ಸಂಧಿ-೯

ಸಂಜೆಯ ಹರೆಗಳು ಸಾರಿದವಾಗಳೆ
ನಿಂದವು ಧರೆಯ ಉಷ್ಣಗಳೂ
ರಂಜಿಸಿ ನೈದಿಲು ನಲವೆರುತಿರ್ದವು
ಮುಂದಣ ಸಂಧಿ ವೃತ್ತಾಂತಾ           ೧

ಹರನೂರಗಲ್ಲ ಸೂಳೆಗೇರಿಯ ಹೊಕ್ಕು
ಹಿರಿದು ಸಂಪತ್ತು ಗಳಿಂದಾ
ಉರಿವುತಿಪ್ಪ ಠಾಣ ದೀವಿಗೆಗಳ ಕಂಡು
ಮನೆ ಮನೆಗಳ ಸಂಭ್ರಮವಾ೨

ಎಲ್ಲಿ ಸೂಳೆಯರುಂಟು ಕಡು ಚಲುವೆಯರೆಂದು
ಅಲ್ಲಿ ಹೇಳಿದ ನಾರದನೂ
ಇಲ್ಲಿಂದ ಸೂಳೆಯ ಮನೆಯಲಿರುವ ಹರಿ
ಮೆಲ್ಲನೆ ಕಳಹುವ ನಾಳೆ     ೩

ದೂರದಲೆ ಧಾನೆಮುಸುಕ ವಿಕ್ಕಿಯೆಕೊಂಡು
ನಾರಂದ ನೀವನಿಗ ಹರನೆ
ಆರಯ್ಯ ಬಂದನು ಬೆನ್ನಲು ಬೇಹಾಗಿ ನಿಮ್ಮ
ನಾರಿಯೊಡನೆ ಹೇಳುವನೂ  ೪

ಅಟ್ಟಿ ಬಂದನು ನಮ್ಮ ಬೆನ್ನ ಬಿಡದವ
ಬಿಟ್ಟು ಬಂದೆವು ನಾ ಹರನೇ
ಕೆಟ್ಟನು ನಾರಂದ ಕಲಹವನಿಕ್ಕುವ
ಬಿಟ್ಟು ನಡೆಯೀ ಸೂಳೆಯರಾ          ೫

ಬುದ್ದಿಯ ಕಲಿಸುತಲಿರ್ದಳು ಮುದಿಊಳೆ
ಮುದ್ದು ಮಾಡಿಯೆ ಮಗಳೊಡನೆ
ಹೊದ್ದುದು ಹಣವುಳ್ಳ ವಿಟರನು ಸಲೆ ಮೋಹ
ವಿದ್ದರೆ ಭಣಗರು ಬೇಡಾ    ೬

ಪ್ರಾಣವಲ್ಲಭ ನಿನ್ನ ಕಾಣದೆಯಿರಲಾರೆ
ಉಣಿಸಿ ತಿಂಬುದು ಮೋಹಾ
ಕೋಣೆಗೊಯಿದುಳ್ಳ ಧನವನು ತೆಕ್ಕೊಂಡು
ಕಾಣುತ ನುಡಿಸಲು ಬೇಡಾ  ೭

ನಿನ್ನ ಕಾಣದೆಯಿರಲಾರೆನು ನಲ್ಲನೆ
ಇನ್ನಾರು ಸೊಬಗರುಯೆನುತಾ
ಮುನ್ನುಳ್ಳ ಧನವನು ಕನ್ನೆ ನೀ ಸುರಿಕೊಂಡು
ಚೆನ್ನಾಗಿ ಕಟ್ಟಿಸು ಕೌಪಾ     ೮

ಸೊಬಗಿನ ಶೃಂಗಾರದಿ ಭವನ ಸೂಳೆಯ
ಅಭವನು ನೋಡುತ ನಡೆದಾ
ಕಬರಿಯ ಕುರುಳೊಳು ಕರಿಯ ತುಂಬಿಯಂತೆ
ಅಬಲೆಯ ಮುಖ ಚಂದ್ರಬಿಂಬ          ೯

ಚಲ್ಲೆಗಂಗಳ ಕಾಂತಿ ಚೊಲ್ಲೆಯ ತುರುಬಿನ
ಮಲ್ಲೇಶ್ವರನಯೆಸುಗೆಗಳಾ
ನಲ್ಲಳು ಉಟ್ಟಳು ಮಲ್ಲಿಗೆ ಬಿಳಿದನು
ಅಲ್ಲಿಗೊಪ್ಪುವ ಶೃಂಗಾರಾ೧೦

ಅಂದುಗೆ ಪಾಯವಿಟ್ಟದಿಂದ ಜೂಳೆಯ
ಚಂದದ ಮಣಿ ಸರದೋಲೆ
ಬಂಧದ ಚೌಸರ ಬಟ್ಟಿಹ ಕುಚಗಳ
ಹೊಂದಿರ್ದ ಬಣ್ಣದ ಸರವೂ            ೧೧

ಮಿಸುನಿಯ ಬಣ್ಣದಸಿಯ ನಡುವಿನ
ಯೆಸೆವ ಪಿಲ್ಲಿ ವೀರಮುದ್ರೆ
ಅಸಗರಗಸಣಿಯ ಹೊಸ ಸೀರೆಯನುಟ್ಟ
ಶಶಿಮುಖಿಯರ ಕಂಡು ಹರನೂ        ೧೨

ಮುಂಗೈಯನಿಗಳವು ರಂಗು ನೀಲದ ಬಳೆ
ಕಂಗಳ ಲೇಸವ ಕಪ್ಪುಗಳಾ
ಅಂಗನೆಯರ ಹರ ನೋಡುತ ನಡದನು
ಶೃಂಗಾರ ಸೂಳೆಗೇರಿಯೊಳು೧೩

ನೊಸಲ ತಿಲಕ ಶ್ರೀಗಂಧದ ಸಾದಿನ
ಹೊಸ ಮುತಿನೇಕಾವಳಿಯಾ
ಅಸಿಯ ಕುಡಿಹುಬ್ಬಿನೆಸಳುಗಣ್ಣು ಬಾಲೆಯ
ಶಶಿಧರ ನೋಡುತ ನಡದಾ  ೧೪

ಬೆಟ್ಟದ ಬೆಳುಹೆಗ ನಾಟಿಸಿ ನಾಚುತ
ಕೊಟಲೆಗೊಳುತಲು ಹರನೂ
ಕೂಟದ ಸುಖಗಳ ಪಾಟಿಸಬೇಕೆಂದು
ಕೂಟಣಿಯಾಗೆಂದ ಹರಿಯೂ           ೧೫

ಸುಳಿಗುರುಳಿನ ನೊರ್ಮುಡಿಯ ಚೆಳ್ಳುಗುರಿನ
ಹೆಳವ ನಯನಭಾರ ತಿಲಕಾ
ಸೆಳೆನಡು ಬಟ್ಟಿಹ ಕುಚಗಳಲೊಪ್ಪಿದ
ಕೆಳದಿಯರನು ಕಂಡ ಹರನೂ            ೧೬

ರತಿದೇವಿ ಅತಿಶಯ ಸೊಬಗಿನ ಸೂಳೆಯು
ಹಿತವ ನೀನಾಡುವೆ ಹರಿಯೆ
ಗಡಿಗೆಡಿಸದೆ ತಂದು ನೆರಹಿದೆಯಾದರೆ
ಪ್ರತಿಯಲ್ಲ ನಿನಗೆಂದ ಹರನೂ         ೧೭

ನುಡಿಸಿ ಮಾತಾಡಿಸುತಿರುತಿಪ್ಪರೊಬ್ಬರ
ಕಡೆಗಣ್ಣ ನೋಟವೊಬ್ಬರಲಿ
ಹಿಡವರು ಸೆರೆಗಳ ಮೊಲೆಯ ಬಲೆಯ ಬೀಸಿ
ಕೊಡುವರು ಕರಕೆಯ ಹರನೆ೧೮

ನೋಡಲು ನರಕವು ಕೂಡಲು ಪ್ರಾಯಶ್ಚಿತ್ತ
ಬೇಡಿಕೊಂಬೆನು ಹರ ನಿಮ್ಮಾ
ನಾಡೊಳು ಹದಿನೆಂಟು ಜಾರಿಯ ನೆರೆವರು
ನೋಡದೆ ನಡೆಯೆಂದ ಹರಿಯೂ        ೧೯

ವಸಂತಕಾಲದ ಲೇಸವನದುಯ್ಯಾಲ
ಅಸಿಯ ಶ್ರೀಗಂಧದ ಮರನೂ
ಕುಸುರಿ ಕೆಲಸದ ಶೃಂಗಾರದ ಮಣಿ ಮೇಲೆ
ಹೊಸ ಹೊನ್ನ ಸರಪಣೆಗೆಲ್ಲಾ         ೨೦

ಮಲ್ಲಗಂಟು ಹಿಣಿಕಿದ ಜೆಡೆಗಳು
ಚೊಲ್ಲೆಯ ಹೊಂಬಟ್ಟಿರವಕೆ
ವಲ್ಲಭೆಯರು ನವಿಲುಯ್ಯಾಲೆ ನಡಿದಾಡೆ
ಮಲ್ಲಿಕಾರ್ಜುನ ಬಂದು ಕಂಡಾ         ೨೧

ಮಲಹರಿ ಕಾಂಬೊದಿ ಅಹರಿ ಗುಜ್ಜರಿನಾಟ
ಭೈರವಿ ಸಾಳಂಗ ನಾಟಿ
ಸುಲರಿತ ಸೂಳೆಯರಲ್ಲಿ ರಾಗವ ಮಾಡೆ
ಒಲಿದನು ಮಕುಟ ಹರನೂ  ೨೨

x x x x x x ಗುಜ್ಜರಿನಾಟಿ ಮಲಹರಿ ಕಾಂಬೊದಿ
ತಂಡ ತಂಡದ ರಾಗಗಳನೂ
ಗಂಡು ರಾಗ ಹೆಣ್ಣು ರಾಗ ಗೀತವನಲ್ಲಿ
ಕಂಚು ಹರನು ಮರುಳಾದ   ೨೩

ವಿರಹದ ತರಳೆಯರುರದ ಕುಚಂಗಳ
ಉರವಣಿಸಿಟ್ಟರು ಹರಿಯೆ
ಭರದಿ ಜವ್ವನ ಬಾಣ ಮರಿಮೊನೆ ಮೂಡಿತು
ನೆರವೆನಿವಳನೆಂದ ಹರನೂ    ೨೪

ಎಲೆಯ ಕೊಟ್ಟರೆ ಹೋಗಿ ಹೊಲೆಯನ ಉರುಳುವ
ಕೆಲ ಹಟ್ಟಿ ಸೂಳೆಯರಿವರೂ
ಒಲುಮೆಯ ಮೆಚ್ಚಿನ ಲಲನೆಯ ತೋರುವೆ
ನಿಲಬೇಡ ನಡಿಯೆಂದ ಹರಿಯೂ        ೨೫

ವ್ಯಸನದ ಬೆಸುಗೆಯ ಶಶಿಮುಖಿಯರನೆಲ್ಲ
ಶಶಿಧರ ತೋರುವೆನೆನುತಾ
ಹೆಸರುಗೊಳ್ಳದ ಮುನ್ನ ಹೇಸಿಕೆ ಬರುತಿಪ್ಪ
ಕಿಸುಟಿಯರಲ್ಲಿಗೆ ಹೋದಾಗಾ         ೨೬

ದುಡ್ಡುಗಳನು ತಿಂದು ಬೆಳೆದಳು ಸೂಳೆಯು
ಗೊಡ್ಡಾಗಿ ಬೆಳುವಲದೊಳಗೆ
ದೊಡ್ಡ ಮೂಟೆಯಂತೆ ವೊಡ್ಡಿಸಿದಾ ಹೊಟ್ಟೆ
ಬೊಡ್ಡಗಣ್ಣ ಸುಕುಮಾರಿ   ೨೭

ಬಿದ್ದ ಮೊಲೆಗೆ ಹಳೆಯರವೆಕೆಯ ತಾ ಕಟ್ಟಿ
ಬದ್ದವಲ್ಲದಿ ಕಂಪಿಸುತಾ
ಹೊದ್ದ ಬಾರ ನಾ ತರೆ ಮಾಳಿಯಲಿ ನಿಂದು
ಇದ್ದಳೊಬ್ಬಳು ಮುದಿಸೂಳೆ           ೨೮

ಬಂದಳು ಹಡಹಿಲಿ ಘಳಿಸುವೆನೆನುತಲಿ
ನಿಂದಳು ಓರಗಲ್ಲೊಳಗೆ
ಬಂದ ಮಿಂಡರಿಗೆಲ್ಲ ಛಳಿ ಹತ್ತದಂತಲ್ಲಿ
ಒಂದೊಂದು ಕುಚ ಹಾಸುಹೊದಿಕೆ     ೨೯

ಪೊಳ್ಳೆಗಣ್ಣಲಿ ತಾನು ಮೆಳ್ಳಿಸಿ ನೋಡುತ
ಒಳ್ಳಿಹ ವಿಟರಿಲ್ಲವೆನುತಾ
ತೆಳ್ಳಿ ಕೊಂಕುಳ ಕಪ್ಪು ಕಡೆಗಣ್ಣಿಲಿ ವೂರು
ಗಲ್ಲು ಹಳ್ಳಿಯೆನುತಿಹಳೂ೩೦

ಹಾಳಾಯಿತು ಓರಗಲ್ಲ ಪಟ್ಟಣವಿದು
ಖೂಳರಲ್ಲದೆ ಜಾಣರಿಲ್ಲಾ
ಹೇಳುವ ಎನಾರಿಗೆ ವಿಟರು ತಕ್ಕವರಿಲ್ಲ
ಸೂಳೆಯರೆನಗೆಣೆಯಿಲ್ಲಾ   ೩೧

ಕುಂಡೆಯ ಕೆರಕಿಗೆ ಕೆಂಡವ ಚಾಚಿಯೆ
ಅಂಡಿಸಿದ್ದೇಳು ಸೂಳೆ ಒಲೆಯೂ
ಕೊಂಡ ಮುಸುವಿನಂತೆಯಿಪ್ಪ ಮೊರೆಯನೆಲ್ಲ
ಕಂಡರೆನುತ ತಲೆವಾಗಿ         ೩೨

ಹಾಳೂರ ನಾಯಂತೆ ಹಳೆ ವಿರಹವನೆಲ್ಲ
ಆಳಾಪದ ಮಾಡುತಲಿ
ಹಳಿವುತ ಕರವಳು ಸುಳಿದ ವಿಟರನೆಲ್ಲ
ಹಣವಿಲ್ಲ ಭಣಗುಗಳೆನುತಾ            ೩೩

ಕಂಗಳ ಜೋರಿಗೆದಿಂಗರೆ ನೆರೆದಿಪ್ಪ
ಗುಂಗುರು ನೊಲಗಪುನವೂ
ಶೃಂಗಾರ ಸುಲಿಗಣ್ಣ ಮುಸುಕಿಗೆ ಮರುಳಾಗಿ
ಹಿಂಗಿಹರು ನಾ ವಿಟರೂ      ೩೪

ಹತ್ತಿದ ಗಲ್ಲವು ಬತ್ತಿದ ಮೋರೆಯು
ಮತ್ತಾಕಿಣೆನಾತ ಬಾಯಿ
ಹತ್ತಿರ ಸುಳಿದರೆ ಹೇಸಿಕೆ ಬರುತಿಪ್ಪ
ಕತ್ತೆ ಮುದಿಕಿ ಸೂಳೆಯರೂ  ೩೫

ಟೊಳ್ಳುಗಣ್ಣೊಂದು ಮೆಳ್ಳುಗಣ್ಣೊಂದು
ತೆಳ್ಳಿಯ ಕಪ್ಪುಲೊಕ್ಕುಳವೂ
ಕುಳ್ಳಿತು ಹೆಚ್ಚಿದಳೆಂಟು ಬೆರಳಿನೊಳು
ಮೆಳ್ಳಿಸಿ ನೋಡುತ ವಿಟರೂ            ೩೬

ಸುಳಿದು ಹೋಗುತಲಿಪ್ಪ ವಿಟರನು ಕರೆವಳು
ಬೆಳುನಗೆ ನಗುತ ಸೂರಳಿಸಿ
ಹಳೆ ನರಿಯಾಗಿಯೆ ಹಳೇವು ಸುಟ್ಟಳು
ಹಣ ಹುಟ್ಟುಡೆನುತ ಚವುರಿಯನೂ   ೩೭

ಹರ ನೀನು ಸೂಳೆಯರ ನೆರೆಯಲು ಬೇಕೆಂದು
ಹಿರಿದಾಗಿ ಕಾಡುವೆ ನನ್ನಾ
ವಿರಹವುಳ್ಳ ಸೂಳೆ ವೊರೆಗಲ್ಲಿಗೆಯಲ್ಲ
ನೆರ ಬಾಯನಕತ ಬೇಡಾ      ೩೮

ಹರಗೆ ತೋರಿದ ಹರಿ ಅವಳ ಮಾರಿಯನಾಗ
ಹಿರಿದು ಸಂತೋಷ ನೋಡೆನುತಾ
ಉರಿವ ದೀವಿಗೆ ತಂದು ಮುಖವನು ತೊರಲು
ಹರ ನೋಡಿ ಹೇಸುತ ನಡದಾ           ೩೯

ಸೂಳೆಗೇರಿಯ ನೋಡಿ ಸಂತೋಷವಾಯಿತು
ಕೇಳಯ್ಯ ಹರಿ ನೀನು ಯೆನುತಾ
ಹೇಳುತ ಕೈಹೊಯ್ದು ನಗುತಲು ಮುಂದಕೆ
ಬಾಳಾಕ್ಷ ನತಿವೇಗ ನಡದಾ   ೪೦

ದೇಶವನೆಲ್ಲವ ಗಣಪತಿರಾಯನು
ಲೇಸಾಗಿ ಆಳುವನೆನುತಾ
ಈಶನು ಮುಂದಕೆ ಬರುತಲು ಕಂಡನು
ವ್ಯಾಸ ತೋಳಿನ ಶಿಖರವನೂ            ೪೧

ಬಂದು ಹೊಕ್ಕನು ಹರ ಸೋಮೆಯ ದೇವರ
ಮುಂದಣ ರಂಗ ಮಂಟಪವಾ
ಮುಂದಿದ್ದ ಭೈರವ ದುರ್ಗಿ ವಿನಾಯಕ
ನಿಂದರೆದ್ದರು ಹರ ಬರಲೂ೪೨

ಮೃಡಗೆ ತೋರಿದ ಹರಿ ಕಡೆಗಣ್ಣ ನೋಟದಿ
ಅಡಿಯಿಡಲನುವಾಗುತಿರಲೂ
ಮಿಡಿದ ವಿಭೂತಿಯ ಬೆಳಳಿಂದ ಪುರಹರ
ಬಿಡಬೇಡ ಸ್ಥಾನವನೆನುತಾ  ೪೩

ಆಗ ಕುಳಿತವಲ್ಲಿ ಕಲ್ಲ ಪ್ರತಿಮೆಗಳು
ನಾಗಭೂಷಣನ ಸನ್ನೆಯಲಿ
ಬೇಗದೊಳಾಗಲೆ ಪೂಜಾರಿ ತಂದನು
ಭೋಗ ನೈವೇದ್ಯ ವಾದ್ಯಗಳಾ         ೪೪

ಮೀಸಲ ನೈವೇದ್ಯ ಬೀಸುವ ಚಾಮರ
ಲೇಸಾಗಿ ಹಿಡಿದ ಸತ್ತಿಗೆಯಾ
ಈಶನ ಹೊಗಳುವ ಕೈವಾರ ಮದ್ದಳೆ
ವಾಸುಕಾರರ ಕಹಳೆಗಳಾ      ೫೫

ಭೇರಿ ದುಂದುಬಿ ಶಂಖ ಕೈತಾಳ ಜಾಗಟಿ
ಓರಣ ಪಂಚ ಘಂಟಿಗಳಾ
ನಾರಿಯರ ಪಾತ್ರ ಶೃಂಗಾರವಾಗಲು
ಸೇರಿತು ರಂಗ ಮಂಟಪವಾ  ೪೬

ಧೂಪ ದೀಪವು ನೈವೇದ್ಯ ತಾಂಬೂಲ
ಆ ಪುರಂದರ ದೇವರಿಗೆ
ಕಾಪಾಲಿ ಸಂತುಷ್ಟನಾದನು ಆಗಲೆ
ರೂಪುವಡೆದು ಹೊಸ ಕಳೆಯಾ          ೪೭

ಚಲ್ಲಣದುಡಿಗೆಯ ಮಲ್ಲಿಗೆ ದುರುಬಿನ
ಚೆಲ್ಲಗಂಗಳ ಚಲುವೆಯರೂ
ಎಲ್ಲ ನವರತ್ನ ವಡಿಸಿದ ಮಾಲೆಕಟ್ಟು
ಅಲ್ಲಿ ಸೂಳೆಯರ ಶೃಂಗಾರ೪೮

ನೊಸಲ ಮುತ್ತಿನ ಬೊಟ್ಟು ಹೊಸ ಮುತ್ತಿನ ಮಾಲೆಯು
ಮಿಸುನಿ ಕಂಕಣಕಾರೆಗಳೂ
ಕುಸುರಿಗೆಲಸದಿಂದ ಲೇಸವ ವೊಡ್ಯಾಣವು
ಶಶಿಮುಖಿಯರ ಪಾತ್ರಗಳೂ೪೯

ಕಂಚಿನ ಮದ್ದಳೆ ಕಂಸಾಳೆ ತಾಳವು
ಪಂಚ ವಾದ್ಯದ ಗೀತಗಳೂ
ಕೆಂಚೆಯರಾಡುವ ಪಾತ್ರದ ನಟನೆಯ
ಪಂಚಮುಖನು ನೋಡುತಿರ್ದಾ        ೫೦

ತಿರುಪಿನವಹಿಲದ ಚರಣ ಮಂಡಿಯ
ಭರವಸ ಕಾಲಾಟವಾಡೆ
ಹರ ಮೆಚ್ಚಿ ತಲೆದೂಗಿ ಹರಿಗೆ ತೋರಿಸುತಿದೆ
ಪುರಹರ ಪಾತ್ರಲೇಸೆಂದಾ    ೫೧

ಕೊಂಕಿದ ಕುರುಳ್ಗಳ ನಖದಿಂದ ತಿದ್ದುತ
ಬಿಂಕದ ನೆಲೆ ಮೊಲೆಯಲುಗೆ
ಅಂಕದ ಕಳೆನೇರಿದಂತೆ ನಿಂದುದು ಪಾತ್ರ
ಶಂಕರ ಹರ ಮೆಚ್ಚಲಾಟಾ   ೫೨

ತ್ಯಾಗದ ಹೊಮ್ಮಳೆಯಾಗಲು ಕರದವು
ನಾಗಭೂಷಣ ಬಂದನಾಗಿ
ಶರೀಗುರು ಕರುಣದೊಳುಡುಗೊರೆಯಾದವು
ಭೋಗದವರ ಮನದಣಿಯೇ            ೫೩

ಮೆಚ್ಚಿ ಪ್ರಸಾದವ ತಂದಿಟ್ಟ ತಮ್ಮಟಿ
ಉತ್ಸಾಹದಿಂದಲು ಬಂದೂ
ನಿಚ್ಚಲಿ ಪರಿಯಲ್ಲ ಹೊಸ ಪರಿಯೆನುತಲು
ಭಿಕ್ಷುಕ ಕರದನು ಹರನೂ     ೫೪

ಕಡೆಗಣ್ಣೆಲಿ ನೋಡಬಂದ ಜಂಗಮವನು
ಬಡಮನವನು ಬಿಟ್ಟು ಕರದಾ
ತಡವಯ್ಯಾ ಹಿಂದಕೆ ಹೋಗಬೇಕೆನುತಲು
ಮೃಡ ನಡಿಯಿಟ್ಟ ಬಾಗಿಲನೂ         ೫೫

ಮುತ್ತಿನ ಮದ್ದಳೆ ವೃತ್ತ ಕುಚಂಗಳು
ಚಿತ್ತ ನೆಟ್ಟವುಯೆಂದೆನುತಾ
ಮತ್ತಿವಳನು ಹರಿ ನೆರಹಿದೆಯಾದರೆ
ಹತ್ತು ಭಾರಿ ಹೊಗಳುವೆನೂ            ೫೬

ಒಳ್ಳೆಯನ್ನೊಳೆಯ ಚೆಲುವೆಯರೆಂಬಿರಿ
ಬಳ್ಳಿಸೊಂಡೆ ಹವಳ ಸರಿಯೇ
ಕುಳ್ಳಿರಲಾಗದುರೇಳು ಸೂಳೆಯರೊಳು
ಒಳ್ಳಿತಲ್ಲ ಹಿರಿಯರಿಗೇ     ೫೭

ಹಿರಿಯರು ತರುವಲ್ಲಿ ತನಗೆಗಳ ಮಾಡಿಯೆ
ವಿರಹಕೆ ಹಾಡುತಲಿರಲೂ
ಹಿರಿದು ಹೊತ್ತು ಹೋಗಿ ಕಳವು ತಪ್ಪಿತಯ್ಯಾ
ಹರ ನಡೆಮ ದಕೆಯೆಂದಾ     ೫೮

ಮೊರೆಯ ತಿರುಗುತ ಮುನಿದನು ಹರ ಕೂಡೆ
ತೊರು ಕೋರೆಯ ಹಿರಿಯರಲಿ
ಮೀರಿ ತಪ್ಪಿತು ಬುದ್ದಿನಾರಂದ ಬಾರದೆ
ಗಾರನಾದೆನೆಂದನು ಹರಿಯೂ           ೫೯

ಮೃಡನು ದುಗುಡದಿಂದ ನಡವುತಲಿರೆ ಬೇಗ
ಒಡೆಯರೆ ಬಳಲಿದಿರೆನುತಾ
ಕೊಡುತಿರ್ದ ಹರಿಯು-ಕರ್ಪೂರದ ವೀಳೆಯವನು
ಮಡಿಸಿ ಕೊಡುತ ಎಲೆಗಳನೂ           ೬೦

ಓರಗಲ್ಲ ಹರಿಯಂಗಡಿಯೊಳಗಣ ನರ ಕುಳ್ಳಿಪ್ಪ ಚಾವಡಿ
ಹಿರಿಯ ಹಳ್ಳಿಯರ ಬಾಗಿಲನೂ
ಹರನೊಳ ಲಾಯದ ಕುದುರೆಯ ನೋಡುತ
ನೆರವಿ ಸಂದಣಿಯೊಳು ಹೊಕ್ಕ           ೬೧

ಎಡದಲಿ ಮುತ್ತಿನ ಚಾಟಿ ನೋಡುತ
ಬಲದ ಹಜಾರದ ಮುಂದೆ
ನಡುವೆ ಭಂಡಾರದ ಮೆನೆಯನು ನೋಡುತ
ನಡದ ಹಿತ್ತಲ ಬಾಗಿಲೀಗೆ    ೬೨

ಬಾಗಿಲುಗಾವಲ ಹೆಗ್ಗಡೆಗಳ ಕಂಡು
ನಾಗಭೂಷಣ ಹರಿಗೆಂದಾ
ಹೋಗಬಾರದು ರಾಯನಾಜ್ಞೆಯ ಬಲುಹೆಯ್ಯ
ಆಗ ಹರೆಯೆ ತೊಲಗೆವೂ     ೬೩

ಕೋಟಲೆಗೊಳುತಲು ದಾಟಿದ ಹರನಾಗ
ಮೀಟದ ಕಲ್ಲ ಬಾಗಿಲನೂ
ಕೂಟದ ದಂಡಿಗೆ ಸಂದಣಿಯೊಳು ಬೇಗ
ದಾಟಿದ ಹರಿಹರರಾಗಾ       ೬೪

ಪರಿವಾರ ಕರಣಿಕರು ಮಂತ್ರಿಯು ಸಚಿವರ
ಕಳುಹಿದನೋಲಗದಿಂದಾ
ಇರುಳಲು ಗಾವಲ ಹಾಗೆ ರಾಯನಿಕ್ಕಲದೊಳು
ಉರಿತ ಬೊಂಬಾಳ ದೀವಿಗೆಯೂ       ೬೫

ಮೊರೆದವು ಹೆಗ್ಗಾಳೆ ಹರಿಯಿತು ಓಲಗ
ಅರಸು ಹೊಕ್ಕನು ಅರಮನೆಯಾ
ನೆರದಿಯ ಮಂದಿಯ ಸಂದಣಿಯೊಳು ಬೇಗ
ಹರ ಹೊಕ್ಕನೊಳ ಚಾವಡಿಯಾ        ೬೬

ಮುತ್ತು ಮಾಣಿಕ ನವರತ್ನಗಳಿಂದಲು
ತೆತ್ತಿಸಿ ಚಂದನಗಂಬಾ
ಮುತ್ತಿನ ಮೇಲುಕಟ್ಟು ಜಮುಖಾನಾವು ಹಾಸಿ
ಹತ್ತಿರೆ ಮಲಗು ಪಡೆಗಳೂ  ೬೭

ಚಿನ್ನಗಂಬದ ಠಾಣ ದೀವಿಗೆ ಬೆಳಕೆಲ್ಲ
ಉನ್ನತ ದಿನಕರನಂತೆ
ನಿನ್ನಾಣೆ ಹರಿಯೆ ಗಿರಿಯುಪ್ಪರಿಗೆಯ
ಹೊನ್ನ ಕಳಸವೇಳು ನೂರು೬೮

ಕಿರಿಯಪ್ಪರಿಗೆಯ ಮೇಲೆನು ತೆರಗಿಲ್ಲ
ಮೆರೆತುವಲಿವೆ ಹೊನ್ನ ಕಳಸಾ
ಕುರುಹೊಗೊಂಬರೆ ಹರಿಯಿವಗಾರು ಸರಿಯಲ್ಲ
ಮರೆಗೊಂಡು ನಡೆಯಂದ ಹರಿಯೂ  ೬೯

ಇರುಳಿನ ಬಾಲಿಲು ಇಕ್ಕದ ಮುನ್ನವೆ
ತಿರುಗುವ ಪಹರಿಗೆ ಮುನ್ನ
ಖರಬೇಗದಿಂದ ಶೃಂಗಾರದ ತೋಪಿಗೆ
ಹರಿಹರ ಬಂದಾಗ ಹೊಕ್ಕಾ  ೭೦

ನೋಡಿ ನಡಿದರು ತೋಪಿನೊಳಗಿಪ್ಪ
ಮೂಡು ಮಲ್ಲಿಗೆಯರಳ
ನಿಡುತಿರ್ದವು ಪರಿಮಳವ ಸಂಪಿಗೆ ಪುಷ್ಪ
ಈಡಾಡುವ ಪಚ್ಚೆದೇವನಾ  ೭೧

ನಾಂದೆ ವರ್ತವು ಸುರಹೊನ್ನೆ ಪಾಡಳಿ
ಬಂದುಗೆ ಜಾಜಿ ಹೊಂಬಾಳೆ
ಕೆಂದಾವರೆ ಕೊಳನೊಳಗೆ ಪದರಿಯನು
ಮುಂದಕೆ ಕಂಡನು ಬಗೆ ಹೂವಾ        ೭೨

ಪರಿಮಳ ಪುಷ್ಪಗಳೊಳಗೆ ಉತ್ತಮವೆಂದು
ಹರ ಹೇಳೆ ಹೊಂಗೇದೆಗೆಯಾ
ಹಿರಿದಾಗಿ ಸಭೆಯೊಳು ನೊರಗಿದರಿಂದಲು
ನಮಗೆ ಸಲ್ಲವೆಂದ ಹರನೂ೭೩

ಸೀಳಿನ ಕಲ್ಲಿನ ಬಾವಿಯ ಮೆಟ್ಟಿಯೆ
ಏಳಿಗೆಯನು ಬೆಳೆಗಾಗಾ
ಹೇಳುವೆ ಭಿನ್ನ ಫಲದ ಗುಣಗಳ
ಬಾಳಾಕ್ಷ ನೀನು ಚಿತ್ತೈಸೂ   ೭೪

ಕಡಿದು ತುಂಡಿಸಿ ತನ್ನ ಕಾಸಿ ಬೇಯಿಸಿದರೆ
ಕೊಡುವುದು ತನ್ನಯ ಗುಣವಾ
ಒಡನೆಯುಯಲ್ಲದೆ ಉತ್ತಮ ಕಷ್ಟವು
ಕಡದಾಗಿ ಬೆಳೆದ ಹೆದ್ದುರಿಚೆ೭೫

ಬಂದು ಹೊಕ್ಕನು ಹರ ಜಂಬು ನೀರಲ ತೋಪ
ಮುಂದಣ ದ್ರಾಕ್ಷೆ ಮಂಟಪವಾ
ಚಂದನವಾಗಿಲು ದಾಳಿಂಬ ಮಾದಲ ಬೇವು
ಕೆಂದೆಂಗು ನಿಂಬೆ ಕಿತ್ತಾಳೆಯೂ           ೭೬

ನಾರಿಯರ ಕರ್ಣ ಶೃಂಗಾರವಾಗಿಪ್ಪ
ನರೇಂದ್ರ ತಾಳಾ ಮರನೂ
ಆರನಾದರೆ ಬೇಡಿ ಕೈಯ್ಯನಾನು ಹರಂತೆ
ನೀಡಿದ ಕೈಯ್ಯ ಬೇನೆಗಳೂ  ೭೭

ಕರದವ ದಾನಿಗಳಂತೆ ತೋರುತಲಿಹ
ನೆರದಿಪ್ಪ ಫಲದ ತೆಂಗುಗಳೂ
ಅರಿದೆನಿಸಿಯೆ ಪುಷ್ಪದಿಲ್ಲದೆ ಫಲವಹ
ಪರಿಗಳ ಹಲಸುಗಳೂ         ೭೮

ಹಲಕಾಲ ಫಲವನು ಕಾದಿರ್ದ ಪಕ್ಷಿಗೆ
ಫಲದೆಲೆಯಲಿ ಬಯಲೆಂಬಾ
ಎಲೆಗೊಂದು ಕಾಯಾಗಿ ಫಲವ ತೋರುತಲಿಪ್ಪ
ಎಲವದ ಮರದ ಸಾಲುಗಳೂ           ೭೯

ಕೋರಿದವಂಕುರ ತೊಡರಿ ಕೆಂದಳಿರನು
ಹೇರಿದ ನೆನೆಯು ಹೂ ಮಿಡಿಯಾ
ಮೀರದ ಹಣ್ಣನು ಕದುಕುವ ಗಿಣಿಗಳೂ
ಯೇರಿಪ್ಪ ಮಾವಿನ ಮರಣೂ          ೮೦

ಹಸಿರೆಲೆ ರಸದೊಳೆ ರಸ ದಾಳಿಯ ಹಣ್ಣು
ಶಶಿಧರ ಕಾಣುತಲೆಂದ
ವಸುಧೆಯೊಳತಿ ಸತ್ಯ ತಪದಿವ್ಯರಂತೆ
ಸಸಿ ಮಾವಿನ ಸಾಲುಗಳೂ   ೮೧

ಮರುಗದವನ ಮಡಿಬೆಟ್ಟದಾವರೆ ಮೊಲ್ಲೆ
ನೆರೆದಿಪ್ಪ ಶೋಭೆಯ ಸಾಲೂ
ಪರಿಮಳ ಹೊಂಬಾಳೆ ಅಡಕೆಯ ಮರಗಳು
ತೊಡರಿಪ್ಪ ನಾಗವಳ್ಳಿಗಳೂ            ೮೨

ಕುರುಹಿನ ಸುತ್ತಣ ಲತಿವಳ್ಳಿ ನೋಡುತ
ಹೊರವಂಡ ಬೇಕೆಂದ ಹರಿಯೂ
ಹೊರವಂಡರಾಲಿನ್ನು ಸುಳಿಹದರಡಗಿತು
ಮರೆದರು ಹರಹರಿ ಭಯವಾ           ೮೩

ಮಜ್ಜನದೇ ಹರ ಭೋಜನವನು ಮಾಡಿ
ಸಜ್ಜೆಯ ಗೃಹವ ಸಾರಿದರೂ
ಸಜ್ಜನ ಸತಿಯರ ತೋಳ ಮೇಲೊರಗಿದ
ಪ್ರಜ್ವಲ ಮಂಚದ ಮೇಲೆ    ೮೪

ಬಿದ್ದನು ಕಾಮನ ಬಲೆಯೊಳು ರಾಯನು
ಮುದ್ದು ಮೊಗದ ರಾಣಿಯರಾ
ಎದ್ದನಾದರೆ ಕನ್ನವಿಕ್ಕಲು ಕೂಡದು
ಹೊದ್ದಬೇಕೆಂದನು ಹರಿಯೂ          ೮೫

ಎದ್ದನು ಹರನಾಗ ಶೃಂಗಾರ ತೋಪಿಂದ
ಹೊದ್ದಿದ ಹೊರಗಣ ಮುಗಿಲಾ
ಗದ್ದುಗೆ ಗಲ್ಲನು ಮೆಟ್ಟುತರಮನೆ
ಉದ್ದಿಯ ಕೋಟಿಯನಿಳಿದಾ            ೮೬

ಕತ್ತಲೆ ಗೊಂದಿಯಲಾರು ಕಾಣದ ಹಾಗೆ
ಹಿತ್ತಲು ಹೊಕ್ಕರು ಮರೆಯಾ
ಸುತ್ತಲು ಬಾಣಸದ ಮಜ್ಜನದ ಮನೆಯ
ವೊತ್ತಿಲಿದೆ ಹಾರ ಮನೆಯೂ            ೮೭

ಸಜ್ಜಿಯ ಗೃಹದಲಿ ಚಿನ್ನದ ಭಂಡಾರ
ಸಜ್ಜಕ ಭೋಜನಶಾಲೆ
ಅಜ್ಜಜ್ಜಗಾಲದ ಸೆಜ್ಜೆಯ ಮನೆಯೆಂದು
ಹೆಜ್ಜೆಯನಿಟ್ಟನು ಹರನೂ  ೮೮

ಎಡದಲ್ಲಿ ಬಲದಲ್ಲಿ ರಾಣಿವಾಸದ ಕೇರಿ
ಮೃಡನೆ ಚಿತ್ತೈಸಿ ನೋಡೆನುತಾ
ಕಡದ ಮುತ್ತದ ಸಿದ್ಧ ಪಚ್ಚೆಯ ಕಂಬದ
ತೊಡಿಗೆಯ ಮಲಗು ಮೊಡೆಗಳೂ      ೮೯

ವಿನಿಯೋಗ ಸ್ತ್ರೀಯರ ವೋಲಗ ಚಾವಡಿ
ಮನಸಾರಿ ನೋಡು ನೋಡೆನುತಾ
ತನಗೆ ನಾಟಕ ಶಾಲೆ ಸಂಭ್ರಮ ಘನವೆಂದು
ಮದನಪಿತಗೆ ತೋರಿದನೂ  ೯೦

ಏನ ಕಂಡೆ ಹರ ನೀನು ಸಂಪತ್ತನು
ತಾನಿವನಾರೆಂದರಿಯಾ
ತಾನು ಕುಂಬಳದ ಕಾಯೊಳಗೆ ಹುಟ್ಟಿದನಿವ
ಹೀನವಲ್ಲವು ರುದ್ರರಾಯಾ            ೯೧

ನಿಂಬಿಗಿಂತ ಮುನ್ನ ಹುಟ್ಟಿದ ರುದ್ರರಾಯ
ಜಂಬು ದ್ವೀಪಕೆ ತಾನೊಡೆಯಾ
ಕೊಂಬನು ಕಪ್ಪವ ಅರಿರಾಯರ ಕೈಯ್ಯ
ಶಂಭು ಚಿತ್ತೈಸು ಬಿನ್ನಪವಾ            ೯೨

ಇವನು ಹುಟ್ಟಿದ ರುದ್ರರಾಯನ ಬಸುರಲ್ಲಿ
ಭುವನದಿ ಗಣಪತಿರಾಯಾ
ಇವಗೆ ಶೀಲಾಚಾರವುಂಟೇ ಹರಿ ಹೇಳು
ಭಯದಿ ಶಿವನೆ ನಿಮ್ಮಾಣೆ    ೯೩

ಕದನಕೆ ಚೌಪಟ ಮಲ್ಲನು ಧೀರನು
ಮದಮದ ಮತ್ಸರವರಿಯಾ
ಹೆದರುವ ಶಿವಭಕ್ತಿಯುಳ್ಳವರಲ್ಲಿಗೆ
ಸದನನು ಅರಿ ರಾಯರುಗಳಾ            ೯೪

ತಂದೆಗಿಂತಲಿವ ಅಧಿಕ ದಾನಂಗಳ
ಬಂದ ಹಿರಿಯರಿಗೆ ಮಾಡುವನೂ
ನಿಂದಿಸಿ ನುಡಿಯನು ಗುರು ಹಿರಿಯರನಿವ
ನಂದಿವಾಹನನೆ ಚಿತ್ತೈಸೂ    ೯೫

ಹಿರಿದಾ ಪಾಪವು ನಾವಿಲ್ಲಿ ಕದ್ದಾಗ
ಹರಿ ಹೋಹನೇಳೆಂದ ಹರನೂ
ಹರನೆ ಚಿತ್ತೈಸಯ್ಯ ಕಳಲೊಲ್ಲದೆ ಹೋಗೆ
ಹೆದರಿದರೆಂಬ ನಾರದನೂ    ೯೬

ವಿಪರೀತವಾಗಿಯೆ ನಗುವನು ನಾರಂದ
ಅಪಕೀರ್ತಿ ಕೈಲಾಸದೊಳಗೆ
ತ್ರಿಪುರಾರಿ ಚಿತ್ತೈಸು ಮುಂದಣ ಮನೆಯಲಿ
ಜಿಪಸುವರ್ಕ ಮಂತ್ರವನೂ   ೯೭

ಅರಮನೆಯೊಳಗನು ತಿರುಗಿ ನೋಡಿಯೆ ಹರ
ಹಿರಿದು ಸಂಭ್ರಮ ಘನವೆನುತಾ
ಭರದಿಂದ ಕನ್ನಕೆ ಅನುವಾದ ಸಂಧಿಗೆ
ಬರೆದನೂ ಪದನೂ ತೊಂಬತ್ತೆಂಟೂ ೯೮

ಅಂತು ಸಂಧಿ ೯ಕ್ಕಂ ಪದನು ೫೯೯ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ