ಭಾಗ

ಗುಂಬ ಗುಂಬದ ಒಳಗೆ ಗುಂಬ ತೈಲವ ತೆಗೆದು
ಬೆಂಬೂದಿ ಒಳಗೆ ಹದಮಾಡಿ –ಧೂಳಿತವ
ಸಂಭ್ರಮದ ಲಿಂಗಕೆ ಧರಿಸಿದ

ಸಣ್ಣನೆ ಗಿಡುವಿಗೆ ಗಿಣೈದು ಎಸಳೈದು
ಬಣ್ಣಿಸಿ ನಗುವ ನಗುವೋ-ಮಲ್ಲಿಗೆ ಹೂವು
ಚಿನ್ನದ ತಟ್ಟೇಲಿ ಅಣಿಯಾದೊ

ಅಂತ್ರಾಣ ಮೈನೋಳು ಚಿಂತಾಕನ ಕೊರಳಿನೋಳು
ಕೆಂಪಿನ ಮೈಯ ನಿಜಗೆಂಪಿ-ಕೆಂಡಸಂಪಿಗೆ ಹೂವ
ತಂದು ದೇವರಿಗೆ ಧರಿಸಿದರು

ಅಂತ ಮಲ್ಲಿಗೆ ದುಂಡು ಮಲ್ಲಿಗೆ ಪಾರಿಜಾತದ ಹೂವ
ದಂಡೆಗೊಪ್ಪುವ ತೊಳಚಿಯ – ಪಚ್ಚೆತೆನೆಯ
ಎತ್ತಿ ದೇವರಿಗೆ ಧರಿಸಿದರು

ಹಾಲಂಬಾಡಿ ಹೆಣ್ಣು ಮೂಗು ಡೊಂಕಿನೋಳು
ಹಳದಿ ಜೋತುರಕೆ ಅಮರುವಳು-ಮುತ್ತುಗದ ಪುಷ್ಪ
ಎತ್ತಿ ಲಿಂಗಕೆ ಧರಿಸಿದರು

ಸಂಜೀಲಿ ಸೂತಕವಾಗಿ ಸರಿರಾತ್ರಿಗೆ ಬಸುರಾಗಿ
ಮುಂಜಾವಕೆ ಮಗನ ಪಡೆಯೋಳು-ಕೆಂಪಕಣಗಲೆ ಹೂವ
ತಂದು ಲಿಂಗಕೆ ಧರಿಸಿದರು

ಅರಿಸಿಣದ ಸೀರೆಗೆ ಅರವತ್ತೈದು ಕಂಬಿಕಟ್ಟಿ
ಪುರುಷರಿಲ್ಲದ ಬಾಲೆ ಬಸುರಾದ ಸಾವಂತಿಗೂವ
ತಂದು ದೇವರಿಗೆ ಧರಿಸ್ಯಾರು

ಉತ್ತಾನೆ ಹೊಲದಲ್ಲಿ ಬೆತ್ತ ಬೆತ್ತಲೆ ಬೆಳೆಯೋಳೆ
ಪುಟ್ಟ ಮೈನೊಳೆ ಶಿವಶರಣೆ-ತುಂಬೆ ಪುಷ್ಪವ
ತಂದು ಲಿಂಗಕೆ ಧರಿಸ್ಯಾರು

ತೆವರಿಮ್ಯಾಲೆ ಹುಟ್ಟೋಳೆ ತೆವರಿಮ್ಯಾಲೆ ಬೆಳೆಯೋಳೆ
ಪಾದ ಸೋಕಿದರೆ ಅಳವಲ್ಲ-ನಗ್ಗಲ ಪುಷ್ಪವ
ಮೊಗ್ಗು ತಂದು ಲಿಂಗಕೆ ಧರಿಸ್ಯಾರು

ಹಳ್ಳ ಕೊಳ್ಳದ ಒಳಗೆ ಜಲ್ಲನಾಡುತ ಬೆಳೆಯೋಳ
ನಲ್ಲರದ ನಗುವ ನಗುವೋಳ-ಲಕ್ಕಿ ಪತ್ರೆಯ
ಎತ್ತಿ ಲಿಂಗಕೆ ಧರಿಸ್ಯಾರೆ

ದೇವರಿಗೆ ಧರಿಸ್ಯವರೆ ದೇವಕಳೆಯ ಹೂವ
ಮೂಗಾವುದಕೆ ಗಮಲ ನಿಲುಬಾರ-ಸಿಕಿಂದ್ರಾಜಣದ ಹೂವ
ತಂದು ಲಿಂಗಕೆ ಧರಿಸ್ಯಾರೆ

ಅಟ್ಟ ಬೆಟ್ಟದ ಒಳಗೆ ಝಲ್ಲನಾಡುತ ಬೆಳೆಯೋಳೆ
ಅಗ್ಗಣಿ ಹಂಗು ತನಗಿಲ್ಲ – ಬೆಟ್ಟ (ದ) ತಾವರೆಯ
ಮೊಗ್ಗ ತಂದು ಲಿಂಗಕೆ ಧರಿಸ್ಯಾರೆ

ಏರಿಯ ಒತ್ತುಕೊಂಡು ನೀರ ಉಂಡುಕೊಂಡು ಬೆಳೆಯೋಳೆ
ಸೂರ್ಯನಿಗೆ ಕರವ ನಮಿಸುವಳೆ-ಪಾರಿಜಾತದ ಹೂವ
ತಂದು ಲಿಂಗಕೆ ಧರಿಸ್ಯಾರೆ

ಎಲ್ಲಾ ಪುಷ್ಪವು ಪೂಜೆ ಹೊತ್ತಿಗೆ ಬಂದೊ
ಚಲುವೆ ನೀ ಯಾಕೆ ಬರದೋದೆ- ದೇವಗಣಿಗಲ ಹೂವೆ
ಮಾರಿ ಮಂಡೇಲಿ ಇರುವೋಗೆ

ಎಲ್ಲಾ ಪುಷ್ಪವು ಹೊತ್ತಿಗೆ ಸರಿಯಾಗಿ ಬಂದೊ
ಹುಚ್ಚಿ ನೀ ಯಾತಕೆ ಬರದೋದೆ-ಮುಳ್ಳು ಮುತ್ತುಗದೂವೆ
ನೀ ತಿಪ್ಪೆ ಕೆರೆಯಲ್ಲಿ ಇರುವೋಗೆ

ಎಲ್ಲಾ ಪುಷ್ಪವು ಪೂಜೆ ಹೊತ್ತಿಗೆ ಬಂದವೆಲ್ಲೆ
ಮಾ ಚೆಲುವೆ ನೀಯಾಕೆ ಬರುದೋದೆ ತಾಳೆ ಹೂವೆ
ಹಳ್ಳದ ಕೆರೆಯಲ್ಲಿ ಇರುವೋಗೆ

ಹಳ್ಳದ ತಾಳಲ್ಲಿ ಇರುವೋಗೆ ತಾಳೆ ಹೂವೆ
ನೀ ಕತ್ತೆ ಲದ್ದಿಯಾಗೆ ಬೆಳಿ ಹೋಗೆ

ಓಣೀಲಿ ಹುಟ್ಟುವಳು ಓಣೀಲಿ ಬೆಳೆಯೋಳು
ಹೋಗುವರ ಸೆರಗ ಹಿಡಿಯೋಳು-ಉತ್ರಾಣಿಯ
ಮಂಗಳಾರತಿಗೆ ಮಡಗಿದರು

ತ್ವಾಟದಲಿ ಹುಟ್ಟೋದು ತ್ವಾಟದಲಿ ಬೆಳೆಯೋದು
ಮಾ ಪುಷ್ಟಜಾತಿಗೆಲ್ಲ ಕರಚಲ್ವೆ-ಕಸ್ತೂರಿ ಹೊಂಬಾಳೆಯ ತಂದು
ಚಿತ್ತುರಿಸಿ ಪೂಜೆ ಮಾಡುತಾರೆ

ಕೆಂಡಕೆ ಹಾಕಿದರೆ ಭೂಮಂಡಲ ತುಡುಕುವುದು
ಗಂಧಕದ ಅಂಗಡೀಲಿ ಇರುವೋದು-ಸಾಂಬ್ರಾಮಿ ಲೋಬಾನ
ತಂದು ದೇವರಿಗೆ ಬೆಳಗಿದರು

ಮುದ್ದು ಪರಮೇಶ್ವರನ ಮುರಡನ ಪೂಜೆ ಮಾಡಿ
ತಮ್ಮ ಲಿಂಗಸಾಲೆ ಬಿಟ್ಟು ತೆರಳಿದರು-ಪರಮೇಶ್ವರನಿಗೆ
ಒಪ್ಪದಿಂದೆಡೆಯ ಪಡೆಸಿದರು

ಒಂದು ಬಾಳೆಯ ಎಲೆಯ ಮೇಲೆ ಒಂಬತ್ತು ಕಜ್ಜಾಯ
ಬಂದಳದ ಮೊಸರು ಎರೆದುಪ್ಪ-ರಾಜೀರುಳ್ಳಿ
ತಂದು ದೇವರಿಗೆ ಎಡೆಮಾಡಿ

ಹಪ್ಪಳುಪ್ಪಿನಕಾಯಿ ಹಲಸು ಬಾಳೆಹಣ್ಣು
ಗಟ್ಟಿದ ಕೊಂಬುರಿ ಕೆನೆಮೊಸರು-ಗೌರಮ್ಮ
ಅಟ್ಟಟ್ಟು ದೇವರಿಗೆ ಎಡೆ ಪಡಿಸಿ

ನಾರು ಈರದ ಕಾಯ ನಾರು ತೆಗೆದು ಈಡಾಡಿ
ಒಂದು ಹೋಳೆಣ್ಣೆ ಬಿಟ್ಟು ಹದಮಾಡಿ ತಾಳದವ
ನಾನಾ ಪರಿಯಲ್ಲಿ ಎಡೆಯಾಯ್ತು

ಚಿಟ್ಟುಗುಂಬಳಕಾಯ ತೊಟ್ಟು ತೆಗೆದು ಈಡಾಡಿ
ಒಂದು ಬಟ್ಲೆಣ್ಣೆ ಬಿಟ್ಟು ಹದಮಾಡಿ-ತಾಳದವ
ಅಟ್ಟುಟ್ಟು ಗೌರಮ್ಮ ತಾಯಿ ಹದಮಾಡಿ

ಸಣ್ಣಕ್ಕಿ ಸಾದರ ಬೆಣ್ಣೆಕಾಯಿಸಿದ ತುಪ್ಪ
ಕಣ್ಣು ಮೂರುಳ್ಳ ಎನ್ನೊಡಯನಿಗೆ-ಗೌರಮ್ಮ
ಒಪ್ಪದಿಂದೆಡೆಯ ಪಡಿಸಿದರು

ಕಾಯನಿಲ್ಲ ಕಟ್ಟನಿಲ್ಲ ಗುಣಿಮಾಡಿ ನೀರುಯ್ಯನಿಲ್ಲ
ಗುರು ಕರಣದಿಂದಲೆ ಬೆಳೆಯೋಳೆ-ಗುಳ್ಳದಕಾಯಿ
ತಾಳ್ದ ಗೌರಮ್ಮ ಎಡೆಮಾಡಿ

ಎಲೆ ತೋಟದ ಹಿಂದೆ ನಲ್ಲರುದು ಬೆಳೆಯೋಳೆ
ಎಲೆಗೊಂದು ಕಾಯಿ ಬಿಡುವೋಳೆ-ಚೌಡಂಗಿಕಾಯಿ
ತಾಳ್ದ ಗೌರಮ್ಮ ಎಡೆಮಾಡಿ

ಬೆಟ್ಟದಲಿ ಹುಟ್ಟೋಳೆ ಬೆಟ್ಟದಲಿ ಮರೆಯಾಗೋಳೆ
ಎಲೆಗೊಂದು ಕಾಯಿ ಬಿಡುವೋಳೆ-ಬೆಟ್ಟ ನೆಲ್ಲಿಕಾಯಿ
ಉಪ್ಪಿನಕಾಯಿ ಎಡೆಯಾಯ್ತು

ಕಲ್ಲಲ್ಲಿ ಹುಟ್ಟೋಳೆ ಕಲ್ಲಲ್ಲಿ ಬೆಳೆಯೋಳೆ
ಅಲ್ಲಲ್ಲಿ ಚಾರಿ ತಿರುಗುವಳೆ – ಮಾಗುಡಿ ಬೇರ
ಉಪ್ಪಿನಕಾಯಿಗಳು ಎಡೆಯಾಯ್ತು

ತಾಳಿಗೆ ಮುಳ್ಳಾಕಿ ತುದಿಗೆ ಚಪ್ಪರ ಕಟ್ಟಿ
ಒಂದು ಮಾರುದ್ದಕೆ ನೀ ಬೆಳೆಯೋಳೆ-ಪಡ್ಲದಕಾಯಿ
ತಾಳ್ದ ಗೌರಮ್ಮ ಎಡೆಮಾಡಿ

ಹಾಗಲವರೆದಂಟು ಕೋಗುಲ ಚಪ್ಪರೆಕಾಯಿ
ಇದನಾಗನಲ್ಲವರೆ ತಡುಗಣಿ-ತಾಳದವು
ನಾನಾ ಪರಿಯಲ್ಲಿ ಎಡೆಯಾಯ್ತು

ಬೆಟ್ಟದಲಿ ಹುಟ್ಟೋಳೆ ಬೆಟ್ಟಕ್ಕೆ ಮಲೆಯಾಗೋಳೆ
ಉಟ್ಟವಳೆ ಕರಿಯ ಕಂಬಿ ಸೀರೆ-ಬಿದರಕ್ಕಿ
ಕಟ್ಟಿದ ಬಾನಿಗಳು ಎಡೆಯಾಯ್ತು

ನೆಲ್ಲಕ್ಕಿ ಅಂದದಲಿ ತಾಯಿ ತಂದು ಬೋನವ ನೀಡಿ
ಈ ಚಂದಗಂಗುಳದ ಕೆನೆ ಮೊಸರು-ಪಾರ್ವತಿದೇವಿ
ಇದ್ದೋಟು ಭೋಜನವ ನೀಡಿದಳು

ನೂರೊಂದು ಬಗೆಯ ಎಡೆಮಾಡಿದ ಪಾರ್ವತಿ
ಸಾಂಬ್ರಾಣಿ ಬೆಳೆಗಿ ಶರಣೆಂದ-ಶಿವನಿಗೆ
ಮಂಚದ ಮೇಲೆ ಬಂದು ಕುಳಿತಳು

ಇಕ್ಕಿದಂತ ಎಡೆಯ ನೋಡಿದನು ಪರಮೇಶ್ವರ
ಭಾವನ ಗ್ಯಾನವ ಮಾಡಿದನು

ನಾಗ ಬೆತ್ತವ ಶಿವುಳಿ ಒಂದು ಬನವಾಸಿ ಹೆಣೆದು
ಭಾವನಿಗೊಂದು ಎಡೆಯ ಎತ್ತಿ ಮಡಗಿದರು

ಹಾಲು ಅನ್ನವ ಉಂಡು ಅಂಗೈ ಹಸ್ತ ಅಲವಿ
ತಾವು ಬಂದು ಮಂಚದ ಮೇಲೆ ಕುಳಿತರು

ಹಾಲು ಅನ್ನವ ಇಕ್ಕಿ ತಾಯಿ ಮೇಲಾದ ಈಳ್ಯವ ಕೊಟ್ಟು
ಹೂವಿನ ಕನ್ನಗತ್ತಿ ಮಡಲಿಕ್ಕಿ-ಓರುಗಲ್ಲ
ಬೀರನರಮನೆಗೆ ನೀವು ದಯಮಾಡಿ

ಕೈಲಾಸದಿಂದ ನೀವು ಕಳವಿಗೆ ಹೋದಮೇಲೆ
ನಮ ಕೈಲಾಸಕೆ ಇಲ್ಯಾರು ಬಲ್ಲಿಗರು

ಕಾವಲಲ್ಲಿ ಕಲಿಬೀರ ಬಾಗಲಲ್ಲಿ ಭೈರವ
ಸಣ್ಣುಮುಗದೇತವ ಗಣನಾಯಕ-ಬಸವಣ್ಣ
ಐದು ಮಂದಿಯು ಗಂಡುಮಕ್ಕಳು

ಐದು ಮಂದಿ ಗಂಡುಮಕ್ಕಳು ನಿನಗವರೆ ಗೌರಿಯೆ
ನಾನು ಹೋಗುತೀನಿ ಕಳುವುದಕೆ

ಮಡಿದಿಗೆ ಬುದ್ಧಿಹೇಳಿ ತಲೆ ಬಗ್ಗಿ ಬರುವಾಗ
ಆ ಹೊಳೆ ತ್ವಾಟದ ಗೌಳಿ ಶಕುನಾಯ್ತು-ಗೌರಮ್ಮ
ಇದು ತಲೆ ಹೋಗೊ ಕಂಟಕ ನೀ ಉಳುವಯ್ಯ

ಆ ತಕ್ಷಣ ನಾರಾಯಣ ಸ್ವಾಮಿ ನಿಜರೂಪವಾಗಿ ನಿಂತ. ಆಗ “ಹಂಗಲ್ಲ ಪಲ್ಲಿ ಹೇಳಿದ ಮಾತನ್ನು ಹೇಳುತ್ತೇನೆ ಕೇಳು” ಎಂದು

ನೆತ್ತಿ ಮ್ಯಾಗಳ ಗಾಳಿ ಕೆಟ್ಟದೆನ್ನಲುಬೇಡ
ಸತ್ಯುಳ್ಳ ಶರಣ ಗುಂಡುಬ್ರಹ್ಮಯ್ಯ-ನಾಳೆ ಇಟ್ಟೊತ್ತಿಗೆ
ಭಕ್ತಿಯಿಂದ ಕೈಲಾಸಕ್ಕೆ ಬರುತಾರೆ

ನೀನು ನರಲೋಕಕ್ಕೆ ಕರೆದುಕೊಂಡು ಹೋದರೆ ಸರಿಯಾಗಿ ಕರೆದುಕೊಂಡು ಬಾ ಎಂದು ಪಾರ್ವತಿಯು ನಾರಾಯಣನಿಗೆ ಹೇಳಿದಳು. ಕೈಲಾಸದ ಅರಮನೆ ಬಿಟ್ಟು ಸ್ವಾಮಿಯವರು ನರಲೋಕಕ್ಕೆ ಹೊರಟರು.

ಬಾಗಿಲಿಂದೀಚೆಗೆ ಬರುವ ಯಾಳ್ಯದ ಒಳಗೆ
ಕೆಡದಿದ್ದ ನಂದಿ ಒದರೆದ್ದ-ಜಗದೀಶ
ಬಾಳೆಂಬೊ ಮಂಡೆ ಸವರಿದ

ಹುಲ್ಲು ನೀರ ಉಂಡು ಬಲ್ಲಿಗನಾಗಿ ಕಾವಲಿರು
ಎಂದು ಹೇಳಿ ಮುಂದಕೆ ಬರುತಾರೆ

ಅಲ್ಲಿಂದ ಮುಂದಕೆ ಬರುವ ಯಾಳ್ಯಾದ ಒಳಗೆ
ಮುತ್ತೈದರ ಕೊಡವೆ ಎದುರಾಯ್ತು-ಜಗದೀಶ್ವರ

ಹಸ್ತಕೆ ಅಗ್ಗಣಿ ಈಸುಕೊಂಡ್ರು-ಜಗದೀಶ
ತೆಗೆದುಕೊಂಡು ಲಿಂಗದ ಮೇಲೆ ಬಿಟ್ಟಕೊಂಡರು

ಕೈಲಾಸ ಪುರವ ಬಿಟ್ಟರು ಜಗದೀಶ್ವರರು
ಸೂರ್ಯ ಲೋಕಕೆ ಸಾಗಿ ಬರುತಾರೆ

ಹಾಗೆ ಬರುವಂಥ ವೇಳೆಯಲ್ಲಿ ನಾರಾಯಣ ಸ್ವಾಮಿ ಹಿಡಿಸಿದ್ದ ಗ್ರಹಣ ಈಗ ಬಿಡ್ತು. ಆಗ ಸ್ವಾಮಿ ಏನ ಹೇಳುತ್ತಾನೆ.

ಚಂದ್ರ ಸೂರ್ಯಾದಿಗಳೆ ಲೋಕಕೆ ದೊಡ್ಡೋರೆ
ನಾವೊಂದು ಬಿರುದ ಗೆಲಬೇಕು-ಲೋಕದ ಮೇಲೆ
ಹೊಗು ಮಿಗುಲಾಗಿ ನಡೆಸೋಗ-ಚಂದ್ರಸೂರ್ಯಾದಿಗಳೆ
ನೀವು ನಮ್ಮ ಕೂಟಕ್ಕೆ ಒಳಗಾಗಿ

ಆಗ ಚಂದ್ರ ಸೂರ್ಯಾದಿಗಳು

ನಮ್ಮ ಪಡದಂಥ ಗುರು ನೀವು ಆಡುದಂಥ
ಆಟಾಕದರೆ ನಾವು ಕೇಳಿರಿ-ಪರಮೇಶ್ವರ
ನಾವು ನಿಮ್ಮ ಪಾದಕೆ ಒಳಗಾಯ್ತಿವಿ

ನೀವು ನಮ್ಮ ಪಾದಕ್ಕೆ ಒಳಗಾದರೆ ಸಿಕ್ಕಿಲ್ಲ
ಓರುಗಲ್ಲಿಗೆ ಕಾವುಳ ನೀವು ಕವಿರಯ್ಯ

ಓರುಗಲ್ಲ ಪಟ್ಟಣಕ್ಕೆ ನೀವಾದರೆ ಬಂದಾಗ
ಧರ್ಮಗೊಡೆಯ ನಾವು ಹಿಡಿವೇವು

ಧರ್ಮಗೊಡೆಯ ಪಿಡಿದು ಕತ್ತಲೆಯ ಮಾಡುವೆವು
ಸ್ವಾಮಿ ಮುಂದಕೆ ದಯಮಾಡಿ

ಚಂದ್ರ ಸೂರ್ಯದಿಗಳಿಗೆ ಸ್ವಾಮಿ ಭಾಷೆಯ ತಕ್ಕೊಂಡು
ಆವ ಲೋಕಕ್ಕೆ ಸ್ವಾಮಿ ಬರುತಾರೆ

ಎಂಬತ್ತು ವರದ ಗುಂಡಿ ಹರಿವಾಣದಲಿ
ಧರ್ಮದೇವತಮ್ಮನವರು ಕಾಣಿಕೆಯ ತಂದು ಮಡಗಿದರು
ಹೋದ ಕಾರ್ಯವು ನಿಮಗೆ ಜಯವಾಗಲಿ

ಧರ್ಮದೇವತೆ ಕೈಲಿ ಆಶೀರ್ವಾದ ತಕ್ಕೊಂಡು
ಕಾವಳ ಲೋಕಕೆ ಸಾರಿ ಬರುತಾರೆ

ಮುಂದೆ ಮುಂದೆ ನಾರಾಯಣ ಹಿಂದೆ ಹಿಂದೆ ಈ ಸುರ
ಆ ಕತ್ತಲೋಳು ಕದಲಿ ಬರುತಾರೆ

ಆ ಒಡವೆ ನಗ ಧರಿಸಿ ಹೋಗ್ತಾ ಇದ್ದರೆ ಸ್ವಾಮಿ ಧಗಧಗನೆ ಉರಿಯುವಾಗ ಕತ್ತಲೆ ಲೋಕವೆಲ್ಲ ಬೆಳಕಾಯಿತು. ನಾರಾಯಣ ಹಿಂತಿರುಗಿ ನೋಡಿದ. ಒಂದು ಸೂರ್ಯ ಹೊಳೆದರೆ ಇಷ್ಟೊಂದು ಪ್ರಕಾಶ ಬರುತ್ತದೆ,  ಇಂತೀರೈದು ಕೋಟಿ ಸೂರ್ಯ ಉರಿದಂಗೆ ಬರುತಿರಲು ಸ್ವಾಮಿ,  “ಈ ಒಡವೆ ಬೆಳಕಲಿ ನಮ್ಮ ಕಟ್ಟುತಾರೆ. ಏನು ಮಾಡಬೇಕು ಇದನ್ನು ಇಲ್ಲಿ ಕಳೆದು ಮಡಗಿ” ಎಂದ ನಾರಾಯಣ. “ಒಡವೆ ಹೋದರೆ ಯಾರು ಕೊಡೋರು” “ನಾನು ಜವಾಬ್ದಾರಿ”

ಕಾಳ ರಾತ್ರಿ ಒಳಗೆ ಬರುವಾಗ ನಾರಾಯಣ
ಕಂಕುಳ ಬೆವರು ತೆಗೆದು ಧರಣಿ ಮೇಲೆ-ಹಾಕಿದ
ಒಬ್ಬ ಕಾಳ ಭೈರವನ ಪಡೆದನು

ಏಳು ತಲೆ ಕಾಳಿಂಗ ಸರ್ಪವಾಗಿ ಕಾಳಭೈರವ ಆ ಒಡವೆಗೆ ಕಾವಲಾದ

ಭಕ್ತರ ಮನದ ದೃಢವ ನೋಡುವುದಕ್ಕೆ
ನಮ್ಮ ನಾರಾಯಣ ಮರ್ತ್ಯಕೆ ಇಳಿದರು

ಶರಣರ ಮನದ ದೃಢವ ನೋಡೋದಕ್ಕೆ
ಪರಮೇಶ್ವರ ಮರ್ತ್ಯಕೆ ಇಳಿದರು

ಪರಮೇಶ್ವರ ಮರ್ತ್ಯಕೆ ಇಳಿದರು ಘನಪತಿರಾಜನ
ಕೆರೆ ಮದಗದೇರಿ ಮ್ಯಾಲೆ ಬಂದು ನಿಲುತಾರೆ

ಏರಿ ಮುತ್ತಿನೇರಿ ನೀರೆಲ್ಲ ಪನ್ನೀರು
ತೂವೆಲ್ಲ ಹೊನ್ನ ಕಳವು-ಏರಿಮ್ಯಾಲೆ
ಸ್ವಾಮಿ ಶೇಖರರು ಬಂದು ನಿಲುತಾರೆ

ಏರಿ ಚಂದವ ನೋಡಿದರು ಶಿವನಾರಾಯಣ
ಬೃಂದಾವನಕೆ ಅವರು ಬರುತಾರೆ

ಶಿವನು ನಾರಾಯಣನು ಸುರಹೊನ್ನೆ ತೋಟಕ್ಕೆ ಹೋಗಲಾಗಿ
ಸಿರಿಯಾದ ಬಂಜೆ ಫಲವಾಯ್ತು –ದಾಳಿಂಬ ವೃಕ್ಷ
ಅರೆಬಾಯಿ ಬಿಟ್ಟು ನಗುತದೆ

ಹನ್ನೆರಡು ವರ್ಷದಲ್ಲಿ ಒಣಗಿದ್ದ ಮರವೆಲ್ಲ ಚಿಗುತು ಫಲವಾದೊ,  ಸ್ವಾಮಿ ಕರಿಕಂಬಳಿ ಉಟ್ಟವರೆ,  ಕಪ್ಪು ಬಳಿದುಕೊಂಡವರೆ ಲೆಕ್ಕಿ ಗುದ್ದಿಗೆ ಕೈಯಲ್ಲಿ ಹಿಡಿದುಕೊಂಡವರೆ,  ತಿಂಗಳು ಬೆಳಕಲ್ಲಿ ಹೋದವರು ಕತ್ತಲು ಹೋದ ಕಡೆಯ ಹೋಗುತ್ತಾರೆ.

ಅಸಮಿಸಿಗಿದರೆ ತೋಪು ಮಿಸಗಿದರೆ ಕತ್ತಲೆ
ಮಿಸಗಿದರೆ ಜ್ಯೋತಿ ಹೊಳೆದಾಗ-ಘನಪತಿರಾಯ
ಸಸ್ಯರನಾಳೊ ಎಳೆದೋಟ

ಎಲ್ಲ ವೃಕ್ಷಗಳೂ ಸುಮ್ಮನಿದ್ದವು. ದಾಳಿಂಬೆ ಸುಮ್ಮನಿರಲಿಲ್ಲ. ಅಕ್ಕ ಮರುಗ ಮಲ್ಲಿಗೆ ಸುರಗಿ ಸಾವಂತಿಗೆ ನೀವು ಕೇಳಿ ಈ ಶಿವನಾರಾಯಣನಿಗೆ ಏನು ಕಮ್ಮಿ? ಘನಪತಿರಾಜ ಬಲ್ಲಿದನಾಗಿ ಬದುಕುತಾನೆ ಅನ್ನೋದಾಗಿ ಕಳ್ಳತನಕೆ ಬಂದಿರೋದು ನಿಮ್ಮ ಮನಸ್ಸಿಗೆ ಒಪ್ಪೆ ಎಂದಿತು. ಹಾಗೆಂದು ಪಕ್ಕನೆ ಬಾಯಿಬಿಡ್ತು. ಅದಕ್ಕೆ ಅದು ಹಣ್ಣಾದಾಗ ಒಡಿದು ಹೋಗೋದು

ಅರಳಿಕೆ ಬರಳಿಕೆ ಬಂದವಲ್ಲ ನಾರಾಯಣ
ತಗತತ್ತಪ್ಪ ಚಂದಗಿನ ಎಳನೀರ

ದೇವತೆ ಆಡಿದ ಮಾತ ದೇವ ನಾರಾಯಣ ಕೇಳಿ
ಒಂದು ನೋಲಿನ ಮರಕೆ ಕೈಕೊಟ್ಟ – ಪರಮೇಶ್ವರ
ಮುಗುಳ ತೆಗೆದು ಈಸುರನ ಮುಂದೆ ಎಡೆಯಾದೊ

ಎಳನೀರು ನಿಂಬೆಹಣ್ಣು ಊಟವ ಮಾಡಿದರು
ನಡಿಯಯ್ಯ ಧೀರನ ಅರಮನೆಗೆ –ಎನುತೇಳಿ
ಅಲ್ಲಿಂದ ಸ್ವಾಮಿಯವರು ಸಿಡಿದೆದ್ದ

ಕನ್ನಗತ್ತರಿಯನ್ನು ಊರಿ ಮೇಲೆದ್ದರು. ಮದಗದ ಕೆರೆ ಹಿಂದೆ ಧರಕ್ಕಿ ಶಕುನ ಕೂಗಿತು. ಪರಮೇಶ್ವರ ಅಲ್ಲಿಯೇ ಕುಳಿತ. ಇದೇನು ಎಂದು ನಾರಾಯಣನನ್ನು ಕೇಳಿದ

ಸರವಿರುಳ ಕತ್ತಲೆ ಕೆರೆಯು ಮದಗದ ಹಿಂದೆ
ಧರಕ್ಕಿಗಾರ ದೊರಕದೆ-ನನ್ನೊಡೆಯ
ಬರುತದೆ ಮುಂದಕ್ಕೆ ದಯಮಾಡಿ

ಧರಕ್ಕಿ ಬಗ್ಗಿ ಮೇಯುವುದಿಲ್ಲ. ಯಾವ ಮೃಗವಾದರು ಬಂದು ಕಾಲಿಗೆ ಹೊಡೆದರೆ ಕೊಕ್ಕಿನಿಂದ ಕಚ್ಚುತ್ತದೆ. ತೋತ್ರಮಾಡಿ ಊಟ ಮಾಡುತ್ತದೆ. ಅದು ಊಟ ಮಾಡಿದೆ. ಒಳ್ಳೆಯ ಶಕುನ ನಡೆಯಿರಿ.

ಇದ್ದ ಜಾಗಬಿಟ್ಟು ಎದ್ದರು ಮುಂದಕ್ಕೆ
ಹೊದ್ದಿಗೆಲಿ ಬೀಳ್ಮೆಯ ತೆರೆಸಹಿತ-ಶಿವನಾರಾಯಣ
ಉದ್ದ ಸೇರ್ಯವರೆ ಕ್ವಾಟೆ ಬುಡಗಳ

ಆಗಲೀಗ ಶಿವನಾರಾಯಣ ಇಬ್ಬರೂವೆ ಗಗನಚುಕ್ಕಿ ಭರಚುಕ್ಕಿ ಎಂಬತಕ್ಕಂಥ ಅಡ್ಡಗಟ್ಟೆಗಳನ್ನು ದಾಟಿ ಕಂದಕದ ಮೇಲೆ ಬಂದುನಿಂತರು.

ಹಾರೆನೆಂದರೆ ಇದರ ಆಳ ಕಾಣಾಕಿಲ್ಲ
ದಾಟೆನೆಂದಾರೆ ಅಗಲವು – ನಾರಾಯಣ
ಗಗನದ ಮ್ಯಾಲೆ ರಥವ ನಡೆಸಯ್ಯ

ಗಗನದ ಮ್ಯಾಲೆ ರಥವನ್ನೆ ನಡೆಸಿದರೆ
ಜಗವೆಲ್ಲ ಕೈಯೆತ್ತಿ ಮುಗಿಯುವುದು – ನಾರಾಯಣ
ಮುಂದಾದರು ನಾವು ಕಳುವ ಬಗೆ ಹೇಗೆ

ಅಗಳು ದಾಟ್ತೀನಂತ ಅನುಮಾನ ನಿನಗ್ಯಾಕೆ
ಕಳವಳಿಸಬೇಡಿ ಎನಸ್ವಾಮಿ-ಪರಮೇಶ್ವರನೆ
ಅಗಲ ಮಾರುದ್ದ ಆನೆ ಚರ್ಮ-ನಾವೀಗ
ಹರಿಗೋಲಮಾಡಿ ಹಾಯಬೇಕು

ನಾಗಬೆತ್ತವ ಸೀಳಿ ಹರಿಗೋಲದ ಪುಟ್ಟಿ ಹೆಣೆದು
ಆನೆ ಚರ್ಮವನೆ ತೆಗೆದರು-ಅವರೀಗ

ನೀರಿಗೆ ಉನಿಯಹಾಕಿದರು-ಶಿವನಾರಾಯಣ
ಅದಕ್ಕೆ ಚರ್ಮವ ಉಡಿದರು

ಗಂಗೆಯ ಎದೆಮ್ಯಾಲೆ ಇಂಬುಳ್ಳ ಹರಿಗೋಲ ಬಿಟ್ಟು
ಮುಂದಕ್ಕಾಗಲೆ ನಡೆಸಿದರು-ಶಿವನಾರಾಯಣ
ಸೇರಿದರು ಕ್ವಾಟೆ ಬುಡಗಳನೆ

ಅಲ್ಲೊಂದು ಸೆಡೆಗಲ್ಲು ಇತ್ತು. ಅದಕ್ಕೆ ನಾರಾಯಣ ನಾಮದ ಹಜ್ಜೆ ಗುರುತು ಮಾಡಿದ್ದ. ಆ ಗುರ್ತಿಗೆ ಸರಿಯಾಗಿ ಹರಿಗೋಲು ಬತ್ತದೆ. ಪರಮೇಶ್ವರನ ಕೈಲಿ ಕನ್ನಗತ್ತಿ ಇತ್ತು. ಈ ಕನ್ನಗತ್ತರಿ ಹರ್ತ ನೋಡಬೇಕು ಅಂತ ಮನಸ್ಸು ತಲ್ಲಣಿಸ್ತಾ ಇತ್ತು ಪರಮೇಶ್ವರನಿಗೆ. ಕನ್ನಗತ್ತರಿ ತೆಗೆದು ಚನ್ನಮಲ್ಲಯ್ಯ ಕ್ವಾಟಿಗೆ ತಿವಿದರು.

ತಲ್ಲಣಿಸಿ ಜಾರಿ ಅಗಳೀಗೆ ಬೀಳಲು
ಪನ್ನಂಗ ಸರ್ಪ ಹೆಡೆಗೊಟ್ಟು – ಜಲದುರ್ಗಬತ್ತಿ
ಎನ್ನನಾಳುವ ಗುರುವೆ ಜಯಜಯ

ಇಸುಬ್ರಹ್ಮನ ಶಾಪ ಅದರಲ್ಲಿತ್ತು. ಕಲ್ಲು ಅಗಳಿಗೆ ಧಡೀರನೆ ಬಿದ್ದುಹೋಯಿತು. ನೀರು ಮಂಡಲ ಹೋಡೀತು. ಹರಿಗೋಲು ದಬ್ಬಾಕ್ಕತ್ತು. ಕೋಳಿ ಮರಿಗೆ ಪಂಜರ ಕವುಚಿದಂತಾಯಿತು ಶಿವನಾರಾಯಣರಿಗೆ.

ಪರಮೇಶ್ವರನ ಕೊರಳ ನಾರಾಯಣ ಹಿಡಕೊಂಡ
ನಾರಾಯಣನ ಕೊರಳ ಈಶ್ವರ-ಹಿಡಕಂಡು
ಕೆಟ್ಟೆವಲ್ಲ ನಾರಾಯಣ ಅನುತಾರೆ

ಕೆರೆಯಲ್ಲಿ ಬುಳು ಬುಳಕನ ಹಕ್ಕಿಹಾಗೆ ಮುಳು ಮುಳುಗಿ ಏಳ್ತಾ ಅವರೆ.

ಘಟಸರ್ಪ ಆ ಸುದ್ದಿಯ ಕೇಳಿತು ಆಗಲೆ
ಎನ್ನನಾಳುವ ಗುರುವೆ ಜಯಜಯ-ಎನ್ನುತ
ಬಂದು ಪಾದವ ಹೊತ್ತಗಂತು

ಈಶ್ವರನ ಪಾದ ಬಲಚೋರಿ ಹೊತ್ತುಗಂತು. ನಾರಾಯಣನ ಪಾದ ಎಡಚೋರಿ ಹೊತ್ತುಗಂತು. ತೆಗೆದುಕೊಂಡು ಹೋಗಿ ಆಚೆಗೆ ಬಿಟ್ಟಿತು. ಸ್ವಾಮಿಯರ ಪ್ರಾಣ ಕಾಯ್ದಿದಕೆ ಅದಕ್ಕೆ ಇಸುವ ಹಿಂಡಿದರು. ಕಾಳಿ ಕಂಕಾಳಿ ಯಮಧೂತಿ ಎಂಬ ನಾಲ್ಕು ಹಲ್ಲು ತಿಷ್ಣಂಕಾರ ಮಾಡಿದರು. ಭಸಿತವನ್ನು ಧರಿಸಿದರು. ಈ ಭಸಿತ ಸರ್ಪನ ಬಾಯಿಗೆ ಒಂದು ಸೊಲಿಗೆ ಇಸ,  ಮನುಷ್ಯನ ಬಾಯಿಗೆ ಪಡಿ ಇಸ ಹಿಂಡಿದರು.

ಕನ್ನಗತ್ತರಿ ರಾಮ ಕಳಿಸಿಲ್ಲ ಭಾವಯ್ಯ
ತಮ್ಮನ್ಹಿಡು ತಂದು ಹದಮಾಡು

ಕ್ವಾಟೆಯ ಬುಡದೊಳಗೆ ಕನಗತ್ತಿ ಪೂಜೆಯಮಾಡಿ
ತಮ್ಮನ ಹಿಡಿತಂದು ಹದಮಾಡಿ-ಆಕ್ಷಣದಲ್ಲಿ
ಆ ಕ್ವಾಟಿಗೆ ರಕ್ತ ಎರಚಿದರು-ಶಿವನಾರಾಯಣ
ಕ್ವಾಟೆಯ ರಾವ ಇಳಿಸಿದರು

ಕನ್ನದ ಬ್ರಹ್ಮಯ್ಯನವರೆ ಚ್ವಾರ ಚಿಕ್ಕಯ್ಯನವರೇ
ನಿಮ್ಮ ಶ್ರೀಪಾದವೇ ಈಗ ಗತಿಯೆಂದು –ಶಿವನಾರಾಯಣ
ತೆಗೆದಿಂಟೆ ಈಜಿಗೆ ಮಡಗಿದರು

ಮುಂದಲ ಕ್ವಾಟೆಯ ನಮ್ಮ ಮಲ್ಲಯ್ಯ ಕೊರೆದರು
ಇನ್ನೊಂದು ಕ್ವಾಟೆಗೆ ಸರಗುರುಜ-ಕ್ವಾಟೆಯ
ನಮ್ಮ ನಾರಾಯಣ ಕನ್ನ ಕೊರೆದನು

ಕಂಚಿನ ಕ್ವಾಟೆಯ ಅಂಚ್ಹಿಡಿದು ಕೊರೆದರು
ಅಯ್ನ ಪಂಚೈದು ಲೋಕ ಬೆವತಾವು
ಗಾಜಿನ ಕ್ವಾಟೆಯ ತಾಳ್ಹಿಡಿದು ಕೊರೆದರು
ಅಯ್ನ ಹಣೆಯ ಮ್ಯಾಗಳ ನಾಮ ಬೆವತಾವು

ಏಳುಸುತ್ತಿನ ಕ್ವಾಟೆ ಕನ್ನವ ಕೊರೆದರು
ಮುಂದಲ ಕ್ವಾಟೆಮ್ಯಾಲೆ ಬರುತಾರೆ-ಶಿವನಾರಾಯಣ
ಎರಡು ಹೊಂದಿದ್ದ ಮುಂಡ ಶಿವಕಂಡ

ಅವು ರೆಕ್ಕೆಕಳ್ಳರ ಮುಂಡಗಳು. ಶಿವನಾರಾಯಣರ ಪಾದ ಒಂದೇ ಸಾರಿ ಕಾಣುವಂತೆ ಹಣೆಬರಹ ಇತ್ತು ಅವರಿಗೆ. ಸೌದೆ ಚಕ್ಕೆಹಾಗೆ ಶರೀರ ಹತ್ತೊಂಡಿತ್ತು ಅವರಿಗೆ. ಕೋಳಿ ಕತ್ತು ಕೂದು ಎಸೆವ್ಹಾಗೆ ಶೂಲದ ಮಣೆ ಮೇಲೆ ಜೀವ ಬಿಡವ ಒದರಾಡುತ್ತಿದ್ದರು. ಇವರ ದರ್ಶನ ಆದಮೇಲೆ ಜೀವಬಿಟ್ಟರು. ಇದನ್ನು ನೋಡಿ ಪರಮೇಶ್ವರ ಹೆದರಿದ

ಇದೇನೊ ನಾರಾಯಣ ಇದೇನೊ ವರ ಮುನಿಯೆ
ಇವರೇನು ಕಳವ ಕದ್ದರಯ್ಯ – ಇವರೀಗ
ಶೂಲಕನುವಾಗಿ ಅವರಲ್ಲ

ಅವರೇನ ಕೇಳಿಯ ನನ್ನ ಅಳವಾಂಡದಯ್ಯನೆ
ಅವರು ನಮ್ಮಂಗದ ಬಗೆಯವರು-ನಾಳೆ ಇಟ್ಟೊತ್ತಿಗೆ
ಇವರ ದಂಡೇಲಿ ಶೂಲಕೆ ಹಾಕ್ತರೆ

ನಾರಾಯಣನಾಡಿದ ಮಾತ ಕೇಳಿದ ಜಗದೀಶ
ನನ್ನ ಮುಕ್ಕಣ್ಣಯ್ಯ ಏನು ನುಡಿದನು

ಭಸ್ಮಾಸುರನ ಸುಟ್ಟ ಹೊಸಬೂದಿ ಇಟ್ಟುಗಂಡ
ಇದು ಏನೋ ನಾರಾಯಣ ನಿನಮಾತು

ಭಾಮೈಕ್ಕಳಿಬ್ಬರೂವೆ ಬಾಗಿ ಪಂತನಾಡುತ
ಅಲ್ಲಿಂದ ಮುಂದಕೆ ಬರುತಾರೆ

ಜಂಬುಕನ ಹರಿಕಾಳೆ ಮುಂದೆ ದೊಂಬರ ದೋಲು
ಕೊಂಬಿನಕಾಳೆ ಗಡಿವಿಲ್ಲ-ಘನಪತಿರಾಜ
ಸಂಭ್ರಮನಾಳೊ ಪಟ್ಟಣದ ಒಳಗೆ

ಆ ಪಟ್ಟಣದ ಒಳಗೆ ಏಳುದಿನ ಸರಿರಾತ್ರಿಗೆ ಶಾಸ್ತ್ರ ಹೇಳಿದ್ದರಲ್ಲ ಏಳನೇ ದಿನ ಘನಪತಿರಾಜ ಉಸ್ತುವಾರಿ ಕೊಟ್ಟಿದ್ದ.

ಹಕ್ಕಿಯಂದದಲಿ ಹೊಕ್ಕರು ಕೋಟೆಯ
ಮುಕ್ಕಣ್ಣಧರನು ಕೈಯೂದು-ಕೆಕೆಹಾಕಿ
ಒಕ್ಕರು ಕಾಲುಗಳಿಗೇಳಿ

ಬೆನ್ನ ಕಣ್ಣಲಿ ಅವರ ಬಿರುದಿನ ಭಂಟರ
ಎದ್ದರೆ ಯಮಧರ್ಮನ ಕೊಲ್ಲೋರು-ಗೊಲ್ಲರು
ಎದ್ದೆದ್ದು ಪಾರ ತಿರುಗ್ಯಾರು

ಅವನ ದಂಡಿನ ಸಂಭ್ರಮ ನೋಡಿದರು ಶಿವನಾರಾಯಣ
ಆ ಪಟ್ಟಣಕೆ ಬೇಳ್ಮೆ ತೊಡೆದರು

ಹೊತ್ತು ಹುಟ್ಟಿದ ಹತ್ತುಗಳಿಗೇ ಹೊತ್ತೀಗೆ
ಅರಸೀಗೆ ನಿದ್ರಿ ತಿಳಿಯಲ್ಲಿ-ಎನುತೇಳಿ
ಪರಶಿವ ಬೇಳ್ಮೆ ಹರಸಿಟ್ಟ

ಬೇಳ್ಮೆಯ ಬೂದಿಯು ಪಟ್ಟಣಕೆ ಕೌದೀತು
ಕಾರುಗತ್ತಲೆ ಕರ್ದಾಗೆ –ದಂಡಿನ ಜನ
ದಾಳಿ ಹುಯ್ದಂತೆ ಪಾರಿ ಮಲಗಿತು

ತಟ್ಟಿ ಮಡಚಿದ್ದಾಗೆ ತಟ್ಟಿ ಕಮಚಿದ್ದಾಗೆ
ಅಡಗೀತು ಅವನ ಪಡಗವು

ಊರೆಲ್ಲ ಉಂಡು ಮಲಗಿರುವ ಶಬ್ದನೋಡಿ
ಸ್ವಾಮಿಗಳು ಕೆಳ್ಯಕೆ ಇಳಿಬಾರೊ

ಕತ್ತಲಲ್ಲಿ ನಾವು ಯಾಕೆ ಕಳವ ಮಾಡಬೇಕು
ಕಟ್ಟಯ್ಯ ಎರಡು ಹೊಸ ಪಂಜ

ಬೇಳ್ಮೆಯ ಪಂಜ ಎರಡು ದಾಳವ ಮಾಡಿಕೊಂಡು
ಆ ಧೀರನರಮನೆಗೆ ಬರುತಾರೆ

ಅಲ್ಲಿ ಬಿದ್ದಿದೆ ಮುತ್ತು ಇಲ್ಲಿ ಬಿದ್ದಿದೆ ರತ್ನ
ಪಲ್ಲಕ್ಕಿಮ್ಯಾಲೆ ಮೆರೆವಾದು-ಮಿರುಗಾದ
ಜೆಲ್ಲಿ ಸಿಕ್ಕದ ಗುರುತಿದು

ಪಾರಿಜನ ಹಿಡಿತಿದ್ದ ಕತ್ತಿ ಕಠಾರಿ ಈಟಿ
ದೊಣ್ಣೆ ಬಂದೂಕು ಮುರು ಮುರುದು – ಶಿವನಾರಾಯಣ
ಅವಳೀಗೆ ಆಗ ಎಸೆದಾರು

ಪಟ್ಟಣವನೆಲ್ಲವ ಪಾರಿಭಂಗಿ ಮಾಡ್ಕೊಂಡು
ಸ್ವಾಮಿಯವರು ಬಂದರು ಮುಂದಕೆ

ತಾಳದವನ ತಿಗಟೀಗೆ ವತಾರಿಯದನ ಗಂಟ್ಹಾಕಿ
ದಾಳಿಸಿ ನುಡಿವ ಪರಿಮನವ –ನಡುವಿಗೆ
ಸೂಳುದಮಟೆಯವನ ನಡುವಿಗೆ ಕಟ್ಟಿದರು

ಪಾರಿಭಂಗ ಮಾಡಿಕೊಂಡು ಶಿವನಾರಾಯಣರು
ಎಳೆ ಗಾಜಿನ ಕ್ವಾಟೆಗೆ ಬರುತಾರೆ

ಹೊಳೆವ ಪಂಜಿನ ಬೆಳಕ ಎಳೆಯ ಗಾಜಿನ ಕ್ವಾಟೆ
ಹೊಳೆಯೆಂದು ಶಿವನು ಹೊಗಲಾರ – ನಾರಾಯಣ
ಹೊಳೆಯಲ್ಲ ಸ್ವಾಮಿ ಎನುತಾನೆ

ಹೊಳೆಯಲ್ಲ ಸ್ವಾಮಿ ಎಳೆಯ ಗಾಜಿನ ಕವಾಟೆ
ಕಡವೆ ಕಾಡಾನೆ ನಿದ್ರೆಯ-ಮಾಡುವ ಹೊತ್ತು
ಕಳುವುದಕೆ ಅಮೃತ ಗಳಿಗೇಯ

ಕಳುವುದಕೆ ಅಮೃತ ಗಳಿಗೇಯ ಮಾ ಶಿವನೆ
ಮುಂದಕೆ ನೀವು ದಯಮಾಡಿ

ಗಾಜಿನ ಕ್ವಾಟೆಯ ನೀ ಕನ್ನ ಕೊರೆಬೇಕಾದ್ರೆ
ನೀ ಸುಣ್ಣ ಕಾಸಿದ ಮಡಿಯ ತರಬೇಕು

ಇಂತಿಂಥ ಮಡಿ ತರಬೇಕೆಂದು ಅದನ್ನು ತಂದರು

ಹಿಡಿಯಯ್ಯ ತೆರೆಗೋಳ ಕೊರೆಯಯ್ಯ ಕನ್ನವ
ತಗಿ ನಿನ್ನ ಭುಜದ ಅಳತೆಯ-ಪರಿಮಾಣವ
ಹೋಗು ನಿಮ್ಮ ಶಿವನ ನೆನಕೊಂಡು

ಎಳೆಯ ಗಾಜಿನ ಕ್ವಾಟೆ ಕನ್ನವ ಕೊರೆದ ಮ್ಯಾಲೆ
ಈ ಕನ್ನದ ಬಾಯಿಗೆ ಕಾಲ ಇಕ್ಕಬೇಕು

‘ನಾರಾಯಣ ಕಾಲಿಕ್ಕಿ ನೋಡಬೇಕಲ್ಲ! ಯಾರಿಕ್ಕಬೇಕು !” ಅಂದರು.

ಬೆತ್ತದ ತುದಿಯಲ್ಲಿ ಕಟ್ಟಿದರು ಬೇಳ್ಮೆಯ
ಸಂಚಿನ ಬೀಗದ ಮೇಲೆ ಮಡಗಿದರು- ಆ ಬೀಗ
ಕೀಲೆಲ್ಲ ಸಡಿಲಿ ಕಳದೋಯ್ತು

ಬೀಗವ ತೆಗೆದರು ಬಾಗಿಲೊಳ ದಾಟಿದರು
ಬಾಗಿ ನೋಡಿದರು ಅರಮನೆಯ

ಸಾಗಣಾನಿಸಿನ ಮಂಚ ಮ್ಯಾಗೆ ಹೂವಿನ ಹಾಸಿಗೆ
ರಾಗದ ಮಂಚ ದನಿಗೈದೊ

ಹತ್ತುಗಟ್ಟಿನ ಮಂಚ ಮ್ಯಾಗೆ ಹೂವಿನಾಸಿಗೆ
ಚಿತ್ತಾರಗೆಲಸ ಕೆಲದಲ್ಲಿ –ರಾಮಾಯಿ
ಆಳುವ ಮಂಚ ದನಿಗೈದೊ

ಕುಸುರಿ ಕೆಲಸದ ಮಂಚ ದನಿ ತಟ್ಟೆಹಾಸಿದೆ
ಹೊಸ ಹೊನ್ನ ತಟ್ಟೆಯೊಳಗೆ ಬಿಳಿಯಲೆ-ಮಡಗೈದೆ
ಈ ಧರೆಯನಾಳೋಳ ಮಡದೀಗೆ

ಆ ಚಂದ್ರಗಾವಿ ತೆರೆಯ ಪಾದ್ದಲ್ಲಿ ಹರಿಯ ಒದ್ದು,  ರಂಭೆ ಮಂಚದ ಮ್ಯಾಲೆ ಹೋಗಿ ಕುಳಿತರು ಈಶ್ವರ. ನಾರಾಯಣಸ್ವಾಮಿ ಗಾಜಿನ ಕಂಬ ಒರಗಿನಿಂತ. ಆ ಹೆಣ್ಣಿನ ಮುಖ ನೋಡಬೇಕೆಂದು ಸ್ವಾಮಿಯವರಿಗೆ ಗ್ಯಾನ ಅಂಟಿತು.

ಬೆತ್ತದ ತುದಿಯಲ್ಲಿ ಎತ್ತಿದರು ಮುಸುಗನ್ನೆ
ನಲ್ಲೆಯ ಮುಸುಗ ತೆಗೆದರು-ಪರಮೇಶ್ವರನ ಕಣ್ಗೆ
ಮಾಣಿಕ್ಯ ಕಂಡಂತೆ ಭ್ರಮೆಯಾಯ್ತು

ಅಂಗೈಲಿ ತಾವರೆ ಪದ್ಮ ಅಂಗಾಲಲ್ಲಿ ತಾವರೆ ಪದ್ಮ
ಉಂಗರ ಹಿಡಿಯೊ ನಡುವಿನ-ಭಾಮನೋಡಿ
ನಮ್ಮ ಗಂಗಾಧರಯ್ಯ ಮನಸೋತ

ತಿಂಗಳ ಮಾವನ ಎರೆಯಂಗೆ ಬಂದಾದೆ ಉಬ್ಬಿನ ದಂಡೆ
ಹರಳು ಹಾಕುಸ್ತ ನಯನವು-ಕಿನ್ನಡಿಯ
ಭಾರಿ ಸಂಗತಿ ಇವಳ ಎದೆಭುಜ

ರಾಮಾಯಿಯ ಘನಪತಿಯು ಒಂದುಗೂಡಿ ಮನಗವರೆ
ದಾರ ಹಾಕುವರೆ ಎಡೆಯಿಲ್ಲ

ಮಧ್ಯೆ ನೂಲು ಬಿಟ್ಟರೆ ಇಳಿಯದಂಗೆ ಒತ್ತೊತ್ತಾಗಿ ಮಲಗವರೆ

ಪತಿಗಿಲ್ಲ ಸತಿಕಾಣೊ ಮುಖವೆಲ್ಲ ಪದುಮವು
ಯತಿಭಾವ ಇವಳ ಮುಖದಲ್ಲಿ-ಕಂಗಳ ಕಿಡಿಯೊ
ನಮ್ಮಂಥ ಯತಿಮುನಿಗಳ ತಪವ ಕೆಡಿಸ್ಯವಳೆ-ರಾಮಾಯಿ
ಸತಿಯ ಕೊಂಡೊಯ್ಯೊ ತೆರನ್ಯಾಗೆ

ಹತ್ತು ಕೋಟಿ ನಿದ್ರೆ ನಿನಗಾಗಲಿ ನಾರಾಯಣ
ಅದಕಿಂತ ಹೆಚ್ಚಿನ ಕಳವು ದೊರಕದೆ

ಅಟ್ಟ ಹತ್ತಿದರು ಸರಿಯೆ ನಾನು ತಿಟ್ಟಹತ್ತಿದರು ಸರಿಯೆ
ನಾನು ಮಂಚಸೈತ ಕೈಲಾಸಕೆ ಹೊರುತೀನಿ

ಹೊತ್ತುಕೊಂಡು ಹೋಯ್ತಿನಿ ಅನ್ನಮಾತ ಕೇಳಿ ಗಿಣಿರಾಮ
ಮಾಯಕಾರ ಗಿಣಿ ಏನ ನುಡಿದೀತು

ಕುಂಜರ ಇದ್ದೆಡೆಗೆ ಬಂದಿರೋ ನೀವನ್ಯಾರು
ರಂಜಿಪ ಸಿಂಹ ಹೊಳೆವಾಗೆ-ಪೆಂಜಿನ ಹೊದೆಯಲ್ಲಿ
ಧಾಳಿಸಿ ನೋಡೋನು ಇವನ್ಯಾರು

ಅಕ್ಕಯ್ಯ ನಿನಮನೆಗೆ ಹೊಕ್ಕವರೆ ಕಳ್ಳರು
ಸೊಕ್ಕಿನ ಬೇಳ್ಮೆಯ ತಳೆದವರೆ-ಅಕ್ಕಯ್ಯ
ನಿನ್ನ ತೊಟ್ಟ ಬಂಗಾರ ಸೂರೆ ಹೋಯ್ತದೆ

ಭಾವಯ್ಯ ನಿನ ಮನೆಗೆ ಬಂದವರೆ ಕಳ್ಳರು
ನಿನ್ನ ಬಾಲೆ ಬಂಗಾರ ಸೂರೆಹೋಯ್ತದೆ-ಭಾವಯ್ಯ
ಅಂಗನಾಡೀತು ಅರಗಿಣಿ

ಸುಮ್ಮನಿರಲ ಪಕ್ಷಿ ಉಣ್ಣಯ್ಯ ಮೊಲೆಹಾಲ
ಒಮ್ಮಾನ ಪಕ್ಷಿ ನೆಲಗಡಲೆ ಕೊಡುತೀನಿ-ಅರಿಗಿಣಿಯೆ
ನಿಮ್ಮಯ್ನ ನಿದ್ರೆ ತಿಳಿಸಬ್ಯಾಡ

ಹಾಲು ಅನ್ನವ ಎಡೆಮಾಡುವೆ ಗಿಣಿರಾಮ
ಹೂವಿನ ಪಂಜರದಲ್ಲಿ ಮಡಗೂವೆ-ಗಿಣಿರಾಮ
ನಿಮ್ಮ ಭಾವಯ್ಯನವರ ನಿದ್ರೆ ತಿಳಿಸಬ್ಯಾಡ

ಕೂಟು ಕೊಂಬಿನ ಪಕ್ಷಿ ತಾಟು ಕೊಂಬಿಗೆ ಧುಮುಕಿತು
ತಾಟಗಿತ್ತಿ ನಿದ್ರೆ ತಿಳಿಯನಿಲ್ಲವೆ-ಎಂದು
ಅಂಗನಾಡೀತು ಅರಗಿಣಿ

“ಮರದ ಮ್ಯಾಗಲ ಪಕ್ಷಿ ತಂದು ಎರಡು ಮಾತು ನಾವು ಕಲಿಸಿ ಕೊಡೋವತ್ಗೆ ನಾರಾಯಣ,  ನಮ್ಮ ತಲೆಗೇ ಚಂಚಕಾರ ತಂತು. ಇದರ ಗೂಡು ಕಿತ್ತು ತುಳಿದು ಹಾಕಿಬಿಡು. ಇದರ ಕತ್ತು ಮುರಿದು ಬೆಕ್ಕಿನ ಮುಂದೆ ಹಾಕಿಬಿಡು” ಎಂದ ಸ್ವಾಮಿ.

ಶಿವನಾರಾಯಣ ಅನ್ನೊ ಸುದ್ದಿ ಕೇಳಿತು ಗಿಣಿರಾಮ
ರಾಮಕ್ಕ ಸಾಕಿದ ಗಿಣಿ ಹೆದರೀತು

ದೇವರು ಅನ್ನೋದ ನಾನು ತಿಳಿದಿಲ್ಲ ಗುರುಪಾದದಲಿ
ನಿಮ್ಮಂಗದ ಕಳವಿಗೆ ನಾನೊಳಗು

ಮುತ್ತು ರತ್ನ ಬೇಕಾದರೆ ಮತ್ತೊಂದು ಹೊತ್ಗಂಡೋಗಿ
ನಮ್ಮ ಅಕ್ಕ ಭಾವನ ಭಂಗ ಪಡಿಸಬೇಡಿ-ಅನುತೇಳಿ
ಬಾಗಿ ಪಾದಕೆ ಶರಣೆಂತು

ಎನ್ನುದಾಗಿ ಉಪ್ಪಿನ ಋಣಕ್ಕೆ ನುಡಿಯಿತು.

ಈ ಹೆಣ್ಣ ಕದಿಯಾಕೆ ಬರಲಿಲ್ಲ ಭಾವಯ್ಯ
ನಾವು ಹೊನ್ನ ಕದಿಯಾಕೆ ಬಂದೇವು-ಅನುತೇಳಿ
ಬೆತ್ತದ ತುದಿಯಲ್ಲಿ ಬೇಳ್ಮೆಯ –ಕಟ್ಟಿದರು
ಒಡವೆಯ ಕೀಲಿ ಕೀಲಿಗೆ ಮಡಗ್ಯಾರು

ಏಕಮುಖದ ರುದ್ರಾಕ್ಷಿ ಲೋಕಕ್ಕೆ ಅಳವಲ್ಲ
ಆಕೆ ರಾಮಾಯಿ ಧರಿಸ್ಯವಳೆ ಕೊರಳಿನ-ಕಂಟಮಾಲೆಯ ಸರವ
ಬೇಕಂತ ಕದ್ದ ಗಿರಿಜೇಗೆ

ರಾಮಾಯಿ ಧರಿಸಿರುವ ಹೊನ್ನೆಮಿರುಗದ ಚವರೀಯ
ಸಿರಿಗಂಗೆ ಬೇಕಂತ ಶಿವಕಳೆದ

ರಂಬೆ ರಾಮಾಯಿ ಧರಿಸಿರುವ ಕುಂದಣದ ಒಡ್ಡು ವಾಣವ
ಬೇಕಂತ ಕದ್ದ ಗಿರಿಜೆಗೆ

ಮಡದೀಯ ಒಡವೇಯ ತಡವಿಲ್ದೆ ಕಳೆದರು
ಧರೆಯನಾಳುವನ ಅಧಿಕದ ಕಾಲ್ಪೆಂಡೆಯ
ಈ ಬಿರುದು ಕಳೆವಂಥ ಬಗೆ ಹೇಗೆ

ಬೆತ್ತದ ತುದಿಯಲ್ಲಿ ಕಟ್ಟಿದರು ಬೇಳ್ಮೆಯ
ಆ ಹೆಚ್ಚಿನ ಬಿರುದಿನ ಮೇಲೆ ಮಡಗಿದರು

ದೊರೆಯ ಪಾದದ ಒಳಗೆ ಕಳೆದೀತು ಆ ಬಿರದು
ಸ್ವಾಮಿ ಪಾದದ ಒಳಗೆ ತೊಡರೀತು

ಬಿರುದು ಧರಿಸಿರುವ ದೊರೆ ಬರಿದೆ ಮನಗುವನೆಂದು
ನುಲಿದು ಸುತ್ತಿದರು ನೆಲ್ಲುಲ್ಲ – ಸರ ಹೊತ್ತಗೆಯ
ಹುಲ್ಲಿನ ಬೇಡಿಯ ಸುತ್ತಿದರು

ಸಬ್ಬರು ಬಂದಿದ್ದರಂತ ಬೊಬ್ಬೆ ಮಾತಾಡಬ್ಯಾಡ
ನಾವಿಬ್ಬರೆ ಕದ್ದವರು ಅರಮನೆಯ-ಅನುತೇಳಿ
ಬರೆದು ಮುಂಗೈಗೆ ವಾಲೆ ಕಟ್ಟಿದರು

ಎಲ್ಲ ಕಳವನು ಕದ್ದನಲ್ಲ ನಾರಾಯಣ
ಇನ್ನೊಂದು ಕಳವ ಮಾಡುತೀನಿ

ರಂಬೆ ರಾಮಾಯಿಯ ಸಾಧುನೊಸಲಿನ ಮೇಲೆ
ಹರಸಿ ಇಟ್ಟರು ಮಸಿಯ ತಿಲಕವ

ದೃಷ್ಟಿ ಪರಿಹಾರವಾಗಲೆಂದು ನಡುಹಣೆಯ ಮೇಲೆ ಒಂದು,  ಎಡಚೋರಿ ಕೆನ್ನೆಯ ಮೇಲೆ ಒಂದು,  ಗಡ್ಡದ ಮೇಲೆ ಒಂದು ತಿಲಕವನ್ನು ಇಟ್ಟರು ಶಿವನಾರಾಯಣ.

ಎಲ್ಲ ಕಳ್ಳತನವಾದಮೇಲೆ ಇನ್ನೊಂದು ಇರುವುದು
ರಂಬೆ ರಮಾಯಿ ಎದೆಯಗಲ್ಲದ ಮೇಲೆ-ಶಿವನಾರಾಯಣ
ಚಿಳ್ಳುಗುರು ಗಾಯವ ಒತ್ತಿದರು

ಮಡದಿಯ ಮೈಮುಟ್ಟಿ ಒಡವೆ ಕದ್ದವನನ್ನು ಹಿಡಗಂಡ ಮಾಡಿ ಕುಯ್ಸಿತೀನಿ ಅಂತ ರಾಜ ಹೇಳಿದ್ದ. ಮೈಮುಟ್ಟಿ ಹೋಗಿದ್ದಕ್ಕೆ ಗುರುತು ಬೇಕು. ಇವನ ಅಹಂಕಾರ ತಗ್ಗಿಸಲು ಉಗುರು ಗಾಯ ಕಾಣಲಿ ಎಂದು ಹಾಗೆ ಮಾಡಿದರು. ಎದೆಯ ಮೇಲೆ ರಕ್ತ ಬಂದಿತು.

ಆ ಧೀರನ ಅರಮನೆಯ ಕಳವ ಮಾಡಿದರು
ಆ ಧೀರನ ಮಂಚಬಿಟ್ಟು ಇಳಿದರು-ಶಿವನಾರಾಯಣ
ಬಾಗಿಲಿಂದೀಚೆಗೆ ಬರುತಾರೆ

ಬಾಗಿಲಿಂದೀಚೆಗೆ ಬಂದಂಥ ಯಾಳ್ಯದ ಒಳಗೆ
ಭಾಗ್ಯಲಕ್ಷ್ಮೀ ಬಂದು ತಡೆದಳು

ಹೆತ್ತಯ್ಯ ಮುತ್ತಯ್ಯ ಸತ್ತವರು ಗಡಿಯಿಲ್ಲ
ಈ ಪಟ್ಟಣದ ದೊರೆಗಳರಮನೆಲ್ಲಿ ಸೆರೆಯಿದ್ದೆ-ನನ್ನೊಡೆಯ
ನಮ್ಮ ಬಂಧನ ನೀ ಬಿಡಿಸಯ್ಯ

ಇಂದು ಇದ್ದವರಮನೆಲ್ಲಿ ನಾಳೆ ಇರಬೇಡಿರಮ್ಮ
ನಾಡಾದ ನಾಡೆಲ್ಲ ತಿರುಗಮ್ಮ – ಎನುತ್ಹೇಳಿ
ಘನಲಿಂಗಯ್ಯ ಶಾಪ ಕೊಡುತಾರೆ

ಚಂದ ಚಂದದಲಿ ಇಂಬಿಲ್ಲದೆ ತಿರುಗಿರಿ ಎನುತ
ಘನಲಿಂಗಯ್ಯ ಶಾಪ ಕೊಡುತಾರೆ

ಆ ಲಕ್ಷ್ಮೀದೇವೀರ ಕೈಲಿ ಕಾಣಿಕೆ ತಕ್ಕಂಡು
ಆ ಧೀರ್ಯದರಮನೆಗೆ ಬರುತಾರೆ

ಹನ್ನೆರಡು ಸಾವಿರ ಗಾರೆ ತೊಟ್ಟಿಯ ತುಂಬ
ಒಂಬತ್ತು ಬಗೆ ರತ್ನ ಸರಿಬೆರಸಿ-ತುಂಬೈದೆ
ಇದ ಸಾಗಿಸಿಕೊಂಡು ಹೋಗುವಂತ ತೆರವ್ಯಾಗೆ

ಮದ್ದಾನೆ ಹಿಂಡ ಹೊಡೆತಂದನು ನಾರಾಯಣ
ಒಂಟೆಯ ಹಿಂಡ ಒಡೆತಂದ
ಒಂಟೆಯ ಹಿಂಡ ಒಡೆತಂದು ಬೇಗದಿಂದ
ಅದಕೆಲ್ಲ ಚವರ ಬಿಗಿದರು

ನಾರಾಯಣ ಆನೆ ಒಂಟೆ ಹೊಡೆತರಲು ಹೋದಾಗ ಈಶ್ವರ ಒಂದು ಜೋಳಿಗೆ ಹೊನ್ನ ಅವಿಸಿಕೊಂಡ.

ಭಾವಮೈಕಳಿಬ್ಬರುವೆ ಬಾಗಿ ಪಂತನಾಡುತ
ಹನ್ನೆರಡು ಸಾವಿರ ಮದ್ದಾನೆಗೆ-ಅವರೀಗ
ಹೋರನಾದರೆ ಎತ್ತುತಾರೆ

ಆನೆಗೆ ಒಂಟೆಗೆ ಹೋರನೆ ಎತ್ತಿದರು
ತಾವು ಒಂದಾನೆ ಒರಗಿ ತಲೆಕೊಟ್ರು

ಲೋಕಕೆ ದೊಡ್ಡೋರು ಕಳುವಿಗೆ ಬಂದಮ್ಯಾಲೆ
ಇಲ್ಲಿ ಬಡವರು ಎಲ್ಲ ಬದುಕಲಿ ಬೇಕು

ಆನೆ ಮೂಟೆಯ ಕೊರೆದರು ಶಿವನಾರಾಯಣ
ಬೀದಿ ಬೀದೀಲಿ ಬಿಮ್ಮಳ ಹೊಡದಾರು

ಬಡವರ ಬೀದೀಲಿ ಒಂದು ಒಳ್ಹೊನ್ನ ಸುರಿದರು
ಮುಂಡೇರ ಬೀದಿಗಾನೆ ಹೊಡೆದಾರು

ಬೀದಿ ಬೀದಿ ಒಳಗೆ ಹೊನ್ನನೆ ಸುರಕಂಡು
ಆಳವೇರಿ ಮ್ಯಾಲೆ ಬರುತಾರೆ

ಪರಮೇಶ್ವರ ಜೋಳಗೆಯಲ್ಲಿದ್ದ ಹೊನ್ನ ತೂಕವನ್ನು ತಡೆಯನಾರದೆ ಬಾಗಿ ನಡೆಯುತ್ತಿದ್ದಾನೆ. ಅವನನ್ನು ನೋಡಿ ನಾರಾಯಣ ಕೇಳುತ್ತಾನೆ-

ಅಲ್ಲಿಂದ ಭಾವ ಚಂದಾಗಿ ಬಂದ್ಯಲ್ಲೊ
ಇಲ್ಲೇಕೊ ಸ್ವಾಮಿ ಬೆರ್ತಕಂಡೆ

ಹನ್ನೆರಡು ಸಾವಿರ ಆನೆಗೆ ಹೇರನೆ ಎತ್ತುವಾಗ
ನನ್ನ ಎಡಚೋರಿ ಸೊಂಟ ಮಳಗೀತು

ನಿನ್ನ ಮಾಯದ ಆಟವ ನಾ ಬಲ್ಲೆ ಅಂತೇಳಿ
ಭಾಮೈಕಳಿಬ್ಬರೂವೆ ಬರುತಾರೆ

ಕಟ್ಟಿದ ಕಣ್ಣಿ ಹಗ್ಗ ಮೆಟ್ಟಿದ ಸೇದೊ ಭಾವಿ
ದಕ್ಕನಿಲ್ಲ ನಾರಾಯಣ ಕಿತ್ತು ಹೊರುವುದಕೆ

ಹನ್ನೆರಡು ಸಾವಿರ ಆನೆ ಹೇರನೆ ಅಟ್ಟಿಕೊಂಡು
ಆ ನಂದಿ ಬಸವನ ಗುಡಿಗೆ ಬರುತಾರೆ

ಆನೆ ಹೇರ ಕೆಡವಿದರು ಒಂಟೆ ಹೇರ ಕೆಡವಿದರು
ಆನಿಗೆ ಶಾಪ ಕೊಡುತಾರೆ

ದ್ರವ್ಯವನ್ನೆಲ್ಲ ತಂದು ಮನ ದೇವರ ಬಳಿ ಸುರಿದು ಆನೆಗೆ ಏನು ಶಾಪ ಕೊಡುತಾರೆ

ಹೆತ್ತ ಮುತ್ತಯ್ಯ ಸತ್ತವರ ಗಡಿಯಿಲ್ಲ
ಈ ಪಟ್ಟಣದ ದೊರೆಗಳರಮನೆಲ್ಲಿ ಸೆರೆಯಿದ್ರಿ-ಮದ್ದಾನೆಗಳ
ಕಾಡಾನೆ ಆಗಿ ಹೋಗಿರಿ

ಮಡದೀರಿಗೆ ಒಡವೆ ಬೇಕು ಅಂತ ಬಸವನ ಬಳಿಗೆ ತಂದರು.

ಏಕಮುಖದ ರುದ್ರಾಕ್ಷಿ ಲೋಕಕ್ಕೆ ಅಳವಲ್ಲ
ಆಕೆ ರಾಮಾಯಿ ಧರಿಸಿದ್ದ- ಕೊಳ್ಳಿನ ಕಂಟಿಮಾಲೆ ಸರವ
ಆ ನಂದಿ ಬಸವನಿಗೆ ಧರಿಸ್ಯಾರು

ರಂಭೇರ ಮಾಯದಲಿ ರಾಮಾಯಿ ಧರಿಸಿದ್ದ
ಕುಂದಣದ ಒಡ್ಯಾಣವ ಅವರೀಗ-ನಂದಿಬಸವನ
ಕೊರಳಿಗಾದರೆ ಧರಿಸಿದರು

ಹರದಿ ರಾಮಾಯಿ ಧರಿಸಿದ್ದ ಹೊನ್ನ ಮಿರುಗವ ಚದರೀಯ
ನಂದಿ ಬಸವನಿಗೆ ಧರಿಸ್ಯಾರು

ಧೀರ ಘನಪತಿಯ ಮುತ್ತಿನ ಕಾಲ್ಪೆಂಡಿಯ
ಆ ನಂದಿ ಬಸವನಿಗೆ ಧರಿಸಿದರು

ಇಟ್ಟು ಗಾತ್ರ ಮುದ್ದೆಕರ್ಪೂರ ತಂದು ಹೆಚ್ಚಿದರು. “ನಿನ್ನ ದೊರೆಯ ‘ದಿರಿಯ’ ಬಂದು ನಿನ್ನ ಮುಂದೆ ಇರ್ತದೆ. ಆಳಿಕೊ ಬಸವಯ್ಯ. ಯಾವುದಾನ ಒಂದು ಹೊನ್ನು ಹಾಳಾಗಬಾರದು. ನಿನ್ನ ದೊರೆ ದಂಡು ಬಂದಾಗ ಜಡ್ತಿ ತೋರು” ಎಂದು ಹೇಳಿಬಿಟ್ಟು ಒಂದು ಸೇರು ಹೊನ್ನು ಮಾತ್ರ ತಗಂಡು,  ದೊರೆಯವರ ಚಿನ್ನದ ಚಂದ್ರಾಯುಧ ತಕ್ಕಂಡು-

ಬಿದ್ದರು ಕಾರೆಂಬಡವಿಗೆ ಶಿವನಾರಾಯಣ
ಎದ್ದು ಹಿಡಿದರು ಹೆಬ್ಬಿದಿರ ಅಗಸೆಯ

ಹೆಜ್ಜೆಯ ಮಡಗುತ ಮುತ್ತನೆ ಚೆಲ್ಲುತ
ಗುಂಡಬ್ರಹ್ಮಯ್ಯನ ಮಠಕೆ ಬರುತಾರೆ

ಗುಂಡಬ್ರಹ್ಮಯ್ಯನ ಹೆಂಡ್ರು ರಂಭೇರೈದು ಮಂದಿ
ಆ ಲಿಂಗದಗ್ಗಣಿಗೆ ಬರುತಾರೆ-ಬಾಲೆಯರು
ಬಂಡೆದ್ದು ಶಿವನ ಬೈತಾರೆ

ಕಳ್ಳತನ ಮಾಡಲು ಹೋದ ಜಂಗಮ ಇನ್ನೂ ಬರಲಿಲ್ಲ ಅಂತ ಅವರು ಬೈಯುತ್ತಾ ಹೋಗುತ್ತಿದ್ದಾರೆ. ದಾರಿಯಲ್ಲಿ ಇವರು ಸಿಕ್ಕರು.

ದಿಂಡವಂತರು ನಿಮ್ಮ ಹೆಸರೇನು ಅಂದರೆ
ಹೊಸಪುರದ ನನ್ನ ಶಿವರಾಯ-ಅನುತಾರೆ
ಜೊತೆಯಲ್ಲಿರುವೋನೆ ನಾರಾಯಣ

“ನೀವ್ಯಾರು?” ಎಂದು ಆ ಮಡದಿಯರನ್ನು ಕೇಳುತ್ತಾರೆ.

ಲಿಂಗಕ್ಕೆ ಮಗುವಯ್ಯ ಜಂಗಮಕ್ಕೆ ಶಿಶುವಯ್ಯ
ಶರಣ ಗುಂಡಬ್ರಹ್ಮಯನ ಮಡದೀರು-ನನ್ನೊಡೆಯ
ನಮ್ಮ ಮಠಕೆ ನೀವು ದಯಮಾಡಿ

ಅವರು ಮಠಕೆ ಕರೆದು ನೀರಿಗೆ ಹೋದರು. ಇವರು ಮುತ್ತು ಚೆಲ್ಲಿಕೊಂಡು ಗುಂಡಬ್ರಹ್ಮಯ್ಯನ ಮಠಕೆ ಬರುತಾರೆ. ಅಲ್ಲಿಗೆ ಸೇರು ಮುತ್ತು ಮುಗಿಯಿತು.

ಧೀರ ಘನಪತಿಯು ಹಿಡಿದ ಚಂದ್ರಾಯುಧವ
ಅವರ ಕಡೆಯ ಬಾಗಿಲಿಗೆ ಕಟ್ಟಿದರು

ಬಂದಂಥ ಶಿವ ನಾರಾಯಣರ ಕಂಡನು ಗುಂಡಬ್ರಹ್ಮಯ್ಯ
ವಂದಿಸಿ ಕರವ ಮುಗಿದನು
ವಂದಿಸಿ ಕರವ ಮುಗಿದು ಬಿನ್ನೈಸಿದ
ನೀನು ಬಂದ ಕಾರುಣದ ಬಗೆಯೇನು

ಏನಪ್ಪ ಶರಣನೆ ಗುಂಡಬ್ರಹ್ಮಯ್ಯನೆ
ಹೇಳಪ್ಪ ನಿನ್ನ ಜೀವದ ದೃಢವನ್ನೆ

ಆಡಿಕೊಂಡ ಮಾತಿಗೆ ಕಳವು ಮಾಡಿ ಬಂದೀವಿ
ದೊರೆಯ ಆಳು ಬರುತಾರೆ ಬೆಳಗಾಗಿ-ಗುಂಡಯ್ಯ
ನಾವು ಹೋಗಬೇಕೊ ಇಲ್ಲೆ ಇರಬೇಕೊ

ಆಡಿಕೊಂಡ ಮಾತಿಗೆ ನೀವು ಕಳವು ಮಾಡಿ ಬಂದಿದ್ದರೆ
ದೊರೆಯ ಕಡಗ ತಂದಂಥ ಗುರುತೆಲ್ಲಿ

ಕಡಗವ ಧರಿಸಿವಿ ನಿನ್ನೂರ ಕಟ್ಟೆಯ ಬಸವನಿಗೆ
ಕಡುಗಲಿ ರಾಜ ಘನಪತಿ-ಹಿಡುವಂತ
ಚಿನ್ನದ ಚಂದ್ರಾಯುಧವ ತಂದೀವಿ-ಗುಂಡಯ್ಯ
ನಿನ್ನ ಕಡೆಯ ಬಾಗಲಿಗೆ ಕಟ್ಟೀವಿ
ಏಳುಸುತ್ತಿನ ಕೋಟೆ ಕನ್ನವ ಕೊರೆದೀವಿ ಎನ್ನುತ
ಜಡಿದು ಕನ್ನಗತ್ತರಿ ತೋರಿದು

ಅವನೆದೆಗಳ ನಡುಗಿದವು ಗುಂಡಿಗೆ ತಲ್ಲಣಿಸಿದವು
ತೊದಲು ನುಡಿಯಾಗಿ ನುಡಿದನು-ಗುಂಡಬ್ರಹ್ಮಯ್ಯ
ಮತಿಗೆಟ್ಟು ಮಂಕಾಗಿ ನಿಲುತಾನೆ

ನಾ ಆಡಿಕೊಂಬ ಮಾತಿಗೆ ಹೇಡಿಗೊಂಬೋದಿಲ್ಲ
ನನ್ನ ಬಿರುದಿಗೆ ಹೀನಾಯ ತರುವುದಿಲ್ಲ-ನನ್ನೊಡೆಯ
ಈಡುಮಾಡುವೆ ನನ್ನ ತಲೆಗೋಳ

ಆದಂಥ ಅಡಿಗೆಯ ಊಟವ ಮಾಡಿರಯ್ಯ
ನೀವು ಹೋಗಬ್ಯಾಡಿ ಇಲ್ಲೆ ಇರಿರಯ್ಯ

ಆ ಶರಣನ ಮಠದಲ್ಲಿ ಹಸ್ತಕೆ ಅಗ್ಗಣಿ ಹಿಡಿಯಲು
ಓರುಗಲ್ಲಲ್ಲಿ ಬೇಳ್ಮೆ ಇಳಿದೋಯ್ತು

ಇಲ್ಲಿ ಬೇಳ್ಮೆ ಕೈ ತೊಳೆಯಲು ಅಲ್ಲಿ ಎಲ್ಲರೂ ಎಚ್ಚೆತ್ತರು

ಕನ್ನದ ಬಾಯಲ್ಲಿ ಗಾಳಿಯು ಒಲಿಯೋದು
ಬೆನ್ನಿಂದೆ ಬಂದೊಲೆಯುವ ರಭಸೀಗೆ-ದೊರೆರಾಯ
ಕನ್ನೇ ಮಡದೀಯ ಎಬ್ಬರಿಸಿದ

ಕನ್ನೆ ಮಡದೀಯ ತಟ್ಟಿ ಎಬ್ಬರಿಸಿದ
ನಿನ್ನ ತೊಟ್ಟ ಬಂಗಾರ ಕಳೆದವಲ್ಲೆ

ಮುಡಿಯನೇ ಒತ್ತುರಿಸಿ ದೊರೆಯ ಮೊಕವನೆ ನೋಡಲು
ನಿನ್ನ ಕಡಗ ಎಲ್ಲೋಯ್ತೊ ದೊರೆರಾಮ ಎಂದಾರೆ
ದೊರೆಯ ಅರ್ಧ ಭಾಗದ ಸಾಸ ಇಳಿದೋಯ್ತು

ಯಾರಿಂದ್ಲು ಪಟ್ಟಣಕೆ ಕಳ್ಳತನ ಘನವಾಗಲಿಲ್ಲ
ನನ್ನ ಏಳುನೂರು ಹೆಣ್ಣುಗಳಿಂದ ಘನವಾಯ್ತು

ಏಳೂನೂರು ಹೆಣ್ಣುಗಳ ಕರೆಸೀದ ದೊರೆರಾಮ
ಸಾಲು ಸಾಲಿನ ಮೇಲೆ ನಿಲಸೀದ

ಮನೆ ಮಿಂಡಗಾರನ ಬಿಟ್ಟು ಪಟ್ಟಣ ಸೂರೆಮಾಡಿಸಿದಿರಿ
ನಿಮ್ಮ ಬೆನ್ನಿಂದೆ ಕಳ್ಳ ಇರಸೂವೆ-ಗೌಡೀರೆ
ಹೇಳಿರೆ ನಿಮ್ಮ ಜೀವದ ದೃಢಮನವ

ಕಾದಾರೆ ತಂದು ನಮ್ಮೆದುರಿಗೆ ನಿಲಿಸಯ್ಯ
ತಿರುಡುವೆವೊ ನಮ್ಮ ನಿಜದಿಂದ – ದೊರೆರಾಯ
ಮಾಯಾದ ಸಾದ್ರೂಟ ಕಂಡವರಲ್ಲ

ಹತ್ತು ಕೊಪ್ಪರಿಕೆ ಎತ್ತಿ ಕಾಯ್ಸಯ್ಯ ಎಣ್ಣೇಯ
ಈಜಾಡುವೆವೊ ನಮ್ಮ ನಿಜದಿಂದ – ದೊರೆರಾಯ
ಈ ಮಾಯಾದ ಸಾಮ್ರಾಟ ಕಂಡವರಲ್ಲ

ಕನ್ನದ ಬಾಯ್ಗಿಂತ ಕನ್ನೇರ ಬಾಯಿ ಹೆಚ್ಚಾಯಿತೆಂದು
ಅರಮನೆಯ ಬಿಟ್ಟು ಬರುತಾರೆ-ಘನಪತಿರಾಯ
ರಾಜ ಬೀದಿ ಬೆಂಬಳ ಬರುತಾರೆ

ದೊಡ್ಡ ದೊಡ್ಡ ರಾವುತರು ಅಡ್ಡ ಕಿಡ್ಡಲಾಗಿ ಎದ್ದು ಕುಳಿತವರೆ
ಮೀಸುಳ್ಳ ಬಂಟರು ಮೀಸೆಯ-ಕಿತ್ತಾಡ್ತ
ಹಿಂದು ಮುಂದಾಗಿ ಕುಂತವರೆ

ಚೆಂದುಳ್ಳ ಭಂಟರು ಮುಂದಲೆಯ ಕಿತ್ತಾಡ್ತ
ಅವರು ಹಿಂದು ಮುಂದಾಗಿ ಮನಗವರೆ

ಪಾರಿಭಂಗುತವ ನೋಡಿದನು ದೊರೆರಾಯ
ಚೋಜಿಗ ಮಾಡಿದನು ತನ್ನ ಮನದಲ್ಲಿ

ನರಮಾನ್ಯವರು ನನ್ನ ಪಟ್ಣ ಸೂರೆ ಮಾಡಲಿಲ್ಲ
ಸುರಮಾನ್ಯವರೇನೊ ಶಿವಬಲ್ಲ-ಎನುತೇಳಿ
ಮೂಗಿನ ಮೇಲೆ ಕೈಯೆತ್ತಿ ಮಡಗಿದ

ಮೂಗಿನ ಮೇಲೆ ದೊರೆ ಕೈಯೆತ್ತಿ ಮಡಗುವೆ ಯಾಳ್ಯದಲಿ
ಬರೆದಿದ್ದ ವಾಲೆ ಕಂಡುಕೊಂಡ

ಕೈಯೆತ್ತಿದಾಗ ಘನಪತಿರಾಯನಿಗೆ ಮುಂಗೈವಾಲೆ ಕಂಡಿತು

ಸಬ್ಬರು ಬಂದಿದ್ದರೆಂದು ಅಬ್ಬೆ ಮಾತಾಡಬೇಡ
ನಾವಿಬ್ಬರೆ ಕದ್ದವರು ಅರಮನೆಯ – ಎನುತೇಳಿ
ಬರೆದು ಮುಂಗೈಗೊಲೆ ಕಟ್ಟೈವರೆ

ಕದ್ದ ಕಳ್ಳರ ತರುವೆ ಒಳಗಿದ್ದ ಭಾಗ್ಯವ ತರುವೆ
ಭೂಮಿ ಚಿದ್ಚಿತ್ರಮಾಡಿ ನಾನು ತರುತೀನಿ

ಹತ್ತು ಸಾವಿರ ದಂಡ ಕಟ್ಟಿದ ಘನಪತಿರಾಯ
ಪಲ್ಲಕ್ಕಿ ಮ್ಯಾಲೆ ಕುಳಿತನು-ಘನಪತಿ
ರಾಜ ಬೀದಿ ಬೆಂಬಳ ಬರುತಾನೆ

ನಂದಿ ಬಸವನ ಗುಡಿಗೆ ಬಂದನು ದೊರೆರಾಯ
ಅವನ ದಿರಿಮವೆಲ್ಲ ಅಲ್ಲಿ ಸುರಿದಿತ್ತು

ಎಂಥ ಸತ್ಯವಂತ ಕಳ್ಳರು,  ಎಲ್ಲವನ್ನೂ ಇಲ್ಲೇ ಸುರಿದು ಹೋಗಿದ್ದಾರೆ ಎಂದು ಐದು ಸಾವಿರ ದಂಡು ಷಹರೆ ಇಟ್ಟು ಗುಂಡಬ್ರಹ್ಮಯ್ಯನ ಮಠಕೆ ಗುರುತಿನ ಮೇಲೆ ಬಂದರು.

ಹೆಜ್ಜೆಯ ಹಾಕುತ ಮುತ್ತನೆ ಎತ್ತುತ
ಗುಂಡಬ್ರಹ್ಮಯ್ಯನ ಮಠಕೆ ಬರುತಾರೆ

ಧೀರ ಘನಪತಿಯು ಹಿಡಿದ ಚಂದ್ರಾಯುಧವ
ಅವರು ಕಡೆಯ ಬಾಕಲಲ್ಲಿ ಕಟ್ಯವನಲ್ಲೊ

ಹಾದೀಲಿ ಒಂದು ಮಠ ಕಟ್ಟಿಕೊಂಡು
ಗೆಲ್ಸಿಕೊಂಡೆ ನಿನ್ನ ಹಟಗೋಳ-ಗುಂಡಬ್ರಹ್ಮಯ್ಯ
ನಿನ್ನ ಒಳಗಳ್ಳರ ನನಗೆ ಕೊಡುಬೇಗ

ಕಳ್ಳರು ಎಂದರೆ ಹೇಡಿಗೊಂಬೋರಲ್ಲ
ಅವರು ನೋಡು ನೋಡಿದ ಮೂಲೇಲಿ ಕೆಡುತಾರೆ-ಘನಪತಿರಾಯ
ಬರದೆ ಅವರೊಂದಿಗಾಡಿ ಕೆಡಬೇಡ-ಘನವತಿಯೆ
ಅವರು ಹೋದ ದಿಕ್ಕಿಗೆ ಕೈಯೆತ್ತಿ ಮುಗಿಯಪ್ಪ
ಆವಾಗ-

ನೀನೂವೆ ಸೈವಾಗಿ ನಿಮ್ಮ ಕಳ್ಳರು ಸೈವಾಗಿ
ನಿಮ್ಮ ಮಠಕೆ ಹೋಗಿರಿ ಎನುತಂದು-ಘನಪತಿ
ಅವರನಾದರೆ ಬಿಟ್ಟುಕೊಟ್ಟ

ಅರಸೆ ನಿನ್ನ ದೊರೆತನಕೆ ಹರುಷವು ಬರಲಯ್ಯ
ತರಿಸಿ ನಡುಸಯ್ಯ ಶೂಲವ

ಗುಂಡಬ್ರಹ್ಮಯ್ಯ ಶೂಲ ಏರಲು ಸಿದ್ಧನಾದ

ಅತ್ತಿಯ ಮರವನ್ನು ಕಡಿದು ಕೆತ್ತಿದರು ಶೂಲವ
ಎತ್ತಿದರು ತಮ್ಮ ಶೂಲವನು

ಏಳೂರ ಹೊಂಡ ಮೆರಕೊಂಡು ಗುಂಡಬ್ರಹ್ಮಯ್ಯ
ಘನಲಿಂಗಯ್ಯ ಇರುವ ಪುರಕ್ಹೋಗಿ-ಅವರಾಗ
ಶೂಲಕೆ ಶರಣ ಮಾಡಿದರು-ಗುಂಡಬ್ರಹ್ಮಯ್ಯ
ಶೂಲವನ್ನೀಗ ಏರುವರು

ನೆಟ್ಟಿರುವ ಶೂಲದಲಿ ನೆಟ್ಟನೆ ನಾರಾಯಣ ಕುಂತ
ಕಟ್ಟಿರುತ ಲಿಂಗದಲಿ ಶಿವಕುಂತ

ಐದು ಜನ ಸತಿಯರೂ ಶರಣ ಗುಂಡಯ್ಯ ಬಿಟ್ಟು ಹೊರಟು ಹೋಗುವನೆಂದು

ಶಿರಸವ ಕುಯ್ದರು ಗಂಗಳದಲಿ ಮಡಗಿದರು
ಹೊಟ್ಟೆಯ ಬಗೆದು ಕಳ್ಳುಕಿತ್ತು-ರುಂಡಮಾಲೆ ಹಾಕಿದರು

ಕಳ್ಳಿನ ಮೇಲಿನ ಕೊಬ್ಬ ಕಿತ್ತು ಅವರೀಗ
ಪಂಚಾರತಿಯ ಎತ್ತಿಕೊಂಡು-ಅವರಾದರೆ
ಮುಂಡದಲಿ ಆರತಿ ತರುತಾರೆ

ಅಲ್ಲಿ ಭುಗು ಭುಗನೆ ತಿರುಗುತ್ತ-

ಶೂಲವೆ ವೈಕುಂಠ ಶೂಲವೆ ಸುಖಿಸ್ವರ್ಗ
ಶೂಲವೆ ನಮಗೆ ಕೈಲಾಸ –ಎನುತೇಳಿ
ಶೂಲಕೆ ಗುಂಡಯ್ಯ ಅಣಿಯಾದ

ಐದು ಜನ ಸತಿಯರನ್ನೂ ಎತ್ತಿ ಶೂಲದ ಮೇಲೆ ಕೂರಿಸಿಕೊಂಡರು. ಆಗ ಘನಪತಿರಾಜನ್ನು ಕರೆಸಿಕೊಂಡರು. “ಘನಪತಿರಾಜ ಬಾ ಈ ಶೂಲದ ಮಣೆಯನ್ನು ಜಾಡಿಸಿ ತಳ್ಳು,  ನಾನು ಹೋದ ದಿಕ್ಕಿಗೆ ಕೈಯೆತ್ತಿ ಮುಗಿ” ಎಂದರು ಗುಂಡಬ್ರಹ್ಮಯ್ಯ

ಶೂಲದ ಮಣೆಯನ್ನು ಜಾಡಿಸಿ ತಳ್ಳಿದನು
ತಳ್ಳಿ ಕಣ್ಣೆರಡ ಮುಚ್ಚಿಕೊಂಡ-ಅಷ್ಟು ದೂರಹೋಗಿ
ಹಿಂದಿರುಗಿ ಕಣ್ಣುಬಿಟ್ಟು ನೋಡಿದ

ಶೂಲವೆ ಕಿತ್ತುಕಂಡು ಹೂವಿನ ರಥವಾಡುತ್ತಿತ್ತು
ಗುಂಡಬ್ರಹ್ಮಯ್ಯ ತನ್ನ ಮಡದೀರ-ಜೊತೆಯಲ್ಲಿ
ಶಿವನು ನಾರಾಯಣ ಬರುತಾರೆ

ರಥದ ಮೇಲೆ ಕೈಲಾಸಕೆ ಬಂದರು. ಕೈಲಾಸದ ರಾಜ ಬೀದಿಯಲ್ಲಿ ಮೆರವಣಿಗೆ ಮಾಡಿದರು. ಗುಂಡಬ್ರಹ್ಮಯ್ಯನನ್ನು ಕೈಲಾಸದ ಕಡೆ ಬಾಕಲಿಗೆ ಕರದುಕೊಂಡು ಬಂದು “ನೀನು ನರಲೋಕಕ್ಕೆ ಹೋಗಬೇಡ,  ನಿನ್ನ ಸತ್ಯ ನರಮಾನ್ಯವರಿಗೆ ತೋರಬೇಡ. ನಾವು ಯಮಧರ್ಮನಿಗೆ ಪಟ್ಟಣವನ್ನು ಕಟ್ಟಿದ್ದೀವಿ. ನಿನ್ನ ಸತ್ಯ ಧರ್ಮವನ್ನ ಎಲ್ಲರೂ ಕಲಿತುಬಿಟ್ಟರೆ ಎಲ್ಲರೂ ಕೈಲಾಸಕೆ ಬಂದುಬಿಡುತ್ತಾರೆ. ಯಮಧರ್ಮನ ಪಟ್ಟಣ ತುಂಬಬೇಕು. ತಮ್ಮ ಕೈಲಾಸಕ್ಕೆ ಲಕ್ಷಕೆ ಒಬ್ಬ ಬರಬೇಕು. ಉಳಿದವರೆಲ್ಲ ಅತ್ತಲೇ. ನಿನ್ನ ಸತಿಯರೂ ನೀನೂ ಕಡೇ ದ್ವಾರದಲ್ಲಿ ಇದ್ದುಕೊಳ್ಳಿ” ಎಂದು ಹೇಳಿದರು ಜಗದೀಶ.

ಗುಂಡಬ್ರಹ್ಮಯ್ಯನ ಕಡೆ ದ್ವಾರದಲ್ಲಿರಿಸಿದರು
ತಮ್ಮ ಗುರು ಮಠಕೆ ತೆರಳಿದರು

ಬಂದಂಥ ಪರಮೇಶ್ವರನ ಕಂಡಳು ಪಾರ್ವತದೇವಿ
ತಂದು ಆರತಿಯ ಬೆಳಗಿದಳು

ಮಡದಿ ಪಾರ್ವತಿ ಕೈಲಿ ಆರತಿ ಬೆಳಗಿಸಿಕೊಂಡು
ಹೋಗಿ ಮಂಚದ ಮೇಲೆ ಕುಳಿತರು

ಭಾವನಾ ಕರೆತಂದು ಗುರು ಮಠಕೆ ಬಿಟ್ಟರು
ಅವರು ನಂದಗೋಕುಲಕೆ ನಡೆದಾರು

ಬಂದಂಥ ನಾರಾಯಣನ ಕಂಡು ಲಕ್ಷ್ಮೀದೇವಿ
ಅವರು ಪಾದಕೆ ಅಗ್ಗಣಿಯ ಕೊಡುತಾರೆ

ಆದಿಲಕ್ಷ್ಮಿ ಕೈಲಿ ಪಾದ ಬೆಳಗಿಸಿಕೊಂಡು
ಹೋಗಿ ಮಂಚದ ಮೇಲೆ ಕುಳಿತರು

ಆ ಗುಂಡಬ್ರಹ್ಮಯ್ಯ ಶೂಲ ಏರಿಬಂದ ಕಥೆ
ಇಲ್ಲಿಗೆ ಮುದ್ರೆ ಶರಣು ಶರಣಾರ್ಥಿ

ತೆಂಗು ಫಲವಾಗಲಿ ಘನಲಿಂಗಯ್ಯ ಪಟ್ಟ ಆಳಲಿ
ತಿಂಗಳಿಗೆ ಎರಡು ಮಳೆಹುಯ್ಲಿ-ಗುರುವಚನ
ತುಂಬಿದಂಗೆ ಇರಲಿ ನಮ್ಮ ಹೃದಯದಲಿ

ಹಲಸು ಫಲವಾಗಲಿ ಅರಸು ಪಟ್ಣವಾಗಲಿ
ವರುಷಕೆ ಇಪ್ಪತ್ನಾಲ್ಕು ಮಳೆಹುಯ್ಲಿ-ಗುರುವಚನ
ಬಳಸಿ ಬರಲಿ ನಮ್ಮ ಹೃದಯಕ್ಕೆ

ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಮಲ್ಲೇಶ್ವರನ ಮಠದಲ್ಲಿ ಪ್ರಭುಲಿಂಗ – ಗುಂಡಬ್ರಹ್ಮಯ್ಯ
ಇಲ್ಲಿಗೆ ಮುದ್ರೆ ಶರಣು ಶರಣಾರ್ಥಿ

ಹೇಳಿದವರಿಗೆ ಹತ್ತು ಕೋಟಿ ಕೇಳಿದವರಿಗೆ ಹನ್ನೊಂದು ಕೋಟಿ
ಸುವ್ವಿ ಅಂದರೆ ಪಾಪ ಪರಿಹಾರ-ಕಲ್ಯಾಣದ
ಸುವ್ವಿ ಸಂಗಯ್ಯನ ಗುರುವಚನ

ಹೇಳಿಸಿದ ಪುಣ್ಯಾತ್ಮರಿಗೆ ಮುಂದುಂಟು ಸುಖಸ್ವರ್ಗ
ಲೋಕಕೆ ದೊಡ್ಡೋರ ಕತೆಯನ್ನೆ-ಕೇಳಿದವರಿಗೆ
ಬೆಳ್ಳಿ ತೊಳೆದಂತೆ ಪಾಪ ಪರಿಹಾರ

ಸುವ್ವಿ ಬಾ ಚನ್ನಬಸವಯ್ಯ ಸುವ್ವಿ

ಜಯ ಮಂಗಳ ನಿಚ್ಚ ಶುಭಮಂಗಳ
ಜಯ ಜಯ ಅಲ್ಲಮ ಪ್ರಭುಸ್ವಾಮಿಗೆ
ಕೊಟ್ಟೂರು ಬಸವನಿಗೆ ಕೋಲು ಶಾಂತಯ್ಯನಿಗೆ
ನಿಟ್ಟ ತ್ವಾಟದ ಸಿದ್ಧಲಿಂಗೇಶನಿಗೆ

ಮುಟ್ಟಿ ಪೂಜಿಸುವಂತ ಮಡಿವಾಳ ಮಾಚಯ್ಯನಿಗೆ
ಸೃಷ್ಟಿಯಾದ ಗುರು ತಂದೆ ಚೆನ್ನಬಸಯ್ಯನಿಗೆ

ಕಂಗಳನು ಮೂಕುಳ್ಳ ಕರುಣಾನಿಧಿಗೆ
ಇಂಗದೆ ರಕ್ಷಿಸುವ ಮಂಟೀದ ಲಿಂಗಯ್ಯನಿಗೆ
ಹರನು ಪಾರ್ವತದೇವಿ ಪರಮ ಸಂತೋಷದಲಿ
ಸರಸರಾಡುತ ತಮ್ಮ ಪುರುಷರೆಡೆಗೆ
ಜಯ ಮಂಗಳೊ ನಿಚ್ಚ ಶುಭಮಂಗಳೊ.