ಪದ

ಹಿಂದೆ ದಕ್ಷನಾ ಯಜ್ಞ ಕುಂಡದೀ  ಬೆಂದಿರ್ಪ ಸತಿಯೊಳು ॥
ಇಂದು ನಿಮ್ಮೊಳು ಪುಟ್ಟುತಾ ಮುದದೀ ॥ತಂದೆತಾಯ್ಗಳೆಂದು
ಸುಮ್ಮನೇ  ಮಂದಿರವಾರಳೆ  ಪೋಲುವ ಶಿವ ಶಿವ  ಮುಂ
ದುಗೆಡುತಿಹ  ದಂದವೇನೈ  ಇಂದುಮೌಳಿಯ ಸುಂದರಿಯನು ॥

ನಾರದ: ಎಲೈ ಗಿರಿರಾಜನೇ ಕೇಳು ಹಿಂದೆ ದಕ್ಷ ಬ್ರಹ್ಮನು ಯಾಗ ಮಾಡುವಂಥ ಕಾಲದಲ್ಲಿ ಶಿವನಿಗೆ ಹವಿರ್ಭಾಗವನ್ನು ಕೊಡದೆ ಅವಮಾನಪಡಿಸಿದ್ದರಿಂದ ಪತಿಗೆ ಅವಮಾನವಾಯಿತೆಂದು ಅದೇ ಅಗ್ನಿಕೊಂಡದಲ್ಲಿ ಬಿದ್ದು ನಾಶವಾದಳು  ಆಗ್ಯೆ ಈ ವರ್ತಮಾನವನ್ನು ತಿಳಿದಂಥ ಪರಶಿವನು  ಮೇನಕೆ ಉದರದಲ್ಲಿ ಗಿರಿಜೆ ಎಂಬ  ಹೆಸರಿನಿಂದ ಅವತರಿಸು  ನಿನ್ನನ್ನೇ ಲಗ್ನ ಮಾಡಿಕೊಳ್ಳುತ್ತೇನೆಂದು ಅಪ್ಪಣೆ ಕೊಟ್ಟಿದ್ದರಿಂದ ನಿನಗೆ ಮಗಳಾಗಿ ಜನಿಸಿರುವಳು  ಕೇಳಯ್ಯ ಗಿರಿರಾಜನೇ.

ಜಾತೆ ಎಂಬರೆ ಲೋಕ  ಮಾತೆಯ ಭಕ್ತವ  ನೋತ್ಸಕ
ಜಾತಳಾಗಿಹಳೆಂಬ ರೀತಿಯ  ಪೂತೆ  ಭುವನ ವಿಖ್ಯಾತೆ
ನಿಗಮಾತೀತೆ  ಚಿನ್ಮಯ ಭೂತೇ  ಮುನಿಜನಗೀತೆ  ಶಂ
ಭೋಪ್ರೀತೆ  ದನುಜವಿಘಾತೆ  ನತವರದಾತೆ ॥ಕೇಳ್ ॥

ನಾರದ: ಅಯ್ಯ ಗಿರಿರಾಜನೇ  ಈ ಮಹಾದೇವಿಯು  ದುಷ್ಟರಾದ ರಾಕ್ಷಸ ಕುಲವೆಂಬ ವನಕ್ಕೆ ಕೊಡಲಿಯಾಗಿ ಭೂಭಾರ ಪರಿಹಾರ ಮಾಡುವಂಥಾ  ಈ ಲೋಕಕ್ಕೆ ತಾಯಿಯಾಗಿರುವ ಉಮೆಯನ್ನು ಮಗಳೆಂದು ತಿಳಿದಿರುತ್ತೀಯಲ್ಲ  ನೀನು ಇದುವರೆಗೂ ಕಾಣದೆ ಇರುವುದರಿಂದ  ಈಗಲಾದರೂ ಈ ಮಹಾದೇವಿಯನ್ನು ಮಗಳೆಂಬುವ ಭಾವವನ್ನಿಡದೆ ಆ ಮಂಗಳಮೂರ್ತಿಯಾದ ಪರಮೇಶ್ವರನನ್ನು ಕುರಿತು  ತಪಸ್ಸು ಮಾಡುವಂತೆ ನೇಮಿಸಿ ನೀನು ಕೀರ್ತಿಯನ್ನು ಪಡೆ  ಇದ್ದ ಸಂಗತಿಯನ್ನೆಲ್ಲಾ ತಿಳಿಸಿರುತ್ತೇನೆ  ಆದರೆ ನಿನ್ನ ಮನಸ್ಸು ಬಂದಂತೆ ಮಾಡಬಹುದು  ನಾನು ಬಂದು ಬಹಳ  ಹೊತ್ತಾಯಿತು  ನಾನಾದರೆ ನಮ್ಮ ತಪೋನಿವಾಸಕ್ಕೆ  ಹೋಗಿ ಬರುತ್ತೇನೈಯ್ಯ ಗಿರಿರಾಜನೇ.

ಪದತ್ರಿವುಡೆ

ಎನುತ ನಾರದನುಸುರಿ ಪೋಗಲು  ಘನತರದ ಭಕ್ತಿ
ಯಲಿ ಗಿರಿಪತಿ  ವನಿತೆಗೀ ಹವನವನು ತಿಳುಹುತ
ಪಾರ್ವತಿಯ ಕರೆದೂ  ಮನಸಿಜಾರಿಯ ರಮಣಿ
ಎಂಬುದ  ಮನದಿ ತಿಳಿದೆನು ತೆರಳು ತಪಕೆ  ಎಂದೆ
ನುತಲೊಪ್ಪುವದೊಂದು ಶಿಖರದಿ  ನಿಲಿಸುವೆನು ಎನುತಾ ॥

ಗಿರಿರಾಜ: ಕೋಮಲಾಂಗಿ ಮೇನಕಿಯೇ ಕೇಳು ಈಗ ಗಿರಿಜಾ ದೇವಿಯ ವರ್ತಮಾನವನ್ನು  ನಾವು ಅರಿಯದೆ ಮಗಳೆಂಬುವ ಪ್ರೀತಿಯಲ್ಲಿದ್ದುದೇ ತಪ್ಪು ಆದರೆ ಈಗ ನಾರದರಿಂದ ಈಕೆಯ ವರ್ತಮಾನವೆಲ್ಲಾ ಗೊತ್ತಾಯಿತು ಏನೆಂದರೆ ಹಿಂದೆ ಪರಮೇಶ್ವರನ ಅರ್ಧಾಂಗಿಯಾದ ದಾಕ್ಷಾಯಣಿಯು  ದಕ್ಷ ಬ್ರಹ್ಮನ ಯಜ್ಞದಲ್ಲಿ ಧ್ವಂಸವಾಗಿ ಆ ಪರಶಿವನ ಅಪ್ಪಣೆ ಇಂದ  ನಮ್ಮಲ್ಲಿ ಅವತಾರ ಮಾಡಿರುತ್ತಾರಂತೆ  ಈಗಲೇ ಆ ಪರಶಿವನನ್ನು ಕುರಿತು  ತಪಸ್ಸು ಮಾಡುವಂತೆ  ನೇಮಿಸೆನ್ನುವುದಾಗಿ  ನಾರದ ಮಹರ್ಷಿಗಳು ಅಪ್ಪಣೆ ಕೊಟ್ಟು ದಯಮಾಡಿಸಿದ ಮೇಲೆ  ನಾವು ಸುಮ್ಮನೇ ಇರಬಹುದೇನೇ ಪ್ರಾಣಕಾಂತೇ.

ಮೇನಕೆ: ಆಹಾ ಪ್ರಾಣಕಾಂತರೇ ಲಾಲಿಸಿರಿ ನಾರದರೇ ಈ ವರ್ತಮಾನವನ್ನು ಹೇಳಿದ ಮೇಲೆ  ಎಂದಿಗೂ ಸುಳ್ಳಾಗಲಾರದು ಆ ಪರಮೇಶ್ವರನನ್ನು ಕುರಿತು ತಪಸ್ಸು ಮಾಡುವಂತೆ ನೇಮಿಸಿದ್ದೇ ಆದರೆ  ಈ ಉಮಾ ದೇವಿಯ ತಪಸ್ಸಿಗೆ ಮೆಚ್ಚಿ  ಆ ಪರಮೇಶ್ವರನು ಒಲಿದು  ಲಗ್ನ ಮಾಡಿಕೊಂಡರೆ ನಾವು ಧನ್ಯರಲ್ಲವೇ  ಈ ವಿಷಯದಲ್ಲಿ ತಾತ್ಸಾರ ಮಾಡಲಾಗದೈ ಕಾಂತ  ಮತಿಗುಣವಂತ.

ಗಿರಿರಾಜ: ಅಮ್ಮಾ ಗಿರಿಜಾದೇವಿಯೇ ನನ್ನ ಮನೆಯಲ್ಲಿ ನೀನು ಹುಟ್ಟಿದ್ದಕ್ಕೆ ಮಗಳನ್ನು ಪ್ರೀತಿ ಇಂದ  ಆ ಮಹಾದೇವನ ಕರುಣದಿಂದ ಕಾಪಾಡಿದೆನು ಆದರೆ ನಿನ್ನ ವರ್ತಮಾನವು ತ್ರಿಲೋಕ ಸಂಚಾರಿಗಳಾದಂಥ  ನಾರದರ ಮುಖಾಂತರದಿಂದ ತಿಳಿಯಿತು  ತಮ್ಮನ್ನು ನಾನು ನನ್ನ ಮನೆಯಲ್ಲಿ ಇಟ್ಟುಕೊಳ್ಳುವದಕ್ಕೆ ಯೋಗ್ಯನಲ್ಲ  ನೀವು ಈ ಲೋಕವನ್ನೇ ಸಂರಕ್ಷಣೆ ಮಾಡುವ  ತಾಯಿಯಾದ್ದರಿಂದ ನಾನು  ಹೆಚ್ಚಿಗೆ ಅರಿಕೆ ಮಾಡಿಕೊಳ್ಳುವಷ್ಟು ಶಕ್ತನಲ್ಲ  ತಾವು ಈಗಲೇ ದಯಮಾಡಿ ತಪಸ್ಸನ್ನು ಮಾಡಿ  ಆ ಪರಶಿವನನ್ನು ಪತಿಯಾಗಿ ಮಾಡಿಕೊಂಡು  ನಮ್ಮಗಳಿಗೆಲ್ಲಾ ಮೋಕ್ಷವನ್ನು ಕೊಟ್ಟು  ಉದ್ಧಾರ ಮಾಡಬೇಕು  ಹೇ ತಾಯೇ ತಪಸ್ಸನ್ನು ಮಾಡುವ  ಭೂಮಿಯನ್ನು ತೋರಿಸುತ್ತೇನೆ  ತೆರಳಬಹುದಮ್ಮಾ ಜನನಿ ದುರ್ಜನಹನನಿ.

ಗಿರಿಜೆ: ತಂದೆಯವರೆ ತಮ್ಮ ಮಹದಾಜ್ಞೆಯಂತೆ ನಡೆದುಕೊಳ್ಳುತ್ತೇನೆ.

ಗಿರಿರಾಜ: ಹೇ ಕಾಂತೆ ಈ ಮಹಾದೇವಿಯನ್ನು  ನಾವು ಲಗ್ನ ಮಾಡಿಕೊಡುವ  ಭಾರವೇ ನಮಗೆ ತಪ್ಪಿತು  ಆದರೆ ಈ ಜಗನ್ಮಾತೆಯನ್ನು  ಹೇಮಕೂಟಕ್ಕೆ ಬಿಟ್ಟು  ಬರಬೇಕೆಂಬುವ ಕಾರಣ  ಅತಿಜಾಗ್ರತೆ ಇಂದ ಗಿರಿಜಾದೇವಿಗೆ  ಮಂಗಳಸ್ನಾನವನ್ನು ಮಾಡಿಸುವಳಾಗೆ ರಮಣೀ  ಸದ್ಗುಣಾ ಭರಣೀ.

ಪದ

ಸದುಗುಣ ಸುಕುಮಾರಿ  ಗೌರಿ ಬಾ ಸುಂದರಿ ॥
ಪಂಪಾಪತಿಯ ಪಾದ  ಸೊಂಪಿನಿಂದಲಿ ಮೋದ
ಇಂಪಿನ ವನದೊಳು  ಸೊಂಪಲಿ ಇರುವೆಯಾ ॥
ಗೌರಿ ಬಾ ಸುಂದರಿ ॥

ಮೇನಕೆ: ಅಮ್ಮಾ ಮಗಳೇ ಇತ್ತ ಬಾ ಇಗೋ ಈ ಮಣಿಪೀಠದಲ್ಲಿ ಮಂಡಿಸು ಹೇ ತಾಯೆ ನಮ್ಮನ್ನು ಮರೆತು  ಈ ಸೌಭಾಗ್ಯವನ್ನು ಬಿಟ್ಟು  ಹೇಮಕೂಟಾರಣ್ಯದಲ್ಲಿ  ಒಬ್ಬಳೆ ಹೇಗಿರುವೆ ತಿಳಿಯದು  ಸಾಕ್ಷಾತ್ ಪರಶಿವನೇ ನಿನ್ನ ಗಂಡನಾದ ಮೇಲೆ ನಮ್ಮಂಥ ಅನಾಥರನ್ನು ದಿವಸಕ್ಕೆ ಒಂದು ಸಾರಿ ನೆನೆಸುತ್ತೀಯೋ ಇಲ್ಲವೋ ನಿನ್ನಂಥ ಮಹಾದೇವಿಗೆ ನಾನು ಮಾತೆಯಾದ ಮೇಲೆ ನನ್ನ ಪುಣ್ಯವೆಷ್ಟೆಂದು ಹೇಳಲಮ್ಮಾ ತಾಯೇ ವರಪ್ರದಾಯೇ.

ಗಿರಿಜೆ: ಹೇ ತಾಯೇ ಹೇಮಕೂಟಾರಣ್ಯದಲ್ಲಿ ಒಬ್ಬಳೇ ಹೇಗಿರುತ್ತಿ ಎಂದು ಕೇಳಿದೆಯಲ್ಲವೇ  ನಂದಿ, ಬೃಂಗಿ ಬೃಂಗೀರಟಿನಾರದಾಧ್ಯಖಿಳ ಮನುಮುನಿಭಕ್ತ ವೃಂದವೇ ಆ ಪರಶಿವನ ಗಾನ ವಿಲಾಸದಲ್ಲಿರುವುದಕ್ಕೆ  ನನಗೆ ಭಯವ್ಯಾವುದು  ಅಲ್ಲದೆ ಪರಮಾತ್ಮನ ದರ್ಶನಕ್ಕೆ  ನಾಗಕನ್ನಿಕೆ  ದೇವಕನ್ನಿಕೆ  ಇವರೆಲ್ಲರೂ ಬರುವದಿಲ್ಲವೇ ಹೇಗೆ ನನ್ನನ್ನು ಕಳುಹಿಸುವುದಕ್ಕೆ ನೀವೆಷ್ಟು ಮಾತ್ರಕ್ಕೂ ಚಿಂತೆ ಮಾಡಬೇಡವಮ್ಮಾ ತಾಯೆ.

ಪದ

ಪತಿಯ ಕೂಡಿದರೆ  ಹಿತದಲಿ ನಮ್ಮನು  ಸುತೆ ನೀ
ಮರೆತರೆ  ಗತಿಯೇನೆ ಗೌರಿ  ಬಾ ಸುಂದರೀ ॥
ನೀಲಕಂಠನ ಮೇಲೆ  ಮೋಹದ ಪ್ರಾಯಳೇ  ಜಾಲವ
ಮಾಡದೆ ತ್ರಿಜಗವ ಪಾಲಿಸೆ ॥ಗೌರಿ  ಬಾ ಸುಂದರೀ ॥

ಮೇನಕೆ: ಅಮ್ಮಾ ಮಗಳೇ ನಿನ್ನ ತವರು ಮನೆಯು  ಈ ದಿವಸ ನಿನಗೆ ತೊರೆದು ಹೋಯಿತೇ ಇನ್ನು ಈ ಆಡಂಬರದ ಮನೆಯಲ್ಲಿ  ನಾವಿಬ್ಬರೂ ಹ್ಯಾಗೆ ಕಾಲವಂ ಕಳೆಯಬೇಕು  ನೀನೊಬ್ಬಳೇ ಶ್ರೀ ನೀಲಕಂಠನಂ ಕೂಡಿ  ಹೇಮಕೂಟಾರಣ್ಯದಲ್ಲಿ ಯಾವ ರೀತಿ ಕಾಲಕ್ಷೇಪ ಮಾಡುವೆಯಮ್ಮಾ ತಾಯೆ  ವರಪ್ರದಾಯೆ.

ಪದ

ಭೋ ಮಾತೆ  ನನ್ನ ಮಾತೆ  ಸರಿನೀತಿ ನುಡಿಗಳನು
ಕೇಳೆ ॥ಹರನ ಕರುಣವನ್ನೂ ನಿಮ್ಮೊಳ್  ಬೆರೆದರ ಪರಿ
ಯಾಲಿದನು  ಸುರರೆಲ್ಲರು ಬರುವರು ಇಲ್ಲಿಗೆ  ವರ
ವಿರೂಪಾಕ್ಷನ ಕರೆತರುವೆನೇಳೆ ॥ಭೋ ಮಾತೆ ॥

ಗಿರಿಜಾದೇವಿ: ಅಮ್ಮಾ ತಾಯೇ ನೀವೆಷ್ಟು ಮಾತ್ರಕ್ಕೂ  ಮನಸ್ಸಿನಲ್ಲಿ ಚಿಂತೆಯನ್ನು ಮಾಡಲಾಗದು. ಆ ಪರಮಾತ್ಮನು ಬಂದು  ನಿಮ್ಮಲ್ಲಿ ದಯಾನ್ವಿತನಾಗಿರುವಂತೆ ಮಾಡುತ್ತೇನೆ  ಸದಾ ಪರಮಾತ್ಮನನ್ನು ಕುರಿತು  ನಿಮ್ಮಗಳಿಗೆ ದರ್ಶನವಂ ಮಾಡಿಸುತ್ತೇನೆ  ಮಾತೆ ವರಪ್ರದಾತೆ.

ಪದ

ಪಿತನ ಮನದಮೋದ  ಬಿಡಿಸುವೆ ಧೃತಿ ಮನಸಿನ
ಬೇಧ  ಸತತಾ ಬರುವರೇ  ಹಿತದಲಿ ಮನದೌ  ಸುತೆಯಳ
ಕಳುಹೌ  ಪಶುಪತಿಗೆ ಬಳಿಗೆ  ಭೋ ಮಾತೆ ॥

ಗಿರಿಜಾದೇವಿ: ಅಮ್ಮಯ್ಯ, ನಿಮ್ಮ ಮನಸ್ಸಿನ ಚಿಂತೆಯನ್ನು ಬಿಟ್ಟು  ಮೋಹ ಮೋಹವನ್ನು ಕೊಟ್ಟು ಮುದ್ದಿಟ್ಟು ಥಟ್ಟನೆ  ಅಷ್ಟಮೂರ್ತಿಯ ಬಳಿಗೆ  ಕಳುಹಿಸುವಳಾಗಮ್ಮ ಜನನಿ.

ಪದ

ಈಶನ ಒಲಿಸುವೆನು  ನಿಮ್ಮಯ ನಾಶದಿ ನಿಲಿಸುವೆನು
ಭಾಸುರಾಂಗಿ ಕೇಳೀ ಸಮಯದಿ  ಭೀಮೇಶನ ಬಳಿಗೆನ್ನ ಕಳುಹೌ
ಭೋ ಮಾತೇ ॥

ಗಿರಿಜಾದೇವಿ: ಹೇ ಜನನೀ, ಬಾರಿ ಬಾರಿಗು ನನ್ನ ಮುಖವನ್ನು ನೋಡಿ  ಬರಿದೆ ನೀ ಪರಿಯಿಂದ್ಯಾಕೆ ದುಃಖಿಸುವೆ  ಆದರೆ ನಿನಗೆ ಬಂದ ಭಯವೇನು  ಶ್ರೀ ವರ ಭೀಮೇಶನ ಸಖ  ಶ್ರೀಮನ್ ನೀಲಕಂಠನಂ ಕುರಿತು  ತಪವಂಗೈಯುವುದಕ್ಕೆ  ಕಳುಹಿಸಮ್ಮಾ ತಾಯೆ ಕರುಣದಿಂ ಕಾಯೆ.

ಮೇನಕೆ: ಅಮ್ಮಾ ಮಗಳೆ ಎಷ್ಟು ಬಗೆ ಇಂದ ಹೇಳಿದರೂ  ನಿನ್ನ ಮನಸ್ಸಿಗೆ ಸಮಾಧಾನವಾಗಲಿಲ್ಲ ನಿನ್ನನ್ನು ತಕ್ಕ ವರನಿಗೆ ಕೊಟ್ಟು ಮನೆಯಲ್ಲಿಟ್ಟುಕೊಂಡು ಕಣ್ಣಿನಿಂದ ನೋಡುವುದಕ್ಕೆ  ನಮಗೆ ಲಭ್ಯವಿಲ್ಲ ನಿನ್ನ ಫಣಿಯಲ್ಲಿ ಬರೆದ ಬರಹವು ಈ ರೀತಿ ಇದ್ದರೆ ನಮ್ಮ ಯತ್ನವೇನಿರುವುದು. ಹೇ ಕಾಂತ ನಮ್ಮ ಮಗಳಿಗೆ  ಅಭ್ಯಂಗನ ಸ್ನಾನ ಮಾಡಿಸಿ ದಿವ್ಯಾಂಬರವನ್ನು ಧರಿಸಿ  ಆಭರಣಗಳಿಂದ ಅಲಂಕರಿಸುತ್ತೇನೆ  ಅತಿ ಜಾಗ್ರತೆ ಇಂದ ಹೇಮಕೂಟದಲ್ಲಿರುವ  ಶ್ರೀಮನ್ ಮಹಾದೇವನಿಗೆ  ಮಗಳನ್ನು ಒಪ್ಪಿಸಿ  ಬರೋಣ ನಡಿಯೈ ಕಾಂತ  ಮತಿಗುಣವಂತ.

ಗಿರಿರಾಜ: ಎಲೈ ಸಾರಥಿ ಈಗಿನ ವ್ಯಾಳದಲ್ಲಿ ಎನ್ನ ಮಗಳಾದ ಗಿರಿಜಾದೇವಿಯನ್ನು  ಹೇಮಕೂಟದೊಳಗಿರ್ಪ ಸಾಕ್ಷಾತ್ ಪರಶಿವನಿಗೆ ಒಪ್ಪಿಸಿ ಬರುವೆನು ತಟ್ಟನೆ ಯನ್ನ ಮಾತನ್ನು ಲಾಲಿಸಿ  ದಿವ್ಯ ರಥಕ್ಕೆ ತುರುಗದ್ವಯಗಳಂ ಕಟ್ಟಿ ಕೈಲಾಸ ಮಾರ್ಗವಂ ಕುರಿತು ರಥವಂ ಹಾರಿಸು ಹೇ ಕಾಂತೆ ಇನ್ನು ತಡವ್ಯಾತಕ್ಕೆ  ಮಗಳನ್ನು ಕರೆದುಕೊಂಡು  ಅತಿ ಜಾಗ್ರತೆ ಇಂದ ರಥದ ಮೇಲೆ ಕೂತುಕೊಳ್ಳುವಳಾಗೆ ರಮಣಿ ಸದ್ಗುಣಾ ಭರಣಿ.

ಕಂದ

ಗಿರಿಜಾಪುತ್ರಿ  ಪರಮಪಾವನಗಾತ್ರಿ  ಪರಮೇಶನ
ಚರಣವ ಸ್ಮರಿಸುತ  ಹೃದಯದೊಳು ಮರೆಯದೆ ಧ್ಯಾನಿಸಿ
ಮರುಗ ಮಲ್ಲಿಗೆ ಜಾಜಿ  ಸುರಗಿಸಂಪಿಗೆ ಬನ್ನಿ ಪಾದರಿ
ಪುಷ್ಪಗಳ ಧರಿಸಿ  ಶಂಕರನ ಪಾದವ  ಸ್ಮರಿಸಿದಳು ॥

ಗಿರಿರಾಜ: ಅಮ್ಮಾ ಗಿರಿಜಾ ದೇವಿ  ಈ ಪರ‌್ವತದ ತಪ್ಪಲಲ್ಲಿ ತಪಸ್ಸನ್ನು ಮಾಡಿ  ಆ ಸರ‌್ವಂತರ‌್ಯಾಮಿಯಾದ ಪರಮೇಶ್ವರನನ್ನು ಒಲಿಸುವಳಾಗು ಅಮ್ಮಯ್ಯ ಅಲ್ಲಿ ಸರೋವರವು ಇರುತ್ತದೆ  ಅನೇಕ ವಿಧವಾದ ಫಲಪುಷ್ಪಗಳು ಸಹ ಇರುವುವು ನಿನ್ನ ಸೇವಾ ವೃತ್ತಿಗೆ ಸರಿಯಾಗಿ ಜಯವಿಜಯರೆಂಬುವ ಈರ‌್ವರು  ಸಖಿಯರನ್ನು ನೇಮಿಸಿರುತ್ತೇನೆ ನಿನ್ನ ಕಾರ‌್ಯಕ್ಕೆ ಬೇಕಾದ ವಸ್ತುಗಳನ್ನು ಅವರಿಂದ ತರಿಸಿಕೊಂಡು ಆ ಪರಮೇಶ್ವರನನ್ನು ಪೂಜಿಸಿ ಒಲಿಸುವಳಾಗಮ್ಮಾ ತಾಯೇ ವರಪ್ರದಾಯೆ.

ಗಿರಿಜಾದೇವಿ: ತಮ್ಮ ಅಪ್ಪಣೆಯಂತೆ ಇರುತ್ತೇನೈ ಜನಕನೇ.

 

(ಕೈಲಾಸದಲ್ಲಿ ಸಭೆ)

(ಗಿರಿರಾಜ ಮೇನಕೆ ಗಿರಿಜೆ ಹೇಮಕೂಟಕ್ಕೆ ಬರುವುದು)

ಭಾಗವತರ ಭಾಮಿನಿ

ವರಹಿಮವಂತನು ಸರ‌್ವ ವಿಭವದಿ  ತರಳೆ ಪಾರ್ವತಿಯನ್ನು
ಅಂದಣದೊಳಗೆ ಏರಿಸಿ  ಸಂತಸದಿಂದ ವರಮಹಾ ಹೇಮ ಕೂ
ಟದಿ  ಪರಶಿವನು ಯನ್ನ ಅಳಿಯನಾಗುವ ನಿರುತ  ಪುಣ್ಯವ
ಕಂಡೆನೆನುತ  ತವಕೈತಂದಾ ॥

ಗಿರಿರಾಜ: ಎಲೈ ಸಾರಥಿ ಹೇಮಕೂಟಾಚಲ ಪರ್ವತವು. ಇದೆಯೋ ಹ್ಯಾಗೆ ಆಹಾ ಈ ಮಹಾದೇವನ ಮಹಿಮೆಯನ್ನು ಎಷ್ಟೆಂದು ವರ್ಣಿಸಿದರೂ ತೀರದು ಈ ನಗರದ ದ್ವಾರದಲ್ಲಿ ನಂದೀಶ್ವರನು ಕಾಣುತ್ತಿರುವನು  ನೋಡಿದೆಯಾ  ನಮೋನ್ನಮೋ ವೃಷಭೇಂದ್ರನೇ  ನಿಮ್ಮ ಜನನಿಯಾದ ಸತಿದೇವಿಯ  ದಕ್ಷಧ್ವರಕ್ಕೆ ಹೋಗಿ ಆ ದಕ್ಷನಿಂದ  ಅಪಮಾನವನ್ನು ಹೊಂದಿ  ಯಜ್ಞಕುಂಡದಲ್ಲಿ ಬಿದ್ದು  ಹರಣವಂ ತ್ಯಜಿಸಿ ನಮ್ಮಲ್ಲಿ ಅವತಾರ ಮಾಡಿರುವಳೆಂಬ ಸಂಗತಿಯನ್ನು ನಾರದ ಮಹರ್ಷಿಗಳಿಂದ ತಿಳಿದು  ಈ ಮಹಾದೇವಿಯನ್ನು ಕರೆದುಕೊಂಡು ಬಂದಿರುವೆನು ಶ್ರೀಮನ್ ಮಹಾದೇವನು ತಪಸ್ಸು ಮಾಡುತ್ತಾ ಕುಳಿತಿರುವನು ಇದಕ್ಕೆ ನಿನ್ನ ಆಜ್ಞೆ ಏನಿರುವುದೈ ದಕ್ಷ  ಕಲ್ಯಾಣ ನಗರದ್ಯಕ್ಷ.

ನಂದಿ: ಅಪ್ಪಾ ಹಿಮವಂತ ರಾಜನೆ ನೀನೆ ಪುಣ್ಯವಂತ ನಿನ್ನ ಜನ್ಮ ಸಾಫಲ್ಯವು  ನೀನು ಮಾಡಿದ ಪಾಪವು ನಾಶನವು ಅಯ್ಯ ಹಿಮವಂತನೇ  ಈ ದಿವಸ ಯನ್ನ ಜನನಿಯಂ ತೋರಿಸಿ ನನ್ನ ಮನಸ್ಸನ್ನು ಸಂತೋಷಪಡಿಸಿದೆ  ನಮೋನ್ನಮೋ ತಾಯೇ  ಹೇ ಜನನಿ  ನಿಮ್ಮ ತಂದೆಯಾದ ದಕ್ಷ ಬ್ರಹ್ಮನು ಯಜ್ಞ ಮಾಡುತ್ತಾನೆಂದು ತಿಳಿದು ಮಹಾದೇವನಿಂದ ಅಪ್ಪಣೆಯಂ ಪಡೆದುಕೊಂಡು ನನ್ನನ್ನು ಕರೆದುಕೊಂಡು ದಕ್ಷಧ್ವರಕ್ಕೆ ಹೋಗಿ ದಕ್ಷನಿಂದ ಪತಿ ನಿಂದೆಯಂ ಕೇಳಲಾರದೆ ಅಗ್ನಿ ಪ್ರವೇಶವಂ ಮಾಡಿದೆ ಹಿಮವಂತ ರಾಜನಲ್ಲಿ ಜನಿಸಿ ಈ ದಿವಸ ನನ್ನ ಕಣ್ಣಿಗೆ ಕಾಣಿಸಿದೆ ಹೇ ತಾಯಿ ನಿನ್ನ ಮಗನಾದ ಯನ್ನನ್ನು ಕರುಣ ಕಟಾಕ್ಷದಿಂದ ನೋಡು ದಕ್ಷದ್ವರದಿಂದ ಬಂದು ಅಘೋರ ದುಃಖದಿಂದ ನಿಮ್ಮ ವರ್ತಮಾನಾದ್ಯಂತವನ್ನು ಶ್ರೀಮನ್ ಮಹಾದೇವನಿಗೆ ತಿಳಿಸಲು ಆ ಸದಾಶಿವನು ಕೇಳಿ ವೀರಭದ್ರೇಶ್ವರನಂ ನಿರ್ಮಿಸಿ ಆತನಿಂದ ಆತನ ಶಿರವರಿಸಿ ನಿಮ್ಮ ದುಃಖದಿಂದಲೇ ಆ ಪರಶಿವನು ಅಂದಿನಿಂದ ದಕ್ಷಿಣಾಮೂರ್ತಿಯಾಗಿ ವಟವೃಕ್ಷದ ಬಳಿಯಲ್ಲಿ  ತಪಸ್ಸಿಗೆ ಕುಳಿತಿರುವನು ನೋಡಮ್ಮಾ ಜನನಿ  ದಿವ್ಯ ಸಜ್ಜನ ಹನನಿ.

ಗಿರಿರಾಜ: ಅಮ್ಮಯ್ಯ ಗಿರಿಜಾದೇವಿ  ನಾವು ಹೋಗಿ ಬರುತ್ತೇವೆ  ನಮಗೆ ಅಪ್ಪಣೆಯನ್ನು ಕೊಡು  ಈ ನಿನ್ನ ಕಾಂತನಂ ಒಲಿಸುವುದು ನಿನ್ನದು  ಅಮ್ಮಯ್ಯ ನಮ್ಮನ್ನು ಮಾತ್ರ ಮರೆಯಬೇಡವಮ್ಮಾ ॥

 

(ಗಿರಿರಾಜ ಮೇನಕೆ ಔಷಧ ಪಟ್ಟಣಕ್ಕೆ ಹಿಂತಿರುಗುವರು

ಗಿರಿಜೆಯು ಸಖಿಯರಿಂದೊಡಗೂಡಿ ಲಿಂಗಪೂಜೆ ಮಾಡುವುದು)

ಗಿರಿಜಾದೇವಿ: ಅಮ್ಮಾ ಸಖಿಯರೇ ಯಾಕೋ ಯನ್ನ ಮನಸ್ಸು  ಕಳವಳಿಸುವುದಲ್ಲಮ್ಮಾ.

ಸಖಿಯರು: ಆಹಾ ಅಮ್ಮಯ್ಯ ನಿನ್ನ ಮನಸ್ಸು  ಶ್ರೀಮನ್ ಮಹಾದೇವನನ್ನು  ಪೂಜಿಸುವುದಕ್ಕೆ ಆತರಿಸುವುದಮ್ಮಾ ಗಿರಿಜಾ ದೇವಿ.

ಕಂದ

ಬಳಿಕಲಾ ಸರ್ವಮಂಗಳೆಯು  ತಾ ಮುದದಿಂದ ಕೆಳದಿ  ಜ
ಯ ವಿಜಯೆಯರ ಕೂಡಿ  ಕೊಳದೊಳು ಮಿಂದು ನಿರ್ಮಳ
ಳಾಗಿ  ಶಿವಪಾದವನು ಧ್ಯಾನಿಸುತಾ ॥

ಗಿರಿಜಾದೇವಿ: ಅಮ್ಮಾ ಸಖಿಯರೇ ಕೇಳಿರಿ  ಈ ಸರೋವರದಲ್ಲಿ ನಾನು  ಸ್ನಾನವನ್ನು ಮಾಡಿಕೊಂಡು ವಿಭೂತಿ ರುದ್ರಾಕ್ಷಿಮಾಲೆಯನ್ನೂ  ಧರಿಸಿಕೊಂಡು ಬರುವುದರೊಳಗಾಗಿ  ನೀವಿಬ್ಬರೂ ಪರಿಪರಿಯ ಫಲವೃಕ್ಷಗಳನ್ನು ಸಿದ್ಧಮಾಡುವುದಲ್ಲದೆ ಧೂಪದೀಪಾದಿಯಾಗಿ ಲಿಂಗಪೂಜಾಸಾಮಗ್ರಿಗಳೆಲ್ಲವಂ ಸಿದ್ಧಪಡಿಸುವರಾಗಿರಮ್ಮ ಸಖಿಯರೆ.

ಸಖಿಯರು: ಅಮ್ಮಾ ದೇವಿಯೆ ತಮ್ಮಾಜ್ಞೆಯಂತೆ ಸಿದ್ಧಪಡಿಸುವೆವು.

ಕಂದ

ಕುಂಡಲಿಯನು ಒಲಿದು  ಕಾಮಾದಿಗುಣಗಳ ಖಂಡ್ರಿಸಿ  ಮೊ
ದಲದ್ಗುಣದೊಳಗೆ ಮಂಡಿಸಿ  ಹೃತ್ಪುಂಡರೀಕದೊಳೆಸೆವ
ಖಂಡ ಚಿನ್ಮಯನಂ ಭಜಿಸಿದಳೂ ॥

ಗಿರಿಜಾದೇವಿ: ಆಹ ಈಗಲಾದರೂ ಆ ಪರಶಿವಮೂರ್ತಿಯನ್ನು  ನನ್ನ ಯೋಗ್ಯತಾನುಸಾರವಾಗಿ ಪೂಜೆಯಂ ಮಾಡಿದ್ದಾಯಿತು ಈಗ ಯಮನಿಯಮ ಆಸನ ಪ್ರಾಣಾಯಾಮ ಪುಶ್ಯಾಹಾರ ಧ್ಯಾನಧಾರಣ ಸಮಾಧಿಗಳೆಂಬ ಅಷ್ಟಾಂಗಯೋಗವನ್ನು  ಅಳವಟ್ಟು  ರೇಚಕ  ಪೂರಕ  ಕುಂಭಕಗಳೆಂಬ  ಧಾರಣತ್ರಯಂಗಳಂ ಮೀರಿ ಈಡೆ ಪಿಂಗಳೆ ಸುಷುಮ್ನೆಯಂ ತೋರುವ  ನಾಡಿ ತ್ರಯಂಗಳಂ ಸೆಳೆದ  ಆಧಾರ  ಸ್ವಾದಿಷ್ಟಾನ  ಮಣಿಪೂರಕ  ಅನಾಹತ  ಆಗ್ನೇಹ  ವಿಶುದ್ಧಿಗಳೆಂಬ  ಷಡ್‌ಚಕ್ರಗಳಂ ಮೀರಿ  ಸಹಸ್ರಾರ ಚಕ್ರದಲ್ಲಿ ನಿಲ್ಲಿಸಿ ಐಕ್ಯವಾಗಿರುವ ಆ ಸ್ವಾಮಿಯನ್ನು ನಾನು ತಪಸ್ಸು ಮಾಡುವುದಕ್ಕೆ ಪ್ರಾರಂಭಿಸುವೆನು  ನೀವು ಮಾತ್ರ ಯಾರು ಬಂದರೂ ಒಳಗೆ ಬಿಡದಂತೆ ಕಾಯ್ದುಕೊಂಡು  ಬಹಳ ಎಚ್ಚರದಿಂದ  ಇರುವರಾಗಿರಮ್ಮಾ ಸಖಿಯರೇ.

 

(ತಾರಕಾಸುರನು ಬರುವುದು)

ತಾರಕಾಸುರ: ಎಲೈ ಭಟಾಮಕುಟಾಗ್ರಣ್ಯ ಬೃಕುಟಧಿಘಟಿದಟಿ ರುದ್ರದ್ಭೀಕರ ಚಟಿಲನಿಟಿನಟಿಲ ಪ್ರಕಟಿತ ಮಂಡಲಾಧಿಪರ ಮಂಡಲೋರ್ದಂಡನಾಗಿ ಮೂಜಗದಿ ದೂರ್ಜಟಿಯಾರ್ಭಟಿಸಿ ಸೂರೆಗರೆದ ವಾರ್ತೆಯಂ ಪೂರ್ಕಿಸಿ ಕೇಳುವವನು ನೀನ್ಯಾರು ನಿನ್ನ ಜನನೀ ಜನಕರು ಕರೆಯುವ ನಿನ್ನ ನಾಮಾಂಕಿತವೇನು ಭಟನೇ ಚರಶ್ರೇಷ್ಟನೇ.

ಎಲೈ ಸಾರಥಿ ನಾವು ಧಾರೆಂದರೆ ಈ ಚತುರ್ದಶ ಭುವನ ಬ್ರಹ್ಮಾಂಡವನ್ನು  ಎನ್ನ ಕೋಪಾಗ್ನಿ ಇಂದ ದಹಿಸಿ ಅಂತರಿಕ್ಷದಲ್ಲಿ ನಿಂತು ತ್ರಿಮೂರ್ತಿಗಳನ್ನು ಪಿಡಿದು ಹೆಡಮುಡಿಯಂ ಕಟ್ಟಿ  ಇಂದ್ರಾದಿಗಳಂ ಕೊಂದು ತಿಂದು ತೇಗುವೆ  ಮಿಕ್ಕುಳಿದ ಚಕ್ರವರ್ತಿಗಳಗಂಡ  ಭಾಪುರೇ ಮಾಯಾಪುರಿ ಪಟ್ಟಣವಂ ಪರಿಪಾಲಿಸುತ್ತಾ  ತ್ರಿಜಗದ್ಭಯಂಕರನಾದ  ತಾರಕಾಸುರ ಮಹಾರಾಜನೆಂದು  ಜಯ ದುಂದುಭಿಯನ್ನು ಮಾಡಿಸೋ ಮಾನವಾಗ್ರಣೀ.

ಭಲೈ ಸಾರಥಿ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ  ಚಂದ್ರ ಸೂರ‌್ಯಮಾರ್ಗವಂ ಕಟ್ಟಿ  ಸಕಲ ರುಷ್ಯಾದಿಗಳ ತಪೋಭಂಗವಂ ಮಾಡಿ ಯಜ್ಞಯಾಗಾದಿಗಳಂ ಕೆಡಿಸಿ  ಗೋವುಗಳಂ ಕೊಲ್ಲಿಸಿ  ಗೋಮಾಂಸವಂ ಬ್ರಹ್ಮಚಾರಿಗಳ ರಕ್ತದಲ್ಲಿ ಬೆರೆಯಿಸಿ  ಭಕ್ಷಣೆಯಂ ಮಾಡಿ  ಇಂದುಮುಖಿಯರಾದ ರಂಭೆ ಊರ‌್ವಶಿ ಮೇನಕೆ ತಿಲೋತ್ತಮೆಯರಿಗೆ  ನಾನೇ ಗಂಡನೆಂಬುದಾಗಿ ಬಿರುದಾಂಕಿತವನ್ನು  ವಹಿಸಬೇಕೆಂಬ ಕಾರಣ  ಬಾಹೋಣವಾಯಿತೋ ಭಟನೇ  ಹಿಡಿವೇನ್ ಅಧಟನೇ.

ಪದ

ಕೇಳೋ ಸಾರಥಿ ನೀನು  ಪೇಳುವೆ ನಾ ವಿವರವ ನು
ಜಾಳು ಮಾತಲ್ಲ  ಮಾನವನೇ ದೂತ  ಕೇಳ್‌ಮಾತ
ಕಡು ತವಕದಿ ನಾನು  ಎಡರಾದಮರಾದಿಗಳ
ಬಿಡದೇ ಎಳತರುವೆ ಬೇಗ  ಸೆರೆಮನೆಗೀಗ

ತಾರಕಾಸುರ: ಎಲೈ ಸಾರಥಿ, ಜಾಗ್ರತೆ ಇಂದ  ಇಂದ್ರಲೋಕಕ್ಕೆ ದಾಳಿಯನ್ನಿಟ್ಟು  ಐರಾವತ  ಕಾಮಧೇನು  ಕಲ್ಪವೃಕ್ಷ ಅಮೃತಕೂಪ ಚಿಂತಾಮಣಿಗಳಂ ಸ್ವೀಕರಿಸಿ ಅವನ ಸತಿಯರಾದ ರಂಭಾ ಶಚಿ ಊರ‌್ವಶಿಯರಂ ಕರೆದುಕೊಂಡು ಬರುವೆ  ಜಾಗ್ರತೆ ಇಂದ ರಥವಂ ತಯಾರು ಮಾಡುವನಾಗೈ ಚರಕುಲಾಗ್ರಣೀ.

ಪದ

ಬಿಡು ಬಿಡು ಭಯ ನಡಿ  ಮುಂದೆ ನೀ ನಡೆಯಾಲೋ  ಬಿ
ಡು ಭಯವ  ರಥವ ತಂದಿಡು  ಬೇಗ ॥ನೀನ್‌ಬೇಗ ॥ಸರ್ಪ
ಶಯನ ನೊಲುಮೆ ॥ದರ್ಪದಿಂದಿರುವರಾ  ಪಾರ್ಥಿವಕು
ಲಾಧಮರ  ಪಿಡಿತರುವೇ ॥ಎಳೆತರುವೇ ॥

ತಾರಕಾಸುರ: ಭಲೈ ಸಾರಥಿ, ಜಾಗ್ರತೆ ಇಂದ  ಸ್ವರ್ಗಲೋಕಕ್ಕೆ ದಾಳಿಯನ್ನಿಟ್ಟು ಇಂದ್ರಾದ್ಯಖಿಳ ದಿಕ್ಪಾಲಕರಂ ಗೆದ್ದು ಬಂದು  ರಣಪರಾಕ್ರಮವನ್ನು ಪಡೆಯದಿರ್ದೊಡೆ  ಭಾಪುರೇ ತಾರಕಾಸುರನೆನಿಸಿ ಸಾರ್ಥಕವೇನು. ಎಲೈ ಸಾರಥಿ ಆ ಬಡದೇವತೆಗಳಿಗೆ ಬೆಂಬಲವಾಗಿ ಆ ಸೃಷ್ಟಿಕರ್ತನಾದ ಬ್ರಹ್ಮನು ಬಂದರೆ ಆ ವಿರಂಚಿಯ ಚತುರ್ಮುಖವಂ ಖಂಡ್ರಿಸಿ ಛಿದ್ರಛಿದ್ರಂಗಳಂ ಮಾಡಿ ಬಿಸುಡುವೆನೋ ಸೂತಾ.

ಪದ

ಕುಲಕುಠಾರರೆಂಬ ಅಮರರ  ತಲೆಯನು ತೆಗೆಯುವೆನೂ
ಗೆಲಿಯುವೆನು ಧುರದೊಳು  ನಾನೂ ಕೇಳ್ನಾನೂ ॥

ತಾರಕಾಸುರ: ಎಲೈ ಸೇವಕಾ, ಈ ವ್ಯಾಳ್ಯದೋಳ್ ಅಮರಾದಿಗಳ ತಲೆಯಂ ತೆಗೆದು ನನ್ನ ಮಾಯಾಪುರಿ ಪಟ್ಟಣದ ದ್ವಾರಬಾಗಿಲಿಗೆ  ತೋರಣವಂ ಕಟ್ಟಿ  ಏಕಚಕ್ರವರ್ತಿಯಾದ ಇಂದ್ರನ ಹೆಡೆಮುಡಿಯಂ ಕಟ್ಟಿ  ಅವನ ಮಡದಿಯಾದ ಶಚಿಯಳಂ ಎನ್ನ ಮನೆಯಲ್ಲಿ ದಾಸಿಯಳನ್ನಾಗಿ ಮಾಡುವೆ ಇದಕ್ಕೆ ಅಡ್ಡೈಸಿ ಶ್ರೀ ವಿಷ್ಣುವು ಬಂದರೆ ಯುದ್ಧರಂಗದಲ್ಲಿ ಗೆದ್ದು  ಕ್ಷೀರಾಬ್ದಿಗೆ ಹಾಕಿ ಬಿಡುತ್ತೇನೆ ಕೇಳೈ ಸಾರಥಿ.

ಪದ

ಕುಂಭಿಣಿಯೋಳ್ ಧರಶೇಷ  ಎಂಬಾತನ ತರಿಯುವೆ
ಕುಂಭಿನಿ ರಕ್ಷಕ  ನೀಲಕಂಠನ ಪಿಡಿವೇ   ನಾಂ ಪಿಡಿವೇ ॥

ತಾರಕಾಸುರ: ಭಲೈ ಭಟಶ್ರೇಷ್ಟನೇ ಪ್ರಥಮ ಆ ಭ್ರಷ್ಟ ಇಂದ್ರನಂ ಭಂಗಿಸಿ ಅವನ ಐರಾವತಾದಿ ಸಕಲೈಶ್ವರ‌್ಯವಂ ನಮ್ಮ ಪಟ್ಟಣಕ್ಕೆ ಕಳುಹಿಸುವೆ ಇದಕ್ಕೆ ಅಡ್ಡಲಾಗಿ ರುಂಡಮಾಲಾಧರನೇನಾದರೂ ಬಂದರೆ ಅಡ್ಡಿ ಇಲ್ಲದೆ ಚಂದ್ರಶೇಖರನ ರಜತಾದ್ರಿಯನ್ನು ಎನ್ನ ಕೋಪಾಗ್ನಿ ಇಂದ ಕರಗಿಸಿ ರಸವಂ ಮಾಡಿ  ಸರ‌್ರನೆ ಸುರಿದು ಬಿಡುವೆನು ಅತಿ ಜಾಗ್ರತೆ ಇಂದ ರಥವನ್ನು ಹೊಡೆಯುವನಾಗು ಎಲೈ ಸಾರಥಿ. ಎನ್ನ ಪ್ರೀತಿ ಪಾತ್ರರಾದ ಶೂರಪದ್ಮ ಸಿಂಹಾರಿ ಎಂಬ ಅನುಜರನ್ನು ಜಾಗ್ರತೆ ಇಂದ ಕರೆ ತರುವನಾಗೈ ಸಾರಥಿ.

 

(ಶೂರಪದ್ಮನು ಬರುವುದು)

ಶೂರಪದ್ಮ: ಖರಖರನೆ ಪಲ್ಗಡಿದು ಧರ್ಮದಿಂ ಬ್ರಹ್ಮಾಂಡ ಮಂಡಲವಂ ಎನ್ನ
ಕರಾಗ್ರದಿಂ ದಪ್ಪನೆ ಅಪ್ಪಳಿಸಿ ಚಪ್ಪರಿಸಿ ನುಂಗುವ ಸಾಮರ್ಥ್ಯದಿಂ ನಿರ್ಭಯದಿಂ ಕೇಳುವ  ಮಾನವಾಗ್ರಣಿ ನೀನು ಧಾರು  ನಿನ್ನ ನಾಮಾಂಕಿತವೇನಲೈ  ಮಾನವಾಗ್ರಣಿ. ಭಲೈ ಸಾರಥಿ  ನಾವು ಧಾರೆಂದರೆ  ಈ ಧರಣಿ ಮಂಡಲದೊಳ್ ಶ್ರೇಷ್ಠವಾದ ಮಾಯಾಪುರಿ ಪಟ್ಟಣವಂ ದಿಟ್ಟತನದಿಂದ ಪರಿಪಾಲಿಸುವ  ತಾರಕಾಸುರ ಮಹಾರಾಜನಿಗೆ ಪ್ರೇಮದ ಅನುಜನಾದ ಶೂರಪದ್ಮನೆಂದು ತಿಳಿಯಲೈ ಚರನೇ  ಕುಟಿಲತರದಿಟನೇ. ಎಲೈ ಮಾನವಾಗ್ರಣಿ  ಈ ಸಭಾ ಮಧ್ಯಕ್ಕೆ ಬಂದ ಕಾರಣವೇನೆಂದರೆ ನಮ್ಮ ರಾಕ್ಷಸ ಕುಲ ಚಕ್ರವರ್ತಿಯಾದ ತಾರಕಾಸುರ ಮಹಾರಾಜನು  ಕರೆಸಿದ ಕಾರಣ ಬಾಹೋಣವಾಯ್ತು  ಜಾಗ್ರತೆಯಾಗಿ ತೋರಿಸು.

ಶೂರಪದ್ಮ: ನಮೋನ್ನಮೋ ಅಗ್ರಜಾ  ದಿನಕರಕುಲತೇಜಾ.

ತಾರಕಾಸುರ: ಐಶ್ವರ‌್ಯಮಸ್ತು ಬಾರೈಯ್ಯ ಅನುಜ ಶೂರಪದ್ಮ.

 

(ಸಿಂಹಾರಿ ಬರುವುದು)

ಸಿಂಹಾರಿ: ಎಲಾ ಮಾನುಷ್ಯನೇ, ದಡದಡನೆ ಪೂರ‌್ವಾತಳಕ್ಕೆ ಉದರಿಸುವ  ಸಿಡಿಲಿನ ಗರ್ಜನೆಯಂತೆ ಬಂದವರನ್ನು ಮಾತನಾಡಿಸುವ  ಮಾನವಾಗ್ರಣಿ ನೀನು ಧಾರು  ನಿನ್ನ ನಾಮಾಂಕಿತವೇನು  ಹಸನಾಗಿ ಉಸುರಿಸೋ ಮಾನವಾಗ್ರಣಿ ಎಲೈ ಸಾರಥಿ ಝಣಝಣರೆಂದು ನುಡಿಸುವ ನಡುಕಟ್ಟಿನ ಗಂಟಾರದೋಳ್ ವಿರಾಜಿಸುವ ಕರವಾಲದಿಂ ಸ್ವರ್ಗಲೋಕಕ್ಕೆ ಮುತ್ತಿಗೆಯಂನಿಟ್ಟು  ಮರ್ತ್ಯರಂ ಸದೆ ಬಡಿದು ಪಾತಾಳಲೋಕದಲ್ಲಿ ಬಲಿಚಕ್ರವರ್ತಿಯಂ ತಿಂದು ಅನೇಕ ರಾಜರಂ ಒಕ್ಕಲಿಕ್ಕಿ ಬಂದ  ತಾರಕಾಸುರನ ಪ್ರೀತಿಪಾತ್ರನಾದ  ಸಿಂಹಾರಿ ಎಂಬ ಅನುಜನೆಂದು  ತಿಳಿಯಲೈ ಚರನೇ  ಕುಟಿಲತರದಿಟನೆ. ಭಲೈ ಸಾರಥಿ ಭಳಿಭಳಿರೇ ಜಡದೇಹಿಗಳಾದ  ಇಂದ್ರಾದ್ಯಖಿಳ ಅಷ್ಟ ದಿಕ್ಪಾಲಕರ ಪಟ್ಟಣಂಗಳಿಗೆ  ಮುತ್ತಿಗೆ ಹಾಕಲಿಕ್ಕೆ ನಮ್ಮ ರಾಕ್ಷಸ ಕುಲ ಚಕ್ರವರ್ತಿಯಾದ ತಾರಕಾಸುರ ಮಹರಾಜರು ಕರೆಸಿದ ಕಾರಣ  ಬಾಹೋಣವಾಯಿತೋ ದೂತ ಕೇಳೆನ್ನ ಮಾತ.

ಎಲೈ ಸಾರಥಿ ತಾರಕಾಸುರ ಮಹಾರಾಜರು  ಧಾವಲ್ಲಿರುವರು  ತೋರಿಸೋ ದೂತ  ಕೇಳೆನ್ನ ಮಾತ. ನಮೋನ್ನಮೋ ಅಣ್ಣಾಯ್ಯಾ.

ತಾರಕಾಸುರ: ಐಶ್ವರ‌್ಯಮಸ್ತು ಬಾರೈಯ್ಯ ಅನುಜಾತನೇ.

ಪದ

ತಾರಕ ಭೂಪನೇ  ಕರೆಸಿದ ಕಾರಣ  ಮೀರಿದ
ಸುರರ‌್ಯಾರಿಹರೈ ದೇವಾ ॥ಕೇಳ್ ದೇವಾ ॥ದಿವಿಜರ ಕುಲಗಂ
ಡ  ನೆಂಬುವ ಭೂಮಿಯೊಳು  ಧಾವ ದಿಕ್ಕಿನೊಳಿಹರೋ
ಭೂಪಾ  ಕೇಳ್‌ಭೂಪಾ ॥

ಶೂರಪದ್ಮ: ರಾಕ್ಷಸ ಕುಲಚಕ್ರವರ್ತಿ ಎಂಬ ಬಿರುದು  ಧರಿಸಿ ಮೆರೆಯುವ ಪಟುತರಪರಾಕ್ರಮಿಯಾದ ತಾರಕ ಭೂಪ ಎಡಬಲಕೋಪವಂ ತೋರಿ ಕರದೋಳ್ ವಿರಾಜಿಸುವ ಖಡ್ಗವಂ ಝಳಪಿಸಿ  ಪರರಾಜರಿಗೆ ಅತಿ ಭಯಂಕರನಾದ ಎನ್ನನ್ನು ಕರೆಸಿದ ಕಾರಣವೇನು. ಅತಿಹಿತದಿಂ ತಿಳುಹಿಸಿ  ಸಂತೋಷಪಡಿಸೈ ರಾಜ  ರಾಕ್ಷಸ ಕುಲತೇಜಾ.

ಸಿಂಹಾರಿ: ಹೇ ರಾಕ್ಷಸೇಂದ್ರನಾದ ತಾರಕಭೂಪ  ದಿವಿಜಕುಲಗಂಡರೆಂಬ ಬಿರುದಂ ಧರಿಸಿ ಮೀರಿದ ಕುಲವಂ ಛೇದಿಸುವ ದಿಟ್ಟ ಪರಾಕ್ರಮವಂ ತೋರಿ ಗುಡಿಗುಡಿಸಿ ಕಾಲ್ಕೆರೆದು ನಿಂದು. ನಮ್ಮನ್ನು ಕರೆಸಿದ ಕಾರಣವೇನು ತಿಳಿಸಿ ಸಂತೋಷಗೊಳಿಸೈ ದೇವಾ ಮಹಾನುಭಾವ.

ಪದ

ಭರದಿಂದ ಇಂದ್ರನ  ಲೋಕಕ್ಕೆ ದಾಳಿಯ  ಇಡಲು
ಬೇಕು ಧನುಜ ॥ಅನುಜಾ ॥ಇಂದ್ರನ ಗರ್ವವ  ಛೇದಿ
ಸಿ ಬಿಡುವೆನು  ಮೊದಲೊಡಿಯೋ ಭೇರಿಯನು
ಅದನೂ ಕೇಳಿದನೂ ॥

ತಾರಕಾಸುರ: ಎಲೈ ಮಂತ್ರ ತಂತ್ರ ಪ್ರವೀಣರಾದ  ಅನುಜರಿರಾ, ಮದೋನ್ಮತ್ತರಾದ ಹೇಡಿ ಭ್ರಷ್ಟರೋಳ್  ಶಿಖಾಮಣಿಯಾದ  ದೇವೇಂದ್ರನ ಲೋಕಕ್ಕೆ ಧಾಳಿಯನ್ನಿಟ್ಟು ಕುರ್ಜಭಾವದಿಂ ವಿಭ್ರಾಜಿಸುವ  ಖಡ್ಗದಿಂ ಆ ಹೇಡಿ ದೇವೇಂದ್ರನಂ ಓಡಿಸಿ ಸ್ವರ್ಗಲೋಕವಂ ಸ್ವಾಧೀನ ಮಾಡಲು ಉದ್ಯುಕ್ತನಾಗಿರುವೆನು  ಇದೂ ಅಲ್ಲದೆ ರುಂಡಮಾಲಾಧರ ಬೂದಿಬಡುಕ ತಿರಿದುಂಬುವ ಭೂತಾಧಿಪನಾದ ಶಂಕರನು ಅಡ್ಡ ಬಂದರೆ  ಎನ್ನ ಕೋಪಾಟೋಪದಿಂದ ಘರ್ಜಿಸಿ ಎಚ್ಚರ ತಪ್ಪಿಸಿ ಹೊಡೆಯುವೆನು ಆದರೆ ದಡ್ಬಡಿಲೆಂದು ಜಯಭೇರಿಯನ್ನು ಹೊಡೆಯಿರಿ ಅಗಣಿತವಾದ ಸೈನ್ಯವನ್ನು ಸಿದ್ಧಪಡಿಸಿ ಇಂದ್ರಲೋಕಕ್ಕೆ ದಾಳಿಯನ್ನಿಡಲು  ರಥವನ್ನು ಹಾರಿಸುವಂತೆ ಸಾರಥಿಗೆ ಸೂಚಿಸುವಂಥವರಾಗಿರೈ ಅನುಜರಿರಾ.