ಅಜ್ಜಿಯ ಕತೆಯೆಂದರೆ ಮಕ್ಕಳೆಲ್ಲರಿಗೂ ಇಷ್ಟ: ಅಜ್ಜಿಗೂ ಸಹ ಮಕ್ಕಳಿಗೆ ಕತೆ ಹೇಳಬೇಕೆಂದರೆ ಆನಂದ.

ಹಿಂದಿರುಗೀ ಬರಲೇ ಇಲ್ಲವೇ ?

ಅಂದೂ ಅದೇ ರೀತಿ ಮಕ್ಕಳು ಅಜ್ಜಿಯನ್ನು ಪೀಡಿಸಲಾರಂಭಿಸಿದರು ’ಕತೆ  ಹೇಳಜ್ಜಿ’ ಎಂದು. ಅಜ್ಜಿ ಕತೆ ಹೇಳಲು ತೆಗೆದುಕೊಂಡ ಭಾಗ ಕೃಷ್ಣನು ಬೃಂದಾವನದಿಂದ ನಿರ್ಗಮಿಸುವುದು.’

ತನ್ನನ್ನು ಕೊಲ್ಲುವ ಕೃಷ್ಣ ಗೋಕುಲದಲ್ಲಿ ಬೆಳೆಯುತ್ತಿದ್ದಾನೆ: ಧನುರ್ಯಜ್ಞ ಮಾಡುವ ನೆಪದಲ್ಲಿ ಕೃಷ್ಣ – ಬಲರಾಮರನ್ನು ಕರೆಸಿ, ಉಪಾಯದಲ್ಲಿ ಅವರನ್ನು ಕೊಲ್ಲಿಸಬೇಕು ಎಂದು ಕಂಸ ಮನಸ್ಸಿನಲ್ಲಿ ಲೆಕ್ಕ ಹಾಕಿದ: ಅದರಂತೆಯೇ ಋಷಿಯಂತಿದ್ದ ಅಕ್ರೂರನನ್ನು ಗೋಕುಲಕ್ಕೆ ಕಳುಹಿಸಿದ. ಕೃಷ್ಣ ಬಲರಾಮರಿಗಿಂತೂ ಬಹಳ ಸಂತೋಷ.ಅಲ್ಲಿಯವರೆಗೂ ಅವರು ಗೋಕುಲವನ್ನು ಬಿಟ್ಟು ಹೊರಗೆ ಹೋದವರಲ್ಲ. ಆದರೆ, ಅವರು ಗೋಕುಲವನ್ನು ಬಿಟ್ಟರೆ ಮತ್ತೆ ಹಿಂದಿರುಗುವರೋ ಇಲ್ಲ ಎಂಬ ಸಂಶಯ ಬೃಂದಾವನದ ಜನರನ್ನು ಆವರಿಸಿದೆ. ಕೃಷ್ಣನೊಂದಿಗೆ ಆಟವಾಡುತ್ತಿದ್ದ ಗೋಪ ಗೋಪಿಯರಿಗಂತೂ ಅವನನ್ನು ಬಿಟ್ಟಿರುವುದು ಬಹಳ ಕಷ್ಟ. ಎಲ್ಲರ ಕಣ್ಮಣಿ ಕೃಷ್ಣ. ಆದರೂ ಕೃಷ್ಣ ಹೋಗಲೇಬೇಕು. ಹೋಗುವ ದಿನವೂ ಬಂದಿತು. ಬೃಂದಾವನದ ಎಲ್ಲರ ಮನಸ್ಸಿನಲ್ಲೂ ತಳಮಳ. ಅವನ ಗೆಳೆಯ – ಗೆಳತಿಯರು ಹಸು – ಕರುಗಳನ್ನು ಮರೆತರು, ಕೊಳಲನ್ನು ಮರೆತರು, ಹಾಡನ್ನೂ ಮರೆತರು, ಕುದುರೆಗಳ ಲಗಾಮನ್ನು ಹಿಡಿದರು, ಬೀದಿಯ ಧೂಳಿನಲ್ಲಿ ಗೋಳಾಡುತ್ತಾ ಹೊರಳಾಡಿದರು. ರಥದ ಚಕ್ರವನ್ನು ತಡೆ ಹಿಡಿದರು. ಆದರೂ ಕೃಷ್ಣ ದೃಢವಾಗಿದ್ದಾನೆ. ಅವನು ಅಚಲ. ಕೃಷ್ಣ ಬಲರಾಮರನ್ನು ಹೊತ್ತ ರಥ ಹೊರಟೇ ಹೋಯಿತು!”

“ಕೃಷ್ಣ ಯಾರ ಅಳುವಿಗೂ ಮನಸ್ಸು ಕೊಡಲಿಲ್ಲವೇ, ಯಾರ ಬೇಡಿಕೆಗೂ ಲಕ್ಷ್ಯ ಮಾಡಲಿಲ್ಲವೇ?” ಹುಡುಗನೊಬ್ಬ ಕೇಳಿದ.

“ಊಹೂಂ, ಕೇಳಲಿಲ್ಲ!” ಅಜ್ಜಿ ನಿಟ್ಟುಸಿರು ಬಿಡುತ್ತಾ ಹೇಳಿದಳು.

“ಅಷ್ಟೊಂದು ಪ್ರೀತಿಸುತ್ತಿದ್ದರನ್ನೂ ಮರೆತು, ಕೃಷ್ಣ ಏನೂ ಆಗದವನಂತೆ ಹೊರಟುಬಿಟ್ಟನೇ?” ಮತ್ತೆ ಹುಡುಗನ ಪ್ರಶ್ನೆ.

“ಹೂಂ ಹೊರಟೇ ಹೋದ!”

“ಹಾಗಾದರೆ ಹಿಂತಿರುಗಿದ್ದು ಯಾವಾಗ?”

“ಅವನು ಹಿಂದಿರುಗಲೇ ಇಲ್ಲ. ಕಂಸನನ್ನು ಕೊಂದು ಮಧುರೆಯಲ್ಲೇ ಉಳಿದ.”

“ಏನು, ಹಿಂದಿರುಗಲೇ ಇಲ್ಲವೇ?” ಹೃದಯ ಕರಗುವಂತೆ ಅಳುತ್ತಾ ಹಾಗೆಯೇ ಕುಸಿದ ಬಾಲಕ.

“ಇದೇನಿದು, ಅವನು ಹಿಂದಿರುಗದಿದ್ದಕ್ಕೆ ನೀನೇಕೆ ಅಳುತ್ತಿದ್ದೀಯೇ?” ಅಜ್ಜಿ ಪ್ರಶ್ನಿಸಿದಳು.

“ಇನ್ನೇನು? ಹುಟ್ಟಿದಾಗಿನಿಂದಲೂ ತನ್ನನ್ನು ಪ್ರೀತಿಸುತ್ತಿದ್ದವರನ್ನೆಲ್ಲಾ ಮರೆತು, ಹಿಂದಿರುಗಿ ಬಾರದವನ ಕತೆಯನ್ನು ಕೇಳಲು ನನಗಿಷ್ಟವಿಲ್ಲ” ಎಂದವನೇ ಅಲ್ಲಿಂದ ಎದ್ದು ಹೊರಟುಹೋದ ಹುಡುಗ. ಮೂರು ದಿನಗಳ ಕಾಲ ಅವನಿಗೆ ಊಟ, ನಿದ್ರೆ, ಸ್ನಾನ ಯಾವುದರ ಪರಿವೆಯೂ ಇಲ್ಲ. ಬಾಯಲ್ಲಿ ಒಂದೇ ಮಾತು, ಅಯ್ಯೋ, ಹಿಂದಿರುಗಿ ಬರಲಿಲ್ಲವೇ?’ ಮತ್ತೆ ಬರಲಿಲ್ಲವೇ?’

ಈ ಹುಡುಗನೇ ಗಿರೀಶ್ ಚಂದ್ರಘೋಷ್ ಚಿಕ್ಕಂದಿನಿಂದಲೂ ಭಾವುಕತನ ಅವನೊಂದಿಗೇ ಬಂದಿದ್ದು.

ತಾಯಿಗೇ ದ್ವೇಷವೇ?

೧೮೪೪ರ ಫೆಬ್ರುವರಿ ೨೮ ರಂದು ಸೋಮವಾರ, ನೀಲಕಮಲ್ ಘೋಷ್ ಮತ್ತು ರಾಯ್ ಮಣಿ ಇವರ ಎಂಟನೆಯ ಮಗನಾಗಿ ಗಿರೀಶ್ ಕಲ್ಕತ್ತೆಯಲ್ಲಿ ಜನಿಸಿದ. ಹುಟ್ಟಿದಂದಿನಿಂದಲೂ ತಾಯಿಯ ಪ್ರೀತಿ ಅವನಿಗಿಲ್ಲವಾಯಿತು. ತಾಯಿಯಾದವಳು ಮಗುವನ್ನು ಪ್ರೀತಿಸಬೇಡವೇ? ಆದರೆ ಗಿರೀಶ್ ಹತ್ತಿರ ಬಂದರೆ ಸಾಕು, ತಾಯಿ ಮುಖ ತಿರುಗಿಸುವಳು, ದೂರ ತಳ್ಳುವಳು, ಬೈದು ಅವನನ್ನು ಓಡಿಸಿಬಿಡುವಳು. ಇದರಿಂದಾಗಿ ಚಿಕ್ಕಂದಿನಿಂದಲೇ ತಾಯಿಯಿಂದ ದೂರವಾದ ಮಗು ತಂದೆಯ ಪ್ರೀತಿಯ ಆಶ್ರಯದಲ್ಲಿ ಬೆಳೆಯಿತು.

ಒಂದು ದಿನ ಗಿರೀಶನಿಗೆ ಮೈಯಲ್ಲಿ ಹುಷಾರಿಲ್ಲ, ಕತ್ತು ಊದಿಕೊಂಡು, ಕಾದ ಜ್ವರದಿಂದ ಸುಟ್ಟಂತಾದ ಈಗೇನು ಮಾಡುವುದೆಂಬುದೇ ತಂದೆ – ತಾಯಿಯ ಯೋಚನೆಯಾಯಿತು. “ಏನಾದರೂ ಮಾಡಿ ಮಗುವನ್ನು ಬದುಕಿಸಿ, ಮಗು ಬದುಕಿದರೆ ಸಾಕು. ನನ್ನ ಆಯಸ್ಸು ಬೇಕಾದರೂ ಕೊಟ್ಟೇನು” – ಗಂಡನ ಮುಂದೆ ಹೆಂಡತಿ ಪ್ರಾರ್ಥಿಸಿಕೊಂಡಳು. ನೀಲಕಮಲ್ ಗೆ ಆಶ್ಚರ್ಯ! “ಇದೇನಿದು! ಹು‌ಟ್ಟಿದಂದಿನಿಂದಲೂ ಇಲ್ಲದ ದಯೆ ನಿನಗೆ ಈಗ ಬಂದಿದೆಯಲ್ಲಾ? ಒಂದು ದಿನವೂ ನೀನು ಆ ಮಗುವನ್ನೇ ಮುಟ್ಟಿದವಳಲ್ಲ. ತಿರಸ್ಕಾರದಿಂದ ನೋಡುತ್ತಿದ್ದೆ.” ಎಂದು ಕೇಳಿದ.

ಗಂಡನ ಮಾತನ್ನು ಕೇಳುತ್ತಿದ್ದಂತೆ ಅವಳ ಕಣ್ಣಿನಲ್ಲಿ ನೀರು ಸುರಿಯಲಾರಂಭಿಸಿತು. ತಾನು ಮಗುವನ್ನು ಪ್ರೀತಿಸುವುದಿಲ್ಲವೇ ಮಗುವಿಗಾಗಿ ತನ್ನ ಪ್ರಾಣವನ್ನು ಬೇಕಾದರೂ ಕೊಟ್ಟಾಳು! ಹಾಗಾದರೆ ಮಗುವನ್ನು ತನ್ನಿಂದ ದೂರವಿಟ್ಟದ್ದಾದರೂ ಏಕೆ?

ಮೊದಲ ಮಗ, ಇಪ್ಪತ್ತೆರಡು ವರ್ಷ ವಯಸ್ಸಿನ ಆರೋಗ್ಯವಂತ, ಗಟ್ಟಿಮುಟ್ಟಾದ ಆಳು, ಇದ್ದಕ್ಕಿದ್ದ ಹಾಗೆ ಸತ್ತು ಹಾಗೆ ಸತ್ತುಹೋದ. ಆ ಘಟನೆ ತಾಯಿಯ ನೆನಪಿನಲ್ಲಿ ಅಚ್ಚಳಿಯದೆ ನಿಂತಿತು. ’ತನ್ನ ದೃಷ್ಟಿಯಲ್ಲಿ, ಸ್ವರ್ಶದಲ್ಲಿ ಏನೋ ದೋಷವಿದೆ. ತನ್ನ ನೆರಳೂ ಸಹ ತನ್ನ ಮಕ್ಕಳಿಗೆ ಕೆಟ್ಟದ್ದು’ ಎಂಬ ಸಂಶಯ ತಾಯಿಯ ಮನಸ್ಸಿನಲ್ಲಿ ಬೆಳೆಯಿತು. ಹಾಗಾದರೆ ಮಾಡುವುದೇನು? ಮಕ್ಕಳನ್ನು ದೂರವಿಡುವುದೊಂದೇ ಉಪಾಯ. ತಾನು ಅವನನ್ನು ದೂರ ಇಟ್ಟರೆ ಅವನು ಬದುಕುತ್ತಾನೆ. ಆದುದರಿಂದಲೇ ಗಿರೀಶನನ್ನು ದೂರವಿಟ್ಟದ್ದು. ಅವನು ಅತ್ತಾಗ, ಗೋಳಿಟ್ಟಾಗ, ತನ್ನ ಹತ್ತಿರ ಬರಬೇಕೆಂದು ಹಟ ಮಾಡುತ್ತಿದ್ದಾಗಲೆಲ್ಲಾ ತನ್ನ ಮನಸ್ಸು ಚಡಪಡಿಸುತ್ತಿದ್ದರೂ ಮಡಿಲಿನೊಳಕ್ಕೆ ಕರೆಯುತ್ತಿರಲಿಲ್ಲ ಮಗುವನ್ನು. ಆದರೆ ಈಗ ಮಗು ಜ್ವರದಿಂದ ಚಡಪಡಿಸುತ್ತಿದೆ. ತಾನು ಮುಟ್ಟಲೇಬಾರದೆಂಬ ದೃಢನಿರ್ಧಾರ ತಾಯಿಯದು. “ಮಗುವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ, ನಾನು ಹತ್ತಿರವಿದ್ದರೆ, ಮಗುವನ್ನು ಮುಟ್ಟಿದರೆ ಮಗುವಿಗೆ ಕೆಟ್ಟದಾಗಬಹುದು. ನಾನು ದೂರ ಹೋಗುತ್ತೇನೆ” ಎಂದು ಗಂಡನಿಗೆ ಹೇಳಿ ರಾಯ್ ಮಣಿ ದೂರ ಸರಿದಳು. ದೇವರ ದಯೆಯಿಂದ ಮಗು ಗುಣಮುಖವಾಯಿತು. ತಾಯಿಯ ಪ್ರೀತಿ ಪ್ರಕಟವಾಯಿತು.

ಬುದ್ಧಿವಂತ ಅಷ್ಟೇ ತುಂಟ

ಆದರೇನು? ಗಿರೀಶ್ ಹತ್ತು ವರ್ಷದವನಿದ್ದಾಗ ತಾಯಿಯನ್ನು ಕಳೆದುಕೊಂಡ. ತಂದೆಯೇ ಈಗ ಅವನ ಪಾಲಿಗೆ ತಂದೆ – ತಾಯಿ ಎರಡೂ ಆದರು. ತಂದೆ ವಾತ್ಸಲ್ಯಮೂರ್ತಿ. ದಯೆಯಿಂದ ಕೂಡಿದ ಹೃದಯ ಅವರದು, ಈಗ ತಾಯಿ ಇಲ್ಲದ ತಬ್ಬಲಿಯಾಗಿರುವ ಮಗ ಏನು ಮಾಡಿದರೂ ತಂದೆ ತಡೆಯುತ್ತಿರಲಿಲ್ಲ. ಮಗ ಕೇಳಿದ್ದೆಲ್ಲವೂ ಕೂಡಲೇ ಅವನಿಗೆ ಸಿಕ್ಕುತ್ತದೆ. ಅದಕ್ಕೆಷ್ಟೇ ಬೆಲೆಯಿದ್ದರೂ ತಂದುಕೊಡುತ್ತಾರೆ. ಹೀಗಾಗಿ ತಂದೆಯ ಪ್ರೀತಿ ಮಗನ ಉತ್ತಮ ಬೆಳವಣಿಗೆಗೆ ಶತ್ರುವಾಯಿತು.

ಒಮ್ಮೆ ಅವರ ಮನೆಯ ಸೌತೆ ಬಳ್ಳಿಯಲ್ಲಿ ಮೊದಲನೆಯ ಸೌತೆಕಾಯಿ ಬಿಟ್ಟಿತು. ಅದನ್ನು ತಿನ್ನಬೇಕು ಎಂಬ ಆಸೆ ಗಿರೀಶನಿಗೆ. ಆದರೆ ಸೋದರತ್ತೆ ಕೊಡಲೊಲ್ಲಳು. ಮೊದಲನೆಯ ಕಾಯಿ ದೇವರಿಗೆ ಸಮರ್ಪಣೆಯಾಗಬೇಕು ಎಂದು ಅವಳ ಹಠ.

ಗಿರೀಶ್ ಅದೇ ಬೇಕು ಎಂದು ಹಠ ಹಿಡಿದ. ಕಡೆಗೆ ತಂದೆ ತನ್ನ ಅಕ್ಕನಿಗೇ ಹೇಳಿ ಅವಳ ಮನಸ್ಸನ್ನು ಬದಲಾಯಿಸಬೇಕಾಯಿತು. ಗಿರೀಶನಿಗೆ ಆ ಸೌತೆಕಾಯಿ ದಕ್ಕಿತು.

ಬಾಲ್ಯದಿಂದಲೂ ಗಿರೀಶನಿಗೆ ಇಂತಹ ಹಠ ಬೆಳೆದು ಬಂದದ್ದೇ. ಮಗ ವಿದ್ಯೆಯನ್ನು ಕಲಿಯಲೆಂದು ಪಾಠ ಶಾಲೆಗೆ ಸೇರಿಸಿದರೆ ಪ್ರತಿ ದಿನವೂ ಮಗನ ಮೇಲೆ ಒಂದಲ್ಲ ಒಂದು ದೂರು. ಮತ್ತೇನು ಮಾಡುವುದು? ಶಾಲೆಯಿಂದ ಶಾಲೆಗೆ ಮಗನನ್ನು ವರ್ಗಾಯಿಸಲಾರಂಭಿಸಿದ ತಂದೆ. ಎಲ್ಲಿ ಹೋದರೂ ಗಿರೀಶನದು ಕೀಟಲೆ, ದುಷ್ಟತನ. ತಂದೆಯ ಅತಿ ಪ್ರೀತಿಯಿಂದಾಗಿ ಮಗ ಕೆಡಲಾರಂಭಿಸಿದ.

ಎಂತಹ ದುಷ್ಟತನವಿದ್ದರೂ ಹುಡುಗ ಬುದ್ಧಿವಂತ: ಹೇಳುವುದನ್ನು ಒಮ್ಮೆ ಕೇಳಿದರೆ ಸಾಕು, ಅವನಿಗೆ ನೆನಪಿರುತ್ತಿತ್ತು. ಯಾವುದನ್ನೇ ಆಗಲಿ ಏಕಾಗ್ರತೆಯಿಂದ ಕೇಳುತ್ತಿದ್ದ. ಆ ಮುಗ್ಧತೆಯನ್ನು ಮುಖದಲ್ಲಿ ನೋಡಿದರೆ, ಈ ಹುಡುಗ ನಿಜವಾಗಿಯೂ ದುಷ್ಟನೇ ? ಎಂದು ನೋಡಿದವರಿಗೆ ಅನುಮಾನ ಬರುತ್ತಿತ್ತು. ಪುರಾಣ ಗಳಿಂದ ಆಯ್ದುಕೊಂಡ ಪ್ರಹ್ಲಾದ ಚರಿತ್ರೆ, ಧ್ರುವ ಚರಿತ್ರೆ, ನಳ – ದಮಯಂತಿ, ಹರಿಶ್ಚಂದ್ರ ಮುಂತಾದುವೆಲ್ಲವೂ ಅವನಿಗೆ ಪ್ರಿಯ. ಕಾವ್ಯರೂಪದಲ್ಲಿ ಅವನ್ನು ವಾಚನ ಮಾಡುತ್ತಿರುವರನ್ನು ನೋಡಿದಾಗಲೆಲ್ಲ ತಾನೂ ಕವಿಯಾಗಬೇಕು, ಖ್ಯಾತಿ ಗಳಿಸಬೇಕು ಎಂಬ ಬಯಕೆ ಈ ಬಾಲಕನಿಗೆ.

ನೀನೇ ನಿನ್ನ ಉದ್ಧಾರಕ

ಗಂಗಾನದಿ ಮನೆಗೆ ಸಮೀಪ. ಗಂಗಾನದಿಯೆಂದರೆ ಗಿರೀಶನಿಗೂ ಬಹಳ ಇಷ್ಟ. ಸಮಯ ಸಿಕ್ಕಿದರೆ ಸಾಕು, ಗಂಗಾದಡದಲ್ಲಿಯೇ ಹೆಚ್ಚು ಸಮಯ ಕಳೆಯುವನು. ಪ್ರಪಂಚವನ್ನೇ ಮರೆಯುವನು. ಆದರೆ ಶಾಲೆಯೆಂದರೆ ತಿರಸ್ಕಾರ, ಬಂಧನದಲ್ಲಿರುವಂತೆ ಭಾವನೆ. ಇದರಿಂದಾಗಿ ಎಂಟ್ರೆನ್ಸ್ ಪರೀಕ್ಷೆಯನ್ನು ಕೂಡ ಮುಗಿಸಲಿಲ್ಲ ಗಿರೀಶ್.

ಒಂದು ದಿನ ತಂದೆಯೊಂದಿಗೆ ನೌಕೆಯಲ್ಲಿ ಹೋಗುತ್ತಿದ್ದಾನೆ. ಗಿರೀಶ್, ನವದ್ವೀಪದ ಹತ್ತಿರ ಬರುತ್ತಿದ್ದಂತೆ ಆಕಾಶ ಕಪ್ಪಾಯಿತು. ನೋಡುತ್ತಿದ್ದಂತೆಯೇ ಬಿರುಗಾಳಿ ಪ್ರಾರಂಭವಾಯಿತು. ನದಿಯ ನೀರು ಕಪ್ಪು ತಿರುಗಿ ಅಲೆಗಳು ಏಳಲಾರಂಭಿಸಿದವು. ನೌಕೆ ತೂಗಾಡಲಾರಂಭಿಸಿತು. ಭಯದಿಂದ ಗಿರೀಶ್ ತಂದೆಯ ಕೈಹಿಡಿದ. ದೇವರ ದಯೆ, ನದಿ ಶಾಂತವಾಯಿತು. ಆಗ ತಂದೆ ಮಗನಿಗೆ ಹೇಳಿದರು, ” ಗಿರೀಶ್, ನೀನು ನನ್ನ ಕೈಹಿಡಿದಿದ್ದೆಯಲ್ಲಾ, ನೌಕೆ ಮುಳುಗಿದ್ದರೆ, ನಾನು ನಿನ್ನನ್ನು ಬದುಕಿಸುತ್ತಿದ್ದೆ ಎಂದುಕೊಂಡಿದ್ದೆಯೇನು? ” ತಂದೆಯ ಕಡೆ ಬೆಪ್ಪಾಗಿ ನೋಡಿದ ಗಿರೀಶ್. “ಖಂಡಿತ ಇಲ್ಲ. ನಾನು ಬದುಕಿಸುತ್ತಿರಲಿಲ್ಲ. ಮೊದಲು ನಾನು ಬದುಕಲು ಪ್ರಯತ್ನಿಸುತ್ತಿದ್ದೆ. ಪ್ರಪಂಚದಲ್ಲಿ ಎಲ್ಲಕ್ಕಿಂತಲೂ ಅತಿ ಹೆಚ್ಚಿನದು ನನ್ನ ಪ್ರಾಣ. ಕೇಳು, ಕಷ್ಟದ ದಿನಗಳಲ್ಲಿ ನಿನಗೆ ನೀನೇ’ ನಿನ್ನನ್ನು ಕಾಪಾಡುವವರು ಯಾರೂ ಇರುವುದಿಲ್ಲ. ಬೇರೆಯವರತ್ತ ನೋಡಲೂ ಬೇಡ. ನೀನು ಏಕಾಕಿ: ನೀನೇ ನಿನ್ನ ಉದ್ಧಾರಕ.”

"ನೀನೇ ನಿನ್ನ ಉದ್ಧಾರಕ"

’ಹೌದು, ತಾನೇ ತನ್ನ ಉದ್ಧಾರಕ, ಯಾರೂ ತನ್ನನ್ನು ಉದ್ಧರಿಸಲಾರರು’ ಎಂದುಕೊಂಡ ಗಿರೀಶ್.

ಗಿರೀಶನಿಗೆ ಹದಿನಾಲ್ಕು ವರ್ಷವಾಗುತ್ತಿದ್ದಾಗ ತಂದೆ ಕಾಲವಾದರು. ಈಗ ಗಿರೀಶ್ ಸ್ವತಂತ್ರ, ಅವನು ಮಾಡಿದ್ದೇ ಸರಿ.

ನಟ ಗಿರೀಶ್

ಅವನು ಹುಟ್ಟಿದ ಕಾಲವಂತೂ ಎಂತಹುದು! ಸಾಹಿತ್ಯ ರಸಿಕರಿಗಂತೂ ಹಬ್ಬ! ಸಾಹಿತ್ಯಾಕಾಶದಲ್ಲಿ ಹಲವಾರು ಉಜ್ವಲ ನಕ್ಷತ್ರಗಳು. ಮುಂದೆ ಪ್ರಸಿದ್ಧರಾದ ಅನೇಕ ಸಾಹಿತಿಗಳು ಆಗ ಬಾಲಕರು ಅಥವಾ ತರುಣರು. ಬಂಕಿಮಚಂದ್ರರಿಗೆ ಆರು ವರ್ಷ, ದೀನ ಬಂಧು ಮಿತ್ರ ಹದಿನಾಲ್ಕು ವರ್ಷಗಳ ಬಾಲಕ. ಮಧುಸೂದನ ದತ್ತರಿಗೆ ಇಪ್ಪತ್ತು, ಈಶ್ವರಚಂದ್ರ ವಿದ್ಯಾಸಾಗರರಿಗೆ ಇಪ್ಪತ್ತನಾಲ್ಕು, ಈಶ್ವರ ಗುಪ್ಪರಿಗೆ ಮೂವತ್ತಮೂರು, ಇಂತಹವರ ಒಡನಾಟ ಗಿರೀಶನಿಗೆ.

ಗಿರೀಶನಿಗೆ ಎಲ್ಲರೂ ಕಲಿಯುವ ವಿದ್ಯೆ ಹತ್ತಲಿಲ್ಲ. ಡಿಗ್ರಿ ಪಡೆಯುವ ಬಯಕೆಯಿಲ್ಲ, ಸಾಹಿತ್ಯ ಮುಂತಾದವುಗಳಿಂದ ಮನಸ್ಸಿಗೆ ಆನಂದ ದೊರಕಬಹುದು. ಹೊಟ್ಟೆಗೆ ಅದು ಆಹಾರವಾಗಲಾರದು, ಅದಲ್ಲದೆ ಕೇರಿಯ ಹುಡುಗರ ಗುಂಪನ್ನೇ ಕಟ್ಟಿದ್ದಾನೆ ಗಿರೀಶ್, ಸಾಮಾನ್ಯವಾಗಿ ಕೆಟ್ಟ ಗುಣಗಳು ಮನುಷ್ಯನಿಗೆ ಸ್ನೇಹಿತರನ್ನು ಬೇಗ ಒದಗಿಸುತ್ತವೆ. ಇವನ ಕೆಟ್ಟ ಚಟಗಳು ಹಲವಾರು ಗೆಳೆಯರನ್ನು ಇವನ ಸುತ್ತಲೂ ಸೇರಿಸಿದವು. ಆ ಕೇರಿಯಲ್ಲಿ ನಡೆಯುವ ಎಲ್ಲ ಒಳ್ಳೆಯ, ಕೆಟ್ಟ ಕಾರ್ಯಗಳಿಗೂ ಈ ಗುಂಪೇ ಮುಂದು, ಜನ ಈ ಗುಂಪಿನಿಂದ ಉಪಕಾರ ಪಡೆದರೂ ಈ ಗುಂಪನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದ್ದರು.

ಗಿರೀಶನಿಗೆ ಬುದ್ಧಿ ಹೇಳುವುದಕ್ಕೆ ತಂದೆ-ತಾಯಿ ಇಲ್ಲ. ಯಾರಾದರೂ ಅವನ ಶ್ರೇಯಸ್ಸನ್ನು ಬಯಸಿ ಮುಂದೆ ಬರಲೇಬೇಕಲ್ಲಾ ? ಅವನ ಅಕ್ಕ ಕೃಷ್ಣ ಕಿಶೋರಿ ಮುಂದೆ ಬಂದಳು. ತಮ್ಮನಿಗ ಶಾಲೆಯ ಓದು ಬೇಕಿಲ್ಲ. ಈಗಂತೂ ಪೋಲಿ ಯುವಕರೊಂದಿಗೆ ಸೇರುತ್ತಿದ್ದಾನೆ, ಕುಡಿಯುವುದನ್ನು ಕಲಿತಿದ್ದಾನೆ-ಇದೆಲ್ಲವನ್ನೂ ನಿಲ್ಲಿಸಬೇಕಾದರೆ ಮದುವೆಯೊಂದೇ ಉಪಾಯ, ಪ್ರವೋದಿನಿ ಎಂಬ ಹುಡುಗಿಯೊಂದಿಗೆ ಗಿರೀಶನಿಗೆ ವಿವಾಹವಾಯಿತು.

ಆದರೂ ವಿವಾಹದಿಂದ ಏನೂ ಪ್ರಯೋಜನವಾಗಲಿಲ್ಲ. ಗಿರೀಶ್ ಮೊದಲಿದ್ದ ಹಾಗೆಯೇ..ಓದುವ ಹುಚ್ಚು ಬಿಡಲಿಲ್ಲ ಮದುವೆಯಲ್ಲಿ ಉಡುಗೊರೆಯಾಗಿ ಬಂದ ಹಣವನ್ನು ಪುಸ್ತಕಗಳಿಗೆ ವಿನಿಯೋಗಿಸಿದ. ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಅವುಗಳನ್ನು ಓದುವುದು-ಅನುವಾದಿಸುವುದು ಇದಿಷ್ಟೇ ಕೆಲಸ. ಅವನ ಬದುಕೇ ಸಾಹಿತ್ಯಮಯವಾಯಿತು. ಅನಂತರ ಅವನ ಹುಚ್ಚು ನಾಟಕದ ಕಡೆ ತಿರುಗಿತು. ಅವನು ಮೊದಲು ಅಭಿನಯಿಸಿದ ನಾಟಕ  ಸಧವೆಯ ಏಕಾದಶಿ ಅದರಲ್ಲಿ ಅವನದು ನಿಮ್ ಚಾಂದ್ ನ ಪಾತ್ರ. ನಿಮ್ ಚಾಂದ್ ಮಹಾ ಕುಡುಕ. ಆ ಪಾತ್ರದಲ್ಲಿಯಂತೂ ಗಿರೀಶ್ ಖ್ಯಾತಿ ಗಳಿಸಿದ. ಆ ನಾಟಕವನ್ನು ನೋಡಲು ಬಂದ ನಾಟಕಕಾರ ದೀನಬಂಧು ಮಿತ್ರರೂ ಅವನನ್ನು ಪ್ರಶಂಸಿಸಿದರು. ನೀನಿಲ್ಲದಿದ್ದರೆ ಈ ನಾಟಕವಾಗುತ್ತಿರಲಿಲ್ಲ. ಈಗನ್ನಿಸುತ್ತೆ, ನಿಮ್ ಚಾಂದ್ ನ ಪಾತ್ರ ನಿನಗಾಗಿಯೇ ಸೃಷ್ಟಿಯಾಯಿತೊ ಎಂದು” ಎಂದರು.

ಹಾಗಾದರೆ ಇನ್ನೇನು! ತನ್ನಲ್ಲಿ ಹುದುಗಿರುವ ಪ್ರತಿಭೆ ಹೊರಬರುವುದಕ್ಕೆ ಕಾಲ ಬರಬೇಕಾಗಿತ್ತಷ್ಟೆ! ಅದಿಂದು ಬಂದಿದೆ, ಇಂದಿನಿಂದ ತನ್ನ ಜೀವನ ನಾಟಕದ ಜೀವನದೊಂದಿಗೆ! ಗಿರೀಶನ ಮನಸ್ಸು ನುಡಿಯಿತು.

ಇದು ಅವಮಾನ

ಆದರೆ ಅವನಿಗೆ ಹೆಣ್ಣು ಕೊಟ್ಟ ಮಾವ ಸುಮ್ಮನಿದ್ದಾನೇ? ಅಳಿಯ ಓದದೆ, ನಾಟಕದ ಕಡೆ ವಾಲಿದಾಗ, ಹೀಗೆ ಇದ್ದರೆ ತನ್ನ ಮಗಳ ಗತಿಯೇನಾಗುತ್ತದೋ ಎಂದು ಹೆದರಿ ಮಾವ ನವೀನ್ ಸರ್ಕಾರ್ ತಾನಿರುವ ಕಂಪನಿಯಲ್ಲೇ ಕೆಲಸ ಕೊಡಿಸಿದ ಗಿರೀಶನಿಗೆ.

ಆಕಾಶದಲ್ಲಿ ಸ್ವೇಚ್ಛೆಯಿಂದ ವಿಹರಿಸುತ್ತಿರುವ ಹಕ್ಕಿಗೆ ಪಂಜರ ಇಷ್ಟವಾದೀತೇ?

ಗಿರೀಶ್ ಆಟ್‌ಕಿನ್‌ಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕರೆಗಂಟೆ ಬಾರಿಸಿತು. ಮಹಡಿಯ ಮೇಲಿನಿಂದ ಆಟ್‌ಕಿನ್‌ಸನ್ ಸಾಹೇಬನೇ ಕರೆ ಗಂಟೆ ಒತ್ತುತ್ತಿದ್ದಾನೆ. ಗಿರೀಶನಿನ್ನೂ ಅಲ್ಲಿ ಹೊಸದಾಗಿ ಸೇರಿಕೊಂಡ ಗುಮಾಸ್ತ. ಗಿರೀಶನಿಗಾಗಿ ಕರೆಗಂಟೆ ಒಂದೇ ಸಮನೆ ಕೂಗುತ್ತಿದೆ. ಆದರೆ ಗಿರೀಶ್ ಅದಕ್ಕೆ ಕಿವಿ ಕೊಡುತ್ತಲೂ ಇಲ್ಲ. ಎಷ್ಟು ಹೊತ್ತು ಬೇಕಾದರೂ ಬಾರಿ ಸುತ್ತಿರಲಿ ತನಗೇನಂತೆ ಎಂಬ ತಾತ್ಸಾರ ಅವನಿಗೆ, ಸಾಹೇಬ ಕೋಪದಿಂದ ಕೆಂಪಗಾಗಿ ಗಿರೀಶನ ಕೋಣೆಯೊಳಕ್ಕೆ ನುಗ್ಗಿದ. ” ಏನು, ಕರೆಗಂಟೆಯ ಶಬ್ದ ನಿನಗೆ ಕೇಳಿಸುತ್ತಿಲ್ಲವೇನು ? ” ಎಂದು ಕೇಳಿದ.

“ಹೂಂ ಕೇಳಿಸುತ್ತಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವವರೆಲ್ಲರಿಗೂ ಕೇಳಿಸುವಂತೆ ನನಗೂ ಕೇಳಿಸುತ್ತಿದೆ” ಗಿರೀಶ್ ಧೈರ್ಯದಿಂದ ನುಡಿದ.

“ಹಾಗಾದರೆ ನೀನೇಕೆ ಬರಲಿಲ್ಲ? ”

“ಗಂಟೆ ನನ್ನನ್ನೇ ಕರೆಯುತ್ತಿದೆ ಎಂದು ನನಗೆ ಹೇಗೆ ಗೊತ್ತಾಗಬೇಕು? ಗಂಟೆ ಗಿರೀಶ್, ಗಿರೀಶ್ ಎಂದೇನೂ ಕರೆಯುತ್ತಿಲ್ಲವಲ್ಲ? ”

“ಯಾರ ಮುಂದೆ ಮಾತನಾಡುತ್ತಿದ್ದೀಯ ಎನ್ನುವುದು ಎಚ್ಚರವಿರಲಿ! ಇಲ್ಲಿ ನಿನ್ನ ತಲೆ ಹರಟೆ ಮಾಡಬೇಡ” ಸಾಹೇಬ ಗರ್ಜಿಸಿದ.

“ನೋಡಿ ಸಾಹೇಬರ,” ಗಿರೀಶ್ ಶಾಂತನಾಗಿಯೇ ಉತ್ತರಿಸಿದ, ” ಗಂಟೆಯ ಶಬ್ದವನ್ನು ಅನುಸರಿಸಿ ಏಳುವ – ಕೂರುವ ಅಭ್ಯಾಸ ನನಗಿಲ್ಲ. ಗಂಟೆಯನ್ನು ಬಾರಿಸಿದರೆ ಕೈ ಕೆಳಗಿನ ಕಾರಕೂನನಿಗೆ ಅವಮಾನ ಮಾಡಿದಂತೆ ಕಾರಕೂನನಿಗೆ ಅವಮಾನವಾದರೆ ಅವನು ಕೆಲಸ ಮಾಡುತ್ತಿರುವ ಕಂಪನಿಗೆ ಅವಮಾನವಾದಂತೆ”

ಈ ವ್ಯವಹಾರ ಇನ್ನೂ ಮೇಲಕ್ಕೆ ಹೋಯಿತು. ಅಧಿಕಾರಿಗಳಲ್ಲಿ ಚರ್ಚೆಯಾಯಿತು. ಕೊನೆಗೆ ಎಲ್ಲರೂ ಒಮ್ಮ ತಕ್ಕೆ ಬಂದರು. ಗಿರೀಶ್ ಮಾಡಿರುವುದು ಸರಿ. ಕರೆಗಂಟೆಯನ್ನು ಒತ್ತುವುದು ಕಾರಕೂನನಿಗೆ ಅವಮಾನ ಮಾಡಿದಂತೆ. ಸರಿ, ಕರೆಗಂಟೆ ಹೊರಟುಹೋಯಿತು.

ನಿಷ್ಠೆಯ ಮೂರ್ತಿ

ಗಿರೀಶನಿಗೆ ಎಷ್ಟು ಆತ್ಮಾಭಿಮಾನವೋ ಅಷ್ಟೇ ಕಾರ್ಯದಲ್ಲಿ ಶ್ರದ್ಧೆ ಪ್ರಾಮಾಣಿಕತೆ, ನಿಸ್ಕ್ಸಹತೆಯೂ ಇದ್ದವು. ಆಟ್‌ಕಿನ್‌ಸನ್ ಕಂಪನಿಯವರದು ನೀಲಿ ಬಣ್ಣವನ್ನು ರಪ್ತು ಮಾಡುವ ಕಾರಭಾರ. ಹಗಲಿನ ಹೊತ್ತಿನಲ್ಲಿ ಸೂರ್ಯನ ಬೆಳಕಿನಲ್ಲಿ, ನೀಲಿಯನ್ನು ಬಿಸಿಲು ಮಾಳಿಗೆಯ ಮೇಲೆ ಒಣಗಿಸುವುದು ದಿನನಿತ್ಯದ ಕೆಲಸ. ಕೆಲಸ ಮುಗಿದ ನಂತರ ಸಂಜೆಯಲ್ಲಿ ಅದನ್ನು ತೆಗೆದು ಮತ್ತೆ ಉಗ್ರಾಣಕ್ಕೆ ಹಾಕುವುದು ಪದ್ಧತಿ.

ಅಂದು ಆಕಾಶ ನಿರ್ಮಲವಾಗಿದ್ದರಿಂದ, ಸಂಜೆಯಾದರೂ ಬಿಸಿಲು ಮಾಳಿಗೆಯ ಮೇಲಿದ್ದ ನೀಲಿಯನ್ನು ಅಲ್ಲಿಯೇ ಬಿಟ್ಟು ಎಲ್ಲರೂ ಮನೆಗಳಿಗೆ ತೆರಳಿದರು.

ಆದರೆ ರಾತ್ರಿಯಾಗುತ್ತಿದ್ದಂತೆ, ನಿರ್ಮಲವಾಗಿದ್ದ ನೀಲಿಯಾಗಸದಲ್ಲಿ ಕಾರ್ಮೋಡಗಳು ತುಂಬಿದವು. ಮಳೆ ಸುರಿಯುವ ಸೂಚನೆ. ನೀಲಿಯನ್ನು ಬಿಸಿಲು ಮಚ್ಚಿನ ಮೇಲೆ ಒಣಹಾಕಿದ್ದು ಗಿರೀಶನಿಗೆ ನೆನಪಾಯಿತು. ಮಳೆಯಲ್ಲಿ ನೀಲಿ ನೆನೆದರಂತೂ ಕಂಪನಿ ದಿವಾಳಿಯಾಗುತ್ತದೆ. ಕುದುರೆ ಗಾಡಿಯನ್ನು ಬಾಡಿಗೆಗೆ ಗೊತ್ತುಮಾಡಿಕೊಂಡವನೇ ಗಿರೀಶ್ ಓಡಿದ. ಸದ್ಯ, ಅವನು ಕಚೇರಿಗೆ ಹೋಗುವವರೆಗೂ ಮಳೆಯಿಲ್ಲ, ಎರಡರಷ್ಟು ಕೂಲಿ ಕೊಟ್ಟು ನೀಲಿಯೆಲ್ಲವನ್ನೂ ಉಗ್ರಾಣಕ್ಕೆ ತುಂಬಿಸಿದ. ಕಂಪನಿಯನ್ನು ಉಳಿಸಿದ.

ಆ ರಾತ್ರಿ ಮಳೆ ಧಾರಾಕಾರವಾಗಿ ಸುರಿಯಿತು. ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಬಂದಿದ್ದವರೆಲ್ಲಾ ಮಳೆಯನ್ನು ನೋಡಿ, ನೀಲಿ ಮಳೆಗೆ ಸಿಕ್ಕಿದೆಯೆಂದು ಭಾವಿಸಿ ತಮ್ಮ ಕಂಪನಿ ಮುಳುಗಿತಂದೇ ತಿಳಿದರು.

ರಾಮಕೃಷ್ಣ ಪರಮಹಂಸರು ಮತ್ತು ಅವರ ಶಿಷ್ಯರೊಡನೆ ಗಿರೀಶ್ ಚಂದ್ರರು

ಆದರೆ ಬೆಳಿಗ್ಗೆ ಬಂದು ನೋಡುತ್ತಾರೆ ! ಎಲ್ಲವೂ ಯಥಾರೀತಿ. ಗಿರೀಶನ ಪ್ರಾಮಾಣಿಕ ಕೆಲಸದಿಂದಾಗಿ ಕಂಪನಿ ಉಳಿಯಿತು. ಆಟ್‌ಕಿನ್‌ಸನ್ ಗಿರೀಶನಿಗೆ ಹೇಳಿಕಳುಹಿಸಿ ಮನಃಪೂರ್ತಿಯಾಗಿ ಪ್ರಶಂಸೆ ಮಾಡಿದ: ಅಭಿನಂದಿಸಿದ. ಅಷ್ಟೇ ಅಲ್ಲ, ಕಬ್ಬಿಣದ ಸಂದೂಕವನ್ನು ಹೊರತೆಗೆದು ಅದರತ್ತ ತೋರಿಸುತ್ತಾ ಹೇಳಿದ: “ನೀನೇ ಬೇಕಾದಷ್ಟು ಹಣವನ್ನು ತೆಗೆದುಕೋ.”

“ಏನು, ಹಣವೇ? ಏತಕ್ಕಾಗಿ?” ಗಿರೀಶ ಚಕಿತನಾಗಿ ಕೇಳಿದ.

ನಮ್ಮ ಕಂಪನಿ ಮುಳುಗಿಹೋಗುವುದನ್ನು ತಪ್ಪಿಸಿದ್ದೀಯ. ಬಹಳ ನಷ್ಟವಾಗುವುದನ್ನು ತಪ್ಪಿಸಿದ್ದೀಯ. ಕಂಪನಿ ನಿನ್ನನ್ನು ಪುರಸ್ಕರಿಸಲು ಬಯಸುತ್ತಿದೆ.”

ಆದರೆ ಗಿರೀಶ್ ಹಣದ ಕಡೆ ಕೈ ಚಾಚಲಿಲ್ಲ. ಮಾಲಿಕನಿಗೆ ಉತ್ತರ ಹೇಳಿದ: “ಕರ್ತವ್ಯ ಪರಾಯಣನಾದ ಒಬ್ಬ ಕಾರ್ಮಿಕ ತನ್ನ ಕಂಪನಿಗೆ ಏನನ್ನು ಮಾಡಬೇಕೋ ಅದನ್ನು ಮಾಡಿದ್ದೇನೆ. ಇದರಲ್ಲಿ ಹಣದ ಪ್ರಶ್ನೆಯೇ ಏಳುವುದಿಲ್ಲ.”

ಇಷ್ಟೆಲ್ಲಾ ಆದರೂ ಕಂಪನಿ ದಿವಾಳಿಯೆದ್ದಿತು. ಕಂಪನಿಯ ಕುರ್ಚಿ, ಮೇಜುಗಳೆಲ್ಲಾ ಹರಾಜಾದವು. ಗಿರೀಶ್ ತಲೆಯ ಮೇಲೆ ಕೈ ಹೊತ್ತು ಕುಳಿತು. ಕಂಪನಿ ಮುಳುಗಿತೆಂದಲ್ಲ. ತಾನು ಸಮಯ ಸಿಕ್ಕಿದಾಗ, ಯಾರಿಗೂ ಕಾಣದಂತೆ ಮ್ಯಾಕ್ ಬೆತ್ ನಾಟಕದ ಅನುವಾದ ಮಾಡುತ್ತಿದ್ದ. ಅದೆಲ್ಲವೂ ಎಲ್ಲೋ ಹೋಯಿತಲ್ಲ ಎಂಬ ಚಿಂತೆಯಿಂದ.

ರಂಗಭೂಮಿ ಜಗತ್ತಿನಲ್ಲಿ

ಬಾಗ್ ಬಾಜಾರಿನಲ್ಲಿ ನಾಟಕದ ಒಂದು ಗುಂಪು. ಅದರಲ್ಲಿ ಗಿರೀಶನೂ ಒಬ್ಬ ಸದಸ್ಯ. ಆದರೆ ಆಡುವುದಕ್ಕೆ ಹೊಸ ಹೊಸ ನಾಟಕಗಳಿಲ್ಲ. ಯಾವುದನ್ನಾಡುವುದು? ಮೈಕೇಲ್ ಮಧುಸೂದನ ದತ್ತರು ನಾಟಕ ಬರೆದುಕೊಟ್ಟರು. ಶರ್ಮಿಷ್ಠಾ  ನಾಟಕ. ನಾಟಕವಾಯಿತು. ಆದರೆ ನಾಟಕದ ಮಧ್ಯೆ ಹಾಡುವುದಕ್ಕೆ ಗೀತೆಗಳು ಬೇಕು. ಹಾಡಿಲ್ಲದಿದ್ದರೆ ಜನ ಬರುವುದಿಲ್ಲ, ನಾಟಕ ರಂಜಕವಾಗಿರುವದಿಲ್ಲ. ಆಗಿನ ಕಾಲದಲ್ಲಿ ನಾಟಕದ ಮುಟ್ಟುಗಳನ್ನು ಬರೆಯುವುದರಲ್ಲಿ ಪ್ರಿಯ ಮಾಧವ ಮಲ್ಲಿಕರು ಬಹಳ ಪ್ರಸಿದ್ಧರು. ಎಷ್ಟು ಪ್ರಯತ್ನಿಸಿದರೂ ಅವರಿಂದ ಹಾಡುಗಳನ್ನು ಬರೆಸಲಾಗಲಿಲ್ಲ. ಕೊನೆಗೆ ಗಿರೀಶನೆಂದ, ” ಯೋಚನೆ ಮಾಡಬೇಡಿ, ನಾನೇ ಹಾಡುಗಳನ್ನು ರಚಿಸುತ್ತೇನೆ.”

“ಏನು? ಗಿರೀಶ್ ಹಾಡುಗಳನ್ನು ಬರೆಯುತ್ತಾನೆಯೇ? ಪ್ರಸಿದ್ಧರಾದ ಕವಿಗಳ ಮುಂದೆ ಇವ ಎಷ್ಟರವನು? ಗೆಳೆಯರಿಗಂತೂ ನಂಬಲಾಗದ ವಿಷಯವಿದು. ಆದರೆ ಗಿರೀಶ್ ತಾನು ಹೇಳಿದ್ದನ್ನು ಮಾಡುವವ. ಉಸ್ತಾದ್ ಹಿಂಗೂಲ್ ಖಾನನ ರಾಗವನ್ನು ಅನುಸರಿಸಿ ಮೈಕೇಲರ ಶರ್ಮಿಷ್ಠಾ ಗೆ ಗೀತೆಗಳನ್ನು ರಚಿಸಿದ. ಒಂದೇ ದಿನದಲ್ಲಿ ಪ್ರಸಿದ್ಧನಾದ. ಕಲ್ಕತ್ತೆಯಲ್ಲಿ ಯಾರ ಬಾಯಲ್ಲಿ ನೋಡಿದರೂ ಗಿರೀಶ್ ರಚಿಸಿದ ಗೀತೆಗಳೇ.

ಮುಂದಿನ ನಾಟಕ ದೀನಬಂಧು ಮಿತ್ರ ಬರೆದ ಲಿಲಾವತಿ, ಅದರಲ್ಲಿ ಲಲಿತ ಮೋಹನನ ಪಾತ್ರ. ಆದರೆ ಟಿಕೆಟ್ ಮಾರಬೇಕೆಂದು ಥಿಯೇಟರ‍್ನವರ ಹಠ. ನಾಟಕ ಜನಸಾಮಾನ್ಯರಿಗಾಗಿ. ಅವರಿಗೆ ಕೊಡುವುದಕ್ಕೆ ಹಣವಿಲ್ಲ. ಟಿಕೆಟ್ ಮಾರಿದರೆ ತಾನು ಬರುವುದಿಲ್ಲವೆಂದು ಗಿರೀಶನ ಹಠ. ಗಿರೀಶನಿಲ್ಲದಿದ್ದರೆ ಲಲಿತ ಮೋಹನನ ಪಾತ್ರವನ್ನು ಅಭಿನಯಿಸುವವರು ಯಾರು? ನಾಟಕಕಾರ ದೀನ ಬಂಧುವೇ ಹೇಳಿದರು. “ಗಿರೀಶನಿಲ್ಲದಿದ್ದರೆ ನಾಟಕ ಚೆನ್ನಾಗಿರುವುದಿಲ್ಲ” ಎಂದು. ಇದರಿಂದಾಗಿ ಥಿಯೇಟರ್ ನವರು ತಮ್ಮ ಹಠವನ್ನು ಬಿಡಬೇಕಾಯಿತು. ಟಿಕೆಟ್ ಇಲ್ಲದೆಯೇ, ಹಣ ಸಂಗ್ರಹಿಸಿದೆಯೇ ನಾಟಕ ನಡೆಯಿತು. ಗಿರೀಶನ ಮೇಲಂತೂ ಪ್ರಶಂಸೆಗಳ ಮಳೆಗರೆಯಿತು. ಆಗಂತೂ ಗಿರೀಶನ ಮೇಲೆ ಬಹಳ ಜವಾಬ್ದಾರಿ ಬಿತ್ತು. ರಂಗಮಂಚವನ್ನು ನಿರ್ಮಿಸುವುದು, ದೃಶ್ಯಪಟಗಳನ್ನು ಚಿತ್ರಿಸುವುದು, ವೇಷ-ಭೂಷಣಗಳನ್ನು ಹೊಂದಿಸುವುದು, ಪ್ರೇಕ್ಷಕ ಗೃಹವನ್ನು ನೋಡುವುದು, ನಾಟಕದಲ್ಲಿ ಅಭಿನಯಿಸುವುದು, ನಾಟಕದಲ್ಲಿ ಬರುವ ಇತರ ಪಾತ್ರಗಳನ್ನು ನಿರ್ದೇಶಿಸುವುದು, ಗೀತ ರಚನೆ ಮುಂತಾದ ಕೆಲಸಗಳೆಲ್ಲ ಗಿರೀಶನ ಮೇಲೆ. ಬಹುಮುಖವಾದ ಪ್ರತಿಭೆ, ಸೂಕ್ಷ್ಮ ದೃಷ್ಟಿ, ನಾನಾ ವಿಷಯಗಳಲ್ಲಿ ಆತನಿಗಿರುವ ಜ್ಞಾನ, ಪಾಂಡಿತ್ಯ, ನಾಟಕದಲ್ಲಿ ಬರುವ ಪಾತ್ರಗಳನ್ನು ಆಳವಾಗಿ ವಿಮರ್ಶಿಸುವ ರೀತಿ, ವಿಚಾರಶೀಲವಾದ ಮನಸ್ಸು, ಕವಿತ್ವ ಶಕ್ತಿ ಮತ್ತು ಕಲಾನೈಪುಣ್ಯ ಮತ್ತು ಸತತ ಅಭ್ಯಾಸ – ಎಲ್ಲಕ್ಕಿಂತಲೂ ಹೆಚ್ಚಾಗಿ ಶ್ರದ್ಧೆ – ಇವೆಲ್ಲ ಗುಣಗಳೂ ಗಿರೀಶನಲ್ಲಿ ಅಡಕವಗಿದ್ದುದರಿಂದ ಏನೇ ಕೆಲಸ ಬಂದರೂ ಮಾಡುವ ಶಕ್ತಿ ಗಿರೀಶನಲ್ಲಿ ಮೂಡಿತು.

ಲೀಲಾವತಿ ಪ್ರಸಿದ್ಧವಾದುದನ್ನು ಕಂಡ ನಾಟಕದ ಗೆಳೆಯರು ದೀನಬಂಧುವಿನ ಮತ್ತೊಂದು ನಾಟಕ ನೀಲದರ್ಪಣವನ್ನು ತೆಗೆದುಕೊಂಡರು. ಆದರೆ ಟಿಕೆಟ್ ಮಾರಿಯೇ ಈ ನಾಟಕವನ್ನು ಆಡಬೇಕೆಂದು ಮಿತ್ರರ ಹಠ. ಆದರೆ ಗಿರೀಶನಿಗೆ ಅದು ಇಷ್ಟವಿಲ್ಲದ್ದರಿಂದ ಅವನು ಆ ಗುಂಪನ್ನೇ ಬಿಡಬೇಕಾಯಿತು. ಆದರೂ ಗುಂಪು ನ್ಯಾಷನಲ್ ಥಿಯೇಟರ್ ಎಂಬ ಹೆಸರಿನಿಂದ ನೀಲದರ್ಪಣವನ್ನು ಆಡಿದರು. ಆದರೆ ಅದು ಅಷ್ಟು ಪ್ರಖ್ಯಾತವಾಗಲಿಲ್ಲ. ನಾಟಕವನ್ನು ನೋಡಲು ಬಂದ ದೀನಬಂಧು, “ಇದರಲ್ಲಿ ಯೋಗ್ಯ ಗಂಭೀರ ಪಾತ್ರವನ್ನು ಮಾಡುವ ವ್ಯಕ್ತಿ ಇಲ್ಲಿದ್ದರಿಂದ , ಈ ನಾಟಕ ವ್ಯರ್ಥವಾಯಿತು” ಎಂದರು.

ನ್ಯಾಷನಲ್ ಥಿಯೇಟರನವರು ತಮ್ಮ ಮುಂದಿನ ನಾಟಕ, ಮೈಕೇಲ್ ಮಧುಸೂದನದತ್ತರ ಕೃಷ್ಣ ಕುಮಾರಿಯನ್ನು ಅಭಿನಯಿಸಲು ಯೋಚಿಸಿದರು. ಆದರೆ ಕೃಷ್ಣಕುಮಾರಿಯಲ್ಲಿ ಬರುವ ಭೀಮಸಿಂಹನ ಪಾತ್ರವನ್ನು ಅಭಿನಿಯಿಸುವವರಾರು ? ಹಿಂದಿನ ಭಿನ್ನಪ್ರಾಯಗಳನ್ನು ಮರೆತು ಗಿರೀಶನ ಕಾಲಿಗೆ ಹೋಗಿ ಬಿದ್ದರು.

ನಾಟಕವೆಂದರೆ ತನ್ನ ಪ್ರಾಣಕ್ಕೂ ಹೆಚ್ಚಾಗಿ ತಿಳಿದಿದ್ದ ಗಿರೀಶ್ ಎಲ್ಲವನ್ನು ಮರೆತ. ಭೀಮಸಿಂಹನ ಪಾತ್ರವನ್ನು ನೋಡಿ ಜನ ಮುಗ್ದರಾದರು. ನಾಟಕವನ್ನು ನೋಡಲು ಬಂದಿದ್ದ ಮಧುಸೂದನದತ್ತರಿಗಿಂತೂ ಅಪಾರ ಸಂತೋಷ. ಗಿರೀಶನನ್ನು ಬಹಳ ಪ್ರಶಂಸಿಸಿದರು. ನಾಟೋರಿನ ಮಹಾರಾಜ ಗಿರೀಶನಿಗೆ ತನ್ನ ಕೈಯಿಂದಲೇ ರಾಜವೇಷವನ್ನು ತೊಡಿಸಿ ಸೊಂಟಕ್ಕೆ ತನ್ನ ಖಡ್ಗವನ್ನೇ ತೂಗುಹಾಕಿದ.

ಮೈಕೇಲ್ ಮಧುಸೂದನದತ್ತ, ದೀನಬಂಧು ಮಿತ್ರರ ನಾಟಕಗಳನ್ನಾಡಿದ ನಂತರ, ಬಂಕಿಮಚಂದ್ರ ಚಟರ್ಜಿಯವರ ಕಾದಂಬರಿಗಳನ್ನೇ ನಾಟಕಗಳನ್ನಾಗಿ ರೂಪಾಂತರಿಸಿದ ಗಿರೀಶ್, ಕಪಾಲಕುಂಡಲ, ಮೃಣಾಲಿನಿ, ವಿಷವೃಕ್ಷ ಮುಂತಾದ ಕಾದಂಬರಿಗಳ ರೂಪಾಂತರಗಳನ್ನು ನೋಡಿದ ಬಂಕಿಮಚಂದ್ರರೇ ಗಿರೀಶನ ಪ್ರತಿಭೆಗೆ ಬೆರಗಾದರು.

ಸಾಲಾಗಿ ದುಃಖಗಳು

ನಾಟಕ ಕ್ಷೇತ್ರದಲ್ಲಿ, ಕಾವ್ಯ ಕ್ಷೇತ್ರದಲ್ಲಿ ಗಿರೀಶ್ ಮೇಲಮೇಲಕ್ಕೇರುತ್ತಿದ್ದಂತೆ, ಸಾಂಸಾರಿಕ ಜೀವನದಲ್ಲಿ ಒಂದಾದ ನಂತರ ಒಂದರಂತೆ ದುಃಖಗಳು ಬಂದೊದಗಿದವು. ಅವನು ಸಣ್ಣವನಿರುವಾಗಲೇ ಅವನನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ಅಕ್ಕ ಪ್ರಸನ್ನಕಾಳಿಯ ಸಾವು, ಹತ್ತನೇ ವರ್ಷದಲ್ಲಿ ದೊಡ್ಡಣ್ಣ ನಿತ್ಯ ಗೋಪಾಲನ ಸಾವು, ಸುಮಾರಿಗೆ ತಾಯಿಯ ಸಾವು, ಹದಿನಾಲ್ಕನೇ ವರ್ಷದಲ್ಲಿ ತಂದೆಯ ಸಾವು, ಆಮೇಲೆ ಮತ್ತೊಬ್ಬ ಅಕ್ಕ ಕೃಷ್ಣರಂಗಿನಿಯ ಸಾವು, ಅವನ ಇಪ್ಪತ್ತಮೂರನೆಯ ವರ್ಷದಲ್ಲಿ ಗಿರೀಶನಿಗೆ ಮೊದಲ ಮಗುವಾಯಿತು, ಎರಡು ಗಿಂಗಳೊಳಗಾಗಿ ಅದೂ ಸತ್ತಿತ್ತು. ಅದಾದ ಎರಡು ವರ್ಷಗಳನಂತರ ಅವನ ಮತ್ತೊಬ್ಬ ಅಕ್ಕ ಕೃಷ್ಣಕಾಮಿನಿ ಕಣ್ಣುಮುಚ್ಚಿದಳು. ಜೊತೆ ಜೊತೆಯಲ್ಲೇ ಚಿಕ್ಕ ತಮ್ಮ ಕನಾಯಿಲಾಲ್ ಸತ್ತ. ಇಷ್ಟೆಲ್ಲ ದುಃಖಗಳ ಮಧ್ಯೆಯು ಒಂದು ಬೆಳ್ಳಿಯ ಗೆರೆ, ಅವನಿಗೆ ಎರಡನೇ ಮಗುವಾಯಿತು. ಅವನೇ ಸುರೇಂದ್ರನಾಥ ಘೋಷ್, ಮಗನೂ ಸಹ ಮುಂದೆ ನಾಟಕ ರಂಗದಲ್ಲಿ ಬಹಳ ಪ್ರಸಿದ್ಧನಾದ.

ಬೆಂಗಾಲ್ ಥಿಯೇಟರಿನವರು ದುರ್ಗೇಶನಂದಿನಿಯನ್ನು ನಾಟಕವಾಡಿದರೆ ಗ್ರೇಟ್ ನ್ಯಾಷನಲ್ ಥಿಯೇಟರಿನವರೂ ಬಂಕಿಮರ ಮೃಣಾಲಿನಿ ಯನ್ನು ಆಡಬೇಕೆಂದು ಹಠತೊಟ್ಟರು. ಆ ಕಾಲವಂತೂ ಬಂಕಿಮರ ಕಾಲ. ಎಲ್ಲೆಲ್ಲೂ ಅವರದೇ ಹೆಸರು. ಜನರೆಲ್ಲರಿಗೂ ಅವರ ಕಾದಂಬರಿಗಳೇ ಬೇಕು. ಮೃಣಾಲಿನಿ ಯಲ್ಲಿ ಪಶುಪತಿಯ ಪಾತ್ರ ಗಿರೀಶನದು. “ಆದರೆ ಒಂದು ನಿಯಮ. ನಾನು ಹಣವನ್ನು ಮುಟ್ಟುವುದಿಲ್ಲ” ಗಿರೀಶ್ ಹೇಳಿದ.

“ನೀವು ಹೇಳಿದ ಹಾಗೆ ! ನೀವು ಹಣ ಮುಟ್ಟಬೇಡಿ. ಆದರೆ ನಾಟಕವಾಡಿ. ಮೃಣಾಲಿನಿ ಯ ಪಶುಪತಿಯಂತೂ ಜನರ ಮೆಚ್ಚಿಗೆಗೆ ಪಾತ್ರವಾಯಿತು. ಗಿರೀಶ್ ಅಭಿನಯದಲ್ಲಿ ಅದ್ವಿತೀಯನೆನಿಸಿದ.

‘ದೇವರನ್ನು ಕರೆದರೆ’

ಗಿರೀಶನಿಗೆ ಮೂವತ್ತು ವರ್ಷವಾಗಿದ್ದಾಗ ಅವನ ಹೆಂಡತಿ ಸತ್ತಳು. ತಾನು ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಂಡತಿ ಇಲ್ಲ. ದುಃಖಸಾಗರದಲ್ಲಿ ಮುಳುಗಿದ ಗಿರೀಶ್. ಅವನು ದೇವರನ್ನು ಪ್ರಾರ್ಥಿಸುವಂತೆಯೂ ಇಲ್ಲ. ಕಾರಣ ಅವು ನಾಸ್ತಿಕ, ಅವನಿಗೆ ದೇವರಿದ್ದಾನೆ ಎಂಬ ನಂಬಿಕೆಯಿಲ್ಲ. ನಾಟಕ ಮತ್ತು ಗಣಿತದಲ್ಲಿ ಸಮಯವನ್ನು ಕಳೆಯುವುದು. ಇದೇ ಸಮಾಧಾನ.

ವಿಚಾರ, ವಿಶ್ವಾಸಗಳ ಮಧ್ಯೆ ಅವನ ಮನಸ್ಸು ಗೊಂದಲಮಯವಾಗುತ್ತಿತ್ತು. ಏನೇ ಆದರೂ ಎಷ್ಟೇ ಕಷ್ಟಬಂದರೂ ಕಷ್ಟದಲ್ಲಿ ಮಾತ್ರ ದೇವರನ್ನು ಪ್ರಾರ್ಥಿಸುವುದಿಲ್ಲವೆಂದು ಅವನ ಹಠ. ಒಂದು ದಿನ ಅವನು ಗೆಳೆಯರೆಲ್ಲರೊಂದಿಗೆ ಹೊರಗಡೆ ಅಡ್ಡಾಡಲು ಹೋಗಿದ್ದಾನೆ. ಸಾಯಂಕಾಲವಾಗಿದೆ. ಹಾಗೆ ಹೋಗುತ್ತಿದ್ದಾಗ ಎಲ್ಲರೂ ಒಂದು ಗುಹೆಯನ್ನು ಹೊಕ್ಕರು. ಎಲ್ಲೆಲ್ಲೂ ಕತ್ತಲು, ಹೊರಕ್ಕೆ ಬರಲು ದಾರಿಯಿಲ್ಲ. ಗೆಳೆಯರೆಲ್ಲರಿಗೂ ಕಷ್ಟಕ್ಕಿಟ್ಟುಕೊಂಡಿತು. ನಾಸ್ತಿಕನಾದ ಗಿರೀಶ್ ತಮ್ಮೊಂದಿಗೆ ಇದ್ದುದರಿಂದಲೇ ಈ ರೀತಿಯಾಯಿತು ಎಂದು ಅವರು ಬಗೆದರು. ಎಲ್ಲರೂ ದೇವರನ್ನು ಪ್ರಾರ್ಥಿಸಿ ಎಂದರು. ಆದರೆ ಗಿರೀಶ್ ಮಾತ್ರ ದೇವರನ್ನು ಪ್ರಾರ್ಥಿಸುವವನಲ್ಲ. ಕೊನೆಗೆ ಗೆಳೆಯರ ಬೇಡಿಕೆಯನ್ನು ಮನ್ನಿಸಿ ಗೆಳೆಯರ ಪ್ರಾರ್ಥನೆಯೊಂದಿಗೆ ಒಂದಾಗಬೇಕಾಯಿತು. ಅನಂತರ ಗುಹೆಯಿಂದ ಹೊರಗೆ ಬಂದವನೇ ಹೇಳಿದ. ನೋಡಿ ಇಂದು ಕಷ್ಟಕ್ಕೆ ಸಿಕ್ಕಿಕೊಂಡು ದೇವರನ್ನು ಕರೆದೆ ನಿಮ್ಮ ಗಳಿಗೋಸ್ಕರ. ಆದರೆ ಇನ್ನು ಮುಂದೆ ದೇವರನ್ನು ಕರೆದರೆ ವಿಶ್ವಾಸದಿಂದ, ಪ್ರೀತಿಯಿಂದ, ನಂಬಿಕೆಯಿಂದ ಕರೆಯುತ್ತೇನೆಯೇ ಹೊರತು ಎಂತಹ ಕಷ್ಟಗಳು ಬಂದರೂ ಅಷ್ಟೇಕೆ ಸಾವಿನ ದವಡೆಯಲ್ಲಿದ್ದರೂ ನಾನು ಅವನನ್ನು ಕರೆಯುವುದಿಲ್ಲ.

ಅಮೃತ್ ಬಜಾರ್ ಪತ್ರಿಕೆಯ ಸಂಪಾದಕ ಶಿಶಿರ್ ಕುಮಾರ್ ಘೋಷರು ಗಿರೀಶನ ಸ್ನೇಹಿತರು. ನಾಟಕ ಕ್ಷೇತ್ರದಲ್ಲಿ ಅವನಿಂದ ಆಗಬೇಕಾದ ಕೆಲಸ ಬಹಳವಿದೆಯಂಬುದು ಅವರ ನಂಬಿಕೆ. ಮತ್ತೆ ಮತ್ತೆ ಕಂಪನಿಯ ಕೆಲಸಕ್ಕೆ ಹೊರಕ್ಕೆ ಹೋಗುವುದೆಂದರೆ ಗಿರೀಶನ ಶಕ್ತಿಯ ವ್ಯಯ. ಅವರ ಪ್ರಭಾವದಿಂದಾಗಿ ಗಿರೀಶ್ ಬಾಗಲಪುರದ ಕೆಲಸವನ್ನು ಬಿಟ್ಟು ಕಲ್ಕತ್ತೆಗೆ ಬಂದ. ಪಾರ್ಕರ್ ಕಂಪನಿಯಲ್ಲಿ ಬುಕ್ – ಕೀಪರ್ ಆಗಿ ಸೇರಿಕೊಂಡ.

ಮತ್ತೆ ನಾಟಕದ ಕ್ಷೇತ್ರಕ್ಕೆ

ಗಿರೀಶ್ ಮತ್ತೆ ೧೮೭೫ರಲ್ಲಿ ಪುನಃ ಮದುವೆ ಮಾಡಿಕೊಂಡ ಮನೆಗೆ ಬೆಳಕು ಬಂದಂತಾಯಿತು. ಮನಸ್ಸಿಗೂ ಶಾಂತಿ ಮೂಡಿತು. ಹರಿದು ಹಂಚಿ ಹೋಗಿದ್ದ ಮನಸ್ಸು, ಯಾವುದಕ್ಕೂ ಬೇಸರ ಪಡುತ್ತಿದ್ದ ಮನಸ್ಸು ಮತ್ತೆ ಉತ್ಸಾಹದಿಂದ ನಾಟಕದ ಕಡೆ ಸಂಪೂರ್ಣ ಕೇಂದ್ರೀಕೃತವಾಯಿತು.

ಇಂಗ್ಲೆಂಡಿನ ರಾಜ ಏಳನೆಯ ಎಡ್ವರ್ಡ ಭಾರತ ದರ್ಶನಕ್ಕೆ ಕಲ್ಕತ್ತೆಗೆ ಬಂದಿದ್ದ. ಬಂಗಾಳಿ ಮನೆಯ ಅಂತಃಪುರಗಳು ಹೇಗಿವೆಯೆಂದು ನೋಡಲು ಅವನಿಗೆ ಕುತೂಹಲ. ಇದನ್ನು ವಿಡಂಬನಾತ್ಮಕವಾಗಿ ತೆಗೆದುಕೊಂಡು ಹೇಮಚಂದ್ರರು ಬಾಜೀಮಾರ್ ಎಂಬ ನಾಟಕವನ್ನೂ ಉಪೇನ್ ದಾಸ್ ಗಜದಾನಂದ ನಾಟಕವನ್ನು ಬರೆದರು. ಈ ನಾಟಕಗಳಿಗೂ ಗಿರೀಶನೇ ಹಾಡುಗಳನ್ನು ಬರೆದ. ಆದರೆ ಪೋಲೀಸರು ಈ ನಾಟಕವನ್ನು ಆಡಲು ಅನುಮತಿ ನೀಡಲಿಲ್ಲ. ಅಭಿನಯ, ನಿಯಂತ್ರಣ ಕಾನೂನನ್ನು ಜಾರಿ ಮಾಡಿದರು ಇಂಗ್ಲೀಷರು. ಈಗ ಇಚ್ಛೆ ಬಂದಂತೆ ನಾಟಕವಾಡುವ ಸ್ವಾತಂತ್ಯ್ರವಿಲ್ಲದ ಹಾಗಾಯಿತು.

ಗಿರೀಶನ ಕೈಯಲ್ಲಿ ವಂಗ ಕಾದಂಬರಿಕಾರ ಬಂಕಿಮಚಂದ್ರರ ಕಾದಂಬರಿಗಳು, ದೀನಬಂಧು ಮಿತ್ರರ ನಾಟಕಗಳು, ಮೈಕೇಲರ ಕಾವ್ಯಗಳೆಲ್ಲವೂ ರಂಗದ ಮೇಲೆ ಬಂದವು. ಇನ್ನು ಮುಂದೆ? ನಾಟಕವಾಡಬೇಕು, ಆದರೆ ನಾಟಕಗಳಿಲ್ಲವಲ್ಲ! ಗಿರೀಶ್ ತಾನೇ ನಾಟಕವನ್ನು ಬರೆಯಲು ಆರಂಭಿಸಿದ. ಅದೇ ಸಮಯದಲ್ಲಿ ನ್ಯಾಷನಲ್ ಥಿಯೇಟರ್ ನ ಮಾಲೀಕ ಪ್ರತಾಪಚಂದ್ ಗಿರೀಶನನ್ನು ತನ್ನ ಕಂಪನಿಯ ಮ್ಯಾನೇಜರ್ ಆಗುವಂತೆ ಬಿನ್ನವಿಸಿಕೊಂಡರು. ” ಎರಡು ದೋಣಿಗಳಲ್ಲಿ ಕಾಲಿಟ್ಟು ಹೋಗಲು ಸಾಧ್ಯವಿಲ್ಲ, ನೀವು ನಿಮ್ಮ ಪಾರ್ಕರ್ ಕಂಪನಿಯ ಕೆಲಸ ಬಿಟ್ಟು ನಮ್ಮ ಥಿಯೇಟರ್ ಗೆ ಒಂದು ನೂರು ರೂಪಾಯಿ ಸಂಬಳದ ಮೇಲೆ ಬನ್ನಿ” ಎಂದರು. ಆದರೆ ಪಾರ್ಕರ್ ಕಂಪನಿಯಲ್ಲಿ ಗಿರೀಶನ ಸಂಬಳ ನೂರ ಐವತ್ತು ರೂಪಾಯಿ, ಆದರೆ ಮನಸ್ಸೆಲ್ಲವೂ ನಾಟಕದ ಮೇಲೆ, ಕೊನೆಗೆ ಯೋಚಿಸಿ, ಕೆಲಸಕ್ಕಿಂತ ಕಲೆಯೇ ಹೆಚ್ಚು. ತನಗೆ ಪ್ರಿಯವಾದ ಕೆಲಸದಲ್ಲಿ ಸಂಬಳ ಐವತ್ತು ರೂಪಾಯಿ ಕಡಿಮೆಯಾದರೇನು ಎಂದು ನ್ಯಾಷನಲ್ ಥಿಯೇಟರ್ ನ ಮ್ಯಾನೇಜರ್ ಆಗಿ ಸೇರಿಕೊಂಡ.

ನ್ಯಾಷನಲ್ ಥಿಯೇಟರಿನಲ್ಲಿ

ಈ ಸಂಸ್ಥೆಯವರಿಗಾಗಿ ನಾಟಕಗಳನ್ನು ಬರೆಯುವುದು, ನಾಟಕವಾಡಿಸುವುದು, ಗೀತೆ ರಚನೆ ಮಾಡುವುದು, ಕಲಾವಿದರಿಗೆ ತರಬೇತಿ ನೀಡುವುದು, ರಂಗಸಜ್ಜಿಕೆ, ಪಾತ್ರಕ್ಕೆ ತಕ್ಕ ವೇಷ ಭೂಷಣಗಳ ಚಿಂತನೆ – ಮುಂತಾದ ಕೆಲಸಗಳಲ್ಲಿ ಗಿರೀಶ್ ಸಂಪೂರ್ಣ ತನ್ಮಯನಾದ, ತಾನು ಇಷ್ಟಪಟ್ಟ ಕೆಲಸ ಕೊನೆಗೂ ಸಿಕ್ಕಿತಲ್ಲ ಎಂಬ ಸ್ಫೂರ್ತಿಯಿಂದ ಹಗಲಿರುಳೂ ನಾಟಕಮಯವಾಯಿತು ಅವನ ಜೀವನ. ಅವನು ನಾಟಕಗಳನ್ನು ಬರೆಯಲಾರಂಭಿಸಿದ್ದು ೧೮೮೧ ರಲ್ಲಿ. ಅವನ ಮೊದಲ ನಾಟಕ ಮಾಯಾವತರು ಅಂದಿನಿಂದ ಅವನು ಸಾಯುವವರೆಗೂ ಅವನ ಲೇಖನಿಯಿಂದ ಐತಿಹಾಸಿಕ, ಸಾಮಾಜಿಕ, ಪೌರಾಣಿಕ, ಧಾರ್ಮಿಕ, ವಿಡಂಬನಾತ್ಮಕ ನಾಟಕಗಳನ್ನೇ ಅಲ್ಲದೆ ಕಾದಂಬರಿ, ಸಣ್ಣಕತೆಗಳು, ವಿಮರ್ಶೆ, ಪ್ರಬಂಧ, ಮುಂತಾದವುಗಳನ್ನು ಬರೆದ. ೧೮೮೧ ರಿಂದ ೧೯೧೨ ರವರೆಗೆ ಅವನು ಬರೆದ ನಾಟಕಗಳು ೭೬. ಅವುಗಳಲ್ಲಿ ವಿಲ್ವಮಂಗಲ. ಬುದ್ಧದೇವ ಚರಿತ, ಚೈತನ್ನಯಲೀಲಾ, ಪೂರ್ಣಚಂದ್ರ, ಪ್ರಫುಲ್ಲ, ಕರಿಯಬೆಟ್ಟ, ಭ್ರಾಂತಿ, ಶಂಕರಾಚಾರ್ಯ, ಛತ್ರಪತಿ ಶಿವಾಜಿ ಮುಂತಾದ ನಾಟಕಗಳು ಬಹಳ ಪ್ರಸಿದ್ಧವಾದವು. ಆಗ ಇಂಗ್ಲೀಷರ ಕೈಯಲ್ಲಿ ಭಾರತವಿದ್ದುದರಿಂದ ಅವರು ಗಿರೀಶ್ ಬರೆದ ಸಿರಾಜುದ್ದೌಲ, ಮೀರಕಾಸೀಮ್, ಛತ್ರಪತಿ ನಾಟಕಗಳನ್ನು ಆಡಲು ಅವಕಾಶ ಕೊಡಲಿಲ್ಲ. ರಾಷ್ಟ್ರೀಯ ಭಾವನೆಯನ್ನು ಪ್ರಚೋದಿಸುವ ನಾಟಕಗಳಾದ್ದರಿಂದ, ಓದಿದ ಜನ, ನೋಡಿದ ಜನ ಎಲ್ಲಿ ತಮ್ಮ ಮೇಲೆ ಬೀಳುವರೋ ಎಂಬ ಭಯದಿಂದ ನಾಟಕಗಳ ಹಸ್ತಪ್ರತಿಯನ್ನು ತಮ್ಮ ವಶಪಡಿಸಿಕೊಂಡರು. ಜನರ ಧಾರ್ಮಿಕ ಭಾವನೆಯನ್ನು, ರಾಷ್ಟ್ರೀಯ ಪ್ರಜ್ಞೆಯನ್ನು ಪ್ರಚೋದಿಸುವ ಕೆಲಸದಲ್ಲಿ ನಾಟಕ ಕ್ಷೇತ್ರದಲ್ಲಿ ಗಿರೀಶನಷ್ಟು ಕೆಲಸ ಮಾಡಿದವರು ಇನ್ನಾರು ಇಲ್ಲ.

ನ್ಯಾಷನಲ್ ಥಿಯೇಟರ್ ನವರೊಂದಿಗೆ ಭಿನ್ನಾಪ್ರಾಯ ಮೂಡಿ ಗಿರೀಶ್ ಸ್ಟಾರ ಥಿಯೇಟರ್ ಸೇರಿಕೊಂಡ. ಅದು ತನ್ನ ತನು – ಮನು ಧನಗಳನ್ನು ಧಾರೆಯೆರೆದ. ಕಲ್ಕತ್ತೆಯ ಇಂದಿಗೂ ಶಾಶ್ವತವಾಗಿ ಅದು ನಿಲ್ಲುವಂತೆ ಮಾಡಿದ. ಅದಕ್ಕೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ದಾನ ಮಾಡಿದ.

ರಾಮಕೃಷ್ಣ ಪರಮಹಂಸರ ದರ್ಶನ

ಹೀಗಿರುವಾಗ ಗಿರೀಶನ ಮನಸ್ಸು ನಿಧಾನವಾಗಿ ಆಧ್ಯಾತ್ಮಿಕ ಭಾವನೆಗಳಿಗೆ ಎಡಗೊಟ್ಟಿತ್ತು. ತನ್ನವರೆಲ್ಲರನ್ನೂ ಕಳೆದುಕೊಂಡು, ಯಾರೂ ತನಗೆ ಆಸರೆ ನೀಡುವವರಿಲ್ಲ ಎಂದಾಗ ಮನಸ್ಸು ಕಾಣದ ಯಾವುದೋ ಅಗೋಚರ ಶಕ್ತಿಯ ಬಗ್ಗೆ ಚಂತಿಸಲಾರಂಭಿಸಿತು. ಆ ಸಮಯದಲ್ಲಿ ಇಂಡಿಯನ್ ಮಿರರ್ ಎಂಬ ಪತ್ರಿಕೆಯಲ್ಲಿ ರಾಮಕೃಷ್ಣ ಪರಮಹಂಸರ ಬಗ್ಗೆ ಕೇಶವ ಚಂದ್ರಸೇನ್ ಬರೆದ ಲೇಖನವನ್ನು ಓದಿದ. ಆದರೂ ಅವನಿಗೆ ಇವುಗಳಲ್ಲಿ ನಂಬಿಕೆಯಲ್ಲ, ವಿಶ್ವಾಸವಿಲ್ಲ.

ಇಂತಹ ಸಂದರ್ಭದಲ್ಲಿ ಸುಮಾರು ೧೮೭೭ ರಲ್ಲಿ ರಾಮಕೃಷ್ಣರ ಪ್ರಥಮ ದರ್ಶನವಾಯಿತು. ದೀನಾನಾಥ ಬಸುವಿನ ಮನೆಯಲ್ಲಿ ಪರಮಹಂಸ ಯಾರೆಂದು ನೋಡಲು ಕುತೂಹಲದಿಂದ ಸಂಜೆ ಆ ಮನೆಗೆ ಹೋಗಿದ್ದಾನೆ. ಕತ್ತಲಾಗಿದೆ. ಯಾರೋ ದೀಪವನ್ನು ಹೊತ್ತಿಸಿ ರಾಮಕೃಷ್ಣರ ಮುಂದೆ ಇಟ್ಟುಹೋದರು. “ಏನು, ಕತ್ತಲಾಯಿತೇ?” ಎಂದರು ರಾಮಕೃಷ್ಣರು. ಅದನ್ನು ಕೇಳುತ್ತಿದ್ದಂತೆಯೇ ಇವರ ಡೋಂಗಿ ನೋಡು, ಮುಂದೆ ದೀಪ ಉರಿಯುತ್ತಿದೆ, ಆದರೂ ತಿಳಿಯುತ್ತಿಲ್ಲವೆ ಸಾಯಂಕಲವಾಗುತ್ತಿದೆ ಅಂತ ಎನ್ನುತ್ತಾ ಅಲ್ಲಿರುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದುಕೊಂಡು ಗಿರೀಶ್ ಹೊರಟು ಬಂದ.

ರಾಮಕೃಷ್ಣರೊಂದಿಗೆ ಎರಡನೇ ಭೇಟಿ-ಈ ಘಟನೆಯಿಂದ ಬಹಳ ವರ್ಷಗಳ ನಂತರ, ರಾಮಕೃಷ್ಣರ ಪರಮಪ್ರಿಯ ಶಿಷ್ಯನಾದ ಬಲರಾಮ ಬಸು ತನ್ನ ಮನೆಗೆ ರಾಮಕೃಷ್ಣರನ್ನು ಆಹ್ವಾನಿಸಿದ್ದ. ಅದರಂತೆಯೇ ಅವರನ್ನು ನೋಡುವ ಸಲುವಾಗಿ ತನ್ನ ಸುತ್ತಲಿನ ಜನರನ್ನೂ ಕರೆದಿದ್ದ. ಅವರಲ್ಲಿ ಗಿರೀಶನೂ ಆಹ್ವಾನಿತನಾಗಿದ್ದ. ಹೋಗುತ್ತಿದ್ದಂತೆಯೇ ಅವನಿಗೆ ಆಶ್ಚರ್ಯ, ಪರಮಹಂಸರು ಯೋಗಿಗಳು, ಯಾರೊಂದಿಗೂ ಮಾತನಾಡುವುದಿಲ್ಲ, ಯಾರಿಗೂ ನಮಸ್ಕಾರ ಮಾಡುವುದಿಲ್ಲ ಎಂಬ ಭಾವನೆಯಿತ್ತು ಗಿರೀಶನಿಗೆ, ಆದರೆ ಇಲ್ಲಿ ಬಂದ ಪ್ರತಿಯೊಬ್ಬರಿಗೆ ರಾಮಕೃಷ್ಣರು ಪ್ರಣಾಮ ಮಾಡುತ್ತಾ, ತನ್ನ ನಿಕಟ ಬಂಧುವೋ ಎಂಬಂತೆ ಮಾತನಾಡುತ್ತಿದ್ದಾರೆ. ಗಿರೀಶನಿಗೆ ಅಚ್ಚರಿಯಾಯಿತು. ಮನಸ್ಸು ಸ್ವಲ್ಪಸ್ವಲ್ಪವಾಗಿ ಅವರ ಬಗ್ಗೆ ಆಸಕ್ತಿ ವಹಿಸಿತು. ಆದರೆ ಸ್ನೇಹಿತರೊಬ್ಬರು, “ನಡಿ ಮತ್ತೇನು ನೋಡುತ್ತೀಯಾ?” ಎಂದಿದ್ದರಿಂದ ಗಿರೀಶ್ ಅವರೊಂದಿಗೆ ಹೋಗಲೇಬೇಕಾಯಿತು. ರಾಮಕೃಷ್ಣರೂ ಸಹ ಅವನ ಪರಿಚಯ ಮಾಡಿಕೊಂಡು ಅವನ ಹತ್ತಿರ ಅಳಿದಿರಲಿಲ್ಲ ದೇವರಲ್ಲಿ ಸಂಪೂರ್ಣವಾಗಿ ವಿಶ್ವಾಸ ಮೂಡಿರಲಿಲ್ಲ.

ರಾಮಕೃಷ್ಣರ ಭಕ್ತ

ಮೂರನೇ ಭೇಟಿ, ನಾಲ್ಕನೇ ಭೇಟಿಯ ನಂತರ ರಾಮಕೃಷ್ಣರ ಜೀವನ, ಅವರ ಉಪದೇಶಗಳು, ರಾಮಕೃಷ್ಣರೊಡನೆ ಇರುತ್ತಿದ್ದ ನರೇಂದ್ರ (ಸ್ವಾಮಿ ವಿವೇಕಾನಂದ) ಡಾಕ್ಟರ್ ಮಹೇಂದ್ರಲಾಲ್ ಸರ್ಕಾರ್ ಮುಂತಾದವರ ಗೆಳೆತನ, ಅವರೊಡನೆ ತರ್ಕ-ವಿಚಾರ ವಿನಿಮಯ ಮುಂತಾದವುಗಳಿಂದ ಗಿರೀಶನ ಮನಸ್ಸು ರಾಮಕೃಷ್ಣರಲ್ಲಿ ನೆಲೆಸಿತು. ರಾಮಕೃಷ್ಣರೂ ಸಹ ನಾಟಕ ನೋಡುವುದರಲ್ಲಿ ಬಹಳ ಆಸಕ್ತರಾಗಿದ್ದರು. ಗಿರೀಶ್ ಬರೆದು ಆಡಿಸಿದ ಚೈತನ್ಯಲೀಲಾ, ಪ್ರಹ್ಲಾದ ಚರಿತ್ರೆ, ದಕ್ಷಯಜ್ಞ ಮುಂತಾದ ನಾಟಕಗಳೆಲ್ಲವನ್ನು ರಾಮಕೃಷ್ಣರು ನೋಡಿ ಮೆಚ್ಚಿಕೊಳ್ಳುತ್ತಿದ್ದರು. ಗಿರೀಶ್ ರಾಮಕೃಷ್ಣರಿಗೆ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಂಡ ನಂತರ ಅವರ ಉಪದೇಶಗಳನ್ನು ನಾಟಕಗಳಲ್ಲಿ ಅಳವಡಿಸಲಾರಂಭಿಸಿದ. ರಾಮಕೃಷ್ಣರ ಉಪದೇಶಗಳ ಸ್ವೂರ್ತಿಯಿಂದ ಎಷ್ಟೋ ನಾಟಕಗಳನ್ನು ಬರೆದ. ಕಲ್ಲು ನೂರು ವರ್ಷಗಳ ಕಾಲ ನೀರಲ್ಲಿ ಮುಳುಗಿದ್ದರೂ ಅದರೊಳಕ್ಕೆ ನೀರು ಹೋಗುವುದಿಲ್ಲ. ಅದರಂತೆಯೇ ಭಕ್ತನಾದವನು ದುಃಖ, ಕಷ್ಟಗಳು ಎಷ್ಟು ಬಂದರು ಹತಾನಾಶನಾಗುವುದಿಲ್ಲ ಎಂಬ ಉಪದೇಶದ ಫಲವೇ ಪೂರ್ಣಚಂದ್ರ ನಾಟಕ ಕುರುಡು ನಂಬಿಕೆ ಎನ್ನುತ್ತೀರಲ್ಲಾ, ಅದೇನು ಹೇಳು? ನರೇಂದ್ರನನ್ನು ರಾಮಕೃಷ್ಣರು ಕೇಳಿದರು. ನಂಬಿಕೆಗಳೆಲ್ಲವೂ ಕುರುಡೇ, ನಂಬಿಕೆಗೆ ಕಣ್ಣು ಇರುತ್ತದೆ ಎಂದುಕೊಂಡಯೇನು? ನಂಬಿಕೆ ಇರಬೇಕು, ಇಲ್ಲ ಜ್ಞಾನವಿರಬೇಕು,” ಇದರ ಸ್ಫೂರ್ತಿಯಿಂದ ಬರೆದಿದ್ದು ಕರಿಯ ಬೆಟ್ಟ ನಾಟಕ. ನಂಬಿಕೆಯ ಬಲದಿಂದಲೇ ಭಗವಂತನ ದರ್ಶನ ಎಂಬ ಉಪದೇಶದಿಂದ ಸ್ಫೂರ್ತಿಯಾದ ನಾಟಕ ಜನಾ ಎಂಬುದು. ಕಾಲಿಗೆ ಒಂದು ಮುಳ್ಳು ಚುಚ್ಚಿಕೊಂಡರೆ ಮತ್ತೊಂದು ಮುಳ್ಳನ್ನು ತೆಗೆದುಕೊಂಡು ಆ ಮುಳ್ಳನ್ನು ತೆಗೆದು ಅನಂತರ ಎರಡು ಮುಳ್ಳುಗಳನ್ನು ಬಿಸಾಡಬೇಕು. – ಇದರ ಉಪದೇಶದಿಂದ ಬಂದ ನಾಟಕ ಕನಸಿನ ಹೂವು ಎಂಬುದು. ಈ ರೀತಿ ಅನೇಕ ನಾಟಕಗಳನ್ನು ಬರೆದ. 

ದೇವರಲ್ಲಿ ನಂಬಿಕೆ ಇಲ್ಲದಿದರೆ ಸಾವಿನ ದವಡೆಯಲ್ಲಿದ್ದರೂ ಅವನನ್ನು ಕರೆಯುವುದಿಲ್ಲ

ಪ್ರಫುಲ್ಲ ಎಂಬ ನಾಟಕದಲ್ಲಿ ಗಿರೀಶ್ ಯೋಗೇಶನ ಪಾತ್ರವನ್ನು ವಹಿಸಿದ್ದಾನೆ. ಯಾರೋ ಒಬ್ಬರು, “ಒಂದು ನಾಟಕ ಬೇಕಿತ್ತು” ಎಂದರು. ಕೊಡುತ್ತೇನೆ” ಎಂದ ಗಿರೀಶ್, “ಯಾವಾಗ?” ಎಂದರೆ “ಈಗಲೇ” ಎಂದು “ಕಾಗದ  ಲೇಖನಿಗಳನ್ನು ತೆಗೆದುಕೊಳ್ಳಿ, ಹೇಳುತ್ತಾ ಹೋಗುತ್ತೇನೆ ಬರೆದುಕೊಳ್ಳಿ” ಎಂದ ಮೈಮೇಲೆ ಯೋಗೇಶನ ಪಾತ್ರದ ವೇಷ – ಭೂಷಣಗಳು, ನಾಟಕದಲ್ಲಿ ತನ್ನ ದೃಶ್ಯ ಬಂದಾಗ  ರಂಗದ ಮೇಲೆ ಸುಲಲಿತವಾಗಿ ಅಭಿನಯಿಸುವುದು ದೃಶ್ಯದೃಶ್ಯದ ನಡುವೆ ಹೊಸ ನಾಟಕವನ್ನು ಬರೆಸುವುದು. ಮೂರು ಗಂಟೆಯ ಅವಧಿಯಲ್ಲಿ ಮಣಿಹರಣ ನಾಟಕ ಸಿದ್ಧವಾಗಿಬಿಟ್ಟಿತು!

ದಿನ ಕಳೆದಂತೆ ಗಿರೀಶ್ ರಾಮಕೃಷ್ಣಮಯವಾದ, ಸದಾ ಸರ್ವದಾ ಅವರದೇ ಚಿಂತೆ. ಅವರು ನುಡಿದ ಉಪದೇಶಗಳ ನೆನಪುಗಳು, ಅವರ ಶಿಷ್ಯರ ಸಹವಾಸ, ಜೊತೆಗೆ ರಾಮಕೃಷ್ಣರ ಆಶೀರ್ವಾದ, ಶ್ರೀಮಾತೆ ಶಾರದಾದೇವಿಯ ಮಾತೃಪ್ರೇಮ ಇವೆಲ್ಲವೂ ಅವನನ್ನು ಪಕ್ವವನ್ನಾಗಿ ಮಾಡಿತು. ನಾಸ್ತಿಕ ಪರಮದೈವಭಕ್ತಾನಾದ. ಶಾಂತನೂ ಸರಳನೂ ಆದ. ತನ್ನ ಜೀವನದ ಸಂಪೂರ್ಣ ಅಧಿಕಾರವನ್ನು ರಾಮಕೃಷ್ಣರಿಗೆ ಒಪ್ಪಿಸಿದ. ರಾಮಕೃಷ್ಣರೇ ಹೇಳುತ್ತಿದ್ದರು ನರೇನ್ ನನ್ನ ದೊಡ್ಡ ಮಗ, ಗಿರೀಶ್ ನನ್ನ ಚಿಕ್ಕ ಮಗ” ಗಿರೀಶ್‌ನ ಕಡೆ ಬೆರಳು ತೋರಿಸುತ್ತಾ ರಾಮಕೃಷ್ಣರು, ಗಿರೀಶ್ ವಿಶ್ವಾಸ, ನಂಬಿಕೆಗಳ ಸಾಕಾರಮೂರ್ತಿ ಎನ್ನುತ್ತಿದ್ದರು.ಇತರರಿಗೆ ವಿಶ್ವಾಸ ನಂಬಿಕೆಗಳ ಉಪದೇಶ ನೀಡುವಾಗಲೆಲ್ಲಾ ಗಿರೀಶನನ್ನು ನೋಡು ಎನ್ನುತ್ತಿದ್ದರು.

ವಿವೇಕಾನಂದರ ಗೆಳೆಯ

ಗಿರೀಶನಿಗೂ ವಿವೇಕಾನಂದರಿಗೂ ಪರಮ ಗೆಳೆತನ ವಿವೇಕಾನಂದರಿಗೆ ಗಿರೀಶನೊಡನೆ ವಾದ ಮಾಡುವುದೆಂದರೆ ಬಹಳ ಇಷ್ಟ. ಅಮೆರಿಕೆಯಲ್ಲಿ ಜಯಭೇರಿ ಬಾರಿಸಿ ಬಂದನಂತರ ಗಿರೀಶನನ್ನು ಕಂಡೊಡನೆ, ” ನಿನ್ನ ರಾಮಕೃಷ್ಣರನ್ನು ಸಮುದ್ರದ ಆಚೆ ಹಾಕಿ ಬಂದಿರುವೆ” ಎನ್ನುತ್ತಿದ್ದಂತೆ ಗಿರೀಶ್ ಸ್ವಾಮೀಜಿ ಗಾಬರಿಗೊಂಡರು, ” ಇದೇನು ಮಾಡುತ್ತಿದ್ದೀಯೆ? ಇದರಿಂದ ನನಗೆ ಕೆಡುಕಾಗುತ್ತೆ” ಎಂದವರೇ ಸ್ವಾಮೀಜಿ ಗಿರೀಶನಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು.

ತೆರೆ ಇಳಿಯಿತು.

೧೯೧೧ ನೇ ಇಸವಿ ಶ್ರಾವಣ ಮಾಸ, ಶನಿವಾರ ಜೋರಾಗಿ ಮಳೆ ಬರುತ್ತಿದೆ. ಗಿರೀಶನ ಬಲಿದಾನ ನಾಟಕ ಪ್ರದರ್ಶನ. ಗಿರೀಶನೇ ಕರುಣಾಮಯನ ಪಾತ್ರದಲ್ಲಿ. ಆಗ ಗಿರೀಶನಿಗೆ ಉಬ್ಬಸ ಕಾಯಿಲೆ. ಬಹಳ ನರುಳುತ್ತಿದ್ದಾನೆ. ಕರುಣಾಮಯನ ಪಾತ್ರದಲ್ಲಿ ನಾಟಕದ ಬಹಳ ಭಾಗ ಎದೆಯ ಮೇಲೆ ಇರುವಂತಿಲ್ಲ. ಚಳಿ ಹೆಚ್ಚಾದರೆ ಕಾಯಿಲೆ ನ್ಯುಮೋನಿಯಾಗೆ ತಿರುಗಬಹುದು ಎಂದು ಹೆದರಿ ಅವನ ಹಿತೈಷಿಗಳೆಲ್ಲರೂ ಹೇಳಿದರು, ಬೇಡಿ, ಇವತ್ತು ನಾಟಕ ಬೇಡ. ಜನರಿಗೆ ಟಿಕೆಟ್ ನ ಹಣವನ್ನು ಹಿಂತಿರುಗಿಸೋಣ. ನೀವು ಮಾತ್ರ ಅಭಿನಯಿಸಬೇಡಿ,” ಆದರೆ ಗಿರೀಶ್ ಹಿಡಿದ ಪಟ್ಟು ಬಿಡಲಿಲ್ಲ. ಗಿರೀಶನ ಕೀರ್ತಿಯಿಂದಾಗಿ ಜನರು ಥಿಯೇಟರಿನಲ್ಲಿ ತುಂಬಿದ್ದಾರೆ ಅಂದು ಗಿರೀಶ್ ಅವೋಘವಾಗಿ ಅಭಿನಿಯಿಸಿದ, ಅದೇ ಅವನ ಕೊನೆಯ ಅಭಿನಯ.

ನೀನು ನಾಟಕಗಳನ್ನು ಬರೆದು, ಆಡಿ ಲೋಕ ಶಿಕ್ಷಣಕ್ಕಾಗಿ ನಿನ್ನ ಪ್ರತಿಭೆಯನ್ನು ಉಪಯೋಗಿಸು ಎಂದಿದ್ದರು ರಾಮಕೃಷ್ಣರು. ತನ್ನ ಮೈಯಲ್ಲಿ ಕಸುವಿರುವವರೆಗೂ ಅವರ ನುಡಿಯನ್ನು ಅನುಸರಿಸಿದ ಗಿರೀಶ್. ಸಾಯುವ ಮುನ್ನ ಕೊನೆಯ ಮೂರು ದಿನಗಳ ಕಾಲ ನಿದ್ರೆಯಿಲ್ಲದೆ ಕಳೆದ. ಸದಾ ರಾಮಕೃಷ್ಣರ ಚಿಂತನೆ. ಕೇವಲ ರಾಮಕೃಷ್ಣ, ರಾಮಕೃಷ್ಣ ಜಪ. ೧೯೧೨ರ ಫೆಬ್ರುವರಿ ೮ ರಂದು ಗುರುವಾರ ರಾಮಕೃಷ್ಣರ ಶಿಷ್ಯರೆಲ್ಲರೂ ಗಿರೀಶನ ಬಳಿ ನೆರೆದಿದ್ದಾರೆ. ಸ್ವಾಮಿ ಶಾರದಾನಂದರು ಕೀರ್ತನೆಯನ್ನಾರಂಭಿಸಿದರು. ಪ್ರಭೂ, ಶಾಂತಿಯನ್ನು ನೀಡು, ಶಾಂತಿಯನ್ನು ನೀಡು ಎನ್ನುತ್ತಾ ಮೂರು ಬಾರಿ ರಾಮಕೃಷ್ಣರ ನಾಮಸ್ಮರಣೆ ಮಾಡಿ ರಾತ್ರಿ ೧-೨೦ ಕ್ಕೆ ವಂಗ ದೇಶದ ಮಹಾಕವಿ. ಮಹಾ ನಾಟಕಕಾರ, ರಾಮಕೃಷ್ಣರ ಪ್ರಿಯಭಕ್ತ, ಸ್ವಾಮಿ ವಿವೇಕಾನಂದರ ಪರಮ ಮಿತ್ರ ಗಿರೀಶ್ ಚಂದ್ರ ಘೋಷ್ ಕೊನೆಯುಸಿರೆಳೆದ.

ರಾಮಕೃಷ್ಣರು ಹೇಳುತ್ತಿದ್ದರು. ನೀನು ಪವಿತ್ರನಾಗಿರುವೆ, ನಿನ್ನದು ವಿಶ್ವಾಸಭಕ್ತಿ, ನಂಬಿಕೆ ಮೂಡಿದರಾಯಿತು. ಅದಕ್ಕಿಂತ ಬೇರೆಯದು ಇನ್ನಾವುದು ಇಲ್ಲ.