. ವೀರಶೈವಾಮೃತ ಪುರಾಣ

“ಅರಸನೊಡವೆಯಕದ್ದ ಶಿವನನೊಪ್ಪಿಸಿಕೊಡದೆ
ಹಿರಿಯ ಶೂಲವ ನಡರ್ದ ಗುಂಡಬೊಂಯ್ಯಗಳು
ಪರವಾದಿಗಳು ನೋಡೆ ಹೋದಲಿಂಗವ ಕಂದ ಚಂದೇಶಮಾರಯ್ಯನು
ವರಸೋಮನಾಥಂಗೆ ಯೂಡಿದೈಚಯ್ಯಗಳು
ಹರದೂಷಕರ ನಾಟ್ಯವಾಡುತ್ತ ಕೂಡೆ ಸಂ
ಹರಿಸಿರ್ದ ಬಹುರೂಪ ಚೌಡಯ್ಯಗಳ ಪಾದಮಂ ನೆನೆದು ಸುಖಿಯಪ್ಪೆನು”
(ಕಾಂಡ ೮,  ಸಂಧಿ ೪ ಪದ್ಯ ೨೨)

 

. ಪದ್ಮರಾಜ ಪುರಾಣ

ಇಂದು ತಗಿಗೆಟ್ಟಮ್ಮುವಂ ಪೊರೆವೆನೆಂಬೊಂದು
ದಂದುಗಂಬೊತ್ತು ವಿಧವ ವಿತ್ತಮುಂ ಕಳ್ದು
ತಂದಿತ್ತನವರಟ್ಟಿ ಬಂದೊಡಾನೇಂ ಗುಂಡಬೊಮ್ಮಯ್ಯನೇ ಕಾಯ್ವೊಡೆ
ಚೆಂದವಾಯ್ತೆಮನೆ ತಾಂ ನೆಗಳ್ದುದದನಾಡಲೇಂ
ಸಂದ ವಿಶ್ವಕುಟುಂಬಿ ಎಂತೊದವಿತಂ ಬಿಟ್ಟೆ
ವಿಂದ ಮೊದಲಾಗಿ ತಾನಿಂತೀವ ಪಡಿಯನೆಂದೊರೆದು ಗುರುಮತ್ತಮೆಂದಂ
(ಸಂಧಿ ೧೩ ಪದ್ಯ ೯)

 

. ಮರುಳಶಿದ್ದ ಕಾವ್ಯ

ಗುಂಡಬ್ರಹ್ಮರೊಳಿಗುವ ನಿಷ್ಟೆಯ
ಕಂಡುಮರುಳನು ಮೂಕನಾದನು
ಕಂಡುಕೊಂಡನು ಭಕ್ತಿಶಿವನಿಂದಧಿಕನೆಂಬುದನು
ಕೆಂಡದಾ ಮಳೆ ಸುರಿಯೆ ಶರಧಿಯು
ಕೊಂಡು ಜ್ವಾಲೆಯ ಬೆಂದು ಹೋಹುದೆ
ಭಂಡುಖೋರರಿಗಂಜಿ ಬಾಳರು ಶರಣರೆಂಬುದನು

ಅಚಲ ನಿಷ್ಠರು ಗುಂಡಬ್ರಹ್ಮರು
ಅಚಲ ನೇಮದ ಗುಂಡಬ್ರಹ್ಮರು
ಅಚಲರಾಚಾರದಲಿ ಶಿವಭಕ್ತರಿಗೆ ರಕ್ಷಕರು
ಅಚಲರೈವರ ವೀರಶೈವದಿ
ಅಚಲರಾಗಿಹರಿಷ್ಠಲಿಂಗದಿ
ಅಚಲ ಗುಂಡಬ್ರಹ್ಮಯ್ಯರಿಗೆ ಶರಣೆನುತ ನಿಂದಿಹನು

ಗುಂಡಬ್ರಹ್ಮರ ಕಂಡು ಮರಳನು
ಕಂಡನೋರಗಲ್ಲ ಸಿರಿಯನು
ಕಂಡುಬೆರಗಾಇಹನು ಶಿಲ್ಪದ ಸೊಗದ ಸುಗ್ಗಿಯನು
ಕಂಡು ಇಮ್ಮಡಿ ಪ್ರೋಲರಾಜನ
ಕಂಡು ಯುವರಾಜೇಂದ್ರ ರುದ್ರನ
ಕಂಡು ಅರಮನೆಯಲ್ಲಿ ಉಂಡನು ಬಸವತತ್ವವನು
(ಸಂಧಿ ೮ ಪದ್ಯ ೫೨-೫೪ ಸಂಧಿ ೯ ಪದ್ಯ ೩೦)

 

. ಚನ್ನಬಸವ ಪುರಾಣ

ಓರುಗಲ್ಲೆಂಬ ಪಟ್ಟಣದ ಹೊರಪುರದಲ್ಲಿ
ವೀರಗುಂಡಬ್ರಹ್ಮರೆಂಬ ಪೆಸರಿಂದಿರಲ್
ಮುರಾರಿ ಬಂದು ಗಣಪತಿರಾಯನರಮನೆಯ ಕದ್ದವರ ಮರೆಯಹೊಗಲು
ದಾರಿವಿಡಿದೈತಂದು ಕಳ್ಳರಂ ನೀವೇಮಗೆ
ತೋರಿಯೆನೆ ಮರೆಹೊಕ್ಕರ ಕೊಡದವರಿಗಾಗಿ
ಧೀರರಾ ಗುಂಡಬೊಮ್ಮಯ್ಯಗಳ್ಶೂಲಮಂಪತ್ತಿ ನೆರೆಮುಕ್ತಹರಹರು
(ಸಂಧಿ ೬೩)

 

. ಶಿವತತ್ತ್ವ ಚಿಂತಾಮಣಿ

ಪರಮ ಸದ್ಭಕ್ತರಿವರಿಬ್ಬರುಂ ಶರಣ ಜನ
ರಱುದು ಮರೆದುಂ ತಪ್ಪುಮಾಡಿ ಮಱೊವೊಕ್ಕವರ
ಹರಬಂದೊಡೊಮ್ಮೆಗಂ ಕೊಡೆವೆಂಬ ಬಿರುದಿನಿಂ ನಡೆವುತಿಹರೆನಲು ಕೇಳಿ
ಪುರಹರಂ ನಗುತವರ ಮನವ ನೋಡುವೆನೆನುತ
ಧರೆಗಿಳಿದು ಬಂದು ಗಣಪತಿರಾಯನರಮನೆಯ
ನಿರುಳಗನ್ನವನಿಕ್ಕಿ ಚೋರನಾದಾಶಿವನ ಚರಣಾಂಬುಜಕ್ಕೆ ಶರಣು

ಇರುಳಗನ್ನವನಿಕ್ಕಿ ಕನಕರತ್ನಾದಿಗಳ
ನಿರದೆ ಕೊಂಡೊಯ್ವುತಿರೆ ಕಂಡರಾ ತಳವಱರು
ಇರುವುತಾ ಹೆಜ್ಜೆಯಾ ಬೆಂಬಳಿಯೊಳಗಟ್ಟಿ ಬರೆವಹಿಲದಾ ಶಿವನು ಬಂದು
ಮಱಿಮೊಕ್ಕವೈ ಗುಂಡುಬೊಮ್ಮಯ್ಯಯೆಂದೆನುತ
ಭರದಿ ಬಂದೆಯ್ತಂದು ಮನೆಯ ಹೊಗಲಾಕ್ಷಣಂ
ಕರೆದವರನೊಳಗೆ ಬೈಚಿಟುಕೊಂಡಿಪ್ಪವರ ಚರಣಾಂಬುಜಕ್ಕೆ ಶರಣು

ಅರಮನೆಯ ಕನ್ನವಿಕ್ಕಿದ ಕಳ್ಳರಂಗಸಿಹಿ
ತಿರದೆ ಬಂದರು ತೋಱಿ ಕೊಡಿಯೆನುತ ಲಾಕ್ಷಣಂ
ತಱವಳರು ಗುಂಡವಳರು ಗುಂಡಬ್ರಹ್ಮಯ್ಯಗಳನಿಬ್ಬರಂ ಜಱೆವುತಂ ದಟ್ಟಿಸುತ್ತ
ಧರಣಿಪನ ಹೊರಗೊಯ್ಯೆ ಶೂಲದಲಿ ತೆಗಸೆನಲು
ಹೊಱಗೆ ನಿಂದಾವು ಕಳ್ಳರು ತಪ್ಪದೆಂದೆನುತ
ಪುರಜನಂ ಬೆಱಗಾಗಿ ನಡೆವುತಿರ್ದವರುಗಳ ಚರಣಾಂಬುಜಕ್ಕೆ ಶರಣು

ಹರುಷದಿಂ ನಡೆಯ ಬರೆ ಧರಣಿಪಂ ಬೇಡೆಂದು
ಚರರ ಕಳಹುಲು ನಗುತ ನುಡಿದರವರಿಬ್ಬರುಂ
ಹರಗರ್ಪಿಸಿದ ಶೂಲವಿನ್ನು ಮರಳುವುದುಂಟೆ ಹೋಗೆನುತ ಜಱಿವುತಿರೆ
ಕರದಿಹೊಯ್ದಾ ರಕ್ತಮಂ ಚಲ್ಲಿದೆಸೆದೆಸೆಗೆ
ಮಱೆವೊಕ್ಕ ಭಕ್ತರ ಕಾವ ಬಿರುದುಂಟೆನಿಸಿ
ಶಿರದೊಳುಚ್ಚಳಿಸೆ ದಸಿ ಧೈರ್ಯದಿಂದೊಪ್ಪವರ ಚರಣಾಂಬುಜಕ್ಕೆ ಶರಣು

ಹರಭಕ್ತರೇ ಶೂಲ ಪಲ್ಲವಿಸುತಿರೆ
ಪುರಹಂ ಬಂದು ನಿಜದೋಱೆ ಕಾರುಣ್ಯದಿಂ
ಪರಮ ಕೈವಲ್ಯಮಂ ಕೊಟ್ಟು ಮನ್ನಿಸಿದನಿದು ಲೋಕ ವಿಖ್ಯಾತಮಾಗೆ
ಪರಮ ಸದ್ಭಕ್ತರುತ್ಸವದಿ ಕೊಂಡಾಡುತಿರೆ
ಪುರಜನಂ ಬೆಱಗಾಗೆ ಕೈವಾರಿಸುತ್ತಿರಲು
ಧರೆಗೆ ಸೋಜಿಗವೆನಿಪ ಗುಂಡಬೊಮ್ಮಯ್ಯಗಳ ಚರಣಾಂಬುಜಕ್ಕೆ ಶರಣು
(ಸಂಧಿ ೩೭ ಪುಟ ೧೦೪ ರಿಂದ ೧೦೯ ವರೆಗೆ)

 

. ಚನ್ನರಾಮನ ಸಾಂಗತ್ಯ

ಮರಾಂತಕರ ಕೊಲ್ವ ವೀರದೇವರ ದೇವ
ಮರೆಹೊಕ್ಕರೆ ಕಾವಬಿರುದು
ಧರೆಯೊಳು ಗುಂಡಬ್ರಹ್ಮಯ್ಯನ ಪ್ರತಾಪವ
ಧುರಧೀರರಾಯ ಕೀರ್ತಿಸಿದ

ಕದ್ದಕಳ್ಳಂ ಕೊಡದೆ ಹಿಂದಕ್ಕೆ ಕೊಂಡೀರಿ
ಬಿದ್ದೀರಿ ಶೂಲದ ಮೇಲೆ
ಸದ್ಯ ಸಂಕಲ್ಪದ ಶರಣರಹುದೋ ಸ್ವಾಮಿ
ಬದ್ಧರಿಪೆನ್ನ ನೀ ಕ್ಷಣದಿ

 

. ಬಸವೇಶ್ವರ ವಚನದ ಕಥಾಸಾರ

ಗೋಚನಪುರದಲ್ಲಿ ಗುಂಡಬ್ರಹ್ಮಯ್ಯಗಳು ಮರೆಹೊಕ್ಕವರನ್ನು ಕೊಡೆನೆಂದು ಬಿರುದಿನ ಕಾಳೆಯ ಹಿಡಿಸಲು,  ಇದನ್ನು ನಾರದನು ಕೇಳಿ ಶಿವನಿಗೆ ಹೇಳಲು ಓರುಗಲ್ಲ ಗಣಪತಿರಾಯನ ಮನೆಯಕನ್ನಿವನಿಕ್ಕಿ ಮುತ್ತು ಮಾಣಿಕವ ಚೆಲ್ಲುತ ಗುಂಡುಬ್ರಹ್ಮಯ್ಯನ ಮನೆಗೆ ಬರಲು,  ಬಂದ ಕಳ್ಳನಕೊಡು ಎನಲು,  ಕೊಂದರೆ ಕೊಲ್ಲಲಿ ಕೊಡುವುದಿಲ್ಲೆನಲು,  ನುಡಿಕೇಳಿ ಗಣಪತಿರಾಯ ಶೂಲಕ್ಕೆ ಹಾಕಬೇಕೆಂದು ಕರಿಸಲು,  ಆ ಬ್ರಹ್ಮಯ್ಯನ ಸತಿ ಶಿರವನುಳುಹಿ ಮುಂಡದಲ್ಲಿ ಆರತಿ ಹಿಡಿದು ಬರಲು ಅರಸ ಕಂಡು ಅವರ ಬಿಡಿ ಎನಲು,  ಶೂಲನದ ಲಿಂಗಕ್ಕರ್ಪಿಸಿದೆ ಇನ್ನು ಹೋದೆವೇ?  ಎಂದು ಶೂಲಕ್ಕೆ ಬೀಳಲು,  ಶಿವಮೆಚ್ಚಿ ಶೂಲದ ಮರಸಹಿತವಾಗಿ ಕೈಲಾಸಕ್ಕೆ ಕರೆದುಕೊಂಡು ಹೋದನು.

 

. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ

ಕದ್ದು ಜಂಗಮ ಬರೆ
ನಿರ್ಧರ ಶೂಲದೊ
ಳಿದ್ದರು ಗುಂಡಬೊಮ್ಮಿಗಳೂ
ಸದ್ಯ ನೃಪನ ರಾಣಿ
ಗಿದ್ದ ಜಂಗಮ ಸತ್ತ
ಡೆದ್ದಿರಿಸಿದ ಬಸವೇಶಾ

ಆಂಧ್ರದೇಶದೊಳೊಪ್ಪುವ ವೋರುಗಲ್ಲೆಂಬ ಪಟ್ಟಣದಲ್ಲಿ ರುದ್ರರಾಯನ ಸುತ ಗಣಪತಿರಾಯನೆಂಬವ ರಾಜ್ಯವನಾಳುವಾಗಲು ಯಿತ್ತ ಗವಚೆರೆಂಬ ಪುರದಲ್ಲಿ ಗುಂಡಬ್ರಹ್ಮಯ್ಯನೆಂಬ ಶರಣರಿಬ್ಬರು ವೀರಭಕ್ತಿಯನಾಚರಿಸುತ್ತ ಜಂಗಮ ದಾಸೋಹಮಂ ಮಾಡುತ್ತ ಕದ್ದು ಬಂದು ಮೊರೆಹೊಕ್ಕರೂ ಕೊಡೆವು ಮಾರ್ಮಲತ ಶಿವದ್ರೋಹಿಗಳ ಹೊಡೆವೆವೆನುತ್ತ ಬಿರುದಿನ ಕಹಳೆಯಂ ತಮ್ಮ ಪುರದೊಳು ಸಾರಿಸುತ್ತಿರಲು ಆಗ ಈ ಕಹಳೆಯ ಧ್ವನಿಯು ಕೈಲಾಸಕ್ಕೆ ಕೇಳಲು ಶಿವನು ನಗುತ್ತ ನಾರದನ ಕೇಳಲು ಆಗ ಬಿರಿದಂಕರಾದ ಶರಣರ ಕಹಳೆಯ ಧ್ವನಿಯೆನಲು ನಾರದನು ಶಿವನು ಅವರ ಬಿರುದ ಸೆಳೆಯಬೇಕೆಂದು ಗೌರಿ ಮೊದಲಾದ ಪ್ರಮಥರಿಗೆ ಪೇಳಿ ಭೂತಳಕ್ಕೆ ಬಂದು ಗಾಳಿ ಪೂಜೆಯಲ್ಲಿ ಕನ್ನಗತ್ತಿಯಂ ಮಾಡಿಸಿ ವೋರುಗಲ್ಲಿಗೆ ಪೋಗಿ ಗಣಪತಿರಾಯನ ಮನೆಯಲ್ಲಿ ಕನ್ನವನಿಕ್ಕೆ ಮುತ್ತು ರತ್ನವ ತೆಗೆದುಕೊಂಡು ಹೋಗುವಾಗ ಕಹಳೆಗಳನೊಡದು ಪಟುಭಟರ ಅಲುಗಂ ಮುಱಿದು ಆನೆ ಕುದುರೆಗಳ ಪಾಶ ಸರ್ಪಮೆಗಳಂ ಪಱಿದು ಬಿಟ್ಟು ಬಾಗಿಲ ಬೀಗವ ಮುರಿದು ಈಡಾಡಿ ನಡದು ಬರುತ್ತ ಮುತ್ತು ರತ್ನ ಸೂಸುತ್ತ ಗವಚರಕ್ಕೆ ಬಂದು ಗುಂಡಬ್ರಹ್ಮಯ್ಯನಲ್ಲಿರಲು ಗಣಪತಿರಾಯ ಬೆಳಗಾಗಿ ಎಚ್ಚತ್ತು ತನ್ನ ಮೈದೊಡಿಗೆಸತಿಯುಟ್ಟು ಆಭರಣವಿಲ್ಲದಿರೆ ಸತಿಯ ಬೈದು ಝಂಕಿಸುವಾಗ ಕನ್ನವಂ ಕಂಡು ತನ್ನ ಬಂಟರಂ ಕರೆಸಿ ಪಟ್ಟಣದ ಕೋಳಾಹಳವಂ ಕೇಳಲು ತಳವಾರರು ಕಳ್ಳರ ಹೆಜ್ಜೆವಿಡಿದು ಹೋಗಿ ಗವಚರ ಪುರವಂವೊಕ್ಕುದ ಭೂಪಗೆ ಪೇಳಲು ಗಣಪತಿರಾಯ ದಂಡೆತ್ತಿ ನಡೆದು ಗವರಪುರವಂ ಮುತ್ತಿ ಕದ್ದಕಳ್ಳರಂ ಕೂಡಿ ಗುಂಡಬ್ರಹ್ಮಯ್ಯ ಎನಲು ನಮ್ಮಲ್ಲಿದ್ದ ಚರಲಿಂಗವ ನಾವು ಕೊಡೆವು ಎಂದು ವಾದಿಸಲು ಆಗ ಶಿವನು ಚೋರರಂತೆ ಹೆದರುತ್ತ ಬೆದರುತ್ತ ಮುತ್ತು ರತ್ನವ ನಿಮಗೆ ಕೊಳ್ಳಿ ನಮ್ಮ ಪ್ರಾಣವನುಳುಹಿಯೆಂದು ಬ್ರಹ್ಮಯ್ಯಗಳ ಸತಿಯರಿಗೆ ಪೇಳಲು ಅವರೊಲ್ಲದಿರಲು ಇತ್ತ ಗಣಪತಿರಾಯನು ತ್ರಿಶೂಲಧರ ಕಳ್ಳನಾದರೂ ಶೂಲಕ್ಕೆ ಹಾಕದೆ ಬಿಡುವೆನೇ ಎಂದು ಕದ್ದಕಳ್ಳರ ನೀ ಕೊಡದೊಡೆ ಊರ ಮುಂದಿದ್ದ ಶೂಲವ ನೀವೇರಿಯೆಂದು ಭೂಪ ನುಡಿಯಲು ವೀರಾವತಾರರು ಶೃಂಗಾರವಾಗಿ ಹರಭಕ್ತರಾಗಿ ಸತಿಯರು ಸಹಿತ ಶೂಲವಿದ್ದಲ್ಲಿಗೆ ಬಂದು ಲೋಕಾಧಿಲೋಕ ನೆರೆದು ನೋಡಲು ಆಗ ಶೂಲವ ಬಳಸುತ್ತ ಬೊಬ್ಬಿರಿಯಲು ಇತ್ತ ಶಿವನ ಬೋಧೆಯಿಂದ ಗಣಪತಿರಾಯ ಶೂಲವನೇರ ಬೇಡವೆನಲು ಏರಿಸಿದ ಭಾಷೆಯೇ ವೀರಭಕ್ತಿಗೆ ಮೀರಬಾರದೆಂದು ಶೂಲವನೇರುವಾಗ ಸತಿಯರು ತಮ್ಮ ಶಿರವರಿದು ಪತಿಗಳಿಗಾರತಿಯನೆತ್ತಲು ಗುಂಡ ಬ್ರಹ್ಮಯ್ಯಗಳಿಬ್ಬರು ಶೂಲವನೇರಿ ಸುಖಾಸನ ಭಾವನೆಯಿಂದ ಶೂಲಧರರಾಯ ನಮೋ ಎಂದು ಶೂಲವನಂಗಯಿಸಲಾಗ ಶಿವನು ಪ್ರಮಥೀಹ ಗಿರಿಜೆ ಸಂಗಿತ ಎಂದು ಪುಷ್ಪದ ಮಳೆ ಸುರಿದು ದೇವ ದುಂದುಬಿ ಮೊಳಗಿ ಸತಿಯರ ಶಿರವ ಪತ್ತಿಸಿ ಪ್ರಾಣವನಿತ್ತು ಪತಿಗಳ ಶೂಲದಿಂದುಳುಹಿ ತೆಗೆದು ಬಿಗಿಯಪ್ಪ ಜಗದ ಜನರೀ ನೋಡುವಂತೆ ಶೂಲ ಜಿಗಿತಿರಲಾಗ ಬಿರಿದಿನ ಭಕ್ತಿ ಸಂಹಿತೆಂದು ಕೈಲಾಸಕ್ಕೊಯ್ದು ಗುಂಡ ಬ್ರಹ್ಮಯ್ಯಗಳಿಗೆ ನಿತ್ಯ ಪದವಿತ್ತ ಶಿವನು.