ಸಂಧಿ೧೪

ಪುರಹರ ಲಿಂಗನು ಕಳ್ಳನೆಂದರಿಯದೆ
ಮರುಳಾಗಿ ಗಣಪತಿರಾಯಾ
ಶರಣರೆಲ್ಲರು ಕೇಳಿ ಮುಂದಣ ಸಂಧಿಯ
ತೆರಳಿದ ಹುಯ್ಯಲಿಗರನೂ   ೧

ಎದ್ದು ನಿಂದನು ರಾಯ ಸಿಂಹಾಸನದಿಂದ
ರುದ್ರಗೋಪವ ನೆರೆ ತಾಳ್ದೂ
ಭದ್ರಗಜವು ಹಯದಂಡಿಗೆಯೇರದೆ
ನಿರ್ಧರಿಸಿದ ಕಾಲು ನಡೆಯಾ೨

ಬಂದು ಮೈಯಿಕ್ಕಿದನಂದು ಪ್ರಧಾನವು
ತಂದು ನಿಲಿಸಿದರಾನೆಯನೂ
ಚಂದದಿಂದ ಆನೆಯನೇರಿದನಾ ರಾಯ
ಬಂದ ಯಿಕ್ಕೆಲದಲಾನೆಗಳೂ೩

ಮತ್ತೆ ಕೋಪದಿರಾಯ ಆನೆಯನಿಳಿವುತ
ಹತ್ತಿದ ದಂಡಿಗೆಯೊಳಗೆ
ಸುತ್ತಲೂಳಿಗ ಹಡಪ ಕಂಚಕಾಳಂಜಿಯ
ರೊತ್ತಿರೆ ಪನ್ನೀರ ಗಿಂಡಿ      ೪

ಮಂಡಳಿಕರು ರಾಜಪುತ್ರರಿಕ್ಕೆಲದಲಿ
ದಂಡಿಗೆಗಳು ಸಂದಣಿಸಿ
ತಂಡ ತಂಡ ದಣಾಯಕ ಪಾಯಕರ
ದಂಡಿಗೆ ಹೊರವಂಟನಾಗಾ  ೫

ದಂಡನಾಥನ ಕಂಡ ಬಡಗಣ ಬಾಗಿಲ
ದಂಡಿಗೆಗಳ ಸಂದಣಿಯಾ
ಬಂಡಿ ಕೊಟ್ಟಿಗೆ ಕೊಳೆಪಾಳೆಯ ತೆರಳಿತು
ತಂಡದಿ ಮೂಡಬಾಗಿಲಲಿ    ೬

ಮುತ್ತಿನ ಸತ್ತಿಗೆ ಗಣಪತಿರಾಯಗೆ
ಎತ್ತಿತು ನವರತ್ನ ಕಳಸಾ
ಸುತ್ತಲು ಪಂಚ ಪ್ರಧಾನರಿಗೆಲ್ಲಕೆ
ಉತ್ತಮ ಕಳಸ ಸತ್ತಿಗೆಯೂ  ೭

ಕೊಡಗಿನ ಸತ್ತಿಗೆಗಳು ಪಾಂಡ್ಯರಾಯಗೆ
ಹಿಡಿದವು ಶೃಂಗಾರವಾಗಿ
ಗಡಿಯ ಮನ್ನೆಯರಿಗೆ ಪಲ್ಲವ ಸತ್ತಿಗೆ
ಕಡೆ ಕಡೆಯಲಿ ಸಂಭ್ರಮವೂ  ೮

ಭದ್ರಗಜಂಗಳಂತೆ ನಡವ ಕಾಲಾಳಿಗೆ
ಅರ್ಧನಾರಿಯ ಸತ್ತಿಗೆಯೂ
ಇದ್ದ ಮೇಲಾಳಿಗೆ ತಲೆ ಚೌರಸತ್ತಿಗೆ
ಎದ್ದವು ಕಾರ್ಮುಗಿಲಂತೆ     ೯

ಬೆಳುಮುಗಿಲೆದ್ದಂತೆ ಬಿಳಿಯ ಸತ್ತಿಗೆ ಸಾಲು
ಅಳವಟ್ಟವರಸು ಮಕ್ಕಳಿಗೆ
ಹೊಳಕೆಯ ಬಲುಬರಟಿ ನಾಯಕ ಪೈಕಕೆ
ತಳಿತ ತೋಪಿನ ಸತ್ತಿಗೆಯೂ೧೦

ಕತ್ತಲೆಗವಿದಂತೆ ನೀಲಿಯ ಸತ್ತಿಗೆ
ತೆತ್ತಿಸಿದವು ಗಗನದಲಿ
ಅತ್ತರವಿಯ ಕಾಣಬಾರದು ಕಾವಳ
ಕತ್ತಲೆಯಾಗೆ ಸಂಭ್ರಮವೂ   ೧೧

ಎಡಬಲ ಸುತ್ತಲು ಹರಿಗೆ ಸಾಲಿನ ಥಟ್ಟು
ಕಡೆ ಕಡೆ ಸಬಳದ ಸಾಲುಗಳೂ
ಅಡರಿತು ತೇಜಿಯರಾಯ ರಾವುತರೊತ್ತಿ
ನಡೆಯಿತು ಕಾಲಾಳು ಮುಂದೆ           ೧೨

ಮಂತ್ರಿಗಳೈವರು ತಳತಂತ್ರ ಸಹವಾಗಿ
ಅಂತಲ್ಲಿ ರಾಯನ ಮುಂದೆ
ಸಂತೋಷದಿಂದಲು ನಡಿವ ಸಂಭ್ರಮವನು
ಎಂತು ಹೇಳುವೆ ವಿಪರೀತಾ  ೧೩

ನಡದು ಬಪ್ಪ ತಳತಂತ್ರದ ದಿಡುಗಿಗೆ
ಪೊಡವಿಗುಬ್ಬಸವಾದಂತೆ
ಗಡಗಡ ನಡುಗತ ಕಮಠ ಕಂಗೆಟ್ಟನು
ಹೆಡೆಯುಡುಗಿದ ಧರಣೇಂದ್ರಾ          ೧೪

ಪಶುಪತಿಯನು ಬೆನ್ನ ಹೆಜ್ಜೆಯ ಹೊರವಂಟ
ವಸಧೀಶ ಗಣಪತಿರಾಯ
ಶಶಿಧರನೆಂಬುದನರಿಯದೆ ನಡದು
ದೆಸೆಗೆ ಮೂಗಾವುದ ದಾಳಿ   ೧೫

ಬೀಸುವ ಗಾಳಿಗೆ ನಿಂದರೆ ಬಿಸಿಲಿಗೆ
ಘಾಸಿಯಾಗಿ ತಳತಂತ್ರಾ
ಸೂಸುವ ಬೆವರಿಗೆ ನೆಲ ಕೆಸರಾಯಿತು
ಈಸೊಂದು ಬಳಲಿಕೆಯಾಯಿತೂ       ೧೬

ಗಗನದಿ ಹಾರುವ ಪಕ್ಷಿಜಾತಿಗಳೆಲ್ಲಾ
ಬೆರಗುಗೊಂಡವು ಕಂಗೆಟ್ಟೂ
ನೆಗೆದು ಕುಳಿತವಂದು ಸಬಳದ ಮೊನೆ ಮೇಲೆ
ಹೊಗಳಿದ ಕವಿಯ ಸಂಭ್ರಮವೂ        ೧೭

ಹರಿಗೆ ಬಿಲ್ಲು ಹೇರಿಟ್ಟ ಕಬ್ಬಿಣಗೋಲು
ಸುರಗಿ ಕಕ್ಕಡ ಮುದ್ಗರವೂ
ಧರೆಯ ಬಗಿದು ಹೊಕ್ಕು ಕಳ್ಳರ ತಹೆವೆಂದು
ಪರಿವಾರ ಭಾಷೆ ಮಾಡಿದರೂ           ೧೮

ಕಂಚಿನ ಡೋಳು ಕರಿಯ ನಿಸ್ಸಾಳವು
ಮುಂಚಲು ಹೊಡೆವ ಹೆಬ್ಬರೆಯೂ
ಸಂಚಳವಿಲ್ಲದೆ ಹೊಡೆವ ಗಿಡಿಬಿಡಿ ಭೇರಿ
ವಂಚಿಸಿ ಹೊಡದ ರಾವುತರೂ           ೧೯

ಢಕ್ಕೆ ಪಡೆಯಕ್ಕೆ ಬೊಗ್ಗಿನ ಹರೆಗಳು
ಉಕ್ಕಂದ ವಾದ್ಯ ದೌಡೆಗಳೂ
ಉಕ್ಕಡ ಗಾಳೆಯು ನಾಗಸ್ವರದ ಧನಿ
ಮುಕ್ಕಣ್ಣ ಕೇಳುತ ನಿಂದಾ   ೨೦

ನಾಗವರಾಳಿಯ ರಾಗವ ತುರುಕರು
ನಾಗ ಸ್ವರವನೂದುತಿರಲೂ
ನಾಗಭೂಷಣ ಕೇಳಿ ತಲೆದೂಗನಿಂದರೆ
ಬೇಗದಿ ನಡೆಯೆಂದ ಹರಿಯೂ          ೨೧

ಕೇಳುವ ರಾಗವ ಕೆಡಿಸಿದೆ ಹರಿಯೆ
ಕೇಳುತ ನಿಂದರೆ ಏನಾತೋ
ಧಾಲಿ ಬಂದು ನಮ್ಮ ಹೋಗಲಿ ಸುರಹರ
ಏಳಯ್ಯ ಹುಯ್ಯಲು ಬಲಹೂ         ೨೨

ಕುಲಗಿರಿ ನಡೆವಂತೆ ಮದಗಜ ಬರುತಿವೆ
ನಿಲಲು ಬಾರದು ಕೇಳು ಹರನೇ
ಹೊಲಬುದಪ್ಪಿ ನನ್ನ ಕೈಕಾಲು ಗೆಟ್ಟುವು
ಬಲುಗುದುರೆಯ ಖರಪುಟಕೆ            ೨೩

ಒಂದೆ ಪದ್ಮದರಕ್ಕನ ನಾಯಕರುಂಟು
ಹಿಂದೆ ಲಂಕೆಯ ರಾವಣಗೆ
ಇಂದಿವನೆಗ್ಗಳ ಗಣಪತಿರಾಯನು
ನಿಂದರದಿರು ನಡೆಯೋಡಿ     ೨೪

ಹಿಂದಣ ಹುಯ್ಯಲು ಮುಟ್ಟುಳ ಹರಿಯೆ
ಮುಂದಣ ಕತ್ತಲು ಬಲುಹು
ಕೆಂದೂಳು ಕವಿಯಿತು ಕುದುರೆಯ ಖರಪುಟ
ದಿಂದ ರವಿಗೆ ಮರೆಯಾಯಿತೂ          ೨೫

ಕಂಡೆರೆ ಕೊಲುವರು ಮುಂಡೆಯ ಮಕ್ಕಳು
ಕೊಂಡು ಹೋಗಯ್ಯ ಹರಿ ನನ್ನಾ
ದಿಂಡೆಯರಿಗೆ ನಾವು ಸಿಕ್ಕದೆ ಹೋಹುದು
ಹೆಂಡತಿ ಗೌರಿಯ ಪುಣ್ಯ      ೨೬

ಆವ ಮಾತುಗಳನಾಡುತಲಿಪ್ಪೆ ಹರ ನೀನು
ದೇವ ನಿಮಗೆ ಭಯವುಂಟೆ
ಜೀವದಯಾಪರ ಹರ ನೀನು ನಿಮ್ಮಯ
ಸಾಹಸ ಮನುಜರಿಗುಂಟೇ   ೨೭

ಸಿಕ್ಕಿದೆವಾದರೆ ನಮ್ಮನು ಹರಿಯೆ
ಇಕ್ಕಿಸುವನು ಶೂಲಕರಸೂ
ದಿಕ್ಕಿಲ್ಲದವರ ದೇಸಿಗಳಾದೆವು
ಅಕ್ಕಟಾ ಸುಡಲಿ ಕಳವಾ      ೨೮

ಸುತ್ತ ಕಟ್ಟಿತು ದಾಳಿ ಹೋಗಬಾರದು ಹರಿ
ಸತ್ತೆವು ನಾವಿಬ್ಬರಿಲ್ಲಿ
ಒತ್ತಿ ಬರುತಲಿದೆ ಮುಂದಣ ಚೂಣಿಯು
ಮತ್ತಿನ್ನು ಗತಿಯೇನು ಹರಿಯೇ        ೨೯

ಹಿಡಿದು ಒಪ್ಪಿಸಿದಾಗ ಗಣಪತಿರಾಯನು
ಅಡಿಗಿಕ್ಕಿ ಕಡಿಸುವ ನಮ್ಮಾ
ಕಡಿಗೋಪದಿಂದಲು ಎಡಗೈಯ್ಯ ಕಟ್ಟಿಸಿ
ನಿಡಿನೀರ ಮೆಟ್ಟಿ ಕೊಲ್ಲಿಸುವಾ         ೩೦

ಬಲ್ಲಿದ ಕಳ್ಳರೆಂದೆಮ್ಮಿಬ್ಬರ ಹಿಡಿ
ದಲ್ಲಿ ಕೈಕಾಲ ಕೊಯಿಸುವನೂ
ಎಲ್ಲಿಯ ಕಳವಿದು ಸುಡಲಿ ಹರಿಯೆ ನೀನು
ನಿಲ್ಲದೆ ನಡೆವೋಡಿ ಬೇಗಾ  ೩೧

ದಾಳಿಯ ಮುಂದಣ ಡೋಳಿನ ಧಮಕನು
ಕೇಳುತ ಹಾ ಬೆದರಿದನೂ
ಖೂಳತನವು ನಾವು ಕಳವಿಗೆ ಬಹುದೆಂದು
ಭಾಳ ನಯನ ಚಿಂತಿಸಿದನೂ  ೩೨

ನಾವಿಬ್ಬರಿಲ್ಲಿಯೆ ಸಿಕ್ಕಿದರೆಲೆ ಹರಿ
ದೇವಲೋಕಕೆ ಇನ್ನಾರೂ
ನಾವು ತಪ್ಪದು ದಾಳಿ ಮುಟ್ಟಿಸಿ ಬಂದಿತು
ಕಾವುದಿಲ್ಲವು ಗಣಪತಿಯೂ            ೩೩

ಭೋರನೆ ಹರಿ ನೀನು ಬೇಗದಿ ಹೋಗಿ
ವೀರಭದ್ರಗೆ ಪಟ್ಟಗಳಟ್ಟೂ
ಆರೈದು ಕೊಳ್ಳೆಯ್ಯ ಮಗನಿನ್ನು ಹಸುಳೆಯು
ಆರು ಯಿಲ್ಲ ನಂಬಿದೆನೋ  ೩೪

ಸುರರು ಗಣಂಗಳು ಹರಿ ನಿನ್ನ ಕೈಬಿಡೆ
ತರುವ ವೀರೇಶ ನಿನ್ನಾ
ತುರುಕಗುದುರೆ ದಾಳಿ ಭರವಸ ಬಲುಹೆಂದು
ಹರಿ ಓಡಿ ಹೋಗೆಂದ ಹರನೂ          ೩೫

ಕಷ್ಟತನದ ಮಾತು ಕಡೆಯಲಿನ್ನೇತಕೆ
ಬಿಟ್ಟು ಹೋಗುವನಲ್ಲ ನಿಮ್ಮಾ
ಇಷ್ಟಕೆ ಮನನೋಡಿ ಜರಿಯದಿರಲೆದೇವ
ನಿಷ್ಟೂರದ ನುಡಿ ಬೇಡಾ    ೩೬

ವೀರಭದ್ರಗೆ ನೀನು ಪಟ್ಟವ ಕಟ್ಟೆಂದು
ಮಾರಹರನೆ ಹೇಳುತಿಹಿರಿ
ಈರೇಳು ಭುವನದ ಒಡೆಯನೆ ನಿಮ್ಮನು
ಧಾರಣೆಯೊಳು ಮುಟ್ಟಬಹುದೇ      ೩೭

ಉತ್ಪತ್ತಿ ಸ್ಥಿತಿ ಲಯಗಳಿಗೆ ನೀ ಕರ್ತನು
ಸರ್ಪಭೂಷಣನೆ ಚಿತ್ತವಿಸೂ
ತುಪ್ಪಕೆ ಕ್ಷೀರವು ಬೀಜವಾದಂತೆ ಹರ
ಒಪ್ಪೂದು ಲೋಕ ನಿಮ್ಮಿಂದಾ         ೩೮

ವರಸಿ ಬಿಡುವವಮಾಂಘ್ರುಯಿಂದಲು ಹರ
ಧರಣಿಯ ನರರನು ಎನುತಾ
ಹರಿನಿಂದು ಕೋಪದಿ ಚಕ್ರವ ತಿರುಹಲು
ಹರ ಬೇಡೆಂದು ನಿಲಿಸಿದನೂ೩೯

ಕೊಲ್ಲಬಂದೆವೆ ನಾವು ಗಣಪತಿರಾಯನ
ನಿಲ್ಲುಕೋಪ ಬೇಡ ಹರಿಯೆ
ಬಲ್ಲಿದ ಗುಂಡಬೊಮ್ಮಣ್ಣನ ಬಿರುದನು
ಇಲ್ಲಿ ಸೆಳೆಯ ಬಂದೆವೈಸೇ  ೪೦

ಬಿರುದಿನ ಕಹಳೆಯ ಸೆಳೆಯ ಬಂದು ನಾವು
ಹರಿ ನೀನು ಮರೆದೆಯೊ ಹೇಳೂ
ನೆರೆದಾನೆ ಕುದುರೆ ಮಾರ್ಬಲವನೆಲ್ಲವ ಹರ
ಕೊಲಬೇಡವೆ ಹರಿಯೆಂದಾ೪೧

ಅಂಧಕ ದೈತ್ಯನ ಎದೆಯ ಮೆಟ್ಟಿಯೆ ನಾ
ನಂದು ನಾಟ್ಯವನಾಡಿದೆನೂ
ಕೊಂದೆನೂ ಕೋಪದಿ ಗಜಾಸುರನ ಸೀಳಿ
ಇಂದಿನ ಬಳಲಿಕೆ ಬಲುಹೂ   ೪೨

ತ್ರಿಪುರದ ಕೋಟಿಯೊಳಗೆ ಕೊಂದೆನು ನಾನು
ಕುಪಿತ ತಾರಕನ ಮಕ್ಕಳನೂ
ಕಪಟ ವೇಷವುಳ್ಳ ಅಸುರರ ಕೊಂದಲ್ಲಿ
ವಿಪರೀತ ಬಳಲಿದುದಿಲ್ಲಾ  ೪೩

ಬಲ್ಲಿತಾಯಿತು ನಮಗಿಂದಿನ ಬಳಲಿಕೆ
ಎಲ್ಲಿಯ ಕಳವಿದು ಸುಡಲಿ
ಇಲ್ಲಿನ್ನು ವ್ಯವಧಾನವಿಲ್ಲಯ್ಯ ಹರಿಯೆ
ನಿಲ್ಲಬೇಡ ನಡೆವೋಡಿ       ೪೪

ಪರರ ಕೂಡೆ x x x x x x x x x
ಹರ ಹಿಗ್ಗಿಕ್ಕಿ ನಗುತಿಹರೂ
ಧರೆಯ ಮೇಲೆ ಕಾಲು ನಿಲ್ಲವು ಬರಲಾರೆ
ಹಿರಿದು ಭಯವು ಬಲುಹೆಂದಾ          ೪೫

ಕದ್ದ ಕಳ್ಳರಿಗೆಲ್ಲ ಕಾಲು ತಾ ಕೆಡುವವು
ನಿರ್ಧಾರ ಹರನೆ ಚಿತ್ತವಿಸೋ
ಸದ್ಯ ಫಲದ ವೇಳೆಯೀಗ ಬೆಂಬಳಲು
ರುದ್ರಗಣವು ನಗುತಿಹರೂ   ೪೬

ಅವನು ಗುಂಡಬೊಮ್ಮನಿರುತಿಪ್ಪ ಗವಚೆರು
ನವಗೆ ಸುದೂರವು ಹರಿಯೆ
ಶಿವನೆ ಚಿತ್ತೈಸಯ್ಯ ಮುಂದಡ್ಡ ಬಿದ್ದಿಹ
ತೆವರ ಕೆಳಗೆ ಗವುಚೆರೂ       ೪೭

ಸಿರಿವಂತ ಭಕ್ತರ ಬಿರುದಿನ ಕಹಳೆಯ
ಹರ ಕೇಳಿತಿಲ್ಲವೇ ನೀನೂ
ಮೂರಡಿಯ ಮೇಲಣ ಕವಲು ದಾರಿಯ ಬಿಟ್ಟು
ಹರ ನಡೆ ಬಲ ದಾರಿಯಲಿ   ೪೮

ಕಕ್ಕ ಪಾಲದಲಿಪ್ಪ ಕವಡೆಯ ಪೆಂಡೆಯ
ದಿಕ್ಕನೆ ತೆಗೆದನು ಹರನೂ
ಇಲ್ಲಲುತ್ತರಿಗೆ ಹಿರಾವಳಿ ಹಾರವ
ಠಕ್ಕಿಲಿ ಬಿಸುಡುತ ನಡದಾ   ೪೯

ಎಲ್ಲರು ಕಾಂಬಂತೆ ನಡು ಬಟ್ಟೆಯೊಳಗಲ್ಲಿ
ಮೆಲ್ಲನೆ ಹಾಕಿ ಕಂಕಣವಾ
ಅಲ್ಲಿ ಹಾಕಿದ ಹರ ಪದಕವ ತೆಗೆದಾಗ
ಮೆಲ್ಲನೇ ಹೆಬ್ಬಾಗಿಲೊಳಗೇ           ೫೦

ಹಿಂದೆ ಹಿಡಿದು ಬಪ್ಪ ಹೆಜ್ಜೆಯ ರಭಸದ
ಮುಂದಣ ಢೋಳು ನಿಸ್ಸಾಳಾ
ಸಂಧಿಸಿ ಹೊಡೆಯ ನೆಲ ಬಿರಿವಂದದ
ಲಂದು ಬೆದರೆ ಗವುಚೆರೂ    ೫೧

ಕೊರಳ ಬಂಧಿಯನಾಗ ಕರುವ ಗಲಲ್ಲಿ ಹಾಕಿ
ಸರಮುತ್ತು ಹವಳವ ಹರಿದೂ
ಶರಣರ ಕೇರಿಗೆ ಸಾಲಿಟ್ಟು ಚೆಲ್ಲುತ
ಹರ ಬಂದು ಗವಚೆರ ಹೊಕ್ಕಾ          ೫೨

ಗುಂಡಬೊಮ್ಮಣ್ಣನ ಮಡದಿಯರಿರುವಾಗ
ಕಂಡು ಹೊಸ ಕನಸುಗಳಾ
ಗಂಡರನೆಬ್ಬಿಸಿ ಹೇಳುವೆವೆನುತಲು
ಮಂಡೆಯ ಮುಸುಕ ಸಡಿಲಿಸುತಾ       ೫೩

ನಿದ್ರೆ ಗೆಟ್ಟಿತೆಂದು ಯೆಬ್ಬಿಸೆ ಮುನಿವರೊ
ಬುದ್ದಿಯಿನ್ನಾವುದೋಯೆನುತಾ
ಹೊದ್ದಿದರು ತಮ್ಮ ದಿಸೆಯ ವಲ್ಲಭರನು
ಮುದ್ದು ಮೊಗದ ನೀರೆಯರೂ         ೫೪

ದಿನಕರ ನುಡಿಯಗಳಾದವು ತಾವರೆ
ತನ ತನಗರಳಿದವೆನುತಾ
ವನಿತೆಯರಿಬ್ಬರು ತಮತಮ ಪುರುಷರಿಗೆ
ಕನಸ ಹೇಳಿದರೆಬ್ಬಿಸುತಾ     ೫೫

ಈಶನೊಡ್ಡೋಲಗದಿರವು ಸಂಭ್ರಮವನು
ಲೆಸಾಗಿ ಕಂಡು ಕೈಮುಗಿದೂ
ಸಾಸಿರ ಗಣಗಳಿರಲು ಕಂಡು
ಸಾಷ್ಟಾಂಗವೆರಗಿದೆವೆನಲೂ೫೬

ಹೆಂಡಿರ ಕನಸನು ಮುರಿದು ಹೇಳಿದರಂದು
ಗುಂಡಬೊಮ್ಮಣ್ಣಗಳಾಗ
ಕಂಡೆಂದು ಮೌಳಿಯ ಶ್ರೀಚರಣವ ನೀವು
ಕಂಡುದು ಖರೆ ಲೇಸೆಂದೂ   ೫೭

ಮತ್ತೊಂದು ಮುಂಗನಸಾಗಿಯೆ ಕಂಡೆವು
ಚಿತ್ತೈಸಿ ನೀವೆಂದೆನುತಾ
ಸತ್ಯಶರಣ ಹರ ನಮ್ಮಯ ಮಠಕ್ಕಿಂದು
ಹೊತ್ತುಣುತೆ ಬರುತಿಹರೂ೫೮

ಆತನೊಡನೆ ಬಂದ ಚಾತುರಿಯದ ಹರಿ
ಆತನು ನಮ್ಮ ಕನಸಲಿ
ಪ್ರೀತಿ ಸನ್ಮಾನದಿ ಬಂಗಾರ ವಿತ್ತಡೆ
ಆತುದಿಲ್ಲ ಕರಗಳನೂ       ೫೯

ಇಂದು ಬಂದು ನಿಮ್ಮ ಮರೆಯೊಕ್ಕೆವೆಂಬುದು
ಕಂಡೆವು ಕನಸಿನೊಳಿರುಳೂ
ಕಂಡೆರೆಯಲು ಕಡೆಗಣ್ಣು ಕೆತ್ತುತಲಿವೆ
ಯೆಂದು ಹೇಳಿದರ ನೀ ಕನಸಾ           ೬೦

ಸತಿಯರ ಕನಸನು ಪತಿಯರು ಕೇಳುತ
ಅತಿ ಹಿತವಾಯಿತುಯೆನುತಾ
ಪೃಥ್ವಿಗೆ ಹಿರಿಯರು ಜಂಗಮವಿದೆನ್ನ
ಅತಿದಿಟವೂ ಮಠಕೆಬಹುದು            ೬೧

ಷಡುಸಮಾರ್ಚ್ಚನೆ ರಂಗವಲ್ಲಿಯ ತಂದು
ಎಡೆ ಮಾಡುತಲವಸರಕೆ
ಮೃಡನ ಮಂಗಲ ಗೀತದಿಂದಲು ಪಾಡುತ
ಮಡದಿಯರಿದ್ದರು ಉತ್ಸವದೀ       ೬೨

ಲಿಂಗಾರ್ಚನೆಯನು ಮಾಡಿದರಾಗಲಿ
ಸಂಗಡ ಗುಂಡ ಬೊಮ್ಮಣ್ಣರೂ
ಅಂಗ ಸಂಗದ ಸುಖಮತ್ಸರ ಹೊದ್ದದೆ
ಲಿಂಗದ ನಿಷ್ಠೆಯಲಿ            ೬೩

ಸುತ್ತಲು ಸೋಪಾನ ಮುಚ್ಚಳುಗಲ್ಲಿನ
ಉತ್ತಮ ಶುದ್ದನ ಬಾವಿ
ಸತ್ಯ ಬಲವಂತ ಲಿಂಗಾರ್ಚನೆಯ
ಹತ್ತಿರೆ ಹೂವಿನ ತೋಟಾ    ೬೪

ಶೀಲವಂತರ ಶುದ್ದನದ ಬಾವಿಗೆ
ಬಾಲೆಯರನ್ಘವಣೆಗಾಗಿ
ಲೋಲಾಲೋಚನೆಯರು ನಡತಂದು ನಿಂದರು
ನೀಲ ಲೋಹಿತ ಹರ ಕಂಡಾ೬೫

ಹಿರಿಯೆ ಕೇಳುವ ನೀರ ಹೊಳೆಯಲ್ಲಿ ಶುದ್ಧಿಯ
ವಿವರಿಸಿ ಕೇಳುವೆವೆನುತಾ
ಖರ ಬೇಗದಿ ನಡೆತಂದು ನಿಂದನು ಹರ
ಪುರದ ನೀರ ಹೊಳೆಯಲ್ಲಿ  ೬೬

ಹರಹರ ಶಿವಶಿವ ನಿರುಪಮವೆನುತಲು
ನರ ನಾಟಕವಾಗಿರಲೂ
ಪರಮ ಭಕ್ತರು ಶ್ರಿ ಚರಣಕೆರಗಲು
ಹರನಿದ್ದ ಬೆರಗು ಮೌನದಲಿ            ೬೭

ಮರುಳು ಜಂಗಮವಾಗ ಹರಿಯು ವಿಭೂತಿಯ
ನರಳುತಲಿತ್ತು ಕೇಳಿದನೂ
ಪುರದೊಳಗನ್ನವಿಕ್ಕುವರುಂಟೆ ಮಗಳೆ
ಹಿರಿದು ಹಸಿದೆವೆಂದೆನುತಾ   ೬೮

ಅನ್ನ ಉದಕ ಆರೋಣಿಗಳಿಗೆಲ್ಲ
ನಿಮ್ಮಯ ಶಿಶು ನಾವಿರಲೂ
ನಿಮ್ಮ ಕರುಣ ಕೃಪೆಯಿಂದವೊಡೆಯರೆ
ನಮ್ಮ ಮಠಕೆ ಬಿಜಮಾಡಿ    ೬೯

ಅರಮನೆಯಲಿ ನಾವು ಅನ್ನವ ಕೊಳ್ಳೆವು
ವೀರಶೈವ ಪಂಥಯನಲೂ
ಊರೊಳಗಿಹರೆಲ್ಲ ವೀರಶೈವರೆಂದು
ನಾರಿಯರಾಗ ಬಿನ್ನವಿಸೇ     ೭೦

ಅನ್ನ ಉದಕ ಕನ್ಯಾದಾನ ಮಾಡುವರುಂಟು
ಚೆನ್ನಾಗಿ ಪುರದೊಳು ಗುರುವೆ
ಹೊನ್ನು ಕನ್ಯದಾನದರಕೆಗಳೆಮಗಿಲ್ಲ
ಇನ್ನೇಕೆ ದೇಶಾಂತರಿಗೇ       ೭೧

ಕನ್ನಡ ದೇಶದ ಕಡೆಯಿಂದ ಬಂದೆವು
ಮುನ್ನ ತೆಲುಗ ದೇಶವಲ್ಲಾ
ಇನ್ನೊಂದ ಹೇಳುವೆವಪ್ಪ ಕದ್ದು ಜಂಗಮ ಬರೆ
ಬೆನ್ನಿಕ್ಕಿಕೊಂಬ ಭಕ್ತರನೂ   ೭೨

ಒಪ್ಪಿಸುವರು ತಮ್ಮ ತನುಮನ ಧನವನು
ತಪ್ಪದೆ ಜಂಗಮಕವರೂ
ಸರ್ಪಭೂಷಣನೆಂದು ಜಂಗಮಗಾಂಬರು
ದರ್ಪವಿಲ್ಲ ಶ್ರೀಗುರುವೇ    ೭೩

ಕಂಡರೆ ಹಿಂದಿಕ್ಕಿಕೊಂಬರು ಕದ್ದರೆ
ಗುಂಡಬೊಮ್ಮಣ್ಣಗಳವರೂ
ಚಂಡ ಪ್ರಚಂಡರು ವೀರಶೈವರಲ್ಲಿ
ದಂಡ ಪ್ರಾಣತರು ನಿಮಗೆ ಗುರುವೇ   ೭೪

ಧಾಳಿ ಮುಟ್ಟಿಸಿತು ಢೊಳು ಬಾರಿಸುತಿರೆ
ಕೇಳುತ ಹರನು ಸನ್ನೆಯಲೀ
ಹೇಳಿದನವರನು ಕಳುಹು ಬೇಗದಲೆಂದು
ಭಾಳಾಕ್ಷ ಹೇಳಿದ ಹರಿಗೇ     ೭೫

ಬಳಲಿದೆ ಮಗಳೆ ನೀ ಗುಂಡಬೊಮ್ಮಣ್ಣನ
ತಿಳಿದ ಭಕ್ತಿಯನೆಲ್ಲ ಹೇಳಿ
ತಳುವಾಯಿತು ಕೇಳಿ ಪರಿಣಾಮವೆನುತಲು
ಕಳುಹಿದರಾ ನೀರೆಯರಾ     ೭೬

ಶ್ರೀಗಿರಜಶನು ನಾಗಭೂಷಣ ಸಲೆ
ಯೋಗಿ ಜನಂಬುಜ ಹೃದಯಾ
ಭಾಗಿ ಸುರಾರ್ಜಿತ ಹರ ಹುಯ್ಯಲು ಬರೆ
ಬೇಗದಿ ಗವಚೆರ ಹೊಕ್ಕಾ    ೭೭

ದೇವರ ದೇವನು ದೇವ ವಿಶ್ವೇಶ್ವರ
ದೇವ ಸದಾರ್ಚಿತ ಲಿಂಗಾ
ದೇವರವಧಿಕಟ್ಟು ಬೆವರಿಡುತಲುವೊಡಿ
ದೇವರು ಗವಚೆರ ಹೊಕ್ಕಾ   ೭೮

ಬಿರುದಿನ ಕಾಳೆಯ ಶರಣ ಸದ್ಭಕ್ತರ
ಹರ ಕಡೆಗಣ್ಣಲು ನೋಡೀ
ಸಿರಿವಂತ ಗುಂಡಬೊಮ್ಮಣ್ಣ ಮಠವನು
ಹರನು ಹೊಕ್ಕನು ಭಯಗೊಳುತಾ    ೭೯

ಕಾಲು ಕುಪ್ಪಳಿಸುತ ಮೇಲು ಸೋರಿಕ್ಕುತ
ನಾಲಿಗೆಯೂ ತೊದಳಿಸುತಾ
ಆಲಿಸಿ ಬೆಚ್ಚುತ ಹೊರಗನು ನೋಡುತ
ನೀಲಕಂಠನಿರ್ದ್ದಬದಿ          ೮೦

ಗುಂಡಯ್ಯ ಬೊಮ್ಮಯ್ಯ ಹೆಂಡಿರು ಸಹಿತಲು
ದಂಡವಿಡುತ ಹರಗಾಗಾ
ಕಂಡು ಕೃತಾರ್ಥರು ನಾವಾದೆವೆನುತಲು
ಕೊಂಡು ಬಂದರು ಪಾದಕಟ್ಟಣಿಯಾ  ೮೧

ಚಿತ್ತೈಸಿ ಪಾದಾರ್ಚನೆಯನು ದೇವರೆ
ಇತ್ತ ಶ್ರೀಚರಣವ ನೋಡಿ
ಮತ್ತೆ ಮಾಡುವ ಪಾದಾರ್ಚನೆಯೆಂಬುದ
ಸತ್ಯ ನಿಮ್ಮ ಭಕ್ತಿ ಹಿರಿದೂ   ೮೨

ಜಂಗಮದ ಮೇಲೆ ಭಕ್ತಿ ಪ್ರಮುಖರು
ಸಂಗನ ಶರಣರು ನೀವೂ
ಲಿಂಗವಂತರೇ ನಿಮ್ಮ ಸುದ್ದಿಯ ಕೇಳಿ ನಾವು
ತಿಂಗಳೆಂಟೆಂದನು ಹರನೂ    ೮೩

ಅಲ್ಲಲ್ಲಿ ಪರದೇಶದೊಳಗೆಲ್ಲ ಕೇಳಿಯೆ
ಮೆಲ್ಲಮೆಲ್ಲನೆ ಬಂದೆವಿಲ್ಲಿ
ಎಲ್ಲಿಯಾದರೂ ಕದ್ದು ಬಂದ ಜಂಗಮವನು
ಬಲ್ಲರೆ ಹಿಂದಿಕ್ಕಿಕೊಳ್ಳಲೂ            ೮೪

ಹುಟ್ಟಿ ಹಿಂದಕೆ ನಮಗೆಷ್ಟು ಕಾಲಗಳಾಗೆ
ಇಷ್ಟು ವಿಚಾರಿಸರಾರೂ
ದೃಷ್ಟ ಗುಂಡಬೊಮ್ಮರೆಂಬರು ನಾವೀಗ
ಕಟ್ಟಳೆ ಹೊಸತು ಅವಿಚಾರಾ            ೮೫

ಮೊರೆಯ ಹೊಕ್ಕವರನು ಕಾವೆವು ನಾವೀಗ
ಮರೆಯ ಮಾತಲ್ಲ ನಿರ್ದ್ಧಾರವೂ
ಕರೆಗೊರಳ ಭವನು ಬಂದರೆ ಕೊಡೆವೊಮ್ಮೆ
ಮೆರೆವೆವು ಹಿಂದಿಕ್ಕಿ ಕೊಂಡೂ           ೮೬

ಕದ್ದ ಕಳ್ಳರ ನೀವು ಹಿಂದಿಕ್ಕಿ ಕೊಂಬುದು
ದೊಡ್ಡಿಯದಯ್ಯ ಗುಂಡಬೊಮ್ಮ
ಇದ್ದಿರಾಚಾರಕೆ ಗುರಿಯಾಗಿ ನೀವಿಂದು
ಇದ್ದ ಸ್ಥಿತಿಯ ಕೇಳಿ ನಮ್ಮಾ           ೮೭

ಹೋಯಿತು ನಮ್ಮ ಪ್ರಾಯದ ಸಾಹಸವು
ಆಯಿತು ವೃದ್ದಾಪ್ಯ ಕಾಲಾ
ರಾಯನ ಮನೆಯಲಿ ಕನ್ನವಿಕ್ಕಿದೆವೆಂದು
ಕಾಯವ ಹೊರೆಯ ಬೇಕಾಗಿ೮೮

ತಂದೆವು ಗಣಪತಿರಾಯನ ಒಡೆವೆಯ
ಹಿಂದಿಕ್ಕಿಕೊಳ್ಳೊ ಗುಂಡಬೊಮ್ಮಾ
ಇಂದು ನಿಮ್ಮನು ಮೊರೆಹೊಕ್ಕೆವು ನಾವೀಗ
ಮುಂದರಿಯದೆ ಕದ್ದು ತಂದೂ         ೮೯

ಏನು ಬಂದದನುಭವಿಸಿಯೆ ಕಾವೆವು
ಧ್ಯಾನಿಸದಿರಿ ನೀವು ಗುರುವೇ
ಏನ ಮಾಡುವೆ ಮನದಂಜಿಕೆ ಬಿಡದಯ್ಯ
ನೀನು ಕೇಳು ಗುಂಡಬೊಮ್ಮಾ          ೯೦

ಚಂದ್ರಮೌಳಿಯು ತನ್ನ ಗಣಂಗಳ ಸಹಿತಲು
ಒಂದು ಬಾರಿಯೆತ್ತಿ ಬರಲೂ
ಹಿಂದಿಕ್ಕಿಕೊಂಡೀಗ ಕೊಡುವರು ನಾವಲ್ಲ
ಸಂದೇಹವಿಲ್ಲಂಜ ಬೇಡಾ   ೯೧

ಆವ ಪರಿಯಲಂಜ ಬೇಡೆಂದೆ ಗುಂಡಬೊಮ್ಮ
ಸಾವು ತಪ್ಪದು ಕದ್ದೆವಾಗಿ
ದೇವರೆ ನಿಮ್ಮಯ ಜೀವಕೆ ಹಾನಿಯು
ನಾವಿರುತೇವೆ ಅಂಜಬೇಡಾ  ೯೨

ಒಂದು ಮಾತನು ಕೇಳ ಗುಂಡಬೊಮ್ಮಣನೆ
ಇಂದೀಗ ಮರೆಯಿಲ್ಲದೀಗಾ
ಹಿಂದಣ ಹುಯ್ಯಲು ಢೊಳು ನಿಸ್ಸಾಳವು
ಬಂದಿತು ನಮ್ಮನು ಬೆರಸಿ    ೯೩

ಇಂದಿನ ಹುಯ್ಯಲ ಬಂದ ಮಾರಿಯ ನಾವ
ನಿಂದಿರ್ದು ಅರುವೆವೀಗಾ
ಸಂದೇಹ ಭಯ ಬಿಟ್ಟು ಸುಖದಲಿರಿ ಗುರುವೆ ನೀವು
ಹಿಂದುಗಳೆದರೆ ನಿಮ್ಮಾಣೆ    ೯೪

ಕಾಲಿಲ್ಲ ಮುಂದೆ ನಡದು ಹೋಹರೆ ಮಗನೆ
ನಾಲಿಗೆಯೊಣಗಿ ಬಾಯಾರಿ
ಶೂಲಿಯೆ ಮಾಡಿದ ಮಾಯವು ಗುರುವೆ
ಮೇಲೆ ಬಂದುದ ನೋಡಿಕೊಂಬಾ      ೯೫

ಬಡವ ನಿಧಾನವ ನೆಡೆಹಿತಾ ಕಂಡಂತೆ
ಕುರುಡೆಗೆ ಕಣ್ಣು ಬಂದಂತೆ
ಮೃಡನಾಚಾರದ ಭಕ್ತಿಯ ಮೆರೆವೆವು
ಒಡೆಯರೆ ಅಂಜರಿದಿನ್ನೂ    ೯೬

ಕಂದರ್ಪಪಾಗಿಯೆ ಕಾಣಿಸಿತಾಗಲೆ
ಬಂದಹನು ನೀವು ಗುರುವೆ
ಇಂದೀಗ ಗಣಪತಿರಾಯನ ಮನೆಹೊಕ್ಕು
ಬಂದಿರಿ ಕದ್ದು ಪುಣ್ಯದಲೀ  ೯೭

ಕಳವ ಕದ್ದು ತಂದು ಬಳಲಿದರೊಡೆಯರು
ಒಳಗಡೆ ಮಾಡಿರೆಯೆನುತಾ
ಲಲನೆಯರಿಗೆ ಹೇಳಿ ಗುಂಡಬೊಮ್ಮಣ್ಣನು
ಕಳುಬೇಡ ಬೇಗ ಮಾಡೆಂದಾ            ೯೮

ತಡಮಾಡಿ ಕನ್ನದ ಬಾಯಲಿ ಸಿಕ್ಕದೆ
ಒಡನೋಡಿ ಬಂದು ಲೇಸಾಯಿತವು
ಒಡೆಯರೆ ನಿಮಗಿನ್ನಾವ ಭಯಗಳಿಲ್ಲ
ಬಿಡಿ ನಿಮ್ಮ ಮನದ ಭೀತಿಗಳೂ         ೯೯

ಆವ ಭಯವ ಬಿಟ್ಟು ನೀವಿನ್ನುಪಾವಡಿಸಿ
ದೇವರೆ ನಿರ್ಭಯದಿಂದಾ
ದೇವರೆ ನಿಮ್ಮ ಪಾದದುಗುರು ಬಿದ್ದಲ್ಲಿಯೆ
ಈವೆವೆಮ್ಮಯ ಶಿರಗಳನೂ  ೧೦೦

ಎಂತು ನಿದ್ರೆಯಬಹುದು ಕೇಳಿರೈ ಗುಂಡಬೊಮ್ಮ
ಸಂತೋಷ ಮನದೊಳಗಿಲ್ಲಾ
ಚಿಂತೆಯೆಂಬುದು ರೋಗ ಚಿಕಿತ್ಸೆಯ ಔಷಧಿಯಿಂದ
ಸಂತೈಸಲರಿಯರಿ ನೀವು      ೧೦೧

ಹತ್ತು ಬಾರಿ ನಮ್ಮ ಹವಣಿಸಿ ನೋಡಬೇಡಾ
ಚಿತ್ತೈಸೊಂದೆ ಮನವು
ಪೃಥ್ವೀಶ ಗಣಪತಿರಾಯನು ತೃಣವಯ್ಯ
ಮತ್ತಾತಗಂಜೇವು ನಾವೂ    ೧೦೨

ಕುಂಬರಮರುಕವಕೊಂಬುದೆ ಗುಂಡಬೊಮ್ಮ
ಅಂಜದರಾರೂ ಅರಸಿಗೆ
ಅಂಜುವೆವೆಮ್ಮಯ ಗುರುಲಿಂಗ ಜಂಗಮ
ಕ್ಕಂಜೆವರಸು ಸಿರಿಗಳಿಗೇ      ೧೦೩

ಒಮ್ಮಿಗೆ ಹರಿಹರ ಬ್ರಹ್ಮರು ಬಂದರೆ
ಸುಮ್ಮನೊಪ್ಪಿಸುವವರಲ್ಲಾ
ನಿಮ್ಮ ಜೀವಕೆ ನಮ್ಮ ಭಾವಮೈದುನರ
ನಮ್ಮಿಬ್ಬರ ಜೀವ ಹೊಣೆಯೂ        ೧೦೪

ತನ್ನ ಕೈವಿಡಿದಿಹ ಹೆಂಡಿರು ಮಕ್ಕಳ
ಮುನ್ನಾರು ಬಲ್ಲರು ಮನವಾ
ಖಿನ್ನವಿಲ್ಲದೊಬ್ಬ ಸಿರಿಯಾಳನಂದರು
ಚೆನ್ನಾಗಿ ಸತಿಪುತ್ರ ಮನವಾ  ೧೦೫

ಬಲ್ಲರೆ ಹೇಳಿರೈ ಗುಂಡಬೊಮ್ಮಯ್ಯ ನಿಂ
ಮೆಲ್ಲ ನಾಲ್ವರ ಮನಸುಗಳಾ
ಇಲ್ಲಿ ನಮ್ಮೊಳು ಭೇದವಿಲ್ಲಯ್ಯ ಗುರು ನೀ
ವೆಲ್ಲ ಹವಣಚಿತ್ತೈಸಿ         ೧೦೬

ಮತ್ತಾರು ಬಲ್ಲರು ಅನ್ಯರ ಗುಣಗಳ
ಇತ್ತ ನಮ್ಮೊಳು ಭೇದವಿಲ್ಲಾ
ಪ್ರತ್ಯಕ್ಷ ನಮ್ಮಯ ಸೋದರ ಮೈದುನ
ಸತ್ಯರು ಗುಂಡಬೊಮ್ಮಣ್ಣ೧೦೭

ಆತನ ಹೆಂಡತಿ ಆಕೆ ನಮ್ಮಯ ತಂಗಿ
ಆತ ನಮ್ಮಯ ತಂಗಿ ಗಂಡಾ
ಮಾತಿಲಿ ಹುಸಿಯಲ್ಲ ಮನವೆಲ್ಲವೊಂದೆ
ಏತರ ಖೇದವು ಗುರುವೇ     ೧೦೮

ಕತ್ತಲೆಯೊಳು ಮೈಯಲ್ಲವು ಕಂಗೆಟ್ಟು
ಅತ್ತಲಿತ್ತಲೋಡಿ ಬರುತಾ
ಉತ್ತಮವಾಗಿರ್ದ ಬಂಗಾರ ಬಿದ್ದವು
ಮತ್ತೆ ಬೆಂಬಲಿಗೊಂಡು ನಮ್ಮ          ೧೦೯

ಅಲ್ಲಿ ಕನ್ನದ ಬಾಯ ಅಡಿವೆಜ್ಜೆವಿಡಿವುತ
ಇಲ್ಲಿಗೆ ನಡೆತಂದು ಹಾಕಿ
ಬಲ್ಲಿದ ಗಣಪತಿರಾಯನು ನಿಮ್ಮನು
ಇಲ್ಲಿ ಆಕರಿಸುವೆ ಕೇಳೀ      ೧೧೦

ಅರಸಿಗಂಜಿ ನಾವು ನಿಮ್ಮನೊಪ್ಪಿಸಿದಾಗ
ನರಕ ಶ್ವಾನ ಜಲ್ಮಬಹೆವೂ
ಧರೆಯೊಳು ಗುರುಲಿಂಗ ಜಂಗಮದೇವರ
ಶಿರವನರಿದ ಪಾವನ ನಮಗೆ  ೧೧೧

ಆಡಿದ ಮಾತಿಗೆ ತಪ್ಪು ಬಾರದ ಹಾಗೆ
ಹೂಡಿ ವಿಶ್ವಾಸ ನಂಬುಗೆಯಾ
ಆಡಿವೋಡಿ ಹೋದರೆ ಆಚಾರಕೆ
ಕಡೆಯು ಹುಳುಗೊಂಡ ನಮಗೇ        ೧೧೨

ಕಟ್ಟಿದ ಕಂಕಣ ಕಲ್ಪಿತವೆಂಬುದು
ಬಿಟ್ಟುನೆಂದರೆ ಬಿಡದೂ
ಕೆಟ್ಟ ಸಂಸಾರವು ಕಷ್ಟವು ಫಲವಿಲ್ಲ
ಕೊಟ್ಟೆವು ನಂಬಿ ನಂಬುಗೆಯಾ          ೧೧೩

ನಂಬಿಗೆಯೆಂಬುದು ನಿಜ ಕಲಿಯುಗದೊಳು
ನಂಬಿ ಕೆಡಲುಬಹುದೆ ನಿಮ್ಮಾ
ಶಂಭುನಾಥನು ಬಲ್ಲವೊಪ್ಪಿಸಿದಾಗಲು
ಕುಂಬಿ ಪಾತಕನ ಮಗನಹುದೂ         ೧೧೪

ನೆರೆದಿರ್ದ ಪರಿವಾರ ಮಂತ್ರಿಗಳೆಲ್ಲರು
ಮರುಳಾಡಿ ಜರಿದಾಗ ನಿಮ್ಮಾ
ಹಿರಿದು ಕೋಪವು ಹುಟ್ಟಿ ಅರಸಿಗೊಪ್ಪಿಸೆ ನೀವು
ಶಿರವು ಹೋಹುದು ನಮಗಲ್ಲಿ         ೧೧೫

ಹದ್ದು ಕಾಗೆ ನಾಯಿ ನರಿ ಹಂದಿ ಗೂಗೆಗೆ
ಬಿದ್ದ ದೇಹವು ಶ್ರೀಗುರುವೇ
ಇದ್ದುದು ನೆಲೆಯಲ್ಲ ಗಾಳಿಯೆ ಸೊಡರಿದು
ರುದ್ರನಾಣೆ ನಮ್ಮ ನಂಬಿ     ೧೧೬

ನಂಬಿ ನಂಬಿಯೆಂಬ ನಂಬಿಗೆ ನುಡಿಗಳ
ಸಂಭ್ರಮ ಬೇಡ ಗುಂಡಬೊಮ್ಮ
ನಂಬುಗೆ ತಪ್ಪಲು x x x x x x x x x x
ತಿಂಬ ಜಾತಿಗೆ ಕೈಯ್ಯ ನೀಡಿ೧೧೭

ಆಣೆಗೆ ಅಪಜಯವಿಲ್ಲಯ್ಯ ನಿಮ್ಮಲ್ಲಿ
ಕಾಣೆವು ಮನಕೆ ನಿಶ್ಚಯವಾ
ಕೆಣೆಕಾರ ನಮ್ಮ ತೆಲೆಗೆ ಗಣಪತಿರಾಯ
ಕಾಣುಗೆಟ್ಟವು ನಿಮ್ಮ ನಂಬಿ೧೧೮

ಮದನಾರಿಯೆ ಬಲ್ಲ ನಮ್ಮಯ ಮನವನು
ಬೆದರ ಬೇಡವಯ್ಯ ಗುರುವೇ
ರುಧಿರ ರೋಹಿತ ದೇಹ ನೆಲೆಯೆಂದು ನೆಚ್ಚೆವು
ಹುದಳವಿದ್ದಡೆಯೇನು ನಂಬಿ           ೧೧೯

ನಂಬಿಯಿದ್ದಡೆನು ಬೆಂಬಿರಾಯನು
ತಿಂಬರೆ ಹುಲಿಯಾದನಮ್ಮಾ
ಅಂಬುಜದೆಲೆಗಳ ನೀರಾದೆವೆನುತಲಿ
ಕಂಬನಿದುಂಬಿದ ಹರನೂ     ೧೨೦

ಹರನ ಕಣ್ಣ ನೀರ ತೊಳೆದನು ಹರಿಯಲ್ಲಿ
ಕರಕ ಮಂಡಲದ ನೀರಿಂದಾ
ಮರುಳ ಜಂಗಮ ನಾವು ಕದ್ದುದು ಹುಸಿಯಲ್ಲ
ಧರೆಯಲ್ಲ ನಗುವರಳಬೇಡಾ           ೧೨೧

ಇಷ್ಟು ದೊಡ್ಡಿಯ ದುಃಖ ನಿಮಗೇಕೆ ಒಡೆಯರೆ
ಕಷ್ಟವು ನಮ್ಮ ಶರೀರಾ
ಮುಟ್ಟಿದರುಣ್ಣರು ಸತ್ತರೆ ಹೆಣನೆಂದು
ಕೊಟ್ಟೀವಿ ದೇಹವ ನಿಮಗೇ             ೧೨೨

ಬಡಮನ ಮಾಡಿ ಕದ್ದು ತಂದೆವು ಮಗನೆ
ಬಿಡದೆ ಬಂದೀತು ಅಪರಾಧಾ
ಹೊಡೆವನು ತೆಲೆಗಳ ಗಣಪತಿರಾಯನು
ಪೊಡವಿಯೊಳಪಕೀರ್ತಿಯಾಯಿತೂ    ೧೨೩

ಕುಂದುನಿಂದೆಯಪಕೀರ್ತಿಯು ನಿಮಗೇಕೆ
ಇಂದು ಕೊಡವೆವೆಮ್ಮ ಶಿರವಾ
ಬಂದಿರಿ ನೀವೆಮ್ಮ ಬಿರುದಿಗನುಕೂಲ
ಬಂಧನ ಹರಿಯಿತು ನಮಗೇ೧೨೪

ಹರನು ಹಿರಿದು ದುಃಖಗೊಳುತಿರುವಾಗ
ಕರೆದು ಕೇಳಿದ ಸನ್ನೆಯಲಿ
ಖರೇಲೆ ಸಾರಿಯರಿದರಿವರಿಬ್ಬರು
ಸರಿ ಸಂಸಾರ ಬಯಲೆಂದೂ  ೧೨೫

ನಮ್ಮ ಠಕ್ಕಿಗೆ ಹರ ಬೀಳುವರಿವರಲ್ಲ
ನಿಮ್ಮಾಣೆಯರಿತರು ಮುಂದಾ
ಸುಮ್ಮನೆ ಬೋಧಿಸಿ ನೋಡುವ ಇನ್ನೊಮ್ಮೆ
ಒಮ್ಮೆ ಭಕ್ತಿಯನೆಂದ ಹರಿಯೂ        ೧೨೬

ಇವನ ಠಕ್ಕಿನಲ್ಲಿ ಕೆಡಹುವೆ ನೀಗೆಂದು
ಶಿವನು ಯೋಚಿಸಿ ಚಿಂತಿಸುತಾ
ಭವಹರ ಕರದನು ಗುಂಡಬೊಮ್ಮಣ್ಣನ
ಹವಣಿಸಿ ಬುದ್ದಿ ಹೇಳುವರೇ           ೧೨೭

ಅರಸನ ಮನೆಯಲಿ ಕದ್ದೆವು ಗುಂಡಬೊಮ್ಮ
ಉರಿವ ಒಡಲ ಕಿಚ್ಚಿಗಾಗೀ
ಮರಳಿ ನಮ್ಮನು ಹಿಂದಿಕ್ಕಿಕೊಂಬರಿಲ್ಲ
ಹಿರಿದಾಗಿ ಮರೆಹೊಕ್ಕೆ ನಿಮ್ಮಾ         ೧೨೮

ಅರಿಯೆವು ಗುಂಡಬೊಮ್ಮ ನಾವೀ ದೇಶವ

ಕುರುಹನರಿಯರೆಮ್ಮಾನಾರೂ
ಮೆರೆವ ನವರತ್ನ ಒಡೆಯ ಬಂಗಾರವ
ಜರಿಯದಿಟ್ಟುಕೊಳ್ಳಿ ನೀವೂ            ೧೨೯

ಮರೆಯ ಹೊಕ್ಕವರನು ಕೊಯ್ದರೆ ಜಗದೊಳು
ಕುರುಹು ಹೆಸರು ನಮಗೀಗಾ
ಉರುವ ಬಂಗಾರವು ಪದಕವ ಕೊಳ್ಳಿರೊ
ಮೆರೆವರು ನಿಮ್ಮ ಸತಿಯರಿಟ್ಟೂ      ೧೩೦

ಚೆಂಬೊನ್ನ ಮುತ್ತಿನಹಾರ ಮೈದೊಡಿಗೆಯ
ಬಂಗಾರ ರನ್ನ ಮಾಣಿಕದಾ
ಅಂಬುಜ ಮುಖಿಯರು ಇಡಲಳವಡುವರು
ಶಂಭುನಾಥನೆ ಬಲ್ಲ ಹೆಸರಾ            ೧೩೧

ಬಡತನ ಬಂಧನ ದಾರಿದ್ರಗಳಿಗೆಲ್ಲ
ತಡವರೆ ದ್ರವ್ಯದ ಕೊಳ್ಳಿ
ಒಡವೆಗಾಸೆಯ ಮಾತು ಯೇತಕೆ ವೊಡೆಯರೆ
ಮೃಡನೆ ಬಲ್ಲನು ನಮ್ಮನೆನುತಾ      ೧೩೨

ಓಂ ನಮಃ ಶಿವಯೆಂದು ಕಿವಿಯನು ಮುಚ್ಚಿಕೊಂಡು
ಜ್ಞಾನಿಯು ಗುಂಡಬೊಮ್ಮಣ್ಣ
ತಾನಿದು ನಮ್ಮಯ ಬಿರುದಿನ ಭಕ್ತಿಗೆ
ಹಾನಿಯೆಂದು ಕೈಯ್ಯ ಮುಗಿದಾ       ೧೩೩

ಹೆಣ್ಣು ಹೊನ್ನು ಮಣ್ಣು ತ್ರಿವಿಧಗಳೆಂಬಿವು
ಅನ್ಯರೊಡೆವೆ ಶ್ವಾನ ನಡೆಗೂ
ಅಣ್ಣ ಮುಕ್ಕಣ್ಣನ ಶರಣರ ಶಿಶುಗಳ
ಕಣ್ಣು ಮನವು ಒಪ್ಪುವಿವನೂ          ೧೩೪

ಹರಿಹರ ಬ್ರಹ್ಮರು ಆಸೆಯ ಬಿಡರಯ್ಯ
ಸಿರಿಯ ಸತಿಯ ಪರಧನವಾ
ಧರೆಯೊಳಗಿಹ ಸನ್ಯಾಸಿ ಋಷಿಯರೆಲ್ಲ
ಮರುಳರೊಡಲೆಯಾಸೆಯಲೀ          ೧೩೫

ಒಡೆವೆಗಾಸೆಯ ಮಾಡಿ ಕದ್ದುತಂದೆವು ನಾವು
ಪೊಡೆವೀರ ರಾಯನ ಮನೆಯ
ಕೊಡುವೆನು ನಿಮಗೀ ಒಡೆವೆಯ ಗುಂಡಬೊಮ್ಮ
ಮಡದಿ ಮಕ್ಕಳು ದಣಿವನಿತಾ           ೧೩೬

ಕಾಡಿ ಹಿಡಿದುಂಬ ಭೂತ ಜಟ್ಟಿಂಗರನು
ಆಡನು ತಿಂಬ ಬೀರನನೂ
ನೀಡಿರೆ ನೀವೀ ಭೂತ ಪ್ರೇತಂಗಳ
ಓಡಿಸುವ ಭಸಿತವನೂ        ೧೩೭

ಅಂತರಪೆಯಂತರ ಬ್ರಹ್ಮನು ಮುಂತಾಗಿ
ಭ್ರಾಂತಿಗೊಳಿಸಿ ದೆಸೆಗೆಡಿಸಿದಾ
ಇಂಥ ಬಸಿತವ ನೀಡಿರೆ ವೊಡೆಯರೆ
ಎಂತು ಹೋಗದೆ ನಿಮ್ಮಪೊರೆವೇ      ೧೩೮

ಕರೆಕೊರಳ ಭವನ ಪೆರೆನೊಸಲಿನ ಮೇಲೆ
ಮೆರೆವ ವಿಭೂತಿಯ ನೀಡಿ
ಜರಿವರು ಶರಣರು ಸಿರಿ ಮಹಾಲಕ್ಷುಮಿಯ
ಬರಿದೆ ಕಾಡಲು ಬೇಡ ಗುರುವೇ        ೧೩೯

ವೇಷವ ಧರಿಸಿದ್ದು ಆಸೆ ಬಿಡದು ನಮ
ಗೇಸು ನಿಸ್ಪೃಹರಯ್ಯ ನೀವೂ
ದೇಶಾಂತರ ಕೊಟ್ಟ ವೊಡವಿಯ ನೊಲ್ಲಿರಿ
ಈಸು ನಂಬಬಹುದೆ ನಿಮ್ಮಾ            ೧೪೦

ನಂಬಬಹುದೆ ನಿಮ್ಮ ಭಕ್ತರೆಂದು ನಾವು
ನಂಬಿದಾಗಲು ಕೇಡು ನಮಗೆ
ನಂಬದು ಮನವೆಮ್ಮವೊಡೆವೆಯ ಹಿಡಿಯಿರಿ
ಅಂಬಲರಿದು ಹೋಹೆವಿನ್ನೂ           ೧೪೧

ಹೋಗಬೇಡವಯ್ಯ ಶ್ರೀಗುರುಲಿಂಗವೇ
ಬೇಗ ನೀಡಿ ನಿಮ್ಮ ಸೊಮ್ಮಾ
x x x x ಸದೆ ನೀಡಿ ವಿಭೂತಿ ರುದ್ರಾಕ್ಷಿಯ
ಆಗಹೋಗು ಅರ್ಥಬೇಡಾ   ೧೪೨

ಹತ್ತುನೂರು ಲಕ್ಷ ಕರಡು ಮತ್ತೇತಕೆ
ಉತ್ತಮವೊಂದು ಕಟ್ಟಾಣೆ
ಹತ್ತೆ ಕಟ್ಟಿದ ರಾಗ ವೀರ ಕಂಕಣವನು
ಸತ್ಯ ಸೂರಳು ಯೇಕೆನುತಾ  ೧೪೩

ವೀರಕಂಕಣವನು ಕಟ್ಟಿಕೊಂಬುದನೆಲ್ಲ
ಓರೆಗಣ್ಣೆಲಿ ಹರ ಕಂಡಾ
ಓರಂತೆ ಚಿಂತಿಸಿ ಬೆರಗಾಗಿ ನೋಡಲು
ಮಾರ ಪಿತನು ಸನ್ನೆಗರದಾ  ೧೪೪

ಕಂಡಿರೆ ಹರ ನಿಮ್ಮ ಭಕ್ತರನನು ದಿನ
ದಿಂಡೆಯ ತನಗಳ್ತನೆನುತಾ
ಚಂಡ ಪ್ರಚಂಡರು ಜೀವವಹಾರರು
ಗಂಡುಗಲಿಗಳೆಂದ ಹರಿಯೂ            ೧೪೫

ಒಡೆಯಾಸೆ ಮಾಡಲಾಸೆಗಳಿಲ್ಲಯ್ಯ
ಮೃಡನೆ ಭಕ್ತರು ಬಲ್ಲಿದರೂ
ಪೊಡವೀಶ ಗಣಪತಿರಾಯಗೆ ಯಿವರೆಮ್ಮ
ಹಿಡಿದೊಪ್ಪಿಸಿ ಕಾಣಬಹುದೂ          ೧೪೬

ಆಗಲೂ ಯಿವರನುಭಯ ಭ್ರಷ್ಠರ ಮಾಡಿ
ಹೋಗಿ ಕಳವಹರ ನಾವು
ನಾಗಭೂಷಣ ಹರಿಯಿಂತೆಂದು ಮಾತಾಡೆ
ಬೇಗ ಬಂದಿತು ಹುಯ್ಯಲೊದಗೀ      ೧೪೭

ಕೇಳುತ ಹುಯ್ಯಲ ಗುಂಡಬೊಮ್ಮಣ್ಣನು
ಮೇಳವಾಗಿ ನೋಡ ಹೋಗೆ
ಢೋಳು ಗಿಡಿಬಿಡಿ ಬೊಗ್ಗಿನ ಹರೆಲಗ್ಗೆ
ಧಾಳಿ ಬಂದಿತು ಬೇಗದಲೀ   ೧೪೮

ಬೆದರಿತು ಗವುಚೆರಪುರವು ಕೇಳುತಲಲ್ಲಿ
ಕದವ ಹೊಡೆನು ಬಾಗಿಲನೂ
ಮದನಾರಿ ಮನೆಯೊಳು ಗುಂಡಬೊಮ್ಮಣ್ಣನ
ಮಡದಿಯ ಮನ ನೋಡುತಿದ್ದಾ      ೧೪೯

ಮೇಧಿನಿಯೊಳು ನೀವು ಪತಿವ್ರತೆಯರೆಂದು
ಬೋಧಿಸಿ ಕುಟಿಲ ಬುದ್ದಿಯಲಿ
ಆದಯಾಂಬುಧಿ ಹರ ಕೊಂಡಾಡುತ್ತಿದ್ದನು
ಆದಿನಲಾ ಸತಿಯರನೂ       ೧೫೦

ಪೃಥ್ವೀಶ ಗಣಪತಿರಾಯನ ಸತಿಯರ
ಉತ್ತಮವಾದ ಮೈದೊಡಿಗೆ
ಮುತ್ತುಮಾಣಿಕ್ಯ ನವರತ್ನ ಬಂಗಾರವ
ಮತ್ತಿವ ಕೊಳ್ಳೆಂದ ಹರನೂ೧೫೧

ಚಿತ್ತೈಸಿ ನುಡಿವರೆ ಯೀಮಾತ ನೀವು ಗುರುವೆ
ಕರ್ತಾರ ನಗುವನು ನಮ್ಮಾ
ಇತ್ತೇವು ನಮ್ಮ ಕೈಯಾರೆ ನಿಮಗಿವ
ಮತ್ತಾವ ಕೊರತೆಯಿಲ್ಲ ಕೇಳೀ         ೧೫೨

ಕೊಳ್ಳಿಯೆಂಬುದೀಗ ದಳ್ಳುರಿಗಚ್ಚಯ್ಯ
ಒಳ್ಳೆಯ ಶಬ್ದವ ಹೇಳಿ
ಹುಳ್ಳಿಯೆಂಬರೆ ಶ್ರೀಗಂಧದ ತರುವನು
ದಳ್ಳುರಿಯಲ್ಲ ಮಾಣಿಕವೂ            ೧೫೩

ಚೆನ್ನಸರದ ಮುತ್ತು ಚಿನ್ನದ ಕೊಪ್ಪನು
ರನ್ನ ಮಾಣಿಕದ ಬಂಗಾರ
ಇನ್ನಾವ ಬಂಗಾರ ಬೇಕಾದಡೆ ಕೊಳ್ಳಿ
ಕರ್ನಾಭರಣ ಮುಂತಾಗಿ      ೧೫೪

ಗುರುವಿನ ಮಾತಿಗೆ ಸರಿಯಲ್ಲ ಶಾಸ್ತ್ರವು
ಹಿರಿಯರಿಗಿದು ನುಡಿಯಿಲ್ಲಾ
ಧರೆಯೊಳು ಶರಣರು ಮೆರೆದುದ ಹೇಳಿರೆ
ಸ್ಥಿರವಲ್ಲವೊಡೆವೆ ಸಂಸಾರಾ           ೧೫೫

ಚೆಂಗಳೆ ಚಿಲಾಳಾಮ್ಮೆವ್ವೆ ಮೆರದುದ
ಶೃಂಗಾರವಾದುದ ಹೇಳಿ
ಸಂಗನ ಶರಣರು ಮೆರೆದುದ ಹೇಳೆಂದು
ಹಿಂಗಿ ಹೋದರೊಳ ಕಡೆಯಾ           ೧೫೬

ಆಯಿತೆ ಆಯಿತಗಳಿದರು ನಾಲ್ವರು
ಮಾಯಾ ಪಾಶವಿಲ್ಲೆನುತ
ದಾಯವ ಕಾಂಬೆವು ಶೂಲಕೆ ಬಂದಾಗ
ಕಾಯ ಸಹವೊಯ್ಯವ ಹರಿಯೆ          ೧೫೭

ಅಲ್ಲಿ ಕೊಡವನೆಂದ ಗಣಪದವನು ಹರ
ಎಲ್ಲ ಗಣಂಗಳೊಳಗೆ
ಮಲ್ಲಿಕಾರ್ಜುನ ಮನನೋಡಿದ ಸಂಧಿಗೆ ಪದ
ನಿಲ್ಲದೆ ನೂರ ಐವತ್ತೆಂಟೂ೧೫೮

ಅಂತು ಸಂಧಿ ೧೪ಕ್ಕಂ ಪದ ೧೧೩೧ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ