. ಶೂಲದ ಹಬ್ಬದ ಅನುಷ್ಠಾನ-ಪ್ರಸಾರ ಹಾಗೂ ಆಚರಣೆ

ಶೂಲವೆಂದರೆ ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ. ಇದಕ್ಕೆ ಈಟಿ ಎಂದು ಕರೆಯುತ್ತಾರೆ. ಪರಶಿವನ ಪಂಚವಿಂಶತಿ ಲೀಲೆಗಳಲ್ಲಿ ಕೊನೆಯದಾದ ದಕ್ಷಿಣಮೂರ್ತಿ ಲೀಲೆಯಲ್ಲಿ ಶೂಲವನ್ನು ಆಭರಣವಾಗಿ ಧರಿಸಿದ ಕಾರಣ ಆತನಿಗೆ ‘ಶೂಲಧರ’, ‘ಶೂಲಾಯುಧ’ಗಳೆಂಬ ಹೆಸರುಗಳು ಬಂದವೆಂಬುದು ಪೌರಾಣಿಕ ಸಂಗತಿ. ಯುದ್ಧಾಯುದ್ಧವಾಗಿದ್ದ ಶೂಲಗಳ ಕುರಿತು ಪ್ರಾಚೀನ ಕಾವ್ಯಗಳಲ್ಲಿ ಸಾಕಷ್ಟು ವಿವರಣೆಗಳಿವೆ. ಜಾನುಭಂಜನೀ ಶೂಲಪ್ರಖರ ಪರಿವೃತ್ತಂಗಳು; (ಆದಿಪರಾಣ ೧೩-೫೭), ಆಕಾಶವ ‘ಶೂಲದಲಿಕ್ಕಿದ ಬಲ್ಲಿದ ತಳವಾರನೀತನು’ (ಅಲ್ಲಮನ ವಚನ), ‘ಗಿರಿದುರ್ಗದಲಿ ಶೂಲಗಳು ಮೆರೆದವು’ (ಕುಮಾರರಾಮ ಸಾಂಗತ್ಯ ೨೧-೧೩) ಇತ್ಯಾದಿ ಉಲ್ಲೇಖಗಳಿಂದ ‘ಶೂಲ’ ಬತ್ತೀಸಾಯುಧಗಳಲ್ಲಿ ಒಂದೆಂಬುದು ತಿಳಿದುಬರುತ್ತದೆ.

ಮರಣದಂಡನೆಗೊಳಗಾದವರನ್ನು ಏರಿಸಿಕೊಲ್ಲಲು ನೆಡುತ್ತಿದ್ದ ಶೂಲದ ಕಂಬವನ್ನು ಕಾವ್ಯಗಳಲ್ಲಿ ‘ಶೂಲದ ಮರ’ವೆಂದು ಕರೆಯುವ ರೂಢಿ. ಮರದ ಸರಲು ಮೈಯನುರ್ಚೆ (ಸೊರಬ ಶಾಸನ E.C. VIII, S.B.P. II), ತೂಪ ತೂಗುಂದಲೆ ಬಾಳ್ವೆಣಂ ಪೊಡರೆ ಬಳ್ಕುವ ಸಮ್ಮನ ಶೂಲವಾಲದೊಳ್(ಶಬ್ದಮಣಿ ದರ್ಪಣ ಸೂತ್ರ ೭) ಮತ್ತು ಶೂಲದ ಮೇಲಣ ವಿಭೋಗವೇನಾದಡೇನೂ ನಾನಾ ವರ್ಣದ ಸಂಸಾರವು ಹಾವು ಹಾವಾಡಿಗನ ಸ್ನೇಹದಂತೆ (ಬಸವಣ್ಣನ ವಚನ) ಎಂಬ ಹೇಳಿಕೆಗಳಲ್ಲಿ ಶೂಲದ ಅನೇಕ ಪ್ರಕಾರಗಳನ್ನು ತಿಳಿಸುತ್ತವೆ.

ಚಿತ್ರದುರ್ಗ, ಕುಸ್ಕೂರು, ನಂದಿಬೆಟ್ಟ, ಬುಕ್ಕಸಾಗರ, ಗುಂಡೇನಹಳ್ಳಿ ಇತ್ಯಾದಿ ಕಡೆಗೆ ದೊರೆತ ಶಿಲ್ಪಗಳಲ್ಲಿ ಗುಂಡಬ್ರಹ್ಮಯ್ಯಗಳು ಶೂಲದ ಮಣಿಯ ಮೇಲೆ ಪದ್ಮಾಸನ ಇಲ್ಲವೇ ಕಾಲುಗಳನ್ನು ಇಳಿಬಿಟ್ಟು ಕುಳಿತ ಭಂಗಿಯಲ್ಲಿ ಕೆತ್ತಲಾಗಿದೆ. ಇದನ್ನೆ ಸಮರ್ಥಿಸುವ ಗುಂಡಬ್ರಹ್ಮಯ್ಯಗಳ ಸಾಂಗತ್ಯ (ಸಂಧಿ ೧೮-೮)ದ ಪದ್ಯವೊಂದು ಹೀಗಿದೆ.

ನಾರಿಯರಿಬ್ಬರು ಉತ್ಸಹಗೊಂಡರು
ವೀರರಿಬ್ಬರೂ ಬೊಬ್ಬೆಗೊಡುತಾ
ಶೌರಿಯಲಿಮ್ಮಡಿಯಾಗುತ ಶೂಲವ
ನೇರಿ ಮಣಿಯ ಹತ್ತಿದರು

ಶೂಲಗಳನ್ನು ಊರ್ಧ್ವಮುಖವಾಗಿ ನೆಟ್ಟು ಅವುಗಳ ಮೇಲೆ ರಂಧ್ರಗಳಿಂದ ಕೂಡಿದ ಮಣಿಯನ್ನು ಜೋಡಿಸುತ್ತಿದ್ದರು. “ಸಾಲ ಸರಲ್ಗುಳಂತೆ” ಅಟ್ಟಣಿಗೆಯ ರೂಪದಲ್ಲಿ ಕೆಳಗೆ ಶೂಲಗಳು, ಶೂಲಗಳ ಮೇಲೆ ರಂಧ್ರಗಳುಳ್ಳ ಮಣಿ ಅದರ ಮೇಲೆ ಅಪರಾಧವೆಸಗಿದವರನ್ನು ಕುಳ್ಳಿರಿಸುತ್ತಿದ್ದರು. ಶಿಕ್ಷೆ ವಿಧಿಸುವ ಸಮಯವಾದ ಕೂಡಲೇ ಮಣಿಯನ್ನು ಅತ್ತಿತ್ತ ಸರಿಸುತ್ತಿದ್ದಂತೆ ಕೆಳಗಿನ ಶೂಲಗಳು ಮಣಿಯ ರಂಧ್ರಗಳ ಮೂಲಕ ಆಯ್ದು ಮೇಲೆ ಕುರಿತ ವ್ಯಕ್ತಿಯ ಪಕ್ಕೆ, ತೊಡೆ, ಗುದ, ನಿತಂಬಗಳ ಮೂಲಕ ದೇಹವನ್ನು ಸೇರುತ್ತಿದ್ದಂತೆ ಕಾಣುತ್ತದೆ. ಈ ಅಂಶವನ್ನು ಪುಷ್ಠಿಕರಿಸುವಂತೆ ಇಲ್ಲಿಯ ಪದ್ಯಗಳು. “ಒಂದು ಬಾರಿ ಶೂಲವ ಯಳೋಕ್ಷ ಮಾಡಲು ಸಂಧಿಸೆ ಮೊನೆ ಭುಜದಲ್ಲಿ ಮತ್ತು ತೂರಿತು ಮರುಮೊನೆ ಬಲದಳ್ಳೆಯ ಮೇಲೆ ಮೀರಿತು ಮರುಮೊನೆ ಮೂಡಿ” ಮತ್ತು “ಶೂಲದ ಮಣಿಯನ್ನು ಜಾಡಿಸಿ ತಳ್ಳಿದನು” (ನೀಲಗಾರರ ಹಾಡು) ಎನ್ನುವಲ್ಲಿ ಮಣಿಯ ಮೇಲೆ ಕುಳಿತ ವ್ಯಕ್ತಿಗೆ ಮೈತುಂಬ ನಾಟುತ್ತಿದ್ದ ಶೂಲಗಳ ಚಿತ್ರಣವನ್ನು ವಿವರಿಸುತ್ತದೆ. ಶ್ರೀಶೈಲದ ಭಿತ್ತಿ ಚಿತ್ರಗಳಲ್ಲಿ ಹೀಗೆ ಕೆಳಗಿನಿಂದ ತೂರಿಬಂದ ಶೂಲಗಳು ಭುಜ, ದವಡೆ, ಪಕ್ಕೆ, ಶಿರ, ತಲೆಯ ಮೇಲೆ ಆಯ್ದುನಿಂತ ಶಿಲ್ಪಗಳನ್ನು ನೋಡಬಹುದು.

ಬಹುತೇಕ ಶೂಲದ ತಯಾರಿಕೆಯಲ್ಲಿ ಶ್ರೀಗಂಧದ ಮರವನ್ನು ಉಪಯೋಗಿಸುತ್ತಿದ್ದರೆಂಬುದಕ್ಕೆ ಈ ಕೆಳಗಿನ ಪದ್ಯಗಳು ಹೀಗೆ ತಿಳಿಸುತ್ತವೆ.

ತಮ್ಮರ ಮತ್ತೀಯ ಬೀಟೆಯ ಬೆಂಡೆಯ
ನಿಮ್ಮವರು ತರಬೇಡವೆನುತಾ
ಸಾಮಾನ್ಯವಲ್ಲದ ಸುರಹೊನ್ನೆ ತೇಗವು
ಭೂಮಿಗಾನುವ ಮರ ಬರಲಿ

(ಗುಂಡಬ್ರಹ್ಮಯ್ಯಗಳ ಸಾಂಗತ್ಯ ೧೬-೩)

ಬಂದನು ಪ್ರಧಾನ ನಂದನವನಕಾಗಿ ಶ್ರೀ
ಗಂಧದ ಮರನ ಕಡಿಸಿದಾಗ ಮೇಲಕ್ಕೆ
ಚಂದ ಮಾಡಿದರೂ ಹಲಗೇಯಾ

(ಗುಂಡಬ್ರಹ್ಮಯ್ಯಗಳ ತ್ರಿಪದಿ ೪-೧೧೯)

ಹೀಗೆ ಶೂಲದ ಮರದ ಆಯ್ಕೆ, ಆಯ್ಕೆಯಾದ ಮರವನ್ನು ಕಡಿಯುವಾಗ ಪೂಜೆ, ನಂತರದಲ್ಲಿ ಶೂಲದ ನಿರ್ಮಾಣ, ನಿರ್ಮಾಣ ಮಾಡಿದ ವ್ಯಕ್ತಿಗೆ ಸಂಭಾವನೆ, ಅಪರಾಧಿಗಳು ಶೂಲವೇರಿದಾಗ ಶೂಲಕ್ಕೆ ಪೂಜೆ-ಅಲಂಕಾರ ನೆರವೇರುತ್ತಿದ್ದವು. ಈ ಕುರಿತು ಕಾವ್ಯಗಳಲ್ಲಿ ವಿಶೇಷ ವರ್ಣನೆಗಳು ಬರುತ್ತವೆ.

ಮೊದಮೊದಲು ‘ಶೂಲಕ್ಕೇರಿಸುವ’ ಪದ್ಧತಿ ಅಪರಾಧ ಮಾಡಿದ ಶಿಕ್ಷೆಯಾಗಿ ಚಲಾವಣೆ ಬಂದಿತು. ಆನಂತರದಲ್ಲಿ ಇದೊಂದು ವ್ರತ, ಹರಕೆ, ಆಚರಣೆಯಾಗಿ ಅನುಷ್ಠಾನಗೊಂಡಂತಿದೆ. ಕನ್ನಡದಲ್ಲಿ ಶೂಲವೇರಿದ ವ್ಯಕ್ತಿಗಳಾಗಿ ಅಣಿಮಾಣ್ಡವ್ಯ, ಕುಳಶ್ಚರ್ಯ, ಶೂಲದಬೊಮ್ಮ, ಶೂಲಾಯುಧ, ಕನ್ನದ ಮಾರಯ್ಯ, ತುಳವ ಚಂಡಿಗ, ಗುಂಡಬ್ರಹ್ಮಯ್ಯ, ಶಿಬಿರಾಯ, ದೇವಯ್ಯ, ಅನ್ನಮರಾಜ ಮುಂತಾದವರು ಕಂಡುಬರುತ್ತಾರೆ. ವಿಶೇಷವಾಗಿ ಮರೆಹೊಕ್ಕವರನ್ನು ಕಾಯುವ ವ್ರತವಿಡಿದು ಶೂಲವೇರಿದ ವ್ಯಕ್ತಿಗಳನ್ನು ‘ಶರಣಾಗತ ವಜ್ರಪಂಜರ’ ‘ಶರಣಾಗತರನೆಯ್ದೆ ಕಾಯುವ ವೀರ’ ನುಡಿದಂತೆ ಗಂಡ (ಶ್ರ. ಬೆ. E. I. ನಂ. ೧೪೩) ‘ಶರಣಾಗವಾರ್ಧಿ’ ಇತ್ಯಾದಿ ಬಿರುದುಗಳನ್ನು ಅರಸರು ಧರಿಸಿಕೊಂಡಿರುವುದು ಮತ್ತು ವೀರತ್ವದ ಪ್ರತೀಕವಾಗಿ ವೀರಶೈವ ಶರಣರೂ ಧರಿಸಿಕೊಂಡಿರುವುದು ತಿಳಿದು ಬರುತ್ತದೆ.

ಗುಂಡಬ್ರಹ್ಮಯ್ಯಗಳ ಕಾವ್ಯಗಳ ಪ್ರಕಾರ ‘ಶೂಲದ ಹಬ್ಬ’ ಓರಂಗಲ್ಲಿನಲ್ಲಿ ಅನುಷ್ಠಾನಕ್ಕೆ ಬಂದಿತು. ನಂತರ ಕರ್ನಾಟಕದಲ್ಲಿ ಆಚರಣೆಗೊಳಗಾಯಿತು. ಮಧ್ಯಕಾಲೀನ ಇಂತಹ ಸಾಂಸ್ಕೃತಿಕ ಸಂಬಂಧವನ್ನು ಬೆಸೆಯುವ ದೃಷ್ಟಿಯಿಂದ ಗುಂಡಬ್ರಹ್ಮಯ್ಯಗಳ ಸಾಹಿತ್ಯಕ್ಕೆ ವಿಶೇಷ ಮಾನ್ಯತೆ ದೊರೆಯುತ್ತದೆ. ಮರೆಹೊಕ್ಕವರನ್ನು ಕೊಡೆವೆಂಬ ವ್ರತವನ್ನು ನಿಷ್ಠೆಯಿಂದ ಆಚರಿಸಿ ಶೂಲವೇರಿದ ಗುಂಡಬ್ರಹ್ಮಯ್ಯರು ಓರಂಗಲ್ಲಿನ ಭಾಗದ ಜನರ ದೃಷ್ಟಿಯಲ್ಲಿ ಐತಿಹ್ಯವಾಗಿ ಉಳಿದಿದ್ದರು. ಅವರ ಹೆಸರಿನಲ್ಲಿ ಮೂರ್ತಿಪ್ರತಿಷ್ಠಾಪನೆ, ದೇವಾಲಯ ನಿರ್ಮಾಣಗಳು ಆಗಿ ಹೋಗಿದ್ದವು. ಆಚರಣೆಯ ಮೂಲವಾಗಿ ಶೂಲದ ಹಬ್ಬವನ್ನು ವಿಜೃಂಭಣೆಯಿಂದ ನೆರವೇರಿಸುತ್ತಿದ್ದರು.

ಓರಂಗಲ್ಲಿನ ಆಚರಣೆ ಕರ್ನಾಟಕಕ್ಕೆ ಪ್ರಸಾರವಾದ ಬಗೆಯನ್ನು ಹೊಸ ಕುಮಾರರಾಮನ ಸಾಂಗತ್ಯ (ಸಂ. ಎಂ. ಎಂ. ಕಲಬುರ್ಗಿ ಮತ್ತು ವೀರಣ್ಣ ರಾಜೂರ), ಕೊಮಾರರಾಮಯ್ಯನ ಚರಿತ್ರೆ (ಸಂ. ಎಂ.ಎಂ. ಕಲಬುರ್ಗಿ) ಕೃತಿಗಳು ನಿರೂಪಿಸುತ್ತವೆ. ಕುಮಾರರಾಮ ಓರಂಗಲ್ಲಿನ ಪ್ರತಾಪರುದ್ರನ ಮಗ ಎಪ್ಪತ್ತುರಾಜನ ಬೊಲ್ಲ ಕುದುರೆಯನ್ನು ಗೆದ್ದು ತರಲು ಹೊರಡುತ್ತಾನೆ. ಓರಂಗಲ್ಲಿನ ಹೊರವಲಯದಲ್ಲಿ ಸೈನ್ಯದೊಂದಿಗೆ ಗುಂಡಬ್ರಹ್ಮಯ್ಯರ ಗುಡಿಯಲ್ಲಿ ಬೀಡು ಬಿಡುತ್ತಾನೆ. ಆತನು ಗುಂಡಬ್ರಹ್ಮಯ್ಯ ದೇವರಿಗೆ ನಮಸ್ಕರಿಸಿ ‘ಎಪ್ಪತ್ತು ರಾಜನ ಬೊಲ್ಲಕುದುರೆ ಸಿಕ್ಕರೆ ಶೂಲದ ಹಬ್ಬ ಮಾಡಿಸುವೆ’ ಎಂಬ ಹರಕೆ ಮಾಡಿಕೊಳ್ಳುತ್ತಾನೆ. ಗುಂಡಬ್ರಹ್ಮಯ್ಯರು ಕನಸಿನಲಿ ಬಂದು ವರವನ್ನು ದಯಪಾಲಿಸುತ್ತಾರೆ. ಬೊಲ್ಲಕುದುರೆ ಗೆದ್ದು ಕುಮಾರರಾಮ ಮರಳಿ ತನ್ನ ರಾಜ್ಯಕ್ಕೆ ಬರುತ್ತಾನೆ. ಒಂದು ದಿನ ಮಲಗಿದಾಗ ಕುಮಾರರಾಮನ ಕನಸಿನಲ್ಲಿ ಗುಂಡಬ್ರಹ್ಮಯ್ಯರು ಬಂದು ಶೂಲದಮಹಾತ್ಮೆ ವಿವರಿಸುತ್ತಾರೆ.

ಓರಂಗಲ್ಲಿನ ರುದ್ರಸುತನ ಬೊಲ್ಲನ ತಂದು
ಧೀರಚನ್ನಿಗ ರಾಮನಿರಲು
ಕಾರಣ್ಯನಿಧಿ ಗುಂಡಬ್ರಹ್ಮಯ್ಯ ಸ್ವಪ್ನದಿ
ತೋರೆ ಶೂಲದ ಮಹಾತ್ಮೆಯನು
(ಹೊಸ ಕುಮಾರರಾಮನ ಸಾಂಗತ್ಯ ೭-೩)

ಈ ಸಂಗತಿಯನ್ನು ಕೇಳಿದ ಕುಮಾರರಾಮನ ತಂದೆ

ಮರೆಯದೆ ಶೂಲದ ಹಬ್ಬವ ಮಾಡಿನ್ನು
ವರವ ಪಡೆದೆ ಶರಣರಲಿ
ಧುರದೊಳು ಕಾದಿ ಜಯಸಿದನು ಶೂಲಗಳಿಗೆ
ಇರದೆ ಹಬ್ಬವನು ಮಾಡೆಂದ
(ಹೊಸಕುಮಾರರಾಮನ ಸಾಂಗತ್ಯ ೭-೫)

ಎಂದು ಕುಮಾರರಾಮನಿಗೆ ಒತ್ತಾಯಿಸುತ್ತಾನೆ. ಶೂಲದ ಹಬ್ಬಕ್ಕಾಗಿ ಹೊಸಮಲೆದುರ್ಗ ಸಿಂಗಾರಗೊಂಡಿತು. ಶೂಲಗಳನ್ನು ಅಲಂಕರಿಸಿ ಮೆರವಣಿಗೆ ಮಾಡುತ್ತಾರೆ. ರತ್ನಾಜಿಯು ಸೇವಕಿಯರಾದ ನಾಗಿ ಮತ್ತು ಸಂಗಿಯರ ಜೊತೆ ಶೂಲದ ಹಬ್ಬ ನೋಡಲು ಬರುತ್ತಾಳೆ. ಕಾಟಣ್ಣ, ದೇವಿಶೆಟ್ಟಿಯಲಿಂಗ, ಭಾವಸಂಗಮ, ಕೊಂಡಿಯ ರಾಜ ಭೈರವ, ತಳವಾರ ನರಸಯ್ಯನ ಮಗ ಸಿಂಗ, ಉಚ್ಚಂಗಿ ದುರ್ಗದ ಕಬ್ಬೇರನಾಗ, ಬೆಳಗಲ್ಲನಾಡಿನ ಬೆಳವಂತ ಸಿಂಗ, ಗುರ್ಜರ ಕಂಪನ ಮಗ ಬಸವಯ್ಯ, ಗುತ್ತಿಯ ಜಗತಾಪಿರಾಮನ ಮಗ, ತೋರಗಲ್ಲನಾಳುವ ಗೊಲ್ಲರ ಬಾಚಿಗ, ಅಗರುಗಂಬಿಯನ್ನಾಳುವ ಬಾಚಿನಾಯಕ, ಕೊಳ್ಳಿಯನಾಗ ಮುಂತಾದವರ ಶೂಲಗಳನ್ನು ರತ್ನಾಜಿಗೆ ನಾಗಿ ತೋರಿಸಿ ವಿವರಿಸಿದಳು. ಮುಂದೆ ಕುಮಾರರಾಮನ ಶೂಲವನ್ನು ತೋರಿಸುತ್ತಾಳೆ. ಕಂಪಿಲರಾಯ ರತ್ನಖಚಿತ ಪಲ್ಲಕ್ಕಿಯ ಮೇಲೆ ಕುಳಿತು ಶೂಲದ ಹಬ್ಬವನ್ನು ವೀಕ್ಷಿಸುತ್ತಾನೆ.

ಹೀಗೆ ಓರಂಗಲ್ಲ ಗುಂಡಬ್ರಹ್ಮಯ್ಯರ ಸ್ಮರಣಾರ್ಥ ಅನುಷ್ಠಾನಗೊಂಡ ಶೂಲದ ಹಬ್ಬ. ಕುಮಾರರಾಮನ ಮೂಲಕ ಕರ್ನಾಟಕದಲ್ಲಿ ಆಚರಣೆಗೊಂಡಿತು. ಪ್ರಾಯಶಃ ಈ ಪರಂಪರೆಯನ್ನು ಪ್ರತಿನಿಧಿಸುವಂತೆ ಇಂದು ಬಳ್ಳಾರಿ ದುರಗಮ್ಮನ ಸಿಡಿದೆಲೆಯಂತಹ ಆಚರಣೆಗಳು ಈ ಭಾಗದಲ್ಲಿ ರೂಪು ಪಡೆದಿರುವುದಕ್ಕೆ ಹಿನ್ನೆಲೆಯಾಗಿರಬಹುದೆಂಬುದು ನನ್ನ ಊಹೆ.

. ಗುಂಡಬ್ರಹ್ಮಯ್ಯಗಳ ಸಾಹಿತ್ಯ ಸಂಪತ್ತು

ಕರ್ನಾಟಕದಲ್ಲಿ ಗುಂಡಬ್ರಹ್ಮಯ್ಯರ ಚರಿತ್ರೆಯನ್ನು ಮೊದಲು ಸಂಪಾದಿಸಿಕೊಟ್ಟವರು ದಿ. ಡಾ. ವಿ. ಶಿವಾನಂದ ಅವರು ಜೀವರಗಿಯ ಅಖಂಡೇಶ್ವರ ಗ್ರಂಥಮಾಲೆಯಿಂದ ೧೯೭೪ರಲ್ಲಿ ಈ ಕೃತಿ ಪ್ರಕಟಗೊಂಡಿತು. ೩ ಸಂಧಿಯಿಂದ ಕೂಡಿದ ೫೮೪ ಪದ್ಯಗಳ ಈ ಕೃತಿ ವಿದ್ವತ್ಪೂರ್ಣ ಪ್ರಸ್ತಾವನೆ ಹಾಗೂ ಗುಂಡಬ್ರಹ್ಮಯ್ಯರ ಕುರಿತಾದ ಭಾವಚಿತ್ರಗಳಿಂದೊಡಗೂಡಿದೆ. ಅಲ್ಲಿಂದೀಚೆಗೆ ಗುಂಡಬ್ರಹ್ಮಯ್ಯರ ಶಿಲ್ಪ ಕುರಿತಾದ ಅನೇಕ ಲೇಖನಗಳನ್ನು ವಿದ್ವಾಂಸರು ಬರೆದು ಪ್ರಕಟಿಸಿದರು. ಆದರೆ ಅವರ ಸಮಗ್ರ ಸಾಹಿತ್ಯದ ಕಡೆಗೆ ಯಾರೂ ಗಮನಹರಿಸಲಿಲ್ಲ. ಹಸ್ತಪ್ರತಿ ಕ್ಷೇತ್ರಕಾರ್ಯದಲ್ಲಿ ನನಗೆ ಬಳ್ಳಾರಿ ಜಿಲ್ಲೆಯ ಕೋಗಳಿ ಗ್ರಾಮದಲ್ಲಿ ಗುಂಡಬ್ರಹ್ಮಯ್ಯರ ಗದ್ಯರೂಪದ ದಾಖಲೆ ದೊರೆಯಿತು. ಅದನ್ನು ಕುರಿತು ೧೯೯೯ರಲ್ಲಿ ಹರಪನಹಳ್ಳಿಯಲ್ಲಿ ಸಮಾವೇಶಗೊಂಡಿದ್ದ ಕರ್ನಾಟಕ ಇತಿಹಾಸ ಅಕಾಡೆಮಿಯಲ್ಲಿ ಪ್ರಬಂಧವನ್ನು ಮಂಡಿಸಿದೆ. ಆನಂತರ ಗುಂಡಬ್ರಹ್ಮಯ್ಯಗಳ ಸಮಗ್ರ ಸಾಹಿತ್ಯವನ್ನು ಒಂದೆಡೆ ಕೂಡಿಹಾಕಬೇಕೆಂಬ ಉದ್ದೇಶದಿಂದ ನಾಡಿನ ಬೇರೆ ಬೇರೆ ಹಸ್ತಪ್ರತಿ ಭಂಡಾರಗಳನ್ನು ಹಾಗೂ ಸೂಚೀ ಸಂಪುಟಗಳನ್ನು ತಡಕಾಡಿದೆ. ಆ ಪ್ರಯತ್ನದ ಫಲವಾಗಿದೆ, ಪ್ರಸ್ತುತ “ಗುಂಡಬ್ರಹ್ಮಯ್ಯಗಳ ಸಾಹಿತ್ಯ ಸಮಗ್ರ ಸಂಪುಟ”. ಈ ಸಾಹಿತ್ಯದ ಹಸ್ತಪ್ರತಿಗಳ ಮೊತ್ತ ಹೀಗಿದೆ.

ಮೈಸೂರು ವಿಶ್ವವಿದ್ಯಾಲಯದ ಪ್ರತಿಗಳು

ಇಲ್ಲಿಯ ಹಸ್ತಪ್ರತಿ ಭಾಂಡಾರದಲ್ಲಿ ಗುಂಡಬ್ರಹ್ಮಯ್ಯಗಳ ಚರಿತ್ರೆ ಹೆಸರಿನ ಎರಡು ಪ್ರತಿಗಳಿಗೆ, ತ್ರಿಪದಿಯಲ್ಲಿ ಬರೆದ ಅವುಗಳಲ್ಲಿ ಒಂದು ಕಾಗದ ಪ್ರತಿ (ಕೆ. ಬಿ. ೩೫೧/೧).ಇದು ೧ ರಿಂದ ೯೨ ಪುಟಗಳಲ್ಲಿ ೪ ಸಂಧಿಯ ೭೯೮ ಪದ್ಯಗಳಿಂದ ಕೂಡಿದ ಸಮಗ್ರ ಪ್ರತಿ. ಇನ್ನೊಂದು ತಾಡೋಲೆ ಪ್ರತಿ (ಕೆ. ೭೦೯) ೪೫ ಪತ್ರಗಳಲ್ಲಿ ಬರೆದ ೩ ಸಂಧಿಯ ೫೬೫ ಪದ್ಯಗಳ ಈ ಕೃತಿ ಶಿಥಿಲಗೊಂಡಿದೆ.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಗಳು

ಇಲ್ಲಿಯ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಾಂಡಾರದಲ್ಲಿ ಗುಂಡಬ್ರಹ್ಮಯ್ಯಗಳ ಸಾಂಗತ್ಯದ ಕೃತಿಯನ್ನು ತಾಡೋಲೆ (ನಂ. ೪/೪)ಯಲ್ಲಿ ಬರೆಯಲಾಗಿದೆ. ೧ ರಿಂದ ೩೫ ಪತ್ರಗಳಲ್ಲಿರುವ ಈ ಪ್ರತಿ ಅಸಮಗ್ರವಾಗಿದೆ. ಇದನ್ನೇ ಮೂಲ ಪಾಠವನ್ನಾಗಿಟ್ಟುಕೊಂಡು ಡಾ. ವಿ. ಶಿವಾನಂದ ಅವರು ಗುಂಡಬ್ರಹ್ಮಯ್ಯಗಳ ಸುವ್ವಿಯನ್ನು ಸಂಪಾದಿಸಿದ್ದಾರೆ. ಇನ್ನು ಬ್ರಹ್ಮಯ್ಯನ ಚರಿತ್ರೆ ಹೆಸರಿನ (ನಂ.೧೮೯೬) ತಾಡೋಲೆ ಪ್ರತಿಯೊಂದಿದೆ. ಹಾಗೆಯೇ ಬ್ರಹ್ಮಯ್ಯಗಳ ಸಾಂಗತ್ಯ ಹೆಸರಿನ (ನಂ.೧೯೮೩) ತಾಡೋಲೆಯ ಮತ್ತೊಂದು ಪ್ರತಿಯಿದೆ.

ಧಾರವಾಡದ ಕೆ.ಆರ್.ಆಯ್ ಸಂಸ್ಥೆಯ ಪ್ರತಿಗಳು

ಈ ಸಂಸ್ಥೆಯಲ್ಲಿ ಗುಂಡಬ್ರಹ್ಮಯ್ಯನವರ ಸಾಂಗತ್ಯ (ತಾಡೋಲೆ ನಂ. ೧೦೩೮), ಗುಂಡಬ್ರಹ್ಮಯ್ಯನ ಸುವ್ವಿ (ತಾಡೋಲೆ ನಂ. ೨೧೭೦) ಹಾಗೂ ಗುಂಡಬ್ರಹ್ಮಯ್ಯನ ಸುವ್ವಿ ಹಾಡು (ತಾಡೋಲೆ ನಂ.೨೧೭೧) ಎಂಬ ಹಸ್ತಪ್ರತಿಗಳಿವೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಗಳು

ಇಲ್ಲಿಯ ಹಸ್ತಪ್ರತಿ ಭಾಂಡಾರದಲ್ಲಿ ಗುಂಡಬ್ರಹ್ಮಯ್ಯನ ಚರಿತ್ರೆ (ತಾಡೋಲೆ ಪ್ರತಿ ನಂ.೬೯೧) ಹೆಸರಿನ ೭ ರಿಂದ ೭೪ ಪತ್ರಗಳಲ್ಲಿ ಬರೆದು ಅಸಮಗ್ರ ಕೃತಿ. ಗುಂಡಬ್ರಹ್ಮಯ್ಯನ ಚೌಪದನ ಹೆಸರಿನ (ಕಾಗದ ಪ್ರತಿ ನಂ.೪೭೦.೪) ೧೦ ಪುಟಗಳಲ್ಲಿ ಬರದ ೧೪೮ ಪದ್ಯಗಳ ಸಮಗ್ರ ಕೃತಿ. ಇನ್ನೂ ಗುಂಡಬ್ರಹ್ಮಯ್ಯಗಳ ಸಾಂಗತ್ಯದ ತಾಡೋಲೆ ಪ್ರತಿಯಿದೆ (ನಂ.೫೪೪) ೧ರಿಂದ ೫೮ ಪತ್ರಗಳಲ್ಲಿ ಬರೆದ ಈ ಕೃತಿ ೩ ಸಂಧಿ ೪೬೪ ಪದ್ಯಗಳನ್ನೊಳಗೊಂಡಿದೆ. ಹಾಗೆಯೇ ಗುಂಡಬ್ರಹ್ಮಯ್ಯರ ದಾಖಲೆ ಗದ್ಯ ಪ್ರಕಾರದಲ್ಲಿ ಬರೆದ ಕಾಗದ ಪ್ರತಿ (ನಂ. ೨೬೩). ಶರಣರಿಗೆ ಶರಣಾರ್ಥಿ ನಾಂದ್ಯ ಹೆಸರಿನ ತಾಡೋಲೆ (ನಂ.೨೯೪) ಪ್ರತಿ ಇದೆ. ಇದನ್ನು ಚೇರಮಾಂಕನಕಾವ್ಯವೆಂದು ಕರೆಯಲಾಗಿದೆ. ಇಲ್ಲಿ ಶಿವಶರಣರ ಕಥೆಯನ್ನು ನಿರೂಪಿಸಲಾಗಿದೆ. ಅಂಥ ಶರಣರ ಕಥೆಗಳಲ್ಲಿ ಗುಂಡಬ್ರಹ್ಮಯ್ಯಗಳಿಗೆ ೩ ಸಂಧಿಯನ್ನು (ಸಂಧಿ ೨,೩ ಹಾಗೂ ೪) ಮೀಸಲಿರಿಸಿದ ಷಟ್ಪದಿಕಾವ್ಯ ೬೮ ಪದ್ಯಗಳಿಂದ ಕೂಡಿದೆ.

ಶ್ರವಣಬೆಳ್ಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಕೇಂದ್ರದ ಪ್ರತಿ

ಇಲ್ಲಿ ಗುಂಡಬೊಮ್ಮಣ್ಣಗಳ ಚರಿತೆ ಹೆಸರಿನ ಸಾಂಗತ್ಯ ಕೃತಿ ತಾಡೋಲೆಯಲ್ಲಿ ಬರೆಯಲಾಗಿದೆ (ನಂ.೩೫). ಕಾಶೀಪತಿ ಕವಿ ಬರೆದ ಈ ಕೃತಿ ೧ ರಿಂದ ೧೨೭ ಪತ್ರಗಳಲ್ಲಿ ಅಡಕಗೊಂಡಿದೆ. ಒಟ್ಟು ೧೮ ಸಂಧಿ ೧೬೧೩ ಪದ್ಯಗಳ ಬೃಹತ್ಕೃತಿ ಇದಾಗಿದೆ.

ಧರ್ಮಸ್ಥಳದ ಮಂಜುನಾಥೇಶ್ವರ ಸಂಸ್ಕೃತಿ ಪ್ರತಿಷ್ಠಾನ ಪ್ರತಿಗಳು

ಇಲ್ಲಿ ಕಾಶೀಪತಿ ಕವಿ ಬರೆದ ಗುಂಡಬ್ರಹ್ಮಯ್ಯಗಳ ಸಾಂಗತ್ಯದ ತಾಡೋಲೆಯ ಎರಡು ಪ್ರತಿಗಳಿವೆ. ಹಾಗೂ ಗುಂಡಬ್ರಹ್ಮಯ್ಯಗಳ ಸುವ್ವಿ ಹೆಸರಿನ ತ್ರಿಪದಿಯಲ್ಲಿ ಬರೆದ ಮೂರು ತಾಡೋಲೆ ಪ್ರತಿಗಳಿವೆ.

ಗುಂಡೇನಹಳ್ಳಿ ಶ್ರೀ ಬಿ.ಸಿ ಪಾಟೀಲರ ಪ್ರತಿ

ಕೋರಿಕಾಗದದಲ್ಲಿ ಬರೆದ ಈ ಪ್ರತಿಯು ಗುಂಡಬ್ರಹ್ಮಯ್ಯಗಳ ಚರಿತ್ರೆ ಎಂಬ ಹೆಸರಿನಲ್ಲಿದೆ.

ಲಕ್ಕುಂಡಿ ಶಿವಬಸವ ಕುಮಾರಯ್ಯನ ಪ್ರತಿ

ಬದ್ನಿಮಠದ ಶಿವಬಸವ ಕುಮಾರಯ್ಯನ ಬಳಿ ಇರುವ ಈ ಪ್ರತಿ ಕೋರಿಕಾಗದದಲ್ಲಿ ಬರೆಯಲಾಗಿದೆ.

ದೊಡ್ಡಾಣೆಗೆರೆಯಲ್ಲಿನ ಪ್ರತಿ

ಯಕ್ಷಗಾನದಲ್ಲಿ ಬರೆದ ಈ ಕೃತಿಯ ಮಾಹಿತಿಯನ್ನು ಎ.ಎಂ. ಚಂದ್ರಪ್ಪ ಅವರು ದಿ. ಡಾ. ವಿ. ಶಿವಾನಂದರಿಗೆ ತಿಳಿಸಿದ ಬಗ್ಗೆ ಉಲ್ಲೇಖವಿದೆ (ಗುಂಡಬ್ರಹ್ಮಯ್ಯಗಳ ಚರಿತ್ರೆ, ಸಂ. ಡಾ. ವಿ. ಶಿವಾನಂದ, ಪು. ೨೯).

ಘನಪತಿರಾಯನ ಕಥೆ

ಓರಂಗಲ್ಲಿನ ಗಣಪತಿರಾಯನನ್ನು ತಮ್ಮ ಹಾಡಿಗೆ ಶೀರ್ಷಿಕೆಯನ್ನಾಗಿಸಿಕೊಂಡ ನೀಲಗಾರರು ಗುಂಡಬ್ರಹ್ಮಯ್ಯಗಳ ಕಥೆಯನ್ನು ಹಾಡು ಕಟ್ಟಿ ಹಾಡುತ್ತಾರೆ. ಎರಡು ಭಾಗಗಳಲ್ಲಿ ವಿಸ್ತಾರಗೊಂಡ ಕಥೆ ನಡುನಡುವೆ ಮಾತಿನ ದಾಟಿಯಲ್ಲಿದೆ. ಈ ಹಾಡನ್ನು ‘ಕನ್ನಡ ವೃತ್ತಿಗಾಯಕ ಕಾವ್ಯಗಳು’ ಎಂಬ ಕೃತಿಯಲ್ಲಿ ಡಾ. ಜಿ. ಶಂ. ಪರಮಶಿವಯ್ಯನವರು ಸಂಪಾದಿಸಿಕೊಟ್ಟಿದ್ದಾರೆ.

ಕನ್ನಡ ಕಾವ್ಯಗಳಲ್ಲಿ ಗುಂಡಬ್ರಹ್ಮಯ್ಯರ ಉಲ್ಲೇಖ

ಈ ಮೇಲಿನ ಕೃತಿಗಳು ಗುಂಡಬ್ರಹ್ಮಯರ ಬದುಕನ್ನು ಕಟ್ಟಿಕೊಡುವ ಇಡಿಯಾಗಿ ಸ್ವತಂತ್ರ ಕೃತಿಗಳಾದರೆ ಕನ್ನಡ ಕಾವ್ಯ, ಪುರಾಣಗಳಲ್ಲಿ ಪ್ರಾಸಂಗಿಕವಾಗಿ ಇವರ ಪ್ರಸ್ತಾಪ ಬರುತ್ತದೆ. ಅವುಗಳಲ್ಲಿ ವೀರಶೈವಾಮೃತಪುರಾಣ, ಪದ್ಮರಾಜಪುರಾಣ, ಮರಳು ಸಿದ್ಧಕಾವ್ಯ, ಚನ್ನಬಸವಪುರಾಣ, ಶಿವತತ್ತ್ವ ಚಿಂತಾಮಣಿ, ಚನ್ನರಾಮನ ಸಾಂಗತ್ಯ, ಬಸವೇಶ್ವರ ವಚನ ಕಥಾಸಾರ ಹಾಗೂ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ಕೃತಿಗಳು ಪ್ರಮುಖವಾದವುಗಳು.

ಹೀಗೆ ಗುಂಡಬ್ರಹ್ಮಯ್ಯಗಳ ಸಾಹಿತ್ಯದ ವ್ಯಾಪ್ತಿ ವಿಸ್ತಾರವಾಗಿದೆ. ಉಪಲಬ್ಧವಿರುವ ಹಸ್ತಪ್ರತಿಗಳನ್ನು ಇನ್ನೂ ಪರಿಶೀಲಿಸಿದರೆ ಹೆಚ್ಚಿನ ಪ್ರತಿಗಳು ಲಭಿಸುವ ಸಾಧ್ಯತೆಗಳಿವೆ. ವಿಶೇಷವೆಂದರೆ ಇದುವರೆಗೆ ಗಮನಿಸಿದ ಸಾಹಿತ್ಯ ದೇಶೀ ಛಂದೋಮಟ್ಟಗಳಲ್ಲಿ ರಚನೆಯಾಗಿರುವುದು. ಹಾಡುಗಬ್ಬದ ಮೂಲಕ ಶರಣರ ವೀರಗುಣವನ್ನು ಸ್ತುತಿಸುವ ಈ ಕಥಾ ಹಂದರಕ್ಕೆ ಶಿಷ್ಟಜಾನಪದ ಹಾಗೂ ಜಾನಪದ ಪರಂಪರೆ ಪ್ರಾಪ್ತವಾಗಿದೆ. ಪಾರಂಪರಿಕವಾಗಿ ನಾಮಾವಳಿಗಳಲ್ಲಿ, ಪುರಾಣಗಳಲ್ಲಿ, ತ್ರಿಪದಿ, ಸಾಂಗತ್ಯ, ಚೌಪದಿಗಳಲ್ಲಿ ಶಿಷ್ಟಜಾನಪದವಾಗಿ ಚಲ್ಲವರಿದ ಈ ಕಾವ್ಯ; ಜನಪದ ಖಂಡಕಾವ್ಯವಾಗಿ ನೀಲಗಾರರ ಹಾಡುಗಳಲ್ಲಿ ಉಳಿದುಕೊಂಡು ಬಂದಿದೆ.

. ಗುಂಡಬ್ರಹ್ಮಯ್ಯಗಳ ಶಿಲ್ಪ ಸಂಪತ್ತು

ಗುಂಡಬ್ರಹ್ಮಯ್ಯಗಳ ವೀರವ್ರತ ಮೊರೆಹೊಕ್ಕವರನ್ನು ರಕ್ಷಿಸುವುದು. ವೀರನ ಕರ್ತವ್ಯಗಳಲ್ಲಿ ಒಂದಾದ “ಶರಣಾಗತ ರಕ್ಷಣೆಗೆ” ಬರೆದ ಭಾಷ್ಯವಾಗಿ ಗುಂಡಬ್ರಹ್ಮಯ್ಯರು ಬದುಕಿದ್ದರು. ಸಮಾಜದಲ್ಲಿ ಇಂಥವರನ್ನು ‘‘ಶರಣಾಗತ ವಜ್ರಪಂಜರ” ಎಂಬ ಬಿರುದಿನಿಂದ ಗೌರವಿಸುತ್ತಿದ್ದರು. ಕಾಕತೀಯ ಅರಸನಾದ ಗಣಪತಿರಾಯನ ಅರಮನೆಗೆ ಕನ್ನವಿಕ್ಕಿ ಮೊರೆಹೊಕ್ಕ ಶಿವನನ್ನು ರಕ್ಷಿಸುವುದಕ್ಕಾಗಿ ತಾವು ಶೂಲವೇರಿದ ಗುಂಡಬ್ರಹ್ಮಯ್ಯಗಳ ಶಿಲ್ಪಗಳು ನಾಡಿನಾದ್ಯಂತ ಬಹುಸಂಖ್ಯೆಯಲ್ಲಿ ಲಭ್ಯವಾಗಿವೆ. ಜೊತೆಗೆ ಗುಂಡೇನಹಳ್ಳಿಯಲ್ಲಿ (ಹಾವೇರಿ ಜಿಲ್ಲೆ) ಗುಂಡಬ್ರಹ್ಮಯ್ಯಗಳ ದೊಡ್ಡದೇವಾಲಯವೇ ಇದೆ. ಕೆಲವು ಕಡೆ ವೀರಗಾಥೆಯಾದ ಈ ಶಿವಶರಣರ ಶಿಲ್ಪಗಳು ಭಕ್ತಿ, ಆರಾಧನೆಗೆ ಒಳಗಾಗಿ ಪೂಜೆಗೊಳ್ಳುತ್ತಲಿವೆ. ಶಿಲ್ಪಗಳಲ್ಲಿ ವೈವಿಧ್ಯತೆ ಕಂಡುಬಂದರೂ ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳು ಶೂಲದ ಮೇಲೆ ಕುಳಿತ ಇಲ್ಲವೇ ಶೂಲವನ್ನು ಒಂದು ಕೈಯಲ್ಲಿ, ಮತ್ತೊಂದು ಕೈಯಲ್ಲಿ ಶಿವಲಿಂಗವನ್ನು ಹಿಡಿದ ಶಿಲ್ಪಗಳು ಕಂಡುಬರುತ್ತವೆ. ಕೆಲವು ಶಿಲ್ಪಗಳಲ್ಲಿ ಇವರೀರ್ವರು ಇಷ್ಟಲಿಂಗವಿಡಿದು ಕುಳಿತಿದ್ದರೆ, ಪಕ್ಕದಲ್ಲಿ ಅಥವಾ ಕೆಳಭಾಗದಲ್ಲಿ ಎರಡು ಶೂಲಗಳನ್ನು ಕೆತ್ತಿರುತ್ತಾರೆ.

ಶಿಲ್ಪಗಳ ಶೋಧನದ ಇತಿಹಾಸ

ಕರ್ನಾಟಕದಲ್ಲಿ ಗುಂಡಬ್ರಹ್ಮಯ್ಯರ ಶಿಲ್ಪವನ್ನು ಮೊದಲ ಬಾರಿಗೆ ಶೋಧಿಸಿದವರು ದಿ. ಡಾ. ವಿ. ಶಿವಾನಂದ. ಕವಿಚೆನ್ನ ವಿರಚಿತ ಗುಂಡಬ್ರಹ್ಮಯ್ಯರ ಚರಿತ್ರೆ (ಸುವ್ವಿ) ಎಂಬ ಕೃತಿಯನ್ನು ಸಂಪಾದಿಸಿ ಅದರಲ್ಲಿ ಗುಂಡಬ್ರಹ್ಮಯ್ಯರ ಭಾವಚಿತ್ರವನ್ನು ಪ್ರಕಟಿಸಿದರು. ಆನಂತರ ಈ ಶಿಲ್ಪಗಳ ಶೋಧನೆಯತ್ತ ವಿದ್ವಾಂಸರು ಗಮನಹರಿಸಿದರು. ಡಾ. ವಿ. ಶಿವಾನಂದ ಅವರು ಬನವಾಸಿ, ಗುಂಡೇನಹಳ್ಳಿ ಶಿಲ್ಪಗಳನ್ನು ಪ್ರಕಟಿಸಿದ ಮೇಲೆ ಡಾ. ಎಂ.ಎಂ.ಕಲಬುರ್ಗಿಯವರು ಚಿತ್ರದುರ್ಗದ ಕೋಟಿಯಲ್ಲಿರುವ ಸಂಪಿಗೆ ಸಿದ್ದೇಶ್ವರ ದೇವಾಲಯದಲ್ಲಿನ ಶಿಲ್ಪವನ್ನು ಗುರುತಿಸಿದರು. ಮತ್ತು ಆ ಕುರಿತು ಲೇಖನವನ್ನು ಬರೆದರು. ಸನೀತಿಗೆರೆ (ದಾವಣಗೆರೆ ಜಿಲ್ಲೆ) ಶಿಲ್ಪವನ್ನು ಕರ್ನಾಟಕ ಭಾರತಿ ಪತ್ರಿಕೆಯಲ್ಲಿ ಡಾ. ಬಿ.ಆರ್. ಹಿರೇಮಠರು ಹಾಗೂ ಸಾಧನೆ ಪತ್ರಿಕೆಯಲ್ಲಿ ಡಾ. ಎಂ. ಚಿದಾನಂದಮೂರ್ತಿ ಅವರುಗಳು ಪ್ರಕಟಿಸಿದ್ದಾರೆ. ಬಳ್ಳಾರಿ ಶಿಲ್ಪವನ್ನು ಶ್ರೀಮತಿ ಹನುಮಾಕ್ಷಿ ಗೋಗಿಯವರು ಪ್ರಕಟಿಸಿದರು. ಚಿತ್ರದುರ್ಗದ ಹಿಡಿಂಬೇಶ್ವರ ದೇವಾಲಯ ಮತ್ತು ಅದೇ ಜಿಲ್ಲೆಯ ಅಸಗೋಡು, ಚಿಕ್ಕಪುರ, ಹಿರೇಗುಂಟೂರು, ಹೊಸದುರ್ಗ, ಶ್ರೀರಾಂಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬುಕ್ಕಾಂಬುದಿಯಲ್ಲಿನ ಶಿಲ್ಪಗಳನ್ನು “ದುರ್ಗಶೋಧನ” ಎಂಬ ತಮ್ಮ ಕೃತಿಯಲ್ಲಿ ಡಾ. ಬಿ. ರಾಜಶೇಖರಪ್ಪ ಪ್ರಕಟಿಸಿದ್ದಾರೆ. ಇನ್ನೂ ಬಳ್ಳಾರಿಜಿಲ್ಲೆ ಬುಕ್ಕಸಾಗರದ ಶಿಲ್ಪಗಳನ್ನು ಕುರಿತು ಡಾ. ಸಿ.ಟಿ.ಎಂ. ಕೊಟ್ರಯ್ಯನವರು ‘ಎನಗಿಂತ ಕಿರಿಯರಿಲ್ಲ’ (ಶ್ರೀ ಅಗಡಿ ಸಂಗಣ್ಣ ಅಭಿನಂದನೆ) ಗ್ರಂಥದಲ್ಲಿ ಚಿತ್ರಸಮೇತ ವಿಶ್ಲೇಷಿಸಿದ್ದಾರೆ. ಡಾ. ಎಂ.ಜಿ ಮಂಜುನಾಥ ಅವರು ಹಾಸನ ತಾಲೂಕಿನ ದೊಡ್ಡಗದ್ದವಳ್ಳಿ ಮತ್ತು ಹಾರನಹಳ್ಳಿ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ಶಿಲ್ಪಗಳನ್ನು ಕುರಿತು ಇತಿಹಾಸ ದರ್ಶನ (ಸಂ.೧೫, ಪು. ೭೨-೭೪)ದಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗೆಯೇ ಡಾ. ಜೆ.ಎಂ. ನಾಗಯ್ಯನವರು ಹೊಸದುರ್ಗ ತಾಲೂಕಿನ ದೇವಪುರ ಮತ್ತು ಗುಬ್ಬಿ (ತುಮಕೂರು ಜಿಲ್ಲೆ) ಉಜ್ಜನಿ (ಬಳ್ಳಾರಿ ಜಿಲ್ಲೆ)ಗಳಲ್ಲಿಯ ಶಿಲ್ಪವನ್ನು ಶೋಧಿಸಿದ್ದಾರೆ. ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಮುರ್ಕಿಬಾವಿಯಲ್ಲಿನ ವೀರಗಲ್ಲಿನಲ್ಲಿ ಗುಂಡಬ್ರಹ್ಮಯ್ಯಗಳ ಶಿಲ್ಪವನ್ನು ಡಾ. ಚೆನ್ನಕ್ಕ ಪಾವಟೆಯವರು ಶೋಧಿಸಿ ಇತಿಹಾಸ ದರ್ಶನ (ಸಂ. ೧೯, ಪು. ೧೭)ದಲ್ಲಿ ಪ್ರಕಟಿಸಿದ್ದಾರೆ. ಹೊಸಪೇಟೆ ತಾಲೂಕು ಗರಗ ನಾಗಲಾಪುರದ ಅರಳಿಮರದ ಕೆಳಗಿನ ಗುಂಡಬ್ರಹ್ಮಯ್ಯಗಳ ಶಿಲ್ಪಗಳು ಕನ್ನಡ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯ ವಿಭಾಗದಲ್ಲಿ ಆಶ್ರಯ ಪಡೆದಿವೆ.

ಒಟ್ಟಿನಲ್ಲಿ ಇಲ್ಲಿಯವರೆಗಿನ ಶಿಲ್ಪಗಳ ಶೋಧನೆಯನ್ನು ಎದುರಿಗಿಟ್ಟುಕೊಂಡು ಅವುಗಳನ್ನು ನಾಲ್ಕು ರೀತಿಯಲ್ಲಿ ವರ್ಗೀಕರಿಸಿಕೊಂಡು ಅಧ್ಯಯನ ಮಾಡಬಹುದಾಗಿದೆ. ೧.ಪದ್ಮಾಸನದಲ್ಲಿ ಕುಳಿತ ಶಿಲ್ಪಗಳು ೨. ಶೂಲದ ಮೇಲೆ ಕುಳಿತ ಶಿಲ್ಪಗಳು ೩. ಶೂಲಗಳನ್ನು ಮಧ್ಯೆ ಇಲ್ಲವೆ ಪಕ್ಕದಲ್ಲಿರಿಸಿಕೊಂಡು ನಿಂತಿರುವ ಶಿಲ್ಪಗಳು ೪. ಶೂಲ ಸಮೇತ ಶಿವನೊಂದಿಗಿರುವ ಶಿಲ್ಪಗಳು.

. ಗುಂಡೇನಹಳ್ಳಿಯ ಶಿಲ್ಪ

ಹಾವೇರಿ ಜಿಲ್ಲೆಯ ಗುಂಡೇನಹಳ್ಳಿಯಲ್ಲಿ ಗುಂಡಬ್ರಹ್ಮಯ್ಯಗಳ ದೇವಾಲಯವಿದೆ. ಗರ್ಭಗೃಹದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಾಚಾ ತೊಟ್ಟು ಶೂಲದ ಮೇಲೆ ಕುಳಿತಿರುವ ಇವರು ಕೈಯಲ್ಲಿ ಇಷ್ಟಲಿಂಗ ಹಿಡಿದಿದ್ದಾರೆ. ಕಾಲುಗಳಿಗೆ ಕಡಗ ರೂಪದ ಆಭರಣ ಅಂದರೆ ಮೊರೆಹೊಕ್ಕವರನ್ನು ಕಾಯ್ವೆವೆಂಬ ವತ್ರ ಸಂಕೇತವಾದ ಗಂಡಪೆಂಡೇರವನ್ನು ಧರಿಸಿದ್ದಾರೆ. ಮೊದಲ ವಿಗ್ರಹಕ್ಕೂ ಹಾಗೂ ಎರಡನೇ ವಿಗ್ರಹಕ್ಕೂ ವ್ಯತ್ಯಾಸ ಮಾಡಲಾಗಿದೆ. ಗುಂಡಯ್ಯನಿಗೆ ಸಿಂಹಲಲಾಟ ಹಾಗೂ ಗಡ್ಡಮೀಸೆಗಳು ಇರುವುದಿಲ್ಲ. ಬ್ರಹ್ಮಯ್ಯನಿಗೆ ಸಿಂಹಲಲಾಟ ಮತ್ತು ಗಡ್ಡಮೀಸೆಗಳನ್ನು ಬಿಡಿಸಲಾಗಿದೆ. ಕೊರಳು, ಮುಂಗೈ, ರಟ್ಟಿಗಳಲ್ಲಿ ರುದ್ರಾಕ್ಷಿಸರ, ಕಿವಿಯಲ್ಲಿ ಆಭರಣ, ತಲೆಗೆ ಪಟ್ಟಿಯನ್ನು ಅಳವಡಿಸಲಾಗಿದೆ.

. ಬನವಾಸಿಯ ಶಿಲ್ಪ

ಕ್ರಿ.ಶ.೧೬೪೭-೯೭ರವರೆಗೆ ಆಳ್ವಿಕೆ ನಡೆಸಿದ ಸೋಂದೆಯ ಅರಸ ೧ನೆಯ ಸದಾಶಿವರಾಯ ನಿರ್ಮಿಸಿ ಮಧುಕೇಶ್ವರನಿಗೆ ಅರ್ಪಿಸಿದ ಇಲ್ಲಿಯ ಶಿಲ್ಪ ಸಮೂಹದಲ್ಲಿ ಶರಣರಾದ ಲದ್ದೆಸೋಮಣ್ಣ, ಮೋಳಿಗೆ ಮಾರಯ್ಯ, ನುಲಿಯ ಚಂದ್ರಯ್ಯ, ಆಯ್ದಕ್ಕಿ ಮಾರಯ್ಯ, ದಕ್ಷಿಣಮೂರ್ತಿ, ಹಡಪದ ಅಪ್ಪಣ್ಣ, ಹೋಳಿನ ಹಂಪಣ್ಣ, ಅಗ್ಘವಣಿ ಹೊನ್ನಯ್ಯಗಳ ಜೊತೆಗೆ ೧೦ ಹಾಗೂ ೧೧ನೇ ಶಿಲ್ಪಗಳಾಗಿ ಗುಂಡಬ್ರಹ್ಮಯ್ಯರನ್ನು ಕಂಡರಿಸಲಾಗಿದೆ. ೪ ಅಡಿ ಎತ್ತರ ೨ ಅಡಿ ಅಗಲ ಅಳತೆಯಿರುವ ಈ ಶಿಲ್ಪಗಳು ಕೈಮುಗಿದು ನಿಂತ ಭಂಗಿ, ಅವರ ಬಲ ಭಾಗದಲ್ಲಿ ತ್ರಿಶೂಲಾಕಾರದ ಶೂಲಗಳನ್ನು ಕೆತ್ತಲಾಗಿದೆ. ಶಿಲ್ಪದ ಮೇಲೆ “ಗುಂಡಬ್ರ” ಎಂಬ ಶಾಸನ ಬರೆಯಲಾಗಿದೆ. ಶಿಲ್ಪಗಳು ಶಿಥಿಲಗೊಂಡಿದ್ದು ಕೊರಳ ಮಾಲೆ ಮುಂಗೈಗಳಿಗೆ ಕಡಗ ಧರಿಸಲಾಗಿದೆ.

. ಬಳ್ಳಾರಿಯ ಶಿಲ್ಪಗಳು

ಕೋಟೆ ಮಲ್ಲೇಶನ ದೇವಸ್ಥಾನದ ಪೌಳಿಯ ಒಳಗೋಡೆಯ ಮೇಲೆ ಗುಂಡಬ್ರಹ್ಮಯ್ಯಗಳ ಶಿಲ್ಪವಿದ್ದು ಪದ್ಮಾಸನದಲ್ಲಿ ಕುಳಿತ ಭಂಗಿಯಲ್ಲಿವೆ. ಎಡಗೈ ಇಷ್ಟಲಿಂಗವನ್ನು ಬಲಗೈಯಿಂದ ಮುಚ್ಚಿದಂತಿದೆ. ಮೂರ್ತಿಗಳು ಕುಳಿತ ಕೆಳಗಿನ ಪಟ್ಟಿಕೆಯಲ್ಲಿ ಶೂಲಗಳನ್ನು ತೋರಿಸಲಾಗಿದೆ. ತಲೆಯ ಮೇಲೆ ಟೊಪ್ಪಿಗೆ, ಕೊರಳಲ್ಲಿ ರುದ್ರಾಕ್ಷಿಸರ ಹಾಕಲಾಗಿದೆ.

. ಹಾವೇರಿಯ ಶಿಲ್ಪ

ಡಾ. ಶ್ರೀನಿವಾಸ ರಿತ್ತಿ ಅವರ ಪ್ರಯತ್ನದ ಫಲವಾಗಿ ಹಾವೇರಿ ವೀರಭದ್ರ ದೇವಾಲಯದ ಸಮೀಪವಿದ್ದ ಗುಂಡಬ್ರಹ್ಮಯ್ಯಗಳ ಶಿಲ್ಪ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಸಂಶೋಧನ ಸಂಸ್ಥೆಗೆ ಬಂದಿತು. ಶೂಲದ ಮೇಲೆ ಕುಳಿತು ಎಡಗೈ ಇಷ್ಟಲಿಂಗವನ್ನು ಬಲಗೈಯಿಂದ ಮುಚ್ಚಲಾಗಿದೆ. ತಲೆ, ಕೊರಳು, ಮುಂಗೈ, ರಟ್ಟೆಗಳಿಗೆ ರುದ್ರಾಕ್ಷಿ ಸರಗಳನ್ನು ಕಟ್ಟಲಾಗಿದೆ. ಕಿವಿಗೆ ದುಂಡನೆಯ ಆಭರಣ, ಕಾಲಿಗೆ ಪಾದುಕೆಗಳನ್ನು ಧರಿಸಲಾಗಿದ್ದು, ಒಂದು ಶಿಲ್ಪಕ್ಕೆ ಮೀಸೆ ಗಡ್ಡಗಳಿಲ್ಲ ಇನ್ನೊಂದಕ್ಕೆ ಮೀಸೆ ಗಡ್ಡಗಳಿವೆ.

. ದೇವಪುರದ ಶಿಲ್ಪ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೇವಪುರದ ವೀರಭದ್ರ ದೇವಾಲಯದಲ್ಲಿ ಗುಂಡಬ್ರಹ್ಮಯ್ಯರ ಶಿಲ್ಪಗಳಿವೆ. ೧೪’x ೧೨’ ಅಳತೆಯ ಈ ಶಿಲ್ಪಗಳು ಶೂಲದ ಮೇಲೆ ಕುಳಿತು ಎಡಗೈಯಲ್ಲಿ ಇಷ್ಟಲಿಂಗ ಧರಿಸಿದ್ದಾರೆ. ರಟ್ಟೆ-ಮುಂಗೈಗಳಿಗೆ ರುದ್ರಾಕ್ಷಿಸರ ಸುತ್ತಿದ್ದು ಏರುಮುಡಿಯನ್ನು ಕಟ್ಟಿದ್ದಾರೆ. ಆಭರಣ ಸಮೇತವಿರುವ ಇವು ಕಲಾತ್ಮಕವಾಗಿವೆ.

. ಚಿತ್ರದುರ್ಗದ ಶಿಲ್ಪ

ಸಂಪಿಗೆ ಸಿದ್ದೇಶ್ವರ ದೇವಾಲಯ ಮತ್ತು ಹಿಡಿಂಬೇಶ್ವರ ದೇವಾಲಯಗಳಲ್ಲಿ ಶಿಲ್ಪಗಳಿವೆ. ೨೨’x ೩೫’ ಅಳತೆಯ ಸಿದ್ದೇಶ್ವರ ದೇವಾಲಯದ ಶಿಲ್ಪಗಳು ಕುಸುರಿ ಕೆತ್ತನೆಯಿಂದ ನೈಜವಾಗಿವೆ. ಅಭಿಮುಖವಾಗಿ ನಿಂತ ಎರಡು ಮೂರ್ತಿಗಳ ನಡುವೆ ಶೂಲಗಳನ್ನು ನಡೆಸಲಾಗಿದೆ. ಗುಂಡಯ್ಯ ಎಡಗೈಯಿಂದ ಶೂಲ, ಬಲಗೈಯಿಂದ ಇಷ್ಟಲಿಂಗವಿಡಿದಿದ್ದರೆ, ಬ್ರಹ್ಮಯ್ಯ ಬಲಗೈಯಿಂದ ಶೂಲ ಎಡಗೈಯಿಂದ ಇಷ್ಟಲಿಂಗವಿಡಿದಿದ್ದಾನೆ, ಕಾಲುಗಳಿಗೆ ಗೆಜ್ಜೆಗಳಿಂದ ಕೂಡಿದ ಗುಂಡಪೆಂಡೇರ, ಸೊಂಟಕ್ಕೆ ಚೂರಿ, ಮುಂಗೈ, ರಟ್ಟೆಗಳಿಗೆ ರುದ್ರಾಕ್ಷಿ ಸರ, ಕಿವಿಯಲ್ಲಿ ದುಂಡನೆಯ ಆಭರಣಗಳಿಂದ ಅಲಂಕರಿಸಲಾಗಿದೆ. ಪಂಜೆ ಉಟ್ಟುನಿಂತ ಭಂಗಿ, ತಲೆಯ ತುರುಬು ಆಕರ್ಷಣೀಯವಾಗಿವೆ.

ಹಿಡಿಂಬೇಶ್ವರ ದೇವಾಲಯದ ವೀರಭದ್ರನ ಗುಡಿಯಲ್ಲಿ ಗುಂಡಬ್ರಹ್ಮಯರ ಶಿಲ್ಪವು ೨೪’x ೨೪’ ಅಳತೆಯಲ್ಲಿದೆ. ಇಲ್ಲಿಯೂ ಸಂಪಿಗೆ ಸಿದ್ದೇಶ್ವರ ದೇವಾಲಯದ ಶಿಲ್ಪಗಳ ಸ್ವರೂಪದಲ್ಲಿವೆ. ವಿಶೇಷವೆಂದರೆ ಇಬ್ಬರ ಬೆನ್ನ ಹಿಂದೆ ಸಣ್ಣ ಕಂಭವಿದೆ. ಈ ಕಂಭದಲ್ಲಿ ಹಬ್ಬಿದ ಬಳ್ಳಿ ಸಿಂಹಲಲಾಟವನ್ನು ಮುಟ್ಟಿದೆ. ಸಿಂಹಲಲಾಟದ ಕೆಳಗೆ ಪದ್ಮಾಸನದಲ್ಲಿ ಕುಳಿತ ಅಭಯ ಹಸ್ತದ ಶಿವನ ಮೂರ್ತಿಯನ್ನು ಕೆತ್ತಲಾಗಿದೆ. ಶೂಲಗಳ ಸಮೇತ ಶಿವಭಕ್ತರನ್ನು ಕೈಲಾಸಕ್ಕೆ ಕರೆದೊಯ್ಯುವಂತೆ ಶಿಲ್ಪಿ ಕಂಡರಿಸಿದ್ದಾನೆ.