ಸಂಧಿ೧೬

ಸಲೆನೆಲೆ ಭಕ್ತರ ಚರಿಗಳ ಹೊಗಳುವೆ
ಕಲಿವೀರ ಗುಂಡಬೊಮ್ಮಣ್ಣರಾ
ಸಾಲೋಕ್ಯವೈದುದ ಶೂಲವತ್ತಹುದನು
ಲಾಲಿಸಿ ಶರಣರು ಕೇಳಿ        ೧

ಅರಸಾಗ ಕರೆಸಿದಾ ಬಂಡಿಯ ಭೂವರ
ತರಿಸೆಂದ ಶೂಲದ ಮರನಾ
ತರಲು ಹೇಳಿದ ನೆರಡುದ್ದಿಯ ಮರನನು
ಹಿರಿದಾ ದಿಂಡಿಎಯರೆನುತಾ೨

ತಮ್ಮರ ಮತ್ತೀಯ ಬೀಟೆಯ ಬೆಂಡೆಯ
ನಿಮ್ಮವರು ತರ ಬೇಡವೆನುತಾ
ಸಾಮಾನ್ಯವಲ್ಲದ ಸುರಹೊನ್ನೆ ತೇಗವು
ಭೂಮಿಗಾನುವ ಮರ ಬರಲೀ           ೩

ಹೂಡಿದವಾಗಲು ಬಂಡಿಕಾರರು
ಕೂಡಿದಾಗಲೆ ಕತ್ತಿ ಸಹಿತಾ
ನಾಡ ಬಿಟ್ಟಿಯ ಎತ್ತು ಡೊಂಗುರ ವರೆಗಳು
ಬೇಗ ಬರಲಿಯೆಂದೆನುತಾ    ೪

ಕರಿಕಂಠ ಕಾರೆಯು ಹೊರಚವಹ ಹಳ್ಳಿಗನು
ಮೆರೆಹಿನ ಬಿಳಿಯ ಬೆಳ್ಳೆಗಳಾ
ಕಿರುಗೊಡಕತಕನು ಉರಿಗೆಂಪ್ಪಿನ ಜನ
ತುರಿಸುತ ಹೊರಜೆ ಹೂಡಿದರೂ       ೫

ನೆಲದ ಮೇಲೆ ಕಾಲು ನಿಲ್ಲದೊಡುತ
ಬಲುಭುಜ ಚಿಂಚೊರಿಗಳಾ
ತಲೆವಗ್ಗವಿಕ್ಕಿಯೆ ಹಿಡಿದು ಹೂಡಿದರಲ್ಲಿ
ಚೆಲುವ ಹಂಡನು ಬಳ್ಳಿಗನಾ            ೬

ಉಬ್ಬುಗೋಡ ಹುಬ್ಬಿ ಕೊಬ್ಬಿದ ಮಾಸೋರಿ
ಚಿಬ್ಬ ಬಟ್ಟಿಗಮೆಳೆಗೆಂದಾ
ಬೆಬ್ಬಳೆ ಬೆದರುವ ಬಿಳಿಕೆಸ ಹಂಡನು
ಅಬ್ಬರಿಸುತ ಹೂಡಿದರೂ   ೭

ತಂದು ಕಟ್ಟಿದರು ಘಂಟಿ ಗೆಜ್ಜೆಗಳನು
ಒಂದೇ ಸರಾಗದಲವನೂ
ಅಂದವಾಗಿ ಹೊರ ಚವುರ ಕೋಡಿಗೆ ಕಟ್ಟಿ
ಅಂದುಗೆ ಘುಲಕೆನೆ ಕಾಲಾ    ೮

ಮುಖದ ಕನ್ನಡಿ ಕೋಡಣಸು ಬಾಸಿಗದಿಂದ
ಸಕಲ ಶೃಂಗಾರವ ಮಾಡಿದರೂ
ಅಖಿಳ ದೆಸೆಗೆ ದನಿದೋರುವ ಘಂಟಿಯ
ಪ್ರಕಟಿತವ ಘನವಾಯಿತೂ               ೯

ಮುತ್ತು ಮಾಣಿಕ್ಯ ತೆತ್ತಿಸಿದ ಹೊನ್ನಗಂಟಿಯ
ಎತ್ತಿನ ಮುಖದ ಬಾಸಿಂಗಕೆ
ಇತ್ತರು ಮುತ್ತಿನ ದಂಡೆಯ ಕೊರಳಲಿ
ಉತ್ತಮದ ಹಣೆಗಟ್ಟೂ      ೧೦

ತೆತ್ತಸಿದವು ತೆಗೆ ಹಗ್ಗಕೆ ಹೂವಳವು
ತೆತ್ತಿಸಿ ಹೊನ್ನ ಚಿಲುಕಣ್ಣೆ
ಹತ್ತೆ ಕಟ್ಟಿದ ಹೊನ್ನ ಜೊತೆಗೆ ಗೊಂಡೆಯ
ಎತ್ತಿಗೆ ಶೃಂಗಾರವಾಯ್ತೂ   ೧೧

ನಚ್ಚು ಮೆಚ್ಚಿನರದ ಅಚ್ಚುಗೋಲಿಗೆ
ಚೆಚ್ಚುರ ಬಂಡಿಕಾರರಿಗೇ
ಅಚ್ಚುವಾಳಗಳಿಗೆ ಹೂಡಿ ಹೊಡೆದರಾಗ
ಉತ್ಸಾಹ ಬೊಬ್ಬೆಯಗೊಡುತಾ      ೧೨

ಹರಸಿ ಕೊಂಡರು ಕಾನಬೀರರು ಬೆನವಗೆ
ಮರ ಬೇಗ ದೊರಕಲಿ ಎನುತಾ
ತರಿಸಿ ಹೇರಿದರಾಗ ಕಡೆಲೆ ಬಾಳೆಯ ಹಣ್ಣ
ಪರಿಮಳ ಮುಡಿವಾಳದವನಾ           ೧೩

ಉರವಣಿಸಿಯೆ ಬೇಗ ಹೊಡೆದರು ಬಂಡಿಯ
ಧರಣಿ ಇಬ್ಬಾಗವಾಹಂತೆ
ಮೊರೆವಂದುಗೆ ಕಾಲ ಉರಿಗೆಜ್ಜೆ ಗಂಟಿಯ
ಭರವಸಕೆತ್ತು ಬೆಚ್ಚುತಲೀ   ೧೪

ಢೊಳು ನಿಸ್ಸಾಳದ ದನಿಗಳು ಅಡಗಿತು
ಧೂಳು ಮುಸುಕಿತಾ ರವಿಯಾ
ಹೇಳುವೆನೇನನು ಹಳುವದ ಬಂಡಿಯ
ಮೇಳವಾದ ಸಡಗರವಾ      ೧೫

ಅರಸಿಕಂಡರು ಕಾನಮತಿಯ ಹೆಬ್ಬುಗೆಯೊಳು
ಉರುವ ಸುರ ಹೊನ್ನೆಯ ಮರನಾ
ಕರಿಗೊರಳ ಭವನ ಶರಣರಿಬ್ಬರ ಶೂಲ
ಮೆರೆವರೆ ತಕ್ಕ ಹೆಮ್ಮರನಾ  ೧೬

ಮೊಸರೋಗರಬುತ್ತಿ ಹೊಸಬಾಳೆಯ ಹಣ್ಣು
ಹಸಿಯಡಕೆಯು ಮುಡಿವಾಳಾ
ದೆಸೆಗೆ ಬಲಿಯ ಕೊಟ್ಟು ಜನ ಬೀರರಿಗೆಲ್ಲ
ಹೆಸರುಗೊಂಡರು ಏರಿಸುತಾ            ೧೭

ಉಳಿ ಬಾಚಿ ಕೊಡಲಿಗೆ ಕಡಲೆಯನೆರಿಸಿ
ಬಿಳಿಯಲೆಯಡಕೆ ಬೀರರಿಗೆ
ಘಳಿಲನೆ ಮರ ಬೀಳಲೆನುತಲು ಪೊಡಮಟ್ಟು
ಕೊಡಗತ್ತಿಗೆ ಇದಿರಾಗಿ         ೧೮

ಎಳ್ಳು ಚಿಗುಳಿ ನಗೆಡಗಲೆ ಕಬ್ಬಿನ ಕೋಲು
ಉಳ್ಳ ತೆಂಗಿನ ಕಾಯಿ ಬೆಲ್ಲಾ
ತೆಳ್ಳಿಯ ಹೊಟ್ಟೆಯ ಡೊಳ್ಳಿನ ಬೆನಕಗೆ
ಕುಳ್ಳಿತೇರಿಸಿ ಬೇಡಿಕೊಂಡೂ೧೯

ಹೊತ್ತು ಹೋಯಿತೆಂದು ಎತ್ತು ಬಂಡಿಯಹೂಡಿ
ಮತ್ತತೀವೇಗದಿ ಹೇರಿ
ಹತ್ತಿರೆ ವೈಹಾಳಿ ಬಯಲೊಳು ಬಿಟಟ್ರು
ಉತ್ತಮ ಶೂಲದ ಮರನಾ  ೨೦

ಹರಿತಂದು ಹೇಳಿದರವನಿಯ ಪಾಲಗೆ
ಕರೆಸಿದ ಬಡಿಗೆಯಬೇಗಾ
ಮರದ ಮೇಲುದ್ದವ ಕೆಡಿಸದೆ ಶೂಲವ
ಕರ ಬೇಗ ಕೆತ್ತಿ ಮಾಡೆಂದಾ   ೨೧

ಶೀಲವಂತ ಸೋಮಜ್ಜ ಉತ್ಸವದಿಂದ
ಶೂಲವಾಗಲೆ ಕೆತ್ತಿ ನಿಲಿಸೇ
ಮೇಲೆ ಶ್ರೀಗಂಧದ ಮಣಿಯ ತೆತ್ತಿಸಿದನು
ಶೂಲ ಹುಟ್ಟಿ ಬೆಳೆದಂತೇ    ೨೨

ಮುತ್ತು ಮಾಣಿಕ ನವರತ್ನ ತೆತ್ತಿಸಿದಂದದಿ
ಸುತ್ತ ಕುಸುರಿಗೆಲಸಗಳೂ
ಚಿತ್ರಿಸಿ ರಚಿಸಿದ ಶೂಲವ ವಹಿಲದಿ
ಪೃಥ್ವೀಶರಾಯನ ಕೆಲಸಾ   ೨೩

ಸನ್ನೆ ಮರನಕೊಟ್ಟು ಶೂಲವನೆಗಹಿದ
ಇನ್ನೂರು ಮಿಳಗಳ ಹಣ್ಣಿ
ಇನ್ನೇನ ಹೇಳುವೆನದರ ವಿಸ್ತಾರವ
ಸನ್ನದ್ದ ಶರಣರು ಕೇಳೀ     ೨೪

ಅಸಿಯ ಹೊಂಗೇದಗೆ ಎಳಸಂತೆ ಮೊನೆಗಳು
ಕುಸುಮಾಸ್ತ್ರ ನೆಲಗೆಂಬಂತೆ
ಶಶಿಧರ ದಶಶಿರಗಿತ್ತ ಶಕ್ತಿಗಳಂತೆ
ಬಸಿದವಾ ಶೂಲದ ಮೊನೆಯೂ         ೨೫

ಹಂದಿಯ ನೆಚ್ಚಂದು ಅಂದು ಅರ್ಜುನಗೆಲ್ಲ
ನಂದಿವಾಹನ ವರವಿತ್ತಾ
ಚಂದವಾದ ಪಾಶುಪತದಂತೆ ಶೂಲವು
ನಿಂದ ವೈಹಾಳಿ ಬಯಲಲ್ಲೀ           ೨೬

ಈಶನ ಕೈಲಾಸವಾಸರೆ ದಾರಿಯು
ಲೇಸಾಗಿ ಹದವೆಂಬಂತೆ
ದೇಶದ ಜನರಿಗೆ ಸೋಪಾನವಾದಂತೆ
ಲೇಸಾಗಿ ತಾರ ಮಂಡಲಕೆ    ೨೭

ವೀರರು ಗುಂಡಬೊಮ್ಮಣ್ಣಗಳಿಬ್ಬರು
ಮಾರಾರಿ ಮಾರುಗೊಂಡಂತೆ
ಧಾರುಣಿ ಜನರೆಲ್ಲವೋರಂತೆ ಬೆರಗಾಗಿ
ವೀರರ ಶೂಲ ಶೃಂಗಾರಾ    ೨೮

ಆರಾರು ಕಾಣುತುತ್ಸವದಿಂದ ಶೂಲಕೆ
ಓರಂತೆ ಮನದಿ ವಂದಿಸುತಾ
ವಾರಿಜ ಪುಷ್ಪವು ಧೂಪದೀಪಗಳಿಂದ
ಮಾರ ಹರಗೆ ನಮೋ ಎನುತೇ           ೨೯

ಕರದು ಹೇಳಿದರಾಯ ಗುಂಡಬೊಮ್ಮಣ್ಣಗೆ
ಇರವ ಕಂಡಿರೆ ಶೂಲವೆನುತಾ
ಕರ ಬೇಗವೊಪ್ಪಿಸಿ ಒಳಗಿದ್ದ ಕಳ್ಳರ
ಮರುಳಾಗಿ ಕೆಡಬೇಡವೆಂದಾ೩೦

ಅವರ ಜೀವಕೆ ತಪ್ಪಿ ನಮ್ಮ ದಂಡವಕೊಳ್ಳೆ
ಅವರ ಪ್ರಾಣಕೆ ತಪ್ಪಿದಾಗಾ
ಶಿವನ ದೇಗುಲದಲಿ ಸಾವಿರ ಕಪಿಲೆಯ
ಭುವನದೊಳಗೆ ಕೊಂದ ಪಾಪಾ         ೩೧

ಬರಿದಿಗೆ ದಂಡವ ತೆರುವವರಾವಲ್ಲ
ಮೊರೆಹೊಕ್ಕವರ ಕೊಡುವವರಲ್ಲಾ
ಅರಿದು ಮುರಿದು ಮತ್ತೆ ಮಾತೆರಡಿಲ್ಲವು
ಮರೆದು ಕರೆಯೊ ರಾಯರವರಾ        ೩೨

ನೆಟ್ಟ ಶೂಲಕೆ ನೋಡಿ ನೆಟ್ಟನೆ ಗುರಿಯಾಗಿ
ಕಷ್ಟವಿನ್ನಿಲ್ಲವೆಮ್ಮಲ್ಲಿ
ಇಷ್ಟಲಿಂಗವ ಕೊಟ್ಟು ಉಳಿವರಲ್ಲಾ ರಾಯ
ನೆಟ್ಟದ್ದ ಶೂಲಕೆರಗಿದರೇ   ೩೩

ನಮ್ಮ ಮಾತನು ಕೇಳಿ ಕೇಳದೆಯಿದ್ದರೆ
ನಿಮ್ಮ ಕೋರಿಕೆ ಶೂಲವೇರಿ
ನಿಮ್ಮ ಹೆಂಡರಿಗೆ ಬುದ್ದಿಯ ಹೇಳಿಯೆನೆ ರಾಯ
ನೊಮ್ಮೆ ಮನೆಗೆ ಹೋಗಿದೆಯೆಂದಾ    ೩೪

ಕೂಡಿಕೊಂಡು ಹೋಗಿ ನಮ್ಮ ಬಂಟರನೆಂದು
ಓಡಿ ಅಡಗದ ಹಾಗೆನಲೂ
ಓಡುವುದೆ ಹುಲು ಮೃಗಕಾ ಸಿಂಹವು
ಆಡದಿರಿ ಮಾತ ರಾಯಾ     ೩೫

ತೃಣವೆಂದು ಲೆಕ್ಕಿಸರಿಬ್ಬರು ಪ್ರಾಣವ
ತ್ರಿಣಿಯನ ಭಕ್ತರು ಛಲದಿ
ಗುಣನಿಧಿ ಗುಂಡಬೊಮ್ಮ ಕೇಳಿದ ಸತಿಯರ
ಒಡೆಯರಿಗೆಡೆಯಾಯಿತೆಂದೂ           ೩೬

ಒಡೆಯರ ಬದುಕಿನ್ನು ಅಡವಿಯ ಹೊಕ್ಕಿತು
ಸುಡಲಿ ಆರೋಗಣಿಯೇಕೆ
ಬುಡುವನಲ್ಲ ನಿಮ್ಮ ಗಣಪತಿರಾಯನು
ಸಿಡಿದೂಡಿ ಬಂದಿರಿಯೆನಲೂ            ೩೭

ಓಡಿಹೋಗಿ ನಿಮಗೆ ಕೊರತೆಯ ತಹವಲ್ಲ
ನೋಡುವೆವು ಗುರುಪರವಾ
ಜಾಡಿಸಿ ನೆಟ್ಟಿದ್ದ ಶೂಲದ ಸುದ್ದಿಯ
ನಾಡುತ್ತಿದ್ದರು ಎಂದ ಹರನೂ         ೩೮

ಆಳಿದೊಡೆಯ ನೀವು ಬಂಟರು ನಾವಿದ್ದು
ಕೇಳ ಕೆಲಸವಿಲ್ಲ ಗುರುವೇ
ಕೇಳಿರೊ ನೀವು ಬಂದ ಹವಣಬಲ್ಲೆವಿಂದು
ಗಾಳಿಯ ಸೊಡರ ಮಾಡಿದಿರೀ          ೩೯

ನಿಮ್ಮನಲ್ಲಿ ನೀರೊಳಗದ್ದಿಯಾ ತರಿಸಲು
ನಮ್ಮನೊಪ್ಪಿಸ ಬಂದಿರೀಗಾ
ನಮ್ಮ ಮನವು ನಿಮ್ಮ ನಂಬದು ಗುಂಡಬೊಮ್ಮ
ನಮ್ಮಾಣೆಯುಳ್ಳದ ಹೇಳೀ೪೦

ಉಂಡು ಉಟ್ಟವರಲ್ಲ ನೀವು ಸಾಯಲುಬೇಡ
ಕೊಂಡು ಬನ್ನಿ ನಮ್ಮನೀಗಾ
ಮಂಡಲೇಶ್ವರ ಗಣಪತಿರಾಯಗೆಮ್ಮನು
ಕೊಂದೊಪ್ಪಿಸೆಂದನು ಹರನೂ          ೪೧

ನಿಷುಹ ಹಿರಿಯರ ನಾವಾಶೂಲಕೆ
ಒಪ್ಪಿಸುವವರಲ್ಲ ನಿಮ್ಮಾ
ಸರ್ಪಭೂಷಣನಾಣೆ ನಿಮ್ಮ ನೊಪ್ಪಿಸೆವಯ್ಯ
ಇರ್ಪ್ಪುದಂಜದೆ ಮನದೊಳಗೇ          ೪೨

ಹದನ ಕಾಣದೆ ಹರಬೆರಗಾಗಿ ಚಿಂತಿಸೆ
ಮದನ ಪಿತನು ಸನ್ನೆಗೈದೂ
ಇದು ಮತವಿನ್ನಲ್ಲ ಇಲ್ಲಿ ನಾನಿಪ್ಪದು
ಹದನ ಕಂಡುಕೊಂಬ ಮನದಾ           ೪೩

ಹರಿಹರರೆದ್ದರು ತಿರುಕ ಜಂಗಮ ನಾವು
ಇರಬಹುದೊ ಬಾರದೆನುತಾ
ಕರಗಳ ಮುಗಿವುತ ಕಳುಹಿದ ಗುಂಡಬೊಮ್ಮ
ಹಿರಿದಾ ಬಳಲಿದ್ದಾರೆನುತಾ೪೪

ಹರನು ಮೆಲ್ಲನೆ ಎದ್ದು ಸರಿದನಲ್ಲಿಂದ
ಕರೆದು ಸತಿಯರ ಗುಂಡಬೊಮ್ಮ
ಸ್ಥಿರವಲ್ಲದೀ ದೇಹ ನರಲಿಂದ್ಯ ಸಂಸಾರ
ರವಿಯ ಮುಂದಣ ಮಂಜ ಕೇಳೀ       ೪೫

ಮಲ ಮೂತ್ರ ಶ್ಲೇಷ್ಮದ ನೆಲೆಯಲ್ಲ ಜಂತಿನ
ಹಲವು ಕ್ರಿಮಿಯು ಕೀವು ನರಕಾ
ಸಲೆನೆಲೆಯೀ ದೇಹವೆಂದು ನಚ್ಚಲುಬೇಡ
ಗೆಲುವರೇ ಶಿವಭಕ್ತಿಯೊಂದೇ            ೪೬

ಶಿವನ ಸದ್ಭಕ್ತರ ಶಿವನು ಮನ್ನಿಸುವನು
ಭವ ಭವಿಗಳ ಸಂಗಬೇಡಾ
ಅವರಿವರೆನ್ನದೆ ಜಂಗಮ ಬಂದರೆ
ಅವರ ದಾಸೋಹವ ಮಾಡೀ            ೪೭

ಅರಿಕ ಜಂಗಮ ಬಂದರೇಳಿಲಗಾಣಲು
ಕೊರಸುವ ನರಕದಿ ಹರನೂ
ಬರಿದೆ ನೀವೆರಡಕೆ ಸಲ್ಲದೆ ಹೋಗದೆ
ನೆರೆ ನಂಬಿ ಗುರು ಜಂಗಮವಾ           ೪೮

ಪುರಹರ ಸರಸಿಜ ನೀವು ಚಿತ್ತೈಸೆಂದು
ವರ ಸತಿಯರು ಬಿನ್ನೆಯಿಸೆ
ಧರೆಯೊಳು ರಂಡೆಗೂಳುಂಡಿರಲಾರೆವು ದೇಹ
ದೊರಕಲು ನಿಮ್ಮೊಡೆ ಪಿಂಡಾ           ೪೯

ಸತ್ಯ ಪತಿವ್ರತೆ ಮುತ್ತೈದೆತನದಲು
ಮೃತ್ತುಂಜಯನ ಓಲಗಕೆ
ಮತ್ತತೀ ವೇಗದಿ ನಿಮ್ಮಿಂದಲು ಮುನ್ನ
ಅರ್ತಿಯಿಂದಲು ಇರುವೆವೂ೫೦

ಹಲವು ಮಾತಬಲ್ಲ ಲಲನೆಯರೆಂಬರ
ನೆಲೆಯೆಂದು ನಚ್ಚಲುಬಹುದೇ
ಮಾಲೆಯ ನೋಡಿದ ತಾಯಿ ತಂದೆ ಬಂದಾಗಲಿ
ನಿಲಲೀಸವು ಕಣ್ಣನೀರೂ     ೫೧

ಹೃದಯ ಕರಗಿ ಕಣ್ಣ ನೀರು ಬಂದಾಗಲಿ
ಮದನ ಹರಗೆ ತಪ್ಪಿದವರೂ
ಹದುಳವಿಂತೀಗಲಿ ಶಪಥಗಳೇತಕೆ
ಕದಡುವದಂತಃಕರಣಾ        ೫೨

ಅರಸು ಮಕ್ಕಳಲ್ಲ ಅರಿ ನೃಪರಾವಲ್ಲ
ಸರಕು ಮಾಡಿ ಜರವರಿಲ್ಲಾ
ಗುರುಲಿಂಗ ಜಂಗಮ ಮನೆಗೆ ಬಂದರೆ ನೀವು
ಚರಣಸೇವೆಯ ಮಾಡುತಿಹುದೂ      ೫೩

ತರಳ ತನದಲಂದು ಮದುವೆಗಳಾದೆವು
ಕುರುಳ ಕಟ್ಟಲರಿಯದಂದೂ
ಮರಳಿ ಪ್ರಾಯದಿ ನಿಮ್ಮ ತೋಳ ಮೇಲೊರಗಿಯೆ
ಮರೆದೆವು ತಂದೆತಾಯಿಗಳಾ೫೪

ನಿಮ್ಮ ಕೂಡೆ ಉಂಡು ನಿಮ್ಮ ಕೂಡೆ ಉಟ್ಟು
ನಿಮ್ಮ ಕೂಡೆ ಸುಖಪಡದೂ
ನಿಮ್ಮೊಳೋಡೆ ಪಿಂಡವಾಗದೆಯುಳಿದರೆ
ನಮ್ಮದೊಂದು ಬದುಕಲ್ಲಾ            ೫೫

ಮೃಡನ ಸ್ವರೂಪದೊಡೆಯರು ಬಂದಾಗ
ಬಿಡದೆ ದಾಸೋಹವ ಮಾಡುವುದು
ಒಡನೆ ಬಂದೆನೆಂಬ ಗೊಡೆವೆಯ ನೀವು ಬಿಟ್ಟು
ಪೊಡವಿಯೊಳಗೆ ಸುಖವಿಹುದೂ       ೫೬

ಇರುಳು ಗಗನ ಚಂದ್ರನಿಲ್ಲದೊಪ್ಪದು
ಹಗಲೇಕೆ ರವಿಯಿಲ್ಲ ದಿವ್ಯಾ
ಅರಳು ಮೊಗ್ಗೆಗೆ ಬಿರಿಮುಗುಳು ತಾವರೆಗೆಲ್ಲ
ಇರುವುಂಟೆ ಕೊಳ ಬತ್ತಿದಾಗಾ           ೫೭

ಪತಿಗಳು ಮಡಿದಾಗ ಸತಿಯರು ತಾವಿರೆ
ರತುವನವಿಲ್ಲದ ಪದಕದಂತೆ
ಪೃಥ್ವಿಯೊಳಗೆ ಪುರುಷರಿಲ್ಲದ ಬದುಕು ದೈವ
ಸ್ತುತಿಸದ ಕಾವ್ಯಗಳಂತೇ     ೫೮

ನೀವಿಲ್ಲದೊಪ್ಪುದೇ ನಾವಿಲ್ಲಿರುವುದು
ನಾವು ನಿಮ್ಮೊಡೆ ಪಿಂಡಗಳೂ
ದೇವನಕಾಂಬೆವು ನಿಮಗಿಂಥ ಮುಂಚೆಯೆ
ಭಾವ ಬೇಧವು ಬೇಡ ನಿಮಗೇ           ೫೯

ನಮ್ಮ ಸಂಗಡ ನೀವು ಬರಲು ಬಲ್ಲವರಲ್ಲ
ಸುಮ್ಮನಿಪ್ಪುದು ಅತಿ ಲೇಸೂ
ಹೆಮ್ಮೆಯಿಸಿ ಬಿಳ್ದಿರಿ ರಕ್ತಗಂಡಾಗಲು
ನಿಮ್ಮನು ನೋಡಿ ನಗುವುದು ಲೋಕಾ            ೬೦

ಜನವು ಲೋಕವು ಮೆಚ್ಚಿನೆಡವವರಾವಲ್ಲ
ಚಿನುಮಯ ರೂಪ ಬಲ್ಲ ಮನವಾ
ವಿನಯವಲ್ಲಭ ನಿಲ್ಲದಿಪ್ಪದು ಬದುಕಲ್ಲ
ಅನುಮಾನವಿಲ್ಲ ಬಂದೆಪೆವೂ          ೬೧

ನಿಮ್ಮನು ನಿಮ್ಮಯ ಜನನಿ ಜನಕರಲ್ಲಿ
ಸುಮ್ಮನೆ ಕೂಡಿ ಬಿಟ್ಟಿಪವೂ
ನಮ್ಮನು ನಗುವರು ನೆರೆದ ನೋಟಕರಲ್ಲಿ
ನಿಮ್ಮಿಂದಲಪಕೀರ್ತಿಯಹುದೂ        ೬೨

ಸತಿಪತಿ ಸಂಗಡವೊಡೆ ಪಿಂಡವಾದರೆ
ಪೃಥ್ವಿಯೊಳಗೆ ನಗರಾರೂ
ಪತಿಯರಳಿದು ಸತಿಯುಳಿದಾಗ ನಗೆವೆಡೆ
ಮತವಲ್ಲ ಸಂಗಡ ಬಹೆವೂ೬೩

ನೀವು ರಕ್ತವ ಕಂಡು ಹೆದರಿದರಾಗಲ್ಲಿ
ನಾವು ಭಂಗಿತರಾಗಬೇಕು
ದೇವಲೋಕವು ಮೆಚ್ಚಲಿವೆವು ಶಿರಗಳ
ನೀವು ನೋಡಿಯೆ ಪರಿಣಾಮಿಸೀ        ೬೪

ಪರಿಣಾಮವಾಯಿತು ಪರಲೋಕ ಸಾಧನ
ವರ ಸುದತಿಯರಹುದೆಂದೂ
ಶರಣರ ಸಂಗವನೊಂದೊದುಳ್ಳರೆ
ಸ್ಥಿರವಾಗಲಿ ಚಿತ್ತ ನಿಮಗೇ  ೬೫

ಕರ ಕಮಲಂಗಳ ಮುಗಿದು ಬಿನ್ನೆಯಿಸಲು
ಪುರುಷ ರತ್ನವೇ ಕೇಳುಯೆನುತಾ
ನರಕದ ಬದುಕದು ಮುಂಡೆಯ ಜಲವು
ಕರಕಷ್ಟ ಸಂಸಾರದೊಳಗೇ   ೬೬

ಮುತ್ತೈದೆ ತನದಲಿ ನಮ್ಮ ಶಿರವನರಿ
ವುತ್ತ ನಿವಾಳಿಯ ಮಾಡಿ
ಚಿತ್ರ ತರದಿ ನಿಮಗಾರತಿಯನುಯೆತ್ತಿ
ಮತ್ತಲ್ಲಿ ಕಾಂಬೆವು ಹರನಾ೬೭

ಗುಂಡಬೊಮ್ಮಯ್ಯಗಳಿಬ್ಬರು ತಮ್ಮಯ
ಹೆಂಡಿರ ವೀರವ ಕಂಡೂ
ಚಂಡ ಪ್ರಚಂಡದ ವೀರೆಯರಹುದೆಂದೂ
ಕೊಂಡಾಡುತ್ತಿದ್ದರು ನಗುತಾ          ೬೮

ತೆಗೆದು ಬಿಗಿಯಲಪ್ಪಿ ಮುಂಡಾಡತಾಗಲು
ಬಗೆಯ ಬಣ್ಣದ ಸೀರೆಗಳಾ
ಮೃಗಧರ ಜುಟನ ಕಾಂಬರೇಳಿಯೆಂದು
ತೆಗೆದು ಕೊಟ್ಟರುಟ್ಟು ಕೇಳಲೂ       ೬೯

ಅಗಿಲು ಕಸ್ತೂರಿ ಶ್ರೀಗಂಧಗಳಿಂದಲು
ತಿಗುರು ಮೈಮರ್ದನ ಮಾಡಿ
ಮುಗುದೆಯರುಟ್ಟರು ಬಿಳಿ ಪಟ್ಟಾವಳಿಯ
ದುಗುಣ ಹೊಂಬಟ್ಟಿಯ ರವಕೆ         ೭೦

ಕರ್ನಾಭರಣವು ಕಾಲ ಕುಪ್ಪಸದಿಂದ
ರನ್ನ ಮಾಣಿಕದ ಉಂಗುರವೂ
ಚೆನ್ನಿಗಿತ್ತಿಯರೆಲ್ಲ ಶೃಂಗಾರವಾದರು
ಪನ್ನಂಗಧರನಾಸೆಗಳೂ       ೭೧

ಉಟ್ಟ ಪಟ್ಟಾವಳಿ ಮನಕೆ ಬಾರದೆಯಿದೆ
ಉಟ್ಟರು ಬಿಳಿಯ ಸೀರೆಗಳಾ
ಉಟ್ಟಿದ್ದ ಸಡಿಲಿಸಿ ಬಿಳಿದನೆ ಉಟ್ಟರು
ದಿಟ್ಟಿಗೆ ರಕ್ತ ಮೆರವಂತೆ      ೭೨

ಮೇಲೆ ಕಟ್ಟಿದ ಚಿನ್ನದಾರೆಯ ವಂಕುಡಿಗಳು
ಶೂಲದ ಕಿತ್ತಲಗುಗಳೂ
ಶೂಲಪಾಣಿಯಂತೆ ಭಸಿತ ರುದ್ರಾಕ್ಷೆಯು
ಭೂಲೋಕ ಬೆರಗಾಗುತಿರಲೂ          ೭೩

ಗೊಂಡೆಯ ಸೂಸುತ ದುಂಡುಮಲ್ಲಿಗೆ ದಂಡೆ
ತೊಂಡಲು ಸರ ಹೂವು ಸಹಿತಾ
ಕೊಂಡು ಬಂದರು ಕಾಣಿಕೆ ಮಾಲೆಗಾರರು
ಗುಂಡಬೊಮ್ಮಣ್ಣನ ಮನೆಗೇ          ೭೪

ಶೃಂಗಾರ ದಂಡೆಯ ನೋಡಿ ಹಿಗ್ಗುತಲು
ಗಂಗಾಧರನೆ ಅರ್ಪಿಸುತಾ
ತುಂಗ ಕುಚದ ಹರಿಣಾಕ್ಷಿಯರಿಬ್ಬರು
ತಿಂಗಳ ಪ್ರತಿಬಿಂಬದಂತೇ     ೭೫

ಕೊರಳಿಗೊಪ್ಪುವ ಚೆಂಗಣಲಿಗೆ ದಂಡೆಯ
ಮರುಗ ಮಲ್ಲಿಗೆ ಜಾಜಿಗಳಾ
ಸುರಹೊನ್ನೆ ಸಂಪಿಗೆ ಸರಗಿಯ ದಂಡೆಯ
ಪುರಹರಗರ್ಪಿಸಿ ನಗುತಾ     ೭೬

ಎಲ್ಲ ಪುಷ್ಪದ ಪರಿಮಳ ದಂಡೆಯ
ಬಲ್ಲಿದ ಶರಣರು ತೆಗೆದೂ
ವಲ್ಲಭೆಯರಿಗಿತ್ತ ರುತ್ಸವದಿಂದಲು
ಮಲ್ಲಿಕಾರ್ಜುನ ನಮೋಯೆನುತಾ     ೭೭

ಆಗಜೆ ಶರಣೆಂದು ಅಘಹರ ಶರಣೆಂದು
ಸಗುಣ ನಿರ್ಗುಣ ಶರಣೆಂದೂ
ಮುಗದೆಯರಿಬ್ಬರು ಮುಡಿದರು ದಂಡೆಯ
ಜಗದ್ಗುರುವೇ ಶರಣೆನುತಾ೭೮

ಕೂಟ ಕದಂಬದ ಪರಿಮಳ ದಂಡೆಯ
ನೋಟಕ ಭಕ್ತರು ಕಂಡೂ
ಜೂಟಗಂಗೆಯ ನಿಟಿಲಾಕ್ಷನ ವೀರರ
ಪಾಟಿ ಶೃಂಗಾರ ಶ್ರೀಮುಡಿಗೇ           ೭೯

ಈಶನ ಶರಣರ ಕಂಗಳ ಹಬ್ಬವು
ಲೇಸಾಗಿ ನೋಡಬೇಕೆನುತಾ
ಪಾಶುಪತಿಯ ಗಣತಿಂಥಿಣಿ ನೆರದುದು
ಸಾಸಿರ ಲಕ್ಷ ಜಂಗಮವೂ     ೮೦

ಅಲ್ಲಿ ಸಿಂಹಾಸನ ವಿಕ್ಕಿ ಕುಳ್ಳಿತರಾಗ
ಎಲ್ಲಾ ಜೆಡೆಯ ಜಂಗಮವೂ
ಎಲ್ಲಿಯೆ ತೆರವಿಲ್ಲ ಅಂಗಡಿಯೊಳೆಗೆಲ್ಲ
ಮಲ್ಲಿಕಾರ್ಜುನ ಬಲ್ಲ ಸಿರಿಯಾ       ೮೧

ಗುಂಡಬೊಮ್ಮಯ್ಯರು ಹೆಂಡಿರು ಸಹಿತಲು
ದಂಡ ಪ್ರಣಾಮ ಮಾಡಿದರೂ
ಕೊಂಡು ಬಂದರು ಶ್ರೀಗಂಗಾಜಲವನು
ದುಂಡು ಮಲ್ಲಿಗೆ ಪುಷ್ಪ ಸಹಿತಾ      ೮೨

ಆಗಲೆ ಅಗಣಿತ ಜಂಗಮ ಸಮಯದಲ್ಲಿ
ಬೇಗ ಪಾದಾರ್ಚನೆ ಮಾಡಿ
ಶ್ರೀಗಂಧವಕ್ಷತೆ ಪುಷ್ಪಧೂಪಗಳಿಂದ
ಶ್ರೀಗುರು ಶರಣೆಂದರ್ಚಿಸುತಾ           ೮೩

ಸಂತೋಷ ಮಾಡಿದಗಣಿತ ಹಿರಿಯರು
ಇಂತಾರು ಸರಿ ನಿಮಗೆನುತಾ
ಅಂತಾ ನಾಲ್ವರ ನೊಸಲಿಗೆ ಭಸಿತವ
ಸಂತೋಷದಿಂದ ಲೇಪಿಸುತಾ            ೮೪

ಭಾಷೆಯ ಭಕ್ತಿಯ ಮೀಸಲು ಅಳಿಯದೆ
ವಾಸಿಸು ಸಂದಿತು ನಿಮಗೆನುತಾ
ಪಾಶುಪತಿಗಳಾಗ ಕೊಂಡಾಡುತಿರ್ದರು
ದಾಸೋಹಿ ಗುಂಡಬೊಮ್ಮಣ್ಣನಾ    ೮೫

ಮೃಡ ಮುರವೈರಿಯು ಬುಡಜಂಗಮವಾಗಿ
ಕಡೆಯಲಿದ್ದರು ಜರವುತಲೀ
ಬಿಡಿ ನಿಮಗೇತಕೊ ಬಡಮನದಾ ಭಕ್ತಿ
ಸುಡಲಿ ಸೂಳೆವೆರಗುಗಳಾ    ೮೬

ಹಂದಿಯಾಗಿ ಹೇಡಿಗೊಂಬರೆ ನೀವೀಗ
ಹಿಂದಕೆ ತೊಲಗಿರೋಯೆನುತಾ
ಮುಂದಿರ್ದ ಶೂಲವ ಹರನೇರುವೆನೆಂದ
ಬಂದೆವೆಹಳಡದ ಮುನ್ನಾ   ೮೭

ಕರುಣಿಸಿದವರಿಗೆಮಗೆ ನೀವೆಲ್ಲವ
ಶರಣಾರ್ಥಿ ಸುಮ್ಮನಿರಯ್ಯಾ
ಅರ ಘಳಿಗೆಯೊಳೀ ಶೂಲವನೇರುವ
ಸಿರಿಯ ನೋಡಿ ನಮ್ಮ ಜರಿಯೀ        ೮೮

ತಿರುಕ ಜಂಗಮ ನಾವು ನೋಡಲು ಬಂದೆವು
ಸರಕು ಮಾಡುವರಿಲ್ಲ ನಮ್ಮಾ
ಹರಹರ ಕರಪಾಪ ಈ ನುಡಿ ನುಡಿವರೆ
ಶರಣು ಚಿತ್ತಸೆಂದರಾಗಾ     ೮೯

ಬಲದ ಕೈಯಲಿ ಕಿತ್ತಲಗ ಹಿಡಿದುಕೊಂಡು
ಎಡದ ಕೈಯಲಿ ಬೊಬ್ಬಗೊಡಲೂ
ಕೆಲಬಲದವರನು ಝಲ್ಲನೆ ಚೆಲ್ಲತ
ಒಲದು ಬಿದ್ದರು ಭಯಗೊಳುತಾ     ೯೦

ಎಡದಲು ಬಲದಲು ಪಲ್ಲವ ಸತ್ತಿಗೆ
ಹಿಡಿದವಿಬ್ಬರು ವೀರರಿಗೇ
ನಡದು ಬಂದರು ಚಿತ್ರಪತ್ರ ಸಾಧನೆಯಲಿ
ಒಡನೆ ಜಂಗಮ ಉಘೇಯೆನುತಾ       ೯೧

ಢೊಳು ಗಡಿಬಿಡಿ ಕಾಳೆ ನಾಗಸ್ವರವು ಶಂಖ
ತಾಳ ಮದ್ದಳೆ ಕಂಸಾಳೆ
ಮೇಳದ ಕೈಸಾಳ ಜಾಗಟಿ ಗಂಟಿಯೂ
ಸೂಳೈಸಿ ಮೊಳಗುವ ವಾದ್ಯ            ೯೨

ಊರ ನಾರಿಯರೆಲ್ಲ ಆರತಿಯನೆ ತಂದು
ವೀರರ ಮುಂದೆ ನಿಂದಿರ್ದು
ವೀರ ಸೇಸೆಯ ನಿಟ್ಟು ಹರಸಿ ಆರತಿಯೆತ್ತಿ
ವೀರ ಸ್ವರ್ಗವಾಗಲೆನುತಾ   ೯೩

ಬರು ಬರುತ ಮುಂದಿರುತಿಪ್ಪ ಶೂಲದ
ಶರಣರು ಕಾಣುತ ಭರದಿ
ಭರವಸದಿಂದಲು ಬೊಬ್ಬೆಯ ಕೊಟ್ಟರು
ಧರಣಿಯು ಬಾಯಿದೆರೆವಂತೆ            ೯೪

ತಾಳ ಮೇಳದ ಬಲು ವಾದ್ಯದ ರಭಸಕೆ
ಕಾಳೆ ಉಕ್ಕಡಗಾಳೆ ದನಿಗೆ
ಘೀಳಿಟ್ಟು ಬ್ರಹ್ಮಾಂಡವೋಡುವಂತೆ ಬೊಬ್ಬಿಡೆ
ಕೇಳಿತು ಕೈಲಾಸದವರೂ     ೯೫

ನಡುಗಿತು ಮುಂಗೆಟ್ಟು ಭಯಗೊಂಡು ಬಾಗಿಲ
ದಡಿಗೆ ಲಾಳ ಮಂಡಿಗೆಯಾ
ಕಡು ಬೇಗ ಹೂಡಿತು ಸುರರು ಬಾಗಿಲುಗಳ
ಒಡೆಯರಿಲ್ಲದೆ ಕೆಟ್ಟೆವೆನುತಾ          ೯೬

ಇಂದೆಮ್ಮ ಕೈಲಾಸ ಧೂಳಿಗೊಡೆಯಾಗಿ
ಬಂದ ಧಾಳಿಯು ಬಿಡದೆನುತಾ
ಚಂದ್ರಧರನು ಭೂಲೋಕಕೆ ಹೋದುದು
ಇಂದರಿಹಿತೆಂದರು ಸೂರರೂ            ೯೭

ಬಾಯ ಬಿಟ್ಟರು ಸುರಗಣಿತವಾಗಲು ಶಿವ
ಕಾಯವಿಲ್ಲದೆ ಕೆಟ್ಟೆವೆನುತಾ
ಹೋಯಿತು ಕೈಲಾಸವಿಗೆಂದು ಬೊಬ್ಬಿಡೆ
ಬಾಯಿಗೇಳದ ವೀರೇಶಾ     ೯೮

ವೀರೇಶ ವೀರಭದ್ರನು ಕೇಳಿದ
ಆರೋ ಇಲ್ಲಿಗೆ ಬಾಹೆನೆನುತಾ
ಬೋರನೆ ಕಳುಹಿದ ದ್ವಾರಪಾಲಕನು
ಆರಾದರೆ ಕರೆಯೆನುತಾ       ೯೯

ಮತ್ತಾರೆಂದರಿಯಲು ಬಾರದು
ಚಿತ್ತೈಸಿ ಬಿನ್ನಹವೆನುತಾ
ಸುತ್ತಲರಸುದಾಳಿ ಬರುತಲದೆಯೆಂದು
ಹತ್ತರೊಳಗೆ ಬಿನ್ನೆಯಿಸೇ    ೧೦೦

ಅಬ್ಬರ ಬೊಬ್ಬೆಯು ಲಗ್ಗೆಯ ಹರೆಗಳು
ಉಬ್ಬಿಯೊಳಗೆ ಮೊಳಗುತಲೂ
ತಬ್ಬಿತು ಭಕ್ತರ ಬರವೆಂದು ಹೇಳಿದ
ದಿಬ್ಬ ಮೂರುತಿ ವೀರಭದ್ರಾ           ೧೦೧

ಸತ್ಯನಿತ್ಯವುಳ್ಳ ಗುಂಡಬೊಮ್ಮಣ್ಣನ
ಸತಿಯರ ಬಾಬ್ಬಾಟವೆನುತಾ
ಅತ್ತ ಕೈಲಾಸವ ಮುಟ್ಟಿದವಾ ಧ್ವನಿ
ತತ್ತಳಗೊಂಡಿತು ಸೂರರೂ  ೧೦೨

ಹರನ ಹಿರಿಯ ಮಗ ವೀರೇವರ ಕಂಡು
ಸುರರು ನೀವಂಜದಿರೆನುತಾ
ಧರೆಯೊಳು ಶೂಲಗಳೆರುತಲ್ಲಿದ್ದಾರೆ
ಶರಣರಿಬ್ಬರುಯೆಂದೆನುತಾ೧೦೩

ಹೆದರಿ ನೀವಂಜಿಯೆ ಭಯಗೊಳ್ಳಬೇಡೆಂದು
ಮದನಾರಿ ಸುತನು ವೀರೇಶಾ
ಹದನರಿಹಿದ ದೇವರ್ಕಳಿಗೆಲ್ಲಕೆ
ಇದು ನೆಲೆ ಶೂಲವೇರುವುದೂ          ೧೦೪

ಧಾರಣಿಯಿಂದಲು ಗುಂಡಬೊಮ್ಮಣ್ಣನ
ಮಾರಾರಿ ತಾಹನೆಂದೆನುತಾ
ಕೇರಿಗಳೊಳು ಸಾರಿರಾರತಿ ತಹುದೆಂದು
ವೀರೇಶ ಭೃಂಗಿಯ ಕಳುಹೇ೧೦೫

ಸುರ ಸತಿಯರು ನೀವು ಆರತಿ ಮಾಡಿರೆ
ಪುರಕೆ ತೋರ ಗುಡಿಕಟ್ಟಿ
ಹರ ನಾಳೆ ಬಂದನೆಂದು ಡಂಗುರವನು
ಹರಿದು ಸಾರು ಹೋಗೆಂದಾ೧೦೬

ಉತ್ಸಾಹದಿಂದಲು ಹೊರವೊಂಟ ಭೃಂಗಿ ತಾ
ಬೆಚ್ಚರದಿಂದ ಲೋಗರವಾ
ನಿಶ್ಚಯದಿಂದಲು ಡೊಂಗುರ ಹೊಯ್ದನು
ಅಚ್ಚ ಲಿಂಗೈಕ್ಯ ಕೇರಿಯಲಿ  ೧೦೭

ಕೇರಿ ಕೇರಿಯಲಿ ಪನ್ನೀರ ಛಳೆಯವು
ಸಾರಣಿ ಸಾದು ಕುಂಕುಮದಾ
ಓರಣದಾ ಮುತ್ತುರಂಗವಲ್ಲಿಯನಿಕ್ಕಿ
ತೋರಣ ಗುಡಿ ಗಟ್ಟಿತಾಗಾ೧೦೮

ಶಶಿಮುಖಿಯರು ಕಳಸಕನ್ನಡಿಗೊಳಿರೆ
ಪಶುಪತಿ ಬರುತ್ತಿದ್ದಾನೆ
ವಸುಧೆಯ ಭಕ್ತರು ಗುಂಡಬೊಮ್ಮನ
ಸತಿಯರು ಸಹಿತೊಡಗೊಂಡು          ೧೦೯

ಹರನು ಭಕ್ತರ ಮೇಲೆ ಹಿರಿದಾ ಮೋಹವು
ಖರ ಬೇಗಲಾರತಿ ಮಾಡಿ
ತಾರದೆಯಿದ್ದರೆ ಕೋಪಿಸುವನೆಂದು
ಹರಿದು ಸಾರಿದ ಭೃಂಗಿನಾಥಾ           ೧೧೦

ಕೇಳುತ ಜರಿದರು ಸುರರೆಲ್ಲ ತಮತಮ
ಗಾಳಿಗೊಳುತ ಭೃಂಗಿಯೊಡನೇ
ಕೇಳಯ್ಯ ನರರಿಗೆ ಈಸು ಸಂಭ್ರಮವೇಕೆ
ಹೇಳು ನೀನವರು ಮಾಡಿದುದಾ        ೧೧೧

ನರ ಲೋಕದೊರಗಲ್ಲ ಗಣಪತಿರಾಯನ
ಅರಮನೆಯನು ಒಳಹೊಕ್ಕು
ಹರನು ಕನ್ನವನಿಕ್ಕಿವೊಡೆವೆಯಲ್ಲವ ಕದ್ದ
ಶರಣರ ಮೊರೆಹೊಕ್ಕರಲ್ಲೀ            ೧೧೨

ರುದ್ರರಾಯನ ಸುತ ಗಣಪತಿರಾಯನು
ಗರ್ದಿಸಿ ಕಳ್ಳರ ಬೇಡೆ
ನಿರ್ಧಾರವಾಗಿಯೆ ಕೊಡದೆ ಹಿಂದಿಕ್ಕಿಕೊಂಡು
ಉದ್ದಿಯ ಶೂಲವೇರಿದರೂ            ೧೧೩

ಅವರಿಗೆ ಮೆಚ್ಚಿದನಭವ ಹರನು ತಾ
ನವರನು ತರುತ್ತಾಯಿದ್ದಾನ
ಅವರು ನಾಲ್ವರು ಸಹ ಬರುವ ಸಂಭ್ರಮವನು
ವಿವರಿಸಿ ಭೃಂಗಿ ಹೇಳಿದನೂ೧೧೪

ದೇವರ್ಕಳೆಲ್ಲರು ಕೇಳುತುತ್ಸಾಹ ಮಾಡಿ
ತಾವಾಗ ಗುಂಡಬೊಮ್ಮಣ್ಣಗೆ
ತಾವು ಗುಡಿಯ ಕಟ್ಟುತರುವತ್ತು ಮೂವರು
ದೇವರ ಕೈಲಾಸದೊಳಗೇ    ೧೧೫

ಸತ್ಯಕೆ ತಪ್ಪದೆ ಗುಂಡಬೊಮ್ಮಣ್ಣನು
ಮರ್ತ್ಸಲೋಕದೊಳಗಿತ್ತಾ
ಮತ್ತಾಗ ಶೂಲದ ಸುತ್ತಗುದ್ದುಗೆ ಯಿಕ್ಕಿ
ಇತ್ತಂಡ ಬಂದು ಕುಳಿತರೂ೧೧೬

ನೆರದಿರ್ದ ನೋಟಕ ನೆರವಿ ಹಿರಿಯರೊಳು
ತಿರುಗಿ ಶೂಲವ ಬಲಗೊಂಡೂ
ಮರಳಿ ಕುಳಿತರಾ ಶೂಲದ ಮೊದಲಲ್ಲಿ
ಹರಪೂಜೆ ಮಾಡಬೇಕೆನುತಾ            ೧೧೭

ಅಲ್ಲಿ ಲಿಂಗಾರ್ಚನೆಯ ಮಾಡಿಯೆ ವೀರರು
ಎಲ್ಲ ಪತ್ರೆ ಪುಷ್ಪದಲೀ
ಅಲ್ಲಿ ದೇವರಿಗೆ ಶೂಲವ ನೈವೇದ್ಯವ
ನಿಲ್ಲದರ್ಪಿಸೆ ಹರ ಕಂಡಾ    ೧೧೮

ಕಡೆಗಣ್ಣಲು ನೋಡಿ ಮೃಡನು ನಗುತಲಿದ್ದ
ಹಿಡಿವೆನಲ್ಲಿಯೆ ತಪ್ಪನೆನುತಾ
ಹಿಡಿದ ನೈವೇದ್ಯವ ದೃಢಮನದೊಳು ಕೊಳದಿರೆ
ಸುಡಿಸುಲೆ ಭಕ್ತಿಯನಲ್ಲಿ     ೧೧೯

ಹಿಡಿದಿರ್ದ ಛಲಭಕ್ತಿ ಸುಡಲೆಂದೆನಿಸುವೆ
ಕಡುಶೀಲವಂತರನೆನುತಾ
ಮೃಡನಡದನು ಮುರವೈರಿಯು ಸಹಿತಲು
ಪೊಡವೀಶ ಗಣಪನೊಲಗಕೆ೧೨೦

ನಿಚ್ಚಟ ಗುಂಡಬೊಮ್ಮಣ್ಣಗೆ ಶೂಲವು
ನಿಶ್ಚಯ ಶಿವಲೋಕವಾಯಿತೂ
ಚಚ್ಚರದಲ್ಲಿ ಕೇಳಿರೆ ಸಂಧಿಗೆ ಪದ
ನಚ್ಚರಿ ನೂರಿಪ್ಪತ್ತೊಂದೂ೧೨೧

ಅಂತು ಸಂಧಿ ೧೬ಕ್ಕಂ ಪದ ೧೩೮೯ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ