ಪದ

ಚರಣಕ್ಕಭಿನಮಿಸಿ ಇರುವ  ಸುರವರನ ಕಾಣುತ
ಗುರುವು ಪೇಳಿದನಾಗ  ಸುರಪತಿಯೆ ಕೇಳ್ ನೀನು
ವಿಧಿ ಎಡೆಗೆ ಪೋಗುವೆನಾ  ನಡೆಯಿರಿ ಬೇಗದೊಳು
ನಿಮ್ಮಳಲ ಪೇಳುವಿರಿ ॥ಸುರಪತಿಯೆ ಕೇಳಯ್ಯ ನೀನು ॥

ಬೃಹಸ್ಪತಿ: ಸ್ವರ್ಗಕ್ಕೆ ಅಧಿಪತಿಯಾದ ದೇವೇಂದ್ರನೇ ಕೇಳು ನೀನು ಹೇಳಿದ ಕಷ್ಟ ವಿಚಾರವೆಲ್ಲಾ ಗೊತ್ತಾಯಿತು ಅಯ್ಯ ನಿನ್ನಂಥವನಿಗೆ ಇಂಥಾ ಕಷ್ಟವು ಎಂದಿಗೂ ಬರಬಾರದು ಒಂದು ವೇಳೆ ಬಂದರೂ ಏನು ಮಾಡಬೇಕು ಆದರೆ ಇದಕ್ಕೊಂದು ಆಲೋಚನೆಯನ್ನು ಹೇಳುತ್ತೇನೆ ಕೇಳಯ್ಯ ದೇವೇಂದ್ರ ಸದ್ಗುಣ ಸಾಂದ್ರ.

ಕಂದ

ಬಲ್ಲಿದನವನಿಂ ಧರೆಯೋಳ್  ಸಲ್ಲದು ಈ ಯುಕ್ತಿ
ಶಕ್ತಿಯು ಎನ್ನೋಳ್  ಎಲ್ಲರು ನಡೆಯಿರಿ ವಿಧಿ ಎಡೆಗೆ
ಅಲ್ಲಿ ನಿಮ್ಮಳಲ ಪೇಳಿರೆನ್ನುತ  ಬೃಹಸ್ಪತಿಯು ನುಡಿದಾ ॥

ಬೃಹಸ್ಪತಿ: ಅಯ್ಯ ಶಿಷ್ಯನೇ ನೀನು ಹೇಳಿದ ಆ ತಾರಕಾಸುರ ಶೂರಪದ್ಮ ಸಿಂಹಾಸ್ಯರೆಂಬ ದೈತ್ಯರು  ಪರಮೇಶ್ವರ ದೇವರಿಂದ ವರಪಡೆದು ತ್ರಿಲೋಕ ಕಂಟಕರಾಗಿರುವರು ಆದುದರಿಂದ ಯಾರ ಯುಕ್ತಿಗಳು  ಶಕ್ತಿಗಳೂ ನಡೆಯುವುದಿಲ್ಲ. ನಾವು ಏನು ಯೋಚಿಸಿದರು ನಡೆಯುವುದಿಲ್ಲ. ನೀವೆಲ್ಲರೂ ನನ್ನ ಸಂಗಡ ಬನ್ನಿರಿ  ಸತ್ಯಲೋಕಕ್ಕೆ ಹೋಗೋಣ  ಶಾರದಾಪತಿಯಾದ ಬ್ರಹ್ಮದೇವರನ್ನು ಕುರಿತು  ಧ್ಯಾನ ಮಾಡಿ ಅವರಿಗೆ ಈ ವರ್ತಮಾನವೆಲ್ಲವನ್ನು ಹೇಳಿದರೆ ಇದಕ್ಕೆ ತಕ್ಕ ಆಲೋಚನೆಯಂ ಮಾಡಿ  ನಿಮ್ಮೆಲ್ಲರ ಕಷ್ಟವಂ ಪರಿಹರಿಸುವ ಕಾರಣ  ಸರ್ವರು ಹೊರಡುವರಾಗಿರಿ.

 

(ಬ್ರಹ್ಮ ದೇವರ ಸಭೆ)

ತೆರಳುತ ಸತ್ಯಲೋಕಕೆ  ದಿವಿಜರು ಕೂಡಿ  ಪರಮ ಕಮಲಾ
ಸನದಿ ಮೆರೆವ  ಪರಮೇಷ್ಟಿಯಂ  ಸುರಪತಿಯು ಕಾಣು
ತ್ತ  ಚರಣಕಭಿನಮಿಸುತ್ತ  ತಳೆಯುತ್ತ ಭಕ್ತಿಯನೂ ॥
ಶರಣುವಾಣಿಯ ರಮಣ  ಶರಣು ವಿಪದುದ್ದರಣ  ಶರ
ಣು ನಿರ್ಭಯಕರುಣ  ಶರಣು ಸುಗುಣಾಭರಣ  ಶರಣು
ನಿರ್ವಿತಕರುಣ  ಶರಣು ನತಜನಪಾಲಕ  ಶರಣು ಶರಣೆಂದು ನುತಿಸೇ ॥

ದೇವೇಂದ್ರ: ನಮೋನ್ನಮೋ ದೇವಾ ಕರುಣ ಪ್ರಭಾವ.

(ಬ್ರಹ್ಮದೇವ ನಿಮಗೆ ಮಂಗಳವಾಗಲಿ)

ಪದ

ಹೇಳಿ ನಿಮ್ಮಳಲನು  ಪೇಳಿರೆಂದೆನುತಲಿ  ಕೇಳಲ
ದ ಕೊಂದವನ  ಪೇಳ್ವೆ ನಾನೆನುತಾ ॥ನಾನೆನುತಾ ॥

ಬ್ರಹ್ಮದೇವ: ಆಹ ಗುರುಗಳೇ ಇಂದ್ರನೇ ಮೊದಲಾದ ದೇವತೆಗಳೇ ನೀವುಗಳು ಮಾಡಿದ ಸ್ತುತಿಗೆ ಬಹಳ ಸಂತೋಷವಾಯಿತು  ಆದರೆ ನೀವುಗಳು ಬಂದಿರುವ ವಿಚಾರವನ್ನು  ಮರೆಮಾಜದೆ ನನ್ನೊಡನೆ ಹೇಳಿದರೆ ನಾನು ತಿಳಿದಷ್ಟು ಯೋಚನೆಯನ್ನು ಹೇಳುವೆನು.

ಪದ

ದಂತಾವ ಕಳೆದ ಮದ  ದಂತಿಯಂತಿಹನೂ  ಚಿಂತೆ
ಯಾಂತಿಹನಮರ  ಕಾಂತ ನಿಮಗೇನೂ ॥ನಿಮಗೇನೂ ॥

ಬ್ರಹ್ಮದೇವ: ಸ್ವಾಮಿ ಗುರುಗಳೇ  ಈ ದೇವೇಂದ್ರನು  ಸದಾ ರಂಭಾದಿಗಳೊಡನೆ ಭೋಗದಿಂದಾ ಸುಖಾನಂದವಾಗಿ  ಇದ್ದಂಥ ಈತನ ಮುಖವನ್ನು ನೋಡಲು  ಕೆಸರಿನೊಳಗಿದ್ದಂಥ  ತಾವರೆಕಮಲವನ್ನು  ಹೊರಕ್ಕೆ ತೆಗೆದಿಟ್ಟರೆ  ಯಾವ ರೀತಿ ಕಂದುವುದೋ  ಅದರಂತೆ ಖಿನ್ನನಾಗಿ ತಲೆಯನ್ನು ಬಗ್ಗಿಸಿಕೊಂಡು  ನಿಂತಿರುವನಲ್ಲಾ ಕಾರಣವೇನು ಇವನಿಗೆ ಬಂದಿರುವ ತೊಂದರೆ ಏನು ಯಾರಿಂದ ಏನು ಕಷ್ಟ ಬಂದಿರುವುದು ಹೇಳುವರಾಗಿರಿ ಗುರುಗಳೇ. ಅಹೋ ಗುರುಗಳೇ ಈ ಇಂದ್ರನ ಮಾತು ಹಾಗಿರಲಿ  ಅಷ್ಟದಿಕ್ಪಾಲಕರು ಸಹ ಖಿನ್ನರಾಗಿ ಮುಖವನ್ನು ಬಗ್ಗಿಸಿಕೊಂಡು ನಿಂತಿರುತ್ತಾರಲ್ಲ ಕಾರಣವೇನು  ತಿಳಿಸುವರಾಗಿರಿ.

ಪದ ರಾಗ ಮಧ್ಯಮಾವತಿ ಅಟತಾಳ

ಇಂತೆಂದು ಶಾರದಾ  ಕಾಂತನು ಕೇಳೇ  ಚಿಂತೆಯ
ತೊರೆದು ಸುರ  ಕಾಂತನು ನುಡಿದ ॥ಗುರುವೆ ನಮ್ಮವರ  ಸರ
ಸಿಜಾಸನಗೆ  ಮರೆಯದೆ ಪೇಳಿರಿ  ನೀವರಿತು ಪರಮೇಶಗೆ ॥

ದೇವೇಂದ್ರ: ಸ್ವಾಮಿ ಗುರುವರ‌್ಯರೇ ನಮಗೆ ಪ್ರಾಪ್ತವಾಗಿರುವ ಕಷ್ಟದಲ್ಲಿ ನರಳಿ ನರಳಿ ನನಗೆ ಮರವೆಯಾಗಿದೆ ನಾನು ಸಮಸ್ತವನ್ನು ಅರಿಕೆ ಮಾಡಿಕೊಳ್ಳಲು ನನಗೆ ಏನೂ ತೋಚುವುದಿಲ್ಲ  ಸಕಲವಂ ತಿಳಿದಂಥ ಸುಜ್ಞಾನಿಗಳಾದ ನೀವು ಒಂದನ್ನೂ ಮರೆಮಾಚದೆ ಈ ಬ್ರಹ್ಮ ದೇವರಿಗೆ ತಿಳಿಸಿ ನಮ್ಮ ಕಷ್ಟಗಳನ್ನು ಪರಿಹರಿಸೈ ದೇವಾ ಮಹಾನುಭಾವ.

ಪದ

ವಾರಿಜಾಸನೆ ಕೇಳು  ಶೂರಪದ್ಮಕನೂ  ತಾರಕ ಸಿಂಹಾಸ್ಯ
ಘೋರ ಧನುಜರಿಗೆ ॥ಸೇರಿದುದಷ್ಟೈಶ್ಚರ‌್ಯ  ಸೂರೆ ಹೋದುದು
ನಮ್ಮ  ನಾರಿಯರವರ  ಕೈ ಸೇರಿದರಯ್ಯ ॥

ಬೃಹಸ್ಪತಿ: ಸ್ವಾಮಿ ಕಮಲೋದ್ಭವನೇ ತಾರಕ ಶೂರಪದ್ಮ ಸಿಂಹಾಸ್ಯರೆಂಬ ರಕ್ಕಸರು ಪ್ರಜ್ವಲಿಸಿ ಲೋಕಕಂಟಕರಾಗಿ  ದೇವತೆಗಳನ್ನು ಹಿಂಸೆಪಡಿಸಿ  ಇಂದ್ರನಷ್ಟೈಶ್ವರ‌್ಯವನ್ನು ಸೂರೆಮಾಡಿ  ದೇವತೆಗಳನ್ನು ಹೊಡೆದು ಬಡಿದು ದೇವತಾಸ್ತ್ರೀಯರಂ ಎಳೆದುಕೊಂಡು ಹೋಗಿ ತಮ್ಮ ಮನೆ ದಾಸಿಚಾಕರಿಗೆ  ಸೇರಿಸಿಕೊಂಡು ಅಹಂಕಾರ ಮದದಿಂದ ಮೆರೆಯುತ್ತಿದ್ದಾರೆ ಅಂತು ದೇವತೆಗಳ ಕಷ್ಟವಂ  ಹೇಳುವದಕ್ಕಾಗುವುದಿಲ್ಲ.

ಪದ

ತಾಳಲಾರೆವು ನಾವು  ಖೂಳರುಪಟಳವನ್ನು  ಕೋಳು
ಹೋದುದು ನಮ್ಮ  ಬಾಳುವೆ ಎನಲು ದೇವಾ ॥

ದೇವೇಂದ್ರ: ಸ್ವಾಮಿ ಸೃಷ್ಟಿಕರ್ತನೇ. ಆ ತಾರಕ  ಶೂರಪದ್ಮ  ಸಿಂಹಾಸ್ಯರೆಂಬ ನೀಚರ ಬಾಧೆಯನ್ನು ಹೇಳುವದಕ್ಕಾಗುವುದಿಲ್ಲ ನಾವುಗಳು ಪಡುವ ಕಷ್ಟವನ್ನು ನೀವೇ ಪರಿಹರಿಸಬೇಕು ಅಯ್ಯೋ ದೇವ ಆ ನೀಚರು ನಾಶವಾಗುವುದಕ್ಕೆ ಏನಾದರೂ ಒಂದು ಉಪಾಯವನ್ನು ಹೇಳಬೇಕೈ ಸ್ವಾಮಿ ಕಮಲೋದ್ಭವನೇ.

ಬ್ರಹ್ಮದೇವರ ವಾರ್ಧಿಕ್ಯ

ಕೇಳಿರೈ ಸುರರೆಲ್ಲರು  ಹಿಂದೆ ಗಜವೈರಿಯಂ ಕೇಳಿ
ವರವಂ ಪಡೆದು ಅತ್ಯುಗ್ರ ತಪವಂಗಯ್ಯುತಾ  ಬಳಿಕ
ಸಾಸಿರದೆಂಟಜಾಂಡಮಂ  ಅದರಿಂದಲಾ ದೈತ್ಯರು
ಕಾಳಗದಿ ಜಯಿಸಿ ಅಧಮರು  ಕಶ್ಯಪನ ಲೋಲಾಕ್ಷಿ ॥
ಮಾಯೆಯಿಂ ಜನಿಸಿಹರು  ನೀವೆಲ್ಲ ತೆರಳಿಕೈ  ಕಮಲಾ
ಕ್ಷನಲ್ಲಿಗೆಂದೆನುತ  ಅಜಂ ವೈಕುಂಠಕೈತಂದನು ॥

ಬ್ರಹ್ಮದೇವ: ಸ್ವಾಮಿ ಗುರುಗಳೇ  ಎಲೈ ಇಂದ್ರನೇ ಮೊದಲಾದ  ದೇವತೆಯರೆಲ್ಲಾ ಕೇಳಿರಿ  ನಿಮ್ಮಗಳ ಸಂಕಟವೆಲ್ಲಾ  ಏಕಾಏಕಿ ಪರಿಹಾರವಾಗುವಂತಿಲ್ಲ  ಯಾಕೆಂದರೆ ಕಶ್ಯಪನ ಸತಿಯಾದ  ಮಾಯಾದೇವಿ ಉದರದೋಳ್ ಜನಿಸಿ ಆ ಜಗದೀಶನಿಂದ ವರವಂ ಪಡೆದು ಲೋಕಕಂಟಕರಾದ್ದರಿಂದ ನಮ್ಮ ಯೋಚನೆಯು ನಡೆಯುವುದಿಲ್ಲ  ಆದಕಾರಣ ಸರ‌್ವರೂ ಎನ್ನ ಸಂಗಡ ಬಂದರೆ ವೈಕುಂಠಕ್ಕೆ ಹೋಗಿ ನಮ್ಮ ತಂದೆಯಾದ ಮಹಾವಿಷ್ಣುವಿಗೆ ಹೇಳಿಕೊಳ್ಳೋಣ  ಜಾಗ್ರತೆಯಾಗಿ ನಡೆಯಿರಿ.

ಪದ

ಮಾಪತಿ ಕಾಯೋ  ನೀ ಯಮ್ಮ ಹರಿಯೇ  ಭೂಪನಾಗಿರ್ದು ಈ
ಪರಿತಾಪವ ಪರಿಹರಿಸಿ  ಕಾಪಾಡು ಹರಿಯೇ ॥ಮರೆಹೊಗು
ವರನ್ನು  ಮರಿಯಾದೆ ನಿರುತವು  ಪರಿಪಾಲಿಪನೆಂಬ  ಬಿರು
ದಾಂಕಿತ ಹರಿಯೇ ॥ಗತಿ ಇಲ್ಲದವನಂತೆ  ಸತಿ ಇವನೊಳು
ಶಿಲ್ಕಿ  ಅತಿಯಾಗುವಂತಾಯ್ತೆನುತ ಶ್ರೀಧರನೇ ॥

ಬೃಹಸ್ಪತಿ: ಶ್ರೀ ಲಕ್ಷ್ಮೀಪತಿಯಾದಂಥ ಸ್ವಾಮಿ ನಿಮ್ಮ ಕ್ರೂರವಾದ ಉಗುರು ಕೊನೆ  ಇಂದ  ದುರುಳನಾದ ಹಿರಣ್ಯಾಕ್ಷನನ್ನು  ಸೀಳಿದಂತಾ ದೇವ ದೇವನೆ ಈ ಏಳು ಹದಿನಾಲ್ಕು ಲೋಕಂಗಳಂ ಕುಕ್ಷಿಯೋಳ್ ಧರಿಸಿ ರಕ್ಷಿಸುತ್ತಿರುವಂತೆ ಕ್ರೂರ ರಾಕ್ಷಸರಾದ ತಾರಕಾದಿ ದೈತ್ಯರಂ ವಧಿಸಿ ಚೋರರಂತೆ ಮೇರುಗಿರಿಯೊಳಗಡಗಿರ್ಪ ದೇವತರಂ ಸಂರಕ್ಷಿಸಿ ಕಾಪಾಡಬೇಕೆಂದು ನಿಮ್ಮಡಿಗಳಂ ಬಿಡದೆ ಧ್ಯಾನಿಸುವೆನೈ ಶ್ರೀ ಹರಿಯೇ ದಾನವಾರಿಯೇ.

ದೇವೇಂದ್ರ: ಹೇ ಲೋಕ ರಕ್ಷಕ  ಆಪದ್ಬಾಂಧವ  ಅನಾಥ ರಕ್ಷಕ  ನೀಚರಾದ ತಾರಕಾದಿ ದೈತ್ಯರು ಪಡಿಸುವಂಥ ಬಾಧೆಯನ್ನು ತಾಳಲಾರದೆ  ಸಕಲದೇವತೆಗಳಾದಿಯಾಗಿ  ನಿಮ್ಮನ್ನು ಸೇರಿ ಬದುಕಬೇಕೆಂಬ ಅಪೇಕ್ಷೆಯಿಂದ ತಮ್ಮ ಪಾದವನ್ನು  ಭಜಿಸುತ್ತಿರುವೆವು. ತಾವು ದಯವಿಟ್ಟು ಕೃಪಾದೃಷ್ಟಿ ಇಂದ  ನಮ್ಮನ್ನು ರಕ್ಷಿಸಬಾರದೇ ದೇವ ಕರುಣ ಪ್ರಭಾವ.

ಬ್ರಹ್ಮದೇವ: ಶ್ರೀ ಲಕ್ಷ್ಮೀಲೋಲನಾದ ಜನಕನೇ  ಭಕ್ತವತ್ಸಲನೆಂಬ ಬಿರುದನ್ನು ಧರಿಸಿರ್ಪ ದೇವನೇ  ದುಷ್ಟರಾದ ತಾರಕನೇ ಮುಂತಾದ ರಾಕ್ಷಸರ ಉಪಟಳವಂ ತಾಳಲಾರದೆ  ನಿಮ್ಮಡಿದಾವರೆಗಳನ್ನು  ಧ್ಯಾನಿಸುತ್ತಿರುತ್ತಾರೆ  ಹೇ ಕರುಣಾ ಸಮುದ್ರನೇ  ದಯವಿಟ್ಟು ಉದ್ಧಾರ ಮಾಡಬೇಕೈ ತಂದೆ  ಇದಕ್ಕಾಗಿ ನಾ ಬಂದೆ.

ಪದ ತ್ರಿವುಡೆ

ಅತ್ತ ವೈಕುಂಠದಲಿ ಶ್ರೀಹರಿ  ಮತ್ತೆ ಲಕ್ಷ್ಮಿಯ
ಮೇಳದೊಳಗಿರೆ  ದೂರ್ತಶಬ್ದವ
ಕೇಳಿ ತಿಳಿದನು  ಚಿತ್ತದೊಳಗೆ ॥

ವಿಷ್ಣು: ಆಹ ಬ್ರಹ್ಮೇಂದ್ರಾದಿ ಸಕಲ ದೇವತೆಗಳೂ ಕೇಳಿರಿ  ನೀವುಗಳೆಲ್ಲ ಏಕಕಾಲದಲ್ಲಿ  ಸ್ತುತಿ ಮಾಡಿದ ಭಕ್ತಿಗೆ ಮೆಚ್ಚಿದೆನು ಎಲೈ ಪುರೋಹಿತನೇ ಆ ತಾರಕ ಶೂರಪದ್ಮ ಸಿಂಹಾರಿ ಎಂಬ ದನುಜರು  ಪರಮೇಶ್ವರನ ವರದ ಬಲದಿಂದ ಬಲಿಷ್ಟರಾಗಿ ಮೆರೆಯುತ್ತಾರೆ ಆ ದೇವತೆಗಳನ್ನು ಬಾಧಿಸಲಿಕ್ಕಾಗಿ  ದೇವತರ ದುಃಖವಂ ನೋಡಲಾರದೆ  ಆ ನೀಚರಲ್ಲಿ ನಾನು ದಿವ್ಯ ಸಹಸ್ರ ವರ್ಷ ಯುದ್ಧವಂ ಮಾಡಿದಾಗ್ಯೂ ಜಯವಂ ಕಾಣದೆ ಹೋದ್ದರಿಂದ ಈ ಮಹಂಮೇರುವಿನ ಗುಹೆಯಲ್ಲಿ ಸೇರಿಕೊಂಡಿರುವೆನೈ ಬ್ರಹ್ಮ ಅಮರಾದಿಗಳಿರಾ.

ಬ್ರಹ್ಮ: ಆಹ ಕರುಣಾ ಸಮುದ್ರನಾದ ಶ್ರೀ ಹರಿಯೇ  ಹಿಂದೆ ಸಹಸ್ರಾರು ವರ್ಷ ಯುದ್ಧ ಮಾಡಿ  ಗೆಲುವಿಲ್ಲದ್ದರಿಂದ ಅವರ ಭಯಕ್ಕಂಜಿ ಈ ಮಹಮ್ಮೇರುಪರ್ವತದ ಗುಹೆಯಲ್ಲಿ ನಿರ್ಭಯದಿಂದಿರುತ್ತೇ ನೆಂದು  ಹೇಳಿದಿರಲ್ಲಾ ಈ ಸ್ಥಳದಲ್ಲಿ ನಿಮಗೆ ನಿರ್ಭಯವಾಗಲು ಕಾರಣವೇನು ಅಪ್ಪಣೆಯಾಗಬೇಕು ಶ್ರೀಹರಿ.

ವಿಷ್ಣು: ಆಹ ಎಲೈ ಚತುರ‌್ಮುಖನೇ ಕೇಳು. ಹಿಂದೆ ಈ ದೇವತೆಗಳೆಲ್ಲರೂ ಸೇರಿ ಈ ದೈತ್ಯರ ಉಪಟಳವನ್ನು ತಾಳಲಾರದೆ ಜಗದೀಶನಲ್ಲಿ ಮೊರೆಯಿಟ್ಟರು  ಆ ಕರುಣಾ ಸಮುದ್ರನಾದ ಮಹದೇವನು ಭಕ್ತರ ಸಂರಕ್ಷಣೆಗಾಗಿ ಈ ಮೇರು ಪರ್ವತವು  ಆ ನೀಚರ ಕಣ್ಣಿಗೆ ಕಾಣದಂತೆ ಅದೃಶ್ಯವಾಗಲೆಂದು  ವರವನ್ನು ಕೊಟ್ಟಿದ್ದರಿಂದ  ದೇವತೆಗಳು ನಿಲ್ಲುವುದಕ್ಕೆ ಸ್ಥಳವಾಯಿತು ಅದಕ್ಕಾಗಿ ನಾನು ಇಲ್ಲಿ ಸೇರಿಕೊಂಡಿರುವೆನೈಯ ಬ್ರಹ್ಮ  ಇದು ಪೂರ್ವದ ಮರ್ಮ.

ಬ್ರಹ್ಮ: ಆಹ ಮನುಮುನಿಗಳಿಗೆಲ್ಲಾ ದೇವಾಧಿದೇವನಾದ ಶ್ರೀ ಹರಿಯೇ ಆ ಚಂಡಪ್ರಚಂಡರಾದ ತಾರಕ ಮುಂತಾದ ಧೈತ್ಯರು ನಾಶವಾಗುವ ರೀತಿಯನ್ನು ಹೇಳಬೇಕೈ ಶ್ರೀ ಹರಿ ಮುಂದೇನು ದಾರಿ.

ಪದ

ಕೇಳೈಯ್ಯ ಪರಮೇಷ್ಟಿ  ಖೂಳ ದೈತ್ಯನ ಗೋಷ್ಟಿ
ಹೇಳಬೇಡವು ನಮ್ಮ ಮುಂದೆ ॥ಶೂಲಪಾಣಿಯ ಬಳಿಗೆ
ಪೇಳವರ ಸುದ್ದಿಯನು  ಕೈಲಾಸಪತಿಯೆಡೆಗೆ ದೂರ ॥
ನಿಮ್ಮ ದೂರ ॥

ವಿಷ್ಣು: ಎಲೈ ಇಂದ್ರಾದಿ ದೇವತೆಗಳೆಲ್ಲರೂ ಕೇಳಿರಿ  ಆ ದೈತ್ಯನನ್ನು ನಾಶ ಮಾಡುವ ರೀತಿಯು ನಮ್ಮಲ್ಲಿ ಸಾಗುವುದಿಲ್ಲ  ಮೃತ್ಯು ಎಲ್ಲಿ ಹುಟ್ಟಿತೋ ಅಲ್ಲಿಯೇ ನಾಶವಾಗಬೇಕಾದ್ದರಿಂದ  ಸರ‌್ವರೂ ನನ್ನ ಸಂಗಡ ಬಂದರೆ ಕೈಲಾಸಕ್ಕೆ ಹೋಗಿ  ಪರಮೇಶ್ವರನಲ್ಲಿ ಮೊರೆಯಿಟ್ಟು  ಈ ವರ್ತಮಾನವೆಲ್ಲವನ್ನು ತಿಳಿಸಿ  ನಿಮ್ಮಗಳ ಕಷ್ಟವನ್ನು ಪರಿಹರಿಸುವಂತೆ  ಮಾಡುತ್ತೇನೆ ತಡಮಾಡದೆ ಕೈಲಾಸಕ್ಕೆ ಹೊರಡುವರಾಗಿರಿ॥

ಈಶ್ವರನ ಸ್ತೋತ್ರ

ಕೈಲಾಸವಾಸ ಪಾಲಿಸೆನ್ನ  ಶೈಲಜಾಧವ  ಹಠವನಳಿದು
ದಿಟದೊಳೆನ್ನಾ  ಕಾಯೋ ಶಂಕರಾ ॥ಕೈಲಾಸವಾಸ ॥
ಮೈಲಾರಿನಾಥ  ಅಡವಿಯೊಳಗೆ  ಬಳಲ್ದೆನೈ ಶಿವಾ  ನಿಟಿ
ಲನಯನ  ಚಟಕಪುರಿಯಾ  ಈಶ ಮಲ್ಲೇಶನೇ ॥ಕೈಲಾಸ ॥

ವಿಷ್ಣು: ಕೈಲಾಸವಾಸನಾದ ಗಿರೀಶನೇ ನಮುಸ್ಕರಿಸುವೆನು.

ಈಶ್ವರ: ಅಯ್ಯ ಲಕ್ಷ್ಮೀಪತಿಯೇ  ನಿನಗೆ ಮಂಗಳವಾಗಲಿ.

ಬ್ರಹ್ಮದೇವ: ಸ್ವಾಮಿ ಚಂದ್ರಶೇಖರನೇ ವಿಜ್ಞಾಪಿಸುವೆನು.

ಈಶ್ವರ: ಅಯ್ಯ ಚತುರ‌್ಮುಖನೇ ನಿನಗೆ ಜಯವಾಗಲಿ.

ಇಂದ್ರ: ಮಹದೇವನೆ ಶಿರಸಾಷ್ಟಾಂಗ ನಮಸ್ಕಾರಗಳು.

ಈಶ್ವರ: ಅಯ್ಯ ಇಂದ್ರನೇ ನಿನಗೆ ಆಶೀರ್ವಾದ ಗೈದಿರುವೆನು.

ಪದ ರಾಗ ಪುನ್ನಾಗ ಅಟತಾಳ

ಯಾಕೆನ್ನ ಭಜಿಸಿದೆ ಹರಿಯೇ  ಬಲು ಜೋಕೆ ಇಂದಲಿ
ನೀ ವಿಧಿಯೇ  ನಾಕನಿಲಯರಿಗಾದೇನು
ಎನ್ನಿಂದಾವ  ಆ ಕಾರ‌್ಯವನು ಪೇಳಿ  ಮನದಿ ತೋಷವ ತಾಳಿ ॥

ಈಶ್ವರ: ಅಯ್ಯ ಹರಿಬ್ರಹ್ಮಾದಿ ದೇವತೆಗಳೆಲ್ಲರೂ ಕೇಳಿರಿ  ನೀವುಗಳು ಮಾಡಿದ ಸ್ತುತಿಗೂ  ಭಕ್ತಿಗೂ ನಾನು ಮೆಚ್ಚಿದೆನು  ನೀವುಗಳೆಲ್ಲರೂ ಏಕ ಕಾಲದಲ್ಲಿ ಬರಲು ಕಾರಣವೇನು  ನನ್ನಿಂದ ಏನು ಕಾರ‌್ಯ ಆಗಬೇಕು  ನಿಮ್ಮ ಮನೋಭಿಲಾಷೆಯನ್ನು  ನಡೆಸಿಕೊಡುತ್ತೇನೆ ನಿಮ್ಮ ವಿಷಯ ವ್ಯಾಕುಲಗಳನ್ನೂ  ಜಾಗ್ರತೆ ತಿಳಿಸುವರಾಗಿರಿ.

ಪದ

ಪಾಲಿಸೆಮ್ಮನು ಚಿನ್ಮಯ ರೂಪ  ಶೈಲರೂಪಕ ಚಾಪ
ನಮಿತ ಸಂತಾಪ  ಶೂರಸಿಹ್ಮಾಸ್ಯನು  ತಾರಕ
ನೆಂಬುವ  ಘೋರ ದೈತ್ಯರು ಕೂಡಿ  ದಿವಿಜರನು ಗಾ
ರುಗೊಳಿಸುತ ॥ವರನಾರಿಯರನು  ಕೈ ಸೇರಿಸಿಕೊಳ್ಳುತ
ಸೂರೆಗೈದರು ಸಿರಿಯ ॥ತಾಳಲಾರರು ಸುರರು  ತಾಳಿ
ಪ್ರೇಮವ ಅವರು  ಭಾಳಲೋಚನ ನೀನು ರಕ್ಷಿಸೆಮ್ಮ ॥
ಕಾಳಗದೊಳು ನಾನು  ಖೂಳರಿಗೆ ಸೋತು  ಜಾಲವೆಲ್ಲ
ವು ಗವಿಯ  ಸೇರಿಕೊಂಡೆನುಸಾರಿ ॥ಪಾಲಿಸೆಮ್ಮನು
ಚಿನ್ಮಯರೂಪ  ಶೈಲರೂಪಕ ಚಾಪ ॥

ವಿಷ್ಣು: ಸ್ವಾಮಿ ಮೃತ್ಯುಂಜಯನೇ ಆ ತಾರಕ ಶೂರಪದ್ಮ ಸಿಂಹಾಸ್ಯರೆಂಬ ದೈತ್ಯರು ಹೆಚ್ಚಿ  ಈ ಬಡದೇವತರಂ ಹೊಡೆದುಬಡಿದು  ಇವರ ಅಷ್ಟೈಶ್ವರ‌್ಯವಂ ಸೂರೆ ಮಾಡಿದರಲ್ಲದೆ  ದೇವತಾ ಸ್ತ್ರೀಯರನ್ನು ತನ್ನ ಮನೆಯ ತೊತ್ತುಚಾಕರಿಗೆ  ಸೇರಿಸಿಕೊಂಡು ಅನೇಕವಾದ ರಾಕ್ಷಸರನ್ನೆಲ್ಲಾ  ಸ್ವರ್ಗಕ್ಕೆ ಕಾವಲಿಟ್ಟು ಈ ದೇವತರನ್ನು ಒಳಗೆ ಬಿಡದಂತೆ ಇರುತ್ತಾರೆ. ಈ ದೇವಕರ ದುಃಖವನ್ನು ಕೇಳಲಾರದೆ ನಾನು ಹೋಗಿ ಅವರಲ್ಲಿ ದಿವ್ಯ ಸಹಸ್ರ ವರ್ಷ ಕಾಳಗ ಮಾಡಿದಾಗ್ಯು ಗೆಲುವಂ ಕಾಣದೆ ತಮ್ಮಿಂದ ಶಾಪ ಹೊಂದಲ್ಪಟ್ಟ ಈ ಮಹಮ್ಮೇರು ಪರ್ವತ ಗುಹೆಯಲ್ಲಿ  ವಾಸಮಾಡುತ್ತಲಿದ್ದೇವೆ. ಈ ಭಕ್ತರಾದ ದೇವಕರನ್ನು  ಕಾಪಾಡಬೇಕೈ ಈಶನೇ  ದುರಿತವಿನಾಶನೇ.

ಪದ

ಬೆದರಬೇಡವೆಲೆ  ಮದನ ಜನಕನೇ  ಬೆದರದಿರಂ
ಬುಜ  ಸಂಭವನೆ ॥ಕದನದೊಳಗೆ  ಖಳಜಾಲವ
ಕೊಲ್ಲುವ  ಹದನವ ಪೇಳುವೆ ನಿಮ್ಮೊಡನೆ  ಶೂರ
ಮುಖಾಸುರ  ಕೊಲ್ಲುವ ರವದೊಳು  ಕುಮಾರನ
ಪುಟ್ಟಿಸಿ  ಗಿರಿಜೆಯೊಳು  ಬೂರಿವಿಳಂಬವ  ಗೈ
ಯದೆ ಖಳರಂ  ಸೇರಿಪೆ ನಾಶವ  ನಾನವರಂ ॥

ಈಶ್ವರ: ಎಲೈ ಬ್ರಹ್ಮ ಇಂದ್ರಾದಿ ದೇವತೆಗಳೆಲ್ಲಾ ಕೇಳಿರಿ ನಿಮ್ಮ ಕಷ್ಟ ವಿಚಾರವೆಲ್ಲಾ ಗೊತ್ತಾಯಿತು ಹೆದರಬೇಡಿರಿ  ಆ ದೈತ್ಯರು ಮಹಾಬಲಿಷ್ಟರಾಗಿ ಈ ಸೃಷ್ಟಿಯಲ್ಲಿ ಮೆರೆಯುತ್ತಿದ್ದಾರೆ ಆ ಕ್ರೂರ ಖಳರು ಯಾರ ಕೈಯಲ್ಲೂ  ಮರಣವಾಗದೆ ಇರುವರು  ಆ ಗಿರಿರಾಜನ ಕುವರಿ ಗಿರಿಜೆಯಂ ಪರಿಣಯ ಮಾಡಿಕೊಂಡು ಕಂದನಾದ ಷಣ್ಮುಖನಂ ಪಡೆದು ಆ ಮಂದಮತಿಗಳಾದ ದೈತ್ಯರಂ ಸಂಹಾರ ಮಾಡಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತೇನೆ. ಅದುವರೆವಿಗೂ ಧೈರ‌್ಯವಾಗಿರುತ್ತಿರಿ ಅಯ್ಯ ವಿಷ್ಣುವೇ ಬ್ರಹ್ಮೇಂದ್ರಾದಿ ದೇವತೆಗಳಿಗೆಲ್ಲಾ ಅಭಯ ಪ್ರದಾನ ಮಾಡಿರುತ್ತೇನೆ.

ಪದ

ಏನು ಮಾಡುವದಿನ್ನ  ದಾನವಾಂತಕ ನಾವು  ಏನಾ
ಗೈದರು ನಮ್ಮ  ದೀನತೆ ಬಿಡದೂ ॥ಬಲವಾಗಿರುವುದು
ಕರ್ಮ  ಇಳೆಯೊಳೆಮಗೆ  ಖಳರ ಸಿರಿ ಎಂತಕಟ
ಚಲಿಸಿ ಪೋಗುವುದೂ॥

ಇಂದ್ರ: ಸ್ವಾಮಿ ಪರಮಾತ್ಮನೇ  ನಮಗೆ ಬಂದಿರುವ ಕಷ್ಟವನ್ನು  ಪರಿಹಾರ ಮಾಡಿಕೊಳ್ಳಬೇಕೆಂದು ಎಷ್ಟೋ ಯೋಜನೆಯಂ ಮಾಡಿದಾಗ್ಯು ನಾವು ಮಾಡಿದ ಪೂರ್ವ ಕರ್ಮದಿಂದ  ನಮ್ಮ ಕಷ್ಟವು ಪರಿಹಾರವಾಗಲಿಲ್ಲ ಹೇ ದೇವ ಆ ದೈತ್ಯರು ನಾಶವಾಗಿ  ಅವರ ಐಶ್ವರ‌್ಯವು ಎಂದಿಗೆ ಹಾಳಾಗುವುದೈ ಹರಿಯೇ  ನೀ ಯನ್ನ ದೊರೆಯೇ.

ಪದ

ಚಿಂತವಿನಾಶನ  ಕಾಂತಸಂವರ್ದನ  ಎಂತು ಗೈದರು ನಮ್ಮ
ಚಿಂತೆಯು ಬಿಡದೂ  ಎಂದು ಪುಟ್ಟುವನಂ ಗುಹನು
ಎಂದು ಕೊಲುವನು ಖಳರ  ಎಂದಿಗಪ್ಪದಂ ನಮಗಾ ॥

ಮಂದಭಾಗ್ಯಗಳೂ॥

ಇಂದ್ರ: ಆಹಾ ದೇವ ನಿಮ್ಮ ಸ್ಮರಣೆ ಮಾಡಿದ ಮಾತ್ರದಿಂದಲೇ ಎಂಥ ಕಷ್ಟಗಳು ಬಂದಾಗ್ಯೂ ಕೂಡ  ಪರಿಹಾರವಾಗುವವು ಇಂಥಾದ್ದರಲ್ಲಿ ಸತ್ಯಲೋಕ ವೈಕುಂಠ ಕೈಲಾಸ ಈ ಮೂರು ಲೋಕಂಗಳ ತಿರುಗಿ  ಮೂರ್ತಿಗಳ ದರ್ಶನವಂ ಮಾಡಿದಾಗ್ಯು ಕೂಡ  ನನ್ನ ದುಷ್ಕರ್ಮ ಫಲದಿಂದ ಎನ್ನ ಕಷ್ಟವು ಪರಿಹಾರವಾಗಲಿಲ್ಲ  ಆದರೆ ಎನ್ನ ದುರಾದೃಷ್ಟವು  ಎಷ್ಟೆಂದು ಹೇಳಲೈ ಲಕ್ಷ್ಮೀಪತಿಯೇ ನೀ ಯನ್ನ ತಂದೆಯೇ.

ಪದ

ಪೇಳುವೆನು ವಿಧಿಯೇ  ಸುರರು ಎನ್ನ ನುಡಿ  ಕೇಳಿರೈ
ನೀವೆಲ್ಲರೂ  ಕೋಳು ಹೋಗಿಹ  ಸಿರಿಯನು
ನೀವಾಳು ತಪ್ಪುವ ಹದನವನು ॥ಹಿಂದೆ ದಕ್ಷನ
ಯಜ್ಞದಿ  ಮನನೊಂದ ಸತಿಯಳು  ತೋಷದಿ ಇಂದುಶೇಖರನ ॥

ವಿಷ್ಣು: ಎಲೈ ಬ್ರಹ್ಮೇಂದ್ರಾದಿ ದೇವತೆಗಳೇ ಕೇಳಿರಿ ನಿಮ್ಮ ಐಶ್ವರ‌್ಯವು ನಿಮಗೆ ದೊರೆತು ನಿಮಗೆ ಸುಖವಾಗುವುದು  ಯಾವಾಗೆಂದರೆ ಹಿಂದೆ ದಕ್ಷ ಬ್ರಹ್ಮನ ಯಜ್ಞದಲ್ಲಿ  ಧ್ವಂಸವಾದ ದಾಕ್ಷಾಯಣಿಯು ಆ ಪರಮೇಶ್ವರನ ಆಜ್ಞಾನುಸಾರವಾಗಿ ಅವತಾರ ಮಾಡಿ ಆ ಭೂತೇಶನನ್ನೇ ಪತಿಯಾಗಿ  ಮಾಡಿಕೊಳ್ಳಬೇಕೆಂದು ಏಕಚಿತ್ತ ಮನೋಭಾವದಿಂದ ಕುಳಿತಿರುವಳೈ  ಬ್ರಹ್ಮೇಂದ್ರಾದಿಗಳೇ ಇದು ಅಲ್ಲದೆ ಮತ್ತೂ ಹೇಳುತ್ತೇನೆ.

ಪದ

ಇರುತಿಹಳು ಗಿರಿಜೆ ತಾನು ॥ಇತ್ತಲಾ ಪುರಮಥನ
ದೊಳು ಶಿವನು  ಪರಮ ಸನಕಾದಿಗಳಿಗೆ  ತತ್ವಗಳ
ಪರಿಯ  ಬೋಧಿಸುತವರಿಗೆ  ದಕ್ಷಿಣಾಮೂರ್ತಿ
ಎನಿಸಿ  ದಕ್ಷಮಖಶಿಕ್ಷನು ವಿರತಿವೆರಸಿ  ಶಿಕ್ಷೆರಕ್ಷೆಗಳ
ತೊರೆದು  ಭಜಕನು ಮೋಕ್ಷ  ದಾಯಕನು ಮೆರೆದು ॥

ವಿಷ್ಣು: ಎಲೈ ದೇವತೆಗಳೇ ಕೇಳಿರಿ  ಪರಮೇಶ್ವರನು ಹೆಂಡತಿ ಹೋದ ವೈರಾಗ್ಯದಿಂದ  ಈ ಲೋಕದ ವ್ಯಾಪಾರಗಳನ್ನು ತ್ಯಜಿಸಿ ಸನಕ ಸನಂದಾದಿ ಮುನಿಗಳಲ್ಲಿ  ತತ್ವೋಪದೇಶವಂ ಮಾಡುತ್ತ ವಿರಕ್ತಭಾವದಿಂದ ದಕ್ಷಿಣಾಮೂರ್ತಿಯಾಗಿ ವಟವೃಕ್ಷದ ಮೂಲಾಗ್ರದಲ್ಲಿ  ಯೋಗಿಯಾಗಿ ತಾನೇ ಕುಳಿತಿರುವಾಗ್ಯೆ ಲೋಕದ ವ್ಯಾಪಾರ ಹ್ಯಾಗೆ ತಾನೆ ನಡೆಯುವುದು ಆ ಸ್ವಾಮಿಯ ಯೋಗ ಬಲದಿಂದ  ಆ ಕೈಲಾಸಪರ‌್ವತವೆಲ್ಲಾ  ಸ್ತಂಭನ ಮಾಡಿದಂತೆ ಆಗಿರುವುದೈ ದೇವತೆಗಳಿರಾ ಇನ್ನೂ ಹೇಳುತ್ತೇನೆ.

ಭಾಮಿನಿ

ತೊರೆಯುತಭಿಲಾಷೆಯನು  ವಿಷಯಾದಿರತಿಮತಿಯ
ಕಳೆಯಲ್ಕೆ ಲೋಕವಿದ ರತಿಜನನಾವನಲಯಂಗಳ
ಎಂದು  ಘಟಿಸುವುದು  ಧರೆಯೊಳದರಿಂ
ಶೈಲಪುತ್ರಿಯ  ಪುರಹರನಿಗೈಕ್ಯವನು
ಸೇರಿಪೆ ತೆರನ ಯೋಚಿಸಿ  ಹರಿಯು
ಚಿತ್ತದಲಿ  ಚಿತ್ತಜನ ನೆನೆಯೇ

ವಿಷ್ಣು: ಎಲೈ ಅಮರೇಂದ್ರನೇ ಮೊದಲಾದ  ದೇವತೆಗಳಿರೇ ಕೇಳಿರಿ ಆ ದೈತ್ಯನ ನಾಶಕ್ಕೆ ಷಣ್ಮುಖನಂ ಉತ್ಪತ್ತಿ ಮಾಡಿ ನಿಮ್ಮಗಳ ಕಷ್ಟವಂ ಪರಿಹರಿಸುತ್ತೇನೆಂಬುದಾಗಿ ಪರಮೇಶ್ವರನು ಹಿಂದೆ ವಾಗ್ದಾನ ಮಾಡಿರುವರಷ್ಟೆ ಅಂತರ‌್ಮುಖನಾಗಿರತಕ್ಕ ಆ ಜಗದೀಶನು ಬಹಿರ‌್ಮುಖನಾಗಿ  ವಿಷಯಕ್ಕೊಳ ಗಾಗದ ಹೊರತು ಗಿರಿಜಾ ಕಲ್ಯಾಣ ಆಗುವ ಹಾಗೂ ಇಲ್ಲ ಮತ್ತು ಷಣ್ಮುಖನು ಹುಟ್ಟುವ ಹಾಗೂ ಇಲ್ಲ  ಆದ ಪ್ರಯುಕ್ತ ಆ ಜಗದೀಶನ ತಪೋಭಂಗವನ್ನು ಮಾಡುವುದಕ್ಕೆ  ನನ್ನ ಮಗನಾದ ಮನ್ಮಥನಿಂದಲ್ಲದೆ ಮತ್ಯಾರಿಂದಲೂ ಆಗುವುದಿಲ್ಲಾ ಆದಕಾರಣ ನನ್ನ ಮಗನಾದ ಮನ್ಮಥನಂ ಬರಮಾಡಿಕೊಂಡು  ನಿಮ್ಮಗಳ ಕಾರ‌್ಯವನ್ನು ನೆರವೇರಿಸುತ್ತೇನೆ ಹೆದರಬೇಡಿರೈ ಅಮರರೇ.

ಎಲೈ ಯನ್ನ ಮಗನಾದ ಕಾಮನೇ  ಈ ವೇಳೆಯಲ್ಲಿ ಬಂದು  ನಮಗೊದಗಿರುವ ಕಷ್ಟವಂ ಪರಿಹರಿಸಬೇಕು ಕುವರ  ಇಲ್ಲಿಗೆ ಬಂದನಂತರ  ಹೇಳುವೆನು ವಿವರ.

(ಕಾಮ ಬರುವುದು)

ತ್ರಿವುಡೆ
ಬಂದನಾಕ್ಷಣ ಕಾಮನೂ  ಚಂದದಿಂದಲಿ ಹರಿಯ
ಕೇಳುತಾ  ಇಂದು ಯನ್ನಾ ನೆನೆದ ಕಾರ‌್ಯವ
ಅಂದದಿಂ ದುಸುರಬೇಕೆಂದನಾಗ ॥

ಮನ್ಮಥ: ಹೇ ಕೋಮಲಾಂಗಿಯಾದ ರತಿಯೇ ಕೇಳು  ನಾನು ನೀನು ಸಹ ಸುಖಾನಂದದೊಳ್ ಇರುವಾಗ್ಯೆ ನಮ್ಮ ತಂದೆಯವರಾದ ಮಹಾವಿಷ್ಣು ನನ್ನನ್ನು ನೆನವರಿಕೆ ಮಾಡಿದಂತೆ ಕಾಣುವುದು ಏನು ಕಾರಣವೆಂಬ ಸಂಗತಿಯನ್ನು ಕೇಳಬೇಕಾದ್ದರಿಂದ ಹೋಗೋಣ ಬಾರೇ ರಮಣಿ ಕಲಕೀರ ವಾಣಿ.

ರತಿ: ಪ್ರಾಣಕಾಂತ ತಮ್ಮಾಜ್ಞೆಯಂತಾಗಲಿ  ಹೋಗೋಣ ತೆರಳಿ.

ಮನ್ಮಥ: ಹೇ ಜನಕರೇ ನಿಮ್ಮ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು.

ರತಿ: ಮಾವಯ್ಯನವರೇ ನಿಮ್ಮ ಚರಣಾರವಿಂದಗಳಿಗೆ  ನಮಸ್ಕರಿಸುವೆನು.

ವಿಷ್ಣು: ರತಿಕಾಮರೇ ನಿಮಗೆ ಮಂಗಳವಾಗಲಿ ಮೇಲಕ್ಕೇಳಿರಿ.

ಮನ್ಮಥ: ಹೇ ಜನಕನೇ ನನ್ನನ್ನು ಇಷ್ಟು ತ್ವರಿತದಿಂದ ನೆನೆಸಿದ ಕಾರಣವೇನು ತಿಳಿಸುವರಾಗಿರೈ ಜನಕನೇ  ಮುಂದೇನು ಯೋಚನೇ.