ಮನ್ಮಥ: ಜಯ ಜಯ ಮಹಾತಾಯೆ  ಲೋಕಮಾತೆ  ತ್ರಿಪುರ ಸುಂದರಿ  ಆದಿಶಕ್ತಿ  ಇಚ್ಚಾಶಕ್ತಿ ಯಾದಂಥ ತಾಯಿ ಉಮಾ ಕಾತ್ಯಾಯಿನಿ  ಕಾಮೇಶ್ವರಿ  ಕಂಕಾಳಿ  ನಿರ್ವಿಕಾರಿ  ನಿತ್ಯಾನಂದೆ  ನಿಷ್ಕಳೆ  ಚಂಡಿಕೆ ಅಂಬಿಕೆ ಗಾಯಿತ್ರಿ ಸಾವಿತ್ರಿ ಎಂಬ ಸಹಸ್ರನಾಮವಂ ಪಡೆದಿರುವಂಥ ತಾಯೆ ನಿನ್ನ ಮಗನಾದ ಮನ್ಮಥನಂ ರಕ್ಷಿಸಿ ಉದ್ಧಾರ ಮಾಡು ಜನನಿ  ಭವಭಯಹನನಿ.

ಪದ ತ್ರಿವುಡೆ

ಎನುತ ಪಾರ‌್ವತಿಯನ್ನು ನೆನೆಯುತಾ  ವನಿತೆ
ರತಿಯನು ಸಂತವಿಡುತಲಿ  ಮನಸಿಜಾಸ
ನು ನಡೆತಂದನು ಹರನ  ಪಾದಕ್ಕೆ ವಿನಯದೊಳು ॥

ಮನ್ಮಥ: ಹೇ ಪ್ರಾಣಕಾಂತೆಯೇ ಮಾತೆಯಾದ ಪಾರ‌್ವತಾ ಅಮ್ಮಯ್ಯನವರನ್ನು  ಧ್ಯಾನ ಮಾಡಿದ್ದಾಯ್ತು ಇನ್ನು ಹರಿಬ್ರಹ್ಮೇಂದ್ರಾದಿಗಳಿಗೆ ತಿಳಿಸಿ. ನಾನು ಹೊರಡುವ ಪ್ರಯತ್ನವನ್ನು ಮಾಡುತ್ತೇನೆ ಕಾಂತೆ ಗುಣವಂತೆ.

 

(ವಿಷ್ಣು ಬ್ರಹ್ಮ ಇಂದ್ರ ಬರುವರು)

ಮನ್ಮಥ: ತಂದೆಯವರ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು.

ವಿಷ್ಣು: ಕಂದಾ ಮದನನೇ ಮುಂದಿನ ಕಾರ‌್ಯವೇನೋ  ನಿನಗೆ ಜಯವಾಗಲಿ.

ಮನ್ಮಥ: ಅಣ್ಣಾ ಸೃಷ್ಟಿಕರ್ತನೇ ವಿಜ್ಞಾಪಿಸುವೆನು.

ಬ್ರಹ್ಮ: ಎಲೈ ಮೀನಕೇತನೇ ನಿನಗೆ ಶುಭವಾಗಲಿ  ಮತ್ತೇನು ಸೂಚನೆ ವಿವರಿಸು.

ಮನ್ಮಥ: ಇಂದ್ರಾದಿ ದೇವತೆಗಳೇ ನಿಮ್ಮ ಚರಣಾರವಿಂದಗಳಿಗೆ ವಂದಿಸುವೆನು.

ಇಂದ್ರ: ಮಗೂ ಮನ್ಮಥನೆ ನಿನಗೆ ಮಂಗಳವಾಗಲಿ. ಕಂದಾ ಮನ್ಮಥನೇ  ಇದುವರೆವಿಗೂ ತಾತ್ಸಾರ ಮಾಡಿದ ಕಾರಣವೇನು ವಿವರಿಸು.

ಪದ ಜಂಪೆತಾಳ

ಪೋಗಿ ಜೈಸೂವೆ ನಾನು  ನಾಗಭೂಷಣನನ್ನೂ
ಬೇಗ ವೀಳ್ಯವ ಕೊಡಿರೆನುತಾ  ಆಗ ಕೇಳಿದ ಮದನ ॥

ಮನ್ಮಥ: ಹೇ ಜನಕನೇ ಮನಸ್ಸಿನ ಅಭಿಪ್ರಾಯವನ್ನು ಲಾಲಿಸಿರಿ  ನಾನು ಆ ಸ್ವಾಮಿಯ  ಯದುರೋಳ್ ನಿಂತು  ಪಂಚ ಬಾಣವಂ ಬಿಡುವುದಿಲ್ಲವೆಂದು  ಹೇಳಿದ ಮಾತ್ರಕ್ಕೆ ಬಹಳ ಕಠಿಣವಾಗಿ  ಅಣ್ಣಯ್ಯನವರು ಕೋಪ ಮಾಡಿದರು. ತಾವುಗಳು ಆಶೀರ್ವಾದ ಮಾಡಿದರೆ ಆ ಪರಶಿವಮೂರ್ತಿಯಲ್ಲಿ ಬಾಣ ಪ್ರಯೋಗವಂ ಮಾಡಿ ಬರುತ್ತೇನೆ. ಆಹಾ ಚತುರ್ಮುಖನೇ ತಾವು ಆಶೀರ್ವಾದವಂ ಮಾಡಿರಿ ಅಗ್ರಜ.

ಬ್ರಹ್ಮ: ಅಯ್ಯ ಮನ್ಮಥ ನೀನು ಹೇಳಿದ ವಿಚಾರವಂ ಕೇಳಲು ನನಗೆ ಬಹಳ ಸಂತೋಷವಾಯಿತು ಇಗೋ ನಿನ್ನ ಕೊರಳಿಗೆ ಜಯಪುಷ್ಪಮಾಲೆಯನ್ನು ಹಾಕುತ್ತೇನೆ.  ನೀನು ಹೋದ ಕಾರ‌್ಯವು ಜಯವಾಗಲಿ  ಪ್ರಯಾಣ ಮಾಡೈ ಮದನ ಮುಂದಿನ ಕಾರ‌್ಯದಹದನ.

ಇಂದ್ರ: ಎಲೈ ವೀರನಾದ ಮನ್ಮಥನೇ  ಈಗ ನೀನು ಬಾಣ ಪ್ರಯೋಗ ಮಾಡುತ್ತೇನೆಂದು ಹೇಳಿದ್ದರಿಂದ ನಾವುಗಳು ಧನ್ಯರಾದೆವು ಆ ಮೃತ್ಯುಂಜಯನು ನಿನಗೆ ಒಲಿಯಲಿ ಹೋಗಿ ಬಾರೈ ಮದನನೆ  ನಿನಗ್ಯಾತಕ್ಕೆ ಯೋಚನೆ.

ಮನ್ಮಥ: ಅಯ್ಯ ಇಂದ್ರಾದಿ ದೇವತೆಗಳಿರಾ  ಹೇಗಾದರೂ ನಿಮಗೆ ಕ್ಷೇಮ ಉಂಟಾದರೆ ಸಾಕು ನಾನು ಹೋಗಿ ಆ ಕೈಲಾಸವಾಸನ ಮೇಲೆ ಶರಪ್ರಯೋಗ ಮಾಡುತ್ತೇನೆ  ಹೆದರದೆ ಧೈರ‌್ಯವಾಗಿರಿ ಸರ‌್ವರಿಗೂ ನಮಸ್ಕಾರ ನಾನು ಹೋಗಿ ಬರುತ್ತೇನೆ  ಹೇ ಮಂಗಳಾಂಗಿಯಾದ ರತಿಯೇ ಸರ‌್ವರಿಂದಲೂ ಅಪ್ಪಣೆಯಂ ಪಡೆದಿರುವೆನು  ಹೊರಡುವಳಾಗೆ ಕಾಂತೆ  ಇದಕ್ಕೇಕೆ ಚಿಂತೆ.

ಪದ

ಭಾಮ ಮಣಿಯಲೆ ಬಾರೆ  ಹೇಮ ಕೂಟಕೆ
ಬಂದೆ   ಸೋಮನ ದಯದಿಂದ  ಭ್ರಮೆಗೊಂಡು
ನಿಂದೆ ॥ದಾರಿಯ ಕಾಣದೆ  ಗಿರಿಜಾತೆ ಸ್ಮರಿಸಿದೆ
ಘೋರಕಾನದೊಳು  ಮೀರಿ ದುಃಖವ ಮಾಳ್ಪೆ
ತೆರನೇನಾ ಮಾಳ್ಪೆನು  ಹರಿಯ ಮಾತನು ಕೇಳಿ
ಅರಿಯದೆ ನಾ ಬಂದೆ  ಈ ತೆರದಿ ನೊಂದೆ ॥

ಮನ್ಮಥ: ಹೇ ಯನ್ನ ಸತಿಯಾದ ರತಿಯೆ ಕೇಳು  ಹರಿಬ್ರಹ್ಮೇಂದ್ರಾದಿ ದೇವತೆಗಳ ವಚನವಂ ಕೇಳಿ ಅತಿಶಯದಿಂದ ಸಂತೋಷದೋಳ್ ಅಪ್ಪಣೆಯಂ ಪಡೆದು  ಈ ಅಘೋರವಾದ ತಪ್ಪಲೋಳ್ ಬರುವಾಗ್ಯೆ  ನನಗೆ ಅಪಜಯ ಬಂದಿತಲ್ಲ  ಹರಹರಶಂಕರಿ  ಕಾಳಿ ಕಂಕಾಳಿ  ಕಮಲೇಶ್ವರಿ ಪಥವಿಡಿದು ರಥವನ್ನು ಹಾರಿಸಿ ರತಿಯಂ ಅತಿಕಷ್ಟಕ್ಕೆ ಗುರಿಮಾಡಿ ಅಷ್ಟಮೂರ್ತಿಯಂ ಕಾಣದೆ  ಗತಿಗಟ್ಟು ಫಣಿಹರನಂ ನೋಡುತ್ತಾ  ಬರುವ ಸಮಯದೋಳ್ ಸುಂದರನಾದ ನಂದೀಶನಂ ಕಂಡು  ಪರಿವಾರವು ಚದರಿದ ಮರಿಯಾನೆಯಂತೆ ನರಳುವುದಲ್ಲಾ. ಆ ದಕ್ಷಾರಿಯಾದ ವಿರೂಪಾಕ್ಷನಂ ಕಾಣುವುದೇ ದುರ‌್ಲಭವಾಗಿರುವುದಲ್ಲ  ಅಯ್ಯೋ ಶಿವಶಿವ ಏನು ಮಾಡಲಿ  ಆಹಾ ಪ್ರಾಣ ಮನೋಹರಿ ಚಿಂತೆಯಂ ಮಾಡದೆ ಬರುವಳಾಗು  ಇಲ್ಲಿ ಮುಂದೆ ಯಾರೋ ಇರುವಂತೆ ಶಬ್ದವು ಕೇಳಿ ಬರುವುದು ಮೆಲ್ಲನೆ ಹೋಗೋಣ ಬಾರೆ ಫುಲ್ಲಲೋಚನೆ.

ಪದ

ಮುದವಾಂತು ನೋಡು  ನೋಡು ಬೇಗಾ ಸಾಮಜ
ಯಾನೆ  ಮನಸಿಗೀಗ ಆನಂದಮಾಗಿ  ಮೆರೆಯುತಿರ್ಪುದು ॥
ವನಿತೆ ಇದರ ಸೊಬಗನೆಂತು  ವರ್ಣಿಪೆ ನಾನು
ನಲ್ಲೆಯರು ಮಲ್ಲಿಗೆ  ಬಿರಿದ ಮೊಗ್ಗುಗಳೆಲ್ಲವ  ಬಿಡದೆ
ಬಿಡಿಸಿ  ಮುಡಿಗೆ ಮುಡಿಸಿ  ಸಡಗರದಿಂದಲಿ ॥

ಗಿರಿಜೆ: ಆಹಾ ಸಖಿಯರೇ, ಈ ವನವು ಎಷ್ಟು ಮನೋಹರವಾಗಿ ಮರುಗ ಮಲ್ಲಿಗೆ  ಜಾಜಿ ಪರಿಮಳ ಪಾರಿಜಾತ  ಸೇವಂತಿಗೆ  ಪುಷ್ಪಗಳು ನೇತ್ರಕ್ಕೆ ಎಷ್ಟು ಆನಂದವಾಗಿರುವುವು. ನೋಡಿದಿರಾ ಗೆಳತಿಯರೇ.

ಪದ

ಯಾರಮ್ಮ ತಾಯೇ  ಘೋರಕಾನನದೊಳು  ಬರು
ವರೆ ಜನನೀ  ಓರ‌್ವಳೆ ಬರುವರೇ  ಕಾರಣವೇನಿದು
ಸಾರಸನೇತ್ರಿಯೆ  ಪೆಸರೇನು  ಪೇಳಮ್ಮ  ಮಾತೆಯೇ
ನಿನ್ನನು  ಪೆತ್ತವರ‌್ಯಾರಮ್ಮ  ಅತಿಶಯದಿಂದಲಿ
ಮತಿಯುತೆ ಪೇಳಮ್ಮಾ ॥

ಮನ್ಮಥ: ಅಮ್ಮಯ್ಯ ತಾಯೆ ನೀವು ಯಾರು ನಿಮ್ಮ ಹೆಸರೇನು  ನಿಮ್ಮ ಜನನೀ ಜನಕರ‌್ಯಾರು  ತಾವು ಈ ಘೋರ ಕಾನದಲ್ಲಿ ಓರ‌್ವಳೆ ಇರಲು ಕಾರಣವೇನು. ನಿಮ್ಮ ವಿಚಾರವನ್ನು ಸವಿಸ್ತಾರವಾಗಿ  ಬಾಲನಾದ ಎನಗೆ ತಿಳಿಸುವರಾಗಿರಿ ಲೋಕಪ್ರಖ್ಯಾತೆ.

ಗಿರಿಜೆ: ಆಹಾ ತರಳನೇ ಹಿಮವಂತನ ರಾಣಿಯಾದ  ಮೇನಕೆಯ ಉದರದೋಳ್ ಪುಟ್ಟಿದವಳು ನಾನು  ನನ್ನನ್ನು ಗಿರಿಜಾತೆ ಎಂದು ಕರೆಯುವರು. ಪರಶಿವನಂ ಕುರಿತು ತಪಸ್ಸು ಮಾಡಿ ಮೆಚ್ಚಿಸಿ  ಪರಿಣಯವಾಗಬೇಕಾದ ಕಾರಣ ಬಂದಿರುವೆನೋ ತರಳನೆ.

ಮನ್ಮಥ: ನಮೋನ್ನಮೋ ತಾಯೇ ಗಿರಿಜಾ ಮಾತೆ  ಕಾಳಿ ಮಹಂಕಾಳಿ  ಮಹಂ ಮಾಯೆ  ದಾನವ ನಾಶಿನಿ  ದುರಿತ ವಿನಾಶಿನಿ  ಸುಗುಣವನ್ನು ಪೋಷಣೆ ಮಾಡುವ ತಾಯೆ  ಪರಮೇಶ್ವರನ ಪತ್ನಿಯಾದ ಗೌರಿದೇವಿಯೇ ದಕ್ಷನ ಯಜ್ಞದಲ್ಲಿ ಅಪಮಾನವಾದ ಕಾರಣ ಅದೇ ಅಗ್ನಿಕೊಂಡದಲ್ಲಿ ಬಿದ್ದು  ದಗ್ಧವಾದರೆಂಬ ವರ್ತಮಾನವನ್ನು  ನಂದೀಶ್ವರನಿಂದ ಕೇಳಿ ಜಗದ್ವ್ಯಾಪಾರವಂ ತ್ಯಜಿಸಿ  ನಂದೀಶ ಮೊದಲಾಗಿ ಮಹಾ ಮುನಿಗಳಂ ಕೂಡಿ  ತಪಸ್ಸಿಗೆ ಕುಳಿತಿರುವರಂತೆ ತಾಯೆ  ಅಮ್ಮಯ್ಯ ದುರುಳರಾದ ಕಾರಣದಿ ರಕ್ಕಸರು  ದೇವತೆಗಳಂ ಬಹುತರವಾಗಿ ಹಿಂಸೆಗೊಳಿಸಲಾಗಿ  ಅವರು ಆ ಹಿಂಸೆಯನ್ನು ತಡೆಯಲಾರದೆ  ಹರಿಬ್ರಹ್ಮೇಂದ್ರಾದಿಗಳಾಗಿ ನನ್ನನ್ನು ಕರೆಸಿ ಆ ಪರಮೇಶ್ವರನ ಮೇಲೆ ನಿನ್ನ ಪುಷ್ಪ  ಬಾಣವನ್ನು ಬಿಟ್ಟರೆ ಆ ಜಗದೀಶನು ಎಚ್ಚತ್ತು ಗಿರಿಜಾ ಕಲ್ಯಾಣವಂ ಮಾಡಿಕೊಳ್ಳುವನೆಂದು  ಹೇಳಿ ಕಳುಹಿಸಿರುವರು ಆ ಈಶನಲ್ಲಿಗೆ ಹೋಗಲು ಭಯವಾಗುವುದು  ಈಗ ನಿಮ್ಮ ದರ್ಶನದಿಂದ  ಬಡವನಿಗೆ ಭಾಗ್ಯದ ನಿಧಿಯು ದೊರೆತಂತೆ ಆಗಿರುವದು  ಇದಕ್ಕೆ ಹ್ಯಾಗೆ ಮಾಡಲಮ್ಮ ತಾಯೆ  ಕರುಣದೋಳ್ ಕಾಯೆ.

ಗಿರಿಜೆ: ಆಹಾ ತರಳನಾದ ಮದನನೇ  ಎನ್ನ ಪುಷ್ಪಕದ ಮರೆಯಲ್ಲಿ ಬಂದರೆ  ನಿನಗೆ ಜಯವಾಗುವುದು. ನೀನು ದಿವಿಜರಿಗೆ ಕೊಟ್ಟ ಭಾಷೆಯು ಸಫಲವಾಗುವದು. ಪನ್ನಗಾಭರಣನ ಮೇಲೆ ನಿನ್ನ ಪುಷ್ಪಬಾಣವನ್ನು ಬಿಟ್ಟರೆ  ನಿನ್ನ ಕಾರ‌್ಯವು ಜಯವಾಗುವುದು. ಭೀತಿಪಡಬೇಡ ಎನ್ನಂ ನಂಬಿ ಬಾರಯ್ಯ ಮದನನೇ  ನಿನಗ್ಯಾಕೆ ಯೋಚನೆ.

ಮನ್ಮಥ: ನಮೋನ್ನಮೋ ಗಿರಿಜಾ ಮಾತೆ  ನಿಮ್ಮ ಶೃತಿಗೆ ಅತ್ಯಾನಂದವಾಯಿತು  ಅತಿ ಜಾಗ್ರತೆ ಇಂದ ಆ ದುಷ್ಟರಾಕ್ಷಸರಂ ಸದೆ ಬಡಿದು  ಜಯವಂ ಪಡೆದು ಈ ಪೊಡವಿಯೋಳ್ ಕೀರ್ತಿಯಂ ಪಡೆಯೈ  ಪರಬ್ರಹ್ಮಮೂರ್ತಿ ಎಂದು ಬಿರುದಾಂಕಿತವಂ ವಹಿಸಿ ನಮ್ಮ ದೇವತಾ ನಿಕರಕ್ಕೆ ಆನಂದವಂ ಹೊಂದಿಸಬೇಕೆಂದು ಬಂದಿರುವ ನಿನ್ನ ಕಂದನಾದ ಎನಗೆ ಇಂದು ನೀನು ಅತ್ಯಾನಂದದಿಂದ  ನಿತ್ಯಾನಂದ ಮಾಡಬೇಕೌ ತ್ರಿಲೋಕ ಜನನಿ  ಲೋಕಪಾವನಿ.

ಗಿರಿಜೆ: ಆಹ ಮದನನೇ ನೀನು ಹೋದ ಕಾರ‌್ಯ  ಜಯವಾಗಲಿ ಎಂಬುದಾಗಿ  ಆಶೀರ್ವದಿಸಿರುವೆನು ಹೊರಡುವನಾಗು.

ಮನ್ಮಥ: ಅಮ್ಮಾ ತಾಯೆ ತಮ್ಮ ಆಶೀರ್ವಾದ ಕೃಪೆ ಇಂದ  ಹೊರಡುತ್ತೇನೆ ತಾಯೆ  ಕರುಣದೊಳ್ ಕಾಯೆ.

(ಈಶ್ವರನು ತಪಸ್ಸು ಮಾಡುತ್ತಿರುವುದು)

(ಮನ್ಮಥ ರತಿ ಪ್ರವೇಶ)

ಪದ

ನಡೆದಾನು ಆಗಲೇ  ಹರನ ಮಠಕೆ  ಪಂಚಶರನು
ಕೀರವಾಜಿಬದ್ಧ ಹೊರಟಾನು ಬೇಗಾ  ಕೇಳ್ಬೇಗಾ ॥

ಮನ್ಮಥ: ಆಹಾ ಕೋಮಲಾಂಗಿಯಳಾದ ರತಿಯೇ, ನಾನು ವಾಯು ಸಹಾಯದಿಂದ  ರಥದ ಮೇಲೆ ಕುಳಿತು ಜಾಗ್ರತೆಯಾಗಿ ಹೋಗಿ ಆ ಶಿವನನ್ನು ಜೈಸಿದರೆ ಆ ದೇವತೆಗಳಿಗೆ ಸಹಾಯ ಮಾಡಿದಂತಾಗುತ್ತದೆ. ಇಗೋ ಕಬ್ಬಿನ ಬಿಲ್ಲು ಪುಷ್ಪ ಚಾಪವಂ ಧರಿಸುವೆ ರಮಣಿ  ಇಗೋ ನೋಡು ಬಾಣ ಪ್ರಯೋಗವನ್ನು ಮಾಡುವೆನೇ ರಮಣಿ  ಸದ್ಗುಣಾ ಭರಣಿ.

ಪದ

ವರ ನಂದೀಶ್ವರನಾಜ್ಞೆ ॥ಎಂದು ತಾನರಿದಿತ್ತ  ಮ
ನದಲಿ ನಡೆತಂದು  ನಂದಿಗೊಂದಿಸುತಾ ॥ವಂದಿಸುತಾ ॥

ಮನ್ಮಥನ: ಹೇ ರಮಣಿ ನನ್ನ ಬಾಣವು ನಡೆಯದೇ ಇರುವ ವಿಚಾರವು  ಈಗ ನನಗೆ ಗೊತ್ತಾಯಿತು. ಆ ನಂದೀಶ್ವರನ ಮಹತ್ತಿನಿಂದ ಈ ಕಾರ‌್ಯ ನಡೆದಿರುತ್ತದೆ. ನಾನು ಆ ದ್ವಿತೀಯ ಶಂಭುವನ್ನು ಧ್ಯಾನ ಮಾಡಿದರೆ  ನಮ್ಮ ಕಾರ‌್ಯವೆಲ್ಲ ಜಯವಾಗುವದಕ್ಕೆ ಅನುಮಾನವಿಲ್ಲ. ಜಾಗ್ರತೆಯಾಗಿ ಆ ನಂದೀಶ್ವರನನ್ನು ಕಾಣಬೇಕಾಗಿರುವ ಪ್ರಯುಕ್ತ ಹೋಗೋಣ ನಡಿಯೇ ಕಾಂತೆ ಮತಿಗುಣವಂತೆ॥

 

(ನಂದೀಶ್ವರ ಬರುವುದು)

ಮನ್ಮಥ: ಸ್ವಾಮಿ ನಂದೀಶ್ವರನೇ  ನಮಸ್ಕರಿಸುವೆನು  ನನ್ನನ್ನು ಉದ್ದಾರ ಮಾಡಬೇಕು.

ನಂದೀಶ್ವರ: ಎಲೈ ಮದನನೇ ನಿನಗೆ ಮಂಗಳವಾಗಲಿ  ನೀನು ಬಂದ ಕಾರಣವೇನು ಹೇಳು.

ರತಿ: ಸ್ವಾಮಿ ನಂದೀಶ್ವರರೇ ನಿಮಗೆ ನಮಸ್ಕಾರ ಮಾಡಿರುತ್ತೇನೆ. ನಮ್ಮ ಕೊರತೆಯನ್ನು ಪರಿಹರಿಸೈ ಈಶ  ದುರಿತ ವಿನಾಶ.

ನಂದೀಶ್ವರ: ನಿನಗೆ ಮಂಗಳವಾಗಲೇ ರತಿ  ಮುಂದೇನು ಗತಿ.

ಮನ್ಮಥ: ಸ್ವಾಮಿ ದ್ವಿತೀಯ ಶಂಭುವೇ ದೇವತೆಗಳೆಲ್ಲಾ ತಾರಕಾದಿ ದೈತ್ಯರ ಬಾಧೆಯನ್ನು ತಾಳಲಾರದೆ ಹರಿ ಬ್ರಹ್ಮೇಂದ್ರಾದಿಗಳಂ ಕೂಡಿಕೊಂಡು ಹೋಗಿ ಜಗದೀಶ್ವರನಿಗೆ ಮೊರೆ ಇಡಲಾಗಿ ಜಗದೀಶನು ಗಿರಿಜಾಕಲ್ಯಾಣವನ್ನು ಮಾಡಿಕೊಂಡು ಕುಮಾರನಂ ಪಡೆದು ನಾಶಪಡಿಸುತ್ತೇನೆಂದು ಹೇಳಿ ಮರೆಯಾದರಂತೆ. ಆದ್ದರಿಂದ ಗಿರಿಜೆಯನ್ನು ಸ್ವಾಮಿಯ ಲಗ್ನವಾಗುವಂತೆ ಮಾಡಬೇಕೆಂಬುದಾಗಿ  ಆ ಹರಿಬ್ರಹ್ಮೇಂದ್ರಾದಿಗಳ ಅಪ್ಪಣೆಯಾಗಿರುವುದರಿಂದ ನಾನು ಬಂದಿರುವೆನೈ ಸ್ವಾಮಿ  ಭಕ್ತಜನಪ್ರೇಮಿ.

ರಾಗಪುನ್ನಾಗ

ಮುಂದೆ ದಾರಿ ಯಾವುದೆನಗೆ ನಂದೀಶಾ
ಈಶಾಬೇಗದೊಳು ತೋರಿಸೈ ನಂದೀಶ॥

ಮನ್ಮಥ: ನಮೋನ್ನಮೋ ನಂದೀಶ್ವರರೆ ನಾನು ಇಲ್ಲಿನವರೆವಿಗೂ ಎಷ್ಟೋ ಧೈರ‌್ಯದಿಂದ ಬಂದೆನು ಆದರೆ ಇನ್ನು ಮುಂದೆ ಹೋಗುವುದಕ್ಕೆ ದಾರಿಯೇ ತೋರುವದಿಲ್ಲವಲ್ಲಾ. ಇಲ್ಲಿನ ವಿಚಾರವೆಲ್ಲವೂ  ತಮಗೊಬ್ಬರಿಗೆ ಗೊತ್ತೇಹೊರತು ಮತ್ತೆ ಯಾರಿಗೂ ತಿಳಿಯುವುದಿಲ್ಲ ಆದ ಕಾರಣ ದಯವಿಟ್ಟು  ನನಗೆ ಈ ವಿಚಾರವೆಲ್ಲವನ್ನು ತಿಳಿಸಿ ಅಪ್ಪಣೆ ಕೊಟ್ಟು ಕಳುಹಿಸಬೇಕೈ ದೇವಾ ಮಹಾನುಭಾವ.

ಪದ

ಸುರರ ಕಾರ‌್ಯಕ್ಕೆಂದು ನಾನು ನಂದೀಶ ಈಶಾ ಬಂದು
ಶರವನೆಳೆಯೊ ಮೃಗಗಳೆಲ್ಲಾ ನಂದೀಶ॥

ಮನ್ಮಥ: ಸ್ವಾಮಿ ಜಗದ್ಪರಿಪಾಲಕನೇನನಗಿಷ್ಟು ಭಯ ಉಂಟಾಗಲು ಒಂದು ಕಾರಣವಾಯಿತು ಏನೆಂದರೆ ನನ್ನ ಬಾಣವನ್ನು ಯಾರ ಮೇಲೆ ತೊಟ್ಟಾಗ್ಯಾದರೂ ಸರಿಯಾಗಿ ನಡೆದರೆ ಅವರಂ ಜೈಸುವುದೇ ನಿಶ್ಚಯವು ಇಂಥಾ ಬಾಣವನ್ನು ಪರೀಕ್ಷಿಸಬೇಕೆಂದು ದೇವತೆಗಳ ಕಾರ‌್ಯಕ್ಕಾಗಿ ಬಂದು ಒಂದು ಪಕ್ಷಿಯ ಮೇಲೆ ಬಿಡಲಾಗಿ ಅದು ನಡೆಯದೇ ಹೋದ್ದರಿಂದ ನನಗೆ ಬಹಳ ದಿಗಿಲು ಉಂಟಾಗಿರುವುದು. ಇದಕ್ಕೆ ಮುಂದೇನು ಗತಿಯೈ ದೇವಾ ಮಹಾನುಭಾವ.

ಪದ

ಎನಗಿಂತ ಅಧಿಕ ಪ್ರಿಯನು ಪುಷ್ಪಚಾಪ ಬೇಗಾ
ನನ್ನಿಂದ ಪೋಗಿ ಜೈಸೋ ಪುಷ್ಪಚಾಪ॥

ನಂದೀಶ: ಅಯ್ಯ ಮನ್ಮಥನೇ ನೀನು ಆ ಪರಮೇಶ್ವರನಿಗೆ ಎನಗಿಂತಲೂ ಅತಿ ಪ್ರೇಮದ ಭಕ್ತನು ಆ ಸ್ವಾಮಿಯು ತಪಸ್ಸಿಗೆ ಕುಳಿತುಕೊಳ್ಳುವಾಗ್ಯೆ ಮನ್ಮಥನು ಬಂದರೆ ಒಳಗೆ ಬಿಡಬಹುದೆಂಬುದಾಗಿ ಅಪ್ಪಣೆಯನ್ನು ಮಾಡಿದ್ದರು. ಆದ್ದರಿಂದ ನೀನು ಒಳಗೆ ಹೋಗಿ ನಿನ್ನ ಕಾರ‌್ಯವನ್ನು ನೆರವೇರಿಸಿಕೊಳ್ಳುವ ನಾಗಯ್ಯ ಮದನನೇ ಇದಕ್ಯಾಕೆ ಯೋಚನೆ.

ಅಯ್ಯ ಮದನನೇ ನಿನಗೆಂದಿಗೂ ಅಪಜಯವಾಗಲಾರದು. ಆ ಪರಮೇಶ್ವರನ ಮೇಲೆ
ನಿನ್ನ ಪುಷ್ಪಬಾಣವು ನಡೆಯುವುದು. ಹೋಗುವಂಥವನಾಗಯ್ಯ ಮದನ ನಿನಗ್ಯಾಕೆ ಈ
ಹದನ.

ಮನ್ಮಥ: ಹೇ ಕೋಮಲಾಂಗಿಯಳಾದ ರತಿಯೇ ಕೇಳು ನಂದೀಶ್ವರನ ಅಪ್ಪಣೆಯಾಯಿತು. ಒಳಗೆ ಪ್ರವೇಶಿಸಿ ಆ ಜಗದೀಶನ ದರ್ಶನ ಮಾಡೋಣ. ಹೆದರದೆ ಧೈರ‌್ಯವಾಗಿ ನಡೆಯೇ ರಮಣೀ ಮಂಜುಳಕರವಾಣಿ.

ಮನ್ಮಥ: ಎಲೈ ರತಿಯೇ ಇತ್ತ ನೋಡು ಈ ಪರಮಾತ್ಮನು ಜಟಾಮಕುಟಧಾರಿಯಾಗಿ ಚಿನ್ಮುದ್ರೆಯಂ ಧರಿಸಿಕೊಂಡು ಅಂತರ‌್ಮುಖನಾಗಿ ಕುಳಿತು ಸನಕಸನಂದನ ಸನತ್‌ಜಾತರೆಂಬ ರುಷಿಗಳಿಗೆ ತತ್ವೋಪದೇಶವಂ ಮಾಡುತ್ತಾ ಇರುವ ಪರಮಾತ್ಮನ ದರುಶನವಾದ ಮಾತ್ರಕ್ಕೆ ದಿಕ್ಯಾವುದು ದೆಸೆ ಯಾವುದು ಆಕಾಶ ಯಾವುದು ಭೂಮಿ ಯಾವುದು ಎಂದು ದಿಗಿಲುಂಟಾಗಿ ಕೈಕಾಲು ನಡುಗಿ ಕಣ್ಣು ಕತ್ತಲಿಟ್ಟು ಬರುತ್ತಿದೆ ಹರಿಹರ ಪರಮೇಶ್ವರ ನೀನೇ ಗತಿ ಈಶ ಜಗದೀಶ.

 

(ಮನ್ನಥನ ಮೂರ್ಛೆ)

ರತಿ: ಅಯ್ಯೋ ಹರಹರ ಮುಂದೇನುಗತಿ ಅಯ್ಯೋ ಕಾಂತ ಈ ಸ್ವಾಮಿಯ ದರ್ಶನ ಮಾತ್ರದಲ್ಲಿಯೇ ಮೂರ್ಛೆಯಾಗಿ ಮಲಗಿದಿರಿ ಅಯ್ಯೋ ರಮಣ. ಇನ್ಯಾವ ರೀತಿಯಲ್ಲಿ ಜಯವಾಗುವುದೊ ಫಾಲಾಕ್ಷ.

ಪದ

ಹರಹರ ಮದನನು ಧರೆಯೊಳು ಪೆಸರಾಂತು ದುರುಳ
ಕಾರ‌್ಯವ ಗೈದೆ॥ತೆರನೇನಾಗುವುದೊ॥

ರತಿ: ಅಯ್ಯೋ ಹರಹರ ಶಂಕರ ಈ ಜಗತ್ತಿನಲ್ಲಿ ನನ್ನ ಕಾಂತನು ಜಯಶಾಲಿ ಯನ್ನುವ ಕೀರ್ತಿಯನ್ನು ಪಡೆದು ಆ ಸ್ವಾಮಿಗೆ ಭಕ್ತರಾಗಿ ದೇವತೆಗಳ ಕಾರ‌್ಯಕ್ಕಾಗಿ ಸ್ವಾಮಿದ್ರೋಹಾಲೋಚನೆಯಂ ಮಾಡಿಕೊಂಡು ಬಂದು ದರ್ಶನವಾದ ಮಾತ್ರಕ್ಕೆ ಈ ಗತಿಯಾಯಿತಲ್ಲ ಇನ್ನು ಬಾಣ ಪ್ರಯೋಗ ಮಾಡಿದರೆ ಏನಾಗುವುದೆಂದು ಭಾವಿಸಲೊ ಶಿವನೆ ಇಂದುಧರನೇ.

ಪದ

ಎಂತು ಪೇಳಿದರೆನ್ನ ಕಾಂತ ಮಾತನು ಮೀರಿ ಪಂ
ಥಾದಿ ನಡೆತಂದ ಎಂತಾಗುತಿಹುದೋ॥

ರತಿ: ಅಯ್ಯೋ ವಿಧಿಯೇ ನಾನು ನನ್ನ ಪತಿಗೆ ಎಷ್ಟೋ ವಿಧವಾಗಿ ಹೇಳಿದಾಗ್ಯು ಲಕ್ಷ್ಯವಿಡದೆ ಪಂಥವನ್ನು ಮಾಡಿಕೊಂಡು ಬಂದಿರುತ್ತಾರಲ್ಲದೆ ಸ್ವಾಮಿಯಲ್ಲಿ ಜಯವೆನ್ನುವ ವಿಚಾರವು ನನಗೆ ಬೇರೆ ತೋರುವುದಿಲ್ಲಮುಂದೇನು ಮಾಡಲಿ ಪರಮೇಶ್ವರನೇ. ಮುಂದೇನು ಯೋಚನೆ.

ಪದ

ಇಂತಪ್ಪ ಶಿವನೊಳು ಎಂತು ಜಯವಾಗುವುದು
ಕಂತುವಿಗೆನ್ನುತ॥ಚಿಂತೆಯ ಹರಿಸು॥ಅಸಮನೇತ್ರ
ನು ಇವನು ಪುನಹ ಬದುಕಿದರಿನ್ನ ಹೊಸದಾಗಿ ಜ
ನಿಸಿದ ಕುಸುಮನಾಯಕನು॥

ರತಿ: ಹರಹರ ಪರಶಿವಮೂರ್ತಿಯಾದ ಚಂದ್ರಶೇಖರನಲ್ಲಿ ಜಯವನ್ನು ಪಡೆಯುತ್ತೇನೆಂದು ಬಂದಿರುವ ಯನ್ನ ಕಾಂತನ ಮೌಡ್ಯಭಾವವನ್ನು ಎಷ್ಟೆಂದು ಹೇಳಲಿ ಆದರೆ ಈ ಕಾರ‌್ಯವು ಇವರಿಂದ ಖಂಡಿತವಾಗಿ ನಡೆಯುವುದಿಲ್ಲ ಈ ಸ್ವಾಮಿಯ ಮೇಲೆ ಬಾಣ ಪ್ರಯೋಗವಂ ಮಾಡಿ ನನ್ನ ಪತಿಯು ಬದುಕಿದರೆ ಪುನಹ ಅವರ ತಾಯಿಯ ಗರ್ಭದಲ್ಲಿ ಹೊಸದಾಗಿ ಜನಿಸಿದಂತಾಗುವುದು ಮುಂದೇನು ಶಿವನೇ ನೀಂ ಪ್ರತ್ಯಕ್ಷನೆ.

ಪದ
ಕುಸುಮಕಾರ್ಮುಕನಾಗ॥ಮೂರ್ಛೆ ತಿಳಿದು ತನ್ನ
ಎಸೆವ ಚಾಪವ ಕೊಂಡು ಮಸೆದಾ ಬಾಣಗಳ॥

ಮನ್ಮಥ: ಕೋಮಲಾಂಗಿಯಾದ ರತಿಯೇ ಕೇಳು. ಸ್ವಾಮಿಯ ದರ್ಶನವಾದ ಮಾತ್ರದಲ್ಲಿಯೇ ಸ್ವಲ್ಪ ಮೈಮರೆತಂತೆ ಆಯಿತು. ಇಷ್ಟಕ್ಕೆ ನೀನು ದುಃಖಪಡಬೇಕೆ ಇಕೋ ಬಾಣಗಳನ್ನು ತೆಗೆದುಕೊಂಡು ಧನುಸ್ಸಿಗೆ ಕೂಡಿಸಿ ಸ್ವಾಮಿಯನ್ನು ಜೈಸುವ ಪ್ರಯತ್ನವನ್ನು ಮಾಡುತ್ತೇನೆ. ನೀನು ಎಂದಿಗೂ ನೋಡದವಳಾದ್ದರಿಂದ ಈಗ ನೀನು ನೋಡಿ ಸಂತೋಷಪಡುವಳಾಗೆ ಕಾಂತೆ ಮತಿಗುಣವಂತೆ.

ಪದ

ಮರಗಾಳ ಮರೆಗೊಂಡು ಧರೆಗೆ ಮಂಡಿಯನೂರಿ
ಶರಕೆಲಸವ ಮಾಡುತ ದುರುಳತನದೊಳು॥

ಮನ್ಮಥ: ಕೋಮಲಾಂಗಿಯೇ ಕೇಳು ಏಕಾಏಕಿಯಾಗಿ ಸ್ವಾಮಿಯ ಮುಂದೆ ನಿಂತರೆ ನಾನು ಉಳಿಯುವುದಿಲ್ಲ ಆದ್ದರಿಂದ ಒಂದು ಮರದ ಮರೆಯಲ್ಲಿ ನಿಂತುಕೊಂಡು ಬಾಣ ಸಂಧಾನವನ್ನು ಮಾಡಿ ಗುರಿ ಇಟ್ಟು ಆ ಸ್ವಾಮಿಯ ಮೇಲೆ ಬಿಡುತ್ತೇನೆ. ನೀನು ಮಾತ್ರ ಹೆದರಬೇಡ ಧೈರ‌್ಯವಾಗಿರುವಳಾಗೆ ನಲ್ಲೆ ನೀ ಎಲ್ಲಾ ಬಲ್ಲೆ.

ಪದ

ಇರದೆ ಸನ್ಮೋಹನಾಸ್ತ್ರಗಳನು ಹೊಡೆಯುವೆ
ನು ವಿಶ್ವರಿಸೆ ವಾಮಾಕ್ಷ ಸುರರು ಕಳುಹಿದರು॥

ಮನ್ಮಥ: ಹರಹರ ಈ ಸನ್ಮೋಹನಾಸ್ತ್ರಕ್ಕೆ ಎಂದಿಗೂ ಅಪಜಯವಿಲ್ಲವು ಆದರೆ ಈ ನನ್ನ ಬಾಣದಲ್ಲಿ ಪರಶಿವನು ಮಾಡುವ ತಪಸ್ಸು ವಿಮುಖವಾಗದೆ ಎಂದಿಗೂ ಇರಲಾರದು. ದೇವತೆಗಳಿಗೆ ಸುಖವಾಗುವುದರಲ್ಲಿ ಏನೇನು ಅನುಮಾನವಿಲ್ಲ. ನಾನು ಬಿಡುವ ಬಾಣಕ್ಕೆ ಕೀರ್ತಿ ಬರುವುದೇ ರಮಣಿ ಸದ್ಗುಣಾಭರಣಿ.

ಭಾಮಿನಿ

ಪರಶಿವ ದ್ರೋಹದೊಳಗುಳಿಯುವ ತೆರನ ಕಾಣ
ದೆಂತು ಪೋಗಲಿ ಪರಮ ಚಿನ್ಮಯ ಮೂರ್ತಿ॥
ದರ್ಶನವಾಯ್ತದರಿಂದ ಸುರರು ಧನ್ಯರಾದರು
ಯನ್ನ ಪೋಲಲರರೇ ತಾ ಸಾಕು ಕೃತಾರ್ಥನೆನುತಲಿ
ಭರಸೆಳೆಯುತಾ ಕರ್ಣಪೂರಕೆ ಬಿಟ್ಟನಾ ಶರವ॥

ಮನ್ಮಥ: ಶಿವ ಶಿವ ಫಾಲಾಕ್ಷ ಮೃತ್ಯಂಜಯ ಆ ಸ್ವಾಮಿಯನ್ನು ನೋಡಿದ ಮಾತ್ರಕ್ಕೆ ನಾನು ಧನ್ಯನಾದೆನು. ಆದರೆ ಶಿವದ್ವೇಷದಲ್ಲಿ ಬೇರೆ ನಾನು ಉಳಿಯುವುದಿಲ್ಲ. ಸ್ವಾಮಿ ದ್ರೋಹಾಲೋಚನೆ ಮಾಡಿದ್ದರಿಂದ  ನಾನು ನಾಶವಾಗುವುದೇನೋ ನಿಶ್ಚಯ ನನ್ನ ಶರೀರ ಹೋದರು ಕೀರ್ತಿ ಬರುವಂತೆ ಯೋಚಿಸುತ್ತೇನೆ. ದೇವತೆಗಳು ಧನ್ಯರಾದರೆ ಸಾಕು. ಈ ದಿವಸ ನನ್ನ ಶರೀರಾಪೇಕ್ಷೆಯನ್ನು ಬಿಟ್ಟಿರುತ್ತೇನೆ ಪರಮೇಶ್ವರನೇ ಇಗೋ ನಿಮ್ಮ ಪಾದಾರವಿಂದಕ್ಕೆ ಬಾಣವಂ ಸಮರ್ಪಿಸುವೆನು. ಭಕ್ತನಾದ ಎನ್ನ ಬಾಣವಂ ಸ್ವೀಕರಿಸುವಿರಾಗಿ ದೇವನೆ ಇದೇ ನನ್ನ ವಂದನೆ.

 

(ಶಿವನ ತಪೋಭಂಗ)

(ಮನ್ಮಥನು ದಗ್ದವಾಗುವನು)

(ಹರಿಬ್ರಹ್ಮೇಂದ್ರಾದಿಗಳು ಈಶ್ವರನನ್ನು ಸ್ತುತಿಸುವರು)

ದೇವ ದೇವನೆ ಪಾಲಿಸೋ ಮಹದೇವನೇ ದೇವ
ದೇವನೆ ಪಾಲಿಸೋ॥ತಾರಕ ಬಾಧೆಯ ಸೈರಿಸ
ಲಾರೆವು ಸೇರಿ ಭಜಿಪೆ ನಿನ್ನ ತೋರು ನಿನ್ನ
ರೂಪ॥ದೇವದೇವನೆ ಪಾಲಿಸೋ॥

ವಿಷ್ಣು: ಜಯಜಯಸ್ವಾಮಿ ಭಕ್ತರಿಗೆ ಇಷ್ಟಾರ್ಥವನ್ನು ಕೊಡುವಂಥ ಪರಮಾತ್ಮನೆ ಹಿಂದೆ ಆ ತಾರಕಾದಿ ರಕ್ಕಸರ ಬಾಧೆಯನ್ನು ತಾಳಲಾರದೆ ದೇವತೆಗಳೆಲ್ಲರೂ ನಿಮ್ಮ ಧ್ಯಾನ ಮಾಡಿದ್ದಕ್ಕೆ ಭಕ್ತರ ಮೇಲೆ ದಯವಿಟ್ಟು ಅಭಯ ಕೊಟ್ಟಿದ್ದನ್ನು ಈಗ ನೀವು ಮರೆತಂತೆ ತೋರುವುದು ದೀನರಾದ ನಮ್ಮಗಳನ್ನು ಕಾಪಾಡಿ ಉದ್ದಾರ ಮಾಡಬೇಕೈ ಈಶಾ ಜಗದೀಶ.

ಪದ

ಗುಹನ ಪುಟ್ಟಿಸಿ ನಿಮ್ಮ ಸಲಹಿ ತಾರಕನ ಕೊಲ್ಲಿಸುವೇ॥
ವಿಹಿತದೊಳಿಂದು ನೀವದ ಮರೆಯಲು ಬಹುದೇ
ಕಾಲಕಾಲನೇ ನೀನು ಜಾಲಾವಗೈಯದೇ ಲೀಲಾ
ಲೋಹಿತನಾಗಿ ಪಾಲಿಸು ಎನುತಲಿ॥ದೇವ॥

ಇಂದ್ರ: ಆಹಾ ದೇವ ದೇವನೇ ಗಿರಿಜಾ ಕಲ್ಯಾಣ ಮಾಡಿಕೊಂಡು ಕುಮಾರಸ್ವಾಮಿಯನ್ನು ಪಡೆದು ಆ ದೈತ್ಯರನ್ನು ನಾಶಮಾಡಿಸಿ ನಮ್ಮನ್ನು ಕಾಪಾಡುತ್ತೇವೆಂದು ತಮ್ಮ ಅಪ್ಪಣೆಯಾಗಿತ್ತು. ಆಗ ಕೊಟ್ಟ ಅಭಯ ಪ್ರದಾನವನ್ನು ಈಗ ನಡೆಸದೆ ಹೋದರೆ ನಾವುಗಳು ಬದುಕುವ ಮಾರ್ಗವೇ ಇಲ್ಲ. ಆದ್ದರಿಂದ ಕುಮಾರೋತ್ಪತ್ತಿಯಂ ಮಾಡಿ ಆ ನೀಚರಂ ಕೊಲ್ಲಿಸಿ ನಮ್ಮಗಳಂ ರಕ್ಷಿಸಬಾರದೇ ಶಂಕರಾ ಭಕ್ತರ ಹಿತಕರ.