ಹೀಗೆ ಅಜ್ಜರು ನುಡಿವಷ್ಟರಲ್ಲಿ ಗುಮ್ಮಡ ಸೆಟ್ಟರು ಸೀರೆಯ ಮಡಿಕೆ ಮಡಚಿ ಅಜ್ಜರ ಕೈಗಿತ್ತರು. ಅಜ್ಜರು ಸೀರೆಯನ್ನು ಕಾಂತಣಾಳ್ವನ ಕೈಯಲ್ಲಿರಿಸಿದರು. ಇಬ್ಬರೂ ಅಂಗಡಿ ಇಳಿದು ಹೊರಟರು. ಅಜ್ಜರು ಸತ್ಯನಾಪುರದ ಕಡೆಗೆ ನಡೆದರು. ಕಾಂತಣಾಳ್ವ ಬಯಕೆ ಸೀರೆ ಹಿಡಿದು ಬಸರೂರ ಕಡೆಗೆ ಹೆಜ್ಜೆ ಹಾಕಿದ. ಕಡೇರಿ ಪೇಟೆಯ ಸೂಳೆ ಸಿದ್ದುವನ್ನು ಕಂಡು ಸೀಮಂತಕ್ಕೆ ಕರೆದು ಬರಲು ನಿರ್ಧರಿಸಿದ. ಅವಳ ಮನೆಯ ಸಾಲರಿ ಚಾವಡಿ ಚಿತ್ರಮಂಟಪದ ಮೇಲೇರಿದ. ತೂಗುಯ್ಯಾಲೆ ಏರಿ ಕುಳಿತ.

ಬಸರೂರ ಬಾಲೆ ಕಾಂತಣಾಳ್ವನನ್ನು ಕಂಡು ಸೂಳೆಸಿದ್ದು ಓಡೋಡಿ ಬಂದಳು. ಕೈಯಲ್ಲಿದ್ದ ಸೀರೆಯ ಕಟ್ಟನ್ನು ಎಳೆದು ಹರಿದಳು. “ಅದು ನನ್ನ ಕೈಹಿಡಿದ ಹೆಂಡತಿ ಸತ್ಯಮಾಲೋಕದ ಸಿರಿಯ ಸೀಮಂತಕ್ಕೆ ತಂದ ಪಟ್ಟೆ ಸೀರೆ. ಮೈಲಿಗೆ ಮಾಡಬೇಡ, ಮಡಿ ಕೆಡಿಸಬೇಡ” ಎಂದನು. ಸಿರಿಗೆ ಕೊಡುವ ಪಟ್ಟೆ ಸೀರೆಯನ್ನು ಕೆಡಿಸೆನು ಎನ್ನುತ್ತಾ ತನ್ನ ಏಳುಸುತ್ತಿನ ಯಮಗುಂಡಕ್ಕೆ ಸೀರೆ ಹಿಡಿದು ಓಡಿದಳು. ಕಟ್ಟು ಬಿಚ್ಚಿ ಸೀರೆಯನ್ನು ಉಟ್ಟಳು. ಕಾಂತಣಾಳ್ವರಿಗೆ ಹಾಲು ನೀರು ಹಿಡಿದುಕೊಂಡು ವಯ್ಯಾರದಿಂದ ಬಂದಳು. ಸೀರೆ ನನಗೆ ಒಪ್ಪುವುದೋ ಎಂದು ಕೇಳಿದಳು. ಪಟ್ಟೆ ಸೀರೆಯ ಮಡಿ ಕೆಡಿಸಿದೆಯಾ ಸಿದ್ದೂ ಎಂದು ಆಳ್ವ ಆತಂಕದಿಂದ ಕೇಳಿದ. ಆಕೆ ಕೊಟ್ಟ ಹಾಲು ಕುಡಿದನು. ಅಸರು ತಗ್ಗಿಸಿಕೊಂಡನು. ಸೂಳೆಸಿದ್ದು ನೀಡಿದ ಅಡಿಕೆ ಹೋಳು ಮೆದ್ದನು. ತೂಗುಯ್ಯಾಲೆಯಲ್ಲಿ ಇಬ್ಬರೂ ಮೈ ಮೈತಾಗಿ ಕುಳಿತರು. ಸೂಳೆಸಿದ್ದು ತಾನು ಉಟ್ಟ ಬಯಕೆ ಸೀರೆಯನ್ನು ಬಿಚ್ಚಿ ಕಟ್ಟಿ ಕೊಟ್ಟಳು. ಕಾಂತಣಾಳ್ವ ಸೀರೆ ಹಿಡಿದುಕೊಂಡು ತನ್ನೂರು ಬಸರೂರು ಕಡೆ ನಡೆದ. ಬಯಕೆ ಸೀರೆಯನ್ನು ಕಲ್ಲಕಲೆಂಬಿಯಲ್ಲಿ ಜೋಪಾನವಾಗಿರಿಸಿದ.

ತಾಯಿ ಮಗ ಕುಳಿತು ಸೀಮಂತದ ಏರ್ಪಾಡಿನ ಬಗೆಗೆ ಅಂದಾಜಿಸಿದರು. ಊರಿನ ಪರವೂರಿನ ಬಂಧು ಬಾಂಧವರಿಗೆ ಕರೆ ಕಳುಹಿಸಲು ಒಕ್ಕಲು ಮಕ್ಕಳನ್ನು ಕರೆಸಿದನು. ತೆರೆದ ಮನೆ ಬಿಡದೆ ಮನೆ ಮನೆಗೂ ಆಮಂತ್ರಣ ಹೋಯಿತು. ಅತ್ತ ಸತ್ಯನಾಪುರದಲ್ಲೂ ಅಜ್ಜರು ತನ್ನ ಬಂಧು ಬಾಂಧವರಿಗೆಲ್ಲಾ ಕರೆಕಳುಹಿಸಿದರು.

ಬಸರೂರ ಅರಮನೆಯಲ್ಲಿ ಸಂಭ್ರಮವೇ ಸಂಭ್ರಮ. ಭರದಿಂದ ಅಡುಗೆಯ ಸಿದ್ಧತೆ ನಡೆಯಿತು. ಎಣ್ಣೆಯಲ್ಲಿ ಕರಿದ ಚಕ್ಕುಲಿ-ಗಾರಿಗೆ, ಓಡಿನಲ್ಲಿ ಹುರಿದ ಅರಳು ಸಿದ್ಧವಾಯಿತು. ಹೊತ್ತು ಉದಯವಾಗುಷ್ಟರಲ್ಲಿ ಪಂಚಾಮೃತದ ಅಡುಗೆ ಸಿದ್ಧವಾಯಿತು.

ಇತ್ತ ಸತ್ಯನಾಪುರದಲ್ಲಿ ಕೂಡಿದ ಬಂಧುಗಳಿಗೆ ಹೊರಡಲು ಸಿದ್ಧರಾಗುವಂತೆ ಅಜ್ಜರು ಹೇಳಿದರು. ಬಸರೂರಿನಲ್ಲಿ ನಡೆವ ಸೀಮಂತಕ್ಕೆ ಅಜ್ಜ ಬೆರ್ಮುಮಾಲವರು ದಂಡಿಗೆಯನ್ನು ಅಲಂಕರಿಸಿ ಅಣಿಮಾಡಿಸಿದರು. ಸರ್ವ ಸಂಭ್ರಮದಲ್ಲಿ ಸತ್ಯನಾಪುರದಿಂದ ದಿಬ್ಬಣ ಬಸರುರಿಗೆ ಹೊರಟಿತು. ಸೀಮಂತಕ್ಕೆ ಹೊರಟ ದಿಬ್ಬಣ ಬಸರೂರು ಅರಮನೆ ತಲುಪಿತು. ನೆಂಟರು ಬಸರೂರ ಅರಮನೆಯ ಮುಂದಿನ ಅಂಗಳ ತಲಪಿದರು. ಬಂದ ನೆಂಟರಿಗೆ ಕೈಗೆ ಕಾಲಿಗೆ ನೀರಿತ್ತು ಸತ್ಕರಿಸಿದರು. ಬಂದವರನ್ನು ಸಾಲಾಗಿ ಕುಳ್ಳಿರಿಸಿ ಬಾಯಾರಿಕೆ ಇಂಗಿಸಿದರು. ಅಸರು ಇಂಗಿಸಿ ಬೇಸರ ಕಳೆದ ಅತಿಥಿಗಳು ವೀಳೆಯ ಮೆದ್ದು ಉಲ್ಲಸಿತರಾದರು.

ಸೀಮಂತದ ಮುಹೂರ್ತ ಸಮೀಪಿಸಿತು. ಮದುಮಗಳಿಗೆ ಹೂಸೀರೆ ಕೊಡುವ ಹೊತ್ತಾಯಿತೆಂದು ಅಜ್ಜ ಬೆರ್ಮುಮಾಲವರು ಎಚ್ಚರಿಸಿದರು. ಬೆಳ್ಳಿಯ ಹರಿವಾಣದಲ್ಲಿ ಬಯಕೆಯ ಪಟ್ಟೆಸೀರೆ ಇರಿಸಿದರು. ಅದರ ಬಳಿ ಎಳೆಯ ಹಿಂಗಾರ, ಚೆಂಡುಮಲ್ಲಿಗೆ ಜೋಡಿಸಿದರು. ಅತ್ತೆ ಸಂಕರು ಪೂಂಜೆದಿಯೇ ಹೂಸೀರೆಯ ಹರಿವಾಣ ಹಿಡಿದು ನಿಂತರು. ಅಜ್ಜರು ಸತ್ಯಮಾಲೋಕದ ಸಿರಿಯನ್ನು ಕರೆದರು. ಏಳುಸುತ್ತಿನ ಯಮಗುಂಡದಿಂದ ಹೊರ ಬಂದ ಸಿರಿ ಮೂಡುಮುಖ ಹಾಕಿ ತಲೆಬಾಗಿ ನಿಂತಳು. ಅತ್ತೆಯವರು ಕೊಡುವ ಹೂಸೀರೆಗೆ ಕೈನೀಡು ಎಂದು ಅಜ್ಜರು ಹೇಳಿದರು. ಸಿರಿಯ ಕಡೆಕಣ್ಣಲ್ಲಿ ನೀರು ಧಾರಾಕಾರ ಹರಿಯಿತು. ನೆಲ ನೋಡುತ್ತಾ ನಿಂತ ಸಿರಿ ಕರೆದರೂ ಕಣ್ಣು ಮೇಲೆತ್ತಿ ನೋಡುತ್ತಿಲ್ಲ. ಅತ್ತೆ ಸಂಕರು ಪೂಂಜೆದಿ, ಹೂಸೀರೆ ಹಿಡಿಯುವಂತೆ ಬಗೆ ಬಗೆಯಾಗಿ ಸಿರಿಯನ್ನು ಒತ್ತಾಯಿಸಿದರು. ಕೂಡಿದ ಮಂದೆ ಒಬ್ಬೊಬ್ಬರಾಗಿ ಹೂಸೀರೆ ಹಿಡಿವಂತೆ ಸಿರಿಯನ್ನು ಒತ್ತಾಯಿಸಿದರು.

ಸಿರಿಯ ಕಣ್ಣಿಂದ ಕೆಂಡದ ಮಳೆಯಂತೆ ಕಣ್ಣೀರು ಹರಿಯುತ್ತಿತ್ತು. ಅಜ್ಜರು ಸಿರಿಯ ಸಮೀಪಕ್ಕೆ ನಡೆದರು. “ಮಗಳೇ, ತಡಮಾಡದೆ ಹೂಸೀರೆಗೆ ಕೈನೀಡು. ಕೂಡಿದ ಸಭೆ ಸಾವಿರ ಬೇಸರಿಸುತ್ತಿದೆ. ಅಟ್ಟ ಅಡುಗೆ ಕೆಡುತ್ತಿದೆ. ಸಿರಿಯೇ, ನನ್ನ ಮರ್ಯಾದೆಯನ್ನು ಮಣ್ಣು ಮಾಡಬೇಡ. ಒಮ್ಮೆಗೆ ನನ್ನ ಮಾನ ಕಾಪಾಡು ಮಗಳೇ” ಎಂದು ಕೇಳಿಕೊಂಡರು.

“ಅಜ್ಜರೇ ನಿಮ್ಮ ಮಾನ ಕಳೆವ ಮಗಳು ನಾನಲ್ಲ” ಎಂದ ಸಿರಿ ತನ್ನ ಎಡಕೈಯಿಂದ ಪಟ್ಟೆ ಸೀರೆಗೆ ಕೈನೀಡಿ ತನ್ನ ಸತ್ಯದಂಡಿಗೆಯ ಕೊಮಬಿಗೆ ಬೀಸಿ ಎಸೆದಳು. “ಈ ಪಟ್ಟೆ ಸಿರೆ ಕಡೇರಿ ಕಾರ್ಲದ ಕೊಡಿಕುಂಬಳೆಯ ಸೂಳೆಸಿದ್ದು ಉಟ್ಟು ಬಿಟ್ಟ ಪಟ್ಟೆ ಸೀರೆ. ಅದನ್ನು ನನ್ನ ಮೈಯಲ್ಲಿ ಉಡಲಾರೆ. ಇಂದು ನಾನು ಉಟ್ಟ ಹಳೆಯ ಸೀರೆಯಲ್ಲೆ ನನಗೆ ಬಯಕೆ ಮದುವೆಯ ಸಮ್ಮಾನ ಆಗಬೇಕು” ಎಂದಳು.

“ಮುಹೂರ್ತದ ಕಾಲ ಸಮೀಪಿಸುತ್ತಿದೆ. ಇನ್ನು ತಡ ಆಗಬಾರದು” ಎಂದ ಅಜ್ಜರು ನಾಲ್ಕು ಜನ ಮುತ್ತೈದೆ ಹೆಂಗಸರನ್ನು ಕರೆದು ಬಸುರಿ ಸಿರಿಯನ್ನು ಅಲಂಕರಿಸಿ ಬಯಕೆ ಮದುವೆ ಮಾಡುವಂತೆ ಹೇಳಿದರು. ನಾಲ್ಕು ಮಂದಿ ಮುತ್ತೈದೆ ಹೆಂಗಸರು ಎದ್ದು ಬಂದರು. ಸಿರಿಯನ್ನು ಮೂರು ಕಾಲಿನ ಪೀಠದಲ್ಲಿ ಕುಳ್ಳಿರಿಸಿದರು. ನೆತ್ತಿಗೆ ನೆಯಿಎಣ್ಣೆ, ಕೂದಲಿಗೆ ಎಸಲೆಣ್ಣೆ ಹಾಕಿದರು. ಬಂಗಾರದ ಬಾಚಣಿಗೆಯಲ್ಲಿ ತಲೆ ಬಾಚಿ ಬಲಕ್ಕೆ ಬಾಲ್ ಮುಡಿ ಹಾಕಿದರು. ಬಂಗಾರದ ತೊಡುಗೆ ತೊಡಿಸಿದರು. ಮದುವೆಯ ಧಾರೆಸೀರೆಯನ್ನು ಉಡಿಸಿದರು. ಕಟ್ಟಿನಲ್ಲಿ ಮೇಲಾದ ಪಟ್ಟೆಯ ರವಕೆ ತೊಡಿಸಿದರು. ಚೆಂಡುಮಲ್ಲಿಗೆ ಹೂ ಮುಡಿಸಿದರು. ಎಳೆಯ ಹಿಂಗಾರದ ಹಾಳೆ ಒಡೆದು ಎಸಳನ್ನು ಸಿರಿಯ ತಲೆಗೇರಿಸಿದರು. ಒಂದು ಕವಳೆ ವೀಳೆಯದೆಲೆ, ರಾವನ್ನ ಗೆಜ್ಜೆಕತ್ತಿ, ಇಡಿಯ ಅಡಿಕೆಯನ್ನು ಸಿರಿಯ ಕೈಗೆ ನೀಡಿದರು. ಹಣಗೆ ಕುಂಕುಮದ ಬೊಟ್ಟು ಇಡಿಸಿದರು. ಕಣ್ಣಿಗೆ ಕಾಡಿಗೆ ಎಳೆದರು.

ತುಂಬ ಗರ್ಭಿಣಿ ಸಿರಿ “ನನ್ನ ಬಯಕೆ ಮದುವೆಗೆಂದು ತಂದ ಆ ಪಟ್ಟೆ ಸೀರೆ ನನ್ನ ಮುದ್ದು ಕುಮಾರನ ತೊಟ್ಟಿಲನ್ನು ದಾರು ಹೊತ್ತು ತರುವಾಗ ಅವಳ ತಲೆಗೆ ಸಿಂಬೆಯ ಬಟ್ಟೆಯಾಗಲಿ” ಎಂದು ಕೆರಳಿ ನುಡಿದಳು. ಸಿಂಗಾರಗೊಂಡ ಸಿರಿಗೆ ಎಲೆ ಹಾಕಿ ಸೀಮಂತದ ಸಮ್ಮಾನ ಮಾಡಿದರು. ಎಲೆ ತುಂಬ ಬಹುಬಗೆಯ ಭಕ್ಷ್ಯಗಳನ್ನು ಬಳಸಿದರು. ಸಿರಯಾದರೋ ಎಲೆಗೆ ಕೈಕೊಡದೆ ಕಣ್ಣಿಂದ ಧಾರಾಕಾರ ಕಣ್ಣೀರು ಸುರಿಸುತ್ತಿದ್ದಳು. ಸೊಸೆ ಸಿರಿ ಅಳುತ್ತಿರುವುದನ್ನು ಕಂಡ ಅತ್ತೆ ಸಂಕರು ಪೂಂಜೆದಿ ಸಮಾಧಾನ ಮಾಡಲು ಪ್ರಯತ್ನಿಸಿದರು. ಸಿರಿ ತನ್ನ ಎಡಬಲದಲ್ಲಿ ಕುಳಿತ ನಾಲ್ಕು ಮಂದಿ ಬಾಲೆಯರ ಕೈಗೆ ಎಲೆಯಲ್ಲಿದ್ದ ‘ಸಿಹಿಸಮ್ಮಾನ’ವನ್ನು ಇರಿಸಿದಳು. ತಾನು ಒಂದು ಚೂರು ‘ಸಿಹಿ’ಯನ್ನು ಬಾಯಿಗಿರಿಕೊಂಡಳು. ಅತ್ತೆ ಸಂಕರು ಮದುಮಗಳ ಎದುರಿನ ಉಂಡ ಎಲೆ ತೆಗೆಸಿದರು. ಬಂದ ಅತಿಥಿಗಳಿಗೆಲ್ಲ ಸಂತೃಪ್ತಿಯಾಗುವಷ್ಟು ಭೋಜನವಾಯಿತು. ವೀಳೆಯದ ಉಪಚಾರವೂ ಆಯಿತು.

ಬಸುರಿ ಸಿರಿಯನ್ನು ಕಳುಹಿಸಿ ಕೊಡುವಂತೆ ಅಜ್ಜ ಬೆರ್ಮುಮಾಲವರು ಕೇಳಿಕೊಂಡರು. ಸಿರಿ ಕಣ್ಣೀರು ಸುರಿಸುತ್ತಾ ಅಳುತ್ತಾ ಅಜ್ಜರ ಮನೆಗೆ ದಿಬ್ಬಣದೊಂದಿಗೆ ಹೊರಟಳು. ಯಾರನ್ನೂ ಕಣ್ಣು ತೆರೆದು ನೋಡಲಿಲ್ಲ. ಗಂಡನಲ್ಲಿ ಮಾತನ್ನೂ ಆಡಲಿಲ್ಲ. ಅಂಗಳ ಇಳಿದು ನಿಂತಲ್ಲೇ ಹೋಗಿ ಬರುವುದಾಗಿ ಹೇಳಿ ಬೆನ್ನು ತಿರುಗಿಸಿ ನಡೆದಳು.

ತುಂಬಿದ ಬಸುರಿ ಸಿರಿಯ ದಿಬ್ಬಣ ಸತ್ಯನಾಪುರ ತಲಪಿತು. ಸೂರ್ಯ ದೇವರು ಮುಳಗುವ ಹೊತ್ತು. ಹಕ್ಕಿಪಕ್ಕಿಗಳು ಗೂಡುಸೇರುವ ಕಾಲ. ಅಜ್ಜರು ಸ್ವತಃ ಬಸುರಿಗೆ ದೃಷ್ಟಿ ನಿವಾಳಿಸಿ ಮನೆ ಒಳಗೆ ಕರೆ ತಂದರು. ಅಜ್ಜರು ಬಂದ ನೆಂಟರಿಗೆ ಬಂಧು ಬಾಂಧವರಿಗೆ ಸಿರಿಯ ಬಯಕೆ ಮದುವೆಯ ಊಟ ಉಪಚಾರ ನಡೆಸಿದರು. ಬಂದವರು ಉಂಡು ಮನವಾರೆ ಸಂತೃಪ್ತಿಯಿಂದ ಮನೆಗೆ ತೆರಳಿದರು.

ಸಿರಿಯ ಬಸುರಿಗೆ ಹತ್ತು ತಿಂಗಳು ತುಂಬಿತು. ಸಿರಿಯ ತಿಳಿಯಾದ ಮುಖದಲ್ಲಿ ಯಾತನೆಯ ಸೆಳವು ಗೋಚರಿಸಿತು. ಹೆರಿಗೆಯ ಬೇನೆ ಕಾಣಿಸಿತು. ಅಜ್ಜರು ಹಾಕಿಸಿದ ನೇಲೆ (ಕೈಹಗ್ಗ) ಹಿಡಿದು ಸಿರಿ ಗಂಡು ಮಗುವಿಗೆ ಜನನವಿತ್ತಳು. ದಾರು ಮಗುವಿನ ಹೊಕ್ಕುಳು ಕತ್ತರಿಸಿದಳು. ಹಾಳೆಯಲ್ಲಿ ಮಗುವನ್ನು ಮಲಗಿಸಿದಳು. ಅಜ್ಜರಿಗೆ ಸುದ್ದಿಕೇಳಿ ಹರುಷದ ಮೈ, ಮುತ್ತಿನ ನಗು ಆಯಿತು. ಮೂರರಂದು ಮುಚ್ಚಿಲಮೆ, ಏಳರಂದು ಏಳನಮೆ ಆಚರಣೆ ಅಜ್ಜರು ನಡೆಸಿದರು. ಮಗುವಿನ ಹುಟ್ಟಿದ ರಾಶಿ ತಿಳಿಯಲು ಅಜ್ಜರು ಜೋಯಿಸ ಭಟ್ಟರಲ್ಲಿ ತೆರಳಿದರು. ರಾಶಿಮಣೆಯ ಮೇಲೆ ಅಜ್ಜರು ಬೆಳ್ಳಿಯ ವರಹ ಇರಿಸಿದರು. ಸರ್ವ ಲಕ್ಷಣ ಭರಿತ ಬಾಲಕನಿಗೆ ಕುಮಾರ ಕೋಟಿ ಪೂಂಜನೆಂದು ಹೆಸರು ಇಡಬೇಕೆಂದು ಜೋಯಿಸರು ಹೇಳಿದರು. ಮಂಗಳವಾರ ಅಮಾವಾಸ್ಯೆಯ ದಿನ ಹುಟ್ಟಿದ ಮಗುವನ್ನು ಅಜ್ಜರು ನೋಡಿದಲ್ಲಿ ಸಾವಿನ ಗಂಡಾಂತರವಿದೆ, ತಾಯಿಗೆ ದೇಶಾಂತರ ಹೊರಟುಹೋಗುವ ಲಕ್ಷಣ ಕಾಣಿಸುತ್ತದೆ ಎಂದರು ಭಟ್ಟರು. ಅಜ್ಜರು ಹಾದಿ ಹಿಡಿದು, ಬೀದಿ ನಡೆದು ಗುಡ್ಡೆ ಇಳಿದು ಬಯಲು ಹಾದು ಸತ್ಯನಾಪುರದ ತನ್ನ ಅರಮನೆ ತಲುಪಿದರು. ಮಗಳು ಸಿರಿ ತಂದಿತ್ತ ಹಾಲು ನೀರು ಕುಡಿದು ದಣಿವಾರಿಸಿದರು. ಜೋಯಿಸ ಭಟ್ಟರು ಹೇಳಿದ ಎಲ್ಲ ಸಂಗತಿಗಳನ್ನು ಸಿರಿಗೆ ತಿಳಿಸಿದರು. “ಚಿಂತೆಯಿಂದ ಕೊರಗದಿರು ಮಗಳೆ, ಆದದ್ದು ಆದೀತು, ಹೋದದ್ದು ಹೋದೀತು. ಮಗುವನ್ನು ಮಾತ್ರ ಚೆನ್ನಾಗಿ ಸಾಕಿ ಸಲಹಬೇಕು” ಎಂದು ಅಜ್ಜರು ದಾರುಗೆ ಹೇಳಿದರು.

ಹದಿನಾರನೆಯ ದಿನ ಅಜ್ಜರು ಕುಂದಣದ ತೊಟ್ಟಲು ಕಟ್ಟಿಸಿದರು. ಮಗುವಿಗೆ ಕುಮಾರನೆಂದೇ ಹೆಸರಿಟ್ಟರು. ಊರವರೆಗೆಲ್ಲ ಬಹುಬಗೆಯ ಅಡುಗೆ ಮಾಡಿಸಿ ಬಳಸಿದರು. ನಲ್ವತ್ತನೆಯ ದಿನ ಬಾಣಂತಿಗೆ ‘ತಿಂಗಳು’ ಮಾಡಿಸಿದರು. ಬಾವಿ ಮುಟ್ಟಿಸಿದರು. ಇಷ್ಟು ದಿನವಾದರೂ ಬಸರೂರಿಂದ ಹುಟ್ಟಿದ ಮಗುವನ್ನು ನೋಡಲು ಕೈಹಿಡಿದ ಗಂಡ ಕಾಂತನನಾಗಲೀ, ಅತ್ತೆ ಸಂಕರು ಪೂಂಜೆದಿಯಾಗಲೀ ಬರಲೇ ಇಲ್ಲ.

ತಿಂಗಳು ಮೂರು ಕಳೆಯಿತು. ಸಿರಿ ಒಂದು ದಿನ ಮನೆಗೆ ದೂರವಾದಳು. ಅಂಗಳಕ್ಕೆ ಸಮೀಪವಾದಳು. ನಾಲ್ಕನೆಯ ದಿನ        ಸುದ್ದ’ವಾಗಲು ದಾರುವನ್ನು ಕರೆದುಕೊಂಡು ಸತ್ಯನಾಪುರದ ಮುತ್ತಿನ ಕೆರೆಗೆ ಬಂದಳು. ಸೀಗೆ ಬಾಗೆ ಹಾಕಿ ದಾರು ಸಿರಿಯ ತಲೆ ಉಜ್ಜಿದಳು. ಸಿರಿ ಮಿಂದು ಮುತ್ತಿನ ಕೆರೆಯ ಮೇಲೆ ಬಂದು ಬಟ್ಟೆ ಬದಲಾಯಿಸುವಷ್ಟರಲ್ಲಿ ‘ಹಗ್ಗ ಇಳಿಸಿದ ಬೆಳ್ಳಿ ಮಾಡ’ ದ ತೊಟ್ಟಿಲಲ್ಲಿ ಮಲಗಿದ ಮಗು ಕುಮಾರ ಎದ್ದು ಕಿರುಚಿ ಅಳತೊಡಗಿದ. ಕಲ್ಲ ಕಲೆಂಬಿಯ ಮೇಲೆ ಮಲಗಿದ್ದ ಅಜ್ಜರಿಗೆ ಇದು ಕೇಳಿಸಿತು. ಮಗುವನ್ನು ಕಣ್ಣಲ್ಲಿ ನೋಡಬಾರದು ಎನ್ನುವ ತಿಳಿವಳಿಕೆ ಮಾಸಿತು. ಅಳುವ ಮಗುವನ್ನು ಹೋಗಿ ಕೈಯಾರೆ ಎತ್ತಿಕೊಂಡರು. ಬಾಯಾರೆ ಲಲ್ಲೆ ಮಾಡಿದರು. ಅಜ್ಜರು ನಾರಾಯಣ ಸ್ಮರಣೆ ಮಾಡುತ್ತಾ ಮಗುವನ್ನು ಆಡಿಸುತ್ತಿದ್ದದು ದೂರದ ಕೆರೆಯ ಏರಿಯಲ್ಲಿದ್ದ ಸಿರಿಗೆ ಕೇಳಿಸಿತು. ಆತಂಕದಿಂದ ಸಿರಿ ಓಡೋಡುತ್ತಾ ಮಗು ಮಲಗಿದ್ದ ಏಳರೆಯ ಯಮಗುಂಡ ಹೊಕ್ಕಳು. ಮಗುವನ್ನು ತನ್ನ ಮೈಮೇಲೆ ಮಲಗಿಸಿಕೊಂಡಿದ್ದ ಅಜ್ಜರು ಕುಸಿದಿದ್ದರು, ಎವೆ ಮುಚ್ಚಿದ್ದಿತು. ಅಜ್ಜರು ಕಾಯಬಿಟ್ಟು ಕೈಲಾಸಕ್ಕೆ ಸಂದಿದ್ದರು, ಜೀವ ಬಿಟ್ಟು ವೈಕುಂಠ ಸೇರಿದ್ದರು. ಸಿರಿ ಅಜ್ಜರು ತೀರಿಕೊಂಡುದನ್ನು ಓಲೆ ಬರೆದು ತನ್ನ ಕೈದಾರೆಯ ಗಂಡನಿಗೆ ತಿಳಿಸಿದಳು. ಕೂಡಲೇ ಬಂದು ಶವಸಂಸ್ಕಾರ ನಡೆಸುವಂತೆ ಆಗ್ರಹಪಡಿಸಿದಳು.

ತಾಯಿ ಸಂಕರು ಪೂಂಜೆದಿ ಮಗ ಕಾಂತಣ ಸತ್ಯನಾಪುರಕ್ಕೆ ಹೋಗುವುದನ್ನು ತಡೆದಳು. ಅಳಿಯ ಕಾಂತಣ ಸಂಸ್ಕಾರಕ್ಕೆ ಹೋಗದೆ ಬಸೂರರಲ್ಲೇ ಉಳಿದ.

ಸೂಡದ ಅಣ್ಣು ಸೆಟ್ಟಿ ಮಗ ಸಂಕರ ಆಳ್ವ ಅಜ್ಜರಿಗೆ ದೂರದ ಅಳಿಯ. ಹಿಂದೊಮ್ಮೆ ಸತ್ಯನಾಪುರದ ಅಸ್ತಿಯಲ್ಲಿ ಪಾಲು ಒಯ್ದಿದ್ದ. ಇದೀಗ ಮತ್ತೆ ಬಂದು ಆಸ್ತಿಯ ಒಡೆತನ ಕೋರಿದ. ಇಲ್ಲವಾದರೆ ಶವಸಂಸ್ಕಾರಕ್ಕೆ ಅವಕಾಶ ಕೊಡೆನೆಂದು ಬೆದರಿಕೆ ಒಡ್ಡಿದ. ಸಿರಿ ಸಂಕರ ಆಳ್ವನ ಬೆದರಿಕೆಗೆ ಸಗ್ಗಲಿಲ್ಲ. ಯಾರೂ ಬರದಿದ್ದರೂ ‘ಆಕಾಶಕ್ಕೆ ಹೊಗೆ ಭೂಮಿಗೆ ಬೂದಿ’ ಮಾಡಿ ತಾನೇ ಅಜ್ಜರ ಸಂಸ್ಕಾರ ನಡೆಸುವುದಾಗಿ ಆಹ್ವಾನ ನೀಡಿದಳು. ಅರಮನೆಯ ಎದುರು ಗದ್ದೆಯಲ್ಲಿ ‘ಕಾಷ್ಠ’ ಏರಿಸಿದಳು. ತಾನು ಸತ್ಯದ ಮಗಳು ಹೌದೆಂದಾದರೆ ಅಜ್ಜರ ಹೆಣ ನನ್ನ ತಲೆ ಮೇಲೆ ಮಲ್ಲಿಗೆಯ ಚೆಂಡಾಗಬೇಕೆಂದು ಹೇಳಿದಳು.

ಸಿರಿ ತಾನೇ ಅಜ್ಜರ ಶವ ಸಂಸ್ಕಾರ ನಡೆಸಿದಳು. ಗಂಡಸು ಮಾಡಬೇಕಾದ ಕೆಲಸವನ್ನು ಹೆಣ್ಣಾದ ಸಿರಿ ಪೂರೈಸಿದಳು. ಸಿರಿಯ ಎದುರು ಭಂಗಿತನಾದ ಸಂಕರ ಆಳ್ವ ಊರಮಂದಿ ಸೇರಿಸಿ ಕೂಟದ ಕಳಕ್ಕೆ ಸಿರಿಯನ್ನು ಬರುವಂತೆ ಓಲೆ ಕಳುಹಿಸಿದ. ಸಾಮನ್ಯವಾಗಿ ಗಂಡಸರು ಮಾತ್ರ ಪಾಲ್ಗೊಳ್ಳುವ ಕೂಟದ ಕಳಕ್ಕೆ ಸಿರಿ ಒಲ್ಲದ ಮನಸ್ಸಿಂದ ಬರುವಷ್ಟರಲ್ಲಿ ಗಂಡ ಕಾಂತಣಾಳ್ವ, ಸೂಡದ ಅಣ್ಣು ಸೆಟ್ಟಿ ಮಗ ಸಂಕರ ಆಳ್ವ ‘ಹತ್ತು ಕೂಡಿ ಪಾಲವ’ರಿಗೆ ಲಂಚ ನೀಡಿ ಅವರನ್ನು ಒಳಗು ಮಾಡಿಕೊಂಡಿದ್ದರು. ಸಂಕರ ಆಳ್ವ ಗುತ್ತಿನ ಮನೆಯ ಹೊರಾಡಳಿತ ನೋಡಿಕೊಳ್ಳುವನೆಂದೂ ಸಿರಿ ಸತ್ಯನಾಪುರದ ಮನೆಯ ರಕೋಲೆ ನೋಡಿಕೊಳ್ಳಬೇಕೆಂದೂ ತಾಕೀತು ಮಾಡಿದರು. ಸಿರಿ ಏಳೇಳು ಲೋಕದ ಕಡು ಕೋಪ ಕೋಪಿಸಿದಳು. ಪಾಲವರನ್ನು ಕಲ್ಲು ಮಾಡುವುದಾಗಿ ಬೆದರಿಕೆ ಒಡ್ಡಿದಳು. ಕೂಟದ ಕಳದ ಪಾಲವರು ಕಳವನ್ನು ನಿಲುಗಡೆ ಮಾಡಿದರು. ಕಲ್ಲು ಮಾಡುವುದಾಗಿ ಬೆದರಿಕೆ ಒಡ್ಡಿದಳು.

ಸಿರಿ ಸತ್ಯನಾಪುರದ ಅರಮನೆ ಇಳಿದು ಹೋಗಲು ನಿರ್ಧರಿಸಿದಳು. ದೇಶಾಂತರ ಹೋಗುವ ದುರ್ಗತಿ ಬಂತಲ್ಲಾ ಎಂದು ಶೋಕಿಸಿದಳು. ಮಗ ಕುಮಾರನ ಕುಂದಣದ ತೊಟ್ಟಿಲನ್ನು ದಾರುವಿನ ತಲೆಗೇರಿಸಿದಳು. “ಸತ್ಯನಾಪುರದ ನೆಲ ಬಂಜರು ಬೀಳಲಿ ಅರಮನೆ ಸುಟ್ಟುರಿದು ಬೂದಿಯಾಗಲಿ” ಎಂದು ಮಣ್ಣು ಮುಟ್ಟಿ ಹೆಣ್ಣ ಶಾಪ ಹಾಕಿದಳು.

ಸಿರಿ ಸತ್ಯನಾಪುರದ ಅರಮನೆ ಮೆಟ್ಟಿಲು ಇಳಿದು ತೊಟ್ಟಿಲ ಮಗುವಿನೊಂದಿಗೆ ಬಸರೂರು ಅರಮನೆಗೆ ಬಂದಳು. ಇದನ್ನು ದೂರದಿಮದ ಕಂಡ ಗಂಡ ಕಾಂತಣ ಅಟ್ಟಏರಿ ಕಲ್ಲ ಕಲೆಂಬಿ ಮೇಲೆ ಮುಸುಕಿ ಹಾಕಿ ಮಲಗಿದ. ಅತ್ತೆ ಸಂಕರು ಪೂಂಜೆದಿ ಬಂಗಾರದ ಹರಿವಾಣದಲ್ಲಿ ‘ಮಸಿ-ಗಂಜಿ ತೆಳಿ’ಯೊಂದಿಗೆ ಅಂಗಳಕ್ಕೆ ಬಂದಳು. ಸಿರಿ ಆಕೆಯನ್ನು ಅಡ್ಡ ತಡೆದಳು. ಕೈ ಹಿಡಿದ ಗಂಡ ಎಲ್ಲಿ ಹೋಗಿರುವನು ಎಂದು ಕೇಳಿದಳು. “ನನ್ನ ಮಗ ನಿನ್ನ ಕೈಧಾರೆಯ ಗಂಡ ಕಡೇರಿಕಾರ್ಲಕ್ಕೆ ತೀರ್ವೆಯ ಕಡೆಯ ಕಂತು ತುಂಬಲು ಹೋಗಿದ್ದಾನೆ” ಎಂದಳು ಸಂಕರು. ಆಗ ಸಿರಿ ‘ತೀರ್ವೆ ಕಟ್ಟಲು ಹೋಗಿದ್ದಾರಾ ಅಥವಾ ಕಡೇರಿಕಾರ್ಲದ ಸಿದ್ದುವಿನ ಸಂಗಾತಕ್ಕೆ ಹೋಗಿದ್ದಾರಾ?’ ಎಂದು ಬಿರುಸಿಂದಲೇ ಕೇಳಿದಳು. ಮಗುವಿನ ಕಣ್ಣೆಂಜಲಿಗೆ ನೀವು ತುಂಬಿರುವ ‘ಮಸಿ-ತೆಳಿ’ ನಾನು ಸ್ವೀಕರಿಸಲಾರೆ. ಹೆಚ್ಚು ಮಾತನಾಡಿದರೆ ನಿಮಗೆ ‘ನೀನು-ನಾನು’ ಎಂದು ನನ್ನ ಬಾಯಲ್ಲಿ ಬಂದೀತೆಂದು ನುಡಿದಳು. ಇದನ್ನು ಕೇಳಿಸಿಕೊಂಡ ಕಾಂತಣ ಹತ್ತು-ಹದಿನಾರು ಲೋಕದ ಕಡುಕೋಪ ಕೋಪಿಸುತ್ತಾ ಕೋರೆ ಹಲ್ಲು ಕಳೆದ ಬಾಯಿ ಬಡುಕಿ ಹೆಣ್ಣೇ, ಶುಂಠಿ ಮೀರಿದ ಕಷಾಯದಂತಹ ಹೆಣ್ಣೇ, ಅಂಚು ಮೀರಿದ ಗದ್ದೆಯಂತಹ ಹೆಣ್ಣೇ ತವರನ್ನು ಧಿಕ್ಕರಿಸಿ ಬಂದ ಹೆಣ್ಣು ಎಂದರೆ ನೀನು ತಾನೇ’ ಎಂದು ಅಬ್ಬರಿಸಿದ. ಇದನ್ನು ಕೇಳಿದ ಸಿರಿ ಉಗ್ರರೂಪ ತಾಳಿದಳು. “ನಮ್ಮ ಮದುವೆಯ ನಂಟನ್ನು ಇಲ್ಲಿಗೇ ಮುರಿದು ಬಿಡೋಣ. ಸೂಕ್ತ ಬತ್ತ್‌(ಶುಲ್ಕ) ಕಟ್ಟಿ, ವಿಚ್ಛೇದನ ನೀಡಿ” ಎಂದಳು. ವಿಚ್ಛೇದನ ನೀಡಬೇಕಾದರೆ ತವರಿನಿಂದ ಒಬ್ಬ ದಾತಾರನನ್ನು ಕರೆದು ತಾ ಎಂದು ಕಾಂತಣ ಹೇಳಿದಾಗ ಸಿರಿ “ ನನ್ನ ಕುಟುಂಬದಲ್ಲಿ ಗಂಡಾಳು ಇಲ್ಲ. ಬೇಲಿಯ ಗೊಲಂಬೂರು ಗಿಡದ ಗೆಲ್ಲು ತಂದಿದ್ದೇನೆ. ನೀಡು ವಿಚ್ಛೇದನ” ಎಂದಳು. ಬೇಲಿಯ ಗೂಟದ ಸಾಕ್ಷಿಯಾಗಿ ವಿಚ್ಛೇದನ ಹೇಳಲಾರೆ ಎಂದಾಗ ಕೆರಳಿದ ಸಿರಿ ಕೈಗೆ ಕೈಗೊಟ್ಟು ಕೈ ಬಳೆಗಳನ್ನು ಒಡೆದಳು. ಮೂಗಿಗೆ ಕೈ ನೀಡಿದಳು ಮೂಗಿನ ನತ್ತು ಕಿತ್ತು ಒಗೆದಳು. ಕೊರಳೀಗೆ ಕೈ ನೀಡಿದಳು, ಕರಿಮಣಿ ಕಡಿದು ಎಸೆದಳು. ತೊಟ್ಟಿಲ ಏಳು ತಿಂಗಳ ಮಗುವನ್ನು ಎದುರು ಹಿಡಿದಳು. ಇವನೇ ನನ್ನ ತಮೆರಿ(ದಾತಾರ), ಕೊಡು ವಿಚ್ಛೇದನ’ ಎಂದಬ್ಬರಿಸಿದಳು. “ಇನ್ನು ಮುಂದಾದರೂ ಕೆಟ್ಟ ಗಂಡನೊಂದಿಗೆ ಬಾಳುವ ಹೆಣ್ಣಿನ ಗೋಳು ತಪ್ಪಬೇಕು. ಅಂಥ ಹೆಣ್ಣಿಗೆ ಎರಡನೆ ಮದುವೆಯಾಗುವ ಕಟ್ಟು ಬರಬೇಕು” ಎಂದಳು ಸಿರಿ. “ಹಾಗಾದರೆ ಇಂದು ಸೂರ್ಯ ಕಂತುವ ಮೊದಲು ನೀನು ‘ಮುಕ್ಕಡಪು’ (ಹಾಯ್ಗಡ) ದಾಟಿ ಹೋಗಬೇಕು. ಅದುವೇ ನಿನಗೆ ನನ್ನಿಂದ ವಿಚ್ಛೇದನ. ಇಲ್ಲದಿದ್ದರೆ ನಿನ್ನ ಜುಟ್ಟು ಹಿಡಿದು ಬಸರೂರು ಅರಮನೆಗೆ ಎಳೆದು ತರುವೆ ಎಂದು ಕಾಂತಣ ಗುಡುಗಿದ. “ ಇಂದಿನ ತನಕ ಬಸರೂರು ಅರಮನೆಗೆ ಲೋಕಕ್ಕೇ ನೀಡುವಷ್ಟು ಬದುಕು ಭಾಗ್ಯ ಇದ್ದಿತ್ತು. ಇಂದಿನಿಂದ ಕುಡಿಯಲು ಗಂಜಿ ಇರದಷ್ಟು ಬಡತನ ಒತ್ತಬೇಕು. ಹಟ್ಟಿ ತುಂಬ ಜಾನುವಾರುಗಳಿದ್ದಲ್ಲಿ ಒಂದು ಕಣ್ಣಿನ ಎತ್ತು ಮಾತ್ರ ಉಳಿಯಬೇಕು. ನನ್ನ ಗಂಡ ನಾಲ್ಕು ಮನೆ ಭಿಕ್ಷೆ ಬೇಡುತ್ತಾ ಮೂರು ಮನೆ ತಿರುಗುತ್ತಾ ಉಣ್ಣಲು ಗತಿ ಇಲ್ಲದ ಸ್ಥಿತಿಗೆ ಬರಬೇಕು’ ಎಂದು ಮಣ್ಣು ಮುಟ್ಟಿ ಹೆಣ್ಣ ಶಾಪ ನೀಡಿದಳು ಸಿರಿ.

ಸಿರಿ ಬಸರೂರ ಗುತ್ತಿನ ಮನೆ ಇಳಿದು ನಡೆದಳು. ಕುಮಾರನ ತೊಟ್ಟಿಲು ಹೊತ್ತು ದಾರು ಹಿಂದಿನಿಂದ ನಡೆದಳು. ಮಾಬುಕಳ ನದಿ ದಡಕ್ಕೆ ಬಂದಳು. ಸಿರಿ ಕಡವಿನ ಕುಂಞುವನ್ನು ಕರೆದಳು. “ಕತ್ತಲೆಯಾಗುತ್ತಾ ಬಂತು. ದೋಣಿಯನ್ನು ಗೂಟಕ್ಕೆ ಕಟ್ಟಿಯಾಯಿತು. ನಾಳೆ ನಸುಕಲ್ಲಿ ಹೊಳೆ ದಾಟಿಸುತ್ತೇನೆ.” ಎಂದ. ಸಿರಿ ಎದೆಗುಂದಲಿಲ್ಲ. ತಾನು ಸತ್ಯದ ಮಗಳು ಹೌದೆಂದಾದರೆ ಇದೀಗ ಒಂದು ಬಂಗಬಾಳೆ ಎಲೆ ಮೂಡಿಬರಬೇಕು ಎಂದಳು. ಆಡಿದ ನಾಲಗೆ ಗಂಟಲಲ್ಲಾಗಬೇಕಾದರೆ ಒಂದು ಬಾಳೆ ಎಲೆ ನೀರಲ್ಲಿ ತೇಲಿ ಬಂತು. ಅದರಲ್ಲಿ ಕುಮಾರನ ತೊಟ್ಟಿಲನ್ನೂ ದಾರುವನ್ನೂ ಇರಮಾಡಿದಳು. ಅದು ಈ ದಡದಿಂದ ಆ ದಡ ಸೇರಬೇಕು. ಆ ಕಡೆಯ ನೀರು ಆ ಕಡೆ ಹರಿಯಬೇಕು. ಈ ಕಡೆಯ ನೀರು ಈ ಕಡೆ ಹರಿದು ನಡುವೆ ನನಗೆ ಸಾಗಲು ದಾರಿಯಾಗಬೇಕು ಎನ್ನುವಷ್ಟರಲ್ಲಿ ಎಲೆ ಹೊಳೆಯ ಆ ಕಡೆ ಸೇರಿತು. ನಡು ಹಾದಿ ನಿರ್ಮಾಣವಾಯಿತು. ಸಿರಿ ನಡೆದು ದಡ ಸೇರಿದಳು. ಸಿರಿಯ ಮುಂಗೈಯ ಸೊಬಗಿಗೆ ಮಾರುಹೋದ ವಾವೆಯಲ್ಲಿ ಮಾವನ ಮಗ-ಓಡೋಡಿ ಬಂದು ಮದುವೆಯಾಗುವಂತೆ ಒತ್ತಾಯಿಸಿದ. ಸಿಟ್ಟಿಗೆದ್ದ ಸಿರಿ ಆತನತ್ತ ಒಂದು ಕಲ್ಲು ಎಸೆದು ಇನ್ನು ಮುಂದೆ ಕಲ್ಲಾಗಿ ಸೇಮೆಕಲ್ಲ ಪಂಜುಲಿ ಎಂದೆನಸಿಕೊಂಡು ಇರು ಎಂದು ಶಾಪವಿತ್ತಳು. ದೋಣಿಯ ಕಡವಿನಲ್ಲಿ ಮುಂದೆ ಮೂರು ತಿಂಗಳು ಮಾತ್ರ ನೀರ ಹರಿವು ಬರಬೇಕು, ಎಂದು ಕಡವಿನ ಕುಂಞುವಿನ ಆದಾಯಕ್ಕೆ ಸಂಚಕಾರ ತಂದಳು.

ಸಿರಿ ಮಗು ಕುಮಾರನ ತೊಟ್ಟಿಲು ಹೊರಿಸಿಕೊಂಡು ಬೋಳದ ಕಾಡು ತಲುಪಿದಳು. ನೋಕಟೆ ಮರದ ಗೆಲ್ಲಿಗೆ ಕುಮಾರನ ತೊಟ್ಟಿಲು ಕಟ್ಟಿದಳು. ಮಗುವಿನ ಹೊಟ್ಟೆ ತುಂಬುವಷ್ಟು ಎದೆಹಾಲು ಕುಡಿಸಿದಳು.

ಸಿರಿ ಕುಮಾರನ ಕೊಳೆಬಟ್ಟೆ ಒಗೆದು ಬರುವಂತೆ ದಾರುವನ್ನು ಸಮೀಪದ ತೋಡಿಗೆ ಕಳುಹಿಸಿದಳು. ಅಲ್ಲಿ ಬೊಲಿಯ (ಬಿಳಿ) ಮುಗ್ಗೇರರು ಮೀನು ಹಿಡಿಯಲೆಂದು ನೀರಿಗೆ ‘ಕಡು’ ಹಾಕಿದ್ದರು. ನೀರು ಕಲಕಿ ಬಟ್ಟೆ ಒಗೆಯುವಂತಿರಲಿಲ್ಲ. ಸಿರಿ ಗೆಜ್ಜೆಕತ್ತಿ ತೆಗೆದು ನೆಲದಲ್ಲಿ ಹದಿನಾರು ಗೆರೆ ಎಳೆಯುವಷ್ಟರಲ್ಲಿ ನೀರು ಉಕ್ಕಿ ಬಂದು ಕೆರೆಯಾಯಿತು. ಕಡು ಹಾಕಿದ ಮುಗ್ಗೇರರ ಮೇಲೆ ಸಿಟ್ಟಿನಿಂದ ಇನ್ನು ಮುಂದೆ ಆ ಊರಲ್ಲಿ ಆ ಜನಮಂದಿ ತಂಗಕೂಡದೆಂದೂ ತಂಗಿದರೆ ಗಲ್ಲ ಬೀಗುವಂತಾಗಲೆಂದೂ ಶಾಪವಿತ್ತಳು.

ಮರದ ಬುಡದಲ್ಲಿ ಕುಳಿತಿದ್ದ ಒಬ್ಬಂಟಿ ಸಿರಿಯನ್ನು ಬೋಳದ ಚತ್ತೇರಿಗಳು- ಕಾಸಿಂಗ ಅರಸು ಹಾಗೂ ದೇಸಿಂಗ ಅರಸು ಎನ್ನುವ ಸಹೋದರರು ದೂರದಿಂದ ಕಂಡರು. ಅವರು ಆರು ವರ್ಷ ಆರು ತಿಂಗಳು ಮರದ ಮೇಲೆ ಹಕ್ಕಿಯ ರೂಪದಲ್ಲಿ ಇದ್ದು ಮಾನವ ಆಕಾರ ತಳೆದವರು. ನವಿಲಿನ ಹೊಂಡದೊಳಗೆ ಇಳಿದು ನವಿಲಿನ ರೆಕ್ಕೆಯೊಳಗೆ ಬೆಳೆದು ಬಂದವರು. ಜಿಂಕೆಯ ಸಮುದಾಯದೊಳಗೆ ಹೊಕ್ಕು ಅವುಗಳ ಕೊಂಬಿನ ಮೇಲೆ ಚಿಗುರಿದವರು. ಕಡವೆಯ ಹಾಲು ಕುಡಿದು ಬೆಳೆದು ಬಂದ ಅಲೌಕಿಕ ಶಕ್ತಿ ಸಂಪನ್ನರು. ನೆಲ್ಲಿಕಾಯಿಯ ಹೋಳುಗಳನ್ನು ಆಕಾಶಕ್ಕೆ ಎಸೆದು ಅದು ಬೀಳುವಷ್ಟರಲ್ಲಿ ತಮಗಾಗಿ ಅರಮನೆ ನಿರ್ಮಾಣ ಮಾಡಿದವರು. ಅವರಿಗೆ ಮಗುವಿನ ತೊಟ್ಟಿಲು ತೂಗುತ್ತಾ ನಾರಾಯಣ ಸ್ಮರಣೆ ಮಾಡುತ್ತಿರುವ ಸಿರಿಯ ಸೊರದನಿ ಕೇಳಿಸಿತು. ಓಡಿ ಹೋಗಿ ಯಾರು ಆ ಹೆಣ್ಣನ್ನು ಮುಟ್ಟುವರೋ ಆಕೆ ಅವರಿಗೆ ಸೇರತಕ್ಕದ್ದೆಂದು ಪಂತ ಹೂಡಿ ಓಡೋಡಿ ಬಂದು. ತಮ್ಮನು ಮುಂದೆ ಅಣ್ನನು ಹಿಂದೆ ಓಡಿ ಬರುತ್ತಿರುವುದನ್ನು ಕಂಡ ಸಿರಿ ಮುಂಎ ಬರುವಾತ ತನ್ನ ಉಂಗುಷ್ಠ ಎಡಹಿ ಬಿಳುವಂತೆ ಮಾಡಿದಳು. ಮುಂದೆ ಬಂದವನನ್ನು ತನ್ನ ಅಣ್ಣ ಎಂದು ಸಿರಿ ಭಾವಿಸಿದಳು. ಹಿಂದೆ ಬಂದವನನ್ನು ತನ್ನ ತಮ್ಮ ಎಂದು ಸಿರಿ ತಿಳಿದಳು. ಕಾಸಿಂಗರಸ, ದೇಸಿಂಗರಸರು ತಮ್ಮ ಕಥೇಯನ್ನೆಲ್ಲಾ ಸಿರಿಗೆ ಹೇಳಿದರು. ಸಿರಿ ತನ್ನ ಬದುಕಿನ ಕಥೆಯನ್ನೆಲ್ಲಾ ಅವರಿಗೆ ಹೇಳಿದಳು. ಅವರು ಸಿರಿಯನ್ನು ತಮ್ಮ ಅರಮನೆಗೆ ಆಮಂತ್ರಿಸಿದರು. “ಬೇಟೆಗೆ ಬಂದವರು ಹೆಣ್ಣ ಬೇಟೆ ಮಾಡಿಕೊಂಡು ಬಂದರೆಂದು ಜನ ಆಡಿಯಾರು. ನಾಳೆ ಎಲ್ಲ ಮರ್ಯದೆಯೊಂದಿಗೆ ಸರ್ವ ವೈಭವದೊಂದಿಗೆ ನನ್ನನ್ನು ನಿಮ್ಮ ಅರಮನೆಗೆ ಕರೆದೊಯ್ಯಿರಿ, ಬರುತ್ತೇನೆ” ಎಂದಳು ಸಿರಿ. ಅಂತೆಯೇ ಸೋದರರು ಒಪ್ಪಿ ಹೊರಟರು.

ತೊಟ್ಟಿಲ ಮಗು ಕುಮಾರ ಎದ್ದು ಕುಳಿತ. ತಾಯಿ ಕೊಟ್ಟ ಎದೆ ಹಾಲನ್ನು ಬೇಡ ಅಂದ. ತಾಯಿಯ ಬದುಕಿನ ಹಿಂದ ಕಥೆಯನ್ನೆಲ್ಲಾ ನಿರೂಪಿಸಿದ. ನಾಳಿನ ಕತೇಯನ್ನೂ ಹೇಳಿದ. ತಂದೆಗೆ ‘ಬರ’ ಹೇಳಿ ಬಂದ ತಾಯಿಯ ನಡವಳಿಕೆಯನ್ನು ಪ್ರಶ್ನಿಸಿದ. ಒಬ್ಬ ತಂದೆಗೆ ಹುಟ್ಟಿ ಇನ್ನೊಬ್ಬನನ್ನು ಅಪ್ಪ ಎಂದು ಕರೆಯಲಾರೆ. ನನ್ನನ್ನು ಮಾಯ ಮಾಡಿ ಎಂದ. ಸಿರಿ ಮಗ ಕುಮಾರನನ್ನು ಮಾಯ ಮಾಡಿದಳು. ಕುಮಾರ ಬೊಲ್ಯೊಟ್ಟುವಿಗೆ ಹೋಗಿ ಬಿಳಿಯ ಬುಗರಿ ಮರದ ಬಲಕ್ಕೆ ತನ್ನ ತಾಯಿಗೆ ದಲ್ಯ ಹಾಸಿ ತಾನು ‘ಸಾತ್ರಪೂಂಜ’ನಾಗಿ ಮರದ ಮೇಲೆ ಕುಳಿತು ಕೂಗಿದ. ದಾರುವಿನ ಕೋರಿಕೆಯಂತೆ ಆಕೆಯನ್ನು ಮಾಯ ಮಾಡಿದಳು ಸಿರಿ. ಮುಂದೆ ಹಸುಗಳ ಹಿತ ಕಾಯುವ ಜಾಲ ಬೈಕಾಡ್ತಿಯಾಗಿ ದಾರು ಮಾಯಾರೂಪ ಪಡೆದಳು.

ಸನ್ನೆಯ ಕೊಂಬು ಊದಿಸಿದರು. ಪಯಣದ ಬೆಡಿ ಎಸೆಯಿಸಿದರು. ಸಿಂಗರಿಸಿದ ಸತ್ಯದಂಡಿಗೆ ಹೊತ್ತು  ಬೋವಿಗಳು ಬೋಳದ ಕಾಡಿಗೆ ಬಂದರು. ಸಿರಿ ದಂಡಿಗೆ ಏರಿದಳು. ಮೆರವಣಿಗೆ ಬೋಳದ ಅರಮನೆಯತ್ತ ಸಾಗಿತು. ಸಿರಿಯನ್ನು ಬಲಕಾಲು ಮುಂದೆ ಹಾಕಿಸಿ ಚತ್ತೇರಿಗಳು ಅರಮನೆಯೊಳಗೆ ಕರೆತಂದರು.

ಸಿರಿಯನ್ನು ಬೋಳದ ಅರಮನೆಯಲ್ಲಿ ಕರಿಯ ಕಾಸಿಂಗ ಬೊಲಿಯ ದೇಸಿಂಗರು ತಂಗಿಯೆಂದೇ ಭಾವಿಸಿ ಪ್ರೀತಿಯಿಂದ ಕಾಣತೊಡಗಿದರು. ಇನ್ನೂ ಜವ್ವನೆಯಾಗಿರುವ ಸಿರಿಗೆ ಮರುಮದುವೆ ಮಾಡಬೇಕೆಂದು ಅವರು ನಿರ್ಧರಿಸಿದರು. ಕೊಟ್ಟರಾಡಿಯ ಕೊಡ್ಸರಾಳುವನೇ ತಕ್ಕವನೆಂದುಕೊಂಡರು.

ಕೊಟ್ಟರಾಡಿಯ ಕೊಡ್ಸರಾಳ್ವನ ಹೆಂಡತಿ ಸಾಮು ಆಳ್ವೆದಿ. ಅಂಗರಜಾಲಬರ್ಕೆಯ ಬಾಮು ಕಿಲ್ಲೆಯವರ ತಂಗಿ ಅವಳು. ಸಾಮು ಕೊಟ್ಟರಾಡಿ ಮನೆ ಹೊಕ್ಕಾಗ ಅಲ್ಲಿದ್ದುದು ಒಂದೇ ಒಂದು ಬತ್ತದ ಕಣಜ. ಸಾಮುವಿನ ಕಾಲಗುಣದಿಂದ ಒಂದಿದ್ದುದು ಎರಡಾಯಿತು. ಹಿಂದೆ ಪಡು ದಿಕ್ಕಿಂದ ಹೊಕ್ಕ ಕಾಗೆ ಮೂಡು ದಿಕ್ಕಿಂದ ನೇರ ಹೊರ ಹಾರುತ್ತಿತ್ತು. ಆ ದುಃಸ್ಥಿತಿ ಇಂದಿಲ್ಲ. ಮನೆಯ ‘ಬದ್ಕ್‌ಭಾಗ್ಯ’ ಹೆಚ್ಚಿದೆ. ಹಾಗಿರುವಾಗ ಬೋಳದ ಅರಮನೆಯಿಂದ ಬಂದು ಹೋಗುವಂತೆ ಕೊಡ್ಸರಾಳ್ವನಿಗೆ ಓಲೆ ಬಂದಿತು. ಕೊಡ್ಸರಾಳ್ವರು ಮೈ ತುಂಬ ಅಲಂಕರಿಸಿಕೊಂಡು ಬೋಳದ ಅರಮನೆಗೆ ಹೊರಟರು. ಬೋಳದ ಅರಮನೆಯಲ್ಲಿ ಚತ್ತೇರಿಗಳು ಪ್ರೀತಿಯಿಂದ ಎದುರ್ಗೊಂಡರು. ಸತ್ಯಮಾಲೋಕದ ಸಿರಿಯೇ ಕುಡಿಯಲು ನೀರು, ಹಾಲು ತಂದು ಕೊಟ್ಟಳು. ಹಾಲನ್ನು ಕೈಯೇರಿ ಕೊಟ್ಟಾಗ ಸಿರಿಯ ಮುಂಗೈಯ ಚೆಲುವನ್ನು ನೋಡಿದ ಕೊಡ್ಸರಾಳ್ವರ ಬುದ್ಧಿ ಕೆಟ್ಟಿತು, ಎಚ್ಚರ ತಪ್ಪಿತು. ಚತ್ತೇರಿಗಳು ಏನೆಂದು ಕೇಳಿದಾಗ ತಿಂದ ಅಡಿಕೆಯ ಹೋಳಿನ ರಸ ಮತ್ತೇರಿಸಿತು ಎಂದು ಹೇಳಿ ನುಣುಚಿಕೊಂಡನು. ಇದನ್ನು ಗಮನಿಸಿದ ಚತ್ತೇರಿಗಳು ಸಿರಿಯನ್ನು ಮದುವೆಯಾಗುವಂತೆ ಒತ್ತಾಯಿಸಿದರು. ಕೈ ಹಿಡಿದ ಹೆಂಡತಿಯಿರುವಾಗ ಇದು ಹೇಗೆ ಸಾಧ್ಯ ಎಂದು ಕೊಡ್ಸರಾಳ್ವ ಕೇಳಿದಾಗ ಅವಳನ್ನು ಸತಾಯಿಸಿ ತವರು ಮನೆಗೆ ಹೋಗುವಂತೆ ಮಾಡು ಎಂದರು ಚತ್ತೇರಿಗಳು. ಸಿರಿಯನ್ನು ಮದುವೆಯಾಗುವುದಾಗಿ ಕೈ ಭಾಷೆಕೊಟ್ಟು ಕೊಡ್ಸರಾಳ್ವ ತನ್ನ ಅರಮನೆಗೆ ಮರಳಿದ.

ಅರಮನೆಗೆ ಬಂದ ಕೊಡ್ಸರಾಳ್ವರು ಐನೂರು ಕೊಡ ಬಿಸಿನೀರು ಐನೂರು ಕೊಡ ತಣ್ಣೀರಿಂದ ಮಿಂದು ಮಡಿಯಾದರು. ಮದುಮಗನಂತೆ ಅಲಂಕರಿಸಿಕೊಂಡರು. ಅಷ್ಟರಲ್ಲಿ ಸಾಮು ಅಡುಗೆ ಸಿದ್ಧವಾಗಿದೆ ಎಂದು ಊಟಕ್ಕೆ ಕರೆದಳು. ಬಿಸಿ ಅಡುಗೆ ತಂದರೆ ತಣ್ಣಗಿನದು ಬೇಕೆಂದರು. ತಣ್ಣಗಿನದು ತಂದಾಗ ಬೆಚ್ಚಗಿನದು ಬೆಕೆಂದರು. ಮೊಸರು ತಂದಾಗ ಅದರಲ್ಲಿ ಕಲ್ಲೆಂದರು. ಕೊಡ್ಸರಾಳ್ವ ಕೈಹಿಡಿದ ಹೆಂಡತಿಗೆ ಕೊಡಬಾರದ ಕಷ್ಟ ನೀಡಿದರು.

ಸಾಮು ತನ್ನ ಅಣ್ಣ ಅಂಗರ ಜಾಲ ಬರ್ಕೆಯ ಬಾಮು ಕಿಲ್ಲಾಲರಿಗೆ ಓಲೆ ಬರೆದು ಕೊಡ್ಸರಾಳ್ವ ಸಿರಿಯನ್ನು ಮರುಮದುವೆಯಾಗುವ ಸುದ್ದಿ ತಿಳಿಸಿದಳು. ತಂಗಿಯ ಓಲೆಯನ್ನು ಕಂಡ ಅಣ್ಣ ಬಾಮು ಕಿಲ್ಲಾಲರು ಬೋಲದ ಅರಮನೆಗೆ ದೋಣಿಯೇರಿ ಬಂದರು. ಸಾಮು ಬಂದ ಮೇಲೆ ಮನೆತುಂಬಿದ ಸಿರಿ ಸಂಪತ್ತನ್ನೆಲ್ಲಾ ದೋಣಿಗೆ ತುಂಬಿದರು. ತಂಗಿಯನ್ನು ಕರೆದುಕೊಂಡು ತನ್ ಅರಮನೆಗೆ ಹೊರಟರು. ಸಾಮು ಹೊರಡುವಾಗ ಮನೆಯಲ್ಲಿ ತೆಂಗಿನ ಕಡಿಯಲ್ಲಿ ನಂದಾದೀಪ ಉರಿಸಿಟ್ಟಳು. ಸಿರಿ ಕಂಬುಲದ ಗದ್ದೆಯ ಅಂಚು ಹಾದು ನಿನ್ನಿ ಪಾದೆಗೆ ಬರುವಾಗ ನಂದಾದೀಪ ಕುಡಿ ಬಾಣವಾಗಿ ಆಕೆಯ ಕಣ್ಣಿಗೆ ಚುಚ್ಚಬೇಕು ಎಂದು ಮಣ್ಣುಮುಟ್ಟಿ ಹೆಣ್ಣ ಶಾಪ ಹಾಕಿದಳು.

ಸಾಮು ತವರು ಮನೆಗೆ ಹೋದುದನ್ನು ಕೇಳಿದ ಕೊಡ್ಸರಾಳ್ವರ ಮುಖದಲ್ಲಿ ಮುತ್ತಿನ ಮಂದಹಾಸ ಮಿನುಗಿತು. ಹರ್ಷದ ಮೈಯಾಯಿತು. ಬೋಳದ ಅರಮನೆಯಲ್ಲಿ ಕೊಡ್ಸರಾಳ್ವರೊಂದಿಗೆ ಸಿರಿಯ ಮರುಮದುವೆ ವಿಜೃಂಭಣೆಯಿಂದ ನಡೆಯಿತು. ಸತ್ಯದಂಡಿಗೆಯಲ್ಲಿ ಕುಳಿತ ಸಿರಿಯ ದಿಬ್ಬಣ ನಿನ್ನಿ ಪಾದೆಗೆ ಬರುವಷ್ಟರಲ್ಲಿ ಕೊಟ್ಟರಾಡಿಯ ಮನೆಯ ಹೊಸ್ತಿಲಲ್ಲಿರಿಸಿದ ನಂದಾದೀಪ ಕುಡಿ ಸಿರಿಯ ಕಣ್ಣಿಗೆ ಚುಚ್ಚತೊಡಗಿತು. ಕಣ್ಣು ತೆರೆಯಲಾಗದೆ ಸಿರಿ ಕೈಯ ಓಲೆಕೊಡೆ ಕೆಳಕ್ಕೆ ಹಾಕಿ ಕುಳಿತಳು. ಮುಂದೆ ನಡೆಯಲಾರೆ ಎಂದಳು. ಅಂಗರಜಾಲ ಬರಿಕೆಯಲ್ಲಿರುವ ಸಾಮು ಬಂದು ಕೈಹಿಡಿದು ಕರೆದೊಯ್ದರೆ ತಾನು ಆ ಮನೆಯೊಳಗೆ ಬರುವುದಾಗಿ ಸಿರಿ ಹೇಳಿದರು. ಗಂಡ ಕೊಡ್ಸರಾಳ್ವರು ಕಾಲ ಮಣ್ಣು ತಲೆಗಾಗುವಷ್ಟು ವೇಗದಲ್ಲಿ ಅಂಗರ ಜಾಲ ಬರಿಕೆಗೆ ಓಡಿ ಹೋದರು. ತಾನು ಕೈ ಹಿಡಿದ ಹೆಂಡತಿ ಸಾಮು ಇದ್ದಾಗಲೇ ಸಿರಿಯ ಕೈ ಹಿಡಿದ ತಪ್ಪನ್ನು ಕ್ಷಮಿಸಬೇಕೆಂದು ಕೈ ಹಿಡಿದ ಹೆಂಡತಿಯಲ್ಲಿ ಕಣ್ಣೀರ್ಗರೆದು ಬೇಡಿಕೊಂಡರು. ಒಲ್ಲದ ಮನಸ್ಸಿಂದ ಸಾಮು ಅಲಂಕರಿಸಿಕೊಂಡಳು. ಸಾಮು ಅಣ್ಣ ಬಾಮು ಕಿಲ್ಲಾಲ ಹಾಗೂ ಕೊಡ್ಸರಾಳ್ವರೊಂದಿಗೆ ಸಿರಿ ಕುಳಿತ ನಿನ್ನಿ ಪಾದೆಯೆಡೆಗೆ ಬಂದಳು. ಸಾಮುವನ್ನು ಕಂಡ ಸಿರಿ ಕನಲಿ ಕೆಂಡವಾದಳು. ಒಂದು ಕಲ್ಲು ತೆಗೆದು ಸಾಮುವನ್ನು ಕಲ್ಲು ಮಾಡುವುದಾಗಿ ಬೆದರಿಕೆ ಒಡ್ಡಿದಳು. ಬಾಮು ಕಿಲ್ಲಾಲರು ಸಿರಿಯನ್ನು ಸಮಾಧಾನಪಡಿಸಿದರು. ಸಾಮು ಸಿರಿಯನ್ನು ಕೈ ಹಿಡಿದು ಕೊಟ್ಟರಾಡಿಯ ಅರಮನೆಗೆ ಕರೆತಂದಳು. ಹೊಸ ಮದುಮಗಳಿಗೆ ಉಪಚಾರವಾಯಿತು. ಬಾಮು ಕಿಲ್ಲಾಲರು ತಂಗಿ ಸಾಮುವಿಗೂ, ಸಿರಿಗೂ ಉಪದೇಶದ ನಾಲ್ಕು ಮಾತು ಆಡಿ ಹೊರಟರು.

ಕೊಟ್ಟರಾಡಿಯ ಅರಮನೆಯಲ್ಲಿ ಸಾಮು ಹಾಗೂ ಸಿರಿಯ ಸಂಬಂಧ ಹಿತಕರವಾಗಿರಲಿಲ್ಲ. ಹಾಗಿರಲು ಸಾಮು ಒಂದು ದಿನ ‘ಬೀಡಿಗೆ ದೂರವಾದಳು. ಮನೆಯಂಗಳಕ್ಕೆ ಸಮೀಪವಾದಳು’. ಮುಟ್ಟಿನ ಸೂತಕ ಮೀಯಲು ಎಲ್ಲ ಸಿದ್ಧತೆ ಮಾಡಿಕೊಂಡಳು. ಸಿರಿಯಾದರೋ ತಾನು ಸತ್ಯದ ಮಗಳು ಹೌದೆಂದಾದರೆ ಕೊಟ್ಟರಾಡಿಯ ಕೆರೆಗಳಲ್ಲಿ ಹಕ್ಕಿ ಕುಡಿಯುವಷ್ಟೂ ನೀರಿರಬಾರದೆಂದು ಶಾಪವಿತ್ತಳು. ಸೂತಕ ಮೀಯಲು ಹೋದ ಸಾಮು ಕೆರೆ ಕೆರೆಗೆ ತಿರುಗಿದಳು. ಒಂದು ಹನಿ ನೀರೂ ಇಲ್ಲದಂತೆ ಕೆರೆಗಳೆಲ್ಲಾ ಒಣಗಿದ್ದವು. ಸಾಮು ತನ್ನ ಗೆಜ್ಜೆ ಕತ್ತಿ ತೆಗೆದು ನೆಲವನ್ನು ಗೀರಿದಾಗ ಚಿಮ್ಮಿದ ನೀರಿನ ಕೆರೆಗಳೆಲ್ಲವೂ ತುಂಬಿ ಬಂದವು. ಸಾಮು ಮಿಂದು ಶುದ್ಧವಾಗಿ ಮನೆ ಹೊಕ್ಕಳು. ಅಷ್ಟರಲ್ಲಿ ಸಿರಿ ಅರಮನೆಗೆ ‘ದೂರ’ ವಾದಳು. ಸಿರಿ ನಾಲ್ಕನೆ ದಿನ ಶುದ್ಧ ಮೀಯಲು ಹರಿವ ನೀರಿಗೆ ಹೋದಳು. ಸಾಮುವಾದರೋ ಸಿರಿ ಮೀಯಲು ಹೋದಾಗ ಹರಿವಿನಲ್ಲಿ ಒಂದು ಹನಿ ನೀರೂ ಇರದಂತೆ ಶಾಪ ಹಾಕಿದ್ದಳು. ಸಿರಿ ನೀರು ಕಾಣದೆ ಸೋತು ನೀರಿನ ಒಸರು ಚಿಮ್ಮಬೇಕೆಂದು ಗೆಜ್ಜೆಕತ್ತಿಯಿಂದ ನೆಲವನ್ನು ಗೀರಿದಳು. ನೀರು ಚಿಮ್ಮಲಿಲ್ಲ. ಕೆರೆ ತುಂಬಲಿಲ್ಲ. ಮನೆಗೆ ಬಂದು ಗಂಡ ಕೊಡ್ಸರಾಳ್ವರಿಗೆ ದೂರು ಕೊಟ್ಟಳು. ಗಂಡನ ಮಾತಿಗೆ ಮಣಿದ ಸಾಮು ಕೆರೆ ಕೆರೆಗಳೆಲ್ಲಾ ನೀರಿನಿಂದ ತುಂಬಿ ಬರಲೆಂದು ಹಾರೈಸಿದಳು. ಸಿರಿ ಸೀಗೆ ಬಾಗೆ ಉಜ್ಜಿಕೊಂಡು ಮಿಂದು ಬಂದಳು.

ಕೊಟ್ಟರಾಡಿಯ ಅರಮನೆಯಲ್ಲಿ ಸಿರಿ ಒಳಗೆ ಹೋದಾಗ ಸಾಮು ಹೊರಗೆ ಬರುವಳು. ಸಾಮು ಒಳಗೆ ಬಂದಾಗ ಸಿರಿ ಹೊರಗೆ ನಡೆವಳು. ಅವರೊಳಗೆ ಮಾತಿಲ್ಲ, ಕತೆಯಿಲ್ಲ, ಇತ್ತ ಬಸರೂರಿನ ಅರಮನೆಯಲ್ಲಿ ಕಾಂತಣಾಳ್ವನಿಗೆ ಗಂಜಿ ಕುಡಿಯಲೂ ಗತಿಯಿಲ್ಲ. ತುಂಬಿದ ಹಟ್ಟಿಯಲ್ಲಿ ಒಕ್ಕಣ್ಣ ಎತ್ತೊಂದು ಮಾತ್ರ ಉಳಿದಿದೆ. ಬಸರೂರಿನ ಮನೆಯ ಅಡುಗೆಮನೆಯಲ್ಲಿ ಬೆಂಕಿ ಕಾಣದೆ ದಿನ ಮೂರಾಗಿದೆ. ತಾಯಿ ಸಂಕರು ಪೂಂಜೆದಿ ದಿನವಿಡೀ ದುಡಿದು ತಂದ ಹುಲ್ಲಕ್ಕಿಯ ಅನ್ನ, ಮೆಣಸಿನ ಚಟ್ನಿಯನ್ನು ಮಗನ ಮುಂದಿರಿಸಿದಳು. ಅನ್ನದ ದುರ್ವಾಸನೆಯಿಂದಾಗಿ ಕಾಂತಣಾಳ್ವ ಅದನ್ನು ಬಾಯಿಗಿರಿಸದೆ ನಿರಾಕರಿಸಿದ.

ಮರುದಿನ ಕಾಂತಣಾಳ್ವ ಒಂದು ಹೆಗಲಿಗೆ ಜೋಳಿಗೆ ಹಾಕಿಕೊಂಡ. ಇನ್ನೊಂದು ಹೆಗಲಿಗೆ ಬೆಳ್ಳಿಯ ನೊಗ ನೇಗಿಲು ನೇಲಿಸಿಕೊಂಡು ಊರೂರು ಭಿಕ್ಷೆ ಬೇಡಿಯಾದರೂ ಹೊಟ್ಟೆ ತುಂಬಿಸಿಕೊಳ್ಳುವುದಾಗಿ ಹೇಳಿದ. ಇದನ್ನು ಕಂಡ ಊರ ಹೆಂಗಸರು ಕೈ ಹಿಡಿದ ಹೆಂಡತಿಗೆ ಕಷ್ಟಕೊಷ್ಟವನಿಗೆ ಪಡಿ ನೀಡಬಾರದೆಂದು ಮನೆಗೆ ಬೀಗ ಹಾಕಿಕೊಂಡು ಕತ್ತಿ ಹಿಡಿದು ಸೊಪ್ಪಿಗೆಂದು ಕಾಡಿಗೆ ನಡೆದರು. ಹೊತ್ತು ಮುಳುಗುವ ತನಕ ಬಸರೂರಿನ ಒಂದೂ ಮನೆ ಬಿಡದೆ ಕಾಂತಣಾಳ್ವ ಭಿಕ್ಷೆಗೆ ತಿರುಗಿದ. ಒಂದು ಮುಷ್ಟಿ ಭಿಕ್ಷೆ ಸಿಗಲಿಲ್ಲ. ತಾನು ಮಾಡಿದ ಕರ್ಮವನ್ನು ತಾನೇ ತೊಳೆಯುವುದಾಗಿ ಹೇಳಿದ. ತಾಯಿ ಸಂಕರು ಪೂಂಜೆದಿಯಲ್ಲಿ ಹೇಳಿ ಮರುದಿನ ಸತ್ಯನಾಪುರದಲ್ಲಿ ಮನೆ ಮನೆ ತೀರಿದ. ಅಲ್ಲಿಯೂ ಒಂದು ಮುಷ್ಟಿ ಅಕ್ಕಿ ಸಿಗಲಿಲ್ಲ. ಕೊಟ್ಟರಾಡಿಯಲ್ಲಾದರೂ ಒಂದು ಮುಷ್ಟಿ ಭಿಕ್ಷೆ ಸಿಗುತ್ತದೋ ಎಂದು ನೋಡುವ ಸಲುವಾಗಿ ಕೊರಳಿಗೆ ನೊಗ ನೇಗಿಲು ಹಾಕಿಕೊಂಡ ಹೋದ. ಕೊಟ್ಟರಾಡಿಯ ಅರಮನೆಯ ಮುಂದೆ ನಿಂತಾಗ ಬಸರೂರಿನ ಕಾಂತಣಾಳ್ವನ ದಯನೀಯ ಸ್ಥಿತಿ ಕಂಡು ಕೊಡ್ಸರಾಳ್ವರಿಗೆ ಅಯ್ಯೋ ಅನ್ನಿಸಿತು. ನೊಗ ನೇಗಿಲನ್ನು ಬಿಸಾಡುವಂತೆ ಹೇಳಿದರು. ಬಸರೂರಿನ ಬಂಟ ಬಾರಗ ಕಾಂತಣಾಳ್ವನನ್ನು ತೂಗುಯ್ಯಾಲೆಯಲ್ಲಿ ಕುಳ್ಳಿರಿಸಿ ಕಷ್ಟ ಸುಖ ವಿಚಾರಿಸಿದರು. ಕುಡಿಯಲು ಹಾಲು ನೀರು ಕೊಡಿಸಿದರು. ಮೀಯಲು ಬಿಸಿನೀರು ಕಾಯಿಸಿದರು. ಊಟಕ್ಕೆ ಅಡುಗೆ ಸಿದ್ಧಮಾಡುವಂತೆ ಸಾಮುವನ್ನು ಕರೆದು ಹೇಳಿದರು.

ಕೊಟ್ಟರಾಡಿಯ ಮನೆಯಲ್ಲಿ ಕಾಂತಣಾಳ್ವ ಮಿಂದು ಶುದ್ಧವಾದನು. ಗಂಧ ಸಿಂಗಾರವಾದುನು. ತುಳಸಿ ಮಂಟಪದಲ್ಲಿ ಸೂರ್ಯಚಂದ್ರರನ್ನು ಕಂಡು ನಮಸ್ಕರಿಸಿದನು. ಕೊಡ್ಸರಾಳ್ವರು ಬಂದ ಅತಿಥಿಯನ್ನು ಭೋಜನಶಾಲೆಗೆ ಕರೆತಂದರು. ಸಾಮು ತನ್ನ ಕೈ ಹಿಡಿದ ಗಂಡ ಕೊಡ್ಸರಾಳ್ವನಿಗೂ ನೆಂಟ ಕಾಂತಣಾಳ್ವನಿಗೂ ಎಲೆ ಹಾಸಿದಳು. ಊಟ ಬಡಿಸಲು ಸವತಿ ಸಿರಿಯನ್ನು ಒತ್ತಾಯಿಸಿದಳು. ತನ್ನ ಒಡಲಿಗೆ ಮುಳ್ಳು ಒಡ್ಡಿದ ಕಾಂತಣಾಳ್ವನಿಗೆ ತಾನು ಯಾವ ಮುಖದಲ್ಲಿ ಅನ್ನ ಬಡಿಸಲಿ, ಉಪಚಾರ ಮಾಡಲಿ ಎಂದಳು ಸಿರಿ. ಕೊಡ್ಸರಾಳ್ವರ ಸಿಟ್ಟಿಗೆ ಮನೀದು ಸಿರಿ, ಸಾಮುನ ಜತೆ ಬಂದು ಅತಿಥಿಗಳಿಗೆ ಊಟ ಬಡಿಸಿದಳು. ಊಟ ತೀರಿತು. ಅತಿಥಿಗಳು ತೂಗುಯ್ಯಾಲೆಯಲ್ಲಿ ಕುಳಿತರು. ಕಾಂತಣಾಳ್ವ ಅದು ಇದು ಮಾತನಾಡುತ್ತಾ ಸಿರಿಯಿಂದ ನನಗೊಂದು ವರಕೊಡಿಸಬೇಕೆಂದೂ ತನ್ನನ್ನು ಬಡತನದ ದುಃಸ್ಥಿತಿಯಿಂದ ಪಾರು ಮಾಡಬೇಕೆಂದೂ ಕೇಳಿಕೊಂಡ. ತನ್ನ ಒಡಲಿಗೆ ಬೆಂಕಿಯಿಟ್ಟ ಕಾಂತಣಾಳ್ವನಿಗೆ ವರ ನೀಡಲು ಸಿರಿಗೆ ಮನಸ್ಸು ಒಪ್ಪಲಿಲ್ಲ. ಬುಡುದಾರೆಯ ಗಂಡ ಕೊಡ್ಸರಾಳ್ವನ ಒತ್ತಾಯದಂತೆ ಮುಸುಕು ಹಾಕಿಕೊಂಡು ಹೊರಬಂದ ಸಿರಿ ಕಾಂತಣಾಳ್ವನನ್ನು ಬಗೆಬಗೆಯಲ್ಲಿ ಹಂಗಿಸಿದಳು. ಆದರೂ ಕೊನೆಗೆ ಬಸರೂರಿನ ಅರಮನೆಗೆ ಹಿಂದಿನ ಸುಖಸಮೃದ್ಧಿ ಬರಲೆಂದು ಮಣ್ಣುಮುಟ್ಟಿ ಹೆಣ್ಣು ಶಾಪ (ವರ) ನೀಡಿದಳು. ಕಾಂತಣಾಳ್ವ ಬಸರೂರು ಅರಮನೆ ತಲಪುವುಷ್ಟರಲ್ಲಿ ಮಾಲೋಕಕ್ಕೆ ನೀಡುವಷ್ಟು ಸಂಪತ್ತು ಹೆಚ್ಚಿತು. ಹಟ್ಟಿಯಲ್ಲಿ ಜಾನುವಾರು ತುಂಬಿತ್ತು.

ಕೊಟ್ಟರಾಡಿಯ ಅರಮನೆಯಲ್ಲಿ ಸಿರಿ ಮತ್ತು ಸಾಮು ಅನ್ಯೋನ್ಯವಾಗಿದ್ದರು. ಅಷ್ಟರಲ್ಲಿ ಸಿರಿಗೆ ನೀರು ನಿಂತಿತು. ತಿಂಗಳು ಏಳು ತುಂಬಿ ಎಂಟು ಬಂದಿತು. ಒಂಬತ್ತನೆ ತಿಂಗಳೂ ತುಂಬಿತು. ಅಂಗರಜಾಲ ಬರ್ಕೆಯಿಂದ ಬಂದ ಬಾಮು ಕಿಲ್ಲಾಲರು ಸಿರಿಯನ್ನು ಸಮ್ಮಾನದ ಊಟಕ್ಕೆ ಆಮಂತ್ರಿಸಿದರು. ಅಕ್ಕ ಸಾಮು ಬಸುರಿ ತಂಗಿಯನ್ನು ಅಲಂಕರಿಸಿ ಅಂಗರಜಾಲ ಬರ್ಕೆಗೆ ಕರೆದೊಯ್ದಳು. ಸಾಮುವೇ ಮುಂದೆ ನಿಂತು ಸಮ್ಮಾನದ ಊಟಕ್ಕೆ ಎಲ್ಲ ಸಿದ್ಧತೆ ನಡೆಸಿದಳು. ಬಸುರಿ ಸಿರಿಗೆ ಸಮ್ಮಾನದ ಊಟವಾಯಿತು. ಸಾಮು ಸಿರಿಯನ್ನು ಕರೆದುಕೊಂಡು ಕೊಟ್ಟರಾಡಿಗೆ ಹೊರಟಳು. ದಾರಿ ಸಾಗುತ್ತಾ ಬರುತ್ತಾ ಒಂದು ನೀರ ತೋಡಿನ ಸಮೀಪಕ್ಕೆ ಬಂದರು. ಸಿರಿಗೆ ಹೆರಿಗೆಯ ಬೇನೆ ಕಾಣಿಸಿಕೊಂಡಿತು. ಬಿಳಿಯ ಸಿರಿಹೊನ್ನೆಯ ಮರದಡಿ ಬಂದು ಸಿರಿ-ಸಾಮು ಕುಳಿತರು. ಮೂಡುದಿಕ್ಕಿಗೆ ಹೋದ ಮರದ ಗೆಲ್ಲಿಗೆ ಕೈ ನೀಡಿ ಸಿರಿ ಬೆರ್ಮರನ್ನು ಸ್ತುತಿ ಮಾಡಿದಳು. ಮುಕ್ಕಾಲು ಮೂರು ಗಳಿಗೆಯಲ್ಲಿ ಸಿರಿಗೆ ಸುಖಪ್ರಸವ ಆಯಿತು. ಸಿರಿ ಅಜ್ಜ ಬೆರ್ಮುಮಾಲವರನ್ನು ಸ್ತುತಿಸಿ ಎಳೆಯ ಅಡಿಕೆ ಮರವನ್ನು ಸೃಷ್ಟಿ ಮಾಡಿದಳು. ಆ ಮರದಿಂದ ಒಂದು ಹಾಳೆ ಕೆಳಗೆ ಬಿದ್ದಿತು. ಸಾಮು ಆ ಹಾಳೆಯಲ್ಲಿ ಮಗುವನ್ನು ಮಲಗಿಸಿದಳು. ಸಿರಿಯ ಕೋರಿಕೆಯಂತೆ ನೀರ ಕೆರೆಯೊಂದು ಸೃಷ್ಟಿಯಾಯಿತು. ಆ ನೀರಲ್ಲಿ ಸಿರಿ ಕೈ ಕಾಲು ತೊಳೆದುಕೊಂಡಳು. ಅಕ್ಕ ಸಾಮುವನ್ನು ಕರೆದು “ಬರುವಾಗ ನಾವಿಬ್ಬರು ಜೊತೆಯಾಗಿ ಬಂದೆವು. ಈಗ ಹಿಂದಿರುಗುವಾಗ ನೀವಿಬ್ಬರೇ ಮರಳುವ ಕಾಲ ಬಂದಿದೆ. ಮಗುವಿಗೆ ಸೊನ್ನೆ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕಿ ಸಲಹಬೇಕು. ನಾನು ಬೊಳ್ಯೊಟ್ಟಿಗೆ ಮಾಯದಲ್ಲಿ ಹೋಗಬೇಕು. ಅಲ್ಲಿ ನನಗೆ ಮಗ ಕುಮಾರ ದಲ್ಯ ಹಾಕಿಟ್ಟಿದ್ದಾನೆ. ನಾನು ದಲ್ಯ ಸೇರುವ ದಿನ ಸಮೀಪಿಸಿದೆ” ಎಂದು ಹೇಳಿ ಮಗುವನ್ನು ಸಾಮುವಿನ ಕೈಗೆ ನೀಡಿದಳು. ಸಿರಿ ಬೊಳ್ಯೊಟ್ಟಿನ ಬಿಳಿ ಬುಗರಿ ಮರದ ಬುಡದಲ್ಲಿ ಕುಮಾರನ ಬಲ ಬದಿಯ ದಲ್ಯದಲ್ಲಿ ಓಲಗವಾದಳು.

ಸಾಮು ಹಾಳೆಯಲ್ಲಿ ಮಲಗಿಸಿದ ಮಗುವಿನೊಂದಿಗೆ ಕೊಟ್ಟರಾಡಿಯ ಮನೆ ತಲಪಿದಳು. ಕಣ್ಣೀರು ಸುರಿಸುತ್ತಾ ಸಿರಿ ಬದುಕನ್ನು ಅಂತ್ಯಗೊಳಿಸಿದುದನ್ನು ಹೇಳಿ ಮಗುವನ್ನು ಗಂಡನ ಕೈಗೆ ಒಪ್ಪಿಸಿದಳು. ತಾನು ಬೊಳ್ಯೊಟ್ಟಿನ ಬಿಳಿ ಬುಗರಿ ಮರದ ಬುಡದಲ್ಲಿ ಮಾಯವಾದಳು.

ಹಾಲು ಹಸುಳೆಯನ್ನು ಹೇಗೆ ಸಾಕಿ ಸಲಹಲೆಂದು ಕೊಡ್ಸರಾಳ್ವರು ಚಿಂತಿಸತೊಡಗಿದರು. ಕಾನಬೊಟ್ಟಿನ ದುರ್ಗಲ್ಲಾಯ ಪೆರ್ಗಡೆಯವರನ್ನು ಕಂಡು ಹಾಳೆ ಮಗುವನ್ನು ಅವರಿಗೆ ಒಪ್ಪಿಸಿ ಬಂದನು. ಕಾನಬೊಟ್ಟಿನ ಅಜ್ಜರು ಮಗುವನ್ನು ತುಂಬ ಪ್ರೀತಿಯಿಂದ ಮುದ್ದಾಗಿ ಸಲಹಿದರು. ಮಗು ಸೊನ್ನೆ ‘ಬೆಂಕಿ ನೀರಿನಂತೆ’ ನೋಡು ನೋಡುತ್ತಿದ್ದಂತೆ ಬೆಳೆಯತೊಡಗಿತು.

ಪಕ್ಕದ ಊರು ಮಡಕೆದರಯ. ಅಲ್ಲಿನ ಬ್ರಾಹ್ಮಣತಿ ತುಂಬಿದ ಬಸುರಿ. ಗಂಡನನ್ನು ಕರೆದು “ನಮ್ಮ ತೋಟದ ಹಲಸಿನ ಮರದಿಂದ ಚೆನ್ನಾಗಿ ಬೆಳೆದ ಹಲಸಿನ ಹಣ್ಣು ಕಿತ್ತು ತರುತ್ತೀರಾ? ನನಗೆ ಹಲಸಿನ ಹಣ್ಣಿನ ಕಡುಬು ತಿನ್ನುವ ಬಯಕೆಯಾಗಿದೆ’ ಎಂದಳು. ಅಂತೆಯೇ ಹಲಸಿನ ಹಣ್ಣಿನ ಕಡುಬಿಗೆ ಎಲ್ಲ ಸಿದ್ಧತೆಯನ್ನು ಮಾಡಿದಳು. ಕಡುಬು ಬೇಯಿಸಲು ತಂದೇವು ಮರದ ಎಲೆ ತರಲು ಬಸುರಿ ಹೆಂಗಸೇ ಪಕ್ಕದ ಕಾಡಿಗೆ ಹೋದಳು. ಮರದ ಬುಡದಲ್ಲಿ ಬಾಯಿ ತೆರೆದು ಒಂದು ಹುಲಿ ಕುಳಿತಿತ್ತು. “ಹುಟ್ಟಿದ ಮಗು ಗಂಡಾದರೆ ನಿನಗಾಗಲಿ, ಹೆಣ್ಣಾದರೆ ನನಗೊಪ್ಪಿಸಬೇಕು” ಎಂದಿತು ಹುಲಿ. ‘ಆಗಲಿ’ ಎಂದಳು ಬ್ರಾಹ್ಮಣತಿ. ಹುಲಿ ಮರದ ಬುಡದಿಂದ ಪಂಜರದ ಕಡೆಗೆ ಸರಿಯಿತು. ಬ್ರಾಹ್ಮಣ ಹೆಂಗಸು ತಂದೇವು ಎಲೆ ತಂದು ಕಡುಬು ಬೇಯಿಸಿ ತಿಂದಳು. ಮರುದಿನ ಬ್ರಾಹ್ಮಣ ಹೆಂಗಸಿಗೆ ಹೆರಿಗೆಯ ಬೇನೆ ಕಾಣಿಸಿತು. ಹೆಣ್ಣು ಮಗುವಿಗೆ ಜನನವಿತ್ತಳು. ಮಗುವನ್ನು ‘ಕೆಳಗಿಟ್ಟರೆ ಇರುವೆ ಒಯ್ದೀತು, ಮೇಲೆ ಇಟ್ಟರೆ ಕಾಗೆ ಒಯ್ದೀತು’ ಎಂಬಂತೆ ಪ್ರೀತಿಯಿಂದ ಸಾಕಿದಳು. ವರ್ಷ ಕಳೆಯಿತು. ಮಗು ಮನೆಯಂಗಳದಲ್ಲಿ ಓಡಾಡುತ್ತಾ ಆಟವಾಡುತ್ತಾ ಇದ್ದಾಗ ಪಂಜರದ ಹುಲಿ ಬಂದು ಎತ್ತಿ ಕೊಂಡೊಯ್ದಿತು. ಗಾಬರಿಯಿಂದ ಎಲ್ಲರೂ ಬೊಬ್ಬಿಟ್ಟರು. ಹುಲಿ ಹಿಡಿದ ಮಗು ಸಿಗಲೇ ಇಲ್ಲ.