ಖ್ಯಾತ ಭರತನಾಟ್ಯ ಕಲಾವಿದೆಯಾದ ಶ್ರೀಮತಿ ಗೀತಾ ದಾತಾರ್ ಅವರು ಅರಸೀಕೆರೆಯ ಶ್ರೀ ವಿ.ಸಿ. ದಾತಾರ್ ಹಾಗೂ ಶ್ರೀಮತಿ ಸ್ನೇಹ ಪ್ರಭಾ ದಾತಾರ್ ಅವರ ಕಿರಿಯ ಪುತ್ರಿ. ಕರ್ನಾಟಕದ ಖ್ಯಾತ ನೃತ್ಯ ಕಲಾವಿದೆ ಶ್ರೀಮತಿ ಉಷಾ ದಾತಾರ್ ಅವರ ಸೋದರಿ ಶ್ರೀಮತಿ ಗೀತಾ ತಮ್ಮ ಅಕ್ಕನಿಂದಲೇ ನೃತ್ಯಾಭ್ಯಾಸ ಮಾಡಿದರು. ಕೂಚುಪುಡಿ ಹಾಗೂ ಮೋಹಿನಿ ಅಟ್ಟಂ ನೃತ್ಯ ಶೈಲಿಗಳಲ್ಲೂ ಗೀತಾ ಅವರಿಗೆ ಪರಿಶ್ರಮವಿದೆ.

ನೃತ್ಯ ಪರೀಕ್ಷೆಯಲ್ಲಿ ವಿದ್ವತ್ತು ಮುಗಿಸಿರುವ ಶ್ರೀಮತಿ ಗೀತಾ ಕರ್ನಾಟಕ ಸರ್ಕಾರದ ಯುವಜನ ಮೇಳದಲ್ಲಿ ಭಾಗವಹಿಸಿ ತಮ್ಮ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ದೊರಕಿಸಿ ಕೊಟ್ಟರು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಸಂಯೋಜನಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು, ಮದಗದ ಕೆಂಚವ್ವ ಸೇರಿದಂತೆ ಹಲವಾರು ನೃತ್ಯ ನಾಟಕಗಳನ್ನು ನಿರ್ದೇಶಿಸಿದ್ದಾರೆ.

೧೯೯೬ರಲ್ಲಿ ಕರ್ನಾಟಕ ಯುವಕ್ ಬಿರಾದಾರಿಯಿಂದ ’ಉತ್ತಮ ನೃತ್ಯಗುರು’ ಸನ್ಮಾನಕ್ಕೆ ಪಾತ್ರರಾದ ಶ್ರೀಮತಿ ಗೀತಾ ದಾತಾರ್, ಪ್ರಸ್ತುತ ಶಿವಮೊಗ್ಗದಲ್ಲಿ ’ಮನು ಕಲಾ ಕೇಂದ್ರ’ ಎಂಬ ನೃತ್ಯಶಾಲೆಯ ಮೂಲಕ ಹಲವಾರು ನೃತ್ಯಾಸಕ್ತರಿಗೆ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಶಿಷ್ಯವೃಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉತ್ಸವಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿರುವುದಲ್ಲದೆ, ನೃತ್ಯ ಪರೀಕ್ಷೆಗಳಲ್ಲಿ ಹಲವು ಶ್ರೇಣಿಗಳನ್ನು ಗಳಿಸಿರುವ ಗೀತಾರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ೧೯೯೮-೯೯ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.