ತೆಂಕನಾರತದಿಂದೆ ತೆಂಕನಬಾರತದಿಂದೆ
ಪಾಂಡವರ ದಂಡೇ ತಿರಗದೆ | ಅಂದೇಳಿ
ಗಿಜಗಾಗೇ ಕನಸು ಒಲೀದಾವೆ

ಗಿಜಗಾಗೇ ಕನ್ಸು ಒಲ್ವದ್ನು ಗಿಜಗನು
ಪನ್ನೀರಲಿ ಮೊಕವಾ ತೊಳದಾನೇ | ಗೀಜಗನು
ಮಾಳೂಗೀ ಒಳಗೆ ನೆಡದಾನೇ | ಗೀಜಗನು
ಅಯಾ ಕೊಂದೀಳ್ಯ ಮೆಲೋವಾನೇ

ಎಲಿಯೊಂದ್ ತಿಂದಾನೆ ರಜವಲ್ಲೆ ಉಗಳಾನೆ
ಮಾಳೂಗೀ ಒಳಗೆ ನೆಡದಾನೆ | ಗಿಜಗನು
ಅಟ್ಟತ್ತೀ  ಪೆಟ್ಟಗೀಯಾ ತೆಗದಾನೇ | ಗಿಜಗನು

ಮೆಟ್ಟೀ ಬೀಗವಾ ಕರೀದಾನೆ | ಗಿಜಗನು
ಮುಚ್ಚೀಲ ತೆಗದೇ ಕಡ-ಗಿಟ್ಟೆ | ಗಿಜಗನು
ಪಟ್ಟೇ ಜೋತರವ ನರದ್ದುಟ್ಟೇ | ಗಿಜಗನು

ಮುತ್ತನ ಮುಂಡಸನಾ ತಲಗೇ ಸುತ್ತೇ | ಗಿಜಗನು
ಪಟ್ಟೇ ಜೋತರವಾ ಹೊಗಲೀಗೆ | ಇಟ್ಟೀಗಂಡೇ
ಕೋಲು ನೆವಳ ಇಳೋಲಿಟ್ಟೇ | ಗಿಜಗನು

ಬಣ್ಣ ದೆಲವಸ್ತ್ರ ತಡದಾನೆ | ಗಿಜಗನು        
ಪೆಟ್ಟಗೀ ಬಾಯಲ್ಲೇ ಮಡಗಾನೇ | ಗಿಜಗನು
ಮಾಳಗ್ಗಿಂದೆರಗೇ ಬರೋವಾನೆ | ಗಿಜಗನು

ರಾಜಂಗ್ಳ ಮೆಟ್ಟಾ ಇಳೀದಾನೇ | ಗಿಜಗನು
ರಾಜೋ ಬೀದಿಗಾಗೇ | ಗಿಜಗನು
ಅಕ್ಕನರ ಮನೆಗೇ ನೆಡದಾನೆ | ಗಿಜಗನು

ಹೋಗಬಾಗಲ್ಲೇ ನಿಲೋವಾನೇ
ಹೋಗೀ ಬಾಗಲ್ಲೇ ನಿಲ್ವದ್ನು ಬೋನ್ಪತೀ
ತನ್ನಾ ರೂಪತಿಯಾ ದೆನಿದೂರೇ | ನಂದಾಳೆ

“ತಡೆಯೆ ಚಂಬಲಗೆ  ಉದಕಾವೇ ”

“ತನ್ನಾ ಅಣ್ಣಾನಲ್ಲ ತನ್ನಾ ತಮ್ಮನಲ್ಲಾ
ನಾಯಾರೀಗಂದುದಕಾ ಕೊಡಬೇಕೆ |

ನನ್ನಾ ಅಣ್ಣಾ ಉಂಡೀ ನನ್ನ ಸುಣ್ಣಾ ತಿಂದಿ.
ತಾನೇಳಿದ ಮಾತಾ ಸಲೀಸ್ಲಾ |
ತಾನೇಳಿದ ಮಾತಾ ಸಲೀಸದ ಇದ್ದರೆ

ಕಟ್ಕಣೆ ಪಂಜರದಾ ಅರಮನೆ | ಅಂಬುದ್ನು
ಮುತ್ನ ಕಣ್ಣೀರಾ ಸೆಡೀದಾಳೆ | ರೂಪತಿ
ತಡದಾಳೇ ಚಂಬಗಲೇ ಉದಕಾವೇ |ವ| ರೂಪತಿ
ಗಿಜಗಾಗೇ ಉದಕಾ ಕೊಡೋವಾಳೇ | ಗಿಜಗನು
ಕಾಲೂ ಸಿರಿಮೊಕವಾ ತೊಳದಾನೆ | ಗಿಜಗನು

ಮಾಳೂಗೀ ಒಳಗೇ ನೆಡದಾನೆ | ಗಿಜಗನು
ತೂಗು ಮಂಚದಲೆ ಕುಳೋತಾನೆ
ತೂಗು ಮಂಚದಲೆ ಕುಳುವುದ್ನು ಬೊನ್ಪತ್ತಿ
ಮಾಳೂಗೀ ಒಳಗೆ ನೆಡದಾಳೇ

ಆಯುಳ್ಳ ಹಣ್ಣಡಕೆ ಸೋಯಿಸಿದ ಬೆಳಿಎಲೆ
ಹಾಲಿನಲಿ ಬೆಂದಾ ತೆನೆಸುಣ್ಣಾ | ತಡಕಂಡೆ
ಮಾಳಗ್ಗಿಂದೆರಗೇ ಬರೋವಾಳೆ | ಬೋನ್ಪತೀ

ಗಿಜಗನೊಡನೋಗೆ ಕುಳತಾಳೆ | ಬೊನ್ಪತೀ
ಗಿಜಗಗೊಂದೀಳ್ಯ ಕೊಡೋವಾಳೆ | ಬೊನ್ಪತೀ
ತಾನೊಂದೀಳ್ಯವಾ ಮೆಲೋವಾಳೆ | ಬೊನ್ಪತೀ
ಅಕ್ಕಾ ಕೊಟ್ಟೀಳ್ಯಾ ತಟ್ಟಾನೆ ತಡ್ದಾನೆ.

ಆಯಾಕೊಂದೀಳ್ಯ ಮೆಲೋವಾನೇ
ಎಲಿಯೊಂದ್ ತಿಂದಾನೆ ರಜವಲ್ಲೆ ಉಗಳಾನೆ
ಮೆಯ್ಯ ಮರುತದಲ್ಲೇ ಒರುಗಾನೆ
ಮಯ್ಯ ಮರುತದಲ್ಲೆ ಒರಗ್ವದ್ನು ಬೋನ್ಪತ್ತಿ
ತನ್ನಾ ರೂಪತಿಯೆ ದೆನಿದೂರೇ

ಎಂದೂ ಕರದಮಲ್ಲ ಬಂದಾಳೇ ರೂಪತೀ
ನಿಂದಾಳೆ ಬೋನ್ಪತೀಯಾ ಒಡನಲ್ಲಿ| ನಿಂದೀಕಂಡೇ
ಏನು ಕಾರಣತಿ ಕರದೀಯೋ

ಕರದಂ ಕಾರ್ಯವಿಲ್ಲ ಕಿರಿದುಂಬೆಸರಸಯ್ಯೆ
ಹೋಗಿ ಗಿಜಗನಾ ನೆಗದ್ ಬಾರೆ
“”ನನ್ನಾ ಅಣ್ಣಾನಲ್ಲಾ ನನ್ನ ತಮ್ಮನಲ್ಲ
ಯಾರಂದೀ ತಾನೂ ನೆಗಿಯಲೆ”

ನನ್ನ ಅನ್ನಾ ಉಂಡೀ ನನ್ನ ಸುಣ್ಣಾ ತಿಂದೀ
ತಾನೇಳಿದ ಮಾತಾ ಸಲೀಸಲಾರ್ಯ
ತಾನೇಳಿದ ಮಾತಾ ಸಲೀಸದೇ ಇದ್ದರೆ
ಕಟ್ಕಣೆ ಪಂಜರದಾ ಅರಮನೆ

ಒಬ್ಬರ ಮಲ್ಲಿ ಇರುವುದು ಅತೀ ಕಟ್ಟ
ಹೇಳೀದೂಳಗವಾ ಸಲ್ಲಸಬೇಕೆ
ಹೇಳೀದೂಳಗವಾ ಸಲಿಸಾದೆ ಇದ್ದಾರೆ
ಕಟ್ಗಂಬೇಕೆ ಪಂಜರದಾ ಅರಮನೆ- ಅಂದ್ ರೂಪತಿ

ಮುತ್ನ ಕಣ್ಣೀರಾ ಸೆಡೀದಾಳೆ | ರೂಪತೀ
ಹೋಗೀ ಗಿಜಗನಾ ನೆಗದಾಳೆ
ಹೋಗಗೀ ಗಿಜಗನ ನೆಗ್ವದ್ನು ಗಿಜಗನು
ಮಿಯ್ಯಾ ಮುರುದೆದ್ದೇ ಕುಳತಾನೆ ಗೀಜಗನು
ಆಗೊಂದು ಮಾತಾ ನುಡೀದಾನೆ

“ಅಕ್ಕಾ ನಿನ್ ಮಲ್ಲಿ ಬಾಗ್ಲ ಸದೀ ತೆಗ್ವಳು
ಸೂಳಿಯೋ ಆಕೀ ಗರತೀಯೋ| ಅಕ್ಕಾ ಕೇಳೇ
ಅಕೀ ಮೆನ್ ನನಗೆ ಮನಸಾದೋ | ಅಕ್ಕಾ ಕೇಳೇ
ಆಕೀ ನಮ್ಮನೆಗೆ ಕಳಗೀಸೇ ”

“ತಮ್ಮಾ ನನ್ಮಲ್ಲಿ ಬಾಗ್ಲ ಸದೀ ತೆಗ್ವಳು
ಸೂಳ್ಯಲ್ವೋ ಆಕೀ ಗರತೀಯೋ | ತಮ್ಮಾ ಕೇಳೋ
ಆಕೀಗಯ್ವರು ಪುಲೀಸರೋ | ರು | ಕೇಳ್ದರೆ
ಕೊಚ್ಚರೋ ನಿನ್ನಾ ಕಡವರೋ

ಕೊಲ್ಲದ್ರ ಕೊಲ್ಲಸ್ ಗಂಬೆ ಕಡ್ದ್ರ ಕಡಿಸ್ ಗಂಬೆ
ಹೊಡೆವ ಜಣಗಳ ಜಯವಂಬೆ | ಅಕ್ಕಾ ಕೇಳೇ
ಆಕೀ ನಮ್ಮನಗೇ ಕಳಗೀಸೇ | ಅಂದೇಳೇ
ಕೂತಾ ಮಂಚವಾ ಜಡದೆದ್ದೆ ಗಿಜಗನು

ತನ್ನಾ ಅರಮನೆಗೇ ನೆಡದಾನೇ
ತನ್ನಾ ಅರಮನೆಗೇ ನೆಡವದ್ನು ಬೋನ್ಪತೀ
ಆಗೊಂದು ಮಾತಾ ನುಡೀದಾಳೇ
ಆಗೊಂದು ಮಾತಾ ಏನಂದೀ ನುಡಿದಾಳೇ
ಹೋಗ್ಬಾರೇ ಗಿಜಗನಾ ಅರಮನೆಗೆ

ಪಟ್ಟಿ ಉಟ್ಕಣೆ ಮುತ್ತಿನ ಬೊಟ್ಟಿಟ್ಕಣೆ
ಗಟ್ಟೂ ಮಲ್ಲುಗಿಯಾ ಮುಡ್ಕಣೆ | ರೂಪತಿ
ಗಟ್ಟೂ ಬಟ್ಟಲವಾ ತಡಕಣೆ |
ಹೋಗ್ಬಾರೇ ಗಿಜಗನ ಅರಮನೆಗೆ

“ನನ್ನಾ ಅಣ್ಣನಲ್ಲಾ ನನ್ನಾ ತಮ್ಮನಲ್ಲಾ
ನಾಯಾರಾ ಮನಿಗೇ ನೆಡಿಯಲೇ”

“ನನ್ನಾ ಅನ್ನಾ ಉಂಡೀ ನನ್ನಾ ಸುಣ್ಣಾ ತಿಂದೀ
ತಾನೇಳಿದ ಮಾತಾ ಸಲೀಸ್ ಲಾರ್ಯಾ
ತಾನೇಳಿದ ಮಾತಾ ಸಲೀಸದೇ ಇದ್ದರೆ
ಕಟ್ಕಣೆ ಪಂಜರದಾ ಅರಮನೆ | ಅಂಬುದ್ನು

ಒಬ್ಬರ ಮಲ್ಲಿ ಇರುವುದು ಅತೀ ಕಟ್ಟ
ಹೇಳಿದುಳಗವಾ ಸಲಿಸಬೇಕೆ
ಹೇಳಿದುಳಗವಾ ಸಲಿಸದೇ ಇದ್ದರೆ
ಕಟ್ಕಂಬೇಕೆ ಪಂಜರದಾ ಅರಮನೆ | ಅಂದೇಳಿ

ಮುತ್ತನ್ನ ಕಣ್ಣೀರ ಸೆಡೀದಾಳೆ | ರೂಪತೀ
ಮಾಳೂಗೀ ಒಳಗೇ ನೆಡೀದಾಳೆ
ಪಟ್ಟೀ ಉಟ್ಟಾಳೆ ಮುತ್ನ ಬಟ್ಟಿಟ್ಟಾಳೆ

ಗಟ್ಟೋ ಮಲ್ಲುಗೀಯಾ ಮುಡೀದಾಳೆ | ರೂಪತಿ
ಗಟ್ಟೋ ಬಟ್ಟಲೂವಾತಡವಾಳೇ | ರೂಪತಿ
ಮಾಳಗ್ಗಿಂದೆರಗೇ ಬರೋವಾಳೇ | ರೂಪತಿ
ರಾಜಂಗ್ಳ ಮೆಟ್ಟಾ ಇಳೀದಾಳೇ | ರೂಪತಿ
ರಾಜಬೀದಿಗಾಗೇ ನೆಡದಾಳೆ | ರೂಪತಿ

ಗೋವ್ನ ಗುಡಿಗಾಗೇ ನೆಡದಾಳೇ
ಗೋವ್ನ ಗುಡಿಮೆನೆ ಗೋವ್ ಕಾವೂ ಮಕ್ಕಳ್ರಾ
ಯಾವ್ದೋ ಗಿಜಗನಾ ಅರಮನೆ

ಅಯ್ಯೋ ನನ್ನಮ್ಮಾ ನೀವಿನ್ನು ಅರಿಯಾರಾ
ಇದು ವೀಗ ಗಿಜಗನಾ ಅರಮನೆ | ಅಂದೇಳೇ
ಬಂತೋ ಗಿಜಗನಾ ಕಿರೀ ಮಡದೀ |
ತೋಳೋ ತೊಡಿ ಹೊಯ್ದೇ ನೆಗೀಯಾಡೇ

ತೋಳೋ ತೊಡಿಹೊಯ್ದೇ ನೆಗಿಯೊಡ್ವದ್ನು ರೂಪತಿ
ಕೆಯ್ಯ ಗೆದ್ದಿ ಗಾಗೇ ನೆಡೇದಾಳೇ
ಕೆಯ್ಯ ಗೆದ್ದಿಲಿ ಕೆಯ್ ಕೊವ್ವ ಹೊಲಿಯರೆ
ಯಾವ್ದೋ ಗೀಜಗನಾ ಅರಮನೆ

ಅಯ್ಯೋ ನನ್ನಮ್ಮಾ ನೀವಿನ್ನು ಅರಿಯಾರಾ
ಇದುವೀಗ ಗಿಜಗನಾ ಅರಮನೆ | ಅಂದೇಳಿ
ತೋಳು ತೊಡಿ ಹೊಯ್ದೇ ನೆಗೀಯಾಡಿ | ಡ್ವ| ದ್ನು ರೂಪತಿ

ಹೋಗಾಳೆ ಗಿಜಗನಾ ಅರಮನೆಗೇ | ರೂಪತೀ
ಹೋಗೀ ರಾಜಂಗ್ಳಾ ನೆಗೆದತ್ತೆ | ರೂಪತಿ
ಹಿತ್ಲಕಣಕನ ಬಾಗಲಗೇ ನೆಡದಾಳೆ | ರೂಪತಿ

ಗಿಜಗನೊಡನೋಗೇ ನಿಲೋವಾಳೇ
ಗಿಗಜನೊಡನೋಗೇ ನಿಲ್ವದ್ನು ಗಿಜಗನು
ಆಗೊಂದು ಮಾತಾ ನುಡೀದಾಳೆ

ಪೆಟ್ಟೋಗೀ ಒಳಗೆ ಬೇಕಾದ ಪಟ್ಟದೇ
ಉಟ್ಕಣೆ ರೂಪತ್ತೀ ಒಡ್ನೆ ಬಾರೇ
ಪೆಟ್ಟೋಗೀ ಒಳಗೆ ಬೇಕಾದ ಚಿನ್ನದೆ
ಇಟ್ಕಳೆ ರೂಪತಿ | ಒಡ್ನೆ ಬಾರೇ | ಅಂದೇಳಿ
ಹಿಡಿದಾನೇ ಬಳಿಯಾ ನಳಿತೋಳಾ

ಹಿಡ್ದಾ ನಳೀತೋಳಾ ಒಪ್ಪದಲ್ ತಪ್ಪಸ್ ಗಂಡೇ
ಹಿತ್ಲಕಣಕ್ನ ಬಾಗ್ಲದಾಗೆ ಹೊರೋಟಾಳೇ | ರೂಪತಿ
ಗುರುರಾಯರನರಮನೆಗೇ ನೆಡದಾಳೇ | ರೂಪತಿ
ದರುಮರಿದ್ದಲ್ಲೇ ನೆಡದಾಳೇ | ರೂಪತಿ
ಲಾಗೊಂದು ಮಾತಾ ನುಡೀದಾಳೇ

“ಹೂಂಗಾ ಕೊವ್ವರಿ ದೆವರಿಗೆ ಅ (ಹ) ರಸ್ಸವ್ವರೀ
ದೆ ಪೂಜ್ಯಕೇ ಇರವರಿ | ದೆವಾರೆ
ನಿಮ್ಹಿಂಡರ ಪಂತಾ ನಿಮಗಿಲ್ಲ”

“ಅಯ್ವರ್ರಾ ಮಡದೀ ಇಲ್ಲೆರಿಗ್ ಹೇಳೀತೇ
ಹೋಗೇಳೇ ನಿನನಲ್ಲ ಅರಜಿಣಗೇ
ಅಟ್ಟಂಬಾ ಮಾತಾ ಕೇಳಾಳೆ ರೂಪತಿ
ಮುತ್ತನ ಕಣ್ಣೀರಾ ಸೆಡೀದಾಳೇ | ರೂಪತೀ
ಬರ್ವಾ ಸಾಲೀಗೇ ನೆಡದಾಳೆ | ರೂಪತೀ

ಅರ್ಜಿಣ್ಟಿದ್ದಲ್ಲಗೇ ನೆಡದಾಳೆ
ಮಕ್ಕಳಿಗ್ ಒರೆಸ್ವರಿ ಮಕ್ಕಳಿಗ್ ಕಲಸ್ವರಿ
ಬರವಾ ಸಾಲ್ಯಲ್ಲೇ ಇರವರೀ | ದೆವಾರೆ
ನಿಮ್ಮಂಡರ ಪಂತಾ ನಿಮಗಿಲ್ವ

ನಮ್ಮಯ್ವರ್ರಾ ಮಡದೀ ಇಲ್ಲೆರಿಗ್  ಹೇಳೀತೆ
ಹೋಗ್ಹೇಳೇ ನಿನ್ ನಲ್ಲಾ ಸಕಲಯ್ಗೆ
ಅಟ್ಟಂಬಾ ಮಾತಾ ಕೇಳಾಳೆ ರೂಪತಿ
ಮುತ್ನ ಕಣ್ಣೀರಾ ಸೇಡಿದಾಳೆ | ರೂಪತಿ
ಗೋವಾ ಕಾವಲ್ಲೇ ನೆಡದಾಳೆ
ಗೋವಾ ಕಾವ್ವರಿ ಗೋವಾನೇ ಬಿಡ್ವಾರಿ
ಗೋವಾ ಕಾವದಕೆ ಇರಾವರಿ| ದೆವರೆ
ನಿಮ್ಮಿಂಡರ ಪಂತಾ ನಿಮಗಿಲ್ವ

ನಮ್ಮಯ್ವರ ಮಡದೀ ಇಲ್ಲೆರಿಗ್ ಹೇಳಿತೆ
ಹೋಗೇಳೇ ನಿನನಲ್ಲ ಸೇದೇವ್ಗೆ
ಅಟ್ಟಂಬಾ ಮಾತಾ ಕೇಳಾಳೆ ರೂಪತಿ
ಮುತ್ನ ಕಣ್ಣೀರಾ ಸೇಡೀದಾಳೆ | ”
ಸೊಲಪ್ಪ ಕೊವ್ವಲ್ಲೇ ನೆಡದಾಳೆ
ಸೊಪ್ಪ ಕೊವ್ವಂ ಕೊಟ್ಟಗೇ ಇಕ್ವರಿ
ಸೊಪ್ಪ ಕೊಕೊವ್ವಲ್ಲೇ ಇರವರೀ| ದೇವಾರೆ
ನಿಮ್ಮಿಂಡರ ಪಂತಾ ನಿಮಗಿಲ್ವ

ನಮ್ಮಯ್ವರ್ರಾ ಮಡದೀ ಇಲ್ಲೆರಗಿ  ಹೇಳೀತೆ
ಹೋಗ್ಹೇಳೇ ನಿನನಲ್ಲ ಕಲಿಬೀಮ್ಗೆ | ಅಂಬುದ್ನು
ಮುತ್ನ ಕಣ್ಣೀರಾ ಸೆಡೀದಾಳೇ | ರೂಪತಿ
ಭೀಮಾ ಇದ್ದಲ್ಲೇ ನೆಡೀದಾಳೆ
ಒಂದೆಸರಾ ಎತ್ವರಿ ಒಂದೆಸ್ರಾ ಇಳಗ್ವರೀ
ಬಂದೋರಿಗ್ ಮಾಡಿ ಬಡಸ್ವರಿ |  ದೇವಾರೇ
ನಿಮ್ಮಂಡರ ಪಂತಾ ನಿಮಗಿಲ್ವ

ಒಂದೆಸರ ಹೇಳಿದರೆ ನಂಬ್ಲಾರೆ ನಿನ್ಮಾತಾ
ಇನ್ನೊಂದಾ ಸಾರೋಗೀ ತೆಳದ್ ಬಾರೇ ”
ಒಂದೇ ಸಾರೋಗಿ ಬಂಗೆಟ್ಟೀ ಬಂದಿದೆ
ಇನ್ನೆ ನಾಚಗ್ಲೇ ಒಳುವಲ್ಲ | ಅಂದ್ ರೂಪತೀ
ಬಿದ್ದ ಬಿದ್ದಲ್ಲೇ ಮರೋಗಾಳೆ
ಬಿದ್ದ ಬಿದ್ದಲ್ಲೇ ಮರಗ್ವದ್ನು ಭೀಮಯ್ಯ
ರೂಪತಿ ಮಿಯ್ಯರಣಾ ಉದೋರಿಸೇ
ರೂಪತಿ ಎತ್ತೇ ನಿಲಸಾನೆ | ಬೀಮಯ್ಯಾ

ರೂಪತೀ ಮಿಯ್ಯ ಹುಡಿಯಾ ಉದೋರಿಸೇ | ಭೀಮಯ್ಯಾ
ರೂಪತೀ ಪಟ್ಟೀ ಉಡೋವಾನೇ | ಭೀಮಯ್ಯಾ
ರೂಪತೀ ಚಿನ್ನಾ ಇಡೋವಾನೇ | ಭೀಮಯ್ಯಾ
ನುಸಲಗ್ ಸಿರಿಗೆಂದಾ ಇಡೋವಾನೇ | ಭೀಮಯ್ಯಾ
ರೂಪತಿ ಬಳಿ ಎಯ್ದಾ ಇಡೋವಾನೇ | ಭೀಮಯ್ಯಾ
ರೂಪತಿ ಮಿಯ್ಯಾಬರಣ ತೊಡೋವಾನೇ | ಭೀಮಯ್ಯಾ
ಆಗೊಂದು ಮಾತಾ ನುಡೀದಾನೇ

ಬೀಮಾ ಅಂಬೆಸರು ಇಲ್ಲಿಂದಿತ್ತಾಗಿರಲೋ
ರೂಪತಿ ಅಂಬೆಸರು ನೆಡಿಯಾಲೋ | ಲ | ಂದ್ ಭೀಮನು
ಗಟ್ಟೋ ಬಟ್ಟಲವಾ ತಡದಾಳೇ | ರೂಪತಿ
ಗೋವ್ನ ಗುಡಿಗಾಗೇ ಗೋವ್ ಕಾದಾ ಮಕ್ಕಳ್ರಾ
ಯಾವುದೋ ಗಿಜಗನಾ ಅರಮನೆ

“ಅಯ್ಯೊ ನನ್ನಮ್ಮಾ ನೀವಿನ್ನು ಅರಿಯಾರಾ
ಇದು ಇಗೇ ಗಿಜಗನಾ ಅರಮನೆ | ಅಂದೇಳಿ
ಬಂತೋ ಗಿಜಗನಾ ಕಿರೀ ಮಡುದಿ | ಅಂದೇಳಿ

ತೋಳು ತೊಡಿಹೊಯ್ದೇ ನೆಗಿಯಾಡೇ |ಡ್ವ|ದ್ನು ರೂಪತಿ
ಕೆಯ್ ಗೆದಿಗಾಗೇ ನೆಡದಾಳೆ
ಕೆಯ್ ಗೆದ್ದಿಲಿ ಕೆಯ್ ಕೊವ್ವ ಹೊಲಿಯರೆ
ಯಾವ್ದೋ ಗಿಜಗನಾ ಅರಮನೆ

ಅಯ್ಯೋ ನನ್ನಮ್ಮಾ ನೀವಿನ್ನು ಅರಿಯಾರಾ
ಇದು ಇಗೆ ಗಿಜಗನ ಅರಮನೆ | ಅಂದೇಳಿ
ಬಂತೋ ಗಿಜಗನಾ ಕಿರೀ ಮಡದೀ | ಅಂದೇಳಿ
ತೋಳು ತೊಡಿ ಹೊಯ್ದೇ ನೆಗಿಯಾಡಿ |ಡ್ವ|ದ್ನು ರೂಪತಿ

ಹೋಗಾಳೆ ಗಿಜಗನಾ ಅರಮನೆಗೆ | ರೂಪತೀ
ಮಾಳೂಗೀ ಒಳಗೆ ನೆಡದಾಳೇ | ರೂಪತೀ

ಹಿತ್ಲ ಕಣಕ್ನ ಬಾಗಲ್ಲೇ ಹೆರೋಟಾಳೆ |
ಹೆಡಗ್ಯನ ಬತ್ತಾ ತಿಂದೇಕೊಡ್ನ ನೀರಾ ಕುಡ್ದೆ
ತೇಗೀತೇ ಗಿಜಗಾ ಬರಗಾನೆ

ತೇಗಿತೇ ಗಿಜಗಾ ಬರ‍್ಗವದ್ನು ರೂಪತೀ
ಗೀಜಗನೊಡನೋಗಿ ಕುಳತಾಳೆ.

ಗೀಜಗನೊಡನೋಗಿ ಕುಳುವದ್ನು ಗೀಜಗಾ
ಆಗೊಂದು ಮಾತಾ ನುಡೀದಾನೇ
ಪೆಟ್ಟೋಗೀ ಒಳಗೆ ಬೇಕಾದ ಪಟ್ಟದೆ.

ಉಟ್ಕಣೆ ರೂಪತೀ ಬಡ್ನೆಬಾರೇ
ಪೆಟ್ಟೋಗೀ ಒಳಗೆ ಬೇಕಾದ ಬೆನ್ನದೆ.
ಇಟ್ಕಣೆ ರೂಪತೀ ಒಡ್ನೇಬಾರೇ | ಅಂದೇಳೇ
ಹಿಡ್ದಾಣೆ ಬಳಿಯೂ ನಳಿತೋಳಾ

ಆಗೇನೇ ನಿನ್ ತೋಳು ಸುವೀವರ‍್ನ ಸುಕಿವರ‍್ನಾ
ಈಗೇನೆ ನಿನ್ ತೋಳು ಬಲೀದಾವೇ
ನಿನ್ನಕ್ಕನ ಮನಿಯಾ ಕಂಡಗ ಬತ್ತವಾ
ಒಬ್ಬಳೇ ತಾನೂ ತೊಳದೀದೇ | ಗಿಜಗನೆ
ಅದಕಾಗೆ ತನತೋಳೂ ಬಲಿದಾವೇ.

ಯಾರೂ ಕೂತರು ಈ ಮಂಚ ಗಣಿಲನ್ನಾ
ಪಾವೂಡೀ ಕಾಲಾ ಕಲಿಭೀಮ | ಕೂತರೆ.
ಈಮಂಚಾ ಗಮ್ಮೋ ಗಣಿಲನುಗು | ಅಂದೇಳೇ |
ಹೇಳೀ ಆಚಾರಿ ಗೆಯೀದಾನೆ | ಅಂಬುದ್ನು ಬೀಮನು

ಸೆಳ್ಳು ಗರೀಲವನಾ ಸಿಗುಳೆತ್ತೆ ಬೀಮಯ್ಯ
ಮುರ್ ಕವ್ರಹಾದ್ಯಲ್ಲೇ ನಿಲಸಾನೇ | ರೂಪತಿ
ರಗತದ ಬೊಟ್ಟೊಂದ್ ಇಡೋವಾಳೇ | ರೂಪತಿ
ತನ್ನಾ ಅರಮನೆಗೇ ನೆಡದಾಳೇ | ರೂಪತಿ

ಹೋಗಿ ರಾಜಂಗ್ಳ ನೆಗೆದತ್ತೇ | ರೂಪತಿ
ಮೂಳೂಗಿ ಒಳಗೇ ನೆಡದಾಳೆ | ರೂಪತಿ     
ಲಾಗೊಂದು ಮಾತಾ ನುಡೀದಾಳೆ.

ರೂಪತ್ ಅಂಬೆಸರು ಇಲ್ಲಂದಿತ್ತಾಗಿರಲೇ
ಬೀಮಾ ಅಂಬೆಸ್ರು ನೆಡೀಯಾತೀ | ಲಂದ್ ಬೀಮನು
ರೂಪತಿ ಪಟ್ಟೀ ಕೊಡೋವಾನೇ | ಬೀಮನು,
ರೂಪತೀ ಆಭರಣಾ ಕೊಡೊವಾನೇ |

ರೂಪತಿ | ಚಿನ್ನಾ ಕೊಡುವಾನೇ| ಬೀಮನು
ರೂಪತಿಬೀ ಚಂದದಲೇ ಇರೋವಾರೇ
ಇಂದಿಗೆ ಹರಹರ ಇಂದಿಗೆ  ಸಿವಾಸಿವಾ
ಇಂದೀಗೆ ಈ ಹಾಡು ಮುಗತಾರಾ

ಈ ಹಾಡಾ ಹೇಳ್ದರ್ಗೂ ಸೆರ್ದನೀತಂದರ್ಗೂ
ಎತ್ತೋಡಲೇ ಬತ್ತಾ ಬೆಳಿಯಲೆ | ಈ ಹಾಡಾ
ಚಿತ್ತಯ್ಸೆ ಕೇಳ್ದರು ಕಲೀಯತಿ

ಈ ಹಾಡಾ ಹೇಳ್ದರ್ಗೂ ಸೆರ್ ದನಿ ತಂದರ್ಗೂ
ದನಿ ಕರಯತಿ ಧಾನ್ಯಾ ಬೆಳೀಯತೀ| ಈ ಹಾಡಾ
ಚಿತ್ತಯ್ಸೆ ಕೇಳ್ದರು ಕಲೀಯತಿ

ಚಂಬುಚಂಬು ತುಂಬೆ ಚಂಬುನ ಮಲಚ್ಚಳ ತುಂಬೆ|
ಚಂಬನ ಬಾಯೀಗೆ ತರಳಾತುಂಬೇ | ಬೀ| ದಂತೆ
ತುಂಬಿರತಿ ನಮ್ಮಾ ಮನದಲ್ಲೇ | ಈ ಹಾಡು
ಬರತೀರಲಿ | ಹಬ್ಬಾ ಮೊದವೀಗೇ

ಈ  ಹಾಡಾ ಹೇಳ್ದರ್ಗೆ ಸೆರ‍್ದನೀ ತಂದರ್ಗೆ
ಹಾದೀ ಗೊಕನದಾ ಸಿಮಗಂಗೆ | ತಿರುತವಾ
ಹೋಗೀ ಮಿಂದಟ್ಟು ಪಲವುಂಟೆ

ಗಿಂಡೀ ಗಿಂಡೀ ತುಂಬೆ ಗಿಂಡೀ ಉದ್ಕಾ ತುಂಬೇ
ಗಿಂಡೀ ಜಾಯೀಗೇ ತರುಳಾತುಂಬೇ | ಬಿ | ದಂತೆ
ತುಂಬಿರಲೆನಮ್ಮಾ ಮನದಲ್ಲೇ | ಈ ಹಾಡು
ಬರತಿರಲೆ ಹಬ್ಬಾ ಮೊದವೀಗೆ.

* * *