(ಶಿವನು ಪ್ರತ್ಯಕ್ಷ)

ಈಶ್ವರ: ಎಲೈ ಅಗ್ನಿಯೇ ಮುಂತಾದ ದೇವತೆಗಳಿರಾ ನನ್ನನ್ನು ಧ್ಯಾನಿಸಲು ಕಾರಣವೇನು ಅದನ್ನು ತಿಳಿಸಿದರೆ ನಿಮ್ಮ ಕಷ್ಟವನ್ನು ಪರಿಹರಿಸಿಕೊಡುತ್ತೇನೆ ಜಾಗ್ರತೆ ತಿಳಿಸುವರಾಗಿರಿ.

ಅಗ್ನಿ: ಹೇ ದೇವಾ ನಿನ್ನ ವೀರ‌್ಯವನ್ನು ಧರಿಸಿದ ಮಾತ್ರದಿಂದಲೆ ಪುರುಷ ಗರ್ಭಗಳಾಗಿ ಅನೇಕ ಕಷ್ಟಗಳನ್ನು ಅನುಭವಿಸುತ್ತಿರುವೆವು ಕರುಣವಿಟ್ಟು ಪರಿಹರಿಸೈ ಈಶ ರಜತಾದ್ರಿವಾಸ.

ಈಶ್ವರ: ಅಯ್ಯ ಅಗ್ನಿಯೇ ಮೊದಲಾದ ದೇವತೆಗಳಿರಾ ಕೇಳಿರಿ ಈ ಮೇರುಗಿರಿ ಪೊದೆಯೊಳಗಿರುವ ನೊದೇಹುಲ್ಲಿನ ವನದೊಳಗಿರುವ ಶರಧಿಗಂಗೆಯ ಮೇಲೆ ನಿಮ್ಮ ಗರ್ಭಗಳಂ ಚಳ್ಳುಗುರಿನಿಂದ ಸೀಳಿ ತೆಗೆದುಹಾಕಿದರೆ ನಿಮ್ಮ ಕಷ್ಟಗಳು ಪರಿಹಾರವಾಗುವುದು ಜಾಗ್ರತೆ ತೆರಳುವಂಥವರಾಗಿರೈ ಗರ್ಭದೇವತೆಗಳಿರಾ.

ಭಾಗವತರ ವೃತ್ತ

ಗಂಗಾನದಿ ತಟಕೆ ನಡುತರ್ಪ ಷಟಕೃತ್ತಿಕಾಂಗನೆಯರು
ಮಹದ್ವಾಲಯತ್ತಣದಿಂ ಹಿಂಗದೀ ವೀರ‌್ಯದೆಡೆಗೈ
ತಂದು ನೋಡುತಿರಲಾ ಸ್ತ್ರೀಯರು ಪೊಂಗು
ತೊಡನೊಡನೆ ಘನಗಾಡದಿಂದ ವರಗರ್ಭಂಗಳಂ
ಬಿಡದೆ ಭೇದಿಸಿ ಬಲಿಯಲಾಕ್ಷಣಂ ಕಾಂತೆಯರು ಶಿಶುಗ
ಳಂ ಕಂಗೆಟ್ಟು ಪಡೆದಿರಿಸಿ ಪೋದರತಿವೇಗದಲಿ॥

ಭಾಗವತರ ವರ್ಣನೆ: ಇತ್ತಲಾಗಿ ದೇವತೆಗಳು ತಮ್ಮ ಗರ್ಭಂಗಳಂ ಚಳ್ಳುಗುರುಗಳಿಂದ ಸೀಳಿ ಪಿಂಡಗಳಂ ಶರವಣದ ಗಂಗೆಯೊಳಗಿಟ್ಟು ಬಂದರು. ಇತ್ತಲಾಗಿ ಕೃತ್ತಿಕಾಂಗನೆಯರು ನೀರಿಗಾಗಿ ಬಂದು ಉರಿಯುವ ಆ ಅಗ್ನಿಯಂ ಕಾಸಿಕೊಳ್ಳಲಾಗ ಆ ಸ್ತ್ರೀಯರು ಗರ್ಭಂಗಳ ಧರಿಸಿ ಆರು ಮಕ್ಕಳನ್ನು ಹೆತ್ತು ನೊದೆಹುಲ್ಲಿನ ಮೇಲಿಟ್ಟು ತಾವು ನೀರಂ ತೆಗೆದುಕೊಂಡು ಹೋದರು. ಇತ್ತಲಾಗಿ ಗಿರಿಜಾ ಅಮ್ಮನವರು ಪರಮೇಶ್ವರನನ್ನು ಕುರಿತು ಇಂತೆಂದರು.

ಗಿರಿಜೆ: ಪ್ರಾಣಕಾಂತನೇ ನನ್ನ ಮನಸ್ಸಿಗೆ ತುಂಬಾ ಬೇಸರಿಕೆಯಾಗಿರುವ ಪ್ರಯುಕ್ತ ದಯವಿಟ್ಟು ವನ ಸಂಚಾರಕ್ಕೆ ದಯಮಾಡಿರಿ ಸ್ವಾಮಿ.

ಈಶ್ವರ: ಎಲೈ ಕೋಮಲಾಂಗಿಯೆ ನಿನ್ನ ಇಷ್ಟದಂತೆಯೇ ಆಗಲಿ.

ಪದ

ಪೋಗುವೆ ನಾಂ ಪಾಲನೇತ್ರನೆ ಈಗಲೆ ವನದೊಳು
ಪೋಗುವೆ ನಾಂ ವನಜಾಕ್ಷನೆ ಹುಲಿಕಾಡಿನ ಗಿಳಿಪಾ
ಡಿನ ಸಲೆಜಾಡಿನ ಕಡು ತಡವಿಯೊಳು॥ಪೋಗುವೆ॥
ಮಧುಮಾವಿನ ತೆನುಬೇವಿನ ತನುಜೀವನ
ನವವನದಲಿ॥ಪೋಗುವೆ ನಾಂ॥ವರಮಾವಿನ
ಸೋಮೇಶನ ಚರಣಾಂಬುದ ನೆರೆನಂಬಿ ನಾಂ॥
ಪೋಗುವೆ ನಾಂ ಪಾಲನೇತ್ರನೇ॥

ಗಿರಿಜೆ: ಪ್ರಾಣವಲ್ಲಭರೆ ಈ ಮಾವಿನ ಮರಗಳು ಹಲಸು ಖರ್ಜೂರ ದಾಳಿಂಬಾದಿ ವೃಕ್ಷಗಳು ಗಿಳಿಕೋಗಿಲಾದಿ ಪಕ್ಷಿಗಳ ಧ್ವನಿಯು ಕರಣೀಂದ್ರಿಯಕ್ಕೆ ಎಷ್ಟು ಸೊಂಪಾಗಿ ಕೇಳುವುದು ಆಹಾ ಮನೋವಲ್ಲಭರೇ ಇದೇನು ಈ ದಿಕ್ಕಿನಲ್ಲಿ ಮಕ್ಕಳುಗಳು ಅಳುವಂತೆ ಶಬ್ದವು ಕೇಳಿಬರುವುದಲ್ಲಾ ಜಾಗ್ರತೆ ಹೋಗಿ ನೋಡೋಣ ಕಾಂತ.

ಈಶ್ವರ: ಎಲೆ ಕೋಮಲಾಂಗಿಯೆ ನಿನ್ನಿಷ್ಟದಂತೆಯೆ ನಡೆ ಹೋಗೋಣ.

ಗಿರಿಜೆ: ಆಹಾ ರಮಣನೇ, ಈ ಮಕ್ಕಳುಗಳನ್ನು ನೋಡಿದರೆ ನನ್ನ ಮನಸ್ಸು ತುಂಬಾ ಸಂತೋಷವಾಗಿದೆ. ಪಾಲಕರಿಲ್ಲದೆ ಗಾರುಗಾರೆಂದು ಅಳುತ್ತಿರುವ ಈ ಮಕ್ಕಳನ್ನು ತಮ್ಮ ಅಪ್ಪಣೆಯಾದರೆ ನನ್ನ ಮಗುವೆಂದು ಭಾವಿಸಿ ಎತ್ತಿಕೊಂಡು ಕೈಲಾಸಕ್ಕೆ ಕರೆದುಕೊಂಡು ಹೋಗಿ ಕಾಪಾಡಿಕೊಳ್ಳಬೇಕೆಂಬುದಾಗಿ ನನ್ನ ಮನಸ್ಸು ಅಪೇಕ್ಷಿಸುವುದಲ್ಲಾ ವಲ್ಲಭಾ ಇದೇ ನನಗೆ ಲಾಭ.

ಈಶ್ವರ: ಎಲಾ ಗಿರಿಜೆಯೆ ತಡವೇಕೆ ನಿನ್ನಿಷ್ಟದಂತೆಯೇ ನಡೆಸುವವಳಾಗು ಈ ಮಕ್ಕಳನ್ನು ಎತ್ತಿಕೊಂಡು ಕೈಲಾಸಕ್ಕೆ ಹೊರಡುವಳಾಗು.

ಪದ

ಬಾಲ ಲೀಲೆಗಳ ನೋಡಿ ತಾನು ಪ್ರೇಮದಿಂ ಮುದ್ದಾಡಿ॥
ಶೈಲಬಾಲೆ ತನ್ನ ಸುತನ ಪಾಲಿಸುತ್ತ ವರಕುಮಾರಕನ॥

ಗಿರಿಜೆ: ಆಹಾ ಪ್ರಾಣನಾಥರೆ ಲಾಲಿಸಿರಿ ಈ ಮಗು ಆಡುವಂಥ ಬಾಲಲೀಲೆಯಂ ನೋಡಿ ಮನಸ್ಸಿಗೆ ಎಷ್ಟೋ ಆನಂದವಾಯಿತು ಮಗುವಿಗೆ ಬಾಲ ತೊಡಿಗೆ ಮುಂತಾದವುಗಳನ್ನು ಕೊಡಿಸುವುದರೊಳಗಾಗಿ ಆ ಬ್ರಹ್ಮನನ್ನು ಕರೆಯಿಸಿ ನಾಮಕರಣ ಜಾತಕರ್ಮ ಚೌಲೋಪನಯನ ವಿದ್ಯಾಭ್ಯಾಸವೆಲ್ಲವಂ ಉಪದೇಶ ಮಾಡಿಸುವರಾಗಿರಿದೇವಾ ಮಹಾನುಭಾವ.

ಈಶ್ವರ: ಎಲೈ ಮಂಗಳಾಂಗಿಯೆ ನಿನ್ನ ಇಷ್ಟದಂತೆಯೇ ಆಗಲಿ. ಅಯ್ಯ ನಂದೀಶನೇ ಜಾಗ್ರತೆ ಇಂದ್ರ ಬ್ರಹ್ಮನನ್ನು ಕರೆದುಕೊಂಡು ಬಾ ಹೋಗು.

ನಂದೀಶ: ಸ್ವಾಮಿ ತಮ್ಮ ಅಪ್ಪಣೆಯಂತೆ ಕರೆದುಕೊಂಡು ಬರುತ್ತೇನೆ.

ಬ್ರಹ್ಮ: ಮಹದೇವನೆ ತಮ್ಮ ಪಾದಾರವಿಂದಕ್ಕೆ ಪ್ರಣತನಾಗುವೆನು ನನ್ನನ್ನು ಇಷ್ಟು ತ್ವರಿತದಿಂದ ಕರೆಯಿಸಲು ಕಾರಣವೇನು ಪೇಳೈ ಶಂಕರಾ ನಾ ನಿಮ್ಮ ಕಿಂಕರಾ.

ಪದ

ಸರಸಿಜ ಪಿತನೆ ಕೇಳು ಮೆರೆವ ಜಾತಕರ್ಮವ
ಬೆಳಸಿ ತರಳಗೆ ಸರ‌್ವವಿದ್ಯವ ರಚಿಸೈ
ಇರದೆ ನೀನು ಕಲಿಸೈ॥

ಈಶ್ವರ: ಎಲೈ ಸೃಷ್ಟಿಕರ್ತನೆ, ಈ ಮಗುವಿಗೆ ನಾಮಕರಣವಂ ಮಾಡುವುದಲ್ಲದೆ ಚೌಷಷ್ಟಿವಿದ್ಯದಲ್ಲು ನಿಪುಣನನ್ನಾಗಿ ಮಾಡೈ ಬ್ರಹ್ಮನೇ.

ಬ್ರಹ್ಮ: ಜಗದೀಶ್ವರನೇ ತಮ್ಮ ಅಪ್ಪಣೆಯಂತೆ ನೆರವೇರಿಸುತ್ತೇನೆ.

ಕಂದ

ದಿನಕೊಂದು ವಿಧದಿ ಬೆಳೆಯುತ ಈಶ್ವರಪುತ್ರ ಷಣ್ಮುಖನು
ಇನ ಶಶಿಯಂತಿರುವ ಬಾಲಕನ ನೋಡುತ
ಧನುರ್ವಿದ್ಯಾಗಮಶಾಸ್ತ್ರವ ವಿನಯದೊಳು
ಉಪದೇಶವಗೈದ ಬ್ರಹ್ಮನು॥

ಪದ

ತರಳನೆ ನಿನಗಿನ್ನು ಶರಧನುರ್ವಿಧ್ಯವನ್ನು ಹರನ ಕರುಣದೊಳು
ವೇದಶಾಸ್ತ್ರಾಗಮ ಸಾಧನ ಕ್ರಮಗಳ ಬೋಧಿಸಿ ಪೇಳುವೆನು॥

ಬ್ರಹ್ಮ: ಹೇ ಮನ್ಮಥಾಕಾರನಾದ ಷಣ್ಮುಖನೆ ಕೇಳು. ಈ ಧರಣಿಗಧಿಕವಾದ ರಜತಾದ್ರಿವಾಸನಾದ ಪರಮೇಶ್ವರನ ಕರುಣದಿಂದ ಅರಿತ ಮಟ್ಟಿಗು ಶರಧನುರ್ವಿದ್ಯಂಗಳನ್ನು ಕಲಿಸಿರುತ್ತೇನೆ ಭರದಿಂದಲಿ ಅನುಗ್ರಹಿಸೈ ಬಾಲಕನೆ ಷಣ್ಮುಖನೆ.

ಷಣ್ಮುಖ: ಸ್ವಾಮಿ ಸೃಷ್ಟಿಕರ್ತನೆ ತಮ್ಮಪ್ಪಣೆ ಪ್ರಕಾರ ನಡೆದುಕೊಳ್ಳುತ್ತೇನೈ ಬ್ರಹ್ಮದೇವರೆ.

ಪದ

ಹರಿಯೊಂದು ದಿನದೊಳಗೆ ಸುರರೆಲ್ಲರು ಕೂಡುತಲಿ
ಭರದಿಂದಲೈತಂದರು ಪರಶಿವನಬಳಿಗೆ॥ಬಳಿಗೆ॥

ವಿಷ್ಣು: ಅಯ್ಯ ಇಂದ್ರಾದಿ ದೇವತೆಗಳಿರಾ ಕೇಳಿರಿ. ಈಶ್ವರನಪುತ್ರನಾದ ಷಣ್ಮುಖನು ನಮಗೋಸ್ಕರವಾಗಿ ಅವತರಿಸಿ ಸಕಲವಿದ್ಯಾಪಾರಂಗತನಾಗಿರುತ್ತಾನೆ. ಆದ್ದರಿಂದ ಸರ‌್ವರೂ ಸ್ವಾಮಿಗೆ ತಿಳಿಸಿದರೆ ಆ ಮಗುವನ್ನು ಕಾಳಗಕ್ಕೆ ಕಳುಹಿಸುತ್ತಾರೆ. ಆ ದುಷ್ಟರಾದ ತಾರಕಾದಿ ದೈತ್ಯರನ್ನು ಸಂಹರಿಸುವಂತೆ ಮಾಡೋಣ ನಡಿಯಿರೈ ದೇವತೆಗಳಿರಾ.

ಪದ

ಹರನೇ ಖಳರ ಬಾಧೆಗಳನ್ನು ಭರದಿ ಸೈರಿಸಲಾರೆವೈಯ್ಯ
ಮೆರೆವ ನಿನ್ನ ಸುತನ ಕಳುಹಿಸು ದುರುಳರ ಸಂಹರಿಪುದಯ್ಯ॥

ದೇವೇಂದ್ರ: ಆಹಾ ಪರಮಾತ್ಮನೇ ದುರುಳರಾದ ದೈತ್ಯರಬಾಧೆ ಬಹಳ ಘನವಾಗಿ ನಾವುಗಳು ಸೈರಿಸಲಾರೆವು ಆದ್ದರಿಂದ ನಿಮ್ಮ ಸುಕುಮಾರನನ್ನು ಕಳುಹಿಸಿ ಆ ನೀಚರನ್ನು ಕೊಲ್ಲಿಸಿ ಭಕ್ತರನ್ನು ಉದ್ದಾರಮಾಡಬೇಕೈ ಶಂಕರಾ ನಾ ನಿಮ್ಮ ಕಿಂಕರಾ.

ಈಶ್ವರ: ಅಯ್ಯ ಹರಿ ಬ್ರಹ್ಮೇಂದ್ರಾದಿ ದೇವತೆಗಳಿರಾ ಕೇಳಿರಿ ನನ್ನ ಕುಮಾರನಾದ ಷಣ್ಮುಖನನ್ನು ರಣಾಗ್ರಕ್ಕೆ ಕಳುಹಿಸಿ ನೀಚರಾದ ತಾರಕಾದಿ ದೈತ್ಯರಾಕ್ಷಸರನ್ನು ಸಂಹರಿಸುವಂತೆ ಮಾಡುತ್ತೇನೆ. ಸ್ವಲ್ಪ ಮಾತ್ರ ಧೈರ‌್ಯವಾಗಿರುವರಾಗಿರೈ ಹರಿಬ್ರಹ್ಮಾದಿ ದೇವತೆಗಳಿರಾ.

ಈಶ್ವರ: ಭಲಾ ಭಲಾ ಸುಕುಮಾರನೇ ವಿಶ್ವಕರ್ಮನಿಂದ ನಿರ್ಮಿತವಾದ ಈ ರಥದ ಮೇಲೆ ಕುಳಿತುಕೊಂಡು ದುರುಳರಾದ ತಾರಕಾದಿ ರಕ್ಕಸರಂ ಕೊಂದು ಚಿರಂಜೀವಿಯಾಗಿ ಕೀರ್ತಿಯಂ ಪಡೆದು ಈ ದೇವಸಮುದಾಯದಲ್ಲಿ ಮೆರೆಯುವಂಥವನಾಗೈ ಕುವರ ನಾ ಮುಂದೆ ಹೇಳುವೆ ವಿವರ.

ಪದ

ಬಾ ಮಗನೇ ಶರಜಲ್ಮನೇ ನಿರವಂದ್ಯ ಜಗದೇಕ
ಚೈತನ್ಯನೇ ಹೇ ಮಗನೆ ತಾರಕಾದಿ ಧೈತ್ಯರ ಧುರ
ದೊಳಗೆ ಸೇರಿಸೈ ಯಮನೂರಿಗೆ

ಈಶ್ವರ: ಈ ಜಗತ್ತಿನಲ್ಲಿ ಚೈತನ್ಯ ಸ್ವರೂಪನಾದ ಮಗನೇ ತಾರಕ ಶೂರ ಪದ್ಮ ಸಿಂಹಾಸ್ಯರೆಂಬ ದೈತ್ಯರು ಬಹಳವಾಗಿ ಹೆಚ್ಚಿ ಮೆರೆಯುತ್ತಿರುವರು ಆದ ಪ್ರಯುಕ್ತ ಅವರನ್ನು ಸಂಹರಿಸಿ ಕೀರ್ತಿಯನ್ನು ಪಡೆಯುವನಾಗೈ ಕುಮಾರನೇ ರಣದೋಳ್ ಧೀರನೆ.

ಪದ

ಇನಿತು ನೀ ಪೇಳಲೇಕೆ ಚಿನುಮಯ ಹರನೇ ನೀಂ ಧನುಜ
ರನು ಗೆದ್ದು ನಾಂ ಬರುವೆನೂ ಕೊಡು ನೇಮ ಕೊಡು ನೇಮ॥

ಷಣ್ಮುಖ: ಹೇ ಜನಕನೇ ಲಾಲಿಸು. ಆ ನೀಚರನ್ನು ಸಂಹರಿಸಬೇಕಾದರೆ ಕುಮಾರನಾದ ನನಗೆ ಇಷ್ಟು ಹೇಳಬೇಕಾದುದೇನೂ ಇಲ್ಲ. ತಮ್ಮಪ್ಪಣೆಯಾದರೆ ಕ್ಷಣಮಾತ್ರದಲ್ಲಿಯೇ ಸಂಹರಿಸಿ ತಮ್ಮ ದಿವ್ಯ ಸನ್ನಿಧಿಗೆ ಬರುವೆನೋ ತಂದೆ ಹೇಳುವೆನು ಮುಂದೆ.

ಈಶ್ವರ: ಎಲೈ ತನಯನೇ ನಾನು ನಿನಗೆ ಹೇಳಲು ಕಾರಣವೇನೆಂದರೆ ದೇವತೆಗಳಾದಿಯಾಗಿ ಸರ‌್ವರೂ ದುರುಳರಿಂದ ಬಹಳವಾಗಿ ನೊಂದಿರುವುದರಿಂದ ಹೇಳಿದೆನು ಆದ ಪ್ರಯುಕ್ತ ದುರುಳರಂ ಸಂಹರಿಸಿ ದೇವತೆಗಳನ್ನು ರಕ್ಷಿಸುವನಾಗೈ ಕಂದಾ ನಿನ್ನ ಮಾತೇ ಚಂದಾ.

ಪದ

ಉಪಚಾರವು ನನಗೇಕೆ ಬೇಕೈ ಉಪಮಾನ ರಹಿತನೇ
ಹರನೇ ಕೇಳ್ ಶಿವನೆ ಕೇಳ್ ಶಿವನೇ॥

ಷಣ್ಮುಖ: ಉಪಮಾನಕ್ಕೆ ಅತೀತ ವಸ್ತುವಾದ ದೇವಾಧಿದೇವನೇ ನನಗೆ ನೀವು ಉಪಚಾರ ಮಾಡಬಹುದೇ ಆಶೀರ್ವದಿಸಿ ಅಪ್ಪಣೆಯಂ ಕೊಟ್ಟು ಕಳುಹಿಸಿದರೆ ದೈತ್ಯರಂ ಸಂಹರಿಸಿ ದೇವಕರಿಗೆ ಆನಂದವಂ ಹೊಂದಿಸುವ ಕಂದನೆಂದು ತಿಳಿಯೈ ಇಂದಿರೇಶನೇ ಗೋವಿಂದ ಹರಸಖನೇ.

ಈಶ್ವರ: ಅಪ್ಪಾ ಮಗನೇ ನೀನು ಧನುರ್ಬಾಣಗಳಂ ತೆಗೆದುಕೊಂಡು ವಜ್ರಕವಚವಂ ತೊಟ್ಟುಕೊಂಡು ಒಂದು ಸಾವಿರ ಅಶ್ವವನ್ನು ಕಟ್ಟಿರತಕ್ಕ ರಥದ ಮೇಲೆ ಕುಳಿತುಕೊಂಡು ಅಲ್ಲದೇ ಬಾಣವಂ ತೊಡುವ ಆಧಾರ ಸಂಧಾನ ಮಂತ್ರೋಪದೇಶವಂ ಮಾಡಿರುತ್ತೇನೆ ಮತ್ತು  ವೀರಭದ್ರ ವೀರಕೇಸರಿ ವೀರಮಹೇಂದ್ರ  ಮೊದಲಾದ ವೀರರನ್ನು ನಿನ್ನ ಸಹಾಯಕ್ಕಾಗಿ ಬೆಂಬಲವಾಗಿರುವಂತೆ ಹೇಳಿಕಳುಹಿಸುವೆನು. ಆ ದುರುಳರಂ ಕೊಂದು ಜಯಶಾಲಿಯಾಗಿ ಬರುವನಾಗೈ ಕಂದಾ ನಿನ್ನ ಮಾತಿಗಾನಂದಾ.

ಪದ

ವೀರಬಾಹು ವೀರಕೇಸರಿ ವೀರಮಾಹೇಂದ್ರಕನು
ಮೆರೆಯುವ ವೀರ ಮಾಹೇಶ್ವರನು ವೀರಪುರಂಧರನು ಕೂಡಿ॥

ಷಣ್ಮುಖ: ಎಲೈ ಸೇನಾ ನಾಯಕರೇ ಕೇಳಿರಿ ಜಗದೀಶನ ಅಪ್ಪಣೆಯಂತೆ ದುರುಳರಂ ಗೆದ್ದು ಬರಬೇಕಾದ ಪ್ರಯುಕ್ತ ಸರ‌್ವರೂ ಹೆದರದೆ ಸೈನ್ಯವೆಲ್ಲವೂ ಒಟ್ಟುಗೂಡಿ ಹೊರಡುವರಾಗಿರಿ.  ಅಯ್ಯ ಸಮಸ್ತರೆಲ್ಲರೂ ಕೇಳಿರಿ ಇಲ್ಲಿ ಮುಂದೆ ಕಾಣುವ ಪರ‌್ವತವೇ ವೈರಿಗಳದೇ ಆಗಿರಬಹುದು ಆ ಮಾಯಾಪುರಿ ಪಟ್ಟಣವು ಆ ಪರ‌್ವತದೊಳಗಿರಬಹುದೇನಯ್ಯ ದೇವೇಂದ್ರ ಸದ್ಗುಣಸಾಂದ್ರ.

ದೇವೆಂದ್ರ: ಸ್ವಾಮಿ ಕುಮಾರಸ್ವಾಮಿ ಇಲ್ಲಿ ಕಾಣುವುದೇ ಮಾಯಾಪುರಿ ಪಟ್ಟಣವು ಈ ಪಟ್ಟಣವನ್ನು ನೋಡಿದ ಮಾತ್ರದಲ್ಲಿಯೇ ಎದೆಯಲ್ಲಿ ದಿಗಿಲುಂಟಾಗಿರುತ್ತದೆ. ನಮ್ಮ ಗತಿಯೇನೈ ದೇವಾ  ಮಹಾನುಭಾವ.

ಪದ

ಪಾಹಿಲೋಕ ಕಾರಣ ನಾರಾಯಣ ದೇವಾ ನಾರಾಯಣ
ಭವಭಯಹರಣ ಬಹು ಕಲ್ಯಾಣ ಪದನುತ ಚರಣ
ದಿವ್ಯಭೂಷಣ ನಾರಾಯಣ ದೇವಾನಾರಾಯಣ॥

ಷಣ್ಮುಖ: ಸ್ವಾಮಿ ಬ್ರಹ್ಮಮಾನಸ ಪುತ್ರರಾದ ನಾರದರೇ ತಾವುಗಳು ಆಗಮಿಸಿದ ಕಾರ‌್ಯಾರ್ಥವೇನು ಅರುಹಬೇಕೈ ಯತಿವರ‌್ಯ.

ಪದ

ನಾರದ ಮುನಿಪನು ನಡೆತಂದ ಗುರುಪಾದ ವಾರಿಜಾ
ಗಳಗುಂದಿಸಿದ ಶೂರನೇ ಇಂದಿವ ಕ್ರೌಂಚಕವೆಂಬ ದಾ
ರುಣ ದೈತ್ಯನು ಕೇಳೋ॥

ನಾರದ: ಎಲೈ ಷಣ್ಮುಖನೆ ಲಾಲಿಸು ನಿನಗೀ ಪರ‌್ವತದ ವಿಚಾರವನ್ನು ತಿಳಿಸುವ ನಿಮಿತ್ಯವಾಗಿ ಬಂದಿರುವೆನು ಹಿಂದೆ ಕ್ರೌಂಚನೆಂಬ ರಕ್ಕಸನು ಮಹಾವೀರಾಧಿವೀರನಾಗಿ ಅಹಂಕಾರದಿಂದ ಮೆರೆಯುತ್ತಿದ್ದನು ಕೇಳೈ ಬಾಲಕ ಪರಮೇಶ್ವರನ ಆಜ್ಞಾಧಾರಕ.

ಷಣ್ಮುಖ: ಆಹೋ ತ್ರಿಲೋಕ ಸಂಚಾರಿಗಳೇ ಆಮೇಲೆ ಆ ಕ್ರೌಂಚನ ವಿಚಾರವೇನಾಯಿತು ತಿಳಿಸುವರಾಗಿರೈ ನಾರದಾ ಗಾನವಿಶಾರದಾ.

ಪದ

ಮುನಿಯಗಸ್ತ್ಯನು ಖಳನನು ಘನ
ವಾಗಿ ಬೀಳೆನುತಾಗ ಮುನಿದು ಶಾಪವನ್ನಿತ್ತು ಹೋ
ದನು ತಾರಕ ಧನುಜಗೀತನು ಸಹಾಯಕನು॥

ನಾರದ: ಎಲೈ ಕುಮಾರಸ್ವಾಮಿಯೇ ಒಂದಾನೊಂದು ದಿವಸ ಅಗಸ್ತ್ಯರು ಕ್ರೌಂಚನ ಬಳಿಗೆ ಬರಲು ಅವನು ಅವರನ್ನು ಸತ್ಕರಿಸದೆ ಅಹಂಕಾರದಿಂದಿರಲು ಅಗಸ್ತ್ಯರು ನೀನು ಪರ್ವತವಾಗಿ ಬೀಳೆಂದು ಶಾಪವಂ ಕೊಡಲಾಗ ಆ ನೀಚನು ಪರ್ವತವಾಗಿ ಈ ತಾರಕನಿಗೆ ಸಹಾಯಕನಾಗಿರುವನು ಕುಮಾರಸ್ವಾಮಿ.

ಪದ

ಅದರಿಂದಲಿವನನ್ನು ಕದನದಿ ಮಥಿಸೆಂದು ಮುದ
ದಿಂದ ಪೇಳುತಾ ಪೋಗೆ ಮುದವೇರಿ ಗುಹನಿತ್ತ ಧನು
ಜನ ಸಮರಕ್ಕೆ॥ಒದಗಿಸೆ ಬಲಬಾಗಿಸುತೆ॥

ನಾರದ: ಸ್ವಾಮಿ ಷಣ್ಮುಖದೇವನೆ ಈ ತಾರಕನು ಯುದ್ಧ ಮಾಡುವ ಕಾಲದಲ್ಲಿ ತನಗೆ ಅಪಜಯವಾಗುವ ಸಂದರ್ಭದಲ್ಲಿ ಈ ಕ್ರೌಂಚಪರ್ವತ ಗುಹೆಯಲ್ಲಿ ಸೇರಿಕೊಳ್ಳುತ್ತಾನೆ. ಆದ್ದರಿಂದ ಈ ಪರ್ವತವನ್ನು ಚೂರು ಚೂರು ಮಾಡಿದರೆ ಈ ತಾರಕನು ನಾಶವಾಗುವನು ಇದ್ದ ಸಂಗತಿಯನ್ನು ತಿಳಿಸಿರುತ್ತೇನೆ. ನಾನು ಬಂದ ಕೆಲಸವಾಯಿತು ಹೊರಡುವೆನು.

ಷಣ್ಮುಖ: ಅಣ್ಣ ವೀರಭದ್ರ, ನಾರದರು ಈ ಕ್ರೌಂಚಪರ್ವತದ ವರ್ತಮಾನವನ್ನು ತಿಳಿಸಿ ಹೊರಟುಹೋದರು ನೀನು ನಮ್ಮ ಸೇನೆಯಂ ಒಡಗೂಡಿ ಈ ಪರ್ವತದ ಸುತ್ತಲೂ ಮುತ್ತಿಗೆಯಂ ಹಾಕಿಸು ಏನು ಬಂದರು ನೋಡಿಕೊಳ್ಳುವೆನೋ ಅಣ್ಣಯ್ಯ.

ವೀರಭದ್ರ: ಎಲೈ ವೀರಭಟರೇ, ಕುಮಾರಸ್ವಾಮಿ ಅಪ್ಪಣೆಯಾದಂತೆ ಮಾಯಾಪುರಿಗೆ ಮುತ್ತಿಗೆಯಂ ಹಾಕಿರಿ ನಿಮಗೆ ಬೆಂಬಲವಾಗಿರುವೆನು ಜಾಗ್ರತೆಯಾಗಿ ಹೊರಡುವರಾಗಿರೈ ಪಟುಭಟರೆ ಶೂರಾಗ್ರಗಣ್ಯರೆ.

 

(ತಾರಕಾಸುರನದರ್ಬಾರ್)

ಭೋ ಶಂಕರ ದಿಗಂಬರ ಆಹಾ ಇದೇನಾಶ್ಚರ‌್ಯ ನಮ್ಮಪಟ್ಟಣದ ಸುತ್ತಲೂ ಎತ್ತೆತ್ತಲಾಗಿ ಆಲೈಸಿದರೂ ಕೂಡ ವಿಪರೀತ ಗಲಭೆಯು ಕೇಳುತ್ತಿರುವುದಲ್ಲಾ. ಎಲೈ ಚಾರವರನೇ ನಮ್ಮ ಪಟ್ಟಣಕ್ಕೆ ಬಂದಿರುವರು ಧಾರು ತಿಳಿದುಕೊಂಡು ಬರುವರಾಗಿರೈ ಭಟರೆ ನೀವು ಶೂರರೇ.

ಪದ 

ಏನಿದಾಶ್ಚರಿಯು ನಮ್ಮೂರೊಳ್ಗೇ ಇದೇ ನಾರ್ಭಟೆಯು
ದಾನವ ಮಾನವ ಸುರಸಂತಾನದೊಳಗೆ ಎನಗಿದಿರಾರು ಕಾಣೆ॥

ತಾರಕಾಸುರ: ಭಳಿರೇ ಈ ಲೋಕದಲ್ಲಿ ತಾರಕಾಸುರ ಎನ್ನುವುದಾಗಿ ನನ್ನ ಹೆಸರೇಳಿದ ಮಾತ್ರಕ್ಕೆ ಸ್ವರ್ಗಮರ್ತ್ಯ ಪಾತಾಳಂಗಳು ಕೂಡ ಗಡ ಗಡ ನಡುಗುವರಲ್ಲದೆ ಸುರನರ ಕಿನ್ನರ ಗರುಡ ಗಂಧರ್ವರೊಳಗೂ ಕೂಡ ಎನ್ನೆದುರಾಗಿ ನಿಂತು ಯುದ್ಧಮಾಡುವರೇ ಇಲ್ಲವಲ್ಲಾ ಇಂಥಾದ್ದರಲ್ಲಿ ಈಗ ಗಲಭೆ ಬರಲು ಕಾರಣವೇನು ಸೇನಾನಾಯಕರೇ.

ಪದ

ಆರೊ ಬಂದವನು ಮುರಾರಿಯೊ ಶೌರಿ ಪುರಂದರನೆ
ಆರಾದರೇನು ಸಮರದಿ ಮಾರಿಗೌತಣವ ಮಾಡುವೆ
ನಾಂ ಮಾಡುವೆ॥

ತಾರಕಾಸುರ: ಎಲೈ ಸಾರಥಿ ಈಗ ಬಂದಿರುವನು. ಹರಿಯೋ ಹರನೋ ಬ್ರಹ್ಮನೋ ಅಥವಾ ಇಂದ್ರಾದಿ ದಿಕ್ಪಾಲಕರೋ ಯಾರಿರಬಹುದು ಶಹಬಾಸ್ ಶಹಬಾಸ್ ಯಾರು ಬಂದರು ಬರಲಿ. ಅವರಂ ನಮ್ಮೂರ ಮಾರಿಗೆ ಔತಣವಂ ಮಾಡದೆ ಹೋದರೆ ತಾರಕಾಸುರನೆಂಬುದಾಗಿ ಈ ಧರಿತ್ರಿಯಲ್ಲಿ ಬೆಳೆದು ಸಾರ್ಥಕವೇನು ಸಾರಥಿ ಭಕ್ತಿಯೋಳ್ ಹಸನ್ಮತಿ.

ಪದ

ಕರಿರಥವಾಜಿಗಳು ಪದಾತಿಯವೆಂದು ಶಸ್ತ್ರಾಸ್ತ್ರಗ
ಳು ದುರುಳಾ ದನುಜರ ಕರದಿ ಚಾಪವನಾಂತು

ತಾರಕಾಸುರ: ಎಲೈ ಸಾರಥಿ, ನಮ್ಮ ಪಟ್ಟಣಕ್ಕೆ ಬಂದಿರುವ ವೈರಿಗಳಂ ಜೈಸುವದಕ್ಕಾಗಿ ನಮ್ಮ ಚತುರಂಗ ಮಾರ್ಬಲವನ್ನೆಲ್ಲಾ ಸಿದ್ಧಪಡಿಸು. ಅಲ್ಲದೆ ನಮ್ಮ ಸೇನಾನಾಯಕರೆಲ್ಲರೂ ಆಯುಧಪಾಣಿಗಳಾಗಿರಬೇಕೇ ಹೊರ್ತು ನಿರಾಯುಧರಾಗಿರಕೂಡದೆಂದು. ನಮ್ಮ ಪಟ್ಟಣದಲ್ಲಿ ಡಂಗುರ ಮೂಲಕಪ್ರಸಿದ್ಧಪಡಿಸುವನಾಗೈ ಸಾರಥಿ.

ಪದ

ಧುರಕೆ ಬಂದಿಹ ದಿವಿಜ ಸೈನ್ಯವ ನಿರುಕಿಸುತ ಗರ್ಜಿಸುತ ದೈತ್ಯನು
ಸುರರ ಕಡೆಯುವನೆಂದು ಸೈನ್ಯಕಿತ್ತನಪ್ಪಣೆಯ

ತಾರಕಾಸುರ: ಎಲೈ ಪಟುಭಟರೆ ದೇವತೆಗಳ ಸೈನ್ಯವನ್ನು ಕಂಡಾಕ್ಷಣಕ್ಕೆ ಮುಖಮೋರೆಗಳಂ ನೋಡದೆ ಹೊಡೆದುಬಡೆದು ಧಾಳಾಧಾಳಿಯಂ ಮಾಡುವರಾಗಿರೈ ಪಟುಭಟರೆ ಶೂರಾಗ್ರಗಣ್ಯರೆ.

ಪದ

ದುರುಳಾ ದೈತ್ಯರು ಧುರಕೆ ಬಂದುದುನರಿಯುತ್ತ
ವೀರಭದ್ರನು ಸುರಗಣಕೆ ಇತ್ತನು ಸಮರಕಪ್ಪಣೆಯ॥

ವೀರಭದ್ರ: ಎಲೈ ಗಣಾಧೀಶ್ವರರೇ ಅತ್ತ ನೋಡಿರಿ ರಕ್ಕಸನ ಸೇನಾನಾಯಕರು ಕೋಪಾಟೋಪದಿಂದ ನಮ್ಮಗಳ ಮೇಲೆ ಹಲ್ಕಡಿಯುತ್ತ ಬರುತ್ತಿರುವರು ಈಗ ನೀವುಗಳು ಹೆದರದೆ ಆ ರಕ್ಕಸರ ಮುಖಮೋರೆಗಳಂ ಲೆಕ್ಕಿಸದೆ ಹೊಡೆದು ಬಡಿದು ಧಾಳಾ ಧೂಳಿಯಂ ಮಾಡಿರಿ ನಿಮ್ಮ ಬೆಂಬಲವಾಗಿ ನಾನು ಬರುವೆನೈ ಗಣಾಧೀಶ್ವರರೆ.

ಕಂದ

ಗದೆಯಂ ಕೊಂಡ ಅಮರರ್ಕಳಂ ಸದೆ ಎಂದು
ಸುರಪತಿಯು ಗರ್ಜಿಸುತಾಗಳ್‌ ಕದನದಿ ನಿರ್ಜರ
ರಣವಂನೊದಗುತ ಸದೆಬಡಿಯುವೆನೆನುತ॥
ಮೆರೆದಂ ಧುರದೊಳಗೆ॥

ತಾರಕಾಸುರ: ಭಳಿರೆ ಶಹಬಾಸ್ ಎಲೈ ಬಡದೇವತೆಗಳೇ ನಿಲ್ಲಿರಿ ನಿಲ್ಲಿರಿ. ನಿಮ್ಮ ಹೆಸರನ್ನು ಈ ಗದೆ ಇಂದ ಅಡಗಿಸದೆ ಬಿಟ್ಟರೆ ಈರೇಳು ಹದಿನಾಲ್ಕು ಲೋಕಂಗಳಲ್ಲಿಯೂ ಕೂಡ ತಾರಕಾಸುರ ರಾಕ್ಷಸಾಧಿಪನೆಂಬ ಹೆಸರಂ ಪಡೆದು ಸಾರ್ಥಕವೇನಿರೋ ಬಡದೇವತೆಗಳಿರಾ.

ವೀರಭದ್ರ: ಎಲೈ ದೇವತೆಗಳೇ ನೀಚನಾದ ತಾರಕನು ತನ್ನ ಸೇನೆ ಹಾನಿಯಾಯಿತೆಂದು ಕೋಪದಿಂ ಹಲ್ಕಡಿಯುತ್ತ ಬರುತ್ತಿರುವನು. ಈಗ ನೀವುಗಳೆಲ್ಲ ಹಿಂದೆ ನಿಲ್ಲುವರಾಗಿರಿ. ನಾನೇ ಯುದ್ಧವಂ ಮಾಡಿ ಸಂಹರಿಸುವೆನು ದೇವತೆಗಳೇ.

ಪದ

ಎಲೊ ಎಲೊ ದನುಜನೆ ಕೇಳು ನಿಲಯವ
ಹೊಗದಿರು ತಾಳೊ ತಲೆಗಳ ಕೊಯ್ಯುವೆನು ಈ
ಕ್ಷಣದಿ ಈ ಕ್ಷಣದಿ ಬೇಡೆಲವೊ ಎಮ್ಮೊಡನೆ ಕಾದುವ
ಬುದ್ಧಿ ನಿಮಗೆ ಕೇಡು ಬಂದಿರುವುದನು
ತಿಳಿಯೊ ನೀ ತಿಳಿಯೋ॥

ವೀರಭದ್ರ: ಎಲಾ ದನುಜಾಧಮ ವಿಚಾರವಿಲ್ಲದೆ ಕ್ರೋಧತನದಿಂದ ನಮ್ಮ ಮೇಲೆ ಯುದ್ಧವಂ ಮಾಡಿ ವ್ಯರ್ಥವಾಗಿ ಸಾಯಬೇಡ ಪ್ರಾಣದಾನವಂ ಮಾಡುವೆನು. ಬಂದ ದಾರಿಯನ್ನು ಹಿಡಿದು ಹೋಗು ಇದಕ್ಕೆ ಏನ ಹೇಳುವೆಯೋ ಖೂಳ ಆಮೇಲೆ ನೋಡು ನಿನ್ನ ಗೋಳ.

ಪದ

ಗುದ್ದುವೆ ವೀರನೆ ಕೇಳೊ ಅದ್ದುವೆ ಯಮನರಕ
ದಲಿ ಬದ್ಧ ಗರ್ವವು ನಿನಗ್ಯಾತಕೊ॥ಮೂಢ॥

ತಾರಕಾಸುರ: ಎಲೋ ಹುಡುಗ ಶಹಬಾಸ್ ಎಲೋ ಪಾಪಿ ನಿನ್ನ ಬಾಣಗಳು ನನ್ನೇನು ಮಾಡಲಾರವು ಇಗೋ ಶೂಲಾಯುಧದಿಂದ ತಿವಿಯುತ್ತೇನೆ. ಇದರಿಂದ ಬದುಕಿಕೊಳ್ಳೆಲಾ ಕುವರಾ ನಿನಗೆ ಬಂದಿರುವುದು ಘೋರ.

ಪದ

ರಣಹೇಡಿ ನಿನ್ನ ಹಣಿಯದೆ ನಾ ಬಿಡುವೆನೆ ಕ್ಷಣ
ವಿಲ್ಲದೆ ಇನ್ನಾ ಮುನ್ನಾ॥ಕಾಣಿಸುವೆನು ಹರ
ಚರಣಕೆ ನಿನದೂರ ಪ್ರಾಣವು ತಿಳಿ ಈಗಾ ಬೇಗಾ॥

ವೀರಭದ್ರ: ಎಲೋ ನಿಶಾಚರ ಜಗಜ್ಜೀವಜಾಲ ಲತೆಗೆಲ್ಲಾ ಆಧಾರಸೂತ್ರರಾದ ಶಿವಭಕ್ತರನ್ನು ಬಹಳ ವಿಧದಿಂದ ಭಂಗಿಸಿ ದೇವೇಂದ್ರಾದಿ ದಿಕ್ಪಾಲಕರನ್ನು ಹಿಂಸಿಸಿರುವೆಯಾ ಎಲಾ ಭಂಡ ನಿನ್ನ ಮಾಂಸಖಂಡವನ್ನು ಭೂತ ಪ್ರೇತ ಪಿಶಾಚಗಣಂಗಳಿಗೆ ಆಹುತಿಯನ್ನು ಕೊಡುವೆನೆಲಾ ಭಂಡ ನಿನಗೆ ನಾನೇ ಮಿಂಡಾ.

ಪದ

ತಡಿಯಲೊ ಎನ್ನಯ ಬಾಣದ ಹೊಡೆತವ ಕಡು
ತವಕದಿ ಮರುಳಾ ದುರುಳಾ ಸಿಡಿಲುಸಮಭೋರ್ಗರೆಯು
ವದೆನ್ನಾ ನೋಡೆಲೊ ಭಂಡಾ ಪುಂಡಾ॥

ತಾರಕಾಸುರ: ಎಲೈ ಮೂಢ, ಖಂಡಪರಶುವಂ ತುಂಡು ತುಂಡು ಮಾಡಿ ಈ ದೇವತೆಗಳ ಮೇಲೆ ಕಾರ್ಗತ್ತಲೆ ಮುಚ್ಚುವಂತೆ ಅಂಧಕಾಸ್ತ್ರ ಮಾಯಾಸ್ತ್ರವನ್ನು ಹೂಡಿ ನಿಮಿಷಾರ್ಧದಲ್ಲಿ ಮಾಂಸಖಂಡಗಳಂ ಭೂಮಂಡಲಕ್ಕೆ ಹಾರಿಸುವೆ ನಿನ್ನ ಪೌರುಷವನ್ನು ತೋರೆಲೊ ತರಳ ತೆಗೆಯುವೆ ನಿನ್ನ ಕರುಳ.

ಪದ

ಖುಲ್ಲ ದನುಜ ನಿನ್ನ ಹಲ್ಲು ಮುರಿಯುವೆನೀಗ ಎಲ್ಲಾ
ಶಸ್ತ್ರದ ಮೇಲಿರುವಾ ಇರುವಾ ಥಳಥಳ ಹೊಳೆಯು
ವುದೆನ್ನ ಶೂಲಾಯುಧದಬ್ಬೆಗೆ ನೀನು ನಿಲ್ಲುವದಿನ್ನು
ನಾ ಕಾಣೆ ನಾ ಕಾಣೆ॥

ವೀರಭದ್ರ: ಎಲೋ ನಿಶಾಚರ ಸುಮ್ಮನೆ ನಿನ್ನಲ್ಲಿ ಹುಲ್ಕಣಿಗಳಿಂದಾ ಕಾದಾಡಲು ಪ್ರಯೋಜನವಿಲ್ಲ ಇಗೋ ವೀರಬ್ರಹ್ಮಾಸ್ತ್ರವನ್ನು ಬಿಟ್ಟು ನಿನ್ನ ರಾಕ್ಷಸ ಕುಲವನ್ನು ನಾಶಪಡಿಸದೆ ಇದ್ದರೆ ಹರಪುತ್ರ ವೀರಭದ್ರನೆಂದು ಪೆಸರ್ ಪಡೆದು ಸಾರ್ಥಕವೇನೋ ಅತಿ ಜಾಗ್ರತೆ ಇಂದ ಯುದ್ಧಕ್ಕೆ ನಿಲ್ಲೆಲೋ ಭಂಡ ನಿನಗೆ ನಾನೇ ಗಂಡ.