತಿಯಲ್ಲಿ ದಿಢೀರನೆ ಸಂರಚನೆ ಮಾಡಬೇಕಾಗುತ್ತದೆ. ಶಿಷ್ಟಕವಿಗಾದರೆ ಕುಳಿತು ಬರೆವಲ್ಲಿ ಸಾಕಷ್ಟು ಸಮಯಾವಕಾಶ ಇರುತ್ತದೆ. ಮೌಖಿಕ ಕವಿಗಾದರೆ ತನ್ನೆದುರು ಪ್ರೇಕ್ಷಕರು ಕುಳಿತಿರುವುದರಿಂದ ತನ್ನದೇ ಆದ ವೇಗದಲ್ಲಿ ಕಾವ್ಯ ಹೊಸೆಯುತ್ತಾ ಹೋಗಬೇಕಾಗುತ್ತದೆ. ಇಲ್ಲಿ ಕಾದು ಆಲೋಚಿಸಿ ಕಾವ್ಯ ನಿರ್ಮಾಣ ಮಾಡುವುದಕ್ಕೆ ಅವಕಾಶವಿಲ್ಲ. ಆಗ ಪರಂಪರೆ ಅವನ ನೆರವಿಗೆ ಬರುತ್ತದೆ. ಮೌಖಿಕ ಕಾವ್ಯದ ಮೂಲಕ ಹಲವಾರು ತಲೆಮಾರಿನಿಂದ ಬೆಳೆದುಬಂದ ಲಯ ವಿನ್ಯಾಸಗಳ ಮೂಲಕ ಅಭಿವ್ಯಕ್ತಿಯನ್ನು ಪಡೆಯುವ ನುಡಿಗಟ್ಟುಗಳು, ಘಟನಾಪರಂಪರೆಗಳು ಅವನ ನೆರವಿಗೆ ಬರುತ್ತವೆ. ಇವುಗಳೇ ಪ್ಯಾರಿ ಹೇಳಿದ ‘ಸೂತ್ರ’ಗಳು.

ಸೂತ್ರಾತ್ಮಕ ಅಭಿವ್ಯಕ್ತಿ (Formulaic expressions)ಯಿಂದ ಕೂಡಿದ ಪಾಡ್ಡನವೊಂದು ಪ್ರದರ್ಶನಗೊಂಡಾಗ ಅದರ ಪಠ್ಯವು ಸಂದರ್ಭ ಹಾಗೂ ಪ್ರೇಕ್ಷಕ (ಇಲ್ಲಿ ಶ್ರಾವಕ)ರಿಗೆ ಅನ್ವಯಿಸಿ ಬದಲಾಗುವುದುಂಟು. ನಾಟಿಗದ್ದೆಗಳಲ್ಲಿ ಪಾಡ್ಡನಗಳನ್ನು ಹಾಡುವಾಗ ಪಕ್ಕದ ಗದ್ದೆಯ ಉಳುವಿಕೆ, ಅಲ್ಲಿನ ಪಾಡ್ಡನಗಳ ಹಾಡಿಕೆ, ಕೂಲಿಯಾಳುಗಳ ಓಡಾಟ-ಹೀಗೆ ಹಲವು ಅಡೆತಡೆಗಳು ಏರ್ಪಡುವುದುಂಟು. ಗದ್ದೆಗಿಳಿದ ಹೆಣ್ಣಾಳುಗಳ ಸಂಖ್ಯೆ ಹೆಚ್ಚಿದರೆ ಕೆಲಸ ಬೇಗನೇ ಕೊನೆಗೊಳ್ಳುತ್ತದೆ. ಅದಕ್ಕನುಸರಿಸಿ ಪಾಡ್ಡನದ ಪಠ್ಯದ ದೀರ್ಘತೆಯನ್ನು ಅವರು ಹೊಂದಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಸ್ವರ ಸೇರಿಸುವ ಮಹಿಳೆಯರ ಉತ್ಸಾಹವೂ ಪರಿಣಾಮ ಬೀರುವ ಸಾಧ್ಯತೆಯಿದೆ. ನೇಮಕಕೋಲಗಳಲ್ಲಿನ ಪ್ರೇಕ್ಷಕ ವರ್ಗದ ಮನೋಧರ್ಮ, ಅವರು ತೋರುವ ಪ್ರತಿಕ್ರಿಯೆ, ಯಜಮಾನ ಹಾಗೂ ಭೂತ ಮಾಧ್ಯಮರ ನಡುವಣ ಸಂಬಂಧ ಎಲ್ಲವೂ ಪಾಡ್ದನದ ದೀರ್ಘತೆ ಹಾಗೂ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತವೆ. ಜೊತೆಗೆ ಜಾತ್ರೆಗೆ ಬಂದು ಹೋಗುವ ಪ್ರೇಕ್ಷಕ ಸಮುದಾಯ, ವ್ಯಾಪಾರಿಗಳ ಓಡಾಟ-ಒಟ್ಟಿನಲ್ಲಿ ಪ್ರೇಕ್ಷಕ ವರ್ಗದ ‘ಅಸ್ಥಿರತೆ’ಯನ್ನು ಮೆಟ್ಟಿನಿಂತು ಪ್ರದರ್ಶನವನ್ನು ಸುಸೂತ್ರವಾಗಿ ಮುಂದುವರಿಸಿಕೊಂಡು ಹೋಗಲು ಪ್ರದರ್ಶಕನಿಗೆ ವಿಶಿಷ್ಟ ಸಾಮರ್ಥ್ಯ ಇರಬೇಕಾಗುತ್ತದೆ.

ಮೌಖಿಕ ಕಾವ್ಯ ಪರಂಪರೆಯಲ್ಲಿ ಕಾವ್ಯ ಸಂರಚನೆಗೊಳ್ಳುವ ತಾಂತ್ರಿಕತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆತ/ಆಕೆ ಆ ಸಂಪ್ರದಾಯವನ್ನು ಕರಗತಮಾಡಿಕೊಂಡ ಬಗೆಯನ್ನು ವಿವರವಾಗಿ ತಿಳಿದುಕೊಳ್ಳುವುದು ಅವಶ್ಯ. ಈ ಪ್ರಕ್ರಿಯೆಯನ್ನು ಅಧ್ಯಯನದ ದೃಷ್ಟಿಯಿಂದ ಮೂರು ಹಂತವಾಗಿ ವಿಂಗಡಿಸಿಕೊಳ್ಳಬಹುದು.