ಸಂಧಿ೧೭

ನೀಲಕಂಠ ನಿಮ್ಮಯ್ಯನು ನಿತ್ಯನು
ಶೂಲಿ ಗಿರೀಶ ಶಂಕರನೂ
ನೀಲ ಮೇಘ ಶ್ಯಾಮ ಹರಿ ಸಹ ಗಣಪತಿ
ರಾಯ ನೊಲಗಗೈದಿದರೂ  ೧

ಲಾಕುಳ ಬೆತ್ತದ ಕೋಲು ಜಪದ ಸರ
ವಾಕಕ್ಷಯಾಧಾರ ಭಸಿತಾ
ಜೊಕೆಯ ಜಂಗಮ ರೂಪಾಗಿ ಮೌನದಿ
ಶ್ರೀಕಂಠ ಹರಿ ಸಹ ನಡದಾ   ೨

ಅಕ್ಷಯ ಸಾಮ್ರಾಜ್ಯ ಸಂಪದವೆನುತಲು
ಉತ್ತಮದಲು ಹರಿ ಹರಸೀ
ಕಕ್ಷೆಯೊಳಾಧಾರ ವಿಭೂತಿಯ ತೆಗೆವುತ
ಚೆಚ್ಚರದಲಿ ರಾಯನಿತ್ತಾ    ೩

ಸರ್ವಜೀವ ದಯಾ ಪಾರಾಗನೆಂದು
ಉರ್ವ್ವಿಯೊಳಗೆಲ್ಲ ಕೊಂಡಾಡೆ
ಪರ್ವತಕೆ ತಾರತದತ್ತಲು ಕೇಳಿಯೆ
ಸರ್ವ ಜಂಗಮ ಬಂದಿರಿಲ್ಲಿ  ೪

ಇತ್ತ ಕುಳ್ಳಿರಿ ಬನ್ನಿ ಬಿಜೆ ಮಾಡಿವೊಡೆಯರೆ
ಚಿತ್ತೈಸಿ ಬಂದ ಕಾರ್ಯಗಳಾ
ತೊತ್ತು ಭೃತ್ಯನು ನಾನು ನಿಮ್ಮ ಶ್ರೀಚರಣೆ
ಮತ್ತಾವ ಉಪಚಾರ ಬೇಡಾ            ೫

ಏನ ಬೇಕೆಂಬುದ ಬೆಸಸಿ ಚಿಕ್ಕೊಡೆಯರೇ
ಮೌನ ಹಿರಿಯರಿಗೇಕೆನುತಾ
ಜ್ಞಾನಿ ಗಣಪತಿರಾಯ ಕೈಮುಗಿದು ಕೇಳಿದ
ತಾನವರೊಡೆನಿದ್ದ ಹರಿಯಾ            ೬

ಹರನ ಸದ್ಭಕ್ತರು ತಿರು ಜಂಗಮರಿಗೆ
ಧರೆಯೊಳನ್ನವನಿಕ್ಕುತಿರಲೂ
ಖರ ಕಷ್ಟ ಮಾತುಗಳವರಿಗೆ ಹೊದ್ದರು
ಮರಳಿ ನುಡಿಯರಿದವರು ಮೌನಾ     ೭

ತಾವು ತಮ್ಮ ಮೌನದಿ ರಾಜ್ಯವಾಳಲಿ
ನೀವು ಹೇಳಿರೆ ಬಂದ ಹದನಾ
ತಾವು ಈ ಹಿರಿಯರು ಬಹು ತೀರ್ಥವಾಸಿಗಳು
ನಾವು ಹೇಳುವೆ ರಾಯ ಕೇಳೋ         ೮

ಆವ ಜಾತಿಯಾದಡವರು ಜಂಗಮ ಬಾರೆ
ಭಾವ ಶುದ್ಧದಿ ಭಕ್ತಿಮಾಡೆ
ಆವ ದೇಶಾಂತರಿ ನೋಡದೆ ಹೋದಾಗ
ಆವಾಗ ನರಕಗಳೆಂದಾ         ೯

ಇಂತೆಂದು ಸಾರುವ ಆದ್ಯರ ವಚನಗ
ಳೆಂದಾ ಹಿರಿಯರು ಹೇಳೇ
ಅಂತು ಕಾರಣ ನಾವು ನೋಡಬಂದೆವು ರಾಯ
ಸಂತೋಷ ನಿನ್ನ ರಾಜ್ಯಗಳೂ           ೧೦

ಹೋಯಿತು ನಮ್ಮನು ಹೊದ್ದಿದ್ದ ಪಾಪವು
ಜಿಯಾ ನಿಮ್ಮನು ಕಂಡಾಗ
ಬಾಯ ನಿರೂಪ ಬೇಡ ಬಂದುದ ಬೆಸಸಿರೆ
ಆಯಾಸ ಬಳಲಿದಿರೆನುತಾ   ೧೧

ಪೃಥ್ವೀಶ ನೀ ಕೇಳು ನಿನ್ನ ರಾಜ್ಯದೊಳೆಲ್ಲ
ಸತ್ಯರು ಗುಂಡಬೊಮ್ಮಣ್ಣರೂ
ಹತ್ತೆಂಟು ಸಾವಿರ ಜಂಗಮಕ್ಕನುದಿನ
ನಿತ್ಯವಾಹಾರವ ನೀವರೆಂದೂ           ೧೨

ಅತ್ತ ಕೇಳಿದೇವಲ್ಲಿ ಉತ್ತರ ದೇಶದಿ
ಅರ್ತಿಮಾಡಿ ಹಿರಿಯರೆಲ್ಲಾ
ಇತ್ತಲು ಹಾರೈಸಿ ನೋಡಲು ಬಂದೆವು
ವ್ಯರ್ಥವಾಯಿತೆಂದ ಹರಿಯೂ          ೧೩

ಸೇತುರಾಮೇಶ್ವರ ಕೇದಾರವೆಂದೆಂಬ
ತೀರ್ಥ ವಾರಣಾಶಿಗಳಾ
ಅತ್ತ ಸ್ತ್ರೀ ರಾಜ್ಯವ ನೋಡುತ ಬಂದೆವು
ಭೂ ತಳದ ಮೇರುವಿಡಿದೂ೧೪

ಉತ್ತಮವಾಗಿರ್ದ ಪುಣ್ಯತೀರ್ಥದ ಮೇಲೆ
ಸತ್ಯವಂತರ ನೋಡುತಲೀ
ಇತ್ತಬಂದೆವು ಗುಂಡಬೊಮ್ಮಣ್ಣನ ನೋಡ
ಉತ್ತಮ ಸದ್ಭಕ್ತರೆಂದೂ     ೧೫

ಅವರ ಗೃಹವು ವಾರಣಾಸಿಗೆ ಮಿಗಿಲೆಂದು
ಅವರ ನೋಡ ಬಂದೆವೀಗಾ
ಅವರ ನೋಡನೆಂದರೆಮಗೆ ಪುಣ್ಯಗಳಿಲ್ಲ
ಶಿವಬಲ್ಲ ಬಂದ ಧಾವತಿಯಾ          ೧೬

ಅಲ್ಲಿಗಲ್ಲಿಗೆಯೆಲ್ಲ ತೀರ್ಥವ ತಿರುಗಿದ
ಬಲ್ಲ ಹಿರಿಯರೆಂದು ರಾಯಾ
ಇಲ್ಲಿ ಬನ್ನಿಯಿತ್ತ ಮೂರುತಿಗೊಳ್ಳನೇ
ಅಲ್ಲಿಯಾಡಿದ ಹರಿ ಮಾತಾ            ೧೭

ಅರಸಿನ ಚಾವಡಿಯೊಳಗಿ ಹಿರಿಯರು
ಪರಿಕಿಸಿ ಕುಳ್ಳಿರರೆನುತಾ
ಖರ ಕಷ್ಟ ನಿನ್ನಯ ತೆಲುಗು ದೇಶವು ರಾಯ
ಇರಲಿಲ್ಲ ದೇಶಾಂತರಿಯಾಗಿ            ೧೮

ಯೋಗಿ ಜೋಗಿಯು ಶ್ರವಣ ಸನ್ಯಾಸಿಗಳಿಲ್ಲಿ
ಆವ ಹಿರಿಯರಾದವರೂ
ಶ್ರೀಗುರುವೆನಿಸಿಯೆ ಕೊಂಡು ಭೂಮಿಯ ಮೇಲೆ
ಹೀಗೆ ಕದ್ದರೆ ಹಿರಿಯರಿಹರೆ೧೯

ನಿರ್ಧಾರವಾಗಿಯೆ ಕದ್ದರು ಗುರುವೆ
ಉದ್ದಂಡ ಗುಂಡಬೊಮ್ಮಗಳೂ
ಬುದ್ಧಿಗಲಿಸಿ ನೀವು ನಿರೂಪವ ಕೊಡಬೇಡ
ಉದ್ದಿಯ ಶೂಲಕಿಕ್ಕಿಸುವೆ   ೨೦

ಕೇಳು ಗಣಪತಿರಾಯ ನಿನಗೀಗ ಬುದ್ಧಿಯ
ಹೇಳ ಬಲ್ಲ ಮಂತ್ರಿಯಿಲ್ಲಾ
ಚಾಳಯಿಸಿ ಕಳ್ಳರು ಓಡಿಯೆ ಹೋದರೆ
ಬಾಳುವರಿಗೆ ಶೂಲವುಂಟೇ   ೨೧

ಹೊತ್ತ ಹೆಜ್ಜೆಗೆ ದಂಡ ಲೋಕದೊಳಗೆ ತಥ್ಯ
ಮತ್ತಾರು ಕೊಂಡವರಿಲ್ಲಾ
ಅತ್ಯಂತ ಪಾಪವು ನಿನಗೆ ಗಣಪತಿಯೆಂದು
ಹತ್ತಿರೆ ಹರಿ ಹೇಳುತ್ತಿದ್ದಾ  ೨೨

ಕಿಡಿಕಿಡಿಯೆರಗುವ ಕಡುಗೋಪವಡಗಿತು
ನುಡಿದ ಮೀಸಲ ಭಾಷೆ ಬಳಸಿ
ಹಿಡಿದಿದ್ದ ಖಡುಗದ ಡಗೆಡಾರ ತಗ್ಗಿತು
ಒಡನೆ ಮೂಡಿತು ಕರುಣಕಿರಣಾ        ೨೩

ಉಪದೇಶವಾಯಿತು ತಪಸಿಯ ನುಡಿಯೆಂದ
ನೃಪತಿ ಸಂತೋಷಗಳಿಂದಾ
ಕುಪಿತ ಕಾಳೋಗರ ಕೋಪವಡಗಿ ರಾಯ
ತಪಸಿಗೇಶವ ಬಿಟ್ಟೆನೆಂದಾ   ೨೪

ದೃಷ್ಟವಾಗಿ ನೀನು ಗುಂಡಬೊಮ್ಮಣ್ಣನ
ಬಿಟ್ಟು ದುಂಡಾದರೆಯೀಗಾ
ಬಿಟ್ಟರು ಹಿರಿಯರು ಈಗಿಲ್ಲಿ ಮೌನವ
ಕೂಟ್ಟರು ಹರಕೆಯ ನಿಮಗೇ            ೨೫

ಎಂದು ಹೇಳಿದ ಹರಿ ಧರ್ಮಾಧರ್ಮವ
ಚಂದವಾಗಿಯೆ ರಾಯನೊಡನೆ
ಮಂದಿಯ ಕಳುಹಿದ ಗಣಪತಿರಾಯನು
ಅಂದಾಗ ಗುಂಡಬೊಮ್ಮಣ್ಣರಾ       ೨೬

ಕರೆಯಲು ಹೋದರು ಕಟ್ಟಿಗೆಯವರಾಗ
ಬರಬೇಗ ಶೂಲದ ಬಳಿಗೆ
ಕರುಣಿಸಿ ಪ್ರಾಣವ ಕಾಯ್ದನು ರಾಯನು
ಬರಹೇಳಿದ ನಿಮ್ಮನೀಗಾ     ೨೭

ಅಳುವುತ ಹೋಯಿವುತ ಬಳಕೆ ಮಾತಿಗೆ
ಬಳಿಯಟ್ಟಿ ಬಂದಿರೆ ನೀವೂ
ಕಳವಳ ಕಕ್ಕುಲಿತೆ ಪ್ರಾಣದಾಸೆಗಳಿಲ್ಲ
ತಳು ಹೋಗುರಾಯ ಕೋಪಿಸುವಾ    ೨೮

ನಮ್ಮ ಹರಗೆ ನಾವು ಶೂಲವನರ್ಪಿಸಿ
ನಿರ್ಮಾಲ್ಯ ಮಾಡುವರಲ್ಲಾ
ಹೆಮ್ಮೆಯ ಮಾತೇಕೆ ಸುಮ್ಮನೆಯಿರ ಹೇಳಿ
ನಿಮ್ಮರಾಯಗೆ ಹೋಗಿ ನೀವು           ೨೯

ನಿಮ್ಮ ರಾಯನು ಮದ್ದ ಕುಣಿಕೆಯತಿಂದಂತೆ
ನಮ್ಮನು ಕರಸಲುಬಹುದೇ
ನಮ್ಮ ಹರನ ವೇಳೆ ನಮಗೆ ತಪ್ಪುದಯ್ಯ
ನಮ್ಮ ದಾರಿಯು ಬೇಡ ಹೋಗೀ      ೩೦

ಎಲ್ಲಿ ಮತ್ತಾದರೆ ವೊರೆದು ನೋಡಿ ಹೇಳಿ
ಸಲ್ಲದು ನಮ್ಮೊಳೀ ಮಾತೂ
ನಿಲ್ಲಬೇಡ ನೀವು ಹಾಗೆಂದರಾಗಲಿ
ಬಲ್ಲಿದ ತರುವಕ್ಕಳನೂ     ೩೧

ಅವರು ತಿರುಗಿ ಬಂದು ತಮ್ಮ ರಾಯಗೆ ಹೇಳೆ
ಕರದವರು ಬಾರರೆನುತಾ
ಅವರು ದೇವರೈಸೆ ದೇಹಿಗಳಲ್ಲೆಂದು
ಅವರು ಬಿನ್ನಯಿಸಿದರಾಗಾ  ೩೨

ವೀರಭದ್ರನು ರುದ್ರನವತಾರದಲಾ
ವೀರರಯಿದ್ದರೆನುತಾ
ಸಾರಿದರಾತರುವಕ್ಕಳು ಹಿಮ್ಮೆಟ್ಟಿ
ರಾಯ ನೀನೆ ಬಲ್ಲೆಯೆನುತಾ            ೩೩

ರಾಯರೊಡನೆ ಬಂದು ಬಂಟ ಬಿನ್ನಯಿಸಲು
ಬಾಯ ಮಾತಕೇಳಿ ಹರಿಯೂ
ಜಿಯಾ ಚಿತ್ತೈಸೆಂದು ಹರಗೆ ಬಿನ್ನಹ ಮಾಡೆ
ದಾಯದಲ್ಲಲ್ಲಿಹುದೆಂದಾ೩೪

ಇನ್ನೊಮ್ಮೆ ಧರ್ಮವ ತಿಳಿಯ ಹೇಳು ನೀನು
ಚೆನ್ನಾಗಿ ರಾಯಗೆ ಹರಿಯೇ
ತನ್ನ ಮನವು ಕರಗಿ ಕರುಣವು ಬಾಹಂತೆ
ನಿರ್ನಯವಾಗಿ ಹೇಳೆಂದಾ     ೩೫

ಹರನ ಸನ್ನೆಯ ಮಾತ ಹರಿಯಾಗ ಕೈಕೊಂಡು
ಧರಣೀಶ ಗಣಪತಿಯೊಡನೆ
ತಾಳಿಬುದ್ಧಿಯಲಿ ನೀ ಭಕ್ತರ ಕೊಲಬಹುದೆ
ಮರಳಿ ನುಡಿಯರೆಂದ ಹರಿಯೂ       ೩೬

ದೇಶಾಂತತಿ ಗುರುಹಿರಿಯರು ಜಂಗಮ
ವಾಶ್ರಯಿಸಿ ಯಿಲ್ಲಿಗೆ ಬಹರೂ
ದೋಷ ಮುಟ್ಟಿ ಹುಳುಗೊಂಡವಿ ಕೊಲೆ ಮುಂದೆ
ಈಸು ಅವಸ್ಥೆ ರಾಯ ನಿನಗೇ           ೩೭

ಗುರುಲಿಂಗ ಜಂಗಮಕ್ಕನ್ನ ದಾನವಸಲೆ
ಕರದೀವ ದಾನಿಗಳವರೂ
ಧರೆಯೊಳು ನಿನಗ ಭಕ್ತರಗೊಂಡಾಗ
ಮರಳಿ ನರಕವೆಂದ ಹರಿಯೂ            ೩೮

ಅರಿದು ಮರಿದು ನೀನಿವರು ಕೊಂದಾಗ
ತೊರದು ಹೋಗದು ಭ್ರಾಂತಿ
ಮರುಗಿ ಪಾತಕಕಂಜಿ ಬಹುದಾನ ಮಾಡಲು
ತೊರದು ಹೋಗದು ಪಾಪ ಲೇಪಾ    ೩೯

ಪೃಥ್ವೀಶ ಸತ್ಯದ ಸೌಭಾಗ್ಯದ ಕಾಲ
ಅರ್ತಿಲಿ ಮಾಡಿದ ಪಾಪಾ
ಬಿತ್ತಿದ ಬೀಜವು ಮುಂದಣ ಜನ್ಮಕ್ಕೆ
ಮತ್ತದು ಫಲವೆಂದ ಹರಿಯೂ         ೪೦

ಎಂಭತ್ತು ನಾಲ್ಕು ಲಕ್ಷ ಜೀವರಾಶಿಯೆಲ್ಲ
ತುಂಬಿರ್ದ ನರಕ ಯೋನಿಯಲ್ಲಿ
ತುಂಬುತ ಕೆಡಹುತ ರಾಟಾಳದಂತೆಯು
ತುಂಬಿ ಪಾಪಾಗಿ ಬಂದ ಬಳಿಕಾ          ೪೧

ಮತ್ತಲ್ಲದೆಯಿಲ್ಲ ಮಾನಸ ಜನ್ಮವು
ತಥ್ಯವು ರಾಯ ಕೇಳಯ್ಯಾ
ಇತ್ತಂಡ x x ಕಾರಕೆ ಕೊಂದಾಗ
ಮತ್ತಲ್ಲಿ ಶ್ವಾನ ಜನ್ಮಗಳೂ           ೪೨

ಪುಣ್ಯಪಾಪವನ್ನು ರಾಯಗೆ ಹೇಳುತ
ಕಣ್ಣವೆ ಹಳಚದ ಮುನ್ನಾ
ಷನ್ಮುಖ ನಾಟಿತ ಹರಹಿಮ್ಮೆಟ್ಟಿದ
ತಣ್ಣನೆ ಹರಿಸಹಿತಾಗಾ       ೪೩

ಅಂದುದೆ ಶಾಂತಲಿ ರೂಪಾಗಿ ಹರಿಹರ
ನಿಂದು ಹೇಳಿದ ಧರ್ಮಗಳೂ
ಸಂಧಿಸಿ ರಾಯನ ಕರ್ಣವ ತುಂಬಿದ
ನಿಂದಿತು ಜ್ಞಾನ ಹೃದಯದಲೀ          ೪೪

ಕೊಲ್ಲಲಾಗದುಯೆಂದು ಹೇಳುತಲಿಪ್ಪವು
ಸೆಲೆಯಾಗಿ ಶಾಸ್ತ್ರ ಪುರಾಣ
ಕೊಲೆಗೆ ಪ್ರಾಯ್ಚಿತ್ತವಾಗಿ ಕೊಡುವೆನು ದಾನವ
ಸಲೆನೆಲೆ ನೂರಾರು ಪುರವಾ೪೫

ದಾರೆಯನೆರದುದು ಬೇರೆ ಕಲ್ಲನು ನೆಟ್ಟ
ತಾರ ಶಶಿಕುಲ ಧನಕಾ
ಧಾರುಣಿಯೊಳು ಗುರುಲಿಂಗ ಜಂಗಮಕ್ಕೆಲ್ಲ
ವೀರರನ್ನವನಿಕ್ಕುತಿರಲೂ    ೪೬

ತಾನೆ ಹೋಗಿಯೆ ಗುಂಡಬೊಮ್ಮಣ್ಣಗಳನು
ಏನ ಮಾಡಿಯು ತಾ ಹೇಳೆನುತಾ
ಆನೆಯನೇರಿದ ಗಣಪತಿರಾಯ ಮ
ದ್ದಾನೆಯಿಕ್ಕೆಲದಲಿ ಬರಲೂ            ೪೭

ಚೊದ್ದವ ಜೋಕೆಯಲಾಸೆ ನಡವುತಾಗ
ಊದುವ ಬಿರುದಿನ ಕಾಳೆ
ಮೇದಿನಿಪತಿರಾಯ ಹೊರವಂಟು ಬರೆ ಮುಂ
ಚೂಣಿ ಶೂಲದ ಬಳಿಗೆಯಿದೆ೪೮

ಬರಬರುತ ರಾಯ ಕಂಡನು ಶೂಲವ
ಧರಣಿ ಗಗನ ಮಾಲು ತೀರಲೂ
ಕರಿಯನಿಳಿದು ರಾಯ ಕಾಲ ನಡೆಯಲಿ
ಶರಣರ ಸಸಿನಕೆ ನಡೆದಾ      ೪೯

ಇನ್ನಿವರನು ಶೂಲವೇರಿಸಲಿಯ್ಯದೆ
ಚೆನ್ನಾಗಿ ಬೇಡಿಕೊಂಡೊಯ್ದೂ
ಮನ್ನಿಸುವೆನು ಗುಂಡಬೊಮ್ಮಣ್ಣನನೆಂದು
ತನ್ನ ತಾ ಮರುಗಿದ ರಾಯಾ            ೫೦

ಆನೆ ಅಂದಣವನು ಏರಲೊಲ್ಲದೆ ರಾಯ
ತಾನು ಕಾಲು ನಡೆಯಿಂದಾ
ಸೇನೆ ನೋಟಕ ಜನ ಕೈವಾರದವರನು
ತಾನು ಕೋಪಿಸಿ ನೂಕಿ ನಡೆದಾ          ೫೧

ಬಂದು ನಿಂದನು ರಾಯ ಗುಂಡಬೊಮ್ಮಣ್ಣನ
ಚಂದಚಂದದಿ ಹೊಗಳುತಲೀ
ಸಂದಿಸಿ ಕೈಮುಗಿದಿಂದೆನ್ನ ಸಲಹೆಂದು
ಮುಂದುವರಿದು ಬಂದು ನಿಲ್ಲಿಸೀ      ೫೨

ಮುಂದರಿಯದೆ ಮಾಡಿದಪರಾಧಿ ನಾನೀಗ
ಒಂದು ಗುಣವು ನನ್ನೊಳಿಲ್ಲಾ
ಸಂದೇಹವ ಮಾಡಿ ನಿಮ್ಮ ನೋಯಿಸಿದೆನು
ಬೆಂದ ಪಾತಕನನು ಸಲಹೀ   ೫೩

ಹಿಂದಣ ಜನ್ಮದ ಪಾಪದ ಫಲದಿಂದ
ನಿಂದಿಸಿದೆನು ನಿಮ್ಮ ಜರಿದೂ
ಬೆಂದನೂಲಿನಾಕಾರಗಳಾದೆನು
ಇಂದು ಮಾಡಿದ ಪಾಪದಿಂದಾ          ೫೪

ಅರಿದರಿದಿಂದಿನನರ ಗುರಿ ನಾನಾದೆ
ಅರಿದು ಭ್ರಾಂತಿ ಮಾಡಿದೆನೂ
ಅರಿದು ಮಾಡಿದೆ ಪಂಚಮಹಾಪಾತಕವನು
ಮರೆದು ಮರೆಯಿ ನಿಮ್ಮ ಗುಣವಾ    ೫೫

ಹಿರಿದು ಕಿಂಕರನಾದ ರಾಯನ ನುಡಿಗೇಳಿ
ಕರುಣಿಯು ಗುಂಡಬೊಮ್ಮಯ್ಯ
ಹರ ಧ್ಯಾನದೊಳಿದ್ದು ಕಂದೆರದಾಗಲು
ಧರಣಿ ಪಾಲಕನ ನೋಡಿದರೂ          ೫೬

ಪರಲೋಕ ಸಾಧನವಾಯಿತು ನಿನ್ನಿಂದ
ಹರಗೆ ಸಂದವು ನಮ್ಮ ಬಿರಿದೂ
ಹರನ ಗೆದ್ದೆವು ರಾಯ ನಿನ್ನಿಂದ ನಾವಿಂದು
ಮರಳಿ ಹೊಲ್ಲೆಹವಿಲ್ಲ ನಿನಗೇ        ೫೭

ಗೆದ್ದುದು ನಿರ್ಧಾರ ಗುಂಡಬೊಮ್ಮಣ್ಣ ನೀ
ನುದ್ಧರಿಸಿ ನಿಮ್ಮ ಶಿಶುವಾ
ಎದ್ದು ನಡೆಯಿರಿ ನಿಮ್ಮ ಮಠಗಳಿಗೀಗಲೆ
ಹೊದ್ದಿದ ಶೂಲವ ಬಿಟ್ಟೂ            ೫೮

ಕಂದುಕ ಸರಿಕೆಯು ಬಿಡಯ್ಯ ಮನದೊಳು
ನೊಂದ ನೋವನು ಬಿಟ್ಟು ನೀವು
ಮುಂದರಿಯದೆ ನಿಮ್ಮ ನುಡಿದ ಪಾತಕ ನಾನು
ತಂದೆಗಳಿರಾ ಸಲಹುವದೂ  ೫೯

ಗಣಗುಣ ವಾರುಧಿ ಚಿನುಮಯ ಗುಂಡಬೊಮ್ಮ
ಮನೆಗೆ ನಡೆಯಿ ನೋಯಬೇಡಾ
ತ್ರಿಣೆಯಗೆ ಶೂಲವನರ್ಪಿಸಿ ನೈಪಥ್ಯವ
ತನುವಿಗೆ ಸಲದಿರೆ ದ್ರೋಹಾ೬೦

ಮದನಾರಿ ಮನಗಂಡು ಮರುಳಾಡಿ ನಗುವನು
ಅದು ಸಲ್ಲದಾಚಾರ ಕೊರತೇ
ಇದರಿಂದ ನಿನಗಾವ ಕೊರತೆಗಳಿಲ್ಲೆಂದು
ಹದುಳಲಿಟ್ಟರು ರಾಯನನೂ           ೬೧

ಹೂವಿನ ಹೊತ್ತು ತಪ್ಪಿ ಹೋಗದ ಮುನ್ನವೆ
ದೇವನ್ನ ಕಾಣಬೇಕೆನುತಾ
ತಾವು ತಿರುಗದರಿತ್ತ ಶೂಲಕೆ ವಹಿಲದಿ
ಧೀರರು ಗುಂಡಬೊಮ್ಮಣ್ಣರೂ       ೬೨

ಅರಿ ರಾಯಮರ್ದನ ಗಜಸಿಂಹ ಭುಜಬಲ
ಧುರಧೀರ ರುದ್ರನಾತ್ಮಜನೂ
ಹಿರಿದು ದುಃಖಿತನಾಗಿ ಹಿಂದಕೆ ತುರಿಗಿದ
ಧರಣೀಶ ಗಣಪತಿರಾಯಾ   ೬೩

ಪಟ್ಟಣವನು ಹೊಕ್ಕ ಗಣಪತಿರಾಯನು
ಪಟ್ಟದಾನೆಯು ಸೇಸೆ ಸಹಿತಾ
ಹೆಟ್ಟುಗೆಯರು ಪುತ್ರ ಮಿತ್ರ ಸಂತೋಷದಿ
ಸೃಷ್ಟಿಯ ಸುಖದಲಿರುತಿದ್ದಾ         ೬೪

ಸತ್ಯವಂತರು ಗುಂಡಬೊಮ್ಮಣ್ಣಗಳು ತಾ
ವಿತ್ತಲು ತಮ್ಮ ಜಂಗಮಕೆ
ಭೃತ್ಯರ ಸೇವೆಯ ಚಿತ್ತೈಸಿಯೆನುತಲು
ಉತ್ತಮಾಂಗವ ಬಾಗಿದರೂ೬೫

ನಿಮ್ಮಯ ಮನವೀಗ ನೆರೆದಣಿವನ್ನತ
ನಿಮ್ಮ ವೀರರ ಸೂಡಿಯೆನುತಾ
ಸುಮ್ಮಾನದಿಂದಲು ಬಾಚಿಯ ಕೊಟ್ಟರು
ಬ್ರಹ್ಮಾಂಡವೊಡುವಂತೆ ತಿರುಗೀ       ೬೬

ಮೃಡಭಕ್ತ ದೃಢಚತ್ತ ಗುಂಡಬೊಮ್ಮಣ್ಣಗೆ
ಮಡದಿಯರು ಕೈಯ್ಯ ಮುಗಿದೂ
ಪಡೆವೆವು ಮುತ್ತೈದೆತನದಲಿ ಸ್ವರ್ಗವ
ಕೊಡಿ ಮುಂಚೆ ಶಸ್ತ್ರವ ನಮಗೇ         ೬೭

ಪತಿ ಮುಂಚೆ ಮಡಿದಾಗ ಸತಿ ಹಿಂದುಳಿದರೆ
ಗತಿಗೇಡು ಮುಂದೆ ಲಕ್ಷಣವೂ
ಅತಿಕಷ್ಟ ಗುಂಡಣ್ಣ ಕೇಳೆಂದು ಮಹಾದೇವಿ
ಮತವಲ್ಲವಣ್ಣ ಕೇಳೆನಲೂ            ೬೮

ಎನ್ನ ಸೋದರನೆ ಬಾಯೆನ್ನ ಚೆನ್ನಿಗನೆ ಬಾ
ಎನ್ನ ರನ್ನವೇ ನೀ ಕೇಳು
ಎನ್ನಿಂದ ನೀ ಮುಂಚೆ ನನ್ನಯ ಗೆಲುವನು
ಬೆನ್ನ ಸೋದರ ಕಾಣಬಹುದೇ          ೬೯

ನಿನ್ನಯ ಕಂಗಳು ದಣಿವಂತೆ ನೀ ನೋಡು
ನಿನ್ನ ತಂಗಿಯ ವೀರವನೂ
ನಿನ್ನಿಂದಲೂ ಮುಂಚೆ ನಾನು ಶಸ್ತ್ರವಕೊಂಡು
ಚೆನ್ನಾಗಿ ಹರನ ಮೆಚ್ಚುಸುವೇ          ೭೦

ಅಣ್ಣಬೊಮ್ಮಣ್ಣನೆ ನೀ ಕೇಳೆಂದಳು
ಹೆಣ್ಣು ಸೋದರವು ಗುಂಡಬೊಮ್ಮಾ
ಕಣ್ಣು ತುಂಬಿಯೆ ನೋಡು ನಿನ್ನಯ ತಂಗಿಯ
ಹೆಣ್ಣು ವೀರತ್ವದ ಸಿರಿಯಾ            ೭೧

ಶರಣರಿಬ್ಬರು ತಮ್ಮ ಸತಿಯರು ಸಹಿತಲು
ಹಿರಿದ ಶೃಂಗಾರವಾಗಿ
ಧರೆಯೊಳು ಮೆರೆವುತಲಿದ್ದರು ಸಂಧಿಗೆ
ಬರೆಯಿತು ಪದನೆಪ್ಪತ್ತೆರಡೂ          ೭೨

ಅಂತು ಸಂಧಿ ೧೭ಕ್ಕಂ ಪದ ೧೪೬೧ಕ್ಕಂ
ಮಂಗಳ ಮಹಾಶ್ರೀ ಶ್ರೀ ಶ್ರೀ