ಸಂಧಿ೧೩

ಈರೇ(ಳು)ಭೂವನದ ಒಡೆಯನೆಂದರಿಯದೆ
ಓರುಗಲ್ಲ ರಾಯಗಣಪಾ
ಭೋರನೆ ಹುಯ್ಯಲ ಹೋಹೆನು ತಾನೆಂದು
ವಾರುವಗಳ ತೆಗೆಯೆಂದಾ    ೧

ಎಕ್ಕಟಿಗರು ಬಲವಂತ ಸಾಯಕರ
ರಕ್ಕಸ ಖಾನಮಲ್ಲುಕರಾ
ಹೊಕ್ಕು ಹುಯ್ಯಲ ಹಿಂದು ಮುಂದು ಮಾಡುವರನು
ದಿಕ್ಕನೆ ಕರೆಯೊ ಪಾಂಡ್ಯರನೂ          ೨

ಕರೆದರು ಕನೋಜಿ ಲಾಳ ಪಹರಕರ
ಕರದರು ತುಳುವ ನಾಯರಾ
ಕರದರು ಕಟ್ಟಿಗೆಯವರು ಸಾರುತಲಿದ್ದ
ಅರಸು ಮಕ್ಕಳ ಕರವುತಲಿ    ೩

ಮನ್ನೆಯರು ಮಂಡಳಿಕರಿಗಲ್ಲಲಿ
ಮುನ್ನವೆ ಸಾರಿ ಹೇಳುತಲಿ
ಕನ್ನವ ನಿಕ್ಕಿದರರಸಿನ ಮನೆಯಲಿ
ಚೆನ್ನಾಗಿ ಸತಿಯಾದರೆನುತಾ೪

ಹಾಯ್ದು ನೂಕುತ ಕಟ್ಟಿಗೆಕಾರರು ಬಂದು
ಬೈಯ್ಯುತ ಹಿಂದುಳಿದವರಾ
ಭಯಗೊಂಡು ಬಂದಿತು ಮನ್ನೆಯ ಪೈರು
ಹೊಯ್ವಸನ್ನೆಯ ತಮ್ಮಟಿಕೆ           ೫

ಮಂಡಳಿಕರು ಮನ್ನೆಯ ಪೈಕರುಗಳೆಲ್ಲ
ತಂಡ ತಂಡದಿ ನಡತಂದೂ
ಕಂಡರು ತನತನೆಗೆಲ್ಲರು ಬಂದಾಗ
ಮಂಡಲೆ ಶರಣ ಗಣಪತಿಯಾ           ೬

ಚಿನ್ನ ಬೊಂಬುಳಿ ಶಂಖ ಚಿತ್ರಿಕಗಹಳೆಯ
ಹೊನ್ನಸಿನಕ ವಜ್ರಾಂಗಿ
ಚೆನ್ನಾಗಿ ಚಾಕು ರಂಗವ ಜೋಡು ಮಾಡಿತು
ಮನ್ನೆಯ ಮಂಡಳಿಕರೆಲ್ಲಾ೭

ಉಡಿಯ ಬಾವುಲಿಗಳು ತೊಡಕುಹಿರಾವಳಿ
ನಡುಸುತ್ತು ದೇವಗಿರಿದಟ್ಟಿ
ಉಡಿಯಲು ಅಳವಟ್ಟ ಹೊನ್ನ ಮೋಹಗಳ
ಕಡು ಚಲುವಿನ ಕಠಾರಿ        ೮

ಮಿಸುನಿಯ ತಡಗಿನ ಕಟ್ಟಿನ ಈಟಿಯು
ಮಸದ ಕಬ್ಬಿಣದ ಕೋಲುಗಳಾ
ಹೆಸರ ಹೇಳುವ ಪೈಕ ಕೊಟ್ಟದ ಬಂಟರು
ಮಸಗಿ ಸಮ್ಮುಖವಾದರರಸಾ          ೯

ಸೆರಗಿನ ಚಿನ್ನಧಾರೆಯ ಸೀರೆಯನುಟ್ಟು
ಮೆರೆವ ಚೆನ್ನನ ಸರವಿಕ್ಕೀ
ಬರಿಯಸಿರು ಮುತ್ತಿನ ಕಡುಕುಗಳಿಕ್ಕಿ
ತುರುಬಿ ಕಟ್ಟಿನ ಬಿಲ್ಲ ಹಿಡಿದೂ       ೧೦

ಚಿನ್ನದ ಹಿಳುಕಿನ ಹೆದೆಯವಳಡಿಸಿತು
ಚೆನ್ನಿಲಿ ಮೂಡಿಗೆ ಸಂಗೀತಾ
ಮನ್ನಣೆಯ ಬೇಡ ಪೈಕವು ಬಂದಿತು
ಚೆನ್ನಾಗಿ ಸಮ್ಮುಖವಾಗಿ     ೧೧

ಖಡೆಯ ಪೆಂಡೆಯ ಕಾಲಕೊರಳ ಪದಕದಾರ
ಅಡಕೆ ವಣ್ಣಿಗೆದ್ದಟ್ಟಿಯುಟ್ಟೂ
ಉಡಿಯಲಿ ಬದ್ದುಗೆ ದಾರವುತ್ತರಿಗೆಯ
ಕಡು ಚಲುವಿನ ತೋಳಾಕ್ಷೆ   ೧೨

ಪೊಟ್ಟಿ ಕಠಾರಿಯ ಕಟ್ಟಿನ ಬಿಲ್ಲನು
ಮೀಂಟೆಯಂಬು ಹೊಸ ಕಡಗಾ
ನೆಟ್ಟನೆ ರಾಯನ ಸಮ್ಮುಖವಾದರು
ದಿಟ್ಟರೊಕ್ಕಲಿಗ ನಾಯಕರೂ           ೧೩

ನೊಸಲ ಶ್ರೀಗಂಧದದಸಿಯ ಕಠಾರಿಯ
ಯೆಸುಳ ಬದ್ದುಗೆಯ ದಾರಗಳಾ
ವಸುಧೀಶ ಗಣಪತಿರಾಯನೋಲಗಕಾಗಿ
ಯೆಸಗಿ ಬಂದರು ತರುವಕ್ಕಳೂ         ೧೪

ಎಡಗೈಯ್ಯ ಹಸ್ತದ ಹಿಡಿದ ಹರಿಗೆ ಮೇಲೆ
ತೊಡರಿನ ಬಿರುದಿನ ಚೌರಿ
ಹಿಡಿದ ಕಠಾರಿಯ ಹಾಹೆಯ ಮೊನೆಗಳ
ಕಡುಗದ ವೀರನಾಯಕರೂ  ೧೫

ಜಡಿದ ಬಾವುಲಿ ಕಾಲಖಡೆಯದ ರಭಸದಿ
ನಡದು ಬಂದರು ರಾಯನಿದಿರಾ
ಗಡಿಯವರರಸು ಮಕ್ಕಳು ಕುಳ್ಳಿದ್ದರು
ಒಡೆಯಗೆ ಕೈ ಮುಗಿವುತಲಿ  ೧೬

ಒಟ್ಟಿರ್ದ ಶ್ರೀಗಂಧ ಎದೆಯ ಭುಜದ ಮೇಲೆ
ಬಟ್ಟಿಯ ತುರುಬಿಟ್ಟ ಬೊಟ್ಟು
ಬೆಟ್ಟದುದಿಯ ಸಬಳನಲವಕ್ಕ ತೆಲುಗರು
ಸೃಷ್ಟಿಪತಿಯ ಕಂಡರಾಗ     ೧೭

ಕರಿಯ ಕಾಳಿಕವಿಟ್ಟ ಹರಿಗೆಯ ಹಿಡಿದರು
ಪರಿವಾರವರೊಂದು ಕೋಟಿ
ದುರದಿರ ಬಸವನ ಹರಿಗೆಯ ಹಿಡಿದರು
ಪರಿವಾರದವರೊಂದು ಕೋಟಿ          ೧೮

ಅಚ್ಚ ಪಚ್ಚಾಳೆಯ ಹರಿಗೆಯ ಹಿಡಿದರು
ನಿಚ್ಚಳ ಶಂಖದ ಹರಿಗೆ
ಅಚ್ಚು ಮೆಚ್ಚಿನ ಚವರಗೊಂಡೆಯು x x ರು
ಚೆಚ್ಚರದೊಳು ಕಂಡರಸಾ    ೧೯

ಲಾಯದ ತೇಜಿಯ ಜೋಡು ಮಾಡಲೆಂದು
ರಾಯ ಹೊಯ್ಯಲ ಹೋಹೆನೆನುತಾ
ಆಯತವನು ಮಾಡಿ ತೇಜಿ ಸಾಂಬ್ರಾಣಿಯ
ಬಾಯಿಗಿಕ್ಕಿ x x x x ಯಾ  ೨೦

ಕಡಿವಾಣ ಕಬ್ಬಿಯ ತೊಡಚಿ ಹೂಡುತಲು
ಎಡದ ಕೈಯಲು ಬೆನ್ನ ತಡಹೀ
ತಡಿಗಳನೇರಿಸಿ ಬಿಗುವನು ಬಿಗಿದರು
ಕಡು ಬೇಗ ಜೋಡು ಮಾಡುತಲೀ     ೨೧

ಅಯಿವತ್ತು ಸಾವಿರ ಕುದುರೆಗೆ ಜೋಡಿಕ್ಕಿ
ಕೈಯೊಡನಾಗು ಮಾಡುತಲಿ
ಒಯ್ಯನೆ ಮಂಡಿಸೆ ಚೌಕದಿ ಕುಣಿದವು
ಹುಯ್ಯಲ ಹೋಹ ಸಂಭ್ರಮಕೇ        ೨೨

ಮೆಟ್ಟಿ ಪಾವುಡಗಳ ಕುಡಿ ಚಮ್ಮಟಿಗೆಯ
ಮುಟ್ಟಿಸಿ ಮಡದ ಲೊತ್ತಿದರೆ
ಕಟ್ಟುಗ್ರಕೋಪದಿ ಕಡೆಲೆಂಘಿಸುತಲು
ದಟ್ಟಸಿಟ್ಟವು ಕುದುರೆ        ೨೩

ಇಕ್ಕಿದ ಮೊಗರಂಬ ಮೊಗದ ಕನ್ನಡಿಗಳ
ಹೊಕ್ಕಳ ಗಂಟಿ ಹಕ್ಕರಿಕೇ
ಇಕ್ಕಲು ದಾಳಿಯ ಹನ್ನೆರಡು ಗಾವುದ
ಹೊಕ್ಕು ತಿರುಗುವ ಸಾಂಬ್ರಾಣಿ         ೨೪

ಮದಗಜ ಮಸ್ತಕ ಶೂಲದ ಬಿರುದಿನ
ಇದಿರಾಗಿ ವೊದಗುವ ತೇಜಿ
ಪದವಿಟ್ಟು ಹನ್ನೆರಡು ಗಾವುದ ದಾರಿಯ
ಕದನ ಕೊದಗಿ ತಿರುಗುವವೂ೨೫

ಭಂಗಿಯ ಹುಡಿಯನೆ ಮುಕ್ಕಿಯೆ ತುರುಕರು
ಗಂಗ ಸಾರಗಳನು ಕುಡಿದೂ
ಸಿಂಗಾರವೇಕೆ ತಾಯಿ ಪೈರಣಿ ದೂವಟ
ಬಂಗಾರವಿಕ್ಕುವದಿಲ್ಲಾ      ೨೬

ಹಿಡಿದ ಸಿಂಗಾಡಿಯು ಕಾಲ ಕುಪಪಸಗಳು
ಒಡನಡಲಿದರು ತೇಜಿಗಳಾ
ನಡೆ ತಂದು ರಾಯನ ಸಮ್ಮುಖವಾದರು
ಕಡುಗಲಿ ತುರುಕ ರಾವುತರೂ           ೨೭

ತೆಗೆದು ಹಲ್ಲಣಿಸಿತು ತೇಜಿ ಸಾಂಭ್ರಾಣಿಯ
ದುಗುಣದ ಜಂಬ ನೀಲಗಳಾ
ಬಗಿದು ನೆಲನ ಹೋಗುವ ಬಿಳಿಯ ಕತ್ತಳಗಳ
ಬಿಗಿದು ಬೀಸಿದರು ಚೌವುರಿಗಳಾ        ೨೮

ಕಂಕಣ ಕಣಬನು ಕುಂಕುಮ ಬೊಲ್ಲನು
ಕೆಂಪಿನ ಜನ್ನಪವಳೆಯಾ
ಲೆಂಕರು ತೆಗೆದರು ಕಂಬಲೆ ಜಂಬಿಯ
ಭೊಂಕನೆ ಪಚ್ಚೆನೀಲಗಳಾ    ೨೯

ಆಗ ಹಲ್ಲಣಿಸಿತು ಕಲಹತಿ ಸಾಂಬ್ರಾಣಿ
ಬೇಗದಿ ಸಂಜೋಗ ಸಂಗೀತಾ
ಹಾಗೆ ಒಂಭತ್ತು ಲಕ್ಷ ತುರುಕಗುದುರೆ ಖಾನ
ರಾಗ ಸಮ್ಮುಖವಾದರರಸಾ            ೩೦

ಸಾರಂಗ ಪಾಣಿವಟ್ಟ ನಳ ಪಿಂಗಳ ಶುಭ್ರ
ಕಾರ ಬೊಲ್ಲನು ಚಿತ್ರಾಂಗಿ
ಚೇರನು ಮಂಗಳ ಕತ್ತಳ ಬೋರನ್ನು
ಆರು ವರ್ಣದವಾರುವನೂ  ೩೧

ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ
ದಿಕ್ಕು ನಾಲ್ಕು ದೆಸೆಯೊಳಗೆ
ಸುತ್ತಣ ರಾಯರು ಕಪ್ಪವ ತೆರುವರು
ಕ್ಷತ್ರಿಯ ಗಣಪ ಭೂಪತಿಗೆ    ೩೨

ಅತಿ ಬಿರುದಿನ ಪರರಾಯ ರಾವುತರನು
ಶಿರವನರಿದು ಚೆಂಡಾಡಿ
ದುರದೊಳು ತಮಗಾರು ಸರಿಯಿಲ್ಲವೆಂಬದು
ಕರದ ಖಡ್ಗದ ರಾವುತರು    ೩೩

ನವರತ್ನ ಖಚಿತದ ಹೊನ್ನ ಹಲ್ಲಣಗಳ
ಭವನಕೆ ಬೆಲೆ ಮುಗಿಲೆಂಬಾ
ಅವನೀಶ ಸೇರುವ ವಾರುವಂಗಳಿಗೆಲ್ಲ
ಹವಣಿಸಿ ಜೋಡು ಮಾಡಿದವೂ        ೩೪

ಆನೆಗೆ ರಂಚಿಗೆ ಹಣಿರೋ ಬೇಗೆಂದು
ತಾನೆ ಹೇಳಿದ ಭೂಮಿಪಾಲಾ
ತಾನಾಗ ಕರಿಘಟಿ ಹನ್ನೆರುಡು ಸಾವಿರ
ಏನು ಹೇಳುವೆ ಶೃಂಗಾರವಾ೩೫

ಕೊರಳ ಜೊತೆಗೆ ಹಾರೆಗಟ್ಟಿಗೆ ಹೊರಜೆಗೆ
ಪರಿ ಪರಿಮಿಸುನಿಯ ಕೆಲಸಾ
ಹಿರಿಯರಂಚಿಗೆ ಹೊನ್ನ ಪಂಚ ಘಂಟಿಗಳಿಂದ
ಸಿರಿಯ ಸಿಂಗಾರ ಭಾಸಿಂಗವೂ           ೩೬

ಪೃಥ್ವೀಶ ಗಣಪತಿಯೇರುವ ಆನೆಗೆ
ತೆತ್ತಿಸಿದವು ಸೂಸಕವೂ
ಸುತ್ತಲು ಬಿಗಿದು ಸೆಡಕು ಚೌರಿಗಳನು
ಚಿತ್ರಿಕರು ರಚಿಸಿದರೂ         ೩೭

ಗಂಧ ಕಸ್ತೂರಿಗಳ ತಂದುವೊಟ್ಟಿದ ರಾಗ
ಚಂದವಾಗಿಯೆ ಮದಕರಿಗೇ
ನಿಂದವು ಮುತ್ತಿನ ಸತ್ತಿಗೆ ಚೆಲುವಾಗಿ
ಅಂದು ಪಟ್ಟದಾನೆಗಳಿಗೇ    ೩೮

ಹೋದಲ್ಲಿ ರಣ ಸೂರಕಾರರು ಜೊದ್ದರು
ಕೋದರು ಕನಕದ ಜೋಡಾ
ಮೇದಿನಿಯೊಳು ತಮಗಿದಿರಾಹರಿಲ್ಲೆಂದು
ಹೊಯ್ದಯೇರಿದರು ಆನೆಗಳಾ         ೩೯

ಹಿಡಿಶ ಅಂಕುಶ ಹಾರೆ ಗಟ್ಟಿಗೆ ಸಹಿತಲು
ಕೊಡಲಿಗತ್ತಿ ಹೆಗಲಲ್ಲಿ
ನಡದು ಸಮ್ಮುಖವಾದರು ಸಮಜೊದ್ದರು
ಹೊಡವಡವುಡೆ ಆನೆ ಸಹಿತಾ            ೪೦

ಗಣಪತಿರಾಯನ ಪರಿವಾರ ಕೂಡಿತು
ಪರಿಕಿಸಿ ನೋಡಬೇಕೆನುತಾ
ತರಿಸಿ ಹಾಕಿಸುವನೊಂಭತ್ತು ಬಂಡಿ ಬದಿರನು
ಹರಹಿ ಹೆಬ್ಬಾಗಿಲೊಳಗೇ    ೪೧

ಆನೆ ಕುದುರೆ ಪರಿವಾರವು ಮೆಟ್ಟಿಯೆ
ತಾನಾಗ ಹುಡಿ ಹುಡಿಯಾಗೆ
ಸೇನೆ ಕೂಡಿತೆಂದುರಿತನು ರಾಯನು
ಏನ ಹೇಳುವೆನು ಸಂಭ್ರಮವಾ           ೪೨

ಹಲವು ಪರಿಯ ಹಲವು ವರ್ಣದ ಕುದುರೆಯ
ಕೆಲದಲಿಕ್ಕೆಲದ ಲಾಯದಲಿ
ಮಲವ ವೈರಿಯ ಗಂಡ ಹೆಸರುಳ್ಳ ಹಸಣವು
ಚೆಲುವ ಸತ್ತಿಗೆ ಸಾವಿರವೂ   ೪೩

ಉತ್ತಮ ಸಾಂಬ್ರಾಣಿ ಮೊಳಲಾಯದೊಳಗಿಂತ
ಮತ್ತೆ ಹನ್ನೆರಡು ಸಾವಿರವೂ
ಮೂತ್ತದ ಮನ್ನಣಿ ಪರಿವಾರ ಪೈಕವ
ಮತ್ತೆ ಲೆಕ್ಕವ ಬಲ್ಲರಾರೂ೪೪

ಗಿರಿಗಳ ಚೆಂಡಾಡಿ ಕರಿದಂತ ಮುರಿವರು
ಹರಿವ ಸಿಂಹವ ಕಟ್ಟುತಿಹರೂ
ಧುರಧಿರ ನವಕೋಟಿ ನಾಯಕರುಂಟಯ್ಯ
ಧರಣೀಶ ಗಣಪತರಾಯನಿಗೇ           ೪೫

ನಡದು ಬಪ್ಪವು ಮದಗಜಗಳ ಮುಂದೆಯು
ಹೊಡವಡವುಡೆ ಸಾವಿರವೂ
ಒಡೆನೆ ಬೊಗ್ಗಿನ ಹರೆಗಳಾರು ಸಾವಿರ
ಕಡೆಯಿಲ್ಲ ಬಿಟ್ಟಿಯ ಹರಗೆ೪೬

ಬಿರುದಿನ ಹರೆಗಳ ಮೊದಲ ನಾಯಕವಾಡಿ
ಬರಹತ್ತೆಂಟೂ ಸಾವಿರವೂ
ಮಾರುವ ತಂಬಟ ನಾಗಸ್ವರಗಳನೂದುವ
ಕುದುರೆಯೊಂಬತ್ತು ಸಾವಿರವೂ         ೪೭

ವಟ್ಟಿಯ ನಿಸಾಳ ಒಂಬತ್ತು ಸಾವಿರ
ಕಟ್ಟಳೆಯಿಲ್ಲ ಚೆಂಬಕಗೆ
ಬಿಟ್ಟವರೆ ಕೈಸಾಳ ಜಾಗಟಿಗಳ
ದೃಷ್ಟ ಮೂವತ್ತು ಸಾವಿರವೂ         ೪೮

ಚಿನ್ನಬೊಂಬುಳಿ ಚಿತ್ರಗಾಳೆಗಳೂದುವ
ರಿನ್ನಐವತ್ತು ಸಾವಿರವೂ
ಹೊನ್ನಕಟ್ಟಿಕ್ಕಿದ ಕೊಂಬುಗಳೂದುವ
ರಿನ್ನರುವತ್ತು ಸಾವಿರವೂ    ೪೯

ಹೆಗ್ಗಾಳೆ ಕೊಳಲು ಕರಿಯ ನಿಸ್ಸಾಳವು
ದಿಗ್ಗಜದರಸುಮಕ್ಕಳಿಗೆ
ಒಗ್ಗಡೆಯದ ಮಂದಿ ಮನ್ನಣೆ ಪೈಕವ
ಗಾಗಿ ನೋಡುವನರಸೂ      ೫೦

ಅರಿಬಿರಿದಿನ ಚೋಳ ಪಾಂಡ್ಯರನೆಲ್ಲರ
ತರುವಕ್ಕಳೆಕ್ಕಟಿಗರನೂ
ತಿರುಗಿ ನೋಡುತ ತುಳುವ ಪಾಲಕರೆಲ್ಲರ
ಹಿರಿದು ಚಿಂತಿಸಿ ರಾಯನುಡಿದಾ        ೫೧

ಶಶಿಕುಲದೀಪರ ವಸುದೀಶ ರಾಯನು
ವಿಸುಮಯ ಬಡುತಲಿಂತೆಂದಾ
ಹೆಸರ ಕೇಳಿತಿಲ್ಲ ಕಳ್ಳರೆಂಬುದ ನಾನು
ಹೊಸತ ಕಂಡೆನು ಕನ್ನಿಗಳಾ  ೫೨

ಛಪ್ಪನ್ನ ದೇಶದ ಒಳಗೆಲ್ಲರಸಿಯೆ
ತಪ್ಪದೆ ಕಳ್ಳರ ಹಿಡಿದೂ
ದರ್ಪವ ಮುರಿದೀಗ ತಲೆಗಡಿಸದಿದ್ದರೆ
ಅಪ್ಪ ರುದ್ರಗೆ ಹುಟ್ಟೆನೆಂದಾ           ೫೩

ಒಡೆಯನ ಬಿರು ನುಡಿಗೇಳುತ ಪರಿವಾರ
ಒಡನೆ ಮಾಡಿತು ಭಾಷೆಗಳಾ
ಪೊಡವಿ ಜಲವ ಬಗಿದಡಗಲಿ ಕಳ್ಳರು
ಹಿಡಿದೊಪ್ಪಿಸುವೆವೀಗಲೆನುತಾ         ೫೪

ಸೂರಿಯ ನಾರಂದ ಶಶಿ ತಿರುಗುತಲಿಪ್ಪ
ಮೇರುವಿನ ನಾಲ್ದೆಸೆಯಾ
ವಾರುಧಿ ನಾಲ್ಕರ ನಡುವೆಯು ಕಳ್ಳರ
ಆವ ರಾಯರು ಕೊಡದಿರಲೂ           ೫೫

ಹೆಮ್ಮೆಗಾದರು ಮೃಡಕಳ್ಳ ತಾನಾದರೆ
ಹೊಮ್ಮುಗೆಡಿಸಿ ಹಿಡಿತಂದೂ
ನಿಮ್ಮ ವಶಕೆ ನಾವು ಒಪ್ಪಿಸದಿದ್ದಡೆ
ನಮ್ಮ ನಾಲಗೆಯ ಕೊಯಿಸು            ೫೬

ಅಕ್ಷಿ ಮೂರುಳ್ಳಾತ ಕುಕ್ಷಿಯೊಳಿಟ್ಟೊಮ್ಮೆ
ನಿಕ್ಷೇಪಿಸೆ ಕಳ್ಳರನೂ
ಈ ಕ್ಷಣದೊಳು ಹೋಗಿ ಹಿಡಿತಾರದಿದ್ದರೆ
ದೀಕ್ಷೆ ಗುರುವಿಗಪರಾಧೀ     ೫೭

ರುದ್ರರಾಯನ ಸುತ ನೀನು ಚಿತ್ತೈಸೆಂದು
ಎದ್ದು ನಿಂದಿತು ಪರಿವಾರಾ
ಕದ್ದ ಕಳ್ಳರ ತಂದು ಒಪ್ಪಿಸದಿದ್ದಾಗ
ಭದ್ರ ಗಜಕ ಹಾಕಿ ಕೊಲಿಸೂ೫೮

ಈಶನ ದುರ್ಗದೊಳಡಿಗಾರೆ ಕಳ್ಳರು
ವಾಸವನಾ ಮರೆಹೊಗಲೂ
ಭಾಷೆಯ ಕೊಟ್ಟರು ಹಿಡಿತಾರದಿದ್ದರೆ
ದೇಶಾಂತರೆ ತಮಗೆಂದೂ     ೫೯

ಕಟ್ಟೆವು ಕೈದುವ ಶಸ್ತ್ರ ಸನ್ಯಾಸವು
ಬಿಟ್ಟೆವು ನಿನ್ನ ರಾಜ್ಯವನೂ
ಘಟ್ಟಿಯ ಕಳ್ಳರ ಹಿಡಿತಾರದಿದ್ದರೆ
ಪಟ್ಟದಾನೆಗೆ ಹಾಕಿ ಕೊಲಿಸೂ           ೬೦

ವಾಸಿಯ ಭಾಷೆಯ ಕೇಳುತ ಅರಸಾಗ
ಲೇಸಾಗಿ ಸಂತೋಷ ಮಾಡೀ
ಸಾಸಿರ ಅರಿ ನೃಪಗೊಬ್ಬ ಬಂಟನು ಸಾಟಿ
ದೇಶದೊಳಿದಿರಿಲ್ಲ ನಿಮಗೆ  ೬೧

ನನ್ನರಮನೆ ಹೊಕ್ಕು ರಾಣಿವಾಸವನೆಲ್ಲ
ಚೆನ್ನಾಗಿ ಕುರುಹು ಮಾಡಿದರಾ
ಕನ್ನದ ಬಾಯಲು ಕೊಲಿಸದಿದ್ದರೀಗ
ನನ್ನಳುಲಡಗದುಯೆಂದಾ   ೬೨

ಅತ್ತಲು ತಳವಾರರು ಹೆಜ್ಜೆಯರಸುತ
ಲತ್ತಕಂಡರು ಕುರುಹುಗಳಾ
ಮತ್ತಾರಾಣಿಯ ಕಡಗ ಕಂಕಣವನು
ಮುತ್ತಿನ ಸರ ಸೂಡಗವಾ    ೬೩

ಇಂದಿನ ಕಳ್ಳರ ಚಿತ್ತೈಸೆಂದರಿಯೆ
ವೆಂದೆನುತಾ ತಂದುಕೊಟ್ಟರು
ಬಂಗಾರವ ರಾಯಗೆ
ಮುಂದುವರಿದು ತಳವಾರ   ೬೪

ನುಡಿಯಲ್ಲೊಮ್ಮೆವು ರಾಯ ಕಳ್ಳರ ವೀರವ
ಒಡೆವೆಗಾಸೆವಿಲ್ಲವೆನುತಾ
ಪೊಡವಿಯೊಳತಿ ಹೊಸತೆನುತಲು ಕೊಟ್ಟರು
ಮಡದಿ ಗಣಪಾಯ ಚೌರಿಯನೂ      ೬೫

ಖಡೆಯ ಬಾವುಲಿಗಳ ಸೂಲಕೆ ಸಿಕ್ಕಿಯೆ
ಒಡವೆ ವಸ್ತುಗಳನು ಬಿಸುಟೂ
ಒಡೆಯ ನೀ ಕೇಳಯ್ಯ ಹೋದರು ಕಳ್ಳರು
ಬಡವರು ಬಣಗುಗಳಲ್ಲಾ೬೬

ಪರರಾಯರ ಕೈಯ್ಯ ಪಂಥವಿಡಿದು ಬಂದು
ಅರಸು ಕೊಲ್ಲಲು ಬಂದರೈಸೆ
ಹರನ ಕರುಣದಿಂದ ಉಳಿದನು ರಾಯನು
ಧರೆಯ ಪಾಲಿಸುವ ಪುಣ್ಯದಲಿ          ೬೭

ಭಾಷೆಯ ಮಾಡಿದ ಗಣಪತಿರಾಯನು
ಅಸೆ ಹುಟ್ಟಿಯೆ ಮನದೊಳಗೆ
ಈಶ ಕಳ್ಳನಾಗೆ ಬಿಡನೆಂಬ ಸಂಧಿಗೆ
ಪೆಸರ್ವರರವತ್ತೆಂಟು ಪದನೂ           ೬೮

ಅಂತು ಸಂಧಿ ೧೩ಕ್ಕಂ ಪದ ೯೭೩ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ