ಸಂಧಿ-೨

ಶರಣರು ಮೆರೆದ ಪವಾಡವ ಪೊಗುಳುವೆ
ಧರೆಯೊಳು ಗುಂಡಬೊಮ್ಮಣ್ಣನಾ / ಪದನು

ಶ್ರೀಗುರು ಕರುಣದಿ ಹೇಳುವೆ ಚರಿತೆಯ
ಯೋಗಿ ಜನಾಂಗಗಳು ಕೇಳಿ
ರಾಗ ರಸಂಗಳ ನಾಟ್ಯಂಗಳಲ್ಲ
ಭೋಗಿಯು ಗುಂಡಬೊಮ್ಮಣ್ಣನು   ೧

ಕವಿಗಳ ಕಾವ್ಯದ ಹವಣಿಲ್ಲವಿದರೊಳು
ಶರಣ ಸದ್ಭಕ್ತರ ಕರುಣಾ
ಶಿವಶರಣರ ಚರಣಕ್ಕೆ ನಾ ನಮಿಸುವೆ
ಕರುಣಿಸಿ ಕಾವ್ಯಕೆ ಮತಿಯಾ ೨

ಹೃದಯವ ಕರಗಿಪೆ ಮೂಕ ಬರಡರನು
ಪರದೊಳು ರಸ ವೆಸದಾಡೆ
ಕದವ ತೆಗೆಸುವೆ ಹೃದಯ ಕರ್ಣಂಗಳ
ಸುಧೆಯನ್ನು ಸೂಸುವೆ x x x ಗೆ       ೩

ತೆತ್ತಿಸ ಕೋಟಿ ದೇವರ್ಕಳು ತಾವೆಲ್ಲ
ತೊತ್ತಿರು ಬಂಟರು ಹರನ
ಮತ್ತಧಿವೈವಗಳುಂಟೆಂಬರ ಬಾಯಿ
ಮೆಟ್ಟುವ ಹರಕೊಂತವನೂ ೪

ಈಶನಮೂರ್ತಿಯ ಲೇಸಾಗಿ ಹೊಗಳುವೆ
ಶಶಿ ಭರಣ ಭೂಷಣನ
ಕಾಶಿಯ ಪುರದ ವಿಶ್ವೇಶ್ವರ ದೇವರ
ಪಾಶುಪತಿಯ ಶಂಭೂವನೂ            ೫

ಪಂಚಮುಖಂಗಳು ಮಿಂಚುವ ಸುಲಿಪಲ್ಲು
ಪಂಚ ಜಡೆಯು ಪಾವನಯನ
ಪಂಚಾಕ್ಷರಿ ಪರಬ್ರಹ್ಮ ಸ್ವರೂಪಗೆ
ಮುಂಚೆ ಮೆರೆವದ್ವಯ ನಯನ         ೬

ದಶಭುಜ ಗಜಚರ್ಮ ಅಸುರರ ಶಿರಮಾಲೆ
ಶಶಿರವಿ ಜೂಟದ ಗಂಗೆ
ವಸುಧೆ ಕೈಲಾಸಗಳಿರಲು ಲೋಕಕೆ
ವೃಷಭ ವಾಹನ ಶಿವಲಿಂಗಾ ೭

ಜಡೆದೊಡೆಯೊಳು ಕಾಂತೆ x x x ಹುಲಿಚರ್ಮ
ಹಿಡಿದ ತ್ರಿಶೂಲ ಕಟ್ಟಾಂಗ
ಹಿಡಿದ ಕಪಾಲವು ದುಂದುಭಿ ಡಮರುಗ
ಮೃಡ ಮೇರೆದೊಪ್ಪಿದ ಲಿಂಗಾ         ೮

ಕುರುಳ ಬೂದಿಯ ಪೂಸಿ ಮರುಳೊಡನಾಡುವ
ತೀರದಲ್ಲದೆ ಊಣಲಿಲ್ಲ
ವರಧೀರ ಹರನನ್ನು ಪೊಗಳುವೆ ಧರೆಯೊಳು
ಶರಣರು ಮೆರೆದ ಪವಾಡ    ೯

ವೇದ ಪುರಾಣವು ಸಾಧಿಸಿ ಕಾಣವು
ಸಾಧಿಸುವರಿಗಳವಲ್ಲ
ಸಾಧಿಸಿ ಪಡೆವ ಸಿದ್ಧರುಗಳು ಕಾಣರು
ಆದಿಯನಾದಿಯ ಹಗರಣ   ೧೦

ಇಂತಪ್ಪ ಹರಣ ಒಡ್ಡೋಲಗ ಸಿರಿಯನು
ಕಿಂಚಿತ ಹೊಗಳುವೆ ನಾನು
ಸಂತೋಷದಿಂದ ಶರಣ ಸದ್ಭಕ್ತರು
ಮಂತ್ರ ಮೂರುತಿಯ ಶೃಂಗಾರವಾ    ೧೧

ಭಾಳಾಕ್ಷ ಕರುಣದಿ ಹೇಳುವೆ ಚರಿತೆಯ
ಆಳಿಗೊಳ್ಳದೆ ಕೇಳಿ ಜನರು
ಬಾಲೆಯರರಸನ ಮೊದಲಾಗಿ ದೇವ
ರ್ಕಳೊಲಗದಿರವನು ಕೇಳಿ     ೧೨

ನಿಡುಜಡೆ ಮಕುಟದಲಿಡಗಿರ್ಪ ಗಂಗೆಯು
ತೊಡೆಯ ಮೇಲೆ ಗೌರಿದೇವಿ
ಮೃಡ ಮುತ್ತು ಮಾಣಿಕದಾಭರಣವವೊಲ್ಲ
ಜಡೆಯು ರುದ್ರಾಕ್ಷಿ ಬಂಗಾರ ೧೩

ವಾಮ ಭಾಗದಲಿ ನಾರಾಯಣ ಹರನ
ಸೀಮೆಯ ಬಲದಲಿ ಬ್ರಹ್ಮ
ಕಾಮಹರನ ಒಡ್ಡೋಲಗದೆಡೆಗಡೆ
ಗಾಮಹಾರುದ್ರಗಣಗಳೂ    ೧೪

ಮಾರಾರಿಗಿದಿರಾಗಿ ನಾರಂದನು ಮುಂದೆ
ಭೂರಿ ದೈವದ ಗಂಡನೆಂಬ
ಭೋರೆಂದು ಉಲಿವ ಬಾಯಲಿ ಕೋರೆದಾಡೆಯ
ವೀರಭದ್ರನೆ ಮೆರೆದಿರ್ದಾ     ೧೫

ಕಿನ್ನರ ಕಿಂಪುರುಷ ಗರುಡ ಗಂಧರ್ವರ
ಸನ್ನರ್ಧ ವಿದ್ಯಾಧರರೂ
ಚೆನ್ನಾಗಿ ಮನಮುನಿ ಸಿದ್ಧರು ಕುಳಿತರು
ಪನ್ನಂಗ ಭೂಷಣನಿದಿರಾ    ೧೬

ವರಗಣೆ ರಂಭೆಯು ಸುರರ ಸತಿಯರು
ನೆರೆದಿರೆ ಕಿನ್ನಾರಿಯರು
ಸುರಪ ದಿಕ್ಪಾಲಕ ದೇವರ್ಕಳಿರ್ದರು
ಹರನ ಒಡ್ಡೋಲಗದೊಳಗೆ ೧೭

ಭುವನಾದಿತ್ಯರು ದೇವ ಗಣಂಗಳು
ರವಿ ಶಶಿಕೋಟಿಗಳೆಲ್ಲ
x x x x x x x x ನೆಯಾಗಿಪ್ಪರು
ಪವನನುಡಿಸುವ ಹರನಾ     ೧೮

ಗಂಡು ದೇವತೆ ಉದ್ದಾಂಡ ಚವುಡೇಶ್ವರಿ
ಗಂಡು ಭೈರವೀ ಕಾಳ ರಾತ್ರಿ
ಚಂಡಿಯಾಗಿ ದುರ್ಗಾನಿ ಶಾಕಿನಿಯರು
ಸೊಂಡಿಲ ಗಣಪ ಭೂರತಿಯೂ         ೧೯

ದೇಶೊಳಾನಿಲ್ಲಿ ಮೆರೆದ ಪುರಾತರ
ಲೇಸಾಗಿ ಹೊಗಳುವ ನಾನು
ಈಶನ ಕೈಲಾಸದೊಳಗಾಗಿಪ್ಪರ
ಈಶನ ಶರಣರು ಕೇಳಿ         ೨೦

ಆದಿಯೆಂದಡೆ ವಾದಿಸಿಯಾದಡೆ
ಭೇದಿಸಿ ಬರೆಯದೆ ಕೇಳಿ
ವಾದಿಸಿ ಪ್ರಾಸಿಗೆ ಭೇದಿಸಿ ಕೊಡಿದೆ
ವಾದಿಸುವರೆಗಿದು ಹರನೂ  ೨೧

ತಂದುಕೊಂಡೆನು ನಾನು ಪ್ರಾಸಿಗೆ ಪದಗಳಿ
ಗೆಂದಾದರೆ ಮೆರೆದವರಾ
ಚಂದ್ರಧರನ ಶ್ರೀ ಚರಣದಲಿಪ್ಪರ
ಸಂದೇಹ ಮಾಡದೇ ಕೇಳಿ     ೨೨

ಭಂಡಾರಿ ಬಸವಣ್ಣ ಬಡಿಹಾರಿ ಬೊಮ್ಮಣ್ಣ
ಹೆಂಡ ವಿಕ್ರಯ ಮಾರಣ್ಣ
ಕೊಂಡುಗುಳಿಯ ಕೇಶಿರಾಜನು ಪುಷ್ಪದ
ಯಿಂಡೆಯ ಶಾಂತಿಮಯ್ಯಗಳೂ        ೨೩

ಅಕ್ಕಮಹಾದೇವಿ ಚಿಕ್ಕ ಬಸವಣ್ಣ
ಜಕ್ಕಿಯರ ಬೊಮ್ಮಣ್ಣ
ಲೆಕ್ಕವಿಲ್ಲದ ಆಳು ಕುದುರೆ ರುದ್ರಾಕ್ಷಿಯ
ಹಕ್ಕರಿಕೆಯ ಚೆರಮನೂ      ೨೪

ಮಡಿವಾಳ ಮಾಚಯ್ಯ ಜೇಡರ ದಾಸಯ್ಯ
ಮೃಡನ ಭಕ್ತಿಗೆ ಬಲ್ಲಿದರು
ಹಿಡಿದು ಮಾರಿಯ ಕೈಯ ಕೊಟ್ಟಣಗುಟ್ಟಪ
ಜಡಿಯ ಶಂಕರ ದಾಸಿಮಯ್ಯ           ೨೫

ಕೆಂಭಾವಿ ಭೋಗಣ್ಣ ಕುಂಬಾರ ಗುಂಡಯ್ಯ
ಶಂಭುಗೆ ಮಾಲೆಯುಡಿದಂಬೆ
ನಂಬಿಚಂಗಳ ಚೋಳರಾಯನು ಜಕ್ಕವ್ವೆ
ನಿಂಬಿಯಕ್ಕನು ವರದಾನಿ     ೨೬

ಬೊಬ್ಬಯ್ಯ ಬಸವಣ್ಣ ಬಿಬ್ಬಣ ಬಾಚಯ್ಯ
ದುಗ್ಗಳವ್ವೆಯು ಮಾಯಕ್ಕ
ಕಬ್ಬ ತಂದು ಕಲ್ಲನಂದಿಯ ಮೇಯಿಸಿದ
ಲೊಬ್ಬ ಬಾವೂರ ಬೊಮ್ಮಣ್ಣನೂ   ೨೭

ಅಲ್ಲಮನನನುಭೂತಿ ತೆಲುಗರ ಬೊಮ್ಮಣ
ಬಲ್ಲಿದ ವೆಂಕ ಮಂಚಣ್ಣ
ಕಲ್ಲಿಲಿಟ್ಟ ಲಿಂಗವಕ್ಕ ಋತುಚಕ್ರನು
ಯಲ್ಲಕೊಂಡದ ಮಹಾದೇವಿ          ೨೮

ಮೊಲ್ಲೆಯ ಬೊಮ್ಮಣ್ಣ ಕೂಲಿಯ ಚಾಮಣ್ಣ
ನುಲಿಯ ಚಂದಯ್ಯ ಕಣ್ಣಪ್ಪ
ಬಲ್ಲಿದ ಶರಣನಿದ್ದನು
ಅಲ್ಲಿ ಮೋಳಿಗೆಯ ಮಾರಣ್ಣ          ೨೯

ಬಳ್ಳವ ಪೂಜಿಸಿ ಲಿಂಗವ ತೋರಿದ
ಒಳ್ಳೆಯ ಭಕ್ತ ಮಲ್ಲಯ್ಯ
ಮೋಳೆಯಕ್ಕಿ ತಾನೆಲ್ಲಿ ಶಿವಗೆ ಅರ್ಪಿಸಿದನು
ಇಳೆಯಾಂಡ ಗುಡಿಯ ಮಾರಯ್ಯ      ೩೦

ನರ ಭೋಜನ ದಿಟ್ಟೆಯಾಯಿತೆಂದ
ಹರ ಸಿರಿಯಾಳನ ಬೇಡೆ
ಅರಿದಿ ಅರಿದಿತ್ತಾಯ ಮಗ ಚೀಲಾಳನ
ಕರದ್ಯೋದ ಕಾಂಚಿಯ ಪುರವಾ        ೩೧

ಅಜಗಣ್ಣ ನೊಹಿಲ ಸಿದ್ಧರಾಮಯ್ಯನು
ಮಧುವರೆಸಯ್ಯ ಹರಳಯ್ಯ
ಭುಜಗ ಭೂಷಣನನುವೊಲಿಸಿದ ಶರಣನು
ತ್ರಿಜಗದೊಳಗೆ ಚೆನ್ನಯ್ಯ    ೩೨

ಹಡಪದ ಅಪ್ಪಣ್ಣ ಮೃಡಭಕ್ತ ಚಾಕಯ್ಯ
ಬಿಡದೇ ಹಾದರದ ಬೊಮ್ಮಣ್ಣ
ಮೃಡನ ಒಡ್ಡೋಲಗದೊಳಗೆ ಇವರಿದ್ದರು
ಪೊಡವಿಯ ಶರಣರು ಕೇಳಿ   ೩೩

ಹರನ ಒಡ್ಡೋಲಗ ಸಂಭ್ರಮದಲ್ಲಿದೆ
ಬರೆದನು ಗತಿಯೆರಡುವನು
ಶರಣರು ಕೇಳಿರೆ ಗತಿಯೆರಡರರುದ
ಬರೆಯಿತು ಮೂವ್ವತ್ನಾಲು            ೩೪

ಅಂತು ಸಂಧಿ ೨ಕ್ಕಂ ಪದ ೫೮ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ