ಯಾವುದೇ ಅನಗತ್ಯವಾದ, ಅಸಂಬದ್ಧವಾದ, ಅರ್ಥವಿಲ್ಲದ, ಮನಸ್ಸಿಗೆ ಮುಜುಗರ, ಅಸಹ್ಯವನ್ನುಂಟುಮಾಡುವ ವಿಚಾರ, ಚಿತ್ರ, ದ್ವಂದ್ವ, ಅನುಮಾನ ಪದೇ- ಪದೇ ಮನಸ್ಸಿನೊಳಕ್ಕೆ ಬರುವುದು. ಅದನ್ನು ತಟೆಗಟ್ಟಲು ಸಾಧ್ಯವಾಗುವುದಿಲ್ಲ.

ಉದಾಹರಣೆಗೆ; ದೇವರ ಪೂಜೆ ಮಾಡುವಾಗ ಅಥವಾ ದೇವಸ್ಥಾನ (ಚರ್ಚು, ಮಸೀದಿ)ಗಳಲ್ಲಿ ಇದ್ದಾಗ ದೇವರ ಬಗ್ಗೆ ಕೆಟ್ಟ ಯೋಚನೆಗಳು ಮನಸ್ಸಿನೊಳಕ್ಕೆ ಬರತೊಡಗುತ್ತವೆ. ಬಾಗಿಲಿನ ಚಿಲಕವನ್ನು ಹಾಕಿದ್ದೇನೆಯೋ ಇಲ್ಲವೋ, ಗ್ಯಾಸ್ ಆಫ್ ಮಾಡಿದ್ದೇನೋ ಇಲ್ಲವೋ ಇತ್ಯಾದಿ ಅನುಮಾನಗಳು ಮತ್ತೆ- ಮತ್ತೆ ಬರತೊಡಗುತ್ತವೆ. ಹೊಲಸು ಅಥವಾ ಗಲೀಜು ಅಥವಾ ಅಸಹ್ಯ ತರಿಸುವ ದೃಶ್ಯಗಳು ಪುನರಾರ್ತನೆಯಾಗುತ್ತವೆ. ಒಂದು ಮನಸ್ಸು ಯಾವುದೇ ಕೆಲಸ- ಚಟುವಟಿಕೆ ಮಾಡು ಎಂದರೆ, ಅದೇ ಸಮಯದಲ್ಲಿ ಈ ಕೆಲಸ ಮಾಡುವುದು ಬೇಡ, ಮಾಡಿದರೆ ಕೆಡುಕುಂಟಾಗುತ್ತದೆ ಎಂಬ ಆಲೋಚನೆ ಪುನರಾರ್ತನೆಯಾಗುತ್ತದೆ. ಲೈಂಗಿಕ ಆಲೋಚನೆಗಳು ಅಥವಾ ಲೈಂಗಿಕ ಚಿತ್ರಗಳು ಮನಸ್ಸಿನಲ್ಲಿ ಮೂಡುತ್ತಲೇ ಇರುತ್ತವೆ. ನಿಲ್ಲಿಸಲು ಆಗುವುದೇ ಇಲ್ಲ.

ಹಾಗೇ ನಿರ್ದಿಷ್ಟ ಕೆಲವು ವರ್ತನೆಗಳನ್ನು ಮಾಡಲೇಬೇಕು ಅಥವಾ ಇಂತಿಷ್ಟು ಬಾರಿ ಮಾಡಬೇಕೆಂಬ ಒತ್ತಾಸೆ ಬರತೊಡಗುತ್ತದೆ. ಉದಾಹರಣೆಗೆ; ಹಲವು ಬಾರಿ ಕೈ- ಕಾಲು ತೊಳೆಯುವುದು, ನೆಲ ಒರೆಸುವುದು, ಹಣ ಇರುವ ಪೆಟ್ಟಿಗೆ ಅಥವಾ ಡ್ರಾಯರನ್ನು ಮೂರು ಸಲ ತೆಗೆದು ಹಣ ಇದೆಯೋ ಇಲ್ಲವೋ ಎಂದು ಪರೀಕ್ಷಿಸುವುದು, ಬರೆದ ಪ್ರತಿ ಪದ, ವಾಕ್ಯವನ್ನೂ ಗೀಟು ಹಾಕಿ ಹೊಡೆದುಹಾಕುವುದು, ಓದಿದ್ದನ್ನು ಮತ್ತೆ- ಮತ್ತೆ ಓದುವುದು, ಟೇಬಲನ್ನು ಐದು ಸಲ ತಟ್ಟುವುದು, ತಟ್ಟದಿದ್ದರೆ ಏನೋ ಕೆಟ್ಟದಾಗುತ್ತದೆ ಎಂದು ಭಯವಾಗುವುದು, ರಸ್ತೆಯಲ್ಲಿ ಹೋಗುವಾಗ ಪ್ರತಿ ಲೈಟು ಕಂಬ ಅಥವಾ ಮರವನ್ನು ಮೂರು ಸಲ ಮುಟ್ಟುವುದು, ಒಳ್ಳೆಯದಾಗಲಿ, ತೊಂದರೆ ನಿವಾರಣೆಯಾಗಲಿ ಎಂದು ಹತ್ತು ದೇವರಿಗೆ ಹರಕೆ ಕಟ್ಟುವುದು ಇತ್ಯಾದಿ.

ಕೆಲವು ಆಕ್ರಮಣಕಾರಿ ವಿಚಾರಗಳು ಮನಸ್ಸಿನೊಳಕ್ಕೆ ಮತ್ತೆ- ಮತ್ತೆ ಸುಳಿದು, ಎಲ್ಲಿ ಅವನ್ನು ಮಾಡಿ ಬಿಡುತ್ತೇನೋ ಎಂದು ಭಯಪೀಡಿತನಾಗುತ್ತಾನೆ. ಉದಾಹರಣೆಗೆ; ಚಲಿಸುತ್ತಿರುವ ಬಸ್ಸಿನಿಂದ ಹೊರಕ್ಕೆ ಜಿಗಿಯಬೇಕೆನಿಸುವುದು, ಚಾಕು ಅಥವಾ ಸೂಜಿಯನ್ನು ಕಂಡಾಗ ಅದರಿಂದ ತನಗೆ ಅಥವಾ ಇತರರಿಗೆ ಚುಚ್ಚಿ ಗಾಯ ಮಾಡಬೇಕೆನಿಸುವುದು, ಯಾವುದೇ ಗಾಜು, ಪಿಂಗಾಣಿ ವಸ್ತುಗಳನ್ನು ಕಂಡಾಗ ಎತ್ತಿ ಒಡೆದು ಹಾಕಬೇಕೆನಿಸುವುದು, ಯಾವುದೇ ವ್ಯಕ್ತಿಯನ್ನು ಕಂಡಾಗ ಅವರ ಮುಖಕ್ಕೆ ಉಗಿಯಬೇಕು, ಅವರನ್ನು ಕೆಟ್ಟ ಮಾತುಗಳಿಂದ ನಿಂದಿಸಬೇಕೆನಿಸುವುದು, ಮಲಗಿರುವ ಮಕ್ಕಳ ಹೊಟ್ಟೆಯ ಮೇಲೆ ಕಾಲಿಟ್ಟು ತುಳಿಯಬೇಕೆನಿಸುವುದು ಇತ್ಯಾದಿ.

ಈ ರೀತಿ ಪುನರಾರ್ತನೆಗೊಳ್ಳುವ ವಿಚಾರ, ಅನುಮಾನ, ವರ್ತನೆಗಳಿಂದ ವ್ಯಕ್ತಿ ಅಥವಾ ಅವರ ಮನೆಯವರು ಸಾಕಷ್ಟು ತೊಂದರೆ ಹಾಗೂ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾರೆ. ವ್ಯಕ್ತಿಯ ನಿತ್ಯ ಕೆಲಸ- ಕರ್ತವ್ಯಗಳಿಗೆ ಅಡ್ಡಿಯುಂಟಾಗುತ್ತದೆ. ಇದೇ ಗೀಳು ಮನೋರೋಗ. ಇದು ಸಾಮಾನ್ಯವಾಗಿ ಹದಿವಯಸ್ಸು ಅಥವಾ ಪ್ರೌಢ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಗಂಡಸರಿಗಿಂತ ಹೆಂಗಸರಲ್ಲಿ ಸ್ವಲ್ಪ ಹೆಚ್ಚು. ಎಲ್ಲ ವರ್ಗದವರಲ್ಲೂ ಕಾಣಬರಬಹುದು. ಪ್ರತಿ ಒಂದು ಸಾವಿರ ಜನಸಂಖ್ಯೆಗೆ ಒಬ್ಬಿಬ್ಬರಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ.

ಏಕೆ ಬರುತ್ತದೆ?

ಹಲವಾರು ಅಂಶಗಳು ಒಟ್ಟುಗೂಡಿ ಈ ರೋಗ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.

1) ಅನುವಂಶೀಯತೆ, 2) ಮಿದುಳಿನಲ್ಲಿ ಸೆರೋಟೋನಿನ್ ಎಂಬ ನರವಾಹಕ ಪ್ರಮಾಣ ಕಡಿಮೆಯಾಗುವುದು, 3) ರಕ್ತದ ಪ್ಲಾಸ್ಮಾದಲ್ಲಿ ನಾರ್ ಅಡ್ರಿನಲಿನ್ ಅಂಶ ಕಡಿಮೆಯಾಗುವುದು, 4)ಮಿದುಳಿನ ಪ್ರಿ-ಪ್ರಾಂಟಲ್ ಭಾಗದಲ್ಲಿ ಕೆಲವು ವ್ಯತ್ಯಾಸ ಹಾಗೂ 5) ಸುಪ್ತ ಮನಸ್ಸಿನ ಕೆಲವು ದ್ವಂದ್ವಗಳು.

ಚಿಕಿತ್ಸೆ ಏನು?

1) ಔಷಧಗಳು: ಮಿದುಳಿನಲ್ಲಿ ಸೆರೋಟೋನಿನ್ ಪ್ರಮಾಣವನ್ನು ಹೆಚ್ಚಿಸುವ ಮಾತ್ರೆಗಳು. ಉದಾ: ಫ್ಲೂಯಾಕ್ಸೆಟಿನ್, ಸೆಟ್ರಾಲಿನ್, ಎಸ್ಸಿಟಲೋಪ್ರಾಮ್, ಕ್ಲೋಮಿಎಪ್ರಮಿನ್, ಫ್ಲೂವಾಕ್ಸಮಿನ್, ವೆನಲಾಫ್ಲಾಕ್ಸಿನ್, ಕ್ಲೋನಾಜೆಪಾಮ್ ಇತ್ಯಾದಿ. ವೈದ್ಯರ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳ ಕಾಲ ಕ್ರಮಬದ್ಧವಾಗಿ ಸೇವಿಸಬೇಕು. ಇವು ಸಾಮಾನ್ಯವಾಗಿ ಸುರಕ್ಷಿತವಾದ ಔಷಧಗಳು.

2) ನಡವಳಿಕೆ ಚಿಕಿತ್ಸೆ: ಎಕ್ಸ್ ಪೋಸರ್ ಮತ್ತು ರೆಸ್ಪಾನ್ಸ್ ಪ್ರಿವೆನ್ಷನ್(ಇಆರ್ ಪಿ)- ಪುನರಾರ್ತನೆಗೊಳ್ಳುವ ವಿಚಾರಗಳಿಗೆ ಮನಸ್ಸನ್ನು ಒಡ್ಡಿ, ಆ ವಿಚಾರಗಳಿಂದ ಉಂಟಾಗುವ ಮಾನಸಿಕ ಆತಂಕ, ಹಿಂಸೆಯನ್ನು ಅನುಭವಿಸುವುದು, ಸಂಬಂಧಪಟ್ಟ ವರ್ತನೆಯನ್ನು ತೋರದಿರುವುದು ಈ ಚಿಕಿತ್ಸೆಯ ತಿರುಳು. ಉದಾ: ಸುತ್ತಮುತ್ತ ಕೊಳಕು, ಗಲೀಜನ್ನು ಕಂಡು ಅಲ್ಲಿಂದ ಎದ್ದು ಹೋಗದೇ ಅಥವಾ ಕೈಕಾಲು, ಮೈ ತೊಳೆಯದೇ ಅಲ್ಲಿಯೇ ಇದ್ದು ಹಿಂಸೆಯನ್ನು ಅನುಭವಿಸುವುದು. ದೀರ್ಘ ಸಮಯದ ಎಕ್ಸ್ ಪೋಷರ್ ನಿಂದ ಗೀಳು ಕಡಿಮೆಯಾಗುವುದು ವಿಚಿತ್ರವಾದರೂ ಸತ್ಯ.

ಆಲೋಚನೆಯನ್ನು ನಿಲ್ಲಿಸುವುದು(ಥಾಟ್ ಸ್ಟಾಪಿಂಗ್)- ಅರ್ಥಹೀನ ಅಥವಾ ಕೆಟ್ಟ ವಿಚಾರಗಳು ಬರುತ್ತಿದ್ದಂತೆ ಮೇಜು ಕುಟ್ಟಿ ಅಥವಾ ಚಪ್ಪಾಳೆ ತಟ್ಟಿ ‘ನಿಲ್ಲಿಸು’, ‘ಸ್ಟಾಪ್’ ಎಂದು ಕೂಗುವುದು.

ರೋಗಿ ಮತ್ತು ಮನೆಯವರು ಈ ರೀತಿ ಆಲೋಚನೆ, ವಿಚಾರ, ವರ್ತನೆ ಪುನರಾರ್ತನೆಗೊಳ್ಳುವುದು ಒಂದು ಮಾನಸಿಕ ರೋಗ, ಅದಕ್ಕೆ ರೋಗಿ ಹೊಣೆಯಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ನಡವಳಿಕೆ ಚಿಕಿತ್ಸೆಯಲ್ಲಿ ಸಹ- ಚಿಕಿತ್ಸಕರಾಗಿ ಮನೆಯವರೂ ಭಾಗವಹಿಸಬೇಕು. ರೋಗ ಹತೋಟಿಗೆ ಬರುವುದು ನಿಧಾನವಾದರೆ, ನಿರಾಶರಾಗಬಾರದು. ಚಿಕಿತ್ಸೆಯನ್ನು ಮುಂದುವರಿಸಬೇಕು.