(ದೇವೇಂದ್ರನು ಬರುವುದು)
ತ್ರಿವುಡೆ
ಧರೆಯೊಳಮರಾವತಿಗೆ ಅಧಿಪತಿ ಎನಿಸಿ ಮೆರೆಯು
ವ ದೇವರಾಜನು ಭರದಿ ಸಿಂಹಾಸನದಿ ಕುಳಿತು ಹರಿ
ಯ ಧ್ಯಾನಿಸುತಾ ॥ಹರುಷದಲಿ ದಿಕ್ಪಾಲಕರೆಲ್ಲರೂ ಪುರ
ವ ಪಾಲಿಸುತಿರಲು ಹರುಷದಿ ದುರುಳ ತಾರಕ ಬರುತ
ಲಿರ್ದನು ಅನುಜರೊಡಗೂಡಿ ॥
ದೇವೇಂದ್ರ: ಎಲೈ ಕಿಂಕರಶ್ರೇಷ್ಟನೇ ಆನಂದ ವೈಭವದಿಂದ ಮಂದರಗಿರಿಧರನಂ ತಿರಸ್ಕರಿಸುವ ನೀನ್ಯಾರೆಂದು ಕೇಳುವೆ ಭಳಿರೇ ಸಾರಥಿ ಐರಾವತವೆಂಬ ಪಟ್ಟದಾನೆಯನೇರಿ ಅತಿ ಸಂಭ್ರಮದಿಂದ ಅಮರಾವತಿಯನ್ನು ಪರಿಪಾಲಿಸುತ್ತಾ ಕಾಮಧೇನು ಕಲ್ಪವೃಕ್ಷವೇ ಮೊದಲಾದ ಸಮಸ್ತುಗಳಿಂದ ಕೂಡಿ ದಿವಿಜಕುಲ ಸಾರ್ವಭೌಮನೆಂದು ಮೆರೆಯುವ ಮರೀಚಿ ಬ್ರಹ್ಮನ ಪೌತ್ರ ಕಶ್ಯಪನ ಪುತ್ರ ಶಚೀಪತಿಯಾದ ದೇವೇಂದ್ರನೆಂದು ತಿಳಿಯಲೈ ಚರನೇ ಕುಟಿಲತರದಿಟನೆ.
ಭಳಿರೇ ಸಾರಥಿ ವಿಧಿ ನಿಮಿತ್ಯದಿಂ ವ್ಯಕ್ತವಾದ ವೇದೋಕ್ತ ಕರ್ಮಗಳಂ ಅರಿತು ಸಕಲಸುರರಿಗೂ ಅವರವರ ಧರ್ಮಂಗಳಂ ವಿಚಾರಿಸಿ ಶಿಕ್ಷಿಸುವುದಕ್ಕೋಸ್ಕರ ಬಾಹೋಣವಾಯ್ತ ಸೇವಕ. ಭಯತೃಣಭಾವಕ ಭಳಿರೇ ಸಾರಥಿ ಎನ್ನ ಆಪ್ತ ಅಪ್ಸರ ಸ್ತ್ರೀಯರಾದ ಊರ್ವಶಿ ರಂಭೆ ಮೊದಲಾದ ನರ್ತಕಿಯರನ್ನು ಬರಮಾಡು.
ರಂಭಾ – ಊರ್ವಶಿ: ಮಹಾರಾಜರೇ ನಮಸ್ಕರಿಸುವೆವು ಏನಪ್ಪಣೆ.
ದೇವೇಂದ್ರ: ರಂಬಾ ಊರ್ವಶಿಯರೇ ನಿಮಗೆ ಮಂಗಳವಾಗಲಿ ನಾಟ್ಯವು ಪ್ರಾರಂಭವಾಗಲಿ.
(ರಂಬಾ ಊರ್ವಶಿಯರ ನಾಟ್ಯ)
ಬಾರೆ ನೀರೆ ಬಾ ಗುಣ ಹಾರೆ ಬಾರೆ ಪೋಗುವ ನಾ ಕೊಳ
ದೊಳಗಿಹ ತಿಳಿನೀರಿನ ಮಧ್ಯದೀ ಜಳಕವನಾಡಲು
ಬಾರೆ ॥ತಿಳಿ ನೀರೆನುತ್ತ ಬೆಳಲಿಗೆ ವೈಭವ ದ
ರುಷದಿ ನಾವುಗಳು ಪೋಗುವಾ ॥ಬಾರೆ ನೀರೆ ॥
ರಂಬಾ ಊರ್ವಶಿ: ಮಹಾರಾಜರೆ ತಮ್ಮ ಅಪ್ಪಣೆಯಂತೆ ನಾಟ್ಯವನ್ನು ಮುಗಿಸಿದೆವು ಮುಂದೇನಪ್ಪಣೆ ಮಹಾರಾಜರೇ.
ದೇವೇಂದ್ರ: ಎಲೈ ಸಾರಥಿ, ಇವರುಗಳಿಗೆ ಬಹುಮಾನವನ್ನು ಕೊಟ್ಟು ಕಳುಹಿಸುವಂತೆ ಕೋಶಾಧ್ಯಕ್ಷನಿಗೆ ಆಜ್ಞಾಪಿಸು.
(ಇಂದ್ರನ ಪಟ್ಟಣದಲ್ಲಿ ತಾರಕಾಸುರನು)
ಪದ
ಏನು ಚೋದ್ಯವೋ ರಥದ ಶಬ್ದವೋ ಭಾನು
ಕಿರಣದಂತೆ ಯನ್ನ ಹೃದಯ ದಗ್ಧವೋ ॥
ಕ್ರೂರರಸುರರಾ ಶಬ್ದವಾಗಿದೇ ಧಾರು ದಿಕ್ಕು ಇರು
ವರೆನಗೇ ಮಾರಜನಕನೇ ॥ಏನು ಚೋದ್ಯವೋ ॥
ಕೇಳಿ ಭೋಗ ॥ಹಾಳು ಮಾಡುವ ಖೂಳನಂತೆ ಬರುವ
ಶೂಲಪಾಣಿಯೋ ॥ಏನು ಚೋದ್ಯವೋ ॥ಎನ್ನ
ಕರ್ಣಕೆ ಘನ್ನಘಾತದಂತೆ ಕೇಳುವಾ ಶಬ್ದವಾಗಿ ತೋ
ರುತಿಹುದು ॥ಏನು ಚೋದ್ಯವೋ ॥
ಊರ್ವಶಿ: ಆಹಾ ಅಮರೇಂದ್ರರೇ ನಮ್ಮ ಪಟ್ಟಣದಲ್ಲಿ ಘಟ್ಟಿಯಾಗಿ ಧ್ವನಿ ಮಾಡಿದಂತೆ ಎನ್ನ ಕರ್ಣಕ್ಕೆ ಕೇಳಿ ಬರುತ್ತಿದೆ ಎನ್ನ ಹೃದಯವು ತಲ್ಲಣಿಸುವುದು ನಿಲ್ಲಲಾರೆನು ನಲ್ಲ ವಿಚಾರಿಸು ಇದನ್ನೆಲ್ಲಾ.
ಕಂದ
ಇದು ಯೇನು ಘೋರಧ್ವನಿಯು ತುದಿಯಲ್ಲಿ
ಆಗುತಿಹುದು ತುಂಬಿದ ಪುರದೋಳ್ ದೈತ್ಯರು
ಕದನವಾ ಬಯಸುವ ರಾಕ್ಷಸರ್ಯಾರೊ ಬರುತಿ
ಹರು ಆಹಾ ॥
ದೇವೇಂದ್ರ: ಆಹಾ ಈ ತುಂಬಿದ ಪುರದೋಳ್ ದೈತ್ಯರ ಅಘೋರ ಧ್ವನಿಯು ಕೇಳಿ ಬರುತ್ತಿದೆಯಲ್ಲಾ ಯಾರಿರಬಹುದು ಒಳ್ಳೇದು ಮುಂದಕ್ಕೆ ಹೋಗಿ ನೋಡುವೆನು.
ಪದ
ಯಾರಿವರ್ಯಾರಿವರೂ ಘೋರಧ್ವನಿಗೈಯುವರೂ
ಯಾರಿವರ್ಯಾರಿವರೂ ॥ಇಂದ್ರಾನ ಭೀಕರವೆಂದೂ ನೀ ತಿಳಿಯದೆ ॥
ಮಂದಮನುಜರೇ ಚಂದಾದಿ ನೀವ್ಗಳೂ ॥ಯಾರಿವರ್ಯಾರಿವರು ॥
ದೇವೇಂದ್ರ: ಎಲೈ ದುರಾತ್ಮರುಗಳಿರಾ ಇಂದ್ರನೆಂಬ ಸಂದರ್ಭವನ್ನೂ ತಿಳಿಯದೆ ಮೋಸಪಡಿಸಿ ನಮ್ಮ ಪಟ್ಟಣಕ್ಕೆ ಮುತ್ತಿಗೆಯನ್ನು ಹಾಕಿದಿರಾ ಆಹಾ ಒಳ್ಳೆಯದು ನಿಮ್ಮ ಗರ್ವವನ್ನು ಮುರಿದು ಯಮಲೋಕವಂ ತೋರಿಸುತ್ತೇನೆ.
ಪದ॥ತ್ರಿವುಡೆ
ಬಂದ ರಾಕ್ಷಸ ಭೂಪ ತಾರಕ ಚಂದ್ರನಿಂದ್ರ ಸ್ವರ್ಗ
ಲೋಕಕೇ ಬೃಂದ ಧನುಜರ ಬೊಬ್ಬೆಯಾರ್ಭಟೆ
ಇಂದ ಬರುತಿರಲೂ ॥ಸಾಂದ್ರಭಾನುತ ಮರರೆಲ್ಲರೂ
ನಿಂದು ನೋಡುತ ಮನದಿ ಮಿಡುಕುತ
ಬೆದರಿ ಓಡಿದರೆಲ್ಲ ತಮ್ಮಯ ನಿಜಸ್ಥಳಕೆ ಬೇಗಾ ॥
ತಾರಕಾಸುರ: ಎಲೈ ಅನುಜರಾದ ಶೂರಪದ್ಮ ಸಿಂಹಾಸ್ಯ ಮೊದಲಾದ ಸೇನಾ ನಾಯಕರೇ ಈ ಸ್ವರ್ಗಲೋಕದ ಸೊಬಗನ್ನು ನೋಡಿದರೆ ಎನ್ನ ಮನಸ್ಸಾನಂದವನ್ನುಂಟು ಮಾಡುವುದು ಎಲ್ಲಿ ನೋಡಿದರೂ ಚಿತ್ರಮಯವಾದ ರತ್ನದ ಸೋಪಾನಂಗಳು ಎಲ್ಲಿ ನೋಡಿದರೂ ಸರೋವರಂಗಳು ತಂಗಾಳಿಯ ಮಂಟಪಂಗಳು ಎನ್ನ ಮನಕ್ಕೆ ಆನಂದವನ್ನು ಬೀರುತ್ತಿರುವವು ಇಂಥಾ ಸೌಭಾಗ್ಯವನ್ನು ದೇವೇಂದ್ರನೆಂಬ ಅಧಮಾಧಮನಿಗೆ ಸಾಕ್ಷಾತ್ ಪರಮೇಶ್ವರನು ಏನು ಕಾರಣ ಕೊಟ್ಟಿರಬಹುದು ಒಳ್ಳೇದು ಭಾಪುರೇ ಶಹಭಾಷ್ ಎಲೈ ಅನುಜರೇ ಇವನ ಐಶ್ವರ್ಯವಂ ತೆಗೆದುಕೊಂಡು ಹೋಗದಿರ್ದೊಡೆ ಭಾಪುರೇ ತ್ರಿಜಗದ್ಗಂಡ ಗಂಡುಗಲಿಯರ ಗಂಡ ತಾರಕಾಸುರನೆನಿಸಿ ಸಾರ್ಥಕವೇನೈ ಅನುಜಾತರೇ ರಾಕ್ಷಸಾಧಿಪರೇ.
ಪದ
ರಕ್ಕಸನೇ ಕೇಳೆಲೋ ಸೊಕ್ಕಾ ಮುರಿಯುವೆವೀಗಾ ಗಕ್ಕ
ಸಡಗರದಲ್ಲಿ ನಾಲಿಗೆಯ ಕೀಳುವೆ ನಿನ್ನಾ ಕೇಳ್ ನಿನ್ನಾ ॥
ದೇವೇಂದ್ರ: ಎಲೈ ಖೂಳರಕ್ಕಸನೇ ಸೊಕ್ಕಿನಿಂದ ಘಕ್ಕನೆ ಬಂದು ಕುಣಿದಾಡುವೆಯಾ ಎಲಾ ಕಳ್ಳಾ ಅಕ್ಕರದಿಂದಾ ನಿನ್ನ ತೆಕ್ಕೆಯಂ ಬಿಗಿದುಕೊಂಡು ಸೊಕ್ಕಿದ ನಾಲಿಗೆಯಂ ಪಕ್ಕನೆ ಇರಿಯುತ್ತೇನೆ ಯುದ್ಧಕ್ಕೆ ನಿಲ್ಲೋ ಭಂಡರಕ್ಕಸಾ.
ಪದ
ಅಪ್ಪಳಿಸುವೆ ನಾಂ ಚಪ್ಪರಿಸಿ ಭುಜ ಸರ್ಪಭೂಷನ
ದಯದೀ ॥ಮುದದೀ ॥ದರ್ಪವ ಮುರಿಯುವೆ ಮು
ಪ್ಪುರದಹರಂತೆ ಕಪ್ಪುಗೊರಳನ ದಯದೀ ॥ಮುದದೀ ॥
ತಾರಕಾಸುರ: ಎಲೈ ಭಂಡರೊಳ್ ಷಂಡನಾದ ದೇವೇಂದ್ರನೇ ಕೇಳು ಬಾಯಿಗೆ ಬಂದಂತೆ ಬಗುಳಿದರೆ ನಿನ್ನನ್ನು ಪಟುಭಟರೆನ್ನುವರೇ ಹ್ಯಾಗೆ ಎಲಾ ಖೂಳ. ನೀನು ಭಾಳಾಕ್ಷನ ಸ್ತುತಿಯನ್ನು ಮಾಡಿದರೂ ಬಿಡುವ ಹಾಗಿಲ್ಲ ನಿನ್ನ ಹೆಂಡತಿಯರ ಮಾಂಗಲ್ಯವನ್ನು ಕಿತ್ತು ಈ ಭೂನಿಳಯದಲ್ಲಿ ಬಾಳದಂತೆ ಮಾಡದಿದ್ದರೆ ನನ್ನನ್ನು ತಾರಕಾಸುರನೆಂದು ಕರೆಯುವರೆ ಹ್ಯಾಗೆ ಖೂಳ. ಆಮೇಲೆ ನೋಡು ನಿನ್ನ ಗೋಳ.
ಪದ
ಪೌರುಷ ಹೇಳುವೆ ತೂರಿಸಿ ಸರಳ್ಗಳೆಯಲಿದು ಮೂ
ಡಗಾಡ ಕಾರಿಸಿ ರಕ್ತವು ಹಾರಿಸುವೆನು ಶಿರ ಕರಾಗ್ರ್ಯೆ
ಯುವೆನೀಗ ಬೇಗಾ ॥
ದೇವೇಂದ್ರ: ಎಲೈ ದುರಾತ್ಮನೇ ಇಗೋ ನೋಡು ಎನ್ನ ಕರದಲ್ಲಿರ್ಪ ವಜ್ರಾಯುಧದಿಂದ ನಿನ್ನಂ ಗುದ್ದಿ ಬುದ್ದಿಯಂ ಕಲಿಸಿ ನಿನ್ನ ಸದ್ದಡಗಿಸುವೆನು ಯುದ್ಧಕ್ಕೆ ಸಿದ್ಧವಾಗೋ ಭಂಡಾ ನಿನಗೆ ನಾನೇ ಮಿಂಡಾ.
ಪದ
ಮಾರ್ಗವ ತೋರ್ಪೆ ಕೈಲಾಸದಿ ನಿನಗೇ
ಕೂರ್ಗಣ್ಣಿನ ದುರುಳಾ ಮರುಳಾ ॥
ಭೋರ್ಗರೆಯವುದೆನ್ನ ಕೂರ್ಗಳ ಬಾಣದಿ
ನಿಗ್ರಹಿಸುವೆ ಪ್ರಾಣಾ ॥ತ್ರಾಣಾ ॥
ತಾರಕಾಸುರ: ಎಲೈ ಸಹಸ್ರಾಕ್ಷನೆಂದು ಗರ್ವದಿಂ ಮೆರೆಯುವ ಭಂಡ ದೇವೇಂದ್ರನೇ ಕೇಳು ಶತಯಗ್ನವಂ ಮಾಡಿ ಪಡೆದ ಪದವಿಯಂ ಈ ದಿನ ಸೂರೆಗೊಂಡು ಈ ಸ್ವರ್ಗಲೋಕಕ್ಕೆ ನಾನೇ ಅಧಿಪತಿಯಾಗಿ ಮೆರೆಯುವೆ ಜಾಗ್ರತೆ ಯುದ್ಧಕ್ಕೆ ನಿಲ್ಲುವನಾಗೋ ಭ್ರಷ್ಟಾ ಪರಮಪಾಪಿಷ್ಟ.
(ದೇವೇಂದ್ರ ತಾರಕಾಸುರರ ಯುದ್ಧ)
ಪದ
ಹಿಡಿಹಿಡಿ ಅನುಜರೇ ಜಡಜಾಯುತ ಗಂಧಿಯರ
ತುಡುಕಿ ದೇವೇಂದ್ರ ನೆಂಬುವನಾ ಕೇಳವನಾ ॥
ತಾರಕಾಸುರ: ಎಲೈ ಬಡನಡುವಿನ ವೈಯ್ಯರಿಯಾದ ರಂಭಾ ಊರ್ವಶಿಯರೇ ನಿಮ್ಮೊಡೆಯನಾದ ಭಂಡ ದೇವೇಂದ್ರನು ಎನ್ನ ಘರ್ಜನಾರ್ಭಟಕ್ಕೆ ಬೆದರಿ ಪಲಾಯನಗೈದನು ಎಲಾ ನಾರೀಮಣಿಯರೇ ನಿಮ್ಮಂಥ ಸುಂದರೀಮಣಿಯರಂ ಬಿಟ್ಟು ಹೋದನಲ್ಲಾ ಛೇ ಛೇ ಅಂಥಾ ಭ್ರಷ್ಟನನ್ನು ನೋಡಬಹುದೆ ಎಲೈ ಸುಂದರೀಮಣಿಯರೇ ಸುಮ್ಮನೆ ನಮ್ಮ ಮಾಯಾಪುರಿ ಪಟ್ಟಣಕ್ಕೆ ಹೋಗೋಣ ಬರುವರಾಗಿರೇ ಲಲನಾಮಣಿಯರುಗಳಿರಾ.
ಪದ
ಕೋಪವ ಮಾಡುವರೇ ಮೂರ್ಖನೇ
ಕೋಪವ ಮಾಡುವರೇನೋ ॥
ವರಪತಿವ್ರತೆಯರ ವ್ರತಗೆಡಿಸಲು ನೀಂ
ಖತಿಯಲಿ ನೇಮಿಸಿ ಪೋಗುವದುಚಿತವೇ ॥ಕೋಪವ ॥
ಊರ್ವಶಿ: ಎಲಾ ಅಸುರಪತಿ, ನಮ್ಮನ್ನು ಪರಿಪರಿ ಇಂದ ನಿಂದಿಸಿ ನಮ್ಮಂಥ ಪತಿವ್ರತಾ ಸ್ತ್ರೀಯರನ್ನು ವ್ರತಗೆಡಿಸುವುದಕ್ಕೆ ಯತ್ನ ಮಾಡಿದರೆ ಖಂಡಿತವಾಗಿಯೂ ನೀನು ಶಾಪಕ್ಕೆ ಗುರಿಯಾಗುವೆ ಸುಮ್ಮನೆ ಆಚೆಗೆ ಹೋಗೋ ಮೂರ್ಖನೇ.
ಪದ
ಬಾರೆಲೆ ಬಾರೆಲೆ ಬಾರೆಲೆ ಊರ್ವಶಿ
ಮೋರೆಯ ತಿವಿಯುವೆನೇ ತಿವಿಯುವೆನೇ ॥
ಕಾಮಿನಿ ಕೇಳಲೆ ॥ಸಾಮಜ ಗಾಮಿನಿ
ಕಾಮರಸಾಕ್ಷಿಯೆ ಎಷ್ಟೇಳೆ ಸರಸವು
ಭ್ರಷ್ಟಳೆ ನಡಿಯಲೆ ಕೆಟ್ಟಮಾತುಗಳ್ಯಾಕೆ ॥ಜೋಕೆ ॥
ತಾರಕಾಸುರ: ಎಲೈ ರಂಭಾ ಊರ್ವಶೀ ತ್ರಿಮೂರ್ತಿಗಳೋಳ್ ನಾನೇ ಗಂಡುಗಲಿ ತಾರಕಾಸುರ ದಕ್ಷ ವಿರೂಪಾಕ್ಷ ಸಹಸ್ರಾಕ್ಷಗಳೆಂಬ ಮದೋತ್ಕಟ ಸಮುದಾಯಕ್ಕೆ ಸಿಂಹರಾಜನಂತೆಸೆವ ಧನುಜೇಂದ್ರಗೆ ಸುಖದುಃಖಾದಿಗಳಂ ಕೊಡುವವನು ಧಾರಿರುವನು ಆದರೆ ನಿಮ್ಮನ್ನ ಧಾವನು ಬಿಡಿಸುವನು ನಗಜೇಶನೆಂಬುವನು ಸುಖವಂ ಕೊಡುವನೆ ಹೇಗೆ ಎಲೈ ಸಖಿಯರೇ ಹರಿಬ್ರಹ್ಮೇಂದ್ರಾದಿಗಳ ಮೋರೆಯಂ ತಿವಿದು ಅಷ್ಟದಿಕ್ಪಾಲಕರ ಪಟ್ಟಣವಂ ಸುಟ್ಟು ಅಹಿತ ಅಮರ ಯಕ್ಷ ಸಿದ್ದಸಾದ್ಯ ಕಿಂಪುರುಷಾದ್ಯರಿಗೆಲ್ಲ ಅತಿ ಉಬ್ಬಸ ದುಃಖವಂ ಕೊಡುವೆ ಜಗದೇಕವೀರ ಪಟುವರ್ಧನ ಭಾಪುರೇ ಭಳಿರೇ ಎಂದು ಜಯ ದುಂದುಭಿ ಧ್ವನಿಯಂ ಮಾಡುವ ಪಟ್ಟಪರಾಕ್ರಮನೆಂದು ತಿಳಿದು ವಟಗುಟ್ಟುವದಂ ಬಿಟ್ಟು ಥಟ್ಟನೆ ಎಮ್ಮ ಪಟ್ಟಣಕ್ಕೆ ಪಥವಂ ಹಿಡಿಯಿರಿ ಇಂದ್ರಾದಿ ಅಷ್ಟದಿಕ್ಪಾಲಕ ನವಗ್ರಹಗಳಂ ಪಿಡಿದು ಸೆರೆಯಲ್ಲಿ ಹಾಕುವೆನೆ ರಂಭಾ ಬಿಡು ನಿನ್ನ ಜಂಬ.
ಪದ
ಕಾಡಬೇಡಾ ದುರುಳನೇ ಯಾತಕೆ ಬಿರುನುಡಿ
ನುಡಿಯುವೆ ಮೂಡ ರೀತಿಯೊಳೆನ್ನನು ಮುಟ್ಟಲಿ
ಬೇಡ ಲಲನಾಮಣಿಯಳ ಬಲು ಬಳಲಿಸುವದು
ತರವಲ್ಲವು ನಿನಗೆ ॥ಕಾಡಬೇಡಾ ದುರುಳನೇ ॥
ಊರ್ವಶಿ: ಎಲಾ ದುರುಳ ತಾರಕ ಇಂದ್ರ ಪಟ್ಟಣದ ರಾಣಿಯರಂ ಮುಟ್ಟಬೇಡ ದೂರನಿಂತು ಮಾತನಾಡು ಗಿಲಿಬಿಲಿ ಇಂದ ಲಲನೆಯಂ ಬಳಲಿಸುವದು ನಿನಗೆ ಇದು ಥರವಲ್ಲ ಇದರಿಂದ ನಿನಗೆ ಕೇಡು ಸಂಭವಿಸುವದು ತಿಳಿಯೋ ಮೂಢಾ ಬಿರುನುಡಿಯಾಡಬೇಡ.
ಪದ
ಯಾತಕೆ ಮಾತಿದು ಕಾತರಿಸಲಿ ಬೇಡವೆ ನೀತಿಯ
ಪೇಳಲು ಮಾತ ಕೇಳುವೆನೇ ॥ಕೇಳುವೆನೇ ॥
ನಡಿ ನಡಿ ಪೋಗುವ ಜಡಜಾಂಬಕಿ ಬಾರೆ
ನುಡಿಯನು ಕೇಳೆನೇ ಜಡಿದು ನೂಕುವೆನೂ ॥ನೂಕುವೆನೂ ॥
ಸಿಂಹಾಸ್ಯ: ಹೇ ವನಿತೆ, ಘನ ಬಲಾನ್ವಿತರು ಬಂದು ನಿನ್ನ ಸೆರೆಯಂ ಬಿಡಿಸುತ್ತಾರೆಂದು ನಿನ್ನ ಕನಸು ಮನಸಿನಲ್ಲಿಯೂ ಕೂಡ ನೆನೆಸಬೇಡ ಕ್ರೂರನಂ ಕೊಲ್ಲು ಬಾರೆಂದು ಕರೆಯುವೆಯಾ ನಾರೀಮಣೀ ಆ ಜಾರಚೋರನಾದ ಹರಿಯೇ ಬರಲಿ ಧಾರುಣಿಯೊಳ್ ಮಿಕ್ಕು ಮೀರಿದ ಭೀಮೇಶನು ಈ ಭುವನದೋಳ್ ಗಂಡಕಾನದಿಯೋಳ್ ಶಿಲಾರೂಪಾಗಿ ನಿಂತನು ಆದರೆ ಆ ಹರಿ ಎನ್ನ ಬೊಜ್ಜಿಗೆ ನಿಲ್ಲಲಾರದೆ ತೊಂಡೆಯ ರಾಜನ ವಾಸಸ್ಥಾನವಾದ ಶೇಷಾದ್ರಿಗಿರಿಯಲ್ಲಿ ಹಾವಿನ ಹುತ್ತದೋಳ್ ನಿಂತನು ಅಂಥವನಂ ಮತ್ತೆ ನೀನು ಕರೆಯುವುದೇತಕ್ಕೆ ಮೂರ್ಖಳೆ ಬಾರೆ ನಾರೀಮಣಿಯಳೇ.
ಪದ
ಶ್ರೀ ಭೀಮೇಶನ ವರಸೇವಕರೊಳು ಕರೆಕರೆಪಡಿ
ಸುವರೆ ದುರುಳನೆ ನೀನು ಕೋಪವ ಮಾಡುವರೇ ॥
ರಂಬೆ: ಹೇ ದುರುಳನಾದ ದಾನವಾಗ್ರಣಿ ಸುರನಿಕರವಂದಿತ ರಾಕ್ಷಸಾಂತಕನಾದ ಭೀಮೇಶನ ಸೇವಕರೊಳ್ ಕರೆಕರೆ ಮಾಡಿ ದುರಿತಕ್ಕೆ ಒಳಗಾಗಬೇಡಾ ಎನ್ನ ಧರ್ಮಸೆರೆಯಂ ಬಿಡೈ ರಾಕ್ಷಸೇಂದ್ರನೇ.
ಪದ
ಕಾಮಿನಿ ಕೇಳೆಲೆ ಕಾಮಪಿತ ಪೊರೆವಾನೆ ಭೀಮೇಶ
ನಾಣೆ ಬಿಡೆನು ನಾಂ ಬಾಲೆ ॥ಕೇಳ್ ಬಾಲೇ ॥
ಶೂರಪದ್ಮ: ಹೇ ಕಾಮಿನಿ ಸಕಲ ಸಂರಕ್ಷಣಕರ್ತ ಹರಿ ಎಂದು ಹೊಗಳುವೆಯಾ ಛೀ ಭ್ರಷ್ಟಳೆ ನಾನು ನಿನ್ನ ಕೈ ಬಿಟ್ಟು ಹೋಗುವೆನೆಂದು ತಿಳಿದಿರುವೆಯಾ ಇಂಥಾ ವೈಯಾರದ ನುಡಿಯನ್ನು ಧಾರ ಮುಂದೆ ಬಗುಳುವೆ ಹೇ ನಾರಿ ಘುಡಿಘುಡಿಪ ಯನ್ನ ಸಿಂಹನಾದಕ್ಕೆ ಈ ಅಮರಾವತಿಯ ಗೋಪುರಗಳೆಲ್ಲಾ ಸಿಡಿದು ಬೀಳಲಿಲ್ಲವೇ ಎನ್ನಬ್ಬರದ ಆರ್ಭಟಕ್ಕೆ ಸೂರ್ಯ ಚಂದ್ರಾದಿಗಳು ಗಗನದೋಳ್ ಸಂಚರಿಸುವರು ಅಂತರಿಕ್ಷದೋಳ್ ಸಂಚರಿಪ ಸುರಗಂಧರ್ವರೆಲ್ಲರೂ ಮಾರ್ಗವಂ ತಪ್ಪಿ ಪಲಾಯನ ಗೈದರು ಇಂಥಾ ಪಟುಪರಾಕ್ರಮಿಗೆ ನಿನ್ನ ವೈಯಾರದ ನುಡಿ ಸಾಟಿಯೇನೆ ಸತಿ ರೂಪವತಿ.
ಪದ
ಬಾಲಾಮಣಿಯಳ ಗೋಳಾಡಿಸಿದರೆ ನೀಲಕಂಠನಿದ
ತಾಳುವನೇ ॥ಕರಬಿಡು ಹಿಡಿವರೇ ದಾನವರಾಯ ॥
ರಂಭೆ: ಎಲೋ ಮೂರ್ಖ ನೀನು ಕೊಬ್ಬಿನಿಂದ ಅಬ್ಜಮುಖಿಯರಂ ಬೈದರೆ ಈ ಸಜ್ಜನ ಸಮುದಾಯವು ಒಪ್ಪುವರೇ ಹ್ಯಾಗೆ ನಿರ್ಭಯ ಪ್ರದಾಯಕನಾದ ಶ್ರೀಮನ್ ಮಹಾದೇವನು ಇಂಥಾ ನಿನ್ನ ನಿರ್ಭಾಗ್ಯತನದ ಕಾರ್ಯವನ್ನು ಒಪ್ಪುವನೇನೋ ಮೂರ್ಖ ಎನ್ನೊಳ್ ಯಾತಕ್ಕೆ ತರ್ಕ.
ಪದ
ದುಷ್ಟಳೆ ಮಾತ ನಿನ್ನಿಷ್ಟವ ಕೇಳಲು ಸ್ರಿಷ್ಟಿಗೀಶನು
ಕಾಯುವನೆ ಜಾಣೆ ॥ಕೇಳ್ ಜಾಣೆ ॥
ಸಿಂಹಾಸ್ಯ: ಎಲೈ ಮತ್ಸ್ಯನೇತ್ರಿಯೇ ಎಚ್ಚರವಂ ಮರೆತು ನೀನು ತುಚ್ಚೀಕರಿಸಿ ನುಡಿದೆಯಲ್ಲಾ ತುಚ್ಚಕರ ಇಂದ್ರನೊಬ್ಬನೇ ನಿನ್ನ ಕಣ್ಣಿಗೆ ಹೆಚ್ಚಿನವನೆಂದು ತಿಳಿದಿರುವೆಯಾ ಏನು ಎಲೈ ಹುಚ್ಚು ವನಿತೆ ಮೆಚ್ಚಿರ್ಪ ಮಹದೇವನು ಅಚ್ಚುಗದಿಂ ಬಂದು ನಿನ್ನಂ ನಿಚ್ಚಟದಿಂ ಕಾಯುವನೆ ಹೇ ಹುಚ್ಚುಮೌಳಿ ಬೆಚ್ಚಿ ಬೆದರದೆ ಇಚ್ಚಾಧಿಕನಾಗಿ ತತ್ಬಂದಶೇಕನಂ ಮುಚ್ಚಿ ನುಚ್ಚುನುರ್ಪಡಿಮಾಡಿ ಅಚ್ಚ ಭೂಮಿಗೆ ಕೆಡಹುವವನ ಸಮ್ಮುಖದೋಳ್ ಹುಚ್ಚರಿಗೆಲ್ಲ ಗುರುವೆನಿಪ ಬೆತ್ತಲೆ ಗೊರವನಂ ಮೆಚ್ಚಿದೆಯಲ್ಲ ಛೀ ಭ್ರಷ್ಟಳೆ ಮತ್ತವನ ಸುದ್ದಿಯಂ ಎತ್ತಬೇಡ ಬಿತ್ತರದಿಂದ ಎಮ್ಮ ಪುರದ ಸತ್ಪಥವಂ ಹಿಡಿಯೇ ನಾರಿ ಬೆಡಗಿನ ವೈಯ್ಯರಿ.
ಪದ
ಈ ಸಮಯದಿ ಎನ್ನ ಗಾಸಿಗೊಳಿಸಿದರೆ ವಾಸವಾ
ನುತಶ್ರೀ ಭೀಮೇಶ ಮೆಚ್ಚುವನೇ ಕೋಪಮಾಡು
ಊರ್ವಶಿ: ಎಲೈ ದೈತ್ಯೇಂದ್ರ ಸಾಸಿರಾರು ಕೋಟಿ ರಕ್ಕಸರ ಕೋಪವನ್ನು ವಶವರ್ತಿ ಮಾಡಿಕೊಂಡು ಮೋಸದಿಂದ ಎಮ್ಮನ್ನು ನೀನು ಘಾಸಿಪಡಿಸಿದರೆ ವಾಸವಂದಿತ ಶ್ರೀ ನೀಲಕಂಠೇಶನು ಮೆಚ್ಚುವನೇನೋ ರಾಕ್ಷಸಾಧಮ.
ಪದ
ಸಾರಥಿ ಬಾರೆಲೋ ರಥವನು ತರಿಸಲೋ ಪಥವ
ನು ತೋರೆಲೋ ಕಥನವ ಗೈಯ್ಯುವೇ ॥ಗೈಯ್ಯುವೇ ॥
ಗೆದ್ದೆನು ಗೆದ್ದೆನು ಇಂದ್ರನ ಲೋಕವ ಸುಂದರ ಮುಖಿ
ಯರ ಚಂದದಿ ಹೊಯ್ವೆನು ವಿಕ್ರಮ ತೋರಿದೆ
ಇಂದ್ರನ ಜೈಸಿದೆ ಚಂದ್ರಮುಖಿಯರ ತಂತ್ರದಿ ಗೆದ್ದೆನು ॥
ಬಾರೆಲೊ ಬಾರೆಲೊ
ತಾರಕಾಸುರ: ಭಲೈ ಸಾರಥಿ ರಂಬೆ ಊರ್ವಶಿಯರೇ ಮೊದಲಾದ ಸುಂದರಿಯರಿಗೂ ಐರಾವತ ಕಾಮಧೇನು ಕಲ್ಪವೃಕ್ಷ ಅಮೃತ ಕೂಪ ಚಿಂತಾಮಣಿಗಳಿಗೂ ನಾನೇ ಒಡೆಯನೆಂಬ ಬಿರುದಂ ವಹಿಸಿದೆ ಭಲಾಭಲಾ ಇಂದ್ರನಂ ಗೆದ್ದ ನನ್ನ ಪರಾಕ್ರಮಕ್ಕೆ ಯಾರು ತಾನೇ ಇದಿರು ಆದರೆ ಯನ್ನ ಐಶ್ವರ್ಯಕ್ಕೆ ಯಾರು ಸಮಾನರು ಹಾಗೂ ಶತಕೋಟಿ ದೇವತೆಯರಿಗೂ ದಾನವರಿಗೂ ಸಹ ನಾನೇ ಅಧಿಪನೆಂದು ಜಯಭೇರಿಯಂ ಹೊಡೆಯೋ ದ್ವಾರಾಧಿಪ ನೋಡೆನ್ನ ಪ್ರತಾಪ.
ಭಾಗವತರ ವಾರ್ಧಕ॥ತೋಡಿ
ತಾರಕಾಸುರನ ಬಾಧೆಯೋಳ್ ಮನ ಚಿತ್ತದೋಳ್
ತತ್ತರಗೊಂಡು ದಿವಿಜೋತ್ತಮರು ಎತ್ತ ಪೋಗುವೆ
ಇನ್ನೆತ್ತಲಡಗುವೆವೆಂದು ದೇವರ್ಕಳಂ ಕೂಡುತಾ
ಎತ್ತ ಪೋದರು ಬಿಡದೆ ಹೇಮಾಚಲದ ಗವಿಯಂ
ಪೊಕ್ಕು ಇರಲ್ ಅತ್ತಲಾ ಬೃಹಸ್ಪತಿಯು ನಡೆತರಲ್
ಕಂಡೆರಗಿ ಸುರನಾಥನಿಂತೆಂದನು ॥
ಪದ
ಏನ ಮಾಡಲಿ ನಾನು ಇದಕೆ ಯತ್ನಗಳನು ದಾನವನ
ಬಾಧೆ ಬಹಳ ಘನವಾಯ್ತು ॥ದೇವಾ ॥
ದೇವೇಂದ್ರ: ಅಯ್ಯೋ ಹರಹರ ಶಿವ ಶಿವ ಕ್ರೂರನಾದ ತಾರಕಾಸುರನಿಂದ ಸೋತು ಎನ್ನ ಐಶ್ವರ್ಯವಂ ಕಳೆದುಕೊಂಡು ಈ ದೇವರ್ಕಳಂ ಸಹ ಕೂಡಿಕೊಂಡು ಸತೀಮಣಿಯರಂ ನೋಡಿಕೊಂಡು ನಿರ್ಭಾಗ್ಯನಾದೆನು ದೇವ ಈಗ ನಾನು ನಿಮ್ಮ ಆವಾಸಸ್ಥಾನವಾದ ಹೇಮಾಚಲದ ಗವಿಯಲ್ಲಾದರೂ ಅಡಗಿಕೊಂಡು ಪ್ರಾಣ ಸಂರಕ್ಷಣೆ ಮಾಡಿಕೊಳ್ಳುವೆನೈ ಹರಹರ ಮೃತ್ಯುಂಜಯ.
(ಬೃಹಸ್ಪತಿಯು ಬರುವುದು)
ಪದ
ಶಂಕರ ಗಿರಿಜೇಶ ಸದಾಶಿವ ಲಂಕಾಧೀಶ ಬಿಂಕ
ವಿನಾಶ ಪಂಕಜಾಂಡಪೋಷ ಸದಾಶಿವ ॥
ಲೋಕೋದ್ಧಾರ ನಾಕವಿಹಾರ ಶ್ರೀಕರಕೃಪ ॥ಸದಾಶಿವ ॥
ನಾಗವಿಭೂಷ ಯೋಗಿಹೃದೇಶ ಆಗಮಶೃತಿ ಪೋಷ ॥ಸದಾಶಿವ ॥
ತಾರಕಭೂಪ ಹಾರಿಕ ಪಾಪ ಮೇರು ಕಲಿತ ಚಾಪ ॥
ಸದಾಶಿವ ಅಂಗಜ ಹರಣ ತುಂಗನಚರಣ
ಜಂಗಮಾದಿಪೂರ್ಣ ॥ಸದಾಶಿವ ॥ದೀನರ ಭಾಗ್ಯ ದಾನಿಯೆ
ಬೇಗ ನೀನೊದಗುವುದೀಗ ಸದಾಶಿವ ಕಾಮಿತನಾಶ
ರಾಮಲಿಂಗೇಶ ಸ್ವಾಮಿ ಕೃತೀವಾಸ ॥ಸದಾಶಿವ ॥
ಬೃಹಸ್ಪತಿ: ಶಂಕರ ಗಂಗಾಧರ ಮೃತ್ಯುಂಜಯ ಕಾಪಾಡು ಕಾಪಾಡು.
ದೇವೇಂದ್ರ: ಆಹಾ ಯಾರೋ ಶಿವನಾಮ ಸ್ಮರಣೆಯಂ ಗೈಯ್ಯುತ್ತಲಿರುವರು ನಿರೀಕ್ಷಿಸಿ ನೋಡುವೆನು ಯಾರಾಗಿರಬಹುದು ಬೃಹಸ್ಪತಾಚಾರ್ಯರಂತೆ ಕಾಣುವುದು ಗುರುವರೇಣ್ಯರಾದ ಬೃಹಸ್ಪತಾಚಾರ್ಯರೇ ತಮ್ಮ ದಿವ್ಯ ಶ್ರೀ ಚರಣಂಗಳಿಗೆ ದೀನನಾದ ಇಂದ್ರನು ವಂದಿಸುವೆನು.
ಬೃಹಸ್ಪತಿ: ಎಲೈ ಇಂದ್ರನೇ ನಿನಗೆ ಜಯವಾಗಲಿ ಆದರೆ ನೀನು ಸ್ವರ್ಗಲೋಕವಂ ಬಿಟ್ಟು ಈ ಮಹಮ್ಮೇರು ಪರ್ವತದ ಗುಹೆಯಲ್ಲಿ ವಾಸಿಸಲು ಕಾರಣವೇನು ಅತಿ ತ್ವರಿತದಿಂದ ತಿಳುಹಿಸು.
ಪದ ॥ಅಟತಾಳ ॥ಭೈರವಿ
ಬೇಡುವೆ ಮುನಿವರ ನಾನೂ ತಾಳೆನು ನಾನೂ ಕಂಡಿರೆ
ಗುರುವೆ ನೀವು ಕಂಡಿರೆ ಈ ವಿಧಿಯಾ ಚಂಡ
ತಾರಕಗೈದ ಭಂಡತನವನೂ ॥
ದೇವೇಂದ್ರ: ಆಹಾ ಗುರುವರೇಣ್ಯರಾದ ಬೃಹಸ್ಪತಾಚಾರ್ಯರೇ ನನಗೂ ದೇವತೆಗಳಿಗೂ ಸಹ ಬಂದಿರುವ ವಿಪತ್ತುಗಳನ್ನು ಏನೆಂದು ಹೇಳಲಿ ಗುರುಗಳೇ.
ಬೃಹಸ್ಪತಿ: ಅಯ್ಯ ಇಂದ್ರನೇ ನಿನಗೆ ಬಂದಿರುವ ಅಂಥಾ ಕಷ್ಟವೇನು ಹೇಳು.
ದೇವೇಂದ್ರ: ಸ್ವಾಮಿ ಗುರುಗಳೇ ಆ ತಾರಕ ಶೂರಪದ್ಮ ಸಿಂಹಾಸ್ಯರೆಂಬ ದೈತ್ಯರು ಬಂದು ನಮ್ಮಗಳನ್ನು ಹೊಡೆದು ಬಡಿದು ಐಶ್ವರ್ಯವನ್ನೆಲ್ಲಾ ಸೆರೆ ಸೂರೆ ಮಾಡಿ ನಮ್ಮ ವಾರಾಂಗನೆಯರನ್ನು ಎಳೆದುಕೊಂಡು ಹೋಗಿ ದಾಸೀಚಾಕರಿಗೆ ಸೇರಿಸಿಕೊಂಡರು ಇದೂ ಅಲ್ಲದೆ ನಮ್ಮನ್ನೂ ಕೂಡ ಒಂದು ಕಡೆಯಲ್ಲಿಯೂ ನಿಲಗೊಡದೆ ಹೋದ್ದರಿಂದ ಈ ಮಹಂ ಮೇರುಪರ್ವತದ ಗುಹೆಯಲ್ಲಿ ಸೇರಿಕೊಂಡಿರುತ್ತೇವೆ ನಮಗೆ ಇಂಥಾ ದುರವಸ್ಥೆ ಪ್ರಾಪ್ತವಾಗಿರುವುದು ಗುರುಗಳೇ ಇನ್ನೇನೆಂದು ಹೇಳಲಿ.
Leave A Comment