ಸಂಧಿ-೬

ಭಕ್ತರ ಮನನೋಡ ಬಂದರು ಹರಿಹರ
ಚಿಕ್ಕ ಜಂಗಮ ರೂಪಾಗಿ
ಠಕ್ಕಲಿ ಓರಗಲ್ಲ ನೀರ ಹೊಳೆಯಲಂದು
ಹೊಕ್ಕರು ಶುದ್ಧಿಯ ಕೇಳಾ೧

ಒಡನಡು ಬಳುಕುತ ಬಟ್ಟ ಬೊಗರಿ ಕುಚ
ಕಡುಗಪ್ಪು ಸೆರಗಿನ ಸೀರೆ
ಉಡಿಗೆಯ ಶೃಂಗಾರ ನೋಡುತ ನೀರಿಗೆ
ಕೊಡನ ಕೊಂಡು ನಾರಿಯರೂ          ೨

ವಿರಹವನಾಡುತ ತರಳೆಯರಲ್ಲರು
ತೆರಳಿ ಬಂದರು ನೀರ ಹೊಳೆಗೆ
ಹರನು ಕಾಣುತಲೆಂದು ಸತಿಯರ ಸುಖಗಳ
ಹರಿಯೆ ಲೇಸು ತೆಲುಗ ದೇಶಾ          ೩

ಜೊಡೆಪಲ್ಲು ಬಿಡುಗಾಲು ಬಿಡೊರೆಗಣ್ಣು
ಕೊಡಗಪ್ಪಡಿಯಿಡೆ ಮೊರೆ
ನೋಡಲು ನರಕವು ನಮ್ಮ ನಾಡಿನ ಹೆಣ್ಣು
ಕಾಡಬಹುದು ಹರಿಯಿವರಾ             ೪

ಮೊಲ್ಲೆಗೋಡನ ಕೊಂಡು ವಲ್ಲಭೆಯರು ಬರೆ
ಮೆಲ್ಲನೆ ತಾವರೆಗೊಳಕೆ
ಮಲ್ಲಿಕಾರ್ಜುನ ಹರನಲ್ಲಿ ಹೋಗಿಯರಿಲ್ಲೆ
ವಲ್ಲಭೆ ಹೊಡಯೆಡೆ ಹರಗೆ            ೫

ಹರಸಿ ವಿಭೂತಿಯನಿಟ್ಟನು ಹರನು
ಹರಿಯು ಕೇಳಿದರು ಆರೆಂದೂ
ಗುರುವೆ ಚಿತ್ರೈಸೂರುಗಲ್ಲು ಗಂಡನ ಮನೆ
ಗವಚೇರು ತಂದೆ ತಾಯಿಗಳೂ           ೬

ಅಲ್ಲಿ ನಿಮ್ಮ ತಂದೆ ತಾಯಿಗಳಾರೆಂದು
ಮೆಲ್ಲನೆ ಕೇಳಿದ ಹರನೂ
ಬಲ್ಲಿದ ಭಕ್ತರು ಗುಂಡಬೊಮ್ಮಣ್ಣನ
ಳಲ್ಲಿ ನಮ್ಮಣ್ಣಂದಿರಿಹರೂ            ೭

ಓರುಗಲ್ಲಿಗೆ ಹೋದ ಪರದೇಶಿ ಜಂಗಮ
ಕಾರುಂಟು ಅನ್ನ ವಿಕ್ಕವರೂ
ಆರಾರು ಬಂದರಿಗಿಟ್ಟಿಯ ಭೋಜನವು
ವೀರಶೈವವುಪ್ಪರ ಗುಡಿಯೂ          ೮

ವಾರವ ಕೊಂಡಿಹರ ಜಂಗಮವಾರೆಂದು
ಭೋರನೆ ಹೇಳೆಂದ ಹರನೂ
ಭಾರಿಯ ಮರುಳ ಜೈಸೋಮಣ್ಣೊಡೆಯರು
ನಿರಾಭಾರಿ ಸಿದ್ಧರಾಮ್ಯಯ್ಯ            ೯

ಅತ್ತಣೆಂದಲಿ ಬಂದರವರೊಬ್ಬ ಹಿರಿಯರು
ಉತ್ತರ ದೇಶಗಳಿಂದಾ
ಮತ್ತಾ ಹಿಮವಂತ ಗಯೆಯಿಂದ ಬಂದಿಹ
ಸತ್ಯವಂತನಾಗಿ ದೇವಾ       ೧೦

ಹೆಸರುಳ್ಳ ಹಿರಿಯರ ಹೇಳಲೆ ಮಗಳೇ
ಶಶಿಧರ ನಾಣೆಯು ನಿನಗೆ
ಭಸಿತಧರ ದೇವ ಸುಲಿಪಲ್ಲ ಚೆನ್ನಯ್ಯ
ಹೆಸರುಳ್ಳ ಹಿರಿಯರು ಗುರುವೇ        ೧೧

ಸಿಂಗಣ ದೇಶದ ಸಿರಿಗಿರಿಯೊಡೆಯರು
ತುಂಗಭದ್ರೆಯನಾಗಿ ದೇವಾ
ಲಿಂಗದಲೆರಕದ ಬಿಳಿಯ ಭೀಮದೇವ
ಕಂಗಳ ವೀರಭದ್ರಯ್ಯ        ೧೨

ಕಲ್ಯಾಣದ ಬಿಲ್ಲಪತ್ರೆಯ ಬಸವಣ್ಣ
ಮಲ್ಲಿನಾಥ ಹಾಲ ವ್ರತದಾ
ಫಲದಾಹಾರದ ಷೋಡಶಯ್ಯನು
ಅಲ್ಲಿಪ್ಪ ವರತೆಯಯ್ಯಗಳೂ          ೧೩

ನೆಲಸಿಪ್ಪರಲ್ಲಿಯೆ ನೀಲವರ್ಣದ ಮಸಿ
ಛಲಪದ ಭಕ್ತಿ ಜಂಗಮವೂ
ಸುಲಿಪಲ್ಲು ತಾಮ್ರದ ಕಚ್ಚುಟ ಕುಂಡಲ
ಚೆಲುವ ವೊಡ್ಯಾಣ ಹಾವುಗೆಯೂ     ೧೪

ಮಾಯಾ ಮೋಹ ಪ್ರಪಂಚಗಳೆಲ್ಲವ
ಬೀಯ ಮಾಡಿ ನಿಂದವರೂ
ಸಾಯಸಗೊಳ್ಳರು ಕಾಯಕ ಕೂಲಿ ತೆಗೆ
ಜಿಯ್ಯಾ ಹರಿಹರೆಲ್ಲಿ         ೧೫

ನಿಚ್ಚಟ ನಿರವಯರಚ್ಚ ತಾಳು ಬಾಳು
ಸಚ್ಚಿದಾನಂದ ಧ್ಯಾನಿಗಳೂ
ವೊಚ್ಚ ರುದ್ರಾಕ್ಷೆ ಮಣಿಯ ಮುಕುಟ ಜಪ
ಚೆಚ್ಚರ ಶಿವನ ಧ್ಯಾನಿಗಳೂ  ೧೬

ಕಕ್ಷೆಯು ಕರಸ್ಥಲ ಉತ್ತಮಾಂಗದ ಲಿಂಗ
ಮೋಕ್ಷ ಮಳೋಕ್ಷದ ಲಿಂಗಾ
ದೀಕ್ಷೆಯ ಮುಖನೆ ಗೊರಳದ ಲಿಂಗವು
ದೀಕ್ಷೆಯ ಗುರುವೇ ಚಿತ್ತೈಸೂ           ೧೭

ಇದಿರು ವೆಳ್ಳಿಗಳೆಂದು ಬೆದರಿ ನಿಲುವರಲ್ಲ
ಹೆದರಿದೆ ಹೋಹಣಕ್ಕಲನೂ
ಪದವಿಟ್ಟು ಭವಿ ಸಂಸರ್ಗವ ಮಾಡರು
ಹೃದಯದೊಳೆಂದಿಲ್ಲ ಗುರುವೇ      ೧೮

ರಾಶಿ ಕೋಟಿಗಳೆಂದು ಜ್ಯೋತಿಷ್ಯರ ಕೇಳರು
ಆಸೆಯಿಲ್ಲ ಶಕುನಗಳಾ
ಈಶನೇ ಗತಿಯೆಂದು ಮದುವೆಯಾ ಮಾಳ್ಪರು
ಭಾಷೆಗೆ ತಪ್ಪರು ಗುರುವೇ  ೧೯

ಗುಂಡಬೊಮ್ಮಗಳೆಂಬ ಶರಣರು ಉಂಟೆಂದು
ಕೊಂಡಾಡೆ ಗಿರಿಯು ತೀರ್ಥದಲಿ
ಕಂಡು ಹೋಗೆವು ಒಮ್ಮೆ ಅವರನೆನುತಲೆ
ಬಂದೆವು ಓರುಗಲ್ಲಿಗಾಗಿ     ೨೦

ಅವರೀ ಪಟ್ಟಣದೊಳಗಿಲ್ಲ ಗುರುವೆ
ಅವರತ್ತ ಗವಚೆರರಿಹರೂ
ಅವರ ಊರಾಡಿ ಬಂದರೆ ಹಿರಿಯರಿ
ಗವರು ಸೇವೆಯ ಮಾಡುತಿಹರೂ      ೨೧

ಎತ್ತಣ ದಿಕ್ಕದು ಗವಚೆರೆಂಬುದು
ಮತ್ತೆಷ್ಟು ದೂರವು ಮಗಳೆ
ಉತ್ತರ ದಿಕ್ಕುಗಳಿಲ್ಲಿಗೆ ಗಾವುದ
ಹತ್ತಿರ ಚಿತ್ತೈಸಿ ಗುರುವೇ    ೨೨

ಆವುದು ಕುರುಹುಲ್ಲಿ ಅರಸಲು ಆರೆವು
ಹೋಹೆವು ಮೆಲ್ಲನೆ ಹೇಳೂ
ಆವಾಗಲೂದುವ ಬಿರುದಿನ ಕಹಳೆಯು
ಕಾವರು ಮರೆಯ ಹೊಕ್ಕವರಾ          ೨೩

ಕುರುಹಿನುಪ್ಪರ ಗುಡಿ ಮೆರೆವ ನಂದಿಯ ಕಂಬ
ಹೊರಗಣ ಬಾಗಿಲ ಮುಂದೆ
ಮರೆಯಿಲ್ಲ ಬಿಜ ಮಾಡಿ ಬಳಲಿದಿರೊಡೆಯರೆ
ಕುರುಹನರಸಿ ಕೇಳಲಿಲ್ಲಾ   ೨೪

ಕದ್ದು ಜಂಗಮ ಬರೆ ಹಿಂದಕ್ಕಿಕೊಂಬುದು
ನಿರ್ಧಾರ ಮುನ್ನುಂಟೆ ಹೇಳೂ
ಹೊದ್ದಿ ಕಳವುದಾಚಾರಕೆ ಅತಿ ಭಂಡು
ಉದ್ಧಟತನ ಬಿರಿದು ಬೇಡಾ            ೨೫

ಕಡೆಗೆ ನಡೆಯವು ನೇಣ x x x x x x
ಪೊಡವಿಯೊಳಗೆ ಅತಿ ಹೊಸತೂ
ಹಿಡಿದ ವ್ರತ ಭಕ್ತಿ ಭಂಗಗಳಾದವು
ಗೊಡವೆ ಬೇಡ ಬಿರುದುಗಳಾ            ೨೬

ಚಿತ್ತೈಸು ಗುರುಲಿಂಗ ಭಕ್ತಿಯು ಮೋಸಕಲ್ಲ
ಮತ್ತಲ್ಲಿ ತನುಮನ ಧನವಾ
ನಿತ್ಯಲರ್ಪಿಸುವವರು ಲಿಂಗ ಜಂಗಮಕಲ್ಲಿ
ಸತ್ತು ಕಾಂಬರು ಭಕ್ತಿಛಲವಾ            ೨೭

ಸತ್ತೆನುತರೆಂದೆಂಬ ಮಾಯಾ ಮೋಹಗಳಿಲ್ಲ
ಹಿತ ಪುರುಷಾರ್ಥ ಭಕ್ತಿಯಲಿ
ಪೃಥಿವಿಯೊಳಗೆ ಗುಂಡಬೊಮ್ಮಣ್ಣಗಳಿಗೆ
ವ್ರತಯಿಲ್ಲ ಗುರುವೆ ಚಿತ್ತೈಸೂ        ೨೮

ನಮ್ಮಿಂದ ಭಕ್ತಿಯ ಮಾಡುವರಿಲ್ಲೆಂದು
ಹಮ್ಮನಾಡಿಯೇಕೆ ಕೆಟ್ಟ ಚೋಳಾ
ಸುಮ್ಮನುಂಡನು ಹರ ಚೆನ್ನನ ಮನೆಯಲಿ
ಹೆಮ್ಮೆಯ ನುಡಿ ಬೇಡ ಮಗಳೇ        ೨೯

ಹಿರಿಯ ಮಗನನಂದು ಭಾಣಸ ಮಾಡಿಯೆ
ಸಿರಿಯಾಳ ಭಂಡಾದನರಿಯಾ
ಬರುತ ಕೈಲಾಸದ ಬಾಗಿಲಲ್ಲಿ ಸಿಕ್ಕಿದ
ಹಿರಿದು ಹಮ್ಮನು ನುಡಿದಾತಾ         ೩೦

ಅವನ ದೊಡ್ಡತನವ ಕೊಂಡಾಡುವೆ
ಅವನ ಕುಲವ ಹೇಳು ಮಗಳೆ
ಶಿವನೈದು ಮುಖದಲ್ಲಿ ಹುಟ್ಟಿದರೊಡೆಯರೆ
ಅವರು ಪಂಚಮ ಕುಲದವರೂ         ೩೧

ಸೆಟ್ಟವಾಳರು ಓರುಗಲ್ಲಿನ ದೇಶಕೆ
ಪಟ್ಟಗಟ್ಟುವರು ನೊಸಲೊಡೆ
ಕೊಟ್ಟು ಕಳೆವರಾಗ x x ಹಸುಬೆಯ
ದೃಷ್ಟಿಗೆ ಹೆಸರುಳ್ಳ ಬಣಜೂ           ೩೨

ನೀನು ಕೊಂಡಾಡುವೆ ಹೀನ ಕುಲದವ
ರೇನಾಹರು ಹೇಳು ನಿನಗೆ
ನಾನು ಆತನು ಶಿವದೇವನ ಮಕ್ಕಳು
ಮಾನಿನಿ ಮಹದೇವಿ ಜನನೀ೩೩

ಆತ ನಮ್ಮಣ್ಣನು ಗುಂಡಯ್ಯ ದೇವನು
ಆತ ಬೊಮ್ಮಣ್ಣ ನಮ್ಮ ಭಾವ
ಆತನ ತಂಗಿ ನಮ್ಮತ್ತಿಗೆ ಗುರುವೆ
ಭೂತಳದೊಳು ಹುಸಿಯಲ್ಲಾ          ೩೪

ನಮಗೇತಕೆ ಗುಂಡಬೊಮ್ಮಣ್ಣನ ಚಿಂತೆಯು
ನಮಗೆ ಕಾರಣವಿಲ್ಲ ಮಗಳೇ
ನಮಗೇತಕೆ ವಾದ ಪರರ ಮಾತಿನ ಮೇಲೆ
ಇವನೇನುದೊಡ್ಡಿತು ಹೇಳಾ            ೩೫

ಛಪ್ಪನ್ನ ದೇಶವ ಹೊಕ್ಕು ಬಲ್ಲೆವು ನಾವು
ಯಿಪ್ಪವರಲ್ಲ ಪಳ್ಳಿಯಲಿ
ವೊಪ್ಪಚ್ಚಿ ಹೆಸರಿಲ್ಲ ನಾಡೊಳಗಿವದಿರ
ಯಿಪ್ಪರಿ ಕಡೆ ಹೆಸರಾಗಿ       ೩೬

ಜರಿಯ ಬೇಡವಯ್ಯ ಗುರುವೆ ಚಿತ್ತೈಸಯ್ಯ
ಬರಿಯಾಡಂಬರವಲ್ಲ ಗುರುವೆ
ಅರಿದು ಮುರಿದು ನೀನೊಮ್ಮೆ ನೋಡಿದಡಾತ
ಮೆರೆವನು ಜಗದೊಳು ಗುರುವೆ         ೩೭

ಗುರುಲಿಂಗ ಜಂಗಮಕಾರು ಮಾತುತಲಿ ಹಲ
ವರ ಗೃಹ ವಾರಣಾಸಿ
ಧರೆಯ ಮೇಲೆ ತೀರ್ಥಸ್ನಾನಾ ಗೃಹಗಳು
ಹಿರಿದು ನೋಯಲು ಬೇಡ ನೀವೂ     ೩೮

ನೋಡದೆ ಸುಮ್ಮನೆ ಹೋಹವರಾವಲ್ಲ
ಆಡಿದೆವಲ್ಲದೆ ಮಾತಾ
ನೋಡದೆ ಹೋದಾಗ ನರಕ ತಪ್ಪದುಯೆಂದು
ಕೂಡೆ ಸಾರುತಲಿವೆ ಶ್ರುತಿಯೂ         ೩೯

ತಪ್ಪವ ಮಾಡಿ ತೀರ್ಥ ತಿರುಗಿದ ಹಿರಿಯರು
ಉಪದೇಶ ಕರ್ತುವೆ ನೀವು
ಶ್ವಪಚರನೆಲ್ಲರ ಶುದ್ಧವ ಮಾಡುವ
ಕೃಪೆಯಿಂದ ನೋಡಿರೆ ಗುರುವೆ         ೪೦

ಹಿಂದೆ ಕಲ್ಯಾಣದಿ ಮೆರೆದ ಶರಣರ
ಚಂದವಾಗಿಯೆ ಹೇಳಿತಿಹಿರಿ
ತಂದು ಹೇಳುವಿರಿಲ್ಲಿ ಚೋಳದೇಶದೊಳಗಣ
ಅಂದು ಮೆರೆದ ಶರಣರನೂ  ೪೧

ನೋಡಬೇಕು ನಮ್ಮ ಶಿಶುಗಳ ಮಠವನು
ನೋಡಿದರವರು ಪಾವನರೂ
ನೋಡಿ ತೆಲುಗದೇಶ ಗುಂಡಬೊಮ್ಮಣ್ಣನ
ಬೇಡಿಕೊಂಬೆನು ನಿಮ್ಮ ಗುರುವೆ        ೪೨

ತಾಳು ಬಾಳುಯೆಂದು ಯಿಳಿಲಗಾಬರು
ಕೇಳ ಉಟ್ಟ ಜಡೆಯಿಲ್ಲ ನಮಗೆ
ಆಳಾದ ಒಡಲನು ಹೊರುವುದರಿಂದಲು
ಕೇಳುವುದು ಉಪವಾಸ ಲೇಸೂ         ೪೩

ಒಡೆಯರೆ ಈ ಪರಿ ನುಡಿಯಬಹುದೆ ಕೇಳಿ
ಜಡೆ ಬೇರೆ ಜಂಗಮ ಬೇರೆ
ಮೃಡನ ದರುಶನವೆಲ್ಲವೊಂದಾಗಿ ಕಾಂಬರು
ದೃಢಭಕ್ತಿ ಗುಂಡಬೊಮ್ಮಗಳೂ        ೪೪

ಆಡಿದಂತೆ ಭಕ್ತಿ ಮಾಡದೇ ಹೋದಾಗ
ಕೂಡೆ ಮಾದರಿಸಯ್ಯ ಗುರುವೆ
ಖೋಡಿ ಹೊದ್ದಿದರಲ್ಲಿ ಮೂಗನೆ ಕೊಯ್ವರು
ನೋಡಯ್ಯ ನಿನ್ನ ಭಕ್ತರನೂ            ೪೫

ಒಡನೆ ಬಂದ ಮಡದಿಯರೆಲ್ಲ ಹೋದರು
ಕೊಡನ ಕೊಂಡು ಮನೆಗಳಿಗೆ
ನುಡಿವಳು ನಿಮ್ಮತ್ತೆ ಗೊಡವೆ ಗುಮ್ಮವ ಗಂಡ
ತಡವಾಯಿತು ಹೋಗು ಮಗಳೇ       ೪೬

ಮೃಡನ ಲಾಂಛನ ಕಂಡು ಮೋಹವಡದಿರ್ದಾಗ
ಬಡವರು ಬೈವರು ಗುರುವೆ
ಒಡೆಯರೆ ನಿರೂಪವ ಕೊಡಿದಿರೆಯೆನುತಲಿ
ಮಡದಿ ನುಡಿಯೆ ಕರಮುಗಿದೂ        ೪೭

ಕೇಳುವೆ ಗವುಚೆರು ದೂರಗಳಾದವು
ಹೇಳು ನಿಮ್ಮಯ ಮಠಗಳನೂ
ಹೊಳೆವ ಬಿಸಿಲು ತಾಗಿ ಬೆಂದು ಮಾಡಿತೆಮ್ಮ
ಬಳಲಿ ಬಂದೆವೆಲೆ ಮಗಳೇ                ೪೮

ಓರುಗಲ್ಲ ವೀರಭದ್ರ ದೇವರ ಗುಡಿ
ಸಾರಿಪ್ಪ ಅರಳಿಯ ಮರನೂ
ಸುರಹೊನ್ನೆ ಸಂಪಿಗೆ ಸುತ್ತ ತೆಂಗಿನ ತೋವು
ಕರದಲ್ಲಿ ವ್ಯಸನ ತೊಳು     ೪೯

ವಿಸ್ತಾರದಲಿ ನೂರು ಹೊನ್ನ ಕಳಸವಿಟ್ಟು
ಸುತ್ತ ಕಳಸ ದೇಗುಲಗೆ
ಮತ್ತಲ್ಲಿ ಕಂಚಿನ ದೀಪ ಮಾತಿಯ ಕಂಬ
ದೊತ್ತಲಿ ಹೊಳೆ ರಾಜಗುಟ್ಟಿಯೂ    ೫೦

ಸೋಮದೇವರ ಬಲದ ಭಾಗದ ಕೇರಿ
ಯಾ ಮನೆಯೊತ್ತು ಅರಳಿ ಮರದಾ
ಕಾಮಿಸೆಟ್ಟಿಯ ಮನೆ ಹಿರಿಯಂಗಡಿಯೊಳು
ಕಾಮ ವೈರಿಯ ಮಗನ ಮನೆಯೂ    ೫೧

ಇನ್ನೊಂದು ಕುರುಹುಂಟು ಚೆನ್ನಾಗಿ ಚಿತ್ತೈಸಿ
ಉನ್ನತದುಪ್ಪರ ಗುಡಿಯೂ
ಹೊನ್ನಕಳಸವಿಟ್ಟು ಮಠವು ನಿರಾಸಿಯ
ಸನ್ನರ್ಧ ಗಣ ತಿಂಥಿಣಿಯೂ೫೨

ಪಟ್ಟಣದೊಳಗಣ ಬಡವು ಬಗ್ಗಿಗೆಯಲ್ಲ
ಕೊಟ್ಟು ನಡೆಸುತ್ತಿಪ್ಪ ದನವಾ
ಹುಟ್ಟಿದ ಶಿಶಿ x x x x x x
x x x x x x x x x x x x x x x    ೫೩

ಪಟ್ಟಣದೊಳಗಣ ಬಾಗಿಲು ಗಾವಲ
ಕಟ್ಟಳೆಗಳ ಹೇಳು ಮಗಳೇ
ಬೆಟ್ಟಿಯ ಕಾ x x x x x x x x x
x x x x x x ಯ್ಯ ಗುರುವೇ           ೫೪

ಹೆಸರ ಕೇಳಿದೆವೈಸ ಕಾದು ಕೊಂಡಿಪ್ಪರ
ಘಸಣೆ ಬೇಡ ಪಟ್ಟಣದಾ
ಹೊಸಬ x x x x x x x x
x x x x x x x x x ಕಾವಲಾದರೂ   ೫೫

ಅರಿರಾಯದೇವ ಪರಾಕು ಪರಶುದೇವ
ಕೇರಿಗಟ್ಟಿನ ಮಂಗಿದೇವಾ
ಭಾರಿಯ ಹೊಟ್ಟೆಯ x x x x x x
x x x x x x x x x x x x x          ೫೬

ಬೊಂಬಾಳ ದೀವಿಗೆ ಚೆಂಬಕವರೆಗಳು
ಕೊಂಬು ಕಹಳೆ ಗಡಿ ಬಿಡಿಯೂ
ತಂಬಟಿ ವೀರದಂಡ ಡೊಳ್ಳು ನಾಗ ಸ್ವರಗಳ
ಸಂಭ್ರಮ ಘನ ಅರಿಗುರುವೆ[1]            ೫೭

ಪಟ್ಟಣಗಾವ ಚಿತ್ತೈಸಿ ಗುರುವೆ
ಅಟ್ಟಣಿ ಆಳುವೇರಿಗಳಾ
ಬೆಟ್ಟ ಕಳಲು ತಿಪ್ಪ ಹನ್ನೆರಡು ಸಾವಿರ
ದಿಟ್ಟಗರಿಯ ಕಾಲಂಗಳೂ   ೫೮

ನಡೆದು ಬಪ್ಪ ಬಲವಂತದ ಕೋಟಿಗೆ
ಪೊಡೆವ ನಿಸ್ಸಾಳದಬ್ಬರವೂ
ಮೃಡಬಂದರೊಮ್ಮೆ ಹೊಡೆದು ಕೆಡಹಲುಬಲ್ಲ
ಕಡುಗಲಿ ಕಾವಲು ಗುರುವೆ  ೫೯

ಅಡಿಯಿಡಲೀಸರು ಹಿಡಿವರು ಹೊಸಬರ
ಎಡೆವಂತ ಕೋಟಿಯ ಭಟರೂ
ಹೊಡೆದು ತಲೆಯ ತಂದು ಕೊಡುವರು ಶೂಲಕೆ
ಎಡೆಯೂಡ ಬಾರದು ಗುರುವೆ          ೬೦

ಇರುಳ ವೈಯೆರಡು ಜಾವದ ಮೇಲೆಯು
ಬರಲುಬಹುದೆ ಹೇಳು ಮಗಳೆ
ಆರು ಸುಳಿಯಲಮ್ಮರು ಓರುಗಲ್ಲೊಳು
ರಾಯನಾಗೈಯಶಯ ಬಲುಹಯ್ಯ   ೬೧

ಈರೈದು ಸಾವಿರ ಕಾಲಾಳು
ಇರುಳಿನ ಕಾವಲ ಕಾವರು ಗುರುವೆ
ಜೋರಖಂಡಿಯೊಳಿಪ್ಪ ಬೇಡರ ಕಾವಲು
ಆರು ಸಾವಿರ ಬಿಲ್ಲವರೂ ೬೨

ಮನ್ನೆಯ ತೆಲುಗರು ವೊಂಬತ್ತು ಸಾವಿರ
ಮುನ್ನ ಬಿರುದಿನ ಭಟರೂ
ಭಿನ್ನವಿಲ್ಲದೆ ಕಾವ ತಳವಾರರು ಜಿಯ್ಯಾ
ಸನ್ನಹರ್ದರಾಗಿ ಕಾದಿಹರೂ೬೩

ರಾಯನ ಅರಮನೆ ಕೋಟಿಯ ಕಾವಲ
ಕಾಯಲೊಲ್ಲೆವು ನಾವೆಂದೂ
ಹೋಯಿತು ಅತಿಹೊತ್ತು ನಿನಗೆ ಕೇಳಲೆ ಮಗಳೆ
ಹೇಳಬಲ್ಲರೆ ಭೇದನೂ      ೬೪

ಎಡವಿಡವಿಲ್ಲದೆ ತಿರುಗುವ ಪಹರಿಗೆ
ಕಡೆಯಿಲ್ಲ ಕೇಳಿ ಘಂಟಿಗಳೂ
ಒಡನೆಯಕ್ಕಟ್ಟಿಗರು ಉಕ್ಕಡ ಗಾಳೆಯು
ಎಡೆಗೆಡೆಗೆಲ್ಲ ಬಿಲ್ಲವರೂ  ೬೫

ಕಾಸೆ ಉಡಿಗೆ ಕಟ್ಟಿದ ವಂಕುಡಿಗಳು
ಪಾಸೆ ಕಠಾರಿ ಯೀಟಿಗಳೂ
ಮೀಸೆಯ ಮುರಿಯುತ ಬಾಗಿಲರಿಪ್ಪರು
ಬೇಸರಗೊಡದ ನಾಯಕರೂ೬೬

ರಾಯನ ಮುದ್ರೆಯ ಉಂಗುರವಿಲ್ಲದೆ
ಜಿಯ್ಯಾ ಹೊಸಬರು ಹೋಗಲಿಲ್ಲಾ
ಸಯನ ಬಲುಹೆಯ್ಯ ಸದರಗಳಿಲ್ಲವು
ರಾಯನಾಗ್ಯೆಯಶಯ ಬಲುಹೂ       ೬೭

ನಡುವಣ ಕೋಟಿಯ ಕಡುಗಲಿ ಗಾವಲ
ಮೃಡನು ಮೆಲ್ಲನೆ ಹೇಳೆಂದಾ
ಒಡೆಯರೆ ಕಾವಲ ಗೊಡವೆಗಳೇತಕೆ
ತೊಡಕುವರಿಲ್ಲ ನಿಮ್ಮವನೂ          ೬೮

ನಮ್ಮನು ಐವರಾರು ನಾವಾರಿಗೆ ಜೊತೆ
ನಮ್ಮ ಕೈಯಲಿ ಕೊಂಬುದೇನೂ
ನಮಗುಳ್ಳೆದುದೆ ಶಾಂತರವಲ್ಲದೆ
ಸುಮ್ಮನೆ ಕೇಳಿದವಸ್ಸೆ[2]      ೬೯

x x x x x x x x x x ತಲಿರ್ದರೆ
ವೃಡನ ಭಕ್ತರು ನಗದಿಹರೆ
ಅಡಿಯಿಡರಿಸರು ಅಪ್ಪಣಿಯಿಲ್ಲದೆ
ಒಡೆಯ ಕೇಳಿ ಬಿನ್ನಪವಾ     ೭೦

ಊರ ಹೊಕ್ಕು ನಾವು ಭಿಕ್ಷೆಯ ಕೊಂಬರೆ
ರಾಯನಪ್ಪಣೆ ನಮಗೇಕೆ
ಆರೆಂದೆನ್ನದೆ ಹೊಸಬರು ಬಂದರೆ
ಶೋಧಿಸಿದಲ್ಲದೆ ಬಿಡರೂ   ೭೧

ಅಡವಿಯ ಮೃಗಕಾರು ಅಪ್ಪಣೆಗೊಟ್ಟರು
ಅಡಿವಿಯೊಳಗೆಯಿರುತಿರಲು
ಒಡೆಯರೆ ಬಿನ್ನಹ ಮಾಡುವರಂ ಜವೆ
ನುಡಿವರಿಲ್ಲ ಬಿಜ ಮಾಡಿ    ೭೨

ವಾರಕ ಜೀವಿತಗಳ ಕೊಂಬವರಲ್ಲ
ಊರೊಳು ತೆರು ವೊಕ್ಕಲಲ್ಲಾ
ಓರುಗಲ್ಲನೊಮ್ಮೆ ನೋಡಿಯೆ ಕಾವೆವು
ಮಾರಿ ಬಂದರನನುಭವಿಸಿ    ೭೩

ಮಕ್ಕಳು ನಮಗುಂಟು ಪಟ್ಟಣದೊಳಗೆಲ್ಲ
ಮಿಕ್ಕವರೆಮ್ಮ ಜಂಗಮವೂ
ಭಕ್ತರಾದರೆ ನಮ್ಮ ಹೆದರಿಸಲೀ ಪರಿ
ಹೊತ್ತು ಹೋಯಿತು ಹೋಗು ಮಗಳೇ          ೭೪

ಬೀಳುಕೊಂಡನು ಗುಂಡಬೊಮ್ಮನ ತಂಗಿಯ
ಭಾಳಾಕ್ಷನತಿ ವೇಗದಿಂದಾ
ಕೇಳಿದವೆಲ್ಲವಿವರವ ಲೇಸಾಗಿ
ಯೇಳು ಹರಿಯೆ ಹೋಹವಿನ್ನೂ       ೭೫

ಓರುಗಲೊಳಗಣ ಸುದ್ಧಿಯ ನೆಲ್ಲವ
ಆರೈದು ಹರ ಕೇಳ್ದ ಬಳಿಗೆ
ಧಾರುಣಿಯೊಳಗಣ ಜನ ಕೇಳಿ ಸಂಧಿಗೆ
ಸಾರೇಪ್ಪತ್ತಾಱು ಪದನೂ   ೭೬

ಅಂತು ಸಂಧಿ ೬ಕ್ಕಂ ಪದ ೩೪೮ಕ್ಕಂ
ಮಂಗಳ ಮಹಾಶ್ರೀಶ್ರೀಶ್ರೀ

 

[1] ೫೭ನೇ ಪದ್ಯದಿಂದ ೬೩ನೇ ಪದ್ಯಗಳ ಗರಿಗಳು ಮುರಿದಿವೆ.

[2] ೭೭ನೇ ಪದ್ಯದಿಂದ ೯೦ರವರೆಗಿನ ಪದ್ಯಗಳ ಗರಿಗಳು ಮುರಿದಿವೆ.