ಸಿರಿ ಪಾಡ್ದನ ಪಠ್ಯ:

ಸಿರಿ ಪಾಡ್ದನ ತುಳುನಾಡಿನ ಯಾವುದೇ ಒಂದು ನಿರ್ಧಿಷ್ಟ ಜಾತಿ, ಜನವರ್ಗದ ಆಶೋತ್ತರವನ್ನು ಬಿಂಬಿಸುವ ಕಾವ್ಯ ಅಲ್ಲ. ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ, ಕಾರ್ಕಳ, ಬೆಳ್ತಂಗಡಿ, ಮಂಗಳೂರು, ಬಂಟವಾಳ ಪರಿಸರದ ತುಳು ಆಡುಮಾತಾಗಿ ಉಳ್ಳ ಮಾತೃರೂಪಿ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಸಮುದಾಯದ ನಡುವೆ ತುಂಬ ಆಪ್ತವಾಗಿ, ಶ್ರದ್ಧಾಭಕ್ತಿಗಳಿಮದ ಪರಿಚಲನಗೊಳ್ಳುತ್ತಿರುವ ಒಂದು ಮೌಖಿಕ ಕಾವ್ಯ ಇದು. ಮಾತೃಮೂಲೀಯ ಕುಟುಂಬದ, ತುಳು ಮಾತೃಭಾಷೆಯ ಕೃಷಿ ನಿರತ, ದೈವತ್ವೀಕರನ ಹೊಂದಿದ ಬಂಟರ ಜಾತಿಯ ಒಂದು ಕುಟುಂಬದ ಮೂರು ತಲೆಮಾರುಗಳ ಸುತ್ತ ಸಿರಿಯ ಕಥೆ ಹೆಣೆದಿದೆ. ತುಳುವ ಮಹಿಳೆಯರಿಗೆ ವಿಶೇಷವಾಗಿ ಬಂಟಸಮುದಾಯದವರೆಗೆ ಸಿರಿ ಹಾಗೂ ಆಕೆಯ ಬಂಧುಪೀಳಿಗೆ (ಸೊನ್ನೆ, ಗಿಂಡೆ, ಅಬ್ಬಗ, ದಾರಗ) ಅತ್ಯಂತ ಗೌರವದ ದೈವಗಳಾಗಿವೆ. ಸಿರಿಯನ್ನು ಅವರುತಮ್ಮ ಸಮುದಾಯದ ಮೂಲಸ್ತ್ರೀಯೆಂದು ನಂಬುತ್ತಾರೆ. ಆಕೆ ದೇವರ ಮಗಳೆಂದೂ, ಆಕೆಯಿಂದಲೇ ಮಾತೃಮೂಲೀಯ ಸಂತಾನ ಬೆಳೆದು ಬಂದಿರುವುದಾಗಿಯೂ ನಂಬುತ್ತಾರೆ. ಸ್ಥಳೀಯ ಆರಾಧನಾ ಪ್ರಪಂಚದ ಭೂತಗಳಲ್ಲಿ ಹಾನಿಕಾರಕ ಗುಣವನ್ನು ತುಳುವರು ಗುರುತಿಸುತ್ತಾರೆ. ಆದರೆ ಸಿರಿಯನ್ನು ಸಮಾಜದ ಉನ್ನಯನಕ್ಕೆ ಕಾರಣಳಾದವಳೆಂದೂ ಅವಳ ಕೃಪೆಗೆ ಒಳಗಾದವರಿಗೆ ಕುಟುಂಬದಲ್ಲಿ ಸ್ಥಾನ-ಮಾನ ಗೌರವ ಲಭಿಸುವುದಾಗಿಯೂ ತಿಳಿಯಲಾಗುತ್ತದೆ.

ಈ ಮೌಖಿಕ ಕಾವ್ಯದಲ್ಲಿ ತುಳುವರ ಆದರ್ಶ, ಮೌಲ್ಯ, ಸಂಪ್ರದಾಯ, ಕುಟುಂಬ ಪದ್ಧತಿಗಳು ಕಾವ್ಯಬಂಧದೊಳಗೆ ಹೆಣೆಯಲ್ಪಟ್ಟಿವೆ. ಈ ಕಾವ್ಯವು ದುರಂತದಲ್ಲಿ ಕೊನೆಗೊಳ್ಳುವುದಾದರೂ ಮಾತೃರೂಪೀ ಸಂಸ್ಕೃತಿಯ ವಾರೀಸುದಾರರು ಸಿರಿಯನ್ನು ಇತ್ಯಾತ್ಮಕ ನೆಲೆಯಲ್ಲೇ ಗ್ರಹಿಸುತ್ತಾರೆ. ಮಾತೃಮೂಲೀಯ ಕುಟುಂಬ ಪದ್ಧತಿಯಲ್ಲಿ ಕಾಣಿಸುವ ಹೆಣ್ಣಿನ ಮೂಲಕ ಸಂತಾನದ ಮುಂದರಿಕೆ, ಒಲ್ಲದ ಗಂಡನ ವಿಚ್ಛೇದನ ಮತ್ತು ಮರುಮದುವೆ, ಸೀಮಂತದ ಮಹತ್ವ ಮುಂತಾದವುಗಳಿಗೆ ಈ ಕಾವ್ಯದ ಮೂಲಕ ಮೂಲವನ್ನು ಕಂಡುಕೊಳ್ಳುತ್ತಾರೆ. ಇಲ್ಲಿನ ಸಿರಿ ನ್ಯಾಐಕ್ಕಾಗಿ ಹಾಗೂ ವ್ಯವಸ್ಥೆಯ ನಿರಂತರತೆಗಾಗಿ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸಿ ನಡೆದ ಹೆಣ್ಣು ಹುಟ್ಟಿದ ಮನೆ ಸತ್ಯನಾಪುರ ಹಾಗೂ ಮೆಟ್ಟಿದ ಮನೆ ಬಸಲೂರು ಎರಡನ್ನೂ ಹೊಸ ಮೌಲ್ಯವನ್ನು ಸ್ಥಾಪಿಸುವ ಸಲುವಾಗಿ ತ್ಯಜಿಸಿ ಹೊರಟಾಗ ಎರಡೂ ಮನೆಗಳನ್ನು ಸುಟ್ಟು ಸೂಕರಿಗೊಳಿಸಿದ್ದು, ಗದ್ದೆ ಬಂಜರು ಬೀಳಲೆಂದೂ, ಹಟ್ಟಿಯ ಹಸುಗಳು ಈಯದಿರಲೆಂದೂ ಶಪಿಸಿದುದು ವ್ಯವಸ್ಥೆಗೆ ಪ್ರತಿಭಟನೆ ಹೊಸ ವ್ಯವಸ್ಥೆಯ ನಿರ್ಮಾಣದ ಸಲುವಾಗಿ ಎಂದು ಅರ್ಥೈಸಬೇಕು.

ಈ ಕಾವ್ಯದ ಉದ್ದಕ್ಕೂ ನೂರಾರು ಬಾರಿ ಕೇಳಿ ಬರುವ ಪದವೆಂದರೆ ‘ನಾರಾಯಣ, ನಾರಾಯಣ’. ಈ ಪದ ತುಳುವ ಸಂಸ್ಕೃತಿಯಲ್ಲಿ ಶವಸಂಸ್ಕಾರದ ಸಂದರ್ಭದಲ್ಲಿ ಕೇಳಿಬರುವಂತಹದು. ಅಂದರೆ ದುರಂತ ಅಥವಾ ಶೋಕ ಸನ್ನಿವೇಶದೊಂದಿಗೆ ಈ ಪದ ಸಾಹಚರ್ಯವನ್ನು ಪಡೆದಿರುವುದು. ಗಾಯಕರು ದುಃಖ, ಹತಾಶೆ, ಯಾತನೆಯನ್ನು ನಿರೂಪಿಸಬೇಕಾದಾಗೆಲ್ಲ ಈ ‘ನಾರಾಯಣ’ ಪದವನ್ನು ಬಳಸುತ್ತಾರೆ. ಇಡಿಯ ಸಿರಿ ಕಾವ್ಯ ಒಂದು ಕುಟುಂಬದ ಸುತ್ತ ವಿಸ್ತರಿಸಿದ್ದು ಸೀಮಂತ, ಶವಸಂಸ್ಕಾರ, ಶಿಶುಜನನ, ಮೈನರೆದ ಆಚರಣೆ ಮುಂತಾದ ಪರಿವರ್ತನವಿಧಿಗಳ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರು ನಿಯತಿಯನ್ನು ಮೀರಿದಾಗ ಕ್ರಿಯೆ ದುರಂತದೆಡೆಗೆ ಸಾಗುತ್ತದೆ. ಕಾಂತಣ್ಣಾಳ್ವನು ಅಜ್ಜನ ಶವಸಂಸ್ಕಾರದಲ್ಲಿ ಭಾಗವಹಿಸದೆ ಇದ್ದುದು, ಹೆರಿಗೆಯ ಬಳಿಕ ಹೆಂಡತಿ ಮಗುವನ್ನು ಕಂಡು ‘ಪೇತ್‌’ ನೀಡಲು ಬಾರದೆ ಹೋದುದು ಅವನ ವ್ಯಕ್ತಿತ್ವದ ಪತನವನ್ನು ಸೂಚಿಸುತ್ತದೆ. ಸೂಳೆಸಿದ್ದು ಮಡಿಕೆಡಿಸಿದ ಸೀರೆಯನ್ನು ನಿರಾಕರಿಸುವಲ್ಲಿ, ಅಜ್ಜನ ಶವಕ್ಕೆ ಹೆಣ್ಣಾದ ತಾನೇ ಸಂಸ್ಕಾರ ನಡೆಸುವಲ್ಲಿ, ಕೈ ಹಿಡಿದ ಗಂಡನಿಗೆ ವಿಚ್ಛೇದನ ಹೇಳುವಲ್ಲಿ ಸಿರಿ ತೋರಿದ ಪ್ರತಿಭಟನೆ ಹೆಣ್ಣಿನ ನೈತಿಕತೆಯ ವಿಜಯವನ್ನು ಹೇಳುತ್ತದೆ. ಗಂಡನಾದವನು ಕೌಟುಂಬಿಕ ನಿಯತಿಯನ್ನು ಮುರಿದಾಗಲೆಲ್ಲ ವ್ಯಸ್ಥೆ ದುರಂತದೆಡೆಗೆ ಸಾಗಿದಂತೆ ಕಂಡರೂ ಹೆಂಡತಿಯಾದವಳು ಒಲ್ಲದ ಗಂಡನನ್ನು ಶಾಸ್ತ್ರಸಮ್ಮತವಾದ ಬರ (ವಿಚ್ಛೇದನ)ದ ಮೂಲಕ ನಿರಾಕರಿಸುವಲ್ಲಿ ಹೊಸ ವ್ಯವಸ್ಥೆಯನ್ನು ಹುಟ್ಟುಹಾಕುತ್ತಾಳೆ.

ತುಳು ಪಾಡ್ಡನದ ಅರ್ಥ ಹಾಗೂ ಪ್ರಕಟಿಸುವ ಮೌಲ್ಯಗಳನ್ನು ಅಲ್ಲಿನ ಬಂಧುತ್ವ ವ್ಯವಸ್ಥೆಯ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಪಾಡ್ಡನಗಳಲ್ಲಿ ನಿರೂಪಿತವಾಗುವ ಬಂಧುತ್ವ ವ್ಯವಸ್ತೆಯು ಆ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಮಾತೃಮೂಲೀಯತೆಯನ್ನು ಪ್ರತಿನಿಧಿಸುತ್ತದೆ. ಕುಟುಂಬದ ನಿರ್ವಹಣೆ, ಆಸ್ತಿಯ ಹಕ್ಕು ಹೆಣ್ಣಿನದಾಗಿರುತ್ತದೆ. ಸಂಪತ್ತು, ಬಳಿ (ಗೋತ್ರ), ಕುಲದೇವರು ಹಾಗೂ ಸಾಂಪ್ರದಾಯಿಕ ರೀತಿ ರಿವಾಜುಗಳು ತಾಯಿಯಿಂದ ಮಗಳಿಗೆ ಹರಿದು ಬರುತ್ತದೆ. ಒಂದು ಮನೆಯಲ್ಲಿ ಹುಟ್ಟಿದ ಮಕ್ಕಳೆಲ್ಲರೂ ಅವರ ವಿವಾಹದ ಬಳಿಕವೂ ಒಂದೇ ಕುಟುಂಬದವರೆಂದು ಪರಿಗಣಿತರಾಗುತ್ತಾರೆ ಹಾಗೂ ತಾಯಿ ಮಕ್ಕಳು-ಮಗಳ ಮಕ್ಕಳು ಒಂದೇ ಬಳಿಯನ್ನು ಹೊಂದಿರುತ್ತಾರೆ. ಕುಟುಂಬದೊಳಗೆ ಹೆಣ್ಣೊಬ್ಬಳು ಹೊಂದುವ ಹಕ್ಕು ಹಾಗೂ ಸಮಷ್ಟಿಪ್ರಜ್ಞೆ ಮಾತೃವಂಶೀಯ ಕುಟುಂಬದ ಹೆಣ್ಣಿನ ಶಕ್ತಿಮೂಲವಾಗಿದೆ. ಇದರಿಂದಾಗಿ ಆಸ್ತಿಯ ನಿರ್ವಹಣಾಧಿಕಾರಿಯಾಗಿ ಗಂಡಿದ್ದರೂ ಅವನನ್ನು ಪ್ರಶ್ನಿಸುವ, ಪ್ರತಿಭಟಿಸುವ ಸಾಮರ್ಥ್ಯ ಹೆಣ್ಣಿಗೆ ಬರುತ್ತದೆ. ಮಾತೃವಂಶೀಯ ಕುಟುಂಬದಲ್ಲಿ ಗಂಡನು ಹೆಣ್ಣಿನ (ಹೆಂಡತಿ) ಪತ್ನಿತ್ವದ ಹಕ್ಕನ್ನು ಮಾತ್ರ ಹೊಂದಿದ್ದು ಮಾತೃತ್ವದ ಹಕ್ಕನ್ನು ಹೆಣ್ಣಿನ ರಕ್ತಸಂಬಂಧಿಗಳು ಹೊಂದಿರುತ್ತಾರೆ. ಪಿತೃವಂಶೀಯ ಕುಟುಂಬದಲ್ಲಿ ಹೆಣ್ಣು ಮದುವೆಯ ಬಳಿಕ ಪ್ರತ್ಯೇಕ ಘಟಕವಾಗಿ ರೂಪುಗೊಂಡರೆ ಮಾತೃವಂಶೀಯರಲ್ಲಿ ಒಡಹುಟ್ಟಿದ ಅಣ್ಣ-ತಂಗಿ, ಅವರ ಮಕ್ಕಳು ಒಂದೇ ಘಟಕವಾಗಿ ಉಳಿಯುತ್ತಾರೆ. ಈ ಹಿನ್ನೆಲೆಯಲ್ಲಿ ಸಿರಿಯ ವ್ಯಕ್ತಿತ್ವವನ್ನು ಅರ್ಥೈಸಬೇಕಾಗಿದೆ. ಈ ಕಾವ್ಯದಲ್ಲಿ ಸಿರಿಯ ಜನನವು ಅಲೌಕಿಕವಾಗಿ ಚಿತ್ರಿತವಾದರೂ ಮುಂದೆ ಆಕೆ ವೀರರಮಣಿಯಾಗಿ ಗುರುತಿಸಲ್ಪಟ್ಟದು ಸನ್ನಿವೇಶದಲ್ಲಿ ಎದುರಿಸುವಲ್ಲಿ ತೋರಿದ ‘ಧೀಮಂತಿಕೆ’ ಹಾಗೂ ಕ್ರಿಯಾತ್ಮಕತೆಯಲ್ಲಿ ಇಲ್ಲೇ ಅಖಿಲ ಭಾರತೀಯ ಮಹಾಕಾವ್ಯಗಳಿಗೂ ಜನಪದ ಕಾವ್ಯಗಳಿಗೂ ಅಂತರ ಏರ್ಪಡುವುದು. (ಭಾರತೀಯ ಮಹಾಕಾವ್ಯಗಳು) ಹೆಣ್ಣಿನ ಕುರಿತು ಆಡಿದಾಗಲೆಲ್ಲ ಅದು ಆಕೆಯ ಪಾತಿವ್ರತ್ಯ, ತಾಯ್ತನ, ಸೌಶೀಲ್ಯಗಳ ವೈಭವೀಕರಣವಾಗಿದ್ದು ಪುರುಷನ ಹಿತಾಸಕ್ತಿಗಳಿಗೆ ಪೂರಕವಾಗಿರುತ್ತದೆ. ಆದರೆ ಇಲ್ಲಿ ಸಿರಿ ಪಾಡ್ಡನ ಹೆಣ್ಣಿನ ಶಕ್ತಿ ಮತ್ತು ಸೃಜನಶೀಲತೆಯ ಮೇಲೆ ಕೇಂದ್ರೀಕೃತವಾಗಿದ್ದು ಅವಳ ತುಮುಲ, ಪಲ್ಲಟ, ಪಾಡ್ಡನ ಹೆಣ್ಣಿನ ಶಕ್ತಿ ಮತ್ತು ಸೃಜನಶೀಲತೆಯ ಮೇಲೆ ಕೇಂದ್ರೀಕೃತವಾಗಿದ್ದು ಅವಳ ತುಮುಲ, ಪಲ್ಲಟ, ಹೋರಾಟ, ಅಂತಸ್ಸತ್ವಗಳನ್ನು ಬಿಚ್ಚುತ್ತವೆ (ಗಾಯತ್ರೀ ನಾವಡ ೧೯೯೭: ೯೫).

ತುಳುವ ಸಮುದಾಯದೊಳಗೆ ಸಿರಿಯ ನಡವಳಿಕೆಯನ್ನು ಯಾರೂ ಆಕ್ಷೇಪಿಸುತ್ತಿಲ್ಲ. ಸತ್ಯ ಮತ್ತು ಸಚ್ಚಾರಿತ್ರ್ಯಗಳ ಪ್ರತೀಕವಾಗಿ ಆಕೆಯನ್ನು ಕಾಣುತ್ತಾರೆ. ಗಂಡ ಕಾಂತಣ ಪೂಂಜನ ನಡವಳಿಕೆಯನ್ನು ನೈತಿಕತೆಯ ಉಲ್ಲಂಘನೆ ಹಾಗೂ ಹೆಣ್ಣಿಗೆ ಮಾಡಿದ ಅಪಚಾರವೆಂದೇ ತಿಳಿಯಲಾಗುತ್ತದೆ. ಅದಕ್ಕೆ ಆತ ಬೆಲೆ ತೆರುವಂತೆ ಚಿತ್ರಿಸಲಾಗಿದೆ. “ಸಿರಿಯ ಹೋರಾಟವನ್ನು ಪುರುಷಾಧಿಕಾರಕ್ಕೆ ಒಡ್ಡುವ ಪ್ರತಿರೋಧ ಅಥವಾ ನಿರಾಕರಣೆಗಿಂತ ಹೆಚ್ಚಾಗಿ ಸ್ತ್ರೀತ್ವದ ಸ್ವಾಯತ್ತ ಶಕ್ತಿಯ ಸಂಕೇತವಾಗಿ ಗ್ರಹಿಸಬೇಕಾಗಿದೆ”ಎಂಬ ನಿಲುವು ಸರಿಯಾಗಿಯೇ ಇದೆ. (೧೯೯೭:೯೭).

ಹೊಸ ಮೌಲ್ಯಗಳ ಸ್ಥಾಪನೆಗಾಗಿ ರೂಢಿಗತ ನಿಯತಿಯನ್ನು ಭಂಜಿಸುವುದು ಸಿರಿಯ ಬದುಕಿನ ಹೋರಾಟದ ಉದ್ದೇಶವಾಗಿತ್ತು. ಮಗ ಕುಮಾರನ ಪ್ರತಿರೋಧವನ್ನು ಎದುರಿಸಿಯೇ ಸಿರಿ ಕೊಡ್ಸರಾಳ್ವನನ್ನು ಮರುಮದುವೆ ಆಗುತ್ತಾಳೆ. ಇಲ್ಲಿನ ಹೆಣ್ಣಿನ ಅನನ್ಯತೆಯ ಹುಡುಕಾಟದಲ್ಲಿ, ಅವಳ ಅಂತಸ್ಸತ್ವದ ಅಭಿವ್ಯಕ್ತಿಯಲ್ಲಿ, ಅವಳ ಮಾನವೀಯ ಪ್ರವೃತ್ತಿಯನ್ನು ನಾವು ಅರ್ಥೈಸಬೇಕಾಗಿದೆ. ಇಲ್ಲಿ ಗಂಡನ ಅನೈತಿಕತೆ, ಸಾಮಾಜಿಕ ನ್ಯಾಯಕಟ್ಟೆಯಲ್ಲಾದ ಅವಮಾನಗಳಿಗೆ ಪ್ರತಿಭಟನೆಯಾಗಿ ಆ ಮೂಲಕ ಸ್ತ್ರೀಸಮುದಾಯಕ್ಕೆ ಹೊಸ ಮೌಲ್ಯವನ್ನು ಹುಟ್ಟು ಹಾಕುವ ಸಲುವಾಗಿಯೇ ಗಂಡನಿಗೆ ವಿಚ್ಛೇದನ ನೀಡಿ ಮರುಮದುವೆ ಆದಳು. ಹೀಗಾಗಿ ಸಿರಿಯ ನಡವಳಿಕೆಯನ್ನು ವೈಯಕ್ತಿಕ ನೆಲೆಯಲ್ಲಿ ಗ್ರಹಿಸದೆ ಸಮುದಾಯದ ಹಿತದಲ್ಲಿ ಗಮನಿಸಬೇಕು.

ರಾಮಾಯಣ, ಮಹಾಭಾರತ, ಇಲಿಯಡ್ ಮುಂದಾದ ಕಾವ್ಯಗಳಲ್ಲಿನಂತೆ ಇಲ್ಲಿನ ಸಿರಿ, ಅಸಾಧಾರಣ ಶಕ್ತಿಶಾಲಿಯಲ್ಲ. ಆದರೆ ಬದುಕನ್ನು ಎದುರಿಸುವ ಕೌಶಲ್ಯದಿಂದಲೇ ಸಮರ್ಥಳೆನಿಸಿಕೊಳ್ಳುತ್ತಾಳೆ. ಆಕೆ ಇಂದಿಗೂ ಸಮುದಾಯದ ನಡುವೆ ಪೂಜಾರ್ಹ ಗೌರವ ಪಡೆದಿರುವುದು ತನ್ನಗಾರಿಕೆಗಾಗಿ ಹಾಗೂ ಸತ್ಯದ ಸ್ಥಾಪನೆಗಾಗಿ ನಡೆಸಿದ ಪ್ರಯತ್ನಕ್ಕಾಗಿ ಅಂದರೆ ಸಮಾಜದ ದ್ವಂದ್ವಗಳ ನಿರಾಕರಣ ಹಾಗೂ ಹೊಸ ಮೌಲ್ಯಗಳ ಊರ್ಜಿತದಲ್ಲೇ ಆಕೆಯ ಯಶಸ್ಸು ನಿಂತಿದೆ.

ಸಿರಿ ಪಾಡ್ದನ ಮತ್ತು ಆರಾಧನಾ ಪ್ರಪಂಚ:

ತುಳುನಾಡಿನ ಇತರ ಆರಾಧನಾ ಪ್ರಕಾರಗಳಾದ ಭೂತಾರಾಧನೆ, ನಾಗಾರಾಧನೆ ಹಾಗೂ ಶಿಷ್ಟದೇವತೆಗಳ ಜಾತ್ರೆಗಳೊಂದಿಗೆ ಹೋಲಿಸಿದರೆ ಸಿರಿ ಜಾತರೆಯ ವಿಶಿಷ್ಟತೆ ಮತ್ತು ಅನನ್ಯತೆಗಳು ಸ್ಪಷ್ಟವಾಗುತ್ತವೆ. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು, ಸಾಮೂಹಿಕ ಆವೇಶಕ್ಕೆ ಒಳಗಾಗುವುದು, ಅಪರಿಚಿತರಾಗಿರುವ ವಿಭಿನ್ನ ಜಾತಿವರ್ಗದ ಮಹಿಳೆಯರು ಆವೇಶಿತರಾದಾಗ ವೈಯಕ್ತಿಕತೆಯನ್ನು ಕಳೆದುಕೊಂಡು ಸಿರಿಕುಟುಂಬದ ಸದಸ್ಯರಾಗಿ ರೂಪಾಂತರಗೊಳ್ಳುವುದು, ಅಲೌಕಿಕ ಮಧ್ಯಂತರ ಜಗತ್ತಿನಲ್ಲಿ ಉಂಟಾಗುವ ಪರ್ಯಾಯ ಬಂಧುತ್ವ, ವಾಸ್ತವ ಬದುಕಿನ ನೋವು ಒತ್ತಡಗಳಿಗೆ ಬಿಡುಗಡೆ ಒದಗಿಸುವುದು, ಮಹಿಳೆಯರ ವಾಸ್ತವ ಬದುಕಿಗೂ ಆರಾಧನೆಗೂ ಇರುವ ಅಂತಃಸಂಬಂಧ ಹಾಗೂ ಸಿರಿ ಮೈದುಂಬುವ ಹೆಣ್ಣು ಗಳಿಸುವ ಕೌಟುಂಬಿಕ-ಸಾಮಾಜಿಕ ಗೌರವ ಮನ್ನಣೆಗಳು- ಹೀಗೆ ಹಲವು ನಿಟ್ಟಿನಿಂದ ಸಿರಿ ಆರಾಧನೆ ಸಂಕೀರ್ಣತೆಯನ್ನು ಪಡೆದುಕೊಂಡು ಸೂಕ್ಷ್ಮ ಅಧ್ಯಯನವನ್ನು ಬಯಸುತ್ತದೆ.

ಲೌಕಿಕ-ಅಲೌಕಿಕವನ್ನು ಒಂದುಗೂಡಿಸುವ, ಬದುಕಿನ ಒತ್ತಡಕ್ಕೆ ಒಳಗಾದ ನೂರಾರು ಮಹಿಳೆಯರು ಆವೇಶಗೊಳ್ಳುವ, ಅಲ್ಲಿ ಸೃಷ್ಟಿಯಾಗುವ ಪರ್ಯಾಯ ಬಂಧುತ್ವ ಹಾಗೂ ಆ ಮೂಲಕ ಪಡೆಯುವ ಸಮಾಧಾನ, ಬಿಡುಗಡೆಗಳನ್ನು ಸಿರಿ ಆರಾಧನಾ ಪ್ರಪಂಚವನ್ನು ಬಹಳ ಸುಲಭವಾಗಿ ಅರ್ಥೈಸುವುದು ಆಗದು. ಅದನ್ನು ಜಾತ್ರೆಯ ‘ಬೃಹತ್‌ಪಠ್ಯ’ದೊಂದಿಗೆ ಜಾತ್ರೆಯ ಹೊರಗಿನ ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ, ಆರ್ಥಿಕ ಸಂದರ್ಭಗಳ ಗ್ರಹಿಕೆಯ ಹಿನ್ನೆಲೆಯಲ್ಲಿ ಕಂಡುಕೊಳ್ಳಬೇಕಾಗುತ್ತದೆ. ಅದಕ್ಕೆ “ಉತ್ಸವರೂಪದಲ್ಲಿ ನಡೆಯುವ ಮಹಿಳೆಯರ ಆವೇಶ ಮತ್ತು ಸಿರಿ ಸಂದಿಯ ಹಾಡುವಿಕೆ ಈ ವ್ಯವಸ್ಥೆಯ ಒಂದು ಮುಖವಾದರೆ, ಸಿರಿ ಹೆಂಗಸರ ವೈಯಕ್ತಿಕ ಬದುಕಿನ ಇತಿಹಾಸ, ಕುಟುಂಬ ಪದ್ಧತಿ, ಸಿರಿ ಬಳಗದ ಸದಸ್ಯೆಯಾಗಿ ನೇಮಕಗೊಳ್ಳುವ ದಲಿಯಸೇವೆ, ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ವಿಧಿ ನಿಯಮಗಳು, ಅನುಭವಿ ಸಿರಿ ಹೆಂಗಸರಿಂದ ಮತ್ತು ಕುಮಾರನ ಸಹಾಯದಿಂದ ಸಿರಿ ಸಂದಿಯನ್ನು ಕಲಿತುಕೊಳ್ಳುವ ಬಗೆ-ಇವುಗಳು ಈ ವ್ಯವಸ್ಥೆಯ ಇತರ ಮುಖಗಳಾಗಿವೆ ಎನ್ನುವ ವಿಸ್ತಾರದ ಅರಿವಿರಬೇಕಾಗುತ್ತದೆ.

ಸಿರಿ ಪಾಡ್ಡನದಲ್ಲಿ ಸಿರಿಯ ಕೌಟುಂಬಿಕ, ಸಾಮಾಜಿಕ ಸಂದರ್ಭ, ವಿಚ್ಛೇದನ, ಮರುಮದುವೆ, ಉತ್ತರಾಧಿಕಾರತ್ವ, ಸ್ತ್ರೀತ್ವ ಮತ್ತು ಪರಿಶುದ್ಧತೆಯ ಪರಿಕಲ್ಪನೆಗಳು, ಗಂಡಿನ ಮೋಸ, ಅನ್ಯಾಯ, ಪುರುಷ, ಪ್ರಭುತ್ವದ ಹೇರಿಕೆಯ ಪ್ರಯತ್ನಗಳು, ಅದರ ವಿರುದ್ಧ ಹೆಣ್ಣಿನ ಹೋರಾಟ ಮತ್ತು ವಿಜಯಗಳು ದಾಖಲಾಗಿದೆ. ಇದರಿಂದಾಗಿ ಬಂಟ ಸಮುದಾಯ ಮೂಲಹೆಣ್ಣೆಂದು ಗ್ರಹೀತಳಾದ ಸಿರಿಯೊಂದಿಗೆ ತುಳುನಾಡಿನ ಎಲ್ಲ ಮಾತೃರೂಪಿ ಕುಟುಂಬದ ಹೆಣ್ಣುಗಳು ತಮ್ಮ ಸಂಬಂಧವನ್ನು ಕಂಡುಕೊಳ್ಳುತ್ತಾರೆ. ಸಿರಿ (ಪಾಡ್ಡನ) ಪುರಾಣದೊಂದಿಗೆ ಗಾಢವಾದ ಸಂಬಂಧವಿರುವ ತುಳುವ ಮಹಿಳೆಯರಿಗೆ ಸಿರಿಯ ಬದುಕು ಮತ್ತು ಹೋರಾಟಗಳು ಆದರ್ಶ ಮಾದರಿಯಾಗಿರುವಲ್ಲಿ ಸಿರಿ ಪಾಡ್ಡನವು ಸಿರಿ ಜಾತ್ರೆಗೊಂದು ಸಂಹಿತೆಯಾಗಿ ಕಾರ್ಯನಿರ್ವಹಿಸುತ್ತದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಅನೇಕ ಶೈವದೇವಾಲಯಗಳಲ್ಲಿ ಸಿರಿ ಆರಾಧನೆ ವಾರ್ಷಿಕ ಜಾತ್ರೆಯ ಸ್ವರೂಪದಲ್ಲಿ ನಡೆಯುತ್ತದೆ. ಉಡುಪಿ ಜಿಲ್ಲೆಯ ಪಾಂಗಾಳ, ಕವತ್ತಾರು, ಹಿರಿಯಡಕ, ಬೊಳ್ಯೊಟ್ಟು, ನಂದಳಿಕೆ; ದಕ್ಷಿಣ ಕನ್ನಡ ಜಿಲ್ಲೆಯ ಕಂಡೇವು, ಆತ್ರಿಜಾಲ್, ಹುರುಂಬಿದೊಟ್ಟು, ಕುತ್ರೊಟ್ಟು, ನಿಡಿಗಲ್ಲ್, ಉರ್ಕಿದೊಟ್ಟು, ಜರೆಗುಡ್ಡೆಗಳು ಪ್ರಮುಖ ಸಿರಿ ಆರಾಧನಾ ಕೇಂದ್ರಗಳು. ಮಾರ್ಚ್‌, ಎಪ್ರೀಲ್, ಮೇ ತಿಂಗಳು ಹುಣ್ಣಿಮೆಯ ರಾತ್ರೆ ಸಿರಿ ಜಾತ್ರೆ ಜರಗುವುದು. ಬಹುತೇಕ ಸಿರಿಜಾತ್ರೆಗಳು ಶೈವ ದೇವಾಲಯಗಳಲ್ಲಿ ನಡೆಯುವುದಾದರೂ ಶಿಷ್ಟದೇವರಿಗೂ ಸಿರಿಗೂ ಯಾವುದೇ ಸಂಬಂಧವಿಲ್ಲ. ಈ ದೇವಾಲಯಗಳು ಮೂಲತಃ ಆಲಡೆ ಅಥವಾ ಬೆರ್ಮಸ್ಥಾನಗಳಾಗಿವೆ. ಸಿರಿಯ ಆರಾಧನಾ ಕೇಂದ್ರಗಳು ಸಂಕೀರ್ಣ ಸ್ವರೂಪದ್ದಾಗಿರುತ್ತದೆ. ಒಂದೆಡೆ ಶೈವ ದೇವಾಲಯ ಹಾಗೂ ಪರಿವಾರ ದೇವತೆಗಳು, ಇನ್ನೊಂದೆಡೆ ಸ್ಥಳದ ಭೂತಗಳು, ಮತ್ತೊಂದು ಸ್ತರದಲ್ಲಿ ಸಿರಿಗುಂಡ, ಸಿರಿ ಬಳಗದ ಮೂರ್ತಿಗಳು. ಹೀಗಾಗಿ ಸಿರಿಜಾತ್ರೆಯ ಆವರಣ ಹಾಗೂ ಆರಾಧನಾ ಪ್ರಕ್ರಿಯೆಗಳು ಸಂಕೀರ್ಣತೆಯನ್ನು ಪಡೆದುಕೊಳ್ಳುತ್ತವೆ. ಡಾ. ಪೀಟರ್ ಕ್ಲಾಸ್ ಗುರುತಿಸುವಂತೆ “ಇಲ್ಲಿನ ಶಿವಾರಾಧನೆ ಸಿರಿಯ ಆರಾಧನೆಯನ್ನು ಅತಿಕ್ರಮಿಸಿ ಜರಗುತ್ತದೆಯೇ ಹೊರತು ಸಿರಿ ಆರಾಧನೆಯ ಒಂದು ಅಂಗವಾಗಿ ನಡೆಯುತ್ತಿಲ್ಲ. ಇದನ್ನು ಒಂದು ಖಾಯಂ ಆರಾಧನಾ ಬಳಗವಾಗಿ ಮಾನ್ಯ ಮಾಡದೆ ದೇವಾಲಯದೊಂದಿಗೆ ಸಂಬಂಧವಿರಿಸಿಕೊಂಡ ಹಲವಾರು ದಯವಗಳಲ್ಲಿ ಸಿರಿ ಒಂದು ಎಂಬುದಾಗಿ ಭಾವಿಸುತ್ತಾರೆ” (ಕ್ಲಾಸ್, ಅನು: ನಾವಡ, ಸುಭಾಶ್ಚಂದ್ರ ೧೯೮೭:೧೦೬) ಇಷ್ಟೊಂದು ವ್ಯಾಪಕ ನೆಲೆಯಲ್ಲಿ ಆರಾಧಿಸಲಾಗುವ ಸಿರಿ ಆಧೀನ ದೈವವಾಗಿ ಆರಾಧಿಸಲ್ಪಡುವ ಸಂಗತಿ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ.

ಮತಾಚರಣೆ:

ಜಾತ್ರೆಯಂದು ಮುಸ್ಸಂಜೆ ಹೊತ್ತಿಗೆ ಸಿರಿಭಕ್ತರು ಹಾಗೂ ಅವರ ಬಂಧುಗಳು ಸಿರಿಗುಡಿಗೆ ಬಂದು ಕಾಣಿಕೆ ಒಪ್ಪಿಸುತ್ತಾರೆ. ಬ್ರಾಹ್ಮಣ ತಂತ್ರಿಯಿಂದ ಪೂಜೆ ಸಲ್ಲುತ್ತದೆ. ಸಿರಿ ಮತ್ತು ಕುಮಾರ ಮೈದುಂಬುವ ವ್ಯಕ್ತಿಗಳು ಅಂದು ಶೌಚದಲ್ಲಿರಬೇಕು. ಸ್ನಾನ, ಮಡಿಬಟ್ಟೆ, ನಡೆಹಾಸು, ವೇಷಭೂಷಣ, ಹಿಂಗಾರ, ಹುಣ್ಣಿಮೆ ರಾತ್ರೆ, ವಾದ್ಯಮೇಳಗಳ ಮೂಲಕ ಅವರನ್ನು ‘ಪ್ರತ್ಯೇಕ’ ಗೊಳಿಸಲಾಗುವುದು. ದೈಹಿಕ ಹಾಗೂ ಮಾನಸಿಕವಾದ ಈ ಪ್ರತ್ಯೇಕೀಕರಣ ಪೂರ್ವಸಿದ್ಧತೆಗಳು ಆವೇಶಕ್ಕೆ ಪೂರಕವಾಗಿ ದುಡಿಯುತ್ತವೆ. ಪ್ರತಿಯೊಂದು ಸಿರಿ ಆರಾಧನಾ ಕೇಂದ್ರಕ್ಕೆ ಸಂಬಂಧಪಟ್ಟಂತೆ ನಿಗದಿಯಾದ ಮೂಲಕುಮಾರ ಅಥವಾ ಸ್ಥಳಕುಮಾರ ಮತ್ತು ಅವನ ಆಧೀನ ಕುಮಾರರು ಹಾಗೂ ಸಿರಿಗಳು ಇದ್ದು ಹೆಣ್ಣೊಬ್ಬಳು ಸಿರಿಯಾಗುವ ಪ್ರಕ್ರಿಯೆ ಹೀಗಿರುತ್ತದೆ: ಸಾಮಾನ್ಯವಾಗಿ ಹೆಣ್ಣು ಎಳೆಹರೆಯದಿಂದ ಮಧ್ಯವಯಸ್ಸಿನ (೧೪ ರಿಂದ ೩೫) ಗುಂಪಿನಲ್ಲಿ ಸಿರಿ ಆಕರ್ಷಣೆಗೆ ಒಳಗಾಗುತ್ತಾಳೆ. ಒಬ್ಬಾಕೆಯಲ್ಲಿ ದೈಹಿಕ/ಮಾನಸಿಕ ಅಸ್ವಸ್ಥೆಯ ಚಹರೆಗಳು ಕಂಡುಬಂದಾಗ ಅದು ‘ದುಷ್ಟಶಕ್ತಿ’ಯ ಕಾಟ, ಉಪದ್ರವವೆಂದು ಪರಿಹಾರೋಪಾಯಗಳನ್ನು ನಡೆಸಲಾಗುವುದು. ಆಗಲೂ ಫಲ ಕಂಡುಬಾರದಿದ್ದಲ್ಲಿ ಸಿರಿ ಜಾತ್ರೆಗೆ ಹೋಗಿ ‘ದಲಿಯ’ ಸೇವೆ ಮಾಡುವುದಾಗಿಹರಕೆ ಹೇಳಿಕೊಳ್ಳುತ್ತಾರೆ. ಅದರಂತೆ ಕುಮಾರನನ್ನು ಮನೆಗೆ ಕರೆಯಿಸಿ ಅಥವಾ ಕುಮಾರನಲ್ಲಿಗೆ ಹುಡುಗಿಯನ್ನು ಕರೆದೊಯ್ದು ಅಥವಾ ವಾರ್ಷಿಕ ಸಿರಿಜಾತ್ರೆಗೆ ಕರೆತಂದು ದಲಿಯ ಮಾಡಿಸುತ್ತಾರೆ. ಹೊಸದಾಗಿ ದಲಿಯ ಸೇವೆಗೆ ಕರೆತಂದ ಹೆಣ್ಣನ್ನು ಸಿರಿತಂಡದೊಂದಿಗೆ ಸೇರಿಸುತ್ತಾರೆ. ಆರಾಧನಾ ಪ್ರಕ್ರಿಯೆಯೊಳಗೆ ಆವೇಶಿತಳಾಗುವ ಈ ಹೆಣ್ಣನ್ನು ಕುಮಾರ ಸಿರಿ ಪಾಡ್ಡನದ ಭಾಗಗಳನ್ನು ಹಾಡುವ ಮೂಲಕ ಮಧ್ಯಂತರ ಜಗತ್ತಿಗೆ ಪ್ರವೇಶಿಸುವಂತೆ ಪ್ರಚೋದಿಸಲಾಗುತ್ತದೆ. ಈ ಪ್ರವೇಶ ಸಾಧ್ಯವಾಗಿ ಆಕೆ ಸಿರಿ ಬಳಗದ ಯಾವುದಾದರೊಂದು ಪಾತ್ರವಾಗಿ ತನ್ನನ್ನು ಕಂಡುಕೊಳ್ಳುತ್ತಾಳೆ. ಆವೇಶದ ನಿರಂತರ ಸ್ಥಿತಿಯಲ್ಲಿ ಆಕೆಯನ್ನು ಅನುಭವಿಸಿರಿಗಳು ಹಾಗೂ ಕುಮಾರ ‘ಬಾಯಿಬಿಡಿಸುವ’ ಕಾರ್ಯ ಮಾಡುತ್ತಾರೆ. ಆಗ ಆಕೆ ತಾನು ಸಿರಿ ಬಳಗದ ಸೊನ್ನೆಯೋ ಅಬ್ಬಗ ದಾರಗಳೆಂದೋ ಹೇಳಿ ಕುಮಾರನೊಂದಿಗೆ ಪಾಡ್ಡನ ಧಾಟಿಯಲ್ಲಿ ಸಂಭಾಷಿಸುವಲ್ಲಿ ಆಕೆ ಸಿರಿ ಬಳಗದ ನಿರ್ದಿಷ್ಟ ಸದಸ್ಯೆಯಾಗಿ ನಾಮಕರಣ ಹೊಂದುತ್ತಾಳೆ. ಮತ್ತಾಕೆ ವರ್ಷ ವರ್ಷವೂ ಜಾತ್ರೆಗೆ ಬಂದು ಸೇವೆ ಸಲ್ಲಿಸಲು ನಿಬದ್ಧಳಾಗುತ್ತಾಳೆ. ದೇಹ ಮತ್ತು ಮನಸ್ಸಿನ ಪರಿಶುದ್ಧ ಸ್ಥಿತಿಯಲ್ಲಿ ಮಾತ್ರ ಸಿರಿ ಮೈದುಂಬುವುದು ಸಾಧ್ಯ ಎಂಬ ಬಲವಾದ ನಂಬಿಕೆಯಿದೆ. ಹೀಗಾಗಿ ಹೆಣ್ಣೊಬ್ಬಳಿಗೆ ಸಿರಿಯಾಗುವುದು ಅವಳ ಸಚ್ಚಾರಿತ್ರ್ಯ ಮತ್ತು ಪಾವಿತ್ರ್ಯದ ಸಂಕೇತವೆಂದು ಭಾವಿಸಲಾಗುವುದು. ಇದರಿಂದ ಸಿರಿಯಾಗುವ ಮುನ್ನಿನ ಹಾಗೂ ಮತ್ತಿನ ಅವಳ ಸ್ಥಾನಮಾನದಲ್ಲಿ ಬಹಳಷ್ಟು ವ್ಯತ್ಯಾಸ ಗೋಚರಿಸುತ್ತದೆ.

ಜಾತ್ರೆಯಲ್ಲಿ ತಂತ್ರಿಯಿಂದ ತೀರ್ಥ ಪ್ರಸಾದ ಸ್ವೀಕರಿಸುವ ಸಿರಿಗಳು ಮತ್ತು ಕುಮಾರರು ಎದುರುಬದುರಿಗೆ ಸಾಲಾಗಿ ಅಥವಾ ಸುತ್ತುವರಿದು ನಿಲ್ಲುವರು. ಸಿರಿ ಪಾಡ್ಡನದ ಹಂದರವು ಅನಾವರಣಗೊಳ್ಳುತ್ತ ಹೋದಾಗ ಲೌಕಿಕ ಜಗತ್ತಿನ ಈ ವ್ಯಕ್ತಿಗಳು ಅಲೌಕಿಕ ಜಗತ್ತನ್ನು ಪ್ರವೇಶಿಸುತ್ತಾರೆ ಹಾಗೂ ಮಧ್ಯಂತರ ಜಗತ್ತಿನ ಪಾತ್ರಗಳಾಗಿ ರೂಪಾಂತರಗೊಳ್ಳುತ್ತಾರೆ. ಆಗ ಅವರು ಸಿರಿ-ಕುಮಾರ, ಕುಮಾರ-ಸೊನ್ನೆ, ಕುಮಾರ-ಅಬ್ಬಗ ದಾರಗರಾಗಿ ಪರಸ್ಪರ ಸಂಬಂಧವನ್ನು ಸ್ಥಾಪಿಸಿಕೊಂಡು ಪಾಡ್ಡನದ ಮೂಲಕ ಉತ್ತಮ ಪುರುಷದಲ್ಲಿ ಸಂವಾದ ನಡೆಸುತ್ತಾರೆ. ತುಳುವ ಬಂಧುತ್ವ ವ್ಯವಸ್ಥೆಯಲ್ಲಿ ಈ ಜೋಡಿಗಳು ರಕ್ತಬಾಂಧವ್ಯ ಘಟಕವಾಗಿದ್ದು ಅವು ತಾಯಿ-ಮಗ, ಅಣ್ಣ-ಗಂತಿ, ಸೋದರಮಾವ-ಸೊಸೆಯದಾಗಿವೆ. ಮಾತೃರೂಪಿ ತುಳುವ ಸಂಸ್ಕೃತಿಯಲ್ಲಿ ತಾಯಿಯ ಬಳಗವು ‘ಕುಟುಂಬ’ವೆಂದು ಪರಿಗಣಿತವಾಗುವುದರಿಂದ ಸೋದರ ಮಾವ ಕುಟುಂಬದ ಸದಸ್ಯನಾಗಿದ್ದು ಸೋದರಮಾವ-ಸೊಸೆಯು ಒಂದೇ ಬಳಿ ಹೊಂದಿದ್ದು ಅವರೊಳಗಿನ ವಿವಾಹ ನಿಷಿದ್ಧವಾದುದು. ಈ ತಿಳಿವಳಿಕೆ ಸಿರಿಜಾತ್ರೆಯನ್ನು ಸಂತಾನಾಪೇಕ್ಷಿ ಮೇಳವೆಂಬ ಗ್ರಹಿಕೆಯನ್ನು ಮರುವಿಮರ್ಶೆಗೆ ಒಡ್ಡಲು ಒತ್ತಾಯಿಸುತ್ತದೆ.

ಸಿರಿಜಾತ್ರೆಯ ಸಂದರ್ಭದಲ್ಲಿ ಇಡಿಯ ಸಿರಿ ಪಾಡ್ಡನವನ್ನು ಹಾಡಲಾಗುವುದಿಲ್ಲ. ಕೆಲವೊಂದು ಉತ್ಕಟ ಸಂದರ್ಭದ ಘಟನಾವಳಿಗಳನ್ನಷ್ಟೇ ಪ್ರದರ್ಶಿಸಲಾಗುವುದು. ಪಾಡ್ಡನದೊಳಗಿನ ಘಟನೆಗಳ ವಿವರಗಳು ಉತ್ಕಟಸ್ಥಿತಿಯನ್ನು ತಲಪುವಲ್ಲಿ ಆವೇಶವೂ ತೀವ್ರಗೊಳ್ಳುತ್ತದೆ. ಹೀಗೆ ಪಾಡ್ಡನ ಹಾಡುತ್ತ, ಆವೇಶ ತೀವ್ರಗೊಳ್ಳುತ್ತ ಹೋದಂತೆ ತಮ್ಮ ವೈಯಕ್ತಿಕತೆಯನ್ನು ಕಳೆದುಕೊಳ್ಳುತ್ತ ಸಿರಿಕುಟುಂಬದ ಪಾತ್ರಗಳಲ್ಲಿ ಒಂದಾಗುತ್ತಾರೆ. ಆಗ ಅಲ್ಲಿ ಒಂದು ಬಗೆಯ ಅನುಭಾವಿಕ ರಕ್ತಬಾಂಧವ್ಯ ಏರ್ಪಡುತ್ತದೆ. ಪಾಡ್ಡನದ ಮಾತೃರೂಪಿ ಕುಟುಂಬವೊಂದರ ಮೂರು ತಲೆಮಾರುಗಳ ಹೆಣ್ಣುಗಳು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ಯಾತನೆ, ಎದುರಿಸಿದ ಸಮಸ್ಯೆಗಳ ಸನ್ನಿವೇಶಕ್ಕೂ ತಮ್ಮ ಕೌಟುಂಬಿಕ ಸನ್ನಿವೇಶಕ್ಕೂ ಸಾಮ್ಯ ಏರ್ಪಟ್ಟಾಗ ಅವರು ತೀವ್ರತರವಾದ ಆವೇಶಕ್ಕೆ ಒಳಗಾಗುತ್ತಾರೆ. ಜೊತೆಗೆ ಸಿರಿ ಹಾಗೂ ಅವಳ ಸಂತಾನ ಸಂಘರ್ಷವನ್ನು ಎದುರಿಸಿದ ಬಗೆ ಅವರಲ್ಲಿ ಒಂದು ಆತ್ವವಿಶ್ವಾಸ ಮತ್ತು ಹೊಸ ಶಕ್ತಿಯನ್ನು ಹುಟ್ಟುಹಾಕುತ್ತದೆ. ಹೀಗೆ ಸಿರಿ ಪಾಡ್ಡನಕ್ಕೂ ಆಚರಣೆಗೂ ಆವೇಶಿತ ಮಹಿಳೆಯರಿಗೂ ತ್ರಿಭುಜಮಾದರಿಯ ಒಂದು ಅಂತಃಸಂಬಂಧ ಸ್ಥಾಪಿತವಾಗುತ್ತದೆ. ಸಿರಿ ಆಚರಣೆ ಪರ್ಯಾಯ ತಾತ್ಕಾಲಿಕ ಕುಟುಂಬವೊಂದನ್ನು ಒದಗಿಸಿಕೊಟ್ಟು ದಮನಕ್ಕೊಳಗಾದ –ನೊಂದ ಮಹಿಳೆಯರಿಗೆ ತಮ್ಮ ಒತ್ತಡ ಸಂಘರ್ಷಗಳಿಗೊಂದು ಹೊರಹರಿವಿನ ಕಿಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಬಿಡುಗಡೆಯನ್ನು “ವರ್ಷ ವರ್ಷ ಜಾತ್ರೆಗೆ ಹೋದರೆ ಮಾತ್ರ ಮೈಗೆ ಸುಖ, ಇಲ್ಲದಿದ್ದರೆ ನೆಮ್ಮದಿ ಇಲ್ಲ” (ಗಾಯತ್ರಿ ನಾವಡ: ೧೯೮೭-೧೦೧) ಎನ್ನುವ ಸಿರಿ ಪಾತ್ರಿಣಿ ಪಾಚು ಮೂಲ್ಯೆದಿಯ ಮಾತು ಸ್ಪಷ್ಟಪಡಿಸುತ್ತದೆ.

ನಾಟಿಗದ್ದೆಯಲ್ಲಿ ಸಿರಿ ಜಾತ್ರೆಯಲ್ಲಿ ಪ್ರದರ್ಶಿತಗೊಳ್ಳುವ ಪಾಡ್ಡನದ ಘಟನಾವಳಿಗಳನ್ನು ಹಾಡದಿರುವುದು, ಜಾತ್ರೆಯಲ್ಲಿ ಪಾಡ್ಡನ ಪಠ್ಯದ ಕೆಲವು ಘಟನಾವಳಿಗಳನ್ನಷ್ಟೇ ಎತ್ತಿ ಪ್ರದರ್ಶನಗೊಳಿಸುವುದು ಹಾಗೂ ಮಹಿಳೆಯರು ಆವೇಶಗೊಳ್ಳುವ ಪ್ರಕ್ರಿಯೆಯ ಅಂತಃ ಸಂಬಂಧವನ್ನು ಈ ನೆಲೆಯಲ್ಲಿ ಶೋಧಿಸಬೇಕಾಗಿದೆ. ಸಿರಿ ಆವೇಶಿತರಾದ ಮಹಿಳೆಯರು ಅಲೌಕಿಕ ಜಗತ್ತಿನ ಸಿರಿ ಬಳಗವಾಗಿ ರೂಪಾಂತರಗೊಂಡು ಅವರು ಎದುರಿಸಿದ ಸಂಘರ್ಷವನ್ನು ಪ್ರಕಟಪಡಿಸುತ್ತಲೇ ತಮ್ಮ ಲೌಕಿಕ ಬದುಕಿಗೂ ಪ್ರತಿಕ್ರಿಯಿಸಿ ವಾಸ್ತವದ ಒತ್ತಡಗಳಿಂದ ಪಾರಾಗುವ, ಪುರುಷ ವ್ಯವಸ್ಥೆಯನ್ನು ಪ್ರತಿರೋಧಿಸುವ ಪ್ರಯತ್ನವಾಗಿ ಸಿರಿಜಾತ್ರೆಯನ್ನು ಗಮನಿಸಬೇಕು. ಹಾಗಾಗಿಯೇ “ಸಂದಿಯಲ್ಲಿ ನಿರೂಪಿತವಾಗಿರುವ ಕಥೆ ಹಾಗೂ ಘಟನೆಗಳು ಜಾತ್ರೆಯ ಸ್ವರೂಪವನ್ನು ನಿರ್ಧರಿಸುವುದಕ್ಕಿಂತ ಹೆಚ್ಚಾಗಿ ಆವೇಶಹೊಂದುವ ಮಹಿಳೆಯರ ವಾಸ್ತವ ಬದುಕಿನ ಕಷ್ಟ, ಹಿಂಸೆ, ಶೋಷಣೆ, ನಿರೀಕ್ಷೆ, ಹತಾಶೆಗಳೇ ಸಿರಿಜಾತ್ರೆಯ ಸಂದರ್ಭವನ್ನು ನಿಯಂತ್ರಿಸುತ್ತವೆ.” (ಗೌಡ ೧೯೯೦:೧೩೯). ಅಂದರೆ ಲೌಕಿಕಕ್ಕೆ ಪರ್ಯಾಯವಾಗಿಯೇ ಅಲೌಕಿಕ ಜಗತ್ತನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಸ್ತಿತ್ವದ ಹುಡುಕಾಟದ ಪ್ರಶ್ನೆಯಲ್ಲಿ ಇಂತಹ ಅಲೌಕಿಕ ಜಗತ್ತಿನ ಸೃಷ್ಟಿ ಪ್ರಕ್ರಿಯೆ ಎನ್ನುವುದು ವಾಸ್ತವಕ್ಕೆ ನೀಡುವ ಒಂದು ಪ್ರತಿರೋಧವೇ ಆಗಿರುತ್ತದೆ. ಹೀಗಾಗಿ ಇಂತಹ ಸಿರಿ ಆಚರಣೆಯ ಈ ಮಧ್ಯಂತರ ಜಗತ್ತಿನಲ್ಲಿ ತೆರೆದುಕೊಳ್ಳುವ ತಾತ್ಕಾಲಿಕ ಸಂಬಂಧಗಳಿಗೆ ವಿಶೇಷ ಅರ್ಥವಿದೆ. ಲೌಕಿಕ ವ್ಯಕ್ತಿಯೊಬ್ಬಳು ಮಧ್ಯಂತರ ಜಗತ್ತಿನಲ್ಲಿ ಪಡೆದುಕೊಳ್ಳುವ ವ್ಯಕ್ತಿತ್ವ, ಅಲೌಕಿಕ ವ್ಯಕ್ತಿಗಳೊಂದಿಗೆ ಅಭೇಧ್ಯಳಾಗಿ ಸ್ಥಾಪಿಸಿಕೊಳ್ಳುವ ಸಾಧ್ಯತೆಯನ್ನು ಭ್ರಮಾತ್ಮಕ ಎಂದು ತಳ್ಳಿಹಾಕ ಬರುವುದಿಲ್ಲ. ಈ ಕಾರಣದಿಂದಲೇ ಆವೇಶಿತ ಸಿರಿಗಳನ್ನು ಗ್ರಹಿಸುವ ಮತ್ತು ಅರ್ಥೈಸುವ ನೆಲೆಯನ್ನು ಹೆಣ್ಣೊಬ್ಬಳಿಗೆ ಎದುರಾಗುವ ಇಕ್ಕಟ್ಟುಗಳ ಬಿಡುಗಡೆಯ ಅವಕಾಶವಾಗಿ, ಪ್ರತಿರೋಧದ ಶಕ್ತಿಸಂಚಯನವಾಗಿ ಕಂಡುಕೊಳ್ಳುವ ಅಗತ್ಯವಿದೆ.

ಪಾಡ್ಡನ ಹಾಡಿಕೆ ಉತ್ಕಟ ಬಿಂದು ತಲುಪಿದಾಗ ಸಮಾನಾಂತರವಾಗಿ ಸಿರಿಗಳ ಆವೇಶ ತೀವ್ರತೆಯನ್ನು ಪಡೆದುಕೊಳ್ಳುತ್ತದೆ. ಪಾಡ್ಡನ ಹಾಡುವ, ತಲೆ, ಸೊಂಟವನ್ನು ವೃತ್ತಾಕಾರದಲ್ಲಿ ತಿರುಗಿಸುವ, ಅಳುವ, ಯಾತನೆಯ ಅಟ್ಟಹಾಸ ಮಾಡುವ, ಹಿಂಗಾರವನ್ನು ಮುಖಕ್ಕೆ ಉಜ್ಜಿಕೊಳ್ಳುವ, ಸ್ಸೊಸೋ… ಎಂದು ನಿಟ್ಟುಸಿರು ಬಿಡುವ, ಮೈಕೈ ಸೆಟೆದು ಕಣ್ಣು ತಿರುಗಿಸುವ ಕೆಲವೊಮ್ಮೆ ನೆಲಕ್ಕೆ ಬೀಳುವ ಕ್ರಿಯೆಗಳಲ್ಲಿ ಆವೇಶ ಇಡೀ ರಾತ್ರೆ ನಡೆಯುತ್ತದೆ. ತೀವ್ರ ದೈವಾವೇಶದಿಂದ ಬಿಡುಗಡೆಗೊಂಡಾಗ ಪಾಡ್ಡನ ಹಾಡಿಕೆ ಪುನರಾರಂಭವಾಗುತ್ತದೆ. ಪಾಡ್ಡನ ಹಾಡಿಕೆ-ತೀವ್ರ ಆವೇಶ-ಬಿಡುಗಡೆ- ಈ ಆವರ್ತದ ಹಲವು ಹಂತಗಳಲ್ಲಿ ನಡೆಯುತ್ತದೆ.

ಸಿರಿಜಾತ್ರೆಯನ್ನು ಹಲವಾರು ಬಾರಿ ವೀಕ್ಷಿಸುತ್ತ ಬಂದ ನಾನು ಕಂಡುಕೊಂಡಂತೆ ಸಿರಿ ಪಾಡ್ಡನದೊಳಗಿನ ಹೆಣ್ಣು ಪ್ರಪಂಚಕ್ಕೂ ಆರಾಧನೆಯೊಳಗಿನ ಹೆಣ್ಣು ಪ್ರಪಂಚಕ್ಕೂ ತೀರಾ ವೈರುಧ್ಯವೆನ್ನಬಹುದಾದ ಸ್ಥಿತಿಯಿದೆ. ಪಾಡ್ಡನದಲ್ಲಿ ಸಿರಿ ಪುರುಷಾಧಿಕಾರವನ್ನು ಪ್ರಶ್ನಿಸುವ, ಪ್ರತಿರೋಧಿಸುವ ಆ ಮೂಲಕ ಹೆಣ್ಣಿನ ಅಂತಸ್ಸತ್ವದ ಪ್ರತೀಕವಾಗಿ ದಾಖಲಾಗಿದ್ದಾಳೆ. ಮಗ ಕುಮಾರ ತನ್ನ ಮರುಮದುವೆಗೆ ತೋರುವ ಆತಂಕವನ್ನು ಮೀರಿಯೇ ಸಿರಿ ಮರುವಿವಾಹವಾಗುತ್ತಾಳೆ. ಹೀಗೆ ಸ್ತ್ರೀ ಸತ್ವಕ್ಕೊಂದು ಪ್ರತಿಮೆಯಾಗಿ ಕಾಣಿಸುವ ಸಿರಿ ಆಚರಣೆಯೊಳಗೆ ಕುಮಾರನ ನಿರ್ದೇಶನ ಹಾಗೂ ಪೂರ್ಣ ನಿಯಂತ್ರಣಕ್ಕೆ ಒಳಪಟ್ಟಿರುವುದು ಕುತೂಹಲಕರವಾದುದು. ಇಡಿಯ ಸಿರಿ ಪಾಡ್ಡನ ಸ್ತ್ರೀ ಚೈತನ್ಯದ ಒಂದು ಸಂಕಥನವಾಗಿ ಕಂಡುಬಂದರೆ ಆಚರಣೆಯಲ್ಲಿ ಪುರುಷ ಪ್ರಾಬಲ್ಯದ ಪ್ರತಿನಿಧಿಯಾಗಿ ಕುಮಾರ ವರ್ತಿಸುತ್ತಾನೆ. ಇಷ್ಟಾಗಿಯೂ ಕೂಡ ತನ್ನ ಒತ್ತಿಟ್ಟ, ಹತ್ತಿಕ್ಕಿದ ಭಾವನೆಗಳನ್ನು ಅಭಿವ್ಯಕ್ತಿಸುವಲ್ಲಿ ಇಲ್ಲಿನ ಸಿರಿಗಳು ಶಕ್ತಿಯುತವಾಗಿಯೇ ಪ್ರತಿಕ್ರಿಯಿಸುತ್ತಾರೆ. ದೈನಂದಿನ ವಾಸ್ತವ ಬದುಕಿನ ಆಧೀನ ಸಂದರ್ಭಕ್ಕಿಂತ ಭಿನ್ನವಾಗಿ ಪ್ರಕಟವಾಗುತ್ತಾರೆ.

ಪಠ್ಯದಾಖಲಾತಿ ಸ್ವರೂಪ:

ಜಾನದಪ ಪಠ್ಯವನ್ನು ಅದು ವಾಸ್ತವಿಕವಾಗಿ ಪ್ರದರ್ಶನಗೊಳ್ಳುವ ಸಂದರ್ಭದಲ್ಲಿ ಮಾತ್ರ ದಾಖಲಿಸಿಕೊಳ್ಳಬೇಕು ಎನ್ನುವುದು ಇತ್ತೀಚಿನ ವಿದ್ವಾಂಸರ ಗಟ್ಟಿಯಾದ ನಿಲುವು. ಸಂದರ್ಭದ ಹೊರಗೆ ಮಾಡುವ ಪಠ್ಯದಾಖಲಾತಿ ಅವೈಜ್ಞಾನಿಕ ಎನ್ನುವ ತಿಳಿವಳಿಕೆ ಇದೆ. ಆದರೆ ಪಠ್ಯ ದಾಖಲಾತಿಯ ಸಂದರ್ಭ ಹಾಗೂ ತಾಂತ್ರಿಕತೆಯ ಬಗೆಗೆ ಹೊಸ ಆಲೋಚನೆಗಳು ಜಾನಪದ ಲೋಕದಲ್ಲಿ ಇತ್ತೀಚೆಗೆ ಚಾಲ್ತಿಗೆ ಬರುತ್ತಿವೆ. ಆ ಮೂಲಕ ‘ಸಂದರ್ಭ’ದ ಬಗೆಗೆ ಹೊಸ ನಿರ್ವಚನವನ್ನು ಮಾಡಲಾಗಿದೆ. ಪಠ್ಯವೊಂದರ ಕ್ರಿಯಾತ್ಮಕ ಸಂದರ್ಭವಷ್ಟೇ ಸಂದರ್ಭವಲ್ಲ. ಇನ್ನಾವುದೋ ಸಂದರ್ಭದಲ್ಲಿ ಪ್ರೇಕ್ಷಕರೆದುರು ಪುನಃಸೃಷ್ಟಿಗೊಂಡ ಪಠ್ಯವನ್ನು ಅಧಿಕೃತ ಪಠ್ಯವಾಗಿಯೇ ಪರಿಭಾವಿಸಬೇಕು (ವೈಯಕ್ತಿಕ ಸಂಭಾಷಣೆ ಡಾ. ವಿವೇಕ ರೈ ದಿ.೩೦-೩-೯೯). ಈ ‘ಮಾನ್ಯತೆ’ಯ ಫಲವಾಗಿ ಪ್ರೇರಿತ ಸಂದರ್ಭದಲ್ಲಿ (ಸಂದರ್ಭದ ಹೊರಗೆ) ದಾಖಲಿತವಾದ ಪಠ್ಯಸಂಗ್ರಹಗಳಿಗಿದ್ದ ‘ಶಾಪ’ ಪರಿಹಾರವಾದಂತಾಯಿತು. ಅನುಕೂಲವಾದ ಒಂದು ಸ್ಥಳದಲ್ಲಿ ಗಾಯಕನೊಬ್ಬನನ್ನು ಕುಳ್ಳಿರಿಸಿ ಸೀಮಿತ ಪ್ರೇಕ್ಷಕರೆದುರು ಹಾಡಿಸಿದಾಗ ದೊರೆವ ಪಠ್ಯವನ್ನು ‘ಪ್ರೇರಿತ ಸಂದರ್ಭ’ದ್ದೆಂದು ಕರೆಯದೆ ಅದನ್ನೇಕೆ ಒಂದು ವಿಶಿಷ್ಟ ಸಂದರ್ಭ ಎಂದು ಪರಿಗಣಿಸಬಾರದು? ಜಾತ್ರೆ, ಆಚರಣೆ ಮುಂತಾದ ಕ್ರಿಯಾತ್ಮಕ ಸಂದರ್ಭದಲ್ಲಿ ರೂಪುಗೊಳ್ಳುವ ಎಷ್ಟೋ ಪಠ್ಯಗಳು ಆಯಾ ಸಮಯ, ಸಂದರ್ಭ, ಸ್ಥಳ ಕಾಲಕ್ಕನುಸರಿಸಿ ಮೊಟಕುಗೊಳ್ಳುವುದು ಅನಿವಾರ್ಯವಾಗುತ್ತದೆ. ಆಗ ಒಂದು ಕಾವ್ಯದ ಹಾಡಿಕೆಯ ಪ್ರಕ್ರಿಯೆಯ ಪೂರ್ಣ ಪಠ್ಯ ಲಭ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ‘ಪ್ರೇರಿತ’ವೆಂದು  ಗ್ರಹಿಸಲಾದ ಪಠ್ಯದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ. ಈ ತಾತ್ತ್ವಿಕತೆಯ ಹಿನ್ನೆಲೆಯಲ್ಲಿ ನಾನು ರಾಮಕ್ಕ ಮುಗ್ಗೇರ್ತಿಯ ಸಿರಿ ಪಾಡ್ಡನವನ್ನು ಮೂರು ಕೂರುಗಳಲ್ಲಿ ಅವರ ಕೌಟುಂಬಿಕ ಪರಿಸರದಲ್ಲಿ ದಾಖಲು ಮಾಡಿಕೊಂಡೆನು.

೧೯೯೬ ಆಗಸ್ಟ್‌ನಿಂದ ೧೯೯೭ ಮಾರ್ಚ್‌ ತಿಂಗಳ ನಡುವೆ ಸಂಗ್ರಹ ಕಾರ್ಯ ನಡೆಯಿತು. ಒಂದೊಂದು ಕೂರು ನಾಲ್ಕು ಅಥವಾ ಐದು ದಿನಗಳಷ್ಟು ದೀರ್ಘವಾಗಿತ್ತು. ಬೆಳಗ್ಗಿನಿಂದ ಸಂಜೆಯ ತನಕ ಎಡೆಬಿಡದೆ ದಾಖಲು ಕೆಲಸ ನಡೆಯುತ್ತಿರಲಿಲ್ಲ. ಪಾಡ್ಡನಕಾರ್ತಿ ರಾಮಕ್ಕ ಮನೆಯ ಯಜಮಾನತಿ. ಮನೆಯ ಅಡುಗೆ, ನಾಟಿಗದ್ದೆಗಳಲ್ಲಿ ನಾಟಿ, ಮನೆಯ ಇನ್ನಿತರ ಕೆಲಸಗಳನ್ನು ಆಕೆಯೇ ನಿಭಾಯಿಸಬೇಕಾಗುತ್ತಿತ್ತು. ಹೀಗಾಗಿ ನಾನು ಮುಂಜಾನೆ ಅವರ ಮನೆಗೆ ತೆರಳಿ ಆಕೆಗೆ ಸಮಯಾವಕಾಶವಾದಾಗಲೆಲ್ಲ ಟೇಪ್‌ರೆಕಾರ್ಡ್‌ನಲ್ಲಿ ಧ್ವನಿಗ್ರಹಣ ಮಾಡುತ್ತಾ ಸಂಜೆ ದಾಟಿ ಕತ್ತಲೆಯ ತನಕ ತಂಗುತ್ತಿದ್ದೆ. ಪಾಡ್ಡನದ ಬಹುಪಾಲನ್ನು ರಾಮಕ್ಕ ಒಬ್ಬರೇ ಹಾಡಿದರು. ಆದರೆ ಕೆಲವೊಮ್ಮೆ ಅವರ ಅತ್ತಿಗೆ ಸ್ವರಸೇರಿಸುತ್ತಿದ್ದುದೂ ಇತ್ತು. ಆಕೆ ರಾಮಕ್ಕನಷ್ಟು ಪರಿಣತ ಗಾಯಕಿ ಅಲ್ಲ ಹೀಗಾಗಿ ಲಿಪ್ಯಂತರ ಮಾಡುವಾಗ ಸಹಗಾಯಕಿಯ ಸಾಲುಗಳನ್ನು ಬರೆದುಕೊಂಡಿಲ್ಲ.

ನಡುನಡುವೆ ವಿರಾಮದೊಂದಿಗೆ ಪಾಡ್ಡನ ಹಾಡುತ್ತಿರುವುದು ಕಥಾಸರಣಿಯ ಸಂಯೋಜನೆಗೆ ತಡೆಯಾಗುವುದಿಲ್ಲವೇ ಎಂಬ ನನ್ನ ಪ್ರಶ್ನೆಗೆ ರಾಮಕ್ಕ ‘ಇಲ್ಲ’ ಎನ್ನುತ್ತಿದ್ದರು. “ಕಥೆಯ ಪೂರ್ಣ ಚಿತ್ರ ನನ್ನ ಮನಸ್ಸಿನಲ್ಲಿದೆ. ಕಥೆ ಎಲ್ಲಿ ನಿಂತಿದೆ ಎನ್ನುವುದನ್ನು ನೀವು ಟೇಪ್‌ರೆಕಾರ್ಡ್‌ಚಾಲು ಮಾಡಿ ಕೇಳಿಸಿದರೆ ಮುಂದಿನ ಘಟನೆಯನ್ನು ಮನಸ್ಸಿನಲ್ಲಿ ಕಟ್ಟಿಕೊಳ್ಳುತ್ತೇನೆ. ಆಗ ಹಾಡಿನ ಸಾಲುಗಳು ರೂಪುಗೊಂಡು ಸಿರಿ ಪಾಡ್ಡನದ ವಿಶಿಷ್ಟಲಯದಲ್ಲಿ ಹೊರಹೊಮ್ಮುತ್ತವೆ” ಎನ್ನುತ್ತಾರೆ.

“ಮನೆಯಲ್ಲಿ ನಿಮ್ಮ ಮಕ್ಕಳ, ಬಂಧುಗಳ ಎದುರು ಹಾಡುವುದಕ್ಕೂ ಗದ್ದೆಗಳಲ್ಲಿ ನಾಟಿ ಮಾಡುತ್ತಾ ಪಾಡ್ಡನ ಹಾಡುವುದಕ್ಕೂ ವ್ಯತ್ಯಾಸ ಇಲ್ಲವೇ ?” ಎಂದು ಕೇಳಿದಾಗ “ನಾಟಿಗದ್ದೆಗಳಲ್ಲಿ ಹತ್ತಾರು ಮಂದಿ ಸಹವಂದಿಗರ ಜತೆ ಹಾಡುವುದೇ ಒಂದು ಗಮ್ಮತ್ತು. ಅಲ್ಲಿ ಉಲ್ಲಾಸ ಇರುತ್ತದೆ. ಕಥೆ ನಡೆಸುತ್ತಾ ಹೋಗುವಾಗ ಕೆಲಸದ ಶ್ರಮವೂ ಮರೆತುಹೋಗುತ್ತದೆ. ಇಲ್ಲಿ ನಿಮಗಾಗಿ ಟೇಪ್‌ರೆಕಾರ್ಡ್‌ಎದುರು ಹಾಡಿದಾಗ ಕಥೆಯ ವಿವರಗಳ ಕಡೆಗೇ ನನ್ನ ಧ್ಯಾನ. ಎಲ್ಲವನ್ನೂ ವಿವರವಾಗಿ ಸಾವಧಾನದಿಂದ ಕಟ್ಟುತ್ತಾ ಹೋಗುತ್ತೇನೆ. ಮಧ್ಯೆ ಮಧ್ಯೆ ಹಾಡುವುದನ್ನು ನಿಲ್ಲಿಸುವುದರಿಂದ ಮತ್ತೆ ಮುಂದುವರಿಸುವುದು ಸ್ವಲ್ಪ ತೊಡಕಾಗುವುದು ಹೌದು. ಆದರೆ ಅನೇಕ ವರ್ಷಗಳಿಂದ ಈ ‘ಕಥೆ’ಯನ್ನು ನಾಟಿಗದ್ದೆಗಳಲ್ಲಿ ಹಾಡಿಕೊಂಡು ಬಂದ ನನಗೆ ಕಥೆಯ ಒಂದೊಂದು ವಿವರವೂ ಸ್ಪಷ್ಟವಾಗಿದೆ. ಅದನ್ನು ಪಾಡ್ಡನದ ಧಾಟಿಗೆ ಹೊಂದಿಸಿ ಕಟ್ಟುತ್ತಾ ಹೋಗುತ್ತೇನೆ”.

ಪಾಡ್ಡನ (ಯಾವುದೇ ಮೌಖಿಕ ಕಾವ್ಯ)ದ್ದು ಪೂರ್ವ ನಿರ್ಧಾರಿತ ಪಠ್ಯ ಅಲ್ಲ ಎನ್ನುವುದನ್ನು ನನ್ನ ಪಠ್ಯ ದಾಖಲಾತಿ ಸಂದರ್ಭದಿಂದ ವಿವರಿಸಲು ಪ್ರಯತ್ನಿಸುತ್ತೇನೆ. ನಾನು ದಾಖಲು ಮಾಡಿಕೊಂಡು ಬಂದ ಹದಿನಾಲ್ಕನೆಯ ಕ್ಯಾಸೆಟಿನ ‘ಬಿ’ ಭಾಗದಲ್ಲಿ ಅರ್ಧಾಂಶದಷ್ಟು ಮಾತ್ರ ದಾಖಲಾಗಿತ್ತು. ಅದು ಕಾರಣಾಂತರಗಳಿಂದ ನನ್ನ ಕೈಯಲ್ಲಿ ಮಾಯಿಸಿ ಹೋಯಿತು. ಅಬ್ಬಗದಾರಗರ ಜನನದಿಂದ ತೊಡಗಿದ ಈ ಭಾಗವನ್ನು ನನ್ನ ಗೆಳೆಯರ ಸಹಕಾರದಿಂದ ರಾಮಕ್ಕ ಮುಗ್ಗೇರ್ತಿಯವರಲ್ಲಿ ಮತ್ತೆ ಹಾಡಿಸಿ ದಾಖಲಿಸಿಕೊಂಡಾಗ ಅದು ಮೂರು ಕ್ಯಾಸೆಟು (೬೦ ನಿಮಿಷ ಕಾಲಾವಧಿ)ಗಳಷ್ಟು ವಿಸ್ತರಿಸಿತು. ಈ ಕ್ರಿಯೆ ರಾಮಕ್ಕ ಮುಗ್ಗೇರ್ತಿಯವರಿಂದ ಬುದ್ಧಿಪೂರ್ವಕ ಆದುದಲ್ಲ. ಅದು ಮೌಖಿಕ ಕಾವ್ಯ ಸಂಯೋಜನೆ ಪ್ರಕ್ರಿಯೆಯ ಒಂದು ಲಕ್ಷಣ. ನಿಂತ ನೆಲದ, ಕಾಲದ, ಸನ್ನಿವೇಶದ ಫಲ.

ಜಾನಪದ ಪಠ್ಯವೊಂದನ್ನು ತಿದ್ದುವ, ತೀಡುವ, ಪರಿಷ್ಕರಿಸುವ ಹಕ್ಕು ಸಂಪಾದಕನಿಗೆ ಇಲ್ಲ ಎಂದು ಜಾನಪದ ಮೀಮಾಂಸೆ ಹೇಳುತ್ತದೆ. ಹೀಗಾಗಿ ನಾನು ರಾಮಕ್ಕ ಮುಗ್ಗೇರ್ತಿ ಹೇಳಿದ ಪಠ್ಯವನ್ನು ಯಥಾ ಪ್ರಕಾರ ನೀಡಿದ್ದೇನೆ. ತುಳುವಿನ ಪ್ರಾದೇಶಿಕ ಭೇದದಲ್ಲೂ ಅವರ ಉಚ್ಚಾರಾಂಶಗಳಿಗೆ ಬದ್ಧನಾಗಿದ್ದೇನೆ. ಬಾಯಿತಪ್ಪಿನಿಂದಾಗಿ ಉಂಟಾದ ವ್ಯಕ್ತಿ, ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಕೆಲಸ ಮಾಡಿದ್ದೇನೆ. ಅರ್ಥಸಂದಿಗ್ಧತೆ ತಲೆದೋರಿದಾಗ ಲಿಪ್ಯಂತರ ಮಾಡಿದ ಪಠ್ಯವನ್ನು ಅವರಿಗೆ ಮತ್ತೆ ಓದಿಹೇಳಿ ಪರಿಹಾರ ಪಡೆದುಕೊಳ್ಳಲಾಗಿದೆ. ವಾಕ್ಯ ಘಟಕಗಳ ನಿರ್ಣಯದಲ್ಲಿ ಗಾಯಕಿ ಹಾಡಿನಲ್ಲಿ ಬಳಸಿದ ಪ್ಲುತಕ್ಕೂ ದೀರ್ಘವಾದ ಏ… ಅದೂ ಆ… ದನಿಯೇ ಮಾನದಂಡ ವಾಗಿರುತ್ತದೆ. ಈ ದೀರ್ಘ ಸ್ವರವನ್ನು ಮೂರು ಬಿಂದು (…)ಗಳ ಮೂಲಕ ಸೂಚಿಸಲಾಗಿದೆ. ಸಾಲುಗಳ ಅಂತ್ಯವನ್ನು ನಿರ್ಧರಿಸುವಲ್ಲಿ ಉಸಿರ್ದಾಣಗಳನ್ನೇ ನಮಗೆ ಆಧಾರವಾಗಿ ಇರಿಸಿಕೊಳ್ಳಲಾಗಿದೆ.