ಈಶ್ವರ: ಆಹಾ ಇದೇನು ಯಾರೋ ನನ್ನನ್ನು ಸ್ತೋತ್ರ ಮಾಡುವಂತೆ ಕಾಣುವುದೂ ವಿಚಾರಿಸಿ ನೋಡುವೆನು ಅಯ್ಯ ನಂದೀಶ್ವರನೇ ಹೊರಗೆ ಯಾರೋ ನನ್ನನ್ನು ಕುರಿತು ಬಹಳವಾಗಿ ಧ್ಯಾನಿಸುವಂತೆ ಕಾಣುತ್ತದೆ. ಅವರ‌್ಯಾರು ತಿಳಿದು ಬಾರೈ ನಂದೀಶ ಸದ್ಭಕ್ತಿಹರ್ಷ.

ಪದ

ಕರುಣದಿಂದ ಪೊರೆಯೋ ನೀನು ಮನ್ಮಥಾರಿ ಶರಣಾಗತ
ಭರಣಾದೃತ ಮನ್ಮಥಾರಿ ಹರಿಯು ವಿಧಿಯು ಸುರವಾರ
ಮದನಾರಿ ತಮ್ಮ ಮೊರೆಯನಿಕ್ಕುತಿಹರು ನಿಮ್ಮ ಜಗಧಾರಿ॥

ನಂದೀಶ: ಸ್ವಾಮಿ ಜಗದೀಶ್ವರನೇ ಮನ್ಮಥಾರಿಯಾದಂಥ ಸ್ವಾಮಿಯೇ ಶರಣಾಗತ ಪರಿಪಾಲನೆ ವತ್ಸಲನಾದ ದೇವದೇವನೆ. ಆ ತಾರಕನೇ ಮುಂತಾದ ದೈತ್ಯರ ಬಾಧೆಯನ್ನು ತಾಳಲಾರದೆ ಹರಿಬ್ರಹ್ಮೇಂ ದ್ರಾದಿ ದೇವತೆಗಳು ತಮ್ಮಲ್ಲಿ ಮೊರೆ ಇಡಲಿಕೆ ಬಂದಿರುವರೈ ಪರಮಾತ್ಮನೆ ಮುಂದೇನು ಯೋಚನೆ.

ಈಶ್ವರ: ಎಲೈ ನಂದೀಶ್ವರನೆ ಹಾಗಾದರೆ ಅವರನ್ನು ಒಳಗೆ ಬರಮಾಡು.

ನಂದೀಶ್ವರ: ಸ್ವಾಮಿ ಮಹಾವಿಷ್ಣುವೇ ಜಗದೀಶ್ವರನ ಅಪ್ಪಣೆಯಾಗಿದೆ. ಸರ್ವರೂ ಒಳಗೆ ದಯಮಾಡಬಹುದೈ ಶ್ರೀಹರಿ.

ವಿಷ್ಣು: ದೇವರಿಗೆ ದೇವನಾದ ಪರಮಾತ್ಮನೆ ತಮ್ಮ ದರ್ಶನದಿಂದ ನಾವು ಧನ್ಯರಾದೆವು. ಆ ದುರುಳರಾದ ತಾರಕಾದಿ ರಕ್ಕಸರ ಉಪಟಳವು ಬಹಳ ಘನವಾಗಿರುವುದು ಆದ ಪ್ರಯುಕ್ತ ಅವರಂ ಕೊಲ್ಲಿಸುವ ಪ್ರಯತ್ನವಂ ಮಾಡಿ ನಮ್ಮಗಳನ್ನು ಕಾಪಾಡಬೇಕೈ ಮೃತ್ಯುಂಜಯನೇ.

ಈಶ್ವರ: ಅಯ್ಯ ಹರಿಬ್ರಹ್ಮೇಂದ್ರಾದಿ ದೇವತೆಗಳೆಲ್ಲರೂ ಕೇಳಿರಿ ಹೆದರಬೇಡಿರಿ ನಾನು ಗಿರಿಜೆಯನ್ನು ಲಗ್ನಮಾಡಿಕೊಂಡು ಕುಮಾರನಂ ಪಡೆದು ಆ ದೈತ್ಯರಂ ನಾಶಪಡಿಸಿ ನಿಮ್ಮಗಳಿಗೆ ಸುಖ ಉಂಟಾಗುವಂತೆ ಮಾಡುತ್ತೇನೈ ಅಮರಾದಿಗಳಿರಾ ಇನ್ನು ಮೇಲೆ ನಿಮ್ಮ ನಿಮ್ಮ ಸ್ಥಳಂಗಳಿಗೆ ಹೋಗುವರಾಗಿರಿ.

ವಿಷ್ಣು: ಅಯ್ಯ ಸಮಸ್ತರೂ ಕೇಳಿದಿರಾ ಆ ಸ್ವಾಮಿಯು ಅಪ್ಪಣೆಕೊಟ್ಟ ಮಾತನ್ನು ಕೇಳಿ ಬಹಳ ಸಂತೋಷವಾಯಿತು. ಕುಮಾರೋತ್ಪತ್ತಿಯಾಗುವ ಸಮಯವನ್ನು ನೋಡೋಣ ತೆರಳಿರಿ.

ರತಿ: ಆಹ ಇದೇನು ಬಳಿಯಲ್ಲಿದ್ದ ನನ್ನ ಕಾಂತನು ಎಲ್ಲಿ ಹೋದರೊ ಕಾಣೆ ಅಯ್ಯೋ ಶಿವ ಶಿವ ಮಹಾದೇವ ಆಹಾ ಇದೇನಾಶ್ಚರ‌್ಯ ಬೂದಿಯ ಗುಡ್ಡೆಯು ನನ್ನ ಸಮೀಪದಲ್ಲಿರುವುದನ್ನು ನೋಡಿದರೆ ನನ್ನ ಪ್ರಾಣದೊಲ್ಲಭನು ಸ್ವಾಮಿಯ ನಿಟಿಲಾಕ್ಷಿ ಇಂದ ದಹಿಸಿ ಹೋದಂತೆ ಕಾಣುವುದು. ಅಯ್ಯೋ ಮುಂದೇನು ಗತಿ ಪ್ರಾಣೇಶನೆ ಎಲ್ಲಿ ಮರೆಯಾಗಿರುವೆ ಒಂದು ಮಾತನ್ನಾದರೂ ಆಡಬಾರದೇ ಕಾಂತ ಅಯ್ಯೋ ಹರಹರ.

ಪದ

ಕುಸುಮಚಾಪ ಸರಸ ಸಲ್ಲಾಪ ರಸಿಕಾಳಪ್ರದೀಪಾ॥
ಉಸುರಾದೊಂದು ಮಾತಾ ಯನಗೇ ರತಿಯೊಳಲ್ಲಿ
ಪೋದನೇನೊ॥ಸಾರಿ ಸಾರಿ ಹೇಳಿದರೂ ಮೀರಿ
ಮಾತ ನೀನು॥ಸೇರಿ ವಿಧಿಯ ಮಾತ ಕೇಳಿ ಈ ರೀತಿ
ಯಾಗುವರೇ॥

ರತಿ: ಮೋಹನಾಂಗನೇ ತಾವು ರಸಿಕಾಗ್ರೇಶ್ವರರಾದಂಥವರು ಸರಸವಾದ ಲೀಲೆಗಳಿಂದ ಜಗತ್ತನ್ನೆಲ್ಲಾ ಮೋಹಿಸಿರುವ ಪ್ರಾಣಕಾಂತ. ಈ ವೇಳೆಯಲ್ಲಿ ನನ್ನ ಸಂಗಡ ಬಂದು ಒಂದು ಮಾತನ್ನು ಆಡದೆ ಎಲ್ಲಿ ಹೋದೆ ಮುಖವನ್ನು ತೋರಬಾರದೇ ರಮಣ ಭಾವನಾದ ಬ್ರಹ್ಮ ದೇವರ ಮಾತನ್ನು ಕೇಳಿ ಜಗದೀಶನಲ್ಲಿ ಬಾಣ ಪ್ರಯೋಗಮಾಡುವುದಕ್ಕೆ ಯೋಚನೆ ಮಾಡಿದಿರಿ. ನಾನೆಷ್ಟು ವಿಧವಾಗಿ ಹೇಳಿದರೂ ಕೇಳದೆ ಈ ದೇವತೆಗಳ ಮಾತನ್ನು ಕೇಳಿಕೊಂಡು ನಿಮಗಿಂತ ದುರವಸ್ಥೆ ಪ್ರಾಪ್ತವಾಯಿತೆ ಶಂಕರನೆ.

ಪದ

ಹರನು ಶಿವೆಯು ಬೆರೆದು ನಿನ್ನ ಪೊರೆವಾರೆಂದು ಭ
ರದಿ ಹರಿಯು ಪೇಳ್ದ ನುಡಿಯು ಈಗ ಧರೆಯೋಳ್‌
ಏನಾಯ್ತಕಟ॥ಪಿತನು ಮಾತಾ ಪತಿಯು ನೀನೆ ಕ್ಷಿ
ತಿಯೊಳೆನಗೆ ಗತಿಯೇನು ಅಕಟಾ॥

ರತಿ: ಅಯ್ಯ ರಮಣ ನಿನ್ನನ್ನು ಈ ಗತಿಗೆ ಗುರಿ ಮಾಡುವುದಕ್ಕಾಗಿ ನಮ್ಮ ಮಾವನಾದ ಮಹಾವಿಷ್ಣುವು ನೀನು ಬಾಣ ಪ್ರಯೋಗಮಾಡಿ ತಪಸ್ಸನ್ನು ವಿಮುಖವಾಗಿ ಮಾಡಿದರೆ ನಿನಗೆ ವರವನ್ನು ಕೊಡುತ್ತಾರೆಂಬುದಾಗಿ ಪೇಳಿದರಲ್ಲ ನಿಮ್ಮ ತಂದೆಯವರು ಹೇಳಿದ ಮಾತು ಏನಾಯಿತು. ಆ ಸ್ವಾಮಿಯು ವರವನ್ನು ಯಾಕೆ ಕೊಡಲಿಲ್ಲ ಅಯ್ಯೋ ವಿಧಿಯೇ ನಾನು ನಿನ್ನ ಕೈಹಿಡಿದಾರಭ್ಯ ನನ್ನ ತಂದೆ ತಾಯಿಗಳನ್ನು ಮರೆತು ನೀವೇ ನನಗೆ ತಂದೆ ತಾಯಿ ಬಂಧು ಬಳಗ ಸರ್ವದೇವರು ನೀವೇ ಎಂದು ನಂಬಿದಂಥ ಸತಿಯಳಂ ಬಿಟ್ಟು ಹೋದ ಮೇಲೆ ನನ್ನ ಗತಿ ಏನು ದಿಕ್ಕಿಲ್ಲದ ಪರದೇಶಿಯಳಂತೆ ಮಾಡಿದಿರಲ್ಲ ಅಯ್ಯೋ ಹರಹರ ಶಿವಶಿವ.

ಪದ

ಅಕಟಕಟ ಯನ್ನ ಪುಣ್ಯ ವಿಕಳವಾಯ್ತೆ ಜಗದಿ ಮಕರಾಂತಕ
ನೇ ಮುಕುತಿ ಏನು ಮುಂದೆ ಯೆನಗೆ॥

ರತಿ: ಅಯ್ಯೋ ಪತಿಯೆ ನಾನು ಜನ್ಮಜನ್ಮಾಂತರದಲ್ಲಿ ಮಾಡಿದ ಪುಣ್ಯ ವಿಶೇಷದಿಂದ ನಿನ್ನ ಕೈ ಹಿಡಿದು ಸಂಷೋಷಳಾಗಿದ್ದೆನು. ಈಗ ಆ ಪುಣ್ಯವೆಲ್ಲಾ ಹಾಳಾಗಿಹೋಗಿ ಈ ಗತಿಗೆ ಗುರಿಮಾಡಿದೆ ನಿನ್ನ ಕೈ ಹಿಡಿದ ಸತಿ ನಾನಲ್ಲವೆ ನನ್ನ ಸಂಗಡ ಯಾತಕ್ಕೆ ಮಾತನಾಡಬಾರದು ಅಂಥ ಅಪರಾಧವೇನು ಮಾಡಿರುವೆ ನಿಷ್ಕಾರಣವಾಗಿ ಯನ್ನನ್ನು ತೊರೆದು ಅನಾಥಳನ್ನಾಗಿ ಮಾಡಿ ಎಲ್ಲಿಗೆ ಹೋದೆ ಏನು ತಪ್ಪು ಮಾಡಿದ್ದರೂ ಕ್ಷಮಿಸಿಕೊಂಡು ಒಂದು ಮಾತನ್ನಾದರೂ ಆಡಬಾರದೆ ಸುಂದರ ಮೋಹಾಬ್ದಿ ಚತುರ.

 

(ರತಿಯ ಮೂರ್ಛೆ)

ಕಂದ

ಇಂದು ಹಲವಂದದಿಂದ ಕಂದನವಂ ಗೈವ ರತಿಗೋ
ಳಂ ಕೇಳ್ದಾ ಇಂದುಧರಂ ನಂದಿಯ ಕರದೀ ಧ್ವನಿ ಏನೆನಲ್ಕೆ
ನಂದಿಯು ನುಡಿದಂ॥

ಈಶ್ವರ: ಅಯ್ಯ ನಂದೀಶ್ವರನೇ ಹೊರಗೆ ಯಾರೋ ಬಹಳವಾಗಿ ರೋದನವನ್ನು ಮಾಡುತ್ತಲಿದ್ದಾರೆ. ಅವರ‌್ಯಾರು ತಿಳಿದುಕೊಂಡು ಬಾರಯ್ಯ ನಂದೀಶ ಸದ್ಭಕ್ತಿಹರ್ಷ.

ಪದ

ದೇವ ದೇವನೆ ಕೇಳೀ ನುಡಿಯ ಹತವಾದನೆಂದು ನಿ
ಮ್ಮಡಿಯ ಭಾವದಿ ನೆನೆಯುತ ಕಂದಿಕಾಮನು ನಿ
ರ್ಜೀವನಾದುದ ಕಂಡು ಭಾವಕಿ ಅಳುವಳು॥

ನಂದೀಶ: ಸ್ವಾಮಿ ಪರಮಾತ್ಮನೇ ರೋದನ ಮಾಡುವವರು ಯಾರೆಂದು ತಮ್ಮ ಅಪ್ಪಣೆಯಾಯಿತು ತಮ್ಮ ನಿಟಿಲಾಕ್ಷಿ ಇಂದ ಮಡಿದ ಮನ್ಮಥನ ಹೆಂಡತಿ ಪತಿಯನ್ನು ಕಳೆದುಕೊಂಡು
ರೋದನವಂ ಮಾಡುತ್ತಿದ್ದಾಳೆ ಸ್ವಾಮಿ ಭಕ್ತ ಜನಪ್ರೇಮಿ.

ಪದ

ಸುರರ ಕಾರ‌್ಯಕೆಂದು ತಾನು ಪುಷ್ಟಶರವೆಸೆಯಲು
ತಾ ಸ್ಮರನು ಉರಿದು ಹೋಗಲು ನಿಟಿಲೇಕ್ಷಣ॥
ವೈಶ್ವಾನರಂ ಕಾಣುತ ಮರಗುವಳೀ ರತಿದೇವ ದೇವ॥

ನಂದೀಶ: ಆಹಾ ಪರಮಾತ್ಮನೆ ಆ ಮನ್ಮಥನು ದೇವತೆಗಳ ಕಾರ‌್ಯಕ್ಕಾಗಿ ಬಂದು ಬಾಣ ಪ್ರಯೋಗಮಾಡಿ ಸ್ವಾಮಿ ದ್ರೋಹಕ್ಕೆ ಗುರಿಯಾಗಿ ತಮ್ಮ ನಿಟಿಲಾಕ್ಷಿ ಇಂದ ಮಡಿದುಹೋದದ್ದರಿಂದ ಸ್ವಾಮಿಯವರ ಪಾದವೇ ಗತಿಯಂದು ಮೊರೆ ಇಡುವ ದುಃಖವೇ ಹೊರತು ಬೇರೆ ಇಲ್ಲವೈ ದೇವಾ ಮಹಾನುಭಾವ.

ಈಶ್ವರ: ಅಯ್ಯ ನಂದೀಶ್ವರನೇ ಆಕೆಯನ್ನು ಒಳಗೆ ಕರೆದುಕೊಂಡು ಬರುವನಾಗಯ್ಯ ನಂದೀಶನೇ.

ನಂದೀಶ: ಅಮ್ಮ ರತಿದೇವಿ ಜಗದೀಶನ ಅಪ್ಪಣೆಯಾಗಿರುವುದು ಒಳಗೆ ಬರುವವಳಾಗು.

ರತಿ: ಜಯ ಜಯ ಸ್ವಾಮಿ ಲೋಕನಾಯಕ ಅನಾಥಳಾದ ಎನ್ನನ್ನು ಕರುಣವಿಟ್ಟು ಕಾಪಾಡು ಕಾಪಾಡು.

ಈಶ್ವರ: ಅಮ್ಮಾ ರತಿಯೆ, ನಿನ್ನ ಮನಸ್ಸಿನಲ್ಲಿರುವ ಚಿಂತೆಯನ್ನು ಬಿಡು ಸಂತೋಷದಿಂದ ಇರು. ನಿನ್ನ ಪತಿಯಾದ ಮನ್ಮಥನು ಎಂಥಾ ದ್ರೋಹಿಯಾದರೂ ಚಿಂತೆ ಇಲ್ಲ. ನಿನ್ನ ಪತಿವ್ರತಾ ಧರ್ಮಕ್ಕೆ ನಾನು ಮೆಚ್ಚಿದೆನು ಇನ್ನು ಸ್ವಲ್ಪ ದಿನಗಳಲ್ಲಿಯೇ ನಿನ್ನ ಪತಿಯನ್ನು ಕೊಡುತ್ತೇನೆ ಅದುವರೆಗೂ ನಿರೀಕ್ಷಿಸುತ್ತಿರು ಅಯ್ಯ ಸನಕಾದಿ ಮುನಿಗಳೇ ಪರಮೇಶ್ವರನು ಸರ‌್ವಂತರ‌್ಯಾಮಿಯಾಗಿದ್ದಾನೆಂದು ಧ್ಯಾನಿಸುತ್ತಿರಿ ಗಿರಿಜೆ ಯನ್ನಂ ಕುರಿತು ತಪಸ್ಸು ಮಾಡುತ್ತಾಳೆ ನಾನು ವೃದ್ಧ ಬ್ರಾಹ್ಮಣನಂತೆ ಹೋಗಿ ಬರುತ್ತೇನೆ.

 

(ಈಶ್ವರನು ಬ್ರಾಹ್ಮಣ ರೂಪಿನಿಂದ ಬರುವುದು)

ಈಶ್ವರ: ಆಹಾ ಈಗಲಾದರೊ ಎನ್ನ ರೂಪು ಲಾವಣ್ಯವನ್ನು ಬಿಟ್ಟು  ವೃದ್ಧ ಬ್ರಾಹ್ಮಣನಂತೆ ಇರುವುದನ್ನು ಯಾರು ನೋಡಿದರೂ ನನ್ನನ್ನು ಗುರುತು ಹಿಡಿಯಲಾರರು. ಆದ್ದರಿಂದ ಈಗಲೇ ಪ್ರವೇಶಮಾಡಿ ಆ ಗಿರಿರಾಜನ ಪುತ್ರಿಯಾದ ಗಿರಿಜೆಯನ್ನು ಒಲಿಸಿಕೊಳ್ಳುತ್ತೇನೆ.

ಬ್ರಾಹ್ಮಣ: ಆಹ ನಾನು ಹೀಗೆ ಕಾಲವಿಳಂಬ ಮಾಡುವುದರಿಂದ ಪ್ರಯೋಜನವಿಲ್ಲ. ಗಿರಿಜೆಯು ಇರುವ ಬಳಿಗೆ ಹೋಗುತ್ತೇನೆ. ಎಲಾ ಬಾಲಕಿಯರೆ ನೀವ್ಯಾರು ಈ ದ್ವಾರದಲ್ಲಿರಲು ಕಾರಣವೇನು.

ಸಖಿಯರು: ಸ್ವಾಮಿ ತಾವ್ಯಾರು ತಮ್ಮ ಹೆಸರೇನು ಯಾತಕ್ಕೆ ದಯಮಾಡಿಸಿದಿರಿ ನಮ್ಮಿಂದೇನಾಗ ಬೇಕು.

ಬ್ರಾಹ್ಮಣ: ಎಲಾ ತರಳೆಯರೆ ಆ ಗಿರಿಜೆಯು ತಪಸ್ಸು ಮಾಡುವುದು ಇಲ್ಲೆಯೋ ಅಥವಾ ಇನ್ನೆಲ್ಲಿಹಳು.

ಸಖಿ: ಆಹಾ ದ್ವಿಜೋತ್ತಮರೇ ಇಲ್ಲೇ ತಪಸ್ಸು ಮಾಡುತ್ತಿದ್ದಾರೆ. ಅವರಿಂದ ತಮಗೇನಾಗ ಬೇಕಾಗಿರುವುದು.

ಬ್ರಾಹ್ಮಣ: ಆಮೇಲೆ ಹೇಳುತ್ತೇನೆ.

ಸಖಿ: ಸ್ವಾಮಿ ತಾವಿಲ್ಲಿಯೇ ಇದ್ದರೆ ನಮ್ಮ ದೇವಿಗೆ ತಿಳಿಸಿ ಬರುತ್ತೇವೆ.

ಬ್ರಾಹ್ಮಣ: ಸಖಿಯರೆ ಹಾಗೆ ಮಾಡಿ ನಾನು ಮಾತ್ರ ನಿಂತುಕೊಳ್ಳಲಾರೆ ಜಾಗ್ರತೆಯಾಗಿ ಬನ್ನಿರಿ.

ಸಖಿಯರು: ತಮ್ಮ ಅಪ್ಪಣೆಯಂತೆ ಬರುತ್ತೇವೆ. ಅಮ್ಮಯ್ಯ ಗಿರಿಜಾ ದೇವಿಯೆ ಯಾರೋ ಒಬ್ಬ ಮುದುಕ ಬ್ರಾಹ್ಮಣರು ತಮ್ಮ ತಪಸ್ಸನ್ನು ನೋಡಲಪೇಕ್ಷಿಸಿ, ದ್ವಾರಬಾಗಿಲಲ್ಲಿ ನಿಂತಿರುವರು ಅಪ್ಪಣೆ ಏನಾಗುವುದು ತಾಯೆ.

ಗಿರಿಜೆ: ಸಖಿ, ಅವರನ್ನು ಈಗಲೇ ಒಳಗೆ ಕರೆದುಕೊಂಡು ಬರುವಳಾಗು.

ಸಖಿ: ತಮ್ಮಪ್ಪಣೆಯಂತೆ ಆಗಬಹುದು.

ಸಖಿ: ಸ್ವಾಮಿ ನಮ್ಮ ದೇವಿಯ ಅಪ್ಪಣೆಯಾಗಿರುವುದು ಒಳಗಡೆ ಬರುವರಾಗಿರಿ.

ಬ್ರಾಹ್ಮಣ: ಆಗಬಹುದು.

ಸಖಿ: ಅಮ್ಮ ಜಗದಾಂಬೆ ಪೂಜ್ಯರು ಬಂದಿರುವರು.

ಗಿರಿಜೆ: ಪೂಜ್ಯರೆ ತಮ್ಮ ದರ್ಶನದಿಂದ ನಾನು ಧನ್ಯಳಾದೆನು. ನಾನು ಮಾಡುವ ಪಾದಪೂಜೆಯನ್ನು ಕೈಗೊಂಡು ಉದ್ದಾರ ಮಾಡೈ ದೇವ.

ಬ್ರಾಹ್ಮಣ: ಎಲೈ ಹುಡುಗಿ ನೀನು ಮಾಡಿದ ಪಾದಪೂಜೆಗೆ ಮಾರ್ಗಾಯಾಸವೆಲ್ಲಾ ಪರಿಹಾರವಾಯ್ತು ನಿನ್ನನ್ನು ನೋಡಿದರೆ ಚಿಕ್ಕ ವಯಸ್ಸಿನವಳು ಬಹಳವಾಗಿ ಬಳಲುತ್ತಿರುವೆಯಲ್ಲಾ ಕಾರಣವೇನು. ನೀನು ತಪಸ್ಸು ಮಾಡುವುದು ನೋಡಿದರೆ ನಿನಗೆ ಅನುಕೂಲವಾದ ಗಂಡನನ್ನು ಸೇರಬೇಕೆಂಬುದಾಗಿ ತಪಸ್ಸು ಮಾಡುವಂತೆ ತೋರುತ್ತದೆ ಯಾರನ್ನು ಕುರಿತು ತಪಸ್ಸು ಮಾಡುವೆ ಹೇಳು.

ಪದ

ದೇವರಿಗೆಲ್ಲಾ ದೇವನಾ ಮೂರು ಲೋಕ ಕಾಯ್ವನ
ಭಜಿತಬಾಹುಪನ ಭಾವದಿ ನೆನೆಯುತ ಪತಿಯಾಗಬೇಕೆಂದು
ಭಾವಜ ಹರನನು ಭಜಿಪೆ॥ದೇವರಿಗೆಲ್ಲಾ ದೇವನಾ॥

ಗಿರಿಜೆ: ಆಹಾ ದ್ವಿಜೋತ್ತಮರೆ, ತಪಸ್ಸು ಮಾಡಲಿಕ್ಕೆ ಕಾರಣವೇನೆಂದರೆ ದೇವಾಧಿದೇವನಾದ ಆ ಜಗದೀಶನನ್ನು ಹೊಂದಬೇಕೆಂಬುದಾಗಿ ಆನಂದದಿಂದ ತಪಸ್ಸು ಗೈಯುತ್ತಾ ಆ ಸ್ವಾಮಿಯು ಬರುವ ದಾರಿಯನ್ನು ಕಾದುಕೊಂಡಿರುತ್ತೇನೆ ಸ್ವಾಮಿ ವಿಪ್ರೋತ್ತಮರೆ.

ಪದ

ಎನಲು ಕೈಗಳ ಹೊಯ್ದು ನಗುತ ಕಾಮಾರಿಯು
ಘನತೋಷವನು ತಾಳುತಾ ಬಿನಗು ವೇಷವ ತಾ
ಳ್ದ ಬೂದಿಬಡುಕನಿಗೆ ನೀ ವನಿತೆಯಾಗುವರೆ॥

ಬ್ರಾಹ್ಮಣ: ಎಲಾ ಹುಡುಗಿಯೇ ಬಹಳ ಚೆನ್ನಾಯ್ತು ಆ ಬೂದಿ ಬಡುಕನಾದ ಈಶ್ವರನನ್ನು ಸೇರಬೇಕೆಂದು ತಪಸ್ಸು ಮಾಡುವ ನಿನ್ನ ಬುದ್ಧಿಯನ್ನು ನೋಡಿದರೆ ನನಗೆ ನಗು ಬರುವುದು ಬಹಳ ಚೆನ್ನಾಯ್ತು ಆದರೂ ಚಿಂತೆ ಇಲ್ಲ ನಿನ್ನ ಹೆಸರೇನು ಹೇಳು.

ಪದ

ನಿರುಪಮ ಮಹಿಮನ ನಿಗಮವೇದ್ಯನ ಜಗದಿ
ಪರಿಪೂರ್ಣರೂಪನಾಗಿಹನ ಪರಮ ಮಂಗ
ಳಮೂರ್ತಿಯಾದ ಮಹೇಶನ ಪರಿಹಾಸ್ಯಗೈ
ವರೆ ದ್ವಿಜರೆ॥

ಗಿರಿಜೆ: ಎಲಾ ಭೂಸುರೋತ್ತಮರೇ ಉಪಮಾನರಹಿತರೆನ್ನುವ ಬಿರುದಂ ಪಡೆದಿರುವ ಆ ಮಂಗಮೂರ್ತಿಯಾದ ಪರಶಿವನನ್ನು ವಯೋವೃದ್ಧರಾದ ನೀವು ಹೀಗೆ ಜರಿದು ಮಾತನಾಡ ಬಾರದು ಆದರೆ ನನ್ನನ್ನು ಗಿರಿಜೆ ಎಂದು ಕರೆಯುವರೈ ಭೂಸುರೋತ್ತಮರೆ.

ಪದ

ಧರಿಸೀ ಕ್ಷುದೆಯನ್ನು ತಲೆಯೋಡ ಪಿಡಿಯುತ
ತಿರಿಕೆ ಗೈಯ್ಯುವ ಶಿವನ॥ಕರಿಯ ಚರ್ಮವನೊದ್ದು
ಹೊದಿಕೆಗಳಿಲ್ಲದ ಪುರುಷನ ಬಯಸುವರೆ॥

ಬ್ರಾಹ್ಮಣ: ಎಲಾ ಗಿರಿಜೆಯೆ, ಶಿವಲೀಲೆಗಳನ್ನು ನಾನು ಸ್ವಲ್ಪ ಹೇಳುತ್ತೇನೆ ಕೇಳು ತಿನ್ನುವುದಕ್ಕೆ ಅನ್ನವಿಲ್ಲದೆ ಮನುಷ್ಯರ ತಲೆಬುರುಡೆಗಳನ್ನು ಹಿಡಿದು ತಿರುಪೆ ಮಾಡುತ್ತಾನೆ. ಹೊದಿಯುವುದಕ್ಕೆ ಗತಿ ಇಲ್ಲದೆ ಆನೆ ಹುಲಿ ಚರ್ಮವನ್ನು ಹೊದ್ದಿರುತ್ತಾನೆ. ಇಡುವುದಕ್ಕೆ ಆಭರಣಗಳಿಲ್ಲದೆ ಮನುಷ್ಯರ ರುಂಡ ಮಾಲೆಗಳನ್ನು ಹಾಕಿರುತ್ತಾನೆ. ಇಂಥ ತಿರುಕನನ್ನು ಸೇರಬೇಕೆಂದು ತಪಸ್ಸು ಮಾಡುವ ನಿನ್ನ ಬುದ್ಧಿಗೆ ನಾನು ಏನು ಹೇಳಲಿ.

ಪದ

ಪಾಲಿಸೆ ಧರೆಯೊಳು ಕಪಾಲವ ಪಿಡಿದವನ ಕಾಲ
ಕಾಲನ ಜಗದಿ ನೀನು॥ನಿತ್ಯ ತೃಪ್ತನ
ಜರಿವರೆ ಶ್ರೀಲಕ್ಷ್ಮೀರಮಣ ವಂದಿತನ॥ದ್ವಿಜರೆ॥

ಗಿರಿಜೆ: ಆಹಾ ಪೂಜ್ಯರೆ ಆ ಜಗದೀಶನು ಭಕ್ತರನ್ನು ಕಾಪಾಡುವುದಕ್ಕಾಗಿ ಬ್ರಹ್ಮ ಕಪಾಲವಂ ಧರಿಸಿದನೇ ಹೊರತು ಹೊಟ್ಟೆಗಿಲ್ಲದೆ ತಿರುಪೆ ಮಾಡಲಿಲ್ಲ ಹಸಿವು ತೃಷೆಗಳಿಲ್ಲದೆ ನಿತ್ಯ ತೃಪ್ತರಾಗಿ ಆ ಮಹಾವಿಷ್ಣುವೇ ಮೊದಲಾದವರಿಂದ ಪೂಜಿಸಿಕೊಳ್ಳುವ ಆ ಅಂತಕಾಂತಕನನ್ನು ಧಿಕ್ಕರಿಸಿ ಮಾತನಾಡುವುದನ್ನು ನನ್ನ ಕರ್ಣಗಳಿಂದ ಕೇಳಲಾರೆ. ಸಾಕು ಸಾಕು ಸುಮ್ಮನಿರಿ ವಿಪ್ರೋತ್ತಮರೆ.

ಪದ

ದೊರಕದೆ ಸುಧೆಯು ತಾ ಗರಳಾವ ಕುಡಿದವ
ನ ಉರುಗವ ಧರಿಸಿದವನ॥ತಿರುಗುವ ಬೆತ್ತಲೆ ನಾ
ಚಿಕೆಯನು ಬಿಟ್ಟು ಹರನನ್ನೂ ಕೂಡುವರೆ॥

ಬ್ರಾಹ್ಮಣ: ಎಲೈ ಕೋಮಲಾಂಗಿಯೇ ಪೂರ್ವದಲ್ಲಿ ಸಮುದ್ರ ಮಥನ ಕಾಲದಲ್ಲಿ ಹುಟ್ಟಿದ ಅಮೃತವನ್ನು ಪುಣ್ಯವಂತರಾದ ದೇವತೆಗಳು ಕುಡಿದರು. ಇವನು ಪುಣ್ಯಹೀನನಾದ್ದರಿಂದ ಕಾಲಕೂಟವೆಂಬ ವಿಷವನ್ನು ಕುಡಿದು ಮೈಗೆಲ್ಲಾ ಬೂದಿಯಂ ಬಳಿದುಕೊಂಡು ಹಾವನ್ನು ಕೊರಳಿಗೆ ಸುತ್ತಿಕೊಂಡು ದಿಗಂಬರನಾಗಿ ಸ್ಮಶಾನದಲ್ಲಿ ವಾಸಮಾಡುವ ಆ ಗೊರವನನ್ನು ಏನೆಂದು ಮೆಚ್ಚಿರುವೆಯೊ ಕಾಣೆ ನೀ ಕಡುಜಾಣೆ.

ಪದ

ಪಟ್ಟೆ ಪೀತಾಂಬರ ಉಟ್ಟು ಭೂಷಣವ ತೊಟ್ಟು ದಿ
ಟ್ಟ ಸುಧಾಶರನೆಂತೋ॥ನಿಟ್ಟಿಸಿ ಪೇಳ್ದುದ ಕಾಣೆ ನಾ
ನಾರೊಳು॥ನೆಟ್ಟನೆ ಶಿವನನ್ನು ಭಜಿಪೆನು॥ದ್ವಿಜರೆ॥

ಗಿರಿಜೆ: ಆಹೋ ಪೂಜ್ಯರೆ ಆ ಸ್ವಾಮಿಯು ದಿಗಂಬರನೆಂದು ಅಪ್ಪಣೆ ಕೊಡುತ್ತೀರಲ್ಲವೇ ಲೋಕದಲ್ಲಿರತಕ್ಕ ಭಕ್ತಾದಿಗಳಿಗೆಲ್ಲಾ ಪಟ್ಟೆ ಪೀತಾಂಬರವನ್ನು ಕೊಟ್ಟು ಕಾಪಾಡುವಂಥ ಸ್ವಾಮಿಯನ್ನು  ತಾವು ಈ ರೀತಿಯಾಗಿ ಜರಿಯತಕ್ಕುದನ್ನು ನನ್ನ ಕಿವಿಯಿಂದ ಕೇಳಲಾರೆನೈ ಸ್ವಾಮಿ ಸಾಕು ಸಾಕು ಸಮ್ಮನಿರಿ.

ಬ್ರಾಹ್ಮಣ: ಎಲಾ ಹುಡುಗಿಯೆ ಆ ಶಿವನ ವಿಚಾರವಾಗಿ ನಾನು ಎಷ್ಟು ಹೇಳಿದಾಗ್ಯು ನೀನು ಕೇಳದೆ ಹೋದೆ ನಿನ್ನ ಪಾಡಿದ್ದಂತೆ ಮಾಡಿಕೊ ನಾನು ಬಂದ ವಿಚಾರವನ್ನು ನೆರವೇರಿಸಿ ಕೊಡುವೆಯೊ ಇಲ್ಲವೊ ಹೇಳು.

ಗಿರಿಜೆ: ಆಹೋ ಪೂಜ್ಯರೇ ತಮ್ಮ ಮಾತನ್ನು ಮೀರಿ ನಾನೆಂದಿಗೂ ನಡೆಯುವುದಿಲ್ಲ. ತಮ್ಮ ಕೋರಿಕೆ ಅಪ್ಪಣೆಯಾಗಲಿ ಸ್ವಾಮಿ.

ಬ್ರಾಹ್ಮಣ: ಗಿರಿಜೆಯೆ ಹೆಚ್ಚು ಮಾತಿನಿಂದ ಪ್ರಯೋಜನವಿಲ್ಲ ನಿನ್ನ ರೂಪು ರೇಖಾಲಾವಣ್ಯ ನಿನ್ನ ತಪಸ್ಸಿಗೆಲ್ಲಾ ಮೆಚ್ಚಿ ಬಂದಿರುತ್ತೇನೆ ನನ್ನನ್ನು ನೀನು ಲಗ್ನಮಾಡಿಕೊಳ್ಳಬಾರದೆ ಹುಡುಗಿಯೆ.

ಕಂದ

ಸಖಿಯಳೆ ಬಾ ಬಾ ಈ ದ್ವಿಜನಂ ಕಳುಹೆನ್ನುತ ಚಿಂತೆ
ಯಾಂತು ಪೇಳಲ್ಕತ್ತಂ ಥಳಥಳಿಪ ನೈಜರೂಪವ
ತಳೆಯಲ್‌ ಕಂಡಗಜೆ ಬೆದರಿ ನಮಿಸಿದಳು॥

ಗಿರಿಜೆ: ಎಲಾ ಸಖೀಮಣಿಯೆ ಈ ಭೂಸುರರು ಪರಮಾತ್ಮನನ್ನು ಧಿಕ್ಕರಿಸುತ್ತಾರೆ ಈ ಕಿವಿಯಿಂದ ಕೇಳಲಾರೆನು ಜಾಗ್ರತೆ ಹೊರಗೆ ಕಳುಹಿಸು ಸಖೀಮಣಿಯೆ.

ಬ್ರಾಹ್ಮಣ: ಎಲೈ ಗಿರಿಜೆ ನನ್ನನ್ನು ಹೊರಗೆ ಕಳುಹಿಸೆಂದು ಹೇಳುವೆಯಲ್ಲ ಹಾಗಾದರೆ ನಾನ್ಯಾರು ಚೆನ್ನಾಗಿ ಕಣ್ಣು ಬಿಟ್ಟು ನೋಡುವಳಾಗು॥

 

(ಶಿವನು ಪ್ರತ್ಯಕ್ಷನಾಗುವನು)

ಗಿರಿಜೆ: ಶಿವ ಶಿವ ಪರಮಾತ್ಮನೆ ಇದೇನಾಶ್ಚರ‌್ಯವು ರಕ್ಷಿಸು ರಕ್ಷಿಸು॥

ಪದ

ಕರುಣಿಸು ಪರಮೇಶ ದುರಿತವಿನಾಶ ಪರಿವೃತ
ಭವನಾಶ॥ಯನ್ನಪರಾಧವ ಕ್ಷಮಿಸಬೇಕೈ ಈ
ಬಾಲೆಯ ನುಡಿಗಳ ಲಾಲಿಸು ಪರಮಾತ್ಮ॥ಕರುಣಿಸು॥

ಗಿರಿಜೆ: ಜಯ ಜಯ ಸ್ವಾಮಿ ತಾವು ಭವಪಾಶವನ್ನು ಪರಿಹರಿಸಿ ಪಾಪಕ್ಷಯವನ್ನು ಮಾಡಿ ಭಕ್ತರನ್ನು ಕಾಪಾಡುವ ದೇವರೇ ಈ ನನ್ನ ಅವಿಗ್ನತೆಯನ್ನು ಕ್ಷಮಿಸಬೇಕೈ ಪರಮಾತ್ಮ.

ಪದ

ದೇವದೇವನೆ ಎನ್ನ ಭಾವವ ಶೋಧಿಸೆ
ಈ ವಿಧ ವೇಷದಿ ತೋಷಿಸಿ ಬರುವರೆ॥

ಗಿರಿಜೆ: ಶ್ರೀಮನ್ ಮಹಾದೇವನೆ ತಮ್ಮನ್ನು ಕುರಿತು ತಪಸ್ಸು ಮಾಡುವ ನನ್ನ ಮನಸ್ಸನ್ನು ಪರಿಶೋಧಿಸುವುದಕ್ಕಾಗಿ ಈ ರೂಪಿನಿಂದ ದಯಮಾಡಿಸಿ ತಾವು ಇಷ್ಟು ಪರೀಕ್ಷೆಯನ್ನು ಮಾಡಬೇಕೇ ಪರಮಾತ್ಮ.

ಪದ

ಚರಣ ಕಮಲವನ್ನು ಮರೆಯದೆ ನೆನೆಯುವೆ
ತರಳೆಯ ರಕ್ಷಿಸು ಕರವನು ಪಿಡಿಯುತ

ಗಿರಿಜೆ: ಸ್ವಾಮಿ ಪರಮಾತ್ಮನೆ ತಮ್ಮ ಪಾದ ಭಜನೆಯ ಇಂದ ಇರುವ ನನ್ನನ್ನು ಕೈಯಿಡಿದು ಉದ್ದಾರ ಮಾಡಿರಿ ಸ್ವಾಮಿ ಒಂದು ವೇಳೆ ಏನು ತಪ್ಪು ಇದ್ದಾಗ್ಯು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇನೆ. ಇದೋ ತಮ್ಮ ಪಾದಕ್ಕೆ ವಂದನೆ.

ಈಶ್ವರ: ಆಹಾ ಪ್ರಾಣಮಣಿ ಗಿರಿಜೆಯೇ ನಿನ್ನ ಅಭಿಪ್ರಾಯವನ್ನು ನೋಡಬೇಕೆಂದು ಈ ರೀತಿ ಮಾಡಿದೆನು ನಿನ್ನ ಅಭಿಲಾಷೆ ಗೊತ್ತಾಯಿತು. ಹೆದರಬೇಡ ಎಲಾ ಗಿರಿಜೆಯೆ ನಿನ್ನನ್ನು ಸ್ವಲ್ಪ ದಿನದಲ್ಲಿಯೆ ಲಗ್ನ ಮಾಡಿಕೊಂಡು ಹೋಗುವೆನು. ಇನ್ನು ನಿನ್ನ ತಪಸ್ಸು ಸಾಕು ನಿಮ್ಮ ತಂದೆಯ ಪಟ್ಟಣಕ್ಕೆ ಹೋಗುವಳಾಗು ನಾನು ಈಗಲೇ ಲಗ್ನಕ್ಕೋಸ್ಕರ ಯಾವ ಪ್ರಯತ್ನ ಮಾಡಬೇಕೊ ಮಾಡುವೆನು ಅದುವರೆವಿಗೂ ಧೈರ‌್ಯವಾಗಿರು ನಾನು ಬಂದು ಬಹಳವಾಯಿತು ಕೈಲಾಸಕ್ಕೆ ಹೋಗುತ್ತೇನೆ ಕಾಂತೆ ಮತಿಗುಣವಂತೆ.

 

(ಕೈಲಾಸಕ್ಕೆಸಪ್ತರುಷಿಗಳು ಬರುವರು)

ದೇವ ನಮೋನ್ನಮೋ ದೇವ ನಮೋನ್ನಮೋ ದೇವ ನಮೋ
ನ್ನಮೋ ದೇವ ನಮೋ॥ದೀನವರೇಣ್ಯ ದೀನ ಶರಣ್ಯ
ದೇವ ನಮೋನ್ನಮೋ ದೇವ ನಮೋ॥ಮಂಗಳನಾಮ॥
ಮಹಿಮೋದ್ದಾಮ ಜಂಗಮಪ್ರೇಮ ಜಗದಭಿರಾಮ॥
ಬಂಧವಿದೂರ ಭವಿಯಾಚಾರ ಸಿಂಧುಗಂಭೀರಾ ಚಿತ್ಸುಖಹಾರ॥

ಸಪ್ತರುಷಿಗಳು: ಮಹಾದೇವನೆ ವಂದಿಸುವೆವು.

ಈಶ್ವರ: ಎಲೈ ಸಪ್ತರುಷಿಗಳೇ ನಿಮಗೆ ಮಂಗಳವಾಗಲಿ ನೀವುಗಳು ಬಂದಿದ್ದಕ್ಕೆ ನನಗೆ ಬಹಳ ಸಂತೋಷವಾಯಿತು ನಿಮ್ಮಗಳನ್ನು ನಾನು ನೆನೆವರಿಕೆ ಮಾಡಿಕೊಂಡ ಕಾರ‌್ಯವನ್ನು ತಿಳಿಸುತ್ತೇನೆ. ಎಲೈ ಸಪ್ತರುಷಿಗಳೇ ತಾರಕ ಶೂರ ಪದ್ಮ ಸಿಂಹಾಸ್ಯ ಮುಂತಾದ ರಕ್ಕಸರ ಬಾಧೆಯನ್ನು ಪರಿಹರಿಸುವೆನೆಂದು ದೇವತೆಗಳಿಗೆ ಅಭಯವನ್ನು ಕೊಟ್ಟಿರುವುದಲ್ಲದೆ ಗಿರಿಜೆಯು ನನ್ನನ್ನು ಕುರಿತು ತಪಸ್ಸು ಮಾಡುತ್ತಾ ಇದ್ದಳು ಆಕೆಯನ್ನು ಪರಿಣಯವಾಗುವೆನೆಂದು ಅವಳಿಗೆ ಭಾಷೆಯನ್ನು ಕೊಟ್ಟಿರುತ್ತೇನೆ. ಈಗ ನೀವು ನಿಮ್ಮ ಪತ್ನಿಯರ ಸಹಿತವಾಗಿ ಔಷಧಾ ಪಟ್ಟಣಕ್ಕೆ ಹೋಗಿ ಗಿರಿರಾಜನಂ ಕಂಡು ನಿಮ್ಮ ಮಗಳಾದ ಗಿರಿಜೆಯನ್ನು ಪರಮೇಶ್ವರನಿಗೆ ಕೊಟ್ಟು ಲಗ್ನ ಮಾಡಬೇಕೆಂದು ಆ ಶಿವನೇ ಹೇಳಿರುತ್ತಾನೆಂದು ಹೇಳಿರಿ ಆತನು ಒಪ್ಪಿದರೆ ಲಗ್ನಕ್ಕೆ ಸಿದ್ದಪಡಿಸಿಕೊಂಡಿರು ಎನ್ನುವುದಾಗಿ ಹೇಳಿ ವರ್ತಮಾನವನ್ನು ತೆಗೆದುಕೊಂಡು ಬರಬೇಕಾದ ಪ್ರಯುಕ್ತ ಈಗಲೇ ಪ್ರಯಾಣ ಸನ್ನದ್ದರಾಗಬೇಕೈ ಯತಿಗಳೆ ಸರ‌್ವಜ್ಞಮತಿಗಳೇ.

ಗಿರಿರಾಜ: ಆಹಾ ಸಪ್ತರುಷಿಗಳೇ ತಮ್ಮ ಕೋಮಲ ಚರಣಂಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು.

ಸಪ್ತರುಷಿ: ಎಲೈ ಗಿರಿರಾಜನೆ ನಿನಗೆ ಮಂಗಳವಾಗಲಿ ನಿನ್ನ ಸತಿಸುತಬಂಧು ಬಾಂಧವರಾದಿಯಾಗಿ ಕ್ಷೇಮದಿಂದಿರುವರೇ ಗಿರಿರಾಜ.

ಗಿರಿರಾಜ: ಸ್ವಾಮಿ ಪೂಜ್ಯರೇ ತಮ್ಮ ದರ್ಶನದಿಂದ ಧನ್ಯನಾದೆನು ಈಗ ನಾನು ಮಾಡುವ ಪಾದಪೂಜೆಯನ್ನು ಕೈಗೊಳ್ಳಬೇಕು. ತಮ್ಮಗಳಲ್ಲಿ ಒಬ್ಬರ ದರ್ಶನವಾಗುವುದೇ ದುರ್ಲಭವು ಇಂಥಾದ್ದರಲ್ಲಿ ನೀವು ಸಪ್ತರುಷಿಗಳು ದಯಮಾಡಿಸಿದ ವಿಚಾರವನ್ನು ಪೇಳಬೇಕೆಂದು ಬೇಡುವೆನು.

ಸಪ್ತರುಷಿಗಳು: ಅಯ್ಯ ಗಿರಿರಾಜನೆ ನಾವುಗಳು ಕನ್ಯಾರ್ಥಿಗಳಾಗಿ ಬಂದಿರುವ ವಿಚಾರವನ್ನು ತಿಳಿಸುತ್ತೇವೆ ಕೇಳು ನಿನ್ನ ಮಗಳಾದ ಗಿರಿಜೆಯನ್ನು ಆ ಪರಮೇಶ್ವರನಿಗೆ ಕೊಟ್ಟು ವಿವಾಹ ಮಾಡಿಸಬೇಕೆಂಬುದಾಗಿ ಯೋಚಿಸಲು ಬಂದಿರುವೆವು. ಈಕೆಯು ಹಿಂದೆ ಆ ಪರಮೇಶ್ವರನಿಗೆ ಹೆಂಡತಿಯಾಗಿದ್ದ ದಾಕ್ಷಾಯಿಣಿಯು ಈ ಕಾರ‌್ಯ ಕಾರಣವಾಗಿ ಗಿರಿಜೆ ಎಂಬ ನಾಮಾಂಕಿತದಿಂದ ನಿನ್ನಲ್ಲಿ ಅವತಾರ ಮಾಡಿರುವಳು ಆದ ಪ್ರಯುಕ್ತ ಆ ಜಗದೀಶನಿಗೆ ನಿನ್ನ ಮಗಳಂ ಕೊಟ್ಟು ವಿವಾಹ ನಡೆಸಯ್ಯ ಹಿಮವಂತ ಗುಣವಂತ.

ಪದ

ಎನಲು ಕೇಳುತ ಗಿರಿಯು ಮುನಿಯ ಪಾದಕೆ ನಮಿ
ಸಿ ಘನಭಕ್ತಿ ಇಂದ ಪೇಳಿದ ವಿನಯದಲಿವಿನಯದಲಿ॥

ಗಿರಿರಾಜ: ಸ್ವಾಮಿ ಮಹನೀಯರೆ! ತಾವು ಅಪ್ಪಣೆಕೊಟ್ಟ ವಿಚಾರವನ್ನು ಕೇಳಲಾಗಿ ನನಗೆ ಬಹಳ ಸಂತೋಷವಾಯಿತು. ಆ ಜಗದೀಶ್ವರನಿಗೆ ಕನ್ಯೆಯನ್ನೊಪ್ಪಿಸುವ ವಿಚಾರದಲ್ಲೇನೂ ಸಂಶಯವಿಲ್ಲ ಅಗತ್ಯವಾಗಿ ಲಗ್ನಮಾಡಿಕೊಡುತ್ತೇವೆ ಈ ವಿಚಾರವನ್ನು ಆ ಪರಶಿವನಿಗೆ ತಿಳಿಸಬಹುದೈ ಯತಿಗಳೇ ಸರ್ವಜ್ಞಮತಿಗಳೇ.

ಪದ

ಧರೆಯೊಳು ಧನ್ಯನೈಯ್ಯ ಗಿರಿರಾಜನು
ಪರಶಿವ ನಿನಗಳಿಯ ವಿರಚಿಸಿಕೊಂಡಿರು
ಸಕಲ ಸನ್ನಹವ ಮರೆಯದೆ ನೀನೆಂದು
ತೆರಳಲಾಕ್ಷಣದೊಳು॥ಧರೆಯೊಳು ಧನ್ಯನೈಯ್ಯ॥

ಸಪ್ತರುಷಿಗಳು: ಅಯ್ಯ ಗಿರಿರಾಜನೆ ಆ ಪರಮೇಶ್ವರನಂ ವಲಿಸಬೇಕೆಂದು ಸಕಲ ಮನುಮುನಿಗಳು ಕೂಡ ಕಲ್ಪಾಂತರದವರೆಗೂ ತಪಸ್ಸನ್ನು ಮಾಡುವರು. ಅವರಿಗೂ ಕೂಡ ವಲಿಯದೆ ಇರುವ ದೇವನು ನಿನಗಳಿಯನಾದ ಮೇಲೆ ನಿನ್ನ ಪುಣ್ಯಕ್ಕೆಣೆಯುಂಟೆ ನೀನೇ ಜಗತ್ತಿನಲ್ಲಿ ಧನ್ಯನು ಆದುದರಿಂದ ಆ ಸ್ವಾಮಿಯು ದಯಮಾಡಿಸುವುದರೊಳಗಾಗಿ ಲಗ್ನಕ್ಕೆ ಏರ್ಪಡಿಸು ಈ ವರ್ತಮಾನವನ್ನು ನಾನು ಅವರಿಗೆ ತಿಳಿಸಿ ಹೊರಟುಬರುವಂತೆ ಮಾಡುತ್ತೇನೆ. ನಾವು ಬಂದು ಬಹಳ ಹೊತ್ತಾಯಿತು ಕೈಲಾಸಕ್ಕೆ ಹೋಗಿ ಬರುತ್ತೇವೈ ಭೂಪ ಕೀರ್ತಿಕಲಾಪ.

ಗಿರಿರಾಜ: ಹೇ ಪ್ರಾಣಕಾಂತೆಯೆ ಸಪ್ತರುಷಿಗಳು ದಯಮಾಡಿಸಿ ಗಿರಿಜೆಯನ್ನು ಹರನಿಗೆ ಕೊಟ್ಟು ಲಗ್ನ ಮಾಡೆಂಬುದಾಗಿ ಹೇಳಿದ ಕಾರಣ ಈಗಲೇ ಲಗ್ನಕ್ಕೆ ಪ್ರಯತ್ನ ಮಾಡುತ್ತೇನೆ. ಎಲೈ ಸಾರಥಿ ಪರಮೇಶ್ವರನ ಕಲ್ಯಾಣ ಮಹೋತ್ಸವಕ್ಕಾಗಿ ನಮ್ಮ ಪಟ್ಟಣದಲ್ಲೆಲ್ಲಾ ಕಸ್ತೂರಿ ಇಂದ ಸಾರಿಸಿ ಮುತ್ತಿನ ರಂಗವಲ್ಲಿ ಚಪ್ಪರ ತೋರಣ ಮೇಲ್ಕಟ್ಟು ಮುಂತಾದವುಗಳಿಂದ ನೂತನವಾಗಿ ಪಟ್ಟಣವಂ ಅಲಂಕರಿಸುವಂತೆ ವಿಶ್ವಕರ್ಮನಿಗೆ ತಿಳಿಸುವನಾಗು ಮತ್ತು ನೆಂಟರಿಷ್ಟರಿಗೆ ಲಗ್ನಪತ್ರಿಕೆಗಳಂ ಬರೆದು ಸರ್ವರನ್ನು ಬರಮಾಡುವಂತೆ ಎನ್ನ ಮಂತ್ರಿಗೆ ತಿಳಿಸು ಮತ್ತು ಬಂದವರಿಗೆ ಬಿಡಿ ಬಿಡಾರಂಗಳು ಊಟ ಉಪಚಾರಗಳೇ ಸಾಮಗ್ರಿಗಳನ್ನು ಸಿದ್ಧಪಡಿಸುವನಾಗು. ಎಲೈ ಸಖಿಯರೇ, ಗಿರಿಜಾದೇವಿಗೆ ಮಂಗಳಸ್ನಾನವಂ ಮಾಡಿಸಿ ಗಂಧಮೂಲ್ಯಾಧಿಗಳಂ ಧರಿಸಿ ಆಭರಣಾದಿಗಳಿಂದ ಅಲಂಕರಿಸುವರಾಗಿ ಎಲೈ ಸಾರಥಿ ಅತಿಜಾಗ್ರತೆ ಇಂದ ಪುರೋಹಿತರನ್ನು ಬರಮಾಡು.