ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು
ಬಾಣಸಂದ್ರ ಪಾಳ್ಯದ ಭಾಗವತ ಹನುಂತಯ್ಯನವರು

ಕಾಲ : ೧೪-೧೧-೧೯೫೪

 

ಗಣಸ್ತುತಿ

ಅಗಜಾನನ ಪದ್ಮಾರ್ಕಂ  ಗಜಾನನ ಮಹರ್ನಿಶಂ
ಅನೇಕದಂತಂ ಭಕ್ತಾನಂ  ಏಕದಂತಮುಪಾಸ್ಮಹೇ ॥
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇ ಸರ‌್ವವಿಘ್ನೋಪಶಾಂತಯೇ ॥
ಶ್ರೀ ಮದ್ಗುರುಗಣಸೇವಿತಂ  ಕಪಿತ್ಥ ಜಂಬೂಫಲಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶಕಾರಣಂ
ನಮಾಮಿ ವಿಘ್ನೇಶ್ವರ ಪಾದ ಪಂಕಜಂ॥

ತ್ರಿವುಡೆ
ಶ್ರೀ ಉಮಾಪತಿ ಪಾದಪಂಕಜ  ಭಾವಭಕ್ತಿಯಲಿ
ಭಜಿಸುವೇ  ದೇವಗಂಗಾಧರನೆ ಪಾಲಿಸು  ತ್ರಿಜಗನನವರತಾ ॥
ಶ್ರೀ ವಿನಾಯಕ ಕೂಡ ಲಕ್ಷ್ಮಿಯ  ದೇವಿ ಹೃದಯಾಂಬುಜ ಪ್ರಭಾಕರ
ದೇವವಾಣಿಯ ಕಾಂತ ಪಾಲಿಸು  ಮತಿಗೆ ಮಂಗಳವಾ ॥

ಶಾರದಾಸ್ತುತಿ

ನಮಸ್ತೇ ಶಾರದಾದೇವಿ  ಕಾಶ್ಮೀರ ಪುರವಾಸಿನೀ
ತ್ವಾಮಹಂ ಪ್ರಾರ್ಥಯೇ ದೇವಿ  ನಿತ್ಯ ವಿದ್ಯಾದಾನಂಚದೇಹಿಮೇ ॥

ಶಾರದಾಸ್ತುತಿ ಅಟತಾಳ

ಪೊರೆಯೇ ಶಾರದೆಯೇ  ಎಮ್ಮನು ನಿರುತಾ  ಪೊರೆಯೆ ॥
ಕಾಳಸರ್ಪನಪೋಲ್ವ  ವೇಣುಪುಸ್ತಕಪಾಣಿನಿ ನೀಳಹಸ್ತದಿಪೋಲ್ವ  ರಾಕೇಂದುವದನೆಯೇ ॥ಪೊರೆಯೇ ॥ಪರಮೇಷ್ಟಿ ಪ್ರಿಯಳೆ  ಕಾರುಣ್ಯನಿಧಿಯಳೇ
ಕರುಣದಿಂದಲಿ ನೀನು  ಕಾಪಾಡಿ ಪೊರೆಯಮ್ಮ ॥
ಪೊರೆಯೆ ॥ತಾವರೆಗೆರೆಯೊಳು  ತಾಯೆ ನೀ ನೆಲಸಿಹೇ  ಕಾಯಬೇಕೆಮ್ಮನು
ಕರುಣದಿಂದಲಿ ನೀನು  ಪೊರೆಯೆ ಶಾರದೆಯೆ ॥

ನವಗ್ರಹ ಸ್ತೋತ್ರ

ಸೂರ‌್ಯ ಸೋಮ ಅಂಗಾರಕ ॥ಬುಧ ಗುರು ಶುಕ್ರಶನೇಶ್ವರಹ
ರಾಹುಕೇತು ನಮಸ್ತುಭ್ಯಂ  ಇತತೇ ನವಗ್ರಹ ವಂದನಂ ॥

ಅಷ್ಟದಿಕ್ಪಾಲಕರ ಸ್ತೋತ್ರ
ಇಂದ್ರಾ ಅಗ್ನಿಯಮಶ್ಚೈವ  ನೈರುತೋ ವರುಣಸ್ತಥಾ
ವಾಯವ್ಯಂಚ ಕುಭೇರಂಚ  ಈಶಾನ್ಯಾಯ ನಮಸ್ತುತೇನ್ನಮಹಾ ॥

ಸಭಾವಂದನೆ
ಅಕುಟಂಕಮಲ ಅಸ್ತ್ರಂ  ಟಂಕಾರಂ ತಾಳಹಸ್ತಕಂ
ವಾಗ್ದೇವಿ  ವಿಜಯೇಲಿಂಗಂ  ಆಕಾಶಾಯ ನಮೋನ್ನಮಹಾಃ ॥

ಸ್ತೋತ್ರ

ವಿಷ್ಣುಶಕ್ತಿ ಸವರ‌್ಬೂತೇ  ಶಂಕವರ್ಣ ಮಹೀತಳೇ
ಅನೇಕ ರತ್ನಸಂಭೂತೇ  ಶ್ರೀ ಭೂಮಿದೇವಿ ನಮೋಸ್ತುತೇ ನ್ನಮಹಾಃ ॥

ಕಂದ

ಗಣನೆ ಇಲ್ಲದೆ ಗುರುವರನು  ಮನದಣಿಯೆ
ಪಿತಮಾತೆಯನು  ಮೋಕ್ಷಕಣುಯೆನುತ
ಭಜಿಸುವೆನು  ಕಥಾ ಪ್ರಾರಂಭಕಾಲದೊಳೂ ॥

ಕಂದ

ಮಾರಜನನಿಯ ಭಜಿಸಿ  ಪದ್ಮಕುಮಾರವಾಣಿಯರಡಿಗೆ
ಜಂಭಾರಿ ಮುಖ್ಯಮರರ  ಪ್ರಾರ್ಥಿಸಿ ನುತಿಸಿ ತಾಪಸರ
ಭೂರಿಭಕ್ತಿಯೊಳಮಲಕವಿಗಳ  ಚಾರುಚರಣಕೆ ಮಣಿದು
ಗುರು ಪಾದಾರವಿಂದ ಧ್ಯಾನದಲಿ ಪೇಳ್ವೆನೀ ಕೃತಿಯಾ ॥

ವಂದನೆ:
ಸಭಾಕಲ್ಪತರು ವಂದೇ  ವೇದಶಾಖೋಪಜೀವಿತಂ
ಶಾಸ್ತ್ರಪುಷ್ಪಸಮಾಯುಕ್ತಂ  ವಿದ್ವದ್ವರ ಶೋಭಿತಂ

ವರ್ಣನೆ: ಅಕ್ಷರ ಲಕ್ಷಣ ವಿಚಕ್ಷಣ ಲಿಖಿತಗಣಿತ ಗಾಂಧರ‌್ವ ನಿರುಕ್ತ ವೈಶೇಷಿತ ಭಾಷಪ್ರಕಾರ ನ್ಯಾಯ ಮೀಮಾಂಸ ಛಂದಸ್ಸು ಅಲಂಕಾರ  ಇತಿಹಾಸ ಪುರಾಣ ಕಾವ್ಯ ಲಕ್ಷಣ ಕನ್ಯಾ ಲಕ್ಷಣ ಅಶ್ವಾರೋಹಣ ಗಜಾರೋಹಣ ರತ್ನಪರೀಕ್ಷೆ ಜೋತಿಷ್ಯ ಮಾರಣ ಕವಿಕೇಂದ್ರಜಾಲ ಕಾಲಜ್ಞಾನ ಕಾಯಶುದ್ಧಿ ಇಂಗಿತಭಾವ ಚೌಷಷ್ಟೀಬಂಧನಂ ಅಂಕುರುಶೋಭಾಟನ ಮಾಯವಾದ ಧಾತುವಾದ ವಿಷವಾದ ಗಾರುಡಚಿತ್ರಕರ್ಮ ಮುಲ್ವಾಶಾಸ್ತ್ರ ಪರಕಾಯಪ್ರವೇಶ ಮುಂತಾದ ವಿದ್ಯಾಧುರಂಧರರಾದ ಈ ವರಸಭಾ ಕವಿಜನಂಗಳಿಗೆ ಅಭಿವಂದಿಪೇ.

ಹೇಳಿಕೆ: ಏನಂದರೆ ಕಬ್ಬು ಡೊಂಕಾದರೂ ಸಿಹಿಯು ಡೊಂಕಲ್ಲ ಪುಷ್ಪ ಡೊಂಕಾದರೂ ಪರಿಮಳವು ಡೊಂಕಲ್ಲ ಹಸು ಕಪ್ಪಾದರು ಹಾಲು ಕಪ್ಪಲ್ಲ ಬಾಲಕನು ಸಣ್ಣವನಾದರೂ ಬಾಲಕನಲ್ಲಿರುವ ವಾಗ್ದೇವಿ ಸಣ್ಣವಳಲ್ಲವಾದ್ದಡಿಂ ಬಾಲಕನ ತೊದಲ್ ನುಡಿ ಅರಭಾಷೆ ತಪ್ಪುಗಳೇನು ಬಂದಾಗ್ಯು ಬಾಲಕನಂ ಮನ್ನಿಸಿ ಕಾಪಾಡಬೇಕೆಂದು ಬೇಡುತ್ತೇನೈ ಸಭಾ ಜನರೇ. ವಂದಿಪೆ ಸಭಾಜನರೇ ನಿಮ್ಮಡಿಗೆ ನಾನೊಂದಿಪೆ ಸಭಾಜನರೇ. ತಪ್ಪುಗಳಿದ್ದೊಡೆ ಅಪ್ಪಗಳೆ ನಿವ್ಗಳು ತಿದ್ದಿ ಸರಿಮಾಡಿಕೊಂಡು ಕಾಪಾಡಬೇಕೆಂದು  ವಂದಿಪೆ ಸಭಾಜನರೇ.

ಕಥಾ ಸೂಚನೆ

ತ್ರಿವುಡೆ

ಕೇಳಿರೈ ಮುನಿಗಳಿರ ನಿಮ್ಮೊಳು  ಪೇಳುವೆನು ಮನವರಿತುಶೂಲಿಯ
ಕೇಳಿಯನು ನೀವೀಗ ಮುದವನು ತಾಳಿರೆಂದು
ಹಿಂದೆ ದಕ್ಷನ ಯಗ್ನಕೊಂಡದೀ  ಬೆಂದು ಚಿನ್ಮಯಳಾದ
ಸತಿಯಳು  ಇಂದುಧರನನು ಮತಿಯ ಪಡೆದಾ  ನಂದದಿಂದಾ ॥
ಮೇನಕೆಯೊಳವತರಿಸೆ ಕಾಣುತ  ಮಾನನಿಧಿ ಹಿಮವಂತ ಮನದೊಳು
ಸ್ಯೂನು ಸಂಭ್ರಮವಾಂತು ಕೂಡುತಾ  ಮುನಿಜನನಾ
ಸುತೆಗೆ ಮಾಡಿಸಿ ಜಾತಕರ್ಮವ ಅತಿಶಯದೊಳಿರುತಿರಲು ಬಾಲ್ಯನ
ಗತಿ ಕಳೆದು ಯೌವನವು ಗಿರಿಜೆಯ ಜೊತೆಯ ಸೇರಿ ॥

ವರ್ಣನೆ: ಕೇಳಿರೈ ಸಭಾಜನರೇ ಅಯ್ಯ ಶೌನಕಾದಿ ಮುನಿಗಳೇ ನೀವು ಮಾಡಿದ ಪ್ರಶ್ನಾ ವಿಚಾರವು ಗೊತ್ತಾಯ್ತು ಸ್ಕಂದ ಪುರಾಣದಲ್ಲಿ ದಕ್ಷನ ಯಗ್ನದೊಳ್ ಧ್ವಂಸವಾದ ದಾಕ್ಷಾಯಣಿಯು ಆ ಪರಮೇಶ್ವರನ ಆಗ್ನೆಯಂತೆ  ಔಷಧಾ ಪಟ್ಟಣದಲ್ಲಿ ಗಿರಿರಾಜನ ಸತಿ ಮೇನಕೆಯ ಗರ್ಭದಲ್ಲಿ ಅವತರಿಸಲು ಆ ಗಿರಿಜಾ ದೇವಿಯನ್ನು ಪರಮೇಶ್ವರನು ಲಗ್ನವಾಗಿ ಷಣ್ಮುಖನಿಂದ ಆ ತಾರಕಾದಿ ಧೈತ್ಯರನ್ನು ಸಂಹರಿಸಿ ದೇವತೆಗಳಿಗೆ ಸುಖವನ್ನುಂಟು ಮಾಡಿದ ಕಥೆಯನ್ನು ಹೇಳುತ್ತೇನೆ ಲಾಲಿಸಿ ಏನಂದರೆ ಆ ಪರಮೇಶ್ವರಿಯು ಗಿರಿಜೆ ಎಂಬ ಹೆಸರಿನಲ್ಲಿ ಅವತಾರ ಮಾಡಿದಂಥಾದ್ದನ್ನು ತಿಳಿದಂಥ ದೇವಮುನಿಗಳೆಲ್ಲಾ ಸೇರಿ ನಾಮಕರಣ ಜಾತಕರ್ಮವೇ ಮುಂತಾದ ಶುಭಕಾರ‌್ಯಂಗಳನ್ನು ನೆರವೇರಿಸಿ ಇರುವಂಥ ವರ್ತಮಾನವನ್ನು ಅರಿತಂಥಾ ನಾರದರು ಈ ವಿಚಾರವನ್ನು ಗಿರಿರಾಜನಿಗೆ ಉಪದೇಶ ಮಾಡಿ ಗಿರಿಜಾ ಕಲ್ಯಾಣಕ್ಕೆ ಮಾರ್ಗವನ್ನುಂಟು ಮಾಡಬೇಕೆಂಬುದಾಗಿ ಯೋಚಿಸಿ ಬ್ರಹ್ಮಪುತ್ರರಾದ ನಾರದರು ದಯಮಾಡಿಸಿರುವಂಥ ಕಾಲದಲ್ಲಿ ಗಿರಿರಾಜನು ಮೇನಕೆ ಗಿರಿಜಾದೇವಿ ಸಮೇತರಾಗಿ ಒಡ್ಡೋಲಗದಲ್ಲಿ ಇರತಕ್ಕಂಥವರಾದರು.

ಗಿರಿರಾಜ: ಭಲೈ ಸಾರಥಿ ನಾವು ಧಾರೆಂದರೆ ಭರತ ಬದ್ರಸ್ಯ ಕಿನ್ನರಕಿಂಪುರುಷ. ವರುಣಾದ್ಯಖಿಳ ದ್ವೀಪಂಗಳಿಗೆ ಏಕಚಕ್ರಾಧೀಶ್ವರ ಬಲೋದ್ಬದ್ದನಿಲಂಸ ಸಕುಲಾಬ್ದಿ ಹಿಮಾಂಶುವೆನಿಸಿ ತ್ರಿಮೂರ್ತಿಗಳ ಪ್ರೀತಿಪಾತ್ರನಾಗಿ ಈ ಜಗತ್ತಿಗೆಲ್ಲಾ ತಂಪುಕೊಟ್ಟು ರಕ್ಷಿಸುತ್ತಾ ಔಷಧಾಪಟ್ಟಣವಂ ಪೋಷಿಸುವ ಹಿಮವಂತರಾಜನೆಂದು ತಿಳಿಯಲೈ ಸೇವಕಾ ಭಯತೃಣಭಾವಕ. ಭಲೈ ಸಾರಥಿ ಈ ವರಸಭೆಗೆ ಬಂದ ಕಾರಣವೇನೆಂದರೆ ನೆನ್ನೆ ದಿವಸ ಚೋಳಪಾಂಚಾಲ ಪಾಂಡೇಯ ಮಗಧಮಲೆಯಾಳ ಸೌರಾಷ್ಟ್ರ ನೇಪಾಳ ದೇಶದ ಅರಸುಗಳು ನಮ್ಮ ಮಗಳಂ ವಿವಾಹವಾಗಬೇಕೆಂದು ಕೇಳಿದರು ಯನ್ನ ಮಗಳಾದ ಗಿರಿಜೆಗೆ ತಕ್ಕ ವರನು ದೊರೆಯಲಿಲ್ಲವಾದ ಕಾರಣ ತಕ್ಕ ಆಲೋಚನೆಯಂ ಮಾಡಲುದ್ಯುಕ್ತ ಬಾಹೋಣವಾಯಿತೋ ಸಾರಥಿ. ಎಲೈ ಸೇವಕಾ ಅಂತಪುರಕ್ಕೆ ಹೋಗಿ ಯನ್ನ ಸತಿಯಾದ ಮೇನಕೆಯನ್ನು ಆಸ್ಥಾನಕ್ಕೆ ಬರಮಾಡು.

(ಮೇನಕೆ ಬರುವುದು)

ಪದರೂಪಕತಾಳ

ಲೋಕಮಾತೇ  ಕೋಕಜಾತೇ  ಶ್ರೀಕರಾಂಬೆಯೇ  ನಾಕವ
ರರ  ನೇಕಸುರರ  ಸಾಕುತಿರುತಿಹ  ಪಾಪದೂರೆ  ತಾಪಹಾರೇ
ನೀಂ ಪೊರೆ ಸದಾ  ಲೋಪ ಬಾರದಾ ಪರಿಯೊಳು  ಕಾಪಾಡೆನ್ನ
ನೂ  ಶೌರಿರಾಣಿ  ಕೀರವಾಣಿ  ಚಾರುಮಹಿಮಳೇ ॥
ಘೋರಕಲುಷ  ವಾರದುರಿಕೆ  ಮಾರಜನನಿಯೇ ॥ಭೂಮಿ ತಳದಿ
ನಾಮಪುರದೀ  ಕ್ಷೇಮದಾಯಕೀ  ಕಾಮಿತಾರ್ಥ  ಸೋಮ
ವೀವ  ಸಾಮಜಾನಡೇ ॥ಲೋಕಮಾತೇ ॥

ಮೇನಕೆ: ಪ್ರಾಣಕಾಂತನೇ ನಿಮ್ಮ ಪಾದಂಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು.

ಗಿರಿರಾಜ: ಎಲೈ ಮಂಗಳಾಂಗಿ ಸೌಮಂಗಲ್ಯಾಭಿವೃದ್ದಿರಸ್ತು ಮೇಲಕ್ಕೇಳೆ ರಮಣೀ.

ಮೇನಕೆ: ಹೇ ಎನ್ನ ಪ್ರಾಣಮನೋಹರ ಇಷ್ಟು ತ್ವರಿದಿತಂದ ಎನ್ನನ್ನು ಕರೆಸಿದ ಪರಿಯೇನೈ ರಮಣಾ ಸದ್ಗುಣಾಭರಣಾ.

ಗಿರಿರಾಜ: ಹೇ ರಮಣೀ, ಎಮ್ಮ ಮಗಳಾದ ಗಿರಿಜಾದೇವಿಗೆ ತಕ್ಕವರನು ಎಲ್ಲಿಯೂ ದೊರೆಯಲಿಲ್ಲವೆಂಬ ವ್ಯಾಕುಲವು ತುಂಬಿರುವುದೇ ಕಾಂತೆ ಮತಿ ಗುಣವಂತೆ.

ಗಿರಿರಾಜ: ಎಲೈ ಸೇವಕಾ ಎಮ್ಮ ಮಗಳಾದ ಗಿರಿಜಾ ದೇವಿಯನ್ನು ಆಸ್ಥಾನಕ್ಕೆ ಬರಮಾಡು.

ಗಿರಿಜಾದೇವಿ: ತಂದೆಯವರ ಪಾದಕ್ಕೆ ಶಿರ ಸಾಷ್ಟಾಂಗ ನಮಸ್ಕಾರಗಳು.

ಗಿರಿರಾಜ: ಅಮ್ಮಾ ಮಗಳೇ ನಿನಗೆ ಕಲ್ಯಾಣವಾಗಲಿ ಶುಭವಾಗಲಿ.

ಗಿರಿಜಾದೇವಿ: ಮಾತೆಯವರ ಪಾದಕ್ಕೆ ನಮಸ್ಕರಿಸುವೆನು.

ಮೇನಕೆ: ಎಲಾ ಪುತ್ರಿಯೇ ನಿನಗೆ ಶುಭವಾಗಲಿ ಮೇಲಕ್ಕೆ ಏಳು.

ಪದ

ನಾಥನೇ ವರನನ್ನೂ  ಯಾತಕೆ ನೋಡಲಿಲ್ಲಾ  ದಾರಿಗೆ ಮಗಳು
ನೂತು ಬಂದಿಹಳೊ ನಲ್ಲಾ  ತರಳೆಗೆ ಎಂಟನೆಯಾ  ವರುಷ
ವಾಗುತ ಬಂತು  ದೊರೆಗಳೊಳಗೋರ್ವ  ಸರಿಬೀಳದೋ
ಯ್ತಲ್ಲಾ ॥ನಾಥನೇ ವರನನ್ನೂ ॥

ಮೇನಕೆ: ಹೇ ಪ್ರಾಣಪತಿ ನಮ್ಮ ಮೋಹನ ಪುತ್ರಿಯಾದ ಗಿರಿಜೆಗೆ ಎಂಟು ವರ್ಷ ಪ್ರಾಪ್ತ ವಯಸ್ಸಾಗುತ್ತಾ ಬಂತು ಯಾವ ಲೋಕಾಧಿಪತಿಗಳು ಕೂಡ ಅನುಕೂಲವಾಗಲಿಲ್ಲ ವಿಧಿಲೇಖಾ ಯಾವ ರೀತಿ ಇರುವುದೋ ಕಾಣಲಿಲ್ಲ ಹೇ ರಮಣಿ ಎಂಟನೆಯ ವರ್ಷದಲ್ಲಿ ಉತ್ತಮವೆಂದೂ ಒಂಬತ್ತನೆಯ ವರ್ಷದಲ್ಲಿ ಲಗ್ನ ಮಾಡುವುದು ಮಧ್ಯಮ ಹತ್ತನೆಯ ವರ್ಷದಲ್ಲಿ ಲಗ್ನ ಮಾಡುವುದು ಕನಿಷ್ಟವೆಂದೂ ವೇದ ಪ್ರಮಾಣ ಇರುವಲ್ಲಿ ನಿಮ್ಮ ಮನಸ್ಸಿಗೆ ಸ್ವಲ್ಪವಾದರೂ ಚಿಂತೆಯನ್ನು ತಂದುಕೊಂಡಂತೆ ಕಾಣುವುದಿಲ್ಲವೈ ಕಾಂತ ಮನಸ್ಸಿನಲ್ಲಿ  ತಿಳಿದು ನೋಡು ಆದ್ಯಂತ.

ಗಿರಿರಾಜ: ಹೇ ಪ್ರಾಣಮಣಿ ನನ್ನ ಮನಸ್ಸಿನಲ್ಲಿ ಸ್ವಲ್ಪವಾದರೂ ಚಿಂತೆ ಇಲ್ಲವೆಂದು ನೀನಂದರೆ ಫಲವೇನು ನಾವಂತು ನಿರ್ಭಾಗ್ಯರು ಬಲಾಢ್ಯನಾಗಿಯೂ ಐಶ್ವರ‌್ಯವಂತನಾಗಿಯೂ ನಮ್ಮನ್ನೂ ಸಹ ಮುಕ್ತಿವಂತನನ್ನಾ ಮಾಡುವವನಾದರೆ ಮುಂದೆ ನಮಗೂ ಸೌಖ್ಯವಿರುವುದು ಆತುರಪಟ್ಟರೆ ಪ್ರಯೋಜನವೇನು ಆದರೆ ವಿಧಿಲೇಖಾನುಸಾರ ನಡೆಯುವುದಲ್ಲದೆ ನಮ್ಮಿಂದಲೇನಾಗುವುದೇ ಕಾಂತೆ ಮತಿಗುಣವಂತೆ.

ಪದ

ಮಗಳಾನನುಜಗೇ  ಸೊಗಸೀಲಿ ಕೊಡು ಎಂದು
ನಗುತ ಕೇಳಲು ಬಲು  ಹಗರಣ ಗೈದಿರಲ್ಲಾ ॥
ದಾರಿಗೆ ಮಗಳು  ನೂತು ಬಂದಿಹಳೋ ನಲ್ಲಾ ॥

ಮೇನಕೆ: ಹೇ ಕಾಂತಾ ಮುಂಚಿತವಾಗಿಯೇ ನಮ್ಮ ಮಗಳನ್ನು ನನ್ನ ತಮ್ಮನಿಗೆ ಕೊಡಿರೆಂದು ಹಸನ್ಮುಖದಿಂದಾ ಕೇಳಿದರೆ ಬಹಳವಾಗಿ ನಿಂದಿಸಿ ಹಗರಣ ಮಾಡಿದಿರಿ ಆದರೆ ನಮ್ಮ ಮಗಳಿಗೆ ತಕ್ಕ ವರನು ದೇವಾನುದೇವತರಲ್ಲಿಯೂ ಕೂಡ ಸರಿ ಬೀಳಲಿಲ್ಲಾ ಸುಮ್ಮನೇ ಎನ್ನ ಮಾತಂ ಕೇಳಿ ಎನ್ನ ತಮ್ಮನಿಗೆ ಕೊಟ್ಟು ಕಣ್ಣಿನಿಂದ ನೋಡುವದು ಉಚಿತವಾಗಿರುವದು ಆದರೆ ಮನಸ್ಸಿನ ಅಭಿಪ್ರಾಯವನ್ನು ಎನಗೆ ತಿಳಿದೇಳೈ ವಲ್ಲಭಾ.

ಗಿರಿರಾಜ: ಛೀ ಛೀ ನೀನಾಡಿದ ಮಾತನ್ನು ಇನ್ನೊಮ್ಮೆ ಉಸುರಿದರೆ ನನಗೆ ಕೋಪೋದ್ರೇಕವು ಪ್ರಜ್ವಲಿಸುವದು ರತ್ನದಂಥಾ ಮಗಳನ್ನು ಕರೇ ಕರಡುಗಲ್ಲಿಗೆ ಸರಿ ಮಾಡಿದೆಯೋ ಹೇ ಕಾಮಿನಿ ನಿನ್ನ ಬಳಗದ ಸುದ್ದಿಯನ್ನು ಎನ್ನ ಮುಂದೆ ಎತ್ತಬೇಡ ನಿನ್ನ ತಾತ ಮುತ್ತಾತಂದಿರೇನೋ. ಪ್ರಬಲರಾಗಿದ್ದರೆಂಬ ನಿನಗೇನು ಗೊತ್ತಿಲ್ಲವೇ ಹೇಗೆ ಸುಮ್ಮನೇ ನಿನ್ನ ಆಲಯಕ್ಕೆ ತೆರಳೆ ಕಾಮಿನಿ ಕಲಹಂಸಗಾಮಿನಿ.

ಪದ

ಶೀಲೆ ಗೌರಿಗೆ ಪ್ರಾಣ  ಲೋಲರೆಲ್ಲಿರುವಾರೂ  ನೀಲ
ಕಂಠನೇ ಬಲ್ಲಾ  ಹೇಳೂವದಾಯಿತಲ್ಲಾ  ದಾರಿಗೆ ಮಗ
ಳು  ನೂತು ಬಂದಿಹಳೋ ನಲ್ಲಾ ॥

ಮೇನಕೆ: ಹೇ ಕಾಂತಾ ನಾನಾಡಿದ ಮಾತುಗಳು ನಿಮ್ಮ ಮನಸ್ಸಿಗೆ ಸರಿಬೀಳಲಿಲ್ಲ ಆದಾಗ್ಯು ಚಿಂತೆ ಇಲ್ಲ ಇಂದ್ರನೀಲದಂತೆಸೆವ ಚಂದ್ರಮುಖಿಯರಿಗೆ ಚಂದ್ರನಂತೆಸೆವ ವಲ್ಲಭನೆಲ್ಲಿರುವನೋ ಏನೋ. ಶ್ರೀಮನ್ ನೀಲಕಂಠನೇ ಬಲ್ಲ ನೀವು ಎಲ್ಲಿಯಾದರೂ ಹೋಗಿ ಚಿಕ್ಕ ತರಳೆಗೆ ತಕ್ಕ ವರನಂ ಹುಡುಕಿ ತರಬೇಕೈ ಪ್ರಾಣಪತಿ ಇದಕ್ಕೇನು ಗತಿ.

ಗಿರಿರಾಜ: ಹೇ ರಮಣೀ, ಗಿರಿಜೆಗೆ ತಕ್ಕ ವರನಂ ನೋಡಿ ಬಾರೆಂದು ನಾಳೆಯದಿವಸ ನಮ್ಮ ಪ್ರಧಾನಿಯಂ ಕಳುಹಿಸಿ ತಕ್ಕ ವರನಂ ತರಿಸಿ ವಿವಾಹ ಮಾಡಿಸಿ ಉಡುಗೊರೆಯಂ ಕೊಟ್ಟು ಕೀರ್ತಿಯಂ ಸಂಪಾದಿಸಬೇಕು ಎಷ್ಟು ಮಾತ್ರಕ್ಕೂ ತಾತ್ಸಾರ ಮಾಡದೇ ಮನಸ್ಸಿನ ಯೋಚನೆಯನ್ನು ಬಿಡೇ ನಾರೀ ಮದನವೈಯಾರಿ.

 

(ನಾರದರು ಬರುವುದು)

ಪದ

ಶಂಕರ ಶುಭಕರ  ಶಶಿಧರ ವರ ಗಂಗಾಧರ  ಪರಶಿವಪರ
ಮ ದಯಾ  ಹರಗಿರಿಜಾ ಪ್ರಾಣೇಶ್ವರ ಶಂಬು ॥ಅಭವ
ಸು ವೈಭವ  ಶುಭಗತಿ ಇಂದಲೀ ॥ಶಂಕರ ಶುಭಕರ ॥
ನಿರುಪಮ ನೀ ದಯಾನಿಧೆ ದೇವಾ  ಸರಸಗುಣಾಕರ
ಗಿರಿಜ ಮನೋಹರ ॥ಶಂಕರ ಶುಭಕರ ॥

ಚಾರಕ: ರಾಜಾಧಿರಾಜಭೂಪ ಗಿರಿರಾಜ ಬಹುಪರಾಕು.

ಗಿರಿರಾಜ: ಬಾಲರಾರಿ ಏನು ಕಾರಣ ಶಬ್ದ ಮಾಡಿದೆ.

ಚಾರಕ: ದ್ವಾರದಲ್ಲಿ ನಾರದ ರುಷಿಗಳು ಬಂದಿರುವರು.

ಗಿರಿರಾಜ: ಅವರನ್ನು ಬಹಳ ಮರ‌್ಯಾದೆ ಇಂದ ಒಳಕ್ಕೆ ಬಿಡು.

ನಾರದ: ಆಹಾ ಇದೇನು ಇಷ್ಟು ವಿಪರೀತವಾಗಿ ಗಾಳಿ ಬೀಸುತ್ತಿರುವುದಲ್ಲಾ ನಾರಾಯಣ ನಾರಾಯಣ.

ಗಿರಿರಾಜನ: ನಮೋನ್ನಮೋ ಸ್ವಾಮಿ ನಾರದರೇ ತಮಗೋಸ್ಕರ ಕೇಸರಿ ಪೀಠವನ್ನಿಟ್ಟಿದ್ದೇನೆ ವಿಶ್ರಮಿಸಬೇಕು.

ನಾರದ: ಮಹಾರಾಜನೇ ನಿನ್ನ ಇಷ್ಟದಂತೆಯೇ ಆಗಲಿ ಬಹಳ ಸಂತೋಷ.

ಕಂದ

ನಾರದಮುನಿಪನ ಪಾದವಂ ಪೂಜಿಸುತ್ತ
ಮಗಳೆರಗುತ್ತಂ ॥ಬೂರಿಮಹಿಲಾಂಬಕ
ಸಾರಿಹುದೇಕೆಂದು ಕೇಳಲಾ ದಿವಿಜಮುನಿ ॥

ಗಿರಿರಾಜ: ಯತಿಗಳಿಗೆಲ್ಲಾ ಶಿಖಾಮಣಿಗಳಾದ ಬ್ರಹ್ಮಮಾನಸ ಪುತ್ರರಾದ ಮಹನೀಯರಾದ ನಾರದ ಮಹಾತ್ಮರೇ ತಾವು ದಯಮಾಡಿಸಿದ್ದಕ್ಕೆ ಬಹಳ ಸಂತೋಷವಾಯಿತು. ಅಹೋ ಗುರುಗಳೇ ಜನ್ಮ ಜನ್ಮಾಂತರದಲ್ಲಿ ನಮ್ಮ ಗುರುಹಿರಿಯರು ಮಾಡಿದ ಪುಣ್ಯ ವಿಶೇಷದಿಂದ ತಮ್ಮ ದರ್ಶನವಾಯಿತು. ತಮ್ಮ ಪಾದವನ್ನು ಮುಟ್ಟಿ ಪೂಜಿಸಿದ್ದೇ ಆದರೆ ಜನ್ಮ ಜನ್ಮಾಂತರದಲ್ಲಿ ಮಾಡಿದ ಪಾಪವೆಲ್ಲಾ ಪರಿಹಾರವಾಗುವದು ತಮ್ಮಲ್ಲಿ ಒಂದು ನುಡಿಯನ್ನಾಡಿ ಪ್ರತಿ ಉತ್ತರವನ್ನು ತೆಗೆದುಕೊಂಡದ್ದೇ ಆದರೆ ಅನೇಕ ಪುಣ್ಯಕ್ಷೇತ್ರಗಳಲ್ಲಿ ಸಂಚಾರ ಮಾಡಿ ಸ್ನಾನ ಮಾಡಿದರೆ ಎಷ್ಟು ಪುಣ್ಯವೋ ಆ ಪುಣ್ಯವು ಪ್ರಾಪ್ತವಾಗುತ್ತದೆ ತಮಗೆ ವಂದನೆ ಮಾಡಿದರೆ ಜನ್ಮರಹಿತವಾದ ಶಾಶ್ವತವಾದ ಮೋಕ್ಷ ಸಂಪದವಾಗುವುದರಲ್ಲಿ ಏನೇನೂ ಸಂದೇಹವಿಲ್ಲಾ ನಾನು ಕೃತಾರ್ಥನಾದೆನು ಆದರೆ ನಾನು ಮಾಡುವ ಪಾದಪೂಜೆಯನ್ನು ಕೈಗೊಂಡು ಯನ್ನನ್ನು ಉದ್ಧಾರ ಮಾಡಿ ತಾವು ದಯಮಾಡಿಸಿರುವ ಕಾರ‌್ಯಾರ್ಥವನ್ನು ತಿಳುಹಿಸಿದರೆ ಶಿರಸಾವಹಿಸಿ ನಡೆದುಕೊಳ್ಳುತ್ತೇನೆ ಯತಿವರ‌್ಯ ಸದ್ಗುಣ ಗಾಂಭೀರ‌್ಯ.

ನಾರದ: ಅಯ್ಯ ಗಿರಿರಾಜನೇ, ನೀನು ಮಾಡಿದ ಪೂಜೆಗೂ ಭಕ್ತಿ ವಿಶ್ವಾಸಕ್ಕೂ ನನಗೆ ಬಹಳ ಸಂತೋಷವಾಯಿತು. ಲೋಕದಲ್ಲಿ ನಿನ್ನ ಸಮಾನರಾದ ಭಕ್ತರು ದೊರಕುವುದೇ ದುರ್ಲಭ ಅಯ್ಯ ರಾಜ ನಿನ್ನ ಪತ್ನೀ ಪುತ್ರ ಬಾಂಧವರಾದಿಯಾಗಿ ಸರ್ವರೂ ಕ್ಷೇಮದಿಂದಿರುವರೇನಯ್ಯ ಪೊಡವಿಪಾಲನೇ.

ಗಿರಿರಾಜ: ಸ್ವಾಮಿ ತಮ್ಮ ಆಶೀರ್ವಾದ ಕಟಾಕ್ಷದಿಂದ ನನ್ನ ಪತ್ನೀ ಪುತ್ರ ಬಂಧು ಬಾಂಧವರೆಲ್ಲರೂ ಕ್ಷೇಮದಿಂದಿರುತ್ತಾರೈ ದೇವ ಮಹಾನುಭಾವ.

ನಾರದ: ಆಹಾ ಗಿರಿರಾಜ, ನಿನ್ನಲ್ಲಿ ಕ್ಷೇಮ ಲಾಭವನ್ನು ವಿಚಾರಿಸುತ್ತಾ ಎಡಬಲ ದ್ರಿಷ್ಟಿ ಇಲ್ಲದೆ ಇದ್ದ ಹಾಗೆಯೇ ದ್ರಿಷ್ಟಿಸಿ ನೋಡುವಲ್ಲಿ ಅಯ್ಯ ಗಿರಿರಾಜನೇ ನಿನ್ನ ತೊಡೆಯ ಮೇಲೆ ಕುಳಿತಿರುವ ಆ ಶಕ್ತಿಯನ್ನೆ ಮರೆತು ಬಿಟ್ಟೆನಲ್ಲಾ.

ಭಾಗವತರ ಭಾಮಿನಿ

ಪರಮ ಶಕ್ತಿಯ ಕಂಡು ಮುನಿಪತಿ  ನಿರತಿಶಯಭಕ್ತಿ
ಯನು ಕಳೆಯುತ  ಚರಣಕಭಿನಮಿಸಿ  ಹರನಪಟ್ಟದ
ರಾಣಿ ಜಯಜಯ  ನಿರುಪಮಿತ ಕಲ್ಯಾಣಿ ಜಯ ಜಯ
ವರವರಾಭವಪಾಣಿ ಜಯ ಜಯ  ನಮೋನ್ನಮೋ ಪಾಹಿ ॥

ಪದತಾಳ

ಪಾಲಿಸೆಮ್ಮ ಜನನಿ ಪಾರ್ವತಿ  ಸೌಭಾಗ್ಯನುಮತಿ ॥ನಿನ್ನಮೊ
ಹದ ಬಾಲನೆಂದು  ತಿಳಿದು ಎನ್ನ ಮೇಲೆ ಸೊದೆಯ  ಸುಧೆಯನೆ
ರೆದು ॥ಶಂಕುಚಕ್ರ  ಡಮರುಗಸ್ತ್ರ  ಶೂಲಾಂಕುಶದಭಯಸು
ಪಾಣಿ  ಶಂಖಜಾಪ್ತ ಕೋಟಿಬಿಂಬೆ  ನಿಂಕರ ಬಿಡಲಾಗದಮ್ಮ ॥
ಅಮರವಿನುತ ನೀಲಕಂಠ  ಸುಮನರ್ಧಾಂಗಿ ತ್ರಿಜಗವಿಮ
ಲೆ  ಶುಭಗುಣಯುತಂಗೆ ಹರಗೆ  ಪಾಲಿಸೆಮ್ಮ ಜನನಿ ॥

ನಾರದ: ಪರಮೇಶ್ವರನ ಅರ್ಧಾಂಗಿಯಾಗಿ ಸುಗುಣವನ್ನು ಆಭರಣ ಮಾಡಿಕೊಂಡು ದೇವತೆಗಳಾದಿಯಾಗಿ ಸಮಸ್ತ ಪ್ರಾಣಿಗಳನ್ನು ಕಾಪಾಡುವುದಕ್ಕಾಗಿ ಅಭಯಹಸ್ತವನ್ನು ಧರಿಸಿರುವ ಕಾತ್ಯಾಯಿನಿ ಕಾಮೇಶ್ವರಿ ನಿತ್ಯ ಆನಂದವಾದಂಥ ತಾಯಿಯೇ ತಮ್ಮ ದರ್ಶನವಾದ್ದರಿಂದ ನಾನು ಧನ್ಯನಾದೆ ನನ್ನನ್ನು ಉದ್ಧಾರ ಮಾಡಬೇಕೆಂದು ನಿಮ್ಮ ಚರಣಾರವಿಂದಗಳಿಗೆ ವಂದಿಸುವೆನು ಹೇ ಜನನಿ ಚೆನ್ನಾಗಿ ಕೇಳು ನಿನ್ನ ಪತಿಯಾದ ಪರಶಿವನು ನಿನ್ನ ಮಹಿಮೆಯನ್ನರಿಯದೆ ಹೇಮಕೂಟದಲ್ಲಿ ತಪಸ್ಸಿಗೆ ಕುಳಿತಿರುವರು ನಿನಗೆ ಎಂಟು ವರ್ಷ ವಯಸ್ಸಾಗಿರುವುದು ನಿನಗೆ ಗೊತ್ತೇ ಇದೆ ಆದಕಾರಣ ನೀವು ಆತನಂ ಕೂಡಿ ಆತನ ಮನಸ್ಸನ್ನು ಸಂತೋಷಪಡಿಸಬೇಕೆಂದು ಬೇಡುವೆನು ಬ್ರಹ್ಮ ವಿಷ್ಣು ರುದ್ರೇಂದ್ರಾದಿಗಳು ಯಕ್ಷಸಿದ್ಧ ಸಾದ್ಯ ಕಿನ್ನರ ಕಿಂಪುರುಷರು ಎಲ್ಲರೂ ನಿನ್ನಿಂದಲೇ ಉದ್ಭವಿಸಿರುವರು  ಅವರ ತಾರತಮ್ಯಾನುಸಾರವಾಗಿ ಸಾಲೋಕ್ಯ ಸಾಯುಜ್ಯ ಸಾರೂಪ್ಯ ಪದವಿಗಳನ್ನು ಕೊಟ್ಟಿರುವಂತಹ ಮಹಾಶಕ್ತಿ ಶಾಂಭವಿ ಗೌರಿ ನಿಮ್ಮ ಪಾದಕ್ಕೆ ನಮೋನ್ನಮೋ ತಾಯೆ ॥

ಪದ ರಾಗ ಕೇದಾರಗೌಳ

ಏನಿದಚ್ಚರಿ ನಿಮ್ಮ ನಡತೆಯು  ಜಗದೊಳು ತಾಪಸ ಪೇಳೆ
ನಗೆ  ಮುನಿವರ ಪೇಳೈ  ತಾಪಸ ಪೇಳೆನಗೆ  ಸಾನುರಾಗ
ದಿ ನಮ್ಮಲ್ಲಿ  ಪೂಜ್ಯರೇ ಏನ ಮಾಡಿದಿರೈ ಮುನಿಪಾ ॥

ಗಿರಿರಾಜ: ಎಲೈ ಬ್ರಹ್ಮ ಮಾನಸ ಪುತ್ರರಾದ ನಾರದ ಮುನಿವರ‌್ಯರೇ ತಾವು ದಯ ಮಾಡಿಸಿದ್ದಕ್ಕೆ ನನ್ನ ಶಕ್ತ್ಯಾನುಸಾರವಾದ ಪಾದಪೂಜೆಯನ್ನು ಮಾಡಿದೆ ಅದನ್ನು ಕೈಗೊಂಡು ತಾವುಗಳು ವಿಚಾರವನ್ನು ಶಿಷ್ಯನಾದ ನನ್ನಲ್ಲಿ ಹೇಳದೆ ತಾವು ನಡೆಸಿರುವ ವಿಚಾರವನ್ನು ನೋಡಿದರೆ ನನಗೆ ಪರಮಾಶ್ಚರ‌್ಯವಾಗಿ ತೋರುವುದು. ಈ ಕಾರ‌್ಯವನ್ನು ಮಾಡಬೇಕೆಂದು ಎಷ್ಟು ದಿವಸದಿಂದ ಆಲೋಚಿಸಿರಬಹುದೈ ದೇವಾ ಮಹಾನುಭಾವ.

ಪದರಾಗಕೇದಾರಗೌಳ

ಧರೆಯೊಳು ವಂದೈ  ವಂದಕರೆಂಬ  ಬೇಧವನರಿತ  ಸುಗ್ನಾ
ನಿಯಾಗಿ  ತರಳೆಯ ಚರಣಕ್ಕೆ  ನಮಿಸುತ ಭಕ್ತಿಯೋಳ್
ಇರುತಿಹ ಪರಿಯದೇನೈ ಮುನಿಪಾ ॥

ಗಿರಿರಾಜ: ಆಹೋ ಪೂಜ್ಯರಾದ ನಾರದರೇ ತಾವು ತಪಸ್ವಿಗಳಾಗಿ ಜ್ಞಾನದ್ರಿಷ್ಟಿ ಇಂದ ನೋಡಿ ಭಕ್ತರನ್ನು ಕಾಪಾಡುವಂಥಾ ಮುನಿಶ್ರೇಷ್ಟರೇ ಈ ಜಗತ್ತಿನಲ್ಲಿ ಇಂಥವರಿಗೆ ವಂದನೆ ಮಾಡಬಹುದು ಮಾಡಬಾರದೆಂಬುದನ್ನು ಅರಿತಂಥಾ ಜ್ಞಾನಿಗಳಾದ ತಾವುಗಳು ನನ್ನ ಗೃಹಕ್ಕೆ ದಯಮಾಡಿಸಿ ನನ್ನಿಂದ ಪೂಜಾವಂದನೆಯನ್ನು ಕೈಗೊಂಡು ತಕ್ಷಣವೇ ನನ್ನೆದುರಿನಲ್ಲಿ ನನ್ನ ಮಗಳಾದ ಗಿರಿಜೆಯನ್ನು ಕಂಡ ಮಾತ್ರಕ್ಕೆ ನೀವು ಕರಗಳಂ ಜೋಡಿಸಿ ಭಕ್ತಿ ಇಂದ ನಮಸ್ಕರಿಸಿ ನಿಂತಿರುವ ಈ ನಡತೆಯು ಆಶ್ಚರ‌್ಯವಲ್ಲವೇ ತಾವೇ ಅಪ್ಪಣೆ ಮಾಡಬೇಕೈ ಮುನಿವರ‌್ಯ ಸದ್ಗುಣ ಗಾಂಭೀರ‌್ಯ.

ಪದ

ಹರನರಸಿ ಎಂದು  ಪರಾಶಕ್ತಿ ಇವಳೆಂದು  ಪರಮ ಕಲ್ಯಾ
ಣಿ ಎಂದು  ಪರಿಪರಿವಿಧದಿಂದ  ಪೊಗಳುವ ರೀತಿಯ
ಅರುಹಬೇಕೈ ದೇವಾ ॥

ಗಿರಿರಾಜ: ಪೂಜ್ಯರಾದ ದೇವಮುನಿಗಳೇ ಲಾಲಿಸಿ ತಾವು ಆ ಗಿರಿಜೆಗೆ ವಂದನೆ ಮಾಡಿದ್ದೂ ಅಲ್ಲದೆ ಉಮಾ ಕಾತ್ಯಾಯಿನಿ ಕಾಮೇಶ್ವರಿ ಕಂಕಾಳಿ ನಿರ್ವಿಕಾರಿ ಪರಮೇಶ್ವರನ ಅರ್ಧಾಂಗಿ ಮಹಾಶಕ್ತಿ ಇಚ್ಚಾ ಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಅನ್ನುವದಾಗಿ ನಾನಾ ವಿಧವಾಗಿ ಸ್ತುತಿ ಮಾಡುವುದಕ್ಕೆ ಕಾರಣವೇನು ಈಕೆಯು ಯಾರು ನನ್ನ ಉದರದಲ್ಲಿ ಹುಟ್ಟಿದ ಸಂಗತಿ ಏನು ನನಗೆ ಬೇರೆ ತಿಳಿಯದು ತಾವು ದಯವಿಟ್ಟು ಈಕೆಯ ವಿಚಾರವೆಲ್ಲವನ್ನು ಅಜ್ಞಾನಿಯಾದ ನನಗೆ ಅಪ್ಪಣೆಕೊಡಬೇಕೈ ಯತಿಯೇ ಸರ‌್ವಜ್ಞ ಮತಿಯೇ.

ಪದರಾಗದೇಶಿಏಕತಾಳ

ಕೇಳ್ ನಗ ಕುಲರಾಜ  ಹಿಮವಂತ  ಸಂತೋಷದಿಂದಲಿ
ಪೇಳುವೆ  ಯನ್ನಯ ಮಾತ  ಕಾಳಿ ಘನನ  ಚತುರಾಳಿ
ಶೃತಕತಿ ಮೌಳಿ  ವಿಶ್ವತ ಕೇಳಿ  ನತ ದಿವಿಜಾಳಿ  ನುತಮುನಿ
ವಂಶ  ಶಿವನನು ಕೇಳಿ  ಪ್ರೇಮವ ತಾಳಿ  ಕೇಳ್ ನಗಕುಲ ॥

ನಾರದ: ಎಲೈ ಗಿರಿರಾಜನೇ ಕೇಳು ನೀನು ಈ ಪರ್ವತಕುಲಕ್ಕೆಲ್ಲಾ ಶ್ರೇಷ್ಟನು ಬಂದಂಥ ಅತಿಥಿಗಳನ್ನು ವಿಶ್ವಾಸಪೂರ್ವಕವಾಗಿ ಮನ್ನಿಸಿ ಅವರಿಂದ ಆಶೀರ್ವಾದಗಳನ್ನು ಕೈಗೊಂಡು ಸದಾ ಸಂತೋಷದಿಂದಿರುವ ಪುಣ್ಯಾತ್ಮನು ಈ ತಾಯಿ ಧಾರೆಂದು ಕೇಳಿದೆಯಲ್ಲವೇ ಆದರೆ ಬ್ರಹ್ಮಹರಿ ದೇವತೆಗಳಿಂದಲೂ ಸಕಲಮನುಮುನಿಗಳಿಂದಲೂ ವಂದನಾಸ್ತುತಿಗಳಂ ಕೈಗೊಂಡು ಅವರ ಇಷ್ಟಾರ್ಥವಂ ಪೂರ್ತಿ ನಡೆಸುವಂಥ ತಾಯಿ ಯಾವಾಗಲೂ ಪರಮೇಶ್ವರನಿಗೆ ಸುಖಾನಂದವನ್ನು ಕೊಟ್ಟು ಉದ್ಧಾರ ಮಾಡುವಂಥ ಮಹಾದೇವಿ. ಈಕೆಯಂ ಕುರಿತು ಕಲ್ಪಾಂತರ ತಪಸ್ಸು ಮಾಡುವ ಮನುಮುನಿಗಳಿಗೂ ಭಕ್ತರಿಗೂ ನಿಲುಕದೇ ಇರುವ ಮಹಾಶಂಕರಿ ಶೃತಿಗಳೆಲ್ಲಾ ಕೊಂಡಾಡುತಿದ್ದರೂ ದರ್ಶನವನ್ನು ಕೊಡದೆ ಅಗೋಚರಳಾದ ಮಹಾಶಕ್ತಿ ಈಕೆಯ ವಿಷಯವನ್ನು ಇನ್ನೂ ಹೇಳುತ್ತೇನೆ ಕೇಳೈ ಗಿರಿರಾಜನೇ.