ಸಂಧಿ-೩

ಗಂಗಾಧರನ ಓಲಗದ ಸಂಭ್ರವವನು
ಲಿಂಗವಂತರೆಲ್ಲ ಕೇಳಿ
ಭೃಂಗಿಯ ನಾಟ್ಯದ ಸಾಂಗತ್ಯದಾಯವ
ಭಂಗವಿಲ್ಲದೆ ರಚಿಸುವೆನೂ ೧

ನಂದಿ ಮಹಾಕಾಳ ಭೃಂಗಿಯು ಮೂವರು
ನಿಂದರು ಹರನ ಓಲಗದಿ
ಚಂದವುಳ್ಳದೊಂದು ಮುತ್ತಿನ ಸತ್ತಿಗೆ
ಅಂದವಾಯಿತು ಭೃಂಗೀಶ್ವರಗೆ         ೨

ಹರನನು ಘಟಿಸುವ ಪಾಠಕರೆಡೆಯೊಳು
ಹಿಡಿಯಿತು ಬಸವನನಿಂದಾ
ಶರಣ ಸಂಬಂಧಕಿದು ಸಮಯಗಳೆಂದು
ಹಿರಿದು ಸಂಭ್ರಮಿಸುತನಿಂದಾ            ೩

ನಂದಿ ಮದ್ದಳೆ ಗಟ್ಟಿ ಬ್ರಹ್ಮ ತಾಳವ ಹಿಡಿ
ದಂಡು ತುಂಬುರ ನಾರಂದ
ಸಂಧಿಸಿ ಅಂದ ರಾಗವ ಮಾಡುತಾ
ಲಂದು ಸಂಭ್ರಮದಿ ಮೆಳೈಸೇ           ೪

ಕನ್ನೆಯರು ಸುರ ನಾರಿಯರೆಲ್ಲರು
ಚೆನ್ನೆಯರು ರಂಭೆಯರು
ಬಿನ್ನಾಣ ಬಿಗುಹೇರಿ ತಿರುಹು ಕಳಾನದಿ
ಕಿನ್ನರ ನಾರಿಯರೆಲ್ಲಾ       ೫

ನೋಡುವ ಕಂಗಳು ದಣಿಯಲು ಜವನಿಕೆ
ಮಾಡಿತು ಓಲಗದೊಳಗೆ
ನಾಡ ಗಲಭೆಯನು ನೋಡಿರಿ ಶಿವಾಯ
ಆಡ ಬಂದನು ಭೃಂಗಿನಾಥಾ ೬

ಹಿಂದಕೆ ಹೊರೆಸಾರು ಯಿಂದ್ರ ತೊಲಗು ನೀ
ಮುಂದಕೆ ಹರಿಯದಿರಿಗಿ
ನಂದಿಸಿ ಕುಳ್ಳಿರಿ ಅಂತಕ ನೈರುತಿ
ಮುಂದೆ ಕುಳ್ಳಿರಿ ವರುಣ ನೀನೂ       ೭

ವಾಯು ದನಪ ಈಶಾನ್ಯ ಮೂವರು
ಠಾವು ತಪ್ಪದೆ ದಿನಚರಿಯ
ಜಿಯಾ ಚಿತ್ತೈಸಯ್ಯ ಬಾಹೋತಾ ಭೃಂಗಿಯು
ದೇವ ನಂದಿಯು ಮಹಾಕಾಳಾ          ೮

ಹರಿ ಬ್ರಹ್ಮಾದಿಗಳಿಗೆ ಒಡೆಯನು ಹರ
ಸುರ ರಾಜರಾಜಗೆ ಒಡೆಯಾ
ಕರುಣಾಕರ ಹರ ಚಿತ್ತೈಸೆನುತಲು
ಶರಣೆಂದು ಹೊಗಳಿದ ಭೃಂಗೀ          ೯

ಮದ್ಧಳೆ ಗತಿಗಳು ಧಿಂಧಿಂ ಧಿಮಿಕ್ಕೆಂನೆ
ಶಬ್ಧ ಉಘುಟಿಸವಾಯುಜವೂ
ಎದ್ದು ಸುಧೆಯ ಸೊನೆ ಕರಡೆ ಕಂಸಾಳವು
ರುದ್ರ ಮೆಚ್ಚಲು ದೇವ ಕಹಳೆ           ೧೦

ಭೃಂಗಿಯ ಮುಂದಣ ಜವನಿಕೆ ಒಡೆಯಲು
ಲಿಂಗ ನೋಡಿ ಬೆರಗಾದ
ತಿಂಗಳ ತೀವಿದ ಚಂದ್ರನ ಕಳೆಯಿಂದ
ಹಿಂಗಿಸಿ ಬೆಳಗಿದ ಭೃಂಗಿ       ೧೧

ಒಡ್ಡಿದ ಜವನಿಕೆ ಹೊಡೆಯದ ಮುನ್ನವೆ
ಒಡ್ಡವಣಿಯು ವಿಪರೀತಾ
ದಡ್ಡ ಮೂಢರ ಮನಕರಗಿತು ಆ ಕ್ಷಣ
ಜಡ್ಡುವೊಡಿತು ದೇವ ಸಭೆಯಾ        ೧೨

ಬಡ ಕವಿಗಳಗಣಿಗೆ ತಾ ತಿರದು
ವಿಗಡ ಭೃಂಗಿಯ ವಿಸ್ತಾರ
ಜಡಿವ ಮುತ್ತಿನ ಹಾರಗೊರಳಿದ ಲಿಂಗವು
ಜಡೆಯು ಸರ್ವಾಂಗ ಭಸಿತಾ ೧೩

ನೊಸಲ ಕಸ್ತೂರಿ ಮೊಸರ ತುಪ್ಪದ ಪದಕವು
ಮಿಸುನಿಯ ಕಂಕಣರವೆಯಾ
ಹಸುಳೆ ನಾಗೇಂದ್ರನ ಹೊಳಹಿನ ಕುಂಡಲ
ಶಶಿ ರವಿಯಂತಿರ್ದ ಭೃಂಗೀ  ೧೪

ನಲಿವ ಬಾವುಲಿ ಮೇಲಣ ಕಿರುಗೆಜ್ಜೆ
ಕಾಲಕಡೆಯ ಪೆಂಡೆಯವು
ನಿಲದುಂಗುರ ಬೆರಳುಡಿಗೆಜ್ಜೆ ಚಲ್ಲಣ
ಮೇಲೆ ಮಸ್ತಕ ಶಿವಲಿಂಗಾ   ೧೫

ಮೇಳೈಸಿ ನೋಡುತ್ತ ಒಳಗಂಗಳ ಭಾವ
ಬಳ್ಳಿ ಮಿಂಚುಗ ವಡೆದಂತ
ಒಳ್ಳೆಯ ಆಲಾಪದ ಮೊರೆಯದಿಂದ
ಕುಳ್ಳಿರ್ದ ಸಭೆಯೊಳಗಾಟಾ  ೧೬

ತಾಳವೇಳಸಹಿತಾ ಮೇಳದ ರೂಪಕ
ತಾಳದ ಗತಿ ಗಮಕ
ಬೊಳೆಯರರನ ಓಲಗದೊಳನೆಲ್ಲ
ಮೇಳೈಸಿ ಆಡಿದ ಭೃಂಗೀ    ೧೭

ಅಕ್ಕುಳಿಸುವ ಹೊಟ್ಟೆ ದಿಕ್ಕರಿಸುವ ನೋಟ
ಕೊಕ್ಕೆಗೊಳುತ ಕಾಲಾಟ
ಕೆಕ್ಕರಿಸಿ ಸಭೆಯುರಿಗಿಸಿ ನೋಡುತ
ಮುಕ್ಕಣ್ಣ ಗಣವೆಲ್ಲ ನಗಲೂ         ೧೮

ಬಿಕ್ಕನೆ ಬೆಳುನುಗೆ ಮುಡಿಹಿಕ್ಕಿ ಹೇರಿಸಿ
ಚಿಕ್ಕ ರೂಪಾಗುತ ದೇಹ
ಒಕ್ಕಣ್ಣ ಕೃಪೆಯ ನೋಟದ ಚಲುವೆಗೆ
ಅಕ್ಕರ ಉರಿಗಣ್ಣೆಸಗಲೂ    ೧೯

ಬಾಯ ಬಿಟ್ಟು ಆಲಾಪವ ಮಾಡಲು
ಹೋಯಿತು ಸಭೆಗಳ ಬಟ್ಟೆ
ಜಿಯಾ ಚಿತ್ತೈಸೆಂದುನಿತವ ಮಾಡಲು
ಮಾಯಾರಿಯು ತಲೆದೂಗೆ  ೨೦

ಹಲ್ಲಗಿರಿದು ಬಾಯದೆರೆದು ನೋಡದ ಮುನ್ನ
ಚೆಲ್ಲಿತು ಸಭೆಯೊಳು ನಗೆಯು
ಮಲ್ಲಿಕಾರ್ಜುನನ ನೋಡಿ ಮೆಲ್ಲನೆ ನಕ್ಕರು
ಎಲ್ಲ ಸುರಗಣ ನಗಲೂ     ೨೧

ಚರಣದ ಕಿರುಗೆಜ್ಜೆ ಕರಣ ಕಳಸವು
ಧರೆಣೆಯಲುಂಗುಷ್ಟವೊರೆ
ಭರದಿಂದ ಗಿರ್ರೆಂದು ನಿರಿಗಟ್ಟಿ ಬರಿಸಿ
ಅರವತ್ತು ನಾಲ್ಕು ಹಸ್ತಾ    ೨೨

ಬತ್ತಿಸ ಮುಷ್ಠಿಯ ವಿಸ್ತಾರದ ನೋಟ
ಒತ್ತಿದ ನೆಟ್ಟನೆ ಕಳಸಾ
ತೆತ್ತಿಸ ಕೋಟಿ ದೇವತೆಗಳನೆಲ್ಲರ
ಹತ್ತಿರ ಹೋಗಿ ಎಟಿಸುತಾ   ೨೩

ಬಹು ಗತಿ ಕಳಸ ತಾಳದ ಗತಿಗಳ
ಹವಣಿಯಾಗಿ ತಕೈ ಕುಣಿದು
ಬಹಳ ಸುಗತಿಗಳಿನೋಲಾಡುತ್ತಲು
ಹೋಹೋ ಹಳು ಹಳು ಎನುತಾ       ೨೪

ಮದ್ದಳೆ ಗತಿಯಲಿ ಹಿಗ್ಗುತ ಕುಣಿಯುತ
ಎದ್ದು ನಿಲ್ಲುತ ಕರಡೆ ಧ್ವನಿಗೆ
ಉದ್ದಕ್ಕೆ ನಿಂದಿರ್ದು ಗರ್ಜಿಸಿ ನೋಡುತ
ಬಿದ್ದಲ್ಲಿ ತಿರುವನು ಕೊಳುತಾ         ೨೫

ಅರರೆ ತಾಳಧಾರಿ ಕಂಸಾಳಗಳಿಂದ
ಧಿರುಧಿರೆ ಧಿರುರೆಯೆಂದೆನುತಾ
ಅರಿದು ವಿಷಮ ಸಮಗತಿಗಳನಾಡುತ
ಹರನ ಮೆಚ್ಚಿಸುತ್ತಿದ್ದ ಭೃಂಗೀ        ೨೬

ಆಡುತಲಿರ್ದನು ತಾನೊಂದು ಗತಿಯಾಗಿ
ನೋಡುತ ನುಡಿಯೆ ಕಳಸಾ
ಕೂಡೆ ಹೊಂಗೆಜ್ಜೆ ಘಲು ಘಲುಕಿನುತಲು
ಆಡಿಸಿ ಹರಗೆ ವಂದಿಸುತಾ    ೨೭

ನಲಿವ ಬಾವುಲಿ ಮೇಲಣ ಕಿರುಗೆಜ್ಜೆಯು
ಕಾಲ ಕಡೆಯು ಝಣ ಝಣರೂ
ಶೂಲಿಗೆ ಇದಿರಾಗಿ ಪೆರಣಿ ಬಾರಿಸಿ
ಜೊಲುವ ಕಿವಿಯ ಕೊಂಕಿಸುತಾ         ೨೮

ಅಜನ ಕಪಾಲವ ಹಿಡಿದಿರ್ದ ಪರಿಯನು
ಭುಜನ ಭೂಷಣನಾದ ಪರಿಯಾ
ಗಜಸುರನನು ಕೊಂದು ಚರ್ಮವ ಹೊದ್ದುದ
ಭಜಿಸುತ ಕಾಲಾಡಿದ ಭೃಂಗೀ           ೨೯

ಅಂಧಕ ಸುರನ ಕಾಲಂದುಗೆ ಮಾಡಿಯೆ
ನಿಂದಿರ್ದ ನಾಟ್ಯದ ಪರಿಯಾ
ಅಂದು ಕಕ್ಕಯ್ಯಗಳಿಗೆ ಹರನೊಲಿದುದ
ಅಂದವಾಗಿ ಭೃಂಗಿಯಾಡಿ    ೩೦

ಶರಣ ಮಂಚಣ್ಣಗೆ ಬೆರಳನುಯಿತ್ತುದ
ಕರುಣಿಸಿ ನೊಸಲ ಕಂಗಳನೂ
ವರವಿತ್ತು ಶಂಕರದಾಸಂಗೆ ಕೊಟ್ಟುದ
ಹರ ಮೆಚ್ಚಲಾಡಿದ ಭೃಂಗೀ            ೩೧

ಯೋಗವನಿಕ್ಕಿಯೆ ದಕ್ಷನ ಶಿರವನು
ಹೋಗಾಡಿ ಕೊಂಡಾ ಪರಿಯಾ
ಬೇಗದಿ ಕುರಿದೆಲೆ ಹರನಿತ್ತವರಿಗಳ
ನಾಗ ಭೃಂಗಿಯಾಡುತಿರ್ದಾ  ೩೨

ಭೋಗಣ್ಣನ ಬೆನ್ನಲುರುಳುತ ಮೊದುದ
ಲಾಗ ಕುಂಬಾರ ಗುಂಡೈಯ್ಯನಾ
ಬಾಗಿ ಮಡಿಕೆಯ ತಟ್ಟುವ ಅತಿಶಬ್ದಕೆ
ನಾಗಭೂಷಣ ಕುಣಿದುದನೂ           ೩೩

ಕೊಡಗನೊಬ್ಬಳು ಹಾಲು ಸವಿಯಾಗೆ
ಮೃಡನಿಗರ್ಪಿತ ವಂದೆನಲೂ
ಗಡಿಗೆವಾಲನಂದು ಹರನುಂಡ ಪರಿಗಳ
ಮೃಡ ಮೆಚ್ಚಲಾಡಿದ ಭೃಂಗಿ           ೩೪

ಹರ ಭೃಂಗಿಯಾಟವ ಹರುಷದಿ ನೋಡುತಿರೆ
ಧರೆಯೊಳು ಬಿರುದಿನ ಕಹಳೆ
ಖರೆ ಬಡಜಂಗಮ ಕದ್ದು ಮರೆಯಾಗೆ
ಕೊಡೆನೆಂಬುದ ಹರ ಕೇಳೆ     ೩೫

ವೀರಬಲ್ಲಿದ ನೀವ ಚೇರಮಗಿಂದಲು
ಧಾರುಣಿ ಮನುಜ ತಾನಲ್ಲ
ಓರಂತೆ ಊದುವ ಕಾಳೆಯ ದನಿಗೇಳಿ
ದೇವರ್ಕಳೆಲ್ಲ ತಲ್ಲಣಿಸೆ     ೩೬

ದೇವರ್ಕಳೆಲ್ಲರು ನೀವು ಕಂಗೆಡ ಬೇಡ
ಆವ ವೀರನಾದಡೆಯೂ
ದೇವಲೋಕದಿಂದ ದಾಳಿಯ ನಿಟ್ಟು
ಅವನಂಗಿಡಿದು ತಹೆನೆನಲೂ ೩೭

ಕಡೆಗಣ್ಣು ಕಿಡಿಸೂಸಿ ಕುಡಿಮೀಸೆ ಕುಣಿದಾಡೆ
ಹೊಡೆವ ಸಿವೆರಿನಬ್ಬರವೂ
ಹಿಡಿದ ಹಲಗ ಕತ್ತಿ ಕೋರೆದಾಡಿಯು ಕೋಪ
ಘಡುಘಡಿಸುತ ವೀರಭದ್ರಾ ೩೮

ಹೊಡೆ ಚೆಂಡಾಡುವೆ ಹಿಡಿತಾಹೆನವನನು
ತೊಡೆಕುವೆ ಬಿರುದನು ನಾನು
ಹೊಡೆಲಿಯೂಳಗೆ ಬಗಿದರಗಲು ಕಹಳೆಯ
ಸೆಳೆವೆನೆಂದನು ವೀರಭದ್ರಾ   ೩೯

ಬಿರಿದಿನಾ ಕಹಳೆಯ ಸೆಳೆವರೇ ಮಗನೇ
ತರುಳ ನೀನರಿಯೇ ಕೇಳಿನ್ನೂ
ತಾರಕ ಸುರನಲ್ಲ ಕಾಲಾಸುರನಲ್ಲ
ವೀರಶೈವನು ಅವನರಿಯಾ  ೪೦

ಅವಧರಿಸಲೇ ದೇವ ಅವನಾವ ಬಲ್ಲಿದ
ಭುವನದೊಳಗೆ ತಾ ಹರನೆ
ಶಿವಶರಣರು ಕದ್ದು ಮರೆಯ ಹೊಕ್ಕರು ಕೂಡ
ಅವನು ಬಲ್ಲಿದ ಗುಂಡಬ್ರಹ್ಮಾ        ೪೧

ನಾರಂದ ಕೇಳಿದ ಮಾರಾರಿಯ ನಾಗ
ಆರ ಹೇಳು ಹೇಳೆನುತಾ
ಧಾರುಣಿಯೊಳಗಣ ಗವಚೆಯಲ್ಲಿದ್ದಾನೆ
ನಾರಂದ ಕೇಳು ಭಕ್ತರನೂ    ೪೨

ಧಾರುಣಿಯೊಳಗಣ ದೂರಣ ಬಿರಿದಿಲ್ಲಿ
ಸೇರಿತು ಹರ ನಿಮ್ಮ ಕಿವಿಗೆ
ಆರೆಂದರಿಯದೆ ಅವರ ಬಾಗಿಲ ಕಾಯ್ವೆ
ಆರೈದ ಭಕ್ತರ ಹರನೆ         ೪೩

ಒಂದು ಬಿನ್ನಹ ಹರನೊಂದು ಮುನಿಯ ಬೇಡ
ದಂದವಲ್ಲ ನಿಮ್ಮ ಚಾರಾ
ತಂದು ಕಾವಿರಿ ಕೈಲಾಸಕೆ ಎಲ್ಲರ
ಎಂದನು ನಾರಂದ ನಗುತಾ   ೪೪

ಭೃಂಗಿಯಾಟವು ಎರವಾಯಿತು ಹರಗೆ
ಹಿಂಗಿತು ಮನ ಭಕ್ತ ರತ್ತಾ
ಸಂಗೀತವು ಹಸ ಕೇಳಯ್ಯ ಭೃಂಗೀಶ
ಕಂಗಳು ನೆರೆಯವು ನೋಡಾ ೪೫

ಮುತ್ತು ಮಾಣಿಕ ನವರತ್ನ ಬಂಗಾರ ಗ
ಳುತ್ತಮದುಡುಗೊರೆ ಸಂಗೀತಾ
ಹತ್ಯೆಯವಾಯಿತು ಆಟವೆನುತ ಶಿವ
ನಿತ್ತ ಭೃಂಗಿಗೆ ಉಡುಗೊರೆಯಾ         ೪೬

ಕೇಳುವೆನೆಂದರೆ ನಾಳಿಗೆ ತೀರರ್ದು
ಕೇಳಯ್ಯ ಭೃಂಗೀ ಕಂಟಕವಾ
ದಾಳಿ ಬಂದಿತು ಇನ್ನು ಗುಂಡಬೊಮ್ಮಣ್ಣನ
ಕೇಳುವೆ ಹೋಗಿ ಬಾ ಅಂದಾಗ          ೪೭

ಹಿಂದುಗಳೆಯದೆ ನಾ ಬಂದು ಕೇಳುವೆ ಭೃಂಗಿ
ಕಂದ ವೀರಭದ್ರನಾಣೆ
ನೊಂದು ಮುನಿದು ಮನನೋಯಲು ಬೇಡೆಂದು
ಅಂದು ವೀಳೆಯ ವಿತ್ತ ಹರನೂ         ೪೮

ನಂದಿ ಭೃಂಗಿಯು ನೀವು ಬಳಲಿದಿರೆನುತಲು
ಚಂದ್ರಧರನು ಸಂತೈಸಿ
ಸಂಧಿಸಿ ಬಿಡಾರವನಿಬ್ಬರಿಗಿತ್ತು
ವಂದದ ಹರ ಮನ್ನಿಸಿದಾ    ೪೯

ಭೃಂಗಿಯ ಆಟವು ಹರನು ನೋಡಿಹನಂದು
ಕಂಗಳು ದಣಿಯವು ಎನುತಾ
ರಂಗಮಂಟಪದಿಂದ ಭೃಂಗಿಯ ಕಳುಹಿದ
ಸಂಧಿಗೆ ಪದ ಐವತ್ತು         ೫೦

ಅಂತು ಸಂಧಿ ೩ ಕ್ಕಂ ಪದ ೧೦೮ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ