ಖ್ಯಾತ ನರ್ತಕರ ವಂಶಕ್ಕೆ ಸೇರಿದ ನಟುವನಾರ್ ಗುಂಡಪ್ಪನವರು ೧೮೯೮ರಲ್ಲಿ ಜನಿಸಿದರು. ಕರ್ನಾಟಕದ ಪ್ರಖ್ಯಾತ ನರ್ತಕರ ವಂಶಕ್ಕೆ ಸೇರಿದ ಶ್ರೀಯುತರ ಮುತ್ತಜ್ಜಿ ರಂತನಾಯಕಮ್ಮನವರು ತಮ್ಮ ಕಾಲದ ಹೆಸರಾಂತ ನೃತ್ಯ ಕಲಾವಿದೆಯರಲ್ಲೊಬ್ಬರು. ಈಕೆಯ ನಾಟ್ಯ ಕಲೆಯನ್ನು ಮೆಚ್ಚಿ ಮೈಸೂರಿನ ದರ್ಬಾರಿನಿಂದ ಅವರಿಗೆ ಮುತ್ತರತ್ನ ಖಚಿತವಾದ ಸೀರೆಯೊಂದನ್ನು ನೀಡಿ ಗೌರವಿಸಲಾಗಿತ್ತು. ಗುಂಡಪ್ಪನವರ ಅಜ್ಜಿ ರಂಗಮ್ಮನವರೂ ಸಹ ನಾಟ್ಯ ನಿಪುಣೆಯಾಗಿದ್ದರಲ್ಲದೇ, ಬಸವನಹಳ್ಳಿಯ ಶ್ರೀ ರಂಗನಾಥಸ್ವಾಮಿಯ ದೇವಾಲಯದಲ್ಲಿನ ನಾಟ್ಯ ಸೇವೆಯಲ್ಲಿ ನಿರತರಾಗಿದ್ದರು.

ಇಂತಹ ನಾಟ್ಯ ಪರಂಪರೆ ಹಿರಿಯರಾಗಿದ್ದ ಗುಂಡಪ್ಪನವರು, ಪ್ರಖ್ಯಾತ ನರ್ತನ ಗುರು ಕೋಲಾರದ ಕಿಟ್ಟಪ್ಪನವರಲ್ಲಿ ೧೨ ವರ್ಷಗಳ ಕಾಲ ನೃತ್ಯ ಶಾಸ್ತ್ರವನ್ನು ಕಲಿತರು. ತಮ್ಮ ಗುರುಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾಟ್ಯ ಸಿದ್ದ ಪಡೆದರು. ಕಿಟ್ಟಪ್ಪನವರ ಮರಣಾನಂತರ ಅವರ ಪರಂಪರೆಯ ಧುರೀಣರೂ ಆದರು.

ನೃತ್ಯ ಮತ್ತು ಅಭಿನಯಗಳೆರಡಲ್ಲೂ ನೈಪುಣ್ಯತೆ ಸಾಧಿಸಿಕೊಂಡಿದ್ದ ಗುಂಡಪ್ಪನವರು ರಾಜ್ಯದ ಅತ್ಯಂತ ಗೌರವಾನ್ವಿತ ಕಲಾವಿದರಾಗಿ, ಮೈಸೂರು, ಬೆಂಗಳೂರಿನಲ್ಲಿ ಅನೇಕ ಶಿಷ್ಯರನ್ನು ತಯಾರು ಮಾಡಿ ತಮ್ಮ ಪರಂಪರೆಗೆ ಕೀರ್ತಿ ತಂದಿದಾರೆ. ಬೆಂಗಳೂರಿನ ಹೆಸರಾಂತ ನಾಟ್ಯ ಗುರುಗಳಾದ ದಿ|| ವಿ.ಎಸ್. ಕೌಶಿಕ್ ಮತ್ತು ಹೆಚ್.ಆರ್.ಕೇಶವಮೂರ್ತಿಗಳೂ ಶ್ರೀಯುತರ ಶಿಷ್ಯ ಪಂಕ್ತಿಗೆ ಸೇರಿದವರೇ.

ಇವರಿಗೆ ರಾಜ್ಯ ಸಂಗೀತ-ನಾಟಕ ಅಕಾಡೆಮಿ ತನ್ನ ೧೯೬೨ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿದೆ.