Categories
ಕೃಷಿ ಸಂಸ್ಕೃತಿ-ಸಮುದಾಯ

ಗಿರಿಜನರು

ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಆದಿವಾಸಿಗಳು ಕಾಡುಗಳಲ್ಲಿ ಬದುಕುತ್ತಿರಲಿಲ್ಲ. ಕೃಷಿ ವಿಸ್ತರಣೆಯ ಒತ್ತಡಗಳಿಂದಾಗಿ ಇವರನ್ನೆಲ್ಲ ತುಂಬ ಹಿಂದೆಯೇ ನಾವು ಕಾಡುಮೇಡುಗಳಿಗೆ ಅಟ್ಟಿಬಿಟ್ಟಿದ್ದೆವು. ಈಗ ಅಲ್ಲಿಂದಲೂ ಅವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಭಾರತದ ಭೂಪಟದ ನಿರಿಗೆಗಳನ್ನೆಲ್ಲ ಇಸ್ತ್ರಿ ಹೊಡೆದು ಸರಿಸಪಾಟು ಮಾಡುವ ಈ ಯತ್ನದಲ್ಲಿ ನಿಸರ್ಗ ಪರಂಪರೆಗಳೇ ಅಳಿಸಿ ಹೋಗುತ್ತವೆ. ಇಷ್ಟು ಮುಂದುವರೆದಿದ್ದು ಸಾಲದೆ? ಕರ್ನಾಟಕದಲ್ಲಿ ಎಲ್ಲೆಲ್ಲಿ ಭತ್ತದ ತಳಿ ವೈವಿಧ್ಯ ಉಳಿದುಕೊಂಡಿದೆ ಎಂಬುದರ ಬಗ್ಗೆ ನಮ್ಮ ನಮ್ಮಲ್ಲಿ ಚರ್ಚೆ ನಡೆಯುತ್ತಿತ್ತು. ಆದಿವಾಸಿಗಳ ಹಾಗೂ ಗಿರಿಜನರ ‘ಹಾಡಿ’ಗಳಲ್ಲಿ ಸಾಕಷ್ಟು ತಳಿ ವೈವಿಧ್ಯ ಇದೆ ಎನ್ನುವಾಗ ನಮ್ಮ ಮಿತ್ರ ಶಿವಾನಂದ ಕಳವೆ, ತೀರಾ ಸಹಜ ಎಂಬಂತೆ, ಒಂದು ಮಾತನ್ನು ಎಸೆದರು: ‘ಹೌದು, ಯಾವ ಯಾವ ಊರಿಗೆ ರಸ್ತೆ ಇಲ್ಲವೋ ಆ ಊರುಗಳಲ್ಲೆಲ್ಲ ತಳಿ ವೈವಿಧ್ಯ ಜಾಸ್ತಿ ಇದೆ’ ಅಂದರು.

ಇಂದಿನ ಬದುಕಿನ ವ್ಯಂಗ್ಯವನ್ನು, ವೈರುಧ್ಯವನ್ನು ಇದಕ್ಕಿಂತ ಸೂಚ್ಯವಾಗಿ ಹೇಳಲು ಸಾಧ್ಯವಿದೆಯೆ? ತಳಿವೈವಿಧ್ಯವನ್ನೂ ಉಳಿಸಿಕೊಳ್ಳಬೇಕು, ಸಂಪರ್ಕ ವ್ಯವಸ್ಥೆಯನ್ನೂ ಸುಧಾರಿಸಬೇಕೆಂದರೆ ಸಾಧ್ಯವೆ? ಗಿರಿಜನರು ನಮ್ಮ ಜೀವ ಖಜಾನೆ ಇದ್ದಂತೆ. ಅವರ ಸಂಸ್ಕೃತಿ, ಪರಂಪರೆ, ಗಿಡ-ಬಳ್ಳಿ-ಪಶು-ಪಕ್ಷಿಗಳ ಬಗೆಗಿನ ಅವರ ಜ್ಞಾನ ಹಾಗೂ ಭಕ್ತಿಪೂರ್ವಕ ಸಂಬಂಧ ಎಲ್ಲವೂ ಗ್ರೇಟ್. ಹಾಗೆಯೇ ಅವರ ಬದುಕೂ ತೀರ ದುರ್ಭರ. ಹತ್ತು ಮಾರು ದೂರ ಸಾಗಲಿಕ್ಕೂ ಅವರು ಹತ್ತಬೇಕು, ಇಲ್ಲವೆ ಇಳಿಯಬೇಕು. ನೀರು ಸುಲಭಕ್ಕೆ ಸಿಗುವುದಿಲ್ಲ. ವರ್ಷದ ಆರಾರು ತಿಂಗಳು ಆಹಾರವೂ ಸುಲಭಕ್ಕೆ ಸಿಗುವುದಿಲ್ಲ. ಮಳೆ ಚಳಿ ಎಲ್ಲವೂ ಅಲ್ಲಿ ಜಾಸ್ತಿ. ಕಾಡುಪ್ರಾಣಿಗಳ ಕಾಟ ತೀರಾ ಜಾಸ್ತಿ ಇದ್ದರೆ ಗರ್ಭಿಣಿ, ಬಾಣಂತಿ, ಅಜ್ಜಿ, ಮೊಮ್ಮಗು ಕೂಡ ಮರ ಹತ್ತಿ ಕೂರಬೇಕು. ಗಾಯ-ರೋಗಗಳಿಗೆ ತುರ್ತು ಔಷಧ ಅಥವಾ ಚಿಕಿತ್ಸೆ ಸಿಗುವುದಿಲ್ಲ. ಇಷ್ಟೆಲ್ಲ ಕಷ್ಟ ಎದುರಿಸಿ ಈ ಗಿರಿಜನರು ಯಾಕೆ ಗಿರಿಜನರಾಗಿಯೇ ಉಳಿದಿದ್ದಾರೆ?

(ಇದು ಸಿಲ್ಲಿ ಪ್ರಶ್ನೆ ಎನ್ನಿಸಬಹುದು. ‘ಚೀನೀಯರೆಲ್ಲ ಯಾಕೆ ಚೀನೀಯರ ಥರಾನೇ ಕಾಣುತ್ತಾರೆ?’ ಎಂಬ ಪ್ರಶ್ನೆಯನ್ನು ಕೆದಕಿದವರಿಗೆ ಅನೇಕ ಕರಾಳ ಸತ್ಯಗಳು ತೆರೆದುಕೊಳ್ಳುತ್ತವೆ. ಇಡೀ ಅಷ್ಟುದೊಡ್ಡ ಚೀನಾ ರಾಷ್ಟ್ರದಲ್ಲಿ ಚೀನೀ ಮುಖದವರನ್ನು, ಮಂಡಾರಿನ್ ಭಾಷಿಕರನ್ನು ಬಿಟ್ಟರೆ ಬೇರೆ ಯಾರೂ ಉಳಿಯದ ಹಾಗೆ ಸಾವಿರ ವರ್ಷಗಳ ಹಿಂದೆಯೇ ಬಹುದೊಡ್ಡ ಜನಾಂಗೀಯ ನರಮೇಧ ನಡೆದುಹೋಗಿತ್ತು. ಅದು ಹಿಟ್ಲರನ ನರಮೇಧಕ್ಕಿಂತ ವಿಶಾಲ ವ್ಯಾಪ್ತಿಯದೇ ಇದ್ದೀತ್ತೇನೊ.)

ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಅವರೆಲ್ಲ ನಮ್ಮ ನಿಮ್ಮ ಪೂರ್ವಜರ ಹಾಗೆಯೇ ಹಾಯಾಗಿ ನದಿತೀರಗಳಲ್ಲೋ ಜಲಸಿರಿಯುಳ್ಳ ಮೈದಾನಗಳಲ್ಲೋ ಗಡ್ಡೆಗೆಣಸು, ಹಣ್ಣುಹಂಪಲು ತಿನ್ನುತ್ತ, ಬೇಟೆಯಾಡುತ್ತ ಸರಳವಾಗಿ ಬದುಕಿದ್ದವರು. ಮುಂದೆ ಏನಾಯ್ತು ಅಂದರೆ ಪ್ರಬಲ ಕೋಮಿನವರು ಕೃಷಿಗಾಗಿ ಜಮೀನು ಹುಡುಕುತ್ತ, ತಳವೂರುತ್ತ, ನೆಲವಿಸ್ತರಣೆ ಮಾಡುತ್ತ ಬಂದರು. ಫೈಟ್ ಮಾಡಲು ಶಕ್ತಿಯಿಲ್ಲದ, ಅಥವಾ ಮನುಷ್ಯರ ವಿರುದ್ಧ ಶಸ್ತ್ರ ಎತ್ತದ ಬಡಪಾಯಿಗಳೆಲ್ಲ ದೂರ ಸರಿಯುತ್ತ, ಸರಿಯುತ್ತ ಗುಡ್ಡ ಏರಬೇಕಾಯಿತು. ಆಥವಾ ಘನಘೋರ ಅರಣ್ಯದೊಳಕ್ಕೆ ನುಗ್ಗಿ ಅಲ್ಲೇ ಹೇಗೋ ಬದುಕಲು ಕಲಿತು ಆದಿವಾಸಿಗಳೆನಿಸಿಕೊಳ್ಳಬೇಕಾಯಿತು. ಅವರಿಗೆ ಕತ್ತಿ ದೊಣ್ಣೆ ಹಿಡಿದ ಮನುಷ್ಯರ ಸಹವಾಸಕ್ಕಿಂತ ಹುಲಿ-ಚಿರತೆ-ಆನೆಗಳ ಸಹವಾಸವೇ ಮೇಲೆಂದು ಅನ್ನಿಸಿರಬೇಕು. ಏಕೆಂದರೆ ವನ್ಯಪ್ರಾಣಿಗಳು ವಿನಾಕಾರಣ ಹಿಂಸೆಗೆ ಇಳಿಯುವುದಿಲ್ಲ. ಮರಿಗಳು ಬೆಳೆದಿದ್ದರೆ, ಹೊಟ್ಟೆ ತುಂಬಿದ್ದರಂತೂ, ನೀವು ಹತ್ತಿರ ಸುಳಿದರೂ ಗುರ್ರೆನ್ನುವುದಿಲ್ಲ. ಮನುಷ್ಯ ಹಾಗಲ್ಲವಲ್ಲ.

ಅಂತೂ ಆಧುನಿಕ ನಾಗರಿಕತೆಯೇ ಗಿರಿಜನ-ಆದಿವಾಸಿಗಳನ್ನು ಸೃಷ್ಟಿಸಿದೆ ಅಂದಂತಾಯಿತು. ಈಗ ಅವರನ್ನು ಕಾಡುಮೇಡುಗಳಿಂದಲೂ ಒಕ್ಕಲೆಬ್ಬಿಸುವ ಯತ್ನ ನಡೆದಿದೆ. ಕಳೆದ ಐದಾರು ವರ್ಷಗಳಲ್ಲಿ ಗಣಿಗಾರಿಕೆಯ ಹುಚ್ಚುಪೈಪೋಟಿ ಅದೆಷ್ಟು ತೀವ್ರವಾಗಿದೆ ಎಂದರೆ ಅಂಥ ತೀರ ಒಳನಾಡುಗಳನ್ನೂ ಹುಡುಕಿಕೊಂಡು ಹೋಗಿ ಬುಲ್ಡೋಜರ್‌ಗಳು, ಅರ್ಥ್‌ಮೂವರ್‌ಗಳನ್ನು ನುಗ್ಗಿಸಿ ಅಲ್ಲಿದ್ದ ಜೀವಿ ವೈವಿಧ್ಯವನ್ನು ಬಗ್ಗು ಬಡಿದು ಗಣಿಧನಿಗಳ ‘ಸಾಮ್ರಾಜ್ಯ ವಿಸ್ತರಣೆ’ ನಡೆಯುತ್ತಿದೆ.

ಬೇಕಿದ್ದರೆ ಗಮನಿಸಿ. ನಮ್ಮ ದೇಶದಲ್ಲಿ ಗಣಿ ಸಂಪತ್ತು ಎಲ್ಲೆಲ್ಲಿದೆ ಎಂಬುದನ್ನು ಸೂಚಿಸುವ ಒಂದು ನಕಾಶೆ ತಯಾರಿಸಿ. ಹಾಗೆಯೇ ಜೀವಿವೈವಿಧ್ಯ, ವನ್ಯಸಂಪತ್ತು ಎಲ್ಲುಳಿದಿದೆ ಎಂಬುದರ ಗುರುತಿಸಿ. ಖನಿ
ಜವನ್ನು ಗುರುತಿಸಿದ ಸ್ಥಳದಲ್ಲೇ ಇವೂ ಬರುತ್ತವೆ-ತುಸು ಹೆಚ್ಚುಕಮ್ಮಿ. ಹಾಗೆಯೇ ನಮ್ಮ ದೇಶದ ಆದಿವಾಸಿಗಳು ಹಾಗೂ ಗಿರಿಜನರು ವಾಸಿಸುವ ತಾಣವನ್ನೂ ಅದೇ ನಕಾಶೆಯ ಮೇಲೆ ಗುರುತಿಸಿ. ಬಹುಮುಖ್ಯ ಜಲಮೂಲಗಳು ಎಲ್ಲಿವೆ ಎಂಬುದನ್ನೂ ಗುರುತಿಸಿ. ಎಲ್ಲವೂ ಒಂದೇ ಕಡೆ ಕಾಣುತ್ತವೆ. ಅಂದರೆ, ಎಲ್ಲಿ ಗಿರಿಜನರು- ಆದಿವಾಸಿಗಳು ಇದ್ದಾರೋ ಅಲ್ಲೇ ಅಳಿದುಳಿದ ವನ್ಯ ಸಂಪತ್ತು/ಜೀವಿ ವೈವಿಧ್ಯ ಇದೆ, ಅಲ್ಲೇ ಜಲಮೂಲಗಳೂ ಇವೆ. ಅಲ್ಲೇ ಅಳಿದುಳಿದ ಖನಿಜ ಸಂಪತ್ತೂ ಇದೆ. ಹಿಂದೆ ಮುಂದೆ ನೋಡದೆ ನೀವು ಅಲ್ಲಿ ಡೈನಮೈಟ್ ಇಟ್ಟರೆ ಒಂದೇ ಏಟಿಗೆ ನಾಲ್ಕಾರು ಬಗೆಯ ಸಂಪತ್ತಿಗೆ ನೀವು ಕೊಳ್ಳಿ ಇಟ್ಟಂತಾಗುತ್ತದೆ. ಈಗಂತೂ ಸಾರಾ ಸಗಟಾಗಿ ಡೈನಮೈಟ್‌ಗಳನ್ನು ಇಡುವ ಕೆಲಸ ನಡೆದಿದೆ.

ಆಧುನಿಕ ಬದುಕಿನ ಬಹುದೊಡ್ಡ ವ್ಯಂಗ್ಯದೊಂದಿಗೆ ನಾವೀಗ ಮುಖಾಮುಖಿ ಆಗುತ್ತಿದ್ದೇವೆ. ನಮಗೆ ರಸ್ತೆ ಬೇಕು. ಹೊರಜಗತ್ತಿನೊಂದಿಗೆ ಕುಗ್ರಾಮಗಳನ್ನು ಬೆಸೆಯಬಲ್ಲ ಸಂಚಾರ ಸಾಧನ ಬೇಕು. ಬಸ್ ಇಲ್ಲದಿದ್ದರೆ, ಟೆಂಪೊ, ಲಾರಿಗಳಾದರೂ ಚಲಿಸಬಲ್ಲ ಸರ್ವಋತು ರಸ್ತೆ, ಸೇತುವೆ ಬೇಕು.

ಅದೇ ಕಾಲಕ್ಕೆ ನಮ್ಮ ಮುಂದಿನ ಪೀಳಿಗೆಗಾಗಿ ಜೀವಿ ವೈವಿಧ್ಯ ಉಳಿಯಬೇಕು. ಅದು ಕುದುರೆಮುಖದಲ್ಲಿ, ಸಂಡೂರಿನಲ್ಲಿ, ಒರಿಸ್ಸಾದ ಋಷ್ಯಮೂಕ ಪರ್ವತದಲ್ಲಿ, ಝಾರ್ಖಂಡದಲ್ಲಿ, ವಿದರ್ಭದಲ್ಲಿ ಮಾತ್ರ ಉಳಿದಿದ್ದರೆ ಅವನ್ನು ಉಳಿಸಿಕೊಳ್ಳಬೇಕು. ಅದು ಸಾಧ್ಯವಾಗಬೇಕು ಎಂದರೆ ಅಲ್ಲಿ ರಸ್ತೆ ನಿರ್ಮಾಣ ಆಗಕೂಡದು. ಬುಲ್‌ಡೋಜರ್ ಹೋಗಕೂಡದು. ಜಗತ್ತಿನ ಜೀವವೈವಿಧ್ಯವನ್ನು ಉಳಿಸಬೇಕೆಂದಿದ್ದರೆ ರಸ್ತೆಯೇ ಸಾಧ್ಯವಿಲ್ಲದ ತಾಣವನ್ನು ನೀವು ಹುಡುಕಬೇಕು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ಇದೀಗ ಉತ್ತರ ಧ್ರುವದಿಂದ ೯೬೬ ಕಿಮೀ ದೂರದ ಸ್ವಾಲ್‌ಬಾರ್ಡ್ ಎಂಬಲ್ಲಿ ಹಿಮಪರ್ವತವನ್ನು ಕೊರೆದು ಒಂದು ಬಹುದೊಡ್ಡ ಜೀವಖಜಾನೆಯನ್ನು ಸೃಷ್ಟಿಸಲಾಗುತ್ತಿದೆ. ಶೂನ್ಯದ ಕೆಳಗೆ ೧೮ ಡಿಗ್ರಿ ಸೆ. ತಂಪಿರುವ ಅಲ್ಲಿ ೩೦ ಲಕ್ಷ ತಳಿಗಳ ಬೀಜಗಳನ್ನು ಇಡಲೆಂದು ಹಿಮವನ್ನು ಕೊರೆಯಲಾಗಿದೆ. ಅಲ್ಲಿನ ನಿರ್ಜನ, ಶೀತಲನರಕಕ್ಕೆ ಹೋಗಲು ರಸ್ತೆಯೇ ಇಲ್ಲವಾದ್ದರಿಂದ ಆ ಖಜಾನೆಗೆ ಬೀಗ ಕೂಡ ಬೇಕಿಲ್ಲವಂತೆ.

ಇತ್ತ ಭಾರತದ ಕುಗ್ರಾಮಗಳನ್ನು ಆಧುನಿಕಗೊಳಿಸುವ ಯತ್ನ ನಡೆದಿದೆ. ಅಲ್ಲಿಗೆ ಮೂಲ ಸೌಕರ್ಯ ಒದಗಿಸಿದರೆ ‘ನಿಮಗೇ ಅನುಕೂಲ’ ಎಂದು ಬಹುರಾಷ್ಟ್ರೀಯ ಬಿಗ್ ಬಿಸಿನೆಸ್ ಕಂಪನಿಗಳಿಗೆ ಅರ್ಥತಜ್ಞ ಅಮರ್ತ್ಯ ಸೆನ್ ಸಲಹೆ ನೀಡುತ್ತಾರೆ. ಹಳ್ಳಿಗಳತ್ತ ಉತ್ತಮ ರಸ್ತೆಗಳಾದರೆ ಕೃಷಿ ಉತ್ಪನ್ನಗಳ ಸಾಗಾಟ ಸುಲಭ, ಉದ್ಯೋಗ ನಿರ್ಮಿತಿಯೂ ಸುಲಭ ಎಂದು ಕೃಷಿತಜ್ಞ ಸ್ವಾಮಿನಾಥನ್ ಹೇಳುತ್ತಾರೆ. ಹಾಗೆ ಹಳ್ಳಿಗರನ್ನು ನಗರಗಳತ್ತ ಸೆಳೆಯುವ ಹೆದ್ದಾರಿಗಳನ್ನು ನಿರ್ಮಿಸುವ ಬದಲು, ನಗರಕ್ಕೆ ಬಂದ ಹತವಾಸಿಗಳನ್ನು ಹಳ್ಳಿಗಳತ್ತ ಹೊರಡಿಸುವ ಕಿರುದಾರಿಗಳನ್ನು ನಿರ್ಮಿಸಿದರೆ ಹೇಗೆ? ರಾಳೆಗಾಂವ್ ಸಿದ್ದಿಯಲ್ಲಿ, ರೂಪಾರೆಲ್ ನದಿತಟಾಕದಲ್ಲಿ ಅಂಥ ಯತ್ನಗಳು ಸಫಲವಾಗಿವೆ. ನಿಸರ್ಗವನ್ನು ಧೂಲೀಪಟಗೊಳಿಸುವ ಯಂತ್ರಗಳನ್ನು ಗುಡ್ಡಕ್ಕೆ ಅಟ್ಟುವ ಬದಲು ಬೋಳುಗುಡ್ಡಗಳನ್ನು ಸಮೃದ್ಧಗೊಳಿಸುವ ಕೈಗಳು ನಮಗಿಂದು ಬೇಕಾಗಿವೆ. ನಾವಿಂದು ಎಷ್ಟು ಲಕ್ಷ ಟನ್ ಅದುರನ್ನು ರಫ್ತು ಮಾಡುತ್ತಿದ್ದೇವೆಯೋ ಸುಮಾರು ಅಷ್ಟೇ ಲಕ್ಷ ಟನ್ ಜೈವಿಕ ಸಾಮಗ್ರಿ ನಮ್ಮ ನಗರಗಳಿಗೆ ಅಗತ್ಯವಿದೆ. ಕಾಗದ, ಬಟ್ಟೆ, ಔಷಧ, ಇಂಧನ, ಕಟ್ಟಡ ಸಾಮಗ್ರಿ, ಪ್ಲಾಸ್ಟಿಕ್ ಎಲ್ಲವನ್ನೂ ಒದಗಿಸಬಲ್ಲ, ಕೋಟ್ಯಂತರ ಕೈಗಳಿಗೆ ಉದ್ಯೋಗ ನೀಡಬಲ್ಲ, ಋತುಮಾನಗಳನ್ನು ಸಮತೋಲ ಇಡಬಲ್ಲ, ಯಾವ ಕೃತಕ ಒಳಸುರಿಯಿಲ್ಲದೆ ಬೆಳೆಯಬಲ್ಲ ಸಹಜ ಜೀವಧಾಮಗಳನ್ನು, ಜೀವವೈವಿಧ್ಯ ರಕ್ಷಣೆಯ ಚಿರಂತನ ಖಜಾನೆಗಳನ್ನು ನಾವು ಸೃಷ್ಟಿಸಲಾರೆವೆ?

ಸೌಜನ್ಯ: ‘ಅಡಿಕೆ ಪತ್ರಿಕೆ’ಯ ಸೆಪ್ಟೆಂಬರ್ ೨೦೦೯ರ ಸಂಚಿಕೆಯ ‘ರಿಕ್ತ-ವ್ಯತಿರಿಕ್ತ’ ಅಂಕಣ ಬರಹ