(ಪುರೋಹಿತರು ಬರುವುದು)

ಪದ

ಮಂದರಗಿರಿಧರನೇ ಶ್ರೀವರನೆ ಬಾ
ಮಂದರಗಿರಿಧರನೇ॥ಲೋಕಾನೇಕಾ
ಸಾಕುವದೇವ ನೀ ಕೃಪೆ ತೋರೀಗಾ ಸದಾಶಿವ॥
ಮಂದರಗಿರಿಧರನೇ॥ಶಿವ ಶಿವ ಮಹಾದೇವ॥

ಗಿರಿರಾಜ: ನಮೋನ್ನಮೋ ಪುರೋಹಿತರೆ.

ಪುರೋಹಿತರು: ಅಯ್ಯ ಹಿಮವಂತ ಆಯುಷ್ಮಂತನಾಗು ಈಗ ತ್ವರಿತದಿಂದ ಕರೆಸಿದ ಪರಿ ಯಾವುದು ತಿಳುಹಿಸು.

ಗಿರಿರಾಜನ: ಸ್ವಾಮಿ ಪುರೋಹಿತರೇ ಪರಮೇಶ್ವರನಿಗೆ ನನ್ನ ಮಗಳಂ ಕೊಟ್ಟು ವಿವಾಹ ಮುಹೂರ್ತವಂ ನಡೆಸಬೇಕು. ಆದ ಪ್ರಯುಕ್ತ ಪರಮೇಶ್ವರನ ಸವಾರಿಯು ದಯಮಾಡಿಸು ವುದರೊಳಗಾಗಿ ನಾಂದಿಕಾರ‌್ಯಗಳಾದಿಯಾಗಿ ಎಲ್ಲವೂ ನಡೆಸುವುದು ಧಾರೆಮುಹೂರ್ತ ಮಾತ್ರ ಬಾಕಿ ನಿಂತಿರಬೇಕು ಈ ರೀತಿ ನೆರವೇರಿಸಿ ಸ್ವಾಮಿ ಪುರೋಹಿತರೆ. ಎಲೈ ಪ್ರಾಣಕಾಂತೆಯೆ ಕೈಲಾಸಕ್ಕೆ ಹೋಗಿ ವರಪೂಜೆಯಂ ಮಾಡಿ ಹರನಂ ಕರೆದುಕೊಂಡು ಬರಲು ಕಲಶ ಕನ್ನಡಿ ವಾರನಾರಿಯರು ಪೂಜಾಸಾಮಗ್ರಿಗಳೆಲ್ಲಾ ಸಿದ್ದಪಡಿಸಿಕೊಂಡು ಜಾಗ್ರತೆ ಹೊರಡುವಳಾಗೆ ಕಾಂತಾಮಣಿ.

ಮೇನಕೆ: ಪ್ರಾಣಕಾಂತರೆ ತಮ್ಮಪ್ಪಣೆಯಂತೆ ಸಕಲವಂ ಸಿದ್ಧಪಡಿಸಿಕೊಂಡು ಬಂದಿರುವೆನು ಹೊರಡುವರಾಗಿರಿ.

 

(ಗಿರಿರಾಜ ಮೇನಕೆ ಕೈಲಾಸಕ್ಕೆ ಹೋಗುವರು)

ಗಿರಿರಾಜ: ಸ್ವಾಮಿ ನಂದೀಶ್ವರರೇ ವಂದಿಸುವೆನು.

ನಂದೀಶ: ಅಯ್ಯ ಗಿರಿರಾಜನೆ ನೀನು ಬಂದ ಕಾರಣವೇನು.

ಗಿರಿರಾಜ: ಸ್ವಾಮಿ ದ್ವಿತೀಯ ಶಂಭುವೆ ಪರಮೇಶ್ವರನಿಗೆ ನನ್ನ ಮಗಳಂ ಕೊಡುವುದಾಗಿ ನಿಶ್ಚಯಿಸಿ ವರಪೂಜೆಯಂ ಮಾಡಲು ಬಂದಿರುತ್ತೇನೆ ಸ್ವಾಮಿ.

ನಂದೀಶ: ಎಲೈ ಗಿರಿರಾಜನೆ ಬಹಳ ಸಂತೋಷವಾಯಿತು. ನೀನು ಒಳಗೆ ಪ್ರವೇಶಮಾಡಲು ಯಾರ ಅಡ್ಡಿಯು ಇರುವುದಿಲ್ಲ ಹೋಗಬಹುದು.

ಕಂದ

ಪರಿಪರಿ ಇಂದ ಪೊಗಳುತ್ತಂ ಗಿರಿಪತಿಯೊಳಗೆಪೊಕ್ಕನಾ
ಗಲವನು ಮತಿಯಿಂ ಮೆರೆಯುವ ಸಭೆಯೊಳಗೊಪ್ಪು
ವ ಪರಶಿವನಂ ಕಂಡು ಚರಣಕೆರಗುತ ನುಡಿದಂ॥

ಗಿರಿರಾಜ: ಮಹಾಸ್ವಾಮಿ ಶಂಭುವೇ ಈಗ ನಾನು ಮಾಡುವ ಪೂಜೆಯಂ ವರಪೂಜೆ ಎಂದು ಭಾವಿಸಿ ನನ್ನನ್ನು ಉದ್ದಾರ ಮಾಡಬೇಕೋ ಪರಮಾತ್ಮನೆ ಇದೇ ನನ್ನ ವಂದನೆ.

ಈಶ್ವರ: ಎಲೈ ದಂಪತಿಗಳೇ ನಿಮ್ಮಗಳಿಗೆ ಮಂಗಳವಾಗಲಿ.

ಪದ

ರಕ್ಷಿಸಬೇಕೊ ಸಾಂಬ ಕರುಣಾಕರ ಲಂಬಪಕ್ಷತ ಭೂ
ಷಣ ಪಕ್ಷಿವಾಹನವನುತ ದಕ್ಷ ಶಿಕ್ಷಕ ನಿಪುಣ ಜಗದ್ರಕ್ಷ
ಕ ಶರಣು॥ರಕ್ಷಿಸಬೇಕೊ ಸಾಂಬ॥ಶಶಿಕಂಠ ನೀ ಯನ್ನ ಸುತೆ
ಗೆ ನೀ ಪತಿಯಾಗು ಅತಿಶಯ ಮುದವ ತಾಳು ಕರುಣಾಳು
ಕೇಳು॥ರಕ್ಷಿಸಬೇಕೋ ಸಾಂಬ॥

ಗಿರಿರಾಜ: ಜಯ ಜಯ ಸ್ವಾಮಿ ತಾವು ಶರಣಾಗತರನ್ನು ಕಾಪಾಡುವ ಸ್ವಾಮಿ ದಕ್ಷನ ಯಜ್ಞವಂ ದ್ವಂಸಮಾಡಿ ವಿಷ್ಣುವೇ ಮೊದಲಾದವರಿಂದ ವಂದನೆಯಂ ತೆಗೆದುಕೊಳ್ಳುವ ದೇವದೇವನೆ ನನ್ನ ಮಗಳಾದ ಗಿರಿಜೆಯನ್ನು ತಮ್ಮ ಪಾದಕ್ಕೆ ವಪ್ಪಿಸಿ ನಾನು ಧನ್ಯನಾಗಬೇಕೆಂದು ಬಂದಿರುತ್ತೇನೆ ನನ್ನ ವಿಜ್ಞಾಪನೆಯಂ ನೆರವೇರಿಸಿ ನನ್ನ ಮಗಳಿಗೆ ಪತಿಯಾಗಿ ಧನ್ಯನ ಮಾಡಬೇಕೋ ಪರಮಾತ್ಮನೆ ಇದೇ ನನ್ನ ವಂದನೆ.

ಕಂದ

ಎಂದಾಡಲ್ ಗಿರಿಪತಿಯಾನಂದವಂ ತಳೆಯುತ್ತಲಿಂದು
ಮೌಳಿಯ ಮನದೋಳ್ ಬಂದೆಪೆನು ನಡಿಯನುತಲೇ॥
ನಂದೀಶ್ವರನಂ ಕರೆಸಿ ಬೆಸಸಿಹನಭವಂ॥

ಈಶ್ವರ: ಗಿರಿರಾಜನೆ ನಿನ್ನ ಇಷ್ಟದಂತೆ ನೆರವೇರಿಸುವುದಕ್ಕೆ ಸಿದ್ಧವಾಗಿ ಬರುತ್ತೇನೆ. ನೀನು ನಿನ್ನ ಪಟ್ಟಣಕ್ಕೆ ಪ್ರಯಾಣಮಾಡಿ ಲಗ್ನಕ್ಕೆ ಸಿದ್ದಪಡಿಸಿಕೊಂಡಿರು ಹೋಗಬಹುದೈಯ್ಯ ಗಿರಿರಾಜ ನತಕಲ್ಪಭೋಜ.

ಗಿರಿರಾಜ: ತಮ್ಮ ಅಪ್ಪಣೆಯಂತೆ ಹೋಗಿಬರುವೆನೈ ಶಂಕರನೇ ಭವಭಯಹರನೆ.

ಪದ

ನಂದೀಶ ಕೇಳಿದೆಯಾಗಿ ಗಿರಿ ಪೇಳಿದಾನಂದವಾಗಿಹ
ನುಡಿಯಾ ನಂದನೆಯಾದ ಪಾರ‌್ವತಿಯನ್ನು ಯನಗಾ
ನಂದದಿ ಪರಿಣಯ ವನ್ನು ಮಾಡುವನಂತೆ॥

ಈಶ್ವರ: ಅಯ್ಯ ನಂದೀಶನೆ ಕೇಳು ಗಿರಿರಾಜನು ಬಂದು ತನ್ನ ಮಗಳಾದ ಗಿರಿಜೆಯನ್ನು ಲಗ್ನ ಮಾಡಿಕೊಡುವುದಾಗಿ ವರ್ತಮಾನವನ್ನು ತಿಳುಹಿಸಿ ಜಾಗ್ರತೆಯಾಗಿ ಬರಬೇಕೆಂದು ಹೇಳಿ ಹೋಗಿರುತ್ತರಾದ್ದರಿಂದ ನಾನು ಹೊರಡುವ ಪ್ರಯತ್ನ ಮಾಡುತ್ತೇನೆ.

ಪದ

ಅದರಿಂದಲುತ್ಸವಕೆ ಸನ್ನಹವಾಗಿ ವದಗಲಿ ಹೊರಡ
ಲಿಕೆ ವಿಧಿ ಮೊದಲಾಗಿಹ ಸಕಲದೇವತೆಗಳು ಮುದ
ದಿಂದಲೆಮ್ಮಯ ಗಣಗಳು ಬರಲೆಂದು॥ನಂದೀಶ ಕೇಳಿ॥

ಈಶ್ವರ: ಅಯ್ಯ ನಂದೀಶನೆ, ಲಗ್ನಕ್ಕೆ ಹೋಗಬೇಕಾದ್ದರಿಂದ ವಿಷ್ಣು ಬ್ರಹ್ಮೇಂದ್ರಾದಿಗಳು ರುದ್ರಾದಿಗಣಂಗಳು ಕಿನ್ನರಕಿಂಪುರುಷ ಸಿದ್ಧಸಾದ್ಯ ಗರುಡಗಂಧರ್ವರಾದಿಯಾಗಿ ಸಕಲರನ್ನು ಅತಿ ತೀವ್ರದಿಂದ ಕರೆದುಕೊಂಡು ಬರುವನಾಗಯ್ಯ ನಂದೀಶ.

ನಂದೀಶ: ಅಯ್ಯ ವಿಷ್ಣು ಬ್ರಹ್ಮೇಂದ್ರಾದಿ ದೇವತೆಗಳೇ ಯಕ್ಷ ರಾಕ್ಷಸ ಕಿನ್ನರ ಕಿಂಪುರುಷ ಸಿದ್ಧಸಾದ್ಯಗರುಡ ಗಂಧರ್ವರಾದಿಯಾಗಿಯೂ ಔಷಧಾಪಟ್ಟಣಕ್ಕೆ ಪರಮೇಶ್ವರನ ಗಿರಿಜಾಕಲ್ಯಾಣಕ್ಕೆ ಸರ್ವರೂ ದಯಮಾಡಿಸಬೇಕೆಂದು ಜಗದೀಶ್ವರನ ಅಪ್ಪಣೆಯಂತೆ ಸಿದ್ದವಾಗಿ ಹೊರಡುವಂಥವ ರಾಗಿರಿ.

ಗಿರಿರಾಜ: ಎಲೈ ಪ್ರಾಣದೊಲ್ಲಬೆ, ಜಗದೀಶ್ವರನ ಸವಾರಿಯು ಬರುವುದರಿಂದ ಸಕಲ ಮರ‌್ಯಾದೆ ಇಂದ ಕರೆದುಕೊಂಡುಬರುವ ಪ್ರಯುಕ್ತ ಮುತ್ತೈದೆಯರ ಬರಮಾಡುವಂಥವಳಾಗು.

ಗಿರಿರಾಜ: ಎಲೈ ಸಾರಥಿ ಕಲಶಕನ್ನಡಿ ವಾರನಾರಿಯರು ವಿಪ್ರೋತ್ತಮರು ಮುತ್ತೈದೆಯರು ಸರ್ವರಾದಿಯಾಗಿ ಬರುವಂತೆ ಎನ್ನ ಪಟ್ಟಣದಲ್ಲಿ ತಿಳುಹಿಸು. ಪ್ರಾಣಕಾಂತೆ, ಜಗದೀಶನು ಸಕಲರಿಂದೊಡಗೂಡಿ ಬಂದಿರುವರು ಜಾಗ್ರತೆಯಾಗಿ ಪಾದವನ್ನು ತೊಳೆದು ಪೂಜಿಸೋಣ ಬಾರೆ ಗುಣ ಗಂಭೀರೆ.

 

(ಗಿರಿರಾಜ ಮೇನಕೆ ಈಶ್ವರನ ಪಾದವನ್ನು ಪೂಜೆ ಮಾಡುವದು)

ಗಿರಿರಾಜ: ಸ್ವಾಮಿ ಒಳಗೆ ದಯಮಾಡಿಸಿ ಈ ಪೀಠವನ್ನು ಅಲಂಕರಿಸಬೇಕು ಅಯ್ಯ ಪುರೋಹಿತರೆ. ನಾಂದಿ ಮೊದಲಾದ ಶುಭಕಾರ‌್ಯಗಳಂ ಪೂರೈಸಿ ಅತಿಜಾಗ್ರತೆ ಇಂದ ಧಾರಾಮುಹೂರ್ತವನ್ನು ಬೆಳೆಸಿರಿ ಎಲೈ ಸಖಿಯರೆ ಅತಿ ಜಾಗ್ರತೆ ಇಂದ ನನ್ನ ಮಗಳಾದ ಗಿರಿಜೆಯನ್ನು ದಿವ್ಯ ಪೀತಾಂಬರವನ್ನುಡಿಸಿ ದಿವ್ಯಾಲಂಕಾರಗಳಿಂದ ಅಲಂಕರಿಸಿ ವಿವಾಹ ಮಂಟಪದಲ್ಲಿ ನಿಲ್ಲಿಸಿರಿ ಪುರೋಹಿತರೇ ಈ ಕಾರ‌್ಯವನ್ನು ಶುಭಮುಹೂರ್ತದಲ್ಲಿ ನೆರವೇರಿಸುವರಾಗಿರಿ ಪೂಜ್ಯರೆ.

ಪುರೋಹಿತರು: ಅಯ್ಯ ಗಿರಿರಾಜನೆ ನಿನ್ನಿಷ್ಟದಂತೆ ಲಗ್ನವನ್ನು ನೆರವೇರಿಸುತ್ತೇನೆ. ಮುತ್ತೈದೆಯರನ್ನು ತಕ್ಕ ಸಾಮಗ್ರಿಗಳನ್ನು ಮತ್ತು ಪುಷ್ಪ ಮಾಲಿಕೆಯನ್ನು ಗುಡಜೀರಿಗೆ ಮೊದಲಾದ ವಸ್ತುಗಳನ್ನು ತರುವಂತೆ ಹೇಳು ಹದವಾದ ಶುಭ ಮುಹೂರ್ತವನ್ನು ತಕ್ಷಣದೋಳ್ ದಕ್ಷಾರಿ ಧವಳಾಕ್ಷ ವಿರುಪಾಕ್ಷ ಜಗದ್ರಕ್ಷಕನ ಕಾರ‌್ಯವನ್ನು ಸಾಂಗೋಪಾಂಗವಾಗಿ ನೆರವೇರಿಸುವೆನು ರಾಜೇಂದ್ರನೆ ಗಿರಿರಾಜನೆ.

ಗಿರಿರಾಜ: ಪುರೋಹಿತರೆ ತಾವು ಅಪ್ಪಣೆ ಮಾಡಿದ ಸಾಮಗ್ರಿಗಳು ಸಕಲವೂ ಸಿದ್ಧವಾಗಿರುವುದು ಪ್ರಶಸ್ತವಾದ ಲಗ್ನದಲ್ಲಿ ಶುಭಮುಹೂರ್ತವನ್ನು ಪೂರೈಸುವರಾಗಿರಿ ಈಶ್ವರನಿಗೂ ಗಿರಿಜೆಗೂ ಧಾರಾ ಮುಹೂರ್ತ.

ಪುರೋಹಿತರು: ಸುಲಗ್ನಸಾವಧಾನ ಶುಭಮುಹೂರ್ತ ಸಾವಧಾನ ಪಾರ‌್ವತೀ ಪರಮೇಶ್ವರ ಸಾವಧಾನ.

ಪದ
ಧ್ಯಾನಿಪೆ ನಾ ನಿಮ್ಮ ತ್ರಿಪುರ ಸಂಹರನೇ ಕಪ್ಪುಗೊರಳಶಂಭುವೆ
ದೀನ ಭಕ್ತರ ಕಾಮಧೇನುವೆ ಇನಿತು ಸಂಸಾರದೊಳು ಸಿಲುಕಿ
ಬನ್ನ ಪಡುತಲಿರುವ ಮನುಜರನು ಪೊರೆಯೊ ದೇವ ದೇವನೆ॥
ಉರಿವನೇತ್ರನೆ ನಿನ್ನ ಸ್ಮರಿಸುವೆವೋ ಮುನ್ನ ಪರಿಹರಿಸಿ
ಕಾಯಯ್ಯ ಮಾಯೆಯ ಮೋಹವನು॥ಭೂರಿಬಾಗ್ಯವು
ಸತಿಯೂ ಸುತರು ನಿರತಲಿರುವುದು ಸತ್ಯವೆಂದು
ಹರನೆ ಭಾವಿಸಿ ನಿನ್ನ ಮರೆತು ದೂರ ಬಿಟ್ಟೆವು
ಮೋಕ್ಷ ಮಾರ್ಗವ ತೋರೊ॥ಧ್ಯಾನಿಪೆ ನಾ ನಿಮ್ಮ॥

ದೇವೇಂದ್ರ: ಆಹಾ ಈಗಲಾದರೂ ಅಗಲಿರ್ದ ದಂಪತಿಗಳು ಸೇರಿರುತ್ತಾರೆ. ಈ ಕಾಲದಲ್ಲಿ ನಮ್ಮ ವಿಚಾರವನ್ನು ಅರಿಕೆ ಮಾಡಿಕೊಂಡರೆ ಜಗದಂಬೆಯಾದ ಗಿರಿಜಾದೇವಿಗೆ ದಯೆ ಬಂದು ನಮ್ಮನ್ನು ಾಪಾಡದೆ ಇರಲಾರರು ಅಮ್ಮಾ ರತಿದೇವಿಯೇ ಗಿರಿಜಾ ಅಮ್ಮಯ್ಯನವರನ್ನು ಧ್ಯಾನ ಮಾಡೋಣ ನಡಿಯಮ್ಮಾ ರತಿಯೆ ಚಂದ್ರಮತಿಯೆ.

ಪದ

ಗಿರೀಶನ ಗಿರಿಸುತೆಯೆ ಮನ್ಮಥಹರನ ಕೃಪಾವತಿಯೆ
ಶರಣು ಜನವನ ಶರಣ ಕುಟುಂಬಿನಿ ಕರುಣದಿ ರಕ್ಷಿಸು
ಮರೆಯದೆ ನಮ್ಮನು॥ಗಿರೀಶನ ಗಿರಿಸುತೆಯೆ॥

ದೇವೇಂದ್ರ: ಜಯ ಜಯ ತಾಯೆ ಆಶ್ರಿತರಿಗೆ ಇಷ್ಟಾರ್ಥವನ್ನು ಕೊಡುವ ತಾಯೆ ಮನ್ಮಥಾರಿಯಾದ ಪರಮೇಶ್ವರನ ಅರ್ಧಾಂಗಿಯೆ ತಮ್ಮ ಪಾದಕ್ಕೆ ನಮಸ್ಕರಿಸುವೆನು ಆಹಾ ಮಹದೇವನೇ ತಾವು ಹಿಂದೆ ಅಪ್ಪಣೆ ಕೊಟ್ಟ ಸಮಯವು ಈಗ ಪ್ರಾಪ್ತವಾಯಿತು. ತಡಮಾಡದೆ ಕುಮಾರನಂ ಪಡೆದು ಶೂರಪದ್ಮ ಸಿಂಹಾರಿ ಎಂಬ ರಕ್ಕಸರಂ ಕೊಲ್ಲಿಸಿ ನಮ್ಮ ಕಷ್ಟವಂ ಪರಿಹರಿಸಬಾರದೆ ತಾವು ತಡಮಾಡಿದರೆ ನಾವುಗಳು ಬದುಕುವ ಮಾಗವೇ ಇಲ್ಲವೈ ದೇವಾ ಕರುಣಪ್ರಭಾವ.

ರತಿ: ಸ್ವಾಮಿ ಗಿರಿಜಾಪತಿಯೇ ಪತಿಯನ್ನು ಕಳೆದುಕೊಂಡು ತಮ್ಮ ಪಾದವೇ ಗತಿ ಯನ್ನುವದಾಗಿ ಕಾದಿರುವ ನನಗೆ ವರವಂ ದಯಪಾಲಿಸಿ ಕಾಪಾಡಬೇಕು ಪರಮಾತ್ಮನೆ.

ಈಶ್ವರ: ಅಯ್ಯ ದೇವತೆಗಳೇ ಇನ್ನು ಸ್ವಲ್ಪ ಕಾಲದಲ್ಲಿ ನಿಮಗೆ ಸುಖವಾಗುವುದು ಧೈರ‌್ಯವಾಗಿರಿ ಅಮ್ಮಾ ರತಿಯೇ ಕೇಳು ನಿನ್ನ ಪತಿವ್ರತಾಧರ್ಮಕ್ಕೆ ನಾನು ಮೆಚ್ಚಿದೆನು ಆದರೆ ನಿನ್ನ ಪತಿಯು ನಿನಗೆ ಅನಂನಾಗಿರಲಿ ಜಗದೊಳಗೆಲ್ಲರಿಗೂ ಅನಂಗನಾಗಿರಲಿ ಮುಂದೆ ವಿಷ್ಣುವು ಕೃಷ್ಣಾವತಾರ ಮಾಡಿದಾಗ ಅವನಿಗೆ ಪ್ರದ್ಯುಮ್ನನಾಗಿ ಶಂಬರಾಸುರನಂ ಕೊಲ್ಲುವುದಕ್ಕಾಗಿ ನಿನ್ನ ಪತಿಯು ಜನಿಸುವನು ಚಿಂತಿಸದೆ ಇರುವಳಾಗು ಎಲೈ ಗಿರಿಜೆಯೆ ಭಕ್ತರಿಗೆ ಅಭಯವಂ ಕೊಟ್ಟು ಅವರ ಮನಸ್ಸಂತೋಷಪಡಿಸಿದ್ದಾಯಿತು ಎನ್ನ ಅಂತಃಪುರಕ್ಕೆ ಹೋಗೋಣ ನಡಿಯೇ ರಮಣಿ ಸದ್ಗುಣಾಭರಣಿ.

ಷಟ್ಪದಿ

ಆಲಿಸೈ ಸಿದ್ದರಾಮೇಶ ಕೈಲಾಸದೋಳ್
ಭಾಳಲೋವಚನ ನಗಜೆಯೊಡನೆ ಮುದದಿಂ
ಸುರತಕೇಳಿ ಯೊಳ್ ಇರುತಿರಲಿತ್ತ ಇಂದ್ರಾದಿ ನಿರ್ಜರರು
ಹೊರಗೆ ಬಂದು ಪೇಳೆ ತಾರಕಾನುರುಬೆಯಂ ಕೇಳ್ದು
ಚಿಂತೆಯ ತಾಳಿ ದಿವಿಜರ್‌ವೆರಸಿ ಹರಿ ಎಡೆಗೆ ಬಂದು
ಕಂಡಾಲೋಚನಂಗೈದರಸು ನಟ್ಟುಳಿಗೆ
ಏನುಪಾಯವ ಕಾಣ್ವೆವೆಂದು॥

ದೇವೇಂದ್ರ: ಆಹಾ ದೇವರಿಗೆ ದೇವನಾದ ಶ್ರೀಹರಿಯೇ ಕೇಳು ತಾರಕಾಸುರನೇ ಮೊದಲಾದ ದೈತ್ಯರ ಬಾಧೆಯಂ ಸಹಿಸಿಕೊಳ್ಳಲು ಬಹಳ ಸಂಕಟವಾಗಿರುವುದು. ಸ್ವಲ್ಪ ಕಾಲದಲ್ಲಿಯೇ ನಿಮ್ಮಗಳಿಗೆ  ಸುಖವನ್ನುಂಟು ಮಾಡುತ್ತೇನೆಂದು ಹೇಳಿದ ಜಗದೀಶನು ಇದುವರೆಗೆ ನಮ್ಮ ಕಷ್ಟವನ್ನು ಮನಸ್ಸಿಗೆ ಂದುಕೊಂಡಂತೆ ಕಾಣುವುದಿಲ್ಲ ಒಂದು ದಿನ ಕಳೆಯುವುದು ಒಂದು ಯುಗವಾದಂತೆ ಕಾಣುವುದು ಇದಕ್ಕೇನಾದರೂ ಬದಲಾಗಿ ಆಲೋಚನೆಯನ್ನು ಮಾಡಬಾರದೇ ಹರಿಯೆ ದಾನವಾರಿಯೆ.

ವಿಷ್ಣು: ಅಯ್ಯ ಬ್ರಹ್ಮೇಂದ್ರರೆ ಕೇಳಿ ನೀವು ಹೇಳಿದ ಮಾತು ನಿಶ್ಚಯವೇ ಸರಿ. ಆದರೆ ಪರಮೇಶ್ವರನು ನಮ್ಮಗಳಿಗೆ ಕೊಟ್ಟ ಅಭಯಪ್ರದಾನವು ಸುಳ್ಳು ಬರುವ ಹಾಗಿಲ್ಲವು ಅದಕ್ಕಾಗಿಯೇ ಸ್ವಾಮಿಯವರು ಗಿರಿಜಾ ಅಮ್ಮಯ್ಯನವರನ್ನು ಲಗ್ನಮಾಡಿಕೊಂಡು  ಕೈಲಾಸದಲ್ಲಿ ಭೋಗಾನಂದಸ್ತರಾಗಿ ಕುಮಾರನನ್ನು ಪಡೆಯಲುಳ್ಳವರಾಗಿದ್ದಾರೆ. ಆ ಗಿರಿಜಾದೇವಿಯ ಉದರದಲ್ಲಿ ಹುಟ್ಟಿದ ಕುಮಾರನು ನೂರ್ಮಡಿ ಮಿಗಿಲಾಗಿ ನಮ್ಮಗಳನ್ನು ಬಾಧಿಸುವನು. ಅನಂತರ ಅವನ ಆಜ್ಞೆಯಲ್ಲಿ ನಾವುಗಳು ಇರಬೇಕಾಗುವುದು ಅಯ್ಯ ದೇವತೆಗಳಿರಾ ಇದರಿಂದ ನಮ್ಮಗಳ ಸಂಕಟ ಇನ್ನೂ ಹೆಚ್ಚಿದಂತೆ ಆಗುವುದು. ಆದ್ದರಿಂದ ಈಶ್ವರನ ವೀರ‌್ಯದಿಂದ ಕುಮಾರನು ಬೇರೆ ಗರ್ಭದಲ್ಲಿ ಹುಟ್ಟಬೇಕಲ್ಲದೆ ಗಿರಿಜಾ ಅಮ್ಮನವರ ಉದರದಲ್ಲಿ ಹುಟ್ಟಕೂಡದೆಂದು ಆ ಶಂಕರ ಭವಹರನಂ ಕುರಿತು ತಪಸ್ಸನ್ನು ಮಾಡೋಣ ನೀವುಗಳೆಲ್ಲ ಏಕೋಭಾವದಿಂದ ಶಿವತತ್ವಗಳನ್ನು ಧ್ಯಾನಿಸುವರಾಗಿ ಸುರರೇ ಇಂದ್ರಾದಿ ದೇವತೆಗಳೆ.

ಪದ

ಪಾಲಿಸೆಮ್ಮನು ಕಾಲಹರಶಿವಪಾಲಾಕ್ಷ ಸೋಮಧರ॥
ಶಿಕ್ಷರಕ್ಷನೆ ಶೂಲಿ ದಕ್ಷನ ಸಂಹಾರಿ ರಕ್ಷಿಸು ಎನ್ನ ಬೇಗಾ॥
ದಾಕ್ಷಾಯಣಿ ನಾಥನೆ॥ನತಜನ ಉದ್ದಾರಿ॥ರತಿಪತಿ
ಸಂಹಾರಿ ನುತಿಸುವೆ ನಾ ನಿನ್ನ ಯತಿ ಪತಿ ಕಾಪಾಡು ನೀ॥
ಗಿರಿಜಾರಮಣ ನಿನ್ನ ಚರಣವ ಸ್ಮರಿಸುವೆ ಕರುಣಾದಿ
ಸಲಹೆನ್ನ ಕರುಣುಳ್ಳ ಅರಸನೆ॥

ದೇವೇಂದ್ರ: ಹೇ ಕಾಲ ಕಾಲ ಶೂಲಪಾಣಿಮಾಲ ದಕ್ಷಮಖಶಿಕ್ಷ ವಿರುಪಾಕ್ಷ ಶಂಭೋ ಶಂಕರ. ಆ ಕ್ರೂರ ತಾರಕನೇ ಮೊದಲಾದ ದುರುಳ ರಕ್ಕಸರ ಬಾಧೆಯಂ ತಾಳಲಾರೆವು. ಭೋ ಚಂದ್ರಧರನೆ ಕಷ್ಟಬಿಡಿಸಿ ನಮ್ಮಗಳನ್ನು ಕಾಪಾಡು ಕಾಪಾಡು.

 

 

 

(ಈಶ್ವರನು ಪ್ರತ್ಯಕ್ಷನಾಗುವನು)

ಪದ

ಪಾಲಿಸೊ ದೇವಾ ಪಾಲಲೋಚನಶಿವನೆ ನೀಲಕಂಠನೆ
ನಿನ್ನ ಪಾದವ ನಂಬಿದೆ, ಪಾಲಿಸೊ ವರವನು
ಕರವನ್ನು ಮುಗಿವೆನು ಪಾಲಲೋಚನ ಶಿವನೆ॥

ದೇವೇಂದ್ರ: ನಮೋನ್ನಮೋ ಭೂತೇಶ ಉಮಾಮಹೇಶ್ವರನೇ ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡುತ್ತೇನೆ. ಕರುಣದಿಂದ ದಯವಿಟ್ಟು ಬೇಡಿದ ವರಗಳಂ ಕೊಡಬೇಕೈ ಈಶಮಹೇಶ.

ಈಶ್ವರ: ಎಲೈ ದೇವತೆಗಳಿರಾ ಎನ್ನನ್ನು ಸಹಸ್ರನಾಮಗಳಿಂದ ಸ್ತುತಿಸಿದ ಕಾರಣವೇನು ಜಾಗ್ರತೆ ತಿಳಿಸುವುದಾಗೈ ದೇವತೆಗಳೆ.

ದೇವೇಂದ್ರ: ದೇವಾಧಿದೇವನಾದ ಸಾಂಬಶಿವಮೂರ್ತಿಯೆ ಗಿರಿಜಾಮಾತೆಯವರ ಗರ್ಭದಲ್ಲಿ ಸುತ ಉದಿಸಕೂಡದು ತಮ್ಮ ವೀರ‌್ಯದಿಂದ ಕುಮಾರನು ಹುಟ್ಟಬೇಕು. ಆ ಕ್ರೂರರಾದ ದೈತ್ಯರು ಸಂಹಾರವಾಗಬೇಕೆಂದು ವರವಂ ಬೇಡುತ್ತೇವೆ ಕರುಣವಿಟ್ಟು ಪಾಲಿಸಬೇಕೈ ದೇವಾ ಕರುಣಪ್ರಭಾವ.

ಈಶ್ವರ: ಎಲೈ ದೇವತೆಗಳೇ ನಿಮ್ಮಗಳ ಇಷ್ಟದಂತೆ ವರವಂ ಕೊಟ್ಟಿರುತ್ತೇನೆ ಇನ್ನು ನಾನು ಹೋಗಿಬರುವೆನು.

ಗಿರಿಜೆ: ಪ್ರಾಣಕಾಂತರೆ ಈ ಕೈಲಾಸವನ್ನು ಬಿಟ್ಟು ತಾವುಗಳು ಧಾವಲ್ಲಿಗೆ ಹೋಗಿದ್ದಿರಿ ಅದರ ವಿವರವನ್ನು ಚೆನ್ನಾಗಿ ಹೇಳಬೇಕೈ ಸ್ವಾಮಿ ಭಕ್ತಜನಪ್ರೇಮಿ.

ಈಶ್ವರ: ಎಲೈ ಪ್ರಾಣಮಣಿಯೇ ಕೇಳು ಇಂದ್ರಾದಿಸುರರೆಲ್ಲರು ನನ್ನನ್ನು ಕುರಿತು ತಪಸ್ಸನ್ನು ಮಾಡಿದ್ದರಿಂದ ನಾನು ಹೋಗಿ ಅವರಿಗೆ ಕೇಳಿದ ವರವಂ ಕೊಟ್ಟು ಬರುವುದಕ್ಕೆ ಹೋಗಿದ್ದೆನೆ ಕಾಂತಾಮಣಿ.

ಗಿರಿಜೆ: ಆಹಾ ಪ್ರಾಣದೊಲ್ಲಭರೆ ಆ ಸುರರು ಬೇಡಿದ ವರಗಳು ಯಾವುವು ನನಗೆ ತಿಳಿ ಹೇಳಿರೈ ಪ್ರಾಣದೊಲ್ಲಭರೆ.

ಈಶ್ವರ: ಎಲೈ ಗಿರಿಜೆಯೇ ಕೇಳು ನಿನ್ನ ಉದರದಲ್ಲಿ ತನುಜರು ಹುಟ್ಟಕೂಡದು ತಮ್ಮ ರೇತಸ್ಸಿನಿಂದ ಕುಮಾರನು ಬೇರೆ ಜನಿಸಬೇಕೆಂದು ವರವನ್ನು ಬೇಡಿದ್ದರಿಂದ ಕೊಟ್ಟು ಬಂದಿರುವೆನೆ ಗಿರಿನಂದನೇ.

ಗಿರಿಜೆ: ಛೇ ಛೇ ದುಷ್ಟರಾದ ದೇವತೆಗಳಿರಾ ನನ್ನ ಉದರದಲ್ಲಿ ಹುಟ್ಟುವ ಮಗನನ್ನು ಅನ್ಯಥಾ ಹುಟ್ಟುವಂತೆ ವರವನ್ನು ಬೇಡಿದ್ದರಿಂದ ಏಳೇಳು ಜನ್ಮಕ್ಕೆ ಮಕ್ಕಳಾಗಬೇಡ ನಿಸ್ಸಂತಾನವಾಗಿ ಹೋಗಲಿ ಭ್ರಷ್ಟರೆ ನಿಮಗೆ ಶಾಪವನ್ನು ಕೊಟ್ಟಿರುವೆನು ದುಷ್ಟರೆ.

ಪದ

ಇತ್ತ ದಿವಿಜರೆಲ್ಲ ಕೂಡಿ ಬಲು ಚಿತ್ತದಿ ದುರುಳರ
ಬಾಧೆಯ ನೋಡಿತತ್ತರಗೊಳುತಲಿ ವಾಯುಸಖನ

ಕರದಿತ್ತನು ವಿಧಿಯು ನಿರೂಪಾವ॥

ದೇವೇಂದ್ರ: ಹೇ ಸೃಷ್ಟಿಕರ್ತನೆ ಅನಾದಿ ದಂಪತಿಗಳಾದ ಗಿರಿಜಾಪರಮೇಶ್ವರರು ಕಲ್ಯಾಣವಾಗಿ ಭೋಗಾನಂದಕ್ಕೆ ಮನಸ್ಸುಕೊಟ್ಟು ನಮ್ಮಗಳನ್ನು ಸಂಪೂರ್ಣವಾಗಿಯೂ ಮರೆತಂತೆ ತೋರುವುದು ಆದ ಪ್ರಯುಕ್ತ ನಮ್ಮಕಷ್ಟ ಪರಿಹಾರ ಮಾಡುವುದಕ್ಕೆ ತಕ್ಕ ಆಲೋಚನೆಯಂನ್ನು ಮಾಡಬೇಕೈ ಸ್ವಾಮಿ ಭಕ್ತಜನಪ್ರೇಮಿ.

ಪದ

ಪೋಗಿ ನೀ ಪರಮೇಶನಿರವನು ಬಲುನೋಡುತ ಬೇಗ
ಬಾರೆನುತಾನು ಹೋಗೆ ಧನಂಜಯನನ್ನು ನೋಡಿ
ಇದು ಸಾಗದು ಭಯಪಡಬೇಡಿರೈ॥

ಬ್ರಹ್ಮ: ಅಯ್ಯ ಇಂದ್ರನೇ ಆ ಪರಮೇಶ್ವರನ ಸಮಯವನ್ನು ನೋಡುವುದಕ್ಕಾಗಿ ಅಗ್ನಿಯನ್ನು ಕಳುಹಿಸಿರುತ್ತೇನೆ ಧೈರ‌್ಯವಾಗಿರು ಇಂದ್ರನೆ.

ದೇವೇಂದ್ರ: ಯಾರಲ್ಲಿ ಅತಿ ಜಾಗ್ರತೆ ಇಂದ ಅಗ್ನಿಯನ್ನು ಬರಮಾಡತಕ್ಕದ್ದು.

ಅಗ್ನಿ: ಎಲೈ ಪೂರ್ವದಿಕ್ಪತಿಯಾದ ಇಂದ್ರನೆ ನನ್ನನ್ನು ಇಷ್ಟು ಜಾಗ್ರತೆ ಇಂದ ಕರೆಸಲು ಕಾರಣವೇನು ಪೇಳೈ ಇಂದ್ರ ಸದ್ಗುಣಸಾಂದ್ರ.

ದೇವೇಂದ್ರ: ಅಯ್ಯ ಅಗ್ನಿಯೆ ಆ ದುಷ್ಟರಾದ ತಾರಕಾದಿ ರಾಕ್ಷಸರ ಬಾಧೆಯನ್ನು ತಡೆಯಲಾರದೆ ಶ್ರೀಮನ್ ಮಹಾದೇವನನ್ನು ಕುರಿತು ತಪಸ್ಸು ಮಾಡಿ ಮೆಚ್ಚಿಸಿ ಕುಮಾರನನ್ನು ಪಡೆದು ಆ ರಕ್ಕಸರನ್ನು ಕೊಲ್ಲಿಸಬೇಕೆಂದು ವರವಂ ಪಡೆದಿರುತ್ತೇನೆ. ಆದ್ದರಿಂದ ನೀನು ಹೋಗಿ ಆ ಜಗದೀಶನ ಸಮಯವನ್ನು ಅರಿತು ಬಾರೈಯ್ಯ ಅಗ್ನಿಯೆ.

ಅಗ್ನಿ: ಅಯ್ಯ ಇಂದ್ರನೆ ಮನ್ಮಥನು ಪರಮೇಶ್ವರನ ಸನ್ನಿಧಿಗೆ ಹೋಗಿ ಪಂಚಶರಗಳನ್ನು ತೊಟ್ಟ ಮಾತ್ರದಲ್ಲಿಯೇ ಉರಿನೇತ್ರದಿಂದ ದಗ್ದನಾದನು ಅದನ್ನು ಕಂಡು ಕಂಡು ನೀನು ನನಗೆ ಹೇಳುವುದು ಥರವಲ್ಲ ನಾನೆಂದಿಗೂ ಹೋಗಲಾರೆನು ಇನ್ನಾರಿಗಾದರೂ ಅಪ್ಪಣೆಯನ್ನು ಕೊಟ್ಟು ಕಳುಹಿಸೈ ದೇವೇಂದ್ರ ಸದ್ಗುಣಸಾಂದ್ರ.

ಪದ

ಹರಗೆ ದ್ರೋಹವಗೈಯ್ವೆ ಸ್ಮರನಿಗೆ ದೊರತುದು ನಾಶ
ವು ನೀ ಹೋಗೆ ದೊರಕದು ಕೊರತೆಗಳೆನ್ನುತ ವಿಧಿ
ಕರುಣಿಸಿ ಕಳುಹಿಸುತ್ತಿರಲತ್ತ

ಬ್ರಹ್ಮ: ಅಯ್ಯ ಅಗ್ನಿಯೇ, ಮನ್ಮಥನು ಸ್ವಾಮಿ ದ್ರೋಹಕ್ಕೆ ಗುರಿಯಾದ್ದರಿಂದ ನಾಶವಾದನು ನೀನಾದರೋ ದ್ರೋಹಮಾಡಬೇಡ ತಿಳಿದುನೋಡು ಯಾರೂ ಅರಿಯದಂತೆ ಹೋಗಿ ಗೋಪ್ಯವಾಗಿ ತಿಳಿದುಕೊಂಡು ಬಾರೈ ಧನಂಜಯನೆ.

ದೇವೇಂದ್ರ: ಅಯ್ಯ ಅಗ್ನಿಯೇ, ಆ ಶಂಭುವಿನಲ್ಲಿ ದ್ರೋಹವಂ ಗೈದರೆ ನಾಶಮಾಡುವನಲ್ಲದೆ ಅನ್ಯಥಾ ನಾಶಮಾಡಲಾರನು. ಆದರೆ ನೀವು ನಿರ್ಜರರಾದ ಎಮ್ಮಗಳ ಕಷ್ಟ ಪರಂಪರೆಗಳನ್ನು ಬಿಡಿಸಿದರೆ ನಿಮಗೆ ಬಂದ ಸುಖದುಃಖಗಳಲ್ಲಿ ಸಮಗರ್ಧ ಭಾಗಕ್ಕೆ ಭಾಗಿಗಳಾಗಿರುವೆವು ಆದ ಪ್ರಯುಕ್ತ ಹೋಗಿ ಬಾರೈ ಅಗ್ನಿಯೆ.

ಅಗ್ನಿ: ಅಭಯಕೊಟ್ಟರೆ ಹೋಗಿ ಬರುತ್ತೇನೈ ಚತುರ್ಮುಖನೇ ಇದೇ ನನ್ನ ವಂದನೆ ಆಹಾ ನಾನು ಈ ರೂಪಿನಿಂದ ಮಹದೇವರ ಸನ್ನಿಧಿಗೆ ಹೋಗಲಾಗದು. ಬದಲಿ ಆಕಾರವಾಗಿ ಶಿವನ ಅಂತರಂಗವನ್ನು ತಿಳಿದು ಬರುವೆನು.

 

(ಅಗ್ನಿಯು ಪಾರಿವಾಳದ ರೂಪಿನಲ್ಲಿ ಶಿವನ ಸಜ್ಜಾಗೃಹಕ್ಕೆ ಬರುವುದು)

ಗಿರಿಜೆ: ಪ್ರಾಣಕಾಂತರೆ ಕಿಟಕಿಯ ಬಾಗಿಲಲ್ಲಿ ಪರಪುರುಷರು ಬಂದಿರುವಂತೆ ಕಾಣುವುದು.

ಈಶ್ವರ: ಆಹಾ ಇದೇನಾಶ್ಚರ‌್ಯ ಎಲೈ ಅಗ್ನಿಯೆ ಈ ಸಜ್ಜಾಗೃಹದೆಡೆಗೆ ಬರುವಂಥ ಶಕ್ತಿ ಬಂದಿತಲ್ಲವೆ ನೀಚನೆ ಭ್ರಷ್ಟನೆ ಈಗ ಬಂದಿರುವ ವೀರ‌್ಯವನ್ನು ನೀನೇ ತೆಗೆದುಕೊ.

ಅಗ್ನಿ: ಅಯ್ಯೋ ದೇವತೆಗಳ ಮಾತನ್ನು ಕೇಳಲಾಗಿ ನನಗೆ ಈ ರೀತಿ ಕಷ್ಟಕಾಲ ಪ್ರಾಪ್ತವಾಯಿತಲ್ಲ. ಮುಂದೇನು ಮಾಡಲಿ ಇಂದ್ರಾದಿಗಳ ಬಳಿಗೆ ಹೋಗಿ ತಿಳಿಸುವೆನು.

ಪದ

ಹರಿಯೇ ಮುಂದೆಮಗೇನು ಗತಿಯೈ ಅರಿಯದಿಹು
ದು ಶಿವನ ರೀತಿಯ ಕರುಣಿಸು ನುಡಿಗಳ ಲಾಲಿಸು॥

ಅಗ್ನಿ: ಅಯ್ಯೋ ಶ್ರೀಹರಿ ಇಂದ್ರಾದಿದೇವತೆಗಳ ಮಾತನ್ನು ಕೇಳಿ ರಜತಾಚಲಕ್ಕೆ ಹೋಗಿ ಶಿವನನ್ನು ದರ್ಶನ ಮಾಡಿದ್ದರಿಂದ ನನಗೆ ಪರಶಿವನಿಂದ ರೇತಸ್ಸು ಪತನವಾಗಿ ಗರ್ಭವು ಸಂಭವಿಸಿತು ಈ ಕಡುಕಷ್ಟವನ್ನು ತಾಳಲಾರೆನೈ ಹರಿಯೇ ದಾನವಾರಿಯೆ.

ದೇವೇಂದ್ರ: ಅಯ್ಯ ಅಗ್ನಿಯೆ ಕೇಳು ನಾವುಗಳು ಕೊಟ್ಟ ಭಾಷೆಯಂತೆ ನಿನ್ನ ಗರ್ಭದ ಕಷ್ಟವಂ ನಮಗರ್ಧಭಾಗವಂ ಕೊಡುವಂಥವನಾಗೈ ಅಗ್ನಿಯೆ.

ಅಗ್ನಿ: ಅಯ್ಯೋ ಮೇಲಕ್ಕೇಳುವುದಕ್ಕೆ ಕೈಕಾಲುಗಳು ಬಾರದೆ ನಿಶ್ಶಕ್ತಿಯಾಗಿ ನನ್ನ ಶರೀರವು ಶೈತ್ಯರೂಪಗಳಾಗಿರುವುದು ಇನ್ನೇನು ಗತಿಯೋ ಶಂಕರ ನಾ ನಿಮ್ಮ ಕಿಂಕರಾ.

ವಿಷ್ಣು: ಅಯ್ಯ ದೇವತೆಗಳಿರಾ ಇಲ್ಲಿ ನಾವುಗಳೆಲ್ಲಾ ಯೋಚನೆಯಂ ಮಾಡುವುರಿಂದ ಏನು ಪ್ರಯೋಜನ. ನನ್ನ ಸಂಗಡ ಸರ‌್ವರೂ ಬಂದರೆ ಕೈಲಾಸಕ್ಕೆ ಹೋಗಿ ಆ ಜಗದೀಶ್ವರನ ಧ್ಯಾನವಂ ಮಾಡಿ ನಿಮ್ಮಗಳ ಕಷ್ಟವಂ ಪರಿಹರಿಸುವಂತೆ ಮಾಡುತ್ತೇನೆ. ಆಹಾ ಇವರೆಲ್ಲರೂ ಏಳುವುದಕ್ಕೂ ಕೂಡ ಶಕ್ತಿ ಇಲ್ಲದೆ ಇರುವರಲ್ಲಾ ಅಯ್ಯ ದೇವತೆಗಳಿರಾ ಆದರೂ ಚಿಂತೆ ಇಲ್ಲ. ಇಲ್ಲಿಯೆ ಶಿವಧ್ಯಾನವಂ ಮಾಡಿರಿ.

ಪದ

ಪಾಲಿಸು ಪಾರ್ವತೀಶ ಪರಿದೃಶಪಾಶ ಜಾಲವೆ
ವ್ಯೋಮಕೇಶ॥ಕರುಣಾಪೇಶ
ನೀಲಲೋಹಿತ ಗಿರೀಶ॥ಸಹಿಸಲಾರೆವು ಗರ್ಭಬಾಧೆ
ಗಳಿಂದ ಏಸುದಿನವು ಶಂಕರಾ॥ವಾಸವಂದಿತನೆ ಕೊರ
ಗಿಪೆ ದೇವನೆ ಬೇಸರದಿಂದಿರುವೇ ಶಿವನೆ॥

ಅಗ್ನಿ: ಆಹಾ ಮಹದೇವ ಶಂಕರ ಮನ್ಮಥಾರಿ ಜಗತ್ಪಾವನ ತಾವುಗಳು ನಮ್ಮಗಳ ಕಷ್ಟಗಳನ್ನು ನೋಡಿ ಬೇಸರದಿಂದಿರುವರೇ ಶಿವನೇ ನಮ್ಮಗಳಂ ಕಾಪಾಡೈ ನೀಲಕಂಠನೆ.