ಸಂಧಿ : ನಾಲ್ಕು

ಸೂರ್ಯನ ಪ್ರಭೆ ಬಂದು ಕಿರಣ ಬಂದೊಲೆವಾಗ
ವೀರ ಗಣಪತಿ ನಿದ್ರೆ ತಿಳಿದೆದ್ದು || ಅವ ತನ್ನ
ನಾರಿಯರ ನೋಡಿ ಬೆರಗಾದ            ೧

ಕನ್ನದ ಬಾಯಿಂದ ತಣ್ಣನೆ ತಂಗಾಳಿ
ಬೆನ್ನ ಬಂದೊಲಿವ ರಭಸಕೆ || ಗಣಪತಿ
ತನ್ನಾಯುಧವ ತಡಕಿದನು  ೨

ಮೈಯಿ ಕೈಯ್ಯ ಮುರಿಕೊಂಡು ಸುಯ್ಯನೆ ಸುಯುತ್ತ
ವೈಯಾರದಲಿ ಕಂಡ ಕಳವೀನ || ಕಂಡಿಯ
ಹೊಯ್ದೆಬ್ಬಿಸಿದ ತನ್ನ ಮಡದೀಯ  ೩

ಪಟ್ಟದ ರಾಣಿಯ ತಟ್ಟಿ ಎಬ್ಬಿಸಿದನು ನೀನು
ತೊಟ್ಟ ಬಂಗಾರವ ತೆಗೆದರು || ರಾಮಾಯಿ
ಬಟ್ಟ ಬಯಲಾಯಿತು ಅರಮನೆ       ೪

ನುಡಿದ ಮಾತನು ಕೇಳಿ ಎಡದ ಭಾಗದೊಳೆದ್ದು
ಮುಡಿಯನೋಸರಿಸಿ ಮುಖ ನೋಡಿ || ರಾಯ ನಿಮ್ಮ
ಕಡೆಹವಿರದು ನುಡಿದಳು     ೫

ಕಡೆಹವಿಲ್ಲದುದ ಕಂಡು ಒಡೆದ ಮುತ್ತುಗಳಂತೆ
ಮಡದಿಯರ ಕೂಡೆ ನುಡಿಯನು || ಸಂಕೋಲೆ
ತೊಡರಿದಂತೆದ್ದು ನುಡಿದಾನು         ೬

ಏಳು ಮನೆಯ ಹೊಕ್ಕು ಏಳಿಸಿದ ಸತಿಯರ
ಕೇಳಿರೆ ಬಂದು ಕಥಾನಾವ || ಎಂದಾಗ
ಬೇಳುವೆ ತಾಗಿ ನುಡಿಯ್ಯಾರು           ೭

ಎಂದು ನಮ್ಮರಮನೆಗೆ ಬಾಗಿಸಬರವಿಲ್ಲ
ಹೆಣ್ಣಿನಿಂದ ಬಂದಂತ ಕಥನವು || ಅರಮನೇಲಿ
ಕನ್ನದ ಕಳವೆಸೆದಾವು          ೮

ಕನ್ನೆ ಎಬ್ಬಿಸಿರಾಯ ಕಣ್ಣ ಕೆಂಪಗೆ ಮಾಡಿ
ನಿನ್ನಿಂದ ಬಂದ ಕಥನವು || ಅರಮನೇಲಿ
ಕನ್ನಕ್ಕೆ ಕೋಳುವರಿದಾವು    ೯

ನಡೆರಾಯ ಈ ಮಾತ ಬಿಡು ಮಾತ ಆಡುವರೆ
ತಡೆಯದೇ ತರಿಸು ಉರಗನ || ದಿವೈಯ
ತೊಡುವೆ ನಿಮ್ಮ ಮನಮೆಚ್ಚಿ ಸತ್ಯ ಮಾಡುವೆನು          ೧೦

ಹುತ್ತದೊಳು ಕೈಯಿಕ್ಕಿ ಎತ್ತುವೆನು ಸರ್ಪನ
ಉಕ್ಕುವ ಎಣ್ಣೆಯೊಳು ಹರಳ ತೆಗೆವೇನು || ರಾಯ ನಿಮ್ಮ
ಆಸ್ತಾನ ಮೆಚ್ಚುವಂತೆ        ೧೧

ಕಾದ ಕೊಪ್ಪರಿಕೆಯೊಳು ನೀಸಾಡಿ ಬರುವೆನು
ಕಾದ ಹಾರೆಯನು ತೆಗೆವೆನು || ಗಣಪತಿ ರಾಯ
ಬೇಧಿಸಿ ನಿನ್ನ ಮನವನು      ೧೨

ಕನ್ನದ ಬಾಯಿಂದ ನಿನ್ನ ಬಾಯಿ ವೆಗ್ಗಳ
ಕನ್ನಕ್ಕೆ ತೆರೆಯ ಹಿಡಿಯದಂತೆ || ರಾಮಾಯಿ
ಗನ್ನಗದುಕ್ಕಿನ ಮಾತ ನುಡಿವರೆ        ೧೩

ಅಲ್ಲಿಗಲ್ಲಿಗೆ ನೀನು ಕೊಲ್ಲಪುರವ ಹೊಕ್ಕಂತೆ
ಎಲ್ಲ ಮಾತುಗಳ ಕಲಿತವಳು || ರಾಮಾಯಿ ನಿನ್ನ
ಗಲ್ಲದ ಮೇಲೇನೆ ಹೊಸ ರೇಖೆ        ೧೪

ಒಟ್ಟಿದ ಕಿಚ್ಚಿನೊಳು ಹೊಕ್ಕು ಹೊರಡುವೆ ನಾನು
ಒಟ್ಟಿಸು ಬೇಗ ಹಿಡಿಗಿಚ್ಚ || ಎನುತಾಗ
ಪಟ್ಟದ ರಾಣಿ ನುಡಿದಳು    ೧೫

ನನ್ನ ನಂಬದೆ ರಾಯ ನೀನೆಡ ಮಾಡುತಲಿ
ನಿನ್ನ ತಲೆದೆಸೆಯಲ್ಲಿದ್ದು ಸುರಗೀಯ || ತೆಗೆವಾಗ ನಿಮ್ಮ
ಬಿನ್ನಣದ ನಿದ್ರೆ ತಿಳಿಯವೆ    ೧೬

ಕುರುಳು ಹಿಡಿದೆಳೆವಾಗ ಬೆರಳುಂಗುರವ ತೆಗೆವಾಗ
ಸೆಳೆ ಮಂಚದ ಕೀಲು ಕಳೆವಾಗ || ಎಲೆ ಹೆಣ್ಣೆ
ಒಳಸಾಗದೆ ಕಳ್ಳರು ಬಹಪರಿ ಹೀಗೆ    ೧೭

ರಾಯನಾಡಿದ ಮಾತೀಗೆ ರಾಮಾಯಿ ನುಡಿದಳು
ಆಯದಲ್ಲಿ ಆಭರಣವ ತೆಗೆವಾಗ || ರಾಯ ನಿಮ್ಮ
ಮಾಯಾದ ನಿದ್ರೆ ತಿಳಿಯಾವೆ            ೧೮

ನಾಲಿಗೆಯನು ಕೊಯುವೆ ಶೂಲಕ್ಕೆ ಹಾಕಿಸುವೆ
ಭೋರನೆ ಅಲಗ ತೆಗೆದನು || ಗಣಪತಿ
ಕರಿದೊಟ್ಟಿ ಕೊರಳ ಕೊಯಿವೇನು      ೧೯

ಎತ್ತಿದ ಚಂದ್ರಾಯುಧವ ಕುಟ್ಟುವ ಸಮಯಕ್ಕೆ
ಮತ್ತೆ ಪಂಜರದ ಅರಗಿಳಿ || ನುಡಿದು ರಾಯಗೆ
ಮತ್ತೊಂದು ಮಾತ ನುಡಿಯಿತು       ೨೦

ಸುಮ್ಮನೆ ಸರ ಹೊತ್ತು ನಲಿದಿಟ್ಟಿರಿಬ್ಬರು ಬಂದು
ಹೊಕ್ಕರು ಭಾವನರಮನೆಯ || ಕಳ್ಳರು
ಇಕ್ಕಿದರು ರೇಖೆ ಮುಖದಲ್ಲಿ           ೨೧

ಪಕ್ಷಿಯ ಮಾತನು ಕೇಳಿ ಎತ್ತಿದ ಚಂದ್ರಾಯುಧವ
ಮತ್ತೆ ಗಣಪತಿ ನೆಲಕೆ ಇಳುಹೀದ || ರಾಣಿಯ
ಕಕ್ಕೈಸಿಕೊಂಡು ನುಡಿದನು   ೨೨

ಕೊಂದೆನು ನಾನೆಂದರೆ ಸಂದೇಹ ಮಾಡಬೇಡ
ಕುಂದೀನ ಮಾತ ನುಡಿದೆ || ರಾಮಾಯಿ
ನೊಂದುಕೊಳ ಬೇಡ ಮನದಾಗೆ        ೨೩

ನುಡಿದ ಮಾತಿಗೆ ರಾಣಿ ಕಡದು ಭೂಮಿಗೆ ಬಿದ್ದು
ಒಡೆಯ ನಿನಗಿಂದು ಇದಿರುಂಟೆ || ಪ್ರಾಣಕ್ಕೆ
ಮಡಗಿ ಕೊಂಬೆನೆಯಂದು ನುಡಿದಳು  ೨೪

ಊರೊಳಗಳ ಕಿಚ್ಚು ಅಂಬರ ತುಡುಕುವಂತೆ
ವೀರಗಣಪತಿ ಎದೆಯಲ್ಲಿ || ಕಿಚ್ಚೆದ್ದು
ಭೇರಿ ಹೊಯ್ದಂತೆ ಧ್ವನಿಯಾದೊ     ೨೫

ನೀವೇಳಿ ತಾವೇಳಿ ಕೋವಿದ ಭಟರೇಳಿ
ತೀವಿದ ನಿದ್ರೆ ತಿಳಿಯಾವೆ || ಎಂದೆನುತ
ರಾಯ ಗಣಪತಿ ನುಡಿದನು  ೨೬

ಭೇರಿಯ ಧ್ವನಿಗಳಿಗೆ ಊರೆಲ್ಲ ಎಚ್ಚೆತ್ತು
ವೀರ ವಿಕ್ರಮರು ಪರಿವಾರ || ಮನ್ನೆಯರು
ಕೇಳಿ ಸುಂದಣಿಸಿ ನಡದಾರು  ೨೭

ಒಡೆಯ ಮಂತ್ರಿಯ ಕರೆದು ನುಡಿದ ಏಕಾಂತದಲಿ
ಒಡೆವೆ ಬಂಗಾರವ ತೆಗೆದಾರು || ಕನ್ನವ
ಹಿಡಿದರು ಲೋಕವರಿವಂತೆ  ೨೮

ಏನು ಕದ್ದರು ಎಂದು ತಾನೋಡಿ ಬೆರಗಾದ
ಆನೆಯ ಮೇಲೆಯ್ಯುವಾಗ || ಲೋಕದ
ಮಾನವರಲ್ಲ ಇವರಾರೂ   ೨೯

ಕಡೆಯ ಖಂಡೆಯ ಹೊದೂ ಒಡವೆ ಬಂಗಾರಹೊದೊ
ನುಡಿಯದೆ ನಾನು ಇರಲಾರೆ || ಎಂದೆನುತ
ಒಡನೆ ಪ್ರಧಾನನರುಹಿದ     ೩೦

ಕದ್ದಕಳ್ಳರ ಹಿಡಿವ ಬುದ್ಧಿ ಯಾವುದುಯೆಂದು
ಇದ್ದಲ್ಲಿ ಹೊಕ್ಕು ಅರಸುವೆ || ಭೂಮಿಯ
ಛಿದ್ರವ ಮಾಡಿ ಹಿಡಿತರುವೆ  ೩೧

ಕನ್ನಕನ್ನಗಳಲ್ಲಿ ಮನ್ನೆಯರು ಮಂತ್ರಿಗಳು
ಚೆನ್ನಾಗಿ ಹೆಜ್ಜೆ ವಿಡಿದರು || ರಾಯನ
ಹೊನ್ನು ಬಂಗಾರವಿರುವಲ್ಲಿ           ೩೨

ಇಲ್ಲಿ ಬಿದ್ದಿವೆ ಮುತ್ತು ಅಲ್ಲಿ ಬಿದ್ದಿದೆ ರತ್ನ
ಜಲ್ಲಿ ಬಿದ್ದಿದೇಕೊ ಕುರುವಿನ || ರಾಯನ
ಬಲ್ಲೆಹದ ಮೇಲೆ ಮರೆಯಾದು        ೩೩

ತಳವಾರರ ಕಟ್ಟೆಯಲ್ಲಿ ಉರಿವ ಕೈದುಗಳಿವೆ
ಇರುವ ಬಲ್ಲಿಹದ ಕೊನೆಯಲ್ಲಿ || ಹುಲಿರಾಯನ
ಮೆರೆವ ಬೊಂಬೆಗಳು ಇರಿಸಿವೆ           ೩೪

ಹೆಜ್ಜೆಯ ನೆತ್ತುತ್ತ ಕತ್ತಿಯಲಿ ಬರೆಯುತ್ತ
ಇಬ್ಬನಿಯ ಹುಲ್ಲು ಬಗೆಯುತ್ತ ಅಲ್ಲಲ್ಲಿ
ಬಿದ್ದ ಮುತ್ತುಗಳ ಅರಸುತ್ತ            ೩೫

ಚಂದ ಚಂದಗಳಲ್ಲಿ ಹೆಜ್ಜೆ ಬಂದ ಬಳಿಯಲ್ಲಿ
ಹಿಂದೆ ಹತ್ತಿದರು ಪುರಕ್ಕಾಗಿ || ಶರಣರ
ನಂದಿಯ ಗುಡಿಗೆ ಭರದಿಂದಾ            ೩೬

ಬಂದ ಮಂತ್ರೀಶ ನಂದೀಯ ನೋಡಿದ
ಚಂದ ಚಂದದಲ್ಲಿ ತೊಡಿಗೆಯ || ತೊಡಿಸಿದವರ
ಒಂದಾಗಿ ಶಿವನು ಇಹನೇನೂ            ೩೭

ತಂದ ಒಡೆವೆಯನೆಲ್ಲ ನಂದಿಗೆ ತೊಡಿಸಿದರು
ಒಂದನು ತಾವು ಹಿಡಿಯದೆ || ಅಲ್ಲಿಂದ
ಮುಂದಕ್ಕೆ ನಡೆದ ಪಥವಿದೆ  ೩೮

ಗುಂಡಬ್ರಹ್ಮಗಳ ಗುಡಿಯ ಬಾಗಿಲ ಮುಂದೆ
ಕಂಡೇಹ ಕಟ್ಟಿದ ಕುರುಹಿದೆ || ಕಳ್ಳರು
ದಿಂಡೆಹರಲ್ಲಿ ಇಹರೇನೊ   ೩೯

ಊರ ಬಳಸಿ ಕಾವಿಲು ಆರೈಕೆ ಅವಧಾನ
ಮೀರಿದರೇನ ವಶವಲ್ಲ || ಕಳ್ಳರು
ದಿಂಡೆಹರಿಲ್ಲಿ ಇಹರೇನೊ   ೪೦

ಮುಂದೆ ಹೇಳುವನೊಬ್ಬ ಕನ್ನವ ಕೈರೂವ
ಉನ್ನತ ಬೊಪ್ಪ ಕಲಿವೀರ || ಶೂದ್ರಿಕ
ಹಾಗೆಂಬ ಕಳ್ಳರಿಗೆ ಇವನೊಡೆಯ       ೪೧

ಹಿರಿಯ ಪ್ರಧಾನರು ಬರೆವಂತ ಕರಣಿಕರು
ಶರಣರ ಮಠಕೆ ನಡೆದಾರು || ತಾವಾಗ
ಶರಣು ಮಾಡಿದರು ಶರಣರಿಗೆ          ೪೨

ಏನು ಬಂದಿರಿಯೆಂದು ತಾವರಿತು ಕೇಳಿದರು
ತಾನು ಹೇಳುವೆವು ನಿಮಗೀಗಾ || ಪವಾಡಕ್ಕೆ
ಹಾನಿ ಬಂದಿದೆ ನಿಮ್ಮ ಬಿರುದೀಗೇ     ೪೩

ನಮ್ಮ ಬಿರುದಿಗೆ ಹಾನಿ ಎಂದಿಗೂ ಬಾರದೆಂದು
ಗುಂಡಬ್ರಹ್ಮಗಳು ನುಡಿದರು || ಮಂತ್ರೀಶ
ಅರುಹಿದ ತಮ್ಮ ಶರಣರಿಗೆ  ೪೪

ಏಳು ಕೋಟಿಯ ನಿಡಿದು ಕೊಳುಗೊಂಡು ಅರಮನೆಯ
ಬಹಳ ಬಂಗಾರವ ತೆಗೆದಾರು || ಅಲ್ಲಿಂದ
ಬೀಳುತ್ತ ಬಂದ ಕುರುಹಿದೆ   ೪೫

ನಮ್ಮ ರಾಯನ ಮನೆಯ ಕನ್ನವನಿಕ್ಕಿದರು
ಕನ್ನೆಯರು ತೊಟ್ಟ ತೊಡಿಗೆಯಾ || ರಾಯನ
ಕನ್ನದ ಪೆಂಡೆಹವ ನಿಳುಹಿದರೂ        ೪೬

ಅಂಗವಿದೆ ಕಳವಿದೆ ಲಿಂಗವಂತರು ನೀವು
ಭಂಗಿಸಿ ನಮಗೆ ಕೊಡಬೇಕು || ಎಂದು ಪ್ರಧಾನರು
ನಿಂದಿ(ಸಿ) ಮಾತುಗಳ ನುಡಿದರು        ೪೭

ಕೊಡಿ ನಮ್ಮ ಒಡೆವೆಯ ಬಿಡಿ ಕದ್ದ ಕಳ್ಳರ
ಕಡುಗಲೀ ರಾಯ ಗಣಪತಿ || ಕೇಳಿದರೆ
ಕಡೆಗಾಲ ನಿಮ್ಮ ತಲೆಗಳಿಗೆ   ೪೮

ಸತಿಯನಾದರೆ ಕೊಟ್ಟೇವು ಸುತನಾದರೆ ಕೊಟ್ಟೆವು
ಅತಿಶಯದಿ ನಮ್ಮ ಕಡೆ ಪ್ರಾಣ || ಹೋದರು
ಪ್ರತಿಯ ಕಳ್ಳರ ನಾವು ಕೊಡೆವೆಂದಾ   ೪೯

ಕೊಟ್ಟರೆ ಕಳ್ಳರ ಕುಟ್ಟುವರೀ ತಲೆಗಳ
ನೆಟ್ಟ ಶೂಲದಲಿ ತೆಗೆವಾರಿ || ಕೊಡೆವೆಂಬ
ಕಟ್ಟಿದ ಬಿರುದು ನಮಗುಂಟು          ೫೦

ಕೊಡೆನೆಂಬ ಕಳ್ಳರ ತೊಡರು ಪಾದದಲಿಕೊ
ಹೊಡೆ ನಮ್ಮ ತಲೆಯನೆನುತಾಗ || ಗುಂಡಬ್ರಹ್ಮಯಗಳ
ಮಡದಿಯರು ನಿಂದು ನುಡಿದರು       ೫೧

ಕೊಡದಿರ್ದರೆನಾಯಿತು ತಡೆದಿರಿ ನಿಮ್ಮೊಶದಲಿ
ಒಡಗೊಂಡು ಬನ್ನಿ ಮುಖ ನೋಡಿ || ನಾವು ನಮ್ಮ
ಒಡೆಯನಿಗೆ ಹೇಳಿ ಕಳುಹಿವೆವೂ         ೫೨

ಒಳಗೊಂಡು ಬಂದರೆ ಹಿಡಿದುಕೊಳ್ಳದ ಹಾಗೆ
ಕೊಡಿ ನಿಮ್ಮ ಬಲಗೈಯ್ಯ || ಎಂದರೆ
ನುಡಿದು ಮಂತ್ರೀಶ ಧರ್ಮವನು ಕೊಟ್ಟ          ೫೩

ಒಡಂಬಡಿಕೆಯಲ್ಲಿ ಕಳ್ಳೆರ ಕರತಂದರೆ
ಪಡೆಯಲ್ಲ ನೋಡಿ ನುಡಿಗಿತೂ || ಕಳ್ಳರ
ಕಡೆಗಣ್ಣ ನೋಟ ಕಿಡಿತಾಗಿ  ೫೪

ನೋಡಿದರು ಕಳ್ಳರು ಹೆಡಿಗೊಂಡರು ಜನರು
ಕೂಡಿದ ಸಭೆ ವಶವಲ್ಲ || ಎಂದೆನುತ
ಮಾಂತ್ರೀಶ ಆಳ ಕಳುಹಿದನರಸಂಗೆ     ೫೫

ಗುಂಡುಬ್ರಹ್ಮಯಗಳ ಮನೆಯಲ್ಲಿ ಕಂಡೆವು ಕಳ್ಳರ
ಕೊಂಡು ಬರಲೀಸದೆ ತಡೆದವರೆ || ಎಂದೆನುತ
ಮಂತ್ರೀಶ ಕಂಡೆಹವ ಕಟ್ಟಿ ಕಳುಹಿದ   ೫೬

ಬಂದ ಮಂತ್ರೀಶ ಮನುಷ್ಯನಿಂದನೋಲುಗದಲ್ಲಿ
ಚಂದದಲಿ ಕರವ ಮುಗಿದನು || ಮಹಾರಾಯ
ಬಂದ ಬಿನ್ನಪವ ಅವಧಾನ  ೫೭

ಅಂಗದ ಕಳ್ಳರ ನಮ್ಮ ವಶ ಮಾಡಿಕೊಂಡೆವು
ಹಿಂಗೀಸಿ ನಮಗೆ ಕೊಡೆನೆಂದು || ಗುಂಡುಬ್ರಹ್ಮಗಳ
ಅಂಗನೆಯರು ತಾವು ನುಡಿದಾರು       ೫೮

ನೋಡಿದರೆ ಕಳ್ಳರು ಹೇಡಿ ಗೊಂಬುವರಲ್ಲ
ನೋಡಿದ ದಿಕ್ಕು ಕೆಡುತದೆ || ಮಹಾರಾಯನ
ಕೂಡಿದ ಪಡೆಗೆ ವಶವಲ್ಲ    ೫೯

ಪಡಿ ಹೊನ್ನ ತಕ್ಕೊಂಡು ಹಿಡಿಯದ ಮನ್ನೆಯರ
ಒಡವೆ ಸೌಭಾಗ್ಯವ ತೆಗೆಸೂವೆ || ಎಂದು ಗಣಪತಿ
ಎಡದ ಬಲದವರ ಮುಖ ನೋಡಿ      ೬೦

ಒಡೆಯನೋಲಗದಿಂದ ಕಡುಗಲಿ ರಾವುತರು
ಒಡನೆ ಕಂಡೆಹವ ಜಡಿಯುತ್ತ || ಕಳ್ಳರ
ಹಿಡಿವೆವು ರಾಯ ಕೊಡು ವೀಳ್ಯಾವ    ೬೧

ಎಂದ ಮಾತನು ಕೇಳಿ ತುಂಬಿದ ಕೋಪವು
ಕೊಂಬೆಳು ಮಲೆಯ ಬರು ಹೇಳು || ಎಂದರೆ
ಬೆಂಬೆತ್ತಿ ಬಂದ ಹರಿಕಾರ     ೬೨

ಛಪ್ಪನ್ನ ದೇಶಕ್ಕೆ ತಪ್ಪದೆ ಹರಿಕಾರ
ಈ ತೆರದಲಿ ದೊರೆಗಳಿಗೆ || ಕಳುಹಿದರು
ತಪ್ಪದೆ ಬನ್ನಿ ಜಗಳಕ್ಕೆ       ೬೩

ನೆತ್ತವನಾಡುವರೆಲ್ಲ ಕತ್ತಿಯ ಕೈಯಲ್ಲಿ
ಹಿಡಿದರು ಮತ್ತೆ ಗಂಪತಿಯ ಬೆಸಗೊಳಿ || ರಾಯಗೆ
ಹಸ್ತವ ಮುಗಿದು ಹೊರಟರು           ೬೪

ಪಂಥವನಾಡುವ ಹೊಂತ ಕಾರಿಗಳೆದ್ದು
ತಿಂತಿಣಿಗೊಂಡು ನಡೆದಾರು || ದಂಡೆತ್ತಿ
ಸಂತೋಷ ರಾಯ ಬರಲೆಂದು           ೬೫

ಈಟಿಂದ ತೆಗೆ ಹರಿದಾಡಿಲೆಂಗಣಿಸಿ ಭೂತಳಕ್ಕೆ
ದಾಳಿಯ ನಡೆವದು || ಸಾಂಭ್ರಣಿಯಯ್ಯಗೆ
ತೊಪ್ಪಿನ ಹಕ್ಕರಿಕೆ ಬಿಗಿದರು            ೬೬

ಪುಟ್ಟಿಯಲಿರುವಾವು ಬಟ್ಟಭದ್ರನೆಂಬ ತೇಜಿ
ಪಟ್ಟಣಕ್ಕೆಲ್ಲ ಹೊಸರಾಗಿ || ತೇಜಿಗೆ
ಪಟ್ಟಿಯ ಜೋಡ ಬಿಗಿದಾರು           ೬೭

ಅಂಗಳಿಂದ ಏರಿಗೆ ಹಾರಿ ಮುಗಿಲಿಗೆ ಲೆಂಗಿಸಿ
ಜಗಳಕ್ಕೆ ಜಾತಿಕರಿ ತಾನೂ || ಎಂಬತೇ
ಜಿಗಿ ಬೆಳಿ ಹಕ್ಕರಿಕೆ ಬಿಗಿದಾವೂ           ೬೮

ಉದ್ದಕ್ಕೆ ಹಾರುವುದು ಬುದ್ಧಿಗೆ ಲೆಂಗಮಿಸುವುದು
ಸಿದ್ದಿಯ ಪುರನ ಬಯಸುವುದು || ಸಾಂಬ್ರಣಿಗೆ
ಮುತ್ತಿನ ಜೋಡು ಬಿಗಿದಾವು           ೬೯

ಅಗಳಿಗೆ ಹಾರುವುದು ಮುಗಿಲಿಗೆ ಲೆಂಗಣಿಸುವುದು
ಜಗಳಕ್ಕೆ ಕಾಲ ಕರೆದಾವು || ಸಾಂಬ್ರಣಿಗೆ
ಹವಳದ ಜೋಡು ಬಿಗಿದಾವು           ೭೦

ಕಟ್ಟಾನೆ ಕರಿಯಾನೆ ಎಂಟು ನೂರು ಮದ್ದಾನೆ
ಮಂಟಪದ ಕಾಲ ಮರಿಯಾನೆ || ಎಂಬಾನೆಗೆ
ಎಂಟನೂರು ಹಕ್ಕರಿಕೆ ಜೋಡು ಬಿಗಿದಾವು       ೭೧

ಕಳ್ಳನೆ ಬಿಳಿಯಾನೆ ಏಳು ನೂರು ಮದದಾನೆ
ಮಾಳಿಗೆ ಗಾಲ ಮರಿಯಾನೆ || ಎಂಬಾನೆ
ಏಳುನೂರು ಹಕ್ಕರಿಕೆ ಬಿಗಿದಾವೂ       ೭೨

ಗುಡಿಯ ಗುಡಾರವು ಕೂಡಿದವೋ ದೊರೆಯು
ಜೋಡಿಸಿದ ಆನೆಯ ಗಡಿಯಿಲ್ಲ || ಗಣಪತಿ
ಕೂಡಿದ ದಂಡು ತೆರಳೀತೂ  ೭೩

ಭೇರಿ ತಮ್ಮಟಿ ಹರೆ ಹೆಗ್ಗಾಳೆ ವೀರಣವುಲಿವ ಶೃತಿ
ಮೋರಿ ಚಿನ್ನಂಗಹಳೆ || ಸ್ವರದಿಂದ
ಭೋರೈಸುತ್ತ ಮುಂದೆ ನಡೆದಾರೂ    ೭೪

ಕೊಂಬು ಕೊಳಲು ಚಿನ್ನ ಬೊಂಬೂರಿ ಹೆಗ್ಗಾಳೆ
ಅಂಬಿನ ಹೊರೆ ಪಿಟಲಾಳು || ಸಹವಾಗಿ
ದಂಡು ನಡೆಯಿತು ಪುರಕ್ಕಾಗ           ೭೫

ಆನೆಯನೇರಿದನು ಬೇಗ ಗಣಪತಿರಾಯ
ಸೇನೆ ಮಾರ್ಬಲವು ಸಹವಾಗಿ || ಬರುತಿರೆ
ಗಣಪತಿ ಶರಣರ ಪುರಕೆ ನಡೆದಾರೊ   ೭೬

ಅರಸು ಗಣಪತಿರಾಯ ಪುರದೊಳು ತಾ ನಿಂತು
ಕರೆಯಂದ ವೀರ ಶರಣರೂ || ಕಳ್ಳರ
ತರಿಸಿ ಕೊಡಿಯೆಂದು ನುಡಿದಾನೂ      ೭೭

ಎತ್ತಿ ಬಂದಿತು ದಂಡು ಮುತ್ತಿಕೊಂಡಿತು ಪುರವ
ಮತ್ತೆ ಮಂತ್ರಿಯ ಕೂಡೆ ನುಡಿದಾನು || ರಾಯನು
ಸತ್ಯದ ಶರಣರ ಕರೆಯೆಂದಾ೭೮

ಕೊಡಿಯೆಂದು ಹಿರಿಯವರ ನುಡಿಯಲೇಕವರಿಗೆ
ಹಿಡಿಕೊಂಡ ಬನ್ನಿ ಮನೆ ಮುತ್ತಿ || ಎಂದಾನು
ಎಡ ಬಲದವರ ಮುಖ ನೋಡಿ         ೭೯

ಹಿಡಿದುಕೊಂಡು ನಿಮ್ಮ ಬರಲೀಸದಿರ್ದಡೆ
ಕಡೆಹನಿಕ್ಕಿದ ಕಾಲ ಕಡಿಸೂವೆ || ಎಂದೆನುತ
ಪೊಡವೀಪರಾಯನು ನುಡಿದಾನೂ    ೮೦

ಕದ್ದ ಕಳ್ಳರ ಕೊಡದಿರ್ದಡೆ ಗುಂಡಬ್ರಹ್ಮಗಳ
ಬುದ್ದಿಯಲಿ ಬೇಗ ಬರಹೇಳಿ || ಎನುತಲೆ
ರುದ್ರ ಕೋಪದಲಿ ನುಡಿದಾನೂ         ೮೧

ದಟ್ಟಿಯನುಟ್ಟು ನಡುವ ಕುಟ್ಟಿಸುವೇನು
ತೊಟ್ಟ ಬಂಗಾರವ ತೆಗೆದವನಾ || ತಲೆಗಳ
ನೆಟ್ಟ ಶೂಲದಲಿ ತೆಗೆಸೂವೆ  ೮೨

ಅರಮನೆಯ ಕದ್ದವನ ಗರಗಸದಲಿ ಕೊಯಿಸುವೆ
ಶಿರವ ತುಂಡಾಗಿ ಕಡಿಸೂವೆ || ಕಳ್ಳರ
ಹೊಡೆದಂಡಿನೊಳಗೆ ಹೊಡೆಸುವೆ       ೮೩

ಮಡದಿಯರ ಮೈಮುಟ್ಟಿ ತೊಡಿಗೆಯ ತೆಗೆದವನ
ಖಡಿ ಕಂಡವಾಗಿ ಕಡಿಸುವೆ || ಕಳ್ಳರ
ಸಿಡಿ ಶೂಲದೊಳಗೆ ತೆಗೆಸುವೆ            ೮೪

ಹೊನ್ನ ಕದ್ದ ಕಳ್ಳನ ಬೆನ್ನಖಂಡವ ಕೊಯಿಸೂವೆ
ಬೆನ್ನ ಚರ್ಮದ ಸುಲಿಸೂವೆ || ಎನುತ ರಾಯ
ತನ್ನ ಕೋಪದಲಿ ನುಡಿದಾನು           ೮೫

ಜಡೆಯ ಕಂಬಕೆ ಕಟ್ಟಿ ಎಡಗೈಯ ಕಟ್ಟಿಸುವೆ
ಮಡುವಿನೊಳು ಅದ್ದಿ ತೆಗೆಸೂವೆ || ಸುಣ್ಣದ
ಕಡಲ ತುಂಬಿಸುವೆ ಮನದಣಿಯಾ      ೮೬

ಅರಸು ಗಣಪತಿರಾಯ ನುಡಿದ ಮಾತನು ಕೇಳಿ
ಮಡದಿಯರು ತಾವು ಸಹವಾಗಿ || ಶರಣರು
ನಡೆದು ಬರುತಹರೆ ಇದಿರಾಗಿ           ೮೭

ಕಡೆ ಉಗ್ರದಿ ರಾಯ ನುಡಿಯಲು ಕಳ್ಳರು
ನಡದು ಬರುತಹರೆ ಕುಣಿಯುತ್ತಾ || ಕಳ್ಳರ
ನಡೆಯ ಕಂಡರೀತ ಗಣಪತಿ  ೮೮

ಬಂದಾರು ಕಳ್ಳರು ನಿಂದು ಮಾತಾಡಿದರು
ಕೊಂದನೆಂದರೆ ಅಳವಲ್ಲಾ || ಕಳ್ಳರು
ತಂದು ತೋರಿದರೆ ನಾವು ಹೆದರುವರೇ            ೮೯

ಧರೆಯ ಕಳ್ಳರು ಅಲ್ಲ ಸರಲೋಕದವರೇನೊ
ನರಲೋಕದವರವಳಗಲ್ಲಾ || ರಾಯ ನಿಮ್ಮ
ಬಿರುದಿಗೆ ಕದ್ದ ಕಳವೇನೂ   ೯೦

ನಿನ್ನ ಕಾವಲು ಕೋಟಿಯಿನ್ನಾರಿಗಳವಲ್ಲ
ಕನ್ನವನಿಕ್ಕಿದರು ತೆರಪಾಗಿ || ಆನೆಯ ಮೇಲೆ
ಹೊನ್ನ ಹೇರುವರು ಬಡವಾರೆ         ೯೧

ಕಲ್ಲು ಕಂಚಿನ ಕೋಟಿಯಲ್ಲಕೆ ಬರುಲೋಹ
ಎಲ್ಲವು ಕಳಿವಾರೆ ಅದು ವಜ್ರದ || ಕೋಟೆಯಲ್ಲಿ
ಕಳ್ಳರಿಗೆ ವಶವಿಲ್ಲವಿದುವೆಂದೂ       ೯೨

ಕನ್ನ ಕನ್ನವ ದಾಂಟೆ ಮನ್ನೆಯರ ಮಲಗಿಸಿ
ಕಾವಲನವನೆಲ್ಲ ಕಳಿಕೊಂಡು || ರಾಯ
ನಿನ್ನ ಕಾಳ ಪೆಂಡೆಹವ ತೆಗೆದಾರೂ      ೯೩

ಇರಿವರೆ ಈಟಿ ಹರಿಯುವು ಕೈದುಗಳು
ತರಿದರೆ ಕೊಡಲಿಗಳವಲ್ಲಿ || ಕಳ್ಳರ
ಬರಿದೆ ಕೆಣಕಿ ನೀನು ಕೆಡಬೇಡಾ          ೯೪

ಬೇಡ ಗಣಪತಿರಾಯ ಸಾರಿದೆವು ಹುಲ್ಲೆತ್ತಿ
ನಿನ್ನ ಆಳೆಲ್ಲ ಕೂಡಿ ಮುನಿದರೆ || ವಶವಲ್ಲ
ಬೀಳೂವೆವುಂಟು ಅವರಿಗೆ    ೯೫

ನಿನ್ನ ಮನ್ನೆಯರಿಗೆಲ್ಲ ಕನ್ನಗತ್ತಿಯೆ ಸಾಕು
ನಮ್ಮ ಕೆಣಕಿದರೆ ಹಸವಲ್ಲ || ಎಂದಾಗ
ಮನ್ನಣಿಯ ಮಾತು ನುಡಿದರು        ೯೬

ಸರ್ವ ದಂಡಿಗೆ ಇವರಿಬ್ಬರ ಹೆಬ್ಬುಲಿಯೆಂದರೆ
ತಬ್ಬಿಬ್ಬಿಯಾಗಿ ನುಡಿವರೆ || ಕಳ್ಳರ
ಇಭ್ಬಾಗವಾಗಿ ಕೆಡಿಸೂವೆ     ೬೭

ಹಾಗೆಂದ ಮಾತಿಗೆ ಕೇಳಿ ಬಂದರು ಶರಣರು
ನಿಂದರು ತಮ್ಮ ಮಠದಲ್ಲಿ || ಕಳ್ಳರಿಗೆ
ವಂದನೆಯ ಮಾಡಿ ನುಡಿದಾರೂ        ೯೮

ಕನ್ನಗಳವಿನ ರಾಯ ಬಿನ್ನಾಣ ಚಿತ್ತೈಸು
ನಿಮ್ಮ ಪ್ರತಾಪಗಳ ಕೇಳಿದರು || ಗಣಪತಿರಾಯ
ಮನ್ನಿಸಿ ನಮ್ಮ ಕಳುಹಿದಾ   ೯೯

ಪಂಥ ಪ್ರತಾಪವ ನಿಮ್ಮಲಂತರವ ಹೇಳಿದರೆ
ಚಿಂತೆ ರಾಯನಿಗೆ ದೊರೆಕೊಂಡು || ಅವನೊಂದು
ಪಂಥದ ಮಾತ ನುಡಿದಾನೂ            ೧೦೦

ನೋಡಬೇಕೆಂದವನು ಆಡಿದ ಮಾತುಗಳ
ಮೋಡದ ರವಿಯ ಮರೆಯಂತೆ || ಬಿಜಮಾಡಿ
ಸಾಗದ ಮಂಜು ಹರಿಯಂತೆ೧೦೧

ಎಲ್ಲ ಮನ್ನೆಯರಿಗೆ ಬಲ್ಲಿದರೆ ಹೌದೆಂದು
ಎಲ್ಲ ಮನ್ನೆಯರು ಮೊರೆದಳೆ || ಕಳ್ಳರ
ಕೊಲ್ಲಬೇಕೆಂದು ನುಡಿದಾರೂ          ೧೦೨

ನಡೆದು ಬರುವ ರಭಸಕ್ಕೆ ಅಡಗಿರ್ದ ಕಳ್ಳರು
ಒಡಗೊಂಡು ಬರಲಿದಿರಾಗಿ || ಕಳ್ಳರ
ನಡೆಯ ಕಂಡರೀತ ಗಣಪತಿ  ೧೦೩

ಕಳ್ಳರ ಕಾಣುತ್ತ ಕಂಡೆಹ ಜಡಿಯುತ್ತ
ಹೊಯಿದು ಕಂಡೇಳ ನಡುವೆ || ಎನುತಲಿ
ಹೊಯ್ದವರಿಗೆ ರಾಜ್ಯವ ಕೊಡುವೆ    ೧೦೪

ಕಡು ಉಗ್ರದಿ ರಾಯ ಹಿಡಿದು ಖಂಡವ ತೆಗೆದು
ಕಡಿವೆನು ಅವರ ತಲೆಗಳ || ಈಗಲೆಂದು
ಗಣಪತಿ ಗುಂಡಿಗೆ ನಡುಗಿತೈ ಬೇಗಾ   ೧೦೫

ಕಟ್ಟಿರೊ ಕಳ್ಳರು ಕುಟ್ಟಿರೊ ತಲೆಗಳಾ
ನೆಟ್ಟ ಶೂಲದಲಿ ತೆಗೆಯಿರೊ || ರಾಜ್ಯದ
ಪಟ್ಟವ ಕಟ್ಟುವೆ ಅವನೀಗೆ  ೧೦೬

ಹಿಡಿದು ಕಟ್ಟಿದವನಿಗೆ ಕೊಡುವೆನು ರಾಜ್ಯವ
ಒಡನೆ ಬಂಗಾರವ ಮೊದಲಾಗಿ || ಕೊಡುವೆನೆಂದು
ಎಡ ಬಲದವರ ಮುಖ ನೋಡಿ         ೧೦೭

ಒಡವೆ ಬಂಗಾರವು ಬೇಡ ಕೊಡುವ ರಾಜ್ಯವು ಬೇಡ
ಹಿಡಿದರೆ ನಮಗೆ ಕೈಬಾರೊ ಎಂದು || ರಾಯನ
ಎಡ ಬಲದವರು ನುಡಿದಾರೂ          ೧೦೮

ಕೊಂದೆನೆಂದೆನುತ ಬಂದ ಮನ್ನೆಯರೆಲ್ಲ
ನಿಂದರು ಸರ್ಪ ಮೊರೆವಂತೆ || ಕಳ್ಳರ ಕಿಡಿ
ಗಂಣ ನೋಟ ಕಿಡಿ ತಾಗಿ      ೧೦೯

ಉರು(ಗ) ಗರುಡನ ಕಂಡು ಅಡಗಿ ಕೊಂಡದದಿ
ಗಿಡುಗನಾಡಿದರೆ ನೀರುವಕ್ಕಿ || ಅಲ್ಲಲ್ಲಿ
ಅಡಗಿ ಕೊಂಬಂತೆ ಜನರೆಲ್ಲಾ           ೧೧೦

ಕೊಂದೆನೆನುತಾಗ ಬಂದು ಗಣಪತಿರಾಯ
ಸಂದೇಹಗೊಂಡು ನಡುಗಿದಾ || ಕಳ್ಳರ ಕೊಡೆ
ನಿಂದು ಮಾತುಗಳ ನುಡಿದಾನೂ        ೧೧೧

ಮದ್ದು ಮಾಯಗಳಿಂದ ಸಿದ್ದ ವೇಷಗಳಿಂದ
ಇದ್ದೀರಿ ನೀವು ಶರಣರೂ || ಮೋಕ್ಷದ
ಹೊದ್ದಿಕೆಯೇಕೆ ನಿಮಗೆಂದಾ            ೧೧೨

ತೆಲೆಯ ಶೂಲಕೆ ಹಾಕಿ ಕೊಲಿಸಯ್ಯ ನಮ್ಮನು
ತಲೆಗೆ ಕೊಡುವೆವೂ || ರಾಯ ನಮ್ಮ
ಲಲನೆಯರ ಸೇವೆಯ ಕೊಡುವೆವು      ೧೧೩

ಕಟ್ಟಲೇಕೆ ಕಳ್ಳರ ಕುಟ್ಟಲೇಕೆ ತೆಲೆಗಳ
ನೆಟ್ಟ ಶೂಲಗಳ ತೆಗೆಯಲೇಕೆ || ಅವರಿಗಾಗಿ
ಕೊಟ್ಟೇವು ನಮ್ಮ ತಲೆಗಳಾ೧೧೪

ಅರಸುತನಕೆ ಮುಂದೆ ಹರುಷ ಬರುವ ಹಾಗೆ
ತರಿಸಿ ಶೂಲಗಳ ನೆಡಿಸಯ್ಯಾ || ಗುಂಡಬ್ರಹ್ಮಗಳ
ಅರಸಿಯರು ನಿಂದು ನುಡಿದಾರೂ      ೧೧೫

ನೋಡಿದರು ಶರಣರು ಪೆಂಡೆದ ರಾಯನ
ಬೇಡಿದರು ಶೂಲವ ಕೊಡೆಯೆಂದೂ || ಗಣಪತಿ
ಕೂಡೆ ಮನ್ನೆಯರ ಕಳುಹಿದಾ           ೧೧೬

ಅರಸುತನಕೆ ಮುಂದೆ ಹರುಷ ಬರುವ ಹಾಗೆ
ತರಿಸಿ ಶೂಲಗಳ ನೆಡಿಸಯ್ಯಾ || ಎಂದರೆ
ಅರಸು ಪ್ರಧಾನನ ಕಳುಹಿದಾ            ೧೧೭

ಪಂಚಾಳ ಬಡಿಗಿಯ ಸಂಚು ವೇಗದಿ ಕರಸಿ
ಕಂಚಿನ ಹಿಡಿಯ ಉಳಿ ಕೊಡತಿ || ಬಾಚಿಯ ತೆಕ್ಕೊಂಡು
ಪಂಚಾಳ ಬಂದ ತವಕದಲಿ   ೧೧೮

ಬಂದನು ಪ್ರಧಾನ ನಂದನ ವನಕಾಗಿ ಶ್ರೀ
ಗಂಧದ ಮರನ ಕಡಿಸಿದಾಗ || ಮೇಲಕ್ಕೆ
ಚಂದ ಮಾಡಿದರು ಹಲಗೇಯಾ        ೧೧೯

ಸತ್ಯರು ಶರಣರಿಗೆ ಎತ್ತಿ ನಡೆಸಿದ ಶೂಲ
ಮುಕ್ತಿ ಫಲ ಪದವಿ ದೊರಕಿದೋ || ಶರಣರ
ಚಿತ್ತವ ಹರಸಿ ನಲಿದಾವೂ    ೧೨೦

ಫಲವುಳ್ಳ ಶರಣರಿಗೆ ನೆಡುವ ಶೂಲಕ್ಕೆಂದು
ಅನುಕೂಲವಾದೆವೆಂದು ನಲಿದರು || ಶರಣರಿಗೆ
ಗೆಲುವ ಹರಸಿ ನಲಿದಾವೂ   ೧೨೧

ಆಯವಾದವು ಶೂಲ ಜಾಯವಾದವು ಶೂಲ
ಆಯಪಾಯದಲ್ಲಿ ನಲಿದಾವು || ಗುಂಡಬ್ರಹ್ಮಯ್ಯಗಳ
ಕಾಯವ ಬೇಡಿ ನಲಿದಾವೂ  ೧೨೨

ತೆಂಗಿನ ಮರದಂತೆ ನಿಂದವು ಆ ಶೂಲ
ಲಿಂಗಯ್ಯನಿರುವ ಪುರದಂತೆ || ಗುಂಡಬ್ರಹ್ಮಯಗಳ
ಅಂಗವ ಹರಸಿ ನಲಿದಾವೂ   ೧೨೩

ಅಡಕೆ ಮರದಂತೆ ತೊಡಕಿದವು ಆ ಶೂಲ
ನಡುವೆ ಕೈಲಾಸ ನಮಗೆಂದಾ || ಗುಂಡಬ್ರಹ್ಮಗಳ
ಹೆಂಡಿರಬೇಡಿ ನಲಿದಾವೂ    ೧೨೪

ಶೂಲವ ನೆಟ್ಟ ಸುದ್ದಿ ಶೀಲವಂತರು ಕೇಳಿ
ಶೂಲವ ಕೇಳಿದ ವ್ರತಿಗಳು || ಬಂದು
ಸಾಲಿದೇವಾಂಗವ ನುಡಿಸಿದರೂ        ೧೨೫

ಕುಮುದ ವರ್ಣದ ಸೀರೆ ಅಮರವಾಳಿಯ ಕೆಂಪು
ಸಮರಗಂಧಿಯಗಳಿಗೆಯೆಸೆದಾವು || ಎಂದೆನುತ
ಹವಣಿಸಿ ಶೂಲಕೆ ಬಿಗಿದಾರೂ           ೧೨೬

ಕೆಂಡಗಾವಿಯ ಸೀರೆ ಉದ್ದಂಡ ಚಂದ್ರಗಾವಿ
ಕೊಂಡು ಬಂದರು ಶೂಲಕನುವಾಗಿ || ಬಿಗಿದರು
ಗುಂಡಬ್ರಹ್ಮನವರ ಶರಣರೂ           ೧೨೭

ಗಂಧಗಾವಿಯ ಸೀರೆ ಗೊಂದಣದ ಹೂ ಮೊಗ್ಗು
ಚಂದದಿ ಹಳದಿ ಬಿಗಿದಾರು || ಮುಪ್ಪಟ್ಟಿಯ
ಚಂದ ಚಂದದಲಿ ಬಿಗಿದರೂ೧೨೮

ದಾಯಗಾವಿಯ ಸೀರೆ ರಾಯ ಚೌರಾಳಿ
ಆಯವುಳ್ಳಚ್ಚು ಅರಗಿಣಿ || ಪಟ್ಟೆಯ
ಶೂಲಕ್ಕೆ ಕಟ್ಟಿ ಹಿಡಿದರೂ   ೧೨೯

ಹಳದಿ ಹಸಿರು ಕೆಂಪು ಹೊಳೆವ ವಾರಿಜ ಪಟ್ಟೆ
ಯಳೆಯ ಮೊದಲಾದ ಸುರಿಯ || ಸೀರೆಯ
ಬಳಸಿ ಶೂಲಕೆ ಬಿಗಿದಾರೂ   ೧೩೦

ತೊಪಕವಾರೆಯು ಚೌಪಗಟ್ಟದ ಸೀರೆ
ರೂಪಲಿ ಹೊಳೆವ ಬೀಳಿದು || ದೇವಾಂಗ
ಒಪ್ಪೊತ್ತಾನೀ ಶೂಲಕೆ ಬಿಗಿದಾರೂ    ೧೩೧

ಅಂದವಾದವು ಶೂಲ ಚಂದವಾದವು ಶೂಲ
ನಿಂದೆರಡು ಶೂಲ ಬೆಳೆದಾವೂ || ಶರಣರು
ಬಂದರೆಂದು ನಲಿದಾವೂ೧೩೨

ಶೂಲ ಶೃಂಗಾರ ಮಾಡಿ ಭೂಪಾಲನೆಗಳಿಂದ
ಕಾಲಾಳು ಬಂದು ಕರೆಯಲೂ || ಗುಂಡಬ್ರಹ್ಮೈಗೆ
ಬಾಳವ ಮಡಗಿ ಶರಣೆಂದೂ೧೩೩

ನೆಟ್ಟ ಶೂಲಗಳಿಗೆ ಕೊಟ್ಟ ಆಭರಣಗಳಿಂದ
ದಿಟ್ಟಿಸಿ ನೋಡ ಅಳವಲ್ಲಾ || ಕೈಲಾಸವ
ಮುಟ್ಟಿದಿದೆ ಸ್ವಾಮಿ ಬಿಜ ಮಾಡಿ     ೧೩೪

ನುಡಿದ ಮಾತನು ಕೇಳಿ ಎಡದ ಭಾಗದೊಳೆದ್ದು
ತೊಡಿಗೆ ಕುಪ್ಪಸವಳವಡಿಸಿ || ದಟ್ಟಿಗಳ
ಉಡುವ ಶೃಂಗಾರವನೆ ಹೊಗಳೂವೆ   ೧೩೫

ಉಟ್ಟ ದಟ್ಟಿಯ ಮೇಲೆ ಕಟ್ಟಿದೊಂಡಕುಡಿದಾರ
ಬಿಟ್ಟ ಗೊಂಡೆಯವುಜವಜಾಡೆ || ಶರಣರು
ಕಟ್ಟಾಳಾಯಸವಾಗಿ ಮೆರಿದಾರೊ      ೧೩೬

ವೀರರಿಬ್ಬರು ತಾವು ವೀರ ಜಡೆಗಳ ಕಟ್ಟಿ
ಗೀರು ಗಂಧಗಳ ಧರಿಸಿದರು || ಶರಣರು
ನಾರಿಯರು ಸಹವಾಗಿ         ೧೩೭

ಬಿಟ್ಟ ಮಂಡೆಯ ಕಟ್ಟಿ ಈಶ್ವರ ಪೂಜೆಯ ಮಾಡಿ
ಗಂಧ ಭಸಿತವು ನೊಸಲೀಗೆ || ರುದ್ರಾಕ್ಷಿಯ
ಭೂಷಣವ ಧರಿಸಿ ಹೊರಟರೂ         ೧೩೮

ಹಲವು ದೇವಾಂಗದ ಚಲುವಗಾಸೆಯ ಹಾಕಿ
ಬಲದ ಬಾಕುಗಳೆಸೆಯಲೂ || ಶರಣರು
ನಲಿದರು ತಮ್ಮ ಮಠದಲ್ಲಿ            ೧೩೯

ಶರಣರ ನಾರಿಯರು ತೆಗೆದುಟ್ಟ ದೇವಾಂಗವ
ಓಲೆ ಮೂಗುತಿ ಶಿವದಾರ || ಚಿಂತಾಕು
ಮೇಲೆ ಹವಳ ರುದ್ರಾಕ್ಷಿ ಧರಿಸಿದರು    ೧೪೦

ಹಿಡಿದ ಹಸ್ತದ ಲಿಂಗ ಜೆಡೆಯೊಳು ರುದ್ರಾಕ್ಷಿ
ನಡೆದು ಬರುತಲಿರೆ ಶರಣಾರು || ಇದಿರಾಗಿ
ಒಡೆಯ ಜಂಗಮದ ಮಠಕಾಗಿ           ೧೪೧

ತಮ್ಮ ಬಾಗಿಲ ಮುಂದೆ ಧರ್ಮ ಸಿಂಹಾಸನ
ಧರ್ಮಿಗಳಿಹವೊಳಗೆಲ್ಲ || ಕಾವ ನಂಬಿಗೆ
ಯೊಳಿದ್ದ ಹಿರಿಯಾರೂ      ೧೪೨

ಒಡೆವೆ ಬಂಗಾರವ ಮಡಗೀದ ಶರಣರು
ಒಡಗೊಂಡು ಬಂದ ಕಳ್ಳರನೂ || ಕಥೆಯ
ಧರಿಸಿ ಜಂಗಮವ ಸೊಬಗಿನಲಿ          ೧೪೩

ಅಂಗದ ಕಳ್ಳರು ಶೃಂಗಾರವನು ಮಾಡಿ
ಜಂಗಮ ಲಿಂಗದೊಳುಗೂಡಿ || ಶರಣರು
ಸಂಗೀಸುಖ ಕೂಡೆ ನಡೆದಾರೂ          ೧೪೪

ಏಕೋದೇವಾಯೆಂದು ನಾಲ್ಕು ವೇದವ ನೋಡಿ
ಲೋಕ ಪ್ರಸಂಗಳನು ಬಿಟ್ಟು || ಬ್ರಹ್ಮದ
ವಾಕ್ಯವನಾಡಿ ಕಳ್ಳರ ಕೂಡೆ  ೧೪೫

ಚತುರ್ವೇದವ ನೋಡಿ ಅಪ್ರತಿಮನಾಗಿರ್ದು
ಸ್ತುತಿಸುವ ವೇದ ಶಿವಮಂತ್ರದ || ವಾಕ್ಯವ
ಹಿತಗಳ ಬಿಟ್ಟು ಹಿರಿಯಾರೂ           ೧೪೬

ಎಲ್ಲ ಸುಧರ್ಮವ ಬಲ್ಲವರಾಗಿದ್ದು
ಕಳ್ಳನಾಗಿ ಅಣ್ಣ ಕಳುವಾರೆ || ಯೆಂದರೆ
ಮಲ್ಲಿಕಾರ್ಜುನನು ನುಡಿದರೂ        ೧೪೭

ಧರೆಯ ಕಳ್ಳರ ಮೇಲೆ ಬಿರುದನಿಕ್ಕಿದ ರಾಯ
ಹರ ತಾನೆ ಕದ್ದು ಮರೆ ಹೊಕ್ಕಾರೆ || ಕೊಡೆನೆಂಬುದ
ಬಿರಿದು ನಿಮ್ಮಲ್ಲಿರುವುದರ ಕೇಳಿ      ೧೪೮

ಮರೆಹೊಕ್ಕವರ ಕಾಯ್ವೆ ಮತ್ತವರ ಕೊಲುವೆನೆಂದು
ಬಿರುದಿನ ಕಹಳೆ ಹಿಡಿದಾವೂ || ಶರಣರು
ಬಿರುದ ಕೇಳಿ ಕದ್ದು ಮೊರೆಹೊಕ್ಕಾ    ೧೪೯

ಗೆದ್ದೆವು ಧೀರರನೆಂದು ಕದ್ದೆವು ಅರಮನೆಯ
ಸಿದ್ದರು ನಾವು ಜಗಕೆಲ್ಲಾ || ಸಾವುಗಳು
ಹೊದ್ದದ ಮದ್ದು ನಮಗುಂಟೂ     ೧೫೦

ನಿಮ್ಮ ಚಿತ್ತ ಬರುವಂತೆ ಹತ್ತುವೆವು ಶೂಲವ
ಚಿತ್ತೈಸಿ ಸ್ವಾಮಿ ಬಿಜ ಮಾಡಿ || ನೀವಿಲ್ಲಿ
ಅರ್ತಿ ಶೃಂಗಾರದ ಸೊಬಗನೂ          ೧೫೧

ಕೊಡಿ ನಮಗೆ ಶೂಲವ ಹಿಡಿ ನಮಗೆ ಭಾಷಿಕವ
ತಡೆಯೊಡೆ ಬೇಗ ಬರ ಕೇಳಿ || ಗಣಪತಿಯು
ಅಡಿಗಡಿಗೆ ಆಳ ಕಳುಹಿದರೂ            ೧೫೨

ಇಟ್ಟರು ಭಸಿತವ ಕೊಟ್ಟರು ಕಂಥೆ ಕಿರೀಟವ
ಹೊರಟಾರು ಶೂಲದ ಬಳಿಗಾಗಿ || ಶರಣರು
ದಿಟ್ಟರೊಂದಾಗಿ ನಡೆದಾರೂ            ೧೫೩

ಓರುಗಲ್ಲಿನ ಪುರದಲ್ಲಿ ಧೀರರು ಮೆರೆವಾಗ
ತೋರಣ ಕಟ್ಟಿತು ಗುಡಿಕಟ್ಟಿ || ಮುತ್ತೀ
ನಾರತಿಯ ತಂದು ರಚಿಸಿದರೂ          ೧೫೪

ಆರನೂರು ಹಿರಿಯರಿಗೆ ಮೆರೆವ ಚಿನ್ನದ ಕಂತೆ
ಇರಿವ ತ್ರಿಶೂಲ ಕೊಡಲಿಯೂ || ಕೊಡಾಂದದ
ಹಿರಿಯರು ಮುಂದೆ ನಡೆದಾರೂ        ೧೫೫

ಅರವತ್ತು ಶೂಲದ ಕುರುವಿನ ಶರಣರು
ಮೆರೆಯುತ್ತ ಮುಂದೆ ನಡೆದಾರೊ || ಯತಿಗಳಿಗೆ
ಹರೆಯ ಶೂಲವು ಮರದಲ್ಲಿ           ೧೫೬

ಕಟ್ಟಾಳಿಬ್ಬರುಂಟ್ಟಿಲ್ಲಿ ಆಯತವಾಗಿ
ಪಟ್ಟಣದೊಳಗೆ ಮೆರೆದರು || ಶರಣರು
ಪಟ್ಟದ ರಾಯನೊಡಗೊಂಡು          ೧೫೭

ಓರಗಲ್ಲ ಪುರದಲ್ಲಿ ಧೀರಾರು ಮೆರೆವಾಗ
ತೋರಣ ಕಟ್ಟಿ ಗುಡಿ ಕಟ್ಟೀ || ಸತಿಯರು
ಆರತಿ ಹಿಡಿದು ಇದಿರಾಗಿ     ೧೫೮

ಪಟ್ಟಣದಂತ್ಯಾವು ತೊಟ್ಟಿಲ ಶಿಶುವೆಲ್ಲ
ಮೊಟ್ಟೆಯುಪ್ಪರಿಕೆಯ ಮೇಲೇರಿ || ನೋಡಿರಿ
ಕಟ್ಟಾಳು ಶರಣರು ಬರುವುದನು       ೧೫೯

ಸತ್ಯರು ಶರಣರು ಹತ್ತಿದರೆಂಬುದ ಕೇಳಿ
ಸುತ್ತಳ ದೇಶ ನೆರೆಯಿತು || ಶರಣರಿಗೆ
ಅರ್ತಿ ಸಂಗಾತ ಸುಖದಲ್ಲಿ   ೧೬೦

ಭಕ್ತರು ಶೂಲವ ಹತ್ತುವ ಸುದ್ಧಿಯ ಕೇಳಿ
ಬಿಟ್ಟರು ಅನ್ನ ಉದಕವಾ || ತಮ್ಮ ಶಿಶುಗಳಿಗೆ
ಅತ್ತಾರೆ ಹಾಲ ಹೆರೆಯಾರು೧೬೧

ಇತ್ತೆರದ ಬೀದಿಯಲ್ಲಿ ಮುತ್ತಿನಾರತಿ ಹಿಡಿದು
ಬೆತ್ತದ ಬೊಂಬೆ ನೆಡೆವಂತೆ || ನಡಿದಾರು
ಎತ್ತಿದರು ಆರತಿಯ ಚಲುವೆಯರೂ   ೧೬೨

ಸಂದೇಹವಿಲ್ಲದೆ ಬಂದರು ಶರಣರು
ನಿಂದರು ಶೂಲದಡಿಯಲ್ಲಿ || ಗುಂಡಬ್ರಹ್ಮಗಳ
ಸಂಗಡದ ಶಿವನಿರುವಾಗ      ೧೬೩

ಶೂಲವ ನೋಡಿದ ಭಾಳಾಕ್ಷ ಮನದಲ್ಲಿ
ಕೊಳು ಹೋಯಿತು ನಮ್ಮ ಪುರವೆಂದು || ಶರಣರಿಗೆ
ಹೇಳಿದನಾಗ ಶಿವರಾಯ      ೧೬೪

ನೋಡಿದೆಯ ನಾರಂದ ಇವರಾಡಿದ ಮಾತನು
ಈಡು ಮಾಡಿದರು ತಮ್ಮ ತನುವನು || ಅವರಿಗೆ
ಬೇಡಿದ ವರವ ಕೊಡಬೇಕೂ೧೬೫

ಹತ್ತಲಿ ಶೂಲವ ಒತ್ತಿಲಿ ನಾವಿದ್ದು
ಚಿತ್ರವ ನೋಡಿ ಕಡೆಯಲ್ಲಿ || ಕೈಲಾಸಕೆ
ಎತ್ತಿಕೊಂಡೋಗುವರು ಗುರುರಾಯ  ೧೬೬

ಮುನಿಯ ಮಾತನು ಕೇಳಿ ಮುಗುಳು ನಗೆ ನಗುತಲಿ
ಇಳೆಯೊಳಗಿಂತಹ ಶರಣರ || ಕಾಣೆವು
ಪುರದೊಳಗೀಗ ಗುಡಿಕಟ್ಟಿ   ೧೬೭

ಹತ್ತೆಂಟು ಶೂಲವ ಎತ್ತಿದರು ಮೇಲಕ್ಕೆ
ಚಿತ್ತದೊಲ್ಲಬನು ಶಿವರಾಯ || ಗುಂಡಬ್ರಹ್ಮಗಳ
ಚಿತ್ತವಂದಾಗಿ ಇರುವಾರೂ  ೧೬೮

ಶೂಲವಿಬ್ಬರು ಹತ್ತಿ ಮೇಲೆ ಮಹೂರ್ತವ ಮಾಡಿ
ಶೂಲಿಯ ಪೂಜೆಗನುವಾಗಿ || ಕೆಳಗಿದ್ದ
ಬಾಲೆಯರು ಪಾಡಿದರು ಪುರುಷರ     ೧೬೯

ಬಿದಿರು ಬೆತ್ತದ ಮೇಲೆ ಚದುರಂಗದೊರಳಕ್ಕಿ
ಮದನಾರಿ ಜಂತದೊನಕೆಯ || ಹಿಡುಕೊಂಡು
ಚದುರೆಯರು ಪಾಡಿದರು ಪುರುಷರಾ೧೭೦

ಎಮ್ಮ ತವರು ಮನೆ ಕಲ್ಯಾಣ ಎಮ್ಮಣ್ಣ
ತಮ್ಮಿಂದಾರು ಅರುವತ್ತು || ಮೂವರ ಪಾದಕ್ಕೆ
ಬಿನ್ನವಿಲ್ಲದೆ ನನು ಶರಣೆಂಬೇ         ೧೭೧

ಶೂಲ ಸುಪ್ಪತ್ತಿಗೆ ಶೂಲ ಪುಷ್ಪದ ಹಾಸು
ಶೂಲವೇ ನಮಗೆ ಸೆಳೆಮಂಚ || ಕೆಳಗಿದ್ದ
ಬಾಲೆಯರು ಪಾಡಿದರು ಪುರುಷರಾ   ೧೭೨

ಶೂಲವೆ ಸಿಂಹಾಸನ ಶೂಲವೇ ಸುರಲೋಕ
ಶೂಲವೇ ನಮಗೆ ಕೈಲಾಸ || ಕೆಳಗಿದ್ದ
ಬಾಲೆಯರು ಪಾಡಿದರು ಪುರುಷರಾ   ೧೭೩

ಶೆಟ್ಟಿಗಳ ಕುರುಕೆಲ್ಲ ಪಟ್ಟ ವರ್ಧನರೆಂದು
ಪಟ್ಟದ ಸ್ವಾಮಿ ಪ್ರಭುಗಳೇ || ನೀವಹುದೆಂದು
ಕಟ್ಟಣ ಹೆಣ್ಣುಗಳು ಹೊಗಳಿದರು    ೧೭೪

ಅಂಗನೆಯರಿಬ್ಬರು ಲಿಂಗದ ಪೂಜೆಗೆ ಗಂಗೆಯ
ತುಂಬಿ ಕೊಡುತಿರೆ || ಅದ್ರಿಯ ಪುಷ್ಪವ
ಎತ್ತಿ ಕೊಡುತಿರಲೂ           ೧೭೫

ಬಂದು ಕಂಚಿಯ ಕಾಳೆ ನಂದಿವಾರ್ತದ ಪುಷ್ಪ
ಚಂದ್ರ ಮಲ್ಲಿಗೆ ಅರಳಿಂದ || ಅರ್ಚಿಸಿದರೂ
ಚಂದ್ರಶೇಖರನ ಚರಣವಾ   ೧೭೬

ಜಾಜಿಯ ಹೂವಿಂದ ಜವನದ ಕೆನೆಯಿಂದ
ರಾಜ ಮಲ್ಲಿಗೆಯೆಸಳಿಂದಾ || ಅರ್ಚಿಸಿದರು
ತೇಜೇಶ ಶಿವನ ಚರಣಾವ    ೧೭೭

ಮಕ್ಕದ ಹೂವಿಂದ ಲಕ್ಕಿಯೆಸಳಿಂದ
ಕಕ್ಕೆಕಣಿಗಿಲೆ ಅರಳಿಂದ || ಅರ್ಚಿಸಿದರು
ಮುಕ್ಕಣ್ಣ ಶಿವನ ಚರಣವಾ೧೭೮

ಪಚ್ಚೆಯ ಕೆನೆಯಿಂದ ಮೊಲ್ಲೆಯ ಮೊಗ್ಗಿಂದ
ಬೆಲ್ಲವತ್ತಾದೆಸಳಿಂದ || ಅರ್ಚಿಸಿದರು
ಮಲ್ಲಿಕಾರ್ಜುನ ಚರಣವಾ  ೧೭೯

ವಡೆಯಾದ ಹೊಂಬಾಳೆ ಮುಡುವಿನ ಕಮಲವು
ಮುಡಿವಳ ಪೆಚ್ಚೆಯ ಮರುಗವು || ಎಲ್ಲರಳಗಳ
ಕೊಡುತಿರ್ದ ಶಿವನ ಚರಣಕ್ಕೆ            ೧೮೦

ಸಾಲು ಆರತಿವಿಡಿದು ಬಾಲೆಯರು ಕೊಡುತಿರಲು
ನೀಲಕಂಠನೆ ನಮೋ ನಮೋಯೆಂದೂ || ಗುಂಡಬ್ರಹ್ಮಯಗಳು
ಶೂಲಿಗಾರತಿಯ ಬೆಳಗಿದರೂ           ೧೮೧

ಕಟ್ಟು ಬೋನವ ಕಟ್ಟಿ ಕೊಟ್ಟಾರು ಮೇಲಕ್ಕೆ
ಬಿಟ್ಟು ನೈವೇದ್ಯಗಳನು ಮಾಡಿ || ಗುಂಡಬ್ರಹ್ಮಯ್ಯನ
ಕಟ್ಟಾಣ ತನವ ಶಿವಕಂಡಾ   ೧೮೨

ಅಷ್ಟಭೋಗದ ಹೋಳು ಕತ್ತರಿಸಿದ ಬಿಳಿಯಲೆ
ಕಟ್ಟೆ ಕರ್ಪೂರವ ಕೊಡುತಿರೆ || ಗುಂಡಬ್ರಹ್ಮಯನ
ಕಟ್ಟಾಣತನವ ಶಿವಕಂಡಾ    ೧೮೩

ಕೆಳಗೆ ಲೋಕದೊಳಿರ್ದು ಮೇಲೆ ಸುರಲೋಕದೊಳಿರ್ದ
ತಿಳಿದು ನೋಡಿದರೆ ದಶಭುಜ || ಪಂಚಮುಖ
ಹೊಳೆಯುತ ಲಿಂಗದೊಳಗಿರ್ದಾ        ೧೮೪

ಉಟ್ಟ ತೊಟ್ಟದನಳಿಯ ಸೃಷ್ಟಿಯೊಳು ಶಿವನಿರ್ದ
ನೆಟ್ಟ ಶೂಲದ ತುಟ್ಟತುದಿಯಲ್ಲಿ || ಗುಂಡಬ್ರಹ್ಮಯ್ಯ
ಕಟ್ಟಿದ ಲಿಂಗದೊಳಗಿರ್ದಾ   ೧೮೫

ಶೂಲದ ಮೇಲಿರ್ದು ಹಾರಿ ಬೊಬ್ಬೆಯ ಕೊಡಲು
ಭೂಲೋಕವೆಲ್ಲ ನಡಗಿದೋ || ಶಿವನಿರ್ದ
ಕೈಲಾಸವೆಲ್ಲ ಗುಟಿಕಟ್ಟಿ    ೧೮೬

ಕಂಡು ಶಿವನೆಂದರಿದು ಕೊಂಡರು ಶೂಲವ
ಮಂಡೆಯ ಮೇಲೆ ಮೊನೆ ಮಾಡಿ || ಶರಣರ
ಕಂಡು ಮೂಜಗವು ನಡಗಿತೂ           ೧೮೭

ನಂಬಿ ಮಹದೇವಿಯರು ಗಂಡಗತ್ತರಿಹೂಡಿ
ಮುಂಡದಲಿ ಅರತಿಯ ಬೆಳಗಿದರೂ || ಶರಣೆಯರು
ಗುಂಡಬ್ರಹ್ಮಯ ನಿಮಗೆ ಸಲಿತೆಂದೂ  ೧೮೮

ಗಮ್ಮನೆ ಸತಿಯರೂ ತಮ್ಮ ಶಿರಗಳನರಿದು
ಮಂಡದಲಿ ಆರತಿಯ ಬೆಳಗಿದರು || ಶರಣೆಯರು
ಗುಂಡಬ್ರಹ್ಮಯ್ಯ ನಿಮಗೆ ಸಲತೆಂದೂ            ೧೮೯

ಶರಣೆಯರು ಶಿಶುಗಳ ಶಿರಗಳನರಿ ತಂದು
ಹೊನ್ನ ಹರಿವಾಣದೊಳಗಿರಿಸಿದರೂ || ಬೆಳಗಿದರೂ
ಗುಂಡಬ್ರಹ್ಮಗಳೆ ನಿಮಗೆ ಸಲಿತೆಂದೂ  ೧೯೦

ಶೂಲದ ಮೇಲಿರ್ದು ಶೂಲಿಯಾರ್ಚನೆ ಮಾಡಿ
ಮೇಲಿದ್ದ ಗಂಗೆಯಿಳಿದಾಳು || ಶೂಲದ
ಕೀಲು ಕೀಲೆಲ್ಲ ಕೊನರೆದ್ದೂ           ೧೯೧

ತಳಿರು ಮೊಗ್ಗೆಗಳಾಗಿ ಕಾಯಿ ಹಣ್ಣುಗಳಾಗಿ
ಇಳೆಯೊಳಗಾರು ಅರಿಯಾದ || ಫಲವಾಗಿ
ಕಳಿತ ಹಣ್ಣುಗಳು ಶಿವನೀಗೆ೧೯೨

ಸತ್ಯ ಶರಣರಿಗೆ ಕೆತ್ತಿ ನೆಡೆಸಿದ ಶೂಲ
ಹುಟ್ಟಿ ಪಲ್ಲವಿಸಿ ಫಲವಾದೊ || ಅವರಿಂದ ನಮ್ಮ
ಪಟ್ಟಣಕ್ಕೆ ಕೇಡು ಬರುತಿದೆ೧೯೩

ಕೇಡು ಬಾರದ ಮುನ್ನ ಆಡುವೆವು ಬಿನ್ನಪವ
ಬೇಡಿಕೊಂಬೆನು ಶರಣರ || ಎನುತಾಗ
ನಾಡ ನಾಳುವನು ನುಡಿದಾನು          ೧೯೪

ನೋಡಿದರೆ ಶರಣರಿಗೆ ಮಾಡಿದಲೆರಡು ಶೂಲ
ಮೋಡವೆದ್ದಂತೆ ಮರೆಯಾದೊ || ಸೂರ್ಯನು
ಮಾಡಿದಂತೆಲ್ಲ ಬಯಲಾಗಿ೧೯೫

ಬಿದ್ದು ಬಿನ್ನಹ ಮಾಡಿ ಎದ್ದು ಕರಗಳ ಮುಗಿದು
ಅರ್ಧನಾರಿ ಶರಣರಿಗೆ || ಗಣಪತಿ
ಮುದ್ದು ಬಿನ್ನಗಳ ನುಡಿದನು          ೧೯೬

ಮುಂದನರಿಯದೆ ತಂದೆನು ಶೂಲಕ್ಕೆ
ಇಂದೊಂದು ತಪ್ಪ ನೆರೆ ಕಾಯ್ದು || ಬ್ರಹ್ಮಗಳೆ
ಎಂದೆಂದಿಗೆ ದೈವ ನಮಗೆಂದಾ          ೧೯೭

ಬಾರೋ ಗಣಪತಿರಾಯ ವೀರಬಲ್ಲಿದ ನಾಗು
ಧಾರಣಿಯೊಳಗೆ ಮಲೆತವರಿಗೆ || ಗೆಲುಯೆಂದು
ವೀರರು ಭಸಿತ ಧರಿಸಿದರೂ  ೧೯೮

ಎಲಮ್ಮೆನಾನೆಂದು ಅರಸು ಗಣಪತಿರಾಯ
ಶರಣರೊಂದಾಗಿ ನುಡಿದರು || ಗುಂಡಬ್ರಹ್ಮಯನು
ಉಳಿವಂತೆ ಮಾಡೆನ್ನರಮನೆಯಾ       ೧೯೯

ಅಂಜ ಬೇಡೆಂದು ಅಭಯ ಹಸ್ತವನಿತ್ತು
ಕುಂಜರಗಳಿಗೆ ಗಜ ಸಿಂಹ || ನಾಗೆಂದು
ಬಂಧಿಸಿ ಅವನ ಕಳುಹಿದರೂ೨೦೦

ತಿರುಗಿತು ರಾಯನ ದಳವಾಳ ಹಿಂದಕ್ಕೆ
ಮೊರಗುವ ವಾದ್ಯ ಧ್ವನಿಯಲ್ಲಿ || ಗಣಪತಿ
ತಿರುಗಿ ನೋಡಿದರು ಶರಣರಾ           ೨೦೧

ಇವರು ಶೂಲದಲಿಲ್ಲ ಇವರ ಬಾಲೆಯರಿಲ್ಲ
ಬಯಲಾಗಿ ಹೋದ ಹರಿ ಹೋಗೆ || ಎಂದೆನುತ
ಭುವನಧಿಪತಿ ನೋಡಿ ಬೆರಗಾದ        ೨೦೨

ನಂದೀಶ ಕೊಂಡೆಯಿದನೆಂದು ವಂದಿಸಿ ರಾಯನು
ಮಂದಿರಕಾಗಿ ತಿರುಗಿದು || ಶರಣರಿಗೆ ಶಿವ
ತಮ್ಮ ಪುಷ್ಪಕವನಿಳುಹಿದಾ೨೦೩

ಏಳಿ ಕೈಲಾಸಕ್ಕೆ ವ್ಯಾಳೆವಾದವು ನಿಮಗೆ
ಭಾಳಾಕ್ಷ ನಿಮ್ಮ ಕರೆಬಂದಾ || ಗುಂಡಬ್ರಹ್ಮಯಗಳೆ
ಕೊಳು ಹೋಯಿತು ನಮ್ಮ ಪರವೆಂದಾ           ೨೦೪

ದಶಭುಜ ಪಂಚಮುಖ ಮಿಸರುವ ಕಿಡಿಗಣ್ಣು
ಎಸೆವ ತ್ರಿಶೂಲ ಢಮರಗಾ || ಸಹವಾಗಿ
ಪಶುಪತಿ ರೂಪ ಧರಿಸಿದರೂ            ೨೦೫

ಗುಂಡಬ್ರಹ್ಮಗಳ ಹೆಂಡಿರು ಸಹವಾಗಿ
ಖಂಡೇಂದು ಧರನ ಭಜಿಸುತ್ತಾ || ಶರಣರು
ಕೊಂಡಾಡುತ್ತ ಕರವ ಮುಗಿದಾರೂ    ೨೦೬

ಎಂದ ಮಾತನು ಕೇಳಿ ಚಂದ್ರಧರ ನಸುನಗುತ
ಕಂದ ವೀರಭದ್ರ ವೃಷಭನ || ಪುಷ್ಪಕವು
ಬಂದವು ಶರಣರ ಬಳಿಗಾಗೀ೨೦೭

ಬಂದ ಪುಷ್ಟಕದೊಳು ಗುಂಡಬ್ರಹ್ಮಗಳ
ಹೆಂಡರು ತಾವು ಸಹವಾಗಿ || ಶಿವರಾಯ
ಕೊಂಡೊಯ್ದ ಕೈಲಾಸ ಪುರಕಾಗಿ      ೨೦೮

ತೆಗೆ ತೆಗೆಯೆಂದವು ಕಹಳೆ ಭಗಿ ಭಗಿಯೆಂದವು ಶಂಭು
ಉಘೆ ಉಘೆಯೆಂದರು ಸುರರೆಲ್ಲ || ಶರಣರು
ಹರ ನಿಮ್ಮ ಪೂಜಾರದ ಗಂಟಿ ಘಣಿರೆಂದೂ      ೨೦೯

ಮುಂದೆ ಬಲ್ಲಯರಾಯ ಹಿಂದೆ ಬಲ್ಲಾಳನು
ಮಂದಿ ಕುದುರೆ ದಳವಾಯಿ || ಚರರು ರಾಯ
ಬಂದು ಶರಣರು ಇದಿರಾಗಿ   ೨೧೦

ನೊಂದಿರಯ್ಯ ಶರಣರೆಂದು ಮುಂಡಾಡುತ್ತ
ಬಂದ ಗಣಸಹಿತ ಶಿವರಾಯ || ಗುಂಡಬ್ರಹ್ಮಗೆ
ಚಂದದ ವರವ ಕೊಡುತ್ತಿರ್ದಾ          ೨೧೧

ಹರಭಕ್ತ ಗುಂಡಬ್ರಹ್ಮಯ್ಯನ ಹರಕೆ ಬಂದರೆಂದಾಗ
ಪುರವು ಶೃಂಗರಿಸಿ ಗುಡಿಕಟ್ಟಿ || ಮೇಲಿರ್ದ
ತರಿಯ ಮಲ್ಲಿಗೆ ಸುರಿದಾವೂ           ೨೧೨

ಕಿತ್ತೆರಡು ಶೂಲವ ಹತ್ತಿದರು ಪುಷ್ಪಕವ
ಹೊತ್ತು ವೋರಗಲ್ಲದ ಪುರದಲ್ಲಿ || ಗುಂಡಬ್ರಹ್ಮಯ್ಯಗಳ
ಎತ್ತಿಕೊಂಡೊಯ್ದ ಶಿವರಾಯಾ        ೨೧೩

ಕಂಚಿಯನಾಳಿದ ಸಿರಿಯಾಳ ಚೆಂಗಳೆಯು
ಮುಂದೆ ಕೊಂಡೊಯ್ದ ಶಿವ ತಾನೂ || ಮೃರ್ತ್ಯಕ್ಕಿಳಿದು
ಪಂಚಮ ವಾದ್ಯಗಳು ಮೊಳಗಿದೂ     ೨೧೪

ಆಲೂರ ಹಾಲಮ್ಮ ಕೊಳೂರ ಕೊಡಗೂಸು
ಹಾಗಲವಾಡಿಯ ಹಿರಿಯಮ್ಮ || ಶರಣೆಯರು
ಆರತಿಗಳ ತಂದು ಬೆಳಗೀದರೂ          ೨೧೫

ಗುಂಡಬ್ರಹ್ಮಯ್ಯಗಳ ಕರಸಿ ರುಂಡ ಮಾಲೆಯ ಹಾಕಿ
ಗಂಡರಿಗೆ ಗಂಡ ಕಲಿವೀರ || ಭದ್ರನ
ದಂಡೆಯಲಿ ಅವರ ಇಳಿಸಿದರೂ         ೨೧೬

ಗುಂಡಬ್ರಹ್ಮಯ್ಯಗಳ ಕಥೆಯ ಗುಂಡುಗಲ್ಲುಗಳೊಳು
ಖಂಡುಗ ಮೆಣಸ ಅರದಂತೆ || ಕರ್ಮಗಳು
ಖಂಡಿಸಿದಂತೆ ಕೇಳ್ದ ಜನರೀಗೆ           ೨೧೭

ಹರನ ಕೈಲಾಸದಲಿ ದೇವದುಂದುಭಿಮೊಳಗೆ ಪುಷ್ಪ
ದರಳಿನ ಮಳೆ ಸುರಿಯೆ || ಕೈಲಾಸದಲ್ಲಿ
ಶರಣರೊಂದೊಪ್ಪ ಮೆರೆದಾರೂ       ೨೧೮

ಸತ್ಯ ಶರಣರ ಅರ್ತಿಯಲಿ ಕೇಳಿದರೆ
ಮುಕ್ತಿ ಫಲ ಪದವಿ ಕೈಲಾಸ || ದೊರಕುವುದು ಶಿವ
ಸತ್ಯದ ಪಾದಕ್ಕೆ ಉಘೇಯೆನ್ನಿ          ೨೧೯

ಎಂದೆಂದು ಭಕ್ತರು ಕುಂದದೆ ಇದ ಕೇಳಿ
ನಂದಿಯ ಧ್ವಜವ ಹಿಡಿಸಿದರೂ || ಭಕ್ತರಿಗೆ
ಅಂದದೊಳು ಐಶ್ವರ್ಯ ಫಲವುಂಟೂ            ೨೨೦

ಅಂತು ಸಂಧಿ ೪ಕ್ಕಂ ಪದನು ೭೯೮ಕ್ಕಂ
ಮಂಗಳ ಮಹಾಶ್ರೀಶ್ರೀಶ್ರೀ