ಸತ್ಯನಾಪುರದ ಅರಮನೆ, ಅಜ್ಜ ಆರಿಯ ಬನ್ನಾರ ಬೆರ್ಮಮಾಲವರು ಪಟ್ಟವಾಳಿಕೊಂಡಿದ್ದಾರೆ. ಗದ್ದೆ ಬೇಸಾಯ ಮಾಡುತ್ತಾ ಹಸಿದವನ ಹೊಟ್ಟೆ ನೋಡುತ್ತಾ ಮಾಸಿದವನ ತಲೆ ನೋಡುತ್ತಾ ದಾನಧರ್ಮ ನಿರತರಾಗಿದ್ದಾರೆ. ಅಜ್ಜರಿಗೆ ಅರುವತ್ತು ದಾಟಿದೆ. ಎಪ್ಪತ್ತು ಬಂದಿದೆ. ಕಾಲು ಕಬ್ಬಿಣದ ಊರುಗೋಲಂತಾಗಿದೆ. ಕೈಗಳು ಸುಟ್ಟುಗದ ಹಿಡಿಯಂತಾಗಿವೆ. ತಲೆಕೂದಲು ಇಟ್ಟೇವಿನ ಹೂವಂತಾಗಿದೆ. ಮೈಯ ನರಗಳು ಅಡ್ಕೆ ಬಿಳಲಿನಂತಾಗಿವೆ.

ಅದೊಂದು ದಿನ. ಸತ್ಯನಾಪುರದ ಅರಮನೆಯ ಚಾಕರಿಯ ಹೆಣ್ಣು ದಾರುವನ್ನು ಅಜ್ಜ ಕರೆದರು. ಒಂದು ಕರೆತಕ್ಕೆ ಎರಡು ಬಾರಿ ಓಗೊಡುತ್ತಾ ಓಡಿ ಓಡಿ ಬಂದಳು. “ಸತ್ಯನಾಪುರದ ನಮ್ಮ ಅರಮನೆಗೆ ಬಹುಬಡತನ ಬಂದಿತಲ್ಲ! ಕಂಡಕಂಡವರಿಗೆ ಎಣ್ಣೆದಾನ, ಗೋವುದಾನ, ವಸ್ತ್ರದಾನ, ಗೋತ್ರದಾನ ಮಾಡಿ ಮಾಡಿ ಸೋತು ಹೋಗಿದ್ದೇನೆ ಮಗಳೇ. ಇಂದಿನಿಂದ ಧರ್ಮದ ಆನೆಬಾಗಿಲು ಮುಚ್ಚಿಬಿಡು. ಕರ್ಮದ ಕಿರುಬಾಗಿಲು ತೆರೆದಿತು. ಬೇಡಿ ಬಂದವರಿಗೆ ಇಲ್ಲ ಎನ್ನಬೇಡ ಮಗಳೇ” ಎಂದು ಅಜ್ಜ ಬೆರ್ಮುಮಾಲವರು ಹೇಳಿದರು.

ಅಜ್ಜರಿಗೀಗ ಎದ್ದು ಓಡಾಡಲು ಆಗುತ್ತಿಲ್ಲ. ತೆಂಕಣ ಮನೆಯ ಹಗ್ಗ ಇಳಿಸಿದ ಬೆಳ್ಳಿಮಾಡಕ್ಕೆ ಬಂದರು. ಕತ್ತಲೆಯ ಕರಿಯ ಕೋಣೆಯನ್ನು ಹೊಕ್ಕರು. ಹತ್ತಿಯ ಹಾಸುಗೆ ಬಿಟ್ಟರು. ಮಣ್ಣ ಹಾಸು ಹಿಡಿದರು. ಹೊಟ್ಟೆ ಅಡಿಯಾಗಿ ಮಲಗಿದರು. ಕಣ್ಣಲ್ಲಿ ಕಡು ದುಃಖ ಇಳಿಸಿದರು. ಹಲವು ದಿನಗಳು ಕಳೆದುವು. ಅಜ್ಜ ಮೈಯ ಕೊಳಗೆ ಮೀಯಲಿಲ್ಲ. ಹೊಟ್ಟೆಯ ಹಸಿವೆಗೆ ಉಣ್ಣಲಿಲ್ಲ. ಕಡೆಗಣ್ಣಲ್ಲಿ ಕುಡಿದುಃಖ ಸುರಿಸಿದರು. ಅಜ್ಜರ ಕಣ್ಣೀರು ಕುಂಕುಮದ ಹನಿಹನೀರಾಗಿ ಹರಿಯಿತು. ಬಡಗಣ ಲೋಕ ಲಂಕೆ ಲೋಕನಾಡಿಗೆ ಬಂದಿಳಿಯಿತು. ಬೆರ್ಮಲೋಕದ ಬೆರ್ಮರ ಕಾಲ ಉಂಗುಟಕ್ಕೆ ಕೆಂಡದ ಮಳೆಯಾಗಿ ಸುರಿಯಿತು. ಬೆರ್ಮರು ಇದು ಯಾರು ಇಳಿಬಿಟ್ಟ ಕಣ್ಣೀರು ಎಂದು ಚಿಂತಿಸಿದರು. ಸತ್ಯನಾಪುರದ ಬೆರ್ಮುಮಾಲವರದು ಎಂಬುದು ಅರಿವಿಗೆ ಬಂದಿತು. ಅಜ್ಜರಿಗೆ ಬಂದ ಇಳಿಗಾಲದ ದುಃಸ್ಥಿತಿ ಗಮನಕ್ಕೆ ಬಂದಿತು. ಬೆರ್ಮುಮಾಲವನನ್ನು ಕಂಡು ಅವನ ಸುಖದುಃಖ ವಿಚಾರಿಸಬೇಕೆಂದು ಸಂಕಲ್ಪಿಸಿಕೊಂಡರು. ನಾಲ್ಕು ಮನೆ ಸುತ್ತಿ ತಿರಿದುಣ್ಣುವ ಬಡಬ್ರಾಹ್ಮಣನ ರೂಪು ತಳೆದರು. ಪಟ್ಟೆಯ ಜೋಳಿಗೆ, ಕರಿಯ ಕಬ್ಬಿನ ಊರುಗೋಲು, ಸೋರೆಕಾಯಿಯ ಭಿಕ್ಷಾಪಾತ್ರೆ, ಕಾಲಿಗೆ ಗೆಜ್ಜೆ, ಕೈಗೆ ತಾಳತಂಬೂರಿ ಹಿಡಿದು ಬಾಯಲ್ಲಿ ನಾರಾಯಣ ಪದ ಹಾಡುತ್ತ ಮಾಯಾರೂಪದ ಬೆರ್ಮರು ಸತ್ಯನಾಪುರದ ಅರಮನೆಯ ನಡುಅಂಗಳದ ತುಳಸಿ ಮಂಟಪದೆದುರು ಕಾಣಿಸಿಕೊಂಡರು. ಒಂದೇ ಉಸಿರಿಗೆ ಇಪ್ಪತ್ತನಾಲ್ಕು ನಾರಾಯಣ ಪದ ಹಾಡಿದರು. ಕುಣಿದು ನಾಲ್ಕಾಟವಾಡಿದರು. ಇದು ದೂರದ ಏಳರೆಯ ಯಮಗುಂಡದೊಳಗಿದ್ದ ಅಜ್ಜರಿಗೆ ಕೇಳಿಸಿತು. ಚಾಕರಿಯ ಹೆಣ್ಣು ದಾರುವನ್ನು ಕರೆದರು. ಬಂದವರಿಗೆ ಪಡಿಭಿಕ್ಷೆ ನೀಡುವಂತೆ ಹೇಳಿದರು. ದಾರು ಕಂಚಿನ ಕೈಮರಿಗೆ ಹಿಡಿದಳು. ಒಂದು ಬಳ್ಳ ಅಕ್ಕಿ ಸುರಿದಳು. ಒಂದು ತೆಂಗಿನ ಕಾಯಿ, ಸೌತೆಕಾಯಿ ಅದರ ಮೇಲೆ ಇರಿಸಿದಳು. ಅರಮನೆಯ ಚಿಕ್ಕ ಚಾವಡಿ ಚದುರಮಂಟಪಕ್ಕೆ ದಾರು ಬಂದಳು. ಬಂಗಾರದ ಮೆಟ್ಟಿಲು ಇಳಿದಳು. ನಡುವಂಗಳಕ್ಕೆ ಬಂದಳು. ನಾಲ್ಕು ಮನೆ ತಿರಿದು ಮೂರು ಮನೆಯ ಭಿಕ್ಷೆ ಹಿಡಿಯುವ ಬ್ರಾಹ್ಮಣ ಕುಣಿದು ಪದ ಹೇಳುತ್ತಿದ್ದಾರೆ. ದಾರು ಸಮೀಪಕ್ಕೆ ಬಂದು ಪಡಿಭಿಕ್ಷೆ ಹಿಡಿಯುವಂತೆ ಹೇಳಿದಳು. ಬ್ರಾಹ್ಮಣ ಹಾಡುತ್ತಲೇ ಇದ್ದರು, ಕುಣಿಯುತ್ತಲೇ ಇದ್ದರು. ಭಿಕ್ಷೆ ಹಿಡಿಯುವಂತೆ ಮತ್ತೆಮತ್ತೆ ಒತ್ತಾಯಿಸಿದಳು. ಬ್ರಾಹ್ಮಣ ಮುಖಮುರಿದು ಏಳೇಳು ಲೋಕದ ಕೋಪ ಕೋಪಿಸಿದರು. “ಆರಿಯ ಬನ್ನಾಯ ಬೆರ್ಮಮಾಲವರೇ ಬರಬೇಕು. ಅವರು ಕೈಯಾರೆ ಭಿಕ್ಷೆ ನೀಡಿ ನನ್ನ ಜೋಳಿಗೆ ತುಂಬಬೇಕು. ಅವರ ಸುಖಕಷ್ಟವನ್ನು ನಾನು ವಿಚಾರಿಸಬೇಕು. ನನ್ನ ಸುಖಕಷ್ಟ ಅವರಿಗೆ ಹೇಳಬೇಕು. ಚಾಕರಿಯ ಹೆಣ್ಣು ನೀಡಿದ ಭಿಕ್ಷೆ ಹಿಡಿಯಲಾರೆ” ಎಂದು ಅವರು.

ದಾರು ಓಡೋಡುತ್ತಾ ಅಜ್ಜರಿದ್ದ ಕತ್ತಲೆಯ ಕೋಣೆಗೆ ಬಂದಳು. ನೆಲದಲ್ಲಿ ಮಲಗಿದ್ದ ಅಜ್ಜರನ್ನು ಕರೆದೆಬ್ಬಿಸಿದಳು. ಅಜ್ಜರು ನಡುಮಧ್ಯಾಹ್ನ ಬಂದ ಭಿಕ್ಷುಕನನ್ನು ಶಪಿಸಿದರು. ಆಳುದ್ದದ ಕೋಲು ಹಿಡಿದರು. ದಾರು ಮುಂದೆ, ಅಜ್ಜರು ಹಿಂದೆ ತೂಗುತ್ತಾ ತೊನೆಯುತ್ತಾ ಬಾಗುತ್ತಾ ಬಂದರು. ನಡುಚಾವಡಿಗೆ ತಲಪಿದರು. ಚಾಕರಿಯ ಹೆಣ್ಣು ನೀಡಿದ ಪಡಿಭಿಕ್ಷೆಯನ್ನು ನಡುಗುವ ಕೈಯಲ್ಲಿ ಹಿಡಿದರು. ನಡುವಂಗಳ ಸೇರಿದರು. ಭಿಕ್ಷೆಯನ್ನು ಕೈ ಎತ್ತಿ ಹಿಡಿದರು. ಸ್ವೀಕರಿಸುವಂತೆ ಬ್ರಾಹ್ಮಣರನ್ನು ವಿನಂತಿಸಿಕೊಂಡರು. ಬಂದ ಬ್ರಾಹ್ಮಣ ಅಜ್ಜರ ಸುಖಕಷ್ಟ ವಿಚಾರಿಸಿದರು. ಅಜ್ಜರು ನಿರಾಶೆಯಿಂದಲೇ ಮಾತಿಗಾರಂಭಿಸಿದರು. ಆಗಿ ಹೋದ ವೈಭವದ ದಿನಗಳನ್ನು ನೆನಪಿಸಿಕೊಂಡರು. ತಾನು ಮಾಡಿದ ದಾನ-ಧರ್ಮಗಳನ್ನು ಹೇಳಿಕೊಂಡರು. ಆಗ ಬ್ರಾಹ್ಮಣ “ಬೆರ್ಮುಮಾಲವಾ ನಿನ್ನ ಆದಿ ಮೂಲಸ್ಥಾನ ಎಲ್ಲಿ ? ನಿನ್ನ ಕುಲದೇವರು ಯಾರು ?” ಎಂದು ಕೇಳಿದರು. “ನನಗೆ ಯಾವುದೊಂದೂ ತಿಳಿಯದು” ಎಂದರು ಬೆರ್ಮುಮಾಲವ. “ನಿನ್ನ ಮೂಲಸ್ಥಾನ ಲಂಕೆಲೋಕನಾಡು. ಅಲ್ಲಿನ ಬೆರ್ಮಸ್ಥಾನ (ತು.ಆಲಡೆ) ಇಂದು ಕುಸಿದು ಬಿದ್ದಿದೆ. ಸುತ್ತಲೂ ಕಾಡು ಬೆಳೆದಿದೆ. ಅದನ್ನು ಜೀರ್ಣೋದ್ಧಾರ ಮಾಡಬೇಕು. ಆಗ ನಿನಗೆ ಬೆರ್ಮದೇವರು ಸಂತಾನ ಫಲ ನೀಡುವರು” ಎಂದರು.

ಬ್ರಾಹ್ಮಣರಾಡಿದ ಮಾತನ್ನು ಕೇಳಿದ ಅಜ್ಜರು ಏಳು ಏಳೂವರೆ ವಯಸ್ಸಿನ ಜವ್ವನಿಗರಾದರು. ಹರ್ಷದ ದನಿ ಬಂದಿತು. ಮುತ್ತಿನ ನಗು ಕಾಣಿಸಿತು. ಇಂದಿಗೆ ಎಂಟು ದಿನಗಳೊಳಗೆ ಲಂಕೆಲೋಕ ನಾಡಿನ ಬೆರ್ಮರ ಗುಡಿಯನ್ನು ಜೀರ್ಣೋದ್ಧಾರ ಮಾಡುವುದಾಗಿ ಮಾತುಕೊಟ್ಟರು. ಅಜ್ಜರು ನೀಡಿದ ಪಡಿಯನ್ನು ಬ್ರಾಹ್ಮಣ ತನ್ನ ಪಟ್ಟೆಯ ಜೋಳಿಗೆಗೆ ಸುರಿದುಕೊಂಡರು. ಅಷ್ಟರಲ್ಲಿ ಆ ಬ್ರಾಹ್ಮಣ ಕಣ್ಣಿಂದ ಮಾಯವಾದರು. ಬೆರ್ಮರೇ ಬ್ರಾಹ್ಮಣ ವೇಷದಲ್ಲಿ ಬಂದಿರಬೇಕೆಂದು ಅಜ್ಜರು ದಾರುವಲ್ಲಿ ಹೇಳಿದರು.

ಅಂದಿನ ದಿನ ಕಳೆಯಿತು. ಮರುದಿನ ಹೊತ್ತು ಉದಯಕ್ಕೆ ಅಜ್ಜರು ಊರೊಳಗಿನ ತನ್ನ ಒಕ್ಕಲು ಮಕ್ಕಳನ್ನು ಕರೆಸಿದರು. ಕೈಯಲ್ಲಿ ಹಾರೆ ಪಿಕ್ಕಾಸಿ ಹಿಡಿಸಿದರು. ಮಂದಿ ಮಾರ್ಬಲ ಸೇರಿಸಿಕೊಂಡು ಸರ್ವ ಬಿರುದಾವಳಿಗಳೊಂದಿಗೆ ಲಂಕೆಲೋಕನಾಡನ್ನು ಸಮೀಪಿಸಿದರು. ಅಳಿದು ಬಿದ್ದಿದ್ದ ಬೆರ್ಮಸ್ಥಾನದ ಸುತ್ತೆಲ್ಲ ಬೆಳೆದಿದ್ದ ಕಾಡು ಕಡಿದರು, ಪೊದೆ ಸವರಿದರು. ಕುಸಿದಿದ್ದ ಗುಡಿಯನ್ನು ಹೊಸದಾಗಿ ನಿರ್ಮಿಸಿದರು. ದೇವರಿಗೆ ದೇವಸ್ಥಾನ, ಬೆರ್ಮರಿಗೆ ಗುಂಡ, ಭೂತಗಳಿಗೆ ಬದಿಮಾಡವಾಯಿತು. ಗುಂಡದ ಎದುರು ಕೊಡಿಮರ ಎದ್ದುನಿಂತಿತು. ಹೋಮದ ಹೊಂಡದ ರಚನೆಯಾಯಿತು. ಬ್ರಹ್ಮಕಲಶಕ್ಕೆ ಅಜ್ಜರು ದಿನಮಾನ ನಿಶ್ಚಯಿಸಿದರು. ನಾಲ್ಕು ಊರು ನಾಲ್ಕು ದೇಶಕ್ಕೆ ಅಜ್ಜರು ಡಂಗುರ ಸಾರಿಸಿದರು. ಲಂಕೆಲೋಕನಾಡಿನಲ್ಲಿ ಗುಲ್ಲೇ ಗುಲ್ಲು. ಜನಸಾಗರವೇ ಬಂದು ನೆರೆಯಿತು. ಬಂದ ಬಂದವರಿಗೆಲ್ಲ ಊಟ ಉಪಚಾರವಾಯಿತು. ಕೊಡಿಮರದ ಬುಡದಲ್ಲಿ ಅಜ್ಜರು ಕೈಮುಗಿದು ಹಚ್ಚಡವನ್ನು ಹರಹಿ ನಿಂತರು. ಅಷ್ಟರಲ್ಲಿ ಅವರ ಹಚ್ಚಡದೊಳಗೆ ಹಿಂಗಾರದ ಹೂವಿನೊಂದಿಗೆ ಗಂಧದ ಗುಳಿಗೆ ಬಂದು ಬಿದ್ದಿತು. ಬಿದ್ದುದೇ ತಡ ಹಿಂಗಾರದ ಹಾಳೆ ಒಡೆದು ಅಲ್ಲಿ ಅಳುವ ಹಸುಗೂಸು ಕಾಣಿಸಿತು. ಅಜ್ಜರಿಗೆ ಹರ್ಷದ ಮೈ, ಮುತ್ತಿನ ನಗು. ಹರಕೆಯ ಕೂಸನ್ನು ಎತ್ತಿ ಆಲಿಂಗಿಸಿಕೊಂಡರು. ಸಂಭ್ರಮ ಸಡಗರದೊಂದಿಗೆ ಅಜ್ಜರು ಮಗುವನ್ನು ಸತ್ಯನಾಪುರದ ಅರಮನೆಗೆ ಕರೆತಂದರು. ಮಗುವನ್ನು ಪ್ರೀತಿಯಿಂದ ದಾರುವಿನ ಕೈಗೊಪ್ಪಿಸಿದರು.

ನೆರೆಕರೆಯ ನಾಲ್ಕು ಮನೆಯ ಮುತ್ತೈದೆ ಹೆಂಗಸರನ್ನು ಅಜ್ಜ ಕರೆಸಿದರು. ಬೆಳ್ಳಿಮಾಡದಲ್ಲಿ ತೊಟ್ಟಿಲು ಕಟ್ಟಿ ಮಗುವನ್ನು ತೂಗಿದರು. ಊರ ಪರವೂರ ಜನ ಮುಂದೆ ಕರೆಸಿ ಅಜ್ಜರು ಮಗುವಿಗೆ ನಾಮಕರಣ ಮಾಡಿಸಿದರು. ಸತ್ಯಮಾಲೋಕಂದ ಸಿರಿ ಎಂದು ಕರೆದರು. ಮಗುವಿಗೆ ಒಂದು ತಿಂಗಳಾಗುವಷ್ಟರಲ್ಲಿ ಒಂದು ವರ್ಷದ ಬೆಳವಣಿಗೆ ಕಾಣಿಸಿತು. ಮೂರು ತಿಂಗಳ ಬಾಲೆ ಸಿರಿ ಏಳು ಏಳೂವರೆ ವರ್ಷದ ಹೆಣ್ಣಿನಂತೆ ಮೈತುಂಬಿಕೊಂಡಳು. ಸಿರಿ ಅರಳಿ ಬೆಳೆದಂತೆ ಇಡಿಯ ಸತ್ಯನಾಪುರವೇ ಅರಳಿತು.

ಬಸರೂರು ಸತ್ಯನಾಪುರಕ್ಕೆ ಸ್ವಲ್ಪದೂರದ ಊರು. ಆ ಅರಮನೆಗೆ ಒಡತಿ ಸಂಕರು ಪೂಂಜೆದಿ. ವಾವೆಯಲ್ಲಿ ಆಕೆ ಅಜ್ಜರಿಗೆ ಸಹೋದರಿಯಾಗಬೇಕು. ಸಂಕರು ಪೂಂಜೆದಿಯ ಮಗ ಕಾಂತಣ ಆಳ್ವ. ತನ್ನ ಮಗನಿಗೆ ಅಣ್ಣನ ಮಗಳು ಸಿರಿಯನ್ನು ಮದುವೆ ಮಾಡಿ ತರಬೇಕೆಂಬ ಆಲೋಚನೆ ಸಂಕರುವಿನ ಮನಸ್ಸಿನಲ್ಲಿ ಮೊಳೆಯಿತು. ಸತ್ಯದ ಕುವರಿ, ದೇವರ ಮಗಳನ್ನು ತನಗೆ ಕೊಟ್ಟಾರೇ ಎಂಬ ಆತಂಕ ತಾಯಿ-ಮಗನಿಗೆ ಅಣ್ಣನನ್ನು ಕೇಳಿ ಮದುವೆ ನಿರ್ಧರಿಸಿಯೇ ಬರುವುದಾಗಿ ಸಂಕರು ಪೂಂಜೆದಿ ಹೊರಟಳು. ಸತ್ಯನಾಪುರದ ಚಾವಡಿಯ ತೂಗುಯ್ಯಾಲೆಯಲ್ಲಿ ಅಜ್ಜ ಬೆರ್ಮು ಮಾಲವರು ಕುಳಿತಿದ್ದರು. ಚಾವಡಿಯೇರಿದ ಸಂಕರು ಪೂಂಜೆದಿ ಸಹೋದರ ಬೆರ್ಮುಮಾಲವರ ಪಕ್ಕದಲ್ಲೇ ಹೋಗಿ ಕುಳಿತಳು. ಅಜ್ಜರು ತಂಗಿಯ ಯೋಗಕ್ಷೇಮ ವಿಚಾರಿಸಿದರು. ಏಳು ಅರೆಯ ಯಮಗುಂಡದಿಂದ ಸತ್ಯಮಾಲೋಕದ ಸಿರಿ ಹೊರ ಬಂದಳು. ಅತ್ತೆಯವರಿಗೆ ಹಾಲು, ನೀರು ಕೈಯೇರಿ ನೀಡಿದಳು. ಅಣ್ಣ ತಂಗಿ ವೀಳೆಯದೆಲೆ, ಅಡಿಕೆ ಹೋಳು ಮೆದ್ದರು. ತಂಗಿ ಬಂದ ಕಾರಣವನ್ನು ಬೆರ್ಮುಮಾಲವರು ವಿಚಾರಿಸಿದರು. ತನಗಿರುವ ಒಬ್ಬನೇ ಮಗ ಕಾಂತಣ ಆಳ್ವನೊಂದಿಗೆ ಸಿರಿಯ ಮದುವೆ ಮಾಡಿಕೊಡಬೇಕೆಂದು ವಿನಂತಿಸಿಕೊಂಡಳು. ಸಿರಿಯ ಕುಲಗೋತ್ರ, ತನ್ನ ಮಗನ ಕುಲಗೋತ್ರದೊಂದಿಗೆ ಸರಿ ಹೋಗುವುದಾಗಿ ಹೇಳಿದರು. ಅಜ್ಜರು ತಂಗಿಯೆದುರು ಒಂದು ಶರ್ತವನ್ನು ಒಡ್ಡಿದರು. ಸತ್ಯನಾಪುರದ ಅರಮನೆಯಲ್ಲಿ ಗಂಡು ಸಂತಾನವಿಲ್ಲ. ತನ್ನ ಬಳಿಕ ತನ್ನ ಪಟ್ಟದುಂಗುರ ಧರಿಸಿ ತನ್ನ ಮಗಳ ಪರವಾಗಿ ಪಟ್ಟವಾಳುವುದಿದ್ದರೆ ಮಾತ್ರ ಕಾಂತಣ ಆಳ್ವನಿಗೆ ಸಿರಿಯೊಂದಿಗೆ ಮದುವೆಗೆ ಒಪ್ಪುವುದಾಗಿ ಹೇಳಿದರು. ಅದಕ್ಕೆ ಸಂಕರು ಪೂಂಜೆದಿ ಒಪ್ಪಿಗೆ ನೀಡಿದಳು. ತನ್ನ ಮಗ ಸತ್ಯನಾಪುರದ ಅರಮನೆಯ ರಕೋಲೆ ನೋಡಿಕೊಳ್ಳುವಂತೆ ಮಾಡುವೆ ಎಂದು ಮಾತುಕೊಟ್ಟಳು. ಅಜ್ಜರು ಸಂತೋಷದಿಂದ ಕಾಂತಣ ಆಳ್ವನೊಂದಿಗೆ ಸಿರಿಯ ಮದುವೆಗೆ ಒಪ್ಪಿದರು. ಬೇಗನೆ ನಿಶ್ಚಿತಾರ್ಥದ ಸಲುವಾಗಿ ನಾಲ್ಕು ಜನ ನೆಂಟರನ್ನು ಕಳುಹಿಸಿಕೊಡುವಂತೆ ಅಜ್ಜರು ತಂಗಿಗೆ ಹೇಳಿದರು. ಸಂಕರು ಪೂಂಜೆದಿ ಸಂತೋಷದಿಂದ ಒಪ್ಪಿ ಅರಮನೆ ಇಳಿದು ಹೊರಟಳು. ಹಾದಿಬೀದಿ ಹಾದುಕೊಂಡು, ಗದ್ದೆ ಗುಡ್ಡೆ ಹತ್ತಿ ಇಳಿದು ಸಂಕರು ಪೂಂಜೆದಿ ತನ್ನ ಬಸಲೂರು ಅರಮನೆ ಸೇರಿದಳು. ಕಾಂತಣ ಆಳ್ವ ತಾಯಿಯ ಬರವನ್ನು ನಿರೀಕ್ಷಿಸುತ್ತಾ, ತೂಗುಯ್ಯಾಲೆಯಲ್ಲಿ ಕುಳಿತಿದ್ದನು. ಸಂಕರು ಪೂಂಜೆದಿ ಬಂದವಳೇ ತಾನು ಹೆಣ್ಣು ನಿಶ್ಚಯಿಸಿ ಬಂದುದನ್ನು ಸವಿವರವಾಗಿ ಹೇಳಿದಳು. ನಾಲ್ಕು ಜನ ನೆಂಟರು ಸೇರಿ ಕೂಡಲೇ ವೀಳೆಯದೆಲೆ ಆಳ್ವನಿಗೆ ಖುಷಿಯೋ ಖುಷಿ. ಮರುದಿನ ಕಾಂತಣ ಆಳ್ವ ತನ್ನ ನಾಲ್ಕು ಜನ ಆಪ್ತರನ್ನು ಸೇರಿಸಿಕೊಂಡು ಸತ್ಯನಾಪುರಕ್ಕೆ ಹೊರಡಲು ಅಣಿಯಾದನು.

ಕಾಂತಣ ಆಳ್ವ ಸೊಗಸಾದ ಧೋತ್ರ ಉಟ್ಟುಕೊಂಡನು. ಚಿಗುರುಬಣ್ಣದ ಮುಂಡಾಸು ಬಿಗಿದುಕೊಂಡನು. ಕಣ್ಣಿಗೆ ಕಾಡಿಗೆ, ಎದೆಗೆ ಕೊಯಿಸೆರಗು ಧರಿಸಿಕೊಂಡನು. ಅಂಗೈಗೆ ಸರಪಳಿ, ಮುಂಗೈಗೆ ಬಳೆ ಧರಿಸಿಕೊಂಡನು. ಬಲಗೈಯ ನಡುಬೆರಳಿಗೆ ಮುತ್ತಿನ ಮುದ್ರೆಯುಂಗುರ ಇರಿಸಿ ಕೊಂಡನು. ಹೂವಿನ ಚಿತ್ತಾರದ ಅಂಗವಸ್ತ್ರದಲ್ಲಿ ಕವಳೆ ವೀಳೆಯದೆಲೆ, ಅಡಿಕೆ ಹೋಳು ಕಟ್ಟಿಕೊಂಡನು. ಈ ವಾರ ಅಲ್ಲ, ಮೇಲಿನ ವಾರದ ಆದಿತ್ಯವಾದ ಮದುವೆಗೆ ದಿನ ನಿರ್ಧರಿಸಿ ಬರುವಂತೆ ಸಂಕರು ಪೂಂಜೆದಿ ಮಗನಿಗೆ ತಾಕೀತು ಮಾಡಿದಳು.

ಆಪ್ತನೆಂಟರನ್ನು ಸೇರಿಸಿಕೊಂಡು ಮದುವೆ ನಿಶ್ಚಯಕ್ಕೆ ಕಾಂತಣ ಆಳ್ವ ಹೊರಟನು. ಕಾಲಿಗೆ ಮೆಟ್ಟಲಲ್ಲಿದ್ದ ಜೋಡು ಮೆಟ್ಟಿಕೊಂಡನು. ಪಾಗಾರಕ್ಕೆ ಆನಿಸಿ ಇಟ್ಟಿದ್ದ ಓಲೆಕೊಡೆಯನ್ನು ಹಿಡಿದುಕೊಂಡನು. ಹೋಗಿ ಬರುವುದಾಗಿ ಹೇಳಿ ಅರಮನೆ ಇಳಿದು ನಡೆದರು. ಬೀಸುವ ಗಾಳಿಗೆ ತಂಪಾದರು. ಒಂದು ಗುಡ್ಡೆ ಬೈಲು ದಾಟಿದರು. ಅದನ್ನು ಹಿಂದಕ್ಕೆ ಹಾಕಿದರು. ಏಳು ಹೆಜ್ಜೆ ಮುಂದೆ ಬಂದರು. ಮನುಷ್ಯರು ಹೋಗುವ ಮಾರ್ಗ, ಜಾನುವಾರು ನಡೆವ ಹೆದ್ದಾರಿ ಹಿಡಿದರು. ಅವನ್ನು ಹಿಂದೆ ಬಿಟ್ಟರು. ಸತ್ಯನಾಪುರದ ಕಂಬಳದ ಕಟ್ಟಹುಣಿ (ದೊಡ್ಡ ಬದು) ಏರಿ ನಡೆದರು. ಅರಮನೆಯ ಸುತ್ತು ಪಾಗಾರ ಪ್ರವೇಶಿಸಿದರು. ಆನೆ ಬಾಕಿಲನ್ನು ಥಟ್ಟನೆ ಹಾದು ಒಳಬಂದರು. ಸಾಲರಿ ಚಾವಡಿಯ ತೂಗುಯ್ಯಾಲೆಯಲ್ಲಿ ಕುಳಿತಿದ್ದ ಅಜ್ಜ ಬೆರ್ಮುಮಾಲವರಿಗೆ ಇದು ಕಣ್ಣಿಗೆ ಬಿದ್ದಿತು.

ಅಜ್ಜ ಬೆರ್ಮುಮಾಲವರು ಸತ್ಯನಾಪುರದ ಅರಮನೆ ಇಳಿದರು. ಹಾಕಿದ ಏತದೆಡೆಗೆ ತೋಡಿದ ಕೆರೆಯ ಬಳಿಗೆ ಬಂದರು. ಕವುಚಿ ಹಾಕಿದ್ದ ಕಲ್ಲ ಪಾತ್ರೆಯನ್ನು ಬೋರಲಾಗಿ ಹಾಕಿದರು. ಆಕಾಶದೆತ್ತರದ ಏತಕ್ಕೆ ಕೈಕೊಟ್ಟು ಬಗ್ಗಿಸಿದರು. ಒಂದು ಏತದ ಮರಿಗೆ ಪಾತಾಳದ ಹನಿನೀರನ್ನು ಮೇಲಕ್ಕೆತ್ತಿದರು. ಕಲ್ಲಮರಿಗೆಗೆ ಸುರಿದರು. ಕಂಚಿನ ನೀರು ತೋಡಿ ಬಂದ ನೆಂಟರಿಗೆ ನೀರಿತ್ತರು. ಬಸರೂರಿಂದ ಬಂದ ನೆಂಟರು ತಮ್ಮ ಕಾಲಿನ, ಕೈಯ ಧೂಳನ್ನು ನೀರೆರೆದು ತೊಳೆದುಕೊಂಡರು. ಮುಖದ ‘ಮುತ್ತಿನ ಬೆವರನ್ನು’ ಕಳೆದರು. ಎದೆಯ ‘ಯಮಧೂಳನ್ನು’ ನಿವಾರಿಸಿಕೊಂಡರು. ಅಜ್ಜರು ಸತ್ಯನಾಪುರದ ಅರಮನೆಗೆ ಬಂದ ಅತಿಥಿಗಳನ್ನು ಕರೆತಂದರು. ಚಾವಡಿಯಲ್ಲಿ ಓಲೆಚಾಪೆ ಹಾಕಿ ಬಂದವರನ್ನು ಕುಳ್ಳಿರಿಸಿದರು. ಬಂದು ಅತಿಥಿಗಳಿಗೆ ಹಾಲು ನೀರು ಕೊಡು ಎಂದು ಚಾಕರಿಯ ಹೆಣ್ಣು ದಾರುವನ್ನು ಕರೆದು ಹೇಳಿದರು. ದಾರು ಹಾಲು, ನೀರು ತಂದಿತ್ತಳು. ಅತಿಥಿಗಳು ನೀರು ತೆಗೆದುಕೊಂಡರು, ತಮ್ಮ ಆಯಾಸ ನೀಗಿಕೊಂಡರು. ಹಾಲು ಕುಡಿದು ತಮ್ಮ ಆಸರು ತಗ್ಗಿಸಿದರು. ಅಜ್ಜರು ಹರಿವಾಣ ತುಂಬ ಅಡಿಕೆಹೋಳು ಇರಿಸಿದರು. ತಾವು ಬಂದ ಅತಿಥಿಗಳ ನಡುವೆ ಹೋಗಿ ಕುಳಿತರು. ಒಟ್ಟು ಕುಳಿತು ಊರಸುದ್ದಿ ಮಾತನಾಡಿದರು. ಅಡಿಕೆ-ವೀಳೆಯ ಮೆದ್ದರು. ಅಷ್ಟರಲ್ಲಿ ಒಳಗೆ ದಾರು ಪಂಚಾಮೃತದ ಅಡುಗೆ ಸಿದ್ಧಪಡಿಸಿದಳು. ಬೆಳ್ತಿಗೆಯ ಬಿಳಿಯನ್ನ, ತೆಂಗಿನಕಾಯಿ ಹಾಕಿದ ಸಾವಿರ ಬಗೆ ಮೇಲೋಗರ, ಮೆಣಸು ಹಾಕಿದ ಮುನ್ನೂರು ಬಗೆ ಮೇಲೋಗರ, ಹುಳಿ (ಹುಣಸೆ) ಸೇರಿಸಿ ಮಾಡಿದ ಐನೂರು ಬಗೆ ಮೇಲೋಗರ, ಕಣಿಲೆ ಕಾವಟೆಯ ಬೇಯಿಸಿದ ಉಪ್ಪಿನಕಾಯಿ, ಸಕ್ಕರೆ ಕಂಚು, ಮಾದಲ ಹಣ್ಣಿನ ಉಪ್ಪಿನಕಾಯಿಯಿಂದ ಕೂಡಿದ ಪುಷ್ಕಳ ಭೋಜನ ಸಿದ್ಧವಾಯಿತು.

ಬಂದ ಅತಿಥಿಗಳು ತಮಗೆ ‘ವೇಳೆ ಆಗುತ್ತಿದೆ, ಕಾಲ ವಿಳಂಬವಾಗುತ್ತಿದೆ. ವೀಳೆಯದ ಪಟ್ಟಿ ವಿನಿಮಯ ಮಾಡೋಣ, ಬಾಲೆ ಸಿರಿಯ ಕುಲಗೋತ್ತ ತಿಳಿಸಿರಿ, ಮದುವೆಗೆ ದಿನಮಾನ ನಿರ್ಧಾರ ಮಾಡೋಣ’ ಎಂದು ಅಜ್ಜರಲ್ಲಿ ನಿವೇದಿಸಿಕೊಂಡರು. ಅಂತೆಯೇ ಪುತ್ರ ಬನ್ನಾಯ ಬಳಿ (ಗೋತ್ರ)ಯ ಸತ್ಯನಾಪುರದ ಸಿರಿಗೂ ಆರಿಯ ಬನ್ನಾಯ ಬಳಿಯ ಬಸರೂರಿನ ಕಾಂತಣ ಆಳ್ವನಿಗೂ ಮದುವೆ ಮಾಡುವುದೆಂದು ಬಂದ ಅತಿಥಿಗಳು, ಊರ ಹಿರಿಯರು, ಅಜ್ಜರು ಸೇರಿ ನಿರ್ಧಾರ ಮಾಡಿದರು. ಮದುವೆಗೆ ದಿನವಿಟ್ಟರು.

ಮತ್ತೆ ಅಜ್ಜರು ಅತಿಥಿಗಳಿಗೆ ಕೈಗೆ ಕಾಲಿಗೆ ನೀರಿತ್ತರು, ಭೋಜನ ಶಾಲೆಗೆ ಅವರನ್ನು ಕರೆತಂದರು. ಮಣೆ ಮೇಲೆ ಕುಳ್ಳಿರಿಸಿದರು. ಬಡಗು ದಿಕ್ಕಿಗೆ ಬಾಗಿದ್ದ ಬಂಗ ಬಾಳೆ ಎಲೆಯ ಕೊಡಿ ತುಂಡು ತಂದು ಅತಿಥಿಗಳಿಗೆ ಹಾಸಿದರು. ನೀರು ಚಿಮುಕಿಸಿದರು. ದಾರು ತಾನು ಮಾಡಿದ ಅದ್ಧೂರಿಯ ಭೋಜನವನ್ನು ಬಂದವರಿಗೆ ಬಡಿಸಿದಳು. ಅವರು ಖುಷಿಯಿಂದ ಹೊಟ್ಟೆತುಂಬ ಉಂಡರು. ಕೈಯ ಎಂಜಲು ತೊಳೆದುಕೊಂಡರು. ಸಾಲರಿ ಚಾವಡಿಗೆ ಬಂದರು. ಉಂಡ ಅತಿಥಿಗಳು ಅಜ್ಜರ ಜೊತೆ ಹಾಸಿದ ಚಾಪೆಯಲ್ಲಿ ಬಂದು ಕುಳಿತರು. ಬಾಯಿ ತುಂಬ ವೀಳೆಯದೆಲೆ ಮೆದ್ದರು. ಹೋಗಿ ಬರುವುದಾಗಿ ಹೇಳಿ ಮದುವೆ ನಿಶ್ಚಯಿಸಿಕೊಂಡು ಹೊರಟರು. ಅರಮನೆ ಇಳಿದು ಬಂದರು.

ಕಾಂತಣ ಆಳ್ವ ಮದುವೆ ನಿಶ್ಚಯಿಸಿಕೊಂಡು ಬಂದ ಉಲ್ಲಾಸದಿಂದ ತನ್ನ ಬಸರೂರು ಅರಮನೆ ಏರಿದ. ಸಾಲರಿ ಚಾವಡಿಯ ತೂಗುಯ್ಯಾಲೆಯಲ್ಲಿ ಕುಳಿತಿದ್ದ ತಾಯಿ ಸಂಕರು ಪೂಂಜೆದಿ ‘ಮದುವೆಗೆ ಪಟ್ಟಿ ವಿನಿಮಯ ಮಾಡಿಕೊಂಡಿರಾ, ದಿನ ನಿರ್ಧಾರ ಮಾಡಿದಿರಾ’ ಎಂದು ಕೇಳಿದಳು. ಮಗ ಕಾಂತಣ ಆಳ್ವ ಅಮ್ಮನಿಗೆ ಸವಿವರವಾಗಿ ಎಲ್ಲವನ್ನೂ ಹೇಳಿದ.

ಮರುದಿನ ಕಾಂತಣ ಆಳ್ವ ತನ್ನ ಒಕ್ಕಲು ಮಕ್ಕಳನ್ನು ತನ್ನ ಅರಮನೆಯಲ್ಲಿ ಸೇರಿಸಿದ. ಮಂದಿ ಮಾರ್ಬಲ ನೆರೆಯಿತು. ಮದುವೆಗೆ ಚಪ್ಪರ ಏರಿಸಲು ಎಲ್ಲ ಸಿದ್ಧತೆಗಳಾದುವು. ಕರಿಯ ಕಬ್ಬು ಕಡಿದು ತಂದರು, ಚಪ್ಪರಕ್ಕೆ ಕಂಬವೆಂದು ಊರಿದರು. ಬಿಳಿಯ ಕಬ್ಬು ಕಡಿದರು. ಚಪ್ಪರಕ್ಕೆ ಮೇಲ್ ಸಲಿಕೆ ಹಾಕಿದರು. ಕರಿಯ ಲಾವಂಚ ತಂದರು. ಚಪ್ಪರಕೆ ಮೇಲ್‌ಹಾಸು ಹಾಕಿದರು. ಬಿಳಿಯ ಲಾವಂಚದ ಹುಲ್ಲಿಂದ ಚಪ್ಪರಕೆ ಕುಚ್ಚು ಕಟ್ಟಿದರು. ಹಾಲೆ ಮರಕ್ಕೆ ಹೋದ ಪಂಚೋಳಿ ವೀಳೆಯದೆಲೆಯಿಂದ ಚಪ್ಪರಕ್ಕೆ ತಡಿಕೆ ಕಟ್ಟಿದರು. ಮಾವಿಗೆ ಹೋದ ಮುಂಡೋಲಿ ವೀಳೆಯದೆಲೆಯಿಂದ ಚಪ್ಪರಕ್ಕೆ ತಡಿಕೆ ಕಟ್ಟಿದರು. ಮಾವಿಗೆ ಹೋದ ಮುಂಡೋಲಿ ವೀಳೆಯದೆಲೆಯಿಂದ ಚಪ್ಪರಕ್ಕೆ ಹಾಸು ಬೆಸೆದರು. ಹೀಗೆ ಕಾಂತಣ ಆಳ್ವನು ತನ್ನ ಒಕ್ಕಲು ಮಕ್ಕಳನ್ನು ಸೇರಿಸಿಕೊಂಡು ಮೇಲಿಗೆ ಮೇಲು ಚಪ್ಪರ ಸಿದ್ಧಪಡಿಸಿದನು. ಅಡಿಭಾಗಕ್ಕೆ ಬಿಳಿಬಣ್ಣದ ಅರಿವೆ (ತು. ಕೊಡಿ) ಕಟ್ಟಿದನು. ನೆಲಕ್ಕೆ ದಲ್ಯ (ಬಿಳಿ ಬಟ್ಟೆ) ಹಾಸಿದನು. ಅಡುಗೆಗೆ ತಕ್ಕುದಾದ ಅಡುಗೆ ಮನೆ ಸಿದ್ಧವಾಯಿತು. ಅಚ್ಚುಬೆಲ್ಲದ ಒಲೆ ಹಾಕಿಸಿದರು. ಓಲೆ ಬೆಲ್ಲದ ನೀರಿನಲ್ಲಿ ನೆಲ ಒರೆದರು. ಹೀಗೆ ಬಸರೂರ ಅರಮನೆಯಲ್ಲಿ ಆಳ್ವರು ಮದುವೆಗೆ ಸರ್ವಸನ್ನಾಹ ನಡೆಸಿದರು.

ಮದುವೆಗೆ ದಿನ ಸಮೀಪಿಸಿತು. ಸತ್ಯನಾಪುರದ ಅರಮನೆಯಲ್ಲಿ ಅಜ್ಜರು ನೆರೆಕರೆಯ ಜಾತಿಮಕ್ಕಳನ್ನು ಕರೆಸಿದರು. ಚಿತ್ತಾರದ ಅಂಗವಸ್ತ್ರದಲ್ಲಿ ಅಡಿಕೆ ಹೋಳು ಕಟ್ಟಿಕೊಟ್ಟರು. ಸುತ್ತಿನ ಊರುಗಳ ಒಂದು ಮನೆಯನ್ನು ಬಿಡದೆ ಅಡಿಕೆ ತುಂಡು ನೀಡಿ ಮದುವೆ ಮುಹೂರ್ತಕ್ಕೆ ಎಲ್ಲರೂ ಬರುವಂತೆ ಹೇಳಿಕೆ ಹೇಳಿಸಿದರು.

ಬಸರೂರ ಅರಮನೆಯಲ್ಲಿ ಅರವೂರು ಪರವೂರ ಸಭೆ ಸಾವಿರ ಸೇರಿದೆ. ಮದುವೆಗೆ ಬೇಕಾದ ಎಲ್ಲ ಸಿದ್ಧತೆಗಳೂ ನಡೆಯುತ್ತಿವೆ. ಅತ್ತ ಸತ್ಯನಾಪುರದ ಅರಮನೆಯಲ್ಲಿ ಅಜ್ಜ ಬೆರ್ಮುಮಾಲವರು ಸರ್ವಬಿರುದಿನಲ್ಲಿ ಮದುವೆಯ ಸನ್ನಾಹ ನಡೆಸುತ್ತಿದ್ದಾರೆ. ಸಂಭ್ರಮದ ಅಡುಗೆಗೆ ಬೇಕಾದ ಎಲ್ಲ ಸಿದ್ಧತೆಗಳೂ ನಡೆಯುತ್ತಿವೆ. ಅತ್ತ ಸತ್ಯನಾಪುರದ ಅರಮನೆಯಲ್ಲಿ ಅಜ್ಜ ಬೆರ್ಮುಮಾಲವರು ಸರ್ವಬಿರುದಿನಲ್ಲಿ ಮದುವೆಯ ಸನ್ನಾಹ ನಡೆಸುತ್ತಿದ್ದಾರೆ. ಸಂಭ್ರಮದ ಅಡುಗೆಗೆ ಬೇಕಾದ ಎಲ್ಲ ಸಿದ್ಧತೆಗಳೂ ಆಗಿವೆ. ನಾಲ್ಕು ಮನೆಯ ಹೆಂಗಸರನ್ನು ಕರೆಸಿ ಸಿರಿಗೆ ಮದುವೆ ಸಿಂಗಾರ ಮಾಡುವಂತೆ ಹೇಳಿದರು. ಬಂದ ಹೆಂಗಸರು ಸಿರಿಗೆ ಆಭರಣದ ಕರಂಡಕದಲ್ಲಿ ಮೇಲಾದ ಆಭರಣ ತೊಡಿಸಿದರು. ಪಟ್ಟೆಯಲ್ಲಿ ಮೇಲಾದ ಪಟ್ಟೆ ಉಡಿಸಿದರು. ಕಟ್ಟಿನಲ್ಲಿ ಮೇಲಾದ ಪಟ್ಟೆರವಕೆ ತೊಡಿಸಿದರು. ತಲೆ ಬಾಚಿ ಹೆರಳು ಹಾಕಿದರು. ಹಣೆಗೆ ಕುಂಕುಮದ ಬೊಟ್ಟು ಇರಿಸಿದರು. ಕಣ್ಣಿಗೆ ಕಾಡಿಗೆ ಎಳೆದರು. ಮದುಮಗಳ ಸಿಂಗಾರವನ್ನು ನೆರೆದ ಹೆಂಗಸರು ಮಾಡಿದರು.

ಅತ್ತ ಬಸರೂರಲ್ಲಿ ಸಂಕರು ಪೂಂಜೆದಿಯ ಮಗ ಕಾಂತಣ ಆಳ್ವನ ಸಿಂಗಾರ ನಡೆಯಿತು. ತಾಯಿ ಒಬ್ಬನೇ ಮಗನ ಮದುವೆಯನ್ನು ಸರ್ವ ಬಿರ್ದಿನಿಂದ ನಡೆಸಬೇಕೆಂದಳು. ಅರಸಿನ ಕೋಡು ಅರೆದರು. ತೆಂಗಿನಕಾಯಿ ಹಾಲು ಸೇರಿಸಿದರು. ಇಡಿಯ ಮೈಗೆ ಅರೆದ ಅರಸಿನವನ್ನು ಪೂಸಿದರು. ಮದುಮಗನಿಗೆ ಮೋಂದಲೆ ಮುಹೂರ್ತ ನಡೆಸಿದರು. ಕಾಯಿಸಿದ ಬಿಸಿನೀರಲ್ಲಿ ಸ್ನಾನ ಮಾಡಿಸಿದರು. ಬಸರೂರಲ್ಲಿ ಸಭೆ ಸಾವಿರ ಕೂಡಿದೆ. ಶಕುನದ ಕೊಂಬು ಊದಿಸಿದರು. ಪಯಣದ ಸಿಡಿಮದ್ದು ಸುಡಿಸಿದರು. ಎಲ್ಲೆಲ್ಲೂ ಹಬ್ಬದ ವೈಭವ, ಸಂಭ್ರಮ. ಮದುಮಗನಿಗಾಗಿ ದಂಡಿಗೆ ಸಿಂಗಾರ ಆಯಿತು. ಸತ್ಯದಂಡಿಗೆಯಲ್ಲಿ ಕುಳಿತ ಮದುಮಗನ ದಿಬ್ಬಣ ಊರಿಗೆ ಊರು ಸೇರಿ ಸತ್ಯನಾಪುರದ ಕಡೆ ಹೊರಟಿತು.

ಹಾದಿ ಹಿಡಿದು ಬೀದಿ ಸಾಗಿ ದಿಬ್ಬಣ ಸತ್ಯನಾಪುರ ಸಮೀಪಿಸಿತು. ಅಜ್ಜ ಬೆರ್ಮುಮಾಲವರು ದಿಬ್ಬಣ ಬರುತ್ತಿರುವುದನ್ನು ಕಂಡು ದಿಬ್ಬಣವನ್ನು ಎದುರುಗೊಳ್ಳಲು ನಾಲ್ಕು ಜನ ಮುತ್ತೈದೆಯರಿಗೆ ಹೇಳಿದರು. ಹೆಂಗಸರು ನಂದಾದೀಪ ಬೆಳಗಿ ಹರಿವಾಣದಲ್ಲಿ ಅರಳು ತುಂಬಿಕೊಂಡು ದಿಬ್ಬಣವನ್ನು ಎದುರುಗೊಂಡರು. ಬಲಕಾಲು ಮುಂದೆ ಹಾಕಿಸಿ ಎಲ್ಲರನ್ನೂ ಚಪ್ಪರಕ್ಕೆ ಹೊಗಿಸಿದರು. ಬಂದವರನ್ನು ಗೌರವದಿಂದ ಕುಳ್ಳಿರಿಸಿ ಆದರದ ಉಪಚಾರವನ್ನು ಅಜ್ಜ ಬೆರ್ಮುಮಾಲವರು ನಡೆಸಿದರು.

ಮುಹೂರ್ತ ಸಮೀಪಿಸಿತು. ಅಜ್ಜರು ಮದುಮಗಳಿಗೆ ಹೂಸೀರೆ ಕೊಡುವಂತೆ ಹೇಳಿದರು. ಪಟ್ಟೆಯಲ್ಲಿ ಮೇಲಾದ ಪಟ್ಟೆ, ಆಗಸದೆತ್ತರಕ್ಕೆ ಅರಳುವ ಪಟ್ಟೆ, ಅಂಗೈಯೊಳಗೆ ಅಡಗಬಲ್ಲ ಪಟ್ಟೆ, ಮುತ್ತು ಹರಳು ಪೋಣಿಸಿದ ಪಟ್ಟೆ, ಕಾಲೂರ ಕರಿಯ ಪಟ್ಟೆ, ಬೋಲೂರ ಬಿಳಿಯ ಪಟ್ಟೆಯನ್ನು, ಚೆಂಡುಮಲ್ಲಿಗೆಯನ್ನು ಅಜ್ಜರು ನಾಲ್ಕು ಜನ ಮುತ್ತೈದೆ ಹೆಂಗಸರ ಕೈಯಲ್ಲಿ ಮುಟ್ಟಿಸಿದರು. ಯಮಗುಂಡದೊಲಗೆ ಕಲ್ಲ ಕಲೆಂಬಿಯ ಮೇಲೆ ಕುಳಿತಿದ್ದ ಸಿರಿಯನ್ನು ಚಿಕ್ಕಚಾವಡಿ ಚದುರ ಮಂಟಪಕ್ಕೆ ಕರೆತಂದರು. ಮತ್ತೊಮ್ಮೆ ಊರ ಹೆಂಗಸರು ಸಿರಿಯನ್ನು ಬಂಗಾರದ ಬಾಚಣಿಗೆಯಿಂದ ತಲೆ ಬಾಚಿ ಕಟ್ಟಿದರು. ತಲೆ ತುಂಬ ಮಲ್ಲಿಗೆ ಹೂವಿನ ಜಲ್ಲಿ ಇಳಿಸಿದರು. ಸಿರಿಯ ಕೈಗೆ ಒಂದು ಕವಳೆ ವೀಳೆಯದೆಲೆ, ಅಡಿಕೆ, ಗೆಜ್ಜೆಕತ್ತಿ ನೀಡಿದರು. ಅಂಗಣದಲ್ಲಿ ಚಾಪೆ ಹಾಸಿ ಮದುವೆ ಮಂಟಪದೊಳಗೆ ಮದುಮಗ-ಮದುಮಗಳನ್ನು ಕುಳ್ಳಿರಿಸಿದರು. ಮದುಮಕ್ಕಳನ್ನು ಮೂರು ಸುತ್ತು ಪ್ರದಕ್ಷಿಣೆ ಬರಿಸಿದರು. ಹವಳದಲ್ಲಿ ಆರತಿ, ಮುತ್ತಿನಲ್ಲಿ ದೇಸೆ ಹಾಕಿದರು. ಕಂಚಿ ಇರಿಸಿ ಮದುಮಕ್ಕಳಿಗೆ ಊರ ಪರವೂರ ಮಂದಿ ‘ವರಹ’ದ ಉಡುಗೊರೆ ನೀಡಿದರು. ಅಜ್ಜರೇ ಮಗಳಿಗೆ ‘ದಾರೆ’ ಎರೆದರು.

ಒಂದು ಮುಡಿ ಬೀಜ ಬಿತ್ತುವ ವಿಸ್ತಾರದ ಗದ್ದೆಯಲ್ಲಿ ಹಾಕಿದ್ದ ಚಪ್ಪರದಿಂದ ಮದುಮಗಳನ್ನು ಅಜ್ಜರು ಇಳಿಸಿಕೊಟ್ಟರು. ರೂಢಿಯಂತೆ ಮತ್ತೊಮ್ಮೆ ಮದುಮಕ್ಕಳನ್ನು ಚಪ್ಪರದೊಳಗೆ ಕರೆತಂದರು. ಅಜ್ಜರು ಇಳಿಸಿಕೊಟ್ಟರು. ರೂಢಿಯಂತೆ ಮತ್ತೊಮ್ಮೆ ಮದುಮಕ್ಕಳನ್ನು ಚಪ್ಪರದೊಳಗೆ ಕರೆತಂದರು. ಅಜ್ಜರು ದಿಬ್ಬಣದ ಮಂದಿಗೆ ಊಟಕ್ಕೆ ಅಣಿಮಾಡಿಸಿದರು. ಎಲೆ ಹಾಸಿದರು. ನೀರು ತಳಿದರು. ಸಿದ್ಧವಾಗಿರುವ ಅಡುಗೆಯನ್ನು ಬಡಿಸಿದರು. ನೀಲವರ್ಣದ ಎಣ್ಣೆ, ಪಚ್ಚೆ ವರ್ಣದ ತುಪ್ಪ, ಬೆಳ್ತಿಗೆಯ ಅನ್ನ, ತೆಂಗಿನಕಾಯಿ ಹಾಕಿದ ಸಾವಿರ ಬಗೆ ಪದಾರ್ಥ ಬಡಿಸಿದರು. ಬಂದ ಬೀಗರು ನೆಂಟರು ಸಂತೃಪ್ತಿಯಿಂದ ತಣಿಯುಂಡರು ಉಂಡವರು ವೀಳೆಯದೆಲೆ ಮೆದ್ದರು. ದಿಬ್ಬಣದ ಮೆರವಣಿಗೆ ಬಸರೂರು ಅರಮನೆ ಕಡೆ ಹೊರಡಲು ಸಿದ್ಧವಾಯಿತು. ಅಜ್ಜರು ಸಿಂಗರಿಸಿದ ಸತ್ಯದಂಡಿಗೆಯಲ್ಲಿ ಮಗಳನ್ನು ಎತ್ತಿ ಕುಳ್ಳಿರಿಸಿದರು. ಮಗಳನ್ನು ಅರ್ತಿಯಿಂದ ನೋಡಿಕೊಳ್ಳಿರೆಂದು ಅತ್ತೆ ಸಂಕರು ಪೂಂಜೆದಿಗೆ ಹೇಳಿದರು. ಸಿರಿಯ ಕಣ್ಣಿಂದ ಧಾರಾಕಾರ ನೀರು ಹರಿಯತೊಡಗಿತು. ಅಜ್ಜರು ಸಮಾಧಾನದ ಮಾತುಗಳನ್ನು ನುಡಿದರು. ಬೆನ್ನ ಹಿಂದೆಯೇ ನಿನ್ನನ್ನು ಕರೆತರಲು ಆಳು ಕಳುಹಿಸಿಕೊಡುವೆ ಎಂದರು. ಬೋವಿಗಳು ಸತ್ಯದಂಡಿಗೆಯನ್ನು ಹೆಗಲಿಗೇರಿಸಿದರು. ಅಜ್ಜರು ಪಯಣದ ಬೆಡಿ (ಸಿಡಿಮದ್ದು) ಎಸೆಯಿಸಿದರು. ಸನ್ನೆಯ ಕೊಂಬು ಊದಿಸಿದರು. ಸರ್ವ ಬಿರುದಿನಿಂದ ದಿಬ್ಬಣ ಅರಮನೆ ಇಳಿದು ನಡೆಯಿತು.

ಸತ್ಯನಾಪುರದ ಬಯಲು ಹಿಂದಕ್ಕಾಯಿತು. ದಿಬ್ಬಣ ಏಳು ಹೆಜ್ಜೆ ಮುಂದೆ ನಡೆಯಿತು. ಗುಡ್ಡೆ ಬಯಲು ಹಿಡಿದರು. ದಿಬ್ಬಣ ಸಾಗಿ ಬಂದು ಬಸರೂರಿನ ಕಟ್ಟಪುಣಿಗೆ ತಲುಪಿತು. ಮುಂದೆ ಸಾಗಿ ಬಸರೂರು ಅರಮನೆಯ ಸುತ್ತುಪಾಗಾರ ದಾಟಿತು. ಅರಮನೆಯ ಆನೆ ಬಾಗಿಲನ್ನು ದಿಬ್ಬಣ ಹೊಕ್ಕಿತು. ಅಂಗಳ ತಲಪಿತು. ಕೆಂದಾಳಿಯ ಪದ್ಮಕಟ್ಟೆಯ ಸಮೀಪ ದಂಡಿಗೆ ಇಳಿಯಿತು. ಅತ್ತೆ ಸಂಕರು ಪೂಂಜೆದಿ ಏಳು ಸುತ್ತಿನ ಯಮಗುಂಡ ಹೊಕ್ಕಳು. ಬೆಳ್ಳಿಯ ತಟ್ಟೆಯಲ್ಲಿ ಅನ್ನ ಬೇಯಿಸಿದ ತಿಳಿನೀರು, ಮಸಿ ತುಂಡು ಹಿಡಿದು ತಂದಳು. ಮದುಮಗಳಿಗೆ ದೃಷ್ಟಿ ನಿವಾಳಿಸಿದಳು. ತಿಳಿಗಂಜಿ ನೀರನ್ನು ಕೆಂದಾಳಿ ಪದ್ಮಕಟ್ಟೆಗೆ ಸುರಿದು ಬಂದಳು. ಮದುಮಕ್ಕಳನ್ನು ಬಲಗಾಲು ಮುಂದೆ ಮಾಡಿ ಬಸರೂರ ಅರಮನೆ ಹೊಗಿಸಿದಳು. ತಾಳೆ ಓಲೆಯಿಂದ ಮಾಡಿದ ಚಿಕ್ಕ ಚಾಪೆ ಹಾಸಿದರು. ಮದುಮಕ್ಕಳನ್ನು ಸೇಸೆಗೆ ಕುಳ್ಳಿರಿಸಿದರು. ಎದುರಿಗೆ ಕಂಚಿಯಲ್ಲಿ (ಹರಿವಾಣ) ‘ವರಹ’ ಹಾಕಿಸಿ ಉಡುಗೊರೆ ಮಾಡಿಸಿದರು. ಮುತ್ತಿನಲ್ಲಿ ದೇಸೆ, ಹವಳದಲ್ಲಿ ಆರತಿ ಆಯಿತು. ಕಂಚಿ ತೆಗೆಯಿಸಿದರು. ಬಂದಿರುವ ಸಭೆ ಸಾವಿರದ ಮುಖ ಮೋರೆ ತೊಳೆವಂತೆ ಹೇಳಿದರು. ಅಷ್ಟರಲ್ಲಿ ಸತ್ಯನಾಪುರದಿಂದ ಸಿರಿಯನ್ನು ಮತ್ತೆ ಕರೆತರಲು ಅಜ್ಜರು ಕಳುಹಿಸಿದ ಮಂದಿ ಮಾರ್ಬಲ ಬಂದು ತಲಪಿತು. ಬಂದ ನೆಂಟರು ಬೀಗರು ಒಂದಾಗಿ ಊಟಕ್ಕೆ ಕುಳಿತರು. ಹೊಟ್ಟೆ ತುಂಬ ಉಂಡರು. ಮನವಾರೆ ಸಂತಸಪಟ್ಟರು. ಬಾಯಿಯ ಎಂಜಲಿಗೆ ಅಡಿಕೆಯ ಹೋಳು ಜಗಿದರು. ಬಂದವರು ಮದುಮಗಳು ಸಿರಿಯನ್ನು ತವರಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡರು. ಸಿರಿ ಕೈಹಿಡಿದ ಗಂಡನಿಗೆ, ಅತ್ತೆ ಸಿರಿಯನ್ನು ಸತ್ಯದಂಡಿಗೆಯಲ್ಲಿ ಎತ್ತಿ ಕುಳ್ಳಿರಿಸಿ ಕಳುಹಿಸಿ ಕೊಟ್ಟನು.

ಮರುದಿಬ್ಬಣ ಹಾದಿ ಹಾದು, ಬೀದಿ ನಡೆದು ಗುಡ್ಡೆ ದಾಟಿ ಬಯಲು ಹಿಡಿದು ಸತ್ಯನಾಪುರದ ಕಟ್ಟಪುಣಿ ತಲಪಿತು. ಅರಮನೆಯ ಪಾಗಾರ ದಾಟಿ ಆನೆಬಾಕಿಲನ್ನು ಹೊಕ್ಕು ಕೆಂದಾಳಿಯ ಪದ್ಮ ಕಟ್ಟೆಯ ಬಳಿ ದಂಡಿಗೆ ಇಳಿಯಿತು. ದಂಡಿಗೆ ಇಳಿದುದನ್ನು ದೂರದಿಂದ ಕಂಡ ಅಜ್ಜರು ಓಡಿ ಬಂದು ಮದುಮಗಳನ್ನು ತನ್ನ ಅರಮನೆಗೆ ಕರೆತಂದರು.

ಸಿರಿ ಚಾವಡಿ ಏರಿದಳು. ಏಳು ಸುತ್ತಿನ ಕೋಣೆಗಳನ್ನು ಹಾದು ಯಮಗುಂಡಕ್ಕೆ ಹೊಕ್ಕಳು. ಪಟ್ಟೆ ಸೀರೆ ಬಿಚ್ಚಿ ನಿತ್ಯದ ಸೀರೆ ಉಟ್ಟಳು. ಮತ್ತೊಂದು ದಿನ ಸಿರಿಯನ್ನು ಬಸರೂರಿನ ತನ್ನ ಅರಮನೆಗೆ ಕರೆದೊಯ್ಯಲು ಕಾಂತಣಾಳ್ವ ಸತ್ಯನಾಪುರದ ಅರಮನೆಗೆ ಬಂದ. ಕೈಹಿಡಿದ ಹೆಂಡತಿಯನ್ನು ತನ್ನರಮನೆಗೆ ಕರೆದೊಯ್ದ ಸಿರಿ ಹುಟ್ಟಿದ ಸತ್ಯನಾಪುರದ ಅರಮನೆ ಹೊಕ್ಕ ಬಸರೂರಿನ ಅರಮನೆಯ ನಡುವೆ ಹೋಗುತ್ತಾ ಬರುತ್ತಾ ಸುಖದಿಂದ ಇದ್ದಳು.

ಬಸರೂರಿನ ಅರಮನೆಯಲ್ಲಿ ಸಿರಿಗೆ ನೀರು ನಿಂತಿತು. ಬಸಿರು ಬೆಳೆಯಿತು. ತಿಂಗಳು ಕಳೆಯಿತು. ಅಜ್ಜರಿಗೆ ಸುದ್ದಿ ತಲುಪಿತು. ಮೋಹದ ಮಗಳು ಸಿರಿಯ ಬಸಿರಿಗೆ ಏಳು ತಿಂಗಳು ತುಂಬಿದಾಗ ಅಜ್ಜರು ಬಯಕೆ ಮದುವೆಗೆ ದಿನ ನೋಡಲು ಹೊರಟರು. ತನ್ನ ಸಿಂಗಾರದ ಪೆಟ್ಟಿಗೆ ತರಲು ದಾರುವಿಗೆ ಹೇಳಿದರು. ದಾರು ಏಳುಸುತ್ತಿನ ಯಮಗುಂಡ ಹೊಕ್ಕಳು. ಕಲ್ಲಪೆಟ್ಟಿಗೆಯ ಬಾಯಿ ತೆರೆದಳು. ಅಜ್ಜರ ಸಿಂಗಾರದ ಪೆಟ್ಟಿಗೆ ಹಿಡಿದು ಸಾಲರಿ ಚಾವಡಿಗೆ ಬಂದಳು. ಅಜ್ಜರ ತೂಗುಯ್ಯಾಲೆಯಲ್ಲಿ ಪೆಟ್ಟಿಗೆ ಇಟ್ಟಳು. ಅಜ್ಜರು ಉಯ್ಯಾಲೆಯಲ್ಲಿ ಕುಳಿತು ಪೆಟ್ಟಿಗೆಯ ಬಾಯಿ ಹಾರಿಸಿದರು. ಆರಿಯ ಬನ್ನಾರರು ಪಯಣದ ಉಡುಪು ತೊಡುಪು ಧರಿಸಿಕೊಂಡರು. ಬಂದಿಕಟ್ಟಿ ಧೋತ್ರ ಉಟ್ಟರು. ಚುಕ್ಕಿ ಚುಕ್ಕಿ ಉಳ್ಳ ತಲೆವಸ್ತ್ರ ಸುತ್ತಿದರು. ಕಣ್ಣಿಗೆ ಕಾಡಿಗೆ ಇಟ್ಟರು. ಹೆಗಲಿಗೆ ಶಾಲು ಹೊದ್ದರು. ಅಂಗೈಗೆ ಸರಪಳಿ, ಮುಂಗೈಗೆ ಬಳೆ ಇಟ್ಟರು. ಬಲಕೈಯ ನಡುಬೆರಳಿಗೆ ಮುತ್ತು ಮುದ್ರೆಯ ಉಂಗುರ ಇಟ್ಟರು. ಸಿಂಗರಗೊಂಡ ಅಜ್ಜರು ಕಾಲಿಗೆ ಮೆಟ್ಟು ಮೆಟ್ಟಿದರು. ಗೋಡೆಗೆ ಒರಗಿಸಿಟ್ಟಿದ ಓಲೆಕೊಡೆ ಹಿಡಿದರು. ಗಳಿಗೆ ಹೊತ್ತಲ್ಲಿ ಹೋಗಿ ಗಳಿಗೆ ಹೊತ್ತಲ್ಲಿ ಮರಳುವುದಾಗಿ ದಾರುವಿನೊಡನೆ ಹೇಳಿ ಮನೆಯಿಂದ ಇಳಿದರು.

ಅಜ್ಜ ಬೆರ್ಮುಮಾಲವರು ಬಸರೂರ ಅರಮನೆಯ ಎದುರ ಕಟ್ಟಪುಣಿ ತಲಪಿದರು. ಸಾಲರಿ ಚಾವಡಿಯ ತೂಗುಯ್ಯಾಲೆಯಲ್ಲಿ ವೀಳೆಯ ಮೆಲ್ಲುತ್ತಾ ಕುಳಿತಿದ್ದ ಕಾಂತಣಾಳ್ವ. ದೂರದಿಂದ ಅಜ್ಜರು ಬರುತ್ತಿರುವುದನ್ನು ಕಂಡ ಕಾಂತಣಾಳ್ವ ಸಂಭ್ರಮದಿಂದ ಹಾಕಿದ ಏತದೆಡೆ ಓಡಿದನು. ತೋಡಿದ ಬಾವಿಯ ಬಳಿ ಬಂದನು. ಕವುಚಿ ಹಾಕಿದ ಕಲ್ಲ ಮರಿಗೆಯನ್ನು ಅಂಗಾತ ಇರಿಸಿದನು. ಆಕಾಶದೆತ್ತರದ ಏತಮರವನ್ನು ಬಗ್ಗಿಸಿದನು. ಪಾತಾಲದಾಳದ ಒಂದು ಮರಿಗೆ ಹನಿನೀರನ್ನು ಎತ್ತಿದನು. ಕಲ್ಲಮರಿಗೆಗೆ ಸುರಿದನು. ನೀರಿಗೆ ಕಂಚಿನ ಕೈತಂಬಿಗೆ ಹಾಕಿದನು. ಅಷ್ಟರಲ್ಲಿ ಅಜ್ಜರು ಸುತ್ತುಪಾಗಾರ ಹಾದು, ಆನೆಬಾಗಿಲು ಹೊಕ್ಕರು. ಮೆಟ್ಟಲಲ್ಲಿ ಕಾಲ ಮೆಟ್ಟು ಕಳಚಿದರು. ಗೋಡೆಗೆ ಓಲಿಕೊಡೆ ಆನಿಸಿದರು. ದೂರದ ಊರಿಂದ ಬಂದ ಅಜ್ಜರಿಗೆ ಕಾಂತಣಾಳ್ವ ಕಾಲ ಧೂಳು ಕೈಯ ಧೂಳು ತೊಳೆಯಲೆಂದು ನೀರಿತ್ತನು. ಅಜ್ಜರು ಕಾಲಧೂಳು ಕೈಯಧೂಳು ತೊಳೆದುಕೊಂಡರು. ಮೋರೆಯ ಮುತ್ತು ಬೆವರನ್ನು ನೀರು ಹನಿಸಿ ತೊಳೆದುಕೊಂಡರು. ಆರಿಯ ಬನ್ನಾಯ ಬೆರ್ಮುಮಾಲವರೂ, ಕಾಂತಣಾಳ್ವನೂ ಅರಮನೆಯ ಚಾವಡಿಯ ಚದುರ ಮಂಟಪ ಏರಿದರು. ಇಬ್ಬರೂ ಜೊತೆಯಾಗಿ ಚಾವಡಿಯ ತೂಗುಯ್ಯಾಲೆಯಲ್ಲಿ ಕುಳಿತರು. ತೂಗುಂದೊಟ್ಟಿಲನ್ನು ತೂಗಿದಾಗ ಗಿರಿ ಗಿರಿ ಸದ್ದು ಏಳುಸುತ್ತಿನ ಯಮಗುಂಡದೊಳಗಿನ ಸತ್ಯಮಾಲೋಕದ ಸಿರಿಗೆ ಕೇಳಿಸಿತು. ಅಲ್ಲಿಂದ ಹೊರಬಂದ ಸಿರಿ ಭೋಜನ ಶಾಲೆಗೆ ಬಂದು ಬಾಗಿಲ ಅಡ್ಡಕ್ಕೆ ನಿಂತು ಸಾಲರಿ ಚಾವಡಿಯನ್ನು ನಿಲುಕಿದಳು. ಕುಳಿತಿದ್ದ ಅಜ್ಜರನ್ನು ಕಂಡವಳೇ ಸಂತಸದಿಂದ ಆಸರು ಬೇಸರದಿಂದ ಬಂದಿರುವ ತನ್ನ ಅಜ್ಜನಿಗೆ ಗಿಂಡಿ ತುಂಬಾ ಹಾಲು ನೀರು ತಂದಿತ್ತಳು. ಮಗಳು ಸತ್ಯಮಾಲೋಕದ ಸಿರಿ ನೀಡಿದ ನೀರು ಕುಡಿದರು. ಬೇಸರ ಕಳೆದರು; ಹಾಲು ಕುಡಿದರು, ಅಸರು ಆರಿಸಿಕೊಂಡರು. ಕಾಂತಣಾಳ್ವ ಹರಿವಾಣಿ ತುಂಬಾ ಅಡಿಕೆ ಹೋಳುಗಳನ್ನು ಅಜ್ಜರ ಮುಂದಿರಿಸಿದನು. ಅಡಿಕೆ ಹೋಳು ಮೆದ್ದು ಅಜ್ಜರು ಉಲ್ಲಾಸವೇರಿದಾಗ ಬಂದ ಕಾರ್ಯವೇನು ಎಂದು ಕಾಂತಣಾಳ್ವ ಕೇಳಿದನು. ಮೋಹದ ಮಗಳು ಸಿರಿಯ ಸೀಮಂತಕ್ಕೆ ದಿನ ನಿರ್ಧರಿಸುವ ಸಲುವಾಗಿ ಬಂದಿರುವೆ ಎಂದರು. ಅದಕ್ಕೇನಂತೆ, ಈಗಲೇ ಹೋಗೋಣ ಎಂದು ಕಾಂತಣಾಳ್ವ ತೆಂಕಣ ದಿಕ್ಕಿನ ಕೋಣೆಗೆ ನಡೆದನು. ನಿತ್ಯದ ಉಡುಪು ತೊಡುಪು ಕಳಚಿ ತೆಗೆದನು. ಹೋಗಿ ಬರುವ ಬಟ್ಟೆ ತೊಟ್ಟನು. ಬೆಲೆಬಾಳುವ ಹಚ್ಚಡ ಹೊದ್ದನು. ಬಹುಬಗೆಯಲ್ಲಿ ಅಂಗ ಸಿಂಗಾರಗೊಂಡನು. ಬಸರೂರ ಕಾಂತಣಾಳ್ವ ಹಾಗೂ ಸತ್ಯನಾಪುರದ ಬೆರ್ಮುಮಾಲವರು ಸಿರಿಯ ಸೀಮಂತ ಕರ್ಮಕ್ಕೆ ಮುಹೂರ್ತ ನಿರ್ಧರಿಸಲು ಜೊತೆಯಾಗಿ ಹೊರಟರು. ಕಾಲಲ್ಲಿ ಮೆಟ್ಟು ಮೆಟ್ಟಿಕೊಂಡರು. ಕೈಯಲ್ಲಿ ಕೊಡೆ ಹಿಡಿದರು. ಅರಮನೆ ಇಳಿದು ಬಯಲು ದಾಟಿ ಗುಡ್ಡೆ ಹತ್ತಿ ಇಳಿದು ಜೋಯಿಸರ ಮನೆ ಕಡೆ ನಡೆದರು.

ದೂರದಿಂದಲೇ ಜೋಯಿಸ ಭಟ್ಟರು ಕಂಡರು. ಇಂದಿನ ತನಕ ಬಾರದ ಅಜ್ಜರು ಇಂದೇಕೆ ಬಂದಿರಬಹುದೆಂದು ಮನಸ್ಸಿನಲ್ಲಿ ತರ್ಕಿಸಿಕೊಂಡರು. ಅಜ್ಜರು ಭಟ್ಟರ ಮನೆ ಮೆಟ್ಟಿಲ ಸಮೀಪದ ಬಂದರು. ಬನ್ನಿ ಎಂದು ಕರೆದ ಭಟ್ಟರು ಚಾವಡಿಯಲ್ಲಿ ಮುಕ್ಕಾಲಿ (ಪೀಠ) ಇರಿಸಿದರು. ಆಗ ಅಜ್ಜರು ನಮಗೆ ಬಂದ ಕೆಲಸ ಮೊದಲು, ಕುಳ್ಳಿರುವುದು ಮತ್ತಿನದು ಎಂದರು. ಮಗಳು ಸತ್ಯಮಾಲೋಕದ ಸಿರಿಯ ಸೀಮಂತಕ್ಕೆ ದಿನ ಕೇಳಲು ಬಂದಿರುವುದಾಗಿ ಹೇಳಿದರು.

ಅಷ್ಟನ್ನು ಕೇಳಿಸಿಕೊಂಡ ಜೋಯಿಸರು ಅರುವತ್ತು ಮುಷ್ಟಿ ಜಾತಕ ಮೂವತ್ತು ಮುಷ್ಟಿ ಪುಸ್ತಕ ತಂದಿರಿಸಿದರು. ಕರಿಯ ಖದಿರದ ಮಣೆ, ಕೌಡಿಗೆಯೊಂದಿಗೆ ಸಾಲರಿ ಚಾವಡಿಗೆ ಬಂದರು. ಮಣೆಯ ಮುಂದೆ ಭಟ್ಟರು ಚಕ್ರಮುಟ್ಟಿ (ಚಕ್ಕಳಬಕ್ಕಳ) ಕುಳಿತರು. ಮಣೆಯ ರಾಶಿಗಳಿಗೆ ಕವಡಿ ಹರಳುಗಳನ್ನು ತುಂಬಿದರು. ಕಾಣಿಕೆ ಇಡುವಂತೆ ಅಜ್ಜರಿಗೆ ಹೇಳಿದರು. ಅಜ್ಜರು ತನ್ನ ಸೊಂಟದ ಬಟ್ಟೆಯ ಗಂಟಿಗೆ ಕೈಹಾಕಿ ಬೆಳ್ಳಿಯ ವರಹದ ನಾಣ್ಯವನ್ನು ಇರಿಸಿದರು. ಮುಂದೆ ಬರುವ ಭಾನುವಾರ ಸಿರಿಯ ಸೀಮಂತಕ್ಕೆ ತಕ್ಕ ದಿನ ಎಂದರು. ಬೆಳಗ್ಗೆ ಒಂಬತ್ತು ಗಳಿಗೆ ಹೋಗುವಾಗ ಸೀಮಂತದ ಮದುಮಗಳಿಗೆ ಬಯಕೆ ಸೀರೆ ಕೊಡಬೇಕೆಂದರು. ಸಂಜೆ ಜಾನುವಾರುಗಳು ಹಟ್ಟಿ ಸೇರುವ ಹೊತ್ತಿಗೆ ಸಿರಿಯನ್ನು ಸತ್ಯನಾಪುರದ ಅರಮನೆ ಹೋಗುವಂತೆ ಮಾಡಬೇಕು ಎಂದರು.

ಬೆರ್ಮುಮಾಲವರು, ಕಾಂತಣಾಳ್ವನು ಜೋಯಿಸರ ಮನೆಯಿಂದ ಇಳಿದು ಬಸರೂರ ಅರಮನೆ ತಲಪಿದರು. ಸಂಕರು ಪೂಂಜೆದಿಗೆ ಎಲ್ಲ ವಿಷಯ ತಿಳಿಸಿದರು. ಬಸುರಿ ಸಿರಿಗೆ ಸೀಮಂತದ ಪಟ್ಟೆಸೀರೆಯನ್ನು ಇಂದೇ ತರಲು ಹೋಗೋಣ ಎಂದರು ಅಜ್ಜರು. ಕಾಂತಣಾಳ್ವ ಯಮಗುಂಡದಲ್ಲಿದ್ದ ತನ್ನ ತಾಯಿಗೆ ಹೋಗಿ ತಿಳಿಸಿದ. ಅವಳೂ ಆಗಲಿ ಎಂದಳು. ಚೀಲದಲ್ಲಿ ಐನೂರು ವರಹ ಹಿಡಿದುಕೊ ಎಂದಳು. ಉಟ್ಟ ಪಮಚೆಯ ನೆರಿಗೆಯಲ್ಲಿ ಮುನ್ನೂರು ವರಹ ಇರಲಿ ಎಂದಳು ತಾಯಿ. ಕಡೇರಿ ಕಾರ್ಲದ ಪೇಟೆಯಲ್ಲಿ ಸೀಮಂತದ ಮದುಮಗಳಿಗೆ ಹೂಸೀರೆ ತರುವುದೆಂದು ನಿಧರಿಸಿದರು. ಭೋಜನಶಾಲೆಯೊಳಗಿಂದಲೇ ಇದನ್ನು ಸಿರಿ ಕೇಳಿಸಿಕೊಂಡಳು. ಅಜ್ಜರ ಎದುರು ಬಂದು ನಿಂತಳು. ತನ್ನ ಸೀಮಂತಕ್ಕೆ ಪಟ್ಟೆಯಲ್ಲಿ ಮೇಲಾದ ಪಟ್ಟೆ ತರಬೇಕೆಂದಳು. ತನ್ನ ಸೀರೆಯ ಸೆರಗಿನ ತುದಿಯಲ್ಲಿ ಕಟ್ಟಿದ್ದ ಬೆಳ್ಳಿಯ ಒಂದು ವರಹವನ್ನು ಅಜ್ಜರ ಕೈಗೆ ನೀಡಿದಳು. ಅವರು ಅದನ್ನು ತನ್ನ ಅಂಗಿಯ ಎಡ ಜೇಬಿನಲ್ಲಿರಿಸಿಕೊಂಡರು.

ಇಬ್ಬರೂ ಅರಮನೆ ಇಳಿದು ನಡೆದರು. ಕಡೇರಿ ಕಾರ್ಲದ ಕೊಡಿ ಕುಂಬಳೆ ಪೇಟೆಯ ಗುಮ್ಮಡ ಸೆಟ್ಟಿಯ ಅಂಗಡಿ ಹೊಕ್ಕರು. ಮಗಳ ಸೀಮಂತ ಮದುವೆಗೆ ಬೆಲೆ ಬಾಳುವ ಪಟ್ಟೆ ಸೀರೆ ಕೊಡುವಂತೆ ಅಜ್ಜರು ಹೇಳಿದರು. ಅಂಗಡಿಯ ಗುಮ್ಮಡ ಸೆಟ್ಟಿ ಆಗಸದಷ್ಟು ಅರಳಿರುವ, ಮುಷ್ಟಿಯೊಳಗೆ ಅಡಗಬಲ್ಲ, ಮುತ್ತು ಹರಳು ಕಟ್ಟಿದ, ಒಂದೊಂದು ಹುಂಡಿಗೆ ಒಂದೊಂದು ವರಹ ಬೆಲೆಯ ಪಟ್ಟೆ ಸೀರೆ ತಂದು ಮುಂದಿರಿಸಿದ. ಸೀರೆಯನ್ನು ಸೆಟ್ಟಿ ತಕ್ಕಡಿಯ ಎಡ ತಟ್ಟೆಯಲ್ಲಿರಿಸಿದ. ಬಲ ತಟ್ಟೆಗೆ ಕಾಂತಣಾಳ್ವ ತನ್ನ ಚೀಲದಲ್ಲಿದ್ದ ಐನೂರು ವರಹ, ಬಟ್ಟೆಯ ನೆರಿಗೆಯಲ್ಲಿದ್ದ ಮುನ್ನೂರು ವರಹಗಳನ್ನು ಸುರಿದ. ವರಹದ ತಟ್ಟೆಯೇ ಮೇಲೇರಿತು. ಇದನ್ನು ಕಂಡ ಅಜ್ಜರು “ಮಗಾ ಕಾಂತಣ ನೀನು ಹಾಕಿದ ವರಹಗಳನ್ನೆಲ್ಲಾ ತೆಗೆ” ಎಮದರು. ಅವರು ಸಿರಿ ಕೊಟ್ಟಿರುವ ಒಂದು ಬೆಳ್ಳಿಯ ವರಹವನ್ನು ಬಡಗಣ ಲೋಕ ಲಂಕೆ ನಾಡ ದೇವರು ಬ್ರಹ್ಮರನ್ನು ನೆನೆದು ನನ್ನ ಮಗಳು ಸಿರಿ ಸತ್ಯದ ಮಗಳು ಹೌದೆಂದಾದರೆ ಹಾಕಿದ ವರಹದ ತಕ್ಕಡಿ ತಟ್ಟೆ ಕೆಳಗೆ ಸರಿಯಬೇಕು, ಸೀರೆಯ ತಕ್ಕಡಿ ತಟ್ಟೆ ಮೇಲೇರಬೇಕು ಎಂದರು. ಆಶ್ಚರ್ಯ ಎಂಬಂತೆ ಸೀರೆಯಿದ್ದ ತಕ್ಕಡಿಯ ತುದಿ ಮೇಲಕ್ಕೇರಿತು. ವರಹದ ತುದಿ ಕೆಳಕ್ಕೆ ಇಳಿಯಿತು. ಇದನ್ನು ಕಂಡಾಗ ಗುಮ್ಮಡ ಸೆಟ್ಟಿಗೆ ಆತಂಕ ವಾಯಿತು. ಸಾವಿರ ಸಾವಿರ ವರಹದ ಪಟ್ಟೆ ಒಂದು ವರಹಕ್ಕೆ ತೂಗಿತಲ್ಲ! ಇದರಿಂದ ನನ್ನ ಕುಟುಂಬದ ಉಪ್ಪನನ್ನಕ್ಕೆ ಸಂಚಕಾರ ಬರುವುದಲ್ಲ ಎಂದು ಮರುಗಿದ. “ಇದು ನನ್ನ ಪ್ರೀತಿಯ ಸತ್ಯದ ಮಗಳು ಸತ್ಯಮಾಲೋಕದ ಸಿರಿಯ ಬಯಕೆ ಮದುವೆಗೆ ತೆಗೆದ ಸೀರೆ, ಇಂದಲ್ಲ, ಸೂರ್ಯಚಂದ್ರರಿರುವ ತನಕ ನಿನಗೆ ಲಂಕೆನಾಡ ಬೆರ್ಮರು ಒಂದಕ್ಕೆ ಒಂದೂವರೆ, ಹತ್ತಕ್ಕೆ ಹದಿನಾರು ನೀಡುವರು” ಎಂದು ಮಣ್ಣುಮುಟ್ಟಿ ಸೆಟ್ಟಿಗೆ ವರವಿತ್ತರು ಅಜ್ಜರು.