ಸಂಧಿ-೮

ಸುರರ ಮುಕುಟದ ಮೇಲಿಡುವ ಶ್ರೀಚರಣವ
ವರತ ಹೊಸದಾನ ಮೂರ್ತಿ
ಶರಣರ ಭುವನಗಳ ಸಂಹಾರ ಮಾಡಲು
ಹರ ಬಂದ ಓರಗಲ್ಲ ಹೊಕ್ಕಾ          ೧

ನಾಗಭೂಷಣ ಗಜಚರ್ಮಾಂಭರಧರ
ಶ್ರೀಗೌರಿಗಂಗೆ ವಲ್ಲಭನೂ
ಯೋಗಿ ಜನಕೆ ಸುಧೆಯಾಬ್ದಿಯು ಹರ ಬಂದು
ಬೇಗದಿ ವೋರಗಲ್ಲ ಹೊಕ್ಕಾ          ೨

ನೋಡುವ ನರರಿಗೆ ನರರೂಪಿಲಿ ಹರ
ಮಾಡಬಂದನು ಕನ್ನಗಳವಾ
ಜಾಡಿಸಿಕೊಂಡನು ಬೆಳುವೆ ಬೂದಿಯ
ಪೌಳಿಗಪ್ಪಡ ಕನ್ನಗತ್ತಿ       ೩

ಹೊಲಬು ಗಟ್ಟಿಗೆ ಕೈಯ್ಯ ನೆಲಗಳ ನೋಡುವರೆ
ಮಳಲ ಚೆಲ್ಲುವ ಕಟ್ಟಿನಿರುವೆ
ಸಲೆಗಳವಾಗಿಯೆ ಹರಿಯಳವಡಿಸಿದ
ನಿಲಬೇಡ ಹರ ನಡೆಯೆಂದಾ೪

ಕಂಡರೆ ನೋಡಿಸಿದಲೆ ಬಿಡರಯ್ಯಾ
ಗಂಡು ಗರಿಯ ಬಾಗಿಲವರೂ
ದಿಂಡೆಯ ತನದಲಿ ಜುಣಿಗಿ ಹೋಗಲು ಬೇಕು
ಹಿಂಡು ನೆರವಿಗಿಗೂಡಿ ಹರನೆ            ೫

ಠಕ್ಕಿಂದ ಹೊಕ್ಕರು ಬಾಗಲವಾಡವ
ಮುಕ್ಕಣ್ಣ ಮುರವೈರಿಗಳೂ
ಒಕ್ಕಿಲಿಕ್ಕಿ ಜೂಜು ನೆತ್ತಗಳಾಟದ
ಠಕ್ಕರ ನೋಡುತ ನಡದಾ    ೬

ಜರುಗುತ್ತ ಜೂಜು ಪಗಡೆಯು ಚದುರಂಗ
ಓರಣದಾ ಹಿಡಿಗವಡೆ
ಕಾರಣದಾ ನೆತ್ತವರಸಿನ ಮಕ್ಕಳ
ಮುರಾರಿ ನೋಡುತ ನಡದಾ            ೭

ಹರಿಗೆಯ ತುಳುವರ ಪರಿವಾರದೊಳಗೆಲ್ಲ
ಹರಿಹರ ಪರದೇಸಿಯಾಗಿ
ಭರವಸೆದಿಂದ ಸಿಂಹಾರದ ಬಾಗಿಲ
ನುರವಣಿಸುತ ವೊಳಹೊಕ್ಕಾ            ೮

ಭಾವನ್ನ ವೀರರ ಭಂಗ ಬಡಿಸುತಿಪ್ಪ
ಸಾಹಸದಾ ತಳವಾರಾ
ದೇವರು ಬಾಹಾಗ ಕಳುರಹಿವೆ ತಂದು
ಕಾವಲು ಕೈಕೊಳ್ಳ ಸಹಿತಾ  ೯

ಎಡದಲಿ ಬಲದಲಿಯೆರಿಸಿದಾ ಬಿಲ್ಲು
ಹಿಡಿದಯಿಷ್ಟಿಯು ಬೆನ್ನ ಕಡೆಯಾ
ನಡುವೆ ಕಳ್ಳರ ಕಾವಲಾಗಿಯೆ ತಿರುತಿರೆ
ಮೃಡ ಕಂಡನು ಭಯಗೊಂಡೂ        ೧೦

ಇಂದು ನಮಗೆ ಹರಿ ಹುಟ್ಟಿದ ದಿನಗಳು
ಬಂದಿತೀ ಪಟ್ಟಣದೊಳಗೆ
ಬಂದಿತು ಕಳವು ಕೊಂದಾರು ತೆಲುಗರೆಮ್ಮಾ
ಇಂದೆ ಹೋಗುವ ಕೈಲಾಸಕೆ೧೧

ಮರಳಿ ಹೋಹರೆ ಹರ ಬರಲೇನು ಕಾರಣ
ದುರುಳ ತನದ ಮಾತು ಬೇಡಾ
ನರರು ಬಂದು ಹರವಿಡಿದರಾದರೆ
ಉರುಹಿ ಸುಡುವೆನೊರುಗಲ್ಲಾ        ೧೨

ವೇದ ಪುರಾಣವು ಅರಸಿ ಕಾಣವು ಹರ
ಮೇದಿನಿಯೊಳು ಬಲ್ಲವರಾರೂ
ಸಾಧಿಸಿ ಕಾಣರು ಹರಿಯರು ನಿಮಮನು
ಆದಿಯ ನಾದಿಯ ಗುರುವೇ೧೩

ಅರಸನ ಮನೆಯಲಿ ನಾವು ಕನ್ನವಿಕ್ಕಿಯೆ ಕದ್ದು
ವಿರಸದಲೋಡಿಯೆ ಹೋಗಿ
ದರುಶನ ವೇಷದಿ ಮರೆಹೊಕ್ಕು ಶೂಲಕೆ
ತರಿಸುವ ಗುಂಡಬೊಮ್ಮಣ್ಣನಾ       ೧೪

ಸಿಕ್ಕಿಸಿ ಕಾದಿಯೆ ಶೂಲಕೆಯಿಕ್ಕಿಸಿ
ಠಕ್ಕತನದಲ್ಲೊಡಿ ಹೋಗಿ
ಹೊಕ್ಕುಕೊಂಬ ನಮ್ಮ ಕೈಲಾಸ ಹರ
ಲೆಕ್ಕಿಸೆವಾವ ರಾಯನರನೂ  ೧೫

ಗುಂಡಬೊಮ್ಮಣ್ಣನ ಶೂಲಕೆ ತೆಗೆಸಿ ಭೂ
ಮಂಡಲದೊಳು ಕಳ್ಳರೆನಿಸಿ
ಕೊಂಡು ಹೋಹ ಕೈಲಾಸಕೆ ಅವರನು
ಕಂಡಾಗ ಭಕ್ತಿಯ ದೃಢವಾ  ೧೬

ಶಶಿಧರ ನೋಡಯ್ಯ ಪಟ್ಟಣ ವಿಸ್ತೀರ್ಣಾ
ದೆಸೆಗೆಂಟು ಗಾವುದಗಲಾ
ವಸುಧೆಯೊಳೊರುಗಲ್ಲು ಅಮರಾವತಿಯೆಂದು
ಪಶುಪತಿ ಹೊಗಳುತ ನಡದಾ           ೧೭

ಸೋಮನವೀದಿಯ ಕೇರಿ ಸೂರ್ಯವೀದಿಯ ಕೇರಿ
ಹೋಮದ ಕಳಸದುಪ್ಪರಿಗೆ
ಕಾಮಹರನು ಕಂಡು ಕೊಂಡಾಡುತಿರ್ದನು
ಭೂಮಿಗಿಂದ್ರನ ಹೊಳಲೆನುತಾ         ೧೮

ಬಡವರೆಮ್ಮ ನಾಮ ಗಡಣಿಗಳಿಲ್ಲಯ್ಯ
ಕಡು ಸಿರಿವಂತರು ಎಲ್ಲಾ
ಪೊಡವಿಯೊಳೊರಗಲ್ಲು ಅಳತಾಪುರಿಯು
ಮೃಡನೆ ಚಿತ್ತೈಸೆಂದ ಹರಿಯೂ         ೧೯

ಪಟ್ಟಣದೊಳಗೊಬ್ಬ ಪುಟ್ಟಿಯ ಭೂಮಿತಿ
ಉಟ್ಟ ಸೀರೆಯು ಪಟ್ಟಾವಳಿಯೂ
ಇಟ್ಟ ಬೊಟ್ಟು ಸಣ್ಣ ಗಾಡಿಗೆ ಬೈತಲೆ
ಬಟ್ಟಿಹ ಕುಚಗಳ ವನಿತೇ    ೨೦

ಕಂಕಣ ಸೂಡಗವು ಪಾಯವಟ್ಟವು
ಕೊಂಕುಗುರುಳು ಕೊನೆ ಮುಡಿಯೂ
ಬಿಂಕದಿಂದಲಿ ಹಣ್ಣ ಮಾರುದವನಿಗೇಳಿ
ಶಂಕರ ಮರುಳಾದನಲ್ಲಿ     ೨೧

ದೂರದಿಂದಲಿ ಹರಿಗೇಳುತ ಹರನೆಂದ
ನಾರಿಯಾದರೆ ಕಡು ಚಲುವೆ
ಭೋರನೆ ಹರಿಹೋಗಿ ಕೇಳವಳೊತ್ತೆಯ
ಸೇರಿತವಳ ಸಣ್ಣದನಿಯೂ  ೨೨

ಹರನು ಮರೆದ ತನ್ನಯೇರುವ ನಂದಿಯ
ಹಿರಿಯ ಹೆಂಡತಿಯು ಪಾರ್ವತಿಯಾ
ಬರಲೊಲ್ಲೆ ಕಳವಿಗೆ ಕೈಲಾಸಕೆ ಬಾರೆ
ನರಲೋಕದಿವಳನ್ನು ಬಿಟ್ಟೂ          ೨೩

ನೆಟ್ಟನೇ ಬಂದೀಗ ಪಟ್ಟಣ ಹೊಕ್ಕೆವು
ಕೆಟ್ಟಿತು ಕಳವಿನ ಕೆಲಸಾ
ಘುಟ್ಟಿಯ ಕಾರಿಯ ಕೆಲಸಾ
ಘುಟ್ಟಿಯ ಕಾರಿಯ ಕೇಳ ಬೇಕೆನುತಲು
ದಟ್ಟಡಿಯಿಟ್ಟನು ಹರಿಯೂ           ೨೪

ಕಣ್ಣ ಬೇನೆಯು ನಮ್ಮಣ್ಣಗೆ ಭೂಮಿತಿ
ಹಣ್ಣಿನ ಬೆಲೆಯ ಹೇಳವ್ವಾ
ಹೆಣ್ಣಿನ ಸವಿಯನು ಅರಿಯೆ ನೀ ಹಸುಳೆಯು
ಚಿಣ್ಣ ನಿಮ್ಮಣ್ಣನ ಕಳುಹೂ            ೨೫

ಕೇಳಿದ ಜಾಣ್ನುಡಿಗಳ ಮಾತ ಹರಿ ಬಂದು
ಹೇಳಿದ ಹುಸಿಮಾತ ಹರಗೆ
ಹೇಳುವೆನೇನನು ಅವಳ ಆ ಮೈಗಂಪು
ಹಾಳಾದ ದುರ್ಗಂಧ ನಾತಾ  ೨೬

ನೋಡುತ ನಡದನು ಬೊಬ್ಬರಗಲ್ಲಿಯ
ಜಿನ ಜಾನೆಗ ಕೇರಿಗಳು
ಜಾಡಿಸಿ ಕಟ್ಟಿರ್ದ ತುರುಕ ಬೇಡರ ಕಂ
ನ್ನೋಜ ಲಾಳ ಗುಜ್ಜರರಾ  ೨೭

ಹರನು ಬಂದು ಹೊಕ್ಕ ಕರುಣಿಕ ಗಲ್ಲಿಯ
ಹಿರಿಯ ಕಾರಣ ಕರ್ತೃವಾದ
ಕರುಣಿಕೆ ನಾಲ್ವರು ಕರ್ತರು ಹಸ
ಕರವರಿಗೆ ಮುನ್ನೂರು ಮಂದಿ          ೨೮

ರಾಯಸ ಭಂಡಾರ ಜಿನಸಾಲೆಯಸನ
ಭೂವರ ದಳವಾಯಿಗಳಾ
ಆಯತದವರ ಸರಮಣಿ ಹಗಾರರಭರ
ಕಾಯಕದವರ ಕೇರಿಗಳಾ      ೨೯

ಚಿನ್ನದ ರತ್ನದ ಭಂಡಾರ ಕರಣಿಕ
ರುನ್ನತ ದಿನವಹಿಯವರಾ
ಚೆನ್ನಾಗಿ ರಾಯನ ಬರಡಿಸಿ ತಿನುತಿಪ್ಪ
ರನ್ನೆತರ ಕೇರಿಗಳೂ            ೩೦

ಕೊಟ್ಟಿಗೆ ಕಣಜಗಳ ಠವಣಿಯ ಶಾಲೆ
ಹಟ್ಟಿದೆಱೆಯ ಮಣಿಹಗಳಾ
ಕಟ್ಟಿಗೆಕಾರರು ಕುಡಿನೀರ ಗಿಂಡಿಯ
ಕಟ್ಟಳೆಯವರ ಕೇರಿಗಳಾ     ೩೧

ಹಡದೂಳಿಗ ಗಿಂಡಿ ಪಡಿಗ ಬಿಸಣಿಗೆಯ
ಹಿಡಿವವರ ಕಾಳಜಿ
ಎಡಬಲದೊಳಿಗ ಗೇರಿಯ ನೋಡುತ
ಮೃಡ ನಡದನು ಗಡಣದಲಿ೩೨

ದೇಹರದವರು ಪುರೋಹಿತ ಪಾಠಕ
ಬಾಹತ ವಿನಿಯೋಗದವರೂ
ಚಹಡಿ x ಪುಣದಿಂದ ಲೊಕ್ಕಲ ಕೆಡಿಸುವ
ಚಹಡಿತಗಾರರ ಕೇರಿಗಳೂ   ೩೩

ನಾಲ್ಕು ವೇದ ಹರಿನಾರು ಶಾಸ್ತ್ರಗಳ
ಒಂದು ಪುರಾಣದ ದನಿಯೂ
ಶೂಲಿ ಸಂತೋಷದಿ ಕೇಳುತ ಬ್ರಾಹ್ಮಣ
ಕೇರಿಯ ನೋಡುತ ನಡದಾ  ೩೪

ಗಂಧಿಗರು ಗಂಧಳಿಗರ ಕೇರಿಗಳ
ಳೊಂದೆಸಕದಳಿಯ ಕೇರಿ
ಸಂಧಿಸಿ ಹರಹೊಕ್ಕು ಸಾಧುವಾಣಿಯನು
ಗೊಂದಣ ಪರಿಮಳದೊಳಗೇ            ೩೫

ದವಸವಡಕೆ ಎಲೆ ಗಂಧಿಗರಂಗಡಿ
ಅವಧಿಯಿಲ್ಲದ ಮಾರಾಟಾ
ತವಕದಿ ಚಿಪ್ಪಗರಂಗಡಿ ನೋಡುತ
ಶಿವನು ಸಂತೋಷದಿ ನಡಿದಾ            ೩೬

ಮುತ್ತು ಮಾಣಿಕ ನವರತ್ನಗಳಂಗಡಿ
ಈ ಥರದಲಿ ಕಂಚುಗಾರಾ
ಉತ್ತಮ ಎಳ್ಳು ಹರಳು ಕುಸುಬೆ ಎಣ್ಣಿಯ
ಮತ್ತವ ನೋಡುತ ನಡದಾ  ೩೭

ಕವಡೆ ಕಬ್ಬಿಣ ಜೂಜಾಟವ ನೋಡುತ
ಒಡೆವ ತೆಂಗಿನಕಾಯ ಜೂಜು
ಶಿವನು ನೋಡುತ ಬಂದು ಹೊಕ್ಕನು ಅತಿವೇಗ
ಜವಳಿಗಟ್ಟಿಯ ನಾಯಿದರಾ೩೮

ನಟನೆ ಮಾಡುತ ಸೂಳೆ ಮಗನನೆತ್ತಿಯಕೊಂಡು
ಚಟಿತನೆ ಬಂದಳು ನಗುತ
ವಿಟರು ನಾಯಿದಗಟ್ಟಿ ಮುರಿವಂತೆ ನಗುತಿಪ್ಪ
ನಟರಿಗೆ ತಲೆಗುತ್ತಿದ್ದಳೂ    ೩೯

ಹರ ವಶವಾಯಿತು ಸೂಳೆಗೆಂದೆನುತಲು
ವಿರಹದ ಭರದಿನಾಯಿದನೂ
ಕೆರೆದು ಬಿಟ್ಟನವಳ ಮಂಡೆಯ ಕೂದಲ
ನೆರೆದಿರ್ದ ವಿಟರುಗೊಳ್ಳೆನಲೂ         ೪೦

ನೋಡುವ ವಿಟರನು ಬೇಡೆನ್ನಬಾರದು
ಮಾಡಿದನುಪಕಾರಿ ಕೆಲ್ಸ
ಕೂಡಿದ್ದ ಮಗನನು ಸೂಳೆಕೆನ್ನೆಯ ಕುಟ್ಟೆ
ಕೂಡಿವಲಿಯೆ ನಗೆಗಡಲೂ   ೪೧

ಮೊಸರನು ಮಾರುತ ಬಂದಳು ಗೊಲ್ಲತಿ
ಶಶಿಮುಖಿ ಗಂಡನುಳ್ಳವಳೂ
ಕುಸುರಿದರಿದ ಹೊಸ ಮೊಸರಿನ ಬೆಲೆಯನು
ಬೆಸಗೊಂಡ ಬೆಡಗಿನಲೊಬ್ಬ            ೪೨

ಕೊಡುವೆನು ಮೊಸರನು ನಾ ಮಾರಿ ಹೊನ್ನಿಗೆ
ತಡವು ಮಾಡದೆ ಬಿಡುಗಂಟಾ
ನುಡಿಯಲು ಜಾಣಿಯ ನೋಡಲು ನಿಲ್ಲೆಂದು
ಮೃಡ ಬೆರಗಾಗಿಯೆ ನುಡಿದಾ           ೪೩

ನೋಡು ಹರಿಯೆ ಇವಳಾಡಿದ ಜಾಣ್ನುಡಿ
ಕೂಡುವೆ ನಾನಿವಳೊಡನೆ
ನೋಡಿದಡತಿ ಹಸ ಜಿಡ್ಡಿನ ನಾತವು
ಕೂಡಲು ಹೇಸಿಕೆ ಹರನೇ     ೪೪

ಪಟ್ಟದಾನೆಯು ಮದಸೊಕ್ಕಿಯೆ ಕೊಂದಿತು
ಹತ್ತೆಂಟು ಮಂದಿ ಮಾವುತರಾ
ಕಟ್ಟಿ ಶಾಲೆಯೊಳಬ್ಬರವಾಗಲು
ಕೆಟ್ಟೆನೆಂದನು ಹರ ಕೇಳೀ     ೪೫

ಹಿಂದೆ ಮುಂದೆ ಎಡಬಲದ ಭಾಗದಲ್ಲಿ
ಬಂದವು ಹಾರೆ ಗಟ್ಟಿಗೆಯೂ
ಮುಂದಣಂಗಡಿ ಸೂಳೆಗೇರಿಯ ಮುರಿಯಲು
ನಿಂದಿರ್ದು ನೋಡಿದ ಹರನೂ           ೪೬

ಅಟ್ಟಿ ಬಂದು ನಮ್ಮ ಕೊಂದಿತಾದರೆ ಆನೆ
ಮುಟ್ಟರು ಭವಿಯೆಂದು ಹರಿಯೆ
ಹೊಟ್ಟಿಗೆ ಹೊಡೆಯದೆ ಸತ್ತ ಕಳ್ಳರುಯೆಂದು
ಕಟ್ಟಿ ಹಾಕುವರೇಳೆಹೂಟೆ   ೪೭

ವೇಷದ ಮರೆಯಲಿ ಬಂದ ಕಳ್ಳರುಯೆಂದು
ಹೇಸಿ ಹೋಹರು ತನತನಗೆ
ದೇಶಾಂತರಿಯಲ್ಲ ಜಂಗಮವಲ್ಲೆಂದು
ದೇಶದೊಳಪಕೀರ್ತಿ ಹರಿಯೇ            ೪೮

ವಸುಧೆಯೊಳಾವನು ಭ್ರೂಹತ್ಯೆ ಮಾಡಲು
ವೃಷಭನೆಳದರೆ ಸ್ವರ್ಗಗಳೂ
ಶಶಿಧರ ನಿಮಗಿನ್ನು ಸಾವು ಹುಟ್ಟುಗಳುಂಟೆ
ಮಿಸುಕ ಬಲ್ಲುದೆ ಆನೆ ನಿಮ್ಮಾ         ೪೯

ಹುಟ್ಟಿದ ಹೊಂದದದೃಷ್ಟದ ಲಿಂಗವೆ
ಮುಟ್ಟಬಲ್ಲದೆ ಮದಗಜವೂ
ದಿಟ್ಟಿಸಿ ನೋಡೆ ತ್ರಿಪುರವಂದುರಿಯದೆ
ಪಟ್ಟಣದೊಳಗಿದಿರುಂಟೇ   ೫೦

ಮಾಡಲಮ್ಮೆನು ಹರ ನಿಮಗೆ ಬಿನ್ನಪವನು
ನೋಡ ಬೇಡವೆನ್ನ ಮನವಾ
ನಾಡಾಡಿ ನರರಂತೆ ಆಡದಿರಲೇ ದೇವಾ
ನೋಡಯ್ಯ ನನ್ನ ಸಾಹಸವಾ           ೫೧

ಮುರಿದು ಹಾಕಿತು ಆನೆ ಸೂಳೆಗೇರಿಯನೆಲ್ಲ
ಮೊರೆಯಿಟ್ಟರೆಲ್ಲ ಸೂಳೆಯರೂ
ಅರಿದು ಕೊಪಿನರಾಯ ಮಾವುತರು ಬಂದು
ತರುಬಿದರಾನೆಯನಲ್ಲಿ       ೫೨

ಇಕ್ಕೆಲದೊಳೊತ್ತಾನೆಗಳ ತಂದು
ಹೊಕ್ಕರು ಆನೆಯ ಹಿಡಿಯಾ
ಜಕ್ಕುಲಿಸುತ ಬಲು ಹಾರೆಗಟ್ಟಿಗೆಯಿಂದ
ಸಿಕ್ಕಿಸಿ ಹೂಡಿ ಸಂಕೋಲೆಯಾ           ೫೩

ಹರನು ನೋಡಿ ಮೆಚ್ಚಿ ನಡಿದನು ಮುಂದಕೆ
ಕಡಲೆ ಗೋಧಿಯ ರಾಶಿಗಳಾ
ತರದಿಂದ ಸುರಿದಿರ್ದ ಹದಿನೆಂಟು ಧಾನ್ಯದ
ವಿದಳದಂಗಡಿಗೇರಿಯೊಳಗೆ   ೫೪

ಅಳತೆಗಳರ್ಪುದ ಕೊಳಗ ಹೊಲಿಕೆಗಳ
ಮಿರುಗು ಭಾಷೆಯ ಕೇಳುತಲೂ
ಬಳಿಕಲ್ಲಿ ನಡೆತಂದು ಹೊಕ್ಕರು ಮುಂದಲ್ಲಿ
ತುಳುವ ಬಣಜಿಗ ಕೇರಿಗಳಾ೫೫

ಪಟ್ಟಣ ಸ್ವಾಮಿಯ ಸಟಿವಾಳರ ಕೇರಿ
ಕಟ್ಟಲಿರ್ದ ಉಪ್ಪಾರ ಗುಡಿಯ
ನೆಟ್ಟಿರ್ದ ನಂದಿಯ ಕಂಬವ ಕಾಣುತ
ಸೃಷ್ಟಿಗೀಶ್ವರ ನಿಂತು ಕೇಳಾ            ೫೬

ಕೇಳಿದ ಮಾತಿಗೆ ಹೇಳಿದ ಹರಿಯಲ್ಲಿ
ಬಾಳೆಯರರಸ ಚಿತ್ತೈಸೂ
ಕೇಳಯ್ಯ ನಿನ್ನ ಡಿಂಗರು ಭಕ್ತರು
ಕೇಳು ಮಾಡುವ ಧರ್ಮಗಳನೂ        ೫೭

ಆರು ಬಂದರಲ್ಲಿಗಿಚ್ಚೆಯ ಭೂ ಜನಗಳು
ಓರಂತೆ ಮಾಡವಲ್ಲಿವರೂ
ಧಾರುಣಿಯೊಳಗೆಲ್ಲ ಅತಿದಾನರೆಲ್ಲರುಯೆಂದು
ಹೇಳಿದ ಹರಿಯೂ ಸಂಗತಿಯಾ         ೫೮

ಪುರಹರನಿತ್ತನು ಕೇಳುತಲವರಿಗೆ
ಸ್ಥಿರವಾ ಕೈಲಾಸ ಪದವಾ
ಧರೆ ಸುರಲೋಕಕೆ ಕಾಲುದಾರಿಯಾಗಿ
ಪಡದರವರು ಗಣಪದವಾ   ೫೯

ಹರನೆ ಚಿತ್ತೈಸಯ್ಯ ಧರೆಯೊಳು ಕರ್ಣನು
ಸಿರಿವಂತನಾಗಿಪ್ಪ ಧನವಾ
ಖರ ಬೇಗದಿವದೊಳು ದಾನವ ಮಾಡುವ
ಹದಿನೆಂಟು ಕೋಟಿ ವಸ್ತುವನೂ        ೬೦

ಮಾಡಿರೆಲ್ಲ ಅನ್ನ ದಾನವ ಕರ್ಣನು
ಮಾಡಿದ ಧನ ದಾನವನೂ
ಮಾಡಿದ ಫಲವದು ಹೊನ್ನ ಬೆಟ್ಟವನೇರಿ
ತಾ x x ದಿರ್ದನು ಕರ್ಣಾ    ೬೧

ಶೀಲವಂತ ಮಡಿವಾಳರ ಕೇರಿಯ
ಸಾಲ ಮಲ್ಲರ ಕೇರಿಗಳಾ
ಮೇಲೆ ಬಿಲ್ಲಿನ ಸರವಂದಿರ ಕೇರಿಯ
ಶೂಲಿಯು ನೋಡುತ ನಡದಾ          ೬೨

ಮಚ್ಚಿಗ ಚಿಪ್ಪಿಗ ಗಲ್ಲಿಯ ನೋಡುತ
ನಟ್ಟುವರ ಕೇರಿಗೊಂಡು
ನಿಚ್ಚಲು ರಾಯಗೆ ಬಿಟ್ಟಿಯ ಮಾಡದ
ನಿಶ್ಚಿತ ಭೂಗಾರ ಕೇರಿ        ೬೩

ಮುರಾರಿ ನೋಡುತ ನಡವನು ಮುಂದಕೆ
ಸಾಣಿಗಾರ ಕೇಳಿಗಳಾ
ವೆರಡಿಗರ ಕಂಡಗಾರರ ಕೇರಿಯೊ
ತೋರಣದಂಗಡಿ ಸಾಲೂ    ೬೪

ಆಗಿ ಶ್ರೀಗಂಧವು ಕರ್ಪೂರ ಕಸ್ತೂರಿ
ಮೃಗನಾಭಿಯ ಚವುರಿಗಳೂ
ಮಘಿಮಘಿಸುವ ಸಾದುವಾಣಿರಂಗಡಿಯನು
ಅಘುಹರ ನೋಡುತ ನಡದಾ           ೬೫

ಕಬ್ಬಿಲಗೇರಿಯ ನೋಡುತ ನಡೆದನು
ಉಬ್ಬಿಲೀವರ ಹರಿ ಸಹಿತಾ
ಕೊಬ್ಬಿದ ಗೋವುಗಳ ಕಡಿದು ಮಾರುತಲಿಪ್ಪ
ಸರ್ವ ಪಾತಕರನು ಕಂಡಾ     ೬೬

ಶಾಪ ನೀವೇನು ಕಟುಕರಿಗೆನುತಲಿ
ಕಾಪಾಲಿ ಕೋಪಿಸಿ ನುಡಿಯೆ
ಶಾಪವು ಸಲ್ಲದು ಇವರಿಗೆ ಮಾರಿದ
ಪಾಪಿಗೆ ಪಾತಕ ಹರನೇ       ೬೭

ಪಾತಕವನು ಮಾಡಿದವರಿಗೆ ಯಮನಲ್ಲಿ
ಯೇತರಾಜ್ಞೆಯು ಹೇಳು ಪರಿಯೆ
ಭೂತೇಶ ಚಿತ್ತೈಸು ಮನಬಾಧೆಗಳಿಂದ
ಆತನ ಕೊಲೆ ವಿಧಿಗಳನೂ     ೬೮

ಕಾಲ ಚರ್ಮವನುಚ್ಚಿ ಸಂದು ಸಂಧಿಯ ಮೇಲೆ
ಕೀಲು ಗುಂಟಗಳ ಕುಟ್ಟುವರೂ
ಶೂಲಿ ಚಿತ್ತೈಸಯ್ಯ ಕಾಳಗದೊಳಗಲ್ಲಿ
ಆಳನ ಬಿಟ್ಟೋಡಿದವಗೆ      ೬೯

ತೆಕ್ಕದ ನಾರಿಯು ಗಂಡಗೆ ಋಣದೊಳು
ಸೊಕ್ಕಿ ನಿಂದಿಸೆ ಹಿರಿಯರನೂ
ಉಕ್ಕನು ಕಡುಗಾಸಿ ಬಾಯೊಳು ಹೊಯ್ವರು
ಮುಕ್ಕ ಯಮನಾಜ್ಞೆಗಳೂ    ೭೦

ಹಣದ ಋಣವನುತ್ತರಿಸಲಾರದೇಕ
ಕಣ್ಣಿಗೆ ಕಾಳಗದಿ ಹೆಡೆಯಿಸಿ
ಕ್ಷಣದೊಳು ಯಮರಾಜನೂಕಿಸಿ ಕಳುವನು
ಹೆಣಗುವ ಹುಳುಗೊಂಡದೊಳಗೆ       ೭೧

ಒಡನುಂಡ ಮಿತ್ರನ ಮಡದಿಗೆ ತಪ್ಪಲು
ಮೃಡನೆ ಚಿತ್ತೈಸು ಆಜ್ಞೆಗಳಾ
ಕೆಡಹಿ ಕಂಚನು ಕಾಸಿ ಬಾಯೊಳು ಹೊಯ್ವರು
ಕಡೆಯಲು ನರಕದ ಕೊಂಡಾ೭೨

ಕೊಬ್ಬಿ ತಾ ಪರಸತಿಗಳಪ್ಪಿದಾ ಪಾಪಿಗೆ
ಹಬ್ಬಗಳೆಂದನು ಹರಿಯೂ
ಕಬ್ಬುಣದ ಮಥಳಿಯನು ಕಡುಗಾಸಿ
ತಬ್ಬಿಸುವನು ಯಮರಾಜ   ೭೩

ಉತ್ತಮಾಂಗದ ಮೇಲೆ ಹೊತ್ತುಕೊಂಡೊರೆಗಳ
ಮತ್ತಲ್ಲಿ ಗುರು ಬರುತಿರಲೂ
ಹತ್ತಿರೆ ಶಿಷ್ಯನು ಕಾಣುತ ತೊಲಗಲು
ನೆತ್ತಿಗೆ ಸರಳ ಪೆಟ್ಟುವರೂ   ೭೪

ಪರವಧು ಸರೋವರ ನೀರಿಗೆ ಹೋಗಲು ಕಂಡು
ಸುರತಕೆ ಹಿಡಿದೋದವಗೆ
ಪುರಹರ ಚಿತ್ತೈಸು ಸೂಜಿಯ ಕಾಸಿಯೆ
ಉಗರ ಕಣ್ಣಿಗೆ ಪೆಟ್ಟುತಿಹರೂ          ೭೫

ತಂದೆ ತಾಯಿನೊದ್ದ ಪಾತಕ ಪುತ್ರಗೆ
ಒಂದು ಆಜ್ಞೆಯು ಯಮನಲ್ಲಿ
ಸಂಧಿಸಿ ಕಾಲನೊಲೆಯೊಳಿಟ್ಟು ಧೂತರು
ತಂದು ತಿದಿಯನೊತ್ತುತಿಹರೂ         ೭೬

ಉರುವ ಸತಿಯರಲ್ಲಿ ಕೊರತೆಗಳಿಲ್ಲದೆ
ಬರಿದೆ ತೋರಿದ ಪಾತಕಗೆ
ಅರೆಯ ಮೇಲೆ ಅಡಿಯಾಗಿ ಕೆಡಹಿ ಯಮ
ಸರಿಗಲ್ಲ ಪೇರುಸುತಿಹನೂ೭೭

ಹರನೆಂಬ ಸಿರಿಯಲು ಗದ್ದುಗೆ ಮೇಲಿದ್ದು
ಗುರುವ ಕಾಣುತ ಯೇಳದಿರಲೂ
ಹರನೆ ಚಿತ್ತೈಸಯ್ಯ ಉರಿವನೊಸಲ ಮೇಲೆ
ತರಿಸಿ ಯಮನು ಹಾಕಿಸುವನೂ         ೭೮

ಸಾಕಿದ ನಾಯಿಯ ತನ್ನ ಜೀವವನ್ನು
ಲೋಕವರಿಯೆ ಕಾಯ್ದವನಾ
ಕರೆಸಿಯೆ ನುಡಿದಾತನ ಬಾಯೊಳು
ಸೂಕರದಾಡೆ ಪೆಟ್ಟುವರೂ  ೭೯

ಉರಗ ಕಚ್ಚಿದ ವಿಷ ನೀರೊಳು ಬಿದ್ದನ್ನ
ಪರಿಹರಿಸಿದವನ ಮರೆಯೆ
ಹೊರಳುವ ನರಕದೊಳಾರು ನೂರು ವರುಷವು
ಧರೆಯೊಳು ಸೂಕರನಹನೂ೮೦

ಒಡಲ ಕಕ್ಕುಲಿ ತೆಗೆ ತಪ್ಪಿಸಿ ಶಾಸ್ತ್ರವ
ನುಡಿದು ಹೇಳಿದ ಜೋಯಿಸಗ
ಮೃಡನೆ ಚಿತ್ತೈಸಯ್ಯರು ನೂರು ವರುಷವು
ಕೆಡಗುವ ಕ್ರಿಮಿಗೊಂಡದೊಳಗೆ          ೮೧

ದೇವದಾಯ ಬ್ರಹ್ಮದಾಯವ ತಪ್ಪಿಸಿದ
ಅವನ ವಿಧಿಯ ಕೇಳು ಹರನೆ
ಸಾವನು ನರಕದಿ ಬಿಡುಗಡೆಯಿಲ್ಲಯ್ಯ
ದೇವ ಚಿತ್ತೈಸೆಂದ ಹರಿಯೂ            ೮೨

ಪಾಪವ ಕೇಳುತ ನಡದನು ಮುಂದಕೆ
ಆ ಪುರಹರನತಿ ವೇಗಾ
ಪಾಪಿ ಜಾತಿ ಬೇಟೆಕಾರರ ಕೇರಿಯಾ
ಕಾಪಾಲಿ ನೋಡುತ ನಡದಾ೮೩

ಹೆಬ್ಬುಲಿ ಮರೆಯನು ದೊಡ್ಡಿನ ಕೋಣನ
ಕೊಬ್ಬಿ ಕೆಲವ ಕರಡಿಗಳಾ
ಕಬ್ಬಂಗಿ ಕೆಂಡವ ತಿಂಬ ಹಕ್ಕಿಯ ಹಿಂದು
ನೊಬ್ಬಳಿ ನೋಡುತ ನಡದಾ            ೮೪

ಹರನು ಬಂದು ಹೊಕ್ಕ ಹೂವಿನಂಗಡಿಯೊಳು
ಪರಿಮಳ ಸೈರುಭಗೊಳುತಾ
ಸರ ಹೂವ ಸೇರಿಪ ಮಾಲೆಗಾತಿಯರ
ಸಿರಿ ಮುಡಿಗಾಣುತ ನಿಂದಾ  ೮೫

ಇಟ್ಟ ಕಸ್ತೂರಿ ಬೊಟ್ಟು ಬಟ್ಟಲ ಕುಚಂಗಳು
ಉಟ್ಟ ಬಣ್ಣದ ಸಣ್ಣ ಸೀರೆ
ಕಟ್ಟಿರ್ದ ಮುತ್ತಿನ ಸಣ್ಣ ಸರಂಗಳು
ಇಟ್ಟಿರ್ದ ರವೆಯದೊಲೆಗಳೂ          ೮೬

ಚೆಲೆಗಂಗಳ ಕಾಂತಿ ಚೊಲ್ಲೆಯ ತುರುಬಿನ
ಪಿಲ್ಲಿಕಾಲುಂಗರ ಚೆಲುವಾ
ವಲ್ಲಭೆಯರ ಮುಖ ಮೂಗುತಿಗಳಿಗೆ
ಮಲ್ಲಿಕಾರ್ಜುನ ಮನಸೋತಾ          ೮೭

ಪಾಲಿ ಹೊಂಬಟ್ಟೆಯ ಬರಹದ ರವಕೆಗೆ
ನಾರಿಯ ರೂಪಿಗೆ ಹರನೂ
ಮಾರನ ಬಾಣವು ಮನವು ತಟ್ಟುರ್ಚಿತು
ನಾರಾಯಣನೇ ಕೇಳೆಂದಾ    ೮೮

ಹೊತ್ತೆಯ ಕೇಳಲು ಹೋದನು ಹರನಾಗ
ಮತ್ತಾ ಮಾಲೆಗಾತಿಯರಾ
ಸುತ್ತಿರ್ದ ಹೊಸ ಸರಹೂವಿನ ಬೆಲೆಯನು
ಮತ್ತೆ ಕೇಳಿದ ಹರಿಯವಳಾ  ೮೯

ಹೊಸ ಹೂವಿನ ಬೆಲೆ ಹೆರಡು ಸಾವಿರ ಹೊನ್ನು
ಬೆಸಗೊಂಬ ಜಾಣ ನೀ ಕೇಳಾ
ಶಶಿಮುಖಿ ಜಾಣೆಯು ವಸುಧೆಯೊಳೆನುತಲು
ನಸುನಕ್ಕು ತಿರುಗಿದ ಹರಿಯೂ          ೯೦

ಹೂವಾಡಗಿತ್ತಿಯ ನೊತ್ತೆಯ ಕೇಳಲು
ದೇವರೆ ಕಳುಹಿದಿರೆನುತಾ
ಹಾವು ಮೆಕ್ಕೆಯ ಹಣ್ಣು ರೂಹಿಲಿ ಖರಚೆನ್ನ
ಭಾವಿಸಿ ಮೆಯಿವರೆ ವಿಷವೂ೯೧

ಸೂಳೆಯ ನೆರವರೆ ಹೇಳಯ್ಯ ಹರನೆ
ಸೂಳೆಗೇರಿಗೆ ಹೋಹ ನಾವೂ
ಅಳಿಗೊಳುತಲಾಗ ಮಾಲೆಗಾತಿಯರನು
ಕೇಳುತ ನಡಿದನು ಹರನೂ   ೯೨

ಮುಂದಕೆ ನಡೆತಂದು ಭಕ್ತರಂಗಡಿಯೊಳು
ಸಂದಿಸಿದರು ಚಲುವೆಯರೂ
ನಂದಿವಾಹನ ಹರಭಕ್ತರ ಧೂಳೆಂದು
ನಿಂದಿರಲಿಸದೆ ನಡದಾ         ೯೩

ನಯವೇರಿ ನಲಿದಾಡೆ ನೈದಿಲ ಬಳಗವು
ಭಯದಿ ತಾವರೆ ತಲೆವಾಗೆ
ಜಯವಾಯಿತು ಜಾರೆ ಜಾರರಿಗತ್ಸರೂ
ರವಿಯು ಪಶ್ಚಿಮ ಮರೆಗಿಳಿರಾ         ೯೪

ಹರನು ಓರಗಲ್ಲ ಸೂಳೆಗೇರಿಯನೆಲ್ಲ
ತಿರುಗಿ ನೋಡಿಯೆ ಪರಿಣಮಿಸಿ
ಹಿರಿದು ಸಂತೋಷಗಳಿಂದಲೂ ಸಂಧಿಗೆ
ಬರೆದೆನು ಪದ ತೊಂಭತ್ತೈದೂ         ೯೫

ಅಂತು ಸಂಧಿ ೮ಕ್ಕಂ ಪದನು ೫೦೧ಕ್ಕಂ
ಮಂಗಳ ಮಹಾಶ್ರೀಶ್ರೀಶ್ರೀ