ಸಂಧಿ-೪

ದೇವರ್ಕಳೆಲ್ಲರ ಕಳುಹಿದ ಹರನು
ದೇವರೊಡ್ಡೋಲಗದಿರುಳು
ತಾವು ಭೂಲೋಕಕೆ ಹೋಹ ವಿಚಾರಣೆ
ದೇವರಿದ್ದರು ಹರ ಸಹಿತಾ  ೧

ನಂದಿವಾಹನ ಹರ ನಾರಾಯಣರು
ಅಂದು ಕುಳ್ಳಿರ್ದೆಕಾಂತದಲಿ
ಮುಂದೆ ಹೋಗಿ ಗುಂಡಬೊಮ್ಮನ ಬಿರುದನು
ತಂದು ಕೊಂಬದುದ್ದಿಗಾಗಿ   ೨

ಹರಿಯು ನೋಡಿದ ಹರನೋಲಗದೊಳಗಣ
ನೆರವು ಹರಯಿತೆಂಬುದನೂ
ಉರಿಯುತ್ತಿಪ್ಪ ಠಾಣದೀವಿಗೆ ಗಂಬದ
ಮರೆಯಲಿರ್ದನು ನಾರದನೂ           ೩

ದೇವ ಚಿತ್ತೈಸಯ್ಯ ನಾರಂದ ಹೋಗಲಿ
ಹೋಯಿತು ಹೊತ್ತು ಆತನಿಗೆ
ಆವ ಅವಧಿ ನಮಗಿಲ್ಲೆಂದು ನಿಂದಿರ್ದು
ನಾರಂದ ಕಳುಹಿಸಿಕೊಂಡಾ   ೪

ಹರಿ ನೀನೆಚ್ಚೆತ್ತು ತಿರುಗಿ ನೋಡಿಯು ಕಂಡೆ
ಉರಿವ ಕಿಚ್ಚು ನಾರದನೂ
ಧರೆಗೆ ಹೋಹ ಸುದ್ಧಿಯ ಹರಹುವನೊಲಗಕೆ
ಸ್ಥಿರವಾಯಿತೆಮ್ಮ ಏಕಾಂತಾ            ೫

ಹರ ಕೇಳು ಸುದ್ಧಿಯ ಕೇಳುವೆ ಕಂಡೆನು ನಾನು
ಬಿರುದಿನ ಗುಂಡ ಬೊಮ್ಮಣ್ಣಗೆ
ಧರೆಯೊಳೊರುಗಲ್ಲ x x x x ಎನಸುತ
ಸ್ಥಿರ ರಾಜ್ಯ ಗಣಪತಿರಾಯ ೬

ಭೂ ತಳದೊಳಗಲ್ಲಿ ಆತನು ಬಲ್ಲಿದ
ಆತನ ಮನೆ ಕನ್ನವಿಕ್ಕಿ
ಅತಿಯಾಗಿ ಕದ್ದು ಮರೆಹೊಕ್ಕು ನೋಡುವ
ಆತನು ಗುಂಡಬೊಮ್ಮಣ್ಣನೂ         ೭

ಹರ ಮೆಚ್ಚಿ ಹರಿಯಕರಂಗ ಹೋದನು
ಹಿರಿದು ಸಂತೋಷಗಳಾಗಿ
ಬಿರುದು ಬಿಡಿಸಿ ಭಕ್ತಿ ಸಾಕೆಂದೆನಿಸುವೆ
ನರರೊಳು ಭಂಡರ ಮಾಡಿ   ೮

ಹರಿ ಹೇಳು ಗುಂಡಬೊಮ್ಮಣಗಳೆಂಬರು
ಧರೆಯೊಳು ಕದ್ದ ಜಂಗಮವಾ
ಅರಸಗೊಪ್ಪಿಸದೆ ಹಿಂದಿಕ್ಕಿಕೊಂಬರ
ಪರಿಯ ನೊಡುವೆನೆಂದ ಹರನೂ        ೯

ಅಸಮ ಸಂಖ್ಯಾತರೆಲ್ಲರು ಕೊಂಡಾಡಲು
ಶಶಿಧರ ತಾನು ಇಂತೆಂದಾ
ಹೆಸರುಳ್ಳ ಬಿರುದಿನ ಕಹಳೆಯ ನೆಳವೆನು
ಹುಸಿ ಹುದ್ದೆ ಭಕ್ತಿಗೆ ಸಲ್ಲಾ            ೧೦

ಸುಡಿಸುವೆ ಬಿರುದನು ಬಿಡಿಸುವೆ ಭಕ್ತಿಯ
ಕೆಡೆಹಿಸುವೆನು ಠೆಕ್ಕೆಯವಾ
ಬಿಡದೆ ಬೇಸರಿಸುವೆ ತರಕಾಟ ಕಾಡುವೆ
ಹಿಡಿವೆನು ಬಂಧಿಖಾನದಲಿ   ೧೧

ಅವ ಕೇಳ್ವ ನಾವು ಕದ್ದು ತರುವಯೆಂದು
ದೇವರು ಕೇಳಿದ ಹರಿಯ
ದೇವ ಚಿತ್ತೈಸಯ್ಯ ಹಾದಿಯ ಹೋದಾಗ
ಬೇಹು ಮುಟ್ಟಿಕೊಲುವರಲ್ಲಿ         ೧೨

ಅರಸನ ಮನೆಯಲಿ ನಾವು ಕದ್ದು ಜಂಗಮವಾಗಿ
ದರುಶನ ವೇಷಗಳಾಗಿ
ಹರಿದು ಹೋಗಿ ಗುಂಡಬೊಮ್ಮನ ಮೊರೆಹೊಕ್ಕು
ಬರಿಸುವೆ ಶೂಲಕೆ ಅವರಾ    ೧೩

ಹರ ಕರೆಸಲು ವಿಶ್ವಕರ್ಮನು ಬಂದನು
ಚರಣದೊಳೆರಗಿ ನಿಂದಿರ್ದಾ
ಹಿರಿದರ್ಥಿಯಾಯಿತು ನರಲೋಕದ ಕಳವಿಗೆ
ತರಿಸೆಂದು ಕನ್ನಗತ್ತಿಯನೂ  ೧೪

ವಿಶ್ವಕರ್ಮನು ತನ್ನ ಊಳಿಗದವರೊಳು
ವಿಶ್ವೇಶ್ವರನಿಂತೆಂದಾ
ಈಶ್ವರನೆನ್ನುವನೆಂದು ಕರೆಸನು
ಶಾಶ್ವತವಾಯಿತು ಕರಸಿ      ೧೫

ಕನ್ನಗತ್ತಿಗೆ ಹರ ನಿರೂಪವ ಕೊಟ್ಟನು
ಚೆನ್ನಾಗಿ ಮಾಡಿ ತಾಯೆಂದು
ಮುನ್ನ ಮಾಡಿತಿಲ್ಲ ಇನ್ನು ನಾನರಿಯೆನು
ಪನ್ನಂಗಧರನೇ ಚಿತ್ತೈಸು    ೧೬

ಕದ್ದು ತಂದು ಪಂಚಲೋಹದಿಂದಲು ಹರ
ತಿದ್ದಿ ಮಾಡೆಂದ ಲೇಸಾಗಿ
ಉದ್ಧರಿಸಿಯೆ ಅರೆಯೊಡೆಯಲಿ ಬೇಗೆಂದು
ಮಧ್ಯರಾತ್ರಿಲಿ ಸುರೆಯೂಡಿ ೧೭

ಆರುಣ್ಯದೊಳು ಮಾಡಿ ಓರಂತೆ ತಿದ್ದಿತಾ
ಧಾರುಣೆಯೊಳು ಕಾಣದಂತೆ
ಆರಾಧಿಸಿ ಪುಷ್ಪ ಧೂಪದಿ ಹೂಗಳಿಂದ
ಭೋರನೆ ಅರೆಯೊಡೆಯೆನುತಾ          ೧೮

ತಂದುಕೊಟ್ಟನು ವಿಶ್ವಕರ್ಮನು ಕತ್ತಿಯ
ಚಂದ್ರಧರೆಗೆ ಜಯವೆನುತಾ
ಮುಂದೆ ಹೋದ ಕಾರ್ಯಬೇಗ ಸಿದ್ಧಿಸಲೆಂದು
ಅಂದು ಹರಸಿ ಕೊಟ್ಟ ಹರಗೆ            ೧೯

ಹರನು ನೋಡಿದ ಮೆಚ್ಚಿ ಕನ್ನಗತ್ತಿಯ ಕಂಡು
ಹರಿಗೆ ಕೂರಿಸಿ ಹುಗ್ತುತಲಿ
ಕರ ಹಸನಾದವು ಧಾರಗಳೆಂಟು
ಕರದಿವೆ ನೊಂದಲ ವಸ್ತುಗಳಾ           ೨೦

ಉಡುಗೊರೆಯನು ಕೊಟ್ಟ ವಿಶ್ವಕರ್ಮಗೆ ಹರ
ತೊಡಿಗೆ ಬಂಗಾರ ಮಾಣಿಕವಾ
ಪೊಡವಿಗೆ ಹೋಗಿಯೆ ಹದುಳದಿ ಬಂದಾಗ
ಕೊಡುವೆನು ಪದವಿಯನೆಂದಾ           ೨೧

ತಿಳಿಯುತ್ತಾಡಲು ಬೇಡ ಕೇಳಯ್ಯ ಹರಿಯೆ
ಮಳೆಗಾಲವಾಗದ ಮುನ್ನಾ
ಘಳಿಲನೆ ಹೋಗಿಯೆ ಗುಂಡಬೊಮ್ಮಣ್ಣನ
ಬಲವಶ ಭಕ್ತಿಯ ಕಾಂಬಾ    ೨೨

ಲೋಕೋಪಚಾರಕೆ ಭಕ್ತಿಗಳಾದರೆ
ಸಾಕು ಗುಂಡಬೊಮ್ಮನವಗೆ
ಏಕಮಾತ ಭಕ್ತಿ ತಮ್ಮೊಳಿಲ್ಲದಿರ್ದಡೆ
ಲೋಕ ಕೈಲಾಸಕೆ ಹೊರಗು  ೨೩

ಹರಿಯು ಕೇಳಿದ ಹರ ಆರಾರು ಹೋಗುವಯೆಂದು
ಧರೆಗೆ ಹೋಗುವ ಸಂಗಡವಾ
ಭರವಸೆ ನಾರಂದ ಬಂದೆನೆಂದಾನು
ಇರಲೋ ಬರಲೋ ಹೇಳು ಹರಿಯೇ  ೨೪

ಪಚ್ಚೆಕರ್ಪೂರ ಗಟ್ಟಿ ಕಿಚ್ಚ ಹೊಕ್ಕಾಗವೆ
ನಿಶ್ಚಯ ಹರನೆ ಚಿತ್ತೈಸೂ
ಅಚ್ಚಗ ತಪ್ಪದು ನಾರಂದ ಎಂದಾಗ
ಹುಚ್ಚ ದೇವರೆ ನಾವು ಸಾಕೂ           ೨೫

ದಾರಿಯ ಊಳಿಗಕಾರುಂಟು ಹರಿಯೆ
ನಾರಂದ ಬರಬೇಡವೆಂದೆ
ಧೀರನು ನಾರಂದ ಬೆನ್ನಿಗೆ ಬಲ್ಲಿದ
ಊರ ಹೊಕ್ಕ ಅರಮನೆಯಾ            ೨೬

ಹಳ್ಳ ಹೊಳೆಯು ಖಂಡಿಹೊಲಬು ದಾರಿಯ ಬಲ್ಲ
ಕಳ್ಳಗಂಡಿ ಕಾಲು ಹೊಳೆಯ
ಹಳ್ಳಿಯಲ್ಲ ಊರುಗಲ್ಲ ಪಟ್ಟಣ ಹರಿ
ಒಳ್ಳಿತು ನಾರಂದ ಬರಲಿ     ೨೭

ಚಿತ್ತೈಸು ಹರ ನಮಗೆತ್ತಣ ಪೌರುಷ
ಸುತ್ತಮುತ್ತಲು ಅರಸು ದಾಳಿ
ಹತ್ತಿರೆಲಲಮ್ಮಕಿತ್ತಂಡಗಳ ವಿಕ್ಕಿ
ಎತ್ತಲಾದರೆ ಓಡಿ ಹೋಹಾ ೨೮

ಕೂರಿ ಕೈಲಾಸವ ವೀರಭದ್ರಗೆ ಕೊಟ್ಟು
ಕಾವಲಾಗಿಯೆ ಇರಹೇಳಿ
ಭೂಲೋಕಕೆ ಹೋಗಿ ತಿರುಗಿ ಬರೋತನಕ
ಬಾಗಿಲು ಗಣಪ ಭೈರವನಾ  ೨೯

ಪವನನು ಬ್ರಹ್ಮನು ಪಹರಿಯ ಕಾವರು
ಶಿವನ ಸತಿಯು ಪಾರ್ವತಿಗೆ
ಅವನು ಗೊಲ್ಲಾಳರಾಯಗರಮನೆಗಾವಲ
ನವರಿಗೆ ಕೊಟ್ಟನಳಿಗವಾ     ೩೦

ವೀಳೆಯ ಉಡುಗೊರೆಗಳ ಗಣಂಗಳಿಗಿತ್ತು
ಕೇಳಿರಿವೆಂದನು ಹರನು
ಊಳಿಗವನು ಮಾಡಿ ವೀರೇಶ್ವರಗೆಂದು
ಬಾಳಲೋಚನನು ಹೇಳಿದನೂ          ೩೧

ಗುಂಡಬೊಮ್ಮಣ್ಣನು ನಮ್ಮ ಕಣ್ಣಲಿ ತೊಳಲುವ
ಕಂಡು ಬಾಹೆವು ನಾವೆಂದು
ತಂಡ ತಂಡದ ದೇವರ್ಕಳ ಕಳುಹಿದ
ಗಂಡ ವೀರೇಶನ ಕೊಡೆ        ೩೨

ಹರನು ಕಳುಹಿದನು ಹರಸಿತು ಓಲಗ
ನೆರವಿ ನಾಟಕ ಶಾಲೆಗಳಾ
ಪುರದ ನಾರಿಯರು ಕಿನ್ನರ ಸತಿಯರು
ಭರದಿಂದ ತಂದರಾರತಿಯಾ ೩೩

ಮಡದಿಯಾರೆಲ್ಲರು ತಂದರಾರತಿಗಳನು
ಮೃಡಗೆ ದಿಷ್ಠಿನೇರಿತೆನುತಾ
ಪೊಡವಿಗೀಶವರದೇವ ಜಯಯೆಂದು ಹರಿವಾಣ
ಹಿಡಿದು ನಿವಾಳಿಸೆ ಹರಗೆ     ೩೪

ಹರನ ಒಡ್ಡೋಲಗ ಹರಸಿತು ಆಗಲೆ
ಮೊರೆವ ಹೆಗ್ಗಾಳೆ ತಮ್ಮಟವೂ
ಪರಿ ಪರಿಯಲಿ ನವರತ್ನದಾರತಿಗಳ
ಹರಗೆತ್ತಿ ಹರಸಿದ ರಾಗ       ೩೫

ಮುತ್ತು ಮಾಣಿಕ ವಜ್ರ ಪಚ್ಚೆ ನೀಲಂಗಳು
ಸುತ್ತಹೊದ್ದಿದ ನವರತ್ನಾ
ತೆತ್ತಿಸಿ ಹೊನ್ನ ಹರಿವಾಣಗಳಿಂದ
ಮತ್ತೆ ನೀಡಿದರಾರತಿಯಾ    ೩೬

ಅರುವತ್ತಾರು ಕೋಟಿ ಜಡೆಗಳನೆಲ್ಲವ
ತರುವಾಯಲಡಗಿಸಿಕೊಂಡಾ
ಉರಿವ ಜುಟ್ಟದ ಗಂಗೆ ಶಶಿರವಿಗಳನೆಲ್ಲ
ಕುರುಹಾಗದಂತವ ಮಡಗಿ   ೩೭

ಹರಸಿ ಪಾರ್ವತಿದೇವಿ ನಲಿದ ಆರತಿಯೆತ್ತಿ
ಸ್ಥಿರ ಜೀವಿಯಾಗಿಯೇ ಬನ್ನಿ
ಇರಬೇಡ ಓರಗಲ್ಲೊಳಗೆ ದೇವರ ದೇವ
ಕರವ ಮುಗಿದು ಬೇಡಿಕೊಂಬೆ           ೩೮

ಹರ ಕೇಳು ಬಿನ್ನಪ ಓರುಗಲ್ಲೊಳಗೆಲ್ಲ
ತೆಲುಗರೆ ಸೂಳೆಯರುಂಟು
ಮರುಳು ಮಾಡಿ ನಿಮ್ಮನಿರಿಸಿಕೊಂಬರು ದೇವ
ಇರಬೇಡ ನಂಬಿದೆ ನಾನೂ    ೩೯

ಗಂಗದೇವಿಯ ಸಂಗದ ಹೋಗುವಿರಿ
ಲಿಂಗ ನಿಮಗೆ ಓಲವರವೂ
ಮಂಗಳ ಮಹಾಮನೆ ನಾನೊಬ್ಬಳಾದೆನು
ಹೆಂಗಸು ಜಲ್ಮವು ಸುಡಲಿ   ೪೦

ಹೊಕ್ಕು ಬಂದಪೆದೇವಿ ಒಕ್ಕಲಾಗಿರದೇವಲ್ಲಿ
ಅಕ್ಕಜದ ನುಡಿಬೇಡಾ
ಮಕ್ಕಳಾಟೀಕೆಯೆಂದು ನಗುವರು ಸುರರೆಮ್ಮ
ಸಿಕ್ಕುವರಲ್ಲ ನಾವಲ್ಲಿ      ೪೧

ಕುಲ ವಿಹೀನಿಯ ತಂದು ತಲೆಯನೇರಿಸಿಕೊಂಡೆ
ಹೊಲೆಯನ ಮನೆಯಲಿ ನೀ ಉಂಡೆ
ಕೊಲೆಗೆ ಹೇಸುವನಲ್ಲ ಮತ್ತೆ ಇನ್ನಿಬ್ಬರ
ಕೊಲುವರೆ ಪಯಣಗಳಾದೆ  ೪೨

ಕುಲ ವಿಹೀನೆಯೆಂದು ನುಡಿವರೆ ಪಾರ್ವತಿ
ಎಲಗೆ ನಿಮ್ಮಪ್ಪನನರಿಯಾ
ತಲೆಹಿಂಗ ಹೋಮದ ಕೊಂಡದಿ ಬಿದ್ದಿತು
ತಲೆ ಕುರಿಮುಖವಾಯಿತವಗೇ          ೪೩

ಮೃಡನೆ ಚಿತ್ತೈಸಯ್ಯಯೆನುತಲು ಪಾರ್ವತಿ
ಘುಡುಘುಡಿಸಿಯೇ ಕೋಪದಲಿ
ಕಡೆ ನುಡಿದಳು ತಮ್ಮ ಕಡು ಮೋಹದರಿಸಿಯು
ಹಿಡಿದೆ ಸೈರಣೆ ಬುದ್ಧಿಹೇಳಿ ೪೪

ಇಬ್ಬರು ಹೆಂಡಿರ ಗೊಡೆವೆಗಳಿಂದಲು
ದಿಬ್ಬದೇಹವು ಬರಲೇಸು
ಸರ್ವದೇವರ್ಕಳು ನಮ್ಮ ನೋಡಿ ನಗುವರು
ಇಬ್ಬರಿಗೇಕೆ ಸಂವ್ಯಾಜ್ಯಾ    ೪೫

ಹರ ಸಂತೈಸಿದ ಮಡದಿಯರಿಬ್ಬರ
ಪೊಡವಿಗೆ ಹೋಗಿ ಬಾಹೆವೆನುತಾ
ಹರುಷವೆ ಪಾರ್ವತಿ ದುಗುಡದಲಿರಬೇಡ
ಖರೆ ಬೇಗ ಬ(ರುವೆ)ನು ನಿನ್ನಾಣೆ       ೪೬

ಹರನನು ಮರುಳ ಭಕ್ತರ ಕಂಡರೆ
ನರಲೋಕದವದಿರುಯೆಲ್ಲಾ
ಮರುಳಾಗಿ ಕೊಟ್ಟರಿ ರಾವಣಗೆಂನನು
ಹರಿಯಿಂದ ಉಳಿದೆನು ನಾನೂ          ೪೭

ಉರಿವ ಹಸ್ತವ ಕೊಟ್ಟೆ ಭಸ್ಮಾಸುರನಿಗೆ
ತಿರುಗಿ ಬಂದು ನಿನ್ನ ಕೊಲ್ಲಲು
ಹರಿಯು ನಿನ್ನ ನಂದು ಬಚ್ಚಿಟ್ಟನರಿಯಾ
ಮರಳಿ ಅವರಣೆಕಾಯೊಳಗೇ ೪೮

ಅಂದು ನಾರಾಯಣ ಸ್ತ್ರೀರೂಪಾಗಿಯೆ
ಬಂದು ನಿಂದನು ಅವನಿದಿರಾ
ಚಂದವಾಗಿ ಮುಂದೆ ನಾಟ್ಯವನಾಡಿಯೆ
ಬಂದಲ್ಲಿ ಅರ್ಜುನ ಕೊಂದಾ            ೪೯

ಹರನಾಗಿ ಗಿರಿಜೆಯ ಮಾತಿಗೆ ಮೆಚ್ಚುತ
ಹಿರಿದು ಸಂತೋಷದಿಂದಾ
ಧರೆಗೆ ಹೋಗಿ ನಾನು ಭಕ್ತರಮನ ನೋಡಿ
ಖರಬೇಗ ಬ(ರುವೆ)ನು ನಿನ್ನಾಣೇ      ೫೦

ಹರ ನೀನು ಭಕ್ತರ ನೋಡುವ ಪರಿಯನು
ಒರೆದು ಹೇಳು ವಿವರಗಳಾ
ಇರುಳು ಕನ್ನವ ನಿಕ್ಕಿ ಕದ್ದು ಮರೆಯ ಹೊಕ್ಕು
ಮನವ ನೋಡು ನೀನವರಾ  ೫೧

ಸರ್ಪ್ಪಾಭರಣಗಳೆಲ್ಲವ ತೆಗೆತೆಗೆ
ದೊಪ್ಪುವ ಸರಮಣಿ ಮಾಡಿ
ಒಪ್ಪುವ ಒಡ್ಯಾಣ ಗಜಚರ್ಮ ವಿಭೂತಿ
ಕಪ್ಪಿನಗೊರಳದ ಮೇಲೆ      ೫೨

ಅಸುರರ ಶಿರಮಾಲೆ ವೃಷಭನು ಸಹಿತಲು
ಪಶುಪತಿ ತೆಗೆದಾಗಲಿರಿಸಿ
ಬಿಸಿಗಂಗಳ ಮೇಲೆ ಭಸಿತವ ಲೇಪಿಸಿ
ನಸು ನಗುತನುವಾಗುತಿರ್ದಾ            ೫೩

ಪಂಚಮುಖಂಗೆ ವಂಚಿಸಿ ಒಂದು ಮಾಡಿ
ಮಿಂಚುವ ಫನಿಯ ಕೊಂಡಲವೂ
ಕೆಂಜೆಡೆಯು ತಳಿರು ಗಾವೆಯ ಹೊದೆಕೆಯ
ಪಂಚಾಕ್ಷರಿ ಜಪಮಾಲೆ        ೫೪

ಆದೂರ ಗುಂಡಿಗೆ ಅಳವಟ್ಟ ವಿಭೂತಿ
ಪಾದದಿ ಪದುಮ ಪಾವುಗೆಯೂ
ಆದಯಾಂಬುದಿ ಬೆತ್ತಬಲಗೈಯ್ಯಲಾಕುಳ
ಮೇದಿನಿಗಿಳಿವ ಸಂಭ್ರಮವೂ ೫೫

ಅಸುರರ ಭಯಗಳು ಬಲಹು ದಾರಿಯಲೆಂದು
ಶಶಿಧರ ಹರಿಯನು ಕೇಳೆ
ವಸುಧೆಯೊಳಗೆ ತಿಳಿದುಂಬ ಜಂಗಮವನು
ಬೆಸರುಗೊಳ್ಳರೆಂದ ಹರಿಯೂ          ೫೬

ತಿರುಕರು ಹೋಹರೆ ಸಂಗಡವಾಗಿಯೆ
ದೊರಕಬೇಕೆ ಆನೆ ಕುದುರೆ
ಹಿಡಿದು ಭಂಗಳು ಹರ ನಿಮಗೆಕೆಂದು
ಮುರಹರ ಬಿನ್ನಯಿಸಿದನೂ ೫೭

ಕಂಥೆ ಕಾವಿಯ ಕುಂಡಲ ಲಾಕುಳದಿಂದ
ಅಂತು ಜಂಗಮವಾದ ಹರಿಯೂ
ಅಂತಾಗಲುಡಿಯೊಳು ಉಳಿಗನ್ನ ಕತ್ತಿಯೂ
ಮುಂತಾಗಿ ಹರಿಯಳವಡಿಸಿ  ೫೮

ಲಾಳಲಗೊಳವೆಯು ಬೆಳುವೆಬೂದಿಯು
ಪೌಳಿಗಪ್ಪಡ ಎಳೆನೋಲು
ಧಾಳಿಗದ್ದ ಗಟ್ಟುಗಪ್ಪಡ ಮುಂತಾಗಿ
ಮೇಳೈಸಿ ಕೊಂಡನು ಹರಿಯೂ         ೫೯

ದಿಟ್ಟನೇರಿತೆಂದು ಇಟ್ಟು ವಿಭೂತಿಯ
ಪಟ್ಟವನಾ ಹರಿಹರಗೆ
ಸೃಷ್ಟಿಯ ಕಳವಿಗೆ ಕನ್ನಗತ್ತಿಯ ನಿಕ್ಕಿ
ದಟ್ಟವಿಡಿಯಿಟ್ಟನು ಹರನೂ           ೬೦

ಮೃಢಮುರ ವೈರಿಯ ಅಡಿಯಿಟ್ಟು ಕೇಳಿದ
ಎಡದಲು ಗೌಳಿಯ ಸ್ವರವಾ
ನುಡಿವುತ್ತಲಾಗ ಉಳಿ ಸ್ವರಗಚ್ಚಿ ನುಡಿಯಲು
ನಡುವುತ ಹರ ನಿಂದನಲ್ಲಿ   ೬೧

ಹರನು ಕೇಳಿದ ನಾ ಶಕುನದ ಲೇಸನು
ಹರಿ ನೀ ಬಲ್ಲೆ ಹೇಳೆನಲೂ
ಶರಣರ ಕೂಡುವ ಗುಂಡಬೊಮ್ಮಣ್ಣನೆಂದು
ಹರನೆ ಹೇಳುತಲದೆ ಗೌವುಳಿ ೬೨

ವಾಯಸ ತಿದ್ದಿಯೆ ಉದ್ದವನೇರಲು
ಆಯಿತು ಮುಂದಣ ಪರಿಯಾ
ಹೋಯಿತು ಮುಂದಣ ಉದ್ದಿಯ ಕೊಂಬಿಗೆ
ದಾಯವ ಹೇಳೆಂದ ಹರನೂ ೬೩

ಉದ್ದಿಯ ಕೊಂಬಿಗೆ ನಿರ್ಧಾರ ಸೋಲಲು
ರುದ್ರ ನಿನ್ನಯ ಭಕ್ತರಿಗೆ
ಮಧ್ಯಾಹ್ನ ನಾಳಿನ ದಿವಸದೊಳಗೆ ಬೇಗ
ಸಿದ್ಧಿಸಿತೆಮಗಾ ಕೆಲಸಾ       ೬೪

ಹಲವು ಶಕುನ ಹರ ಲೇಸುಗಳಾದವು
ಹಲವು ವಿಷಮ ಹಾಲುವಕ್ಕಿ
ಘುಳಿಲೆಂದು ಸೇವಿಸಿ ಮೆಲು x x x ಲು
ಕಳವು ಸಾಧ್ಯವೆಂದ ಹರಿಯೂ           ೬೫

ಮೇಲುವಳಿಯು ಹೊಲ್ಲ ಗುಂಡಬೊಮ್ಮಣಗೆ
ನೀಲಕಂಠನೆ ಲೇಸು ನಮಗೆ
ಭೂಲೋಕದಿ ನಾಳೆ ಗುಂಡಬೊಮ್ಮಣಗೆ
ಶೂಲ ಸಲೆನೆಲೆ ಹರನೇ       ೬೬

ವೇಷಧಾರಿಯಾಗಿದೆ ಶಾಂತಧಾರಿಯಾಗಿ
ವೇಷಾಡಂಬರಿಯಾಗಿ ಶಿವನು
ಶೇಷನ ಹೆಡೆಗಳ ತುಳಿದ ಹರಿಯು ಸಹಿ
ತೀಶ್ವರ ಕೈಲಾಸವಿಳಿದಾ     ೬೭

ಹರನು ಕೈಲಾಸವನಿಳಿದು ಬಂದು ತಾನು
ಧರೆಯ ಮೇಲೆ ನಿಂದ ಬಳಿಗೆ
ಗುರುವಿಗೆ ಬಿನ್ನಪ ಶರಣರು ಕೇಳಿರೆ
ಪದನು ಸಂಧಿ ಅರವತ್ತೆಂಟು ೬೮

ಅಂತು ಸಂಧಿ ೪ಕ್ಕಂ ಪದನು ೧೭೬ ಕ್ಕಂ
ಮಂಗಳ ಮಹಾಶ್ರೀಶ್ರೀಶ್ರೀ