ತಾರಕಾಸುರ: ಆಹ ವೀರಭದ್ರನಲ್ಲಿ ಎಷ್ಟೇ ಯುದ್ಧಮಾಡಿದರೂ ನಾನು ಬದುಕುವ ಮಾರ್ಗವೇ ಇಲ್ಲ. ಆದ ಕಾರಣ ಈ ಕ್ರೌಂಚಪರ್ವತದ ಬಿಲದ್ವಾರವಂ ಪೊಕ್ಕು ಅನಂತರ ಯೋಚಿಸುವೆನು.

ವೀರಭದ್ರ: ಎಲೋ ನೀಚನೇ, ನೀನು ಎಲ್ಲಿ ಹೊಕ್ಕರೂ ಬಿಡುವವನಲ್ಲ. ನಿನ್ನ ಗತಿಯನ್ನೇನು ಮಾಡುತ್ತೇನೆ. ನೋಡು ಜಾಗ್ರತೆ ಯುದ್ಧಕ್ಕೆ ನಿಲ್ಲಲೊ ಭಂಡ.

ಭಾಮಿನಿ

ಸಂಚರಿಪ ದಿವಿಜರಂ ಸದೆ ಬಡಿಯುತಿರಲು ವಿರಂಚಿ
ಸುತಮುನಿಬಂದು ಗುಹಗಿದಂ ಪೇಳಲು ಫಳಂಚಲಂ
ಧನುವಾಗಿ ಘರ್ಜಿಸುತಾ ಧುರಕೆ ನಡೆತಂದನಾ ಶರಜಲ್ಮನೂ॥

ತಾರಕಾಸುರ: ಆಹಾ ವೀರಭದ್ರನಂ ಉಪಾಯದಿಂದ ಈ ಗುಹೆಯೊಳಗೆ ಸೇರಿಸಿದ್ದಾಯಿತು. ಈಗ ದೇವತೆಗಳನ್ನು ಬಲಿಹಾಕದೆ ಬಿಡುವೆನೆ ಎಲೈ ಬಡದೇವತೆಗಳಿರಾ ನಿಮ್ಮ ಸಾಹಸಂಗಳಿಗೆ ನಾನು ಮೆಚ್ಚಿದೆನು ಯುದ್ಧಕ್ಕೆ ನಿಲ್ಲಿರಿ.

ಪದ

ಸುರರಾ ಪೊರೆಯುವೆನೆಂದು ಭರದೀ ಷಣ್ಮುಖ ಬೇಗ
ಶರಧನುವನು ಕೊಂಡು ತಾನು ಹೊರಟನು ಆಗ॥

ಷಣ್ಮುಖ: ಆಹಾ ಈ ತಾರಕಾಸುರನು ರಣಭೂಮಿಯಲ್ಲಿ ತಾನೇ ತಾನಾಗಿ ಕುಣಿಯುತ್ತಿರುವನು ಈಗ ದೇವತೆಗಳನ್ನು ಕಾಪಾಡುತ್ತೇನೆಂದು ಬಂದ ಮೇಲೆ ಸುಮ್ಮನೆ ಇರಬಾರದು ವಾಯುವನ್ನು ಸಾರಥಿಯಾಗಿ ಮಾಡಿಕೊಂಡು ರಣಾಗ್ರಕ್ಕೆ ನಾನೇ ನಿಲ್ಲುವೆನು. ಎಲೈ ಎನ್ನ ಸೇನಾ ನಾಯಕರೇ ಜಾಗ್ರತೆ ಧನುರ್ಬಾಣಗಳಂ ಧರಿಸಿಕೊಂಡು ಯುದ್ಧಕ್ಕೆ ಸಿದ್ಧವಾಗಿ ಹೊರಡಿರಿ.

ಪದ

ಹುಡುಗನ ಬಲದಿಂ ಬಂದ ತುಡುಗರ ನಡುಗಿಪ
ನೆಂದು ಘುಡಿ ಘುಡಿಸಿ ತಾರಕನಾಗ॥ಕೇಳ್ಬೇಗಾ॥

ತಾರಕಾಸುರ: ಎಲೆಲೆಲೈ ದೇವತೆಗಳಿರಾ ಈ ಹುಡುಗನ ಸಹಾಯದಿಂದ ನಮ್ಮಲ್ಲಿ ರಣಾಗ್ರಕ್ಕೆ ಬಂದಿರುವಿರಾ ಭಳಿರೇ ಈ ಘಳಿಗೆಯೊಳಗಾಗಿ ಬಾಣಗಳಿಂದ ಇವನ ಸೊಲ್ಲುಗಳಂ ಅಡಗಿಸಿ ನಿಮ್ಮನ್ನು ಸಹ ಯಮನಾಲಯಕ್ಕೆ ಕಳಿಸುವೆನು ಭ್ರಷ್ಟರೆ ನೀಚರೆ.

ಪದ

ಗಿರಿಯಂ ಕಿರುಕುಲವೆಲವೊ ಧರೆಯೊಳು
ಕಿಡಿ ಇಂದ ಉರಿದು ಹೋಗದೆ ಕೇಳೊ ಭ್ರಷ್ಟ ಕೇಳ್ ಭ್ರಷ್ಟ॥

ಷಣ್ಮುಖ: ಎಲೋ ತಾರಕ, ಪರ್ವತೋಪಾಯಮಾನವಾಗಿ ಬಿದ್ದಿರುವ ಅರಳೆಗೆ ಎಳ್ಳಷ್ಟು ಕಿಡಿ ಬಿದ್ದರೆ ಹೇಗೆ ನಾಶವಾಗುವುದೋ ಅದರಂತೆ ನಾನು ಚಿಕ್ಕವನಾದಾಗ್ಯು ನನ್ನ ಬಾಣಾಗ್ನಿ ಇಂದ ನಿನ್ನ ದೇಹವನ್ನು ಸುಡದೆ ಇದ್ದರೆ ಈಶನ ಪುತ್ರ ಷಣ್ಮುಖನಲ್ಲ ಜೀವಗಳ್ಳತನವನ್ನು ಮಾಡದೆ ಎನ್ನೆದುರಿಗೆ ನಿಂತು ಯುದ್ಧವನ್ನು ಮಾಡೋ ಭ್ರಷ್ಟಾ ಪರಮಪಾಪಿಷ್ಟ.

ಪದ

ಎಲವೊ ಬಾಲನೆ ನಿನಗೆ ಸಾಲದು ಸಂಗರದ ಶಕ್ತಿಯು॥
ಬಾಲಲೀಲೆಯಲ್ಲಾ ತಿಳಿಯೋ ನೀಂ ತಿಳಿಯೋ॥

ತಾರಕಾಸುರ: ಎಲೋ ಬಾಲಕನೇ ನಿನಗೆ ಹುಟ್ಟುವುದೆಂದರೇನೋ ಸಾಯುವುದೆಂದರೇನೋ ಅದೇ ಗೊತ್ತಿಲ್ಲವು ಇದೇನು ಚೆಂಡು ಬುಗುರಿ ಆಟವೆಂದು ತಿಳಿದು ಬಂದಿರುವೆಯಾ ಏನು  ಈಗಲಾದರೂ ಎನ್ನ ಮಾತನ್ನು ಕೇಳು  ಈ ದೇವತೆಗಳ ಮಾತನ್ನು ಕೇಳಿ ಹಾಳಾಗಬೇಡ  ಪ್ರಾಣದಾನವಂ ಕೊಡುತ್ತೇನೆ ಬದುಕಿಕೋ  ಇಲ್ಲವಾದರೆ ರಣಭೂಮಿಗೆ  ಆಹುತಿ ಕೊಡುವೆನೆಲಾ ಭ್ರಷ್ಟ  ನಿನಗೆ ಬಂದಿರುವುದು ಕಷ್ಟ.

ಪದ

ಕೆಣಕಿ ಮದ ಸಿಂಹನಿಗೆ ಮುನ್ನ ಬದುಕುವದುಂಟೆ
ಎನ್ನಯ ರೋಷಾಕ್ರೋಧದಿ ನಿನ್ನಾ॥ಹಣಿದು ಹೊಡೆಯುವೆ
ನಿನ್ನ ಮುಷ್ಟಿ  ಕ್ಷಣವಿಲ್ಲದೆ ಕಾಳಗದೋಳ್
ಕಾಣಿಸುವೆ ಯಮಪುರಿಗೆ॥

ಷಣ್ಮುಖ: ಎಲೋ ತಾರಕ ಸಿಂಹನ ಯದುರಿಗೆ  ಆನೆಯು ಬಂದು ಬದುಕುವದುಂಟೆ  ನೀನು ಈ ಭುವಿಯ ಆಸೆಯಂ ಮರೆತು  ನಿಮ್ಮ ಗುರುಹಿರಿಯರಂ ಧ್ಯಾನಿಸಿಕೊಂಡು  ಅಲಲಲಲೇ ಎನ್ನ ರೋಷಾ ಕ್ರೋಧದಿಂದ  ನಿನ್ನ ಹೃದಯವಂ ಛಿದ್ರವಂ ಮಾಡುವುದಕ್ಕೆ  ಬಾಣ ಪ್ರಯೋಗವಂ ಮಾಡಿರುವೆನೆಲಾ ರಕ್ಕಸ  ನಿನಗೆ ಬಂದಿರುವುದು ಕಕ್ಕಸ.

ಪದ

ತೂರಿ ಬಿಟ್ಟ ಶರವ  ಮುರಿದು ಹಾಕಿದೆನೀಗ
ಮಾರ ವೈರಿಸುತನೇ ॥ತ್ವರಿತದಿ ಮಸ್ತಕ ಕೊರೆಯುವೆ
ರಭಸದಿ  ಭರದೋಳ್ ಖಡ್ಗದಲೀ॥

ತಾರಾಕಾಸುರ: ಎಲೋ ಬಾಲಕ ನೀನು ರೌದ್ರಾವೇಶದಿಂದ ಬಿಟ್ಟ ಬಾಣವಂ ಅರ್ಧಾಂತರದಲ್ಲಿ ಬಿಸುಟು  ಎಡಗಾಲಿನಿಂದೊದ್ದು ಬಿಟ್ಟು  ಪ್ರತಿಯಾಗಿ ಬಾಣ ಪ್ರಯೋಗವಂ ಪ್ರಯೋಗಿಸಿರುವೆನು. ಈ ಬಾಣದಿಂದ  ಬದುಕಿಕೊಳ್ಳೆಲಾ ಮೂರ್ಖ ಬಿಡು ನಿನ್ನ ತರ‌್ಕ.

ಪದ

ಧುರದಲಿ ನಿನ್ನಯ ಶರವನು ತರಿದೆನು  ಪರಿಕಿಸೆನ್ನಯ
ಶೌರ‌್ಯ  ಧೈರ‌್ಯ  ಭರದಲಿ ಕರುಳನು  ಹರಿಯುವೆ
ರಭಸದಿ  ತ್ವರಿತದಿಂದಲಿ ಬೇಗಾ  ಕೇಳ್ಬೇಗಾ ॥

ಷಣ್ಮುಖ: ಎಲೋ ಪಾಪಿ ನಿಶಾಚರ  ನಿನಗೆ ಮರಣಗಾಲವು ಸಮೀಪಿಸಿತೆಂದು ತಿಳಿ  ನಿನ್ನ ಗರ್ಭವಂ ನಿರ್ಭೇದ ಮಾಡಿ  ರಣದೇವತೆಗೆ ಹಬ್ಬದೂಟವಂ ಮಾಡಿಸುವೆ  ಇನ್ಯಾತಕ್ಕೆ ತಡವು  ನಿನ್ನ ಬಾಣವಂ ಮಧ್ಯಮಾರ್ಗದಲ್ಲಿ ಖಂಡ್ರಿಸಿ ನಿನ್ನಂ ಈ ಧರಣಿಮಂಡಲಕ್ಕೆ ಉರುಳಿಸುವೆನು  ಜಾಗ್ರತೆ ಇಂದ ಯುದ್ಧ ಮಾಡೆಲಾ ಷಂಡ  ಕಡು ಪ್ರಚಂಡ.

ಭಾಗವತರ ವಾರ್ಧಿಕ

ಸುರಮುನಿ ನಾರದಂ ಪೇಳ್ದ ಮಾತಂ ನೆನೆದು  ಇರದೆ ಈ
ಕ್ರೌಂಚಾದ್ರಿಯಂ ಸೇರಿದ  ಬಿಲದ್ವಾರಕೆ ಈ ತಾರಕನೆನುತಂ
ವೀರಾವೇಶ ವಿಸ್ಫುರಿತ ನೇತ್ರನಾಗಿ  ಚಿರಕಾಲದಿಂ
ನೊಂದಿರ‌್ವರೀಸುರರೆಂದು  ಧರಿಸಿ ಕರುಣವ ಪರಮಶಕ್ತಿಯಂ
ಗಿರಿರೂಪಕದ ಕ್ರೌಂಚಖಳ  ತಾರಕಾಸುರನಂ ಮತಿಸಿದಂ ॥ಶರಜಲ್ಮನೂ॥

ಷಣ್ಮುಖ: ಆಹಾ ಈ ಪಾಪಿಯಾದ ಖಳನು  ಈ ಪರ್ವತದ ಬಿಲದಲ್ಲಿ ಸೇರಿಕೊಂಡು ವಂಚನೆಯಂ ಮಾಡುವನೆಂಬುದಾಗಿ  ನಾರದ ಮಹರ್ಷಿಗಳು ಹೇಳಿದ್ದರು  ಈಗಲೂ ಅದರಂತೆಯೇ ಪರ್ವತವನ್ನು ಖಳನು ಸೇರಿರಬಹುದು ಆದ ಪ್ರಯುಕ್ತ ಕ್ಷಣಮಾತ್ರದಲ್ಲಿ ಬಾಣ ಪ್ರಯೋಗವಂ ಮಾಡಿ ಈ ಕ್ರೌಂಚಪರ್ವತವನ್ನು  ಈ ತಾರಕನನ್ನೂ ಸಂಹರಿಸುವೆನು ಎಂದು ಬಾಣ ಪ್ರಯೋಗವಂ ಮಾಡಿದನು. (ತಾರಕಾಸುರನನ್ನು  ಷಣ್ಮುಖನು ಯುದ್ಧಮಾಡಿ ಸಂಹರಿಸುವನು.)

 

(ತಾರಕಾಸುರನ ಪತ್ನಿ ಶೌರಿಯು ಬರುವುದು)

ಶೌರಿ: ಅಣ್ಣಯ್ಯ ಸಾರಥಿ  ಮಂಜುಳಾಂಗ, ಕಂಜದಳಾಯತಾಕ್ಷನಲ್ಲಿ ವರವಂ ಪಡೆದು  ರಂಜಿತದಿಂದ ಮೆರೆದು  ಭುಜಬಲೋರ್ದಂಡ  ದೇವರ್ಕಳಂ ಸದೆಬಡಿದು  ಮೆರೆಯುವ ಕಶ್ಯಪ ವಂಶದೋಳ್ ಹುಟ್ಟಿ  ಅಜಹರಾದಿಗಳಿಂ ವರವಂ ಪಡೆದು  ಮೆರೆಯುವ ಧೀರ ತಾರಕಚಕ್ರವರ್ತಿಯ ವರ  ಪತ್ನಿ ಎನಿಸಿಕೊಂಡಿರುವ  ಶೌರಿ ಎಂದು ತಿಳಿಯಪ್ಪ ಸಾರಥಿ.

ಅಪ್ಪಾ ಸಾರಥಿ ಎನ್ನ ಪತಿಯಾದ  ತಾರಕಾಸುರರು ಪರರಾಯರಲ್ಲಿ ಯುದ್ಧಕ್ಕೆ ಹೋಗಿದ್ದರಂತೆ. ಆ ವರ್ತಮಾನವನ್ನು ತಿಳಿಯಲು  ಬಂದಿರುವೆನಪ್ಪ ಚದುರ  ಪೇಳು ಮುಂದಿನ ವಿವರ.

ಪದ

ಪತಿ ಏನೀ ಮಡಿದೆಯಾ  ಸತಿಯಾದ ಯನಗಿನ್ನು  ಗತಿ
ಯಾರು ಮುಂದೆನಗೆ ॥ಕ್ಷಿತಿಪತಿಯೆ ಪೇಳೊ ॥
ಸುತನಾದ ಸುರೇಂದ್ರನನ್ನ ನೋಡದೆ ನೀನು
ಕ್ಷಿತಿಯವೊಂದುದು ॥ಉಚಿತವೇ  ಕೇಳ್ ಕಾಂತ ॥

ಶೌರಿ: ಅಯ್ಯೋ ಪ್ರಾಣಕಾಂತ  ಅಯ್ಯೋ ಹರಹರಾ  ಈ ರಣ ಭೂಮಿಯಲ್ಲಿ ಎನ್ನನ್ನು ಬಿಟ್ಟು ಅಗಲಿ ಹೋದಿರ ರಮಣಾ  ಸದ್ಗುಣಾಭರಣಾ.

ಪದ

ಸುರರು ಎಲ್ಲರ ನೀಂ  ಜಯಿಸುತ ಬ್ರಹ್ಮಾಂಡವನು
ಪರಿತೋಷದಿಂದಾಳುತ  ಹರುಷದೊಳು ॥ಮೆರೆಯು
ವ ಸಿರಿ ಎತ್ತ  ಪೋದುದೆ ಶಿವಶಿವ  ಸುರರ ಬಾಧಿಸೆ ಈಗ
ದೊರೆತ ಪುಣ್ಯದ ಫಲವು ॥ಕಾಂತ ॥ಕಾಂತ ॥

ಶೌರಿ: ಅಯ್ಯೋ ಪ್ರಾಣಪತಿ  ದೇವರ್ಕಳಂ ಜೈಸಿ  ಅವರ ಐಶ್ವರ್ಯವಂ ಸೆರೆಸೂರೆಮಾಡಿ  ಅವರಂ ಕಾಡಡವಿಪಾಲು ಮಾಡಿ ಓಡಿಸಿ ಸ್ವರ್ಗಲೋಕವಂ ಆಳುತ್ತಾ  ಇದ್ದ ಪರಾಕ್ರಮವು ಏನಾಯಿತು ಸತ್ಯವಂತರಾದ ದೇವತೆಗಳಂ ಬಾಧಿಸಿದ್ದರಿಂದ ಈಗ ಈ ಕಷ್ಟಕ್ಕೆ ಗುರಿ ಮಾಡಿದಿರಾ  ನಮ್ಮಗಳಂ ಬಿಟ್ಟು ಈ ರಣಭೂಮಿಯಲ್ಲಿ  ಮಲಗಿರುವುದು ನ್ಯಾಯವೇನೋ ರಮಣ  ಸದ್ಗುಣಾಭರಣ

ಕಂದ

ವೀರಮಹೇಂದ್ರನ ಪುರವನ್ನು ಸೇರುತ್ತಾ  ಶೂರ ಪದ್ಮ ದೈತ್ಯನಂ ಕಂಡು
ನಾರಿಯು ಗೋಳಿಡುತ  ತಾರಕಾಸುರನ ಮರಣವಂ ಪೇಳಿದಳು ॥

ಶೌರಿ: ಅಪ್ಪಾ ಸಾರಥಿ ಎನ್ನ ಮೈದುನುರಾದ  ಶೂರಪದ್ಮಾಸುರನನ್ನು ಕರೆದುಕೊಂಡು ಬಾರೈ ಚಾರ  ಗುಣಮಣಿಹಾರ.

ಶೂರಪದ್ಮ: ಅತ್ತಿಗೆಮ್ಮನವರೆ ನನ್ನನ್ನು ಇಷ್ಟು ಜಾಗ್ರತೆ ಇಂದ ಕರೆಸಿದ ಕಾರಣವೇನು ತಿಳಿಸುವರಾಗಿರಿ ಅತ್ತಿಗಮ್ಮನವರೇ.

ಶೌರಿ: ಅಪ್ಪಾ ಮೈದುನ ಎನ್ನ ದುಃಖವನ್ನು  ನಿನ್ನೊಡನೆ ಎಷ್ಟೆಂದು ಹೇಳಲಿ ಮೈದುನ.

ಶೂರಪದ್ಮ: ಅಮ್ಮಾ ಅತ್ತಿಗೆಯವರೆ  ಇಂದೀವರಾಕ್ಷ ಚಂದಿರನಂತಿದ್ದ ನಿಮ್ಮ ಮುಖ ಕಮಲವು ಕಂದಿರಲು ಕಾರಣವೇನು  ತಿಳಿಸುವರಾಗಿರಮ್ಮ ಅತ್ತಿಗಮ್ಮನವರೆ.

ಪದ

ಮೈದುನ ನನ್ನರಸನು  ನಿರ್ಜೀವನಾಗಿಹ ಪರಿಯ
ಕೋವಿದನೆ ಕೇಳಯ್ಯ  ಪಾವಕನೇತ್ರನ ಸುತ
ಗುಹನಿಂದಲಿ  ಭಾವಿಕವಾಯಿತು  ಮರಣವೆನ್ನರಸನಿಗೆ ॥

ಶೌರಿ: ಅಯ್ಯೋ ಮೈದುನ  ಈಶ್ವರನ ಮಗನಂತೆ  ಸೇನಾ ಸಮೇತರಾಗಿ ಬಂದು  ನನ್ನ ಪತಿಯ ನಾಶ ಮಾಡಿದರು ಯಾರಿಂದಲೂ ಮಡಿಯದೆ ಇದ್ದ ನನ್ನ ಪತಿಯು ಆ ಹುಡುಗನಿಂದ ಮಡಿದರರಲ್ಲಾ ಮುಂದೆ ನನಗೆ ಗತಿಯೇನೈ ಮೈದುನನೇ.

ಪದ

ಸುರರು ದೂರನು ಪೇಳೆ  ಹರನು ಪಡೆಯುತ ಸುತನ
ಧುರಕೆ ಕಳುಹಿದನಂತೆ  ಶಿವನ ಕರುಣದಲಿ ॥ವರಕುಮಾರ
ತಾನೈದಿ  ದುರುಳ ರಕ್ಕಸರನ್ನು  ಸಂಹರಿಸಿ ತಾರಕನನ್ನು
ತರಿದುಬಿಟ್ಟನು ಧುರದಿ ॥

ಶೌರಿ: ಅಪ್ಪಾ ಮೈದುನ ನೀವುಗಳು ಬಾಧಿಸುತ್ತಿದ್ದ  ಬಾಧೆಯಂ ತಾಳಲಾರದೆ  ದೇವತೆಗಳೆಲ್ಲರೂ ಸೇರಿ ಆ ಪರಮೇಶ್ವರನಿಗೆ ದೂರು ಹೇಳಿಕೊಂಡರಂತೆ ಆದ ಪ್ರಯುಕ್ತ ಅವರ ಕಷ್ಟವಂ ಪರಿಹರಿಸುವೆನೆಂದು ಸುರರಿಗೆ ನಂಬಿಕೆಯಂ ಕೊಟ್ಟು  ಆ ಶಿವನು ಕುಮಾರನಂ ಪಡೆದು  ನಿಮ್ಮೆಲ್ಲರಂ ಸಂಹರಿಸುವಂತೆ ಆಜ್ಞೆಯಂ ಮಾಡಿ ಕಳುಹಿಸಿರುವರಂತೆ  ಈಗ ಆ ಹುಡುಗನು ಅನೇಕ ರಾಕ್ಷಸರಂ ಕೊಂದು  ನಿಮ್ಮ ಅಣ್ಣನವರಾದ  ನನ್ನ ಪತಿಯನ್ನು ಸಂಹರಿಸಿರುತ್ತಾರೆ  ಈ ದುಃಖವನ್ನು ಸಹಿಸಲಾರೆನು ಮೈದುನನೇ.

ಶೂರಪದ್ಮ: ಹರಹರಾ, ನಮ್ಮಣ್ಣನಾದ ತಾರಕಾಸುರನಿಗೆ ಇಂಥಾ ಗತಿ ಪ್ರಾಪ್ತವಾಯಿತೆ ಅತ್ತಿಗಮ್ಮನವರೆ ಹೆದರಬೇಡಿರಿ ಅಂತಃಪುರದಲ್ಲಿ ಸುಖವಾಗಿರಿ ನಾನು ಹೋಗಿ ಆ ವೈರಿಗಳನ್ನು ನಾಶಪಡಿಸಿ ಬರುವೆನು.

ಪದ

ಕೇಳೋ ಸಾರಥಿ ನೀನು ಪೇಳುವೆ ನಾ ವಿವರವನು
ಜಾಳು ಮಾತಲ್ಲ ನೀ ಕೇಳೊ॥ಖಳರ ಕೊಲುವದ
ಕೀಗ ಘಳಿಲನೆ ನೀಂ ಪೋಗಿ ಸಿಂಹಾಸ್ಯನ ನೀನು
ಕರೆತಾರೋ ಕರೆತಾರೋ॥

ಶೂರಪದ್ಮ: ಎಲೈ ಸಾರಥಿ ಶತ್ರುಗಳ ಸಂಗಡ ಕಾದುವುದಕ್ಕೆ ಬಿತ್ತರದ ಕತ್ತಿಯನ್ನೂ ನನ್ನ ತಮ್ಮನಾದ ಸಿಂಹಾಸ್ಯನನ್ನು ಕರೆದುಕೊಂಡು ಬಾರೋ ದೂತ ಕೇಳೆನ್ನ ಮಾತ.

ಸಿಂಹಾಸ್ಯ: ಅಣ್ಣಯ್ಯನವರ ಪಾದಕ್ಕೆ ನಮಸ್ಕರಿಸುವೆನು.

ಶೂರಪದ್ಮ: ಎಲೈ ಅನುಜನೆ ನಿನಗೆ ಮಂಗಳವಾಗಲಿ ಮೇಲಕ್ಕೆ ಏಳು.

ಸಿಂಹಾಸ್ಯ: ಅಣ್ಣಾ ಶೂರಪದ್ಮನೆ ನನ್ನನ್ನು ಇಷ್ಟು ಜಾಗ್ರತೆ ಇಂದ ಕರೆಸಿದ ಕಾರಣವೇನೋ ಅಗ್ರಜ.

ಪದ

ಶೃಂಗರಿಸೋ ರಥವನ್ನು ಈಗಲೆ ಪೋಗೈ ನೀನು
ಗಂಗಾಧರಸುತನನ್ನೂ ಕೊಲ್ಲುವುದಕೆ ಈಗ॥
ಎಗ್ಗಳಿಸಿ ಬಂದಿಹ ಸುರರ ನುಗ್ಗುತ ಸಂಹರಿಸುವದಕೆ
ಮಾರ್ಗವ ಹಿಡಿಯೊ ನೀ ಜವದಿ ಕೇಳ್ ಜವದಿ॥

ಶೂರಪದ್ಮ: ಎಲೈ ಸಿಂಹಾಸ್ಯನೆ ಕೇಳು ನಮ್ಮ ಪಟ್ಟಣಕ್ಕೆ ವೈರಿಗಳು ಬಂದು ತಾರಕಾಸುರನೇ ಮೊದಲಾದ ಪಟುಭಟರಂ ಸಂಹರಿಸುತ್ತಾರಂತೆ ಆದ್ದರಿಂದ ನನ್ನ ಮಗನಾದ ಭಾನುಕೋಪ ತಾರಕನ ಮಗನಾದ ತಾರಕಾಕ್ಷ ಕಮಲಲೋಚನ ವಿದ್ಯುನ್ಮಾಲಿ ಮುಂತಾದ ಪಟುಭಟರಂ ಕೂಡಿಕೊಂಡು ಹೋಗಿ ಆ ವೈರಿಗಳಂ ಧಾಮಧೂಮ ನಿರ್ಧೂಮವಂ ಮಾಡಿ ಬಾರೈ ತಮ್ಮ ಮುರವೈರಿಗಳ ಹಮ್ಮ.

ಸಿಂಹಾಸ್ಯ: ಅದೇ ಪ್ರಕಾರ ಹೋಗಿ ಬರುತ್ತೇನೈ ಅಗ್ರಜಾ ಭಾಸ್ಕರತೇಜ.

ಕಂದ

ಧುರಕೆಂದು ಬರುವ ದೈತ್ಯರ ಪರಿವಾರವನ್ನೀಕ್ಷಿ
ಸುತ್ತಾ ಘರ್ಜಿಸುತಾಗಂ ಭರಿತ ಕೋಪಾಗ್ನಿಯೊ
ಳಾ ಪುರಹರಸುತ ವೀರಭದ್ರನು ತರುಬಿದನವರಂ॥

ವೀರಭದ್ರ: ಅಯ್ಯ ಗಣಾಧೀಶ್ವರರೇ ದೇವತೆಗಳಿರಾ ಕೇಳಿರಿ. ಯಾವನೋ ದೈತ್ಯಶೂರನು ಪುನಹ ರಾಕ್ಷಸ ಸೇನೆಯನ್ನು ಕರೆದುಕೊಂಡು ಆರ್ಭಟಿಸುತ್ತಾ ಬರುತ್ತಿರುವನು ನೀವು ಹೆದರಬೇಡಿರಿ.

ಪದ

ದಕ್ಷಿಣಮೂರ್ತಿಸುತನೇ ಈ ಕ್ಷಣದಲಿ ಬಂಧಿ
ಸುವೆ ಲಕ್ಷ ಮಾಡದೆ ನಿನ್ನ ಬಲವ॥ದಳವ ॥
ಮುತ್ತಿದಂತಿಹ ಸೈನ್ಯವ ಉಪೇಕ್ಷೆ ಮಾಡದೆ ನುಂಗಿ
ಕುಕ್ಷಿ ತುಂಬಿಸುವೆನೀಗ ನೋಡೆ ನೀ ನೋಡೆ॥

ಸಿಂಹಾಸ್ಯ: ಎಲೈ ದಿಗಂಬರ ಸುತನೇ ತಕ್ಷಣದಲ್ಲಿ ನಿನ್ನಂ ಬಿಗಿದು ಹೆಡಮುರಿಗೆಯಂ ಕಟ್ಟಿ ನಮ್ಮ ಅಣ್ಣನಾದ ತಾರಕಾಸುರನಂ ಕೊಂದ  ಹಗೆತನವಂ ತೀರಿಸಿಕೊಳ್ಳುತ್ತೇನೆಲಾ ಹುಡುಗಾ.

ಪದ

ಜಡಮತಿ ನಿನ್ನಯ ಜಿಹ್ವೆ  ಕಡುಗಾರ್ಗದಿಂದೀಗ
ಹಿಡಿದು ಸೀಳುವೆ ನಾಂ ಕೇಳೈ ॥ದೃಢ ಬಲವಂತನ
ತಡಹಿ  ಮಡಿದು ಪೋಗುವ ಸಮಯ  ಗಡಣ ಬಂದಿ
ರುವದು ತಿಳಿಯೊ  ನೀಂ ತಿಳಿಯೋ ॥

ವೀರಭದ್ರ: ಎಲೋ ಜಡಮತಿಯಾದ ತುಡುಗ ರಕ್ಕಸನೇ ಕೇಳು ನಿನಗೆ ಕಡೆಗಾಲ ವದಗಿರುವಾಗ ಕಡು ಪರಾಕ್ರಮಿಯಾದ ಎನ್ನಂ ತಡಹಿದರೆ ದೃಡವಾಗಿಯೂ ನೀನು ಬದುಕುವೆಯಾ  ಕಡುರೌದ್ರಾವೇಶ ದಿಂದ  ಸರಳ್ಮಳೆಗಳನ್ನು ಕರೆದಿರುವೆನು  ಬದುಕಿಕೊಳ್ಳೆಲಾ ಭಂಡ  ನಾರಿಯರೋಳ್ ಷಂಡಾ.

ಪದ

ತಡೆಯಲೊ ಎನ್ನಯ  ದಂಡದ ಹೊಡೆತವ  ಕಡು
ತವಕದಿ ದುರುಳಾ  ಮರುಳಾ  ಸಿಡಿಲಿನ ಸಮದಂತೆ
ಭೋರ್ಗರೆಯುವದೆನ್ನ  ನೋಡೆಲೊ ಭಂಡ  ಭಂಡಾ ॥

ಸಿಂಹಾಸ್ಯ: ಎಲೈ ಮೃಢಸುತನೇ ಕಡುಖಡ್ಗದಿಂದ ನಿನ್ನಂ ಕಡಿದು ಸರಳ್ಗಳಂ ಬಿಡುಗಡೆ ಇಲ್ಲದೆ ಕರೆದು  ಈ ಸುರಸಮೂಹವಂ ಜಡಸಾಗರಕ್ಕೆ ದಡದಡನೆ ಉರುಳಿಸುವೆ ಘುಡಿಘುಡಿಸಿ ಗಡಿ ಇಲ್ಲದೆ ಸಿಹ್ಮಧ್ವನಿ ಇಂದಡರಿ ನಿನ್ನ ಬಾಹು ಬಲವ ಕೆಡಹದಿದ್ದರೆ ತಾರಕ ಅನುಜನೆಂಬ ಪೆಸರು  ಈ ಸರಿಗಾಂತರ‌್ಯದೊಳ್ ಪಡೆದು ಸಾರ್ಥಕವೇನು. ಯುದ್ಧಕ್ಕೆ ನಿಲ್ಲೋ ದಿಗಂಬರ ಸುತನೆ.

ಪದ

ದುರುಳನೆ ನಿನ್ನಯ  ಶರವನು ಮುರಿದೆನು  ಪರಿಕಿಸೆನ್ನ
ಧೈರ‌್ಯ  ಶೌರ‌್ಯ  ಭರದೊಳು ಕರುಳನು  ಹಿರಿಯುವೆ
ರಭಸದಿ  ತ್ವರಿತದಿಂದಲೀಗ ॥ಬೇಗಾ ॥

ವೀರಭದ್ರ: ಎಲೋ ನಿಶಾಚರ, ನನ್ನಂ ಕಡಿಯುವೆನೆಂಬುದಾಗಿ ಬಿರುನುಡಿಗಳಂ ಆಡಿದೆಯಾ  ಭಳಿರೇ ಜಗದ್ಬಂಡನಾದ ನಿನ್ನ ಗಂಟಲಂ ಸೀಳಿ ಭೂತಪ್ರೇತ ಪಿಶಾಚಂಗಳಿಗೆ ಹಬ್ಬದೂಟವಂ ಮಾಡಿಸುವೆ ತಡಮಾಡದೆ ಯುದ್ಧಕ್ಕೆ ನಿಲ್ಲಲೈ ಮೂಢ ಕೊಡು ಕಾಳಗವ ಗಾಡ.

 

(ಷಣ್ಮುಖನು ಬರುವನು.)

ಪದ

ಎಲವೊ ದನುಜನೆ ಕೇಳೊ  ಕಲಿತನವೇನಿದು
ಪೇಳೋ  ಕಲಹದೊಳಗೆ ನಿನ್ನ  ಯಮನಿಲಯಕೆ
ಕಳುಹಿಸುವೆ  ಕಳುಹಿಸುವೇ ॥

ಷಣ್ಮುಖ: ಎಲವೋ ದೈತ್ಯಾಧಮ  ನಿನ್ನ ಹಾಗೆಯೇ ನಿಮ್ಮಣ್ಣನು ಪ್ರತಾಪದಿಂ ಬಂದು  ಯಮನಾಲಯ ಸೇರಿದನು  ಅದರಂತೆಯೇ ನೀನು ಬಂದಿರುವೆ  ಆದ್ದರಿಂದ ತಕ್ಷಣದೋಳ್ ನಿನ್ನ ಸೀಳಿ  ಯಮನ ಪಟ್ಟಣದ ದಾರಿಯನ್ನು  ತೋರಿಸುವೆನು ನೋಡೆಲಾ ಭಂಡರಕ್ಕಸ.

ಪದ

ಶಕ್ತಿಯೊಳೆನ್ನನು ನೀನು  ಯುಕ್ತಿಯಿಂ ಗೆದ್ದರೆ
ಮುಕ್ತಿ ದೊರಕುವದು ಕೇಳೋ  ನೀ ಕೇಳೋ ॥

ಸಿಂಹಾಸ್ಯ: ಎಲೋ ಹುಡುಗ, ನೀನು ಚಿಕ್ಕವನೆಂದು ಗಕ್ಕನೆ ಇರಲು  ಪಕ್ಕನೆ ಎನ್ಮಂ ಮಣ್ಮುಕ್ಕಿಸುವೆನೆಂದು ನುಡಿಯುವೆಯಾ  ಎಲಾ ಮುಕ್ಕಣ್ಣಸುತನೆ ತಕ್ಷಣದಲ್ಲಿ ನಿನ್ನನ್ನು ಸೀಳಿ  ಕರುಳಂ ತಿಂದು ತೇಗಿ ಡರ‌್ರನೆ ತೇಗಿಬಿಡುವೆನು  ತರಳ ಹುಡುಗ.

ಪದ

ಖುಲ್ಲರಕ್ಕಸ ನಿನ್ನ  ಸೊಲ್ಲಡಗಿಸುವೆನು  ಬಲ್ಲಿದ ಶರಗಳ
ನೋಡೋ  ನೀ ನೋಡೊ ॥ತಲ್ಲಣಗೊಳಿಸುವೆ ನಿನ್ನ
ಶೂಲಾಯುಧದಿಂದ  ನಿರ್ಮೂಲ ಮಾಳ್ಪೆ ॥ನಾ ಮಾಳ್ಪೆ॥

ಷಣ್ಮುಖ: ಎಲಾ ಖುಲ್ಲರಕ್ಕಸ ನಿನ್ನ ಸೊಲ್ಲಡಗಿಸುತ್ತೇನೆ  ಶೂಲಾಯುಧದಿಂದ ತಿವಿಯುವೆ  ಅಲ್ಲದೆ ಬಾಣಗಳಿಂದ ನಿನ್ನ ಗೋಣಂ ಮುರಿಯುವೆ  ಮಾಂಸಖಂಡಗಳಂ ಹಿಂಡುಭೂತಂಗಳಿಗೆ ಆಹುತಿ ಮಾಡುವೆ ತಡಮಾಡದೆ ಯುದ್ಧಕ್ಕೆ ನಿಲ್ಲಲೊ ದುರುಳ  ತೆಗೆಯುವೆ ನಿನ್ನ ಕೊರಳ.

 

(ಷಣ್ಮುಖ ಸಿಂಹಾಸ್ಯರ ಯುದ್ಧ ಸಿಂಹಾಸ್ಯನ ಸಾವು)

(ಶೂರಪದ್ಮಾಸುರನ ದರ್ಬಾರ್)

ಸಾರಥಿ: ರಾಕ್ಷಸ ಕುಲೋದ್ಧಾರನಿಗೆ ಜಯವಾಗಲಿ॥

ಶೂರಪದ್ಮ: ಚಾರನೇ ವರ್ತಮಾನವೇನೋ॥

ಸಾರಥಿ: ಹೇ ಚಕ್ರವರ್ತಿಯವರೇ ನಿಮ್ಮ ಅನುಜನಾದ ಸಿಂಹಾಸ್ಯ ಮತ್ತು ನಿಮ್ಮ ಅಣ್ಣನಾದ ತಾರಕಾಸುರನ ಮಕ್ಕಳಾದ ಭಾನುಕೋಪ  ಮೊದಲಾದ ರಕ್ಕಸ ಸೇನಾನಾಯಕರನ್ನು ಯಾವನೋ ಈಶ್ವರನ ಮಗ ಷಣ್ಮುಖನಂತೆ ಅವನು ಅವರೆಲ್ಲರನ್ನು ಸಂಹರಿಸಿ ರಾಕ್ಷಸ ಸೇನೆಯನ್ನೆಲ್ಲಾ  ಧೂಳೀಪಟವಂ ಮಾಡಿದನೈ ರಾಜ ಮಾರ್ತಾಂಡತೇಜ.

ಶೂರಪದ್ಮ: ಅಯ್ಯೋ ಹರಹರಾ  ಈಗ ಮಡಿದಿರುವ ಅಣ್ಣ ತಮ್ಮಂದಿರನ್ನು ಮಕ್ಕಳನ್ನು  ಸೈನ್ಯವನ್ನು ಈ ಹಾಳು ಕಣ್ಣಿನಿಂದ ನೋಡಿ ಹೇಗೆ ಸೈರಿಸಲಿ  ಅಯ್ಯೋ ಅಣ್ಣ ತಮ್ಮಂದಿರಾ ನನ್ನ ಮರೆತು  ನೀವುಗಳೆಲ್ಲರೂ ಎಲ್ಲಿಗೆ ಹೋದಿರಿ  ನಿಮ್ಮಗಳನ್ನು ನೋಡಿ ಹೇಗೆ ಸೈರಿಸಲಿ ನಿಮ್ಮ ತಮ್ಮನಾದ ನನ್ನ ಸಂಗಡ ಒಂದು ಮಾತನ್ನಾದರೂ ಆಡಬಾರದೆ. ಆಹಾ ಈ ರಣ ಭೂಮಿಯಲ್ಲಿ ಬರಿದೇ ದುಃಖಿಸುವುದರಿಂದ ಏನು ಪ್ರಯೋಜನ  ಧನುರ್ಬಾಣಗಳಂ ಧರಿಸಿ ಕ್ಷೇತ್ರಾಧ್ರದಾರಿಯಾಗಿ ಬಂದಿರುವ ವೈರಿಗಳಂ ನಿರ್ಮೂಲ ಮಾಡದೆ ಬಿಡುವುದಿಲ್ಲ ಯಾರಲ್ಲಿ ನಮ್ಮ ಚದುರಿ ಹೋಗಿರುವ ಸೇನಾ ನಾಯಕರನ್ನು  ವೈರಿಗಳಲ್ಲಿ ಯುದ್ಧಮಾಡುವುದಕ್ಕೆ ಕರೆದುಕೊಂಡು ಬರುವನಾಗು.

ಪದ

ತರಳನ ಕೊಂದವನ್ಯಾರೊ ನೆರೆ ಸಹಜಾತರನು ಬೇ
ಗಾ॥ತರಿದಾ ವೀರನ್ಯಾರೋ  ನೀ ತೋರೋ॥

ಶೂರಪದ್ಮ: ಎಲೈ ಭಟರೇ ನಮ್ಮಣ್ಣ ತಮ್ಮಂದಿರನ್ನು ಮಕ್ಕಳನ್ನು ಕೊಂದ ಮದಾಂಧನು ಯಾರು ತೋರಿಸುವರಾಗಿ ಇಂದಿನ ದಿನದೋಳ್ ನಮ್ಮ ಊರ ಮಾರಿಗೆ ಔತಣವನ್ನು ಮಾಡಿಸುತ್ತೇನೆ ಭಟರೆ.

ಸಾರಥಿ: ಹೇ ಚಕ್ರವರ್ತಿ ಅಗೋ ನೋಡಿ ದೇವತೆಗಳ ಮಧ್ಯದಲ್ಲಿ ನಿಂತಿರುವ ಆರು ತಲೆಯುಳ್ಳವನೇ ರಾಜೇಂದ್ರನೆ.

ಶೂರಪದ್ಮ: ಆಹಾ ಹರಿಬ್ರಹ್ಮೇಂದ್ರಾದಿಗಳ ಮಧ್ಯದಲ್ಲಿ ನಿಂತಿರುವವನೇ ಈಶ್ವರನ ಪುತ್ರನೆಂದು ತಿಳಿದ ಹಾಗಾಯಿತು. ಮುಂಚಿತವಾಗಿ ಇವನಂ ಕೊಂದು ನಮ್ಮ ಅಣ್ಣ ತಮ್ಮಂದಿರನ್ನು ಮಕ್ಕಳನ್ನು ಕೊಂದ ಹಗೆತನವಂ ತೀರಿಸಿಕೊಳ್ಳುವೆನು  ಎಲೈ ಪಟುಭಟರೇ ನೀವುಗಳೆಲ್ಲರೂ ಧೈರ‌್ಯದಿಂದ ಕಾದುವರಾಗಿರಿ. ಎಲೈ ಹುಡುಗ ನೀನು ಎಲ್ಲಿಗೆ ಹೋಗುವೆ ನಿಲ್ಲು ನಿಲ್ಲು ನಿನ್ನ ಸಾಹಸವಂ ನೋಡುವೆನು.

ಪದ

ಧುರಕೆ ಬಂದು ನೀನೂ ಸುರರ ಮಾತನು ಕೇಳಿ
ಬರಿದೆ ಕೆಡದಿರು ಈಗ ತೆರಳೊ ಬೇಗದಲೀ॥

ಶೂರಪದ್ಮ: ಎಲಾ ಬಾಲಕ ಇದೇನು ಚೆಂಡು ಬುಗುರಿ ಆಟವೆಂದು ಬಂದಿರುವೆಯಾ ಏನು ನಿನ್ನನ್ನು ನೋಡಿದರೆ ಇನ್ನೂ ಸಣ್ಣ ಬಾಲಕನು. ಆದ್ದರಿಂದ ಈ ರಣಭೂಮಿಯಲ್ಲಿ ವ್ಯರ್ಥವಾಗಿ ಮಡಿಯಬೇಡ ಈಗ ನಿನಗೆ ಪ್ರಾಣದಾನವಂ ಮಾಡಿರುತ್ತೇನೆ. ಹೊರಟುಹೋಗು ಪ್ರಾಣವನ್ನುಳಿಸಿಕೊಳ್ಳೊ ಪಾಮರ.

ಪದ

ಸುರರನೆಲ್ಲರ ನೀನು ಬರಿದೆ ಬಾಧಿಸಿ ಈಗ ವರೆ
ಯುವೆ ಯನ್ನೊಳ್ ನೀಂ ಪರಮವಾಕ್ಯವ ನೀ ವಾಕ್ಯವ ನೀ

ಷಣ್ಮುಖ: ಎಲೋ ಪಾಪಿಯಾದ ಖೂಳನೆ ಶರಣರಾದ ಸುರರೆಲ್ಲರಂ ಪರಿ ಪರಿ ಇಂದ ಗೋಳಾಡಿಸಿದ ಪಾಪವು ಥಟ್ಟನೆ ತಟ್ಟಿ. ನಿಮಗೆ ಅಂತ್ಯಕಾಲ ಒದಗಿರುವಾಗ ನಾಚಿಕೆ ಇಲ್ಲದೆ ನನ್ನೊಡನೆ ಮಾತನಾಡುವುದಕ್ಕೆ ಬರಬಹುದೇನೊ ಭ್ರಷ್ಟ ಪರಮ ಪಾಪಿಷ್ಟ.

ಪದ

ತರಳಾನೆ ನಿನ್ನೊಡನೆ ಧುರದೊಳು ಸೋತರೆ ವೀ
ರಾಧಿವೀರ ಧರೆಯೊಳಗೆ ಪೆಸರ್ ಪಡೆದು ಸಾರ್ಥಕವೇ
ನೋ ನೀಂ ಪೇಳೊ॥

ಶೂರಪದ್ಮ: ಎಲಾ ತರಳ ನಾನು ನಿನ್ನಲ್ಲಿ ರಣಾಗ್ರವಂ ಮಾಡಿ ಸೋತರೆ ವೀರಾಧಿವೀರ ಶೂರಪದ್ಮಾಸುರನೆಂದು ಈ ಧರಿತ್ರೆಯಲ್ಲಿ ಪೆಸರ್‌ಪಡೆದು ಸಾರ್ಥಕವೇನು ನಿನ್ನನ್ನು ಕೊಲ್ಲವದೆಷ್ಟರ ಕೆಲಸ ಚಿಕ್ಕವನಾದ ನೀನು ಅಕ್ಕರದಿಂದೆನ್ನ ಮಾತಕೇಳಿ ನಿಮ್ಮ ಪಿತನಾದ ಮುಕ್ಕಣ್ಣನಂ ಕಳುಹಿಸೋ ಬಾಲಕ.

ಪದ

ವೀರನೆಂಬಹಂಕಾರದಿ ಗೌರಿ ಅರಸನ ಕೂಡೆ
ಮಾರನ ಕೆಣಕಿದ ಪರಿಯಾ ನೀನರಿಯಾ॥

ಷಣ್ಮುಖ: ಎಲೋ ದೈತ್ಯ ನಿನ್ನಂತೆ ಅಹಂಕಾರಪಟ್ಟು ಹಿಂದೆ ಮನ್ಮಥನು ನಮ್ಮ ತಂದೆಯ ಫಾಲನೇತ್ರದಿಂದ ಮಡಿದನು. ಅದರಂತೆ ನನ್ನ ಬಾಣಾಗ್ನಿ ಇಂದ ನಿನ್ನ ದೇಹವಂ ಸುಡದೆ ಬಿಡುವನಲ್ಲ. ಈಗಲೂ ನನಗೆ ಶರಣಾಗತನಾಗಿ ಬೇಡಿಕೊಂಡರೆ ನಿನ್ನ ಪ್ರಾಣ ಮಾತ್ರ ಬಿಡುವೆನೋ ಖುಲ್ಲದೈತ್ಯ.

ಪದ

ಎಲವೋ ದನುಜಾಧಮನೆ ಜನನವೆ ಕಶ್ಯಪನ
ಲಲನೆ ಮಾಯಾದೇವಿಯೊಳಗೆ॥ನೆಲಸಿ ಬ್ರಾಹ್ಮಣನಾಗಿ
ಕಳ್ಳತನವ ಮಾಡುವರು ಕುಲಗೇಡಿಯೇ ಸರಿ
ಯೆ ನೀ ಪೇಳೋ ನೀ ಪೇಳೋ॥

ಷಣ್ಮುಖ: ಎಲೋ ರಕ್ಕಸ ಮುಖ್ಯವಾಗಿ ನೀನು ನಿನ್ನ ಅಹಂಕಾರವನ್ನು ಮುಂದು ಮಾಡಿಕೊಂಡು ಜನನ ಫಲಗಳಂ ಮರೆತಿರುವೆಯೊ. ಎಲಾ ಪಾಪಿಯೆ ಕಶ್ಯಪರ ಪತ್ನಿಯಾದ ಮಾಯಾದೇವಿಯರ ಉದರದಲ್ಲಿ ಹುಟ್ಟಿ ಬ್ರಾಹ್ಮಣರೆನಿಸಿಕೊಂಡ ಮೇಲೆ ಸತ್ಯವಂತರಾದ ದೇವತೆಗಳನ್ನು ಬಾಧಿಸುವುದು ವಿಹಿತವೆ ಸ್ನಾನಸಂಧ್ಯ್ಯಾವಂದನಾದಿ ನಿತ್ಯಕರ್ಮ ಆಚಾರಾದಿಗಳಂ ಇಟ್ಟುಕೊಳ್ಳದೆ ದೇವಬ್ರಾಹ್ಮಣರಂ ಬಾಧಿಸುವುದು ನ್ಯಾಯವೇನೋ ಇಂಥಾ ದುಷ್ಕಾರ‌್ಯಕ್ಕೆ ಪ್ರವರ್ತಿಸಿದ್ದಕ್ಕೆ ನಮ್ಮ ತಂದೆಯಾದ ಪರಶಿವಮೂರ್ತಿ ನಿಮ್ಮ ನಡತೆಯಂ ತಿಳಿದು ನಿಮ್ಮಗಳಂ ಸಂಹರಿಸುವಂತೆ ಅಪ್ಪಣೆಕೊಟ್ಟ ಪ್ರಕಾರ ನಿಮ್ಮ ರಾಕ್ಷಸರನ್ನೆಲ್ಲಾ ಸಂಹರಿಸಿದೆ ನಿನ್ನನ್ನೂ ಸಹ ಯಮನಾಲಯಕ್ಕೆ ಕಳುಹಿಸುವೆ ಯುದ್ಧಕ್ಕೆ ನಿಲ್ಲೋ ಬುದ್ದಿಹೀನ.

ಪದ

ದುರುಳನೆ ನಿನ್ನಯ ಶರವನು ಮುರಿದೆನು ಪರಿಕಿ
ಸೆನ್ನ ಧೈರ‌್ಯಶೌರ‌್ಯ॥ಭರದಲಿ ಕರುಳನು ಕೊರೆಯುವೆ
ರಭಸದಿ ತ್ವರಿತದಿಂದಲೀಗಾ ಬೇಗಾ॥

ಶೂರಪದ್ಮ: ಎಲೋ ಹುಡುಗ ಚಿಕ್ಕವನೆಂದು ಅಕ್ಕರದಿಂದಿರಲು ಬಾಯಿಗೆ ಬಂದಂತೆ ಬಗುಳುವೆಯಾ ಇಕೋ ನೋಡು ನಿನ್ನ ಹೃದಯವಂ ಸೀಳಿ ಕರುಳುಗಳಂ ಸೆಳೆದು ಶಾಕಿನಿ ಡಾಕಿಣಿ ಜ್ವಾಲಿನಿ ಮಾಲಿನಿಯರಿಗೆ ಔತಣವನ್ನು ಕೊಡುವ ಆಸ್ತ್ರವನ್ನು ಬಿಟ್ಟಿದ್ದೇನೆ ತರಹರಿಸಲೋ ಮೂಢ ಕೊಡು ಕಾಳಗವ ಗಾಢ.

ಪದ

ದುಷ್ಟನೆ ನಿನ್ನನು ನಷ್ಟವ ಮಾಳ್ಪೆನು ಅಷ್ಟಮೂರ್ತಿ
ದಯದೀ ಮುದದೀ॥ಭ್ರಷ್ಟನೆ ಯಮಪುರಿ
ಗಟ್ಟದೆ ಬಿಡೆ ನಿನ್ನ ಎಷ್ಟು ಮಾತುಗಳಾಡ್ವೆ ಆಡ್ವೇ॥

ಷಣ್ಮುಖ: ಎಲೋ ಭಂಡ ಈ ಭೂಮಂಡಲದಲ್ಲಿ ನಾನೇ ಗಂಡುಗಲಿ ಎಂದು ಪುಂಡ ನಡತೆಗಳಂ ಆಡುವೆ ಎಲಾ ಷಂಡ ನಿನ್ನ ಮಂಡೆಯಂ ಪಿಡಿದು ಈ ಭೂಮಂಡಲಕ್ಕೆ ದಪ್ಪನೆ ಕೆಡಹಿ ಅಂಡಲಿದ ನಾಲಿಗೆಯನ್ನು ಖಂಡ್ರಿಸಿ ತುಂಡು ತುಂಡು ಮಾಡುವೆ ನೋಡೊ ಭಂಡಾ.

ಪದ

ಖೂಳನೆ ಕೇಳೆಲೊ ಸೀಳುವೆ ನಿನ್ನನು ಕಾಳಗದೊಳು
ಈಗಾ ಬೇಗಾ॥ಗೋಳಾಡಿಸುವೆನು ಭಾಳಲೋಚನ
ಆಣೆ ಹಾಳು ಮಾಡದೆ ಬಿಡೆನು ನಾ ಬಿಡೆನೂ॥

ಶೂರಪದ್ಮ: ಎಲಾ ಪಾಪಿಯಾದ ತುಡುಗ ಹುಡುಗ ಇಂದಿನ ದಿನದಲ್ಲಿ ನಿನ್ನನ್ನು ನಮ್ಮೂರ ಮಾರಿಗೆ ಅರ್ಪಿಸಿ ನಮ್ಮ ರಾಕ್ಷಸ ಸಮುದಾಯದಲ್ಲಿ  ಹಬ್ಬದೂಟವಂ ಮಾಡಿಸುವೆನು ಆದ್ದರಿಂದ ನಿನ್ನ ಮೇಲೆ ದಿವ್ಯಾಸ್ತ್ರವನ್ನು ಪ್ರಯೋಗಿಸುವೆ ತಡೆದುಕೊಳ್ಳೆಲಾ ಪೋರ ಅತಿಕ್ರೂರ.

ಪದ

ರಾಕ್ಷಸಾಧಮ ಕೇಳೋ ಕುಕ್ಷಿಯ ಬಗೆವೆನು ರಕ್ಷಿಸುವ
ರ‌್ಯಾರೊ ನಿನ್ನ ಮುನ್ನಾ॥ಪಕ್ಷಿವಾಹನಸಖ ವಿರೂಪಾಕ್ಷನ
ದಯದಲಿ ಮೋಕ್ಷವ ಕೊಡುವೆ ನಿನಗೆ ನಾ ನಿನಗೆ॥

ಷಣ್ಮುಖ: ಎಲಾ ರಾಕ್ಷಸಾಧಮ ಈ ಕ್ಷಣದೋಳ್ ನಿನ್ನ ಕುಕ್ಷಿಯಂ ಸೀಳಿ ಹಕ್ಕಿ ಪಕ್ಷಿಗಳಿಗೆಲ್ಲಾ ಹಬ್ಬವಂ ಮಾಡಿ ಪಕ್ಷಿವಾಹನ ಸಖ ವಿರೂಪಾಕ್ಷೇಶ್ವರನು ಮೆಚ್ಚುವಂತೆ ಮಾಡುವುದಕ್ಕೆ ಇದೋ ಶಸ್ತ್ರಾಸ್ತ್ರವಂ ಪ್ರಯೋಗಿಸುವೆನು. ಈ ಧಾತ್ರಿ ಆಸೆಯಂ ಮರೆತು ಪರಲೋಕದ ಹಾದಿಯಂ ನೋಡಿಕೊಳ್ಳವನಾಗು ಜಾಗ್ರತೆ ಇಂದ ಯುದ್ಧಕ್ಕೆ ನಿಲ್ಲೋ ಖುಲ್ಲ ಅಡಗಿಸುವೆ ನಿನ್ನ ಸೊಲ್ಲಾ.

(ಯುದ್ಧ: ಷಣ್ಮುಖನಿಂದ ಶೂರಪದ್ಮನ ಮರಣ)

ಗಿರಿಜಾ ಕಲ್ಯಾಣ ವುಸಂಪೂರ್ಣಂ

***