ಶ್ರೀಗುರುವೆ ಸಲಹಯ್ಯ ಕರವಿಡಿದು ನೀನೂ |
ಶ್ರೀಗುಂಡಬ್ರಹ್ಮಯ್ಯನ ಕಥೆಯ ಪೇಳುವೆನೂ | || ಪದ||

ಶ್ರೀಗುರುವೆ ಜಯತು ಶಂಕರನೆ ಶಶಿಧರನೆ |
ಶ್ರೀಗಣಪತಿ ವೀರೇಶ ಭೃಂಗೀ ಷಣ್ಮುಖನ ಪಿತನೆ ||
ಶ್ರೀಗೌರಿ ಗಂಗೆಯ ಮನದ ಸಂತಸನೆ |
ಶ್ರೀಗಿರಿವಾಸ ಸರ್ವೇಶ ರಕ್ಷಿಪನೆ ||       ೧

ದಶಪಾದ ಶಿರವೆಂಟು ಪದಿನಾಲ್ಕು ಕೈಯ್ಯ |
ಒಸೆದು ತೋರುವ ದೇಹವು ನಾಲ್ಕು ರಮ್ಯ ||
ಹಸನಾದ ಕಣ್ಣು ಭಾವಿಸಲು ನಿಮಗಯ್ಯ |
ಅಸಮಾಕ್ಷನಡಿಗೆ ಎರಗುವೆನು ನಾನಯ್ಯ ||        ೨

ಕಲ್ಯಾಣಪುರದಲ್ಲಿ ಮೆರೆದ ಬಸವೇಶಾ |
ಎಲ್ಲ ಗಣ ಪ್ರಮಥರ ಮನದಲ್ಲಿ ವಾಸಾ ||
ಅಲ್ಲಮಪ್ರಭುವಿನ ಭಕ್ತಿ ವಿಶೇಷಾ |
ಸೊಲ್ಲು ಸೊಲ್ಲಿಗೆ ಒದಗು ಮತಿಯ ಪ್ರಕಾಶಾ ||          ೩

ಚೆನ್ನಬಸವೇಶ ಕಿನ್ನರಿಬ್ರಹ್ಮಯ್ಯ |
ಸೊನ್ನಲಿಗೆ ಪುರದೀಶ ಸಿದ್ಧರಾಮಯ್ಯ ||
ಉನ್ನತದ ಮಡಿವಾಳ ಮಾಚಿದೇವಯ್ಯ |
ಭಿನ್ನವಿಲ್ಲದ ಭಕ್ತ ನುಲಿಯ ಚಂದಯ್ಯ ||       ೪

ಹಡಪದಪ್ಪಣ್ಣ ಸುಂಕದ ಬಂಕಿದೇವಾ |
ಕಡುಚಲ್ವ ಮರುಳ ಶಂಕರನು ಸಂಜೀವಾ ||
ಮೃಡನ ಮೋಹದ ಭಕ್ತ ಮೆರೆಮಿಂಡ ದೇವಾ |
ನುಡಿ ನುಡಿಗೆ ಬಂದೊದಗು ಮತಿಯ ಅನುಭಾವಾ ||       ೫

ನೀಲಲೋಚನೆ ಅಕ್ಕನಾಗಮ್ಮ ಶರಣೆ |
ಬಾಲೆ ನೆಂಬಕ್ಕ ಶಿವನಿಗೆ ಅಂತಃಕರುಣೆ ||
ಮೇಲಾದ ಅಮ್ಮವ್ವೆ ಕರ್ಪುರದ ಶರಣೆ |
ಚಲ್ವ ಮಹಾದೇವಿ ಶಶಿಧರೆಗೆ ಸುಪ್ಪಾಣೆ ||      ೬

ವಸಿಷ್ಠ ಋಷಿಯು ದುರ್ವಾಸ ಕಸ್ಯಪನು |
ಕೇಶವನು ಜರಿದಂತ ದಧೀಚಿ ವಾಲ್ಮೀಕನೂ ||
ಈಶ್ವರನ ಪ್ರೀತಿಯುಳ್ಳವನು ನಾರದನು |
ಲೇಸಾಗಿ ಮತಿಗೊಟ್ಟು ರಕ್ಷಿಸೆನ್ನುವನೂ ||       ೭

ಹರಿಹರೇಶ್ವರ ರಾಘವಾಂಕ ಚಾಮರಸ |
ವರವುಳ್ಳ ಕಾಳಿದಾಸನು ಭೀಮರಸ ||
ಕರಚಲ್ವ ತಾನು ಪಾಲ್ಕುರಿಕೆ ಸೋಮೇಶ |
ಹರಶರಣರಾ ನೆನೆದು ನುಡಿವೆ ವಿಶೇಷಾ ||        ೮

ಇಂತಿವರ ಮೊದಲಾದ ಶರಣರ ನೆನೆದು |
ಕಂತು ಹಾಡಿದ ಮಾತು ಲೀಲೆ ನಾ ಬರದು ||
ಅಂತು ಮೊದಲು ದೋಷ ಹೋಗುವುದು ಹರಿದು |
ಸಂತೋಷದಿಂದ ಕೇಳುವದು ಒಲಿದು ||           ೯

ಲೋಕದ ಪದವೆಂದು ನಿ(ರಾ)ಕರಿಸಬೇಡ |
ಸಾಕಾರ ಶಿವ ತಾನು ಆಡಿದನು ನೋಡಾ ||
ಬೇಕು ಬೇಡೆಂಬುವದು ಎರಡಿಲ್ಲದಾಡಿ |
ಏಕ ಚಿತ್ತದಿ ಕೇಳಿ ಮನಸಿಟ್ಟು ಕೂಡಿ ||೧೦

ಒಂದರೊಳಗೊಂದರ್ದ ಬಲ್ಲವನು ನಾನಲ್ಲ|
ಬಿಂದು ವ್ಯಂಜನಗಣವ ಎಂದು ನೋಡಿಲ್ಲ ||
ಕುಂದು ಕೊರತೆಯ ನೋಡಿ ತಿದ್ದುವದು ಸೊಲ್ಲಾ |
ಕಂದನೆಂದೆತ್ತಿಕೊಂಬುವದು ನೀವೆಲ್ಲಾ ||         ೧೧

ಮುಂದೆ ಕಥೆಯಾರಂಭ ನಡಸುವದು ಚಂದಾ |
ಇಂದು ಬಾಲಕರೋದುವದು ಹರುಷದಿಂದಾ||
ಸಂದೇಹ ಮಾಡದಲೆ ಕೇಳು ಸುಖದಿಂದಾ |
ಕಂದುಗೊರಳನು ಒಲಿವ ನಿಮಗೆ ಕೃಪೆಯಿಂದಾ ||            ೧೨

ಗುಂಡಬ್ರಹ್ಮಯಗಳ ಧರ್ಮ ಚಾರಿತ್ರ |
ಕೆಂಡಗಣ್ಣವ ಬಲ್ಲ ಅವರ ವ್ರತ ಸ್ತೋತ್ರ ||
ಕಂಡಷ್ಟು ಹೇಳುವೆನು ನಿಮಗೆ ಅಣು ಮಾತ್ರ |
ಉಂಡಂತೆ ಆಗುವುದು ಮನಕೆ ಯೀ ಸ್ತೋತ್ರ ||  ೧೩

ಹರನು ನಾರದನು ತಾವಿಬ್ಬರು ಕೂಡಿ|
ಅರಸು ಗಣಪತಿಯಲ್ಲಿ ಕಳವನು ಮಾಡಿ ||
ಶರಣರ ಮನ ದೃಢವ ಒರೆವರೆದು ನೋಡಿ |
ವರಪುಣ್ಯ ಕಥೆಯನು ಮನವಲಿದು ಪಾಡಿ ||     ೧೪

ಹೊಳೆವ ಸುತ್ತಿನ ಕೋಟಿ ದಾರಿಗಳವಲ್ಲಾ |
ಕಳವ ಕಾಯಕದವರು ಎಂದು ಹೋಗಲಿಲ್ಲಾ ||
ಬೆಳಸಿನಲಿ ಶೃಂಗಾರ ತೋಟ ಕಡೆಯಿಲ್ಲಾ |
ಉಳಿದಾದ ವಿಸ್ತಾರ ಹೇಳಲಳವಲ್ಲಾ ||           ೧೫

ಆ ಪುರಕೆ ಒಡೆಯ ಗಣಪತಿಯು ಭೂಪಾಲಾ |
ರೂಪು ಯೌವನ ಪರಾಕ್ರಮದ ವಿಶಾಲಾ ||
ಪರಮ ಸೌಭಾಗ್ಯದಲಿ ಮಹಾಲೋಲಾ |
ಯೀಪರಿಯಲಿ ಭೂಮಿಯನು ಪ್ರತಿಪಾಲಾ ||    ೧೬

ಕರಿ ತುರಗ ರಥ ಮಂದಿ ಗಣಿತವಿಲ್ಲವರೂ |
ಇರುಳು ಹಗಲು ಘಂಟೆ ಪಾರಿ ತಿರುಗುವರೂ ||
ಹರಿವಿಸೊಪ್ಪನು ಕದಿಯೆ ಕೈಯ್ಯ ಕೊಯ್ಯುವರೂ |
ಸರಿಯಿಲ್ಲ ನಮಗೆಂದು ಕಹಳೆ ನುಡಿಸುವರೂ ||೧೭

ಅಷ್ಟಸಂಪದ ಯೋಗ ಏನು ಹೇಳುವೆನೂ |
ಸೃಷ್ಠಿಯೊಳಗಿಲ್ಲ ಇವನಂಥ ಭೂವರನೂ ||
ಭ್ರಷ್ಠರನು ಶಿಕ್ಷಿಸುವ ಸುಜನ ಪಾಲಕನೂ |
ಸೃಷ್ಠಿವಂತದ ನುಡಿಯ ಶಿವಬಲ್ಲನಿದನೂ ||    ೧೮

ಇಂತೆಸೆವ ಓರ್ಗಲ್ಲ ಪಟ್ಟಣದ ಬಳಿಯಾ |
ಅಂತಿಹುದು ಅಲ್ಲೊಂದು ಶಿವಪುರದ ಪರಿಯಾ ||
ಭ್ರಾಂತಳಿದ ಗುಂಡಬ್ರಹ್ಮಯ್ಯಗಳ ನಿಳಯಾ |
ಕಂತುಹರ ತಿಳಿಬಲ್ಲ ಅಂತವರ ಪರಿಯಾ ||      ೧೯

ಶಿವಪುರದ ಶೃಂಗಾರ ನೋಡಲಳವಲ್ಲಾ |
ಅವರಿಂಗೆ ಕೋಟಿ ಕೊತ್ತಳವು ಮುನ್ನಿಲ್ಲಾ ||
ವಿವರಿಸಲು ತಾನೆ ಕುದುರಿಗಳು ಮುನ್ನಿಲ್ಲ |
ಭುವನದೊಳು ಕಾದುವರು ಇವರಿಗೇಣಿಯಿಲ್ಲಾ ||         ೨೦

ಎಲ್ಲಿ ನೋಡಿದಡಲ್ಲಿ ಶಿವಲಿಂಗದಿಳಿಯೂ |
ಅಲ್ಲಿ ಪುಷ್ಪದ ಗಿಡದಿ ಭಾವಿ ಕೆರೆ ನದಿಯೂ ||
ಅಲ್ಲಿಗಲ್ಲಿಗೆ ಜಂಗಮದ ಭಕ್ತಿ ನೆಲೆಯೂ |
ಅಲ್ಲಮ ಪ್ರಭುವಿನ ಭಕ್ತಿ ಸಂದಣಿಯೂ ||       ೨೧

ಇಂತಪ್ಪ ಶರಣರಾ ಪುರದಿ ನೆಲಸಿಹರೂ |
ಕಂತುಹರ ಪರಶಿವನ ಪೂಜೆಗೊಳುಸುವರೂ ||
ಮುಂತೊದಗಿ ಜಂಗಮಾರ್ಚನೆಯ ಮಾಡುವರೂ |
ಸಂತಸದಿ ಗುಂಡಬ್ರಹ್ಮಯ್ಯನೆಂಬುವರೂ ||      ೨೨

ಭಾವನು ಮೈದುನವರ ಭಾವವಂದಾಗಿ |
ಜೀವಮಾತ್ರವೆವಂದು ಕಾಯವೆರಡಾಗಿ ||
ಭಾವಿಸಲು ಇವರ ಏಕಾರ್ಥ ಅರಿದಾಗಿ |
ದೇವ ದೇವೇಶನ ದಯ ಭರಿತರಾಗಿ ||೨೩

ಸಮರೂಪ ಸಮ ಕಳಿಯ ಸಮಭಾವದಿಂದಾ |
ಸಮಶೀಲ ಸಮವ್ರತವು ಸಮನೇಮದಿಂದಾ ||
ಸಮಶಾಸ್ತ್ರ ಸಮಗೋಷ್ಠಿ ಸಮಶಕ್ತಿಯಿಂದಾ |
ಸಮನಾಗಿ ಗುರುಲಿಂಗ ಜಂಗಮಕೆ ಸಂದಾ ||      ೨೪

ಜಂಗಮವೆ ತಮ್ಮ ಪ್ರಾಣವುಯೆಂದು ಕಂಡೂ |
ಲಿಂಗಜಂಗಮ ಪಾದತೀರ್ಥವನೆ ಕೊಂಡೂ ||
ಅಂಗನಿಯು ಪುರುಷರ ವ್ರತವ ಕೈಕೊಂಡೂ |
ಮಂಗಳ ಮಹಾ ನೇಮ ಬಲಿದು ಕರಿಗೊಂಡೂ ||            ೨೫

ವರನೇತ್ರ ರೇಖಿಯಲಿ ಭಸಿತ ಪಣಿಗಿಟ್ಟು |
ಕೊರಳು ರುದ್ರಾಕ್ಷೆ ಮಂಡೆ ಜಡಿಯನೆ ಬಿಟ್ಟು ||
ಮೆರೆವ ಝೆಲ್ಲಿಯು ವೀರಗಾಸಿಯನೆ ಉಟ್ಟು |
ಚರಣದಲಿ ಮೆರೆವಂತ ಪೆಂಡೆವ ನಿಟ್ಟೂ ||        ೨೬

ಉಟ್ಟ ಪಟ್ಟಿಯ ದಟ್ಟಿ ಭಾಕು ಟೊಂಕದಲಿ |
ಬಿಟ್ಟು ಮಂಡಿಯ ಖಡ್ಗಕತ್ತಿ ಹಸ್ತದಲಿ ||
ತೊಟ್ಟ ಪಂಥದ ವ್ರತವು ತಮಗೆ ಹರುಷದಲಿ |
ಬೊಟ್ಟು ಪಣಿಯೊಳಗಿಟ್ಟು ಬಿರಿದು ಸಾರುತಲಿ ||          ೨೭

ಧರಿಯ ರಾಜನ ಮನಿಯ ಕನ್ನ ಕೊರತಂದೂ |
ಹಿರಿದಾದ ಪಟ್ಟಣದ ಸುಲಿದುತಂದೂ ||
ಪರಗಂಡು ಮಾರ್ಮಲವ ಹೊಕ್ಕು ಕದ್ದು ತಂದೂ |
ಹರಬಂದು ಮೊರೆಹೋಗಲು ಕೊಡೆವು ನಾವೆಂದೂ ||      ೨೮

ಹೊನ್ನು ಚಿನ್ನವ ಕದ್ದು ಮರೆಹೋಗಲು ಕೊಡೆವು |
ರನ್ನ ಮಾಣಿಕ ಮುತ್ತು ತೇಜಿಯನು ಬಿಡೆವು ||
ಕನ್ನೆ ಹೆಣ್ಣನು ತರಲು ಪುಸಿಯೆನಿತು ನೀಡೆವು |
ಚೆನ್ನಾಗಿ ಕೊಡೆವೆಂಬ ಬಿರಿದು ಸಾರಿದೆವು ||       ೨೯

ಮರೆಹೊಕ್ಕ ನಂಬಿಯನು ಚಾರ ಮರೆತೆ ಕೊಟ್ಟ |
ಹರಿಯ ಮಗನನು ಉರಿಯಗಣ್ಣಿನಿಂದ ಸುಟ್ಟ ||
ಬಿರಿದು ಸಲ್ಲದು ಶಿವಗೆ ಅವನು ಕಡುದಿಷ್ಟಾ |
ಹಿರಿಯ ಕುಲದವರಲ್ಲಿ ಉಂಡು ಕುಲಗೆಟ್ಟಾ ||೩೦

ಜಡಿಯೊಳಗೆ ಹೆಣ್ಣೊಂದ ತಂದಿಟ್ಟುಕೊಂಡಾ |
ಬಡವ ನಾನೆಂದು ಡೊಂಬನೊಳು ಕೂಡುಂಡಾ ||
ಮಡದಿಯಿಬ್ಬರಿಗೆ ಅಂಜಬಹುದೆ ಭಂಡಾ |
ಕಡುಬಿರಿದು ಸಲ್ಲುವದೆ ಶಿವ ಪಂಚರುಂಡಾ ||  ೩೧

ವಿಷವ ಕೊರಳೊಳು ಧರಿಸಿ ಕುಂಟಣಿಗನಾಹನೂ |
ಹಸಿ ತೊಗಲನುಟ್ಟು ತಲೆಯೊದಿಲುಂಬುವನೂ ||
ಮಸಣವೇ ಮನಿಮಾಡಿ ನರಮಾಂಸ ಬೇಡುವನೂ |
ಬಿಸಿಗಣ್ಣ ಶಿವಗೆ ಎಲ್ಲಿದು ಬರದವನೂ ||       ೩೨

ಹಲವು ಪರಿಯಿಂದವರು ಶಿವನ ಜರಿಯುತಲಿ |
ಛಲದಂಕ ಗುಂಡಬ್ರಹ್ಮಯ್ಯ ಹರುಷದಲಿ ||
ಸತಿ ಭಕ್ತ ಶಿವಶರಣ ಸ್ತೋತ್ರವಾಡುತಲಿ |
ಗೆಲವುಳ್ಳ ಜೋಡು ಕಾಳಿಯನು ಪೀಡಿಸುತಲಿ ||೩೩

ಹರ ಶರಣರಾ ಮಹಿಮೆಯ ಪೇಳಲಳವಲ್ಲಾ |
ಧರೆಯ ಹೊತ್ತಿರುವ ನಾಗೇಂದ್ರಗಳವೆಲ್ಲಾ ||
ಒರೆದು ಹೇಳಲವೊಂದು ನಾಲಿಗೆ ಸಲ್ಲಾ |
ಪರಿಶಿವನು ಪೇಳಿದನು ನಾನರಿಯೆ ಸೊಲ್ಲಾ ||   ೩೪

ಭವನದೊಳು ಕದ್ದವರ ಕೊಡಲಾಗದೆಂದೂ |
ಶಿವ ಬಿರಿದು ನಮ್ಮದು ಪುಸಿಯಲ್ಲವೆಂದೂ |
ಅವರ ಸಲುವಾಗಿ ಪ್ರಾಣವ ಕೊಟ್ಟಿವೆಂದೂ |
ಶಿವಶರಣ ಸಜ್ಜನರು ಕೇಳುವದು ಇಂದೂ ||     ೩೫

ಸಾರಿದನು ಕಹಳೆಯನು ಮೂರು ಹೊತ್ತಿನಲಿ |
ಏರಿತು ನಾದ ಈಶ್ವರನ ಸಭೆಯಲ್ಲಿ ||
ಸೇರಿರ್ದ ಸಭೆಯಲ್ಲಿ ಕೇಳಿ ಹೆದರುತಲಿ |
ನಾರಿ ಪಾರ್ವತಿ ಕಂಡು ನೋಡಿ ಹಿಗ್ಗುತಲಿ ||     ೩೬

ಕಂಡಿರ ಶರಣರ ಬಿರಿದು ಬಿಂಕವನೂ |
ದಿಂಡೆತನದಲ್ಲಿ ನಿಮ್ಮ ಜರಿವ ಪರಿಗಳನೂ ||
ಮಂಡೆಯ ಹಂಗು ತಮಗಿಲ್ಲವೆಂಬುದನೂ |
ಗಂಡಾಳು ತನದಲ್ಲಿ ಪರಿಯ ಹೇಳುವೆನೂ ||    ೩೭

ಕಹಳೆ ಭೋರಿಡಲು ಶಿವ ಕೇಳಿದನು ಬೇಗಾ |
ಹೇಳಿರಿ ತಿಳವಂತೆದಾರೂ ಎನಲಾಗಾ ||
ಹೇಳಿದರು ಗುಂಡಬ್ರಹ್ಮಯ್ಯಗಳ ಭೋಗಾ |
ಏಳು ಲೋಕದ ಎಮಗೆ ಸರಿಯಿಲ್ಲವೀಗಾ ||     ೩೮

ಸರಿಯಿಲ್ಲವೆಂಬುವನ ನೋಡುವೆನು ನಾನೂ |
ಪರಶಿವನು ಎಡಬಲವ ನೋಡಿದನು ತಾನೂ ||
ಹರನ ಸಖ ನಾರದ ಎದ್ದುನಿಂದಿಹನೂ |
ಪರಶಿವನೆ ಬೆಸನಕೊಡು ನೋಡಿ ಬರುತಿಹೆನೂ ||            ೩೯

ನೋಡಿ ಬಾರಯ್ಯ ನಾರದನೆಯೆಂಬುತಲಿ |
ಗಾಢ ಅಪ್ಪಣೆಕೊಟ್ಟು ಕಳುಹಿ ನೇಮದಲಿ |
ರೂಢಿಗಿಳಿದು ಹೋದೆನೆಂಬ ಹರುಷದಲಿ |
ಕೂಡಿ ಶೃಂಗಾರವಾಗುವನು ಸೊಬಗಿನಲಿ ||      ೪೦

ಉಟ್ಟ ಕಾವಿಯ ದೋತ್ರ ಖಷ್ಟಾಂಗ ಧರಿಸಿ |
ತೊಟ್ಟ ಕಂಥಿಯು ಕೈಯ್ಯ ಕಿನ್ನರಿಯನುಡಿಸಿ ||
ಬಿಟ್ಟ ಮಂಡೆಯು ಭಸಿತ ರುದ್ರಾಕ್ಷಿ ಧರಿಸಿ |
ಇಟ್ಟ ಕಸ್ತೂರಿ ಬೊಟ್ಟ ನೊಸಲೊಳಗಿರಿಸಿ ||     ೪೧

ಪಾದದಲ್ಲಿ ಹಾವುಗೆಯು ಜಂಗು ನುಡಿಸುತಲಿ |
ವೇದ ಆಗಮಶಾಸ್ತ್ರ ಶಕುನ ಹಸ್ತದಲಿ ||
ಆದಾರ ಧರಿಸಿ ತ್ರಿಶೂಲ ಕೈಯಲ್ಲಿ |
ಭೇದಗಳ್ಳನುಯಿವನು ಮೂರು ಲೋಕದಲಿ ||  ೪೨

ಮೂರು ಲೋಕದ ಒಡೆಯ ಘದ್ದಣಿಗಳಿಂದಾ |
ಭಾರಿ ಸಂತಸದಿಂದ ಬಂದ ಸಾರಂದಾ ||
ದಾರಿಯನು ಕೇಳಿ ಬರುತವರಲ್ಲಿ ತವಕದಿಂದಾ |
ಸಾರ ಗುಂಡಯ್ಯನ ಪುರಕೆ ನಲುವಿಂದಾ ||         ೪೩

ಪುರದ ಹೊರವಲಯದಲ್ಲಿ ನಿಂತು ನೋಡಿದನೂ |
ಪರಮ ಪುಣ್ಯದ ಕ್ಷೇತ್ರಯಿತ್ತಂಡ ಮಾಟವನೂ ||
ಶರಣರಾಂತಸ್ತವನು ಹೇಗೆ ನೋಡುವೆನು |
ಉರಗ ಭೂಷಣ ಬಲ್ಲನೆಂದು ಸಾಗಿದನೂ ||     ೪೪

ಎಲ್ಲಿ ನೋಡಿದರೆ ಶಿವಶಾಸ್ತ್ರ ಓದುವರೂ|
ಎಲ್ಲಿ ನೋಡಿದರೆ ಹರಕಥೆಯ ಕೇಳುವರೂ ||
ಎಲ್ಲಿ ನೋಡಿದರೆ ಶಿವಗೋಷ್ಠಿ ಹೇಳುವರೂ |
ಎಲ್ಲಿ ನೋಡಿದರೆ ಶಿವಪೂಜೆ ಮಾಡುವರೂ ||  ೪೫

ಪುರದೊಳಗೆ ಶಿವಪೂಜೆ ಹರನವಾಲಗವೂ |
ಬುರುಗ ಜಾಗಟಿ ಘಂಟಿ ಭೇರಿ ವಾದ್ಯಯವೂ |
ಪರಮ ಜಂಗಮಕೆ ನೀಡುವದು ಮನೋಹರವೂ |
ವರ ಗುಂಡಬ್ರಹ್ಮಯ್ಯ ನರಮನೆಯ ಸಡಗರವೂ ||         ೪೬

ಅರಮನೆಯ ನೋಡಿ ಒಳಹೊಕ್ಕು ನಾರಂದಾ |
ನೆರೆದ ಜಂಗಮದ ಸಂದಣಿಯೊಳಗೆ ನಿಂದಾ ||
ಕರಪಾದ ತೊಳಕೊಂಡು ಗದ್ದುಗೆಗೆ ಬಂದಾ |
ಗುರುತು ನೋಡುವರೆಂದು ಕಡೆಗೆ ತಾ ಸಂದಾ ||೪೭

ಕಟ್ಟಕಡೆಯಲಿ ಕುಳಿತು ಪೂಜೆ ಕೈಕೊಂಡಾ |
ಇಟ್ಟ ಹರಿವಾಣದಮೃತವ ಸವಿದುಂಡಾ ||
ದೃಷ್ಠಿ ಪಲ್ಲಟದಿಂದವರ ನೋಡಿಕೊಂಡಾ |
ದಿಟ್ಟ ಶರಣನ ಕಾಲ ಪೆಂಡೆವ ಕಂಡಾ ||            ೪೮

ಪೆಂಡೆವು ನಿಮಗೇಕೆಯೆಂದು ಕೇಳಿದನೂ |
ಪುಂಡಗಾರಿಕೆ ಬೇಡ ನಿಮಗೆಯಿಂತದನೂ ||
ಕಂಡು ಹೇಳುವೆನು ಸುಖವಲ್ಲ ನಿಮಗಿದನೂ |
ಭಂಡಾಗಬೇಡಯ್ಯ ನೀನು ಒಳ್ಳೆಯವನೂ ||    ೪೯

ಬೇಡವೆಂದರೆ ನಾವು ಕೇಳುವರು ಅಲ್ಲಾ |
ರೂಢಿಯೊಳು ನಮಗಿನ್ನುದಾರು ಸರಿಯಲ್ಲಾ ||
ನಾಡೊಳಗೆ ಕದ್ದ ಕಳ್ಳರನು ಕೊಡಲಿಲ್ಲಾ |
ಆಡಿ ತಪ್ಪುವ ಮಾತು ನಮ್ಮ ಒಳಗಿಲ್ಲಾ ||      ೫೦

ಪುಸಿಯಲ್ಲ ಭಲರೆ ಭಾಪುರೆ ಮಜರೆಯೆನುತಾ |
ನಸುನಗೆಯ ಮನದೊಳಗೆ ಕೊಲ್ಲಬೇಕೆನುತಾ ||
ವಸುಧಿಯೊಳಗೆ ನಾವು ಹೋಗಬೇಕೆನುತಾ |
ಕುಶಲದೊಯ್ಯಾರದಲ್ಲಿ ನುಡಿಯ ಬಣ್ಣಿಸುತಾ ||         ೫೧

ನುಡಿ ಬಹಳ ಘನವಾಗಿ ನಮ್ಮ ಕೇಳುವುದೂ |
ಪೊಡವಿಯೊಳು ನೀವಿದ್ದ ಸ್ಥಳವು ಎಲ್ಲಿಹುದೂ ||
ನಡೆ ನುಡಿಯು ಹಿರಿದಾಗಿ ನಮಗೆ ಕಾಣುವುದೂ |
ಒಡೆಯ ಜಂಗಮ ನಿನ್ನ ಹೆಸರು ಹೇಳುವದೂ ||೫೨

ಎನ್ನ ಹೆಸರು ಗಣದ ಮರಿದೇವರೆಂದಾ |
ಚನ್ನಾಗಿ ಹರಗೆ ಭಾಷೆಯೆ ಕೊಟ್ಟನೆಂದಾ ||
ಮುನ್ನಿರುವ ಸ್ಥಳಗಳನು ನೋಡಬೇಕೆಂದಾ |
ಚನ್ನಶರಣರ ಪುರವ ಬಿಟ್ಟ ಹರುಷದಿಂದಾ ||   ೫೩

ಹರುಷದಿಂದಲಿ ಬಂದ ಒರ್ಗಲ್ಲಪುರಕೆ |
ಅರಸಿ ನೋಡಿದ ಸುತ್ತ ಕೋಟಿ ಕೊತ್ತಳಕೆ ||
ಬೆರೆಸಿಹುದು ಸಿಂಗರಿಸುತ್ತ ಹುಲಿಯು ಶೂರಲಿಕೆ |
ಸರಸಿ ಹಾಯದು ನೀರು ಆಗಳು ಆ ತಳಕೆ ||       ೫೪

ಏಳುಸುತ್ತಿನ ಕೋಟೆ ಕಾಳುಗವಿದಿಹುದು |
ಕಾಳ ರಕ್ಕಸರಂತೆ ಕಾಲಳುಯಿಹುದೂ ||
ಹೇಳಲೆನೊಜ್ರದ ಕದವು ಬಿಗಿದಿಹುದೂ |
ಹೊಳೆವ ವಜ್ರದ ಸೂಲಂಗಿಹುದವೂ ||            ೫೫

ಹಸರುಗಲ್ಲಿನ ಕೋಟಿ ತೆನೆಯು ಚೆಲುವಾಗಿ |
ಕುಶಲದರಮನೆ ಕಳಸ ಗೋಪುರದ ಮ್ಯಾಗೆ ||
ಯಶವ ಗಣಪತಿರಾಯ ದೇವೇಂದ್ರನಾಗೆ |
ಸಸಿನೆ ಜಾಣರು ಕೇಳಿದ ಅಮರಾವತಿಯಾಗೆ ||    ೫೬

ಕೆತ್ತುಗಲ್ಲಿನ ಕೋಟಿ ಹುತ್ತುನಿಕ್ಕಿಹುದೂ |
ಸುತ್ತಿ ನೋಡಲು ಸಪ್ತಸಾಗರಾಗಿಹುದೂ ||
ಕತ್ತಲು ಕವಿದಂತೆ ಕಣ್ಣು ಮುಚ್ಚುವದೂ |
ಹತ್ತಿಹೋಗಲು ಎರಡು ತಲಿಯ ನುಂಗುವದೂ ||          ೫೭

ಇಂತೆಸೆವ ಕೋಟಿಯನು ಸುತ್ತುತಲಿ ಬಂದಾ |
ಮುಂತಿರುವ ಹುಲಿ ಮುಖದ ಆಗುಸಿಯೊಳುಗಿಂದಾ ||
ಚಿಂತೆ ಮಾಡುತ ಮುಂದೆ ಎಂತಾಗೊದೆಂದಾ |
ನಿಂತು ಇಲ್ಲಿಂದ ನಾ ಒಳಹೋಗುವೆನೆಂದಾ ||   ೫೮

ಹೋಗಬೇಡ ಇವನಾರುಯೆಂದು ಕೇಳಿದರೂ |
ನೆಗದು ಬಾಗಲು ಕಾಯ್ವಕೊಲ ನಾಯಕರೂ ||
ಬಗೆಯು ತಿಳಿಯದು ನಿಮ್ಮ ಬಿಟ್ಟವರುದಾರೂ |
ಮಿಗೆ ಜೀವ ಉಳುಹಿಸಿಕೊಳ್ಳು ತಲೆ ಕಡಿಸ್ಯಾರೂ ||         ೫೯

ಸಾರುತಲಿ ಬಂದಂತ ಸರ್ವಜ್ಞ ನಾನೂ |
ಸಾರು ಶಕುನದ ಶಾಸ್ತ್ರ ಪರಿಯನುಸುರುವೆನೂ ||
ತೋರುತಿಹ ಚಿತ್ತದೊಳು ಚಿಂತೆ ಬಿಡಿಸುವೆನೂ |
ದಾರಮನದೊಳಗಿರ್ದ ಪರಿಯ ಪೇಳುವೆನೂ ||  ೬೦

ಚಿಂತೆಯನಗುಂಟು ಹೇಳಯ್ಯ ನೀವೆನಲೂ |
ಮುಂತೆ ಬೇಡಿದುದೆಲ್ಲ ಕೊಡುವೆ ನಾನೆನಲೂ ||
ಅಂತರಿಲ್ಲವು ನಿಮ್ಮ ಪಾದಕ್ಕೆ ನಾವೆನಲೂ | |
ಸಂತೋಷದಿಂದರಮನೆಗೆ ಕರದೊಯ್ವೆನೆನಲೂ ||           ೬೧

ಎನಲು ಹೇಳಿದ ಮಾತು ಕೇಳು ನೀನಿದನೂ |
ಘನ ಬದುಕು ಭಾಗ್ಯ ಬಹಳುಂಟುಯೆಂಬುದನೂ ||
ತನಗೆ ಮಕ್ಕಳು ಇಲ್ಲವೆಂಬ ಚಿಂತೆಯನೂ |
ಅನುವಾಗಿ ಒಂದುಳಿಯದೆಲ್ಲ ಪೇಳಿದನೂ ||    ೬೨

ಹೇಳಿದಿರಿ ಎನ್ನ ಮನಸಿನ ಫಲವನೆಲ್ಲ |
ಕೇಳೆಲವೊ ನಮ್ಮಲ್ಲಿ ಮಾತು ಸರೆಯಿಲ್ಲಾ ||
ಮೇಳವಾಯಿತು ಮುಂದೆ ಇನ್ನು ನಿಮದೆಲ್ಲ |
ಕೊಳನೆಂಬುದು ತಮಗೆ ಏನು ಅರಿಕಿಲ್ಲಾ ||       ೬೩

ಅರಿಕೆವುಳ್ಳವರೆಂದು ಕರಕೊಂಡು ನಡದಾ |
ಪರಿಪರಿಯ ಅಗುಸಿ ಬಾಗಿಲವ ದಾಂಟಿಸಿದಾ ||
ತ್ವರಿತದಲಿ ಒಳಹೊಕ್ಕನಾಗ ವಿಸ್ತರದಾ |
ವರ ರಾಜ ಬೀದಿಯೊಳು ನೋಡುತಲಿ ನಡದಾ ||            ೬೪

ಲೆತ್ತ ಪಗಡಿಯು ಜೂಜು ಚದುರಂಗದಾಟ |
ಒತ್ತಿ ಕಾದುವ ಆನೆ ಕುದುರಿಯರ ಬೇಟ ||
ಇತ್ತರದ ಪಾತ್ರ ಪವಾಡ ನಲಿದಾಟ |
ಮುತ್ತಿರುವ ವಿಟಗಾರ ಸೊಳೆಯರ ಬೇಟಾ ||    ೬೫

ಓಣಿ ಬಜಾರವನು ನೋಡುತಲಿ ಬಂದಾ |
ಜಾಣ ಮಂತ್ರಿಯ ಸಭೆಯ ಚಾವಡಿಯು ಚಂದಾ ||
ಮಾಣದೆಲ್ಲವನು ನೋಡುತಲಿ ನಲುವಿಂದಾ |
ಕಾಣುತಲಿ ಅವರ ಹರಸಿದನು ನಾರಂದಾ ||       ೬೬

ಹರಸಿದವರಾರೆಂದು ಕೇಳಿದನು ಬೇಗಾ |
ಪರಮ ಜಂಗಮ ರೂಪು ಇವನಾರು ಇಗಾ ||
ಅರಸು ಕಂಡರೆ ಕೊಲ್ವ ಕರತಂದ ಹೇಗೆ |
ಹೊರಕ್ಕೆ ನೂಕಿವನ ಬಂದ ತಾ ಹೇಗೆ ||            ೬೭

ನೂಕ ಬೇಡಿರಿ ನೀವು ಉಂಡದ್ದೇಳುವನೂ |
ಲೋಕದಂತವನಲ್ಲ ಇವನು ಚೆನ್ನಿಗನೂ ||
ಬೇಕಾದ ಶಕುನ ಶಾಸ್ತ್ರಗಳ ಬಲ್ಲವನೂ |
ನೀ ಕಂಡ ಕನಸು ಎಲ್ಲವನುಸುರುವನೂ ||       ೬೮

ಇರುಳೆನೆಗೆ ಕನಸುಂಟು ನೀನು ಹೇಳೆಂದಾ |
ಅರಸಿನ ಬಳಿಗೆ ಕರದೊಯ್ವ ಮುದದಿಂದಾ ||
ಹರಸಿ ಕೊಡುವೆನು ನಿಮಗೆ ಬೇಕಾದುದೆಂದಾ |
ಹರುಷದಿಂದಲೆ ನೀನು ನಮಗೆ ನಲುವಿಂದಾ ||   ೬೯

ನಿನ್ನಿರುಳೆ ಅರಮನೆಯ ಭಂಡಾರದ ಹೊನ್ನು |
ನಿನ್ನ ಅರಮನೆಗೆ ಬಂದು ಸುರಿದಿರುವದಿನ್ನೂ ||
ಚನ್ನಾಗಿ ನಿನ್ನ ಮನದಲಿ ಹಿಗ್ಗಿದಿನ್ನೂ |
ಇನ್ನು ಹುಸಿದೇವು ನೋಡೆನ್ನ ಮಾತಿನ್ನೂ ||    ೭೦

ಮಾತು ಮನಸಿಗೆ ಬಂತು ಎಂದು ಒಡೆಯರನೂ |
ಪ್ರೀತಿಯಿಂದಲಿ ಬಂದು ಶರಣು ಮಾಡಿದನೂ ||
ಯಾತರಲಿ ಕೊರತಿಲ್ಲವೆಂದು ನಂಬಿದನೂ |
ಆತ ಕೈವಿಡಿದು ಅರಮನೆಯ ತೋರಿದನೂ ||    ೭೧

ಅರಮನಿಯ ಸದರಿನೊಳು ಅರಸು ಕುಳಿತಿರಲೂ |
ಹೊರಗಿಂದ ಅರಸನ ಎದುರಾಗಿ ಬರಲೂ ||
ಉರಿದೆದ್ದು ಮಂತ್ರಿಯನು ಬೆಸಗೊಂಬುತಿರಲೂ |
ಹರುಷದಲೀತನಿರವನು ಪೇಳೆನಲೂ ||            ೭೨

ಎನ್ನ ಮನದಲ್ಲಿರ್ದ್ದ ಹಿಂಗಿತವ ಹೇಳೂ |
ಉನ್ನತದಿ ಬೇಡದುದ ಕೊಡುವೆ ನೀ ಬಾಳೂ ||
ಎನ್ನ ಅರಮನಿಯನು ತೋರುವೆನು ಹೇಳೂ |
ಪನ್ನಂಗ ಧರನಾಣಿ ಸುಳ್ಳಲ್ಲ ಕೇಳೂ ||          ೭೩

ಕೇಳು ಗಣಪತಿರಾಯ ಹೇಳುವೆನು ಒಂದಾ |
ತಾಳಿಕೊಂಡಿಹೆ ಮುನಿಸು ನಿನ್ನ ಸಲೆಯಿಂದಾ ||
ಬಹಳ ಚಿಂತಿಯಲಿ ಒರಗಿದಳು ನೆವದಿಂದಾ |
ಜಾಳು ಮಾತಲ್ಲ ನೀನೋಡು ಮನಸಿಂದಾ ||    ೭೪

ನೋಡಿ ಮಾಡುವದೇನು ಎನ್ನ ಮನಪ್ರಿಯ್ಯ |
ರೂಢಿಯೊಳು ನಿಮಗಾರು ಸರಿಯಿಲ್ಲವಯ್ಯ ||
ಪಾಡು ಪಂಥವ ಬಿಡಿಸಿ ಬುದ್ಧಿ ಹೇಳಯ್ಯ |
ಕೂಡಿಸೆಮ್ಮಿಬ್ಬರನು ಒಂದು ಮಾಡಯ್ಯ ||      ೭೫