ಪದ ನೀಲಾಂಬರಿ ರೂಪಕ

ಮದನಾ  ಕೃತಿಯತಿಕದನಾ  ಮದನಾ  ಸುದ ರೇಜನಸ
ನ್ಮೋಹನಾ  ಮದನಾ ॥ವದಗಿರೆ ವಿರಸತ್ಯ ಸದನಾ
ಮುದದಿ ನೆನೆಯಲು ನಿನ್ನ  ವದಗಿದ ಸಮಯಕ್ಕೆ  ಚದುರ
ಪೇಳ್ವೆನೆ  ಹದನಾ ॥ಮದನಾ ॥

ವಿಷ್ಣು: ಮಗು ಮನ್ಮಥ  ನಾನು ನೆನೆಸಿದ ಮಾತ್ರದಲ್ಲಿಯೇ ನೀನು ಬಂದದ್ದಕ್ಕೆ ಬಹಳ ಸಂತೋಷವಾಯಿತು  ಹಿಂದೆ ದಕ್ಷ ಯಾಗದಲ್ಲಿ  ದ್ವಂಸವಾದ ದಾಕ್ಷಾಯಣಿಯ  ವರ್ತಮಾನವನ್ನು ತಿಳಿದಂಥ ಪರಮೇಶ್ವರನು  ಜಗದ್ವ್ಯಾಪಾರವಂ ತೊರೆದು  ದಕ್ಷಿಣಾಮೂರ್ತಿಯಾಗಿ ಕುಳಿತಿರುತ್ತಾರೆ ಧ್ವಂಸವಾದ ದಾಕ್ಷಾಯಣಿಯು ಕೂಡ  ಆ ಸ್ವಾಮಿಯ ಆಜ್ಞಾ ಪ್ರಕಾರ  ಆ ಸ್ವಾಮಿಯನ್ನೇ ಕುರಿತು ತಪಸ್ಸು ಮಾಡುತ್ತಾ ಕುಳಿತಿರುವಳು  ಇತ್ತ ಆ ನೀಚರಾದ ತಾರಕಾದಿ ದೈತ್ಯರು ದೇವತೆಗಳಂ ಹೊಡೆದು ಬಡಿದು ಓಡಿಸಿರುವರು  ಆದರೆ ಆ ನೀಚರು ಸಾಯಬೇಕಾದರೆ ಸ್ವಾಮಿಯೂ ಅಮ್ಮನವರೂ ಸೇರಿದರೆ ಷಣ್ಮುಖನು ಜನಿಸುವನು  ಆತನಿಂದಲೇ ಆ ನೀಚರಿಗೆ ಮರಣವಿರುವುದು ಆದ ಪ್ರಯುಕ್ತ ನೀನು ನಿನ್ನ ಸನ್ಮೋಹನಾಸ್ತ್ರವನ್ನು  ಆ ಶಿವನ ಮೇಲೆ ಪ್ರಯೋಗಿಸಿ ಅಂತರ‌್ಮುಖನಾಗಿರುವ  ಆ ಪರಮೇಶ್ವರನನ್ನು  ಬಹಿರ‌್ಮುಖಕ್ಕೆ ತಂದು  ಗಿರಿಜಾ ಕಲ್ಯಾಣವಂ ಮಾಡಿಸಿದರೆ ದೇವತೆಗಳಿಗೆ ಬಂದಿರುವ ಕಷ್ಟವು  ಪರಿಹಾರವಾಗುವದು  ಆದರೆ ಈ ಕಾರ‌್ಯವು ನಿನ್ನಿಂದಲ್ಲದೆ ಮತ್ಯಾರಿಂದಲೂ ಆಗವುದಿಲ್ಲ  ಆದಕಾರಣ ನಿನ್ನಂ ನೆನೆಸಿದ್ದಾಯಿತೋ ಕಂದಾ  ನೀ ಯನ್ನ ಮನಕಾನಂದ.

ಪದ ರಾಗ ರೇಗುಪ್ತಿ ಅಟತಾಳ

ಪರಮಾತ್ಮ ರೂಪನೆ ಶೌರಿ ॥ಪಾಲಿಸು ಯನ್ನ  ಶರ
ಣಾಗತಿ ಸಂಸಾರಿ  ಹರಿಯೆ ನೀನಾಡಿದ  ಪರಮವಾಕ್ಯ
ವ ಕೇಳಿ  ತೆರನ ಕಾಣೆನಂ ನಾ  ಧರಿಸುತ್ತ ಅಭಯವನ್ನು ॥

ಮನ್ಮಥ: ಸ್ವಾಮಿ ತಂದೆಯವರೇ ತಮ್ಮ ಮಾತನ್ನು ಕೇಳಿದ ಮಾತ್ರವೇ ನನಗೆ ದಿಕ್ಕೂ ದೆಶೆ ಆಕಾಶ ಯಾವುದೂ ಕಾಣದೆ ದಿಗಿಲುಂಟಾಗಿದೆ  ಆ ಜಗದೀಶನಿಂದ ಸರ‌್ವರಂ ಜಯಿಸು ಎಂಬುದಾಗಿ ವರವಂ ಪಡೆದು ಆ ಜಗದೀಶನಿಗೆ ನಾನು ಕೈ ಮಾಡಿದರೆ ಸ್ವಾಮಿದ್ರೋಹತ್ವ ಬರುವುದಿಲ್ಲವೇ ಹೇ ಜನಕಾ  ಸ್ವಾಮಿ ದ್ರೋಹತ್ವ ಬಂದರು ಬರಲಿ ಎಂಬುದಾಗಿ ಯೋಚಿಸಿದರೆ  ಆ ಸರ‌್ವಂತರ‌್ಯಾಮಿಯಲ್ಲಿ ನನ್ನ ಸಾಹಸ ನಡೆಯುವುದೇ ಹ್ಯಾಗೆ ನೀವೇ ಯೋಚಿಸಿರಿ ಮತ್ತೂ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಪದಗತಿಯಂತಿರಲೀ  ಕೆಣಕಲು ಶಿವನ  ಉರಿವ
ಫಾಲಾಕ್ಷಿಯಲೀ  ಉರಿಸಾದೆ ಗುಗ್ಗುಳ  ಧೂಳಿಯಂ
ತೆನ್ನನೂ  ಇರದೆ ಹೋಮವ ಗೈಯದಿರುವನೇ ಕೋಪದಿ ॥

ಮನ್ಮಥ: ತಂದೆಯವರೇ ಕಷ್ಟಕಾಲದಲ್ಲಿ  ಉಪಕಾರವನ್ನು ಮಾಡಿದವರಿಗೆ  ಅಪಕಾರವಂ ಮಾಡಿ  ದ್ರೋಹ ಚಿಂತನೆ ಮಾಡಿದಂಥವರಿಗೆ ಅಂತ್ಯದಲ್ಲಿ ಮಹಾ ರವರವ ನರಕಾದಿಗಳು ತಪ್ಪುವುದಿಲ್ಲಾ  ಅದರಂತೆ ನಾನು ನರಕವಾಸಿಯಾಗಿರಬೇಕಾಗಿರುವದು ಹೇ ಜನಕ ವಿಷ್ಣುವಿನ ಮಗನು ನರಕ ವಾಸಿಯಾದರೆ ನನಗೂ ನಿನಗೂ ಅಪಯಶಸ್ಸು ಬರುವುದಿಲ್ಲವೇ ಹ್ಯಾಗೆ ಆ ಸ್ವಾಮಿಯನ್ನು ಕೆಣಕಲು  ಬೆಂಕಿಯಲ್ಲಿ ಗುಗ್ಗಳವನ್ನು ಹಾಕಿದಂತೆ ದಗ್ಧವಾಗುವೆ ತಮ್ಮ ಆಜ್ಞಾ ಪ್ರಕಾರ ಬಾಣ ಪ್ರಯೋಗವಂ ಮಾಡಿದರೆ ನಾನು ಉಳಿಯುವಂತಿಲ್ಲ. ಈ ಕಾರ‌್ಯವನ್ನು ಮಾತ್ರ ಹೇಳದೆ  ಇನ್ಯಾವ ಕಾರ‌್ಯವನ್ನು ಹೇಳಿದರೂ  ಶಿರಸಾವಹಿಸಿ ನಡೆಯುವೆನೈ ಜನಕಾ.

ಪದ ತ್ರಿವುಡೆ

ಯಾಕೆ ಈ ಪರಿನುಡಿವೆ ಮದನನೇ  ಲೋಕಸೃಷ್ಟಿ
ಯ ವೃದ್ಧಿಗೊಳಿಸಲು  ಪಿನಾಕಿ ಆಗ್ನೆಯನಿತ್ತನಲ್ಲ
ವೇ  ಜೋಕೆ ಇಂದಾ

ಬ್ರಹ್ಮ: ಎಲೈ ಮನ್ಮಥ ನೀನು ಹೇಳಿದ ವಿಚಾರವೆಲ್ಲ ಗೊತ್ತಾಯಿತು  ಆ ಮಾತು ಹಾಗಿರಲಿ  ನಿನಗೆ ಜಗದೀಶನು  ವರವಂ ಕೊಡುವಾಗ ಸರ್ವರನ್ನು ಜೈಸು ಅನ್ನುವದಾಗಿ ವರವನ್ನು ಕೊಟ್ಟರೇ ಹೊರತು  ಇಂಥವರ ಮೇಲೆ ಪ್ರಯೋಗಮಾಡು ಇಂಥವರ ಮೇಲೆ ಬೇಡ ಎಂಬುದಾಗಿ ಏನಾದರೂ ಹೇಳಿರುವರೆ ಹ್ಯಾಗೆ  ಇಂಥ ಬಡಿವಾರದ ಮಾತುಗಳನ್ನು  ಎನ್ನೆದುರಿಗೆ ಆಡಬೇಡ ಸಾಕು ಸಾಕು ನಿಲ್ಲಿಸುವನಾಗು,

ಮನ್ಮಥ: ಸ್ವಾಮಿ ಅಣ್ಣಯ್ಯನವರೇ  ಹಿಂದೆ ಕಶ್ಯಪನ ಹೆಂಡತಿ  ದಿತಿ  ಅದಿತಿ ಎಂಬುವರು ಗರ್ಭಿಣಿಯಾಗಿ  ಕಶ್ಯಪರಂ ಕುರಿತು ಯಥೇಚ್ಚವಾಗಿ ಹಾಲು ಕುಡಿಯಬೇಕೆಂದು ಕೇಳಲಾಗಿ ಆ ಕಶ್ಯಪರು ತಮ್ಮ ಮಗನಾದ ವರುಣನಲ್ಲಿಗೆ ಬಂದು  ಒಂದು ಗೋವನ್ನು ಕೇಳಲಾಗಿ ಆ ವರುಣನು ಗೋವುಗಳ ಸಮೂಹವನ್ನೇ ಕೊಟ್ಟನು ಆಗ ಭೂಮಿಯಲ್ಲಿ ತೆಗೆದುಕೊಂಡು ಹೋದರೆ ತಡವಾಗುವುದೆಂದು  ಅಂತರಿಕ್ಷ ಮಾರ್ಗದಲ್ಲಿ ತೆಗೆದುಕೊಂಡು ಬರುವಾಗ್ಯೆ  ಮಂದರಪರ್ವತದ ಸೋಮನಾಥೇಶ್ವರ ಲಿಂಗದ ಮೇಲೆ ಹಾಲು ಸುರಿಯಿತು ಆಗಲಾ ಶಿವನು  ಅಂತರಿಕ್ಷದಲ್ಲಿ ಅಭಿಷೇಕ ಮಾಡಿದವನು  ಎಂಥಾ ಅಹಂಕಾರಿಯೋ ಎಂಬುದಾಗಿ ಕಣ್ಣು ಬಿಟ್ಟು ನೋಡಿದ ಮಾತ್ರವೇ ಆ ಗೋವುಗಳ ಸಮೂಹವೇ ನಾಶವಾಯಿತು ಅಣ್ಣಯ್ಯನವರೇ.

ಪದ ತ್ರಿವುಡೆ

ಸರ್ವಜಗದುಪಕಾರ ಕಾರ‌್ಯವ  ನಿರ್ವಹಿಸಿ ನೀ ಮಾಡೆ
ನಿನ್ನೊಳು  ಸರ‌್ವಗತ ಸರ‌್ವಜ್ಞ ಮುಳಿವನೇ
ಸರ‌್ವಜ್ಞ ತಾನೂ

ಬ್ರಹ್ಮ: ಎಲೈ ಮನ್ಮಥನೆ ಕೇಳು. ನೀನು ನಿನ್ನ ಸ್ವಕಾರ‌್ಯಕ್ಕಾಗಿ ಹೋಗಿ ಸಾಧನೆ ಮಾಡಿದರೆ ಸ್ವಾಮಿ ದ್ರೋಹ ಮಾಡಿದೆನೆಂಬುದಾಗಿ ತಿಳಿದು  ಆ ದೇವನು ನಿನಗೆ ಶಿಕ್ಷೆ ಮಾಡಿದರೂ ಮಾಡಬಹುದು  ಲೋಕೋಪಕಾರಕ್ಕಾಗಿ ಬಾಣ ಪ್ರಯೋಗವಂ ಮಾಡಿದರೆ  ನಿನ್ನನ್ನು ಶಿಕ್ಷಿಸುತ್ತಾರೆಯೆ ಸರ‌್ವಜ್ಞನಾದ ಪರಮೇಶ್ವರನಿಗೇನು ಗೋಚರವಿಲ್ಲವೆ ಹ್ಯಾಗೆ ಸುಮ್ಮನೆ ಇಂಥಾ ಮಾತನ್ನು ಆಡಬಹುದೇನೋ ಮನ್ಮಥನೇ.

ಮನ್ಮಥ: ಆಹಾ ತಂದೆಯವರೇ ಅಣ್ಣಯ್ಯ ಅಜನೇ  ತಾವುಗಳು ಎಲ್ಲವನ್ನು ಅರಿತಂಥವರು  ತಮಗೆ ಏನು ಅರಿಕೆ ಮಾಡಿಕೊಳ್ಳಲಿ.

ಶ್ಲೋಕ

ಅಲಂಕಾರ ಪ್ರಿಯೋ ವಿಷ್ಣು  ಅಭಿಷೇಕ ಪ್ರಿಯೋ ಶಿವಹ ॥ಎಂಬಂತೆ ಅಲಂಕಾರಕ್ಕೆ ತಾವು ಬಾಧ್ಯರು ಅಭಿಷೇಕಕ್ಕೆ ಈಶ್ವರರು ಬಾಧ್ಯರು ಹೀಗಿರುವಲ್ಲಿ  ಆ ಗೋವಿನ ಹಾಲನ್ನು ಅಭಿಷೇಕವೆಂದು  ಯಾತಕ್ಕೆ ತೆಗೆದುಕೊಳ್ಳಲಿಲ್ಲ  ಭಕ್ತಿ ಇಂದ ಅಭಿಷೇಕವಂ  ಮಾಡಿದ್ದರೆ  ಸ್ವಾಮಿಯು ಸ್ವೀಕರಿಸುತ್ತಿದ್ದನು  ಅಕಲ್ಪಿತವಾಗಿ ಮಾಡಿದ್ದರಿಂದ  ಗೋವುಗಳ ಸಮೂಹವು ಹ್ಯಾಗೆ ನಾಶವಾಯಿತೋ  ಅದರಂತೆ ಭಕ್ತಿ ಇಂದ ಬಾಣವಂ ಹೊಡೆದರೆ  ನನಗೆ ಇಷ್ಟಾರ್ಥವನ್ನು ಕೊಡುವರು  ವೈರತ್ವದಿಂದ ಹೊಡೆದರೆ  ನಾನು ಉಳಿಯುವುದಿಲ್ಲ  ಅಂದರೆ ಎಷ್ಟು ಮಾತ್ರಕ್ಕೂ ಈ ಕಾರ‌್ಯವು  ನನ್ನಿಂದ ಆಗುವುದಿಲ್ಲವೈ ದೇವ ಕರುಣಪ್ರಭಾವ ॥

ಪದ ತ್ರಿವುಡೆ

ದೀನರಾಗುತೆ ನುಡಿದ ಸುರ  ಸಂತಾನವನು ಕಾ
ಣುತ್ತ ಕಠಿಣಕೆ  ಯಾನುವರೆ ಪಾಷಾಣಚಿತ್ತ
ನು  ನೀನೇ ಜಗದೀ ॥

ಬ್ರಹ್ಮ: ಎಲೈ ಮನ್ಮಥನೇ ಕೇಳು ನಿನ್ನನ್ನು ಬಹಳವಾಗಿ ನಂಬಿರುತ್ತಾರೆ ಅಂಥವರ ಕಾರ‌್ಯಕ್ಕೆ ನೀನು  ಸಹಾಯ ಮಾಡಬೇಕೆಂಬುದಾಗಿ ದೀನರಾಗಿ ಕೇಳಿಕೊಂಡರೆ ಸ್ವಲ್ಪವೂ ಕರುಣವಿಲ್ಲದೆ ಕಲ್ಲುಮನಸ್ಸು ಮಾಡಿಕೊಂಡು ನಿಂತಿರುವೆಯಲ್ಲಾ. ಇಂಥಾ ಕಠಿಣತನ ನ್ಯಾಯವೇನೋ ಮದನನೇ.

ಪದ ಕಲ್ಯಾಣಿ ಅಟ್ಟತಾಳ

ಅರವಿಂದಭವನೆ ಕೇಳೋ  ಚಿತ್ತದೊಳು ನೀ
ನು  ಪರಮ ಕರುಣವ ತಾಳೋ ॥ಭರದಿ ಪೇಳಿ
ದ ವಾಕ್ಯವು  ನಿಜವಾದರೊರೆವೆನೇ ನಾನು  ಹ
ರನಾಗ್ನೆ ಬಲದಿಂದಲೀ  ಈ ಜಗದೊಳು ನಾನು ॥

ಮನ್ಮಥ: ಭಲಾ ಭಲಾ ಅಣ್ಣಯ್ಯನವರೇ  ನೀವುಗಳಾಡಿದ ಮಾತುಗಳೆಲ್ಲವೂ  ನಮಗೆ ಗೊತ್ತಾಯಿತು ನೀವು ನನ್ನ ತಮ್ಮನೆಂದು ಭಾವಿಸಿಕೊಳ್ಳದೆ  ಇಷ್ಟು ನಿಷ್ಕರುಣದಿಂದ ಮಾತನಾಡಿಸುವುದು ನಿಮಗೆ ಸರಿಯಾಗಿ ಕಾಣುವುದೇ ಸಾಕ್ಷಾತ್ ಪರಮೇಶ್ವರನು ನನಗೂ ನನ್ನ ಬಾಣಕ್ಕೂ  ವರವಂ ಕೊಟ್ಟಿರುವುದರಿಂದಲೇ  ಸ್ವರ್ಗ ಮರ್ತ್ಯ  ಪಾತಾಳ ಈ ಮೂರು ಲೋಕದಲ್ಲಿಯೂ ಕೂಡ  ಸರ‌್ವರಂ ಜಯಿಸಿ ಜಯಶಾಲಿಮನ್ಮಥ ಎಂಬುದಾಗಿ ಬಿರುದಂ ಪಡೆದುಕೊಂಡಿರಲು  ನನ್ನ ಬಾಣಕ್ಕೆ ಸಿಕ್ಕದೇ ಇರುವಂಥ ಪ್ರಾಣಿಗಳೇ ಇಲ್ಲ  ಇದನ್ನೆಲ್ಲಾ ಕಂಡು ತಾವು ನನಗೆ ನೀತಿಯಂ  ಹೇಳುವುದು ಥರವಲ್ಲವೋ  ಅಗ್ರಜಾ  ಭಾಸ್ಕರತೇಜಾ.

ಪದ

ಸುತೆ ಎಂಬಾಸೆಯ ಮರೆಸೀ  ಶಾರದೆಯನ್ನು
ರತಿಯೊಳಗೊಡವೆರಸಿ  ಮತಿಯನ್ನು ಮರು
ಳು ಮಾಡಿದ  ವೀರನಾವನು  ಕ್ಷಿತಿಯೊಳು
ಪೇಳು ನೀನೂ ॥ಕೇಳಯ್ಯ ಬ್ರಹ್ಮ ॥

ಮನ್ಮಥ: ಭಲಾ ಭಲಾ ಅಣ್ಣಯ್ಯನವರೇ ತಾವುಗಳು ನನ್ನ ಬಾಣಕ್ಕೆ ಸಿಕ್ಕಿಲ್ಲವೆ ಹ್ಯಾಗೆ  ನೀವು ಶಾರದೆಯನ್ನು ಸೃಷ್ಟಿಸಿದ ಬಳಿಕ  ಅವಳನ್ನು ನಿಮ್ಮ ಮಗಳೋಪಾದಿಯಲ್ಲಿ  ಕಾಣಬೇಕಾದ್ದೇ ಧರ್ಮವಾದದ್ದು. ಅದನ್ನು ತ್ಯಜಿಸಿ ಆಕೆಯ ರೂಪುರೇಖೆ ಲಾವಣ್ಯಗಳಂ ನೋಡಿ  ಬಿಡಲಾರದೆ ಆಕೆಯನ್ನು ಲಗ್ನ ಮಾಡಿಕೊಂಡಿರಿ  ಆಗ ಶಾರದಾಪತಿ ಬ್ರಹ್ಮ ಎಂಬುದಾಗಿ ಕೂಗಿಸಿದ ಬಾಣವು ಯಾವುದು  ಅಲ್ಲದೆ ತಂದೆಯವರಾದ ಮಹಾವಿಷ್ಣುವು ದಾರುಕಾವನದಲ್ಲಿ  ಸರ‌್ವಸಂಗಪರಿತ್ಯಾಗ ಮಾಡಿ  ತಪಸ್ಸು ಮಾಡುವ ರುಷಿಗಳ ಮಧ್ಯದಲ್ಲಿ  ಮೋಹಿನಿ ಅವತಾರ ಮಾಡಿದರು ಆಗ್ಯೆ ವ್ಯಾಮೋಹವನ್ನುಂಟು ಮಾಡಿದ ಬಾಣ ಯಾರದು ಆ ನೀಚನಾದ ಜಲಂಧರನ ಹೆಂಡತಿ ವೃಂದೆಯು ಒಂದು ಭಾಗದಲ್ಲಿ ನಮ್ಮ ತಂದೆಗೆ ತಂಗಿಯಾಗಬೇಕು  ಅಂಥಾ ವೃಂದೆಯನ್ನೇ ನಮ್ಮ ತಂದೆಯು ಕೂಡಿ ಸುಖಪಟ್ಟದ್ದು ನನ್ನ ಬಾಣದಿಂದಲ್ಲವೇ ಅಗ್ರಜಾ  ಭಾಸ್ಕರತೇಜಾ.

ಪದ

ಬಿಡುಬಿಡು ನಿನ್ನಯಾ  ಬೆಡಗಿನ ನುಡಿಗಳ ಮ
ದನಾ  ಪೊಡವಿಯೋಳ್  ನಿನ್ನಯ ಜನ್ಮವ
ಸುಡು  ಮದನಾ  ತಿಳಿ ಇದನಾ ॥ಅನ್ಯೋಪ
ಕಾರ‌್ಯಾರ್ಥ  ಈ ದೇಹವೆಂಬುದು  ಮಾನ್ಯವಾಗಿಹ
ವೇದ  ವಾಕ್ಯವನರಿಯೇ  ನೀ ತಿಳಿಯೈ ॥

ಬ್ರಹ್ಮ: ಎಲಾ ಮನ್ಮಥನೇ ಕೇಳು  ನಾವು ಎಷ್ಟೋ ವಿಧವಾಗಿ ಕೇಳಿಕೊಂಡರು ಮನಸ್ಸಿಗೆ ತಂದುಕೊಳ್ಳದೆ ಪ್ರತ್ಯುತ್ತರವಂನು ಹೇಳುವಂಥ ನಿನ್ನ ಭಂಡ ಜನ್ಮವನ್ನು ಈ ಜಗತ್ತಿನಲ್ಲಿ ಇಡಬಾರದು ಛೀ ನಿನ್ನ ಜನ್ಮವನ್ನು ಸುಡುಸುಡು ಹಿರಿಯವರ ಮುಂದೆ ಮಾತನಾಡಬೇಕು ಆಡಬಾರದು ಎನ್ನುವ ಪರಿಜ್ಞಾನವಿಲ್ಲದೆ ಮಾತನಾಡುತ್ತೀಯೆ ಸಾಕು ಸಾಕು ನಿಲ್ಲಿಸು. ಈ ಶರೀರವನ್ನೆತ್ತಿದ ಮೇಲೆ  ಪರೋಪಕಾರವನ್ನು ಮಾಡಬೇಕು ಯಾಕೆಂದರೆ ॥ಶ್ಲೋಕ ॥ಅಸ್ಥಿರಜೀವನಂ  ಲೋಕೆ ಅಸ್ಥಿರಂ ಧನ ಯೌವನಂ  ಅಸ್ಥಿರಂ  ನಾರೀಪುತ್ರಸ್ಯ  ಧರ್ಮಕೀರ್ತಿ ದ್ವಯಸ್ಥಿರಂ ಎಂಬಂತೆ ಎಲೈ ಮದನನೇ ಕೇಳು  ಅಸ್ಥಿರವಾದಂಥ ಈ ಹಾಳು ಶರೀರವನ್ನು ನಂಬಿ  ಪರೋಪಕಾರಾದಿ ಧರ್ಮಗಳಲ್ಲಿ ಮನಸ್ಸು ಕೊಡದೆ  ವೃಕ್ಷವು ಹುಟ್ಟಿ  ವೃಕ್ಷವು ಬಿದ್ದಂತೆ  ಈ ಭೂಮಿಯಲ್ಲಿ ಹುಟ್ಟಿ ಪ್ರಯೋಜನವೇನು  ಹಿಂದೆ ಕೀರ್ತಿ ಪಡೆದಿರುವವರ  ವರ್ತಮಾನವನ್ನು ಹೇಳುತ್ತೇನೆ  ಕೇಳಯ್ಯ ಮದನನೆ.

ಮನ್ಮಥ: ಅಣ್ಣಯ್ಯ ದಕ್ಷಾರಿಯಾದ ಆ ಪರಮೇಶ್ವರ ಮೇಲೆ ಬಾಣ ಪ್ರಯೋಗವಂ ಮಾಡಿ  ಸ್ವಾಮಿ ದ್ರೋಹಕ್ಕೊಳಗಾಗುವ  ವಿಚಾರ ವಂದನ್ನು ಬಿಟ್ಟು ಒಂದು ಪಕ್ಷಿಯ ಮೇಲೆ ಪ್ರಯೋಗ ಮಾಡೆಂದರೆ  ಮಾಡೇನೆ ಹೊರ್ತು  ಈ ಕಾರ‌್ಯವು ನನ್ನಿಂದ ಸರ್ವಥಾ ಆಗತಕ್ಕದ್ದಲ್ಲ ಅಣ್ಣಯ್ಯನವರೇ.

ಬ್ರಹ್ಮ: ಅಯ್ಯ ಕುಸುಮಾಸ್ತ್ರನೇ ಕೇಳು ಹಿಂದೆ ವೃತ್ರಾಸುರನ ಬಾಧೆಯಂ ತಾಳಲಾರದೆ  ದೇವತೆಗಳೆಲ್ಲರೂ ಸೇರಿ ದಧೀಚಿ ಮಹರ್ಷಿಯನ್ನು ತಮ್ಮ ಬೆನ್ನಿನೊಳಗಿರುವ ಕಂಕಾಳವೆಂಬ ಮೂಳೆಯಂ  ಕೊಡಬೇಕೆಂದು ಕೇಳಿಕೊಳ್ಳಲು  ಆ ಮಹರ್ಷಿಯು ದೇವತೆಗಳ ಇಷ್ಟ ಪೂರ್ತಿ ಮಾಡುವ  ಉದ್ದಿಶ್ಯ ಬೆನ್ನ ಮೂಳೆಯಂ ತೆಗೆದು ವಜ್ರಾಯುಧವಂ ಮಾಡಿಕೊಡಲು ಅದರಿಂದ ಆ ವೃತ್ರನಂ ಸಂಹರಿಸಿ ವೃತ್ರಾರಿ ಎಂಬ ಹೆಸರನ್ನು ಪಡೆದುಕೊಳ್ಳಲಿಲ್ಲವೇ. ಆದರೆ ದಧೀಚಿ ಮಹರ್ಷಿಯ ಶರೀರ ಸ್ಥಿರವಾಯಿತೋ ಅಥವಾ  ಅವರು ಮಾಡಿದ ಉಪಕಾರ ಸ್ಥಿರವಾಯಿತೋ  ಚೆನ್ನಾಗಿ ಯೋಚಿಸಿ ನೋಡು.

ಮನ್ಮಥ: ಅಗ್ರಜ ಸೃಷ್ಟಿಸ್ಥಿತಿಲಯಂಗಳಿಗೆ ಕಾರಣಕರ‌್ತನಾದ ಪರಮೇಶನ ಉರಿನೇತ್ರಕ್ಕೆ ಯನ್ನನ್ನು  ಗುರಿಮಾಡತಕ್ಕ ಪ್ರಯತ್ನ ವಂದನ್ನು ಬಿಟ್ಟು  ಇನ್ಯಾವ ಕಾರ‌್ಯವನ್ನು ಹೇಳಿದಾಗ್ಯು ಶಿರಸಾವಹಿಸಿ ಮಾಡುವೆನಲ್ಲದೆ ಈ ಕಾರ‌್ಯವು ಎನ್ನಿಂದ ಅಸದಳವಾಗಿದೆಯೈ ದೇವಾ  ಮಹಾನುಭಾವ.

ಬ್ರಹ್ಮ: ಎಲೋ ಮನ್ಮಥಾ ನಾನು ಎಷ್ಟೋ ಜನಗಳನ್ನು ನೋಡಿದ್ದೇನೆ  ನಿನ್ನಂಥ ಲಬ್ದನಂ ನಾನೆಲ್ಲಿಯೂ ಕಾಣಲಿಲ್ಲ  ನಾನೆಷ್ಟು ಹೇಳಿದಾಗ್ಯು ಕೂಡ ಪ್ರತ್ಯುತ್ತರವಂ ಕೊಡುವೆಯಾ  ನೀಚನೆ ಭ್ರಷ್ಟನೇ ನನ್ನೆದುರಿಗೆ ನಿಲ್ಲಬೇಡ ಮದಾಂಧನೇ.

ದೇವೇಂದ್ರ: ಅಯ್ಯ ಮನ್ಮಥನೇ ನೀನು ಮನಸ್ಸು ಮಾಡದೆ ಹೋದರೆ  ನಾವುಗಳು ಉಳಿಯುವಂತಿಲ್ಲ. ಈಗಲಾದರೂ ದಯವಿಟ್ಟು ನಮ್ಮಗಳಂ ರಕ್ಷಿಸುವುದಕ್ಕೆ  ಮನಸ್ಸು ಮಾಡಯ್ಯ ಮನ್ಮಥನೆ.

ವಿಷ್ಣು: ಎಲೈ ದೇವತೆಗಳೇ ನೀವುಗಳೆಲ್ಲರೂ ಸುಮ್ಮನಿರಿ ನನ್ನ ಮಗನಾದ ಮದನನಿಗೆ ಇತಿಹಾಸವಂ ಹೇಳಿ ಸಮಾಧಾನವಂ ಪಡಿಸುತ್ತೇನೆ.

ಪದ

ಅಸಮಶರ ಲೋಕದೊಳು  ಪೆಸರಾದ ವೀರನೇ
ಉಸುರುತಿರ್ಪರೆ ನಾವು  ಬೆಸಸಿದರೂ ಮುಳಿದೂ ॥
ಎಲ್ಲರಿಗೆ ಬಂಧು ನೀ  ನಲ್ಲವೇ ಯದರದೆ  ಸ
ಲ್ಲಿಸಿದ ಕಾರ‌್ಯಗಳ  ನಿಲ್ಲದೆ ಮಾಡೈ  ನೀ ಮಾಡೈ ॥

ವಿಷ್ಣು: ಅಯ್ಯ ಪುಷ್ಪ ಬಾಣ ನಿಮ್ಮ ಅಣ್ಣ ಬ್ರಹ್ಮನಿಗೆ  ಪ್ರತ್ಯುತ್ತರವಂ ಹೇಳಿ ಅಲಕ್ಷ್ಯ ಮಾಡಿದ್ದು ನ್ಯಾಯವಲ್ಲ  ಈ ಲೋಕದಲ್ಲಿ ಆಬಾಲವೃದ್ಧರೂ ಸಹ ನಿನ್ನನ್ನೇ ಕೋರುವರು ಇಂಥಾದ್ದರಲ್ಲಿ ದೇವತರ ಕಾರ‌್ಯಕ್ಕಾಗಿ ಬಾಣಪ್ರಯೋಗ ಮಾಡಲು  ನಿನಗೆಂದಿಗೂ ಹಾನಿ ಬರುವುದಿಲ್ಲ. ಆದಕಾರಣ ನಿನ್ನ ಮನದ ಭ್ರಾಂತಿಯನ್ನು ಬಿಟ್ಟು  ನಿಶ್ಚಿಂತನಾಗಯ್ಯಿ ಮದನಾ  ಇದ್ಯಾವ ಘನಾ.

ಪದ

ಅಗಲಿರ್ಪ ಸತಿಯಾದ  ಅಗಜೆಯನು
ಪರಶಿವಗೆ  ಮಿಗೆ ಸೇರಿಸುತೆ ನೀನು  ಜಗದಿ
ಸುಖಿಯಾಗೈ ॥ಬೆರದವರು ಸಂತಸದಿ  ವರವೀವ
ರಲ್ಲದೆ  ಬರಿದೆ ಕೊಲ್ಲುವರೆಂಬ  ಮರುಳತನವಾ  ಕಳೆ ॥

ವಿಷ್ಣು: ಹೇ ಕಂದನಾದ ಮನ್ಮಥನೇ  ಆ ಜಗದೀಶನು ಅಮ್ಮನವರು ಅನಾದಿ ದಂಪತಿಗಳೆನಿಸಿಕೊಂಡು ಅವರವರು ಸೇರಲು ಯತ್ನವಿಲ್ಲ  ಆದಕಾರಣ ನಿನ್ನ ಸಮ್ಮೋಹನಾಸ್ತ್ರವಂ ಪ್ರಯೋಗಿಸಿ  ಆ ಸ್ವಾಮಿಯನ್ನು ತಪಸ್ಸಿನಿಂದ ಬಹಿರ‌್ಮುಖ ಮಾಡಿ  ವಿಷಯಕ್ಕೆ ಮನಗೊಡುವಂತೆ ಮಾಡಿದರೆ  ಗಿರಿಜಾ ಕಲ್ಯಾಣವಾಗುವುದು ಅನಂತರ ದೇವತೆಗಳ ಕಷ್ಟ ಪರಿಹಾರವಾಗುವುದು  ಅಗಲಿದಂಥ ದಂಪತಿಗಳಂ ಸೇರಿಸಿದ ಸಂತೋಷದಿಂದ ಅಮ್ಮನವರಿಗೆ ದಯಬಂದು ಮನ್ಮಥನು ಉಪಕಾರ ಮಾಡಿದನೆಂದಂ ತಿಳಿದು  ನಿನಗೆ ವರವಂ ಕೊಡುತ್ತಾರೆ  ಇದನ್ನೆಲ್ಲಾ ಯೋಚಿಸದೆ ಶಿವನಿಂದ ದಗ್ಧವಾಗುತ್ತೇನೆಂದು ಚಿಂತಿಸುವೆಯಲ್ಲಾ. ಈ ಹುಚ್ಚು ಬಿಟ್ಟು ಶರಪ್ರಯೋಗವಂ ಮಾಡಯ್ಯ ಪಂಚಶರ ಯಾತಕ್ಕೆ ತಾತ್ಸಾರ.

ಮನ್ಮಥ: ಅಯ್ಯೋ ಹರಹರ ಶಿವಶಿವ  ಮುಂದೇನು ಮಾಡಲಿ  ತಂದೆಯವರೂ  ಅಣ್ಣಯ್ಯನವರೂ ದೇವತೆಗಳಾದಿಯಾಗಿ ಸರ‌್ವರೂ  ನಾನಾ ವಿಧವಾಗಿ ಬೋಧಿಸುವರಲ್ಲ. ಇವರ ಮಾತುಗಳನ್ನು ಮೀರುವುದಕ್ಕೂ ಯತ್ನವಿಲ್ಲ  ಶಿವನಲ್ಲಿಗೆ ಹೋಗುವುದಕ್ಕೂ ಮಾರ್ಗವಿಲ್ಲ  ಇರಲಿ ಒಳ್ಳೇದು ಇದಕ್ಕೊಂದು ಉಪಾಯವನ್ನು ಮಾಡುತ್ತೇನೆ  ದೇವತೆಗಳೂ ಉಳಿಯಬೇಕು  ನಾನೂ ಬದುಕಬೇಕು  ಜನಕನೇ ಆ ಸ್ವಾಮಿಯ ಮೇಲೆ ಹೂಡತಕ್ಕ ಸನ್ಮೋಹನಾಸ್ತ್ರವನ್ನು  ಆ ನೀಚರ ಮೇಲೆ ಪ್ರಯೋಗಿಸಿ  ಆ ನೀಚರಾಕ್ಷಸರು ಅವರವರ ಸತಿಯರ ಸೇವೆಯನ್ನು ಮಾಡುವಂತೆಯೂ  ದೇವತೆಗಳ ತಂಟೆಗೆ ಬಾರದಂತೆ ಮಾಡಿದರೆ  ದೇವತೆಗಳ ಕಷ್ಟವು ಪರಿಹಾರವಾಗುವದು. ನಾನು ಶಿವದ್ರೋಹಕ್ಕೆ ಗುರಿಯಾಗುವುದಿಲ್ಲಾ  ಇಷ್ಟು ಕಾರ‌್ಯವಾದರೆ ನಾನು ಮಾಡುತ್ತೇನೆ ಹೊರತು ಆ ಶಿವನ ಮೇಲೆ ಮಾತ್ರ ಎಷ್ಟು ಮಾತ್ರವು ನನ್ನಿಂದಾಗುವುದಿಲ್ಲ ತಮಗೆ ಪ್ರತ್ಯುತ್ತರವನ್ನು ಹೇಳಿದ ತಪ್ಪನ್ನು ದಯವಿಟ್ಟು ಕ್ಷಮಿಸಬೇಕೆಂದು ಬೇಡುವೆನು.

ಪದ

ಜಲಜಾ ಸಾಯಕ ನಮ್ಮ  ನುಡಿಗಳ ಧಿಕ್ಕರಿಸುವ
ರೇ  ನಿನ್ನಯ ಬಲುಹಾ ನಾನೀಗಲೆ ನೋಡುವೆನು
ನೋಡುವೆನೂ ॥

ಬ್ರಹ್ಮ: ಎಲೋ ಮನ್ಮಥ  ತಂದೆಯ ಮಾತನ್ನು ಧಿಕ್ಕರಿಸಿ  ನನ್ನನ್ನೂ ಸಹ ತಿರಸ್ಕರಿಸಿ  ಪ್ರತ್ಯುತ್ತರವನ್ನು ಹೇಳುತ್ತಿರುವೆಯಲ್ಲಾ  ನಿನಗೆ ಹೇಳುವುದಕ್ಕಿಂತ ಬದಲಾಗಿ  ಆ ನೀಚ ರಾಕ್ಷಸರಿಗೆ ಹೇಳಿಕೊಂಡಿದ್ದರೂ ಕೂಡ  ಅವರ ಮನಸ್ಸು ಕರಗಿ ನಮ್ಮ ಮಾತುಗಳಂ ನಡೆಸುತ್ತಿದ್ದರು  ನೀನು ಅವರಿಗಿಂತ ಹೆಚ್ಚಾಗಿರುವೆಯಲ್ಲಾ  ನೀಚನೇ ಭ್ರಷ್ಟನೇ  ಹೇ ಜನಕಾ ತಾವು ನನಗೆ ಅಪ್ಪಣೆ ಕೊಟ್ಟರೆ  ತಟ್ಟನೆ ಶಾಪವಂ ಕೊಟ್ಟು ನಿಮಿಷ ಮಾತ್ರದಲ್ಲಿ ಇವನ ಅಹಂಕಾರವನ್ನು ಅಡಗಿಸುವೆನು. ಎಲೋ ಮನ್ಮಥ ನೀನು ಖಂಡಿತವಾಗಿ ಹೋಗುವೆಯೋ ಇಲ್ಲವೋ  ಇದೋ ಶಾಪವನ್ನು ಕೊಡುತ್ತೇನೆ  ತೆಗೆದುಕೊ ಮೂಢ  ನಡಿನಡಿ ಗಾಢ.

ಮನ್ಮಥ: ಆಹಾ ದೈವವೇ ನಾನು ಹೋಗುವದಿಲ್ಲವೆಂಬ ಮಾತ್ರದಲ್ಲಿಯೇ  ಅಣ್ಣಯ್ಯನವರು ಶಾಪ ಕೊಡುತ್ತೇನೆಂಬುದಾಗಿ ಕೋಪಿಸಿದರು ತಂದೆಯವರೂ ಕೂಡ ಬೋಧಿಸಲಾರಂಬಿಸಿದರು. ದೇವತೆಗಳಾದರೋ ದೀನರಾಗಿ ಕೇಳುತ್ತಾರೆ ಇಂಥಾದ್ದರಲ್ಲಿ ನನ್ನ ದುಃಖವಂ ಕೇಳುವರೇ ಇಲ್ಲವಾಯಿತು. ಆದರೆ ನನ್ನ ಪ್ರಾಣಕಾಂತೆಯಾದ ರತಿಯಲ್ಲಾದರೂ ಯೋಚಿಸಿ ನೋಡುವೆನು ಯಾರಲ್ಲಿ, ಎನ್ನ ಪ್ರಾಣಕಾಂತೆಯಾದ  ರತಿಯನ್ನು ಬರಮಾಡತಕ್ಕದ್ದು.

ರತಿ: ಸುಂದರನೇ  ವಂದಿಸುವೆನು

ಮನ್ಮಥ: ಸುಂದರಾಂಗಿಯೇ  ನಿನಗೆ ಮಂಗಳವಾಗಲಿ  ಮೇಲಕ್ಕೆ ಏಳು.

ರತಿ: ಪ್ರಿಯನೇ ಎನ್ನಂ ತ್ವರಿತದಿಂದ ಕರೆಸಿದ ಕಾರ‌್ಯವೇನು  ಕೋಮಲಕರಗಳಿಂದ ನಾಂ ಬೇಡುವೆ ಮುದ್ದು ಗಿಳಿಯ ಮಾತಿನಂತೆ ಸುಖಿಸೈ ಕಾಮನೇ  ಕೂಡುವೆ ನಿನ್ನ ನಾಂ ಬೇಗನೇ.

ಪದ

ಸಾರಸಾಕ್ಷಿ ಕೇಳೆ ಸೌಖ್ಯ  ಸಾರವರೆ ರತಿಯೇ
ನೀರೆ ವಿಧಿಯು ಶಾಪದ  ವಿಚಾರಕೇನು ಗತಿ
ಯೇ  ಹರಿಯು ವಿಧಿಯು ಸುರರು ಎನ್ನ  ಕರೆದು
ಬಾಧಿಸುತ್ತಿಹರು ॥ಹರನಲ್ಲಿಗೆ ಪೋಗೆ ಮುಂದೆ
ತೆರನೇನಹುದೊ ಕಾಣೆ ಮುಂದೆ  ಅಂತಕಾಂತಕ
ನು ಶಿವನ  ಎಂತು ಗೆಲುವೆನೇ ನಾನು  ಕಾಂತೆ
ಪೋಗದೆ ಬಿಡಲು ಮುನ್ನ  ಪಂಥ ಪೋಪುದೆನಲು ॥

ಮನ್ಮಥ: ಮೋಹನಾಂಗಿಯಳಾದ ರತಿಯೆ ದೇವತೆಗಳ ಕಾರ‌್ಯಕ್ಕಾಗಿ  ಜಗದೀಶನ ಮೇಲೆ ಬಾಣ ಪ್ರಯೋಗವನ್ನು  ಮಾಡೆಂಬುದಾಗಿ ತಂದೆಯವರು ಹೇಳಿದರು  ಇತ್ತಲಾಗಿ ಇಂದ್ರನೇ ಮೊದಲಾದ ದೇವತೆಗಳೆಲ್ಲರೂ ಸೇರಿ  ನನ್ನನ್ನು ಬಹಳವಾಗಿ ಬೇಡಿಕೊಳ್ಳುತ್ತಾರೆ  ಆ ಪರಮಾತ್ಮನು ಯಮನಂ ಜೈಸಿ ಮೃಕಂಡು ಮುನೀಶ್ವರನಂ ಕಾಪಾಡಿ ಅಂತಕಾಂತಕನೆಂಬ ಬಿರುದಂ ಜೈಸಿರುವನು. ಆ ಮೃತ್ಯುಂಜಯನ ಮೇಲೆ ಬಾಣ ಪ್ರಯೋಗವಂ ಮಾಡಿದರೆ ನನ್ನ ಗತಿ ಏನಾಗುವುದೋ ಕಾಣೆ  ಅಥವಾ ಶಿವನಲ್ಲಿಗೆ ಹೋಗದೆ ಹೋದ ಪಕ್ಷದಲ್ಲಿ ನನ್ನಂ ಹೇಡಿ ಎನ್ನುವರಲ್ಲದೆ ಆ ಬ್ರಹ್ಮನೂ ಕೂಡ ಶಾಪವಂ ಕೊಡುತ್ತಾನೆ  ಒಂದು ಕಡೆ ಕೆರೆ ಒಂದು ಕಡೆ ಬಾವಿ ಇದ್ದಂತೆ ಎನಗಾಗಿರುವುದು ಇದಕ್ಕೇನು ಮಾಡಲೇ ಕಾಂತೆ  ಮತಿಗುಣವಂತೆ.

ಪದ ನವರೋಜು ಆದಿತಾಳ

ನೀತಿಯಲ್ಲದು ರಮಣ  ಆತನುಸಿರ್ಜತ ಕರುಣ
ಆತುರದಲಿ ನೀನೂ  ಬ್ರಹ್ಮ ವಿಷ್ಣುಗಳ ನುಡಿಯ
ನಂಬದಿರೈ  ಮಾತ ಕೇಳು  ವರೇ  ಗಿರಿಜೆಯ
ಕೂಡಿದ ಬಳಿಕ  ವರವಹುದಾದರೆ ಮುನ್ನ  ಹರ
ನ ಕೆಣಕಲು ನೀನು  ಧುರದೋಳ್ ಬದುಕುವೆಯಾ ॥

ರತಿ: ಪ್ರಾಣಕಾಂತನೇ ತಮ್ಮ ಅಪ್ಪಣೆಯಲ್ಲಾ ಗೊತ್ತಾಯಿತು. ಆದರೆ ಬ್ರಹ್ಮೇಂದ್ರಾದಿ ದೇವತೆಗಳೆಲ್ಲರೂ ತಮ್ಮ ತಮ್ಮ ಕಾರ‌್ಯಕ್ಕಾಗಿ ನಮ್ಮಗಳ ಸುಖ ದುಃಖಗಳನ್ನು  ಮನಸ್ಸಿಗೆ ತಂದುಕೊಳ್ಳದೆ ನಾನಾ ವಿಧವಾಗಿ ಬೋಧನೆಯನ್ನು ಮಾಡುತ್ತಾರೆ  ಅವರ ಮಾತುಗಳಂ ಕೇಳಿ ತಾವು ಪರಶಿವನಲ್ಲಿ  ಬಾಣ ಪ್ರಯೋಗವಂ ಮಾಡಿದರೆ  ನೀವು ಖಂಡಿತ ಉಳಿಯುವುದಿಲ್ಲ. ಒಂದು ಪಕ್ಷ ಆ ಸ್ವಾಮಿಯು ಅಮ್ಮನವರಲ್ಲಿಗೆ ಸೇರಿದರೆ  ವರವನ್ನು ಕೊಡುತ್ತಾರೆಂದು ಹೇಳಿದರಲ್ಲವೆ  ನಾವು ಸುಖವಾಗಿ ಬದುಕಿದರಂತೂ ಬೇಕಾದಷ್ಟು ವರವನ್ನು ಪಡೆಯಬಹುದು. ತಮಗೆ ಹಾನಿಯಾದರೆ ಯಾರಿಗೆ ವರವನ್ನು ಕೊಡುತ್ತಾರೆ  ಆ ವರವೂ ಬೇಡ ತಾವು ಹೋಗುವುದೂ ಬೇಡ ನಾವು ಚೆನ್ನಾಗಿದ್ದರೆ ಈ ಜಗತ್ತೆಲ್ಲಾ ಸುಖವಾಗಿ ಇದ್ದಂತೆ ಆಗುವುದು  ನಾವೇ ನಾಶವಾಗುವ ಕಾಲದಲ್ಲಿ  ಯಾರಿಂದಲೇನಾಗುವುದು  ಏನಾದರೂ ಆಗಲಿ ಹೋಗಕೂಡದೋ  ಪ್ರಿಯನೇ ಇದ್ಯಾವ ಯೋಚನೆ.

ಪದ ಶಂಕರಾಭರಣ ಏಕತಾಳ

ಚಾರು ಚಂದ್ರವದನೇ ಕೇಳೆ ನೀರೆ ನಿನ್ನ ನುಡಿ
ಯು ನಿಜವು  ವಾರಿಜಾ ಪಿತನ ಕೋಪ  ಕಾರು
ಸಿಲುಕವರೇನೆ ರಮಣೀ ॥

ಮನ್ಮಥ: ಹೇ ಮಂಗಳಂಗಿಯಾದ ರತಿಯೇ ಕೇಳು  ನೀನು ಹೇಳಿದಂತೆ ನಾನು ಹೋಗದೆ  ಮಂದಿರದಲ್ಲಿ ನಿಂತದ್ದೇ ಆದರೆ ಅಣ್ಣಂದಿರಾದ ಬ್ರಹ್ಮದೇವರು ಶಾಪವಂ ಕೊಡುತ್ತಾರೆ. ಇದಕ್ಕೇನು ಮಾಡಲಿ ಸ್ವಲ್ಪ ಆಲೋಚನೆಯಂ ತಿಳಿಸುವಳಾಗೆ ರಮಣಿ  ಕಲಕೀರವಾಣಿ.

ಪದ

ಸುಂದರಾಂಗ  ಸುಂದರವದನ  ಪೋಗಲಾಗ
ದೋ  ಅಂದದಿಂದ  ಬೇಡುವೆನು  ಇಂದುರೂ
ಪನೇ ॥ಶಾಪಕವಧಿಯುಂಟು  ಶಿವನ ಕೋಪ
ಕವಧಿ  ಯುಂಟೆ ಮದನ  ಶಾಪವಿತ್ತರೀಯಲಿ
ವಿಧಿಯೇ  ನೀ ಹೋಗಬೇಡವೈ ॥

ರತಿ: ಹೇ ಕಾಂತ, ಭಾವನವರಾದ ಬ್ರಹ್ಮದೇವರು ಶಾಪವಂ ಕೊಟ್ಟರೆ ಇಷ್ಟು ವರ್ಷ ಇಷ್ಟು ತಿಂಗಳು  ಇಷ್ಟು ದಿನಗಳೆಂಬ ಅವಧಿ ಇರುವುದು  ಆ ಅವಧಿ ತೀರಿದ ಮೇಲಾದರೂ  ಪ್ರಾಣವಂ ಉಳಿಸಿಕೊಂಡು ಸುಖವಾಗಿರಬಹುದು. ಆ ಜಗದೀಶನ ಕೋಪಕ್ಕೆ ಅವಧಿ ಏನಾದರೂ ಉಂಟೆ ಶಾಪ ಬಂದರೆ ಬರಲಿ  ಅನುಭವಿಸೋಣ. ತಾವು ಖಂಡಿತವಾಗಿ ಹೋಗಬೇಡವೋ ನಲ್ಲ  ಕೇಳೆನ್ನ ಸೊಲ್ಲ.

ಪದ

ಲೋಕನಾಥರಿವರ ನುಡಿಯ  ನಾ ಕೇಳದೆ ಹೋ
ಗೆ ಜಯ   ದೇಹವು ಸ್ಥಿರವೇ  ನೀ ಕೇಳು ರಮಣಿ ॥

ಮನ್ಮಥ: ಮಂಗಳಾಂಗಿಯಾದ ರತಿಯೇ ಕೇಳು ಈ ಅಸ್ಥಿರವಾದ ಶರೀರವನ್ನು ಉಳಿಸಿಕೊಳ್ಳ ಬೇಕೆಂಬುದಾಗಿ ನಾನು ಆಸೆಯನ್ನಿಟ್ಟು  ಹರಿಬ್ರಹ್ಮಾದಿ ದೇವತೆಗಳೆಲ್ಲರೂ ಹೇಳಿದ ಮಾತುಗಳಂ ತಿರಸ್ಕರಿಸಿ  ನಾನು ಬದುಕಿ ತಾನೆ ಏನು ಪ್ರಯೋಜನ  ಎಲ್ಲಾ ತಿಳಿದವಳಾದ ನೀನು  ಈ ಮಾತುಗಳನ್ನಾಡುವುದು  ಸರಿಯಲ್ಲವೇ ಕಾಂತೆ  ಮತಿಗುಣವಂತೆ.

ಪದ

ತಲೆಯು ಬಲಿಯುತೆನ್ನುತುಬ್ಬಿ  ಶಿಲೆಯ ತಾಗುವಂ
ತೆ ರಮಣ  ಕಲುಷಹರನ ಮುಂದೆ ನಿನ್ನ  ಛಲವು
ನಡೆವುದೆ ರಮಣ ॥

ರತಿ: ಆಹಾ ಪ್ರಾಣಕಾಂತ ಒಂದು ವೇಳೆ ತಾವು ಛಲವಂ ಮಾಡಿ ಆ ಸ್ವಾಮಿಯ ಮೇಲೆ ಬಾಣ ಪ್ರಯೋಗವಂ ಮಾಡಿದರೆ ನಿಮಗೆ ಜಯವಾಗುವುದಿಲ್ಲ. ತಲೆಯು ಬಲಿಯಿತೆಂಬುದಾಗಿ ಕಲ್ಲನ್ನು ಹಾಯ್ದರೆ  ತಲೆ ಹೊಡೆಯದೆ ಇರುವುದೆ ಹ್ಯಾಗೆ  ಅಂದರೆ ನೀವೇನಾದರೂ ಇವರುಗಳ ಮಾತುಗಳನ್ನು ಕೇಳಿ  ಅಹಂಕಾರಪಟ್ಟರೆ ಆ ಸ್ವಾಮಿ ಇಂದ  ಶಿಕ್ಷೆ ಆಗುವದೆಂದಿಗೂ ತಪ್ಪುವದಿಲ್ಲ  ಈ ಹಾಳು ಸಂಕಟ ಯಾರಿಗೆ ಬೇಕು ಹ್ಯಾಗಾದರೂ ಆಗಲಿ ನೀವು ಮಾತ್ರ  ಮಂದಿರದಲ್ಲಿ ಇರಬೇಕೈ ನಲ್ಲಾ  ಲಾಲಿಸೆನ್ನ ಸೊಲ್ಲಾ.

ಪದ
ಕಾಯವಿದ್ದ ಬಳಿಕ ಸುಜನಪಾಯಕ್ಕೊದಗದಿರಲು
ರತಿಯೆ  ಹೇಮವಲ್ಲವೇನೆ ತನುವಿ  ದಾಯುತನೇತ್ರೆಯೆ ॥

ಮನ್ಮಥ: ಹೇ ಕಾಂತೆಯೆ ಕೇಳು  ಶರೀರವನ್ನೆತ್ತಿದ ಮೇಲೆ ಮತ್ತೊಬ್ಬರಿಗೆ ಉಪಕಾರ ಮಾಡದೇ ಹೋದರೆ ಈ ಭೂಮಿಯಲ್ಲಿ ಹುಟ್ಟಿ ತಾನೇ ಏನು ಪ್ರಯೋಜನ ಅನಿತ್ಯವಾದ ದೇಹವನ್ನೆತ್ತಿ  ಜೀವಗಳ್ಳನಂತೆ ಹೆಸರು ಬಂದ ಮೇಲೆ ಸಾರ್ಥಕವೇನು. ಆದ್ದರಿಂದ ನಾನು ಹೋಗಿ ಬರುತ್ತೇನೆ ಕಾಂತೆ ಇದು ಯಾತರ ಚಿಂತೆ.

ಪದ

ಸುರರ ಕಾರ‌್ಯಕೆಂದು ತನುವ  ತೆರುವುದುಂಟೆ ಪ್ರಿಯಾ
ನಿರ್ಜರರ ಕಾರ‌್ಯವಹುದೆ  ಸೋಲ್ವನೆ ಹರನು ನಿನಗಿನ್ನು ॥

ರತಿ: ಪ್ರಾಣೇಶ್ವರನೇ ಪರೋಪಕಾರ ಮಾಡುವುದು ನಿಶ್ಚಯವೇ ಸರಿ. ಒಂದು ವೇಳೆ ನೀವು ಸಾಹಸ ಮಾಡಿದ್ದಕ್ಕೂ  ನಿಮ್ಮ ಬಾಣಕ್ಕೆ ಆ ಜಗದೀಶನು ಸೋತರೆ ಈ ದೇವತೆಗಳ ಕಾರ‌್ಯವಾಗುವುದೇನೋ ನಿಶ್ಚಯ ನಿಮ್ಮ ಶರೀರವು ಹೋಗಿ ದೇವತೆಗಳ ಕಾರ‌್ಯವು ಆಗದೇ ಹೋದರೆ ಏನು ಪ್ರಯೋಜನ  ಆದ ಕಾರಣ ಈ ಕಾರ‌್ಯಕ್ಕೆ ತಾವು ಮಾತ್ರ  ಮನಸ್ಸು ಮಾಡಬೇಡವೋ ನಲ್ಲ  ನಡೆಸೆನ್ನ ಸೊಲ್ಲ.

ಪದ

ಧರೆಯೊಳು ಜಯಶೀಲವಾದ  ಸುರವಿಭ
ರಿತ  ಶರಕೆ ಜಯವು  ದೊರಕದಿಹುದೆ  ಭುವನ
ತ್ರಯದಿ  ತರುಣಿ ನೀ ಪೇಳೆ ॥

ಮನ್ಮಥ: ಹೇ ಕೋಮಲಾಂಗಿ ರತಿಯೇ ಕೇಳು. ಇದುವರೆಗೂ ನನ್ನ ಬಾಣಕ್ಕೆ ಕೊರತೆ ಬಂದಿಲ್ಲ  ಈಗಲೂ ಎಂದಿಗೂ ಕೊರತೆ ಬರಲಾರದು. ಇದಕ್ಕಾಗಿ ನೀನು ಸ್ವಲ್ಪವೂ ಆಲೋಚಿಸಬೇಡ ಕಾಮಿನಿ ಕಲಹಂಸಗಾಮಿನಿ ॥ಹೇ ಪ್ರಾಣಕಾಂತೆಯೇ ಕೇಳು  ಈ ಲೋಕದಲ್ಲಿರುವ ಮನುಷ್ಯರು  ಎಷ್ಟೇ ಆಯುಸ್ಸುಳ್ಳವರಾದರು ಶಿವದ್ವೇಷದಲ್ಲಿ ಅಲ್ಪಾಯುಷ್ಯ ಆಗುವುದೇನೋ ನಿಜ. ಒಂದು ವೇಳೆ ಆ ಸ್ವಾಮಿ ಇಂದ ನಾಶವಾದರೂ  ಶಾಶ್ವತವಾದ ಕೀರ್ತಿಗೆ ಮನಸ್ಸು ಮಾಡಿರುತ್ತೇನೆ  ನನ್ನ ಸನ್ಮೋಹನಾಸ್ತ್ರದಿಂದ ಆ ಸ್ವಾಮಿಯು  ಅಮ್ಮನವರಲ್ಲಿ ಸೇರುವುದೇನೋ ನಿಶ್ಚಯ  ಒಂದು ವೇಳೆ ಆ ಸ್ವಾಮಿಯು ಕೋಪ ಮಾಡಿದರೂ  ಅಮ್ಮನವರಿಗೆ ದಯ ಬಂದು  ನಿನ್ನ ಮಾಂಗಲ್ಯವನ್ನು ಕಾಪಾಡುತ್ತಾರೆ  ಆದ್ದರಿಂದ ನಾನು ಹೊರಡುವುದಕ್ಕೆ ಸನ್ನದ್ಧನಾಗುತ್ತೇನೆ  ನೀನೂ ಸಹ ಬರುವುದಾದರೆ ಪ್ರಯಾಣ ಮಾಡುವಳಾಗೆ ಕಾಂತೆ ಇದಕ್ಯಾತಕ್ಕೆ ಚಿಂತೆ.

ಪದ ಜಂಪೆ

ಶ್ರೀ ಗೌರಿಪಾಲಿಸೆ  ಈ ಗೋತ್ರವೆಲ್ಲವನೂ  ಭೇ
ಗೀಂದ್ರಭೂಷಿತ  ಪ್ರೇಮ ಬಾರ‌್ಯೆ  ಮೃಗೇಂದ್ರ
ವಾಹನಳೇ ॥ಕ್ರೂರಾಸುರಾಂತಕಿಯೇ  ಗೌರೀ
ಶಿವಾಂಬಕಿಯೇ ॥